ಇತ್ತೀಚೆಗೆ ಭಾರತದಲ್ಲಿ ಸ್ಟಾರ್ಟ್ ಅಪ್ ಗಳನ್ನು ಉತ್ತೇಜಿಸುವುದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿರುವ ಯೋಜನೆಗಳು ಸುದ್ದಿಯಲ್ಲಿವೆ. ಒಂದು ಸಾವಿರ ಕೋಟಿ ಸರಕಾರಿ ಫಂಡ್ ಜೊತೆಗೆ ತೆರಿಗೆ ವಿನಾಯಿತಿ, ಪರಿಸರ ಸಂರಕ್ಷಣೆಯ ಕಾಯ್ದೆಗಳಿಂದ ವಿನಾಯಿತಿ ಅಲ್ಲದೆ ಕಾರ್ಮಿಕ ಕಾಯ್ದೆಗಳಿಂದಲೂ ವಿನಾಯಿತಿ ಸ್ಟಾರ್ಟ್ ಅಪ್ ಗಳಿಗೆ ದೊರಕಲಿದೆ.
ಇವುಗಳಲ್ಲಿ ನನಗೆ ಹೆಚ್ಚಿನ ಆಘಾತವುಂಟು ಮಾಡಿದ್ದು ಭಾರತದಂತಹ ದೇಶದಲ್ಲಿ ಕಾರ್ಮಿಕ ಕಾಯ್ದೆಗಳಿಂದ ವಿನಾಯಿತಿ ನೀಡುವ ನಿರ್ಧಾರ. ನಾಲ್ಕು ವರ್ಷಗಳ ಹಿಂದೆ ನಾನು ಹರಿಪ್ರಸಾದ್ ನಾಡಿಗ್ ಎನ್ನುವವರು ಪ್ರಾರಂಭಿಸಿದ್ದ ಸಾರಂಗ ಇನ್ಫೋಟೆಕ್ ಎಂಬ ಸ್ಟಾರ್ಟ್ ಅಪ್ ಒಂದರಲ್ಲಿ ನನ್ನ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದೆ. ಕ್ಯಾಂಪಸ್ ನಲ್ಲಿರುವಾಗಲೇ ಮಲ್ಟಿ ನ್ಯಾಶನಲ್ ಕಂಪೆನಿಯೊಂದರಲ್ಲಿ ಕೆಲಸ ಸಿಕ್ಕಿತ್ತಾದರೂ ಸ್ಟಾರ್ಟ್ ಅಪ್ ಗಳಲ್ಲಿ ಕೆಲಸ ಮಾಡಬೇಕೆಂಬ ನನ್ನ ಹಂಬಲದಿಂದ ಅವರ ಕಂಪೆನಿಯನ್ನು ಸೇರಿದೆ.
ಆ ಕಂಪೆನಿಯಲ್ಲಿ ನನ್ನ ಗೆಳೆಯರನ್ನೂ ಸೇರಿಸಿದೆ. ಕಾಲಕ್ರಮೇಣ ಹರಿ ಪ್ರಸಾದ್ ನಾಡಿಗ್ ವರ್ತನೆಯಿಂದ ಬೇಸತ್ತು ಕೆಲವರು ಕೆಲಸ ಬಿಟ್ಟರು. ನನ್ನ ಮೇಲೆ ನಂಬಿಕೆಯಿಟ್ಟು ಕೆಲಸಕ್ಕೆ ಸೇರಿದವರನ್ನು ನಾನಾ ರೀತಿಯಲ್ಲಿ ಪೀಡಿಸಲಾಯ್ತು. ಇದನ್ನು ಪ್ರಶ್ನಿಸಿದಕ್ಕೆ ನನ್ನನ್ನು ಅಪರಾಧಿಯೆಂಬಂತೆ ನೋಡಿಕೊಳ್ಳಲಾಯ್ತು, ವಿಪರೀತ ಮಾನಸಿಕ ಕಿರುಕುಳ ನೀಡಲಾಯ್ತು. ಸಂಬಳ, ಅನುಭವ ಪತ್ರಗಳನ್ನು ನೀಡದೆ ಹೊರಹಾಕಲಾಯ್ತು.
ವಿಪರ್ಯಾಸವೆಂದರೆ ಈ ಕಂಪೆನಿಯ ಡೈರೆಕ್ಟರ್ ಗಳಲ್ಲಿ ಒಬ್ಬರಾದ ಅಡ್ಡೂರು ಕೃಷ್ಣರಾವ್ ಹೆಸರಾಂತ ಆರ್ಟಿಐ ಹೋರಾಟಗಾರರು, ಗ್ರಾಹಕ ಹಾಗೂ ಕಾರ್ಮಿಕ ಹಕ್ಕು ಸಂರಕ್ಷಣೆಯ ಹೋರಾಟಗಾರರು.
ಕಂಪೆನಿ ಹಾಗೂ ಅದರ ನಿರ್ವಾಹಕರ ವರ್ತನೆಯನ್ನು ಸಹಿಸದೆ ನ್ಯಾಯ ಕೋರಿ ನಾನು ಕಾರ್ಮಿಕ ಇಲಾಖೆಗೆ ಅಲೆದಾಯ್ತು. ಡೈರಿ ಸರ್ಕಲ್ ನಲ್ಲಿರುವ ಕಾರ್ಮಿಕ ಇಲಾಖೆಯಲ್ಲಿ ವಿಚಾರಣೆ ನಡೆದು ಕಂಪೆನಿ ನನ್ನ ದೂರನ್ನು ಇತ್ಯರ್ಥಗೊಳಿಸಲು ಸಹಕರಿಸುತ್ತಿಲ್ಲ ಎಂದು ಕಾರ್ಮಿಕ ಇಲಾಖೆಯ ಅಧೀಕ್ಷಕರು ಕೈಚೆಲ್ಲಿದರು. ದೂರನ್ನು ಸಿವಿಲ್ ನ್ಯಾಯಾಲಯಕ್ಕೆ ಕೊಂಡೊಯ್ಯುವಂತೆ ಸೂಚಿಸಿದರು. ನ್ಯಾಯಾಲಯದಲ್ಲಿಯೂ ಸಹ ದೂರನ್ನು ಸಲ್ಲಿಸಯಾಯ್ತು. ಇದೆಲ್ಲ ಶುರುವಾಗಿ ಮೂರು ವರ್ಷಗಳು ಕಳೆದಿವೆ. ನ್ಯಾಯಾಲಯದಲ್ಲಿ ಸಾರಂಗ ಇನ್ಫೋಟೆಕ್ ಸಂಸ್ಥೆಯ ಹರಿಪ್ರಸಾದ್ ನಾಡಿಗ್ ಹಾಗೂ ಸುಮ ಅಡ್ಡೂರು ವಿರುದ್ಧ ಮೊಕದ್ದಮೆ ನಡೆಯುತ್ತಿದೆ.
ನ್ಯಾಯಾಲಯದೆದುರು ನಡೆಯುತ್ತಿರುವ ನಾಟಕಗಳು, ಮೊಕದ್ದಮೆ ವಿಳಂಬವಾಗಿಸುವ ತಂತ್ರಗಳು ಇವೆಲ್ಲವನ್ನು ದಾಖಲಿಸಿದರೆ ದೊಡ್ದ ಪುಸ್ತಕವೇ ಆದೀತು.
ಇದನ್ನು ಇಂದು ನೆನಪಿಸಿಕೊಳ್ಳುವುದಕ್ಕೆ ಈ ಮೊದಲು ಉಲ್ಲೇಖಿಸಿದ ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯ ಕಾರ್ಮಿಕ ಕಾಯ್ದೆಗಳ ವಿನಾಯಿತಿ ಕಾರಣ. ಅಸಮಾನ ಅಧಿಕಾರವಿರುವ ಯಾವುದೇ ಸಂಬಂಧದಲ್ಲಿ ಸರ್ಕಾರದ ಜವಾಬ್ದಾರಿ ದುರ್ಬಲರ ಪರವಾಗಿ ನಿಲ್ಲುವುದರಲ್ಲಿ ಇರಬೇಕು. ಐಟಿ ವಲಯದ ನೌಕರರಲ್ಲಿ ಸಂಘಟನೆ ಎಂಬುದೇ ಇಲ್ಲ. ವ್ಯಾಜ್ಯಗಳಲ್ಲಿ ನೌಕರರನ್ನು ಸಿಂಗಲ್ ಔಟ್ ಮಾಡಿ ಕಿರುಕುಳ ನೀಡಲಾಗುತ್ತೆ. ಈಗಿರುವ ಹಲ್ಲಿಲ್ಲದ ಕಾಯ್ದೆಗಳನ್ನು ಜೇಬು ಭದ್ರವಾಗಿರುವ ಕಂಪೆನಿಗಳು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು. ಕಾನೂನು ಹೋರಾಟವನ್ನು "ಬಿಸಿನೆಸ್ ಕಾಸ್ಟ್" ಎಂದು ಎಷ್ಟು ವರ್ಷಗಳವರೆಗಾದರೂ ಎಳೆದಾಡಬಹುದು.
ಇಷ್ಟಲ್ಲದೆ ಸ್ಟಾರ್ಟ್ ಅಪ್ ಗಳಲ್ಲಿ ಕೆಲಸ ಮಾಡುವ ನೌಕರರು ಎಷ್ಟು ವಲ್ನರಬಲ್ ಆಗಿರುತ್ತಾರೆಂದರೆ ಅವರಿಗೆ ಪಿ ಎಫ್ ಇರುವುದಿಲ್ಲ, ಆರೋಗ್ಯ ವಿಮೆ ಇರುವುದಿಲ್ಲ, ಉದ್ಯೋಗ ಭದ್ರತೆಯಿರುವುದಿಲ್ಲ. ಮೇಲಾಗಿ ಪುಡಿಗಾಸಿಗೆ ಕತ್ತೆ ಚಾಕರಿ ಮಾಡಿಸಿಕೊಳ್ಳುವ "ಆಂತ್ರಪ್ರಿನರ್" ಉದ್ಯೋಗದಾತರು! ಇಂತಹ ಪರಿಸ್ಥಿತಿಯಲ್ಲಿ ನೆರವಾಗಬಹುದಾದ ಕಾಯ್ದೆಗಳಿಂದಲೂ ಈ ಕಂಪೆನಿಗಳಿಗೆ ವಿನಾಯಿತಿ ಕೊಟ್ಟುಬಿಟ್ಟರೆ ನೌಕರರ ಜುಟ್ಟು ಹಿಡಿದು ಕ್ಯಾಪಿಟಲಿಸ್ಟರ ಕೈಗೆ ಕೊಟ್ಟಂತೆಯೇ! ನಷ್ಟವಾದ ಕಂಪೆನಿ ದಿವಾಳಿ ಘೋಷಿಸಬಹುದು ಆದರೆ ಕೆಲಸ ಕಳೆದುಕೊಂಡು, ಮಾನಸಿಕ (ಕೆಲವೊಮ್ಮೆ ದೈಹಿಕ)ಕಿರುಕುಳ ಅನುಭವಿಸಿ ಬೀದಿಗೆ ಬೀಳುವ ನೌಕರರು ಸ್ಟಾರ್ಟ್ ಅಪ್ ಇರಲಿ ಸ್ಟ್ಯಾಂಡ್ ಅಪ್ ಆಗುವುದು ಕನಸಿನ ಮಾತಾಗುವುದು
No comments:
Post a Comment