Dec 22, 2015

ಪ್ರಭುತ್ವದ ಅಸಹಿಷ್ಣುತೆ!

ಕು.ಸ.ಮಧುಸೂದನ ರಂಗೇನಹಳ್ಳಿ
ಈ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ವಿರುದ್ದ ದಿನೇದಿನೇ ಪ್ರತಿಭಟನೆ ಹೆಚ್ಚಾಗುತ್ತಿದೆ. ಸಾಹಿತಿಗಳು,ಕಲಾವಿದರು,ವಿಜ್ಞಾನಿಗಳು ಮತ್ತು ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಅಸಹಿಷ್ಣುತೆಯ ವಾತಾವರಣದ ಬಗ್ಗೆ ಆತಂಕ ವ್ಯಕ್ತಪಡಿಸಿ ತಮ್ಮ ಪ್ರತಿಭಟನೆಯನ್ನು ಹಲವು ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇಂತಹ ಪ್ರತಿಭಟನೆಗೆ ಎರಡು ನೆಲೆಯಲ್ಲಿ ವಿರೋಧ ವ್ಯಕ್ತವಾಗುತ್ತಿವೆ. ಮೊದಲನೆಯದರ ಪ್ರಕಾರ ಇಂಡಿಯಾದಲ್ಲಿ ಅಸಹಿಷ್ಣುತೆಯೆನ್ನುವುದೇ ಇಲ್ಲ, ಇದ್ದರೂ ಅದು ಹಿಂದೂ ಧರ್ಮದ ವಿರುದ್ದ ಇತರೇ ಧರ್ಮದವರ ಮತ್ತು ಪ್ರಗತಿಪರರ ಅನಗತ್ಯ ಅಹನೆಯಷ್ಟೆ ಅನ್ನುವುದಾಗಿದೆ. ಇನ್ನು ಎರಡನೇಯದರ ಪ್ರಕಾರ ಇಂಡಿಯಾದಲ್ಲಿ ಅಸಹನೆಯಿರುವುದು ಹೊಸದೇನಲ್ಲ. ಸಾವಿರಾರು ವರ್ಷಗಳಿಂದಲೂ ಇಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ. ಆದರೆ ಇಷ್ಟು ವರ್ಷಗಳÀ ಕಾಲ ಅದನ್ನು ವಿರೋಧಿಸದೇ ಸುಮ್ಮನಿದ್ದವರು ಈಗ ಬಾಜಪ ಅಧಿಕಾರಕ್ಕೆ ಬಂದ ತಕ್ಷಣ ಅದನ್ನು ವಿರೋಧಿಸುವುದು ಬಾಜಪದ ಬಗ್ಗೆ ಮತ್ತು ಅದರ ನೀತಿಗಳ ಬಗ್ಗೆ ಅವರಿಗಿರುವ ಅಸಹನೆಯನ್ನು ತೋರುತ್ತದೆ ಅನ್ನುವುದಾಗಿದೆ!

ಈ ಎರಡೂ ವಾದಗಳನ್ನು ಆಲಿಸಿದಾಗ ಒಂದಂತು ಸ್ಪಷ್ಟವಾಗುತ್ತದೆ. ಅದು ಅಸಹಿಷ್ಣುತೆಯ ವಿರುದ್ದದ ಪ್ರತಿಭಟನೆ ಎಂದಾಕ್ಷಣ ಯಾರು ಹೇಳದಿದ್ದರೂ ಅದು ತನ್ನ ವಿರುದ್ದವೇ ಎಂದು ಬಾಜಪ ಮತ್ತದರ ಸಂಘಪರಿವಾರ ಅರ್ಥಮಾಡಿಕೊಳ್ಳುವ ಮಟ್ಟಿಗಾದರು ಅದಕ್ಕೆ ತನ್ನ ಅಸಹನೆಯ ಬಗ್ಗೆ ಅರಿವಿದೆಯೆನ್ನುವುದು. 

ನಾನು ಎರಡನೆಯ ವಾದವನ್ನು ಭಾಗಶ: ಒಪ್ಪುತ್ತೇನೆ: ಯಾಕೆಂದರೆ ಐದು ಸಾವಿರ ವರ್ಷಗಳ ಇತಿಹಾಸವಿರುವ ಈ ನಾಡಿಗೆ ಅಸಹಿಷ್ಣುತೆ ಹೊಸತೇನಲ್ಲ! ಆದರದು ಸಾಂಪ್ರದಾಯಿಕ ಭಾರತೀಯ ಸಮಾಜದ ಕೊಡುಗೆಯಾಗಿತ್ತು. ಸನಾತನವೇ ಶ್ರೇಷ್ಠವೆಂದು ನಂಬಿಕೊಂಡು ಬಂದ ಸಮಾಜವೊಂದು ಅದೇ ಸಮಾಜದ ಕೆಳಸ್ತರದ ಜಾತಿ-ಜನಾಂಗಗಳ ಮೇಲೆ ತೋರಿಸುತ್ತಲೇ ಬಂದ ಅಸಹನೆಯದು. ಭಾರತೀಯ ಸಮಾಜದ ನ್ಯಾಯದ ಪರಿಕಲ್ಪನೆಯಲ್ಲೇ ಇದ್ದ ತಾರತಮ್ಯಗಳು, ಮೇಲುಕೀಳುಗಳು ಸಮಾಜದೊಳಗಿನ ಅಸಹಿಷ್ಣುತೆಗೆ ಕಾರಣವಾಗಿದ್ದವು. ಸನಾತನ ಸಮಾಜ ಒಪ್ಪಿಕೊಂಡ ಮೌಲ್ಯಗಳೇ ಶ್ರೇಷ್ಠವೆಂದು ಬಾವಿಸಿದಾಗ ಅದನ್ನು ಮೀರಲು ಯಾರೂ ಪ್ರಯತ್ನಿಸಬಾರದೆಂಬ ದೂರಾಲೋಚನೆಯಿಂದ ಹುಟ್ಟಿಕೊಂಡ ಅಸಹನೆ ಹಾಗೆ ಮೀರಬಹುದೆಂದು ಬಾವಿಸಿದ ವರ್ಗಗಳ ಮೇಲೆ ಮೇಲು ವರ್ಗಗಳು ಸಾಮಾಜಿಕ ಬಹಿಷ್ಕಾರದಂತಹ ಶಿಕ್ಷೆಗಳನ್ನು ಹೇರತೊಡಗಿದ್ದವು. ಜೊತೆಗೆ ದೈಹಿಕವಾಗಿ ಹಲ್ಲೆಗಳೂ ನಡೆಯುತ್ತಿದ್ದವು. ಸಾಂಪ್ರದಾಯಿಕ ಭಾರತೀಯ ಸಮಾಜದಲ್ಲಿ ನ್ಯಾಯದ ಕಲ್ಪನೆಯೆನ್ನುವದು ಯಾವತ್ತಿಗೂ ಮೇಲ್ವರ್ಗಗಳ ಸ್ವತ್ತಾಗಿತ್ತು. ಹಾಗಾಗಿ ಮೇಲ್ಜಾತಿಗಳು ಸದಾ ದಲಿತರ ವಿರುದ್ದ ಒಂದು ಅಸಹನೆಯನ್ನು ತೋರುತ್ತಲೇ ಬಂದಿದ್ದವು. ಭಾರತೀಯ ಸಮಾಜ ಒಪ್ಪಿಕೊಂಡ ನ್ಯಾಯವ್ಯವಸ್ಥೆಯಲ್ಲಿ ಈ ನೆಲದ ಕೆಳಜಾತಿÀಗಳಿಗೆ ಯಾವುದೇ ಹಕ್ಕಾಗಲಿ ಅವಕಾಶವಾಗಲಿ ಇರಲಿಲ್ಲ. ಆದರೆ ಇಂತಹ ಅಸಹನೆಯಿಂದಾಗುತ್ತಿದ್ದ ಹಲ್ಲೆಗಳು ತೀರಾ ವೈಯುಕ್ತಿಕ ನಲೆಗಟ್ಟಿನಲ್ಲಿ ನಡೆಯುತ್ತಿದ್ದವು.

ಹೀಗಾಗಿಯೇ ಸಾಂಪ್ರದಾಯಿಕ ಭಾರತೀಯ ಸಮಾಜ ಒಪ್ಪಿಕೊಂಡ ಮೌಲ್ಯಗಳು ಯಾವತ್ತಿಗೂ ಕೆಳಜಾತಿಗಳ ಮತ್ತು ಅಲ್ಪಸಂಖ್ಯಾತರ ಮಟ್ಟಿಗೆ ಅನ್ಯವಾಗಿದ್ದವು ಮತ್ತು ಅವು ಅಂತಹ ಅಸಹಿಷ್ಣುತೆಯನ್ನು ವ್ಯಕ್ತಿಗತವಾಗಿಯೇ ಎದುರಿಸಬೇಕಾಗಿತ್ತು. ಎಲ್ಲಿಯವರೆಗು ಅಸಹಿಷ್ಣುತೆಯೆನ್ನುವುದು ವೈಯುಕ್ತಿಕ ನೆಲೆಯಲ್ಲಿ ನಡೆಯುತ್ತಿತ್ತೋ ಅಲ್ಲಿಯವರೆಗು ಅದನ್ನು ವೈಯಕ್ತಿಕ ನೆಲೆಗಟ್ಟಿಲ್ಲಿಯೇ ವಿರೋಧಿಸಲಾಗುತ್ತಿತ್ತು. ಹಾಗಾಗಿಯೇ ಬಲಪಂಥೀಯರು ಹೇಳುವಂತೆ ಹಿಂದೆಯೂ ಅಸಹಿಷ್ಣುತೆ ಇದ್ದರೂ ಜನರು ವೈಯುಕ್ತಿಕ ಮಟ್ಟದಲ್ಲಿ ಮಾತ್ರ ತೆಗೆದುಕೊಳ್ಳುತ್ತಿದ್ದರು ಅನಿಸುತ್ತೆ. ಹಾಗಾಗಿಯೇ ವೈಯುಕ್ತಿಕ ನೆಲೆಯಲ್ಲಿನ ಹಲ್ಲೆ ಅವಮಾನಗಳನ್ನು ನಾವಗಳು ಕೂಡ ವೈಯುಕ್ತಿಕವಾಗಿಯೇ ತೆಗೆದುಕೊಂಡು ಸಹಿಸಿಕೊಳ್ಳುತ್ತಿದ್ದೆವು.

ಆದರೆ ಇವತ್ತಿನ ಅಸಹಿಷ್ಣುತೆಯ ಬಗೆಯಗಲಿ ಹಗೆಯಾಗಲಿ ಬೇರೆ ತೆರನಾದ್ದು. ಸಾಂಪ್ರದಾಯಿಕ ಸಮಾಜದ ಮೇಲೆ ತನ್ನ ಹಿಡಿತ ಕಳೆದುಕೊಳ್ಳುತ್ತಿರುವ ಧರ್ಮವೊಂದು ಹೇಗೆಲ್ಲ ತನ್ನ ಅಸಹನೆ ತೋರಬಹುದೊ ಅಂತಹದೊಂದು ಅಸಹಿಷ್ಣುತೆ ಇವತ್ತು ಇಂಡಿಯಾದಲ್ಲಿ ಗೋಚರಿಸುತ್ತಿದೆ. ಜೊತೆಗೆ ತನ್ನ ಮೂಲ ಸಿದ್ದಾಂತಗಳನ್ನು ಮತ್ತು ತಾನು ಯಾವುದನ್ನು ಶ್ರದ್ದೆ ಎನ್ನುತ್ತೇನೆಯೊ ಅದನ್ನು ಮೂಢನಂಬಿಕೆಯೆಂದು ಪ್ರತಿರೋಧಿಸುವ ಮನಸುಗಳ ವಿರುದ್ದವೂ ಅದು ಇನ್ನಿಲ್ಲದ ಅಸಹಿಷ್ಣುತೆ ಹೊರಹಾಕುತ್ತಿದೆ. ಧರ್ಮವೊಂದು ಪ್ರಭುತ್ವವಾಗುವಾಗ ತನ್ನ ಹಾದಿಗೆ ಅಡ್ಡಬಂದವರನ್ನು ಇನ್ನಿಲ್ಲವಾಗಿಸಿ ಭಯವನ್ನು ಸೃಷ್ಠಿಸುವ ರೀತಿ ಇದಾಗಿದೆ. ತಾನು ಪ್ರಭುತ್ವವಾಗದಿದ್ದರೂ ತನ್ನ ಹಿತ ಕಾಯುವ ಪ್ರಭುತ್ವವೊಂದು ಇದೆಯೆಂಬ ಅದರ ನಂಬಿಕೆಯೇ ಇವತ್ತು ಇಂಂಡಿಯಾದಲ್ಲಿ ಇಷ್ಟೊಂದು ಅಸಹಿಷ್ಣುತೆ ಹುಟ್ಟು ಹಾಕಲು ಕಾರಣವಾಗಿದೆ

ಪ್ರಭುತ್ವದ ಬೆಂಬಲವಿದ್ದಾಗ ನಡೆಯುವ ಹಲ್ಲೆಗಳು ಮಾರಣಾಂತಿಕವಾಗಿರುತ್ತವೆ. ಹೀಗಾಗಿಯೇ ದಾಬೋಲ್ಕರ್ ಮತ್ತು ಕಲಬುರ್ಗಿಯವರ ಹತ್ಯೆಗಳು ಬಹಳ ಸುಲಭವಾಗಿ ನಡೆದು ಹೋಗುತ್ತವೆ. ಯಾವಾಗ ಪ್ರಭುತ್ವದ ಪ್ರಾಯೋಜಿತ ಅಹಿಷ್ಣುತೆ ಜಾಸ್ತಿಯಗುತ್ತದೆಯೊ ಆಗದನ್ನು ವಿರೋಧಿಸುವುದು ಸಾಮೂಹಿಕವಾಗಿಯೇ ಅನಿವಾರ್ಯವಾಗುತ್ತದೆ. ಮತ್ತು ಇಂತಹ ವಿರೋಧ ಸಮಾಜದ ಎಲ್ಲ ವರ್ಗದ ಜನರನ್ನು ಒಳಗೊಂಡು ತೀವ್ರವಾಗುತ್ತದೆ. ಇವತ್ತು ಇಂಡಿಯಾದಲ್ಲಿ ಹೆಚ್ಚಾಗುತ್ತಿರುವ ಅಸಹಿಷ್ಣುತೆಯ ವಿರುದ್ದದ ಹೋರಾಟ ತೀವ್ರವಾಗಿರುವುದು ಈ ಕಾರಣಕ್ಕೇನೆ. ಹಿಂದೆ ಇದ್ದ ಅಸಹಿಷ್ಣುತೆಯ ವಿರುದ್ದ ಯಾಕೆ ಪ್ರತಿಭಟಿಸಲಿಲ್ಲ ಎಂದು ಕೇಳುವವರಿಗೆ ಇದು ಸಮಂಜಸ ಉತ್ತರವೆಂದು ನಾನಂತು ಬಾವಿಸುತ್ತೇನೆ.

1 comment:

  1. ಶಾರುಕ್ ಖಾನ್ ಅಸಹಿಷ್ಣುತೆಯ ಬಗ್ಗೆ ಹೇಳಿಕೆ ನೀಡಿದ್ದನ್ನು ನೆಪವಾಗಿ ಇಟ್ಟುಕೊಂಡು ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಶಾರುಕ್ ಖಾನ್ ಅಭಿನಯದ 'ದಿಲ್ವಾಲೇ' ಚಿತ್ರದ ಪ್ರದರ್ಶನವನ್ನು ಇನ್ನು ಮುಂದೆ ನಡೆಸಬಾರದೆಂದು ಚಿತ್ರಮಂದಿರದ ವ್ಯವಸ್ಥಾಪಕರಿಗೆ ಬೆದರಿಕೆ ಹಾಕಿ ಬಲಾತ್ಕಾರದಿಂದ ನಿಲ್ಲಿಸಿದ ಘಟನೆ ನಡೆದಿದೆ. ಚಿತ್ರ ಮಂದಿರವನ್ನು ಲೇಸಿಗೆ ಪಡೆದವರು ಓರ್ವ ಹಿಂದೂವೇ ಆದರೂ ಇವರು ಈ ರೀತಿ ಹಿಂದೂಗಳಿಗೆಯೇ ತೊಂದರೆ ಕೊಡುತ್ತಾರೆ. ಚಿತ್ರ ಪ್ರದರ್ಶನ ರದ್ದಿನಿಂದ ಅದನ್ನು ಲೇಸಿಗೆ ಪಡೆದ ಹಿಂದೂ ಬಾಂಧವರಿಗೆ ಒಂದು ಲಕ್ಷ ರೂಪಾಯಿ ನಷ್ಟ ಆಗಿದೆ ಎಂದು ಅವರು ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದಾರೆ. ಬಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಈ ಗೂಂಡಾಗಿರಿಯನ್ನು ಇವುಗಳ ಪೋಷಕರಾದ ಬಿಜೆಪಿಯವುರು ಖಂಡಿಸಿಲ್ಲ. ದೇಶದಲ್ಲಿ ಅಸಹಿಷ್ಣುತೆ ಇದೆ ಎಂಬುದಕ್ಕೆ ಇವರು ತಮ್ಮ ದರ್ಪ ಹಾಗೂ ಅಹಂಕಾರಗಳಿಂದ ಪದೇ ಪದೇ ಸಾಬೀತುಪಡಿಸುತ್ತಿದ್ದಾರೆ. ಆಳುವ ಪಕ್ಷದ ವಿರುದ್ಧ ಯಾರೂ ಮಾತನಾಡಬಾರದು, ಟೀಕಿಸಬಾರದು ಎಂಬ ಈ ನಿಲುವು ಸರ್ವಾಧಿಕಾರದ ನಿಲುವಾಗಿದ್ದು ಇಂಥ ಅಸಹನೆಯ ವಿರುದ್ಧ ನಿರಂತರ ಜಾಗೃತಿ ಇಂದಿನ ಅಗತ್ಯ. ಇಲ್ಲದಿದ್ದರೆ ಬಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಪಾಳೇಗಾರಿಕೆ ಹಾಗೂ ದಬ್ಬಾಳಿಕೆಗೆ ಪ್ರಜಾಪ್ರಭುತ್ವ ವ್ಯವಸ್ಥೆ ಕಣ್ಣು ಮುಚ್ಚುವ ಸಂಭವವಿದೆ.

    ReplyDelete