ಕು.ಸ.ಮಧುಸೂದನ
ಮುಂಚೆ ಈಗಿರಲಿಲ್ಲ
ಅಖಂಡತೆಯ ಕಲ್ಪನೆ ಕಂಡಿರಲಿಲ್ಲ
ತುಂಡು ತುಂಡಾಗಿ ಬೇರೆಯಾಗಿದ್ದರೂ
ಪರಸ್ಪರರ ಕಷ್ಟಸುಖಕ್ಕೆ ಆಗುತ್ತಾ
ಅವರತ್ತಾಗ ನಾವು
ನಾವತ್ತಾಗ ಅವರೂ
ಸಮಾದಾನ ಹೇಳುತ್ತ
ಇದ್ದೆವು ಇಷ್ಟೂ ದಿನ
ಅವರ ಮನೆಯ ಮಾಂಸದ ಸಾರಿಗೆ
ನಾವು ಮೂಗರಳಿಸುತ್ತ
ನಮ್ಮ ಮನೆಯ ಮೀನೂಟಕ್ಕೆ
ಅವರನ್ನು ಕರೆಯುತ್ತ
ಶ್ರೀನಗರದ ಜಮಖಾನವ ನಮ್ಮ ನಡೂ ಮನೆಗೆ ಹಾಸಿ
ನಮ್ಮ ತಾಳಕಟ್ಟೆ ಕಂಬಳಿಗಳನವರ ಚಳಿಗಾಲಕ್ಕೆ ಕೊಟ್ಟು
ಈಶಾನ್ಯದವರ ಬಿಗು ನೃತ್ಯಕ್ಕೆ ನಮ್ಮ ಕಾಲು ಕುಣಿಸುತ್ತ
ನಮ್ಮ ಭರತನಾಟ್ಯಕ್ಕವರು ತಲೆದೂಗುತ್ತ
ಅವರ ಬೇಲ್ ಪೂರಿಗೆ ನಮ್ಮ ಇಡ್ಲಿ ಸಾಂಬಾರನ್ನು ವಿನಿಮಯಿಸಿಕೊಳ್ಳುತ್ತ
ಬದುಕುತ್ತಿದ್ದೆವು ಅಖಂಡತೆಯ
ಅರ್ಥವೇ ಗೊತ್ತಿಲ್ಲದೆ!
ಇದೀಗ ತಿಳಿದವರು
ಅಖಂಡತೆಯ ಬಗ್ಗೆ ಮಾತಾಡುತ್ತಿದ್ದಾರೆ
ಅಸಹಿಷ್ಣುತೆಯ ಹೊಗೆಹಾಕುತ್ತಿದ್ದಾರೆ!
No comments:
Post a Comment