ಸಿನಿಮಾ ಮಂದಿಗೆಲ್ಲ ಸೆನ್ಸಾರು ಬೋರ್ಡಿನ ಮೇಲೆ ಕೋಪವಿದ್ದೇ ಇರುತ್ತದೆ. ತಮಿಳಲ್ಲಿ ಬುಟ್ರು ಕನ್ನಡದಲ್ಲಿ ಬುಡ್ಲಿಲ್ಲ, ಹಿಂದೀಲಿ ಮಾತ್ರ ಕ್ಯಾರೆ ಅನ್ನಲ್ಲ ನಮಗೆ ಮಾತ್ರ ಟಾರ್ಚರ್ರು ಕೊಡ್ತಾರೆ ಅನ್ನೋ ಮಾತುಗಳು ಗಾಂಧಿನಗರದಲ್ಲಿ ಚಿತ್ರವೊಂದು ಸೆನ್ಸಾರಿಗೆ ಹೋದಾಗಿನಿಂದಲೂ ಹರಿದಾಡುತ್ತಲೇ ಇರುತ್ತವೆ. ಇನ್ನು ಟಿವಿಗಿಲ್ಲದ, ನಾಟಕಕ್ಕಿಲ್ಲದ, ಬೇರ್ಯಾವ ಕಲೆಗೂ ಇಲ್ಲದ ಸೆನ್ಸಾರು ಬೋರ್ಡು ನಮಗೆ ಮಾತ್ರ ಯಾಕೆ? ತೀರ ಅಷ್ಟೊಂದು ಕೆಟ್ಟ ಸಂಗತಿಗಳನ್ನು ತೋರಿಸಿಬಿಟ್ಟರೆ ನಂತರ ಕೇಸು ಹಾಕಿಕೊಳ್ಳಲಿ ಬಿಡಿ ಮುಂಚೇನೆ ಕಷ್ಟಪಟ್ಟು ತೆಗೆದಿದ್ದನ್ನೆಲ್ಲ ಕಟ್ ಮಾಡಿ ಬಿಸಾಕಲು ಹೇಳೋಕೆ ಅವರೆಲ್ಲ ಯಾರು? ಎಂದು ವಾದಿಸುವವರ ಸಂಖೈಯೂ ಕಮ್ಮಿಯೇನಿಲ್ಲ. ಸೆನ್ಸಾರು ಮಂಡಳಿಯ ಕಾಟಗಳು ನಮಲ್ಲಷ್ಟೇ ಸೀಮಿತವಾಗಿಲ್ಲ. British Board of Film classification ಕೂಡ ಇದೇ ರೀತಿಯ ತೊಂದರೆ ಕೊಡುತ್ತಿತ್ತಂತೆ. ಸೆನ್ಸಾರ್ ಮಂಡಳಿಯ ವಿರುದ್ಧ ಪ್ರತಿಭಟಿಸಬೇಕೆನ್ನುವವರು ಬಿ.ಬಿ.ಎಫ್.ಸಿಯ ವಿರುದ್ಧ ಪ್ರತಿಭಟಿಸಿದ ಚಾರ್ಲ್ಸ್ ಲೈನಿಯಿಂದ ಕಲಿಯುವುದು ಸಾಕಷ್ಟಿದೆ!
ಅಂದಹಾಗೆ ಚಾರ್ಲ್ಸ್ ಲೈನಿ 'ಪೈಂಟ್ ಡ್ರೈಯಿಂಗ್' (Paint drying) ಹೆಸರಿನ ಚಿತ್ರ ತೆಗೆಯುತ್ತಾನೆ. ಬಿ.ಬಿ.ಎಫ್.ಸಿಯಲ್ಲಿ ಒಂದು ಚಿತ್ರವನ್ನು ಸೆನ್ಸಾರಿಗೆ ತಂದರೆ ಮೊದಲು 145 ಡಾಲರ್ ಹಣವನ್ನು ಕಟ್ಟಿಸಿಕೊಳ್ಳಲಾಗುತ್ತದೆ, ನಂತರ ಸಿನಿಮಾದ ಪ್ರತೀ ನಿಮಿಷಕ್ಕೆ ಹತ್ತು ಡಾಲರಿನಷ್ಟು ಹಣವನ್ನು ಕಟ್ಟಬೇಕಾಗುತ್ತದೆ. ಸೆನ್ಸಾರು ಮಂಡಳಿಗೆ ದುಡ್ಡು ಕಟ್ಟಲು ಹಣವೆತ್ತಲು ಪ್ರಾರಂಭಿಸುತ್ತಾನೆ ಚಾರ್ಲ್ಸ್. ಒಟ್ಟಾದ ಹಣದ ಮೊತ್ತ ಚಿತ್ರದ ಸಮಯವನ್ನು ನಿರ್ಧರಿಸುತ್ತೆ! ಅದ್ಹೇಗೆ ಅಂತೀರಾ? ಚಿತ್ರದ ಹೆಸರು ಸೂಚಿಸುವಂತೆ ಗೋಡೆಯೊಂದಕ್ಕೆ ಪೈಂಟು ಬಳಿದಿರಲಾಗುತ್ತದೆ. ಕ್ಯಾಮೆರಾದ ತುಂಬ ಬಣ್ಣ ಬಳಿಸಿಕೊಂಡ ಗೋಡೆ. ಇಡೀ ಚಿತ್ರದಲ್ಲಿ ಬಳಿದ ಬಣ್ಣ ಒಣಗುವುದನ್ನಷ್ಟೇ ತೋರಿಸಲಾಗಿದೆ! ಮೊದಲ ನಿಮಿಷದಿಂದ ಕೊನೆಯ ನಿಮಿಷದವರೆಗೂ ಕ್ಯಾಮೆರಾ ಚೂರೂ ಮಿಸುಕದೆ ಬಣ್ಣ ಒಣಗುವ 'ಪ್ರಕ್ರಿಯೆ'ಯನ್ನು ತೋರಿಸಲಾಗಿದೆ! ಬಣ್ಣ ಒಣಗುವುದನ್ನು ಹತ್ತು ನಿಮಿಷವೂ ತೋರಿಸಬಹುದು ಒಂದು ಘಂಟೆಯೂ ತೋರಿಸಬಹುದು, ನಿಮಿಷಕ್ಕಿಷ್ಟು ಹಣ ಕಟ್ಟುವ ಚೈತನ್ಯವಿರಬೇಕಷ್ಟೇ! ಚಾರ್ಲ್ಸ್ ನ ಉದ್ದೇಶವರಿತ ಮಂದಿ ಹೆಚ್ಚಾಗೇ ಹಣ ನೀಡಿದ ಪರಿಣಾಮ 'ಪೈಂಟ್ ಡ್ರೈಯಿಂಗ್'ನ ಒಟ್ಟು ಸಮಯ ಹತ್ತು ಘಂಟೆಗಳಾಗಿಬಿಟ್ಟಿತು! ಸೆನ್ಸಾರು ಮಂಡಳಿಯವರ ಕರ್ಮ ನೋಡಿ, ಒಣಗುವ ಪೈಂಟಿನ ಚಿತ್ರವನ್ನು ಒಂದು ನಿಮಿಷವೂ ತಪ್ಪಿಸದೇ ನೋಡಲೇಬೇಕು! ಇನ್ನೂ ತಮಾಷೆಯೆಂದರೆ ಬಿ.ಬಿ.ಎಫ್.ಸಿ ಸದಸ್ಯರಿಗೆ ದಿನಕ್ಕೆ ಒಂಭತ್ತು ಘಂಟೆ ಮಾತ್ರ ಸಿನಿಮಾ ನೋಡುವ ಅವಕಾಶವಿರುವುದು! ಮೊದಲ ದಿನ ಒಂಭತ್ತು ಘಂಟೆ ಬಣ್ಣ ಒಣಗುವುದನ್ನು ಕಂಡು ಮಾರನೇ ದಿನ ಮತ್ತೆ ಒಂದು ಘಂಟೆ ಬಣ್ಣವನ್ನು ಒಣಗಿಸಿ ಮುಗಿಸಿದ ನಂತರ ಸೆನ್ಸಾರ್ ಸರ್ಟಿಫಿಕೇಟು ಕೊಡುವ ಸೌಭಾಗ್ಯ!
ಇದು ಎಷ್ಟು ಸರಿಯೋ ಎಷ್ಟು ತಪ್ಪೋ ಪ್ರತಿಭಟನೆಯ ನವೀನ ಮಾದರಿ ಎಂಬುದಂತೂ ದಿಟ!
ಉಘೇ ಉಘೇ ಚಾರ್ಲ್ಸ್ ಲೈನಿ!
ReplyDeleteಸೆನ್ಸಾರ್ ಮಂಡಲಿಗೆ ಹತ್ತುಗಂಟೆ ಒಣಗುವ ಗೋಡೆ ನೋಡೋ ಸೌಭಾಗ್ಯ!