ಕು.ಸ.ಮಧುಸೂದನ್ ರಂಗೇನಹಳ್ಳಿ
ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಬಹುಶ: ಜನತಾದಳ(ಜಾತ್ಯಾತೀತ)ದಷ್ಟು ಗೊಂದಲದಲ್ಲಿರುವ ಪಕ್ಷ ಇನ್ನೊಂದಿರಲಾರದು. ರಾಷ್ಟ್ರ ರಾಜಕಾರಣದಲ್ಲಾಗಲಿ ಇಲ್ಲ ರಾಜ್ಯ ರಾಜಕಾರಣದಲ್ಲಾಗಲಿ ಅದಕ್ಕೊಂದು ನಿಶ್ಚಿತವಾದ ಗುರಿಯೆಂಬುದಿಲ್ಲದೆ ಅವಕಾಶವಾದಿ ರಾಜಕಾರಣದ ಅತ್ಯುತ್ತಮ ಉದಾಹರಣೆಯಾಗಿ ಪರಿಣಮಿಸಿದೆ. ಹಾಗೆ ನೋಡಿದರೆ ಕಾಂಗ್ರೆಸ್ಸಿನ ವಂಶಪಾರಂಪರ್ಯ ರಾಜಕಾರಣವನ್ನು ವಿರೋಧಿಸುತ್ತಲೇ ಹುಟ್ಟಿದ ಎಪ್ಪತ್ತರ ದಶಕದ ಜನತಾಪಕ್ಷದ ಪಳೆಯುಳಿಕೆಯಾಗಿರುವ ಜನತಾದಳವಿಂದು ಕುಟುಂಬ ರಾಜಕಾರಣದ ಬಗ್ಗೆ ಮಾತಾಡುವ ತನ್ನ ನೈತಿಕ ಶಕ್ತಿಯನ್ನು ಕಳೆದುಕೊಂಡು ಬಹಳ ವರ್ಷಗಳೇ ಆದವು. ತೊಂಭತ್ತರ ದಶಕದ ನಂತರ ಬಾಜಪದ ಕೋಮುವಾದವನ್ನು ವಿರೋಧಿಸುತ್ತ ಜಾತ್ಯಾತೀತ ತತ್ವದಡಿ ರಾಜಕೀಯ ಮಾಡುವ ಭರವಸೆಯನ್ನು ನೀಡಿದ್ದು ಸಹ ದೊಡ್ಡ ಸುಳ್ಳೆಂದು ಇವತ್ತು ಸಾಬೀತಾಗಿದೆ. ಹೀಗೆ ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮತ್ತು ಕೋಮುವಾದದ ವಿರುದ್ದ ಮಾತಾಡುತ್ತಲೇ ತಾನೂ ಅದರ ಒಂದು ಭಾಗವಾಗಿ ತನ್ನೆಲ್ಲ ಮೌಲ್ಯಗಳನ್ನು ಗಾಳಿಗೆ ತೂರಿ ದಿಕ್ಕೆಟ್ಟು ನಿಂತಿರುವಂತೆ ಕಾಣುತ್ತಿರುವ ಜನತಾದಳದ ಮುಂದಿನ ನಡೆಗಳ ಬಗೆ ಜನತೆಗೆ ಮುಖ್ಯವಾಗಿ ಕರ್ನಾಟಕದ ಜನರಿಗೆ ಕುತೂಹಲವಿರುವುದು ಸಹಜವಾದರೂ ಇದೀಗ ಅದರ ಪಾಳಯದಲ್ಲಿ ನಡೆಯುತ್ತಿರುವ ಆಂತರೀಕ ವಿದ್ಯಾಮಾನಗಳನ್ನು ಮತ್ತು ಅದರ ರಾಜ್ಯಾದ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿಯವರ ಮತ್ತು ಮಾಜ ಪ್ರಧಾನಿಗಳು ಮತ್ತು ರಾಷ್ಟ್ರಾದ್ಯಕ್ಷರೂ ಆದ ಶ್ರೀ ದೇವೇಗೌಡರ ಒಗಟಿನಂತ ಮಾತುಗಳನ್ನು ಕೇಳುತ್ತಿದ್ದರೆ ಜನತಾದಳ ತನ್ನ ಹಿಂದಿನ ಎಲ್ಲ ಸಿದ್ದಾಂತಗಳನ್ನೂ ಗಾಳಿಗೆ ತೂರಿ ಅಧಿಕಾರದ ಹಪಾಹಪಿಗೆ ಬಿದ್ದಿರುವುದು ಸ್ಪಷ್ಟವಾಗುತ್ತದೆ.
ಈ ಹಿನ್ನೆಲೆಯಲ್ಲಿ ಜನತಾದಳದ ಹುಟ್ಟಿನ ಮೂಲದ ಬಗ್ಗೆ ಒಂದಿಷ್ಟು ನೋಡಬೇಕಾಗುತ್ತದೆ. ಎಪ್ಪತ್ತರ ದಶಕದಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂದಿಯವರು ದೇಶದ ಮೇಲೆ ಹೇರಿದ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಹುಟ್ಟಿದ್ದೇ ಅವತ್ತಿನ ಜನತಾ ಪಕ್ಷ. ಅದರ ಜನ್ಮದಲ್ಲಿಯೇ ವಿಪರ್ಯಾಸಗಳಿದ್ದವು. ಯಾಕೆಂದರೆ ಅಂದಿನ ದಿನಮಾನದ ಸಮಾಜವಾದಿಗಳು, ಜನಸಂಘದ ಬಲಪಂಥೀಯರು ಮತ್ತು ಕಾಂಗ್ರೆಸ್ಸನ್ನು ವಿರೋಧಿಸುತ್ತಿದ್ದ ಉದಾರವಾದಿಗಳೆಲ್ಲ ಸೇರಿ ಸೃಷ್ಠಿಯಾಗಿದ್ದೇ ಈ ಜನತಾ ಪಕ್ಷ! ಇಂದಿರಾರವರ ಕುಟುಂಬ ರಾಜಕಾರಣವನ್ನು ಶತಾಯಗತಾಯ ವಿರೋಧಿಸುತ್ತ ಚುನಾವಣೆಯಲ್ಲಿ ಅಧಿಕಾರಕ್ಕೇರಿದ ಪಕ್ಷ ಬಹಳ ಕಾಲ ಉಳಿಯಲಿಲ್ಲ. ತನ್ನ ಆಂತರಿಕ ವೈರುದ್ಯಗಳ ಸುಳಿಗೆ ಸಿಲುಕಿದ ಪಕ್ಷ ಹೋಳಾಯಿತು. ಮೊದಲಿಗೆ ಜನತಾಪಕ್ಷದೊಳಗೆ ಸೇರಿ ಹೋಗಿದ್ದ ಜನಸಂಘ ತನ್ನ ಸಂಘಪರಿವಾರದ ಸೆಳೆತವನ್ನು ಬಿಡಲಾರದೆ ಅದರಿಂದ ಹೊರಬಂದು ಇವತ್ತಿನ ಭಾರತೀಯ ಜನತಾಪಕ್ಷವಾಗಿ ರೂಪುಗೊಂಡಿತು. ತರುವಾಯ 1980ರ ಚುನಾವಣೆಯಲ್ಲಿ ಇಂದಿರಾಗಾಂದಿಯವರು ಮರಳಿ ಅಧಿಕಾರ ಪಡೆಯುವುದರೊಂದಗೆ ಜನತಾ ಪಕ್ಷ ಅನೇಕ ಹೋಳುಗಳಾಗಿ ಒಡೆದು ಹೋಯತು. ಸಮಾಜವಾದಿ ಹಿನ್ನೆಲೆಯಿಂದ ಬಂದವರೆಂದು ಹೇಳಿಕೊಳ್ಳುತ್ತಾ ಬಂದ ಪ್ರಾದೇಶಿಕ ನಾಯಕರುಗಳ ಅಹಂಕಾರ ಮತ್ತು ಅಧಿಕಾರದ ಆಸೆ ಹೆಚ್ಚಾಗುತ್ತ, ವಿ.ಪಿ.ಸಿಂಗ್ ನೇತೃತ್ವದಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದರೂ ಅದಕ್ಕಾಗಿ ಅದು ಮತ್ತೆ ಮತೀಯವಾದಿ ಬಾಜಪದ ಬೆಂಬಲ ಪಡೆಯಬೇಕಾಯಿತು. ನಂತರ ನಡೆದದ್ದು ಇತಿಹಾಸ. ಕಾಂಗ್ರೆಸ್ಸಿನ ವಂಶಪಾರಂಪರ್ಯ ರಾಜಕೀಯದ ಬಗ್ಗೆ ಅಪಹಾಸ್ಯ ಮಾಡುತ್ತಲೇ ರಾಜಕಾರಣ ಮಾಡುತ್ತ ಬಂದ ಜನತಾಪಕ್ಷದ ನಾಯಕರುಗಳಿಗೆ ಹೊಸದೊಂದು ಶತ್ರು ಹುಟ್ಟಿಕೊಂಡಿದ್ದು ಬಾಜಪದ ರೂಪದಲ್ಲಿ. ಹಿಂದೂ ಮತಗಳ ದೃವೀಕರಣಕ್ಕಾಗಿ ಅದು ಎಲ್.ಕೆ.ಅದ್ವಾನಿಯವರ ನೇತೃತ್ವದಲ್ಲಿ ಬಾಬರಿ ಮಸೀದಿಯ ವಿವಾದವನ್ನು ಕೈಗೆತ್ತಿಕೊಂಡು ದೇಶದಾದ್ಯಂತ ರಥಯಾತ್ರೆ ನಡೆಸಿತು. ತದನಂತರ ಅದರ ಕರಸೇವಕರು ಬಾಬರಿ ಮಸೀದಿಯನ್ನು ದ್ವಂಸ ಮಾಡುವುದರ ಮೂಲಕ ತಾನೂ ಒಂದು ಬಲಾಢ್ಯ ರಾಷ್ಟ್ರೀಯ ಪಕ್ಷವಾಗುವತ್ತ ಹೆಜ್ಜೆ ಹಾಕತೊಡಗಿತು. ಆಗ ಕಾಂಗ್ರೆಸ್ ಮತ್ತು ಬಾಜಪವನ್ನು ಸಮಾನವಾಗಿ ವಿರೋಧಿಸುತ್ತ ಬಂದ ಜನತಾಪಕ್ಷದ ಹಲವು ಹೋಳುಗಳು ಸೇರಿ ತೃತೀಯ ವೇದಿಕೆ ರಚಿಸಿಕೊಂಡ ಜನತಾಪಕ್ಷದ ನಾಯಕರುಗಳು ಅಧಿಕಾರ ಹಿಡಿಯುವುದರಲ್ಲಿ ಯಶಸ್ವಿಯೂ ಆದರು. ಆದರೆ ತಮ್ಮ ಅವಧಿಯಲ್ಲಿ ಅವರುಗಳು ನಡೆದುಕೊಂಡ ರೀತಿಯಿಂದಾಗಿ ಮುಂದೆ ಶಾಶ್ವತವಾಗಿ ಅಧಕಾರವಂಚಿತರಾಗಬೇಕಾಗಿ ಬಂತು. ಈ ತೃತೀಯರಂಗ ಅಧಿಕಾರಕ್ಕೆ ಬಂದಾಗಲೇ ಶ್ರೀದೇವೇಗೌಡರು ಪ್ರದಾನಿಯಾಗಿದ್ದು. ನಂತರದ ದಿನಗಳಲ್ಲಿ ತಮ್ಮ ಆಂತರಿಕ ಕಚ್ಚಾಟ, ಮೇಲಾಟಗಳಿಂದಾಗಿ ಬಲಿಷ್ಠ ಪ್ರಾದೇಶಿಕ ನಾಯಕರುಗಳು ಜನತಾಪಕ್ಷವನ್ನು ಒಡೆದು ಚೂರು ಚೂರು ಮಾಡಿದರು. ಹಾಗೆ ಅಂದು ಒಡೆದ ಒಂದು ಚೂರೇ ಕರ್ನಾಟಕದಲ್ಲಿ ದೇವೇಗೌಡರ ನೇತೃತ್ವದಲ್ಲಿ ಅನೇಕ ಹೆಸರುಗಳನ್ನು ಬದಲಾಯಿಸುತ್ತ, ಕೊನೆಗಿವತ್ತು ಜಾತ್ಯಾತೀತ ಜನತಾದಳವಾಗಿ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುವ ಮಟ್ಟಕ್ಕೆ ಬೆಳೆದುನಿಂತಿದೆ.
2004ರವರೆಗೂ ಕಾಂಗ್ರೆಸ್ ಮತ್ತು ಬಾಜಪವನ್ನು ಸಮಾನ ಶತೃಗಳೆಂದು ಪರಿಗಣಿಸಿ ರಾಜಕಾರಣ ಮಾಡುತ್ತಾ ಬಂದ ಜನತಾದಳ 2004ರಲ್ಲಿ ಕೋಮುವಾದಿ ಬಾಜಪವನ್ನು ಅಧಿಕಾರದಿಂದ ದೂರವಿಡುವ ಅನಿವಾರ್ಯತೆಯ ಹೆಸರಲ್ಲಿ ಮೊದಲಬಾರಿ ಕಾಂಗ್ರೆಸ್ಸಿನ ಜೊತೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಅಧಿಕಾರ ಹಿಡಿಯಿತು. ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟು ತನ್ನ ಪಕ್ಷದ ಸಿದ್ದರಾಮಯ್ಯನವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿತು. ಆದರೆ 2006 ರಲ್ಲಿ ದೇವೇಗೌಡರ ಪುತ್ರ ಹೆಚ್,ಡಿ.ಕುಮಾರಸ್ವಾಮಿಯವರು ರಹಸ್ಯವಾಗಿ ಬಾಜಪದ ಯಡಿಯೂರಪ್ಪನವರ ಜೊತೆ ಮೈತ್ರಿಮಾಡಿಕೊಂಡು ಮುಖ್ಯಮಂತ್ರಿ ಪಟ್ಟಕ್ಕೇರಿದರು. ಜೊತೆಗೆ ಅಲ್ಲಿಯವರೆಗು ಅಧಿಕಾರದ ಹತ್ತಿರಕ್ಕೂ ಬರಲಾಗದೆ ಹತಾಶವಾಗಿದ್ದ ಬಾಜಪಕ್ಕೆ ಅಧಿಕಾರದ ರುಚಿಯನ್ನು ಹತ್ತಿಸಿದರು. ಈ ಮೈತ್ರಿಯ ಬಗ್ಗೆ ತನಗೇನು ಗೊತ್ತಿಲ್ಲ ಮತ್ತು ತನ್ನ ಸಮ್ಮತಿಯಿಲ್ಲವೆನ್ನುತ್ತಲೇ ಬಂದ ದೇವೇಗೌಡರು ತದನಂತರದಲ್ಲಿ ಮೌನಕ್ಕೆ ಶರಣಾದರು. ಇಪ್ಪತ್ತು ತಿಂಗಳ ನಂತರ ಅಧಿಕಾರ ಹಂಚಿಕೆಯ ಸೂತ್ರದಂತೆ ಬಾಜಪಕ್ಕೆ ಅಧಿಕಾರ ಬಿಟ್ಟು ಕೊಡದ ಜನತಾದಳ ರಾಜ್ಯದ ಜನತೆಯ ದೃಷ್ಠಿಯಲ್ಲಿ ವಚನಭಂಗ ಮಾಡಿದ ಖಳನಾಯಕನ ಪಟ್ಟಗಿಟ್ಟಿಸಿಕೊಂಡಿತು..
ಇದನ್ನೇ ಬಂಡವಾಳ ಮಾಡಿಕೊಂಡ ಬಾಜಪದ ಯಡಿಯೂರಪ್ಪನವರು ದಳ ಮಾಡಿದ ವಚನಭಂಗ ಮತ್ತು ಲಿಂಗಾಯಿತ ಸಮುದಾಯಕ್ಕೆ ಅದು ಎಸಗಿದ ದ್ರೋಹವನ್ನು ಚುನಾವಣೆಯ ವಿಷಯವನ್ನಾಗಿಸಿ ಅಧಿಕಾರಕ್ಕೇರುವಲ್ಲಿ ಸಫಲರಾದರು. ಹೀಗೆ ಜನತಾದಳದ ತಪ್ಪಿನಿಂದಾಗಿ ಕರ್ನಾಟಕದ ಮಟ್ಟಿಗೆ ನಗಣ್ಯವಾಗಿದ್ದ ಬಾಜಪ ಇವತ್ತು ಕಾಂಗ್ರೆಸ್ ಮತ್ತು ಜನತಾದಳವನ್ನು ಮೀರಿಸುವಂತೆ ಬಳೆದು ನಿಂತಿದೆ. ಜಾತ್ಯಾತೀತ ರಾಜಕಾರಣಕ್ಕೆ ಹೆಸರಾಗಿದ್ದ ಕರ್ನಾಟಕವನ್ನು ಮತೀಯ ಶಕ್ತಿಗಳ ಕೈಗೊಪ್ಪಿಸಿದ ಜನತಾದಳವನ್ನು ಇತಿಹಾಸವೆಂದು ಕ್ಷಮಿಸುವುದಿಲ್ಲ.
ಇವತ್ತು ಕಾಂಗ್ರೆಸ್ ಮತ್ತು ಬಾಜಪದ ನಂತರ ಮೂರನೇ ಸ್ಥಾನದಲ್ಲಿರುವ ಜನತಾದಳ ಕವಲುದಾರಿಯಲ್ಲಿ ನಿಂತಿದೆ. ಅದರೊಳಗಿನ ಗೊಂದಲಗಳಿಂದಾಗಿ ಅದು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಕಾಂಗ್ರೆಸ್ಸಿನ ಕುಟುಂಬ ರಾಜಕಾರಣವನ್ನು ವಿರೋಧಿಸುವ ತನ್ನ ನೈತಿಕ ಶಕ್ತಿಯನ್ನು ಕಳೆದುಕೊಂಡಿರುವ ಅದೀಗ ಇತ್ತ ಬಾಜಪದ ಕೋಮುವಾದದ ಬಗ್ಗೆ ಮಾತಾಡುವ ಅರ್ಹತೆಯನ್ನು ಕಳೆದುಕೊಡಿದೆ
ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಎರಡು ತಿಂಗಳ ಹಿಂದೆ ನಡೆದ ಬೆಂಗಳೂರಿನ ಮಹಾನಗರಪಾಲಿಕೆ ಚುನಾವಣೆಯಲ್ಲಿ ಬಾಜಪವನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ಸಿನ ಜೊತೆ ಮೈತ್ರಿ ಮಾಡಿಕೊಂಡ ಅದು, ಇದೀಗ ಕೆಲ ದಿನಗಳ ಹಿಂದೆಯಷ್ಟೇ ಮೈಸೂರು ನಗರಪಾಲಿಕೆಯಲ್ಲಿ ಕಾಂಗ್ರೆಸ್ಸನ್ನು ದೂರವಿಡಲು ಬಾಜಪದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ವಿಷಯದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿಯವರ ನಡುವೆ ಭಿನ್ನಾಭಿಪ್ರಾಯವಿರಬಹುದಾದರೂ ಕಾರ್ಯಕರ್ತರಿಗೆ ಗೊಂದಲ ಉಂಟಾಗಿರುವುದು ಸುಳ್ಳಲ್ಲ. ಇದೆಲ್ಲದರ ಜೊತೆಗೆ ಬಿಹಾರಕ್ಕೆ ಹೋಗುವ ದೇವೇಗೌಡರು ಬಾಜಪವನ್ನು ಮಣಿಸಲು ಬಿಹಾರದ ಮಾದರಿಯಲ್ಲೇ ಮಹಾಮೈತ್ರಿ ಮಾಡಿಕೊಳ್ಳುವ ಬಗ್ಗೆಯೂ ಮಾತಾಡುತ್ತಾರೆ. ಇದನ್ನು ಬರೆಯುತ್ತಿರುವಾಗಲೇ ದೇವೇಗೌಡರ ಆಣತಿಯಂತೆ ಪರಿಷತ್ತಿನ ಚನಾವಣೆಗಾಗಿ ಕಾಂಗ್ರೆಸ್ಸಿನ ಜೊತೆ ಮೈತ್ರಿ ಮಾಡಿಕೊಳ್ಳಲು ದಳದ ಎರಡನೇ ಸಾಲಿನ ನಾಯಕರುಗಳು ಮಾತುಕತೆ ನಡೆಸುತ್ತಿದ್ದಾರೆ. ತನಗಿದು ಗೊತ್ತಿಲ್ಲವೆಂದು ಕುಮಾರಸ್ವಾಮಿ ಹೇಳಿಕೆ ನೀಡುತ್ತಾರೆ.
ನನಗನ್ನಿಸುವಂತೆ ಜನತಾದಳವಿಂದು ದ್ವಂದ್ವಮಯವಾದ ಕವಲುದಾರಿಯಲ್ಲಿ ನಿಂತಿದೆ. ಸಾಂಪ್ರದಾಯಿಕ ಎದುರಾಳಿಯಾದ ಕಾಂಗ್ರೆಸ್ಸಿನ ಜೊತೆ ಹೋಗುವುದೋ, ಇಲ್ಲ ಕೋಮುವಾದಿ ಬಾಜಪದೊಂದಿಗೆ ಮೈತ್ರಿ ಮಾಡಿಕೊಳ್ಳುವುದೋ ಇಲ್ಲ ಎರಡೂ ಪಕ್ಷಗಳನ್ನು ಸಮಾನ ಅಂತರದಲ್ಲಿಟ್ಟು ತನ್ನ ರಾಜಕೀಯ ಐಡೆಂಟಿಟಿಯನ್ನು ಉಳಿಸಿಕೊಳ್ಳುವುದೊ ಎಂಬ ಗೊಂದಲದ ಪರಿಸ್ಥಿತಿಯಲ್ಲಿ ನಿಂತಿದೆ. ದೇವೇಗೌಡರಿಗೆ ಕಾಂಗ್ರೆಸ್ಸಿನ ಜೊತೆ ಹೆಜ್ಜೆ ಹಾಕುವ ಮನಸ್ಸಿರುವಂತೆ ಕಂಡರೆ, ಕುಮಾರಸ್ವಾಮಿಯವರಿಗೆ ಬಾಜಪದ ಮೇಲೆ ಒಲವಿರುವಂತೆ ತೋರುತ್ತದೆ. ಹೀಗೇ ಜನತಾದಳವಿಂದು ಸ್ಪಷ್ಟವಾಗಿ ಯಾವ ನಿರ್ದಾರವನ್ನೂ ತೆಗೆದುಕೊಳ್ಳಲಾರದೆ ದಿಕ್ಕೆಟ್ಟ ಸ್ಥಿತಿಯಲ್ಲಿ ನಿಂತಿದೆ.
ರಾಜ್ಯದ ಅಭಿವೃದ್ದಿಯ ಬಗ್ಗೆ ಸ್ಪಷ್ಟವಾದ ನಿಲುವನ್ನು ತೋರಿಸದ ಎರಡು ರಾಷ್ಟ್ರೀಯ ಪಕ್ಷಗಳ ಬಗ್ಗೆ ಬೇಸರಗೊಂಡಿರುವ ಕರ್ನಾಟಕದ ಜನತೆಗೆ ಇದುವರೆಗೂ ಇದ್ದ ಭರವಸೆಯೆಂದರೆ ಜನತಾದಳ ಮಾತ್ರ. ಜನತೆಯ ಆ ನಂಬುಗೆಯನ್ನು ಉಳಿಸಿಕೊಳ್ಳುವುದು ಬಿಡುವುದೂ ಸದ್ಯಕ್ಕೆ ಜನತಾದಳದ ನಾಯಕರುಗಳ ಕೈಲಿದೆ. ಸಮಾಜವಾದಿ ನೆಲೆಯಿಂದ ಬಂದ ದೇವೇಗೌಡರು ಇದನ್ನು ಅರ್ಥ ಮಾಡಿಕೊಂಡರೂ ಶಕ್ತಿರಾಜಕಾರಣದ ನಡೆಗಳನ್ನು ಮಾತ್ರ ನಂಬಿಕೊಂಡ ಕುಮಾರಸ್ವಾಮಿಯವರಿಗೆ ಇದು ಸುಲಭವಾಗಿ ಅರ್ಥವಾಗುವಂತಹುದ್ದಲ್ಲ!
ಇದೀಗ ತಮ್ಮ ಪಕ್ಷದ ರಾಜಕೀಯ ನಿಲುವುಗಳ ಬಗ್ಗೆ ಗಟ್ಟಿಯಾದ ನಿಲುವೊಂದನ್ನ ತೆಗೆದುಕೊಂಡು ಜನರ ಮುಂದೆ ಬರುವುದು ಜನತಾದಳಕ್ಕೆ ಅನಿವಾರ್ಯವಾಗಿದೆ. ಕಾಂಗ್ರೆಸ್ಸಿನ ಜಡತೆಯಿಂದ ಹಾಗು ಬಾಜಪದ ಮತೀಯವಾದದಿಂದ ಜಿಗುಪ್ಸೆಗೊಂಡಿರುವ ಕರ್ನಾಟಕದ ಜನರ ಹಿತದೃಷ್ಠಿಯಿಂದ ಸ್ಪಷ್ಟವಾದ ರಾಜಕೀಯ ನಿಲುವೊಂದನ್ನು ತಳೆಯುವುದು ಜನತಾದಳದ ರಾಜಕೀಯ ಭವಿಷ್ಯದ ದೃಷ್ಠಿಯಿಂದಲೂ ಅಗತ್ಯವಾಗಿದೆ. ಇದನ್ನು ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಅರ್ಥಮಾಡಿಕೊಳ್ಳಬೇಕಾಗಿದೆ.
No comments:
Post a Comment