ದಿನೇ ದಿನೇ ಹೆಚ್ಚುತ್ತಲೇ ಇರುವ ಹಿಂದಿ ಹೇರಿಕೆಯ ವಿರುದ್ಧ ಹೋರಾಟಗಳು ನಾನಾ ರೂಪ ಪಡೆದುಕೊಳ್ಳುತ್ತಿವೆ, ಸರಕಾರಗಳು ಎಚ್ಚೆತ್ತುಕೊಳ್ಳದಿದ್ದರೆ ಒಂದೋ ಹೋರಾಟಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತವೆ ಇಲ್ಲಾ ಕುರಿಮಂದೆಯಂತಹ ಕನ್ನಡಿಗರು ‘ರಾಷ್ಟ್ರಭಾಷೆ’ ‘ಏಕತೆ’ ‘ಭಾರತ ದೇಶ’ ಎಂಬ ರಾಷ್ಟ್ರೀಯ ಪಕ್ಷಗಳ ಘೋಷಣೆಗಳ ಭ್ರಮೆಯಲ್ಲಿ ಮುಳುಗಿಹೋಗಿ ಕನ್ನಡವನ್ನೂ ಮುಳುಗಿಸಿಬಿಡುತ್ತಾರೆ. ರತೀಶ್ ರತ್ನಾಕರ ಇಂಥಹ ಕನ್ನಡಿಗರನ್ನು ಬಡಿದೆಬ್ಬಿಸಲು ‘ಪರಪಂಚ’ ಚಿತ್ರದ “ಹುಟ್ಟಿದ ಊರನ್ನು ಬಿಟ್ಟು ಬಂದ ಮೇಲೆ” ಹಾಡಿನ ದಾಟಿಯಲ್ಲಿ “ಹುಟ್ಟಿದ ಊರಿಗೆ ಹಿಂದಿ ಬಂದ ಮೇಲೆ” ಎಂಬ ಗೀತೆ ರಚಿಸಿದ್ದಾರೆ. ಪರಪಂಚ ಚಿತ್ರದ ಹಾಡು ಎಲ್ಲರ ಬಾಯಲ್ಲಿ ನಲಿಯಲಾರಂಭಿಸಿದ್ದು ಅನವಶ್ಯಕ ಕಾರಣಗಳಿಂದ ಪ್ರಸಿದ್ಧಿಗೆ ಬಂದಿದ್ದ ವೆಂಕಟ್ ಬಾಯಲ್ಲಿ ಅದನ್ನು ಮತ್ತೆ ಹಾಡಿಸಿದಾಗ. ರತೀಶ್ ರತ್ನಾಕರರ ಹಾಡನ್ನೊಮ್ಮೆ ಓದಿಬಿಡಿ, ಹಂಚಿಕೊಳ್ಳಿ, ಸಾಧ್ಯವಾದರೆ ಅದೇ ರಾಗದಲ್ಲಿ ಹಾಡಿ ವೀಡಿಯೋ ಅಪ್ ಲೋಡ್ ಮಾಡಿ, ಎಲ್ಲದಕ್ಕಿಂತ ಮುಖ್ಯವಾಗಿ ಹಿಂದಿ ಹೇರಿಕೆಯ ವಿರುದ್ಧ ದನಿಎತ್ತಿ.
‘ಹುಟ್ಟಿದ ಊರಿಗೆ ಹಿಂದಿ ಬಂದ ಮೇಲೆ ಇನ್ನೇನು ಬರುವುದು ಬಾಕಿ ಇದೆ
ನಿನ್ನೂರಲ್ಲೇ ನೀನು ಆಗ್ಬೇಡ ಪರದೇಸಿ ಎದ್ದೇಳು ಕಾಲ ಮಿಂಚಿ ಹೋಗೋದ್ರೊಳ್ಗೆ
ಹಿಂದೆ ಹೇರಿಕೆ ಊರ ತುಂಬಿದೆ ನಿನ್ನ ಇರುವನು ಅಳಿಸಲು
ತಾಯ್ನುಡಿಗಿಂತ ಇನ್ನೇನು ಬೇಕು ನಿನ್ನಯ ಬದುಕು ಬೆಳಗಲು
ನಿದ್ದೆಯಿಂದೇಳೋ ಮಗನೆ ಮೈಕೊಡ್ವಿ ನಿಲ್ಲೋ ಸಿವನೆ
ಕಣ್ಣುಬಿಡು ಎಲ್ಲಾ ನೋಡು ಕೈಯನ್ನೆತ್ತಿ ಕೂಗಿಬಿಡು || ಹುಟ್ಟಿದ ಊರಿಗೆ ||
ನಿನ್ನುಡಿ ಒಟ್ಟಿಗೆ ಹಿಂದಿಯೂ ಇದ್ದರು ಅಲ್ಲೇನೋ ಮಾಟ ಅಡಗಿದೆ
ಕನ್ನಡ ಅಳಿಸಿ ಹಿಂದಿಯೇ ಸಾಕು ಅನ್ನುವ ಕಾಲ ಬರಲಿದೆ
ಆಸೆಯ ತೋರಿಸಿ ಒತ್ತಾಯ ಮಾಡಿಸಿ ಹಿಂದಿಯ ಒಪ್ಪ ಬೇಕಂತಾರೊ
ಒಪ್ಪಿದರೆ ಅಲ್ಲಿ ಗುಂಡಿಯ ತೆಗೆದು ಇದ್ದಂತೆ ಮಣ್ಣು ಮಾಡ್ತಾರೊ
ಅಂಚೆಲಿ ಹಿಂದಿಯೇ ಮೊದಲಂತೆ ರೈಲಲ್ಲಿ ಕನ್ನಡ ಇಲ್ವಂತೆ
ಬ್ಯಾಂಕಲ್ಲಿ ಕೇಳೋದ್ ಬ್ಯಾಡ್ವಂತೆ ಕನ್ನಡ ಮಾಯ ಆಯ್ತಂತೆ
ಆಳೋರು ಕೈಯ ಕೊಟ್ರಂತೆ ಹಿಂದಿಯ ದಾಸರಾಗ್ ಬಿಟ್ರಂತೆ
ವಲಸೆಯೆ ಎಲ್ಲಾ ಹೆಚ್ಚಾಯ್ತು, ಕೆಲಸಾನೆ ನಿಂಗೆ ದೂರಾಯ್ತು
ನಿಂಗು ತಾಕತ್ತಿದೆ ಮಗನೆ, ತಲೆಯೆತ್ತಿ ನಿಲ್ಲೋ ಸಿವನೆ
ನಿದ್ದೆ ಬಿಡು ಎದ್ದು ನೋಡು ಹೆಜ್ಜೆಯಿಟ್ಟು ನುಗ್ಗಿಬಿಡು || ಹುಟ್ಟಿದ ಊರಿಗೆ ||
No comments:
Post a Comment