ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಈ ಸಂಪುಟ ಕರ್ನಾಟಕದ ಹದಿನೆಂಟನೇ ಶತಮಾನದ ಆರಂಭದ ಇತಿಹಾಸದ ಬಗ್ಗೆಯಷ್ಟೇ. ವಸಾಹತುಶಾಹಿ ಶಕ್ತಿಗಳು ಕರ್ನಾಟಕವನ್ನು ಆಕ್ರಮಿಸುತ್ತಿದ್ದಂತೆ ಆಗಿನ ಸಾಮಾಜಿಕ ಜೀವನ ಆಘಾತಗೊಂಡ ಪರಿ ಮತ್ತು ವಸಾಹತು ಶಕ್ತಿಗೆ ಶರಣಾದ ದಿನಗಳ ಇತಿಹಾಸವಿದು.
‘ಪ್ರಗತಿಪರ’, ‘ದೇಶಪ್ರೇಮಿ’ ಇನ್ನೂ ಮುಂತಾದ ವಿಶೇಷಣಗಳಿಂದ ಸುಪ್ರಸಿದ್ಧರಾಗಿರುವ, ಬ್ರಿಟೀಷರ ಆಣತಿಯಂತೆ ಅರಸರಾದ ಮೈಸೂರು ರಾಜರ ಸುತ್ತಲಿನ ಪ್ರಭೆಯಲ್ಲಿನ ಕೃತಕತೆಯ ದರುಶನವೂ ಈ ಕಾಲಘಟ್ಟದಲ್ಲಿ ನಡೆಯಿತು. ಮೈಸೂರು ಅರಸ ಕುಟುಂಬದವರ ಹೇಳಿಕೆಗಳು ಮತ್ತು ಪತ್ರಗಳು, ಮೈಸೂರು ರಾಜರು ಹೇಗೆ ಬ್ರಿಟೀಷರ ಕೈಗೊಂಬೆಗಳಾಗಿದ್ದರು ಎನ್ನುವುದನ್ನು ತಿಳಿಸುತ್ತದೆ. ‘ಕಂಪನಿಯ ಮಕ್ಕಳು ನಾವು’ ಎಂದು ‘ಹೆಮ್ಮೆಯಿಂದ’ ಹೇಳಿಕೊಳ್ಳುತ್ತಿದ್ದವರೂ ಮೈಸೂರಿನ ರಾಜರಾಗಿದ್ದರು!
ಮೈಸೂರು ಅರಸರು ಮತ್ತು ಬ್ರಿಟೀಷರ ನಡುವಿನ ಒಪ್ಪಂದಗಳು ದೊಡ್ಡ ದೊಡ್ಡ ಜಮೀನ್ದಾರರ ಫ್ಯೂಡಲ್ ನೀತಿ ಮತ್ತು ಬ್ರಿಟೀಷರ ವಸಾಹತು ನೀತಿಯ ನಡುವೆ ನಡೆಯುತ್ತಿದ್ದ ಕೂಡಿಕೆಯ ಪ್ರತಿಬಿಂಬದಂತಿತ್ತು. ಜಮೀನ್ದಾರಿ ಪದ್ಧತಿಗೆ ಪ್ರೋತ್ಸಾಹ ನೀಡುತ್ತ, ಜಮೀನ್ದಾರರಿಗೆ ಮತ್ತು ತಮಗೆ ಅನುಕೂಲವಾಗುವಂತಹ ಒಪ್ಪಂದಗಳನ್ನು ಬ್ರಿಟೀಷರು ಆಕಸ್ಮಿಕವೆಂಬಂತೆ ಮಾಡಲಿಲ್ಲ; ಉದ್ದೇಶಪೂರ್ವಕವಾಗಿಯೇ ಮಾಡಿದರು. ಈ ಒಪ್ಪಂದಗಳು ಸಮಾಜದ ಭವಿಷ್ಯದ ಮೇಲುಂಟುಮಾಡಿದ ಪರಿಣಾಮಗಳನ್ನು ಸಮರ್ಪಕವಾಗಿ ದಾಖಲಿಸಲಾಗಿಲ್ಲ. ನವವಸಾಹತುಶಾಹಿಯ ಇಂದಿನ ದಿನಗಳಲ್ಲೂ ಕೂಡ ಅತ್ಯಂತ ಪುರಾತನವಾದ ಜಮೀನುದಾರಿ ಪದ್ಧತಿ ಮತ್ತು ಜಾತಿ ವ್ಯವಸ್ಥೆ ತನ್ನ ಕದಂಬ ಬಾಹುಗಳನ್ನು ಚಾಚುತ್ತಲೇ ಇದೆ. ಮೇಲ್ಜಾತಿ ಜಮೀನ್ದಾರರು ಕೆಳಜಾತಿಯ ಜನರ ಮೇಲಿನ ತಮ್ಮ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿಕೊಳ್ಳಲು ಬ್ರಿಟೀಷರ ಒಪ್ಪಂದಗಳೂ ಕಾಣ್ಕೆ ನೀಡಿದವು. ವಸಾಹತು ಖಡ್ಗ ಜಮೀನ್ದಾರಿ ಸೊಂಟದಲ್ಲಿ ಪ್ರತಿಷ್ಟಾಪನೆಗೊಂಡಿತು.
ಈ ನಿಟ್ಟಿನಲ್ಲಿ ಆ ಐದು ದಶಕಗಳು ಕರ್ನಾಟಕದ ಇತಿಹಾಸದ ಕರಾಳ ದಿನಗಳು. ಆ ಕತ್ತಲ ದಿನಗಳಲ್ಲೂ ಜನರ ನಡುವಿನಿಂದ ಚಿಮ್ಮಿ ಮುಗಿಲೆತ್ತರಕ್ಕೇರಿ ಬೆಳಕು ನೀಡಿದ ವೈಭವದ ಘಟನಾವಳಿಗಳು ನಡೆದವು. ಜನರಿಂದ ಮೂಡಿದ ಬೆಳಕು ಫ್ಯೂಡಲ್ – ವಸಾಹತು ವರ್ಗಕ್ಕೆ ಸುಡುವ ಕೆಂಡವಾಯಿತು.
“ಅಸ್ತಿತ್ವದಲ್ಲಿರುವ ಸಮಾಜದ ಇತಿಹಾಸವೆಂದರೆ ಅದು ವರ್ಗ ಹೋರಾಟದ ಇತಿಹಾಸ” – ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್.
ಈ ಸಂಪುಟವು ವರ್ಗ ಹೋರಾಟ ಅನಿವಾರ್ಯವಾಗಿ ಪಡೆದುಕೊಂಡ ಹಿಂಸಾರೂಪವನ್ನು ತಿಳಿಸುತ್ತದೆ. ಇತಿಹಾಸ ರಚನೆಯ ಮೇಲೆ ಗಾಂಧಿವಾದದ ಪರಿಣಾಮ ಹೆಚ್ಚಾದ ಕಾರಣ ಬಹಳಷ್ಟು ಇತಿಹಾಸಕಾರರು ಇತಿಹಾಸದಲ್ಲಿನ ಹಿಂಸಾ ಹೋರಾಟವನ್ನು ತಿಳಿಸದೆ ಮೌನ ವಹಿಸುತ್ತಾರೆ ಅಥವಾ ನಗಣ್ಯವೆಂಬಂತೆ ಚಿತ್ರಿಸುತ್ತಾರೆ. ಎಲ್ಲೋ ಕೆಲವರು ಮಾತ್ರ ಈ ಗಾಂಧಿವಾದದ ನೆರಳಿನ ಆಚೆ ನಿಂತು ಇತಿಹಾಸದೆಡೆಗೆ ನೋಡುತ್ತಾರೆ.
“ಮೊದಲು ಸೈನಿಕ ಹೋರಾಟ; ನಂತರ ರಾಜಕೀಯ ಬದಲಾವಣೆ. ಯುದ್ಧ ಕೂಡ ರಾಜಕಾರಣದ ಮುಂದುವರಿಕೆ” – ಡಾ. ಅಭಿಮೆಲ್ ಗಝ್ ಮನ್.
ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನನ ಸೈನ್ಯ ವಸಾಹತು ಶಕ್ತಿಗಳ ವಿರುದ್ಧ ನಡೆಸಿದ ನಾಲ್ಕು ಯುದ್ಧಗಳು “ಸೈನಿಕ ಹೋರಾಟವಲ್ಲವೇ?”. 1799ರಲ್ಲಿ ಟಿಪ್ಪು ಸೈನ್ಯದ ಸೋಲಿನ ನಂತರ ಕರ್ನಾಟಕದ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗಿ ಕರ್ನಾಟಕ ರಾಜ್ಯ ಬ್ರಿಟೀಷರ ವಸಾಹತಾದ ಸತ್ಯವನ್ನು ನಿರಾಕರಿಸಲಾದೀತೆ? ಸತತ ಯುದ್ಧಗಳಿಂದ ಬ್ರಿಟೀಷರು ನಮ್ಮ ನಾಡನ್ನು ಆಕ್ರಮಿಸಿದರು. ಹಿಂಸೆಯ ಮಾರ್ಗದ ಮೂಲಕ ಆಕ್ರಮಿಸಿ ನಮ್ಮನ್ನಾಳಿದರು.
ವಸಾಹತು ಅನುಭವದಿಂದ ಬೆಚ್ಚಿ – ಎಚ್ಚೆತ್ತು, ಜಮೀನ್ದಾರರ ಒಂದು ವರ್ಗ ಮತ್ತು ಜನಸಮೂಹ ಕಳೆದುಹೋದ ಭೂಮಿ ಮತ್ತು ಪ್ರತಿಷ್ಟೆಯನ್ನು ಮರಳಿ ಪಡೆಯಲೆತ್ನಿಸಿತು. ಟಿಪ್ಪು ಸುಲ್ತಾನನ ಸೋಲಿನ ನಂತರದಿಂದಲೇ ಅನೇಕ ಚಳುವಳಿ – ಹೋರಾಟಗಳಾರಂಭವಾದವು. ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಸ್ಥಾಪನೆಯ ರಾಜಕೀಯ ಬದಲಾವಣೆಗಾಗಿ ಸಶಸ್ತ್ರ ಸೈನಿಕ ಹೋರಾಟವನ್ನು ಜನರು ಆಯ್ದುಕೊಂಡಿದ್ದಕ್ಕೆ ಸಂಗೊಳ್ಳಿ ರಾಯಣ್ಣ ಮತ್ತು ಕಲ್ಯಾಣಸ್ವಾಮಿ ನಗರದಲ್ಲಾರಂಭಿಸಿದ ಸಶಸ್ತ್ರ ಹೋರಾಟವೇ ಸಾಕ್ಷಿ. 1760ರಿಂದ 1858ರ ಬಿಜಾಪುರದ ಹಲಗಳ್ಳಿಯ ಬೇಡರ ಸಶಸ್ತ್ರ ಹೋರಾಟದವರೆಗೂ ಕರ್ನಾಟಕ ಒಂದು ಬಹುದೊಡ್ಡ ರಣಾಂಗಣವಾಗಿತ್ತು. ಬ್ರಿಟೀಷರು ಮತ್ತವರ ಕೈಗೊಂಬೆಗಳು ಈ ಹೋರಾಟಗಳನ್ನು ಹತ್ತಿಕ್ಕಿದರು. ಆ ಶತಮಾನದಲ್ಲಿ ಬ್ರಿಟೀಷರ ಕೈಯಲ್ಲಿ ಲಕ್ಷ ಲಕ್ಷ ಜನ ಹತರಾದರು. ವಸಾಹತು ಶಕ್ತಿಗಳ ವಿರುದ್ಧ ನಡೆದ ಈ ಅಭೂತಪೂರ್ವ ಹೋರಾಟ ಮುಂದಿನ ದಿನಮಾನಗಳಲ್ಲಿ ಕಂಡು ಬರಲಿಲ್ಲ.
ಆಳುವ ವರ್ಗದವರು ಈ ಕ್ರಾಂತಿಗಳಿಗೆ ಸಂಪೂರ್ಣ ಕುರುಡಾಗಿ ವರ್ತಿಸಲಿಲ್ಲ. ತಮಗೆ ಬೇಕೆನ್ನಿಸಿದಷ್ಟನ್ನು ಮಾತ್ರ ವೈಭವೀಕರಿಸಿಕೊಂಡರು. ಏಕಪಕ್ಷೀಯವಾಗಿ ಕಿತ್ತೂರು ರಾಣಿ ಚೆನ್ನಮ್ಮಳನ್ನು ವೈಭವೀಕರಿಸಿದರು. ಚೆನ್ನಮ್ಮ ಆಳುವ ವರ್ಗಕ್ಕೆ ಸೇರಿದವಳು. ಆಕೆಯ ಪತಿ ಬ್ರಿಟೀಷರ ಕೈಗೊಂಬೆಯಾಗಿ ಮರಾಠ ಸಂಸ್ಥಾನದ ಅಂತ್ಯಕ್ಕೆ ಕೈಜೋಡಿಸಿದವನು. ಆಗಿನ ಕಾಲದ ಅನೇಕರು ಮಾಡಿದ ಹಾಗೆ ಚೆನ್ನಮ್ಮ ಗಂಡನ ಉದ್ದೇಶಗಳಿಂದ ದೂರಾಗಿ ಬ್ರಿಟೀಷರ ವಿರುದ್ಧ ಸ್ಪೂರ್ತಿದಾಯಕ ಯುದ್ಧಕ್ಕೆ ಜನರನ್ನು ಅಣಿಗೊಳಿಸಿದಳು. ಚೆನ್ನಮ್ಮ ಪ್ರಶಂಸಾರ್ಹ.
ಆದರೆ ಇತಿಹಾಸದ ತಕ್ಕಡಿ ಸರಿಯಾಗಿ ತೂಗಬೇಕಲ್ಲವೇ?
ಬ್ರಿಟೀಷರ ದಾಂಧಲೆಯಿಂದ ಹಾನಿಗೊಳಗಾದ ಕಿತ್ತೂರು ಅರಮನೆಯನ್ನು ರಕ್ಷಿಸಲಾಗಿದೆ. ಕೋಟೆಯ ಆವರಣದಲ್ಲಿ ಹುಲ್ಲು ಹಾಸು ಬೆಳೆಸಲಾಗಿದೆ. ಆ ದಿನಗಳ ಘಟನಾವಳಿಗಳನ್ನು ದಾಖಲಿಸುವುದಕ್ಕೆ ಸಂಗ್ರಹಾಲಯವಿದೆ. ಗೋಡೆಯ ಮೇಲಿನ ಬರಹ – ಚಿತ್ರಗಳನ್ನು ಗಮನಿಸಿದರೆ ವರ್ಗ ಜನರ ತಾರ್ಕಿಕತೆಗೆ ಬೆಕ್ಕಸಬೆರಗಾಗಿಬಿಡುತ್ತೀರಿ. ಯಾರೊಬ್ಬನ ಲೇಖನಿಯೂ ಸಂಗೊಳ್ಳಿ ರಾಯಣ್ಣನ ಬಗ್ಗೆ ತಿಳಿಸುವುದಿಲ್ಲ! ಚೆನ್ನಮ್ಮಳ ಸೋಲಿನ ನಂತರ ಬ್ರಿಟೀಷರ ವಿರುದ್ಧ ಯುದ್ಧ ಸಾರಿದ್ದು ಈತನೇ ಅಲ್ಲವೇ?! ನಂದಗಡದಲ್ಲಿ ನೇಣಿನ ಕುಣಿಕೆಗೆ ತಲೆಯೊಡ್ಡಿದ ಸಂಗೊಳ್ಳಿ ರಾಯಣ್ಣ ಕಿತ್ತೂರಿನ ರಾಣಿಗೆ ಮೋಸ ಮಾಡಲಿಲ್ಲ, ಕಿತ್ತೂರಿನ ಗೌರವಕ್ಕೆ ಮಸಿ ಬಳಿಯಲಿಲ್ಲ. ಬ್ರಿಟೀಷ್ ವಸಾಹತು ರಾಯಣ್ಣನನ್ನು ಕೊಂದರೆ ಭಾರತದ ಜಾತಿ – ಜಮೀನ್ದಾರಿ ಪದ್ಧತಿ ರಾಯಣ್ಣನ ದಫನು ನೆರವೇರಿಸಿತು.
ಆದರೇನಂತೆ? ಜನರ ನಡುವೆ ರಾಯಣ್ಣನಿನ್ನೂ ಬದುಕಿದ್ದಾನೆ.
ಕಿತ್ತೂರಿನ ಕೋಟೆಯಿಂದಾಚೆ ನಡೆದು ಜನರ ಬಳಿ ಬಂದರೆ ರಾಯಣ್ಣ ಸಿಗುತ್ತಾನೆ. ಇಲ್ಲಿನ ಜನರ ಸ್ಪೂರ್ತಿಯಾಗಿ, ದಂತಕತೆಯಾಗಿ, ಜಾನಪದ ಗೀತೆಗಳ ಪದವಾಗಿ. ರಾಯಣ್ಣ ಹುತಾತ್ಮನಾದ ದಿನ ಸಾವಿರಾರು ಸಂಖೈಯಲ್ಲಿ ನಂದಗಡದ ಆಲದ ಮರಕ್ಕೆ ಭೇಟಿ ನೀಡುತ್ತಾರೆ ಇಲ್ಲಿಯ ಜನ.
ರಾಣಿ ಚೆನ್ನಮ್ಮಳ ಹೋರಾಟವನ್ನು ಕೊಂಡಾಡುವ ಆಳುವ ವರ್ಗ ಒಟ್ಟಂದದಲ್ಲಿ ಬೇರೆ ರೀತಿಯದೇ ಯುದ್ಧ ಮಾಡಿದ ಸಂಗೊಳ್ಳಿ ರಾಯಣ್ಣನನ್ನು ಉದ್ದಿಶ್ಯಪೂರ್ವಕವಾಗಿ ಮರೆತುಬಿಡುತ್ತದೆ. ಶಸ್ತ್ರಗಳಿಲ್ಲದ ಜನರು ಸಶಸ್ತ್ರರಾಗಬಹುದು, ಸೈನ್ಯವಿಲ್ಲದೆಡೆ ಜನರೇ ಸೈನ್ಯ ನಿರ್ಮಿಸಬಹುದು ಮತ್ತು ಯುದ್ಧ ತರಬೇತಿಯಿಲ್ಲದ ಜನರು ಗೆರಿಲ್ಲಾ ತಂತ್ರಗಳ ಮೂಲಕ ಬಲಶಾಲಿ ಮತ್ತು ಅಧಿಕಾರ ಕೇಂದ್ರಿತ ಶತ್ರುವನ್ನೆದುರಿಸಬಹುದು ಎಂದು ತೋರಿಸಿಕೊಟ್ಟ ಖ್ಯಾತಿ ಸಂಗೊಳ್ಳಿ ರಾಯಣ್ಣನದು.
ವರ್ಗ ಹೋರಾಟದ ಮೂಲಕ ರಾಜಕೀಯ ಬದಲಾವಣೆಗಾಗಿ ಜನರು ಪ್ರಯತ್ನಿಸಲಾರಂಭಿಸಿದಾಗ ರಾಯಣ್ಣನ ಶಕ್ತಿಯ ಅರಿವಾಗುವುದು. ಸಶಸ್ತ್ರ ಸೈನಿಕ ಹೋರಾಟದ ಮಹತ್ವ ಕೂಡ ಇತಿಹಾಸದಲ್ಲಿ ದಾಖಲಾಗುವುದು. ಇತಿಹಾಸ ನಿರ್ಮಿಸಿದವರ ಒತ್ತಾಯಕ್ಕೆ ಇತಿಹಾಸ ಮಣಿಯಲೇಬೇಕು.
ಮುಂದಿನ ಅಧ್ಯಾಯ ಒಡೆಯರ್ – ಕರ್ನಾಟಕದಮೊದಲ ಕೈಗೊಂಬೆ
ಮುಂದಿನ ಅಧ್ಯಾಯ ಒಡೆಯರ್ – ಕರ್ನಾಟಕದಮೊದಲ ಕೈಗೊಂಬೆ
No comments:
Post a Comment