Jan 1, 2016

ಮನೆ ತುಂಬ ಮಸಿ ಎದೆ ತುಂಬ ಹೊಗೆ ಹೊಟ್ಟೆ ತುಂಬ ವಿಷ......


ಚಿತ್ರ-ಮಾಹಿತಿ: ಮುನೀರ್ ಕಾಟಿಪಳ್ಳ.
Mrpl ನ ಕೋಕ್ ಸಲ್ಫರ್ ಘಟಕದ ವಿರುದ್ದ DYFI ಮಾರ್ಗದರ್ಶನದಲ್ಲಿ "ನಾಗರಿಕ ಹೋರಾಟ ಸಮಿತಿ" ಯ ನೇತೃತ್ವದಲ್ಲಿ ಜೋಕಟ್ಟೆ ನಾಗರಿಕರು 2014ರಲ್ಲಿ ಆರಂಭಿಸಿದ ಹೋರಾಟ ಈ ವರ್ಷವಿಡೀ ಸಂಘರ್ಷಮಯವಾಗಿ ಮುಂದುವರಿಯಿತು. 2015ನೇ ಇಸವಿಯ ಉದ್ದಕ್ಕೂ ಪ್ರತಿ ತಿಂಗಳು ಮಹತ್ವದ ಬೆಳವಣಿಗೆಗಳು ನಡೆದಿದ್ದು, ಅದರದೊಂದು ಹಿನ್ನೋಟ ಇಲ್ಲಿದೆ: 
ಜನವರಿ:
ಪುತ್ತೂರಿನಲ್ಲಿ, ಉಪ್ಪಿನಂಗಡಿಯಲ್ಲಿ ಪರಸ್ಪರ ಕಲ್ಲುತೂರಾಟ... ಮಂಗಳೂರಿನ ಜೋಕಟ್ಟೆಯಲ್ಲಿ sez ವಿರುದ್ದದ ಬದುಕಿನ ಹಕ್ಕಿನ ಹೋರಾಟದಲ್ಲಿ, ಪ್ರತಿಭಟನಾ ಸ್ಥಳದಲ್ಲೇ ಸಹಭೋಜನ. ಪೊಲೀಸರಿಂದ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ.
ಫೆಬ್ರವರಿ:
Mrpl ಪ್ರಧಾನ ದ್ವಾರದ ಮುಂದೆ ಬಿಳಿ ಬಟ್ಟೆ ಹೊದ್ದ ಸಾಲು ಸಾಲು ಹೆಣಗಳ ರಾಶಿಯ ಅಣಕು ಪ್ರದರ್ಶನ, mrpl ವಿರುದ್ದ ಘೋಷಣೆ. ಅಸಿಸ್ಟೆಂಟ್ ಕಮೀಷನರ್ ಅಧ್ಯಯನ ನಡೆಸಿ ಕೊಟ್ಟಿರುವ ವರದಿಯ ಪ್ರಕಾರವೂ ಅಪಾಯಕಾರಿ ಮಾಲಿನ್ಯದ ದೃಢೀಕರಣ.
ಮಾರ್ಚ್:
ಮಾಲಿನ್ಯ ನಿಯಂತ್ರಣ ಮಂಡಳಿಯ ಗೋಡೆಗೆ, ಅದರ ಸುತ್ತಮುತ್ತ ಪೋಸ್ಟರ್ ಅಂಟಿಸಿ ಹೋರಾಟಕ್ಕೆ ಚಾಲನೆ. ನೂರಾರು ಶಾಲಾ ಮಕ್ಕಳಿಂದ mrpl ಗೇಟ್ ಮುಂದೆ ಪ್ರತಿಭಟನೆ.
ಏಪ್ರಿಲ್:
Mrpl ಬಲವಂತದ ಕಾಮಗಾರಿಯ ವಿರುದ್ದ ಗೆರಿಲ್ಲಾ ಮಾದರಿ ಸಂಘರ್ಷ. ಬಂದೂಕುಧಾರಿ ಭದ್ರತಾ ಪಡೆಯ ಮೇಲೆ ಜೋಕಟ್ಟೆಯ ಮಹಿಳೆಯರು, ಮಕ್ಕಳ ಸಹಿತ ನೂರಾರು ನಾಗರಿಕರ ಕಲ್ಲು ತೂರಾಟ. 
ಕೇಂದ್ರ ಪೆಟ್ರೋಲಿಯಂ ಮಂತ್ರಿ ಧರ್ಮೇಂದ್ರ ಪ್ರಧಾನ್ ರಿಂದ mrpl ಭೇಟಿ, ತ್ರಿಪಕ್ಷೀಯ ಸಮಿತಿ ರಚಿಸಲು ಜಿಲ್ಲಾಧಿಕಾರಿಗೆ ಸೂಚನೆ. 
ಮೇ:
Mrpl ಚಲೋ ಘೋಷಣೆಯಡಿ ಹತ್ತು ಕಿ. ಮೀ ಉದ್ದದ ಪಾದಯಾತ್ರೆ. Mrpl ಎದುರು ನಡೆದ ಸಾರ್ವಜನಿಕ ಸಭೆಯಲ್ಲಿ ಕರಾವಳಿ ಭಾಗದ ಹೆಸರಾಂತ ಮೀನುಗಾರ ಮುಖಂಡರು, ರೈತನಾಯಕರು, ಪರಿಸರ ಹೋರಾಟಗಾರರು, ವಕೀಲರ ಉಪಸ್ಥಿತಿ. ಹೋರಾಟ ಮತ್ತಷ್ಟು ವಿಸ್ತಾರ. 
ಜೂನ್:
ಕೋಕ್ ಸಲ್ಫರ್ ಫಟಕದ ಸಮಸ್ಯೆ ಬಗೆ ಹರಿಸಲು ಸರಕಾರದ ಮಟ್ಟದಲ್ಲಿ ಜನಪ್ರತಿನಿಧಿಗಳು, ಉಸ್ತುವಾರಿ ಮಂತ್ರಿ, ಜಿಲ್ಲಾಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ, mrpl, sez ಮುಖ್ಯಸ್ಥರು, ನಾಗರಿಕರ ಪ್ರತಿನಿಧಿಗಳನ್ನೊಳಗಂಡ ಸಮಿತಿ ರಚನೆ. ಹಾಗೂ, "ಮಾಲಿನ್ಯ ನಿಯಂತ್ರಣ ಮಂಡಳಿ”ಯಿಂದ n i t k ಯ ಫ್ರೊಫೆಸರ್ ಡಾ ಶ್ರೀನಿಕೇತನ, ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಗಳು, ಜಿಲ್ಲಾಡಳಿತದ ಪ್ರತಿನಿಧಿ, mrpl ನಿರ್ದೇಶಕರು, ನಾಗರಿಕ ಹೋರಾಟ ಸಮಿತಿಯ ಪ್ರತಿನಿಧಿಗಳನ್ನೊಳಗೊಂಡ ತಜ್ಞರ ಸಮಿತಿಯ ರಚನೆ. ಈ ಎರಡು ಸಮಿತಿಗಳ ಮೂಲಕ ಸಮಸ್ಯೆಯ ಕಾರಣ, ಪರಿಹಾರದ ದಾರಿ ಹುಡುಕುವ ನಿಟ್ಟಿನಲ್ಲಿ ಅಧ್ಯಯನಕ್ಕೆ ಚಾಲನೆ. ಹತ್ತು ತಿಂಗಳ ಹೋರಾಟಕ್ಕೆ ಒಂದು ಹಂತದ ಗೆಲುವು. 
ಜುಲೈ:
ಹೋರಾಟದ ರಣರಂಗವಾಗಿ ಮಾರ್ಪಟ್ಟ ಜೋಕಟ್ಟೆ. ಪೊಲೀಸರ ಕೋಟೆ ನಿರ್ಮಿಸಿ ಕಾರಿಡಾರ್ ರಸ್ತೆ ಕಾಮಗಾರಿ ಶುರುಮಾಡಿದ್ದ sezಗೆ ಹೋರಾಟ ಸಮಿತಿಯಿಂದ ತಡೆ. ಅರ್ಧ ಗಂಟೆಯ ಸಂಘರ್ಷದ ನಂತರ ಪೊಲೀಸರಿಂದ ಹತ್ತು ಮಹಿಳೆಯರೂ ಸೇರಿದಂತೆ ಮೂವತ್ತೈದು ಜನರ ಬಂಧನ. ಇದನ್ನು ಖಂಡಿಸಿ ಸುರತ್ಕಲ್ ಠಾಣೆಯ ಮುಂದೆ ನೂರಾರು ಸಾರ್ವಜನಿಕರಿಂದ ಪ್ರತಿಭಟನೆ. ಜನಾಗ್ರಹಕ್ಕೆ ಮಣಿದ ಪೊಲೀಸರಿಂದ ಎಲ್ಲ 35 ಜನರ ಬೇಷರತ್ ಬಿಡುಗಡೆ. 
ಆಗಸ್ಟ್:
ಸ್ಥಳಕ್ಕೆ ಭೇಟಿ ನೀಡಿದ್ದ mrpl ಡೈರೆಕ್ಟರ್ ವೆಂಕಟೇಶ್ ಅವರ ಅಚ್ಚಬಿಳಿಯ ಅಂಗಿಯ ಬೆನ್ನ ಮೇಲೆ ಸ್ಥಳೀಯ ಮಹಿಳೆಯರಿಂದ ತಮ್ಮ ಕೈಗಂಟಿಕೊಂಡಿದ್ದ ಕೋಕ್ ಕಪ್ಪು ಮಸಿ ಹಚ್ಚಿ ಪರಿಣಾಮಕಾರಿ ಪ್ರತಿಭಟನೆ. 
ಹತ್ತು ತಿಂಗಳ ಪಟ್ಟು ಬಿಡದ ಹೋರಾಟಕ್ಕೆ ರಾಜ್ಯ ಸರಕಾರದ ಮಾನ್ಯತೆ - ಜಿಲ್ಲಾಧಿಕಾರಿ, mp, mla, ಕಂಪೆನಿಯ md ಗಳು ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ನಗರ ಪಾಲಿಕೆ, ಪೊಲೀಸ್ ಕಮೀಷನರ್ ಗಳು, ಜಿಲ್ಲಾ ಪಂಚಾಯತ್ ceo, ಗ್ರಾಮಸ್ಥರ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸಿ ಸಮಸ್ಯೆ ಪರಿಶೀಲನೆ ಮತ್ತು ಪರಿಹಾರ ಮಾರ್ಗಗಳ ರಚನೆಗೆ ಸೂಚನೆ.
ಸೆಪ್ಟೆಂಬರ್:
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸೇರಿದಂತೆ ನಾಗರಿಕ ಹೋರಾಟ ಸಮಿತಿ, ಜೋಕಟ್ಟೆಯ 42 ಪ್ರತಿಭಟನಾಕಾರರ ಬಂಧನ. ಒಂದು ದಿನ ಸೆರೆವಾಸ, ಸಾರ್ವಜನಿಕರ ಆಕ್ರೋಶಭರಿತ ಪ್ರತಿಭಟನೆಗೆ ಮಣಿದು ಮಧ್ಯಂತರ ಜಾಮೀನು ನೀಡಿ ಬಿಡುಗಡೆ. 
ಹೋರಾಟನಿರತರ ಮೇಲೆ ದೌರ್ಜನ್ಯ ಎಸಗಿ, ಎರಡೆರಡು ಕೇಸು ಜಡಿದು ಜೈಲಿಗಟ್ಟಲು ಯತ್ನಿಸಿದ ಪೊಲೀಸರ ವಿರುದ್ದ ಕೈಕೋಳ ತೊಟ್ಟು ಪ್ರತಿಭಟನೆ, ಸುರತ್ಕಲ್ ಪೊಲೀಸ್ ಠಾಣೆಯ ಬೀದಿಯಲ್ಲಿ ಮೆರವಣಿಗೆ. 
ಅಕ್ಟೋಬರ್:
ಮಾಲಿನ್ಯ ಮಂಡಳಿಯ ಅಧಿಕಾರಿಗಳಿಂದ ನಾಗರಿಕ ಸಮಿತಿಯ ಉಪಸ್ಥಿತಿಯಲ್ಲಿ Mrpl ಆವರಣ ಪ್ರವೇಶ, ಪರಿಶೀಲನೆ. ಅಪಾಯ ಉಂಟುಮಾಡುವ ಮಾಲಿನ್ಯಕಾರಿ ಪತ್ತೆ. ಸಿಕ್ಕಿಬಿದ್ದ Mrpl ಗೆ ಭಾರೀ ಮುಖಭಂಗ, ತಪ್ಪೊಪ್ಪಿಗೆ.
Mrpl ವಿರುದ್ಧದ ನಾಗರಿಕ ಹೋರಾಟ ಸಮಿತಿಗೆ ಒಂದು ವರ್ಷ. 
ನವೆಂಬರ್:
ಒಂದೆಡೆ ಮಾಲಿನ್ಯದ ಕಾರಣಕ್ಕಾಗಿ mrpl ಗೆ ನೋಟೀಸ್ ಕೊಡುತ್ತಲೇ ಹಿಂಬಾಗಿಲಿನಿಂದ ತಡೆಹಿಡಿಯಲ್ಪಟ್ಟ ಪರವಾನಗಿಯನ್ನು ನವೀಕರಿಸಿದ ಸರ್ಕಾರ, ಮಾಲಿನ್ಯ ನಿಯಂತ್ರಣ ಮಂಡಳಿಗಳ ಡಬ್ಬಲ್ ಗೇಮ್ ವಿರುದ್ಧ ಪ್ರತಿಭಟನೆ. ವೃದ್ಧೆಯರು, ಮಕ್ಕಳೂ ಸೇರಿದಂತೆ ನೂರಾರು ನಾಗರಿಕರಿಂದ ಕೈಯಲ್ಲಿ ಪೊರಕೆ ಹಿಡಿದು ಪ್ರತಿಭಟನಾ ಮೆರವಣಿಗೆ. 
ಡಿಸೆಂಬರ್:
Mrpl Sez ವಿರುದ್ಧ ತೀವ್ರ ಹೋರಾಟಕ್ಕೆ ತಯಾರಿ. ತಳಮಟ್ಟದ ಸಂಘಟನೆಗೆ ಆದ್ಯತೆ. ಜೋಕಟ್ಟೆ ಸುತ್ತಮುತ್ತ ಪ್ರದೇಶದ ಬೀದಿ, ಗಲ್ಲಿಗಳ ಮಟ್ಟದಲ್ಲಿ ಹೋರಾಟ ಸಮಿತಿಯ ಘಟಕ ರಚನೆಗೆ ಚಾಲನೆ. ಧೀರ್ಘಾವದಿ ನಡೆಯಲಿರುವ ಹೋರಾಟಕ್ಕೆ ಜನರು ಮಾನಸಿಕವಾಗಿ ಸಜ್ಜು.

No comments:

Post a Comment