Dr Ashok K R
ಟಿಪ್ಪು ಬಗೆಗಿನ ಚರ್ಚೆ ಅನವಶ್ಯಕ ಎಂದೇ ನಂಬಿದ್ದವನು ನಾನು. ನಾವು ದಿನನಿತ್ಯ ವ್ಯವಹರಿಸುವ, ಸಂವಹಿಸುವ ಜನರ ಒಳ್ಳೆಯತನದ ಬಗ್ಗೆಯೇ ನಮಗೆ ಅರಿವಾಗದಿರುವಾಗ ಇನ್ನೂರು ಮುನ್ನೂರು ವರ್ಷದ ಹಿಂದೆ ಸತ್ತು ಹೋದ ವ್ಯಕ್ತಿಯೊಬ್ಬ ದೇವರಷ್ಟೇ ಒಳ್ಳೆಯವನು ದೆವ್ವದಷ್ಟೇ ಕೆಟ್ಟವನು ಎಂದು ವಾದಿಸುವುದು ಇವತ್ತಿನ ವರ್ತಮಾನಕ್ಕೆ ಎಷ್ಟರ ಮಟ್ಟಿಗೆ ಅವಶ್ಯಕ? ಟಿಪ್ಪುವಿನ ಹೆಸರಲ್ಲಿ ಸಾವು ನಡೆದುಹೋಗಿದೆ. ಸಾವಿನ ನೆಪದಲ್ಲಿ ಪೊಲಿಟಿಕಲ್ ಮೈಲೇಜ್ ತೆಗೆದುಕೊಳ್ಳುವವರ ಸಂಖೈಯೂ ಹೆಚ್ಚಾಗಿಬಿಟ್ಟಿದೆ. ಜನರನ್ನು ಉದ್ರೇಕಗೊಳಿಸುವಂತಹ ಬರಹಗಳು ಫೇಸ್ ಬುಕ್ ತುಂಬ ರಾರಾಜಿಸುತ್ತಿವೆ. ಈಗಲೂ ಮನಸ್ಸಿಗೆ ಅನ್ನಿಸಿದ್ದನ್ನು ಬರೆಯದಿರುವುದು ಸರಿಯಲ್ಲ ಎಂಬ ಕಾರಣಕ್ಕೆ ಈ ಬರಹ. ಮೊದಲು ಟಿಪ್ಪು ಜಯಂತಿಯ ವಿರೋಧಿಗಳ ವಾದದಲ್ಲಿರುವ ದ್ವಂದ್ವಗಳನ್ನು ಗುರುತಿಸೋಣ.
ಇದನ್ನೂ ಓದಿ: ಟಿಪ್ಪು ಎಂಬ ಅನವಶ್ಯಕ ಚರ್ಚೆ
ಟಿಪ್ಪು ಒಬ್ಬ ಧರ್ಮದ್ರೋಹಿ, ಸಾವಿರಾರು ಹಿಂದೂಗಳನ್ನು ಕೊಂದು ಸಾವಿರಾರು ಜನರನ್ನು ಮತಾಂತರಿಸಿದ, ಅವನ ಕೈಯೆಲ್ಲ ರಕ್ತಮಯ: ಟಿಪ್ಪು ವಿರೋಧಿಗಳು ಹೇಳಿರುವುದೆಲ್ಲವೂ ಸತ್ಯ. ಆತ ಸಾವಿರಾರು ಜನರನ್ನು ಕೊಂದಿರುವುದೂ ಹೌದು, ಮತಾಂತರಿಸಿರುವುದೂ ಹೌದು. ಟಿಪ್ಪು ಪ್ರಜಾಪ್ರಭುತ್ವ ರೀತಿಯಿಂದ ಆಯ್ಕೆಯಾದ ‘ರಾಜ’ನಲ್ಲ ಎನ್ನುವುದನ್ನು ನೆನಪಿಡಬೇಕು. ಆತ ಅರಮನೆಯ ಸುಖದೊಳಗೆ ಬಂಧಿಯಾಗಿದ್ದ ರಾಜನೂ ಅಲ್ಲ. ಹೆಚ್ಚಿನ ದಿನಗಳನ್ನು ಯುದ್ಧಗಳಲ್ಲೇ ಕಳೆದ; ಯುದ್ಧದ ಉದ್ದೇಶ ಸಾಮ್ರಾಜ್ಯ ವಿಸ್ತರಣೆ ಮತ್ತು ಸಾಮ್ರಾಜ್ಯ ರಕ್ಷಣೆ. ಯುದ್ಧವೆಂದ ಮೇಲೆ ಸಾವಿರುವುದು ಸತ್ಯವಲ್ಲವೇ. ಇಡೀ ದೇಶದ ರಾಜರೆಲ್ಲ ಯುದ್ಧವನ್ನು ‘ಶಾಂತಿ’ಯಿಂದ ನಡೆಸಿಬಿಟ್ಟಿದ್ದರೆ ಟಿಪ್ಪು ಅಪರಾಧಿಯಾಗಿಬಿಡುತ್ತಿದ್ದ. ಯುದ್ಧದಲ್ಲಿದ್ದ ಯಾವ ರಾಜ ಶಾಂತಿಯಿಂದ ಕಾರ್ಯನಿರ್ವಹಿಸಿದ? ನಮ್ ದೇಶದ ಬಾವುಟದಲ್ಲಿ ಮಧ್ಯದಲ್ಲೊಂದು ನೀಲಿ ಚಕ್ರವಿದೆಯಲ್ಲ, ಅಶೋಕ ಚಕ್ರ, ಆ ಅಶೋಕನೇನು ಶಾಂತಿಯ ದೂತನೇ? ಸಾವಿರಾರು ಜನರನ್ನು ಕಳಿಂಗ ಯುದ್ಧದಲ್ಲಿ ಕೊಂದ ನಂತರವಷ್ಟೇ ಆತ ಬೌದ್ಧ ಧರ್ಮ ಸ್ವೀಕರಿಸಿದ್ದು ಅಲ್ಲವೇ. ಅವನಿಂದ ಹತರಾದ ಜನರ ವಂಶಜರು ಅಶೋಕ ಚಕ್ರವನ್ನು ಬಾವುಟದಿಂದ ಕಿತ್ತು ಹಾಕಿ ಎಂದರದು ಒಪ್ಪಿತವೇ? ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳೇ ಹಿಂಸೆಯನ್ನು ಬೆಂಬಲಿಸಿದ ಅನೇಕ ನಿದರ್ಶನಗಳನ್ನು ಸ್ವತಂತ್ರ ಭಾರತದಲ್ಲಿ ನಾವು ಕಂಡಿರುವಾಗ ರಾಜರು ಶಾಂತಿ ಪಾಲಿಸಿದರೆಂದರೆ ನಂಬಲು ಸಾಧ್ಯವೇ?
ಇನ್ನು ಟಿಪ್ಪು ಮತಾಂತರ ಮಾಡಿದ ಎನ್ನುವುದರ ಬಗ್ಗೆ. ಅದು ರಾಜರ ಕಾಲ. ರಾಜನ ಧರ್ಮವನ್ನು ಜನರ ಮೇಲೆ ‘ಹೇರುತ್ತಿದ್ದ’ ಕಾಲ. ಹಿಂದೂ ಧರ್ಮದ ಜಾತಿ ಪದ್ಧತಿಯೂ ಮತಾಂತರಕ್ಕೆ ಪೂರಕವಾಗಿ ಕೆಲಸ ಮಾಡುತ್ತಿತ್ತು. ಕೇರಳದಲ್ಲಿ ಟಿಪ್ಪು ಮತಾಂತರಿಸಿದ ಎಂದು ಅರ್ಧ ಸತ್ಯ ಹೇಳುವವರೆಲ್ಲ ಮತ್ತರ್ಧವನ್ನು ಉದ್ದೇಶಪೂರ್ವಕವಾಗಿ ಮರೆತುಬಿಡುತ್ತಾರೆ. ಕೇರಳದಲ್ಲಿ ದಲಿತರು ಮೊಳಕಾಲಿನ ಕೆಳಗೆ ಮತ್ತು ಸೊಂಟದ ಮೇಲೆ ಬಟ್ಟೆಯನ್ನೇ ಧರಿಸುವಂತಿರಲಿಲ್ಲ. ದಲಿತ ಮಹಿಳೆಯರು ತಮ್ಮ ಎದೆಯನ್ನು ಮುಚ್ಚಿಕೊಳ್ಳುವಂತಿರಲಿಲ್ಲ. ದಲಿತ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದಾಗ ಮಗುವಿಗೆ ಹಾಲು ಕುಡಿಸುವ ಮೊದಲು ಮೇಲ್ಜಾತಿಯ ಜನರ ಮುಂದೆ ಬಂದು ನಿಲ್ಲಬೇಕಿತ್ತು. ಮೇಲ್ಜಾತಿಯ ಬ್ರಹಸ್ಪತಿಗಳು ಆಕೆಯ ಮೊಲೆಯನ್ನು ಅಳೆದು ‘ಮೊಲೆ ತೆರಿಗೆ’ ವಿಧಿಸುತ್ತಿದ್ದರು. ಮೊಲೆ ತೆರಿಗೆ ಕಟ್ಟಿದ ನಂತರವಷ್ಟೆ ಮಗುವಿಗೆ ಹಾಲು ಕುಡಿಸುವ ಅನುಮತಿ ಸಿಕ್ಕುತ್ತಿತ್ತು. ಒಬ್ಬ ದಲಿತ ಹೆಣ್ಣುಮಗಳು ಪ್ರತಿಭಟನೆಯ ರೂಪದಲ್ಲಿ ತನ್ನೆರಡೂ ಮೊಲೆಗಳನ್ನೇ ಕಡಿದು ಇದನ್ನೇ ನಿಮ್ಮ ತೆರಿಗೆಗೆ ವಜಾ ಮಾಡಿಕೊಳ್ಳಿ ಎಂದು ಹೇಳಿಬಿಟ್ಟಳು. ಮತಾಂತರಕ್ಕೆ ಟಿಪ್ಪು ಎಷ್ಟು ಕಾರಣನೋ ಈ ಶೋಷಣೆಯೂ ಅಷ್ಟೇ ಕಾರಣವಲ್ಲವೇ? ವಾದಕ್ಕೆ ಕೇಳ್ತೀನಿ, ಮತಾಂತರ ನಡೆಸಿದ ಟಿಪ್ಪುವಿನ ಜಯಂತಿಯನ್ನು ಸರಕಾರ ಆಚರಿಸಬಾರದು ಎನ್ನುತ್ತೀರಲ್ಲ ಬ್ರಾಹ್ಮಣ, ಕುರುಬ, ದಲಿತ ಸಮುದಾಯದಿಂದ ಲಿಂಗಾಯತ ಧರ್ಮಕ್ಕೆ ಮತಾಂತರಿಸಿದ ಬಸವಣ್ಣನ ಜಯಂತಿಯನ್ನು ಸರಕಾರವೇ ಆಚರಿಸುತ್ತದೆಯಲ್ಲವೇ? ಅದು ಸರಿಯಾದರೆ ಇದು ಹೇಗೆ ತಪ್ಪಾಯಿತು?
ಇನ್ನು ಟಿಪ್ಪು ಕನ್ನಡ ವಿರೋಧಿ ಎಂಬ ವಾದ. ಹೌದು ಆತ ಪಾರ್ಸಿ ಭಾಷೆಯನ್ನೋ ಮತ್ತೊಂದು ಭಾಷೆಯನ್ನೋ ಉಪಯೋಗಿಸುತ್ತಿದ್ದ. ರಾಜನ ಆಳ್ವಿಕೆಯ ಕಾನೂನುಗಳನ್ನು ಇವತ್ತಿನ ದೃಷ್ಟಿಯಿಂದ ಅಳೆಯುವುದೇ ತಪ್ಪಲ್ಲವೇ? ಶ್ರೀ ಕೃಷ್ಣದೇವರಾಯ ತೆಲುಗಿಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದ ಅನ್ನುವುದು ಇತಿಹಾಸದಲ್ಲಿದೆ. ಆ ಕಾರಣಕ್ಕೆ ಹಂಪಿ ಉತ್ಸವವನ್ನು ವಿರೋಧಿಸಬೇಕೆ? ಹಿಂದಿ ಹೇರಿಕೆಯನ್ನು ಕಂಡೂ ಕಾಣದಂತಿರುವ, ಹಿಂದಿ ಹೇರಿಕೆಯನ್ನು ಸಮರ್ಥಿಸುವ, ಹಿಂದಿ ರಾಷ್ಟ್ರಭಾಷೆಯೆಂದು ಸುಳ್ಳು ಸುಳ್ಳೇ ಜನರನ್ನು ನಂಬಿಸುವ ಜನರಿಗೆಲ್ಲ ಇದ್ದಕ್ಕಿದ್ದಂತೆ ಕನ್ನಡ ಪ್ರೇಮ ಮೂಡಿಬಿಟ್ಟಿರುವುದು ಸೋಜಿಗ!
ಟಿಪ್ಪುವನ್ನು ವಿರೋಧಿಸಲು ಇವ್ಯಾವುದೂ ನೈಜ ಕಾರಣವಲ್ಲ. ಇವೆಲ್ಲ ಜನರನ್ನು ಮೂರ್ಖರನ್ನಾಗಿಸಲು ಬಿಜೆಪಿ ಮತ್ತದರ ಬೆಂಬಲಿತ ಸಂಘಟನೆಗಳು ಉಪಯೋಗಿಸುತ್ತಿರುವ ನೆಪಗಳಷ್ಟೆ. ಟಿಪ್ಪು ಸುಲ್ತಾನ್ ಮುಸ್ಲಿಂ ಅದಕ್ಕೆ ನಮಗವನನ್ನ ಕಂಡರೆ ಆಗಲ್ಲ ಎಂದು ಬಹಿರಂಗವಾಗಿ ಹೇಳಲಾಗದವರು ಹುಡುಕುವ ನೆಪಗಳಷ್ಟೇ.
ವೈಯಕ್ತಿಕವಾಗಿ ನನಗೆ ಈ ಯಾವ ಜಯಂತಿ, ಉತ್ಸವಗಳಲ್ಲಿಯೂ ನಂಬಿಕೆಯಿಲ್ಲ. ಸುಖಾಸುಮ್ಮನೆ ನಮ್ಮ ನಿಮ್ಮಂತೆಯೇ ಒಳಿತು ಕೆಡುಕುಗಳಿದ್ದ ಮನುಷ್ಯರನ್ನು ಆಕಾಶದೆತ್ತರಕ್ಕೆ ಏರಿಸುವ, ರಣಭಯಂಕರವಾಗಿ ಹೊಗಳುವ ಇಂತಹ ಜಯಂತಿಗಳು ಇರದಿದ್ದರೆ ಪ್ರಪಂಚವೇನು ಮುಳುಗಲಾರದು. ಇದರ ಜೊತೆಜೊತೆಗೆ ವ್ಯಕ್ತಿ ಮತ್ತು ಮೂರ್ತಿ ಪೂಜೆಯಿಂದ ಹೊರಬರಲಾರದ ನಮ್ಮ ಜನರಿಗೆ ಇಂತಹ ಜಯಂತಿಗಳು ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತವೆ ಎನ್ನುವುದೂ ಸತ್ಯ. ಅಂಬೇಡ್ಕರ್ ಜಯಂತಿ, ಬಸವ ಜಯಂತಿ, ವಾಲ್ಮೀಕಿ ಜಯಂತಿ, ಕನಕದಾಸ ಜಯಂತಿಗಳೆಲ್ಲವೂ ದೊಡ್ಡ ದೊಡ್ಡ ವ್ಯಕ್ತಿಗಳನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಿಬಿಡುವ ಕೆಟ್ಟ ಕೆಲಸವನ್ನು ಮಾಡುತ್ತಲೇ ಆ ಸಮುದಾಯದ ಜನರ ಮನೋಸ್ಥೈರ್ಯವನ್ನು ಹಿಗ್ಗಿಸುವ ಕೆಲಸವನ್ನು ಮಾಡುತ್ತಿರುವುದು ಸುಳ್ಳಲ್ಲ. ಟಿಪ್ಪು ಜಯಂತಿ ಕೂಡ ಮುಸ್ಲಿಮರಲ್ಲಿ ಅಂತದೊಂದು ಸ್ಥೈರ್ಯ ತುಂಬುತ್ತಿತ್ತೋ ಏನೋ? ತುಂಬಬಾರದು ಎನ್ನುವುದು ವಿರೋಧಿಗಳ ಉದ್ದೇಶ. ಇಂತಹುದೊಂದು ಸರಕಾರ ಪ್ರಾಯೋಜಿತ ಜಯಂತಿಯ ಸಂದರ್ಭದಲ್ಲಿ ಮಡಿಕೇರಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ವಿ.ಎಚ್.ಪಿಯ ಮುಖಂಡ ಕುಟ್ಟಪ್ಪ, ರಾಜು ಮತ್ತು ಸಾವುಲ್ ಹಮೀದ್ ಎಂಬ ಯುವಕ ಸಾವನ್ನಪ್ಪಿದ್ದಾರೆ. ಕುಟ್ಟಪ್ಪ ಮತ್ತು ರಾಜುನನ್ನು ಸಾಬರು ಕಲ್ಲು ಹೊಡೆದು ಕೊಂದರು ಎನ್ನುವುದು ಹಿಂದೂ ಸಂಘಟನೆಗಳ ವಾದವಾದರೆ ಸಾವುಲ್ ಹಮೀದನನ್ನು ಹಿಂದೂಗಳು ಗುಂಡಿಟ್ಟು ಕೊಂದಿದ್ದಾರೆ ಎನ್ನುವುದು ಮುಸ್ಲಿಂ ಸಂಘಟನೆಗಳ ವಾದ. ಪೋಲೀಸರ ಪ್ರಕಾರ ಕುಟ್ಟಪ್ಪ ಓಡುವಾಗ ಹತ್ತಡಿ ಎತ್ತರದ ಕಾಂಪೌಂಡು ಗೋಡೆಯಿಂದ ಬಿದ್ದು ಸತ್ತಿದ್ದು. ಇನ್ನು ರಾಜು ಆಸ್ಪತ್ರೆಯಲ್ಲಿದ್ದ ರೋಗಿ. ಗಲಭೆಯನ್ನು ವೀಕ್ಷಿಸುವಾಗ ಮೇಲಿನಿಂದ ಕೆಳಗೆ ಬಿದ್ದಿದ್ದು ಸತ್ತಿದ್ದು. ಸಾವುಲ್ ಹಮೀದನ ಮೇಲೆ ಯಾರೂ ಗುಂಡು ಹಾರಿಸಿಲ್ಲ. ಲಾಠಿ ಚಾರ್ಜಿನ ಸಮಯದಲ್ಲಿ ಬಿದ್ದ ಪೆಟ್ಟಿನಿಂದ ಸತ್ತಿದ್ದು. ಸಾವು ಯಾವ ರೀತಿಯಿಂದಲೇ ಆಗಿರಲಿ, ಪರೋಕ್ಷವಾಗಿ ಎಲ್ಲಾ ಸಾವುಗಳು ಟಿಪ್ಪು ಜಯಂತಿಯ ಕಾರಣಕ್ಕೇ ಆಗಿದೆ.
ಪೋಲೀಸ್ ಚಾರ್ಜ್ ಶೀಟು ರೀತಿಯಲ್ಲೇ ಈ ಸಾವುಗಳಿಗೆ ಯಾರು ಹೊಣೆ ಎಂದರೆ ಎ1 ಸ್ಥಾನದಲ್ಲಿ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್, ಎ2 ಆಗಿ ಪ್ರತಾಪಸಿಂಹ ಮತ್ತು ಬಿಜೆಪಿ, ಎ3 ಆಗಿ ಪೋಲೀಸರನ್ನು ನಿಲ್ಲಿಸಬಹುದು. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿಯನ್ನು ಆಚರಿಸುವುದಕ್ಕೆ ವೋಟ್ ಬ್ಯಾಂಕ್ ರಾಜಕೀಯದ ಹೊರತಾಗಿ ಮತ್ಯಾವ ಕಾರಣವೂ ಇರಲಿಲ್ಲ. ಎಲ್ಲರೂ ಮಾಡುವುದು ವೋಟ್ ಬ್ಯಾಂಕ್ ರಾಜಕೀಯ ಇದರಲ್ಲೇನು ತಪ್ಪು ಎಂಬ ಪ್ರಶ್ನೆಯನ್ನು ಖಂಡಿತವಾಗಿ ಕಾಂಗ್ರೆಸ್ಸಿನವರ ಕೇಳುತ್ತಾರೆ. ವೋಟಿನ ನೆಪದಲ್ಲಿ ಮೂವರ ಹತ್ಯೆಯ ಹೊಣೆಯನ್ನು ಹೊತ್ತಿಕೊಳ್ಳುತ್ತಾರ? ಮುಸ್ಲಿಮರ ಮತಕ್ಕಾಗಿಯಷ್ಟೇ ಈ ಜಯಂತಿ ಮಾಡಿದ್ದು ಎಂದು ಸರಕಾರ ಎಷ್ಟು ನಿಖರವಾಗಿ ಹೇಳಿದೆ ಗೊತ್ತೆ? ಟಿಪ್ಪು ಜಯಂತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದಲೋ ಪ್ರವಾಸೋದ್ಯಮ ಖಾತೆಯ ವತಿಯಿಂದಲೋ ಮಾಡಿಸಿಲ್ಲ ಮಾಡಿಸಿರುವುದು ಅಲ್ಪಸಂಖ್ಯಾತ ಇಲಾಖೆಯ ವತಿಯಿಂದ. ಅದರಲ್ಲೇ ಗೊತ್ತಾಗುವುದಿಲ್ಲವೇ ಇವರ ಯೋಗ್ಯತೆ. ಟಿಪ್ಪು ಜಯಂತಿಯನ್ನು ಘೋಷಿಸಿದರೆ ಅದಕ್ಕೆ ಮತ್ತದೆ ವೋಟ್ ಬ್ಯಾಂಕ್ ರಾಜಕೀಯದ ಕಾರಣದಿಂದ ಬಿಜೆಪಿಯವರು ವಿರೋಧಿಸುತ್ತಾರೆ ಎನ್ನುವುದನ್ನು ತಿಳಿಯದಷ್ಟು ಅಮಯಾಕರೇನಲ್ಲವಲ್ಲ ಸಿದ್ಧರಾಮಯ್ಯನವರು. ವಿರೋಧ ವ್ಯಕ್ತವಾಗಲಿ ಎನ್ನುವುದೇ ಅವರ ಉದ್ದೇಶವಾಗಿತ್ತು. ಬಿಜೆಪಿಯವರು ವಿರೋಧಿಸಿದಷ್ಟೂ ಮುಸ್ಲಿಮರ ವೋಟುಗಳು ಕಾಂಗ್ರೆಸ್ ತೆಕ್ಕೆಗೆ ಬರುತ್ತದೆ ಎನ್ನುವುದರ ಅರಿವೂ ಇತ್ತು. ಎಲ್ಲವೂ ಅವರಂದುಕೊಂಡಂತೆಯೇ ಆಯಿತು; ಮೂವರ ಹೆಣದ ಮೇಲೆ.
ಇನ್ನು ಎ2 ಸ್ಥಾನದಲ್ಲಿರುವ ಪ್ರತಾಪಸಿಂಹ ಮತ್ತು ಬಿಜೆಪಿ ಕೂಡ ಎ1 ಆರೋಪಿಗಳಷ್ಟೇ ಅಪಾಯಕಾರಿಯಾಗಿ ದ್ವೇಷ ಬಿತ್ತುವ ಕೆಲಸ ಮಾಡಿದ್ದಾರೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜಾತಿ ಪ್ರಜ್ಞೆ ಜಾಗ್ರತವಾಗಿ ಗೌಡ ಗೌಡ ಎಂದುಕೊಂಡು ಓಟು ಗಿಟ್ಟಿಸಿಕೊಂಡ ಪ್ರತಾಪಸಿಂಹರಿಗೆ ಈಗ ಧರ್ಮದ್ವೇಷದ ಆಧಾರದಲ್ಲಿ ‘ಹಿಂದೂ ಹೃದಯ ಸಾಮ್ರಾಟ್’ ಎಂದು ಕರೆಸಿಕೊಳ್ಳುವ ಹಪಾಹಪಿ. ಟಿಪ್ಪು ಜಯಂತಿಯನ್ನು ನಖಶಿಖಾಂತ ವಿರೋಧಿಸಲು ಅವರು ಆಯ್ಕೆ ಮಾಡಿಕೊಂಡಿದ್ದು ಮಡಿಕೇರಿ. ಕಾರಣ ಅಲ್ಲಿ ಬಿಜೆಪಿಗೆ ಬೆಂಬಲವೂ ಇದೆ, ಟಿಪ್ಪುವನ್ನು ದ್ವೇಷಿಸಲು ಕಾರಣವೂ ಇದೆ. ಲೋಕಸಭಾ ಸದಸ್ಯರ ಘನತೆಗೆ ತಕ್ಕದಲ್ಲದ ‘ಟಿಪ್ಪು ಸುಲ್ತಾನ್ ಕುರುಬರನ್ನು ಕೊಂದಿದ್ರೂ ಸಿದ್ಧರಾಮಯ್ಯ ಟಿಪ್ಪು ಜಯಂತಿ ಮಾಡುತ್ತಿದ್ದರಾ?’ ಎಂಬಂತಹ ವಿಚ್ಛಿದ್ರಕಾರಿ ಹೇಳಿಕೆಗಳೂ ಅವರ ಬಾಯಿಂದ ಉದುರಿದವು. ಜನರನ್ನು ಧರ್ಮದ ಹೆಸರಿನಲ್ಲಿ ಉದ್ರಿಕ್ತಗೊಳಿಸಿ ಪ್ರತಿಭಟಿಸುವಂತೆ ಮಾಡಿ, ಸಾಯುವಂತೆ ಮಾಡಿ ಅವರು ಬಹುಶಃ ಮೈಸೂರಿನ ತಮ್ಮ ಮನೆಯಲ್ಲಿ ಬೆಚ್ಚಗೆ ಕುಳಿತಿರಬೇಕು. ಚಳಿಗಾಲ ಬೇರೆ ಶುರುವಾಗಿದೆಯಲ್ಲ.
ಎ3 ಸ್ಥಾನದಲ್ಲಿರುವ ಪೋಲೀಸರನ್ನು ಬಯ್ಯುವುದಾದರೂ ಹೇಗೆ? ಒಂದು ಕಡೆ ಆಡಳಿತ ಪಕ್ಷ, ಇನ್ನೊಂದು ಕಡೆ ಮುಂದೆ ಆಡಳಿತಕ್ಕೆ ಬರಬಹುದಾದ ವಿರೋಧ ಪಕ್ಷ, ಈ ಪಕ್ಷಗಳ ತಾಳಕ್ಕೆ ಕುಣಿಯುವುದೇ ಕಸುಬಾಗಿಬಿಟ್ಟಿರುವಾಗ ಅವರು ಸರಿಯಾಗಿ ಕಾರ್ಯನಿರ್ವಹಿಸುವುದಾದರೂ ಹೇಗೆ? ಮಡಿಕೇರಿಯಲ್ಲಿ ನಡೆಯುವ ಗಲಭೆಯ ಬಗ್ಗೆ ಅವರಿಗೆ ಮಾಹಿತಿಯಿತ್ತು. ಗುಪ್ತಚರ ಮಾಹಿತಿಯೇನು ಬೇಕಿರಲಿಲ್ಲ, ಸಂಘಟನೆಗಳ ಮುಖಂಡರ ಮಾತುಗಳೇ ಸಾಕಿತ್ತು ಗಲಭೆಗೆ ಹೇಗೆ ಎರಡೂ ಗುಂಪುಗಳು ತಯಾರಾಗಿವೆ ಎಂದು ಅರಿಯುವುದಕ್ಕೆ. ಕೆಲವು ದಿನಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಹಿಂದೂ ಸಂಘಟನೆಗಳು ಟಿಪ್ಪು ಸಮಾಧಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಮಾಹಿತಿಯೂ ಅವರಲ್ಲಿತ್ತು (ಈ ಘಟನೆ ಯಾವ ಮಾಧ್ಯಮದಲ್ಲೂ ಪ್ರಸಾರವೇ ಆಗಲಿಲ್ಲ). ಶ್ರೀರಂಗಪಟ್ಟಣ ಮತ್ತು ಮಂಡ್ಯದಲ್ಲಿ ಶಾಂತಿಯುತವಾಗಿ ಜಯಂತೋತ್ಸವ ನಡೆದಿರುವಾಗ ಮಡಿಕೇರಿಯಲ್ಲಿ ಶಾಂತಿಯುತವಾಗಿ ನಡೆಸುವ ಸ್ಥೈರ್ಯವನ್ನು ಪೋಲೀಸರು ತೋರಿಸಬೇಕಿತ್ತು. ದುರದೃಷ್ಟವಶಾತ್ ಇವರ ಈ ವೈಫಲ್ಯಕ್ಕೆ ಮೂರು ಹೆಣಗಳುರುಳಿವೆ.
ಒಂದು ಗಮನಿಸಿದಿರೋ ಇಲ್ಲವೋ. ಈ ರೀತಿಯ ಗಲಭೆ ನಡೆಯಬಹುದೆನ್ನುವ ಅನುಮಾನ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡಕ್ಕೂ ಇತ್ತು. ಕುಳಿತು ಮಾತನಾಡಿ ಶಾಂತಿ ಕಾಪಿಡುವಂತೆ ಮಾಡಬೇಕಿದ್ದ ಮುಖಂಡರು ಗಲಭೆ ಮತ್ತಷ್ಟು ಹೆಚ್ಚಾಗುವಂತಹ ಮೂರ್ಖತನದ ಹೇಳಿಕೆ ನೀಡುವುದರಲ್ಲಿಯೇ ಬ್ಯುಸಿಯಾಗಿಬಿಟ್ಟರು. ಕಾಂಗ್ರೆಸ್ ಮತ್ತು ಬಿಜೆಪಿಗಳೆರಡಕ್ಕೂ ತಮ್ಮ ತಮ್ಮ ವೋಟ್ ಬ್ಯಾಂಕ್ ಗಟ್ಟಿಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಗಲಭೆ ಮತ್ತು ಹತ್ಯೆಗಳು ಅವಶ್ಯಕವೆನ್ನಿಸಿರಬೇಕು. ಇಬ್ಬರೂ ತಮ್ಮ ತಮ್ಮ ಉದ್ದೇಶ ಈಡೇರಿಸಿಕೊಂಡಿದ್ದಾರೆ ಮೂವರ ಹೆಣದ ಮೇಲೆ.
No comments:
Post a Comment