Nov 20, 2015

ಮಿಸ್ಟೇಕ್!

harish mangalore
ಕತೆಗಳ ಪುಸ್ತಕವನ್ನು ನೂರಾರು ಓದಿದ್ದೇನೆ. ನನ್ನನ್ನು ತುಂಬಾ ಕಾಡಿದ ಕತೆಗಳನ್ನು ಬರೆದಿದ್ದು ಸದತ್ ಹಸನ್ ಮಾಂಟೋ. ದೇಶ ವಿಭಜನೆಯ ಸಂದರ್ಭದಲ್ಲಿ ಧರ್ಮದ ಕಾರಣದಿಂದ, ಮನೆಯವರ ಒತ್ತಡದ ಕಾರಣದಿಂದ ಭಾರತದಿಂದ ಪಾಕಿಸ್ತಾನಕ್ಕೆ ಹೋಗಿ ದಾರಿಯುದ್ದಕ್ಕೂ ಕಂಡ ಧರ್ಮಾಧಾರಿತ ಹಿಂಸಾಚಾರ ಸದತ್ ಹಸನ್ ಮಾಂಟೋನನ್ನು ಹುಚ್ಚನನ್ನಾಗಿ ಮಾಡಿಬಿಡುತ್ತದೆ. ಆ ಹುಚ್ಚುತನದಲ್ಲೇ ಆತ ಬರೆದ ಕತೆಗಳನ್ನು ಓದುತ್ತಿದ್ದರೆ ಮನುಷ್ಯ ಇಷ್ಟೊಂದು ಅಮಾನವೀಯವಾಗಿ ವರ್ತಿಸಬಲ್ಲನಾ ಎಂಬ ಅನುಮಾನ ಮೂಡುತ್ತಿತ್ತು. ಆ ಕತೆಗಳಲ್ಲಿನ ಅಮಾನವೀಯತೆಯನ್ನು ಮೀರಿಸುವಂತಹ ಘಟನೆಗಳು ವರ್ತಮಾನದಲ್ಲಿ ನಡೆಯುತ್ತಿರುವಾಗ ಸ್ವತಂತ್ರ ಬಂದು ಇಷ್ಟೆಲ್ಲ ವರ್ಷಗಳಾಗಿದ್ದರೂ ತಾಂತ್ರಿಕವಾಗಿ ಮೇಲ್ಮೆ ಸಾಧಿಸಿ, ಮಂಗಳನ ಅಂಗಳಕ್ಕೆ ಉಪಗ್ರಹ ಕಳಿಸಿ ಮನುಷ್ಯನ ಕ್ರೂರಿ ಮನಸ್ಸನ್ನು ಅಲ್ಲೇ ನಿಲ್ಲಿಸಿಬಿಟ್ಟಿದ್ದೇವೆಯಾ? ಎಂಬ ಪ್ರಶ್ನೆ ಮೂಡುತ್ತದೆ. ಕೋಮುಗಲಭೆಯ ಸಂದರ್ಭದಲ್ಲೆಲ್ಲ ಸದತ್ ಹಸನ್ ಮಾಂಟೋನ ಪುಟ್ಟ ಕತೆಯೊಂದು ನನ್ನನ್ನು ಬಹಳವಾಗಿ ಕಾಡುತ್ತದೆ. ಕತೆಯ ಹೆಸರು ಮಿಸ್ಟೇಕ್. ಗಲಭೆಯ ಸಂದರ್ಭ. ಕತ್ತಿ ಹಿಡಿದು ಬಂದವರು ದಾರಿಯಲ್ಲಿ ಸಿಕ್ಕ ವ್ಯಕ್ತಿಯೊಬ್ಬನ ಹೊಟ್ಟೆಗೆ ತಿವಿಯುತ್ತಾರೆ. ತಿವಿಯುವಾಗ ಕತ್ತಿ ಆತನ ಲಾಡಿಯನ್ನು ಕತ್ತರಿಸಿಹಾಕುತ್ತದೆ. ಪ್ಯಾಂಟು ಕೆಳಗೆ ಜಾರುತ್ತದೆ. ಸತ್ತ ವ್ಯಕ್ತಿಯ ಶಿಶ್ನ ನೋಡಿದ ಕತ್ತಿವೀರ 'ಮಿಸ್ಟೇಕ್' ಎಂದುದ್ಗರಿಸಿ ಮತ್ತೊಬ್ಬನನ್ನು ಕೊಲ್ಲಲು ಹೊರಡುತ್ತಾನೆ. ಸದತ್ ನ ಮೂರು ಸಾಲಿನ ಈ ಕತೆ ಧರ್ಮಾಂಧರಲ್ಲಿನ ಕ್ರೌರ್ಯ, ಅವರಿಗೆ ಅಂತಿಮ ಸುಖ ಸಿಗುವುದು ಕೊಲ್ಲುವ ಹಿಂಸೆಯಿಂದಷ್ಟೇ ಎನ್ನುವ ವಾಸ್ತವವನ್ನು ತಿಳಿಸಿ ಹೇಳುತ್ತದೆ. 
ಮಿಸ್ಟೇಕ್ ಕತೆಯ ರೀತಿಯ ಘಟನೆಯೇ ಮಂಗಳೂರಿನಲ್ಲಿ ನಡೆದುಹೋಗಿದೆ. ಸ್ನೇಹಿತರಾದ ಸಮೀವುಲ್ಲಾ ಮತ್ತು ಹರೀಶ್ ಕ್ರಿಕೆಟ್ ಆಡಿ ವಾಪಸ್ಸಾಗುವಾಗ ಅಂಗಡಿಯೊಂದರ ಬಳಿ ಕೂಲ್ ಡ್ರಿಂಕ್ಸ್ ಕುಡಿಯುವಾಗ ಗುಂಪೊಂದು ಬಂದು ಸಮೀವುಲ್ಲಾನ ಮೇಲೆ ದಾಳಿ ನಡೆಸುತ್ತಾರೆ, ತಡೆಯಲು ಬಂದ ಹರೀಶನ ಮೇಲೆಯೂ ದಾಳಿ ನಡೆಸುತ್ತಾರೆ. ಹರೀಶ ಹತನಾಗುತ್ತಾನೆ. ಈ ಕೊಲೆಗೆ ಸಂಬಂಧಪಟ್ಟಂತೆ ಮಂಗಳೂರು ಪೋಲೀಸರು ಭುವಿತ್ ಶೆಟ್ಟಿ ಮತ್ತು ಅಚ್ಯುತ್ ಎನ್ನುವವರನ್ನು ಬಂಧಿಸಿದ್ದಾರೆ. ಈ ಭುವಿತ್ ಶೆಟ್ಟಿ ಕಲಬುರಗಿಯ ಹತ್ಯೆಯಾದ ಸಂದರ್ಭದಲ್ಲಿ ಹತ್ಯೆಯನ್ನು ಸಮರ್ಥಿಸಿ ಹಾಕಿದ ಟ್ವೀಟುಗಳ ಕಾರಣದಿಂದ ಬಂಧಿತನಾಗಿದ್ದ. ಭುವಿತನಿಗೆ ಇಪ್ಪತ್ತೈದು ವರ್ಷ, ಅಚ್ಯುತನಿಗೆ ಇಪ್ಪತ್ತೆಂಟು ವರುಷವಷ್ಟೇ. ಇನ್ನು ಸತ್ತ ಹರೀಶನೂ ಅದೇ ವಯಸ್ಸಿನವನು. ಬಡ ಕುಟುಂಬದಿಂದ ಬಂದವನು. ಕುಟುಂಬಕ್ಕೆ ಆಸರೆಯಾಗಿದ್ದವನು. ಧರ್ಮಾಂಧರ ಕ್ರೌರ್ಯ ಒಂದಿಡೀ ಕುಟುಂಬದ ಸರ್ವನಾಶಕ್ಕೆ ಕಾರಣವಾಗಿದೆ. ಧರ್ಮಾಂದತೆಯನ್ನು ತುಂಬಿದವರ ತಣ್ಣನೆಯ ಕ್ರೌರ್ಯದಿಂದ ಭುವಿತ್ ಅಚ್ಯುತನಂತಹ ಸಾವಿರ ಕುಟುಂಬಗಳು ನಾಶವಾಗುತ್ತಿವೆ. ಹಿಂದೂ ಸಂಘಟನೆಯ ಭುವಿತ್ ಮತ್ತು ಅಚ್ಯುತ್ ಗುರಿ ಹರೀಶನಾಗಿರಲಿಲ್ಲ. ಸಮೀವುಲ್ಲಾ ಎಂಬ ಸಾಬಿಯಾಗಿದ್ದ. ಸಾಬಿಗೊಬ್ಬ ಹಿಂದೂ ಗೆಳೆಯನಿರುವುದು ಸಾಧ್ಯವಿಲ್ಲ, ಸಾಧುವೂ ಅಲ್ಲ ಎಂದು ಈ ಯುವಕರ ತಲೆಗೆ ತುಂಬಿಬಿಟ್ಟಿರುತ್ತಾರೆ. ಸಮೀವುಲ್ಲಾನನ್ನು ರಕ್ಷಿಸಲು ಬಂದ ಹುಡುಗ ಕೂಡ ಮುಸಲ್ಮಾನನೇ ಎಂದು ಹತ್ಯೆ ಮಾಡಿದ್ದಾರೆ. ಸದತ್ ಹಸನ್ ಮಾಂಟೋನ ಕತೆಯ ಲೆಕ್ಕದಲ್ಲಿ ಮಿಸ್ಟೇಕಾಗಿದೆ. ಹತ್ಯೆ ಮಾಡಿದವರು ಕತ್ತಿ ಹಿಡಿದು ಮತ್ತೊಬ್ಬನನ್ನು ಮಗದೊಬ್ಬನನ್ನು ಕೊಲ್ಲಲು ಹೊರಟುಬಿಡುತ್ತಾರೆ.

1 comment:

  1. ಧಾರ್ಮಿಕ ಮೂಲಭೂತವಾದಿ ಸಂಘಟನೆಗಳಿಗೆ ನೀರು-ಗೊಬ್ಬರ ಹಾಕಿ ಬೆಳೆಸಿದ ದಕ್ಷಿಣ ಕನ್ನಡ ಜಿಲ್ಲೆಯ ಜನ ಈಗ ಅದರ ಕಹಿಫಲವನ್ನು ಉಣ್ಣುತ್ತಿದ್ದಾರೆ. ಬಂಟ್ವಾಳದಲ್ಲಿ ಇತ್ತೀಚೆಗೆ ನಡೆದ ಹರೀಶನ ಕೊಲೆಯನ್ನು ಹಿಂದೂ ಮೂಲಭೂತವಾದಿ ಸಂಘಟನೆಯವರೇ ನಡೆಸಿದ್ದು ಎಂಬುದು ಬಹಿರಂಗವಾಗಿದೆ. ಹಿಂದೂಗಳೇ ಹಿಂದೂಗಳ ಕೊಲೆ ನಡೆಸಿ ನಂತರ ಇದರ ಪ್ರತಿಭಟನೆಗೆ ಎಂದು ಮರುದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳೇ ಬಂದ್ ಕರೆಕೊಡುವುದು ಎಂಥಾ ವಿಪರ್ಯಾಸ. ಹಿಂದೂ ಸಂಘಟನೆಗಳು ಜಿಲ್ಲೆಯ ಹಲವಾರು ಕಡೆ ಆ ದಿನ ಬಲವಂತದ ಬಂದ್ ನಡೆಸಿವೆ. ಇವರ ದಬ್ಬಾಳಿಕೆಗೆ ಹೆದರಿ ಬಂದ್ ಮಾಡಿದವರೇ ಹೆಚ್ಚು. ಪೊಲೀಸರು ಕೂಡ ಬಂದಿಗೆ ಬೆಂಬಲವಾಗಿ ನಿಂತದ್ದು ದಕ್ಷಿಣ ಕನ್ನಡ ಜಿಲ್ಲೆಯ ಕರಾಳ ಮುಖದ ದರ್ಶನ ಮಾಡಿಸುತ್ತದೆ. ಇದು 'ಬೇಲಿಯೇ ಎದ್ದು ಹೊಲವನ್ನು ಮೇದಂತೆ' ಆಗಿದೆ. ದಕ್ಷಿಣ ಕನ್ನಡ ಜಿಲ್ಲೆ ಧಾರ್ಮಿಕ ಮೂಲಭೂತವಾದಿಗಳ ದಬ್ಬಾಳಿಕೆಯಿಂದ ನರಳುತ್ತಿದೆ. ಇವರ ದಬ್ಬಾಳಿಕೆಗೆ ಸೆಡ್ಡು ಹೊಡೆದು ಜನರೇ ಬಂಡಾಯ ಎದ್ದು ಧಾರ್ಮಿಕ ಮೂಲಭೂತವಾದಿ ಸಂಘಟನೆಗಳಿಂದ ಹೊರಬಂದು ಶಾಂತಿಯುತ ಸಹಬಾಳ್ವೆಗೆ ಮನಸ್ಸು ಮಾಡಬೇಕಾಗಿದೆ. ಧಾರ್ಮಿಕ ಮೂಲಭೂತವಾದಿ ಸಂಘಟನೆಗಳಿಗೆ ಜನ ಸೇರಿದರೆ ತಾನೇ ಅವುಗಳು ಬಲಗೊಳ್ಳುವುದು. ಇಂಥಾ ಮೂಲಭೂತವಾದಿ ಸಂಘಟನೆಗಳಿಗೆ ಸೇರದಂತೆ ಜನರನ್ನು ಜಾಗೃತಗೊಳಿಸುವ ಬಲಿಷ್ಠ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಗೆ ಅಗತ್ಯ ಇದೆ.

    ReplyDelete