Feb 29, 2016

ಇಲ್ಲಿ ಕಾರು ತೊಳೆದರೆ ಕಟಕಟೆ ಹತ್ತಬೇಕಾದೀತು

29/02/2016
ಜಾಟರು ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ಹಿಂಸೆಯ ಮಡಿಲಿಗೆ ಜಾರಿ ಹೋಗಿದೆ. ದಲಿತ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವಂತಹ ಗಂಭೀರ ಆರೋಪಗಳೂ ಕೇಳಿ ಬಂದಿವೆ. ಮೀಸಲಾತಿಯ ಹೋರಾಟಗಾರರು ಪ್ರಮುಖ ನಗರಗಳಿಗೆ ನೀರು ಪೂರೈಸುವ ಪೈಪುಗಳನ್ನು ಒಡೆದು ಹಾಕಿದ್ದಾರೆ. ಈ ಬೇಸಿಗೆ ಸಮಯಕ್ಕೆ ಮುಂಚೆಯೇ ಆಗಮಿಸುತ್ತಿರುವಾಗ ಪೈಪುಗಳನ್ನು ಒಡೆದು ಹಾಕಿರುವುದು ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ದೆಹಲಿ ಗುರಗಾಂವ್ ನಂತಹ ನಗರಗಳಲ್ಲಿ ನೀರಿಗೆ ಹಾಹಾಕಾರ ಎದ್ದಿದೆ. ನೀರನ್ನು ಮಿತವಾಗಿ ಬಳಸಲು ಅನುವಾಗುವಂತೆ ಗುರಗಾಂವ್ ಆಡಳಿತ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ.
ಈ ಹೊಸ ನಿಯಮಗಳ ಅನುಸಾರ ಕಾರು ತೊಳೆಯುವುದು ಕೂಡ ಕಾನೂನುಬಾಹಿರ! ಕುಡಿಯಲು ನೀರಿಗೆ ತತ್ವಾರವಾಗಿರುವಾಗ ಕಾರು ತೊಳೆಯುವುದಕ್ಕೆಲ್ಲ ನೀರು ಪೋಲು ಮಾಡುವುದನ್ನು ತಡೆಗಟ್ಟಲು ಅಲ್ಲಿನ ಆಡಳಿತ ಈ ಕ್ರಮಕ್ಕೆ ಮುಂದಾಗಿದೆ. ಇದರ ಜೊತೆಜೊತೆಗೆ ಮನೆಯಲ್ಲಿ ಕುಂಡಗಳಲ್ಲಿ ಬೆಳೆಸಿದ ಗಿಡಗಳಿಗೆ ನೀರಾಕುವುದು ಕೂಡ ಅಪರಾಧವಾಗಿಬಿಡುತ್ತದೆ. ಮೂರನೇ ವಿಶ್ವಯುದ್ಧ ನಡೆಯುವುದು ನೀರಿಗಾಗಿ ಎಂಬ ಮಾತನ್ನು ನೆನಪಿಸುತ್ತದೆ ನೀರು ಉಳಿಸುವ ಈ ಕ್ರಮಗಳು. 
Image source: indiatoday

ಅಡ್ಮಿರಲ್ ಎಲ್. ರಾಮದಾಸ್: ಅತಿರೇಕದ ರಾಷ್ಟ್ರವಾದ ನಮ್ಮನ್ನು ಸುರಕ್ಷಿತವಾಗಿಸುವುದಿಲ್ಲ.

admiral ramdas at jnu
ಅಡ್ಮಿರಲ್ ಎಲ್. ರಾಮದಾಸ್, ಭಾರತೀಯ ನೌಕಾಪಡೆಯ ಮಾಜಿ ಮುಖ್ಯಸ್ಥ. 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
(ಲಂಕೇಶ್ ಪ್ರಕಾಶನ ರೋಹಿತ್ ವೇಮುಲ ಮತ್ತು ಜೆ.ಎನ್.ಯು ಬಗ್ಗೆ ಹೊರತರುತ್ತಿರುವ ಪುಸ್ತಕವೊಂದಕ್ಕೆ ಮಾಡಿಕೊಟ್ಟ ಅನುವಾದವಿದು. ಕರಡು ತಿದ್ದಿದ ಹರ್ಷನಿಗೆ ಧನ್ಯವಾದಗಳು)
29/02/2016
ಭಾರತೀಯ ನೌಕಾಪಡೆಯ ಮುಖ್ಯಸ್ಥನಾಗಿ 1993ರಲ್ಲಿ ನಿವೃತ್ತನಾಗುವ ಮೊದಲು ಸರಿಸುಮಾರು ನಲವತ್ತೈದು ವರ್ಷಗಳ ಸುದೀರ್ಘ ಅವಧಿಯವರೆಗೆ ಸಮವಸ್ತ್ರಧಾರಿ ಸೇನಾ ಭ್ರಾತ್ವತ್ವದ ಹೆಮ್ಮೆಯ ಸದಸ್ಯ ನಾನಾಗಿದ್ದೇನೆ. 

ಸದ್ಯ ನಮ್ಮ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉಂಟಾಗಿರುವ ಪ್ರಕ್ಷುಬ್ದ ಸ್ಥಿತಿ ಮತ್ತು ಅವುಗಳ ಸುತ್ತ ಮುಂದುವರೆದೇ ಇರುವ ದೊಂಬಿ, ಹಿಂಸೆ, ನಿರಂಕುಶ ವರ್ತನೆ ಇವೆಲ್ಲವನ್ನು ನೋಡಿ ನಾನು ಮತ್ತೊಮ್ಮೆ ಧ್ವನಿಯೆತ್ತಲ ನನ್ನ ಕಾಳಜಿಯನ್ನು ಈ ಬಹಿರಂಗ ಪತ್ರದ ಮೂಲಕ ವ್ಯಕ್ತಪಡಿಸಲು ಪ್ರೇರೇಪಿಸಿದೆ. ಇತ್ತೀಚೆಗೆ ರಾಷ್ಟ್ರಪತಿ ಮತ್ತು ಪ್ರಧಾನಿಗಳಿಗೆ ಬರೆದ ನನ್ನ ಎರಡು ಪತ್ರಗಳಿಗೆ ಅಧಿಕಾರಶಾಹಿಯ ಎಂದಿನ ಪ್ರತಿಕ್ರಿಯೆಯ ಹೊರತಾಗಿ ಮತ್ತೇನೂ ಸಿಗಲಿಲ್ಲ. ಸೈನ್ಯದಿಂದ ನಿವೃತ್ತಿ ಹೊಂದಿದ ನಂತರ ಸರಕಾರದ ನೀತಿಯ ವಿರುದ್ಧ ಬಹಿರಂಗವಾಗಿ ನಿಲ್ಲುವ ಕೆಲವೇ ಕೆಲವರಲ್ಲಿ ನಾನೂ ಒಬ್ಬ ಎನ್ನುವ ಅರಿವಿದೆ. ಮಾಜಿ ಸೈನಿಕನಾಗಿ, ನಾಗರೀಕನಾಗಿ ಇದು ನನ್ನ ಹಕ್ಕು ಮತ್ತು ಕರ್ತವ್ಯ ಎನ್ನುವುದು ನನ್ನ ದೃಷ್ಟಿಕೋನ. ಸೇವೆಯ ನೀತಿ ನಿಯಮದ ಕಾರಣಗಳಿಂದ ಕರ್ತವ್ಯದಲ್ಲಿರುವ ಸೈನಿಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತಿಲ್ಲ. ಸಮವಸ್ತ್ರ ಕಳಚಿದ ಮಾಜಿಗಳಾದ ನಾವು ಅಭಿಪ್ರಾಯ ವ್ಯಕ್ತಪಡಿಸಬಹುದು, ವ್ಯಕ್ತಪಡಿಸಬೇಕು ಕೂಡ. ನನ್ನಂತಹವರು ಈಗ ಮೌನಕ್ಕೆ ಶರಣಾಗಿಬಿಟ್ಟರೆ ನನ್ನ ಮೊಮ್ಮಗ ಕೇಳುತ್ತಾನೆ ``ನೀವಲ್ಲದಿದ್ದರೆ ಇನ್ಯಾರು?'', ``ಈಗಲ್ಲದಿದ್ದರೆ ಇನ್ಯಾವಾಗ'' ``ತಾತ?” ಎಂದು.

ನಾನು ಹೇಳುತ್ತಿರುವುದು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯ (ಹೆಚ್.ಸಿ.ಯು) ರೋಹಿತ್ ವೇಮುಲನ ದುರಂತ ಆತ್ಮಹತ್ಯೆಯಿಂದ ಪ್ರಾರಂಭವಾಗಿ ಈಗ ಜೆ.ಎನ್.ಯುನಲ್ಲಿ ನಡೆಯುತ್ತಿರುವ ಇನ್ನೂ ಬಗೆಹರಿಯದ ಘಟನಾವಳಿಗಳ ಕುರಿತು. ಪೋಲೀಸರ ಅನಪೇಕ್ಷಿತ ಪ್ರವೇಶ, ಈ ಪ್ರವೇಶ ಉಂಟುಮಾಡಿದ ``ಮಾಧ್ಯಮಗಳ ಪಾಟೀಸವಾಲು'', ತದನಂತರ ಗಂಭೀರ ಆರೋಪಗಳಾದ ದೇಶದ್ರೋಹ, ರಾಷ್ಟ್ರವಿರೋಧಿ ಮತ್ತು ಭಯೋತ್ಪಾದಕತೆಯ ಹೆಸರಿನಲ್ಲಿ ನಡೆದ ವಿದ್ಯಾರ್ಥಿಗಳ ಬಂಧನ ದೇಶಾದ್ಯಂತ ಪ್ರಮುಖ ಸುದ್ದಿಯಾಗಿದೆ. ಇದು ಅಭಿಪ್ರಾಯಗಳ ಆಧಾರದಲ್ಲಿ ದ್ರುವೀಕರಣವನ್ನು ಮಾಡಿಬಿಟ್ಟಿದೆ, ಈ ಧ್ರುವೀಕರಣವನ್ನು ತಡೆಯಬಹುದಾಗಿತ್ತು; ಇಡೀ ಪ್ರಕರಣವನ್ನು ನಿಭಾಯಿಸುವಲ್ಲಿ ಎದ್ದು ಕಾಣಿಸುವ ಸೂಕ್ಷ್ಮತೆಯ ಕೊರತೆ ಮತ್ತು ವಿದ್ಯಾರ್ಥಿಗಳನ್ನು ಸೈತಾನರಂತೆ ಚಿತ್ರಿಸಿದ ನಡೆಸಿದ ಪಿತೂರಿಗಳೆಲ್ಲವೂ ಧ್ರುವೀಕರಣಕ್ಕೆ ಕಾರಣವಾಗುತ್ತ ಸಂಪೂರ್ಣ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಸೃಷ್ಟಿಮಾಡಿದೆ. ಇತ್ತೀಚಿನ ದಿನಗಳಲ್ಲಿ ನಡೆದ ದೊಡ್ಡ ಶಾಂತಿಯುತ ಪ್ರತಿಭಟನಾ ಮೆರವಣಿಗೆಯ ಭಾಗವಾಗುತ್ತ ಸಹಸ್ರಾರು ವಿದ್ಯಾರ್ಥಿಗಳು, ನಾಗರೀಕ ಸಮಾಜದ ಗುಂಪುಗಳು, ಹಲವಾರು ಪತ್ರಕರ್ತರು ದೆಹಲಿಯ ಬೀದಿಗಿಳಿದಿದ್ದಾರೆ. 

ಹಿಂತಿರುಗಿ ನೋಡುವುದಾದರೆ,

ನನ್ನ ವೈಯಕ್ತಿಕ ಜೀವನದ ಕುರಿತಾದ ಸಂಕ್ಷಿಪ್ತ ವಿವರಣೆ ನಾನೆಲ್ಲಿಂದ ಬಂದಿದ್ದೇನೆ ಎನ್ನುವುದರ ಕುರಿತು ತಿಳಿಸುತ್ತದೆ.

ಜನವರಿ 1949ರಲ್ಲಿ ಭಾರತೀಯ ನೌಕಾಪಡೆಗೆ ಸೇರಿದೆ? ನಮಗೆ ಸ್ವಾತಂತ್ರ್ಯ ಸಿಕ್ಕು ಹದಿನಾರು ತಿಂಗಳಾಗಿತ್ತಷ್ಟೇ. ಅದು ಅಪಾರ ನಿರೀಕ್ಷೆಗಳು, ದೊಡ್ಡ ಕನಸುಗಳ, ಅವಕಾಶಗಳ ಸಮಯ. ಬ್ರಿಟೀಷ್ ವಸಾಹತುವಿನ ವಿರುದ್ಧದ ನಿರಂತರ ಹೋರಾಟದಿಂದ ಸ್ವಾತಂತ್ರ್ಯ ಪಡೆದು ಪುಟಿದೆದ್ದ ಭಾರತದ ಸೈನ್ಯಕ್ಕೆ ಆಯ್ಕೆಯಾಗುವುದು ಹದಿನೈದರ ಹರೆಯದ ಹುಡುಗನಿಗೆ ನಿಜಕ್ಕೂ ತಲೆತಿರುಗಿಸುವಂತಹ ಸಂಭ್ರಮ ತರುವಂತದ್ದು. ಭಾರತೀಯ ನೌಕಾಪಡೆಯಲ್ಲಿ ಕಳೆದ ಆ ನಲವತ್ತೈದು ವರುಷಗಳು ಪ್ರಪಂಚದಾದ್ಯಂತ ನಡೆದ ಘಟನಾವಳಿಗಳ ವಿಹಂಗಮ ನೋಟವನ್ನು ನನಗೆ ನೀಡಿದೆ. ದೇಶ ವಿಭಜನೆಯ ದಿನಗಳ ಊಹಿಸಲಾಗದ ಹಿಂಸೆಯನ್ನು ಹತ್ತಿರದಿಂದ ನೋಡಿದೆ. ಅದರ ನೆನಪುಗಳು ಇನ್ನೂ ನನ್ನನ್ನು ಮತ್ತು ಗಡಿಯ ಎರಡೂ ಕಡೆ ಇರುವವರನ್ನು ಕಾಡುತ್ತಿವೆ. ಇಟ್ಟಿಗೆಯ ಮೇಲೆ ಇಟ್ಟಿಗೆ ಜೋಡಿಸಿ, ಹೆಜ್ಜೆಯ ಮೇಲೊಂದೆಜ್ಜೆ ಇಟ್ಟು ನಮ್ಮ ನಾಯಕರು ಮತ್ತು ನಾಗರೀಕರು ಜೊತೆಯಾಗಿ ಸ್ವತಂತ್ರ ಭಾರತಕ್ಕೊಂದು ದೃಷ್ಟಿಕೋನ ಕಟ್ಟಿದರು. ಹಲವು ಬಗೆಗಳಲ್ಲಿ ಆಲೋಚಿಸುವ ಮುತ್ಸದ್ಧಿಗಳಿಂದ, ಬಂದ ಭಿನ್ನಭಿನ್ನ ದೃಷ್ಟಿಕೋನಗಳನ್ನು ಒಳಗೊಂಡು ಭಾರತದ ಸಂವಿಧಾನವು ಸಂಕುಚಿತವಾದ ಮತ್ತು ಸಮುದಾಯಗಳನ್ನು ಹೊರಗಿಡುವ ಏಕಸಂಸ್ಕøತಿಯನ್ನು ಮುಲಾಜಿಲ್ಲದೆ ತಿರಸ್ಕರಿಸಿ ಸಮುದಾಯಗಳನ್ನು ಒಳಗೊಳ್ಳವಂತಹ, ವಿಶ್ವಾಸ ಮೂಡಿಸುವ, ಪರಿವರ್ತನೆಗೆ ಸಹಕಾರಿಯಾದ ಕ್ರಾಂತಿಕಾರಿ ನೋಟದ ರಾಷ್ಟ್ರದ ಪರಿಕಲ್ಪನೆಯನ್ನು ಒಪ್ಪಿಕೊಂಡಿತು. 

ಸೈನಿಕ ಶಕ್ತಿ ಮತ್ತು ದೇಶ

ಸ್ವತಂತ್ರ ದೇಶದ ಸೈನ್ಯ ದೇಶ ಕಟ್ಟುವಿಕೆಗೆ ವಿವಿಧ ರೀತಿಯಲ್ಲಿ ಜೊತೆಯಾಯಿತು. ನಮಗೆ ತರಬೇತುಗೊಳಿಸಿದ ರೀತಿಯಲ್ಲಿ ಶಿಸ್ತಿನಿಂದ, ವೃತ್ತಿಪರತೆಯಿಂದ ಕೆಲಸ ಮಾಡುವುದರ ಜೊತೆಗೆ ಸಹಾನುಭೂತಿಯಿಂದ ಮತ್ತು ಮನುಷ್ಯತ್ವದಿಂದ ಕಾರ್ಯನಿರ್ವಹಿಸಿದೆವು.

ಸೈನ್ಯದಲ್ಲಿರುವವರು ರಾಜಕೀಯ ಮಾಡುವುದಿಲ್ಲ ಎನ್ನುವುದು ಹೇಳಬೇಕಿಲ್ಲದ ಸಂಗತಿ. ಸತ್ಯವೆಂದರೆ ಸೈನ್ಯಕ್ಕೆ ಸೇರುತ್ತಿದ್ದಂತೆ ನಾಗರೀಕರಿಗೆ ಸಂವಿಧಾನ ನೀಡಿರುವ ಹಲವಾರು ಹಕ್ಕುಗಳನ್ನು ನಾವು ಕಳೆದುಕೊಂಡುಬಿಡುತ್ತೇವೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಸೈನ್ಯದ ಮೇಲೆ ರಾಜಕೀಯ (ಸರಕಾರದ) ನಿಯಂತ್ರಣವನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದೇವೆ. ಈ ಒಪ್ಪಿಗೆಯ ಅಲಿಖಿತ ಅರ್ಥವೆಂದರೆ ಸರಕಾರಗಳು ಜನರೆಡೆಗಿನ ತಮ್ಮ ಜವಾಬ್ದಾರಿಯನ್ನು (ಸೈನ್ಯವನ್ನೂ ಸೇರಿಸಿ) ಗೌರವದಿಂದ ಮತ್ತು ಸಮಗ್ರತೆಯೊಂದಿಗೆ ನಿರ್ವಹಿಸುತ್ತಾರೆ ಎಂಬುದು.

ನಿವೃತ್ತಿಯ ನಂತರ ನಾವೆಲ್ಲರೂ (ಸೈನ್ಯದವರು) ಮತ್ತೆ ಭಾರತೀಯ ನಾಗರೀಕರಾಗುತ್ತೇವೆ, ಹಕ್ಕು, ಕರ್ತವ್ಯ ಮತ್ತು ಜವಾಬ್ದಾರಿಗಳನ್ನೊಂದಿದ ಭಾರತೀಯ ನಾಗರೀಕರಾಗುತ್ತೇವೆ. ನೌಕಾಪಡೆ, ವಾಯುಪಡೆ, ಸೈನ್ಯ ವಿಧಿಸಿದ್ದ ನಿಯಮಗಳೀಗ ನಮಗೆ ಅನ್ವಯವಾಗುವುದಿಲ್ಲ. ಸಮವಸ್ತ್ರದಲ್ಲಿದ್ದೆವೋ ಇಲ್ಲವೋ ಪ್ರಜಾಪ್ರಭುತ್ವದ ಹೆಗ್ಗುರುತಾದ ಚುನಾವಣೆಗಳಲ್ಲಿ ಮತ ಚಲಾಯಿಸುವ ಹಕ್ಕನ್ನು ಯಾವತ್ತಿಗೂ ಗೌರವಿಸಿದ್ದೇವೆ. ಮತ ಚಲಾಯಿಸುತ್ತಿದ್ದದ್ದು ನಮ್ಮಲ್ಲಿನ ಪ್ರತಿಯೊಬ್ಬರೂ ನಿರ್ದಿಷ್ಟ ರಾಜಕೀಯ ಪಕ್ಷವನ್ನು ಅಥವಾ ದೃಷ್ಟಿಕೋನವನ್ನು ಆಯ್ದುಕೊಂಡಿದ್ದೇವೆಂಬುದನ್ನು ಸೂಚಿಸುತ್ತಿತ್ತು. ಪ್ರಬುದ್ಧತೆ ಹೊಂದುತ್ತಿದ್ದ, ಆದರೂ ಪ್ರಕ್ಷುಬ್ದವಾಗಿದ್ದ ಪ್ರಜಾಪ್ರಭುತ್ವದಲ್ಲಿ ನಾಲ್ಕು ದಶಕಗಳ ಕಾಲ ಸೇವೆಗೈದದ್ದು ನಿವೃತ್ತಿಯ ನಂತರದ ನನ್ನ ರಾಜಕೀಯ ಯೋಚನೆಗಳ ಮೇಲೆ ಗಮನಾರ್ಹ ಪ್ರಭಾವ ಬೀರಿದೆ.

ಯುದ್ಧದಿಂದ ಶಾಂತಿಯೆಡೆಗೆ

ಸೆಪ್ಟೆಂಬರ್ 1993ರಲ್ಲಿ ನಿವೃತ್ತನಾದ ನಂತರ ಮಹಾರಾಷ್ಟ್ರದ ಆಲಿಬಾಗಿನ ಹಳ್ಳಿಗೆ ಹೋಗಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡೆ, ಈಗಲೂ ನನ್ನ ಜೀವನ ಅಲ್ಲೇ. ಗ್ರಾಮೀಣ ಭಾರತದಲ್ಲಿ ಬದುಕುವುದು ಸಂಪೂರ್ಣ ಶಿಕ್ಷಣವನ್ನು ಹೊಸದಾಗಿ ಪಡೆದಂತೆ, ಈ ಬದುಕು ನನಗೆ ಹಲವಾರು ಪ್ರಮುಖ ಒಳನೋಟಗಳನ್ನು ನೀಡಿದೆ. ಸಾಮಾನ್ಯ ರೈತನೊಬ್ಬ ಅನುಭವಿಸುವ ಏರಿಳಿತಗಳ ಜೊತೆಯಾಗಿದ್ದೇನೆ. ಹವಾಮಾನ ವೈಪರೀತ್ಯ, ಮಾಲಿನ್ಯ, ಸ್ಥಳೀಯ ರಾಜಕೀಯ, ಎಸ್.ಇ.ಝಡ್ ಎಂಬ `ಅಭಿವೃದ್ಧಿಯ' ಹೆಸರಿನಲ್ಲಿ ನಮ್ಮನ್ನು ಎತ್ತಂಗಡಿ ಮಾಡುವ ಬೆದರಿಕೆ, ಹೀಗೆ ಹಲವಾರು ವಿಷಯಗಳು ರೈತನ ಏರಿಳಿತವನ್ನು ಪ್ರಭಾವಿಸುತ್ತವೆ. ಸೈನ್ಯದಲ್ಲಿದ್ದ ವರ್ಷಗಳು, ಎರಡು ಯುದ್ಧಗಳಲ್ಲಿ ನೇರವಾಗಿ ಭಾಗವಹಿಸಿದ್ದಾಗಿನ ಅನುಭವದ ಜೊತೆಗೆ ದೇಶದ ಎಪ್ಪತ್ತು ಪ್ರತಿಶತಃ ಜನರ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಕೃಷಿ ಬಿಕ್ಕಟ್ಟುಗಳನ್ನು ಹತ್ತಿರದಿಂದ ಕಂಡು ನಂತರ ಬಡತನ ಮತ್ತು ಹಸಿವಿನಿಂದ ನಿಜವಾದ ಬಿಡುಗಡೆ ಅಥವಾ `ಆಜಾದಿ' ದೊರೆಯುವುದು ಈ ನಾಡಿನ ಗಣ್ಯರು ತಮ್ಮ ಸ್ವಾರ್ಥವನ್ನು ಕಡಿಮೆಮಾಡಿಕೊಳ್ಳುತ್ತ ಸಮಗ್ರತೆಯನ್ನು ತೋರಿಸಿದಾಗ ಎನ್ನುವ ನನ್ನ ನಂಬಿಕೆಯನ್ನು ಪ್ರಭಾವಿಸಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಆರ್.ಬಿ.ಐ ಇಂಡಿಯನ್ ಎಕ್ಸ್‍ಪ್ರೆಸ್ಸಿಗೆ ನೀಡಿದ ಮಾಹಿತಿಯು ಕೈಗಾರಿಕೆಗಳು ಸಾರ್ವಜನಿಕ ಬ್ಯಾಂಕುಗಳಿಗೆ ನೀಡಬೇಕಾದ ಸಾಲದ ಮೊತ್ತ 2.11 ಲಕ್ಷ ಕೋಟಿ ಎಂದು ಬಹಿರಂಗಪಡಿಸಿತು. ಇದರಲ್ಲಿನ ಅರ್ಧದಷ್ಟು ಮೊತ್ತವನ್ನು 2013 - 2015ರ ಅವಧಿಯಲ್ಲಿ ವಸೂಲಾಗದ ಸಾಲ ಪಟ್ಟಿಗೆ ಸೇರಿಸಿ ಸಾಲ ಮನ್ನಾ ಮಾಡಲಾಗಿದೆ ಎಂದು ವರದಿಯಾಗಿದೆ. ಅಚ್ಚರಿಯೆಂದರೆ ಈ ಮಾಹಿತಿಯನ್ನಾಗಲೀ ಅಥವಾ ಇದು ಒಟ್ಟಾರೆ ಆರ್ಥಿಕತೆಯ ಮೇಲೆ ಉಂಟು ಮಾಡುವ ಪರಿಣಾಮದ ಬಗ್ಗೆಯಾಗಲೀ ಆರ್ಥಿಕ ಸಚಿವಾಲಯ ಮಾತೇ ಆಡುವುದಿಲ್ಲ. ಆದರೆ ದುರ್ಬಲ ವರ್ಗಗಳ ವಿದ್ಯಾರ್ಥಿಗಳ ಓದಿಗೆಂದು ಜೆ.ಎನ್.ಯು ಮತ್ತು ಇತರೆ ವಿಶ್ವವಿದ್ಯಾನಿಲಯಗಳಲ್ಲಿ ಕೊಡುವ ಜುಜುಬಿ ಮೊತ್ತದ ಹಣದ ಬಗ್ಗೆ ಗಂಭೀರ ಟೀಕೆಗಳನ್ನು ಕೇಳುತ್ತಿದ್ದೇವೆ. ತೆರಿಗೆದಾರರ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದ ಎಂದು ಹೇಳಲು ಇದನ್ನು ಉದಾಹರಣೆಯಾಗಿ ಬಳಸುತ್ತಿದ್ದಾರೆ! ಆದರೆ ಮನ್ನಾ ಮಾಡಲಾದ ಸಾಲವನ್ನು ಕೂಡ ತೆರಿಗೆದಾರರ ಹಣದಿಂದಲೇ ಕೊಡಲಾಗಿರುತ್ತದೆಯಲ್ಲವೇ? ಇದನ್ನು ನಾವು ಪ್ರಶ್ನಿಸುವುದಿಲ್ಲ.

ಸುಸ್ಥಿರ ಅಭಿವೃದ್ಧಿಯ ತಳಹದಿಯ ಮೇಲೆ ನ್ಯಾಯಬದ್ಧ ಸಮಾಜವನ್ನು ನಿರ್ಮಿಸಲು ನೆರೆಹೊರೆಯವರೊಂದಿಗೆ ಶಾಂತಿಯನ್ನು ಬೆಳೆಸಬೇಕು. ಇದರರ್ಥ ಪ್ರಸ್ತುತ ಸಮಸ್ಯೆಗಳಿಗೆ ರಾಜಕೀಯ ಪರಿಹಾರಗಳನ್ನು ಕಂಡುಕೊಳ್ಳುವುದು. ಇದಾದ ನಂತರವಷ್ಟೇ ನಾವು ಶಸ್ತ್ರಗಳ ಮೇಲಿನ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಬಹುದು, ಬಳಕೆಯನ್ನು ನಿಯಂತ್ರಿಸಬಹುದು, ವಿದ್ಯುತ್ತಿನ ಬೇಡಿಕೆಯನ್ನು ಪೂರೈಸಬಹುದು ಮತ್ತು ನಾಗರೀಕರಿಗೆ ಆಹಾರ, ಸೂರು, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗವನ್ನು ನೀಡಬಹುದು. ನಾನು ರಾಯಗಡದಲ್ಲಿ ಎಸ್.ಇ.ಝೆಡ್ ವಿರುದ್ಧ ನಡೆದ ಹೋರಾಟದ ಭಾಗವಾಗಿದ್ದೇನೆ, ಮುನ್ನಡೆಸಿದ್ದೇನೆ. ನವೀಕರಿಸಬಹುದಾದ ಇಂಧನ ಮೂಲವನ್ನು ಪ್ರೋತ್ಸಾಹಿಸಬೇಕೆಂದು ನಿರಂತರವಾಗಿ ಆಗ್ರಹಿಸುತ್ತಿದ್ದೇನೆ. ಅಣು ವಿದ್ಯುತ್ ಕೇಂದ್ರಗಳ ವೆಚ್ಚ, ಸುರಕ್ಷತೆಯ ಬಗೆಗಿನ ಪ್ರಶ್ನೆಗಳು, ಅಣು ಕಸದ ವಿಲೇವಾರಿಯ ಸಮಸ್ಯೆಗಳೆಲ್ಲವೂ ನನ್ನನ್ನು ಅಣು ವಿದ್ಯುತ್ತಿನ ವಿರುದ್ಧದ ಹೋರಾಟದಲ್ಲಿ ಭಾಗವಹಿಸುವಂತೆ, ಕಾರ್ಬನ್ ಮುಕ್ತ ಅಣು ಮುಕ್ತ ಪರಿಹಾರಗಳನ್ನು ಹುಡುಕಲು ಆಗ್ರಹಿಸುವಂತೆ ಮಾಡಿದೆ. ಶಾಂತಿಯನ್ನು ಶಕ್ತಗೊಳಿಸುವ ಪ್ರಯತ್ನಗಳು ನನ್ನನ್ನು ಪಿ.ಐ.ಪಿ.ಎಫ್.ಪಿ.ಡಿ (Pakistan India Peoples Forum for peace and democracy -ಶಾಂತಿ ಮತ್ತು ಪ್ರಜಾಪ್ರಭುತ್ವಕ್ಕಾಗಿ ಪಾಕಿಸ್ತಾನ ಮತ್ತು ಭಾರತೀಯ ಜನರ ಸಂಘ) ಮತ್ತು ಐ.ಪಿ.ಎಸ್.ಐ (India Pakistan Soldiers Initiative for Peace, ಶಾಂತಿಗಾಗಿ ಭಾರತೀಯ ಮತ್ತು ಪಾಕಿಸ್ತಾನೀ ಸೈನಿಕರು) ಸಂಘಟನೆಗಳ ಮುಂದಾಳತ್ವ ವಹಿಸುವಂತೆ ಮಾಡಿದೆ. ಇವರೆಡೂ ಸಂಘಟನೆಗಳು ಎರಡೂ ದೇಶದ ಜನರ ನಡುವೆ ಸಂಪರ್ಕವೇರ್ಪಡಿಸುತ್ತ ಪಾಕಿಸ್ತಾನದ ಜೊತೆಗೆ ಉತ್ತಮ ಬಾಂಧವ್ಯ ಹೊಂದುವಂತೆ ಮಾಡಿವೆ. ಮರಣದಂಡನೆಯನ್ನೂ ನಾನೂ ವಿರೋಧಿಸುತ್ತೇನೆ, ಜೊತೆಗೆ ಸತತವಾಗಿ ಎ.ಎಫ್.ಎಸ್.ಪಿ.ಎ (Armed Forces Special Powers Act)ಯನ್ನು ಹೇರುವುದನ್ನು ವಿರೋಧಿಸುತ್ತೇನೆ. ಇದರ ಬಗ್ಗೆ ಬರೆದಿದ್ದೇನೆ ಮತ್ತು ಅನೇಕ ಸಾರ್ವಜನಿಕ ವೇದಿಕೆಗಳಲ್ಲಿ ಹೇಳಿದ್ದೇನೆ.

ನನ್ನ ಪ್ರಕಾರ ಮೇಲಿನ ಸಂಗತಿಗಳು ಚರ್ಚೆಗೆ ಯೋಗ್ಯವಾದವು, ನಾಗರೀಕರಾಗಿ ಇದರ ಬಗ್ಗೆ ಮಾತನಾಡುವುದು ಹಕ್ಕಿನ ಪ್ರಶ್ನೆಯಷ್ಟೇ ಅಲ್ಲ, ಕರ್ತವ್ಯವೂ ಹೌದು. ಅದು ಆ ದಿನದ ಸರಕಾರದ ನೀತಿಗಳ ವಿರುದ್ಧವಾಗಿದ್ದರೂ ಸಹ. ಈ ಮೇಲಿನ ಸಂಗತಿಗಳು ನನ್ನನ್ನಾಗಲೀ ಅಥವಾ ಯಾರನ್ನೇ ಆಗಲಿ ರಾಷ್ಟ್ರವಿರೋಧಿಯಾಗಿಸುತ್ತದಾ? ದೇಶದ್ರೋಹಿಯಾಗಿಸುತ್ತದಾ? ದೇಶಪ್ರೇಮವನ್ನು ಕಡಿಮೆಯಾಗಿಸುತ್ತದಾ? 

ಇಲ್ಲ ಎಂದೇ ನಾನು ನಂಬಿದ್ದೇನೆ.

ರಾಜಕೀಯ ಪಕ್ಷಗಳು ಮತ್ತು ಸರಕಾರಗಳು ನಾಡಿನ ಸಂವಿಧಾನಕ್ಕೆ ನಮ್ಮಂತೆಯೇ ಬದ್ಧವಾಗಿರಬೇಕೆಂಬುದೇ ನನ್ನ ಈ ನಿಲುವಿಗೆ ಕಾರಣ. ಪ್ರತಿಯೊಬ್ಬ ನಾಗರೀಕನಿಗೂ ಚಿಂತಿಸುವ ಸ್ವಾತಂತ್ರ್ಯವಿದೆ, ದಮನದ ಭಯವಿಲ್ಲದೇ ತನ್ನಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಆಧುನಿಕ ಪ್ರಜಾಪ್ರಭುತ್ವದಲ್ಲಿ ವಸಾಹತುಶಾಹಿ ದಿನಗಳ ದೇಶದ್ರೋಹದ ಕಾನೂನು ಮಾನ್ಯವಾಗಬಾರದು.

ಹಾಗಾಗಿ ಪ್ರಶ್ನೆ ಹುಟ್ಟುತ್ತದೆ: ರೋಹಿತ್ ವೇಮುಲ, ಕನ್ಹಯ್ಯ ಕುಮಾರ್, ಉಮರ್ ಖಾಲಿದನ ಮೇಲೆ ರಾಷ್ಟ್ರವಿರೋಧಿ, ದೇಶದ್ರೋಹಿ, ಭಯೋತ್ಪಾದಕ ಕೃತ್ಯಗಳ ಆರೋಪಗಳನ್ನು ನಾವ್ಯಾಕೆ ಮಾಡುತ್ತಿದ್ದೇವೆ? ಸದ್ಯಕ್ಕೆ ಲಭ್ಯವಿರುವ ಮಾಹಿತಿಗಳು, ಈ ಮೂರೂ ಯುವಕರು ನಮ್ಮ ಸಂವಿಧಾನದ ಗುರಿಗಳನ್ನು ಮುಂದೊಯ್ಯುವ ಪ್ರಯತ್ನ ಮಾಡುತ್ತಿದ್ದರೇ ಹೊರತು ಯಾವುದೇ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರಲಿಲ್ಲ ಎನ್ನುವುದನ್ನು ತೋರಿಸುತ್ತವೆ. 

ರಾಷ್ಟ್ರವಾದವನ್ನು ವ್ಯಾಖ್ಯಾನಿಸುವುದ್ಯಾರು?

ರೋಹಿತನ ಸಾವು, ಕನ್ಹಯ್ಯನ ಬಂಧನ ಮತ್ತು ಉಮರ್ ಖಾಲಿದನನ್ನು ಹುಡುಕುತ್ತಿರುವುದು ರಾಷ್ಟ್ರವಾದ ಎಂದರೇನು? ರಾಷ್ಟ್ರವಿರೋಧಿ ಎಂದರೇನು ಎಂಬುದರ ಕುರಿತು ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಟ್ಟಿರುವುದು ಒಂದು ರೀತಿಯಲ್ಲಿ ಒಳ್ಳೆಯದೇ. ಜೊತೆಗೆ ಸಮಾಜದಲ್ಲಿರುವ ಜಾತಿ, ಧರ್ಮ ಮತ್ತು ತಾರತಮ್ಯದ ಬಗೆಗೂ ಚರ್ಚೆಗಳಾಗುತ್ತಿವೆ. ನನ್ನಲ್ಲಿನ ರಾಷ್ಟ್ರೀಯತೆಯನ್ನು ಅಥವಾ ರಾಷ್ಟ್ರೀಯತಾ ಭಾವದ ಕೊರತೆಯನ್ನು ನಿರ್ಧರಿಸುವ ಹಕ್ಕು ಯಾರಿಗಾದರೂ ಇದ್ದರೆ ಅದು ಯಾರಿಗಿದೆ ಎನ್ನುವ ಕುರಿತು ಮತ್ತಷ್ಟು ದೀರ್ಘ ಹಾಗೂ ಪ್ರಬುದ್ಧ ಚರ್ಚೆಗಳಾಗಬೇಕು. ನನ್ನರಿವಿನ ಮಟ್ಟಿಗೆ ಸ್ವಾತಂತ್ರ್ಯದ ದಿನಗಳಿಂದಲೂ ಇಂತಹುದೊಂದು ಚರ್ಚೆ ನಡೆದಿಲ್ಲ. ಇರುವ ಕಾನೂನುಗಳು ಮತ್ತು ಅಭ್ಯಾಸಗಳೆಲ್ಲವೂ ವಸಾಹತು ಸಂದರ್ಭದಿಂದ ಎರವಲು ಪಡೆದಿರುವುದೇ ಹೊರತು ಸಮಕಾಲೀನ ಚೌಕಟ್ಟಿನೊಳಗೆ ಅದನ್ನು ಸಂಭೋದಿಸಲಾಗಿಲ್ಲ. ಇದು ಪ್ರಬುದ್ಧ ಪ್ರಜಾಪ್ರಭುತ್ವಕ್ಕೆ ಅತ್ಯವಶ್ಯ. ಅಬ್ಬರದ ಅತಿರೇಕತನ, ರಾಷ್ಟ್ರಧ್ವಜವನ್ನು ಬೀಸುವುದು ಮತ್ತು ಘೋಷಣೆಗಳನ್ನು ಕೂಗುವುದು ದೇಶಭಕ್ತಿಯನ್ನು ಪ್ರಮಾಣೀಕರಿಸುವುದಿಲ್ಲ. ದೇಶದ್ರೋಹದ ಆರೋಪವನ್ನು ಹೊರಿಸುವುದಾಗಲೀ, ಭಯೋತ್ಪಾದಕರ ಜೊತೆ ನಂಟಿದೆ ಎಂದು ಕೂಗುವುದಾಗಲೀ ನ್ಯಾಯಾಲಯದ ಸೂಕ್ಷ್ಮ ಪರಿಶೀಲನೆಯಲ್ಲಿ ಪಾಸಾಗುವ ಸಾಧ್ಯತೆಗಳಿರುವುದಿಲ್ಲ. ಘೋಷಣೆಗಳ ಬಗ್ಗೆ, ಪ್ರತಿಭಟನೆಯ ರೀತಿಯ ಬಗ್ಗೆ ಹಲವರು ಸಾರ್ವಜನಿಕವಾಗಿ ಅಸಮ್ಮತಿ ತೋರ್ಪಡಿಸಿದ್ದಾರೆ, ಆದರೆ ಇದ್ಯಾವುದೂ ಹೊಸದಲ್ಲ ಮತ್ತು ತೀವ್ರಗಾಮಿತ್ವವೂ ಅಲ್ಲ. ಕೆಲವು ಮಾಧ್ಯಮಗಳು ಮತ್ತವರ ಹಿಂದಿರುವ ಅದೃಶ್ಯ ಮಾಲೀಕರು ಕೆಲವು ವಿದ್ಯಾರ್ಥಿಗಳು ದೇಶದ ಒಗ್ಗಟ್ಟಿಗೆ ಅಪಾಯಕಾರಿ ಎಂದು ಬಿಂಬಿಸಲು ಪ್ರಯತ್ನಿಸುತ್ತಿರುವುದು ನಗೆಪಾಟಲಿನ ವಿಷಯ.

ನನ್ನಂತವನಿಗೆ ಕಳವಳಕ್ಕೆ ದೂಡುವ ಸಂಗತಿಯೆಂದರೆ, ಕಾನೂನನ್ನು ಕಾಪಿಡುವ ವೃತ್ತಿಯಲ್ಲಿರುವವರೆನ್ನಲಾದ ಕೆಲವರು ನ್ಯಾಯಾಲಾಯದ ಆವರಣದಲ್ಲಿ ಗಲಭೆಯೆಬ್ಬಿಸಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಕನ್ಹಯ್ಯಕುಮಾರನ ಮೇಲೆ ಹಾಕಿದ ಬೆದರಿಕೆ ಮತ್ತು ನಡೆಸಿದ ಹಲ್ಲೆ. ಇದೆಲ್ಲವೂ ನಡೆದಿದ್ದು ಏನೂ ಮಾಡದೇ ಕಲ್ಲಿನಂತೆ ನಿಂತುಬಿಟ್ಟಿದ್ದ ದೊಡ್ಡ ಸಂಖೈಯ ಪೋಲೀಸರ ಸಮ್ಮುಖದಲ್ಲಿ. ಸಮವಸ್ತ್ರ ಧರಿಸಿದ, ಶಿಸ್ತಿನವರೆಂದು ಹೇಳಲಾದ ಪೋಲೀಸ್ ಇಲಾಖೆಯ ಈ ನಡೆಯನ್ನು ಒಪ್ಪುವುದು ಸಾಧ್ಯವೇ ಇಲ್ಲ.

ಜೆ.ಎನ್.ಯು ಮತ್ತು ಹೆಚ್.ಸಿ.ಯುನ ಕಳವಳಗಳ ಬಗ್ಗೆ ಸಾರ್ವಜನಿಕವಾಗಿ ಲಭ್ಯವಿರುವ ಅನೇಕ ಲಿಖಿತ ವರದಿಗಳು ಮತ್ತು ಅನೇಕ ವೀಡಿಯೋಗಳನ್ನು ಗಮನಿಸಿದ್ದೇನೆ. ನಿಜವಾದ ದುರಂತವೆಂದರೆ ವಿದೇಶಿ ಹಣದಿಂದ ನಡೆಯುತ್ತಿರುವ ಈ `ಭಯೋತ್ಪಾದಕ' `ದೇಶದ್ರೋಹಿ' ಚಟುವಟಿಕೆಗಳ ವಿರುದ್ಧದ ಕೂಗನ್ನು ಉಪಯೋಗಿಸಲಾಗುತ್ತಿರುವುದು ದೇಶದ ಪ್ರತಿಷ್ಟಿತ ವಿಶ್ವವಿದ್ಯಾನಿಲಯಗಳನ್ನು ಮುಚ್ಚುವಂತೆ, `ಶುದ್ಧ'ಗೊಳಿಸುವಂತೆ ಆಗ್ರಹಿಸುವುದಕ್ಕಾಗಿ! ಇದಿವರ ಗುಪ್ತ ಕಾರ್ಯಾಚರಣೆಯ ರೀತಿ ಎಂದು ಹೇಳಲೇಬೇಕಾಗಿದೆ. ಮತ್ತಿದು ಗಂಭೀರವಾದ ವಿಷಯ. ಎಲ್ಲಾ ರೀತಿಯಿಂದಲೂ ಘಟನೆಯನ್ನು ತನಿಖೆಗೊಳಪಡಿಸಿ; ವಿಶ್ವವಿದ್ಯಾನಿಲಯದ ಅಧಿಕಾರಿಗಳು ವಿದ್ಯಾರ್ಥಿಗಳ ಮೇಲೆ ಸೂಕ್ತ ಶಿಸ್ತು ಕ್ರಮವನ್ನೂ ತೆಗೆದುಕೊಳ್ಳಲಿ. ಆದರೆ ಪೋಲೀಸರನ್ನು ಕರೆಸುವ ಮುಂಚೆ, ದೇಶದ್ರೋಹದಂತ ಗಂಭೀರ ಆರೋಪಗಳನ್ನು ಹೊರಿಸುವ ಮುನ್ನ ವಿವೇಚನೆಯಿರಬೇಕು. 

ಮುಂದಿನ ದಾರಿ

ಜೆ.ಎನ್.ಯುವನ್ನು `ಮುಚ್ಚಿಬಿಡಿ' (ShutdownJNU) ಅಥವಾ ಜೆ.ಎನ್.ಯುವನ್ನು `ಶುದ್ಧಗೊಳಿಸಿ' ಎಂದು ಕೂಗಾಡುತ್ತಿರುವವರಿಗೆ, ಕೂಗಾಟವನ್ನು ಮುನ್ನಡೆಸುತ್ತಿರುವವರಿಗೆ ಇದರ ಪರಿಣಾಮವೇನೆಂದು ತಿಳಿದಂತಿಲ್ಲ, ಕುರುಡಾಗಿ ಗುಂಪಿನ ಹಿಂದೆ ಹೋಗುವ ಭೀತಗೊಳಿಸುವ ಪ್ರವೃತ್ತಿಯನ್ನವರು ತೋರಿಸುತ್ತಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವುದರ ಜೊತೆಗೆ, ಮಿಲಿಟರಿ ಸಂಸ್ಥೆಗಳಾದ ಎನ್.ಡಿ.ಎ, ಎನ್.ಡಿ.ಸಿ, ನೇವಲ್ ಅಕಾಡೆಮಿ ನಡೆಸುವ ಕೋರ್ಸುಗಳಿಗೆ ಜೆ.ಎನ್.ಯು ಮತ್ತು ಭಾರತದ ಕೆಲ ವಿಶ್ವವಿದ್ಯಾನಿಲಯಗಳು ಮಾನ್ಯತೆ ಕೊಟ್ಟಿದೆ ಎಂದು ನೆನಪಿಸಿಕೊಳ್ಳುವುದು ಈ ಸಂದರ್ಭಕ್ಕೆ ಸೂಕ್ತವಾದದ್ದು ಎನ್ನಿಸುತ್ತದೆ. ವಿಶ್ವವಿದ್ಯಾನಿಲಯಗಳು ಮತ್ತು ಮಿಲಿಟರಿ ಸಂಸ್ಥೆಗಳ ನಡುವಿನ ಈ ಸಂಬಂಧವನ್ನು ನಮ್ಮ ಸೈನ್ಯದಲ್ಲಿನ ಉದ್ಯೋಗಿಗಳು ಇಲ್ಲಿ ನಡೆವ ಸಂವಾದಗಳಿಂದ ಉಪಯೋಗ ಪಡೆದುಕೊಂಡು ನವೀನ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಿದೆ. ಹಲವಾರು ಸೈನಿಕ ಸಿಬ್ಬಂದಿ ಜೆ.ಎನ್.ಯುನಲ್ಲಿನ ಅಕಾಡೆಮಿಕ್ ಕೋರ್ಸುಗಳಲ್ಲಿ ಭಾಗವಹಿಸುವುದರಿಂದ ಲಾಭ ಪಡೆದುಕೊಂಡಿದ್ದಾರೆ ಮತ್ತು ಅವರು ಇಲ್ಲಿನ ಹಳೆಯ ವಿದ್ಯಾರ್ಥಿಗಳು. ಹಲವು ನಾಗರೀಕ ಸೇವೆಯಲ್ಲಿರುವ ಅಧಿಕಾರಿಗಳು, ಪೋಲೀಸರು ಇದೇ ಗುಂಪಿಗೆ ಸೇರುತ್ತಾರೆ. ಇದನ್ನು ನಾನು ಉದ್ದೇಶಪೂರ್ವಕವಾಗಿ ಪ್ರಸ್ತಾಪಿಸುತ್ತಿದ್ದೇನೆ. ಡಿಗ್ರಿ ಮತ್ತು ಪ್ರಶಸ್ತಿಗಳನ್ನು ಹಿಂದಿರುಗಿಸುವ ಆತುರದ ನಿರ್ಧಾರಗಳು ಉಂಟುಮಾಡಬಹುದಾದ ಪರಿಣಾಮಗಳನ್ನು ಕೂಲಂಕುಷವಾಗಿ ನನ್ನ ಸೋದರ, ಸೋದರಿಯರು ಮತ್ತು ಮಾಜಿ ಸೈನಿಕರು ವಿವೇಚಿಸಬೇಕೆಂದು ತಿಳಿಸುವ ಉದ್ದೇಶದಿಂದ.

ಇದನ್ನಿವತ್ತು ಯಾಕೆ ಬರೆದಿದ್ದೇನೆ ಎನ್ನುವುದರ ಬಗ್ಗೆ ಹಲವಾರು ಕಾರಣಗಳನ್ನು ವಿವರಿಸಿದ್ದೇನೆ. ಹಿರಿಯರಾದ ನನ್ನಂತವರು ಮಾತನಾಡಬೇಕು, ತಡವಾಗುವ ಮುನ್ನ ಎಚ್ಚರ ಮೂಡಿಸಬೇಕಾದುದು ಅತ್ಯಗತ್ಯ. ನಿರಂಕುಶ ಆಡಳಿತ ಆಳ್ವಿಕೆ ನಡೆಸುವಂತಾಗುವುದು ಒಳ್ಳೆಯ ಜನರು ಮೌನದಿಂದಿರುವುದರಿಂದ ಎನ್ನುವುದನ್ನು ಇತ್ತೀಚಿನ ಇತಿಹಾಸ ನಮಗೆ ತೋರಿಸಿಕೊಟ್ಟಿದೆ. ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಜಾಪ್ರಭುತ್ವವನ್ನು, ಸ್ವಾತಂತ್ರ್ಯವನ್ನು, ಪ್ರಶ್ನಿಸುವ ಹಕ್ಕನ್ನು, ಭಿನ್ನಮತೀಯತೆಯನ್ನು, ಚರ್ಚೆ, ಸಂವಾದಗಳನ್ನು ಉಳಿಸುವ ಸಲುವಾಗಿ ಇದು ಅತ್ಯಗತ್ಯ. ಭೀತಿಯಿಲ್ಲದೆ ಮಾತನಾಡಬಲ್ಲ ಚಿಂತಕರನ್ನು ಮತ್ತು ವೃತ್ತಿಪರರನ್ನು ರೂಪಿಸುವಲ್ಲಿ ಜೆ.ಎನ್.ಯು ಮುಂಚೂಣಿಯಲ್ಲಿದೆ. ನಿರ್ಬಿಡೆಯಿಂದ ಹೇಳಬೇಕೆಂದರೆ, ಯುವ ವಿದ್ಯಾರ್ಥಿ ನಾಯಕ ಕನ್ಹಯ್ಯನ ಮಾತುಗಳನ್ನು ಕೇಳಿದ ಮೇಲೆ - ಸಂಕೀರ್ಣತೆಯ, ಅಸಮಾನತೆಯ ದೇಶದಲ್ಲಿ ಇಪ್ಪತ್ತರ ಆಸುಪಾಸಿನ ಯುವಕನೊಬ್ಬ ಇಷ್ಟೊಂದು ಸಹಾನುಭೂತಿಯಿಂದ, ಬುದ್ಧಿವಂತಿಕೆಯಿಂದ, ಉತ್ಕುಟತೆಯಿಂದ ದೇಶ ಎದುರಿಸುತ್ತಿರುವ ನಿಜವಾದ ಸವಾಲುಗಳು ಮತ್ತು ಆತಂಕಗಳ ಬಗ್ಗೆ ಮಾತನಾಡುತ್ತಾನೆ ಎಂದರೆ - ಇಲ್ಲಿ ಎಲ್ಲವೂ ಸರಿಯಾಗಿದೆ ಎಂಬ ನಂಬಿಕೆಯನ್ನು ನನ್ನಲ್ಲಿ ಗಾಢಗೊಳಿಸಿದೆ. 

ರಾಷ್ಟ್ರಧ್ವಜಕ್ಕೆ ವಂದಿಸುವುದರ ಆಚೆಗೂ (ಧ್ವಜಕ್ಕೆ ಹೆಮ್ಮೆ ಮತ್ತು ಗೌರವದಿಂದ ವಂದಿಸುವುದನ್ನು ನಾನೆಂದೂ ಬಿಡುವುದಿಲ್ಲ) ನೋಡಿದಾಗ ಈ ದೇಶದಲ್ಲಿ ರಾಷ್ಟ್ರೀಯವಾದ ಮತ್ತು ದೇಶಪ್ರೇಮದ ನಿಜದ್ಯೋತಕವೆಂದರೆ ಯುವ ಚಿಂತಕರಾದ ರೋಹಿತ್ ವೇಮುಲ, ಕನ್ಹಯ್ಯ ಕುಮಾರ್, ಶೀಲಾ ರಷೀದ್, ಉಮರ್ ಖಾಲೀದ್ ಮತ್ತು ಇವರೊಟ್ಟಿಗೆ ದೇಶದಾದ್ಯಂತ ಇರುವ ಅನಾಮಿಕ ಯುವಕ, ಯುವತಿಯರ ಚಿಂತನೆಗಳೇ. ರೋಹಿತ್ ವೇಮುಲನ ರೀತಿ ದುಡುಕು ನಿರ್ಧಾರ ತೆಗೆದುಕೊಳ್ಳುವುದನ್ನು ತಡೆಗಟ್ಟುವುದನ್ನು ನಾವು ಒಟ್ಟಾಗಿ ಮಾಡುವುದರ ಜೊತೆಗೆ ಈಗ ಬಂಧನದಲ್ಲಿರುವ, ಪ್ರಾಣಭೀತಿಯಿಂದ ಅವಿತುಕೊಂಡಿರುವವರಿಗೆ ನ್ಯಾಯ ಸಿಗುವುಂತೆಯೂ ನೋಡಿಕೊಳ್ಳಬೇಕು.

ಅಂತಿಮವಾಗಿ ನೋಡಿದರೆ ರಾಷ್ಟ್ರೀಯ ಭದ್ರತೆಗೆ ಇರುವ ಅತ್ಯುತ್ತಮ ಖಾತ್ರಿ ಎಂದರೆ ಮನುಷ್ಯನ ಸುರಕ್ಷತೆಯೇ ಆಗಿದೆ. 

Feb 27, 2016

ಪಂಚಾಯತಿ ಚುನಾವಣೆಗೆ ಸುರಿದ ಹಣವೆಷ್ಟು? ನೀವೂ ಲೆಕ್ಕ ಹಾಕಿ!

karnataka panchayat elections 2016
ಭಾರತದ ರಾಜಕೀಯ ವ್ಯವಸ್ಥೆಯ ಬುನಾದಿ ಪಂಚಾಯತಿ ವ್ಯವಸ್ಥೆ ಎಂದಿದ್ದರು ಮಹಾತ್ಮ ಗಾಂಧಿ. ಪಾಪ! ಆ ಮಹಾತ್ಮ ಯಾವ ಅರ್ಥದಲ್ಲಿ ಹೇಳಿದ್ದರೋ ಏನೋ ಇವತ್ತು ಭಾರತದ ಭ್ರಷ್ಟ ರಾಜಕೀಯ ವ್ಯವಸ್ಥೆಯ ಬುನಾದಿಯಾಗಿಬಿಟ್ಟಿದೆ ಪಂಚಾಯತಿ ವ್ಯವಸ್ಥೆ. ಎಲ್ಲಾ ಕೆಲಸಕ್ಕೂ ಶಾಸಕ, ಸಂಸದರ ಬಳಿಗೆ ಜನರು ತೆರಳುವಂತಾಗಬಾರದು; ಪ್ರತಿಯೊಂದು ಹಳ್ಳಿಯಲ್ಲೂ, ತಾಲ್ಲೂಕಿನಲ್ಲೂ, ಜಿಲ್ಲೆಯಲ್ಲೂ ಸರಕಾರವನ್ನು ಪ್ರತಿನಿಧಿಸುವವ ಜನಪ್ರತಿನಿಧಿಗಳಿರಬೇಕು, ಸ್ಥಳೀಯ ಬೇಕು ಬೇಡಗಳನ್ನು ಅವರು ನೋಡಿಕೊಳ್ಳಬೇಕು ಎಂಬ ಉದ್ದೇಶದ ಪಂಚಾಯತಿ ವ್ಯವಸ್ಥೆಯನ್ನು ಹಾಳುಗೆಡವಿದವರ್ಯಾರು? ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಮುಗಿದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಖರ್ಚಾಗಿರಬಹುದಾದ ಅಂದಾಜು ಮೊತ್ತವೆಷ್ಟು?

ಕೋಳಿ ಮೊದಲಾ ಮೊಟ್ಟೆ ಮೊದಲಾ ಎಂಬ ಪ್ರಶ್ನೆಗೆ ವಿಜ್ಞಾನಿಗಳು ಏನೇನೋ ತಿಪ್ಪರಲಾಗ ಹಾಕಿ ಉತ್ತರ ಕಂಡುಹಿಡಿದುಬಿಡಬಹುದು ಆದರೆ ಚುನಾವಣೆಗಳನ್ನು ಭ್ರಷ್ಟರಾಗಿಸಿದ್ದು ಮತದಾರರಾ ಅಥವಾ ಅಭ್ಯರ್ಥಿಗಳಾ ಎಂಬ ಪ್ರಶ್ನೆಗೆ ಉತ್ತರ ಕಂಡುಹಿಡಿಯುವುದು ಕಷ್ಟ ಕಷ್ಟ. ಅಭ್ಯರ್ಥಿಗಳನ್ನು ಕೇಳಿ ನೋಡಿ ‘ಏನ್ ಮಾಡೋದ್ ಹೇಳಿ. ವೋಟು ಕೇಳಕ್ಕೆ ಹೋದ್ರೆ ಆ ಕೆಲ್ಸ ಆಗಿಲ್ಲ, ಈ ಕೆಲ್ಸ ಆಗಿಲ್ಲ ಅಂತ ಹತ್ತು ನಿಮಿಷ ಬಯ್ತಾರೆ. ಕೆಲ್ಸ ಮಾಡ್ಕೊಡ್ತೀವಿ ನಮಗೆ ವೋಟ್ ಹಾಕಿ ಎಂದು ಹೊರಟರೆ ಏನ್ ಹಂಗೆ ಹೊಂಟುಬಿಟ್ರಿ ಅಂತ ನೇರವಾಗೇ ದುಡ್ಡು ಕೇಳ್ತಾರೆ’ ಎನ್ನುತ್ತಾರೆ. ‘ಅಯ್ಯೋ ಗೆದ್ದ ಮೇಲೆ ಸರಿಯಾಗಿ ಕಮಿಷನ್ ಹೊಡೆಯಲ್ವಾ? ಕೊಡ್ಲಿ ಬಿಡಿ’ ಅನ್ನುತ್ತಾರೆ ಮತದಾರರು. ‘ಈ ಪಂಚಾಯತಿಯವ್ರು ಎಂ.ಎಲ್.ಸಿ ಎಲೆಕ್ಷನ್ನಿನಲ್ಲಿ ಸರಿಯಾಗಿ ದುಡ್ಡು ಮಾಡಿಕೊಂಡಿಲ್ವಾ? ಹಂಗೇ ನಾವೂವೇ’ ಅನ್ನೋರೂ ಇದ್ದಾರೆ. ಹಣ ಕೊಟ್ಟವರಿಗೇ ಮತ ಚಲಾಯಿಸುತ್ತಾರೆ ಎಂದೆಲ್ಲ ನಂಬುವುದು ಕಷ್ಟವಾದರೂ ಹಣ ತೆಗೆದುಕೊಳ್ಳಲು ಹಿಂಜರಿಯುವವರ ಸಂಖೈ ದಿನೇ ದಿನೇ ಕಡಿಮೆಯಾಗುತ್ತಿರುವುದು ಸುಳ್ಳಲ್ಲ. 

ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ಒಂದೂಕಾಲು ಒಂದೂವರೆ ಕೋಟಿಯಷ್ಟು ಖರ್ಚು ಮಾಡಿದ್ದರೆ ಎರಡನೇ ಸ್ಥಾನ ಪಡೆದ ಅಭ್ಯರ್ಥಿ ಅರವತ್ತರಿಂದ ಎಂಭತ್ತು ಲಕ್ಷ ಖರ್ಚು ಮಾಡಿದ್ದಾರೆ, ಒಂದು ಕೋಟಿ ಖರ್ಚು ಮಾಡಿಯೂ ಸೋತವರಿದ್ದಾರೆ. ಇನ್ನು ಉಳಿದ ಅಭ್ಯರ್ಥಿಗಳೂ ಒಂದಷ್ಟು ಖರ್ಚು ಮಾಡಿದ್ದಾರೆ, ಅದನ್ನು ಬಿಟ್ಟುಬಿಡೋಣ ಬಿಡಿ. ಮೊದಲ ಸ್ಥಾನ ಪಡೆದ ಅಭ್ಯರ್ಥಿ ಒಂದು ಕೋಟಿ ಮತ್ತು ಎರಡನೇ ಸ್ಥಾನ ಪಡೆದ ಅಭ್ಯರ್ಥಿ ಐವತ್ತು ಲಕ್ಷ ಖರ್ಚು ಮಾಡಿದ್ದಾರೆಂದು ಇಟ್ಟುಕೊಳ್ಳೋಣ, ಅಲ್ಲಿಗೆ ಇಬ್ಬರೂ ಸೇರಿ ಮಾಡಿದ ಖರ್ಚು ಒಂದೂವರೆ ಕೋಟಿ. ಒಟ್ಟು 1083 ಜಿಲ್ಲಾ ಪಂಚಾಯತ್ ಸ್ಥಾನಗಳಿದ್ದವು. ಇನ್ನೂರು, ಬೇಡ ಮುನ್ನೂರು ಸ್ಥಾನಗಳಲ್ಲಿ ಹಣದ ವಹಿವಾಟೇ ನಡೆಯಲಿಲ್ಲ ಎಂದು ‘ನಂಬೋಣ’. ಅಲ್ಲಿಗೆ ಉಳಿದಿದ್ದು 783 ಸ್ಥಾನಗಳು. 

783 x 1.5 ಕೋಟಿ = 1174,50,00,000 ಕೋಟಿ ಹಣ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಹರಿದು ಹೋಗಿದೆ! (ಇಷ್ಟೊಂದು ಉದ್ದದ ಸಂಖೈ ಇದ್ದಾಗ ಎಷ್ಟು ಸಾವಿರ ಕೋಟಿ ಎಂದು ಲೆಕ್ಕ ಹಾಕುವುದು ಗೊತ್ತಿಲ್ಲ, ನಿಮಗೆ ಗೊತ್ತಾದರೆ ತಿಳಿಸಿ!)

ತಾಲ್ಲೂಕು ಪಂಚಾಯತಿಗೆ ಬರುವ ಅನುದಾನಗಳು ಕಡಿಮೆಯಂತೆ. ಹಾಗಾಗಿ ಇಲ್ಲಿ ಖರ್ಚಾಗುವ ಹಣವೂ ಕಡಿಮೆ. ಇಪ್ಪತ್ತು ಮೂವತ್ತು ಲಕ್ಷ ಖರ್ಚು ಮಾಡುವವರೂ ಇದ್ದಾರಾದರೂ ಅಂದಾಜು ಲೆಕ್ಕದ ಸಲುವಾಗಿ ಗೆದ್ದ ಅಭ್ಯರ್ಥಿ ಹದಿನೈದು ಲಕ್ಷ ಮತ್ತು ಎರಡನೇ ಸ್ಥಾನ ಪಡೆದ ಅಭ್ಯರ್ಥಿ ಐದು ಲಕ್ಷ ಖರ್ಚು ಮಾಡಿದ್ದಾರೆ ಎಂದುಕೊಳ್ಳೋಣ. ಅಲ್ಲಿಗೆ ಒಂದು ತಾಲ್ಲೂಕು ಪಂಚಾಯತಿ ಸ್ಥಾನಕ್ಕೆ ಇಪ್ಪತ್ತು ಲಕ್ಷ. ಒಟ್ಟು ತಾಲ್ಲೂಕು ಪಂಚಾಯತಿ ಸ್ಥಾನಗಳು 3884, ಅದರಲ್ಲಿ ಸಾವಿರ ಸ್ಥಾನಗಳಲ್ಲಿ ಯಾವುದೇ ದುಡ್ಡು ಹರಿಯಲಿಲ್ಲ ಎಂದು ಬಿಟ್ಟುಬಡೋಣ. ಉಳಿದಿದ್ದು 2884 ಸ್ಥಾನಗಳು.

2884 x 20 ಲಕ್ಷ = 576,80,00,000 ಕೋಟಿ ಹಣ ತಾಲ್ಲೂಕು ಪಂಚಾಯತಿಗಳಲ್ಲಿ ಖರ್ಚಾಗಿದೆ!

(ಇಷ್ಟೊಂದು ಉದ್ದದ ಸಂಖೈ ಇದ್ದಾಗ ಎಷ್ಟು ಸಾವಿರ ಕೋಟಿ ಎಂದು ಲೆಕ್ಕ ಹಾಕುವುದು ಗೊತ್ತಿಲ್ಲ, ನಿಮಗೆ ಗೊತ್ತಾದರೆ ತಿಳಿಸಿ!)

ನೆನಪಿರಲಿ, ಇಲ್ಲಿ ಎರಡು ಅಭ್ಯರ್ಥಿಗಳ ಖರ್ಚನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ. ಕನಿಷ್ಟ ಖರ್ಚನ್ನು ಮಾತ್ರ ಪರಿಗಣಿಸಲಾಗಿದೆ. ಪೂರ್ಣ ಖರ್ಚು ಇದರ ಎರಡು ಮೂರು ನಾಲಕ್ಕು ಪಟ್ಟೇ ಹೆಚ್ಚಿರಬಹುದು.

ಅಲ್ಲಿಗೆ ಕನಿಷ್ಟ 1751 ಕೋಟಿ ರುಪಾಯಿ (ಲೆಕ್ಕಾ ಕರೆಕ್ಟಾ?!) ಖರ್ಚಾಗಿದೆ. ಈ ಪಂಚಾಯತಿ ಸದಸ್ಯರು ಇನ್ನೇನು ಸಮಾಜದ ಪರವಾಗಿ ಕಾರ್ಯನಿರ್ವಹಿಸುತ್ತಾರೆ? 

ಹಣ ಖರ್ಚಾಗಿರುವುದು ಭ್ರಷ್ಟತೆಯನ್ನು ಹೆಚ್ಚಿಸುವುದರ ಜೊತೆಜೊತೆಗೇ ಆರ್ಥಿಕ ಸಾಮರ್ಥ್ಯವಿಲ್ಲದವರಿಗೆ ಚುನಾವಣೆಯಲ್ಲಿ ಗೆಲ್ಲುವ, ಪಕ್ಷದಿಂದ ಸ್ಪರ್ಧಿಸುವ ಅವಕಾಶವನ್ನೂ ಕಸಿದುಕೊಳ್ಳುತ್ತಿದೆ. ಊರಿನಲ್ಲಿ ವಾಸವಿರುವ ಸ್ಥಳೀಯ ಅಭ್ಯರ್ಥಿಗಳಿಗಿಂತ ನಗರಗಳಲ್ಲಿ ವಾಸಿಸುತ್ತ ಚುನಾವಣೆಗೆ ನಿಂತವರ ಸಂಖೈ ಹೆಚ್ಚುತ್ತಿದೆ, ಜೊತೆಗೆ ವ್ಯಾಪಾರ ವಹಿವಾಟು ನಡೆಸುವ ವ್ಯಕ್ತಿಗಳಿಗೇ ಕರ್ನಾಟಕದ ಪ್ರಮುಖ ಮೂರೂ ಪಕ್ಷಗಳು ಮಣೆ ಹಾಕುತ್ತಿವೆ. ಅಲ್ಲಿಗೆ ಪಂಚಾಯತ್ ರಾಜ್ ಎಂಬ ಅಧಿಕಾರವನ್ನು ಜನರಿಗೆ ತಲುಪಿಸುವ ವಿಕೇಂದ್ರೀಕರಣದ ವ್ಯವಸ್ಥೆ ಸಂಪೂರ್ಣವಾಗಿ ಹಳ್ಳ ಹಿಡಿಯುವತ್ತ ದುಡುದುಡನೆ ಸಾಗುತ್ತಿದೆ.

Feb 26, 2016

ಕು.ಸ.ಮಧುಸೂದನ್: ಭೂಸ್ವಾಧೀನತೆ ಮತ್ತು ಬದಲಾಗಬೇಕಾದ ಆರ್ಥಿಕನೀತಿ

(ಸಾಂದರ್ಭಿಕ ಚಿತ್ರ)
ಕು.ಸ.ಮಧುಸೂದನ ರಂಗೇನಹಳ್ಳಿ
ರಾಜ್ಯದಲ್ಲಿ ಆಯೋಜನೆಯಾಗುವ ಪ್ರತಿ ಗ್ಲೋಬಲ್ ಇನ್‍ವೆಸ್ಟ್ ಮೀಟ್‍ಗಳೂ ಈಗಾಗಲೇ ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರಿಗೆ ಮತ್ತಷ್ಟು ಉತ್ತೇಜನ ಕೊಡುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿವೆ. ಮೊನ್ನೆ ತಾನೇ ನಡೆದ ಬೆಂಗಳೂರಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸಾವಿರಾರು ಕೋಟಿ ರೂಪಾಯಿಗಳಷ್ಟು ಬಂಡವಾಳ ಹೂಡಿಕೆಗೆ ಉದ್ಯಮಿಗಳು ಒಪ್ಪಿದ್ದಾರೆಂದು ಹೇಳಿರುವ ಬಾರಿ ಕೈಗಾರಿಕಾ ಮಂತ್ರಿ ಶ್ರೀ. ಆರ್.ವಿ.ದೇಶಪಾಂಡೆಯವರು ಇಷ್ಟೊಂದು ಪ್ರಮಾಣದ ಕೈಗಾರಿಕೆಗಳಿಗೆ ಅಗತ್ಯವಾದ ಭೂಮಿಯ ಪ್ರಮಾಣವೆಷ್ಟು ಮತ್ತು ಅಷ್ಟು ಭೂಮಿಯನ್ನು ಹೇಗೆ ನೀಡುತ್ತೇವೆಯೆಂಬುದನ್ನು ಮಾತ್ರ ಹೇಳಿಲ್ಲ. ಇಷ್ಟೊಂದು ಪ್ರಮಾಣದ ಬಂಡವಾಳ ಹೂಡಿಕೆಗೆ ಸಿದ್ದರಾಗಿರುವ ಉದ್ಯಮಿಗಳು ಸರಕಾರದಿಂದ ಸಾಕಷ್ಟು ಭೂಮಿಯನ್ನು ಕೇಳುವುದು ಮಾಮೂಲು. ಉದ್ಯಮಿಗಳ ಇಂತಹ ಬೇಡಿಕೆಯನ್ನು ಈಡೇರಿಸಲು ಸರಕಾರ ರೈತರ ಭೂಮಿಯನ್ನು ಸಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಗೆ ಮುಂದಾಗುವುದು ಖಚಿತ! ಯಾಕೆಂದರೆ ಬೃಹತ್ ಕೈಗಾರಿಕೆಗಳಿಗೆ ಅಗತ್ಯವಾದ ಭೂಮಿಯನ್ನು ಒದಗಿಸುವುದು ಸರಕಾರವೇ ಒಪ್ಪಿಕೊಂಡ ಕರ್ತವ್ಯವಾಗಿದೆ. ಹೀಗೆ ಭೂಸ್ವಾಧೀನಕ್ಕೆ ಮುಂದಾಗುವ ಸರಕಾರಗಳು ಯಥಾಪ್ರಕಾರ ಅಭಿವೃದ್ದಿಯ, ಆರ್ಥಿಕ ಪ್ರಗತಿಯ, ನಿರುದ್ಯೋಗ ನಿವಾರಣೆಯ ಹುಸಿ ಮಾತುಗಳನ್ನಾಡುತ್ತವೆ. ಅಭಿವೃದ್ದಿಯ ಇಂತಹ ಮಾರ್ಗಗಳನ್ನು ವಿರೋಧಿಸುವವರಿಗೆ ತ್ಯಾಗದ ಪಾಠ ಮಾಡುತ್ತಾ ದೇಶದ ಸಮಗ್ರ ಪ್ರಗತಿಗೆ, ತಲಾ ಆದಾಯ ಹೆಚ್ಚಳಕ್ಕೆ ರೈತರು ತ್ಯಾಗ ಮಾಡುವುದು ಅನಿವಾರ್ಯವೆಂದೂ ಮತ್ತು ಅವರ ಮುಂದಿನ ಪೀಳಿಗೆಗೆ ಈ ತ್ಯಾಗದ ಫಲ ದೊರೆಯಲಿದೆಯೆಂದು ನಂಬಿಸಲು ಹೊರಡುತ್ತವೆ! ಇದು ಇವತ್ತು ನಿನ್ನೆಯ ಮಾತಲ್ಲ. ಇಂಡಿಯಾಕ್ಕೆ ಸ್ವಾತಂತ್ರ ದೊರಕಿದ ಪ್ರಾರಂಭದ ದಿನದಿಂದಲೂ ರೈತರಿಗೆ ಇಂತಹ ಮಾತುಗಳನ್ನು ಹೇಳಿಯೇ ಮೋಸ ಮಾಡಲಾಗುತ್ತಿದೆ.

ಸ್ವಾತಂತ್ರಾನಂತರದ ದಿನಗಳಲ್ಲಿ ಅಂದಿನ ಪ್ರದಾನಮಂತ್ರಿಯಾಗಿದ್ದ ಶ್ರೀ ಪಂಡಿತ್ ಜವಹರಲಾಲ್‍ ನೆಹರುರವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತ, ಮುಂದಿನ ಜನಾಂಗಕ್ಕೆ ಭದ್ರವಾದ ಆರ್ಥಿಕ ಬುನಾದಿಯನ್ನು ಹಾಕಲು, ದೇಶದ ಸರ್ವಾಂಗೀಣ ಪ್ರಗತಿಯನ್ನು ಸಾಧಿಸಲು ರೈತರು ತಮ್ಮ ಭೂಮಿ, ಮನೆ-ಕಾಣಿಗಳನ್ನು ಸರಕಾರದ ಇಚ್ಛೆಯಂತೆ ನೀಡಿ, ಭಾರಿ ಕೈಗಾರಿಕೆಗಳು ಮತ್ತು ಅಣೆಕಟ್ಟುಗಳ ನಿರ್ಮಾಣಕ್ಕೆ ಸಹಕರಿಸಬೇಕೆಂದು ಹೇಳಿದ್ದರು. ತಮ್ಮ ಕನಸಿನ ಕೂಸಾದ ಪಂಚವಾರ್ಷಿಕ ಯೋಜನೆಗಳ ಅನುಷ್ಠಾನಕ್ಕೆ ಕೃಷಿ ಸಮುದಾಯ ಇಂತಹದೊಂದು ತ್ಯಾಗ ಬಲಿದಾನಕ್ಕೆ ಸಿದ್ದವಾಗುವುದು ಅಗತ್ಯವಾಗಿದ್ದು, ಜನತೆ ತಮಗೆ ಬೆಂಬಲ ನೀಡುತ್ತಾರೆಂಬುದು ನೆಹರೂರವರ ನಂಬಿಕೆಯಾಗಿತ್ತು. ನೆಹರೂರವರ ನಂಬಿಕೆ ಸುಳ್ಳಾಗಲಿಲ್ಲ. ಅದು ಸ್ವಾತಂತ್ರ ಬಂದ ಹೊಸತಾದ್ದರಿಂದ ಸರಕಾರಗಳಿಂದ ಜನ ಭ್ರಮನಿರಸನರಾಗಿರಲಿಲ್ಲ. ಅವರಿಗಿನ್ನೂ ಸ್ವಾತಂತ್ರಪೂರ್ವದ ಆದರ್ಶಗಳು ತಮ್ಮ ಅಸ್ಮಿತೆಗಿಂತ ಮುಖ್ಯವಾಗಿದ್ದವು ಅನಿಸಿದ್ದವು. ಹಾಗಾಗಿ ಶೇಕಡಾ 90ಕ್ಕೂ ಅಧಿಕ ಜನ ಯಾವುದೇ ಪ್ರತಿರೋಧ ಒಡ್ಡದೆ, ಪ್ರಶ್ನೆಗಳನ್ನು ಕೇಳದೆ ತಮ್ಮ ಭೂಮಿಯ್ನು ಸರಕಾರಕ್ಕೆ ನೀಡಿದರು. ಜೊತೆಗೆ ಅಂದಿನ ದಿನಮಾನದಲ್ಲಿ ಬಹುತೇಕ ಯೋಜನೆಗಳು ಸರಕಾರದ ಒಡೆತನದವೇ ಆಗಿದ್ದು, ಖಾಸಗಿಯವರ ಪಾತ್ರವಿರಲಿಲ್ಲ. ಹೀಗಾಗಿ ಜನರು ಸಹ ತಾವು ತಮ್ಮ ಸರಕಾರಕ್ಕೆ ಭೂಮಿಯನ್ನು ತ್ಯಾಗ ಮಾಡಿದ ಸಂತೃಪ್ತಿಯನ್ನು ಕಂಡುಕೊಂಡಿದ್ದರು. ಆದರೆ ಸರಕಾರದ ಕೆಂಪುಪಟ್ಟಿಯ ವ್ಯವಸ್ಥೆ ಮತ್ತು ರಾಜಕೀಯ ಇಚ್ಚಾಶಕ್ತಿಯಿಲ್ಲದ ಕಾರಣವಾಗಿ ಜನರು ಬಹುಬೇಗ ನಿರಾಶರಾಗಬೇಕಾಯಿತು. ತಮ್ಮ ಮನೆಮಠ ಕಳೆದುಕೊಂಡು ನಿರಾಶ್ರಿತರಾದ ಲಕ್ಷಾಂತರ ಜನರಿಗೆ ಸೂಕ್ತ ಸಮಯದಲ್ಲಿ ಸೂಕ್ತ ಪರಿಹಾರ ದೊರೆಯಲೇ ಇಲ್ಲ. ತಾವು ಯಾವುದಕ್ಕಾಗಿ ಮಾಡಿದ್ದೇವೆಂದು ರೈತರು ಬಾವಿಸಿದ್ದರೋ ಅಂತಹ ಫಲ ಅವರಿಗಿರಲಿ, ಅವರ ಮುಂದಿನ ಪೀಳಿಗೆಗೂ ದೊರೆಯಲಿಲ್ಲ. ಇದರಿಂದ ಇಂಡಿಯಾದ ಒಟ್ಟಾರೆ ಕೃಷಿಕ ವರ್ಗ ಭ್ರಮನಿರಸನಕ್ಕೆ ಒಳಗಾಯಿತು. ತದನಂತರದಲ್ಲಿನ ಸರಕಾರದ ಭೂಸ್ವಾಧೀನ ಪ್ರಕ್ರಿಯೆಗಳು ಎಲ್ಲೆಲ್ಲಿ ನಡೆಯಲು ಪ್ರಾರಂಭವಾಯಿತೊ ಅಲ್ಲೆಲ್ಲಾ ರೈತಾಪಿ ವರ್ಗದ ಪ್ರತಿಭಟನೆಗಳು ಶುರುವಾದವು.

ಈ ಹಿನ್ನೆಲೆಯಲ್ಲಿ ನೋಡಿದರೆ 1970ರಿಂದ 1990ವರೆಗಿನ ಎರಡು ದಶಕಗಳೂ ದೇಶದಲ್ಲಿ ಅಂತಹ ಯಾವುದೇ ಮಹತ್ವವಾದ ಭೂಸ್ವಾಧೀನ ಪ್ರಕ್ರಿಯೆಗಳು ನಡೆಯಲಿಲ್ಲ. ಆದರೆ ತೊಂಭತ್ತರ ದಶಕದಲ್ಲಿ ಅಂದಿನ ಪ್ರದಾನಮಂತ್ರಿಯವರಾಗಿದ್ದ ದಿವಂಗತ ಶ್ರೀ ಪಿ.ವಿ. ನರಸಿಂಹರಾಯರ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದ ಮತ್ತು ನಂತರ ದೇಶದ ಪ್ರದಾನ ಮಂತ್ರಿಯೂ ಆದಂತಹ ಶ್ರೀ ಮನಮೋಹನ್ ಸಿಂಗ್ ರವರು ಜಾರಿಗೆ ತಂದ ಮುಕ್ತ ಆರ್ಥಿಕ ನೀತಿಯು ವಿದೇಶಿ ಮತ್ತು ಸ್ವದೇಶಿ ಬಂಡವಾಳಿಗರನ್ನು ದೇಶದಲ್ಲಿ ಬೃಹತ್ ಕೈಗಾರಿಕೆಗಳಿಗೆ ಬಂಡವಾಳ ಹೂಡಲು ಕೆಂಪುಹಾಸು ಹಾಸಿ ಕರೆಯಿತು. ಆಗ ದೇಶಕ್ಕೆ ಕಾಲಿಟ್ಟ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಉಧ್ಯಮಗಳನ್ನು ಸ್ಥಾಪಿಸಲು ಉಚಿತವಾದ ಭೂಮಿಯ ಬೇಡಿಕೆಯನ್ನಿಟ್ಟವು. ಅವರೊಂದಿಗೆ ಒಡಂಬಡಿಕೆಗಳನ್ನು ಮಾಡಿಕೊಂಡ ಸರಕಾರ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುಲು ಪ್ರಾರಭಿಸಿತು. ಮೊದಲಿಗೆ ಕೃಷಿಚಟುವಟಿಕೆಗಳಿಲ್ಲದಂತಹ ಬಂಜರು ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದ ಸರಕಾರ ಬೇಡಿಕೆ ಜಾಸ್ತಿಯಾದಂತೆ ಕೃಷಿ ಭೂಮಿಗೂ ಕೈಹಾಕಲು ತೊಡಗಿತು. ಈ ನಿಟ್ಟಿನಲ್ಲಿ ವಿರೋಧ ವ್ಯಕ್ತ ಪಡಿಸಿದವರಿಗೆ, ಇದೀಗ ತ್ಯಾಗದ ಕಥೆಯ ಜೊತೆಗೆ ಇನ್ನಷ್ಟು ಸುಳ್ಳುಗಳನ್ನು ಹೇಳಲು ಪ್ರಾರಂಭಿಸಿತು: 

ಕೃಷಿಗೆ ಯಾವುದೇ ಭವಿಷ್ಯವಿಲ್ಲ. ಅದು ಹಳ್ಳಿಗಳ ಎಲ್ಲ ಜನರಿಗೂ ಉದ್ಯೋಗ ಕಲ್ಪಿಸುವಲ್ಲಿ ವಿಫಲವಾಗಿದೆ. ಅಲ್ಲದೇ ಕೃಷಿಯಿಂದ ಬರುವ ಅಲ್ಪ ಆದಾಯದಿಂದ ರಾಷ್ಟ್ರೀಯ ವರಮಾನಕ್ಕೆ ಯಾವುದೇ ಉಪಯೋಗವಿಲ್ಲ. ಅದೂ ಅಲ್ಲದೇ ಭೂಮಿಯಿಲ್ಲದೇ ಕೈಗಾರಿಕೆಗಳನ್ನು ಹೇಗೆ ಸ್ಥಾಪಿಸುವುದು? ಹೀಗೆ ಸ್ಥಾಪಿತವಾದ ಕೈಗಾರಿಕೆಗಳಿಂದ ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗಗಳು ದೊರೆತು ಅವರ ತಲಾ ಆದಾಯ ಹೆಚ್ಚಳವಾಗಿ ರಾಷ್ಟ್ರೀಯ ಸಂಪತ್ತು ದ್ವಿಗುಣಗೊಳ್ಳುತ್ತದೆಯೆಂಬ ಕಪೋಲಕಲ್ಪಿತ ಸುಳ್ಳುಗಳನ್ನು ಸರಕಾರಗಳು ಆಡತೊಡಗಿದವು. ಅದೂ ಅಲ್ಲದೆ ಕಳೆದುಕೊಂಡ ಭೂಮಿಗೆ ಹೆಚ್ಚು ಪರಿಹಾರ ನೀಡುತ್ತಿರುವುದರಿಂದ ಅಂತಹ ರೈತರೂ ಸಹ ಸ್ವಯಂ ಉದ್ಯೋಗಗಳನ್ನು ಪ್ರಾರಂಬಿಸಿ ಆರ್ಥಿಕ ಪ್ರಗತಿಯನ್ನು ಸಾಧಿಸಬಹುದೆಂಬ ಆಮಿಷವನ್ನೂ ಒಡ್ಡತೊಡಗಿತು. ಆದರೆ ಸರಕಾರದ ಇಂತಹ ಹಸಿ ಸುಳ್ಳುಗಳನ್ನು ಜನರೀಗ ನಂಬುವ ಸ್ಥಿತಿಯಲ್ಲಿಲ್ಲ. ಯಾಕೆಂದರೆ ಎಪ್ಪತ್ತರ ದಶಕಕ್ಕೆ ಮುಂಚೆ ಭೂಮಿ ಕಳೆದುಕೊಂಡ ಲಕ್ಷಾಂತರ ಕುಟುಂಬಗಳಿಗಿವತ್ತಿಗೂ ಸೂಕ್ತ ಪರಿಹಾರ ದೊರೆತಿಲ್ಲ. ಹಾಗು ಅವರುಗಳಿಗೆ ಸರಕಾರ ಅಂದು ನೀಡಿದ ಯಾವುದೇ ಆಶ್ವಾಸನೆಗಳೂ ಇವತ್ತಿಗೂ ಈಡೇರಿಲ್ಲ. ಅದೂ ಅಲ್ಲದೇ ಕೃಷಿಯ ಬಗ್ಗೆ ಅದರ ಉತ್ಪಾದನೆಯ ಶಕ್ತಿಯ ಬಗ್ಗೆ ಸರಕಾರ ಆಡುತ್ತಿರುವುದೆಲ್ಲ ಸುಳ್ಳುಗಳೆಂದು ಗ್ರಾಮೀಣ ಭಾಗದ ರೈತಾಪಿ ಕುಟುಂಬಗಳಿಗೆ ಮನವರಿಕೆಯಾಗಿದೆ.

ಇವತ್ತು ಕೃಷಿಯ ಉತ್ಪಾದನಾ ಸಾಮರ್ಥ್ಯ ಕುಸಿದಿದ್ದಲ್ಲಿ ಅದಕ್ಕೆ ಸರಕಾರವೇ ನೇರ ಹೊಣೆಯಾಗಿದೆ. ಯಾಕೆಂದರೆ ಕೈಗಾರಿಕೆಗಳಿಗೆ ಕೊಡಮಾಡುವಷ್ಟು ಆದ್ಯತೆಗಳನ್ನು ಸೌಕರ್ಯಗಳನ್ನು ಸರಕಾರ ಕೃಷಿಕ್ಷೇತ್ರಕ್ಕೆ ನೀಡದೆ ಅದನ್ನು ಕಡೆಗಣಿಸಿರುವುದೇ ಇವತ್ತಿನ ಕೃಷಿಯ ದುರಂತವಾಗಿದೆ. ಸರಿಯಾಗಿ ಕಲ್ಪಿಸದ ನೀರಾವರಿ ವ್ಯವಸ್ಥೆ, ನಿಗದಿತವಾಗಿ- ನಿರಂತರವಾಗಿ ವಿದ್ಯುತ್ ಪೂರೈಸಲಾಗದಿರುವುದು. ರೈತರಿಗೆ ಸುಲಭದರದಲ್ಲಿ ಗುಣಮಟ್ಟದ ಬೀಜ ಗೊಬ್ಬರಗಳನ್ನು ಪೂರೈಸದಿರುವುದು, ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡದಿರುವುದು. ನ್ಯಾಯಯುತ ಬೆಲೆ ಕೊಡಿಸುವಲ್ಲಿ ವಿಫಲವಾಗಿರುವುದೇ ಇವತ್ತಿನ ಕೃಷಿಯ ಉತ್ಪಾದಕತೆ ಕಡಿಮೆಯಾಗಿರಲು ಕಾರಣವೆಂಬ ಅಂಶವನ್ನು ಸರಕಾರಗಳು ಮರೆಮಾಚಿ ಕೃಷಿಕ್ಷೇತ್ರದ ಎಲ್ಲ ಬಿಕ್ಕಟ್ಟುಗಳಿಗೂ ರೈತರೇ ಹೊಣೆಯೆಂಬಂತೆ ಬಿಂಬಿಸುತ್ತಿವೆ. ನಗರವಾಸಿ ಅಕ್ಷರಸ್ಥ ಮಧ್ಯಮವರ್ಗ ಕೂಡ ಸರಕಾರಗಳ ಇಂತಹ ಸುಳ್ಳುಗಳನ್ನು ನಂಬಿಕೊಂಡು, ಭೂಸ್ವಾಧೀನದ ವಿರುದ್ದದ ಹೋರಾಟಗಳನ್ನು ಅಭಿವೃದ್ದಿಯ ವಿರುದ್ದದ ದೇಶದ್ರೋಹಿ ಹೋರಾಟಗಳೆಂಬಂತೆ ನೋಡುತ್ತಿದೆ. ಹೀಗಾಗಿ ಸಂಕಷ್ಟಕ್ಕೀಡಾದ ಇಂಡಿಯಾದ ರೈತಾಪಿ ವರ್ಗ ಏಕಾಕಿಯಾಗಿಯೇ ತನ್ನ ಹೋರಾಟವನ್ನು ನಡೆಸಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದೆ.

ಕೈಗಾರಿಕರಣವೇ ದೇಶದ ಪ್ರಗತಿಗೆ, ಆರ್ಥಿಕ ಅಭಿವೃದ್ದಿಗಿರುವ ಏಕೈಕ ಮಾರ್ಗವೆಂದು ನಂಬಿಸಲು ಹೊರಟಿರುವ ಪ್ರಭುತ್ವದ ಮುಂದೆಯೂ ಇಂದು ಯಾವುದೇ ಅನ್ಯಮಾರ್ಗವಿರುವಂತೆ ಕಾಣುತ್ತಿಲ್ಲ. ಕಾರಣ ಆರ್ಥಿಕ ಪ್ರಗತಿಗೆ ಪಶ್ಚಿಮ ಮಾದರಿಯ ಅಭಿವೃದ್ದಿಪಥವೇ ಶ್ರೇಷ್ಠವೆಂದು ನಂಬಿಕೊಂಡು ಮುಕ್ತ ಆರ್ಥಿಕನೀತಿಯನ್ನು ಒಪ್ಪಿಕೊಂಡಾಗಿದೆ. ಜೊತಗೆ ರಾಷ್ಟ್ರ ಅಭಿವೃದ್ದಿಯ ಫಲ, ಸಮುದಾಯದ ತಳಮಟ್ಟದ ಪ್ರತೀ ವ್ಯಕ್ತಿಯನ್ನೂ ತಲುಪತ್ತದೆಯೆಂಬ ಸರಕಾರಗಳ ನಿಲುವು ಇವತ್ತು ಸುಳ್ಳಾಗುತ್ತಿದೆ. ಭೂಮಿ ಕಳೆದುಕೊಂಡ ರೈತನ ತ್ಯಾಗದ ಫಲ ಕೇವಲ ಸಮಾಜದ ಮೇಲ್ವರ್ಗಗಳಿಗೆ ಮಾತ್ರ ದೊರಕುತ್ತಿದೆ. .

ದುರಂತವೆಂದರೆ ಮುಕ್ತ ಆರ್ಥಿಕ ನೀತಿಗೆ ಶರಣಾಗಿ, ಜಾಗತೀಕರಣದ ಗುಲಾಮಿ ವ್ಯವಸ್ಥೆ ಅಡಿಯಾಳಾಗಿರುವ ನಾವೀಗ ಭೂಸ್ವಾಧೀನದ ವಿರೋಧಿ ಹೋರಾಟವನ್ನು ನಡೆಸುವುದು ಕೇವಲ ಸಾಂಕೇತಿಕ ಪ್ರತಿಭಟನೆಯ ಹಂತ ತಲುಪುತ್ತಿದೆ. ಆದ್ದರಿಂದ ನಮ್ಮ ಗುರಿ ಬೇರೆಯದೇ ಆಗಬೇಕಿದೆ. ಅಭಿವೃದ್ದಿಯ ಪರಿಕಲ್ಪನೆಯನ್ನೇ ಬುಡಮೇಲುಮಾಡಿರುವ ಮುಕ್ತ ಆರ್ಥಿಕನೀತಿಯ ಮೂಲವನ್ನೇ ಪ್ರಶ್ನಿಸಬೇಕಾದ ಸಂದರ್ಭವಿಂದು ಒದಗಿ ಬಂದಿದೆ. ನಾವೀಗ ಅಪ್ಪಿಕೊಂಡಿರುವ ಆರ್ಥಿಕ ನೀತಿಯಿಂದ ಹೊರಬಾರದೆ ನಮ್ಮ ಕೃಷಿ ಬಿಕ್ಕಟ್ಟಾಗಲಿ, ಭೂಮಿ ಕಳೆದುಕೊಳ್ಳುವ ರೈತರ ಸಂಕಷ್ಟವಾಗಲಿ ಪರಿಹಾರವಾಗುವ ಯಾವ ಲಕ್ಷಣಗಳೂ ನನಗಂತೂ ಗೋಚರವಾಗುತ್ತಿಲ್ಲ. 

ಆದ್ದರಿಂದ ಈಗ ನಮ್ಮ ಮುಂದಿರುವುದು ಒಂದೇ ದಾರಿ: ಪರ್ಯಾಯ ಆರ್ಥಿಕ ನೀತಿಯೊಂದನ್ನು ಕಂಡುಕೊಳ್ಳಬೇಕಿರುವುದಾಗಿದೆ. ಇದಕ್ಕಾಗಿ ನಾವು ಒಂಷ್ಟು ಹಿಂದಕ್ಕೆ ಹೋಗಲೇ ಬೇಕಾದ ಅನಿವಾರ್ಯತೆಯಿದೆ. ಸಮಾಜವಾದಿ ಚಿಂತನೆ ಮತ್ತು ಗಾಂದಿವಾದಗಳನ್ನು ಬಳಸಿಕೊಂಡು ಹೊಸದಾದ ಆರ್ಥಿಕನೀತಿಯನ್ನು ಕಂಡುಕೊಳ್ಳಬೇಕಿದೆ. ಸದ್ಯದ ಸಂಕಷ್ಟಗಳಂದ ಪಾರಾಗಲು ನಮಗೆ ಬೇರಿನ್ನಾವ ಮಾರ್ಗಗಳೂ ಇರುವಂತೆ ಕಾಣುತ್ತಿಲ್ಲ.

ಮೇಕಿಂಗ್ ಹಿಸ್ಟರಿ: ವಸಾಹತುಶಾಹಿ ಮತ್ತು ಫ್ಯೂಡಲಿಸಂ ನಡುವಿನ ಕಲ್ಯಾಣ ಭಾಗ 2.

ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಬರ್ಟನ್ ಸ್ಟೈನಿನ ಮಾಹಿತಿ ವಸಾಹತುಶಾಹಿ, ಭೂಮಾಲೀಕರೊಟ್ಟಿಗೆ ಸರಳ ಗೆಳೆತನ ಬೆಳೆಸಿಕೊಳ್ಳುವುದರ ಜೊತೆಗೆ ದೇವಸ್ಥಾನದ ಆಸ್ತಿಯ ಒಡೆತನ ಹೊಂದಿದ್ದ ಬ್ರಾಹ್ಮಣರೊಟ್ಟಿಗೂ ಸಖ್ಯ ಬೆಳೆಸಿದ್ದನ್ನು ತಿಳಿಸುತ್ತದೆ. ಬ್ರಾಹ್ಮಣರ ಮಂತ್ರಾಕ್ಷತೆಯ ಶುಭ ಆಶೀರ್ವಾದದೊಂದಿಗೆ ವಸಾಹತುಶಾಹಿ ಮತ್ತು ಫ್ಯೂಡಲಿಸಂನ ನಡುವೆ ಐತಿಹಾಸಿಕ ವಿವಾಹವಾಗಿತ್ತು. 

ಬರ್ಟನ್ ಬರೆಯುತ್ತಾನೆ: “1800ರ ಮನ್ರೋನ ವರದಿಗಳಿಗೆ ಆದಾಯ ತೆರಿಗೆ ಇಲಾಖೆಯಲ್ಲಿದ್ದ ಮೇಲಧಿಕಾರಿಗಳಿಂದ ಮತ್ತು ಮದ್ರಾಸಿನ ಗವರ್ನರಾಗಿದ್ದ ಲಾರ್ಡ್ ಕ್ಲೈವ್ ರಿಂದ ಶೀಘ್ರ ಅನುಮೋದನೆ ದೊರಕಿತು. ಕೆನರಾದ ಬಗ್ಗೆ ಮನ್ರೋ ಕೊಟ್ಟ ವರದಿ ಮೈಸೂರಿನ ಸಂಶಾಯಾಸ್ಪದ ಆಡಳಿತ ಕೆನರಾದ ಭೂ ಮಾಲೀಕತ್ವದ ವಿಚಾರವಾಗಿ ಪುರಾತನ ಹಿಂದೂ ಸರಕಾರವನ್ನು ಹೇಗೆ ಭ್ರಷ್ಟಗೊಳಿಸಿತು ಎಂದು ತಿಳಿಸಿಕೊಟ್ಟಿದ್ದಾಗಿ ಹೇಳುತ್ತಾನೆ ಲಾರ್ಡ್ ಕ್ಲೈವ್. ಮದ್ರಾಸಿನ ಆದಾಯ ತೆರಿಗೆ ಬೋರ್ಡು ಮನ್ರೋನ ಶಿಫಾರಸ್ಸುಗಳನ್ನು ಪಾಲಿಸಬೇಕೆಂದು ಕ್ಲೈವ್ ವಾದಿಸಿದ. ಮನ್ರೋನ ನಿಯಮಗಳಲ್ಲೊಂದಕ್ಕೆ ಅಚ್ಚರಿ ವ್ಯಕ್ತವಾಗುವ ನಿರೀಕ್ಷೆಯಿತ್ತು. ಇದು ಕೆನರಾದ ಇನಾಂ ಭೂಮಿಗೆ (ತೆರಿಗೆ ರಹಿತ ಭೂಮಿ) ಸಂಬಂಧಿಸಿದ್ದಾಗಿತ್ತು. ಇನಾಂ ಭೂಮಿಗಿದ್ದ ಸವಲತ್ತುಗಳನ್ನು ಟಿಪ್ಪು ಸುಲ್ತಾನ್ ವಾಪಸ್ಸು ಪಡೆದಿದ್ದ; ಟಿಪ್ಪು ಸುಲ್ತಾನನ ನಂತರ ಅಧಿಕಾರವಿಡಿದ ಕಂಪನಿಗೆ ಟಿಪ್ಪುವಿನ ನೀತಿ ನಿಯಮಗಳನ್ನು ಮುಂದುವರೆಸುವ ಹಕ್ಕಿರಬೇಕಾದರೆ ಮನ್ರೋ ಯಾಕೆ ಮತ್ತೆ ಇನಾಂ ಹಕ್ಕನ್ನು ದಯಪಾಲಿಸಬೇಕು ಎನ್ನುವುದು ಗವರ್ನರ್ ರ ಪ್ರಶ್ನೆಯಾಗಿತ್ತು. ಈ ಇನಾಮನ್ನು ದಯಪಾಲಿಸುವುದರಿಂದ ಹೈದರ್ ಅಲಿ, ಟಿಪ್ಪು ಮತ್ತು ಹಿಂದಿನ ಆಡಳಿತಗಾರರ ಸಮಯದಲ್ಲಿ ಬರುತ್ತಿದ್ದ ಆದಾಯಕ್ಕಿಂತಲೂ ಕಂಪನಿಗೆ ಬರುವ ಆದಾಯ ಕಡಿಮೆಯಾಗಿಬಿಡುವುದರಿಂದ ಇದನ್ಯಾಕೆ ಜಾರಿಗೊಳಿಸಬೇಕು?

ಕೆನರಾದ ಇನಾಂ ಭೂಮಿಗೆ ಸಂಬಂಧಿಸಿದ ಈ ಆಕ್ಷೇಪಣೆಗಳಿಗೆ ಉತ್ತರ ಸಿಕ್ಕಿತಾ ಎನ್ನುವುದರ ಬಗ್ಗೆ ಯಾವುದೇ ದಾಖಲೆಗಳು ಲಭ್ಯವಿಲ್ಲ. ಇದೇ ತರಹದ ಆಕ್ಷೇಪಣೆಗಳು ಮನ್ರೋ ಕಾರ್ಯನಿರ್ವಹಿಸಿದ ಇತರೆ ಜಿಲ್ಲೆಗಳಲ್ಲಿಯೂ ಕೇಳಿ ಬಂದಿತ್ತು. ಕೆನರಾಗೆ ಸಂಬಂಧಪಟ್ಟಂತೆ 1804ರಲ್ಲಿ – ವರದಿ ಸಲ್ಲಿಕೆಯಾದ ಬಹುಕಾಲದ ನಂತರ – ಮನ್ರೋನ ಕೆನರಾ ವರದಿಗೆ ಕಂಪನಿಯ ನಿರ್ದೇಶಕ ಮಂಡಳಿಯಿಂದ ಪೂರ್ಣ ಒಪ್ಪಿಗೆ ಸಿಕ್ಕಿತು….” (48)

ದೇವಾಲಯ ಮತ್ತು ಬಸದಿಗಳಿಗೆ ಇನಾಂ ಹಕ್ಕುಗಳನ್ನು ಮರುಜಾರಿಗೊಳಿಸುವುದರ ಕುರಿತಾಗಿ ಮನ್ರೋ ನಿರ್ದಿಷ್ಟ ವಿವರಣೆಯನ್ನು ನೀಡಿಲ್ಲವಾದರೂ, ತನ್ನ ಬರವಣಿಗೆಯಲ್ಲಿ ಈ ನಿರ್ಧಾರದ ಬಗ್ಗೆ ಪ್ರಸ್ತಾಪಿಸಿದ್ದಾನೆ. ಮುಂದಿನ ಭಾಗಗಳಲ್ಲಿ ಇದರ ಬಗ್ಗೆ ತಿಳಿಯೋಣ. ಬುದ್ಧಿವಂತ ನಿರ್ದೇಶಕ ಮಂಡಳಿ ಮತ್ತವರ ಅಧಿಕಾರಿಗಳು ನಂತರದ ದಿನಗಳಲ್ಲಿ ಇದನ್ನು ನೋಡಿ ಒಪ್ಪಿಗೆ ನೀಡಿ ಚಪ್ಪಾಳೆ ಗಿಟ್ಟಿಸಿಕೊಂಡರು.

ಈ ಸಮಯದಲ್ಲಿ ಚಿತ್ರಾಪುರ ಬ್ರಾಹ್ಮಣರಲ್ಲಿ ಭೂಮಾಲೀಕರ ಹೊಸ ವರ್ಗ ರೂಪುಗೊಂಡಿದ್ದರ ಬಗ್ಗೆ ಸೂರ್ಯನಾತ ಕಾಮತ್: “1799ರಿಂದ ಕೆನರಾ ಜಿಲ್ಲೆಯಲ್ಲಿ ಬ್ರಿಟೀಷ್ ಆಡಳಿತ ಪ್ರಾರಂಭವಾದಾಗ ಚಿತ್ರಾಪುರ ಸಮುದಾಯದ ಜನರು ಉತ್ತರ ಮತ್ತು ದಕ್ಷಿಣ ಕೆನರಾದ ಬಹುತೇಕ ಹಳ್ಳಿಗಳಲ್ಲಿ ಶಾನುಭೋಗರಾಗಿ ನೇಮಕಗೊಂಡರು. ಈ ಕಾರಣದಿಂದಾಗಿ ಚಿತ್ರಾಪುರ ಸಾರಸ್ವತರಲ್ಲನೇಕರಿಗೆ ಈ ಎರಡು ಜಿಲ್ಲೆಯ ಹಳ್ಳಿಗಳ ಹೆಸರು ಸರ್ ನೇಮ್ ಆಗಿದೆ.” (49)

ಈಗ ಬೆಳಗಾವಿ, ಬಿಜಾಪುರ ಮತ್ತು ಧಾರವಾಡ ಜಿಲ್ಲೆಗಳನ್ನೊಳಗೊಂಡ ಬಾಂಬೆ – ಕರ್ನಾಟಕ ಭಾಗದಲ್ಲಿ ವಸಾಹತುಶಾಹಿ ಫ್ಯೂಡಲಿಸಂನ ಜೊತೆಗೆ ಕೈಜೋಡಿಸಿದ ರೀತಿಯನ್ನು ನೋಡೋಣ.

ಪೇಶ್ವೆಯ ಆಡಳಿತವನ್ನುನಭವಿಸಿದ್ದ ಈ ಮೂರೂ ಜಿಲ್ಲೆಗಳಲ್ಲಿ ಊಳಿಗಮಾನ್ಯ ಪದ್ಧತಿಯ ಮಧ್ಯಮವರ್ತಿಗಳಾಗಿ ಮತ್ತು ಮರಾಠರಿಗೆ ತೆರಿಗೆ ವಸೂಲಿ ಮಾಡಿಕೊಡುವವರಾಗಿ ದೇಸಾಯಿ ಮತ್ತು ದೇಶಮುಖರಿದ್ದರು. ರೈತ ಕಾರ್ಮಿಕರ ವಿರೋಧದ ನಡುವೆಯೂ ಊಳಿಗಮಾನ್ಯ ಪದ್ಧತಿ ಇಲ್ಲಿ ಸುಭದ್ರವಾಗಿತ್ತೆಂಬುದನ್ನು ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದ ಕೊನೆಯ ಅಧ್ಯಾಯದಲ್ಲಿ ನೋಡಿದ್ದೇವೆ. ಈ ಭಾಗವನ್ನು ವಶಪಡಿಸಿಕೊಂಡ ಬ್ರಿಟೀಷ್ ಸೈನ್ಯದ ಮುಂದಾಳತ್ವವನ್ನು ಥಾಮಸ್ ಮನ್ರೋ ವಹಿಸಿಕೊಂಡಿದ್ದ. ಮನ್ರೋ ಮೊದಲು ಬಳ್ಳಾರಿಯ ಕಲೆಕ್ಟರಾಗಿ (ಜಿಲ್ಲಾಧಿಕಾರಿ) ನಂತರ ಉತ್ತರ ಮತ್ತು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಹಾಗಾಗಿ ಕರ್ನಾಟಕದ ಬಹುಭಾಗಗಳಲ್ಲಿ ಎರಡು ಭಿನ್ನ ಸಾಮಾಜಿಕ ವ್ಯವಸ್ಥೆಯ ನಡುವೆ ಮದುವೆ ಮಾಡಿಸುವ ಜವಾಬ್ದಾರಿ ಮತ್ತು ಕರ್ನಾಟಕವನ್ನು ವಸಾಹತುಶಾಹಿ ನೆಲೆಯಾಗಿ ಬದಲಿಸುವ ಕೆಲಸ ಮನ್ರೋದ್ದಾಗಿತ್ತು. ಕರ್ನಾಟಕದ ಭವಿಷ್ಯವನ್ನು ನಿರ್ಧರಿಸುವ ಐತಿಹಾಸಿಕ ನಿರ್ಣಯಗಳಲ್ಲಿ ಮನ್ರೋನ ನೇರ ಪಾತ್ರವಿತ್ತು. ಮನ್ರೋನ ಪತ್ರಗಳು, ವರದಿಗಳು ಮತ್ತು ಟಿಪ್ಪಣಿಗಳೆಲ್ಲವೂ ವಸಾಹತುಶಾಹಿತನದ ಮನಸ್ಥಿತಿಯ ಬಗೆಗಿನ ಅರಿವನ್ನು ಹೆಚ್ಚಿಸುತ್ತವೆ.

1826ರಲ್ಲಿ ಈ ಭಾಗದಲ್ಲಿ ಜನ್ಮತಳೆದ ಊಳಿಗಮಾನ್ಯ ಪದ್ಧತಿಯ ಮಧ್ಯವರ್ತಿಗಳ ಬಗ್ಗೆ ಮನ್ರೋ ವಿವರಿಸುತ್ತಾನೆ:” ಬಹುತೇಕ ಜಾಗೀರುದಾರರು ಕೊಂಕಣದ ಕಡೆಯಿಂದ ಬಂದ ಆಗುಂತಕರು ಮತ್ತು ಕೃಷ್ಣ ನದಿಯಾಚೆಗಿನ ದೇಶದವರು…. ಜಾಗೀರುದಾರರಲ್ಲಿ ಪ್ರಮುಖರಾದ ಪಟವರ್ಧನರು ನನ್ನ ನಂಬಿಕೆಯ ಪ್ರಕಾರ ಧಾರವಾಡಕ್ಕೆ ಅಪರಿಚಿತರು. ಪರಸುರಾಮ ರಾವ್ ನ ತಂದೆ ಅಥವಾ ಬಹುಶಃ ಪರಸುರಾಮ ರಾವ್ ನ ಕಾಲದವರೆಗೆ ಇವರ ಬಗ್ಗೆ ಯಾರೂ ಕೇಳಿಯೇ ಇರಲಿಲ್ಲ….

ಇದನ್ನೆಲ್ಲ ಅಭ್ಯಸಿಸಿದ ಉದ್ದೇಶ ಧಾರವಾಡ ಮರಾಠ ಪ್ರಾಂತ್ಯಕ್ಕೆ ಸೇರಿರಲಿಲ್ಲ, ಬದಲಿಗೆ ಕೆನರಾ ಪ್ರಾಂತ್ಯಕ್ಕೆ ಸೇರಿತ್ತು, ಈ ಜಾಗೀರುದಾರರೆಲ್ಲ ಅಲ್ಲಿ ಅಪರಿಚಿತರಾಗಿದ್ದರು. ಬ್ರಿಟೀಷರ ಆಕಸ್ಮಿಕ ಮಧ್ಯಪ್ರವೇಶದಿಂದ ಅವರ ಜಾಗೀರು ಉಳಿದಿತ್ತು. ಬಳ್ಳಾರಿಯ ಗೋರಪರಿ (ಘೋರ್ಪಡೆ?) ಕುಟುಂಬದ ಸುಂದರ್ ಜಾಗೀರದಾರ ಮರಾಠ ಮುಖ್ಯಸ್ಥರೆಲ್ಲೆಲ್ಲಾ ಪ್ರಮುಖವಾಗಿದ್ದವರು. ಹರಪನಹಳ್ಳಿ ಮತ್ತು ಬಳ್ಳಾರಿ ನಡುವಿರುವ ತಮ್ಮ ಜಾಗೀರಿನಲ್ಲಿ ವಾಸಿಸುತ್ತಿರುವ ಅವರಲ್ಲಿ ಪೂನಾದಿಂದ ಬೇರಾಗಿರುವುದಕ್ಕೆ ಸಂತಸವೇ ಇದೆ.” (50)

1818ರಲ್ಲಿ ಮನ್ರೋ ಎಲ್ಫಿನ್ ಸ್ಟೋನಿಗೆ ಬರೆದ ಮತ್ತೊಂದು ಪತ್ರದಲ್ಲಿ: “ಪೇಶ್ವೆಗಳನ್ನು ಹಿಂಬಾಲಿಸುವ, ಗೌರವಿಸುವ ಮತ್ತು ಸೇವೆ ಸಲ್ಲಿಸುವ ಮನಸ್ಥಿತಿಯನ್ನು ಬದಲಿಸಲು ಮಾಡಬೇಕಾದ ಮೊದಲ ಕೆಲಸವೆಂದರೆ ಪೇಶ್ವೆಗಳ ಅಧಿಕಾರವನ್ನು ಬ್ರಿಟೀಷರು ವಶಪಡಿಸಿಕೊಳ್ಳುವುದು. ನನ್ನ ನಂಬಿಕೆಯ ಪ್ರಕಾರ ಈ ಕಾರ್ಯಗಳನ್ನು ಜಾಗೀರುದಾರರಲ್ಲಿರುವ ದೊರೆಗಳ ಚಿತ್ರಣವನ್ನು ಬದಲಿಸುತ್ತದೆ. ಮತ್ತು ಬ್ರಿಟೀಷ್ ಸರಕಾರದ ಕರೆಯ ಮೇರೆಗೆ ತಮ್ಮ ಸೈನ್ಯವನ್ನು ಕಳುಹಿಸಿಕೊಡಲು ತಯಾರಿರುತ್ತಾರೆ.” (51)

ಇವೆಲ್ಲವೂ ಸೈನ್ಯ ಶಕ್ತಿಯ ಮೈತ್ರಿಗೆ ತೆಗೆದುಕೊಂಡ ನಿರ್ಣಯಗಳು. ಈ ಸಂಬಂಧದಿಂದ ಜಾಗೀರುದಾರರೊಡನೆ ರಾಜಕೀಯ ಮತ್ತು ಆರ್ಥಿಕ ನೀತಿಗಳ ಕುರಿತೂ ಒಪ್ಪಂದಗಳಾಯಿತು.

ಬರ್ಟನ್ ಸ್ಟೈನನ ಮಾತುಗಳನ್ನು ಉಲ್ಲೇಖಿಸುವುದಾದರೆ: “ಆಗಸ್ಟ್ 28, 1818ರಲ್ಲಿ ಮನ್ರೋ ಎಲ್ಫಿನ್ ಸ್ಟೋನನಿಗೆ ಧಾರವಾಡ – ಬೆಳಗಾವಿ ಪ್ರದೇಶದ ರಾಜಕೀಯ ಪರಿಸ್ಥಿತಿಯ ಬಗ್ಗೆ ನಂಬಿಕೆಯ ಮಾತುಗಳನ್ನೇಳುತ್ತಿದ್ದ. ಅಲ್ಲಿನ ಪರಿಸ್ಥಿತಿ ಹತೋಟಿಯಲ್ಲಿದೆ ಮತ್ತೀ ಪರಿಸ್ಥಿತಿ ಮುಂದುವರಿಯಲು ಪ್ರಮುಖ ಜಾಗೀರುದಾರರಿಗೆ (ಗೋಖಲೆಯನ್ನು ಹೊರತುಪಡಿಸಿ; ಗೋಖಲೆಯ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು) ಮತ್ತು ಹಲವು ಸಣ್ಣಮಟ್ಟದ ಮುಖ್ಯಸ್ಥರಿಗೆ ಮನ್ರೋ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಅಗತ್ಯ ಮತ್ತು ದೊಡ್ಡ ಮಟ್ಟದ ಬದಲಾವಣೆಗಳನ್ನು ಪರಿಚಯಿಸಬಾರದು……ಅವರಿಗೆಲ್ಲ ಸೈನ್ಯವನ್ನಿಟ್ಟುಕೊಳ್ಳುವ ಅವಕಾಶವಿರಬೇಕು – ಮುಂಚೆ ಅವರ ಬಳಿ ಇದ್ದ ಸೈನ್ಯದ ಕಾಲುಭಾಗದಷ್ಟು ಮಾತ್ರ. ಇದು ಅವರ ಮಿಲಿಟರಿ ಶಕ್ತಿಯನ್ನು ಕುಂಠಿತಗೊಳಿಸುತ್ತದೆ.

ಧಾರವಾಡ – ಬೆಳಗಾವಿಯ ರಾಜಕೀಯ ಬುನಾದಿ ತಾನು ಹಾಕಿದ ರೀತಿಯಲ್ಲೇ ಉಳಿಯಬೇಕೆಂದು ಬಯಸಿದ ಮನ್ರೋ ಆ ಬುನಾದಿಯನ್ನು ಶಿಥಿಲವಾಗಿಸಬಹುದಾದ ಯಾವುದೇ ಬದಲಾವಣೆಯನ್ನು ಮಾಡದಿರುವಂತೆ ಎಲ್ಫಿನ್ ಸ್ಟೋನರಿಗೆ ಶಿಫಾರಸು ಮಾಡಿದ. ಈ ಶಿಫಾರಸುಗಳಿಗೆ ಎಲ್ಫಿನ್ ಸ್ಟೋನರ ಸಮ್ಮತಿಯಿತ್ತು….

ಜಿಲ್ಲೆ ಮತ್ತು ಹಳ್ಳಿಯ ಮುಖ್ಯಸ್ಥರು, ಲೆಕ್ಕಪತ್ರ ನೋಡುವವರು ಗಣನೀಯ ಪ್ರಮಾಣದ ಇನಾಂ ಹೊಂದಿದ್ದರು! ಇವುಗಳ ಗೋಜಿಗೆ ಹೋಗಬಾರದು; ಯಾಕೆಂದರೆ ಅವರೆಲ್ಲರೂ ಗೌರವಾನ್ವಿತ ಭೂಮಾಲೀಕರು ಮತ್ತು ಸಮಾಜದ ಮೇಲ್ವರ್ಗದವರು. ಬ್ರಿಟೀಷರು ಅವಲಂಬಿಸಬೇಕಾದ ಜಿಲ್ಲೆ ಮತ್ತು ಹಳ್ಳಿಯ ಅಧಿಕಾರಿಗಳ ಅಧಿಕಾರದ ರಕ್ಷಣೆ ಇದರಿಂದ ಸಾಧ್ಯವಾಗುತ್ತದೆ. ಮರಾಠ ಪ್ರಾಂತ್ಯಗಳಲ್ಲಿದ್ದ ಇನಾಂ ಭೂಮಿಯ ಬಗ್ಗೆ ಸುಮ್ಮನಿದ್ದುಬಿಡಬೇಕು ಎನ್ನುವುದು ಮನ್ರೋನ ಶಿಫಾರಸ್ಸಾಗಿತ್ತು.

ವಹಿವಾಟಿಗೆ ಅಡ್ಡಿಯಾಗಿರುವ ಜಾಗೀರುದಾರರ ಹಣ ವಸೂಲಾತಿ, ವ್ಯವಹಾರ ತೆರಿಗೆ ಪದ್ಧತಿಯನ್ನು ರದ್ದು ಪಡಿಸಬೇಕು ಮತ್ತು ‘ತಮ್ಮ ಹಕ್ಕನ್ನು ತ್ಯಾಗ ಮಾಡಿದ’ ಜಾಗೀರುದಾರರಿಗೆ ಸೂಕ್ತ ಪರಿಹಾರ ನೀಡಬೇಕು.” (52)

ಆದಾಯ ತೆರಿಗೆ ನೀತಿಗಳನ್ನು ರೂಪಿಸುವುದರ ಹೊಣೆ ಹೊತ್ತ ಎಲ್ಫಿನ್ ಸ್ಟೋನ್ ಮನ್ರೋನ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿದ. ಅವನ ಸಲಹೆಗಳಿಗಿಂತ ಒಂದಡಿ ಹೆಚ್ಚೇ ಇಟ್ಟ.

ಜಾರ್ಜ್ ಫಾರೆಸ್ಟ್ ಬರೆಯುತ್ತಾರೆ: “ವಂಶಪಾರಂಪರ್ಯ ಹಕ್ಕುಗಳ ಬಗ್ಗೆ ಎಲ್ಫಿನ್ ಸ್ಟೋನ್ ಗೆ ಗೌರವವಿತ್ತು; ಮಾಲೀಕರಿಗೆ ಅವರವರ ಜಾಗೀರು ಭೂಮಿ ಹಿಂದಿರುಗಿಸುವುದರ ಜೊತೆಗೆ ಬಾಡಿಗೆ ರಹಿತ ಭೂಮಿ, ಪಿಂಚಣಿ, ಧಾರ್ಮಿಕ ಸವಲತ್ತುಗಳನ್ನು ಮತ್ತೆ ಕೊಡಲಾಯಿತು. ‘ಧಾರ್ಮಿಕ ಸವಲತ್ತುಗಳನ್ನು ಉಳಿಸುವುದು ಆಕ್ರಮಿಸಿದ ದೇಶದಲ್ಲಿ ಅವಶ್ಯಕ. ದೀರ್ಘಕಾಲದಿಂದ ಅಧಿಕಾರದಲ್ಲಿ ಬ್ರಾಹ್ಮಣರು ಇದ್ದಿದ್ದರಿಂದ ಇದು ಅತ್ಯಗತ್ಯ (ಪೇಶ್ವೆಗಳು ಬ್ರಾಹ್ಮಣರು). ಪೇಶ್ವೆಗಳ ದಾನ ಮತ್ತವರ ಧಾರ್ಮಿಕ ವೆಚ್ಚಗಳು ಹತ್ತಿರತ್ತಿರ ಹದಿನೈದು ಲಕ್ಷಗಳಷ್ಟಿತ್ತು. ಇದನ್ನು ಮುಂದುವರೆಸುವುದು ಮೂರ್ಖತನದಂತೆ ಕಂಡರೂ, ಈ ವೆಚ್ಚಗಳನ್ನು ಅನಿವಾರ್ಯವೆಂದು ಪರಿಗಣಿಸಬೇಕು….” (53) ಬ್ರಿಟೀಷರ ಆಳ್ವಿಕೆ ಬ್ರಾಹ್ಮಣರ ಪ್ರಾಬಲ್ಯವನ್ನು ಮುರಿಯಿತು ಎಂದೇಳುವವರಿಗೆ ಇಷ್ಟು ವಿವರಣೆ ಸಾಕೇನೋ?! ಅಸಲಿಗೆ ನಡೆದಿದ್ದು ತದ್ವಿರುದ್ದ. ಕರ್ನಾಟಕದಲ್ಲಿ ಬ್ರಾಹ್ಮಣರ ಪ್ರಾಬಲ್ಯದಲ್ಲಿ ಇತಿಹಾಸದ ಚಲನೆ ಬಿರುಕು ಮೂಡಿಸಲಾರಂಭಿಸಿದಾಗ ಕಾಪಾಡಿ ಮರುಸ್ಥಾಪಿತವಾಗುವಂತೆ ಮಾಡಿದ್ದೇ ವಸಾಹತುಶಾಹಿ.

ಫಾರೆಸ್ಟ್ ಮುಂದುವರೆಸುತ್ತ: “ಹಳ್ಳಿಯ ಅಧಿಕಾರಿಗಳ ಪ್ರಭಾವವನ್ನು ಎಲ್ಫಿನ್ ಸ್ಟೋನ್ ಉಳಿಸಿದ….. ನ್ಯಾಯಪಾಲನೆಯಂತಹ ಪ್ರಮುಖವಾದ ಸಂಗತಿಗಳಲ್ಲಿ ಆಂಗ್ಲರನ್ನು ಅಥವಾ ಬ್ರಿಟೀಷ್ ಮಾದರಿಯನ್ನು ಶೀಘ್ರವಾಗಿ ಪರಿಚಯಿಸಲು ಎಲ್ಫಿನ್ ಸ್ಟೋನ್ ಹಿಂಜರಿದ….. ಹಳ್ಳಿಗಳಲ್ಲಿ ಪಟೇಲರು ಅಥವಾ ಮುಖ್ಯಸ್ಥರು, ಪಟ್ಟಣಗಳಲ್ಲಿ ವ್ಯಾಪಾರಿ ಸಮೂಹದ ಮುಖಂಡರಿಗೆ ಪಂಚಾಯತಿ ಕರೆಯುವ ಅಧಿಕಾರವಿರಬೇಕೆಂದು ಪ್ರಸ್ತಾಪಿಸಿದ.” (54)

ಈ ನೀತಿಗಳಿಂದ ಸಿಕ್ಕ ಫಲಿತಾಂಶವನ್ನು ಗಮನಿಸೋಣ. 1819ರಲ್ಲಿ ಜೆ. ಮೆಕ್ ಲಾಯ್ಡ್ ವಿವಿಧ ತೆರಿಗೆ ರಹಿತ ಭೂಮಿ ಮತ್ತದನ್ನನುಭವಿಸಿದ ಭೂಮಾಲೀಕರ ವಿವರಗಳನ್ನು ದಾಖಲಿಸಿದ. ಫಾರೆಸ್ಟ್ ಈ ದಾಖಲೆಗಳನ್ನು ಉಲ್ಲೇಖಿಸುತ್ತಾನೆ: (55)

ಬಾಂಬೆ ಕರ್ನಾಟಕದ ತೆರಿಗೆ ರಹಿತ ಭೂಮಿಗಳು


ಈ ಮೊತ್ತ ಕಡಿಮೆಯದ್ದೇನಲ್ಲ. ಫ್ಯೂಡಲಿಸಂ ಬ್ರಿಟೀಷರ ಮೇಲಿಟ್ಟಿದ್ದ ನಂಬಿಕೆಯನ್ನು ಇದು ತಿಳಿಸುತ್ತದೆ. ದೊಡ್ಡ ರಿಯಾಯತಿಗಳು ಇನಾಮಿನ ಮೂಲಕ ಮತ್ತು ಜಮೀನುದಾರರ ಭೂಮಿ ಹಾಗೂ ಕಟ್ಟಡಗಳಿಗೆ ಸಿಕ್ಕಿತ್ತು. ಇವುಗಳಿಗೆ ನೀಡಿದ ತೆರಿಗೆ ವಿನಾಯಿತಿಯ ಒಟ್ಟು ಮೊತ್ತ 4,10,451 ರುಪಾಯಿಗಳಷ್ಟಿತ್ತು. ಇದು ಆಗ ತೆರಿಗೆ ವಿನಾಯಿತಿ ಪಡೆದಿದ್ದ ಭೂಮಿಯ 54 ಶೇಕಡಾ ಆಗಿತ್ತು. ಇದರ ಜೊತೆಗೆ ಧಾರ್ಮಿಕ ಕೇಂದ್ರಗಳಾದ ದೇಗುಲಗಳಿಗೆ ಕೊಟ್ಟ ಭೂಮಿಯೂ ಸೇರಿತ್ತು. ಈ ಪ್ರತಿಷ್ಟಿತ ಭೂ ಮಾಲೀಕರು ಮತ್ತು ಧಾರ್ಮಿಕ ಮುಖಂಡರು ಬಹಳಷ್ಟು ಬಾರಿ ಒಂದಾಗಿರುತ್ತಿದ್ದರು – ತಮಗೆ ಸಿಕ್ಕ ಸೌಕರ್ಯಗಳನ್ನು ವಿರಾಮದಿಂದ ಅನುಭವಿಸುತ್ತ. 

1857ರಲ್ಲಿ ಕೆಲವು ಭೂಮಾಲೀಕರು ಬ್ರಿಟೀಷರ ವಿರುದ್ಧ ದಂಗೆಯೆದ್ದಾಗ ಅವರ ಬಳಿ ಇದ್ದ ಇನಾಂ ಭೂಮಿಯನ್ನು ಕಸಿದುಕೊಳ್ಳಲಾಯಿತು. 

ಈ ಪಟ್ಟಿಯನ್ನು ಕೃಷ್ಣರಾವ್ ಮತ್ತು ಹಾಲಪ್ಪ ನಮಗೆ ಒದಗಿಸುತ್ತಾರೆ. ಈ ಸಂಕ್ಷಿಪ್ತ ಪಟ್ಟಿ ಇನಾಂ ಭೂಮಿ ಹೇಗೆ ವಸಾಹತುಶಾಹಿಗಳ ಜೊತೆಗೆ ಹೊಂದಿಕೊಂಡಿದ್ದವರಿಗೆ ಲಭಿಸಿತ್ತು ಎನ್ನುವುದನ್ನು ತಿಳಿಸುತ್ತದೆ. 

ಬಾಂಬೆ ಕರ್ನಾಟಕ ಭಾಗದಲ್ಲಿ ಇನಾಂ ಪಡೆದಿದ್ದವರ ವಿವರ

ಊಳಿಗಮಾನ್ಯತೆಯ ಬುನಾದಿಗಳು ವಸಾಹತುಶಾಹಿಯೊಂದಿಗೆ ಎಷ್ಟು ಸಶಕ್ತವಾಗಿ ಸೇರಿಹೋಗಿತ್ತೆನ್ನುವುದಕ್ಕೆ “ಧಾರವಾಡದಲ್ಲಿರುವ ಹಳ್ಳಿಗಳಲ್ಲಿ 30% ಇನಾಂ ಹಳ್ಳಿಗಳು” ಎಂಬ ಫುಕಝೂವನ ಹೇಳಿಕೆಯೊಂದೇ ಸಾಕು. ಪೇಶ್ವೆಗಳ ಆಳ್ವಿಕೆಯಲ್ಲಿ ಚದುರಿ ಹೋದ ಪಟವರ್ಧನ ಬ್ರಾಹ್ಮಣರು ಬ್ರಿಟೀಷರ ಕೃಪೆಗೆ ಪಾತ್ರರಾದರು ಎಂದು ಎರಿಕ್ ಸ್ಟೋಕ್ಸ್ ನಿಂದ ಕಲಿಯಬಹುದು. ಬೆಳಗಾವಿ ಜಿಲ್ಲೆಯೊಂದರಲ್ಲೇ ಚಿಂಚೋಳಿ, ನಿಪ್ಪಾಣಿ, ಮೀರಜ್, ತಸ್ ಗಾಂವ್ ಮತ್ತು ಕಾಗೇವಾಡಗಳನ್ನು ಪುಣೆಯ ಒಳಸಂಚಿನಲ್ಲಿ ಭಾಗಿಯಾಗಿದ್ದವರಿಗೆ ಉಡುಗೊರೆಯಾಗಿ ನೀಡಲಾಯಿತು.

ಬೆಳಗಾವಿ ಜಿಲ್ಲೆಯ ಶಿರಸಂಗಿ ದೇಶಗತಿಯರ ಬಗ್ಗೆ ಅಧ್ಯಯನ ನಡೆಸಿದ ವಿರೂಪಾಕ್ಷ ಬಡಿಗೇರ ಕರ್ನಾಟಕದ ಈ ಭಾಗದಲ್ಲಿ ಊಳಿಗಮಾನ್ಯ ಸಂತತಿ ಸಮೃದ್ಧಿಯಾಗಿ ಹರಡಿಕೊಂಡಿದ್ದರ ಬಗ್ಗೆ ತಿಳಿಸುತ್ತಾರೆ. 1922ರಲ್ಲಿ ಬೆಳಗಾವಿಯೊಂದರಲ್ಲೇ ಇನಾಮಿನ ಮೇಲಿದ್ದ 122 ದೇಶಗತಿ ಕುಟುಂಬಗಳಿದ್ದವು ಎಂದು ಬರೆಯುತ್ತಾನೆ. (58)

ಹೈದರಾಬಾದ್ – ಕರ್ನಾಟಕ ಭಾಗದಲ್ಲಿ ಈ ವ್ಯವಸ್ಥೆಯನ್ನು ಗೌರವಾದರದೊಂದಿಗೆ ರಕ್ಷಿಸಲಾಗಿತ್ತು. ಇಡೀ ಪ್ರಾಂತ್ಯವನ್ನು ನಿಯಂತ್ರಿಸುತ್ತಿದ್ದ ಇನಾಂದಾರರು ಮತ್ತು ಜಾಗೀರುದಾರರು ನಿಜಾಮರಿಗೆ ತೆರಿಗೆ ಸಂಗ್ರಹಿಸಿ ಕೊಡುತ್ತಿದ್ದರು ಮತ್ತು ಬ್ರಿಟೀಷರಿಗೆ ನಿಜಾಮರು ತಲೆತಗ್ಗಿಸಿ ಶರಣಾದ ನಂತರ ಫ್ಯೂಡಲ್ ವ್ಯವಸ್ಥೆ ವಸಾಹತುಶಾಹಿಯನ್ನು ಲಗ್ನವಾಯಿತು.

ಕೊಡಗಿನಲ್ಲಿ ಬ್ರಿಟೀಷರು ಫ್ಯೂಡಲ್ ಕೊಡವ ಕುಟುಂಬಗಳಿಂದ ಅಪ್ಪರಂದ್ರ, ಚೆಪ್ಪುದಿರ ಮತ್ತು ಬಿಡ್ಡಂದ್ರದವರೊಡನೆ ಸಖ್ಯ ಬೆಳೆಸಿದರು. ಜೊತೆಗೆ ಬಿಟ್ಟಿಯಂದ್ರ, ಮಡಂದ್ರ, ಕೊಲೊವಂಡ್ರ, ಕುಟ್ಟೆತೀರ ಮತ್ತು ಮನಬಂಡ ಕುಟುಂಬಗಳೊಡನೆ ಒಪ್ಪಂದ ಮಾಡಿಕೊಂಡರು. (59) ಈ ಕುಟುಂಬಗಳು ನಂತರದ ದಿನಗಳಲ್ಲಿ “ನೂರಾರು ಎಕರೆ ಕಾಫಿ ಎಸ್ಟೇಟ್ ಮತ್ತು ಹಸಿ ಭೂಮಿಯ ಒಡೆಯರಾದರು ಹಾಗೂ ಸಾರ್ವಜನಿಕ ಜೀವನದಲ್ಲಿ ದೊಡ್ಡ ಮಟ್ಟದ ಪ್ರಭಾವ ಬೀರಲು ಶಕ್ತರಾದರು.”(60)

ಬ್ರಿಟೀಷ್ ವಸಾಹತುಶಾಹಿ ಭಾರತದ ಊಳಿಗಮಾನ್ಯ ಪದ್ಧತಿಯನ್ನು ಮುರಿದು ಹಾಕಿ ಬಂಡವಾಳಶಾಹಿತನ ಅಡೆತಡೆಯಿಲ್ಲದೆ ಬೆಳೆಯಿತೆಂಬ ಭಾವನೆ ನವ ಭಾರತದ ಲಿಬರಲ್ ಇತಿಹಾಸಕಾರರು ಮತ್ತು ರಿವಿಷನಿಷ್ಟ್ (revisionist) ಇತಿಹಾಸಕಾರರಲ್ಲನೇಕರಿಗಿದೆ. (ರಿವಿಷನಿಷ್ಟ್: ದಾಖಲೆಗಳನ್ನು ಓದಿ ಇತಿಹಾಸ ರಚಿಸುವವರು). ವಸಾಹತುಶಾಹಿಯ ಇತಿಹಾಸದ ಬಗೆಗಿನ ಈ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸುವ ಸಲುವಾಗಿ ವಸಾಹತುಶಾಹಿಗಳ ಬಾಯಿಂದಲೇ ಉದುರಿಬಿದ್ದ ಅಕ್ಷರಗಳನ್ನು ಅಪಾರ ಶ್ರಮದಿಂದ ಸಂಗ್ರಹಿಸಿ ಉಲ್ಲೇಖಿಸಿದ್ದೇವೆ. ಬ್ರಿಟೀಷರು ಭೂಮಾಲೀಕ ವರ್ಗದೊಂದಿಗೆ ಮೃದುತ್ವದಿಂದ ವರ್ತಿಸಿದರು. ಫ್ಯೂಡಲ್ ದೊರೆಗಳು ಸಬಲರಾಗುವಂತೆ ನೋಡಿಕೊಂಡರು. ಮುಂದಿನ ದಿನಗಳಲ್ಲಿ ಈ ಸಬಲ ಬುನಾದಿಯ ನೆರವಿನಿಂದಲೇ ವಸಾಹತುಶಾಹಿ ವ್ಯಾಪ್ತಿ ಹಿಗ್ಗಿಸಿಕೊಂಡಿತು. ಈ ಬುನಾದಿ ಇರದಿದ್ದರೆ ಕೊಳ್ಳೆ ಹೊಡೆಯುವುದು ಸಾಧ್ಯವಿರಲಿಲ್ಲ ಎಂಬಂಶವನ್ನು ಹೇಳುವ ಅವಶ್ಯಕತೆ ಇಲ್ಲವೇನೋ.

ಊಳಿಗಮಾನ್ಯ ಪದ್ಧತಿ ವಸಾಹತುಶಾಹಿ ಮೇಲುಗೈ ಪಡೆಯಲಿಕ್ಕಿದ್ದ ಸಾಮಾಜಿಕ ಆಧಾರವಾಗಿತ್ತು. ಹಳೆಯ ಸಾಮಾಜಿಕ ರಚನೆಯಲ್ಲಿದ್ದ ಆಳುವ ವರ್ಗದೊಂದಿಗೆ ಮೈತ್ರಿ ಮಾಡಿಕೊಂಡ ವಸಾಹತುಶಾಹಿಗಳು ಬಂಡವಾಳಶಾಹಿತನದ ಪುರಾತನ ರೂಪದಲ್ಲಿದ್ದ ದಬ್ಬಾಳಿಕೆ ಮತ್ತು ಶೋಷಣೆಯನ್ನು ಮುಂದುವರಿಸಲು ನಿರ್ಧರಿಸಿದರು. ಈ ಸಾರ್ವತ್ರಿಕ ಇತಿಹಾಸಕ್ಕೆ ಕರ್ನಾಟಕವೂ ಹೊರತಾಗಿರಲಿಲ್ಲ. (61)

Feb 24, 2016

ಪೆಟ್ರೋಲ್ ಬೆಲೆ ಎಷ್ಟಿರಬೇಕಿತ್ತು? ಎಷ್ಟಿದೆ ಗೊತ್ತಾ?

ಇಂಧನ ಖಾತೆ ಸಚಿವರಾದ ಧರ್ಮೇಂದ್ರ ಪ್ರಧಾನ್ ರವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಸಂಬಂಧಪಟ್ಟ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಉತ್ತರ ಕೊಟ್ಟಿದ್ದಾರೆ. ಈ ಉತ್ತರದ ಆಧಾರದಲ್ಲೇ ನೋಡುವುದಾದರೆ ನಮಗಿವತ್ತು ಪೆಟ್ರೋಲ್ ಮತ್ತು ಡೀಸೆಲ್ ಐವತ್ತು ರುಪಾಯಿಗೆ ಮತ್ತು ಮೂವತ್ತೈದು ರುಪಾಯಿಗೆ ಸಿಗಬೇಕಿತ್ತು. ಹೇಗಂತೀರಾ?
2014ರ ಮೇ ತಿಂಗಳಿನಲ್ಲಿ (ಅಂದರೆ ಅಚ್ಛೇ ದಿನ್ ಸರಕಾರ ಶುಭಾರಂಭ ಮಾಡಿದ ತಿಂಗಳು) ಭಾರತ ಒಂದು ಬ್ಯಾರೆಲ್ ಸಂಸ್ಕರಿಸದ ತೈಲಕ್ಕೆ 106.85 ಡಾಲರ್ ಕೊಡುತ್ತಿತ್ತು. ಈ ತಿಂಗಳು, ಅಂದರೆ ಫೆಬ್ರವರಿ 2016 ರಲ್ಲಿ ಈ ಬೆಲೆ 29.80 ಡಾಲರ್ರಿನಷ್ಟಿದೆ. ಅಲ್ಲಿಗೆ ಹೆಚ್ಚು ಕಡಿಮೆ 66% ಕಡಿಮೆಯಾಗಿದೆ. ಅದೇ ಮೇ 2014ರಲ್ಲಿ ಪೆಟ್ರೋಲಿನ ಬೆಲೆ 71.41 ರುಪಾಯಿ ಇದ್ದಿದ್ದು ಈಗ 59.95 ರುಪಾಯಿಯಾಗಿದೆ. ಡೀಸೆಲ್ಲಿನ ಬೆಲೆ 2014ರಲ್ಲಿ 55.49 ರುಪಾಯಿಯಷ್ಟಿದ್ದರೆ ಈಗ 44.68 ರುಪಾಯಿ (ಬೆಲೆಗಳು- ದೆಹಲಿಯದ್ದು, ಕರ್ನಾಟಕದಲ್ಲಿ ಇನ್ನೂ ಜಾಸ್ತಿ).
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ 66 % ಕಡಿಮೆಯಾಗಿದ್ದರೆ ಪೆಟ್ರೋಲ್ ಮತ್ತು ಡೀಸೆಲ್ಲಿನ ಬೆಲೆಯಲ್ಲಿ ಕೇವಲ 16 % ಕಡಿಮೆಯಾಗಿದೆ. ಕಾರಣ?
ಕಾರಣ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಯದ್ವಾತದ್ವಾ ಏರಿಸಿರುವ ಕೇಂದ್ರ ಸರಕಾರ ಅಂತರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ತೈಲ ಬೆಲೆ ಇಳಿಯದ ಹಾಗೆ ನೋಡಿಕೊಂಡುಬಿಟ್ಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮಾರುಕಟ್ಟೆಯಾಧಾರಿತವಾಗಿರುವಂತೆ ಮಾಡಿದ್ದು ಬೆಲೆ ಏರಿಸುವುದಕ್ಕಷ್ಟೇ ಸೀಮಿತವಾಗಿ ಬೆಲೆ ಇಳಿಸಲು ಉಪಯುಕ್ತವಾಗಿಲ್ಲ. ಬೆಲೆ ಇಳಿಯುವ ಸಂದರ್ಭ ಬಂದಾಗೆಲ್ಲ ತೆರಿಗೆಯನ್ನು ಹೆಚ್ಚಿಸಲಾಗಿದೆ. ಮುಂದೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿದಾಗ ತೆರಿಗೆಯನ್ನು ಇಳಿಸಿ ಬೆಲೆ ಏರದಂತೆ ನೋಡಿಕೊಳ್ಳುತ್ತಾರಾ? ಮೇ 2014ರಿಂದ ಇಲ್ಲಿಯವರೆಗೆ ಕೇಂದ್ರ ಸರಕಾರ ಪೆಟ್ರೋಲಿನ ಮೇಲಿನ ತೆರಿಗೆಯನ್ನು ಹನ್ನೆರಡು ರುಪಾಯಿಯಷ್ಟು ಏರಿಸಿದ್ದರೆ ಡೀಸೆಲ್ಲಿನ ಮೇಲಿನ ತೆರಿಗೆಯನ್ನು ಹತ್ತು ರುಪಾಯಿಯಷ್ಟು ಏರಿಸಿದೆ. ರುಪಾಯಿ ಮೌಲ್ಯದಲ್ಲಿ ಸ್ವಲ್ಪ ಕುಸಿತವಿರುವುದು ಹೌದಾದರೂ ತೆರಿಗೆಯನ್ನು ಯದ್ವಾ ತದ್ವ ಏರಿಸದಿದ್ದಲ್ಲಿ ಜೇಬು ಒಂದಷ್ಟು ಭಾರವಾಗುತ್ತಿತ್ತೇನೋ?!
Correction: In the picture showing the details the rupee value has been interchanged. In May 2014 one dollar equated to 59 dollars and in Feb 2016 it is 68. Thanks Anant Rao for correcting the mistake.

ಪಿ.ಸಾಯಿನಾಥ್: ಗಾಂಧಿಯನ್ನು ಕೊಂದವರು ನಮ್ಮನ್ನು ದೇಶದ್ರೋಹಿಗಳು ಎನ್ನುತ್ತಿದ್ದಾರೆ!

ದಿನಾಂಕ 19-02-2016ರಂದು ಜೆ.ಎನ್.ಯುನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪಿ. ಸಾಯಿನಾಥ್ ಮಾತನಾಡಿದ್ದರು. ಅದರ ಕನ್ನಡ ಭಾವಾನುವಾದಾದ ಎರಡನೆಯ ಭಾಗ ಇವತ್ತಿನ ಹಿಂಗ್ಯಾಕೆಯಲ್ಲಿ.
ಮೂಲ ಭಾಷಣ-ಪಿ.ಸಾಯಿನಾಥ್
ಅನುವಾದ-ಕಿರಣ್. ಎಂ . ಗಾಜನೂರು

ನಮ್ಮ ನಡುವಿನ ಮೂಲಭೂತವಾದ ಬಹುತ್ವಕ್ಕೆ/ವಿವಿಧತೆಗೆ ಹೆದರುತ್ತದೆ. ಆ ಕಾರಣಕ್ಕೆ ಅದು ಯಾವಾಗಲೂ ಬಹುತ್ವವನ್ನು ಹತ್ತಿಕ್ಕಲು ಯತ್ನಿಸುತ್ತಿರುತ್ತದೆ. ಇಂದು ಅವನು ನಿನ್ನ ಉದ್ಯೋಗ ಕಿತ್ತುಕೊಂಡ, ಇವಳು ನಿನ್ನ ಉದ್ಯೋಗ ಕಿತ್ತುಕೊಂಡಳು, ನೀನು ಎಲ್ಲೋ ಇರಬೇಕಿತ್ತು ಇಂತವರ ಕಾರಣಕ್ಕೆ ಹೀಗೆ ಇಲ್ಲಿ ನಿಂತಿದ್ದೀಯ ಎಂಬ ಮೋಸದ ಮಾತಿನ ನೆಲೆಯಲ್ಲಿ ದೊಡ್ಡ ಸಂಖ್ಯೆಯ ಯುವಕರನ್ನು ಒಂದುಗೂಡಿಸಲು ಅಸಮಾನತೆಯನ್ನು ಬಳಸಿಕೊಳ್ಳುವ ಹಂತಕ್ಕೆ ಕೆಲವು ಜನ ಬಂದಿದ್ದಾರೆ. ಆದರೆ ವಾಸ್ತವ ಎಂದರೆ ಇಂದು ಉದ್ಯೋಗಗಳೇ ಇಲ್ಲ! ಅಧಿಕಾರಕ್ಕೆ ಬಂದ ಜನರು ಈ ದೇಶದ ಲಕ್ಷಾಂತರ ಜನರನ್ನು ಸ್ಥಳಾಂತರಿಸಿದ್ದಾರೆ, ಸಾವಿರಾರು ಜನರು ತಮ್ಮ ಮೂಲ ನೆಲೆ ಕಳೆದುಕೊಳ್ಳುವಂತೆ ಮಾಡಿದ್ದಾರೆ. ಆದರೆ ಒಂದೇ ಒಂದು ಉದ್ಯೋಗವನ್ನು ಸೃಷ್ಟಿಸಿಲ್ಲ. ಸೃಷ್ಟಿಸಿದ್ದರೆ ಅದು ನಮ್ಮ ನಿಮ್ಮ ಮನೆಗಳಲ್ಲಿ ಕೆಲಸ ಮಾಡುವ ಕೂಲಿಗಳನ್ನು ಸೃಷ್ಟಿಸಿದ್ದಾರೆಯೇ ಹೊರತು ಉದ್ಯೋಗಗಳನ್ನಲ್ಲ. . ..
ಮೊದಲ ಭಾಗವನ್ನೋದಲು ಇಲ್ಲಿ ಕ್ಲಿಕ್ಕಿಸಿ
ಒಂದು ಕಾಲದಲ್ಲಿ ಮುಂಬೈ ನಗರದ ಗಿರಣಿಗಳಲ್ಲಿ ಈ ದೇಶದ ಎಲ್ಲಾ ಭಾಗಗಳಿಂದ ಬಂದ ಜಾತ್ಯತೀತ ತತ್ವವನ್ನು ಬೆಂಬಲಿಸುವ ಬಹಳ ದೊಡ್ಡ ಕಾರ್ಮಿಕರ ವರ್ಗ ದುಡಿಯುತ್ತಿತ್ತು. ಆದರೆ ಇಂದು ಆ ಗಿರಣಿಗಳೇ ನಾಪತ್ತೆಯಾಗಿವೆ. ಆ ಜಾಗವೆಲ್ಲಾ ಇಂದು ರಿಯಲ್ ಎಸ್ಟೇಟ್ ಉದ್ಯಮಿಗಳ ಕೈ ಸೇರಿದೆ. ಅಲ್ಲಿರುವ ದೊಡ್ಡ ಸಂಖ್ಯೆಯ ರಿಯಲ್ ಎಸ್ಟೇಟ್ ಉದ್ಯಮಿ ಕಂಪೆನಿಯ ಹೆಸರು “ಪ್ಲಾನೇಟ್ ಗೋದ್ರೇಜ್” (ವಿಭಿನ್ನವಾದ ಗ್ರಹ). ಒಂದು ಅರ್ಥದಲ್ಲಿ ಅದು ನಿಜಕ್ಕೂ ಒಂದು ವಿಭಿನ್ನವಾದ ಗ್ರಹವೇ. . 

ಇಂದು ಮುಂಬಯಿಯ ಸ್ಮಾರಕವನ್ನು ಗೇಟ್ ವೇ ಆಫ್ ಇಂಡಿಯಾ ಬದಲಾಗಿ ಮುಖೇಶ್ ಅಂಬಾನಿಯ ಮನೆ ಎಂದು ಗುರುತಿಸಲಾಗುತ್ತಿದೆ. ನೀವು ನನ್ನಂತೆ ಹೆಮ್ಮೆಯ ಭಾರತೀಯರಾಗಿದ್ದರೆ ಯಾವುದೇ ಭಿನ್ನಭಿಪ್ರಾಯಗಳಿಲ್ಲದೆ ನಾವು ಹೆಮ್ಮೆಯಿಂದ ಅತಿ ಎತ್ತರಕ್ಕೆ ಕಟ್ಟಿದ ಅತ್ಯಂತ ಅಸಹ್ಯ ಕಟ್ಟಡ ಅದು ಎನ್ನುವುದನ್ನು ಒಪ್ಪುತ್ತೀರ ಅನ್ನಿಸುತ್ತದೆ .. 

40 ವರ್ಷಗಳ ಹಿಂದೆ ರಾಯಗಡದಿಂದ, ರತ್ನಗಿರಿಯಿಂದ ರೈತರು ಮುಂಬೈನ ಗಿರಣಿಗಳಲ್ಲಿ ಕೆಲಸ ಪಡೆದುಕೊಂಡು ಅಲ್ಲಿನ ತಮಿಳರು, ಮಲೆಯಾಳಿಗರು, ಮರಾಠರೊಂದಿಗೆ ಹೊಂದಿಕೊಂಡು ಕೆಲಸ ಮಾಡಿ ಸಂಸಾರ ಸಾಕುತ್ತಿದ್ದರು. ಆದರೆ ಇಂದು ಅದೇ ರೈತರು ಮುಂಬೈ ನಗರದ ಮನೆಗಳಲ್ಲಿ ಮನೆಗೆಲಸಕ್ಕೆ ಬರುತ್ತಿದ್ದಾರೆ. ನಾನು ನನ್ನದೇ ಅನುಭವವನ್ನು ಉದಾಹರಣೆಯಾಗಿಟ್ಟುಕೊಂಡು ಹೇಳುವುದಾದರೆ ಮುಂಬೈನ ನನ್ನ ಮನೆ ಮತ್ತು ಆ ಕಟ್ಟಡದ ಹತ್ತು ಮನೆಗಳನ್ನು ಸ್ವಚ್ಚಗೊಳಿಸಲು ಬರುವ ಹೆಣ್ಣುಮಗಳು ಒಂದು ಕಾಲದಲ್ಲಿ ತಾಲೇಗಾಂ ನ ಕೌಶಲ್ಯ ಹೊಂದಿದ ರೈತ ಮಹಿಳೆಯಾಗಿದ್ದವಳು! ಈಗ ಆಕೆ ನಮ್ಮೊಂದಿಗೆ ಇಲ್ಲ. ಆದರೆ ಈಗಲೂ ನಮ್ಮ ಮನೆಗೆ ಅತ್ಯುತ್ತಮ ಅಕ್ಕಿಯನ್ನು ವರ್ಷಕ್ಕೆ ಎರಡು ಬಾರಿ ನೀಡುತ್ತಿರುತ್ತಾಳೆ. . 

ನಾವು ಆರ್ಥಿಕತೆ ಮತ್ತು ನವ ಉದಾರವಾದಿ ನೀತಿಗಳು ಬೇರೆ ಬೇರೆ ವರ್ಗಗಳ ಜನರೊಂದಿಗೆ ಹೇಗೆ ವರ್ತಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. 80 ರ ದಶಕದಲ್ಲಿ ನಾನು ಮುಂಬೈ ತಲುಪಿದಾಗ ಕೋನೆಯ ಪತ್ರಿಕಾ ನೌಕರರ ಮುಷ್ಕರ ಇಂಡಿಯನ್ ಎಕ್ಸ್ ಪ್ರೆಸ್ಸಿನಲ್ಲಿ ನಡೆಯುತ್ತಿತ್ತು. ನನ್ನ ಸಹೋದ್ಯೋಗಿಗಳು 200 ರೂಪಾಯಿ ಹೆಚ್ಚುವರಿ ಭತ್ಯೆ ನೀಡಿ ಎಂದು ಹೋರಾಟ ಮಾಡುತ್ತಿದ್ದರು. ಆದರೆ ಸೇಠ್ ಜಿ ಅವರ ಬೇಡಿಕೆಯನ್ನು ಕೇಳಿಸಿಕೊಂಡೆ ಇರಲಿಲ್ಲ! ಸೇಠ್ ರು 200 ರೂಪಾಯಿ ಹೆಚ್ಚಿಸಿ ಎಂದು ಕೇಳಲು ನೀವು ಯಾರು ಎಂಬಂತೆ ವರ್ತಿಸುತ್ತಿದ್ದರು. ಅಂದು ನಾವು ನಮ್ಮ ಸಹೋದ್ಯೋಗಿಗಳ ಪರವಾಗಿ ಅಲ್ಲಿ ಕುಳಿತು ಅವರ ಹೋರಾಟದಲ್ಲಿ ಭಾಗಿಯಾಗಿದ್ದೆವು. ಅಂದು ಯಾರೆಲ್ಲಾ ಅಲ್ಲಿ ಕುಳಿತು ಹೋರಾಟ ಮಾಡಿದ್ದೆವೋ ಇಂದು ಅವರೆಲ್ಲರ ಬಳಿ ಖಾಸಗಿ ಕಾರಿದೆ. ಆದರೆ 80 ರ ದಶಕದಲ್ಲಿಯೇ ಬಂದು ನಮ್ಮ ಮನೆ ಸ್ವಚ್ಚ ಮಾಡುತ್ತಿದ್ದ ತಾಲೇಗಾಂ ನ ಆ ಕೌಶಲ್ಯ ಹೊಂದಿದ ರೈತ ಮಹಿಳೆಯ ಬದುಕು ದುರ್ಬರವಾಗಿದೆ; ನಮ್ಮ ಬದುಕಿಗೆ ಅಗತ್ಯವಾದ ಎಲ್ಲವೂ ಕಡಿಮೆ ಮೌಲ್ಯಕ್ಕೆ ಸಿಗುತ್ತಿದ್ದರೆ ಆಕೆಯ ಬದುಕಿಗೆ ಅಗತ್ಯವಾದ ಪ್ರತಿಯೊಂದು ವಸ್ತುವು ದುಬಾರಿಯಾಗುತ್ತಾ ಸಾಗುತ್ತಿದೆ. . 

ಇಂದು ಕಂಪ್ಯೂಟರ್, ಏರ್ ಕಂಡಿಷನರ್, ಕಾರುಗಳ ದರಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದರೆ ಸಾಮಾನ್ಯರು ಓಡಾಡುವ ಬಸ್ ಪ್ರಯಾಣ ದರ ಅಧಿಕವಾಗುತ್ತಾ ಸಾಗುತ್ತಿದೆ. ಆಕೆ ಇಲ್ಲಿಗೆ ಬಂದಾಗ ಇಲ್ಲಿನ ಮಿನಿಮಮ್ ಬಸ್ಸಿನ ದರ 25 ಪೈಸೆ ಇತ್ತು. ಇಂದು ಅತಿ ಸಣ್ಣ ದೂರಕ್ಕೆ 7 ರಿಂದ 8 ರೂಪಾಯಿ ಇದೆ. ಇದರ ಅರ್ಥ ಒಂದು ಕಡೆ ಮಧ್ಯಮ ವರ್ಗದ ಬದುಕಿಗೆ ಅಗತ್ಯವಾದ ಎಲ್ಲಾ ಸರಕು ಸೇವೆಗಳ ಮೌಲ್ಯ ಇಳಿಮುಖವಾಗುತ್ತಿದ್ದರೆ ಸಾಮಾನ್ಯರ ಅಗತ್ಯಗಳ ಮೌಲ್ಯ ಎರಿಕೆಯಾಗುತ್ತಾ ಸಾಗುತ್ತಿದೆ. ನಾನು 1991 ರಲ್ಲಿ 24 ಎಂ.ಬಿ ಹಾರ್ಡ್‌ಡಿಸ್ಕ್ ಹೊಂದಿದ ಸುಂದರವಾದ ನನ್ನ ಮೊದಲ ಕಂಪ್ಯೂಟರ್ ತಂದಾಗ ನಮ್ಮ ಸುತ್ತಲಿನ ನಾಲ್ಕೈದು ಕಟ್ಟಡಗಳ ಜನ ಅದನ್ನು ನೋಡಲು ಸಾಲು ಗಟ್ಟಿ ನಿಂತಿದ್ದರು. ಇಂದು ನಾವು ನೀವು ಬಳಸುತ್ತಿರುವ ಮೊಬೈಲ್ಗಳು ಅದಕ್ಕಿಂತ ನೂರು, ಇನ್ನೂರು ಪಟ್ಟು ಹೆಚ್ಚು ಉತ್ತಮವಾಗಿವೆ. ಇದರ ಅರ್ಥ ಇಂದು ಈ ದೇಶದ ಮಧ್ಯಮ ವರ್ಗ ಮತ್ತು ಗಣ್ಯರನ್ನು ಕೇಂದ್ರವಾಗಿಟ್ಟುಕೊಂಡು ಎಲ್ಲವನ್ನೂ ತಯಾರಿಸಲಾಗುತ್ತಿದೆ, ಸರಳಗೊಳಿಸಲಾಗುತ್ತಿದೆ, ದರ ಕಡಿತಗೊಳಿಸಲಾಗುತ್ತಿದೆ. . 

ಇನ್ನೊಂದು ಕಡೆ ಈ ದೇಶದ 833 ಮಿಲಿಯನ್ ಜನರಿರುವ ಗ್ರಾಮೀಣ ಭಾರತದ ಶೇ 90 ರಷ್ಟು 5 ಸದಸ್ಯರನ್ನು ಹೊಂದಿದ ಕುಟುಂಬವೊಂದರ ಮುಖ್ಯಸ್ಥನ ಅದಾಯ ಕೇವಲ ೧೦ ಸಾವಿರ ರೂಪಾಯಿ ಮಾತ್ರ! ಯಾವ ರೀತಿಯ ಅಸಮಾನತೆಯನ್ನು ಸೃಷ್ಟಿಸಲಾಗಿದೆ ನಮ್ಮ ನಡುವೆ? ನಾವು ಆಶ್ಚರ್ಯಪಡುವಷ್ಟು ಅಸಮಾನತೆಯನ್ನು ಸೃಷ್ಟಿಸಲಾಗುತ್ತಿದೆ. ಜಾಗತಿಕ ಹಸಿವಿನ ಪಟ್ಟಿಯಲ್ಲಿ ನಮ್ಮ ಸ್ಥಾನ ನಿಜಕ್ಕೂ ನಾಚಿಕೆ ತರುವಂತಿದೆ. ನಾವು ಆಹಾರ ಭದ್ರತೆಯ ಹಿಂದಿನ ರಾಜಕೀಯದ ಕುರಿತು ಹೋರಾಡುತ್ತಿದ್ದೇವೆ, ಆದರೆ ನನಗೆ ಅನ್ನಿಸುವಂತೆ ಅದನ್ನು ಜಾರಿಗೆ ತರಬೇಕಿದೆ. 

ದೇಶದ ಅಂತರಿಕ ಸ್ಥಿತಿಯ ಕುರಿತಂತೆ ಸರ್ಕಾರದ ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯುರೋದ ಅಂಕಿ-ಅಂಶಗಳು ನಿಜಕ್ಕೂ ಬಹಳ ಕೆಟ್ಟ ಸ್ಥಿತಿಯನ್ನು ನಮ್ಮೆದುರು ಇಡುತ್ತಿವೆ. ಆ ವರದಿಗಳು 1995ರ ನಂತರ ಮೂರು ಲಕ್ಷಕ್ಕೂ ಅಧಿಕ ಸಂಖ್ಯೆಯ ರೈತರು ಈ ದೇಶದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುತ್ತಿವೆ. ಈ ಸ್ಥಿತಿಯನ್ನು ನಾವು ಇರುವುದರಲ್ಲಿಯೇ ಉತ್ತಮ ಎಂದುಕೊಳ್ಳುತ್ತಿದ್ದೇವೆ. 2001 ರಿಂದ 2011 ರ ಮಧ್ಯದ 10 ವರ್ಷಗಳಲ್ಲಿ ಪ್ರತಿ ಅರ್ಧ ಗಂಟೆಗೆ ಒಬ್ಬ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ ಎಂದು ಅಂಕಿ-ಅಂಶಗಳು ವಿವರಿಸುತ್ತಿದ್ದರೆ ಇಂದಿನ ಪತ್ರಿಕೆಗಳ ಮುಖಪುಟಗಳಲ್ಲಿ ಬಿ.ಜೆ.ಪಿ ಶಾಸಕನೊಬ್ಬನ “ರೈತರಿಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಒಂದು ಶೋಕಿಯಾಗಿ ಬಿಟ್ಟಿದೆ” ಎಂಬ ಹೇಳಿಕೆ ಕಣ್ಣಿಗೆ ರಾಚುತ್ತಿದೆ. . .

ಇವನೊಬ್ಬನೆ ಅಲ್ಲ ಹಲವಾರು ರಾಜಕಾರಣೆಗಳು ಹೀಗೆ ಮಾತನಾಡಿದ್ದಾರೆ. ಚಂದ್ರಬಾಬು ನಾಯ್ಡು ರೈತರು ಪರಿಹಾರದ ಆಸೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಹೇಳಿಕೆ ನೀಡಿದ್ದರು. ನಿಮಗೆ ಗೊತ್ತಿರಲಿ ರೈತ ಆತ್ಮಹತ್ಯೆ ಮಾಡಿಕೊಂಡರೆ ಒಂದು ಲಕ್ಷ ರೂಪಾಯಿಗಳ ಪರಿಹಾರ ನೀಡಲಾಗುತ್ತದೆ. ನಿಮಗೆ ಆಶ್ಚರ್ಯ ಆಗಬಹದು ಇದುವರೆಗೂ ಆತ್ಮಹತ್ಯೆ ಮಾಡಿಕೊಂಡ ರೈತರಲ್ಲಿ ಕೇವಲ 12ಶೇ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ಆಂಧ್ರ ಮತ್ತು ಮಹಾರಾಷ್ಟ್ರದಲ್ಲಿ ನಾವು ಸ್ವಲ್ಪ ಹೋರಾಟ ಮಾಡಿದ್ದರಿಂದ ಪರಿಹಾರ ಪಡೆದ ಕುಟುಂಬಗಳ ಸಂಖ್ಯೆ ಹೆಚ್ಚಿದೆ. ಆದರೂ ಆತ್ಮಹತ್ಯೆಗೆ ಒಳಗಾದ ರೈತರ ಒಟ್ಟು ಕುಟುಂಬಗಳಲ್ಲಿ ಶೇ 12 ರಷ್ಟು ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಲಾಗಿದೆ. ಈ ಪರಿಹಾರ ಹೇಗೆ ವಿತರಿಸಲಾಗುತ್ತದೆ ಎಂಬುದನ್ನು ಕೇಳಿ ನಿಮಗೆ ಇನ್ನೂ ಆಶ್ಚರ್ಯ ಆಗಬಹದು. ಸತ್ತ ರೈತನ ಮಡದಿಗೆ ನೀಡಲಾಗುವ ಆ ಒಂದು ಲಕ್ಷದಲ್ಲಿ 30 ಸಾವಿರ ಹಣದ ರೂಪದಲ್ಲಿ ನೀಡಲಾಗುತ್ತದೆ. ಇನ್ನುಳಿದ 70 ಸಾವಿರ ಆಕೆಯ ಹೆಸರಿನಲ್ಲಿ ಎಫ್.ಡಿ ಮಾಡಲಾಗುತ್ತದೆ. ಈ ಎಫ್.ಡಿ ಮಾಡುವ ಕ್ರಮವನ್ನು ನಾನು ಸ್ವಾಗತಿಸುತ್ತೇನೆ. ಏಕೆಂದರೆ ಪೂರ್ತಿ ಹಣ ಆ ವಿಧವೆಯ ಕೈಗೆ ಸಿಕ್ಕರೆ ಅದನ್ನು ದೋಚಲು ಅಲ್ಲಿನ ಸ್ಥಳೀಯ ಬಡ್ಡಿ ವ್ಯಾಪಾರಿಗಳು ಕಾಯುತ್ತಿರುತ್ತಾರೆ. ಅದೇನೆ ಇರಲಿ ಐದು ಜನರ ಕುಟುಂಬ ಆ 70 ಸಾವಿರಕ್ಕೆ ಬರುವ 446 ರೂಪಾಯಿ ಬಡ್ಡಿ ಹಣದಲ್ಲಿ ಬದುಕು ಸಾಗಿಸಬೇಕಾದ ಸ್ಥಿತಿ ನಿಜಕ್ಕೂ ದಾರುಣ. . .

ಇದು ಪರಿಸ್ಥಿತಿ. ನಮ್ಮ ಸುತ್ತ ಇಂತಹ ದಾರುಣವೇ ತುಂಬಿ ಹೋಗಿದೆ. ನಾನು ಯಾವಾಗಲೂ ಕೇಳುತ್ತಿರುತ್ತೇನೆ. ನಿನ್ನೆಯೂ ಕೃಷಿ ಸಮೀಕ್ಷೆಯ ತಂಡವೊಂದನ್ನು ನಮ್ಮ ನೈತಿಕ ಪ್ರಜ್ಞೆ ಏನಾಗಿದೆ ಎಂದು ಕೇಳಿದೆ! ಮೂರು ಲಕ್ಷ ಸತ್ತ ರೈತರನ್ನು ಬಿಡಿ, ಅದಕ್ಕಿಂತಲೂ ಹತ್ತು ಪಟ್ಟು ಜನ ಇತ್ತ ಬದುಕಲಾರದೆ, ಅತ್ತ ಆತ್ಮಹತ್ಯೆಗೆ ಮನಸ್ಸು ಒಪ್ಪದೆ ಅದೇ ದಾರುಣ ಸ್ಥಿತಿಯ ಬದುಕು ನಡೆಸುತ್ತಾ ಹೋರಾಡುತ್ತಿದ್ದಾರಲ್ಲ ಅವರುಗಳ ಕುರಿತ ನಮ್ಮ ನೈತಿಕ ಅಭಿವ್ಯಕ್ತಿ ಎಲ್ಲಿ ಹೋಗಿದೆ ಎಂಬ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕಿದೆ. . .

ಒಂದು ಆಸಕ್ತಿಕರ ವಿಷಯ ಹೇಳಬೇಕು. ಈ ಸಮಸ್ಯೆಯ ಕುರಿತ ಸರ್ಕಾರ, ಬೌದ್ಧಿಕ ವರ್ಗ, ಮಾಧ್ಯಮಗಳು ಮತ್ತು ಸಾಮಾನ್ಯ ನಾಗರೀಕರಲ್ಲಿ ಈ ಸ್ಥಿತಿಗೆ ನಿಜಕ್ಕೂ ಮರುಗುತ್ತಿರುವವರು ಸಾಮಾನ್ಯ ನಾಗರೀಕರೆ ಹೊರತು ಮತ್ತಿನ್ಯಾರೂ ಅಲ್ಲ. ನಾನು ಕಳೆದ ಕೆಲವು ವರ್ಷಗಳಲ್ಲಿ ಈ ದೇಶದ ಡಿಫೆನ್ಸ್ ಮಿಲಿಟರಿ ಕಾಲೇಜ್, ಐಡಿಎಸ್ಎ, ಸ್ಕೂಲ್ ಆಫ್ ಏರ್ ವಾರ್ ಫೇರ್ ಇತ್ಯಾದಿ ಐದು ಪ್ರತಿಷ್ಟಿತ ಸೈನಿಕ ಸಂಸ್ಥೆಗಳಲ್ಲಿ ಕೃಷಿ ಬಿಕ್ಕಟ್ಟಿನ ಕುರಿತು ಮಾತನಾಡಿದೆ. ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಈ ದೇಶದ ಸರ್ಕಾರ, ಭೌದ್ದಿಕ ವಲಯ, ಮಾಧ್ಯಮಗಳಿಗಿಂತ ಸೈನಿಕ ಅಧಿಕಾರಿಗಳು ಕೃಷಿ ಬಿಕ್ಕಟ್ಟಿನ ಕುರಿತು ತೀರ್ವ ಕಳವಳ ಹೊಂದಿದ್ದಾರೆ. ಏಕೆಂದರೆ ಇಂದು ಸೈನಿಕನ ಸಮವಸ್ತ್ರದಲ್ಲಿರುವ ಬಹುಪಾಲು ಯೋಧರು ಈ ದೇಶದ ರೈತನ ಮಕ್ಕಳು. ಆ ಕಾರಣಕ್ಕೆ ಈ ಬಿಕ್ಕಟ್ಟಿನ ಪರಿಣಾಮವನ್ನು ಅವರು ಕಡೆ ಪಕ್ಷ ಗ್ರಹಿಸಬಲ್ಲವರಾಗಿದ್ದಾರೆ. ನಿಜಕ್ಕೂ ನಮ್ಮ ಯೋಧರು ಈ ದೇಶದ ಕೃಷಿ ಬಿಕ್ಕಟ್ಟಿನ ಕುರಿತು ಕಳವಳ ಹೊಂದಿದ್ದಾರೆ. ಊರಿನಿಂದ ಕರೆ ಬಂದರೆ ಕೆಟ್ಟ ಸುದ್ದಿಯೇನೋ ಎಂದು ಅಲೋಚಿಸುವ ಸ್ಥಿತಿಯಲ್ಲಿ ಅವರು ಇರುವುದು ನನ್ನ ಗಮನಕ್ಕೆ ಬಂತು. . . 

ಇದನ್ನೆಲ್ಲಾ ನೋಡಿದ ಮೇಲೆ ನನಗೆ ಸರ್ಕಾರ, ಭೌದ್ದಿಕ ವಲಯ, ಮಾಧ್ಯಮಗಳು ನಮ್ಮ ದೇಶದ ಕೃಷಿ ಬಿಕ್ಕಟ್ಟಿನ ಕುರಿತು ಹೊಂದಿರುವ ಧೋರಣೆಗಳು ಬೇಸರವನ್ನು ಉಂಟುಮಾಡುತ್ತಿದೆ. ನಾನು ಸರ್ಕಾರ, ಭೌದ್ದಿಕ ವಲಯ, ಮಾಧ್ಯಮ ಮೂರು ವಲಯಗಳಲ್ಲಿ ಕೆಲವರು ಕೃಷಿಯ ಸ್ಥಿತಿಯ ಕುರಿತು ಕಳವಳ ಹೊಂದಿದ್ದಾರೆ ಎಂಬುದನ್ನು ಒಪ್ಪುತ್ತೇನೆ. ಆದರೆ ಅವರುಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಆದರೆ ಭೌದ್ದಿಕ ವಲಯದಲ್ಲಿ ಈ ದೇಶದ ಕೃಷಿ ಬಿಕ್ಕಟ್ಟಿನ ಕುರಿತು ಕಳವಳ ಇರುವ ಕೆಲವರಲ್ಲಿ ಶೇ 90 ರಷ್ಟು ಮಂದಿ ಜೆ.ಎನ್.ಯು ಕ್ಯಾಂಪೇಸ್ ನಲ್ಲಿ ಕಲಿತವರು ಎಂಬುದು ಹೆಮ್ಮೆಯ ವಿಷಯ. ನಾನಿನ್ನೂ ಕೃಷಿ ಬಿಕ್ಕಟ್ಟಿನ ಕುರಿತು ಮಾತನಾಡಲು ಹಿಂಜರಿಯುತ್ತಿದ್ದ ಕಾಲದಲ್ಲಿ, ಅದು ನಮಗೆ ಅರ್ಥವಾಗದಿದ್ದ ಕಾಲದಲ್ಲಿ ಈ ದೇಶದಲ್ಲಿ ಕೃಷಿ ಬಿಕ್ಕಟ್ಟಿನ ದಾರುಣ ಪರಿಣಾಮಗಳನ್ನು ಊಹಿಸಿದವರು ಜೆ.ಎನ್.ಯು ನ ಪ್ರೋ. ಉತ್ಸಾಹ್ ಪಟ್ನಾಯಕ್. ಕಳೆದ ವರ್ಷದವರೆಗೆ ವರ್ಷದ ೨೫೦ದಿನಗಳನ್ನು ಕೃಷಿ ಕ್ಷೇತ್ರಕಾರ್ಯದಲ್ಲಿ ಕಳೆಯುತ್ತಿದ್ದ ನನಗೆ ಭಾರತದ ಕೃಷಿ ಬಿಕ್ಕಟ್ಟಿನ ಕುರಿತು ಸ್ಪಷ್ಟ ಚಿತ್ರಣವನ್ನು ಕೊಟ್ಟವರು, ಅದನ್ನು ಇರುವಂತೆಯೇ ಗ್ರಹಿಸುವ ನೋಟ ಒದಗಿಸಿದವರು ಪ್ರೊ.ಉತ್ಸವ್ ಪಟ್ನಾಯಕ್ ರವರು. ಇಂದು ನಾನು ಬೇರೆ ಯಾವ ಬುದ್ದಿಜೀವಿಯ ಕೆಲಸವೂ ಪ್ರೋ ಪಟ್ನಾಯಕ್ ಅವರ ಕೆಲಸದಷ್ಟು ನಿಖರತೆಯನ್ನು ಹೊಂದಿರಲು ಸಾಧ್ಯವಿಲ್ಲ ಎಂಬುದನ್ನು ಧೈರ್ಯವಾಗಿ ಹೇಳಬಲ್ಲೆ.  ಇನ್ನು ಮಾಧ್ಯಮ ರಂಗದಲ್ಲಿಯೂ ಕೆಲವರು ಇದ್ದಾರೆ ಜೆ.ಡಿ ಹರ್ಡಿಕರ್, ಪುರುಶೋತ್ತಮ್ ಠಾಕೋರ್, ಪ್ರಿಯಾಂಕ ಠಾಕೋರ್, ಇಂದು ಕೃಷಿ ಬಿಕ್ಕಟ್ಟಿನ ಕುರಿತು ಟೈಮ್ಸ್ ಆಫ್ ಇಂಡಿಯಾದಲ್ಲಿ ಬರುತ್ತಿರುವ ಮುಖಪುಟದ ವರದಿಗಳು,  ಇವೆಲ್ಲವನ್ನೂ ನಾವು ಕಡೆಗಣಿಸುವಂತಿಲ್ಲ ಆದರೆ ಅವು ಬೆರಳೆಣಿಕೆಯಷ್ಟು ಮಾತ್ರ. . .

ಆದರೆ ಈ ಕೆಲವು ಜನರನ್ನು ಹೊರತುಪಡಿಸಿ ಸರ್ಕಾರ, ಭೌದ್ದಿಕ ವಲಯ, ಮಾಧ್ಯಮಗಳಲ್ಲಿ ಕೃಷಿ ಬಿಕ್ಕಟ್ಟಿನ ಕುರಿತು ನಾಚಿಕೆಗೆಟ್ಟ ಧೋರಣೆಯೊಂದು ಪ್ರಭಾವಿಸಿಕೊಂಡಿದೆ. ವಿಚಾರಣಾ ಆಯೋಗದ ಇಬ್ಬರು ಉಪಕುಲತಿಗಳು...... ಈ ದೇಶದಲ್ಲಿ ಕೃಷಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ೩೦ಕ್ಕೂ ಹೆಚ್ಚು ವಿಚಾರಣಾ ಅಯೋಗಗಳು ರಚನೆಯಾಗಿವೆ. ಭಾರತದ ರಾಜಕಾರಣದ ಒಂದು ಒಳ್ಳೆಯ ಸಂಪ್ರದಾಯವಿದೆ. ಅದು ಯಾವುದೆಂದರೆ ಒಂದು ಸಮಸ್ಯೆಯ ಕುರಿತಂತೆ ಪ್ರಭುತ್ವ ನಿರೀಕ್ಷೆ ಮಾಡುವ ವರದಿಯನ್ನು ನೀಡುವ ಅಯೋಗವೊಂದು ಬರುವವರೆಗೂ ಆಯೋಗಗಳನ್ನು ರಚಿಸುತ್ತಲೇ ಹೋಗುವುದು. ಅವುಗಳ ಸಂಖ್ಯೆ ಎಷ್ಟಾದರೂ ಪರವಾಗಿಲ್ಲ! ನಾನು ಆಗಲೇ ಹೇಳುತ್ತಿದ್ದೆ ವಿಚಾರಣಾ ಆಯೋಗವೊಂದರ ಇಬ್ಬರು ಉಪಕುಲತಿಗಳು, ಒಬ್ಬರು ಕರ್ನಾಟಕದ ವಿರೇಶ್ ಎಂಬುವವರು ರೈತರ ಆತ್ಮಹತ್ಯೆಗೆ ಮೂಲ ಕಾರಣ ಕುಡಿತ ಎಂಬ ವರದಿಯನ್ನು ನೀಡಿದ್ದರು. ಇದನ್ನು ಆ ತಕ್ಷಣವೇ ಸುಮಾರು ಶೇ 90 ರಷ್ಟು ಮಾಧ್ಯಮಗಳು ಹೌದು ಹೌದು ಎಂದು ಬೆಂಬಲಿಸಿದ್ದವು. ಈ ವಾದದಲ್ಲಿನ ಸಮಸ್ಯೆ ಏನೆಂದರೆ ಆತ್ಮಹತ್ಯೆಗೆ ಒಂದು ಕಾರಣ ಅಂತ ಇರಬೇಕಿಲ್ಲ. ಒಬ್ಬ ವ್ಯಕ್ತಿಯ ಆತ್ಮಹತ್ಯೆಗೆ ಹಲವಾರು ಕಾರಣಗಳು ಇರುತ್ತವೆ ವೀರೇಶ್ ಹೇಳುವಂತೆ ವ್ಯಕ್ತಿಯ ಆತ್ಮಹತ್ಯೆಗೆ ಕುಡಿತವೇ ಮೂಲಕಾರಣ ಎಂಬುದು ಸತ್ಯವಾಗಿದ್ದರೆ ಅತಿಯಾದ ಕುಡುತ ಆತ್ಮಹತ್ಯೆಗೆ ವ್ಯಕ್ತಿಯನ್ನು ದೂಡುತ್ತದೆ ಎಂಬುದು ಸತ್ಯವಾಗಿದ್ದರೆ ಇಂದು ಜಗತ್ತಿನಲ್ಲಿ ಯಾವೊಬ್ಬ ಪತ್ರಕರ್ತನೂ ಬದುಕಿರುತ್ತಿರಲಿಲ್ಲ, ಕೆಲವೇ ಕೆಲವು ಬುದ್ದಿಜೀವಿಗಳು ಬದುಕಿರುತ್ತಿದ್ದರು, ಮಾನವ ಹಕ್ಕುಗಳ ಹೋರಾಟಗಾರರಂತೂ ಒಬ್ಬರು ಇರುತ್ತಿರಲಿಲ್ಲ. . .ಸೋ ಈ ಉಪಕುಲಪತಿಯನ್ನು ಬಿಡೋಣ ಮತ್ತೊಬ್ಬ ಉಪಕುಲಪತಿಯವರ ಬಳಿ ತೆರಳೋಣ. . .

ನಾನು ಮಹಾರಾಷ್ಟ್ರದ ವಿದರ್ಭದಲ್ಲಿನ ರೈತರ ಆತ್ಮಹತ್ಯೆಗಳ ಹಿನ್ನಲೆಯಲ್ಲಿ ವಿಲಾಸ್ ರಾವ್ ದೇಶ್ ಮುಖ್ ರವರನ್ನು ನನ್ನ ವರದಿಗಳ ಮೂಲಕ ತುಂಬಾ ಕಾಡುತ್ತಿದ್ದೆ. ನಿಮಗೆ ಗೊತ್ತಿರಲಿ ಸರ್ಕಾರಿ ವರದಿಗಳ ಪ್ರಕಾರವೇ ೯೫ರಿಂದ ಮಹಾರಾಷ್ಟ್ರಾದಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆ 63,000. ಆಗ ಇನ್ನೊಬ್ಬ ಮಹಾರಾಷ್ಟ್ರದ ಉಪಕುಲಪತಿ ಒಬ್ಬ ರೈತನನ್ನು ಭೇಟಿಯಾಗದೆ, ಒಂದೇ ಒಂದು ರೈತ ಕುಟುಂಬದ ಜೊತೆ ಸಂವಾದಿಸದೆ ವರದಿಯೊಂದನ್ನು ನೀಡಿದರು. ಅದರಲ್ಲಿ ಅವರು ಒಂದು ಪ್ಯಾರಾದ ಹೊರತಾಗಿ ರೈತರ ಆತ್ಮಹತ್ಯೆಗಳ ಕುರಿತು ಏನನ್ನೂ ಬರೆದಿರಲಿಲ್ಲ. ಅವರ ವರದಿಯ ಒಟ್ಟು ಪ್ರಯತ್ನ ನಾನು ರೈತರ ಆತ್ಮಹತ್ಯೆಗಳ ಕುರಿತು ಮಹಾರಾಷ್ಟ್ರದಲ್ಲಿ ಕೃತಕ ಭಯವೊಂದನ್ನು ಹುಟ್ಟುಹಾಕಿದ್ದೇನೆ ಎಂಬುದನ್ನು ಸಾಧಿಸುವುದಕ್ಕೆ ಸೀಮಿತವಾಗಿತ್ತು. ಅದನ್ನು ಅವರು ಸಾಧಿಸಿದರು. ಒಂದು ದಿನ ಬೆಳಗ್ಗೆ ಎದ್ದು ನೋಡುತ್ತೇನೆ. ಮುಂಬಯಿ ಮಿರರ್ ಪತ್ರಿಕೆಯ ಮೊದಲ ಪುಟದ ಮುಖ್ಯ ಹೆಡ್ ಲೈನ್ “ಸಾಯಿನಾಥ್ ರಾಜ್ಯದ ಶತ್ರು”!. ಆ ಅರ್ಥದಲ್ಲಿ ನನ್ನ ರಾಷ್ಟ್ರದ್ರೋಹ ಮಹಾರಾಷ್ಟ್ರಕ್ಕೆ ಸೀಮಿತವಾಗಿತ್ತು! ಇಡೀ ವರದಿ ಸಾಯಿನಾಥ್ ರಾಜ್ಯವನ್ನು ಅಪಮಾನಕ್ಕೆ ಈಡುಮಾಡಿದ್ದಾರೆ ಎನ್ನುವುದಾಗಿತ್ತು. ನಾನು ಆ ವರದಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಾನ್ಯಾಕೆ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಏಕೆಂದರೆ ಅದು ಅಷ್ಟು ಮೂರ್ಖತನದಿಂದ ಕೂಡಿತ್ತು.  ಆ ವರದಿ ಮತ್ತು ಸುದ್ದಿಯಿಂದ ವಿಲಾಸ್ ರಾವ್ ಸಂತೋಷಗೊಂಡರು, ಆ ಕುಲಪತಿಗಳು ಸಂತೋಷಗೊಂಡರು. ಈ ವರದಿ ನೀಡಿದ ಮಹತ್ಕಾರ್ಯಕ್ಕೆ ಅವರನ್ನು ಮುಂದೆ ಯೋಜನಾ ಆಯೋಗದ ಸದಸ್ಯರನ್ನಾಗಿ ನೇಮಿಸಲಾಯಿತು.. .

ಇದು ನಮ್ಮ ಬೌದ್ಧಿಕತೆಯು ಬಿಕ್ಕಟ್ಟಿಗೆ ಸ್ಪಂದಿಸುತ್ತಿರುವ ರೀತಿ! ನೀವು ಕೃಷಿ ಕುಟುಂಬವೊಂದರ ಖರ್ಚು ವೆಚ್ಚಗಳನ್ನು ಒಮ್ಮೆ ಗಮನಿಸಬೇಕು. ಇಂದು ಕೃಷಿ ಕುಟುಂಬಗಳು ಅತಿ ಹೆಚ್ಚು ವೆಚ್ಚವನ್ನು ಆರೋಗ್ಯದ ಮೇಲೆ ಮಾಡುತ್ತಿವೆ.  ಪ್ರತಿಯೊಂದು ಕೃಷಿ ಕುಟುಂಬ ಶಿಕ್ಷಣಕ್ಕೆ ಮಾಡುತ್ತಿರುವ ವೆಚ್ಚದ ಎರಡರಷ್ಟನ್ನು ಆರೋಗ್ಯಕ್ಕೆ ವ್ಯಯಿಸುತ್ತಿವೆ. ನಿಮಗೆ ಗೊತ್ತಿರಲಿ ಜಗತ್ತಿನ ದೊಡ್ಡ ದೇಶಗಳಲ್ಲಿ ಆರೋಗ್ಯವನ್ನು ಖಾಸಗಿಕರಣ ಮಾಡಿದ ಮೋದಲ ರಾಷ್ಟ್ರ ಭಾರತ. ಈ ದೇಶದ ಆರೋಗ್ಯ ಉದ್ಯಮ ಗಳಿಸುತ್ತಿರುವ ಶೇ ೮೫ ರಷ್ಟು ಹಣ ಈ ದೇಶದ ಸಾಮಾನ್ಯನ ಜೇಬಿನ ಹಣ. ಇವರು ಸರ್ಕಾರಿ ಆಸ್ಪತ್ರೆಗಳು ಮತ್ತು ಪಾಥಮಿಕ ಆರೋಗ್ಯ ಕೇಂದ್ರಗಳನ್ನು ಖಾಸಗಿಕರಣ ಮಾಡುತ್ತಿದ್ದಾರೆ. ನಿಮಗೆ ಗೊತ್ತಿದೆಯೋ ಇಲ್ಲವೋ ಇ‌ತ್ತೀಚೆಗೆ 4000 ಅಂಗನವಾಡಿ ಕೇಂದ್ರಗಳನ್ನು ಖಾಸಗಿಕರಣಕ್ಕೆ ಒಳಪಡಿಸಲಾಗಿದೆ. ವೇದಾಂತ ಕಂಪೆನಿಯ ಮುಂಚೂಣಿಯ ಒಂದು ಸಂಸ್ಥೆಗೆ 4000 ಅಂಗನವಾಡಿಗಳನ್ನು ನೋಡಿಕೊಳ್ಳುವ ಹೊಣೆ ಹೊರಿಸಲಾಗಿದೆ. ಈ ವಿಷಯ ನಿಮ್ಮನ್ನು ಅಘಾತಕ್ಕೆ ಒಳಪಡಿಸುತ್ತದೆ ಎಂದು ನನಗೆ ಗೊತ್ತು. . .ಒಂದರಿಂದ ಆರು ವರ್ಷದ ವಯಸ್ಸೇನಿದೆ ಅದು ಈ ದೇಶ ಭವಿಷ್ಯದಲ್ಲಿ ಯಾವ ದಿಕ್ಕಿನಲ್ಲಿ ಕಟ್ಟಬೇಕು ಎಂಬುದನ್ನು ತಿಳಿಹೇಳುವ ವಯಸ್ಸಾಗಿದೆ. ಆ ಮಕ್ಕಳ ಆರೋಗ್ಯ, ಅಹಾರ, ಪೌಷ್ಟಿಕತೆಗಳನ್ನು ಸರ್ಕಾರವೆ ಖುದ್ದು ನಿರ್ವಹಿಸಬೇಕಾದ ಮಹತ್ವದ ಅಂಶವಾಗಿದೆ. ಏಕೆಂದರೆ ಅವರು ಈ ದೇಶದ ಭವಿಷ್ಯ! ಅಂತಹ ಜವಾಬ್ದಾರಿಯುತ ಸಂಸ್ಥೆಗಳನ್ನು ನೀವು ಲಾಭದ ಉದ್ದೇಶಹೊಂದಿರುವ ಒಂದು ಕಾರ್ಪೋರೇಟ್ ಕಂಪೆನಿಗೆ ನೀಡುತ್ತೀರ ಎಂಬುದೇ ಒಂದು ಸೋಜಿಗ. ಇಂದು 4000 ಅಂಗನವಾಡಿ ಕೊಟ್ಟಿರಬಹದು ಮುಂದೆ ಅವುಗಳ ಸಂಖ್ಯೆ ಏರಲಿದೆ. . .

ನಾವು ಇಂದು ಬೆಳೆಯ ವಿಮೆಯ ಕುರಿತು ಮಾತನಾಡುತ್ತಿದ್ದೇವೆ. ರೈತರು ಪರಿಹಾರದ ಆಸೆಗೆ, ವಿಮೆಯ ಆಸೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅರೋಪಿಸುತ್ತಿರುವವರು ಇಂದು ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಕಾರ್ಪೊರೇಟ್ ಕಂಪೆನಿಗಳಿಗಾಗಿ ಎಂಬ ವಾಸ್ತವ ಸಂಗತಿಯನ್ನು ಅರ್ಥಮಾಡಿಕೊಳ್ಳಬೇಕಿದೆ. ಆದರೆ ಆಶ್ಚರ್ಯ ಅಂದರೆ ಇನ್ನು ಮುಂದೆ ಕೃಷಿ ಮತ್ತು ಬೆಳೆ ವಿಮೆಗಳ ಲೆಕ್ಕವನ್ನು ನೀಡುವ ಜವಾಬ್ದಾರಿಯನ್ನು ಆ ಕಾಂರ್ಪೊರೇಟ್ ಕಂಪೆನಿಗಳಿಗೆ ನೀಡಲಾಗಿದೆ.

1991ರಿಂದ 2011ರ ಅವಧಿಯಲ್ಲಿ ಭಾರತದ ಕೃಷಿಕನ ಅತಂತ್ರ ಸ್ಥಿತಿ ಎರಡು ಪಟ್ಟು ಧ್ವಿಗುಣಗೊಂಡಿದೆ. ನ್ಯಾಷನಲ್ ಸ್ಯಾಂಪೆಲ್ ಸರ್ವೇ ಅಂಕಿ-ಅಂಶಗಳು 1991 ಕ್ಕೆ ಹೋಲಿಸಿದರೆ 2011 ರಲ್ಲಿ ಸಾವಿಗೆ ಶರಣಾದವರ ಸಂಖ್ಯೆ ದ್ವಿಗುಣಗೊಂಡಿದೆ ಎಂಬುದನ್ನು ಹೇಳುತ್ತಿವೆ. 10 ವರ್ಷಗಳಲ್ಲಿ ಶೇ 26 ರಿಂದ ಶೇ 56.8 ಗೆ ಏರಿಕೆಯಾಗಿದೆ ಎನ್ನಲಾಗುತ್ತಿದೆ. ಈ ಸಂಖ್ಯೆಯನ್ನು ಒಪ್ಪುವುದಿಲ್ಲ ಅದೊಂದು ದೊಡ್ಡ ಹಾಸ್ಯ ಎಂದು ಜನರೇ ನಗುತ್ತಾರೆ. . .

ಕಳೆದ ವಾರ ನಬಾರ್ಡ್ (ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರೀಕಲ್ಚರ್ ಅಂಡ್ ರೂರಲ್ ಡೆಮೆಲಪ್ಮೆಂಟ್) ಮಹಾರಾಷ್ಟ್ರದ ಕುರಿತಂತೆ ಒಂದು ವರದಿಯನ್ನು ಬಿಡುಗಡೆ ಮಾಡಿದೆ.  ಮಹಾರಾಷ್ಟ್ರಾದ ಒಟ್ಟು ಕೃಷಿ ಸಾಲದಲ್ಲಿ 51ಶೇ ಕೃಷಿ ಸಾಲಗಳು ಮುಂಬೈ ಮತ್ತು ಅದರ ಸುತ್ತಮುತ್ತಲಿನ ಜನರಿಗೆ ನೀಡಲಾಗಿದೆ ಎಂಬ ಮಾಹಿತಿ ನೀಡಲಾಗಿದೆ. ಇದು ಸೋರಿಕೆಯಾದ ವರದಿಯಲ್ಲ ಬದಲಾಗಿ ನಬಾರ್ಡ್ ಬಿಡಿಗಡೆಮಾಡಿದ ಅಧಿಕೃತ ವರದಿ ಇದರ ಮೂಲಕ ಅವರು ನಮಗೆ ಈ ದೇಶದಲ್ಲಿ ಕೃಷಿಗಿಂತ ಕೃಷಿ ಆಧರಿತ ಉದ್ಯಮ ಹೆಚ್ಚು ಮುಖ್ಯ ಎಂಬುದನ್ನು ಹೇಳುತ್ತಿದ್ದಾರೆ. ಇದನ್ನು ಕೇಳಿ ನಿಮಗೆ ಅಘಾತ ಆಗಬಹುದು ಆಗಲೇ ಬೇಕು ಕೂಡಾ ನಾನು ನಿಮ್ಮನ್ನು ಈ ಎಲ್ಲಾ ಸಂಗತಿಗಳನ್ನು ಹೇಳಿ ಉದ್ರೇಕಿಸುತ್ತಿದ್ದೇನೆ ಎಂದುಕೊಳ್ಳುತ್ತಿದ್ದರೆ ಅರ್ಥಮಾಡಿಕೊಳ್ಳಿ ನನ್ನ ಉದ್ದೇಶವೂ ಅದೆ ಆಗಿದೆ. . .

ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಪಿಯಲ್ ಸೈನ್ಸ್ ನ ಪ್ರೋ.ಆರ್ ರಾಮಕುಮಾರ್ ಅವರು 55ಶೇ ಗ್ರಾಮೀಣ ಪ್ರದೇಶ ಹೊಂದಿರುವ ಮಹಾರಾಷ್ಟ್ರದಲ್ಲಿ ನೀಡಿರುವ ಒಟ್ಟು ಕೃಷಿ ಸಾಲದಲ್ಲಿ ಶೇ 53 ರಷ್ಟು ಮೂರು ನಗರಗಳಿಗೆ ಹಂಚಲಾಗಿದೆ ಎಂಬ ಅಂಶವನ್ನೂ ಹೋರಗೆಡವಿದ್ದಾರೆ 53ಶೇ ಕೃಷಿ ಸಾಲ ಮಹಾರಾಷ್ಟ್ರಾದ ಮೂರು ನಗರಗಳ ಪಾಲಾಗಿದೆ ನಿಮಗೆ ಆಶ್ಚರ್ಯವಾಗಬಹುದು ಅದರಲ್ಲಿ 38ಶೇ ಕೃಷಿ ಸಾಲಗಳು ಗ್ರಾಮೀಣ ಶಾಖೆಗಳಿಂದಲೇ ನೀಡಲಾಗಿದೆ. ಇದು ಪರಿಸ್ಥಿತಿ. . .

ಕೃಷಿ ಸಾಲದ ಅರ್ಧಕ್ಕಿಂತ ಹೆಚ್ಚು ಸಾಲ ಮುಂಬೈ, ಪುಣೆ, ಮಲಬಾರ್ ಜಿಲ್ಲೆಗಳ ಪ್ರಮುಖ ನಗರಗಳನ್ನು ತಲುಪಿವೆ. ಒಂದು ಅರ್ಥದಲ್ಲಿ ಅವರೂ ಕೃಷಿ ಮಾಡುತ್ತಾರೆ. ಅವರು ಕೃಷಿಯ ಗುತ್ತಿಗೆದಾರರಲ್ಲ, ಬದಲಾಗಿ ಕೃಷಿ ವ್ಯವಸ್ಥೆಯ ಗುತ್ತಿಗೆದಾರರು. ಪ್ರೊ.ರಾಮಕುಮಾರ್ ತೋರಿಸುವಂತೆ 50,000 ಒಳಗಿನ ಕೃಷಿ ಸಾಲಗಳ ಸಂಖ್ಯೆಯಲ್ಲಿ ತೀರ್ವ ಇಳಿಮುಖವಾಗಿದೆ ಅಂದರೆ 50,000 ಸಾವಿರ ಸಾಲ ಪಡೆಯುವವರು ಸಣ್ಣ ರೈತರು ಆ ಸಾಲ ಇಳಿಮುಖವಾಗಿದೆ. ಆದರೆ ನಿಮಗೆ ಅಘಾತವಾಗುತ್ತದೆ 10 ರಿಂದ 20 ಕೋಟಿ ಕೃಷಿ ಸಾಲಗಳನ್ನು ಪಡೆಯುವವರ ಸಂಖ್ಯೆ ವಿಪರೀತ ಏರಿಕೆಯಾಗಿದೆ. ನೀವು ಎಂದಾದರೂ ಬ್ಯಾಂಕಿನ ಮುಂದೆ ಹೇ ಒಂದು ನಿಮಿಷ ತಾಳು ನಾನು ನನ್ನ ೨೫ ಕೋಟಿ ಕೃಷಿ ಸಾಲ ಪಡೆದು ಬರುತ್ತೇನೆ ಎಂದು ನಿಂತಿರುವ ಸಣ್ಣ ರೈತನನ್ನು ನೋಡಿದ್ದಿರೇನು? ಆದರೆ ನಾನು ಇಬ್ಬರನ್ನು ನೊಡಿದ್ದೇನೆ ಒಬ್ಬರು ಮುಖೇಶ್ ಮತ್ತೊಬ್ಬರು ಅನಿಲ್ ಕಳೆದ ಇಪ್ಪತ್ತು ವರ್ಷಗಳಿಂದ ಕೃಷಿ ಕ್ಷೇತ್ರಕ್ಕೆ ಮೀಸಲಿಟ್ಟ ಸಂಪನ್ಮೂಲದ ಅರ್ಧಕ್ಕಿಂತ ಹೆಚ್ಚು ಕಾರ್ಪೋರೇಟ್ ವ್ಯವಸ್ಥೆ ನುಂಗಿಹಾಕುತ್ತಿದೆ . . .

ಇವೆಲ್ಲ ಸಂಗತಿಗಳು ನಮಗೆ ತಿಳಿಸುವುದು ಏನೆಂದರೆ ಇಂದು ನಾವು ನಿಧಾನವಾಗಿ ಕಾರ್ಪೋರೇಟ್ ರಾಜ್ಯವ್ಯವಸ್ಥೆಯ ಕಡೆಗೆ ಚಲಿಸುತ್ತಿದ್ದೇವೆ. ನಮಗೆ ಅರ್ಥವಾಗಬೇಕಾದ ಸಂಗತಿ ಎಂದರೆ ನಾವು ಇಂದು ಸಾಮಾಜಿಕ, ಧಾರ್ಮಿಕ ಮೂಲಭೂತವಾದ ಮತ್ತು ಆರ್ಥಿಕ, ಮಾರುಕಟ್ಟೆ ಮೂಲಭೂತವಾದವೆಂಬ ಶತ್ರುಗಳನ್ನು ಎದುರಿಸಬೇಕಿದೆ. ಇದು ಭಾರತಕ್ಕೆ ಮಾತ್ರ ಸೀಮಿತವಾದ ವಿದ್ಯಮಾನವಲ್ಲ. ಮಾರುಕಟ್ಟೆ ಮೂಲಭೂತವಾದದ ವ್ಯಾಟಿಕನ್ (ಪವಿತ್ರ ಭೂಮಿ) ಎಂದು ಕರೆಯಲ್ಪಡುವ ಅಮೇರಿಕಾ ಇಂದು ಜಗತ್ತಿನ ಅತ್ಯಂತ ಸಂಪ್ರದಾಯಿಕ ಧಾರ್ಮಿಕ ಮೂಲಭೂತವಾದಿ ರಾಷ್ಟ್ರಗಳಾದ ಇಸ್ರೇಲ್ ಮತ್ತು ಸೌಧಿ ಅರೇಭಿಯಾಗಳನ್ನು ಆಧರಿಸಿದೆ. ಇಡಿ ಅಮೇರಿಕಾದ ನೀತಿಗಳು ನಿರ್ಧಾರವಾಗುತ್ತಿವೆ. ಸೋ, ಮಾರುಕಟ್ಟೆ ಮತ್ತು ಧಾರ್ಮಿಕ ಮೂಲಭೂತವಾದದ ಮೈತ್ರಿ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿದೆ ಎಂದುಕೊಳ್ಳಬೇಡಿ. ಅವರು ತಮ್ಮ ಅಸ್ಥಿತ್ವಕ್ಕಾಗಿ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಸ್ಥಿತಿಯಲ್ಲಿ ಇದ್ದಾರೆ . . .

ಇನ್ನು ಮಾಧ್ಯಮಗಳು ನಿಜಕ್ಕೂ ಅತಂಕ ಹುಟ್ಟಿಸುತ್ತಿವೆ. ಅವು ಕಳೆದ ೨೦-೨೫ ವರ್ಷಗಳ ಹಿಂದೆ ಇದ್ದದ್ದಕ್ಕಿಂತ ಬಹಳಷ್ಟು ಬದಲಾಗಿವೆ. ಇದನ್ನು ಬಹಳ ಸರಳವಾಗಿ ನಿಮ್ಮ ಮುಂದೆ ಹೀಗೆ ವಿವರಿಸುತ್ತೇನೆ. ಇಂದು ಎರಡು ರೀತಿಯ ಪತ್ರಿಕೋದ್ಯಮಗಳು ನಮ್ಮ ನಡುವೆ ಇವೆ. ಒಂದು ಪತ್ರಿಕೋದ್ಯಮ, ಇನ್ನೊಂದು ಸ್ಟೆನೋಗ್ರಫಿ(ಟೈಪಿಸಿ ವರದಿ ಮಾಡುವುದು)! ಅದರಲ್ಲಿಯೂ ಕಾರ್ಪೋರೇಟ್ ಸ್ಟೆನೋಗ್ರಫಿ. ನಾನು ತಮಿಳುನಾಡಿನಲ್ಲಿ ಮಾಧ್ಯಮಗಳನ್ನು ಹೀಗೆ ಸ್ಟೆನೋಗ್ರಾಫರ್ಸ್ ಎಂದು ಹೇಳುತ್ತಿದ್ದಾಗ ಒಬ್ಬ ಕೇಳುಗ ಎದ್ದು ಸಾರ್ ದಯಮಾಡಿ ಸ್ಟೆನೋಗ್ರಾಫರ್ಸ್ ರನ್ನು ನೀವು ಹೀಗೆ ಪತ್ರಿಕೋದ್ಯಮಕ್ಕೆ ಹೋಲಿಸಿ ತೆಗಳಬೇಡಿ ಎಂದು ಕೂಗಿದ. ನಾನು ಏಕೆ ಎಂದು ಕೇಳಿದೆ. ಆದಕ್ಕೆ ಆತ ನಾನು ವೃತ್ತಿಯಲ್ಲಿ ಒಬ್ಬ ಸ್ಟೆನೋಗ್ರಾಫರ್ ಸಾರ್ ನನ್ನನ್ನು ಅವರೊಂದಿಗೆ ಹೋಲಿಸಿ ಮಾತನಾಡಿದರೆ ತುಂಬಾ ನೋವಾಗುತ್ತದೆ ಎಂದ . . .

ನಾನು ಆತನಲ್ಲಿ ಕ್ಷಮೆ ಕೇಳಿದೆ. ಅವನು ತಾವು ಕ್ಷಮೆ ಕೇಳುವ ಅಗತ್ಯವಿಲ್ಲ ಸಾರ್ ಇಂದು ಪತ್ರಿಕೋದ್ಯಮಕ್ಕಿಂತ ಸ್ಟೆನೋಗ್ರಫಿ ಮಾಡುವವರು ನೈತಿಕವಾಗಿ ತುಂಬಾ ಉನ್ನತ ಹಂತದಲ್ಲಿ ಇದ್ದಾರೆ ಅವರು ಅರೋಪಿ, ಆಪಾದಿತ, ಆರೋಪಿ ಪರ/ವಿರೋಧ ವಕೀಲರುಗಳ ವಾದಗಳನ್ನು ಯಾವುದೇ ಭಾವಾವೇಶಕ್ಕೆ ಒಳಗಾಗದೆ ಟೈಪಿಸುತ್ತಾರೆ. ಆದರೆ ಪತ್ರಕರ್ತರು ಬಲಾಢ್ಯರು ಎನು ಹೇಳುತ್ತಾರೋ ಅದನ್ನು ಟೈಪಿಸುತ್ತಾರೆ ಆ ಅರ್ಥದಲ್ಲಿ ಸ್ಟೆನೋಗ್ರಫಿ ಮಾಡುವವರು ಒಳ್ಳೆಯವರು ಸಾರ್. . .

ಇಂದು ನೀವು ಮಾಧ್ಯಮಗಳ ಮಾಲೀಕತ್ವವನ್ನು ನೋಡಬೇಕು. ನಿಮಗೆ ಗೊತ್ತಿರಲಿ ಭಾರತದಲ್ಲಿನ ಅತಿ ದೊಡ್ಡ ಮಾಧ್ಯಮ ಸಂಸ್ಥೆಗಳ ಒಡೆಯ ಮುಖೇಶ್ ಅಂಬಾನಿ ಆಗಿದ್ದಾರೆ. ಇಂದು ನಾವು ಮಾಧ್ಯಮ ಜಗತ್ತಿನ್ನು ಹಿಂದಿನಂತೆ ನೋಡಲು ಸಾಧ್ಯವಿಲ್ಲ. ಹಿಂದೆ ಸುದ್ದಿ ಪತ್ರಿಕೆಗಳು ಮತ್ತು ಟಿ.ವಿ ವಾಹಿನಿಗಳು ಕೆಲವು ಹಿತಾಸಕ್ತಿಗಳನ್ನು ಹೊಂದಿದ್ದವು. ಆದರೆ ಇಂದು ಇಡಿ ಮಾಧ್ಯಮವೆಂಬುದು ಬಹಳ ದೊಡ್ಡ ಕಾರ್ಪೋರೇಟ್ ಪ್ರಪಂಚದ ಹಿತಾಸಕ್ತಿಯ ಅತಿ ಸಣ್ಣ ವಿಭಾಗವಾಗಿ ಬದಲಾಗಿದೆ. ಇದು ನಮಗೆ ಅರ್ಥವಾಗಬೇಕು. ನೆಟ್ ವರ್ಕ್ 18 ದೇಶದಲ್ಲಿ ಮಾಧ್ಯಮಗಳನ್ನು ಒಗ್ಗೂಡಿಸುವ ಬಹಳ ದೊಡ್ಡ ಜಾಲವನ್ನು ಹೊಂದಿದ್ದರೂ ಅದು ರಿಲಯನ್ಸ್ ಕಂಪೆನಿಯ ಅತಿ ಸಣ್ಣ ಉದ್ಯಮವಾಗಿದೆ ಎಂಬ ಸತ್ಯವನ್ನು ನಾವು ತಿಳಿಯಬೇಕಿದೆ. ಇಂದು ನಿಜಕ್ಕೂ ಷೋರ್ಥ್ ಸ್ಟೇಟ್ ಮತ್ತು ರಿಯಲ್ ಎಸ್ಟೇಟ್ ಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಬಹಳ ಕಷ್ಟವಾದ ಕೆಲಸವಾಗಿದೆ. ಇಂದು ಅಸಮಾನತೆಯನ್ನು ಪೋಷಿಸುವ ವ್ಯವಸ್ಥೆ ನಮ್ಮನ್ನು ಅಳುತ್ತಿದೆ. ನಾನು ನಿಮ್ಮೊಂದಿಗೆ ಇರುತ್ತೇನೆ, ನಿಮ್ಮ ಬದ್ಧತೆಯ ಕುರಿತು ನನಗೆ ಗೌರವವಿದೆ ಆದರೆ ಈ ದೇಶದ ಬೇರೆ ಬೇರೆ ವಿಶ್ವವಿದ್ಯಾನಿಲಯಗಳ ಅವರಣದಲ್ಲಿ ನಡೆಯುತ್ತಿರುವ ಘಟನೆಗಳನ್ನು ನಾವು ಗಮನಿಸಬೇಕಿದೆ . . .

ನಿಮಗೆ ನೆನಪಿರಲಿ ಕಳೆದ 105 ದಿನಗಳಿಂದ “ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್” ಪುಣೆ ವಿಧ್ಯಾರ್ಥಿಗಳು ಈ ಸರ್ಕಾರದ ವಿರುದ್ಧ ವಿಶ್ವವಿದ್ಯಾನಿಲಯದ ಮೇಲೆ ಯುಧಿಷ್ಟರನ ಹೇರಿಕೆಯನ್ನು ವಿರೋಧಿಸಿ ಹೋರಾಡುತ್ತಿದ್ದಾರೆ. ನಿಮಗೆ ಗೊತ್ತಾ? ನೈಜವಾದ ಮಹಾಭಾರತದಲ್ಲಿ ಯುಧಿಷ್ಟಿರ ಎಷ್ಟು ಪರಿಶುಧ್ಧ ಆತ್ಮ ಎಂದರೆ ಅವನು ಎಂದೂ ಸುಳ್ಳನ್ನೆ ಹೇಳಿರಲಿಲ್ಲ! ಆ ಕಾರಣಕ್ಕೆ ಆತನ ರಥ ಭೂಮಿಯಿಂದ 6 ಇಂಚು ಮೇಲಕ್ಕೆ ಚಲಿಸುತ್ತಿತ್ತು. ಅವನು ದ್ರೋಣರಿಗೆ “ಅಶ್ವಥಾಮ ಸತ್ತ” ಎಂದು ಸುಳ್ಳು ಹೇಳಿದ ದಿನ ಅವನ ರಥ ನೆಲವನ್ನು ತಾಕಿತಂತೆ. ಆದರೆ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್” ನ ಯುಧಿಷ್ಟರರ ರಥ ಭೂಮಿಯಿಂದ ಮೇಲೆ ಎದ್ದೆ ಇಲ್ಲ! ಅದು ಕೆಸರಿನಲ್ಲಿ ಹೂತು ಹೋಗಿದೆ. ಆ ಕಾರಣಕ್ಕೆ ಅವರನ್ನು ಯಾರು ಗೌರವಿಸುತ್ತಿಲ್ಲ. . 

ಇನ್ನೂ ರೋಹಿತ್ ವೇಮುಲಾ ಪ್ರಕರಣ, ನಾನು ಜನಸಂಖ್ಯೆಯ ಒಂದು ಅಂಕಿ-ಅಂಶವನ್ನು ನಿಮಗೆ ನೀಡುವುದು ಮರೆತೆ. ಈ ದೇಶದಲ್ಲಿ ಸುಮಾರು 400 ಮಿಲಿಯನ್ ಜನರು ಇದುವರೆಗೂ ಯಾವುದೇ ಹಂತದ ಶಿಕ್ಷಣ ಸಂಸ್ಥೆಗಳ ಒಳಭಾಗವನ್ನು ನೋಡಿಯೇ ಇಲ್ಲ ! ಭಾರತದಲ್ಲಿ ಕೇವಲ 3 ಶೇಕಡಾ, ಕೇವಲ ಮೂರೇ ಮೂರು ಶೇಕಡಾ ಗ್ರಾಮೀಣ ಕುಟುಂಬಗಳಲ್ಲಿ ಮಾತ್ರ ಪದವೀಧರರಿದ್ದಾರೆ. ಇದು ಭಾರತದ ಒಟ್ಟು ಜನಸಂಖ್ಯೆಯ ಸರಾಸರಿ. ಇದನ್ನು ಆದಿವಾಸಿ ಮತ್ತು ದಲಿತರ ಹಿನ್ನಲೆಯಲ್ಲಿ ನೋಡಿದರೆ ಆ ಸಂಖ್ಯೆ ಇನ್ನೂ ಕೆಳಹಂತದಲ್ಲಿದೆ. ಭಾರತದ ಜನಗಣತಿಯ ವರದಿಗಳು ತೋರಿಸುವಂತೆ ಆ ಹಿನ್ನಲೆಯಿಂದ ಬಂದ ರೋಹಿತ್ ಮೆರಿಟ್ ಕೋಟಾದಲ್ಲಿ ಪಿ.ಹೆಚ್.ಡಿ ಹಂತಕ್ಕೆ ಬರುತ್ತಾನೆ ಎಂದರೆ ಅದಕ್ಕಿಂತ ಸಾಧನೆ ಏನಿದೆ! ಆದರೆ ದುರಂತ ಎಂದರೆ ಇಂದು ಈ ಸಮಾಜದ ನಿರಂತರ ಶೋಷಣೆಯನ್ನು, ತಾರತಮ್ಯವನ್ನು ಜಯಿಸಿ ಮೆರಿಟ್ ಆಧಾರದಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಪಿ.ಹಚ್.ಡಿ ಹಂತಕ್ಕೆ ಬಂದ ರೋಹಿತನ ವಿರುದ್ಧ ನಿಂತಿರುವುದು ಕಾಲೇಜು ಡ್ರಾಪ್ ಔಟ್ ಆದ ಶಿಕ್ಷಣ ಸಚಿವರು! ಇವರು ಇಂದು ಸಂಸ್ಕೃತ ಹೇರಿಕೆಯನ್ನು ನಮ್ಮ ಮೇಲೆ ಮಾಡುತ್ತಿದ್ದಾರೆ. ..

ನನಗೆ ಅನ್ನಿಸುವಂತೆ ನಮ್ಮ ಶಿಕ್ಷಣ ಸಚಿವೆಯಾದ ಮಿಸ್ ಇರಾನಿಯವರು ಈ ಹಿಂದೆ ನಟಿಸಿರುವ ಎಲ್ಲಾ ಧಾರವಾಹಿಗಳನ್ನು ಸಂಸ್ಕೃತಕ್ಕೆ ಅನುವಾದಿಸಿ ಪ್ರದರ್ಶಿಸಬೇಕು. ಅದು ಸಂಸ್ಕೃತವನ್ನು ಪ್ರೋತ್ಸಾಹಿಸಲು ಬಹಳ ಸಹಕಾರಿಯಾಗಿರುತ್ತದೆ ಎಂಬುದು ನನ್ನ ಭಾವನೆ. ಅಲಹಾಬಾದ್ ವಿಶ್ವವಿದ್ಯಾನಿಲಯದಲ್ಲಿ ನನ್ನ ಸ್ನೇಹಿತ ಸಿದ್ಧಾರ್ಥ್ ವರದರಾಜ್ ಅವರನ್ನು ಕಟ್ಟಡದಲ್ಲಿ ಬಂಧನಕ್ಕೆ ಒಳಪಡಿಸಿತ್ತು. ಒಬ್ಬರು ಕುಲಪತಿಗಳನ್ನು ಮನಬಂದಂತೆ ಧಳಿಸಲಾಗಿತ್ತು, ಬಿದ್ದ ಹೊಡೆತಗಳನ್ನು ತಾಳಲಾರದೆ ಅವರು ಅಸುನೀಗಿದ್ದರು.. .

ನೀವು ಈ ಹೋರಾಟದಲ್ಲಿ ಒಬ್ಬರೆ ಅಲ್ಲ ಅಥವಾ ದಾಳಿಗಳು ನಿಮ್ಮ ಮೇಲೆ ಮಾತ್ರ ನಡೆಯುತ್ತಿಲ್ಲ. ಇದು ಇವರ ನಿಜವಾದ ಮುಖ. ಈ ದೇಶದ ಪಿತಾಮಹನಾದ ಗಾಂಧಿಯನ್ನು ಕೊಂದು ಭ್ರಾತೃತ್ವದ ಮಾತನಾಡುವ ಇವರು ನಮ್ಮನ್ನು ದೇಶದ್ರೋಹಿಗಳು ಎನ್ನುತ್ತಿದ್ದಾರೆ, ದಯಮಾಡಿ ಸೆರೆಯಿಂದ ನಮ್ಮನ್ನು ಬಿಟ್ಟುಬಿಡಿ. ನಾವು ಎಲ್ಲಾ ಬಿಟ್ಟು ಒಳ್ಳೆಯ ಹುಡುಗರಂತೆ ವರ್ತಿಸುತ್ತೇವೆ ಎಂದು ಬ್ರೀಟಿಷರ ಮುಂದೆ ಬೇಡಿಕೊಂಡ ನಾಯಕರನ್ನು ಹೊಂದಿದ ಸಂಘಟನೆಯವರು ಇಂದು ದೇಶಭಕ್ತಿಯ ಪಾಠ ಮಾಡುತ್ತಿದ್ದಾರೆ . . .

ಇಂದು ನಾವು ಸಾಮಾಜಿಕ, ಧಾರ್ಮಿಕ/ಆರ್ಥಿಕ, ಮಾರುಕಟ್ಟೆ ಮೂಲಭೂತವಾದಿಗಳನ್ನು ಎದುರಿಸಬೇಕಿದೆ. ಒಂದು ಅಂಶ ನಾನು ಕಳೆದ ಕೆಲವು ವರ್ಷಗಳಿಂದ ನೋಡುತ್ತಿದ್ದೇನೆ. ಜೆ,ಎನ್.ಯು ವಿವಿಧತೆಗೆ, ಭಿನ್ನಾಬಿಪ್ರಾಯದ ಚರ್ಚೆಗೆ ಹೆಸರಾಗಿದೆ. ಇಲ್ಲಿರುವ ಎಲ್ಲಾ ಸಂಘಟನೆಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡೆ ಕಳೆದ ಹತ್ತು ವರ್ಷಗಳಿಂದ ಅತ್ಯಂತ ಕೆಟ್ಟ ಆಡಳಿತದ ವಿರುದ್ಧ ತಾವುಗಳು ಮಾಡುತ್ತಿರುವ ಹೋರಾಟ ನಿಜಕ್ಕೂ ಹೆಮ್ಮೆಯ ವಿಷಯ. ದಯಮಾಡಿ ಈ ಒಗ್ಗಟ್ಟನ್ನೂ ಕಳೆದುಕೊಳ್ಳಬೇಡಿ.  ನಿಮ್ಮ ನಿಮ್ಮ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡೆ ಈ ಸಾಮಾಜಿಕ, ಧಾರ್ಮಿಕ/ಆರ್ಥಿಕ, ಮಾರುಕಟ್ಟೆ ಮೂಲಭೂತವಾದಿಗಳನ್ನು ಎದುರಿಸಿ. ನನಗೆ ನಿಜಕ್ಕೂ ನಿಮ್ಮಗಳ ಮೇಲೆ ಹೆಮ್ಮೆ ಇದೆ. . .
ಧನ್ಯವಾದಗಳು . . .

Feb 20, 2016

ಪಿ.ಸಾಯಿನಾಥ್: ನಿಮ್ಮ ಹೋರಾಟ ಭಿನ್ನಾಭಿಪ್ರಾಯಗಳನ್ನೇ ಅಪರಾಧ ಎಂದು ಸಾಧಿಸಲು ಹೊರಟಿರುವ ಶಕ್ತಿಗಳ ವಿರುದ್ಧ...ಭಾಗ 1

ದಿನಾಂಕ-19-02-2016 ರಂದು ಜೆ.ಎನ್.ಯು ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪಿ. ಸಾಯಿನಾಥ್ ಮಾತನಾಡಿದ್ದರು. ಅದರ ಕನ್ನಡ ಭಾವಾನುವಾದದ ಮೊದಲ ಭಾಗ ಇಲ್ಲಿದೆ.
ಮೂಲ ಭಾಷಣ: ಪಿ ಸಾಯಿನಾಥ್ 
ಅನುವಾದ: ಡಾ.ಕಿರಣ್ ಎಂ ಗಾಜನೂರು
ಇದುವರೆಗೂ ನನ್ನನ್ನು ಪರಿಚಯಿಸಿದವರು ನನ್ನ ಕುರಿತು ಬಹಳಷ್ಟು ವಿಷಯಗಳನ್ನು ಹೇಳಿದ್ದಾರೆ; ಅದಕ್ಕೆ, ನಾನು ಸಹ ಒಬ್ಬ ಜೆ.ಎನ್.ಯು ದ ಹಿರಿಯ ವಿದ್ಯಾರ್ಥಿಯಾಗಿದ್ದೇನೆ ಎಂಬ ಹೆಮ್ಮೆಯ ವಿಷಯವನ್ನು ಸೇರಿಸ ಬಯಸುತ್ತೇನೆ. ಆ ನಂತರ ಸುಮಾರು 25 ರಿಂದ 30 ವರ್ಷಗಳ ನಂತರ ಈ ವಿಶ್ವವಿದ್ಯಾನಿಲಯದ ಕಾರ್ಯಕಾರಿ ಮಂಡಳಿಯ ಸದಸ್ಯನಾಗಿ 5 ವರ್ಷಗಳ ಕಾಲ ಸೇವೆ ಸಲ್ಲಿಸಲು ಮತ್ತೆ ಇಲ್ಲಿಗೆ ಬಂದೆ. ಆದರೆ ನನ್ನ ಸೇವೆಯ ಶೇ 80 ರಷ್ಟು ಸಮಯ ಸುಪ್ರೀಂ ಕೋರ್ಟ್ ತೀರ್ಪು, ಸಂಸತ್ತಿನ ಕಾಯ್ದೆ ಎಲ್ಲವನ್ನೂ ಧಿಕ್ಕರಿಸಿ ಹಿಂದುಳಿದ ವರ್ಗಗಳಿಗೆ ನೀಡಬೇಕಿದ್ದ 27ಶೇ ಮೀಸಲಾತಿಯನ್ನು ಅಲ್ಲಗಳೆಯುತ್ತಿದ್ದ ಕೆಲವು ಜನರನ್ನು ಎದುರಿಸುವುದರಲ್ಲಿಯೇ ಕಳೆದು ಹೋಯಿತು. ಅಂತಿಮವಾಗಿ ನಾವು ಗೆದ್ದೆವು, ಅದು ಬೇರೆ ವಿಚಾರ. ನಿಜ ಹೇಳಬೇಕು ಎಂದರೆ ನಾನು ವಿದ್ಯಾರ್ಥಿಯಾಗಿ ಇಲ್ಲಿನ ಗಂಗಾ ವಸತಿ ನಿಲಯದ ಅಧ್ಯಕ್ಷನಾಗಿದ್ದಾಗ ಇದ್ದಷ್ಟು ಸಂತೋಷ ಇಲ್ಲಿನ ಕಾರ್ಯಕಾರಿ ಮಂಡಳಿಯ ಸದಸ್ಯನಾಗಿದ್ದಾಗ ಇರಲಿಲ್ಲ . .

ನಾನು ಇಂದು ದೆಹಲಿಗೆ ನಿಮಗಾಗಿಯೇ ಬಂದಿದ್ದೇನೆ. ನನಗೆ ದೆಹಲಿಯಲ್ಲಿ ಬೇರೆ ಯಾವ ಕೆಲಸವೂ ಇಲ್ಲ. ನಾನು ಏಕೆ ಇಂದು ನಿಮ್ಮ ಎದುರು ನಿಂತಿದ್ದೇನೆ ಎಂದರೆ ಇಂದು ನೀವು ಮಾಡುತ್ತಿರುವ ಹೋರಾಟ ನಿಮ್ಮ ಬೇಡಿಕೆಗಳಿಗೆ ಮಾತ್ರ ಸೀಮಿತವಾಗಿರದೆ ಅದಕ್ಕಿಂತಲೂ ಮೀರಿದ ವಿಶಾಲವಾದ ಸಂಗತಿಯೊಂದರ ಕಡೆಗೆ ನಮ್ಮನ್ನು ಸೆಳೆಯುತ್ತಿದೆ.

ಈ ದೇಶದಲ್ಲಿ ಇಂದು ನಡೆಯುತ್ತಿರುವ ಹೋರಾಟಗಳ ಕುರಿತು ಅದ್ಯತಾ ಪಟ್ಟಿಯೊಂದನ್ನು ತಯಾರು ಮಾಡಿಕೊಂಡರೆ ನಿಮ್ಮ ಹೋರಾಟ 3ನೇ ಸ್ಥಾನದಲ್ಲಿ ಇದೆ. ಆದರೆ ನಿಮಗೆ ನೆನಪಿರಲಿ ಈ ಹೋರಾಟವನ್ನು ಈ ದೇಶದ ಸಾಮಾನ್ಯ, ಬಡವ, ದಲಿತ ಕಳೆದ ಎರಡು ದಶಕಗಳಿಂದ ನಡೆಸುತ್ತಲೇ ಬರುತ್ತಿದ್ದಾರೆ. ಇಂದು ಆ ಹೋರಾಟ ಜೆ.ಎನ್.ಯು ಅಂತಹ ಎಲೈಟ್ ವಿಶ್ವವಿದ್ಯಾನಿಲಯಗಳ ಅಂಗಳವನ್ನು ತಲುಪಿದೆ ಅಷ್ಟೆ! ಇದು ನಿಮಗೆ ಅರ್ಥವಾಗಬೇಕು. ನೀವು ನಿಜವಾಗಿಯೂ ಹೋರಾಡುತ್ತಿರುವುದು ಭಿನ್ನಾಭಿಪ್ರಾಯಗಳನ್ನೆ ಅಪರಾಧ ಎಂದು ಸಾಧಿಸಲು ಹೊರಟಿರುವ ಪ್ರಕ್ರಿಯೆಯ ವಿರುದ್ಧ. ನಮ್ಮ ನಡುವೆ ನಡೆಯುತ್ತಿರುವ ಈ ಸಂಗತಿ ಕೇವಲ ಸಂವಿಧಾನಿಕ ಕಾನೂನಿನ ವಿರೋಧ ಅಥವಾ ಅತಿಕ್ರಮಣದ ಪ್ರಕ್ರಿಯೆ ಮಾತ್ರ ಆಗಿ ನೋಡಲಾಗದು, ಬದಲಾಗಿ ಇದು ನಮ್ಮ ನಡುವಿನ ಅಭಿಪ್ರಾಯ ಭಿನ್ನತೆ ಹೊಂದುವುವವರನ್ನು ಅಪರಾಧಿಗಳೆಂದು ವಿವರಿಸುತ್ತಿರುವ ಮಾದರಿಯ ವಿರುದ್ಧದ ಹೋರಾಟ ಎಂಬ ವಿಶಾಲ ಅರ್ಥದಲ್ಲಿ ನೋಡಬೇಕಿದೆ.

ಇಂದು ನೀವು ಬದುಕುತ್ತಿರುವ ಕಾಲಘಟ್ಟ ಕೇವಲ ಅಸಮಾನತೆಯ ಕಾಲ ಮಾತ್ರವಲ್ಲ ಬದಲಾಗಿ ಕಾರ್ಪೊರೇಟ್ ಶಕ್ತಿಗಳ ದಮನಕಾರಿ ನೀತಿಯನ್ನು ಎದುರಿಸುತ್ತಿದ್ದ ಧ್ವನಿಗಳನ್ನು ಹತ್ತಿಕ್ಕುತ್ತಿರುವ ಕಾಲಘಟ್ಟವೂ ಹೌದು. ಜೀವನದಲ್ಲಿ ಎಂದಿಗೂ ಪೋಲಿಸ್ ಠಾಣೆಯ ಮೆಟ್ಟಿಲು ಹತ್ತಿರದ ಒರಿಸ್ಸಾದ ಕಳಿಂಗಾ ನಗರದಲ್ಲಿನ, ಉತ್ಕಲ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವ ಅದಿವಾಸಿ ಕುಟುಂಬವೊಂದು ಟಾಟಾ ಕಂಪೆನಿಯನ್ನು ತಮ್ಮ ಭೂಮಿಯ ಹಕ್ಕಿಗಾಗಿ ಎದುರಿಸುತ್ತದೆ ಮತ್ತು ಅನ್ನ ನೀಡುವ ಭೂಮಿಯನ್ನು ಕೊಡಲು ನಿರಾಕರಿಸುತ್ತದೆ. ಪರಿಣಾಮ ಇಂದು ಆ ಕುಟುಂಬದ ಮೇಲೆ 91 ಪ್ರಕರಣಗಳು ದಾಖಲಾಗಿವೆ! ಎಷ್ಟು 91 ಪ್ರಕರಣಗಳು!

ಒಡಿಸ್ಸಾದ ಜಗತ್ ಸಿಂಗ್ಪುರ್ ನಲ್ಲಿ ಪೋಸ್ಕೋ ವಿರುದ್ಧದ ಹೋರಾಟದ ನಾಯಕ ಅಭಯ್ ಸಾಹು, ನಿಮಗೆ ನೆನಪಿರಲಿ ಈತ ಹೋರಾಡಿ ಪೋಸ್ಕೋವನ್ನು ಮಣಿಸಿದ್ದಾನೆ; ಪ್ರತಿಬಾರಿ ಅವನನ್ನು ಬೇಟಿ ಮಾಡಿದಾಗ ನಾನು ಎಷ್ಟಾದವು ಎಂದು ಆತನನ್ನು ಕೇಳುತ್ತೇನೆ, ಆತ ತನ್ನ ಮೇಲೆ ದಾಖಲಾಗಿರುವ ಪ್ರಕರಣಗಳ ಮಾಹಿತಿಯನ್ನು ನೀಡುತ್ತಿರುತ್ತಾನೆ ಕಳೆದ ಬಾರಿಯ ಭೇಟಿಯಲ್ಲಿ ಆತನ ಮೇಲೆ 56 ರಿಂದ 58 ಪ್ರಕರಣಗಳು ದಾಖಲಾಗಿದ್ದವು. ಆ ಹಳ್ಳಿಯ ಜನ ಪ್ರಕರಣಗಳಿಗೆ ಹೆದರಿ ಹಳ್ಳಿಯಿಂದ ಹೊರಬರುವುದನ್ನೆ ಬಿಟ್ಟು ಬಿಟ್ಟಿದ್ದಾರೆ ಆ ಕಾರಣಕ್ಕೆ ಅವರುಗಳಿಗೆ ಅಣ್ಣ, ತಮ್ಮ ಬಂಧುಗಳನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ.

ನೀವು ರಿಲಯನ್ಸ್ ಮತ್ತು ಎಸ್.ಇ.ಝೆಡ್ (ವಿಶೇಷ ಆರ್ಥಿಕ ವಲಯ) ಪ್ರಾಜೆಕ್ಟ್ ಗಳನ್ನು ವಿರೋಧಿಸುತ್ತಿರುವ ದೇಶದ ಯಾವುದೇ ಭಾಗವನ್ನು ಸಂದರ್ಶಿಸಿ ಇದು ನಿಮಗೆ ಕಾಣಿಸುತ್ತದೆ. ಇಂದು ಪ್ರಕರಣಗಳನ್ನು ದಾಖಲಿಸಿ ಹೋರಾಟಗಳನ್ನು ಹತ್ತಿಕ್ಕುವುದು ಒಂದು ತಂತ್ರವಾಗಿಬಿಟ್ಟಿದೆ. ಇದು ಇಲ್ಲಿ ಮಾತ್ರ ನಡೆಯುತ್ತಿಲ್ಲ, ಬದಲಾಗಿ ದೇಶದ ಎಲ್ಲಾ ಕಡೆ ನಡೆಯುತ್ತಿದೆ ಉದಾಹರಣೆಗೆ ನೀವು ಒಂದು ಸಂಗತಿಯನ್ನು ಎದುರಿಸಿ ಪ್ರತಿಭಟನೆ ನಡೆಸಿದರೆ ಪೋಲಿಸರು ಕನ್ಹಯ್ಯ ಕುಮಾರ್ ಮತ್ತು 800 ಇತರರು ಎಂದು ಪ್ರಕರಣ ದಾಖಲಿಸಿಬಿಡುತ್ತಾರೆ. ಇದು ಅವರಿಗೆ ಸುತ್ತ ಮುತ್ತಲಿನ ಹಳ್ಳಿಗಳನ್ನು ಮುಂದಿನ ಮೂರು ವರ್ಷಗಳ ಕಾಲ ದಾಳಿ ಮಾಡಲು ಮತ್ತು ಜನರನ್ನು ಹೆದರಿಸಲು ಸಹಕಾರಿಯಾಗುತ್ತದೆ ಎ.ಬಿ.ಸಿ ಮತ್ತು 800 ಇತರರು ಪೋಲಿಸರ ಮೇಲೆ ಹಲ್ಲೆ ನಡೆಸಿದರು ಎಂದು ಪ್ರಕರಣ ದಾಖಲಾಗುತ್ತದೆ.

ಕೋರಾಪುರದ ಜೈಲಿನಲ್ಲಿ ನಾನು ಒಬ್ಬರನ್ನು ಬೇಟಿಯಾಗಲು ಹೋಗಿದ್ದೆ. ವೃತ್ತಿಯಲ್ಲಿ ಅವರು ರಸಾಯನಶಾಸ್ತ್ರದ ಪ್ರಾಧ್ಯಾಪಕರು. ಆದರೆ ನಮಗೆ ಅವರನ್ನು ಬೇಟಿಯಾಗಲು ಸಾಧ್ಯವಾಗಲಿಲ್ಲ. ಆದರೆ ಅವರ ವಕೀಲರು ನಮ್ಮೊಡನೆ ಮಾತನಾಡಿದರು. ನಿಮಗೆ ಕೇಳಿ ಆಶ್ಚರ್ಯವಾಗುತ್ತದೆ, ಒಬ್ಬ ರಸಾಯನ ಶಾಸ್ತ್ರದ ಪ್ರಾಧ್ಯಾಪಕರ ಮೇಲೆ ಎಮ್ಮೆ ಕದ್ದ ಆರೋಪ ಹೋರಿಸಿ ಪ್ರಕರಣ ದಾಖಲಿಸಲಾಗಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಈ ರೀತಿಯ ಪ್ರಕರಣಗಳು ನಮ್ಮಗಳ ಮೇಲೆಯೂ ದಾಖಲಾಗಿವೆ. ಇಲ್ಲಿ ಆ ಪ್ರಾಧ್ಯಾಪಕರನ್ನು ಮತ್ತು ಎಮ್ಮೆಯನ್ನು ನಮಗೆ ಭೇಟಿಯಾಗಲು ಸಾಧ್ಯವಾಗಲಿಲ್ಲ ಅದು ಬೇರೆ ವಿಚಾರ.

ಸಿತಾಕುಲಂ ಜಿಲ್ಲೆಯಲ್ಲಿನ ಪೋರ್ಟ್ ವಿರುಧ್ಧದ ಹೋರಾಟದಲ್ಲಿ 78 ವರ್ಷದ ಮಹಿಳೆಯ ಮೇಲೆ, ಈ ವರ್ಷ ಆಕೆಗೆ 80 ವರ್ಷ ತುಂಬುತ್ತದೆ. ಆಕೆಯ ಮೇಲೆ ಪೋಲಿಸರನ್ನು ಕೊಲ್ಲುವುದಕ್ಕೆ ಪ್ರಯತ್ನಿಸಿದ್ದು ಸೇರಿದಂತೆ 23 ಪ್ರಕರಣಗಳು ದಾಖಲಾಗಿವೆ. ಆಕೆ ಸುಮಾರು ಐದು ಅಡಿ ಇರಬಹುದು. 35 ಕೆ.ಜಿ ತೂಕವನ್ನು ಹೊಂದಿರಬಹದು. ಆಕೆ ದಾಳಿ ಮಾಡಲು ಬಂದ 20 ರಿಂದ 23 ಜನ ಪೋಲಿಸರನ್ನು ಕೊಲ್ಲಲು ಯತ್ನಿಸಿದಳು ಎಂಬ ಆರೋಪವನ್ನು ಹೊರಿಸಲಾಗಿದೆ. ಈ ಪ್ರವೃತ್ತಿಯೀಗ ಎಲೈಟ್ ವಿಶ್ವವಿದ್ಯಾನಿಲಯವನ್ನು ತಲುಪಿರುವುದನ್ನು ಸ್ವಾಗತಿಸಬೇಕಿದೆ ಮತ್ತು ಇಂತಹದರ ವಿರುಧ್ಧ ನಾವು ಪ್ರತಿಭಟಿಸಬೇಕಿದೆ.

ನಾನು ನಾಳೆಗೆ ಎಲ್ಲವೂ ಸರಿಹೋಗಿಬಿಡುತ್ತದೆ ಎಂದು ಹೇಳುತ್ತಿಲ್ಲ. ನನಗೆ ಅನ್ನಿಸುವಂತೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಭೀಕರವಾಗಲಿದೆ. ಆದರೆ ಭವಿಷ್ಯದಲ್ಲಿ ಖಂಡಿತ ಪರಿಸ್ಥಿತಿ ಉತ್ತಮಗೊಳ್ಳುತ್ತದೆ, ಆದರೆ ಅದಕ್ಕೂ ಮುಂಚೆ ಅತ್ಯಂತ ದುರ್ಗಮ ದಾರಿಯನ್ನು ಪರಿಸ್ಥಿತಿಯನ್ನು ನಾವು ನೋಡಬೇಕಿದೆ. ಆದರೆ ಭವಿಷ್ಯ ಹೇಗೆ ಬದಲಾಗುತ್ತದೆ ಎಂಬುದು ನಾವು ಮತ್ತು ನಮ್ಮ ಕಾನೂನು ಹೇಗೆ ಕೆಲಸ ಮಾಡುತ್ತೇವೆ ಎಂಬುದು ನಿರ್ಧರಿಸಲಿದೆ. ನನಗೆ ಜೆ.ಎನ್.ಯು ವಿಧ್ಯಾರ್ಥಿ ಸಮುದಾಯದಲ್ಲಿ ಅಪಾರವಾದ ನಂಬಿಕೆಯಿದೆ. ಆ ಕಾರಣಕ್ಕೆ ನಾನು ನಿಮ್ಮೊಳಗೆ ಒಬ್ಬನಾಗಿ ಇಂದು ಇಲ್ಲಿ ನಿಂತಿದ್ದೇನೆ ಈ ಹೋರಾಟದಲ್ಲಿ ನೀವು ಗೆದ್ದೇ ಗೆಲ್ಲುತ್ತೀರಾ ಎಂಬ ನಂಬಿಕೆ ನನಗಿದೆ.

ನೀವು ಇಂದು ಈ ದೇಶದ ಎಂದೂ ಕಂಡಿರದ ಅಸಮಾನತೆಯ ಕಾಲದಲ್ಲಿ ನಿಂತಿದ್ದೀರಾ ಜೊತೆಗೆ ಹೆಚ್ಚುತ್ತಿರುವ ಮೂಲಭೂತವಾದಿ ಶಕ್ತಿಗಳು ನಮ್ಮ ಮುಂದಿವೆ. ನನ್ನ ದೃಷ್ಟಿಯಲ್ಲಿ ಇಂದು ಭಾರತ ಸಾಮಾಜಿಕ ಮತ್ತು ಧಾರ್ಮಿಕ ಮೂಲಭೂತವಾದಿಗಳು ಮಾರುಕಟ್ಟೆ ಶಕ್ತಿಗಳೊಂದಿಗೆ ಸೇರಿ ಮಾಡಿಕೊಂಡಿರುವ ಮೈತ್ರಿಕೂಟದಿಂದ ಆಳಲ್ಪಡುತ್ತಿದೆ, ಇದು ನನ್ನ ಅಭಿಪ್ರಾಯ ಆಗಿದೆ ಈ ಕುರಿತ ಚರ್ಚೆಗೆ ನಾನು ಸಿದ್ಧನಿದ್ದೇನೆ. ಆ ಎರಡು ಶಕ್ತಿಗಳು (ಸಾಮಾಜಿಕ ಮತ್ತು ಧಾರ್ಮಿಕ ಮೂಲಭೂತವಾದಿಗಳು ಮತ್ತು ಮಾರುಕಟ್ಟೆ ಶಕ್ತಿಗಳು) ಪರಸ್ಪರ ಹೊಂದಿಕೊಂಡೆ ಸಾಗುವ ಅನಿವಾರ್ಯತೆಯನ್ನು ಹೊಂದಿವೆ. ತುಂಬಾ ಸಾರಿ ಬಹಳ ದೊಡ್ಡ ಸಂಖ್ಯೆಯ ಜನರು ಮಾರುಕಟ್ಟೆ ಮೂಲಭೂತವಾದಿಗಳು ಮತ್ತು ಧಾರ್ಮಿಕ ಮೂಲಭೂತವಾದಿಗಳಾಗಿರುವುದನ್ನು ನಾವು ಕಾಣಬಹುದಾಗಿದೆ . . .

ಮೊದಲು ನಾವು ಮಾರುಕಟ್ಟೆ ಮೂಲಭೂತವಾದಿಗಳು, ಯಾವ ಧಾರ್ಮಿಕ ಮೂಲಭೂತವಾದಿಗಳಿಂದ ಕಡಿಮೆ ಇಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಈ ಎರಡು ಶಕ್ತಿಗಳು ತಮ್ಮದೇ ಆದ ಪವಿತ್ರ ಗ್ರಂಥಗಳು, ಪುರಾಣಗಳು, ದೈವವಾಣಿಗಳು ಮತ್ತು ಪಂಡಿತರನ್ನು ಹೊಂದಿವೆ. ಮಾರುಕಟ್ಟೆ ಮೂಲಭೂತವಾದಿಗಳು, ಧಾರ್ಮಿಕ ಮೂಲಭೂತವಾದಿಗಳಿಗಿಂತ ಹೆಚ್ಚು ಟಿ.ವಿ ವಕ್ತಾರರನ್ನು ಹೊಂದಿದ್ದಾರೆ ಅವರು ಪ್ರತಿದಿನ ಸಂಜೆ ಎಲ್ಲಾ ಚಾನೆಲ್ ಗಳಲ್ಲಿಯೂ ಕಾಣಲು ಸಿಗುತ್ತಾರೆ. . .

ಅಭಿವೃದ್ಧಿ, ಆಯ್ಕೆ ಎಂಬ ಮಾರುಕಟ್ಟೆ ಮೂಲಭೂತವಾದಿಗಳ ದೈವವಾಣಿಗಳು ಜೆ.ಎನ್.ಯು ವಿಧ್ಯಾರ್ಥಿಗಳಾದ ನಿಮಗೆ ಗೊತ್ತಿರುತ್ತವೆ. ಮಾರುಕಟ್ಟೆ ನಿಜಕ್ಕೂ ನಮಗೆ ಆಯ್ಕೆಯ ಸ್ವಾತಂತ್ರ‍್ಯ ನೀಡುತ್ತದೆಯೇ? ಈ ಕುರಿತು ವಿಸ್ತೃತ ಚರ್ಚೆಗಳು ಆಗುತ್ತಿರುತ್ತವೆ, ಇತ್ತೀಚೆಗೆ ವಾರ ಅಥವಾ ಹತ್ತು ದಿನಗಳ ಹಿಂದೆ ನಮ್ಮ ನಡುವಿನ ಇಬ್ಬರು ಮಾರುಕಟ್ಟೆ ಮೂಲಭೂತವಾದಿಗಳು ಒಂದು ಟಿ.ವಿ ವಾಹಿನಿಯಲ್ಲಿ ಥಾಮೇಸ್ ಪೀಕೆಟಿ ಅವರೊಂದಿಗೆ ಚರ್ಚಿಸುತ್ತಾ ಅಸಮಾನತೆ ಎಂಬುದು ಅಂಥ ತಲೆಕೆಡಿಸಿಕೊಳ್ಳಬೇಕಾದ ಸಂಗತಿಯಲ್ಲ ಮತ್ತು ಜನರ ಸಂಪತ್ತು ಮುಳುಗುತ್ತಿರುವುದು ದೊಡ್ಡ ವಿಷಯವಾಗಬೇಕಿಲ್ಲ ಎಂದು ವಾದಿಸುತ್ತಿದ್ದರು. ಹೀಗೆ ವಾದಿಸುತ್ತಿದ್ದವರು ವಿವೇಕ್ ಡಿಬ್ರಾಯ್ ಮತ್ತು ನಮ್ಮ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ ಸುಬ್ರಮ್ಹಣ್ಯ. ನನಗೆ ನೀತಿ ಅಯೋಗದ ವಿವೇಕ್ ಡಿಬ್ರಾಯ್ ಅವರೊಂದಿಗೆ ಯಾವುದೇ ಸಮಸ್ಯೆಗಳಿಲ್ಲ, ತಮಿಳುನಾಡಿನ ನನ್ನ ಸ್ನೇಹಿತರು “ನೀತಿ ಅಯೋಗ”ವನ್ನು “ನೀತಿ ಅಯ್ಯೂ” ಎಂದು ಕರೆಯುತ್ತಾರೆ. ಇವರು ಹೇಳುತ್ತಿದ್ದರು ಇಂದು ಮಾರುಕಟ್ಟೆಯಲ್ಲಿ ಹೂಡಿದ ಹಣವನ್ನು ಜನರು ಕಳೆದುಕೊಳ್ಳುತ್ತಿದ್ದರೆ ಅದು ಅವರ ವ್ಯವಹಾರ, ಅದಕ್ಕೂ ನಮಗೂ ಸಂಬಂಧವಿಲ್ಲ ಎನ್ನುತ್ತಿದ್ದಂತೆ ಅರವಿಂದ ಸುಬ್ರಮ್ಹಣ್ಯ ಅವರು ‘ವಿವೇಕ್ ಸರಿಯಾಗಿ ಹೇಳುತ್ತಿದ್ದಾರೆ’ ಎನ್ನುತ್ತಿದ್ದರು. ಅವರ ಇಬ್ಬರ ಅಲೋಚನೆಗಳು ಒಂದೆ ಆಗಿವೆ . . .

ನಾವು ಮಾರುಕಟ್ಟೆ ಮೂಲಭೂತವಾದದ ಕುರಿತು ನಮ್ಮೆದುರು ಬರುತ್ತಿರುವ ಅಸಮಾನತೆಯ ಮಾದರಿಗಳ ಕುರಿತು ಮಾತನಾಡುವಾಗ ಯುಪಿಎ ಮತ್ತು ಎನ್.ಡಿ.ಎ ನಿಲುವುಗಳಲ್ಲಿ ಅಂತಹ ಅಂತರ ಕಾಣಲಾಗುವುದಿಲ್ಲ. ಈ ಸಂದರ್ಭದಲ್ಲಿ ವೃತ್ತಿಯಲ್ಲಿ ನನ್ನ ಸಹೋದ್ಯೋಗಿಯಾದ ಅರುಣ್ ಶೌರಿ ಅವರ ಮಾತೊಂದು ನೆನಪಿಸಿಕೊಳ್ಳಬೇಕು. ಅವರು ಬಿ.ಜೆ.ಪಿ ಎಂದರೆ ಕಾಂಗ್ರೆಸ್+ಗೋವು ಎಂಬ ವಿಮರ್ಶೆಯನ್ನು ಅರುಣ್ ಶೌರಿ ಮಾಡಿದ್ದರು. ಅವರ ಪ್ರಕಾರ ದೇಶದ ನೀತಿಗಳ ರಚನೆಯ ವಿಷಯದಲ್ಲಿ ಬಿ.ಜೆ.ಪಿ ಎಂದರೆ ದನದ ವಿಷ್ಯವನ್ನು ಸೇರಿಸಿಕೊಂಡ ಮತ್ತೊಂದು ಕಾಂಗ್ರೆಸ್ ಅಷ್ಟೆ ಎಂದುಬಿಟ್ಟಿದ್ದರು. . . .

ನಾವು ಮಹಾರಾಷ್ಟ್ರಕ್ಕೆ ಬಂದರೆ ನೀವು ಪತ್ರಿಕೆಗಳಲ್ಲಿ ನೋಡುತ್ತಲೇ ಇರುತ್ತೀರ, ಅಲ್ಲಿ ಗೋಮಾಂಸ ಸೇವನೆಯನ್ನು ನಿಷೇಧಿಸಲಾಗಿದೆ. ಈ ನಿಷೇಧದ ಹಿಂದಿರುವ ಬಹಳ ಪ್ರಮುಖವಾದ ನಂಬಿಕೆ ಮೂಲಭೂತವಾದಿಗಳು ಗೋವನ್ನು ಪವಿತ್ರ ಎಂದು ಭಾವಿಸುತ್ತಾರೆ ಎಂಬುದು. ಉಳಿದೆಡೆಗಳಲ್ಲಿಯೂ ಗೋವನ್ನು ಬಹಳ ಪವಿತ್ರ ಎಂದು ಗುರುತಿಸಲಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ಕೃಷಿ ಪ್ರಧಾನ ಸಮುದಾಯಗಳನ್ನು ಹೊಂದಿರುವ ಭಾರತದಲ್ಲಿ ಗೋವು ಕೃಷಿ ಆರ್ಥಿಕತೆಯಲ್ಲಿ ಮಹತ್ವದ ಸ್ಥಾನ ಹೊಂದಿದೆ. ಅದರಲ್ಲಿ ಯಾವುದೇ ಸಂಶಯವಿಲ್ಲ. . .

ಅದರೆ ಇಂದು ಜಾರಿಯಲ್ಲಿರುವ ಗೋವುಗಳನ್ನು ಮಾಂಸಕ್ಕಾಗಿ ಕೊಲ್ಲುವುದು ಮತ್ತು ಮಾರಾಟ ಮಾಡುವುದರ ಮೇಲಿನ ನಿಷೇಧ (ಈ ನಿಷೇಧ ಎಮ್ಮೆ ಕೋಣಗಳ ಮೇಲೂ ಹೆರಲಾಗುತ್ತಿದೆ) ಮೂಲಭೂತವಾದಿಗಳ ಅಲೋಚನೆಯಾಗಿದೆ. ಈ ಕುರಿತಂತೆ ನಾವು ಸ್ಪಲ್ಪ ತಿಳಿದುಕೊಳ್ಳಬೇಕಿದೆ. ನೀವು ನಮ್ಮ ಇತ್ತೀಚಿನ ಜನಸಂಖ್ಯೆ ವರದಿಯ ಅಂಕಿ-ಅಂಶಗಳನ್ನು ನೋಡಿದರೆ ಐಡಿಯಾಲಜಿಕಲಿ ಮತ್ತು ಧಾರ್ಮಿಕವಾಗಿ ಈ ದೇಶದ ಶೇ 42ರಷ್ಟು ಜನಸಂಖ್ಯೆಗೆ ಗೋ ಮಾಂಸ ಸೇವನೆಗೆ ಯಾವುದೇ ತಕರಾರು ಇಲ್ಲ. ಅದರಾಚೆಗೆ ಹಿಂದೂ ಎಂದು ಕರೆಯಲ್ಪಡಬಹುದಾದ ಬಹುದೊಡ್ಡ ಜನಸಂಖ್ಯೆಯ ಬಹಳಷ್ಟು ಮಂದಿಗೆ ಗೋ ಮಾಂಸ ಒಂದು ಸಮಸ್ಯೆಯೇ ಅಲ್ಲ! ಕೇರಳದಲ್ಲಿ ಬಿ.ಜೆ.ಪಿಯ ನಾಯಕರು ಗೋ ಮಾಂಸ ತಿನ್ನುತ್ತಿರುವ ವೀಡಿಯೋ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದೆ. ಅದಕ್ಕೆ ಪ್ರತಿಯಾಗಿ ನಾನು ಗೋ ಮಾಂಸ ತಿನ್ನುತ್ತಿರುವುದು ಮೂರು ವರ್ಷಗಳ ಹಿಂದೆ! ಇಲ್ಲ ಇಲ್ಲ ಇದು ಗೋ ಮಾಂಸ ಅಲ್ಲ ಇದು ಈರುಳ್ಳಿ ಪಕೋಡಾ! ಎಂಬ ಕೆಲವು ವೀಡಿಯೋಗಳನ್ನು ಹರಿಬಿಡಲಾಗಿದೆ. ಆದರೆ ಈ ಸಂಗತಿಯಿಂದ ನಾವು ಅರ್ಥಮಾಡಿಕೊಳ್ಳಬಹುದಾದ ವಿಷಯ ಕೇರಳದಲ್ಲಿ ಬಹುಪಾಲು ಜನ ಪಕ್ಷಾತೀತವಾಗಿ ಗೋ ಮಾಂಸ ಸೇವಿಸುತ್ತಾರೆ ಎಂಬುದು . . . .

ಇನ್ನು ಮಹಾರಾಷ್ಟ್ರಕ್ಕೆ ಬರುವುದಾದರೆ ಅಲ್ಲಿ ಗೋ ಮಾಂಸ ನಿಷೇಧಿಸಿದ ಮೊದಲ ವಾರ ಭಜರಂಗ ದಳದ ಹುಡುಗರು ಎಲ್ಲಾ ರಸ್ತೆಗಳಲ್ಲಿ ನಿಂತು ವಾಹನಗಳಲ್ಲಿ ಯಾವ ಮಾಂಸ ಇದೆ ಎಂದು ಪರಿಶೀಲಿಸುತ್ತಿದ್ದರಿಂದ ಮುಂಬಯಿಯ ಮೃಗಾಲಯಗಳಲ್ಲಿನ ಹುಲಿ ಮತ್ತು ಸಿಂಹಗಳಿಗೆ ಚಿಕನ್ ಸರಬರಾಜು ಮಾಡಲಾಯಿತು. ಇಲ್ಲಿ ಇನ್ನೊಂದು ವಿಷಯವಿದೆ. ಈ ಬಿ.ಜೆ.ಪಿ ಭಜರಂಗದಳ, ವಿಶ್ವಹಿಂದೂ ಪರಿಷದ್, ಆರ್.ಎಸ್.ಎಸ್ ಎಲ್ಲವೂ ಬೇರೆ ಬೇರೆ ಸಂಘಟನೆಗಳು ಎಂಬ ಒಂದು ವಾದವನ್ನು ಮುಂದಿಡಲಾಗುತ್ತದೆ. ನಮ್ಮ ಸೆಕ್ಯಲಾರ್ ಮಿತ್ರರು ಇಲ್ಲ ಇಲ್ಲ ಅವೆಲ್ಲವೂ ಒಂದೆ ಎಂದು ಗಟ್ಟಿಯಾಗಿ ಹೇಳುತ್ತಿರುತ್ತಾರೆ. ಆದರೆ ವಾಸ್ತವದಲ್ಲಿ ಈ ಎಲ್ಲಾ ಸಂಘಟನೆಗಳು ಒಂದೇ ಅಲ್ಲ ಬದಲಾಗಿ ಬೇರೆ ಬೇರೆ, ಈ ಸತ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಇವರೆಲ್ಲಾ ಯಾರು ಎಂದು ನಾವು ನೋಡಿದರೆ ಬಿ.ಜೆ.ಪಿ ರಾಜಕೀಯ ರಂಗದಲ್ಲಿನ ಆರ್.ಎಸ್.ಎಸ್ ಆಗಿದ್ದರೆ, ವಿಶ್ವಹಿಂದೂ ಪರಿಷತ್ ಹುಡುಗರ ತಲೆಯಲ್ಲಿ ಧಾರ್ಮಿಕ ನಶೆಯನ್ನು ತುಂಬುವಲ್ಲಿ ಬಿ.ಜೆ.ಪಿ ತರ ಕೆಲಸ ಮಾಡುತ್ತದೆ, ಇನ್ನು ಭಜರಂಗದಳ ಕಟ್ಟಡಗಳನ್ನು, ಬದುಕುಗಳನ್ನು ಒಡೆಯುವುದರಲ್ಲಿ ವಿಶ್ವಹಿಂದೂ ಪರಿಷದ್ ನಂತೆ ಕೆಲಸ ಮಾಡುತ್ತದೆ. ಆದ್ದರಿಂದ ನಾವು ಇವುಗಳ ನಡುವಿನ ಈ ವ್ಯತ್ಯಾಸವನ್ನು ಗುರುತಿಸಬೇಕಿದೆ. . ..

ಇನ್ನು ನಾವು ಹುಲಿ ಸಿಂಹಗಳಿಗೆ ಚಿಕನ್ ತಿನ್ನಿಸಿದ ಘಟನೆಗೆ ಮರಳುವುದಾದರೆ ಮುಂಬಯಿಯ ಮೃಗಾಲಯದಲ್ಲಿ ಒಂದು ವಾರಗಳ ಕಾಲ ಹುಲಿ ಸಿಂಹಗಳಿಗೆ ಚಿಕನ್ ತಿನ್ನಿಸಿದ ಪರಿಣಾಮ ಸಮಸ್ಯೆಯಾಗಿ ಇಡಿ ಮಹಾರಾಷ್ಟ್ರದಲ್ಲಿನ ಪಶುಗಳ ಮಾರುಕಟ್ಟೆ ಕುಸಿದು ಬಿತ್ತು. ಹಿಂದೂ, ಮುಸ್ಲಿಂ,ಕ್ರಿಶ್ಚಿಯನ್ ಮತ್ತು ದಲಿತರು ಸೇರಿದಂತೆ ಸಾವಿರ ಸಾವಿರ ಜನ ತೊಂದರೆಗೆ ಅತಂಕಕ್ಕೆ ಒಳಗಾದರು. ಇವರ‍್ಯಾರಿಗೂ ಗ್ರಾಮೀಣ ಆರ್ಥಿಕತೆಯಲ್ಲಿ ಗೋವಿನ ಪಾತ್ರದ ಕುರಿತ ಕೊಂಚವೂ ಅರಿವಿರಲಿಲ್ಲ. ಹಾಗೆ ನೋಡಿದರೆ ಗ್ರಾಮೀಣ ಭಾರತದ ಆರ್ಥಿಕತೆಯಲ್ಲಿ ಗೋವು ಮಹತ್ವದ ಪಾತ್ರ ವಹಿಸುತ್ತದೆ. . .

ಇದನ್ನೆಲ್ಲಾ ಆಧರಿಸಿ ಮೊನ್ನೆ ಟೈಮ್ಸ್ ಆಫ್ ಇಂಡಿಯಾ ಕೊಲ್ಲಾಪುರದ ಚಪ್ಪಲಿ ಉದ್ಯಮ ಕುಸಿದು ಬಿದ್ದಿರುವ ಕುರಿತು ಬಹಳ ಅಧ್ಬುತವಾದ ವರದಿಗಳನ್ನು ಪ್ರಕಟಿಸಿತು. ಇದು ಒಂದು ಅರ್ಥದಲ್ಲಿ ಮೇಕ್ ಇನ್ ಇಂಡಿಯಾ, ಬ್ರೇಕ್ ಇನ್ ಇಂಡಿಯಾ ಎನ್ನುವಂತಿದೆ. ನಿಮಗೆ ಗೊತ್ತಿರಲಿ ಕೊಲ್ಲಾಪುರದ ಚಪ್ಪಲಿಗಳು ಅಂತರಾಷ್ಟ್ರೀಯ ಬ್ರಾಂಡ್ ಹೊಂದಿವೆ, ಜಾಗತೀಕರಣ, ಉದಾರಿಕರಣಕ್ಕೂ ಪೂರ್ವದಲ್ಲಿಯೇ ಜಗತ್ತಿನ ಎಲ್ಲಾ ಭಾಗಗಳಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡಿದ ಹಿರಿಮೆ ಕೊಲ್ಲಾಪುರದ ಚಪ್ಪಲಿ ಉದ್ಯಮಕ್ಕೆ ಇತ್ತು. ಆದರೆ ಇಂದು ಪ್ರಾಣಿ ಮತ್ತು ಗೋ ಹತ್ಯೆ ನಿಷೇಧದಿಂದ ಅ ನಿಷೇಧವನ್ನು ಎಮ್ಮೆ ಮತ್ತು ಕೋಣಗಳಿಗೂ ವಿಸ್ತರಿಸಿರುವುದರಿಂದ ಕೊಲ್ಲಾಪುರದ ಚಪ್ಪಲಿ ಉದ್ಯಮ ನೆಲ ಕಚ್ಚಿದೆ. ನಿಜವಾಗಿಯೂ ಕೊಲ್ಲಾಪುರದ ಚಪ್ಪಲಿ ಉದ್ಯಮವನ್ನು ನಡೆಸುತ್ತಿದ್ದವರು ಮುಸ್ಲಿಂ ಜನರಲ್ಲ ಬದಲಾಗಿ ದಲಿತರು. ಸರ್ಕಾರದ ಈ ಕ್ರಮದಿಂದ ಒಂದು ಕಡೆ ಮುಸ್ಲಿಮರು ತೊಂದರೆಗೆ ಒಳಗಾದರೆ ಮತ್ತೊಂದು ಕಡೆ ದಲಿತರನ್ನು ತುಳಿದು ಹಾಕಲಾಗಿದೆ. ಅದರ ಜೊತೆಗೆ ಪಶುಗಳ ಉದ್ಯಮಗಳಲ್ಲಿ ತೊಡಗಿದ್ದ ಮರಾಠ ಇತ್ಯಾದಿ ಹಿಂದುಳಿದ ವರ್ಗಗಳನ್ನು ನಾಶಮಾಡಲಾಗಿದೆ. ಒಂದು ಗುಂಪಿನ ದಾಳಿಗೆ/ಕೆಲಸಕ್ಕೆ ಇಂದು ನಾವು ಎಲ್ಲಾ ಕಡೆಗಳಿಂದ ಬಂಧನಕ್ಕೆ ಒಳಗಾಗುತ್ತಿದ್ದೇವೆ. . .

ನಾನು ಇಲ್ಲಿನ ವಿಷಯಕ್ಕೆ ಮರಳುವುದಾದರೆ ಕಳೆದ ಕೆಲ ದಿನಗಳಿಂದ ಕೆಲ ಸ್ನೇಹಿತರು ನನಗೆ ಕರೆ ಮಾಡಿ ನಿಜಕ್ಕೂ ಈ ಸಂಗತಿಗಳು ಘಟಿಸುತ್ತಿವೆಯೇ ಎಂದು ಕೇಳುತ್ತಿದ್ದಾರೆ ನಾವು ಅವರಿಗೆ ಬನ್ನಿ ಗೊತ್ತಾಗುತ್ತದೆ ಇವು ನಮ್ಮ ನಡುವೆ ಘಟಿಸುತ್ತಿರುವ ಸಂಗತಿಗಳೆಂದು ಹೇಳುತ್ತಿದ್ದೇನೆ. . .

ನಾನು ಇದನ್ನು ಹೀಗೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಇಂದು ಜೆ.ಎನ್.ಯು ಮತ್ತು ದೇಶದ ಇತರ ಕಡೆಗಳಲ್ಲಿ ನಡೆಯುತ್ತಿರುವ ಹೋರಾಟಗಳಿಂದ ಕೆಲವು ಜನ ಅತಂಕಕ್ಕೆ, ಬೇಸರಕ್ಕೆ ಒಳಗಾದಂತೆ ಕಾಣುತ್ತಾರೆ. ಆದರೆ ಈ ಘಟನೆಗಳು ಅವರಿಗೆ ಆಶ್ಚರ್ಯ ಉಂಟು ಮಾಡಿಲ್ಲ. ಅವರಿಗೆ ಇಂತಹ ಘಟನೆಗಳಿಂದ ಅತಂಕವಾಗುತ್ತದೆ. ಆದರೆ ಆಶ್ಚರ್ಯಕ್ಕೆ ಆಗುವುದಿಲ್ಲ. ಇದನ್ನು ಅರ್ಥಮಾಡಿಕೊಳ್ಳಲು ನಾವು ಸಮಕಾಲೀನ ಭಾರತದ ರಾಜಕೀಯದಲ್ಲಿ ಆದ ಬದಲಾವಣೆಗಳನ್ನು ಗುರುತಿಸಬೇಕು. ದಶಕಗಳ ಕಾಲ ಭಾರತದ ರಾಜಕಾರಣದಲ್ಲಿ ಅನೇಕ ಬದಲಾವಣೆಗಳು ಆಗಿವೆ. ಆದರೆ ಇಂದು ಈ ದೇಶದ ರಾಜಕಾರಣದಲ್ಲಿ ಆಗಿರುವ ಬಹಳ ಬದಲಾವಣೆಯ ಕುರಿತು ನಾವು ಯೋಚಿಸಬೇಕು. ಚಿಂತಿಸಬೇಕು. ಆ ಬದಲಾವಣೆ ಒಬ್ಬ ಸಕ್ರಿಯ ಆರ್.ಎಸ್.ಎಸ್. ಪ್ರಚಾರಕ ಬಹುಮತ ಪಡೆದು ಪ್ರಧಾನಿಯಾಗಿರುವುದು. ಇದು ಭಾರತದ ರಾಜಕಾರಣದಲ್ಲಿ ಆಗಿರುವ ಬಹಳ ದೊಡ್ಡ ಬದಲಾವಣೆ. ಈ ಹಿಂದೆಯೂ ಆರ್.ಎಸ್.ಎಸ್. ಪ್ರಚಾರಕರು ನಮ್ಮ ನಾಯಕರಾಗಿದ್ದಾರೆ, 40 ವರ್ಷಗಳ ಕಾಲ ಪ್ರಚಾರಕರಾಗಿದ್ದವರು. ಆದರೆ ಅವರು ಬಹುಮತವಿಲ್ಲದ ಸರ್ಕಾರವನ್ನು ನಡೆಸುತ್ತಿದ್ದರು. ಆ ಕಾರಣಕ್ಕೆ ಅವರು ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಕುರಿತು ಕೆಲವು ಮಿತಿಗಳು ಇದ್ದವು. ಆ ಕಾರಣಕ್ಕೆ ಅವರು “ಸಮ್ಮಿಶ್ರ ಸರ್ಕಾರದ ಧರ್ಮ” ಇತ್ಯಾದಿ ಮಾತುಗಳನ್ನು ಆಡುತ್ತಿದ್ದರು. ಆದರೆ ಇಂದು ನಾವು ಬಹುಮತ ಪಡೆದಿರುವ ಒಬ್ಬ ಸಂಘದ ಪ್ರಚಾರಕ ಪ್ರಧಾನಿಯಾಗಿರುವುದನ್ನು ನೋಡುತ್ತಿದ್ದೇವೆ. ಈ ಅಂಶ ಅವರನ್ನು ನಿಜವಾಗಿಯೂ ತಾವು ಏನು ಎಂಬುದನ್ನು ವ್ಯಕ್ತಪಡಿಸಲು ವಾತಾವರಣ ಸೃಷ್ಟಿಮಾಡಿಕೊಟ್ಟಿದೆ. ಅದನ್ನೆ ಅವರು ಮಾಡುತ್ತಿದ್ದಾರೆ ಮತ್ತು ಮಾಡುತ್ತಾರೆ ಕೂಡಾ. ಇದರಿಂದ ನಾವು ಈ ಕುರಿತು ಅತಂಕಕ್ಕೆ ಒಳಗಾಗಿ ಚರ್ಚೆ ಮಾಡಬಹುದೇ ಹೊರತು ಆಶ್ಚರ್ಯಕ್ಕೆ ಒಳಗಾಗುಗುವ ಅಗತ್ಯ ಇಲ್ಲ. ಏಕೆಂದರೆ ಇದು ನೀರಿಕ್ಷಿತ. . .

ನಾವು ಇಂದು ಎಲ್ಲಾ ಕಡೆಗಳಿಂದ ನಂಬಲಾರದಂತಹ ಅಸಮಾನತೆ ಇರುವ ದೇಶದಲ್ಲಿ ಬದುಕುತ್ತಿದ್ದೇವೆ. ನಿಮ್ಮ ನೀತಿ ಅಯೋಗದ ಜನ, ನಿಮ್ಮ ಆರ್ಥಿಕ ಸಲಹೆಗಾರರು ಈ ಹೆಚ್ಚುತ್ತಿರುವ ಅಸಮಾನತೆಯನ್ನು ದೊಡ್ಡ ಸಮಸ್ಯೆಯಾಗಿ ಪರಿಗಣಿಸುವುದೇ ಇಲ್ಲ ಬದಲಾಗಿ, ಮಾರುಕಟ್ಟೆ ಭಾರತವನ್ನು ಬಿಡುಗಡೆಗೊಳಿಸಿದೆ, ಅಲ್ಪ ಪ್ರಮಾಣದ ಅಸಮಾನತೆ ಇರಬೇಕು, ಇದರಿಂದ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ ಎಂಬಿತ್ಯಾದಿ ಮಾತುಗಳನ್ನು ಆಡುತ್ತಿದ್ದಾರೆ . .

ಇಂದು ಈ ದೇಶದಲ್ಲಿ 2011ರ ಜನಗಣತಿಯ ಅಂಕಿ-ಅಂಶಗಳನ್ನು ಮುಂದಿರಿಸಿ ಕಳೆದ ಇಪ್ಪತ್ತನಾಲ್ಕು ತಿಂಗಳಲ್ಲಿ ಮಹತ್ವ ಎನ್ನಿಸುವ ನಾಲ್ಕರಿಂದ ಐದು ಅಂಕಿ-ಆಂಶ ಮತ್ತು ಮಾಹಿತಿಗಳ ವರದಿಗಳು ಬಂದಿವೆ. ಅವುಗಳಲ್ಲಿ ಬಹಳ ಪ್ರಮುಖವಾದವು ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಕಿ-ಅಂಶ. ವಾಸ್ತವದಲ್ಲಿ ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಮಾಹಿತಿ ಬಿಡುಗಡೆಗೊಳಿಸಿಲ್ಲ. ಆ ಕಾರಣಕ್ಕೆ ನಮಗೆ ಜಾತಿ ಆಧಾರಿತ ವಿಶ್ಲೇಷಣೆ ಸಾಧ್ಯವಿಲ್ಲ. ಆದರೆ ಇಂದು ವರ್ಗಗಳ ಆಧಾರದಲ್ಲಿನ ಮಾಹಿತಿಗಳನ್ನು, ಅಂಕಿ-ಅಂಶಗಳನ್ನು ನೋಡಿದರೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಕಿ-ಅಂಶ ಗಳ ಪ್ರಕಾರ ಇಂದು ದೇಶದ ಶೆ 75 ರಷ್ಟು ಗ್ರಾಮೀಣ ಕುಟುಂಬಗಳ ಮುಖ್ಯಸ್ಥ ಐದು ಸಾವಿರಕ್ಕಿಂತ ಕಡಿಮೆ ಮಾಸಿಕ ಅದಾಯ ಹೊಂದಿದ್ದಾನೆ. ಇದನ್ನು ನಾವು 10 ಸಾವಿರಕ್ಕೆ ಏರಿಸಿದರೆ ಈ ದೇಶದ 90ಶೇ ಗ್ರಾಮೀಣ ಕುಟುಂಬಗಳು 10 ಸಾವಿರಕ್ಕಿಂತ ಕಡಿಮೆ ವರಮಾನ ಹೊಂದಿವೆ. ಆದರೆ ಇದೇ ದೇಶದಲ್ಲಿ ಪೋರ್ಬ್ ಸಮೀಕ್ಷೆಯ ಶ್ರಿಮಂತರ ಪಟ್ಟಿಯಲ್ಲಿ ಈ ದೇಶದ ಮಿನಿಮಮ್ ಶ್ರೀಮಂತ 3.5 ಕೋಟಿ ಡಾಲರ್ ಹೊಂದಿದ್ದಾನೆ ಅತಿ ಹೆಚ್ಚು ಸಂಪತ್ತನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಈ ದೇಶ 4 ರಿಂದ 5ನೇ ಸ್ಥಾನದಲ್ಲಿದೆ. ನನ್ನ ಪ್ರಕಾರ ನಾವು ಎರಡನೆಯ ಸ್ಥಾನದಲ್ಲಿ ಇದ್ದೇವೆ. ಸದ್ಯಕ್ಕೆ ಐದನೇ ಸ್ಥಾನ ಎಂದುಕೊಳ್ಳಿ. ಯಾವ ದೇಶ ಒಂದು ಕಡೆ ಜಗತ್ತಿನ ಶ್ರಿಮಂತರ ಪಟ್ಟಿಯಲ್ಲಿ 5ನೇ ಸ್ಥಾನ ಗಳಿಸಿದೆಯೋ ಅದೇ ದೇಶ ವಿಶ್ವ ಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 135ನೇ ಸ್ಥಾನ ಹೊಂದಿದೆ. ಲ್ಯಾಟೀನ್ ಅಮೇರಿಕಾದ ಎಲ್ಲಾ ದೇಶಗಳು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತಕ್ಕಿಂತ ಮೇಲಿವೆ. 30 ವರ್ಷಗಳ ಕಾಲ ನಾಗರೀಕ ಯುದ್ಧವನ್ನು ಅನುಭವಿಸಿದ ಶ್ರೀಲಂಕಾ, ಅಭಿವೃದ್ಧಿ ಸೂಚ್ಯಂಕದಲ್ಲಿ ನಮಗಿಂತ 20 ಸ್ಥಾನ ಮೇಲಿದ್ದರೆ ಜಗತ್ತಿನಲ್ಲಿಯೇ ಅತ್ಯಂತ ಕ್ರೌರ್ಯಯುತ ಯುಧ್ಧಕ್ಕೆ ಒಳಗಾಗಿ ಯುದ್ಧದಲ್ಲಿ ಬಳಸಿದ ರಾಸಾಯನಿಕ ಮತ್ತು ಅಸ್ತ್ರಗಳ ಕಾರಣಕ್ಕೆ ಇಂದಿಗೂ ಹಲವು ಪೀಳಿಗೆಗಳು ತೊಂದರೆಗೊಳಗಾಗಿರುವ ವಿಯೆಟ್ನಾಂ ನಮಗಿಂತ 50 ಸ್ಥಾನ ಮೇಲಿದೆ. ಈ ಎಲ್ಲಾ ದೇಶಗಳು ಮಾನವನ ಅಭಿವೃದ್ಧಿ ಸೂಚ್ಯಂಕದಲ್ಲಿ ನಮಗಿಂತ ಮುಂದಿವೆ ಇದಕ್ಕೆ ಕಾರಣ ಆ ದೇಶಗಳಲ್ಲಿ ಡಾಲರ್ ಮಿಲೇನಿಯರ್ ಗಳ ಉತ್ಪಾದನೆ ಆಗುತ್ತಿಲ್ಲ . . .

ನಿಮಗೆ ಆಶ್ಚರ್ಯ ಆಗಬಹದು. ನಾರ್ಡಿಕ್ ಮತ್ತು ಸ್ಕಾಂಡಿನೇವಿಯನ್ ದೇಶಗಳಾದ ಡೆನ್ಮಾರ್ಕ್, ಸ್ವೀಡೆನ್, ಫೀನ್ಲೆಂಡ್, ಐಸ್ಲೆಂಡ್, ನಾರ್ವೆ ಎಲ್ಲಾ ದೇಶಗಳಲ್ಲಿ ಭಾರತದ ಒಟ್ಟು ಡಾಲರ್ ಬಿಲೇನಿಯರ್ ಗಳ ಪೈಕಿ ಶೇ 3 ರಷ್ಟ ಮಾತ್ರ ಬಿಲೆನಿಯರ್ಗಳಿದ್ದಾರೆ. ಚೀನಾದಲ್ಲಿ ನಮಗಿಂತ ಜಾಸ್ತಿ ಇರಬಹದು. ರಷ್ಯದಲ್ಲಿ ಪ್ರತಿ ಐದು ವರ್ಷಕ್ಕೂಮ್ಮೆ ಎಲ್ಲಾ ಬಿಲೇನಿಯರ‍್ಗಳನ್ನು ಜೈಲಿಗೆ ಕಳುಹಿಸುತ್ತಾರೆ, ನಾವು ಪಾರ್ಲಿಮೆಂಟಿಗೆ ಕಳುಹಿಸುತ್ತೇವೆ ಅಷ್ಟೆ ವ್ಯತ್ಯಾಸ. ಹೌದು ಈ ಅರ್ಥದಲ್ಲಿ ನಮ್ಮದು ಪ್ರೌಢ ಪ್ರಜಾತಂತ್ರ. . .

ಇದರ ಜೊತೆಯಲ್ಲಿಯೇ ಪಾರ್ಲಿಮೆಂಟಿನಲ್ಲಿ ಇರುವ ಅಸಮಾನತೆಯ ಕುರಿತು ಕೆಲವು ವಿಷಯಗಳನ್ನು ನಾನು ನಿಮಗೆ ಹೇಳುತ್ತೇನೆ. 2014ರ ಚುನಾವಣೆಯ ಪ್ರಮಾಣ ಪತ್ರದಲ್ಲಿ ಘೋಷಿಸಿಕೊಂಡಂತೆ ನಮ್ಮ ದೇಶದ ಲೋಕಸಭೆಯ ಶೇ 82 ಸಂಸದರು ಕೋಟ್ಯಾಧಿಪತಿಗಳು. ಇದು ಅವರೇ ಸ್ವ-ಘೋಷಿಸಿಕೊಂಡಿರುವ ಸಂಗತಿ. ಹಾಗಾದರೆ ಐದು ಮತ್ತು ಹತ್ತು ವರ್ಷಗಳ ಹಿಂದಿನ ಪ್ರಮಾಣ ಏನಿತ್ತು ಎಂದು ನೋಡಿದರೆ 2004ರ ಸಂಧರ್ಭದಲ್ಲಿ ಒಟ್ಟು ಸಂಸದರಲ್ಲಿ ಶೇ 32 ಮಂದಿ ಕೋಟ್ಯಾಧಿಪತಿಗಳಿದ್ದರೆ 2009 ರಲ್ಲಿ ಅದು 53 ಶೇ ಕ್ಕೆ ಏರಿದೆ. 2014ರಲ್ಲಿ ನಾನು ಆಗಲೇ ಹೇಳಿದಂತೆ 82 ಶೇ ಸಂಸದರು ಕೋಟ್ಯಾಧಿಪತಿಗಳಿದ್ದಾರೆ. ಇದು ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸಬೇಕಾದ ಪ್ರಮಾಣ ಪತ್ರಗಳನ್ನು ಆಧರಿಸಿದ ಲೆಕ್ಕ. ಇಲ್ಲಿ ನೀವು ಎಷ್ಟು ಬೇಕಾದರು ಬರೆಯಬಹದು. ನಿಮ್ಮ ಆದಾಯ ತೆರಿಗೆಯ ದಾಖಲೆಗಳನ್ನೇನು ಇಲ್ಲಿ ಕೇಳುವುದಿಲ್ಲ. ನಮ್ಮ ನಡುವಿನ ಸತ್ಯವಂತ ರಾಜಕಾರಣಿಯಾದ ಚಂದ್ರಬಾಬು ನಾಯ್ಡು ಅವರು 2014 ರಲ್ಲಿ ಘೋಷಿಸಿಕೊಂಡಿರುವ ಆಸ್ತಿ 2004ಕ್ಕಿಂತ ಕಡಿಮೆ ಇದೆ. ಇದು ನಿಜವಾದ ನಿಸ್ವಾರ್ಥ ಜೀವನ ಇದಕ್ಕೆ ಅವರು ಕೊಡುವ ಕಾರಣ ಕಳೆದ ಸಾರಿ ನನ್ನ ಮನೆಯನ್ನು ಮಾರುಕಟ್ಟೆಯ ಮೌಲ್ಯದಲ್ಲಿ ಲೆಕ್ಕ ಹಾಕಿದ್ದರು, ಆದರೆ ಈ ಬಾರಿ ಅದನ್ನು ನಾನು ಕೊಂಡ ಬೆಲೆಯಲ್ಲಿ ಲೆಕ್ಕ ಹಾಕಿದ್ದಾರೆ ಎಂದಿದ್ದಾರೆ. ಅದಕ್ಕೆ ನಾನು ಹೇಳಿದ್ದು ಮಾರುಕಟ್ಟೆ ನಿಮಗೆ ಆಯ್ಕೆಗಳನ್ನು ಕೊಡುತ್ತದೆ ಎಂದು ಹೇಳಿದ್ದು. . .. . 

ನಾವು ಮಾರುಕಟ್ಟೆ ಕೊಡುವ ಆಯ್ಕೆಗಳ ಕುರಿತಂತೆ ಮಾತನಾಡುತ್ತಿದ್ದೆವು. ಇಂದು ಜಗತ್ತಿನಾದ್ಯಂತ ಒಂದು ಬಿಲಿಯನ್ ಜನರು (‌ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಮಂಡಳಿ ಬೇರೆ ಬೇರೆ ವ್ಯಾಖ್ಯೆಗಳನ್ನು ನೀಡುವ ಮೂಲಕ ಆ ಸಂಖ್ಯೆಯನ್ನು 850 ಮಿಲಿಯನ್ ಎಂದು ಹೇಳುತ್ತಿದೆ) ಪ್ರತಿ ರಾತ್ರಿ ಹಸಿವಿನಿಂದಲೇ ಮಲಗುತ್ತಿದ್ದಾರೆ. ನಿಜವಾಗಲೂ ಮಾರುಕಟ್ಟೆ ಹಸಿವಿನಿಂದ ಕಂಗೆಟ್ಟರುವ ಒಂದು ಬಿಲಿಯನ್ ಜನರಿಗೆ ಆಯ್ಕೆಯ ಸ್ವಾತಂತ್ಯವನ್ನು ನೀಡಿದ್ದರೆ ಅವರ ಆಯ್ಕೆ ಆ ಹೊತ್ತಿನ ಆಹಾರವಾಗಿರುತ್ತಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ. ಆ ಕಾರಣಕ್ಕೆ ನಾವು ಮಾರುಕಟ್ಟೆ ಆಯ್ಕೆಯ ಸ್ವಾತಂತ್ರ‍್ಯವನ್ನು ನೀಡಿದೆ ಎಂಬ ಮಿಥ್ಯೆಯನ್ನು ತಿರಸ್ಕರಿಸಬೇಕಿದೆ. . .

ನಾವು ಆಗಲೇ ಚರ್ಚಿಸಿದಂತೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಕಿ-ಅಂಶ ಗಳ ಪ್ರಕಾರ ಇಂದು ದೇಶದ ಶೆ 75 ರಷ್ಟು ಗ್ರಾಮೀಣ ಕುಟುಂಬಗಳ ಮುಖ್ಯಸ್ಥ ಐದು ಸಾವಿರಕ್ಕಿಂತ ಕಡಿಮೆ ಅದಾಯ ಹೊಂದಿದ್ದಾನೆ. ಈ ದೇಶದ 90ಶೇ ಗ್ರಾಮೀಣ ಕುಟುಂಬಗಳು 10 ಸಾವಿರಕ್ಕಿಂತ ಕಡಿಮೆ ವರಮಾನ ಹೊಂದಿವೆ. ಕೇವಲ ಶೇ 8 ರಷ್ಟು ಗ್ರಾಮೀಣ ಕುಟುಂಬಗಳ ಮುಖ್ಯಸ್ಥ 10 ಸಾವಿರಕ್ಕಿಂತ ಹೆಚ್ಚಿನ ಅದಾಯವನ್ನು ಪಡೆಯುತ್ತಿದ್ದಾನೆ. ಇದು ನಮ್ಮ ನಡುವಿನ ಸ್ಥಿತಿ. . .

ಇನ್ನು ನ್ಯಾಷನಲ್ ಸ್ಯಾಂಪೆಲ್ ಸರ್ವೇ ಇಂಡಿಯಾದ ಅಂಕಿ-ಅಂಶಗಳನ್ನು ನೋಡುವುದಾದರೆ ಭಾರತದಲ್ಲಿನ ಐದು ಸದಸ್ಯರುಳ್ಳ ಕೃಷಿ ಕುಟುಂಬ ಕೃಷಿ ಮತ್ತು ಕೃಷೀಯೇತರ ಮೂಲಗಳಿಂದ ಗಳಿಸುವ ಮಾಸಿಕ ಅದಾಯ 6426 ರೂಪಾಯಿಗಳು. ಇದು ಇಂದಿನ 97 ಯು.ಎಸ್ ಡಾಲರ್ ಗೆ ಸಮನಾಗಿದೆ. ಒಂದು ಕಡೆ ಈ 6426 ರುಪಾಯಿ ಕೇರಳ, ಪಂಜಾಬ್ ನ ಕುಟುಂಬಗಳ ಸರಾಸರಿ ಗಳಿಕೆಯನ್ನು ತೋರಿಸಿದರೆ ಇನ್ನೂಂದು ಕಡೆ ಛತ್ತಿಸ್ಗಡ್, ಬಿಹಾರ್ ಕಡೆ ಆ ಪ್ರಮಾಣ 3500/4000 ಸಾವಿರ ಇದೆ. ಇದರ ಅರ್ಥ 3500 ರಿಂದ 9000 ದಿಂದ ಹತ್ತು ಸಾವಿರದ ಮಧ್ಯದ ಸರಾಸರಿಯಲ್ಲಿ ಗಳಿಸುವ ಎಲ್ಲಾ ಕೃಷಿ ಕುಟುಂಬಗಳನ್ನು 6426 ರೂಪಾಯಿ ಗಳಿಸುತ್ತಿವೆ ಎಂಬ ಈ ಲೆಕ್ಕದಲ್ಲಿ ನೋಡಲಾಗುತ್ತಿದೆ. ನಮ್ಮ ಗ್ರಾಮೀಣ ಭಾರತದ ಸ್ಥಿತಿ ಇಷ್ಟು ಕೆಟ್ಟದಾಗಿದೆ. ಅದು ಹಳ್ಳಿಯಲ್ಲಿನ ಜನ ಕೃಷಿಕರಾಗಿರಿಲಿ, ಕೃಷಿ ಕಾರ್ಮಿಕರಾಗಿರಿ ಏನಾದರೂ ಆಗಿರಲಿ, ಇದು ಕೆಟ್ಟ ಸ್ಥಿತಿ ಈ ರೀತಿಯ ಅಸಮಾನತೆ ಒಂದು ಕಡೆ ಇದ್ದರೆ. . .

ಮತ್ತೊಂದು ಕಡೆ 1991 ರಲ್ಲಿ ನಮ್ಮ ದೇಶದಲ್ಲಿ ಒಬ್ಬೆ ಒಬ್ಬ ಡಾಲರ್ ಬಿಲೇನಿಯರ್ ಇರಲಿಲ್ಲ. ಆದರೆ 2015ರ ಹೊತ್ತಿಗೆ ಪೋರ್ಬ್ ಪಟ್ಟಿಯಲ್ಲಿ ಭಾರತದ ನೂರು ಡಾಲೆರ್ ಬಿಲೇನಿಯರ‍್ಗಳು ಸ್ಥಾನ ಪಡೆದಿದ್ದಾ.ರೆ ಇತ್ತೀಚಿಗಿನ ಮಾರುಕಟ್ಟೆಯ ಹೊಡೆತಕ್ಕೆ ಅದರಲ್ಲಿ ಕೆಲವರ ಸ್ಪಲ್ಪ ಪ್ರಮಾಣದ ಸಂಪತ್ತು ಕರಗಿರಬಹುದು. ಇದು ನಮ್ಮ ದೇಶದ ಸ್ಥಿತಿ . . .

ಇದನ್ನೆ ನಾನು ಬೆಂಗಳೂರಿನ ಐಐಎಮ್ ವಿಧ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಿದ್ದೆ. ನಾನು ಗ್ರಾಮೀಣ ಭಾರತದ ಕುರಿತು ಮಾಹಿತಿಗಳನ್ನು ಒಟ್ಟಾಗಿಸುವ ಕೆಲಸವೊಂದನ್ನು ಮಾಡುತ್ತಿದ್ದೇನೆ. ನೀವು ಎಷ್ಟು ಸುಂದರವಾದ ಸಮುದಾಯಗಳನ್ನು ಹಾಳು ಮಾಡುತ್ತಿದ್ದೀರಾ ಎಂದರೆ ಇಲ್ಲಿ ನಾವು ಭಯಪಡುವ, ಅಯ್ಯೋ ಹೀಗಿದೆಯಲ್ಲ ಸ್ಥಿತಿ ಎನ್ನುವ ಸಂಗತಿಗಳು ಇವೆ ಮತ್ತು ನಾವು ಆಶ್ಚರ್ಯಕ್ಕೆ ಒಳಗಾಗುವ ನಮ್ಮನ್ನು ಚಕಿತತೆಯ ಕಡೆಗೆ ನೂಕುವ ಸಂಗತಿಗಳು ಇವೆ ಆಶ್ಚರ್ಯ ಎಂದರೆ ಎರಡೂ ಭಾರತೀಯ ಮೂಲದವುಗಳು ಮತ್ತು ಇವು ನಮ್ಮ ವಾಸ್ತವಗಳಾಗಿವೆ. . .

ಇಲ್ಲಿ 833 ಮಿಲಿಯನ್ ಜನರು 718 ಜೀವಂತ ಭಾಷೆಗಳನ್ನು ಮಾತನಾಡುತ್ತಿದ್ದಾರೆ. ಅವುಗಳಲ್ಲಿ ಐದು ಬಾಷೆಗಳನ್ನು 15 ಮಿಲಿಯನ್ ಗೂ ಹೆಚ್ಚು ಮಂದಿ ಮಾತನಾಡುತ್ತಿದ್ದಾರೆ. 3 ಭಾಷೆಗಳನ್ನು ಸುಮಾರು 80 ಮಿಲಿಯನ್ ಜನರು ಮಾತನಾಡುತ್ತಿದ್ದಾರೆ. ಒಂದು ಭಾಷೆಯನ್ನು 600 ಮಿಲಿಯನ್ ಜನರು ಮಾತನಾಡುತ್ತಿದ್ದಾರೆ. ಒಂದು ಬಾಷೆಯನ್ನು 1ಶೇ ಜನರು ಅಂಡಮಾನ್ ನಲ್ಲಿ ಮಾತನಾಡುತ್ತಿದ್ದಾರೆ. ಒಂದು ಭಾಷೆಯನ್ನು 7 ಮಿಲಿಯನ್ ಜನರು ಸೈಮಾರ್ ಮತ್ತು ತ್ರಿಪುರಾಗಳಲ್ಲಿ ಮಾತನಾಡುತ್ತಿದ್ದಾರೆ. ಇದು ನಿಜಕ್ಕೂ ಆಶ್ಚರ್ಯ ಉಂಟುಮಾಡಬಹುದಾದ ವಿಭಿನ್ನತೆಗಳನ್ನು ಒಳಗೊಂಡಿರುವ ಸಮಾಜ. ಈ ಮಾದರಿಯನ್ನು ಜಗತ್ತಿನ ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ. ಕೆಲವು ಜನರಿಗೆ ಈ ವಿಭಿನ್ನತೆ ಭಯವನ್ನು ಹುಟ್ಟಿಸುತ್ತಿದೆ. ಆ ಕಾರಣಕ್ಕೆ ಅವರು ಒಂದು ಭಾಷೆಯನ್ನು ಎಲ್ಲರ ಮೇಲೆ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಅವರದೇ ಸಂಸ್ಕೃತಿಯ ಮಹತ್ವ ಅರ್ಥವಾಗುತ್ತಿಲ್ಲ. ಹಿಂದಿ ಇವರಿಗೆ ಭಾಷೆಯಂತೆ ಕಾಣುತ್ತದೆ, ಆದರೆ ಉತ್ತರ ಭಾರತದ ಅತ್ಯುತ್ತಮ ಭಾಷೆಗಳಾದ ಭೋಜ್ ಪುರಿ, ಮಿಥಿಲಾ,ಬ್ರೀಜ್ ಬಾಷಾ, ಅವಧಿ ಇವರಿಗೆ ಡಯಲೆಕ್ಟ್ ರೀತಿ ಕಾಣುತ್ತದೆ. ಹಾಗೆ ನೋಡಿದರೆ ಹಿಂದಿಗೆ 150 ವರ್ಷಗಳ ಇತಿಹಾಸವೂ ಇಲ್ಲ. ಉತ್ತರ ಭಾರತದ ಮಹತ್ವದ ಸಾಹಿತ್ಯ ರಚನೆಯಾಗಿರುವುದು ಭೋಜ್ ಪುರಿ, ಮಿಥಿಲಾ, ಬ್ರೀಜ್ ಬಾಷಾ, ಅವಧಿ ಭಾಷೆಗಳಲ್ಲಿ ಇವು ಉತ್ತರ ಭಾರತದ ಪ್ರಾಚೀನ ಭಾಷೆಗಳು ಅವುಗಳನ್ನು ಗೌರವಿಸಿ, ಹೆಮ್ಮೆಪಡಿ . . . .

ಆದರೆ ಎರಡು ಬದಿಯ ಮೂಲಭೂತವಾದಿಗಳು ಸ್ಥಳೀಯ ಭಾಷೆಗಳನ್ನು ಕಡೆಗಣಿಸಿ ಉರ್ದುವನ್ನೂ ಪರ್ಶಿಯನ್ ಗೆ ಹತ್ತಿರ ಮಾಡಿದ್ದಾರೆ. ಎಲ್ಲಾ ಉರ್ದು ಮತ್ತು ಪರ್ಶಿಯನ್ ಪದಗಳನ್ನು ತೆಗೆದುಕೊಂಡು ಹಿಂದೂಸ್ಥಾನಿ ಅಥವಾ ಹಿಂದಿಯನ್ನು ಕಟ್ಟಲು ಬಳಸಲಾಯಿತು. ಈ ಪ್ರಕ್ರಿಯೆ ಕಳೆದ 100 ವರ್ಷಗಳಿಂದ ನಡೆಯುತ್ತಲೇ ಇದೆ. 60ರ ದಶಕದಲ್ಲಿ ನಾನು ಹುಡುಗನಾಗಿದ್ದಾಗ ಆಲ್ ಇಂಡಿಯಾ ರೇಡಿಯೋದ ಕುರಿತಂತೆ ಒಂದು ಹಾಸ್ಯ ಪ್ರಚಲಿತದಲ್ಲಿತ್ತು. ಅದು ಏನೆಂದರೆ ಆಲ್ ಇಂಡಿಯಾ ರೇಡಿಯೋ ಯಾರು ಮಾತನಾಡದ ಮೂರು ಭಾಷೆಗಳಲ್ಲಿ ಪ್ರಸಾರವಾಗುತ್ತದೆ. ಅವು ಕ್ವೀನ್ಸ್ ಇಂಗ್ಲೀಷ್, ಪರ್ಶೀಯನ್ ಉರ್ದು ಮತ್ತು ಸಂಸ್ಕೃತಿಕರಣಗೊಂಡ ಹಿಂದಿ! ಮೂಲಭೂತವಾದಿಗಳು ವಿವಿಧತೆಗೆ ಹೆದರುತ್ತಾರೆ. ಅವರಿಗೆ ಅರ್ಥವಾಗದ ತ್ರಿಪುರಾ, ನಾಗಾಲ್ಯಾಂಡ್ ಜನರ ಭಾಷೆಗಳು ಭಯ ಹುಟ್ಟಿಸುತ್ತವೆ. ಆದರೆ ನಾನು, ನೀವು ಅವು ಎಷ್ಟು ಸಮೃದ್ಧವಾಗಿವೆ ಅಲ್ಲವೇ ಎಂದು ಅಲೋಚಿಸುತ್ತೇವೆ. ನಾನು ಇಲ್ಲಿ ಗಂಗಾ ಹಾಸ್ಟೆಲ್ಲಿನಲ್ಲಿ ಇದ್ದಾಗ 24 ಭಾಷೆ ಮಾತನಾಡುವ ಸ್ನೇಹಿತರಿದ್ದರು. ಎಷ್ಟು ಸುಂದರ ಪ್ರಪಂಚ ಅದು. ಇದು ಸಹ ಜೆ.ಎನ್.ಯು ಭಾಗವೇ. ಒಂದು ವಿಷಯ ನಾನು ನಿಮಗೆ ಹೇಳಲೇ ಬೇಕು. ನಾನು ಈ ಕಾಲೇಜಿನ ಅವರಣದಲ್ಲಿ ನನ್ನ ಸ್ವಂತಕ್ಕಿಂತ ಮಿಗಿಲಾಗಿ ಬದುಕುವ ಗುಣ ಕಲಿತಿದ್ದೇನೆ. ವೃತ್ತಿ ಎಂದರೆ ಕೇವಲ ನನ್ನ ಪರಿಚಯ ಪತ್ರವಲ್ಲ ಮತ್ತು ಜೀವನದಲ್ಲಿ ಬೆಳೆಯುವುದು ಯಶಸ್ವಿಯಾಗೋದು ಅಂದರೆ ಅದರ ಪುಟಗಳನ್ನು ಹೆಚ್ಚಿಸಿಕೊಳ್ಳುವುದಲ್ಲ ಎಂಬುದನ್ನು ನಾವು ಕಲಿಯಬೇಕಿದೆ. . .

ಮುಂದುವರೆಯುವುದು. . . .

Feb 19, 2016

ಮೇಕಿಂಗ್ ಹಿಸ್ಟರಿ: ವಸಾಹತುಶಾಹಿಯ ಆಳ್ವಿಕೆಗೆ ಫ್ಯೂಡಲಿಸಮ್ಮೇ ತಳಹದಿ

ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಈ ಅಧ್ಯಾಯ ಕಣ್ತಪ್ಪಿನಿಂದಾಗಿ ಅವಗಣನೆಗೊಳಗಾದ ಇತಿಹಾಸದ ಕಡೆಗೆ ಗಮನಹರಿಸುತ್ತದೆ. ಬ್ರಿಟೀಷ್ ಆಳ್ವಿಕೆಯ ಪ್ರಾರಂಭ ವಸಾಹತುಶಾಹಿ ಮತ್ತು ಫ್ಯೂಡಲ್ ಪದ್ಧತಿಯ ನಡುವೆ ಒಂದು ಗಟ್ಟಿ ಭಾಂದವ್ಯವನ್ನು ಸ್ಥಾಪಿಸಿತು. ಒಂದೆಡೆ ವಿದೇಶಿ ಬಂಡವಾಳಶಾಹಿತನ, ಮತ್ತೊಂದೆಡೆ ದೇಶೀ ಫ್ಯೂಡಲಿಸಂ; ಎರಡು ಭಿನ್ನ ಮತ್ತು ಐತಿಹಾಸಿಕವಾಗಿ ವಿರುದ್ಧ ನೆಲೆಯಲ್ಲಿ ಕಾರ್ಯನಿರ್ವಹಿಸಿದ ಶಕ್ತಿಗಳ ಸಂಬಂಧ ಭಾರತ ಮತ್ತು ಕರ್ನಾಟಕದ ಸಾಮಾಜಿಕ ಬೆಳವಣಿಗೆಯ ರೀತಿ ಮತ್ತು ವೇಗವನ್ನು ನಿರ್ಧರಿಸಿದವು, ಇವತ್ತಿಗೂ ನಿರ್ಧರಿಸುತ್ತಿವೆ. ಕರ್ನಾಟಕ ಮತ್ತು ಭಾರತದ ಇತಿಹಾಸದಲ್ಲಿ ಆರ್ಥಿಕ ಬದಲಾವಣೆಗಳು ಮತ್ತದಕ್ಕೆ ಸಂಬಂಧಪಟ್ಟಂತ ರಾಜಕೀಯ ಏರಿಳಿತಗಳಿಂದ ಮೂಡಿದ ಸಮುದಾಯದ ಚಳುವಳಿಗಳು ಫ್ಯೂಡಲಿಸಂನ ಸಾಮಾಜಿಕ ಬೇರುಗಳನ್ನು ಅಲುಗಾಡಿಸಿದ್ದನ್ನು ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದಲ್ಲಿ ನೋಡಿದ್ದೇವೆ. ವಸಾಹತುಶಾಹಿ ಆಕ್ರಮಣ ಇದರ ವೇಗವನ್ನು ಬದಲಿಸಿತು. ಸಾಯುತ್ತಿದ್ದ ಫ್ಯೂಡಲ್ ವ್ಯವಸ್ಥೆಯ ಜೊತೆ ಹೊಂದಾಣಿಕೆ ಮಾಡಿಕೊಂಡ ವಸಾಹತುಶಾಹಿ ಫ್ಯೂಡಲಿಸಂನ ಅಂತ್ಯ ತಡೆಗಟ್ಟಲು ಬಂಡವಾಳಶಾಹಿತನದ ಗೆಳೆತನವನ್ನು ಉಪಯೋಗಿಸಿಕೊಂಡಿತು. ಈ ಅಧ್ಯಾಯದಲ್ಲಿ ಫ್ಯೂಡಲಿಸಂ ಮತ್ತು ವಸಾಹತುಶಾಹಿ ನಡುವಿನ ಅನೈತಿಕ ಮದುವೆ ಹುಟ್ಟಿಸುವ ಪ್ರಶ್ನೆಗಳ ಕಡೆಗೆ, ಅವರ ಸಂಬಂಧದ ರೀತಿ ನೀತಿಗಳು, ಒಬ್ಬರು ಮತ್ತೊಬ್ಬರನ್ನು ಪ್ರಭಾವಿಸಿದ ಬಗೆ, ಇಬ್ಬರೂ ಸೇರಿದ್ದರಿಂದ ರಾಜ್ಯದ ಮೇಲಾದ ಪರಿಣಾಮ, ಐತಿಹಾಸಿಕ ವೈರುಧ್ಯದ ಎರಡು ಶಕ್ತಿಗಳು ಒಂದೇ ಹಾಸಿಗೆ ಹಂಚಿಕೊಳ್ಳುವಷ್ಟು ಹತ್ತಿರವಾದ ಕಾರಣ ಮತ್ತು ಈ ಸಂಬಂಧದಿಂದ ದೇಶೀ ಫ್ಯೂಡಲಿಸಂ ವಿದೇಶಿ ವಸಾಹತುಶಾಹಿಯ ಅಧಿಕೃತ ವಕ್ತಾರನಾಗಿ ರೂಪುಗೊಂಡ ರೀತಿಯ ಕುರಿತು ಗಮನ ಹರಿಸೋಣ.

1. ವಸಾಹತುಶಾಹಿ ಮತ್ತು ಫ್ಯೂಡಲಿಸಂ ನಡುವಿನ ಕಲ್ಯಾಣ

ಬ್ರಿಟೀಷರು ಸಹಕಾರಿ ಒಪ್ಪಂದಕ್ಕೆ ಧಾರವಾಡ, ಬೆಳಗಾವಿ ಮತ್ತು ಬಿಜಾಪುರ ಜಿಲ್ಲೆಯ ದೇಸಾಯಿಗಳ ಜೊತೆಗೆ, ಮೈಸೂರಿನ ಒಡೆಯರು ಮತ್ತು ಹೈದರಾಬಾದಿನ ನಿಜಾಮರ ಜೊತೆಗೆ ಸಹಿ ಹಾಕಿದ್ದನ್ನು ನಾವೀಗಾಗಲೇ ನೋಡಿದ್ದೇವೆ. ಅವರೆಲ್ಲರೂ ಒಂದೋ ಊಳಿಗಮಾನ್ಯ ಪದ್ಧತಿಯನ್ನು ನೇರವಾಗಿ ಪ್ರತಿನಿಧಿಸಿದವರು ಅಥವಾ ಊಳಿಗಮಾನ್ಯ ನೆಲೆಯಿಂದ ಹುಟ್ಟಿಬಂದ ರಾಜರು. ವರುಷಗಳಿಂದ ಬೆಳೆದು ನಿಂತಿದ್ದ ಈ ಪ್ರತಿನಿಧಿಗಳು, ದೊರೆಯುವ ಸವಲತ್ತುಗಳಿಗಾಗಿ ಬ್ರಿಟೀಷರೊಡನೆ ಸಹಕಾರಿ ಒಪ್ಪಂದಕ್ಕೆ ಸಹಿ ಹಾಕಿದರು. ಮೈಸೂರಿನ ಹೈದರಾಲಿ ಮತ್ತು ಟಿಪ್ಪುವಿನಿಂದ ಸೋಲನುಭವಿಸಿ ತಮ್ಮ ನೆಲೆ ಕಳೆದುಕೊಂಡು ಓಡಿಹೋಗಿದ್ದ ಪಾಳೇಗಾರರು ಬ್ರಿಟೀಷರ ಆಶ್ರಯ ಪಡೆದರು. ವಸಾಹತುಶಾಹಿಯನ್ನು ಅಪ್ಪಿಕೊಳ್ಳಲು ತೋಳಗಲಿಸಿದವರಿಗೆ ಬ್ರಿಟೀಷರ ಸ್ನೇಹವಷ್ಟೇ ತಮ್ಮ ವರ್ಗವನ್ನು ಉಳಿಸಿಕೊಳ್ಳಲಿಕ್ಕಿರುವ ಕೊನೆಯ ಮಾರ್ಗ ಎನ್ನುವುದರ ಅರಿವಿತ್ತು. ಈ ಊಳಿಗಮಾನ್ಯ ದೊರೆಗಳು ಬ್ರಿಟೀಷರ ರಾಜಕೀಯ ವಿಸ್ತರಣೆಗೆ ಅತ್ಯಂತ ಮುಖ್ಯವಾದರು. ಇತಿಹಾಸದ ಚಲನೆಯಲ್ಲಿ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದ ಒಂದು ಸಾಮಾಜಿಕ ವರ್ಗಕ್ಕೆ ಬ್ರಿಟೀಷ್ ವಸಾಹತುಶಾಹಿ ಆಶ್ರಯ ಕೊಟ್ಟು, ಮುದ್ದಿಸಿ, ಮರಣಮಂಚದ ಮೇಲಿದ್ದ ವ್ಯಕ್ತಿ ಮತ್ತಷ್ಟು ವರುಷಗಳ ಕಾಲ ಬದುಕುಳಿಯುವಂತೆ ಮಾಡಿತು. ಪಾಳೇಗಾರರು ಮತ್ತು ದೇಶಗತಿಗಳ ಉಸಿರು ಕಾಪಾಡಿದ ವಸಾಹತುಶಾಹಿ ವಿದ್ರೋಹದ ಚಿಂತನೆಗಳು ಮತ್ತೆ ಮೊಳಕೆಯೊಡೆಯದಿರುವ ಕಡೆಗೂ ಗಮನ ಹರಿಸಿತು.

ಬೆಂಗಳೂರಿನ ಬಳಿಯ ಬಟ್ಟೆ ಉದ್ಯಮದ ಊರಾದ ವಲ್ಲೂರಿನ ಬಗ್ಗೆ ಫ್ರಾನ್ಸಿಸ್ ಬುಚನನ್ ಹೀಗೆ ಹೇಳುತ್ತಾನೆ: “ವಲ್ಲೂರಿನಲ್ಲಿ ಅರಮನೆಯಂತಹ ಒಂದು ಮನೆ, ಕೋಟೆ, ಕೋಟೆಯೊಳಗೊಂದು ನಗರ ಮತ್ತು ಪುಟ್ಟ ಉಪನಗರವಿತ್ತು. ಅರಮನೆಯಲ್ಲಿ ಹದಿನೈದು ಜನರ ರಾಜಪೂತ ಕುಟುಂಬವಿತ್ತು. ಇವರ ಹಿರೀಕರು ಈ ಜಾಗದ ಮತ್ತು ನೆರೆಹೊರೆಯ ಹಳ್ಳಿಗಳ ಜಾಗೀರುದಾರರಾಗಿದ್ದು; ಅವರ ವಾರ್ಷಿಕ ಆದಾಯ 11,000 ಪಗೋಡಾಗಳಷ್ಟಿತ್ತು (33,000 ರುಪಾಯಿ). ಹೈದರಾಲಿಯಿಂದ ಅವರು ಉಚ್ಛಾಟಿತರಾದರು; ಆದರೆ ಲಾರ್ಡ್ ಕಾರ್ನ್ ವಾಲ್ಲಿಸ್ ನಡೆಸಿದ ಯುದ್ಧದ ಸಂದರ್ಭದಲ್ಲಿ ಅವರನ್ನು ಮತ್ತೆ ಜಾಗೀರುದಾರರನ್ನಾಗಿ ಮಾಡಿದ್ದು ಕೊಲೊನಲ್ ರೀಡ್. ಶಾಂತಿಯ ದಿನಗಳ ನಂತರ ಪುನಃ ಅವರನ್ನು ಉಚ್ಛಾಟಿಸಿದ್ದು ಟಿಪ್ಪು….. ಈಗಿನ ಮೈಸೂರು ಸರಕಾರ (ಅಸಲಿಗೆ ಬ್ರಿಟೀಷರೇ ಆಡಳಿತ ನಡೆಸುತ್ತಿದ್ದವರು ಎನ್ನುವುದನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು) ಆ ಕುಟುಂಬ ವಂಶಸ್ಥರಿಗೆ ವಾರ್ಷಿಕ 400 ಪಗೋಡಾಗಳನ್ನು (1200 ರುಪಾಯಿ) ನಿವೃತ್ತಿ ವೇತನದಂತೆ ನೀಡುತ್ತಾ ಅರಮನೆಯಲ್ಲಿ ಬದುಕು ನಡೆಸಲು ಅವಕಾಶ ಮಾಡಿಕೊಟ್ಟಿದೆ.” (37)

ಬುಚನನ್ನಿನ ಬರಹಗಳು ಮೈಸೂರಿನ ಪಾಳೇಗಾರರ ಇಂತಹ ಅನೇಕ ಕಥನಗಳನ್ನು ತೆರೆದಿಡುತ್ತದೆ. ಹೈದರಾಲಿ ಮತ್ತು ಟಿಪ್ಪುವಿನ ಆಡಳಿತಾವಧಿಯಲ್ಲಿ ಕೊನೆಯ ಉಸಿರನ್ನು ಬಿಗಿ ಹಿಡಿದುಕೊಂಡಿದ್ದವರು ಬ್ರಿಟೀಷರ ವಿಜಯದೊಂದಿಗೆ ಶಾಂತಿ ಒಪ್ಪಂದಗಳನ್ನು ಮಾಡಿಕೊಂಡು ಅಳಿದುಳಿದ ಊಳಿಗಮಾನ್ಯ ಪದ್ಧತಿಯ ವೈಭವಗಳನ್ನು ಮರಳಿ ಗಳಿಸಿಕೊಂಡರು.

ಕಿರ್ಮಾನಿ ಹೇಳುತ್ತಾರೆ: “ಗುಪ್ತಚರ ವಿಭಾಗದ ಮುಖ್ಯಸ್ಥ ಕೊಲೊನಲ್ ರೀಡ್ ಅಂಬೂರಿನ ಹೊಣೆ ಹೊತ್ತಿಕೊಂಡಾಗ ಹಣ, ಸಿಹಿ ಮಾತುಗಳು ಮತ್ತು ಕಾರುಣ್ಯದ ಕೆಲಸಗಳಿಂದ ಬಾಳಗಾಟಿನ ಎಲ್ಲಾ ಪಾಳೇಗಾರರನ್ನು ತನ್ನ ಕಡೆಗೆ ಸೆಳೆದುಕೊಳ್ಳುತ್ತಾನೆ. ನವಾಬರ ಕ್ರೌರ್ಯ ಮತ್ತು ದಬ್ಬಾಳಿಕೆಯಿಂದ ಸುಲ್ತಾನನ ನಿರಂಕುಶ ವ್ಯಕ್ತಿತ್ವ ಸಹಿಸಲಾಗದೆ ತಮ್ಮ ಸ್ವಂತ ದೇಶ ತೊರೆದಿದ್ದ ಪಾಳೇಗಾರರು ಕರ್ನಾಟಿಕ್ ಪಯನಗಾಟಿನಲ್ಲಿ ನಿರಾಶ್ರಿತರಾಗಿ ನೆಲೆ ಕಂಡುಕೊಂಡಿದ್ದರು. ಗುಂಗೂಂಡಿ ಪಾಳದ ಪಾಳೇಗಾರ, ಬೈರೇ ಕೋರಿನ ಮಕ್ಕಳು, ಚಿಕ್ಕಬಳ್ಳಾಪುರದ ಪಾಳೇಗಾರ, ವೆಂಕಟಗಿರಿ ಕೋಟೆಯ ಪಾಳೇಗಾರ ಪುದು ನಾಯರ್, ಪುಂಗಾನೂರಿನ ಮುಖ್ಯಸ್ಥರ ಜೊತೆಗೆ ಮದನಪಲ್ಲಿ, ಆನೇಕಲ್ಲಿನ ಪಾಳೇಗಾರರು ತಮ್ಮ ನೆಲೆ – ನೆಲವನ್ನು ಕಳೆದುಕೊಂಡಿದ್ದರು. ಇವರೆಲ್ಲರಿಗೂ ರಕ್ಷಣೆ ನೀಡುವುದಾಗಿ ಲಿಖಿತ ಭರವಸೆ ನೀಡಲಾಯಿತು. ಅವರವರ ಜಿಲ್ಲೆಗಳಿಗೆ ಸಂಪನ್ಮೂಲ ಮತ್ತು ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಬ್ರಿಟೀಷ್ ಸೈನ್ಯಕ್ಕೆ ರವಾನಿಸುವ ಶರತ್ತಿನ ಮೇಲೆ ಕಳುಹಿಸಲಾಯಿತು. ಯಾವುದೇ ಮಾರ್ಗದಿಂದ ತಮ್ಮ ತಮ್ಮ ಜಿಲ್ಲೆ ಮತ್ತು ತಾಲ್ಲೂಕುಗಳನ್ನು ವಶಪಡಿಸಿಕೊಳ್ಳುವ ಅಧಿಕಾರವೂ ದೊರೆಯಿತು….” (38)

ಮದ್ರಾಸಿನ ಗವರ್ನರ್ ಮೆಕ್ ಕಾರ್ಟ್ನಿ 1782ರಲ್ಲಿ ಬರೆದ ಪತ್ರದಲ್ಲಿ: “ಪಾಳೇಗಾರರ ಸಹಾಯದೊಂದಿಗೆ ನಿರೀಕ್ಷಿಸಬಹುದಾದ ಮುನ್ನಡೆಗಾಗಿ…… (ಪದಗಳು ಅಳಿಸಿಹೋಗಿವೆ)……..ಅವರಿಗೆ ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡಲಾಗುತ್ತಿದೆ……ಅವರ ನ್ಯಾಯಬದ್ಧ ಹಕ್ಕುಗಳನ್ನು ಕಂಪನಿ ಸರಕಾರ ರಕ್ಷಿಸುವುದೂ ಇದರ ಭಾಗವಾಗಿದೆ” (39)

ಪತ್ರದ ಮುಂದಿನ ಭಾಗದಲ್ಲಿ ಮೆಕ್ ಕಾರ್ಟ್ನಿ ಮತ್ತು ಚಾರ್ಲ್ಸ್ ಸ್ಮಿತ್ 1782ರಲ್ಲಿ 13 ಪಾಳೇಗಾರರಿಗೆ ನೀಡಿದ ಕರಾರು ಪತ್ರದ ವಿವರಗಳಿವೆ.

1782ರ ನವೆಂಬರಿನಲ್ಲಿ ಬರೆದ ಮತ್ತೊಂದು ಪತ್ರದಲ್ಲಿ ಮೆಕ್ ಕಾರ್ಟ್ನಿ: “ಹೈದರಾಲಿಯಿಂದ ನೆಲೆ ಕಳೆದುಕೊಂಡಿದ್ದ ಅನೇಕ ಪಾಳೇಗಾರರು ಮತ್ತು ಮುಖ್ಯಸ್ಥರಲ್ಲಿ ಕೆಲವರನ್ನು ಕಳೆದ ವರುಷ ಒಪ್ಪಂದಕ್ಕೆ ಒಳಪಡಿಸಿತ್ತು. ಇವರಿಗೆ ಹೈದರಾಲಿಯ ಸಾಮ್ರಾಜ್ಯದ ಮೇಲೆ ಪೂರ್ಣಪ್ರಮಾಣದ ಯುದ್ಧವನ್ನಲ್ಲದಿದ್ದರೂ ತಕ್ಕಮಟ್ಟಿಗಿನ ಗಲಭೆ – ಗೊಂದಲಗಳನ್ನು ಸೃಷ್ಟಿಸುವ ಆಸೆ ಮತ್ತು ಮನಸ್ಸಿದೆ….”(40)

ಹೈದರಾಲಿ ಮತ್ತು ಟಿಪ್ಪುವಿನ ವಿರುದ್ಧ ವಸಾಹತುಶಾಹಿ ಮತ್ತು ಫ್ಯೂಡಲಿಸಂ ಜೊತೆಯಾಗಿ ಯುದ್ಧ ಮಾಡಿತು.

ಬಳ್ಳಾರಿ ಜಿಲ್ಲೆಯಲ್ಲಿ ಪಾಳೇಗಾರ ಕುಟುಂಬಗಳಿಗೆ ಬ್ರಿಟೀಷರು ಘೋಷಿಸಿದ ಸವಲತ್ತುಗಳ ಬಗ್ಗೆ ಜೆ.ಸಿ.ದುವಾ ವಿವರವಾಗಿ ಬರೆಯುತ್ತಾರೆ. (41) ಪಾಳೇಗಾರರಿಗೆ ಕೊಡಲಾಗುತ್ತಿದ್ದ ಪಿಂಚಣಿ ಎಷ್ಟು ನಿರಂತರವಾಗಿತ್ತೆಂದರೆ ‘ಸ್ವಾತಂತ್ರ್ಯ’ ಬಂದ ಎರಡು ದಶಕಗಳ ನಂತರ 1969ರಲ್ಲಿ ತಹಸೀಲ್ದಾರ್ ಕಛೇರಿಗೆ ಭೇಟಿ ಕೊಟ್ಟಾಗ ಪಾಳೇಗಾರರ ವಂಶಸ್ಥರು ಸರಕಾರದಿಂದ ಇನ್ನೂ ಪಿಂಚಣಿ ನೀಡುತ್ತಿದ್ದ ವಿಷಯ ತಿಳಿಯಿತು! (42)

ಬುಚನನ್ ಹೇಳುತ್ತಾರೆ: “ಎಲ್ಲಾ ಪಾಳೇಗಾರರಿಗೆ ಅವರವರ ಆಸ್ತಿಪಾಸ್ತಿಯನ್ನು ಹಿಂದಿರುಗಿಸಲಾಯಿತು ಮತ್ತು ಬಂಗಾಲದ ಜಮೀನುದಾರರಿಗೆ ರೂಪಿಸಿದ ನೀತಿಗಳನ್ನು ಹೇರಲಾಯಿತು. ಒಂದು ನಿರ್ದಿಷ್ಟ ಮೊತ್ತವನ್ನು ಬಾಡಿಗೆಯಾಗಿ ನೀಡಬೇಕಿತ್ತು ಅಥವಾ ಕಪ್ಪಕಾಣಿಕೆಯನ್ನು ಒಪ್ಪಿಸಬೇಕಿತ್ತು. ಆದರೆ ಜನರ ಮೇಲೆ ಇವರಿಗೆ ಯಾವುದೇ ನ್ಯಾಯಾಧಿಕಾರ ನೀಡಲಿಲ್ಲ; ಜನರ ರಕ್ಷಣೆಗೆ ಶಿರಸ್ತೇದಾರರನ್ನು ಸಂಬಳದ ಮೇಲೆ ಸರಕಾರವೇ ನೇಮಿಸಿತು. ರೆವೆನ್ಯೂ ಮತ್ತು ಪೋಲೀಸ್ ಅಧಿಕಾರಿಗಳ ಖರ್ಚನ್ನು ಪಾಳೇಗಾರರು ನೋಡಿಕೊಳ್ಳಬೇಕಿತ್ತು. ಮೊದಲಿನ ಆದಾಯಕ್ಕೆ ಹೋಲಿಸಿದರೆ ಈಗವರಿಗೆ ಆಗುತ್ತಿದ್ದ ಲಾಭ ನಾಲ್ಕರಲ್ಲಿ ಒಂದರಷ್ಟಾದರೂ ದೇಶದ ಪರಿಸ್ಥಿತಿ ಸುಧಾರಿಸಿದಂತೆ ಆದಾಯ ಬಹಳಷ್ಟು ಹೆಚ್ಚಾಗುತ್ತದೆ.” (43)

ಹಳೆಯ ಮೈಸೂರಿನಲ್ಲಿ ಎರಡು ರೀತಿಯಿಂದ ವಸಾಹತುಶಾಹಿ ಫ್ಯೂಡಲಿಸಮ್ಮಿನ ಜೊತೆ ಹೊಂದಿಕೊಂಡಿತು. ಒಂದೆಡೆ ಮೈಸೂರು ಸಾಮ್ಯಾಜ್ಯದ ಹೃದಯ ಭಾಗದಲ್ಲಿ ಪಾಳೇಗಾರರ ನಿರ್ನಾಮವಾಗಿಬಿಟ್ಟಿತ್ತು. ಉಳಿದ ಕೆಲವೇ ಕೆಲವು ಪಾಳೇಗಾರರಿಗೆ ಪಿಂಚಣಿ ನೀಡಿ ಹಳ್ಳಿಗಳ ಪಟೇಲರನ್ನಾಗಿ ಮಾಡಲಾಯಿತು. ಮತ್ತೊಂದೆಡೆ ತಮಿಳುನಾಡು ಮತ್ತು ಆಂಧ್ರಪ್ರದೇಶದ ಗಡಿಗಳಿಗೆ ಹೊಂದಿಕೊಂಡ ಭಾಗಗಳಲ್ಲಿ ಪಾಳೇಗಾರ ಪದ್ಧತಿ ಇನ್ನೂ ಸಶಕ್ತವಾಗಿತ್ತು; ಕಾರಣ ಟಿಪ್ಪು ಸುಲ್ತಾನ ಅವರ ವಿರುದ್ಧ ಹೋರಾಡಲಾರಂಭಿಸಿದ್ದು ತುಂಬ ತಡವಾಗಿ. ಈ ಪಾಳೇಗಾರರು ಜಮೀನ್ದಾರರಾದರು ಮತ್ತು ರೈತ – ಕೂಲಿಯವರಿಂದ ತೆರಿಗೆ ವಸೂಲಿ ಮಾಡುತ್ತಿದ್ದರು.

ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದಲ್ಲಿ ನೋಡಿದಂತೆ ಮಲೆನಾಡು ಮತ್ತು ಕರಾವಳಿ ದೊಡ್ಡ ದೊಡ್ಡ ಭೂಮಾಲೀಕರ ಪ್ರದೇಶವಾಗಿತ್ತು. ಕರಾವಳಿಯಲ್ಲಿ ದೊಡ್ಡ ಭೂಮಾಲೀಕರನ್ನು ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಸಾಯಿಸಿದರು, ಬಂಧಿಸಿದರು, ಓಡಿಸಿದರು, “ಸ್ಥಳೀಯ ತೆರಿಗೆ ಸಂಗ್ರಹಕಾರರ ಜಾಗದಲ್ಲಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನನ ಸೈನಿಕ ಅಧಿಕಾರಿಗಳು ನೇಮಕವಾಗಿದ್ದರು”; ಭೂಮಿಯನ್ನು ಗುತ್ತಿಗೆಗೆ ಪಡೆದಿದ್ದ ಮೂಲಗೇಣಿದಾರರು ಕೃಷಿ ಮಾಡುತ್ತಿದ್ದುದು ಕಡಿಮೆ. (44) ಉಪಗುತ್ತಿಗೆ ನೀಡುತ್ತದ್ದ ಮೂಲಗೇಣಿದಾರರು ಭೂಮಾಲೀಕರ ಅನುಪಸ್ಥಿತಿಯಲ್ಲಿ ತಾವೇ ಒಡೆಯರಾದರು. ಮೂಲಗೇಣಿದಾರರ ಬಳಿ ಜೀತದ ಕೆಲಸಗಾರರಿದ್ದರು.

ಕರಾವಳಿ 1800-1802ರಲ್ಲಿ ಬ್ರಿಟೀಷರ ಕೈವಶವಾದ ತಕ್ಷಣ ಅದರ ಕುರಿತು ನಿರ್ಣಯಗಳನ್ನು ತೆಗೆದುಕೊಂಡ ಮನ್ರೋ ತನ್ನ ಕೆಲಸವನ್ನು ಪೂರ್ಣಗೊಳಿಸಿದ ಕುರಿತು ಈ ರೀತಿ ಹೇಳುತ್ತಾನೆ: “ದೇಶವನ್ನು ದೊಡ್ಡ ಎಸ್ಟೇಟುಗಳಾಗಿ ವಿಭಾಗಿಸಿದ ಮೇಲೆ, ಪಟೇಲರಿಗೆ ಮತ್ತು ಚಿಕ್ಕ ಎಸ್ಟೇಟಿನ ಮಾಲೀಕರಿಗೆ ಒಪ್ಪಿಸಬೇಕು. ತನ್ನ ಭೂಭಾಗವನ್ನು ಬಿಟ್ಟು ಉಳಿದೆಡೆಯ ಸ್ಥಿರಾಸ್ತಿಯಲ್ಲಿ ಯಾವುದೇ ಪಾಲಿಲ್ಲದ ಕಾರಣ ಇವರು ಅವರ ಜಹಗೀರಿಗಷ್ಟೇ ದೊರೆಯ ರೀತಿ ಉಳಿಯುತ್ತಾರೆ. ವೈಫಲ್ಯಗಳಿಗೂ ಅವರೇ ಹೊಣೆಗಾರರಾಗುವುದರಿಂದ ಈ ಕೆಳಗಿನ ಸವಲತ್ತುಗಳನ್ನು ಅವರಿಗೆ ನೀಡಲಾಗುವುದು. ಮೊದಲನೆಯದಾಗಿ ಜಮಾ ಆದ ಹಣದಲ್ಲಿ ಎರಡು ಪರ್ಸೆಂಟಿನಷ್ಟು ರಿಯಾಯತಿಯನ್ನು ಈಗಾಗಲೇ ನಾನು ಪ್ರಸ್ತಾಪಿಸಿರುವ ಕಡಿತದಲ್ಲಿ ಸೇರಿಸಬೇಕು. ಉಳಿದದ್ದು ಚಿಕ್ಕ ಭೂಮಾಲೀಕರು ಮತ್ತು ರೈತರು ತುಂಬಿ ಕೊಡಬೇಕು. ಎರಡನೆಯದಾಗಿ ಒಣ ಭೂಮಿಯ ಮಾಲೀಕತ್ವ ಹೊಂದಿರುವವರೊಡನೆ ಏರ್ಪಾಟು ಮಾಡಿಕೊಂಡು ವ್ಯವಸಾಯ ಪ್ರಾರಂಭಿಸಿದ ಎರಡನೇ ವರ್ಷದಿಂದ ಬಿದನೂರು ಕಾಯ್ದೆಯ ಪ್ರಕಾರ ಹಣ ಪಾವತಿಸಬೇಕು. ಮೂರನೆಯದಾಗಿ ಕೆಳಜಾತಿಯವರಿಗೆ ಉತ್ತರಾಧಿಕಾರಿಗಳಿಲ್ಲದಿದ್ದಲ್ಲಿ ಇದುವರೆಗೆ ತಮ್ಮ ಆಸ್ತಿಯನ್ನು ಸರಕಾರಕ್ಕೆ ವಹಿಸುತ್ತಿದ್ದರು; ಇನ್ನು ಮುಂದೆ ಪಟೇಲರಿಗೆ ಒಪ್ಪಿಸಬೇಕು. ಮತ್ತು ಆ ಆಸ್ತಿ ಪಟೇಲರ ಸ್ವಂತ ಆಸ್ತಿಯಂತಾಗುತ್ತದೆ. 

…. ನಾನು ಅನುಮೋದಿಸಿದ ಈ ನಿಯಮಗಳು ಕೆನರಾದ ಎಲ್ಲಾ ಭಾಗಗಳಿಗೆ ಮತ್ತು ಅಂಕೋಲಾ, ಸುಂಡಾ ಹಾಗೂ ಬಿಳಗಿಯ ಬಹುತೇಕ ಭಾಗಗಳಿಗೆ ಅನ್ವಯಿಸುತ್ತದೆ….” (45) 

ಬ್ರಿಟೀಷರ ಎಲ್ಲಾ ಯತ್ನಗಳು ಸ್ಥಳೀಯ ಆಡಳಿತದಲ್ಲಿ ಭೂಮಾಲೀಕರ ವರ್ಗವನ್ನು ಸಬಲಗೊಳಿಸುವುದಾಗಿತ್ತು. ಈ ಭೂಮಾಲೀಕರು ಕೆಲವೇ ದಶಕಗಳ ಹಿಂದೆ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನನ ಆಡಳಿತಾವಧಿಯಲ್ಲಿ ನಿರ್ನಾಮವಾಗಿಬಿಟ್ಟಿದ್ದರು. 

ಮೂಡಬಿದಿರೆಯಲ್ಲಿನ ಭೂವ್ಯಾಜ್ಯಗಳನ್ನು ಪರಿಹರಿಸುವ ಸಂದರ್ಭದಲ್ಲಿ (ಅಕ್ಟೋಬರ್ 1800) ಮನ್ರೋ ಬರೆದ ಪತ್ರವೊಂದರಲ್ಲಿ: “ಭೂವ್ಯಾಜ್ಯಗಳ ಪರಿಹಾರವನ್ನು ಭೂಮಾಲೀಕರೊಡನೆ ಮಾಡಲಾಯಿತು. ಭೂಮಾಲೀಕರಿಲ್ಲದ ಕಡೆಗಳಲ್ಲಿ ಮೂಲಗೇಣಿದಾರರೊಡನೆ ಭೂವ್ಯವಹಾರ ನಡೆಸಲಾಯಿತು….” (46) 

ಕುರುಪ್ ನ ಮಾತುಗಳನ್ನು ಉಲ್ಲೇಖಿಸುತ್ತ ಶಾಮ್ ಭಟ್ ಮನ್ರೋನ ಪರಿಹಾರಗಳ ಬಗ್ಗೆ: “ಕಾಸರಗೋಡಿನ (ಹಳೆಯ ಬೇಕಲ್) ಭೂಮಾಲೀಕತ್ವ ಮತ್ತು ಕೃಷಿ ವ್ಯವಸ್ಥೆಯ ಬಗ್ಗೆ ಅಧ್ಯಯನ ನಡೆಸಿದ ಕೆ.ಕೆ.ಎನ್.ಕುರುಪ್ ಹೇಳುತ್ತಾರೆ: ‘ವಿದ್ವಾಂಸರಾದ ಆರ್.ಸಿ.ದತ್ ರವರು ಮನ್ರೋನ ರೈತವಾರಿ ಪದ್ಧತಿ ಭೂಮಿಯ ಮಾಲೀಕತ್ವವನ್ನು ಗೇಣಿ ಮಾಡುತ್ತಿದ್ದ ರೈತರಿಗೆ ಮತ್ತು ಕೂಲಿಯವರಿಗೆ ನೀಡುವುದೆಂದು ಅಭಿಪ್ರಾಯ ಪಟ್ಟರೂ ಅಸಲಿಗೆ ಮನ್ರೋನ ರೈತವಾರಿ ಪದ್ಧತಿ ಭೂಮಿಯ ಏಕಸ್ವಾಮ್ಯವನ್ನು ಸಾರುತ್ತ, ಸಾವಿರಾರು ಎಕರೆ ಜಮೀನುಗಳನ್ನು ವ್ಯವಸಾಯವೇ ಮಾಡದ ಜಮೀನ್ದಾರರ ಪಾಲು ಮಾಡಿತ್ತು. 

ದಕ್ಷಿಣ ಕನ್ನಡದಲ್ಲಿ ಮನ್ರೋ ಮಾಡಿದ್ದೂ ಇದನ್ನೇ. 

ಕೆನರಾದಲ್ಲಿ ಥಾಮಸ್ ಮನ್ರೋ ಪರಿಚಯಿಸಿದ ರೈತವಾರಿ ಪದ್ಧತಿಯಲ್ಲಿ ‘ಭೂಮಿಯ ಮಾಲೀಕತ್ವದ ನಿರ್ಧಾರವಾಗುತ್ತಿದ್ದುದು ಹಕ್ಕು ಪತ್ರ ಅಥವಾ ಮೂಲಪಹಣಿ ಹೊಂದಿದ್ದ ಆಧಾರದ ಮೇಲೆ. ಕೃಷಿ ಮಾಡುತ್ತಿದ್ದರೇ ಇಲ್ಲವೇ ಎನ್ನುವುದು ಮುಖ್ಯವಾಗುತ್ತಿರಲಿಲ್ಲ’.” (47)