ನಾಯಂಡನಹಳ್ಳಿ ಮತ್ತು ಮಾಗಡಿ ರಸ್ತೆಯ ಮಧ್ಯದ ಮೆಟ್ರೋ ರೈಲಿನ ಉದ್ಘಾಟನೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮೆಟ್ರೋಗೆ ಕೆಂಪೇಗೌಡರ ಹೆಸರಿಡುವ ಬಗ್ಗೆ ಯೋಚಿಸುತ್ತಿದ್ದೀವಿ ಎಂದು ಹೇಳಿದರು. ನಂತರದ ದಿನಗಳಲ್ಲಿ ಬೆಂಗಳೂರಿನ ಮೆಟ್ರೋಗೆ ವಿಶ್ವೇಶ್ವರಯ್ಯನವರ ಹೆಸರನ್ಯಾಕೆ ಇಡಬಾರದು ಎಂಬ ಚರ್ಚೆಯಾಯಿತು. ಲಿಂಗಾಯತ ಸಂಘಟನೆಗಳು ಬಸವಣ್ಣನ ಹೆಸರನ್ನು ಮೆಟ್ರೋಗೆ ಇಡಬೇಕು ಎಂದು ಮನವಿ ಸಲ್ಲಿಸಿದರು. ಇವುಗಳ ಮಧ್ಯೆ ಮೆಟ್ರೋ ಯೋಜನೆಯ ಬಗ್ಗೆ ದಶಕಗಳ ಹಿಂದೆ ರೂಪುರೇಷೆ ನಿರ್ಮಿಸಿ ಕನಸು ಕಂಡಿದ್ದು ಶಂಕರ್ ನಾಗ್ ಆದ್ದರಿಂದ ಬೆಂಗಳೂರು ಮೆಟ್ರೋಗೆ ಶಂಕರನಾಗರ ಹೆಸರನ್ಯಾಕೆ ಇಡಬಾರದು ಎಂಬ ಪ್ರಶ್ನೆಯೂ ಕೇಳಿಬಂತು. ಇಂತಹುದೊಂದು ಅನವಶ್ಯಕ ಚರ್ಚೆಯನ್ನು ಹುಟ್ಟುಹಾಕಿದ ಸಿದ್ಧರಾಮಯ್ಯನವರು ನಂತರ ಮೌನವಾಗಿದ್ದುಬಿಟ್ಟರು.
ಸಿದ್ಧರಾಮಯ್ಯ ಮೆಟ್ರೋಗೆ ಕೆಂಪೇಗೌಡರ ಹೆಸರನ್ನಿಡುವ ಬಗ್ಗೆ ಯೋಚಿಸುತ್ತಿದ್ದೀವಿ ಎಂದು ಹೇಳಿದ್ದಕ್ಕೂ ಕಾರಣವಿತ್ತು. ಕೆಲವು ದಿನಗಳ ಹಿಂದೆ ಸರಕಾರ ಆಯೋಜಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಗಿರೀಶ್ ಕಾರ್ನಾಡ್ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿನ ಬದಲು ಟಿಪ್ಪುವಿನ ಹೆಸರನ್ನಿಡಬಹುದಿತ್ತು ಎಂದಿದ್ದು ವಿವಾದವಾಗಿ ಒಕ್ಕಲಿಗರ ಸಂಘಟನೆಗಳು ಕೆಂಪೇಗೌಡರಿಗೆ ಮಹಾನ್ ಅವಮಾನವಾದವರಂತೆ ಬೀದಿಗಿಳಿದು ಪ್ರತಿಭಟಿಸಿದ್ದರು. ಸಿದ್ಧರಾಮಯ್ಯನವರನ್ನು ಕಂಡರೆ ಒಕ್ಕಲಿಗರಿಗೆ ಮೊದಲೇ ಆಗುವುದಿಲ್ಲ, ಅಂತಹದ್ದರಲ್ಲಿ ಗಿರೀಶ್ ಕಾರ್ನಾಡರ ಹೇಳಿಕೆ ಒಕ್ಕಲಿಗರಲ್ಲಿ ಸಿದ್ಧು ಬಗ್ಗೆ ಇರುವ ಅಸಹನೆಯನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಅನುಮಾನವಿರಲಿಲ್ಲ. ಮೂರು ದಿನದ ನಂತರ ಸಿದ್ಧು ಏನೋ ಸಮಜಾಯಿಷಿ ಕೊಟ್ಟರಾದರೂ ಅದು ಸಾಕಾಗಲಿಲ್ಲ. ಈ ಕಾರಣಕ್ಕಾಗಿಯೇ ಸಿದ್ಧರಾಮಯ್ಯ ಕೆಂಪೇಗೌಡ ಮೆಟ್ರೋ ಎಂಬ ಹೆಸರನ್ನು ತೇಲಿಬಿಟ್ಟರು. ಬೇರೆ ಹೆಸರುಗಳ ಚರ್ಚೆಯನ್ನು ಪ್ರಾರಂಭಿಸಿಬಿಟ್ಟರು!
ಅವರಿವರ ಹೆಸರ್ಯಾಕೆ ಬೇಕು? ಸದ್ಯಕ್ಕೆ ಅದಕ್ಕೆ 'ನಮ್ಮ ಮೆಟ್ರೋ' ಎಂದು ಹೆಸರಿಸಲಾಗಿದೆ. ನಮ್ಮದು ಅಂದರೆ ಎಲ್ಲರದೂ ಆಯಿತಲ್ಲ? ಈಶಾನ್ಯ ಸಾರಿಗೆ, ವಾಯುವ್ಯ ಸಾರಿಗೆ ಎಂದು ಹೆಸರಿಸಿದಂತೆ ಬೆಂಗಳೂರು ಮೆಟ್ರೋ ಅಂದಿದ್ದರೂ ಸಾಕಾಗಿತ್ತು. ಯಾವುದೋ ಸಮುದಾಯವನ್ನು 'ತೃಪ್ತಿ'ಪಡಿಸುವ ಸಲುವಾಗಿ ಒಂದು ಹೆಸರಿಡುವುದು, ಮತ್ತೊಂದು ಸಮುದಾಯ ನಮ್ಮ ನಾಯಕನ ಹೆಸರನ್ಯಾಕೆ ಇಡಲಿಲ್ಲ ಎಂದು ಮುನಿಸಿಕೊಳ್ಳುವುದು ಹೆಸರಿಟ್ಟು ವರುಷಗಳು ಕಳೆದ ನಂತರ 'ಈ ಹೆಸರು ಬದಲು ಆ ಹೆಸರು ಇಡಬಹುದಿತ್ತು ಕಣ್ರೀ' ಎಂದು ಪ್ರಚಾರಪ್ರಿಯರು ವಿನಾಕಾರಣ ವಿವಾದವೆಬ್ಬಿಸುವುದು. ಇವೆಲ್ಲ ಬೇಕಾ? ತೆವಳುತ್ತ ಸಾಗುತ್ತಿರುವ ಮೆಟ್ರೋ ಕಾಮಗಾರಿಯನ್ನು ಚುರುಕುಗೊಳಿಸಿದ್ದರೆ ಜನರಿಗಾದರೂ ಅನುಕೂಲವಾಗುತ್ತಿತ್ತು. ಒಂದೇ ಪುಣ್ಯ ಅಂದರೆ ಇಂದಿರಾ ಹೆಸರನ್ನೋ ರಾಜೀವ್ ಹೆಸರನ್ನೋ ಇಡುವ ಬಗ್ಗೆ ಸಿದ್ಧು ಹೇಳಲಿಲ್ಲ! ಓಹ್, ಅವರು ವಲಸಿಗರಲ್ಲವೇ!
No comments:
Post a Comment