Jan 14, 2016

ಅಸಹಾಯಕ ಆತ್ಮಗಳು - ಅಲಮೇಲಮ್ಮನ ಮನೆಯೊಳಗಿನ ಅಬಲೆ!

madhusudan rangenahalli
ಕು.ಸ.ಮಧುಸೂದನ ರಂಗೇನಹಳ್ಳಿ
ನನಗೆ ಮದುವೆಯಾದಾಗ ಕೇವಲ ಹದಿನಾಲ್ಕು ವರ್ಷ ವಯಸ್ಸು. ಮೈನೆರೆದ ಆರೇ ತಿಂಗಳಿಗೆ ಮದುವೆ ಮಾಡಿದರು. ಮದುವೆ ಅಂದ್ರೇನು ಮನೆ ಮುಂದೆ ಚಪ್ಪರ ಹಾಕಿ ಊರಿಗೆಲ್ಲ ಊಟ ಹಾಕಿ ಮಾಡಿದ್ದಲ್ಲ. ಬಸ್ಸಿನಲ್ಲಿ ಧರ್ಮಸ್ಥಳಕ್ಕೆ ಹೋಗಿ ತಾಳಿಕಟ್ಟಿಸಿಕೊಂಡು ಬಂದಿದ್ದಷ್ಟೇ ನಮ್ಮ ಮದುವೆಯ ಸಂಭ್ರಮ. ಮದುವೆಯಾಗಿ ನೇರವಾಗಿ ಗಂಡನ ಮನೆಗೆ ಹೋದೆ. ನಮ್ಮೂರಿಂದ ಎಂಭತ್ತು ಮೈಲಿ ದೂರದ ಸಣ್ಣ ಊರದು. ಗಂಡನ ಮನೇಲಿ ಇದ್ದದ್ದು ಅಂದರೆ ನನ್ನ ಗಂಡ ಮತ್ತೆ ನಮ್ಮ ಅತ್ತೆ ಅಷ್ಟೇ. ಅತ್ತೆಗೂ ವಯಸ್ಸಾಗಿ ಕಣ್ಣು ಸರಿಯಾಗಿ ಕಾಣ್ತಿರಲಿಲ್ಲ. ಅಪ್ಪನ ಮನೆಯಂತೆ ಗಂಡನ ಮನೇಲೂ ಕಿತ್ತು ತಿನ್ನೊ ಬಡತನ. ಸಾಲಾಗಿ ಹುಟ್ಟಿದ ಏಳು ಹೆಣ್ಣು ಮಕ್ಕಳನ್ನು ದಾಟಿಸೋಕೆ ತುಂಬ ಕಷ್ಟ ಅಂತ ಗೊತ್ತಿದ್ದ ನಮ್ಮಪ್ಪ ಮೊದಲ ಮೂರೂ ಜನವನ್ನೂ ಅದೆಂಗೊ ಮಾಡಿ ನಮ್ಮಷ್ಟೇ ದರಿದ್ರರಾಗಿದ್ದ ಮನೆಗಳಿಗೆ ದಾಟಿಸಿದ್ದ. ಇನ್ನು ನಾಲ್ಕನೆಯವಳಾಗಿದ್ದ ನನಗೇನು ವಿಶೇಷವಾಗಿ ಮಾಡ್ತಾನೆ? ಕೈಗೆ ಸಿಕ್ಕ ಒಬ್ಬನಿಗೆ ಮದುವೆ ಮಾಡಿಕೊಟ್ಟು ಬಿಟ್ಟ. ನನ್ನ ಗಂಡನಿಗೆ ಪೋಲಿಯೊ ಆಗಿ ಕಾಲು ಎಳೆದು ನಡೆಯುತ್ತಿದ್ದ. ಹೇಳಿಕೊಳ್ಳೋ ಮಾತಲ್ಲ, ನಾನು ನೋಡೋಕೆ ಬೆಳ್ಳಗೆ ಮೈಕೈ ತುಂಬಿಕೊಂಡು ಲಕ್ಷಣವಾಗಿದ್ದೆ. ಇಷ್ಟು ಬೆಳ್ಳಗೆ ಚೆನ್ನಾಗಿರೊ ಹುಡುಗೀನಾ ಈ ಕುಂಟನಿಗೆ ಕೊಟ್ಟಿದಾರೆ ಅಂದರೆ ಹುಡುಗಿ ಏನೋ ಸರಿಯಿಲ್ಲ ಅನಿಸುತ್ತೆ ಅಂತ ಗಂಡನೂರಿನ ಜನ ಮಾತಾಡಿಕೊಳ್ಳಿದ್ದರು. ನಾನು ಅಂತಹುದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಇದ್ದೆ. ನಮ್ಮ ಮನೆಯಲ್ಲಿ ಬಡತನವಿದ್ದರು ನನ್ನ ಹೊರಗೆ ಕೂಲಿಗೆ ಅಂತ ಕಳಿಸ್ತಿರಲಿಲ್ಲ. ಹಾಗಾಗಿ ರೈತರ ಯಾವ ಕೆಲಸವು ಗೊತ್ತಿರಲಿಲ್ಲ. ಮೈ ನೆರೆಯೊತನಕ ಹಳ್ಳೀಲೆ ಇದ್ದ ಸ್ಕೂಲಲ್ಲಿ ಆರನೆ ಕ್ಲಾಸು ಮಾತ್ರ ಓದಿದ್ದೆ. 

ನನ್ನ ಗಂಡ ಅದೆ ಊರಲ್ಲಿದ್ದ ಒಂದು ಸಣ್ಣ ಹೋಟೆಲ್ಲಿನಲ್ಲಿ ಕೆಲಸ ಮಾಡ್ತಿದ್ದ. ಕೆಲಸ ಅಂದರೆ ಪಾತ್ರೆ ತೊಳೆಯೋದು, ಕ್ಲೀನ್ ಮಾಡೋದು ಹಿಟ್ಟು ರುಬ್ಬೋದು ಹೀಗೆ. ಅವರೇನು ಸಂಬಳ ಕೊಡ್ತಿದ್ದರು ನನಗಂತು ಗೊತ್ತಿರಲಿಲ್ಲ. ವಾರಕ್ಕೊಂದು ಸಾರಿ ಸಾಮಾನು ತಂದು ಹಾಕೋನು. ಬೆಳಿಗ್ಗೆ ಐದು ಗಂಟೆಗೆ ಎದ್ದು ಹೋಟೆಲಿಗೆ ಹೋದರೆ ರಾತ್ರಿ ಹನ್ನೆರಡು ಗಂಟೆಗೆ ಮನೆಗೆ ಬರೋನು. ಹಾಗೆ ಬರಬೇಕಾದರೆ ಹೊಟ್ಟೆ ತುಂಬ ಕುಡಿದೇ ಬರೋನು. ಇನ್ನು ಅತ್ತೆ ಪಾಪ ಯಾವಾಗಲು ಒಂದು ಮೂಲೇಲಿ ಕೂತು ಎಲೆ ಅಡಿಕೆ ಜಗೀತಾ ಗೊಣಗ್ತಾ ಕೂತಿರೋಳು. ಪಾಪ ಆಕೆ ಒಂದು ದಿನಾನು ದನಿಯೆತ್ತಿ ಮಾತಾಡಿದವಳಲ್ಲ. ಹೀಗೆ ಒಂದೂವರೆ ವರ್ಷ ಕಳೆದವು. ಅಷ್ಟರಲ್ಲಿ ಊರಿನ ಎಲ್ಲ ಗಂಡಸರ ಕಣ್ಣು ನನ್ನ ಮೇಲೆ ಬಿದ್ದಿರೋದು ನನಗೆ ಗೊತ್ತಾಗಿತ್ತು. ನನ್ನ ಗಂಡ ಅನಿಸಿಕೊಂಡ ಸೂಳೆಮಗನಿಗೆ ಕುಡಿಯೋದು ಮಾತ್ರವಲ್ಲ, ಓಸಿ ಆಡೋದು, ಅಂದರ್ ಬಾಹರ್ ಆಡೋದು ಸೇರಿದಂತೆ ಪ್ರಪಂಚದಾಗೆ ಇರೊ ಎಲ್ಲ ಚಟಗಳು ಇದ್ದವು. ಹಂಗಾಗಿ ಊರತುಂಬಾ ಸಾಲ ಮಾಡಿಕೊಂಡಿದ್ದ. ಅದರಲ್ಲೂ ಅವನ ದಾಯಾದಿಯೊಬ್ಬ ಇದ್ದ ಚನ್ನೇಗೌಡ ಅಂತ. ಅವನು ನಾವಿದ್ದ ಮನೆಯ ಪತ್ರ ಇಟ್ಟುಕೊಂಡು ಕೇಳಿದಾಗೆಲ್ಲ ಐವತ್ತು ನೂರು ಸಾಲ ಕೊಟ್ಟು ಹಾಳು ಮಾಡಿದ್ದ. 


ನಾನು ಮದುವೆಯಾಗಿ ಹೋದಮೇಲೆ ಅವನ ಕಣ್ಣು ನನ್ನ ಮೇಲೂ ಬಿತ್ತು. ಆ ಹಳ್ಳೀಲಿ ಒಬ್ಬಳು ಸಾವಿತ್ರಮ್ಮ ಅಂತ ಇದ್ದಳು. ಗಂಡ ಇದ್ದರು ಈ ಚನ್ನೇಗೌಡನ್ನ ಇಟ್ಟುಕೊಡಿದ್ದಳು. ಜೊತೆಗೆ ಮನೆಗೆಲಸಕ್ಕೆ ಅಂತ ಸುತ್ತಮುತ್ತ ಹತ್ತು ಹಳ್ಳಿಯ ಬಡಹುಡುಗಿಯರನ್ನು ಸಿಟಿಗಳಿಗೆ ಕಳಿಸೊ ದಲ್ಲಾಳಿ ಕೆಲಸ ಕೂಡಾ ಮಾಡ್ತಿದ್ದಳು. ನಾನು ಮದುವೆಯಾಗಿ ಹೋಗಿ ಮೂರೇ ತಿಂಗಳಿಗೆ ಆ ಸಾವಿತ್ರಮ್ಮ ಬಂದು ನೀನು ಹೂ ಅಂದರೆ ನಿನ್ನ ಗಂಡನ ಸಾಲಾನೆಲ್ಲ ವಜಾ ಮಾಡಿ ಮನೆ ಕಾಗದ ವಾಪಾಸು ಕೊಡ್ತಾನಂತೆ ಜೊತೆಗೆ ನಿನಗೇನು ಬೇಕಾದರು ಸಹಾಯ ಮಾಡ್ತಾನಂತೆ, ಏನು ಹೇಳ್ತೀಯಾ? ಅಂತ ಕೇಳಿ ನನ್ನ ಹತ್ತಿರ ಬಯಿಸ್ಕೊಂಡು ಹೋಗಿದ್ದಳು. ನಾನು ಥೂ ಅಂತ ಉಗಿದು ಕಳಿಸಿದ ಮೇಲೂ ಅವನು ಬಿಟ್ಟಿರಲಿಲ್ಲ. ಆಗಾಗ ಮನೆಗೆ ಬರೋದು ಆ ಕುಂಟನ ಜೊತೆ ಏನಿರ್ತಿಯಾ. ನನ್ನ ಜೊತೆ ಬಾ ತೋಟದ ಮನೇಲಿ ಇಟ್ಟು ಸಂಸಾರ ಮಾಡ್ತೀನಿ. ಅಂತೆಲ್ಲ ತಲೆ ಕೆಡಿಸೋಕೆ ನೋಡಿದ್ದ. ಆದರೆ ನಾನು ಅದಕ್ಕೆಲ್ಲ ಸೊಪ್ಪು ಹಾಕಿರಲಿಲ್ಲ.

ನಮ್ಮಪ್ಪನ ಮನೆಯಿಂದ ಯಾರೂ ಬರ್ತಿರಲಲ್ಲ. ಇಲ್ಲಿಗೆ ಬರೊ ಬಸ್ ಚಾರ್ಜ ದುಡ್ಡಿದ್ದರೆ ಮೂರು ದಿನದ ಊಟಕ್ಕಾಗುತ್ತೆ ಅನ್ನೋ ಸ್ಥಿತಿಲಿದ್ದ ಕುಟುಂಬ ಅದು. ಹಾಗಾಗಿ ಗಂಡನ ಮನೆಯ ಯಾವ ಸಂಕಟಾನು ಹೇಳಿಕೊಳ್ಳೋಕೆ ಅಂತ ನನಗ್ಯಾರು ಇರಲಿಲ್ಲ. ಬರ್ತಾ ಬರ್ತಾ ನನ್ನ ಗಂಡನ ಕುಡಿತ ಜಾಸ್ತಿಯಾಗ್ತಾ ಹೋಯ್ತು. ರಾತ್ರಿ ಕೆಲಸ ಮುಗಿದ ಮೇಲೆ ಯಾವುದಾದರು ತೋಟದಲ್ಲಿ ಕೂತು ಇಸ್ಪೀಟ್ ಆಡೋದು ಮಾಡ್ತಿದ್ದ. ವಾರಕ್ಕೊಮ್ಮೆ ಸಾಮಾನು ತಂದು ಹಾಕ್ತಾ ಇದ್ದವನು ಈಗ ತಿಂಗಳಾದರು ಸಾಮಾನು ತರ್ತಾ ಇರಲಿಲ್ಲ. ನಿದಾನಕ್ಕೆ ನಾನು ಮನೆ ಹೊಸಿಲು ದಾಟಬೇಕಾಯಿತು. ಹೋಟೆಲಿನ ಕೆಲಸದ ಟೈಮಲ್ಲೂ ಕುಡಿತಾನೆ ಅಂತ ಆ ಕೆಲಸದಿಂದ ಅವನನ್ನ ಬಿಡಿಸಿದರು. ಅಲ್ಲಿಗೆ ಅವನನ್ನು ನಂಬಿ ಕೂರೋ ಕಾಲ ಹೋಯ್ತು ಅಂತ ಗೊತ್ತಾಯ್ತು. ಒಂದೆರಡು ವಾರ ಕಳೆದ ಮೇಲೆ ಅವನು ಕೆಲಸ ಮಾಡ್ತಿದ್ದ ಹೋಟೆಲಿಗೆ ಹೋಗಿ ತೊಳೆಯೊ ಬಳಿಯೊ ಕೆಲಸ ಇದ್ರೆ ನನಗೆ ಕೊಡಿ ನಾನು ಮಾಡ್ತೀನಿ ಅಂದೆ. ಸರಿ ಅಂದರು. ಮಾರನೇ ದಿನದಿಂದ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಅಡಿಗೆ ಮಾಡಿಟ್ಟು ಹೋಟೆಲಿಗೆ ಹೋಗೋಕೆ ಶುರು ಮಾಡಿದೆ. ನಾನು ದುಡಿದು ತರ್ತಿದ್ದ ದುಡ್ಡಲ್ಲು ಗಂಡ ಪಾಲು ಕೇಳ ತೊಡಗಿದ. ನಾನು ಕೊಡದೆ ಹೋದಾಗ ಅವನ ಸಿಟ್ಟು ಜಾಸ್ತಿಯಾಗಿ ರಸ್ತೆಯಲ್ಲಿ ನಿಂತುಕೊಂಡು, “ಇವಳು ಪಾತ್ರೆ ತೊಳೆಯೊಕೆ ಹೋಗ್ತಿಲ್ಲ. ಅಲ್ಲಿಗೆ ಬರೊ ಗಿರಾಕಿಗಳ ಜೊತೆ ಮಲಗೋಕೆ ಹೋಗ್ತಿದಾಳೆ” ಅಂತ ಕೂಗಾಡ್ತಿದ್ದ. ಆ ಹಳ್ಳಿಯ ಜನ ಎಷ್ಟು ಕೆಟ್ಟವರಾಗಿದ್ರು ಅಂದರೆ ಒಬ್ಬರಾದರು ಬಂದು ಅವನಿಗೆ ಬುದ್ದಿ ಹೇಳ್ತಾ ಇರಲಿಲ್ಲ. ಹೀಗೇ ನಡೀತಾ ನಡೀತಾ ಇರಬೇಕಾದರೆ ಒಂದು ದಿನ ಹೋಟೆಲಿಗೆ ರಜಾ ಇತ್ತು. ಮದ್ಯಾಹ್ನದ ಹೊತ್ತಿಗೆ ಮನೇಲಿ ನಾನು ಅಡಿಗೆ ಮಾಡ್ತಿರುವಾಗ ಕುಡಿದು ಬಂದ ಗಂಡ ಜಗಳ ತೆಗೆದು ಹೊಡೆಯೋಕೆ ಶುರು ಮಾಡಿದ. ತಡೆಯುವಷ್ಟು ತಡೆದ ನಾನು ಅವನನ್ನು ರಸ್ತೆಗೆ ಎಳೆದು ಕೊಂಡು ಬಂದು ಬಿಟ್ಟು ಮನೆಯ ಬಾಗಿಲು ಹಾಕಿಕೊಂಡೆ. ಎಷ್ಟೊ ಹೊತ್ತಿನವರೆಗು ಅವನು ಕೂಗಾಡ್ತಲೇ ಇದ್ದ. ಒಳಗೆ ಬಂದೋಳು ಅಡಿಗೆ ಮುಗಿಸಿ ಅಳ್ತಾ ಕೂತಿದ್ದ ಮುದುಕಿಗೆ ಊಟ ಹಾಕಿ ಬಟ್ಟೆ ಒಗೆಯೋಕೆ ಅಂತ ಕೆರೆಗೆ ಹೊರಟೆ. ಬಾಗಿಲು ತೆಗೆದು ನೋಡಿದರೆ ಗಂಡ ಕಾಣಲಿಲ್ಲ. ಮತ್ತೆ ಕುಡಿಯೋಕೆ ಹೋಗಿರಬೇಕು ಅಂತನ್ನಿಸಿ ಬಾಗಿಲು ಮುಂದಕ್ಕೆಳೆದು ಕೊಂಡು ಕೆರೆಗೆಹೋದೆ. ಬಟ್ಟೆ ಒಗೆದು ಒಣಗಿಸಿಕೊಂಡು ಸಾಯಂಕಾಲ ಆರು ಗಂಟೆ ಹೊತ್ತಿಗೆ ಮನೆಗೆ ಬಂದೆ ಒಳಗೆ ಹೋಗಿ ನೋಡಿದರೆ ಅಡುಗೆಮನೆಯ ಸೂರಿಗೆ ನನ್ನ ಗಂಡ ನೇತಾಡ್ತಾ ಇದ್ದ. ನನಗೆ ಗಾಬರಿಯಾಗಿ ಹೊರಗೆ ಬಂದು ಬಾಯಿ ಬಾಯಿ ಬಡಿದುಕೊಂಡೆ. ಅಕ್ಕಪಕ್ಕದ ಜನ ಸೇರಿ ಹೆಣ ಇಳಿಸಿ ನೋಡಿದರೆ ಅವನಾಗಲೆ ಸತ್ತು ತುಂಬಾ ಹೊತ್ತಾಗಿತ್ತು. ಜಗುಲಿಯ ಮೇಲೆ ಹೆಣ ಮಲಗಿಸಿ ನೆಂಟರಿಷ್ಟರಿಗೆಲ್ಲ ಹೇಳಿಕಳಿಸಲಾಯಿತು. ಅವನ ದಾಯಾದಿ ಚನ್ನೇಗೌಡನೆ ಇದನ್ನೆಲ್ಲ ಮಾಡಿದ. ಅಷ್ಟೆಲ್ಲಾ ಮಾಡುತ್ತಿದ್ದರು ಅವನ ಕಣ್ಣೆಲ್ಲ ನನ್ನ ಮೇಲೇ ಇತ್ತು. ಸರಿ ಮಾರನೇ ದಿನ ಬೆಳಿಗ್ಗೆ ಮಣ್ಣು ಮಾಡೋದು ಅಂತ ತೀರ್ಮಾನ ಮಾಡಿದರು ಬೆಳಿಗ್ಗೆ ಆರು ಗಂಟೆಗೇನೆ ಪೋಲಿಸರು ಮನೆ ಮುಂದೆ ಬಂದು ನಿಂತು ಪಂಚನಾಮೆಯೆಲ್ಲ ಮಾಡಿದರು. ಮದ್ಯಾಹ್ನದೊತ್ತಿಗೆ ಮಣ್ಣು ಮುಗಿದರೂ ನನಗೆ ಮಾತ್ರ ಪೋಲಿಸರು ಪ್ರಶ್ನೆ ಮಾಡೋದು ನಿಲ್ಲಿಸಲಲ್ಲ. ಸಾಯಂಕಾಲದ ಹೊತ್ತಿಗೆ ಅವರು ನೀನೆ ಗಂಡನನ್ನು ನೇಣು ಹಾಕಿದಿಯಾ ಅಲ್ವಾ ಅಂತ ಕೇಳೋ ಮಟ್ಟಿಗೆ ಬಂದಿದ್ದರು. ನಾನು ಸತ್ಯ ಹೇಳಿದರು ಅವರು ಬಿಡಲಿಲ್ಲ. ನಿನ್ನ ಮೇಲೆ ನಮಗೆ ಕಂಪ್ಲೇಂಟ್ ಬಂದಿದೆ. ಅದಕ್ಕೇ ವಿಚಾರಣೆ ಮಾಡ್ತಾ ಇದೀವಿ. ಇವತ್ತು ನಿನ್ನ ಬಿಟ್ಟು ಹೋಗ್ತೀವಿ. ನಾಳೆ ಬೆಳಿಗ್ಗೆ ವಿಚಾರಣೆ ಮುಂದುವರೆಸ್ತೀವಿ ಅಂತ ಹೇಳಿ ಹೋದರು. ಮನುಷ್ಯರು ಎಷ್ಟು ಕ್ರೂರಿಗಳು ನೋಡಿ, ಮಣ್ಣಿಗೆ ಬಂದ ಅಪ್ಪ ಅಮ್ಮ ನನಗೂ ಹೇಳದೆ ವಾಪಾಸು ಹೋಗಿಬಿಟ್ಟಿದ್ದರು. ಅವತ್ತು ರಾತ್ರಿ ಹತ್ತುಗಂಟೆ ಸುಮಾರಿಗೆ ಸಾವಿತ್ರಮ್ಮ ಮನೆಗೆ ಬಂದವಳು, ನೋಡು ಈಗಲೇ ಹೇಳಿಬಿಡ್ತೀನಿ ನೀನು ಚನ್ನೇಗೌಡ ಹೇಳಿದ್ದಕ್ಕೆ ಹೂ ಅಂದರೆ ಯಾವ ಪೋಲಿಸಿನೋರು ಬೆಳಿಗ್ಗೆ ಬರಲ್ಲ. ಇಲ್ಲ ಅಂದರೆ ಕೊಲೆ ಕೇಸಲ್ಲಿ ನಿನ್ನ ಒಳಗೆ ಹಾಕ್ತಾರೆ ಅಂತ ಹೆದರಿಸಿದಳು. ಆಗ ನನಗೆ ಇದೆಲ್ಲ ಚನ್ನೇಗೌಡನದೇ ಕುತಂತ್ರ ಅನಿಸಿಬಿಟ್ಟಿತು. ಸಾವಿತ್ರಮ್ಮನನ್ನು ಇಲ್ಲ ಅಂತೇಳಿ ವಾಪಾಸು ಕಳಿಸಿ, ಮಾರನೆ ದಿನ ಪೋಲಿಸರಿಗೆ ನಿಜ ಹೇಳಿ ಬಿಟ್ರೆ ಆಯ್ತು. ಚನ್ನೇಗೌಡನ ಕಿತಾಪತಿಯನ್ನು ಹೇಳಿದರೆ ನನ್ನ ಕಷ್ಟ ಅರ್ಥವಾಗುತ್ತೆ ಅನಿಸಿ ಮಲಗಿದೆ. ಬೆಳಿಗ್ಗೆ ಬಂದ ಪೋಲಿಸನೊಬ್ಬ ನನ್ನನ್ನು ಮೂರುಮೈಲಿ ದೂರದ ಪಕ್ಕದೂರಿನ ಸ್ಟೇಷನ್ನಿಗೆ ಕರೆದುಕೊಂಡು ಹೋದ. ಅಲ್ಲಿದ್ದ ಸಬ್ ಇನ್ಸಫೆಕ್ಟರ್ ವಿಷಯವನ್ನೆಲ್ಲ ಕೇಳಿ ನನ್ನ ವಿಚಾರನೆ ಮಾಡಿ, ಆಯ್ತು ಎರಡು ದಿನ ನೀನಿಲ್ಲೆ ಇರು ನಾವು ನಿಮ್ಮ ಹಳ್ಳಿಗೆ ಹೋಗಿ ಸತ್ಯ ಏನು ಅಂತ ವಿಚಾರಿಸ್ತೀವಿ ಅಂದ. ಸಾಯಂಕಾಲದ ತನಕ ನಾನು ಅಲ್ಲೇ ಕೂತಿದ್ದೆ. ಅಲ್ಲಿದ್ದ ಇಬ್ಬರು ಮೂರು ಜನ ಪೋಲಿಸಿನವರು ನನ್ನ ನೋಡಿ ಕೆಟ್ಟದಾಗಿ ಮಾತಾಡೋದು ಕೇಳಿಸಿದರೂ ಏನೂ ಮಾಡೋಕಾಗದೆ ಸುಮ್ಮನಿದ್ದೆ. ಮದ್ಯಾಹ್ನ ಮಾತ್ರ ಪೋಲಿಸಿನವರೆ ಊಟ ತಂದುಕೊಟ್ಟಿದ್ದರು. ಸರಿ ಕತ್ತಲಾದ ಮೇಲೆ ಒಬ್ಬ ಪೋಲಿಸಿನವನು ಬಂದು, ನಡಿ ಸಾಹೇಬರು ನಿನ್ನ ವಿಚಾರಣೆ ಮಾಡಬೇಕಂತೆ ಅಂತ ಸ್ಟೇಷನ್ ಹಿಂದಿದ್ದ ಕ್ವಾಟ್ರಸ್ಸಿಗೆ ಕರೆದುಕೊಂಡು ಹೋದ. ನನ್ನ ಒಳಗೆ ಬಿಟ್ಟು ಅವನು ಮುಂದಿನಿಂದ ಬಾಗಿಲು ಹಾಕಿಕೊಂಡು ಹೋದ. ಅಲ್ಲಿದ್ದ ಇನ್ಸಪೆಕ್ಟರ್ ನನಗೆ ಕೂರೋಕೆ ಹೇಳಿ ಮತ್ತೊಂದು ಸಾರಿ ನೀನು ನಿಜ ಹೇಳಿದರೆ ನಾನು ಏನಾದರು ಸಹಾಯ ಮಾಡಬಹುದು, ಮಾಡಿರೋದನ್ನ ಒಪ್ಪಿಕೊಂಡು ಬಿಡು ಅಂತ ಹೆದರಿಸಿದ. ನಾನು ನಡೆದ ವಿಷಯವನ್ನೆಲ್ಲ ಬಿಡಿಸಿ ಬಿಡಿಸಿ ಹೇಳಿದರೂ ಅವನು ಕೇಳಲಿಲ್ಲ. ಹೀಗೆ ಸ್ವಲ್ಪ ಹೊತ್ತು ಆದಮೇಲೆ ಆಯಿತು ನಾನು ಹೇಳಿದ ಹಾಗೆ ಕೇಳಿದರೆ ನಿನ್ನ ಈ ಕೇಸಿಂದ ಬಿಡ್ತೀನಿ ಅಂತ ಹೇಳಿ ನನ್ನ ತೋಳುಹಿಡಿದು ಒಳಗಿನ ರೂಮಿಗೆ ಕರೆದುಕೊಂಡು ಹೋದ; ಅಲ್ಲಿದ್ದ ಮಂಚದ ಮೇಲೆ ಕೂರಿಸಿ ಇವತ್ತೊಂದು ರಾತ್ರಿ ಹೇಳಿದ ಹಾಗೆ ಕೇಳಿಕೊಂಡು ಸುಮ್ಮನಿದ್ದು ಬಿಡು ನಾಳೆಯಿಂದ ಆ ಚನ್ನೇಗೌಡ ನಿನ್ನ ಕಂಡರೆ ನಡುಗ ಬೇಕು ಹಾಗೆ ಮಾಡ್ತೀನಿ ಅಂದ. ಹಳ್ಳಿಯಲ್ಲಿ ಚನ್ನೇಗೌಡನಿಗೆ ತಿರುಗಿ ನಿಂತ ಹಾಗೆ ಇಲ್ಲಿ ನನಗೆ ನಿಲ್ಲೋಕೆ ಆಗಲಿಲ್ಲ. ಎಂದೂ ಸ್ಟೇಷನ್ನಿನ ಮುಖ ನೋಡದ ನಾನು ಗಡಗಡ ನಡುಗುತ್ತಲೇ ಅದೊಂದು ಬೇಡ ಅಂದೆ. ಆದರವನು ನನಗೆ ಅದೊಂದೇ ಸಾಕು ಅಂತ ನನ್ನ ಮೇಲೆ ಬಿದ್ದ. ಪೋಲಿಸ್ ಇನ್ಸಪೆಕ್ಟರೊಬ್ಬನನ್ನು ಎದುರಿಸಿನಿಲ್ಲುವ ದೈರ್ಯವಾಗಲಿ ಶಕ್ತಿಯಾಗಲಿ ನನಗಾಕ್ಷಣಕ್ಕೆ ಬರಲಿಲ್ಲ. ಸುಮ್ನಾಗಿಬಿಟ್ಟೆ. ಆ ಇಡೀರಾತ್ರಿ ಅವನು ನನ್ನನ್ನು ಪ್ರಾಣಿಗಿಂತ ಕಡೆಯಾಗಿ ಉಪಯೋಗಿಸಿಕೊಂಡ. ಬೆಳಿಗ್ಗೆ ಎದ್ದ ಮೇಲೆ ನನ್ನ ಕೈಗೆ ಒಂದಿಷ್ಟು ದುಡ್ಡು ಕೊಟ್ಟು ನೀನೀಗ ಊರಿಗೆ ಹೋಗು, ಯಾರಿಗೂ ಹೆದರಬೇಡ. ಆದರೆ ನಾನು ವಿಚಾರಣೆಗೆ ಕರೆಸಿದಾಗ ಬರಬೇಕು ಅಂತೇಳಿ ಕಳಿಸಿಕೊಟ್ಟ. ಹೊರಡುವ ಮುಂಚೆ ಖಾಲಿ ಬಿಳಿ ಹಾಳೆಯಲ್ಲಿ ನನ್ನ ಹತ್ತಿರ ಸೈನು ಮಾಡಿಸಿದ್ದಲ್ಲದೆ ಹೆಬ್ಬೆಟ್ಟನ್ನೂ ಹಾಕಿಸಿಕೊಂಡ.

ವಾಪಾಸು ಊರಿಗೆ ಬಂದವಳು ಯಾರ ಹತ್ತಿರಾನು ಮಾಡದೆ ಅಡುಗೆ ಮಾಡಿ ಅತ್ತೆಗೆ ಊಟ ಹಾಕಿ ಸುಮ್ಮನೆ ಕೂತುಕೊಂಡೆ. ರಾತ್ರಿಯಾದ ಘಟನೆ ಬಗ್ಗೆ ಯೋಚನೆ ಮಾಡೋಕೇ ಹೋಗಲಿಲ್ಲ. ಸದ್ಯ ಇಷ್ಟಕ್ಕೆ ಬಿಟ್ಟು ಕಳಿಸಿದನಲ್ಲ ಅನ್ನೋ ಸಮಾದಾನದಲ್ಲಿ ನಾನಿದ್ದೆ. ನೋಡೋದಿಕ್ಕೆ ಚೆನ್ನಾಗಿದ್ದು ಒಂಟಿ ಹೆಣ್ಣಾಗಿದ್ದೆ ನನ್ನ ತಪ್ಪಾಗಿತ್ತು. ಏನೊ ಒಂದು ದಿನದ ಹಿಂಸೆ ಅನ್ಕೊಂಡೇ ನಾನು ಸುಮ್ಮನಾಗಿ ಮತ್ತೆ ಕೆಲಸಕ್ಕೆ ಅಂತ ಹೋಟೆಲಿಗೆ ಹೋದರೆ ಅವರು ಬೇರೆಯವರು ಬಂದಿದಾರೆ ನೀನೇನು ಬರೋದು ಬೇಡ ಅಂತೇಳಿ ವಾಪಾಸು ಕಳಿಸಿಬಿಟ್ಟರು. ಮನೆಗೆ ವಾಪಾಸು ಬಂದವಳು ತಲೆ ಮೇಲೆ ಕೈ ಹೊತ್ತು ಕೂತುಬಿಟ್ಟೆ. ಮನೆಯಲ್ಲಿ ಏನೇನು ಇರಲಿಲ್ಲ. ಇನ್ಸಪೆಕ್ಟರ್ ಕೊಟ್ಟಿದ್ದ ದುಡ್ಡಲ್ಲಿ ಹದಿನೈದು ದಿನಕ್ಕಾಗುವಷ್ಟು ದಿನಸಿ ತಂದುಕೊಂಡೆ. ಇದಾದ ಮೂರನೇ ದಿನಕ್ಕೆ ಊರಲ್ಲಿ ಚನ್ನೇಗೌಡನಿಗು ಅವನಿಟ್ಟುಕೊಂಡಿದ್ದ ಸಾವಿತ್ರಮ್ಮನಿಗು ದೊಡ್ಡ ಗಲಾಟೆಯೊಂದು ನಡೆದು ಹೋಯಿತು. ಅದ್ಯಾವುದೊ ಆಸ್ತಿಯ ವಿಚಾರ ಅನ್ನೋದಷ್ಟೆ ಕಿವಿಗೆ ಬಿತ್ತು.

ಒಂದು ದಿನ ಪೋಲಿಸಿನವನೊಬ್ಬ ಬಂದು ಸಾಹೇಬರು ಕರೀತಾ ಇದಾರೆ ಸಾಯಂಕಾಲ ಬರಬೇಕಂತೆ ಅಂತ ಹೇಳಿ ಹೋದ. ಇದೇನಪ್ಪಾ ನನ್ನ ಗ್ರಹಚಾರ ಅಂದುಕೊಂಡು ವಿಧಿಯಿಲ್ಲದೆ ಸಾಯಂಕಾಲ ಹೋದರೆ. ಯತಾಪ್ರಕಾರ ರಾತ್ರಿ ಇನ್ಸಪೆಕ್ಟರ್ ಜೊತೆ ಮಲಗಬೇಕಾಯಿತು. ಏನೊ ಒಂದು ದಿನದ ನರಕ ಅಂದುಕೊಂಡಿದ್ದರೆ ಇದ್ಯಾಕೊ ಅಸಹ್ಯವೆನಿಸ ತೊಡಗಿತು. ಸರಿ ಬೆಳಗ್ಗೆ ಹೊರಟಾಗ ಸಾರ್, ಪದೇ ಪದೇ ಹೀಗೆ ಬಂದರೆ ಊರಲ್ಲಿ ಜನಕ್ಕೆ ಗೊತ್ತಾಗುತ್ತೆ. ದಯವಿಟ್ಟು ಬೇಡ ಸಾರ್. ಅಂತವನ ಕಾಲಿಗೆ ಬಿದ್ದು ಬೇಡಿಕೊಂಡೆ. ಆದರವನು ಕರಗಲಿಲ್ಲ. ಮುಚ್ಕೊಳ್ಳೇ ನಾನಿಲ್ಲ ಅಂದರೆ ಚನ್ನ ಗವಡನಂತ ಹಲ್ಕಟ್ಟ ಜೊತೆ ಮಲಗಬೇಕಾಗ್ತಿತ್ತು, ಸುಮ್ಮನೆ ಬರೋದು ಕಲಿ ಅಂತೇಳಿ ಒಂದಿಷ್ಟು ಕೊಟ್ಟು ಕಳಿಸಿದ. ಮತ್ತೆ ಸ್ಟೇಷನ್ನಿಗೆ ಹೋಗಿ ರಾತ್ರಿ ಇದ್ದು ಬಂದಿದ್ದು ಊರ ಜನಕ್ಕೆಲ್ಲ ಗೊತ್ತಾಗಿ ತಲೆ ಎತ್ತದಂತಾಗಿತ್ತು. ಹಲ್ಲು ಕಚ್ಚಕೊಂಡು ಮನೇಯಲ್ಲೇ ಇರೋಕೆ ತೊಡಗಿದೆ ಆದರೆ ಆ ರಾಕ್ಷಸ ಹಾಗಿರೋಕು ಬಿಡಲಿಲ್ಲ. ಪ್ರತಿ ಎರಡು ಮೂರು ದಿನಕ್ಕೆ ನನ್ನ ರಾತ್ರಿ ಹೊತ್ತು ಕರೆಸತೊಡಗಿದ. 

ಹಾಗೆ ಒಂದು ದಿನ ಹೋದಾಗ ಕ್ವಾಟ್ರಸ್ಸಿನಲ್ಲಿ ಅವನ ಜೊತೆ ಮೂರು ಜನ ಸ್ನೇಹಿತರೂ ಇದ್ದರು. ನನ್ನ ಕರ್ಮ ನೋಡಿ, ಆ ರಾತ್ರಿ ಇನ್ಸಪೆಕ್ಟರ್ ಸೇರಿದಂತೆ ಒಟ್ಟು ನಾಲ್ಕು ಜನರೂ ನನ್ನ ಹರಿದು ಹಂಚಿಕೊಂಡು ತಿಂದರು. ಬೆಳಿಗ್ಗೆಯಾಗುವಷ್ಟರಲ್ಲಿ ನಾನೊಂದು ನಿರ್ದಾರಕ್ಕೆ ಬಂದುಬಿಟ್ಟಿದ್ದೆ. ಇದೇ ಕೊನೆಯ ದಿನ. ಅದು ಏನಾದರು ಆಗಲಿ ಮತ್ಯಾವತ್ತು ಇಲ್ಲಿಗೆ ಬರಬಾರದು ಅಂತ. ವಾಪಾಸು ಊರಿಗೆ ಹೋದವಳು ಮೊದಲ ಬಾರಿಗೆ ಸಾವಿತ್ರಮ್ಮನ ಮನೆಗೆ ನಾಚಿಕೆ ಬಿಟ್ಟು ಹೋದೆ. ಅವಳೂ ಯಾವುದು ಸಿಟ್ಟು ತೋರಿಸದೆ ನಗುನಗುತ್ತಲೇ ಮಾತಾಡಿದಳು. ಅಷ್ಟು ದಿನ ತಡೆದಿಟ್ಟುಕೊಂಡ ದು:ಖವನ್ನೆಲ್ಲ ಅವಳ ಎದುರು ತೋಡಿಕೊಂಡು ಅತ್ತು ಬಿಟ್ಟೆ. ಸುಮಾರು ಮೂರುವರೆ ವರ್ಷಗಳ ಕಾಲ ಯಾವುದನ್ನು ಯಾರ ಬಳಿಯೂ ಹೇಳಕೊಳ್ಳಲಾಗದ ಎಲ್ಲವನ್ನು ಅವಳೆದರು ಹೇಳಿಕೊಂಡು ಹಗುರಾಗಿಬಿಟ್ಟೆ. ಕೇಳಿಸಿಕೊಂಡ ಅವಳು ಸಮಾದಾನ ಮಾಡಿ ಮುಂದೇನು ಮಾಡಬೇಕು ಅಂತಿದಿಯಾ ಅಂತ ಕೇಳಿದಳು. ಮುಂದೇನು ಅನ್ನೊ ಬಗ್ಗೆ ನನಗೇನೂ ಹೊಳೆದಿರಲಿಲ್ಲ. ಅದನ್ನೇ ಅವಳ ಬಳಿ ಹೇಳಿದೆ. ಏನು ಹೆದರಬೇಡ, ದೇವರಿದ್ದಾನೆ ಹೇಗೊ ಆಗುತ್ತೆ. ನೀನು ಯಾವ ಸುಖಕ್ಕೆ ಅಂತ ಇಲ್ಲಿರ್ತೀಯಾ? ಸುಮ್ಮನೆ ಬೆಂಗಳೂರಿಗೆ ಹೋಗಿಬಿಡು. ನೀನು ಹೋಗೋದಾದರೆ ಅಲ್ಲಿ ನಾನು ನಿನಗೇನಾದರು ಕೆಲಸದ ವ್ಯವಸ್ಥೆ ಮಾಡ್ತೀನಿ. ಇಲ್ಲ ತವರುಮನೆಗೆ ಬೇಕಾದರೆ ಹೋಗು ಅಂದಳು. ತವರು ಮನಗೆ ಹೋದರೆ ಏನಾಗುತ್ತೆ ಅಂತ ನನಗೆ ಗೊತ್ತಿತ್ತು. ಗಂಡ ಸತ್ತಾಗಲೆ ಒಂದೂ ಮಾತಾಡದೇ ಹೋದವರು ಈಗ ಹೋದರೆ, ಅವರು ನನಗೆ ಸಾಕೋದು ಕಷ್ಟ ಅಂತ ಯೋಚಿಸಿದವಳು ಇಲ್ಲ ಸಾವಿತ್ರಕ್ಕ ನಾನು ಬೆಂಗಳೂರಿಗೆ ಹೋಗ್ತೀನಿ. ಆದರೆ ಅಲ್ಲೇನು ಕೆಲಸ ಅಂತ ಹೇಳು ಅಂದೆ. ಯೋಚನೆ ಮಾಡಿದ ಸಾವಿತ್ರಮ್ಮ ನನಗೆ ಒಬ್ಬಳು ಪರಿಚಯದವಳಿದ್ದಾಳೆ, ಅವರ ಮನೆಗೆ ಕಳಿಸ್ತೀನಿ. ಅಲ್ಲಿ ಹೋದ ಮೇಲೆ ಏನು ಕೆಲಸ ಕೊಡ್ತಾಳೋ ಅದನ್ನು ನಿಷ್ಠೆಯಿಂದ ಮಾಡು ಅಂದಳು. ಆದರೆ ಇಲ್ಲಿನ ಪೋಲಿಸಿನವರು ಬಿಡ್ತಾರಾ? ಎಂದೆ. ಅದಕ್ಕವಳು “ಅಯ್ಯೋ ದಡ್ಡಿ ಆ ಇನ್ಸಪೆಕ್ಟರ್ ಕತೆ ನಂಗೊತ್ತಿಲ್ವಾ. ನಿನ್ನ ಮೇಲೆ ಯಾರೂ ಕಂಪ್ಲೇಂಟು ಕೊಟ್ಟಿಲ್ಲ, ಯಾವ ಕೇಸೂ ಹಾಕಿಲ್ಲ. ನಿನ್ನ ಜೊತೆ ಮಲಗೋಕೆ ಅವನು ಆಡಿರೋ ನಾಟಕ ಅದು. ಅವನು ನಂಗೆ ಚೆನ್ನಾಗಿ ಗೊತ್ತು. ಅವನಿಗೆ ಬೇಕಾದಾಗೆಲ್ಲ ನಾನು ಸಹಾಯ ಮಾಡಿದೀನಿ. ಅವನು ಆಸೆ ಪಟ್ಟಿದ್ದನ್ನೆಲ್ಲ ನಾನು ಈಡೇರಿಸಿದ್ದೀನಿ. ಬಿಡು ಅವನಿಗೆ ನಾನು ಹೇಳ್ತೀನಿ” ಅಂದಳು. ಅವಳು ಅಷ್ಟು ಹೇಳಿದ ಮೇಲೆ ನನಗೆ ಸಮಾದಾನವಾದರೂ ಅತ್ತೆಯ ಗತಿಯೇನು ಅಂತ ಯೋಚಿಸಿ ಕೇಳಿದೆ. ಅಯ್ಯೊ ಮಂಕೆ ನೀನ್ಯಾಕೆ ಯೋಚನೆ ಮಾಡ್ತೀಯಾ ಏನೇ ದಾಯಾದಿಗಳಾದರು ಅವಳಿಗೆ ಚನ್ನೇಗೌಡನ ಮನೆಯವರು ಅನ್ನ ಹಾಕ್ತಾರೆ. ಇವತ್ತೊ ನಾಳೆ ಸಾಯೊ ವಯಸ್ಸು ಅವಳಿಗೆ. ಅವಳ ಚಿಂತೆ ಬಿಟ್ಟು ನೀನು ಹೊರಡು ಅಂದಳು.

ಸರಿ ಅವಳು ಹೇಳಿದಂತೆ ಕೇಳುವುದೆ ಒಳ್ಳೆಯದು ಅಂತ ಆ ಸಮಯಕ್ಕೆ ಅನಿಸಿತು. ಹಾಗಾಗಿ ಬೇರೇನು ಯೋಚಿಸದೆ ಹೊರಟುಬಿಟ್ಟೆ. ಒಟ್ಟಿನಲ್ಲಿ ಅವಳ ಸಹಾಯದಿಂದ ಬೆಂಗಳೂರಿನ ಅಲಮೇಲಮ್ಮನ ಮನೆಗೆ ತಲುಪಿದೆ. ಹೋಗಿ ಒಂದೆರಡು ದಿನ ಅವಳು ನನಗೇನೂ ಹೇಳಲಿಲ್ಲ. ನಾಲ್ಕನೆ ದಿನಕ್ಕೆ ನನ್ನ ಒಬ್ಬಳೇ ಕೂರಿಸಿಕೊಂಡು ಸಾವಿತ್ರಿ ನನಗೆ ನಿನ್ನ ಕಷ್ಟಾನೆಲ್ಲ ಹೇಳಿದಾಳೆ. ಪಾಪ ಈ ವಯಸ್ಸಿಗೆ ಇಷ್ಟೊಂದು ಅನುಭವಿಸದಿಯಾ ಅಂದರೆ ನಂಗೆ ಬೇಜಾರಾಗುತ್ತೆ. ಏನೂ ಗೊತ್ತಿರದ ಪಾಪದ ಹುಡುಗಿ, ನೀನು ಆ ಪೋಲಿಸಿನವನ ದಮಕಿಗೆ ಹೆದರಿ ಮಲಗಿದ್ದಕ್ಕೆ ನಿಂಗೇನು ಸಹಾಯವಾಗಲಿಲ್ಲವಲ್ಲ. ಯಾರದೊ ಹೆದರಿಕೆ, ಮುಲಾಜಿಗೆ ಮಲಗಿ ಕಷ್ಟ ಪಡೋದಿಕ್ಕಿಂತ ನಮ್ಮ ಖುಶಿಗೆ ನಮಗೆ ಬೇಕಾದ ದುಡ್ಡಿಗೆ ಬೇರೆಯವರ ಜೊತೆ ಮಲಗೋದು ವಾಸಿ ಅಂತ ಉಪದೇಶ ಮಾಡಿದಳು. “ನೋಡು ಈಗಾಗಲೆ ನಿನಗೀ ಮನೆಯ ವ್ಯವಹಾರ ಅರ್ಥವಾಗಿರಬಹುದು. ನಾನು ಜಾಸ್ತಿಯೇನು ಹೇಳಲ್ಲ. ನಿನಗಿಷ್ಟ ಬಂದಾಗ ನಿನಗೆ ಸರಿಯೆನಿಸದವನ ಜೊತೆ ಮಲಗು. ಅದನ್ನೇ ಇಷ್ಟಪಟ್ಟು ಮಾಡು, ದುಡ್ಡೂ ಸಿಗುತ್ತೆ ಸುಖಾನು ಸಿಗುತ್ತೆ ಅಂದಳು. ಇವತ್ತು ಸಾಯಂಕಾಲ ರೆಡಿಯಾಗಿರು. ಒಬ್ಬ ಒಳ್ಳೆ ಗಿರಾಕಿ ಬರ್ತಾನೆ. ತುಂಬ ಗೌರವಸ್ಥ. ಸಾಕಷ್ಟು ದುಡ್ಡು ಕೊಡ್ತಾನೆ. ಕಡೆಯದಾಗಿ ಹೇಳ್ತೀನಿ ನಿನಗೆ ನಾನು ಬಲವಂತ ಮಾಡ್ತಿಲ್ಲ. ನೀನಾಗೆ ಈ ಮನೆಗೆ ಬಂದಿದಿಯಾ. ನಿನಗಿಷ್ಟ ಬಂದ ತೀರ್ಮಾನ ತಗೊ. ಆದರೆ ಒಂದು ನನಪಿಡು. ನೀನೆಲ್ಲೇ ಹೋದರು ಯಾವನ ಜೊತೆಗೂ ಮಲಗದೆ ಜೀವನ ಮಾಡೋಕೆ ಬೇಕಾದ ದುಡ್ಡು ಸಿಗಲ್ಲ. ಆದರೆ ಅಲಮೇಲಮ್ಮನ ಮನೆಯಲ್ಲಿ ಸಿಗೊ ಮರ್ಯಾದೆಯಾಗಲಿ, ರಕ್ಷಣೆಯಾಗಲಿ ನಿನಗೆ ಬೇರೆಲ್ಲೂ ಸಿಗಲ್ಲ ಅಂತ ಹೇಳಿ ಎದ್ದು ಹೋದಳು. ಸಾಯಂಕಾಲದವರೆಗು ಕೂತು ಯೋಚಿಸಿದೆ. ಬೇರ್ಯಾವ ದಾರಿಯೂ ನನಗೆ ಕಾಣಲಿಲ್ಲ. ಇನ್ನು ಗಂಡಸಿನ ಜೊತ ಮಲಗುವ ಸುಖದ ಬಗ್ಗೆ ನನಗೆ ಆಸಕ್ತಿಯೇ ಹೊರಟು ಹೋಗಿತ್ತು. ಅದು ಆ ಪೋಲಿಸಿನವನ ಜೊತೆ ಬಲವಂತಕ್ಕೆ ಮಲಗಿದ ದಿನವೇ ಅಸಹ್ಯವೆನಿಸಿ ಬಟ್ಟಿತು.

ಗಟ್ಟಿ ಮನಸು ಮಾಡಿದವಳಂತೆ ಸಾಯಂಕಾಲದ ಹೊತ್ತಿಗೆ ಸಿದ್ದವಾಗಿ ನಿಂತಿದ್ದೆ. ಗಿರಾಕಿಯಾಗಿ ಬಂದವನು ಆ ಮನೆಗೆ ಹಳಬ ಅನಿಸುತ್ತೆ. ನನ್ನ ಹೊರಗೆ ಕರೆದುಕೊಂಡು ಹೋಗ್ತೀನಿ ಅಂದಾಗ ಅಲಮೇಲಮ್ಮ ಬೇಡವೆನ್ನಲಿಲ್ಲ. ಅವನು ಯಾವುದೊ ಲಾಡ್ಜಿಗೆ ನನ್ನ ಕರೆದುಕೊಂಡು ಹೋದ. ನಿಜ ಹೇಳಬೇಕೆಂದರೆ ಅವತ್ತು ರಾತ್ರಿ ನನಗೆ ಅಸಹ್ಯವೂ ಅನಿಸಲಿಲ್ಲ ಜೊತೆಗೆ ತಪ್ಪು ಮಾಡ್ತಿದಿನಿ ಅಂತಾನು ಅನಿಸಲಿಲ್ಲ. ಅವನೂ ಅಷ್ಟೆ ಬಹಳ ಒಳ್ಳೆ ಮನುಷ್ಯ .ನನ್ನ ಜೊತೆ ಒರಟಾಗಿ ನಡೆದುಕೊಳ್ಳಲಿಲ್ಲ. ಅವತ್ತು ಶುರುವಾದ ನನ್ನ ರಾತ್ರಿಯ ಜೀವನ ಸುಮಾರು ಹದಿನೆಂಟು ವರ್ಷಗಳು ಯಾವುದೇ ಅಡೆತಡೆಯಿಲ್ಲದೆ ನಡೆಯಿತು. ತಿಂಗಳು ಕಳೆಯುವಷ್ಟರಲ್ಲಿ ನಾನು ಪಕ್ಕಾ ಕಸುಬುದಾರಳಾಗಿಬಿಟ್ಟೆ. ಆ ಕೆಲಸಕ್ಕೆ ಬೇಕಾದ ನಾಜೂಕು ವಯ್ಯಾರ ಒರಟುತನ ಎಲ್ಲವನ್ನು ಕಲಿತು ಅಲಮೇಲಮ್ಮನ ಪ್ರೀತಿಗೆ ಪಾತ್ರವಾದೆ.

ಕಸುಬಲ್ಲಿ ನೋವೇ ಇರಲಿಲ್ಲ ಅಂತೇನೂ ಅಲ್ಲ. ಆದರೆ ಪ್ರತಿಕೆಲಸದಲ್ಲೂ ಇರುವಂತೆ ಅದರಲ್ಲು ಕಷ್ಟಗಳಿದ್ದವು. ಕುಡಿದು ಪ್ರಾಣಿಯ ಹಾಗೆಲ್ಲ ನಡೆಸಿಕೊಳ್ಳುತ್ತಿದ್ದ ಗಿರಾಕಿಗಳು, ಎಲ್ಲ ಮುಗಿದ ಮೇಲೆ ಕೊಟ್ಟ ದುಡ್ಡನ್ನೇ ಕಿತ್ತು ಕೊಂಡು ಹೋಗುವ ಚಂಡಾಲರು ಇವರನ್ನೆಲ್ಲ ಸಂಬಾಳಿಸಬೇಕಾಗುತ್ತಿತ್ತು. ಇದರ ಜೊತೆಗೆ ಬಹಳಷ್ಟು ದುರಭ್ಯಾಸಗಳು ಜೊತೆಯಾದವು. ಹೊಗೆಸೊಪ್ಪು ಹಾಕೋದು ಕುಡಿಯೋದು ಅಭ್ಯಾಸವಾಯಿತು. ಹನ್ನೆರಡು ವರ್ಷ ದಂದೆಯ ದೆಸೆಯಿಂದ ನನ್ನ ಮೈ ಬಣ್ಣ ಕಪ್ಪಾಗತೊಡಗಿ ಆರೋಗ್ಯ ಹಾಳಗೋಕ್ಕೆ ಶುರುವಾಯಿತು. ಇನ್ನು ಇದನ್ನು ಮಾಡಲಾಗುವುದಿಲ್ಲ ಅನಿಸಿದಾಗ ದಂದೆ ನಿಲ್ಲಿಸಿ ಎಲ್ಲಿ ಹೋಗೋದು ಅನಿಸಿ ಯೋಚಿಸಿದೆ. ಅಲಮೇಲಮ್ಮನ ಮನೆಗೆ ಬಂದ ಎರಡು ವರ್ಷಗಳ ನಂತರ ಒಂದು ಸಾರಿ ನನ್ನ ತವರು ಮನೆಗೆ ಹೋಗಿಬಂದೆ. ಎಲ್ಲ ಹೆಣ್ಣುಮಕ್ಕಳ ಮದುವೆ ಮಾಡಿಕೊಟ್ಟ ಅಪ್ಪ ಟಿ.ಬಿ ಕಾಯಿಲೆಯಿಂದ ಸತ್ತುಹೋಗಿದ್ದ. ಇದ್ದ ಅಮ್ಮನಿಗೆ ಬೆಂಗಳೂರಲ್ಲಿ ಮನೆಕೆಲಸ ಮಾಡಿಕೊಂಡು ಬದುಕುತ್ತಿರೋದಾಗಿ ಹೇಳಿದ್ದೆ. ಆಮೇಲೆ ವರ್ಷಕ್ಕೊಂದು ಸಾರಿ ಹೋಗಿ ಅಮ್ಮನಿಗೆ ಬೇಕಾದಷ್ಟು ದುಡ್ಡು ಕೊಟ್ಟು ಬರ್ತಿದ್ದೆ.ಹಾಗಾಗಿ ಈ ಕಸುಬು ನಿಲ್ಲಿಸಬೇಕೆಂದು ಅನಿಸಿದಾಗ ಅಲಮೇಲಮ್ಮನಿಗೆ ಹೇಳಿ ನಾನು ದುಡಿದು ಕೂಡಿಟ್ಟ ಹಣವನ್ನು ಅವಳ ಹತ್ತಿರ ಇಸಗೊಂಡು ತವರು ಮನಗೆ ಬಂದು ಬಿಟ್ಟೆ. ಈಗ ಇಲ್ಲಿ ಸಣ್ಣದೊಂದು ಪೆಟ್ಟಿಗೆ ಅಂಗಡಿ ಹಾಕಿಕೊಂಡಿದೀನಿ. ತಮಾಷೆ ನೋಡಿ ನನ್ನ ಅಂಗಡಿ ಇರೋದೇ ಪೋಲಿಸ್ ಸ್ಟೇಷನ್ ಮುಂದೆ. ಪೋಲಿಸರನ್ನು ನೋಡಿದಾಗೆಲ್ಲ ಸಾಯಿಸುವಷ್ಟು ಕೋಪ ಬರುತ್ತೆ. ಆದರೆ ಪಾಪ ಯಾವನೊ ಒಬ್ಬ ಮಾಡಿದ ತಪ್ಪಿಗೆ ಎಲ್ರನ್ನೂ ಯಾಕೆ ದ್ವೇಷಿಸಬೇಕೆಂದುಕೊಂಡು ಸುಮ್ಮನಾಗುತ್ತೇನೆ. ಕಷ್ಟದಲ್ಲಿರೊ ಹೆಂಗಸರನ್ನು ನೋಡಿದಾಗ ಬೇಜಾರಾಗುತ್ತೆ. ತೀರಾ ಏನೂ ಮಾಡೋಕಾಗದೆ ಇರೊ ಅಂತ ಹೆಣ್ಣುಮಕ್ಕಳಿಗೆ ಈ ಸಮಾಜ ಏನು ಮಾಡಲ್ಲ. ಎಲ್ಲ ಬೂಟಾಟಿಕೆಯ ಮಾತುಗಳು. ಇವತ್ತು ತೀರಾ ಕಷ್ಟದಲ್ಲಿದ್ದು, ಬೇರೇನು ದಾರೀನೇ ಇಲ್ಲ ಅಂದುಕೊಂಡ ಹೆಣ್ಣುಮಕ್ಕಳಿಗೆ, ಮೊದಲೇ ಇರೋ ವಿಷಯ ಹೇಳಿ ಅಲಮೇಲಮ್ಮನ ಮನೆ ಅಡ್ರೆಸ್ ಕೊಡ್ತೀನಿ. ನೀವು ತಪ್ಪು ಅನ್ನಬಹುದು ಸಾರ್, ಆದರೆ ತಪ್ಪು ಅನ್ನೋ ನೀವು ಅವರಿಗೆ ಅವಳ ಜೊತೆ ಮಲಗದೆ ಹತ್ತು ರೂಪಾಯಿ ಕೊಡೋಕೆ ತಯಾರಿದ್ದೀರಾ? ಇಲ್ಲಸಾರ್ ಏನೂ ಉಪಯೋಗವಿಲ್ಲದೆ ಈ ಪ್ರಪಂಚದಲ್ಲಿ ಯಾರು ಯಾರಿಗೂ ಸಹಾಯ ಮಾಡಲ್ಲ. ರಾತ್ರಿ ಪಕ್ಕದಲ್ಲಿ ಮಲಗಿದ್ರೇನೆ ಹೆಂಡತಿಗೆ ಅನ್ನ ಹಾಕೊ ಪ್ರಪಂಚ ಇದು. ಅದಕ್ಕೆ ನಾನು ತಪ್ಪು ಮಾಡ್ತೀನಿ ಅಂತ ಅನಿಸಿಲ್ಲ. ಆದರೆ ಯಾರಿಗು ಇವತ್ತನವರೆಗು ಬಲವಂತ ಮಾಡಿಲ್ಲ.

ನೀವು ಸಾವಿತ್ರಕ್ಕನಿಗೆ ಪರಿಚಯದೋರು ಅಂತ ಇಲ್ಲೀತನಕ ಬಂದು ನನ್ನ ಕಥೆ ಹೇಳಿದ್ದೀನಿ. ನಾನಿನ್ನು ಹೋಗ್ತೀನಿ ಸಾರ್ ಅಂತ ಎದ್ದವಳಿಗೆ ನಿನಗೇನಾದರು ಸಹಾಯ ಬೇಕಾದರೆ ನನಗೆ ಕೇಳಿ. ಆದರೆ ಯಾರಿಗೂ ಇನ್ನುಮುಂದೆ ಅಲಮೇಲಮ್ಮನ ಮನೆ ಅಡ್ರೆಸ್ ಕೊಡಬೇಡಿ ಅಂದೆ. ಕಿಸಕ್ಕನೆ ನಕ್ಕ ಅವಳು ನನ್ನ ಜೊತೆ ಮಲಗ್ದೇನೆ ಸಹಾಯ ಬೇಕಾದೆ ಕೇಳು ಅಂದ್ರಲ್ಲ ಅದೇದೊಡ್ಡ ಸಹಾಯ ಸಾರ್. ಅಲಮೇಲಮ್ಮನ ಬದಲಿಗೆ ನಿಮ್ಮ ಅಡ್ರೆಸ್ ಕೊಡಲಾ? ದಯವಿಟ್ಟು ಬೇಜಾರಾಗಬೇಡಿ ಸುಮ್ಮನೆ ತಮಾಷೆಗೆ ಅಂದೆ ಅಂತ ಹೊರಟು ಹೋದಳು. ಅವಳು ಮಾಡಿದ್ದು ತಮಾಷೆಯೇ ಆದರು ನನಗಂತು ಅದು ಹೃದಯಕ್ಕೆ ನಾಟಿದ್ದು ಸುಳ್ಳಲ್ಲ!

No comments:

Post a Comment