ಮೀಸಲಾತಿಯ ವಿರುದ್ಧದ ಮೇಲಿನ ಚಿತ್ರವನ್ನು ನಿಮ್ಮಲ್ಲಿ ಬಹಳಷ್ಟು ಜನರು ಫೇಸ್ ಬುಕ್ಕಿನಲ್ಲೋ ಮತ್ತೊಂದು ಕಡೆಯೋ ಗಮನಿಸಿರುತ್ತೀರಿ. ಒಂದು ಲೈಕನ್ನೂ ಒತ್ತಿರುತ್ತೀರಿ, ಶೇರ್ ಕೂಡ ಮಾಡಿರುತ್ತೀರಿ. 'ನೋಡ್ರಿ ನೋಡ್ರಿ ಮೀಸಲಾತಿ ಇಲ್ಲದ ಅಮೆರಿಕಾದಲ್ಲಿ ಹೇಗೆಲ್ಲ ಅಭಿರುದ್ಧಿಯಾಗಿದೆ, ನಾವು ನೋಡಿ ಎಷ್ಟು ಹಿಂದುಳಿದಿದ್ದೀವಿ' ಎಂದು ನೊಂದುಕೊಂಡಿರುತ್ತೀರಿ. ಆ ಚಿತ್ರವನ್ನು ಸೃಷ್ಟಿಸಿದವನಿಗೆ ಮತ್ತು ಅದನ್ನು ಮೆಚ್ಚಿ ಹಂಚಿಕೊಂಡವರಿಗೆಲ್ಲ ಭಾರತದಲ್ಲಿನ್ನೂ ಇರುವ ಸಾಮಾಜಿಕ ಅಸಮಾನತೆಯ ಸಂಪೂರ್ಣ ಅರಿವಿದೆ. ಬಹಿರಂಗವಾಗಿ ತೋರಿಸಿಕೊಳ್ಳದಿದ್ದರೂ ಅಂತರಂಗದಲ್ಲಿ ದಲಿತರನ್ನು ಕೀಳಾಗಿ ಕಾಣಬೇಕೆಂದು ಕಲಿಸಿರುವ ಚಾತುರ್ವರ್ಣ್ಯದ ಕುರಿತಾಗಿ ಅಪಾರ ಗೌರವವಿದೆ. ಅಂತದ್ದೇ ಗೌರವಾನ್ವಿತ ಊರಿನಿಂದ ಬಂದಿರುವ ಥರ್ಡ್ ಕ್ಲಾಸ್ ಸುದ್ದಿಯಿದು.
ಸರಕಾರೀ ಕೆಲಸದಲ್ಲಿ ಸರಿಯಾಗಿ ಕೆಲಸ ಮಾಡದಿದ್ದರೂ ಪ್ರತಿ ದಿನ ಏನೇನು ಕೆಲಸ ಮಾಡಿದರೆಂದು ಬರೆದಿಡುವುದನ್ನು ಮಾತ್ರ ಮರೆಯಬಾರದು. ಕೋಲಾರದ ಕಗ್ಗನಹಳ್ಳಿಯ ಸರಕಾರಿ ಶಾಲೆಯ ಅಡುಗೆ ಕೆಲಸದ ಮುಖ್ಯಸ್ಥೆ ರಾಧಮ್ಮನಿಗೂ ಒಂದು ನೋಟ್ ಪುಸ್ತಕ ನೀಡಲಾಗಿದೆ. ತಪ್ಪದೇ ಪ್ರತೀ ದಿನ ರಾಧಮ್ಮಳೂ ಒಂದು ಸಾಲು ಬರೆಯುತ್ತಾಳೆ. 'ಇವತ್ತು ಯಾರೂ ಊಟ ಮಾಡಿಲ್ಲ' ಎಂಬ ಸಾಲು ಇಡೀ ಡೈರಿಯನ್ನು ತುಂಬಿಹೋಗಿದೆ. ಸರಕಾರೀ ಶಾಲೆಯೆಂದು ಊರಿನವರು ಮಕ್ಕಳನ್ನು ಕಳುಹಿಸುತ್ತಿಲ್ಲವೇನೋ, ಅಕ್ಕಪಕ್ಕದ ಖಾಸಗಿ ಶಾಲೆಗೆ ಕಳುಹಿಸುತ್ತಿರಬೇಕೆಂದುಕೊಂಡರೆ ಅದೂ ಸುಳ್ಳು. ಊರಿನ ಮಕ್ಕಳು ಹೋಗುವುದು ಪಕ್ಕದ ಹಳ್ಳಿಯ ಸರಕಾರೀ ಶಾಲೆಗೆ. ಊರಿನಲ್ಲೇ ಉತ್ತಮವಾದ ಶಾಲೆಯಿದ್ದರೂ ಪಕ್ಕದ ಶಾಲೆಗೆ ಮಕ್ಕಳು ಹೋಗುವುದ್ಯಾಕೆ?
ಕಗ್ಗನಹಳ್ಳಿಯ ರಾಧಮ್ಮ |
ಯಾಕೆಂದರೆ ರಾಧಮ್ಮ ಚಾತುರ್ವಣ್ಯದ ಒಳಗೂ ಪ್ರವೇಶ ಪಡೆಯದ 'ನಿಕೃಷ್ಟ' ದಲಿತ ಜಾತಿಗೆ ಸೇರಿದ ಹೆಣ್ಣುಮಗಳು. 2014ರಲ್ಲಿ ರಾಧಮ್ಮಳನ್ನು ಅಡುಗೆಯ ಕೆಲಸಕ್ಕೆ ನೇಮಿಸಿದ ನಂತರ ಇದುವರೆಗೆ ಒಟ್ಟು ನೂರು ವಿದ್ಯಾರ್ಥಿಗಳನ್ನು ಅವರ ಹೆತ್ತವರು ಶಾಲೆಯಿಂದ ಬಿಡಿಸಿಬಿಟ್ಟಿದ್ದಾರೆ. 'ಆದಿ ಕರ್ನಾಟಕ ಜಾತಿಗೆ ಸೇರಿದ ಮಹಿಳೆ ಮಾಡಿದ ಅಡುಗೆಯನ್ನು ನಮ್ಮ ಮಕ್ಕಳು ತಿನ್ನುವುದು ಹೇಗೆ ಸಾಧ್ಯ?' ಎಂಬ ಜಾತಿ ಶ್ರೇಷ್ಟತೆಯೇ ಇದಕ್ಕೆಲ್ಲ ಕಾರಣ. ಚೆನ್ನಾಗಿದ್ದ ಶಾಲೆಯನ್ನು ಹಾಳು ಮಾಡಿದ್ದೇ ಈ ರಾಧಮ್ಮ ಎಂದು ದೂಷಿಸುವ ಮಟ್ಟಿಗೆ ಅಲ್ಲಿನ ಊರಿನವರು ಮಾತನಾಡುತ್ತಿದ್ದಾರೆ ಎಂದು ವರದಿ ಮಾಡಿದೆ ಇಂಡಿಯನ್ ಎಕ್ಸ್ ಪ್ರೆಸ್.
ಈಗಲ್ಲಿರುವ ವಿದ್ಯಾರ್ಥಿಗಳ ಸಂಖೈ ಹದಿನೆಂಟು ಮಾತ್ರ. ಇನ್ನೊಂದು ಎಂಟು ಜನರು ಶಾಲೆ ಬಿಟ್ಟರೆ ಶಾಲೆಯನ್ನೇ ಮುಚ್ಚುವ ಪರಿಸ್ಥಿತಿ ಸೃಷ್ಟಿಯಾಗುತ್ತೆ. 'ಥೂ ಈ ಹಾಳಾದ್ ರಾಧಮ್ಮನಿಂದ ಇರೋ ಒಂದು ಶಾಲೇನೂ ಮುಚ್ಚೋಯ್ತು' ಅಂತ ಬಿಟ್ಟಿಯಾಗಿ ಸಿಗುವ ದಲಿತರನ್ನು ಬಯ್ದಾಡುತ್ತಾ ಊರವರೆಲ್ಲ ಕುಸಿ ಪಡಬಹುದು. ಹಿಂದೂ ಧರ್ಮ ನಾಶವಾಗುವವರೆಗೆ ದಲಿತರಿಗೆ ಮುಕ್ತಿಯಿಲ್ಲ ಎಂದ್ಹೇಳಿದ್ದು ಅಂಬೇಡ್ಕರ್ ಅಲ್ಲವೇ?
No comments:
Post a Comment