Oct 17, 2015

ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವುದು ತಪ್ಪೇ?

sahitya academy
ಒಬ್ಬರ ನಂತರ ಮತ್ತೊಬ್ಬರು ತಮಗೆ ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಸಿಕ್ಕಿದ್ದ ಪ್ರಶಸ್ತಿಗಳನ್ನು ವಾಪಸ್ಸು ಮಾಡುತ್ತಿದ್ದಾರೆ. ಪ್ರಶಸ್ತಿಯ ಜೊತೆಗೆ ಕೊಟ್ಟಿದ್ದ ಹಣವನ್ನೂ ಹಿಂದಿರುಗಿಸುತ್ತಿದ್ದಾರೆ. ಕೆಲವರ ಮೆಚ್ಚುಗೆಗೆ ಪಾತ್ರವಾಗುತ್ತಲೇ ಕೆಲವರ ಅಪಹಾಸ್ಯಕ್ಕೂ ಸಾಹಿತಿಗಳು ಈಡಾಗುತ್ತಿದ್ದಾರೆ. ಪ್ರಶಸ್ತಿಗಳನ್ನು ವಾಪಸ್ಸಾಗಿಸುವುದಕ್ಕೆ ಪ್ರಸಕ್ತ ಇರುವ ದುರಿತ ಕಾಲಘಟ್ಟ ಕಾರಣವೆಂದು ಹಿಂದಿರುಗಿಸಿದವರನೇಕರು ಪತ್ರ ಬರೆದಿದ್ದಾರೆ. ಈ ಪ್ರಶಸ್ತಿ ವಾಪಸ್ಸು ಮಾಡುವಿಕೆ ಒಂದು ರಾಜ್ಯಕ್ಕೆ ಸೀಮಿತವಾಗಿ ಉಳಿದಿಲ್ಲ; ಕಾಶ್ಮೀರದಿಂದ ಹಿಡಿದು ಕೇರಳದವರೆಗೂ ಪ್ರಶಸ್ತಿ ವಾಪಸ್ಸು ಮಾಡುವವರ ಸಂಖೈ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಪ್ರಶಸ್ತಿಗಳನ್ನು ವಾಪಸ್ಸು ಕೊಡುವುದು ಸಮೂಹ ಸನ್ನಿಯಂತಾಗಿದೆಯೇ? ಪ್ರಶಸ್ತಿಗಳನ್ನು ತೆಗೆದುಕೊಳ್ಳುವಾಗ ಸಮಾಜ ಸಂಪೂರ್ಣ ಸ್ವಸ್ಥವಾಗಿತ್ತೇ? ರಾಜಕೀಯ ಅಸಹನೆಯನ್ನು ಸಾಹಿತಿಗಳು ಈ ರೀತಿಯಾಗಿ ಹೊರಹಾಕುತ್ತಿದ್ದಾರೆಯೇ? ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಹೆಸರನ್ನು ಹಾಳುಗೆಡವುವಂತಹ ಇಂತಹ ಹಾದಿ ಸರಿಯೇ? ನರೇಂದ್ರ ಮೋದಿ ಪ್ರಧಾನಿಯಾಗಬಾರದೆಂದು ಬಯಸಿದ್ದ ಅನೇಕ ಸಾಹಿತಿಗಳು ಮೋದಿಯವರ ಹೆಸರನ್ನು ಹಾಳುಗೆಡವಲು ಈ ರೀತಿ ಮಾಡುತ್ತಿದ್ದಾರೆಯೇ? ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಮೂಡುತ್ತಿವೆ. ಕೆಲವೊಂದಕ್ಕೆ ಸಮಾಧಾನಕರ ಉತ್ತರ ದೊರಕಿದರೆ ಹಲವಕ್ಕೆ ದೊರಕುವ ಉತ್ತರದಿಂದ ಕಷ್ಟಪಟ್ಟು ಸಮಾಧಾನ ಮಾಡಿಕೊಳ್ಳಬೇಕು. 

ರಾಜ್ಯದ ವ್ಯಾಪ್ತಿಯಲ್ಲಿ ನಡೆಯುವ ಕ್ರಿಮಿನಲ್ ಚಟುವಟಿಕೆಗಳಿಗೆ ಆ ರಾಜ್ಯದಲ್ಲಧಿಕಾರದಲ್ಲಿರುವ ಸರಕಾರ ಉತ್ತರದಾಯಿತ್ವ ವಹಿಸಬೇಕೇ ಹೊರತು ಕರ್ನಾಟಕದ ಮೂಲೆಯಲ್ಲಿನ ಹಳ್ಳಿಯಲ್ಲಿ ನಡೆಯುವ ಘಟನೆಯನ್ನೂ ನರೇಂದ್ರ ಮೋದಿಯವರ ತಲೆಗೆ ಕಟ್ಟುವುದರಲ್ಲಿ ಯಾವ ರೀತಿಯ ಪುರುಷಾರ್ಥವಿದೆ ಎಂದು ಪ್ರಶ್ನಿಸುವವರ ಸಂಖೈ ಅಧಿಕವಿದೆ. ಮೇಲ್ನೋಟಕ್ಕೆ ಆ ಪ್ರಶ್ನೆಯಲ್ಲಿ ಸತ್ಯವೂ ಇದೆ. ರಾಜ್ಯದ ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ರಾಜ್ಯ ಸರಕಾರದ್ದಾಗಿರುವಾಗ ಕೇಂದ್ರವೇಗೆ ಜವಾಬ್ದಾರಿ ಹೊತ್ತುಕೊಳ್ಳಲು ಸಾಧ್ಯ? ಏನೋ ಪರದೇಶದ ಭಯೋತ್ಪಾದಕರು ದೇಶದ ಗಡಿ ದಾಟಿ ನುಗ್ಗಿ ಬಂದರೆ ಅದು ಕೇಂದ್ರ ಸರಕಾರದ ವೈಫಲ್ಯವಾಗುತ್ತದೆ. ಕರ್ನಾಟಕದಲ್ಲಿ ಎಂ.ಎಂ.ಕಲಬುರ್ಗಿಯವರ ಮೇಲೆ ಅನಾಮಿಕರು ಬಂದು ಗುಂಡು ಹಾರಿಸಿ ಕೊಂದರೆ ಅದು ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಗುಪ್ತಚರ ಇಲಾಖೆಯ ವೈಫಲ್ಯವೇ ಹೊರತು ಕೇಂದ್ರದ್ದಲ್ಲ ಅಲ್ಲವೇ? ಇನ್ನು ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದ್ದಕ್ಕೆ ಮತ್ತೊಂದು ಪ್ರಮುಖ ಕಾರಣ ದಾದ್ರಿಯಲ್ಲಿ ನಡೆದ ಮೊಹಮದ್ ಇಖ್ಲಾಕನ ಹತ್ಯೆ. ಗೋಮಾಂಸ ಸಂಗ್ರಹಿಸಿದ್ದನೆಂಬ ಅನುಮಾನದಿಂದ ಊರಿನ ದೇವಸ್ಥಾನದಲ್ಲಿ ಇಖ್ಲಾಕನ ವಿರುದ್ಧ ಘೋಷಣೆ ಕೂಗುತ್ತಾರೆ, ನೂರಿನ್ನೂರು ಜನರ ಗುಂಪು ಇಖ್ಲಾಕನ ಮನೆಗೆ ನುಗ್ಗಿ ಸಾಮಾನುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ ಮನೆಯವರಿಗೆಲ್ಲ ಹೊಡೆದು ಹೊರಗಟ್ಟುತ್ತಾರೆ. ಇಖ್ಲಾಕನನ್ನು ಹೊಡೆದು ಹೊಡೆದೇ ಸಾಯಿಸಿಬಿಡುತ್ತಾರೆ. ದಾದ್ರಿ ಇರುವುದು ಉತ್ತರ ಪ್ರದೇಶದಲ್ಲಿ. ಉತ್ತರಪ್ರದೇಶದಲ್ಲಿ ಆಡಳಿತದಲ್ಲಿರುವುದು ಅಖಿಲೇಶ್ ನೇತೃತ್ವದ ಸಮಾಜವಾದಿ ಸರಕಾರ. ಆ ಘಟನೆಗೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವನ್ಯಾಕೆ ದೂಷಿಸಬೇಕು? ದೇಗುಲ ಪ್ರವೇಶಿಸಲು ಪ್ರಯತ್ನಿಸಿದನೆಂದು ದಲಿತನೊಬ್ಬನನ್ನು ಸುಟ್ಟು ಹಾಕಿದರೂ ಪ್ರಧಾನಿಯತ್ತ ಬೆರಳು ತೋರಿಸುವುದ್ಯಾಕೆ? ಪ್ರತಿಯೊಂದು ದುರ್ಘಟನೆಗೂ ಪ್ರಧಾನಿ ಯಾಕೆ ಜವಾಬ್ದಾರಿ ಹೊತ್ತುಕೊಂಡು ಉತ್ತರಿಸಬೇಕು?

ಇದನ್ನೂ ಓದಿ: ದನ ತಿಂದ್ರೆ ತಪ್ಪು ಜನಾನ್ ಬೇಕಾದ್ರೆ ತಿವ್ಕೊಳ್ಳಿ

ಯಾಕೆ ಉತ್ತರಿಸಬೇಕೆಂದರೆ ನಮ್ಮ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಹಿಂದಿನ ಪ್ರಧಾನಿ ಮನಮೋಹನ್ ಸಿಂಗರಂತೆ ‘ದುರ್ಬಲ’ರಲ್ಲ. ಭಾರತ ಕಂಡ ಸಶಕ್ತ ಪ್ರಧಾನಿ ಎಂಬ ಬಿರುದಾಂಕಿತ ನರೇಂದ್ರ ಮೋದಿಯವರು ಅವರ ಕಛೇರಿಯ ಸಿಬ್ಬಂದಿಗಳ, ವಿವಿಧ ಪಕ್ಷಗಳ ರಾಜಕಾರಣಿಗಳ ಹುಟ್ಟುಹಬ್ಬವನ್ನು ನೆನಪಿಟ್ಟುಕೊಂಡು ಟ್ವೀಟಿಸುತ್ತಾರೆ, ಪರದೇಶದವರಿಗೆ ಅವರದೇ ಭಾಷೆಯಲ್ಲಿ ಶುಭಾಷಯ ಬರೆಯುತ್ತಾರೆ, ದೇಶವಾಸಿಗಳಿಗೆ ಹಬ್ಬದ ಪ್ರಯುಕ್ತ ಶುಭ ಕೋರುತ್ತಾರೆ, ನವಜೋತ್ ಸಿಂಗ್ ಅಸ್ವಸ್ಥವಾಗಿದ್ದನ್ನು ಟ್ವೀಟಿಸಿ ಎಲ್ಲರ ಗಮನಕ್ಕೂ ತರುತ್ತಾರೆ. ಇಷ್ಟೆಲ್ಲ ಚಟುವಟಿಕೆಯಿಂದಿರುವ ಪ್ರಧಾನಿಯವರು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡವುವ ಘಟನೆಗಳು ನಡೆದಾಗ ಪ್ರತಿಕ್ರಯಿಸದೆ ಉಳಿದು ಬಿಟ್ಟರೆ ಪ್ರಶ್ನಿಸಬೇಕೆಂದು ಅನ್ನಿಸುವುದಿಲ್ಲವೇ? ಅನ್ನಿಸುವುದಿಲ್ಲ ಎನ್ನುವವರು ನೀವಾಗಿದ್ದರೆ ಕಣ್ಣಿಗೆ ಕಟ್ಟಿರುವ ಅಂಧ ಭಕ್ತಿಯ ಪಟ್ಟಿಯನ್ನು ತೊಡೆದು ಹಾಕಿ. ಯಾವ್ಯಾವುದೋ ಕೆಲಸಕ್ಕೆ ಬಾರದಕ್ಕೆಲ್ಲ ಪ್ರತಿಕ್ರಯಿಸುವ ಪ್ರಧಾನಿಯವರು ವಿದ್ವಾಂಸರ ಹತ್ಯೆಗೆ, ಆಹಾರದ ಆಧಾರದ ಮೇಲೆ ಸಮಾಜ ಒಡೆಯುವ ಶಕ್ತಿಗಳ ಮೇಲುಗೈ ಬಗೆಗೆ, ದಲಿತನ ಹತ್ಯೆಯ ಬಗೆಗೆ ಪ್ರತಿಕ್ರಯಿಸದೆ ಮೌನವಾಗಿರುವುದು ಅವರ ಸಮ್ಮತಿಯನ್ನು ಸೂಚಿಸುತ್ತದೆಯೇ? ಹಿಂದಿನ ಪ್ರಧಾನಿಯ ಮೌನವನ್ನು ದೌರ್ಬಲ್ಯದಂತೆ ಬಿಂಬಿಸಲಾಗುತ್ತಿತ್ತು, ಈಗಿನ ಪ್ರಧಾನಿಗಳ ಮೌನವನ್ನು ಜಾಣ ರಾಜಕೀಯ ನಡೆಯಂತೆ ಬಿಂಬಿಸಲಾಗುತ್ತಿದೆ ಎಂದು ಗೆಳೆಯನೊಬ್ಬ ಮೆಸೇಜಿಸಿದ್ದ. ಸತ್ಯವಲ್ಲವೇ?

ಯಾಕೆ ಉತ್ತರಿಸಬೇಕೆಂದರೆ ಈ ಎಲ್ಲಾ ಘಟನೆಗಳನ್ನು ಅವರದೇ ಸರಕಾರದ ಭಾಗವಾಗಿರುವ ಅನೇಕ ಸಂಸದರು, ಸಚಿವರು ಬಹಿರಂಗವಾಗಿಯೇ ಸಮರ್ಥಿಸುವ ಮಾತನಾಡುತ್ತಿದ್ದಾರೆ. ಮತ್ತು ಈ ಎಲ್ಲಾ ಘಟನೆಗಳು ಏಕ ಧರ್ಮ ಏಕ ಸಂಸ್ಕೃತಿ ಎಂದು ಬೊಬ್ಬೆಯೊಡೆಯುವ ಆರ್ ಎಸ್ ಎಸ್ಸಿನ ಧಾರ್ಮಿಕ ರಾಜಕೀಯದ ಭಾಗವಾಗಿಯೇ ಇದೆ. ಅನ್ಯ ಧರ್ಮ ದ್ವೇಷ, ವಿಚಾರವಾದಿಗಳೆಡೆಗಿನ ದ್ವೇಷ, ಚಾತುರ್ವರ್ಣದ ಪ್ರತಿಪಾದನೆ, ಇತರರ ಆಹಾರ ಪದ್ಧತಿಯನ್ನು ಕೀಳಾಗಿ ಕಾಣುವುದೆಲ್ಲವೂ ಅವರ ಧಾರ್ಮಿಕ ರಾಜಕಾರಣದ ಭಾಗವೇ ಅಲ್ಲವೇ? ಅಂತಹುದೊಂದು ಧಾರ್ಮಿಕ ರಾಜಕೀಯದ ತಳಹದಿಯೊಂದಿಗೇ ಪ್ರಧಾನಿ ಪಟ್ಟವಲಂಕರಿಸಿರುವ ನರೇಂದ್ರ ಮೋದಿಯವರು ಎಲ್ಲದಕ್ಕೂ ಕೇಂದ್ರವೇಗೆ ಕಾರಣ, ನನ್ನ ಜವಾಬ್ದಾರಿಯಲ್ಲವಿದು ಎಂದು ತಪ್ಪಿಸಿಕೊಳ್ಳುವ ಮಾತುಗಳನ್ನು ಆಡಿದರೆ ಒಪ್ಪಬಹುದೇ?

ಯಾಕೆ ಈ ಮಾತುಗಳನ್ನು ಒಪ್ಪಲಾಗುವುದಿಲ್ಲ ಎನ್ನುವುದಕ್ಕೆ ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಡೆದ ಕೋಮುಗಲಭೆಯನ್ನು ಗಮನಿಸಬೇಕು. ತುಂಬ ವ್ಯವಸ್ಥಿತವಾಗಿ ಜನರ ನಡುವೆ ಧರ್ಮದ ಹೆಸರಿನಲ್ಲಿ, ಲವ್ ಜಿಹಾದಿನ ನೆಪದಲ್ಲಿ ಹಂತಹಂತವಾಗಿ ವಿಷ ಭಿತ್ತಲಾಗುತ್ತದೆ. ಎಂಟತ್ತು ತಿಂಗಳ ನಿರಂತರ ಪ್ರಯತ್ನದ ನಂತರ ಕೋಮುಗಲಭೆ ತನ್ನ ಅಟ್ಟಹಾಸವನ್ನು ತೋರಿಸುತ್ತದೆ. ಸಾವಿರಾರು ಜನರು ನೆಲೆ ಕಳೆದುಕೊಂಡು ನಿರಾಶ್ರಿತರಾಗುತ್ತಾರೆ. ಎರಡು ನಿರಾಶ್ರಿತ ಶಿಬಿರಗಳು ನೆಲೆ ಕಳೆದುಕೊಂಡ ದಲಿತರಿಗಾಗಿ ಇದ್ದರೆ ಉಳಿದ ಎಲ್ಲಾ ಶಿಬಿರಗಳಲ್ಲೂ ನೆಲೆ ಕಳೆದುಕೊಂಡ ಮುಸ್ಲಿಮರಿರುತ್ತಾರೆ. ಈಗಿನ ಬಿಜೆಪಿಯ ಅಧ್ಯಕ್ಷ ಅಮಿತ್ ಶಾರವರನ್ನೂ ಒಳಗೊಂಡಂತೆ ಅನೇಕ ಬಿಜೆಪಿ ಧುರೀಣರು ಬಹಿರಂಗ ಸಭೆಗಳಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಕಾರುತ್ತಾರೆ. ಸೇಡು ತೀರಿಸಿಕೊಳ್ಳಲು ಈ ಚುನಾವಣೆಗಿಂತ ಒಳ್ಳೆಯ ಅವಕಾಶ ಸಿಗಲಾರದು ಎಂದು ವೀರಾವೇಷದ ಮಾತನಾಡುತ್ತಾರೆ. ಮತ್ತೊಂದೆಡೆ ಸಮಾಜವಾದಿ ಪಕ್ಷದ ಅಜಂ ಖಾನ್, ಒವೈಸಿ ಈ ದ್ವೇಷವನ್ನೆಚ್ಚಿಸಲು ಹಿಂದೂ ವಿರೋಧಿ ಮಾತುಗಳನ್ನಾಡುತ್ತಾರೆ. ಒಟ್ಟಿನಲ್ಲಿ ಧರ್ಮದ ಆಧಾರದಲ್ಲಿ ಮತಗಳನ್ನು ಧ್ರುವೀಕರಿಸುವುದಕ್ಕೆ ಏನೇನು ಗಬ್ಬೆಬ್ಬಿಸಬೇಕೋ ಅದೆಲ್ಲವನ್ನೂ ಮಾಡಲಾಗುತ್ತದೆ. ಇದೇ ಬಿಜೆಪಿ ಪಕ್ಷವಲ್ಲವೇ ಕಾಂಗ್ರೆಸ್ಸನ್ನು ಪದೇ ಪದೇ ‘ವೋಟ್ ಬ್ಯಾಂಕ್ ರಾಜಕೀಯ’ ಮಾಡುವವರು ಎಂದು ಹೀಗಳೆಯುವುದು? ಕಾಂಗ್ರೆಸ್ಸಿಗೂ ಬಿಜೆಪಿಗೂ ಇರುವ ವ್ಯತ್ಯಾಸವೇನೋ ನನಗಂತೂ ತಿಳಿಯದು. ಮುಜಾಫರ್ ನಗರದ ಕೋಮುಗಲಭೆಗಳೆಲ್ಲವೂ ಬಿಜೆಪಿಯ ಮತ್ತದರ ಹಿಂದೂ ಸಿದ್ಧಾಂತದ ಬೆಂಬಲಿಕ್ಕಿರುವ ಸಂಘಟನೆಗಳ ಕುತಂತ್ರ. ಈ ಕುತಂತ್ರಕ್ಕೆ ಅವರಿಗೆ ಸಿಕ್ಕ ಬಹುಮಾನ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಅತ್ಯಧಿಕ ಸ್ಥಾನಗಳಲ್ಲಿನ ಗೆಲುವು. ಈಗ ಹೇಳಿ ದಾದ್ರಿಗೂ ಕೇಂದ್ರದಲ್ಲಿರುವ ಸರಕಾರಕ್ಕೂ ಏನೂ ಸಂಬಂಧವಿಲ್ಲ ಎನ್ನುವುದನ್ನು ಒಪ್ಪುವುದಾದರೂ ಹೇಗೆ? ಕೇಂದ್ರ ಸರಕಾರಕ್ಕಲ್ಲದಿದ್ದರೂ ಆ ಸರಕಾರವನ್ನು ರಚಿಸಿರುವ ಬಿಜೆಪಿಗೂ ಈ ಘಟನೆಗೂ ಸಂಬಂಧವಿಲ್ಲ ಎನ್ನುವುದನ್ನು ಒಪ್ಪುವುದು ಹೇಗೆ?

ಸಾಹಿತಿಗಳು ಪ್ರಶಸ್ತಿ ಹಿಂದಿರುಗಿಸುವುದಕ್ಕೆ ಪ್ರಮುಖ ಕಾರಣ ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ ಎನ್ನುವುದಲ್ಲ. ಸಾಹಿತಿ- ವಿದ್ವಾಂಸರೊಬ್ಬರ ಹತ್ಯೆಯಾದಾಗ ಸಾಹಿತಿಗಳ ಪರವಾಗಿರಬೇಕಾದ ಸಾಹಿತ್ಯ ಅಕಾಡೆಮಿಗಳು ಮೌನಕ್ಕೆ ಶರಣಾಗಿರುವುದು ಅಸಹನೆ ಮೂಡಿಸಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರೇ ಆಗಿದ್ದಂತಹ ಎಂ.ಎಂ.ಕಲಬುರ್ಗಿಯವರ ಹತ್ಯೆಯನ್ನು ಖಂಡಿಸುವುದಕ್ಕೂ ಸಾಹಿತ್ಯ ಅಕಾಡೆಮಿ ಹಿಂಜರಿಯುತ್ತದೆಯೆಂದರೆ ಅದನ್ನು ಪ್ರತಿಭಟಿಸಬೇಕಲ್ಲವೇ? ಆಟೋದವರಿಗೆ ಅನ್ಯಾಯವಾದಾಗ ಆಟೋದವರು, ರೈತರಿಗೆ ಅನ್ಯಾಯವಾದಾಗ ರೈತರು, ವೈದ್ಯರಿಗೆ ಅನ್ಯಾಯವಾದಾಗ ವೈದ್ಯರು ಪ್ರತಿಭಟಿಸುವುದಿಲ್ಲವೇ? ಅದೇ ರೀತಿಯ ಹಕ್ಕು ಸಾಹಿತಿಗಳಿಗೂ ಇದೆಯಲ್ಲವೇ? ಸರಕಾರೀ ವೈದ್ಯರು ಸಾಮೂಹಿಕ ರಾಜೀನಾಮೆ ಕೊಟ್ಟು ಪ್ರತಿಭಟಿಸುವುದು ತಪ್ಪಲ್ಲವಾದರೆ ಸಾಹಿತಿಗಳು ಪ್ರಶಸ್ತಿ ಹಿಂದಿರುಗಿಸಿ ಪ್ರತಿಭಟಿಸುವುದು ಹೇಗೆ ತಪ್ಪಾಗುತ್ತದೆ? ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ನಾನಾ ದಾರಿ. ಸತ್ಯಾಗ್ರಹ, ಉಪವಾಸ ಸತ್ಯಾಗ್ರಹ, ಸರದಿ ಉಪವಾಸ ಸತ್ಯಾಗ್ರಹ, ರಸ್ತೆ ತಡೆ, ಘೋಷಣೆ, ಬಂದ್ ಗಳೆಲ್ಲವೂ ಪ್ರತಿಭಟನೆಯ ದಾರಿಗಳೇ. ವಿಭಿನ್ನ ರೀತಿಯ ಕೆಲವೊಮ್ಮೆ ತಮಾಷೆಯೆನ್ನಿಸುವ ಪ್ರತಿಭಟನೆಯನ್ನು ನಡೆಸುವುದಕ್ಕೆ ನಮ್ಮ ವಾಟಾಳ್ ನಾಗರಾಜ್ ಫೇಮಸ್ಸು. ಅವರ ಪ್ರತಿಭಟನೆಯ ರೀತಿ ತಮಾಷೆಯೆನ್ನಿಸಿದರೂ ಅದರಿಂದ ಉಪಯೋಗವೇನು ಎನ್ನಿಸಿದರೂ ಪ್ರಜಾಪ್ರಭುತ್ವದಲ್ಲಿ ಸರಿಯಿರದ ಸಂಗತಿಯ ವಿರುದ್ಧ ಮೌನವಾಗುಳಿಯುವುದಕ್ಕಿಂತ ಪ್ರತಿಭಟಿಸುವುದು ಹೆಚ್ಚು ಸೂಕ್ತ. ಪ್ರಜಾಪ್ರಭುತ್ವದಲ್ಲಿ ಲವಲವಿಕೆ ತರಲು, ಹಾದಿ ತಪ್ಪುವ ಪ್ರಜಾಪ್ರಭುತ್ವವನ್ನು ಮತ್ತೆ ಸರಿದಾರಿಗೆ ಮರಳಿಸಲೂ ಈ ಪ್ರತಿಭಟನೆಗಳು ಅತ್ಯವಶ್ಯಕ. ಸಿಕ್ಕ ಪ್ರಶಸ್ತಿಯನ್ನು ಮರಳಿಸುವುದೂ ಕೂಡ ಪ್ರತಿಭಟನೆಯ ಒಂದು ಮಾರ್ಗವೆನ್ನುವುದನ್ನು ಅಪಹಾಸ್ಯ ಮಾಡುವುದನ್ನೇ ಪ್ರವೃತ್ತಿಯಾಗಿಸಿಕೊಂಡವರು ಅರಿಯಬೇಕು. ಒಬ್ಬರು ಹಿಂದಿರುಗಿಸಿದರೆಂದು ಮತ್ತೊಬ್ಬರು ಹಿಂದಿರುಗಿಸಲು ಮನಸ್ಸು ಮಾಡುವುದು ನಡೆದೇ ನಡೆಯುತ್ತದೆ. ಸಾಹಿತಿಗಳು ಪ್ರಶಸ್ತಿಗಳನ್ನು ಹಿಂದಿರುಗಿಸಿರುವುದರಿಂದ ಏನು ಬದಲಾಗಿಬಿಟ್ಟಿತು?

ಇದನ್ನೂ ಓದಿ: ನಾವೇಕೆ ಪ್ರಶಸ್ತಿಗಳನ್ನು ಹಿಂದಿರುಗಿಸಿದೆವು? ಅಶೋಕ್ ವಾಜಪೇಯಿ

ಪ್ರಶಸ್ತಿ ಹಿಂದಿರುಗಿದಾಕ್ಷಣ ಕಲಬುರ್ಗಿಯ ಹಂತಕರು ‘ನಮ್ಮದು ತಪ್ಪಾಯಿತು’ ಎಂದು ಓಡಿ ಬಂದು ಶರಣಾಗಲಿಲ್ಲ. ದಾದ್ರಿಯ ಹಂತಕರು, ದಲಿತರನ್ನು ಸುಟ್ಟ ಹಂತಕರು, ದಲಿತರನ್ನು ಬೆತ್ತಲು ಮಾಡಿದವರು ಪಶ್ಚಾತ್ತಾಪ ಪಡಲಿಲ್ಲ. ಮತ್ತೇನು ಉಪಯೋಗವಾಯಿತು? ಏನು ಉಪಯೋಗವಾಯಿತೆಂದರೆ ಹಾದಿ ತಪ್ಪುತ್ತಿರುವ ಸಮಾಜದ ಬಗ್ಗೆ ಮುಖ್ಯಮಂತ್ರಿ, ಪ್ರಧಾನಮಂತ್ರಿಯವರು ಮೌನ ಮುರಿದು ಮಾತನಾಡುವಂತೆ ಮಾಡಿತು. ಆ ಮಾತುಗಳು ನಿರಾಸೆ ಮೂಡಿಸುವಂತಿದೆಯೆನ್ನುವುದು ಸತ್ಯವಾದರೂ ಕೊನೇ ಪಕ್ಷ ಪ್ರತಿಕ್ರಿಯೆ ನೀಡುವಂತಾದರೂ ಮಾಡುವಲ್ಲಿ ಈ ಪ್ರಶಸ್ತಿ ವಾಪಸ್ಸಾತಿ ಯಶ ಸಾಧಿಸಿದೆ. ‘ಪ್ರಶಸ್ತಿ ವಾಪಸ್ಸು ಮಾಡುತ್ತಿರುವುದು ಸರಿಯಲ್ಲ. ಹಂತಕರನ್ನು ಹಿಡಿಯಲು ಪ್ರಯತ್ನಿಸುತ್ತಿದ್ದೀವಿ’ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. ಹಂತಕರನ್ನು ಹಿಡಿಯಲು ರಾಜ್ಯ ಪೋಲೀಸರು ಹಿಡಿಯಲು ಪ್ರಯತ್ನಿಸುತ್ತಿರುವುದು ನಿಜ, ಆ ಪ್ರಯತ್ನ ಅಷ್ಟು ಯಶಸ್ಸು ಕಾಣುತ್ತಿಲ್ಲವೆನ್ನುವುದೂ ಸದ್ಯದ ವಾಸ್ತವ. ರಾಜ್ಯ ಗುಪ್ತಚರ ಇಲಾಖೆಯ ವೈಫಲ್ಯವಿದು ಎಂದು ಸಿದ್ಧರಾಮಯ್ಯನವರಿಗೆ ಯಾಕೆ ಅನ್ನಿಸುವುದಿಲ್ಲ? ಗುಪ್ತಚರ ಇಲಾಖೆಯನ್ನು ಬಲಪಡಿಸುವ ಇಚ್ಛಾಶಕ್ತಿಯನ್ನು ಯಾಕೆ ತೋರಿಸುವುದಿಲ್ಲ? ಮೊದಲು ಈ ರಾಜ್ಯದ ಗುಪ್ತಚರ ಇಲಾಖೆಗಳನ್ನು ವಿರೋಧ ಪಕ್ಷದ ಮೇಲೆ ನಿಗಾ ಇಡುವ, ತಮ್ಮದೇ ಪಕ್ಷದೊಳಗಿರುವ ವಿರೋಧಿಗಳ ನಡೆನುಡಿಗಳನ್ನು ಗಮನಿಸುವ ಕೆಲಸದಿಂದ ವಿಮೋಚಿಸಬೇಕಿದೆ. ವಿಚಾರದ ದೃಷ್ಟಿಯಿಂದ ಸಿದ್ಧರಾಮಯ್ಯನವರು ಹಂತಕ ಮನಸ್ಥಿತಿಯವರಿಗೆ ಬೆಂಬಲ ನೀಡುವುದಿಲ್ಲವೆಂದು ನಂಬಬಹುದಾದರೂ ಕೋಮುವಾದಿಗಳ ಅಟ್ಟಹಾಸವನ್ನು ನಿಗ್ರಹಿಸುವುದರಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಇನ್ನು ದಾದ್ರಿ ಘಟನೆಯ ಹತ್ತು ದಿನಗಳ ನಂತರ ನರೇಂದ್ರ ಮೋದಿಯವರು ಪ್ರತಿಕ್ರಿಯಿಸಿದ್ದಾರೆ. ಈ ಪ್ರತಿಕ್ರಿಯೆಗೆ ಪ್ರಮುಖ ಕಾರಣ ಸಾಹಿತಿಗಳ ಪ್ರಶಸ್ತಿ ವಾಪಸ್ಸಾತಿ. ನೇರವಾಗಿ ದಾದ್ರಿ ಘಟನೆಯನ್ನು ಖಂಡಿಸುವುದಕ್ಕೆ ಇಚ್ಛೆ ಪಡದ ಪ್ರಧಾನಿಗಳು ಅದೊಂದು ದುರದೃಷ್ಟದ ಘಟನೆ, ಮುಸ್ಲಿಮರು ಹಿಂದೂಗಳು ಒಟ್ಟಾಗಿ ಬಡತನದ ವಿರುದ್ಧ ಹೋರಾಡಬೇಕು ಎಂಬ ಮಾತುಗಳನ್ನಾಡಿದ್ದರೆ. ಅವರನ್ನು ಆರಾಧಿಸುವ ಸಂಘಟನೆಗಳು ವಿಷವುಣ್ಣಿಸುವ ಕಾರ್ಯದಲ್ಲಿ ತೊಡಗಿದ್ದಾಗ ಒಟ್ಟಾಗಿ ಬಡತನದ ವಿರುದ್ಧ ಹೋರಾಡುವುದು ಹೇಗೆ? ಸಾಹಿತಿಗಳು ರಾಜಕೀಯ ದುರುದ್ದೇಶದಿಂದ ಪ್ರಶಸ್ತಿ ವಾಪಸ್ಸು ಮಾಡಿದ್ದಾರೆ ಎನ್ನುವುದಕ್ಕೂ ಮರೆಯಲಿಲ್ಲ. ರಾಜಕೀಯ ದುರುದ್ದೇಶವೇ ಇದ್ದರೂ ಪ್ರತಿಭಟನೆಯ ಉದ್ದೇಶ ಸರಿಯಾಗಿಯೇ ಇದೆಯಲ್ಲವೇ? ಪ್ರಶಸ್ತಿ ಹಿಂದಿರುಗಿಸಿದ ಅಶೋಕ್ ವಾಜಪೇಯಿ ಸಾಹಿತಿಗಳು ಪ್ರಭುತ್ವದ ತಪ್ಪುಗಳ ವಿರುದ್ಧವೇ ಇರುತ್ತಾರೆ. ಎಮರ್ಜೆನ್ಸಿ, ಸಿಖ್ ಗಲಭೆ, ಬಾಬ್ರಿ ಮಸೀದಿ ಧ್ವಂಸ, ಗುಜರಾತ್ ಗಲಭೆಯ ಸಂದರ್ಭದಲ್ಲೆಲ್ಲ ಸಾಹಿತಿಗಳು ಪ್ರಭುತ್ವದ ವಿರುದ್ಧ ಪ್ರತಿಭಟಿಸಿದ್ದಾರೆ ಎಂದು ಬರೆಯುತ್ತಾರೆ. ಸಿಖ್ ಗಲಭೆಯಾದಾಗ ಖುಷವಂತ್ ಸಿಂಗ್ ಪ್ರಶಸ್ತಿ ಹಿಂದಿರುಗಿಸಿದ್ದು ಭಕ್ತರಿಗೆ ಹೋಗಲಿ ಪ್ರಧಾನಿಯವರಿಗಾದರೂ ಗೊತ್ತಿರಬೇಕಿತ್ತಲ್ಲ. ಈ ಪ್ರಶಸ್ತಿ, ಅದರ ವಾಪಸ್ಸಾತಿ, ಅದರ ಜೊತೆಜೊತೆಗೇ ಅಂಟಿಕೊಳ್ಳುವ ರಾಜಕೀಯ ಚರ್ಚೆಗಳು ಮುಖ್ಯ ವಿಷಯವನ್ನೇ ಮರೆಮಾಡಿಸುತ್ತಿವೆ.

ಮರೆಯಾಗಿಬಿಡುತ್ತಿರುವ ಮುಖ್ಯವಿಷಯವೆಂದರೆ ಸಮಾಜದಲ್ಲಿ ಅಸಹನೆಯ ಹೆಚ್ಚುವಿಕೆಯ ಸಮನಾಗಿ ಆ ಅಸಹನೆ ಮೂಡಿಸಿದ ಹಿಂಸೆಯನ್ನು ಬೆಂಬಲಿಸುವವರ ಸಂಖೈ ಅಧಿಕವಾಗುತ್ತಿದೆ. ‘ಕಲಬುರ್ಗಿಯವರ ಹತ್ಯೆಯನ್ನು ಖಂಡಿಸುತ್ತೇನೆ. ಆದರೂ ಅವರು ಆ ರೀತಿಯೆಲ್ಲ ಬರೆಯುವ ಮುನ್ನ ಯೋಚಿಸಬೇಕಿತ್ತು’ ಎನ್ನುವ ಧಾಟಿಯಲ್ಲಿ ಮಾತನಾಡುವವರಿಗೂ ‘ಚಾರ್ಲಿ ಹೆಬ್ಡೋ ಪತ್ರಿಕೆಯವರು ಮುಸ್ಲಿಮರನ್ನು ನೋಯಿಸುವ ಕಾರ್ಟೂನುಗಳನ್ನು ಪ್ರಕಟಿಸಬಾರದಿತ್ತು’ ಎನ್ನುವವರಿಗೂ ವ್ಯತ್ಯಾಸವಿದೆಯೇ? ನನಗಂತೂ ಯಾವ ವ್ಯತ್ಯಾಸವೂ ಕಾಣಿಸುತ್ತಿಲ್ಲ. ಸ್ವಾತಂತ್ರ್ಯಕ್ಕೂ ಸ್ವೇಚ್ಛಾಚ್ಛಾರಕ್ಕೂ ಇರುವ ವ್ಯತ್ಯಾಸ ತುಂಬ ಕಡಿಮೆ. ಸ್ವೇಚ್ಛಾಚ್ಛಾರವನ್ನು ವಿರೋಧಿಸಲು ಹಿಂಸೆ ಮಾರ್ಗವಲ್ಲ ಎಂದು ಪ್ರಜಾಪ್ರಭುತ್ವದ ಪ್ರಜೆಗಳಿಗೆ ಅರ್ಥವಾಗಬೇಕು. ಇನ್ನು ದಾದ್ರಿ ಘಟನೆಯನ್ನು ಖಂಡಿಸುತ್ತ ‘ಪಾಪ ಆತನ ಮನೆಯಲ್ಲಿದ್ದದ್ದು ದನದ ಮಾಂಸವಲ್ಲವಂತೆ ಕಣ್ರೀ’ ಎಂದು ಹೇಳುವವರು ಪರೋಕ್ಷವಾಗಿ ದನದ ಮಾಂಸವಿದ್ದಿದ್ದರೆ ಕೊಂದದ್ದು ತಪ್ಪೇನಲ್ಲ ಎಂದು ಹೇಳುತ್ತಿದ್ದಾರೆಯೇ? ಕೊನೆಗೆ ಆ ಇಖ್ಲಾಕ್ ಪಾಕಿಸ್ತಾನೀ ಏಜೆಂಟ್ ಎಂದೆಲ್ಲ ಬರೆಯಲಾಯಿತು. ಆತ ಪಾಕಿಸ್ತಾನಕ್ಕೆ ಹೋಗೇ ಇರಲಿಲ್ಲ ಎಂದು ಪಾಸ್ ಪೋರ್ಟ್ ಸಮೇತ ಕುಟುಂಬದವರು ಮಾಧ್ಯಮದ ಮುಂದೆ ಕೂರಬೇಕಾಯಿತು. ಅಂದಹಾಗೆ ಇಖ್ಲಾಕನ ಮಗ ಭಾರತೀಯ ವಾಯುಪಡೆಯಲ್ಲಿ ಉದ್ಯೋಗಿ. ಹತ್ಯೆಯನ್ನು ಸಮರ್ಥಿಸುವಂತಹ ಮನಸ್ಥಿತಿ ಹೆಚ್ಚುತ್ತಿರುವುದು ಕೊನೆಗೆ ಎಲ್ಲಿಗೆ ಹೋಗಿ ಮುಟ್ಟುತ್ತದೆ?

ಎಲ್ಲಿಗೆ ಹೋಗಿ ಮುಟ್ಟುತ್ತದೆ ಎನ್ನುವುದನ್ನು ಅರಿಯಲು ಮಹಾರಾಷ್ಟ್ರದತ್ತ ಗಮನಹರಿಸಬೇಕು. ಪಾಕಿಸ್ತಾನೀ ಗಾಯಕನೊಬ್ಬನ ಸಮಾರಂಭಕ್ಕೆ ವಿರೋಧ ವ್ಯಕ್ತವಾಗಿ ಆ ಸಮಾರಂಭ ರದ್ದಾಯಿತು. ಪಾಕಿಸ್ತಾನದ ಮಾಜೀ ವಿದೇಶಾಂಗ ಸಚಿವರ ಪುಸ್ತಕವೊಂದರ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಬೇಕಿದ್ದ ಸುದೀಂಧ್ರ ಕುಲಕರ್ಣಿಯವರ ಮೇಲೆ ಶಿವಸೇನೆಯ ಕಾರ್ಯಕರ್ತರು ಮಸಿ ಬಳಿದರು. ವಿಚಲಿತರಾಗದ ಸುದೀಂದ್ರ ಕುಲಕರ್ಣಿ ಆ ಮಸಿ ಹೊತ್ತ ಮುಖದಲ್ಲೇ ಪತ್ರಿಕಾಗೋಷ್ಟಿ ನಡೆಸಿದರು. ಅವರ ಪಕ್ಕದಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವರು! ಭಾರತದ ‘ಸಹಿಷ್ಣುತೆ’ಯ ಪೊಳ್ಳುತನ ವಿದೇಶದಲ್ಲೆಲ್ಲಾ ಪ್ರಚಾರ ಪಡೆಯಲು ಇಷ್ಟು ಸಾಕಲ್ಲವೇ? ಅಂದ ಹಾಗೆ ಈ ಸುದೀಂಧ್ರ ಕುಲಕರ್ಣಿ ಕೂಡ ಒಂದು ಹಂತದಲ್ಲಿ ಬಿಜೆಪಿಯ ಪಾಳಯದಲ್ಲಿದ್ದವರು. ವಾಜಪೇಯಿ, ಅಡ್ವಾಣಿಗೆ ಹತ್ತಿರವಿದ್ದವರು. ಈ ರೀತಿಯ ಅಸಹನೆ ಒಳ್ಳೆಯದಲ್ಲ ಎಂದು ಹೇಳಿದ್ದು ಅಡ್ವಾಣಿ! ರಥಯಾತ್ರೆ, ಬಾಬ್ರಿ ಮಸೀದಿ, ಅಯೋಧ್ಯೆ, ರಾಮಮಂದಿರವೆಂದು ವಿಷದ ಬೀಜ ಬಿತ್ತವರಲ್ಲಿ ಅಡ್ವಾಣಿ ಪ್ರಮುಖರು. ಅವರ ವಿಷ ಬೀಜ ಈಗ ಫಲ ಕೊಡಲಾರಂಭಿಸಿದೆ, ಬೀಜ ಬಿತ್ತಿದ್ದನ್ನೇ ಮರೆತವರು ಈಗ ಮುತ್ಸದ್ಧಿಯಾಗುವ ಪ್ರಯತ್ನ ನಡೆಸಿದ್ದಾರೆ. ಜೈಲಿನಿಂದ ಜಾಮೀನಿನ ಮೇಲೆ ಹೊರಬಂದ ಮಸಿ ಬಳಿದವರಿಗೆ ಶಿವಸೇನೆ ಸತ್ಕಾರ ಮಾಡಿದೆ. ದೇಶದ್ರೋಹಿಗಳಿಗೆ ಇದೇ ಶಿಕ್ಷೆ ಎಂದಬ್ಬರಿಸಿದೆ. ಇದು ತಪ್ಪು ಎಂದ ಬಿಜೆಪಿಯವರಿಗೆ ನರೇಂದ್ರ ಮೋದಿ ಖ್ಯಾತರಾಗಿದ್ದೇ ಗೋದ್ರೋತ್ತರ ಹತ್ಯಾಕಾಂಡದಿಂದ ಸುಮ್ಕಿರಿ ಎಂದು ಅಪಹಾಸ್ಯ ಮಾಡಿದೆ. ದ್ವೇಷಿಸಲೊಂದು ದೇಶವಿದ್ದರೆ ದೇಶಪ್ರೇಮಕ್ಕೆ ಬೆಲೆ ದ್ವೇಷಿಸಲೊಂದು ಧರ್ಮವಿದ್ದರೆ ಧರ್ಮರಕ್ಷಣೆಗೆ ಬೆಲೆ ಎಂದು ನಂಬಿದವರಿಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾರೆ. ದ್ವೇಷವುಂಡವರ ಮನಸ್ಸನ್ನು ನಿಯಂತ್ರಿಸುವುದು ವಿಷ ಬಿತ್ತಿ ಪೊರೆದವರಿಗೂ ಸಾಧ್ಯವಿಲ್ಲ ಎಂದು ರಾಜಕಾರಣಿಗಳಿಗೆ ಮತ್ತವರ ಅಂಧ ಭಕ್ತರಿಗೆ ಶೀಘ್ರವಾಗಿ ಅರಿವಾದರೆ ಒಳ್ಳೆಯದು.

4 comments:

  1. ದೇಶದಲ್ಲಿ ೧೯೭೫ರ ತುರ್ತು ಪರಿಸ್ಥಿತಿಯ ನಂತರ ಇದೇ ಮೊದಲ ಬಾರಿ ಲೇಖಕರು ದೇಶದಲ್ಲಿ ಧಾರ್ಮಿಕ ಮೂಲಭೂತವಾದ ಹಾಗೂ ವೈಚಾರಿಕ ಅಸಹನೆಯ ವಾತಾವರಣದ ವಿರುದ್ಧ ತಮ್ಮ ಪ್ರತಿಭಟನೆ ವ್ಯಕ್ತಪಡಿಸುವ ಸಲುವಾಗಿ ದೊಡ್ಡ ಮಟ್ಟದಲ್ಲಿ ತಮ್ಮ ಪ್ರಶಸ್ತಿಗಳನ್ನು ವಾಪಾಸ್ ಮಾಡುತ್ತಿದ್ದಾರೆ. ದೇಶದಲ್ಲಿ ಇದೀಗ ಸಾಂಸ್ಕೃತಿಕ ಹಾಗೂ ವೈಚಾರಿಕ ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಾಣವಾಗುತ್ತಿದೆ. ಇದಕ್ಕೆ ಕಾರಣ ಕೇಂದ್ರದಲ್ಲಿ ಧಾರ್ಮಿಕ ಮೂಲಭೂತವಾದಿಗಳ ಬೆಂಬಲಕ್ಕಿರುವ ಸರ್ಕಾರ ಸ್ವಾತಂತ್ರ್ಯಾನಂತರ ಪ್ರಥಮ ಬಾರಿಗೆ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವುದು. ಇದು ಧಾರ್ಮಿಕ ಮೂಲಭೂತವಾದಿಗಳಿಗೆ ತಮ್ಮ ಅಜೆಂಡಾವನ್ನು ದೇಶದ ಮೇಲೆ ಹೇರಲು ಸಿಕ್ಕಿದ ಸುವರ್ಣಾವಕಾಶ ಎಂಬ ಮನೋಭಾವನೆ ಮೂಡಿಸಿದೆ. ಜನ ಏನನ್ನು ಬರೆಯಬೇಕು, ಏನು ಬರೆಯಬಾರದು ಎಂದು ಧಾರ್ಮಿಕ ಸಂಘಟನೆಗಳನ್ನು ಕೇಳಿ ಬರೆಯಬೇಕಾದ ಪರಿಸ್ಥಿತಿ ದೇಶದಲ್ಲಿ ಬರುತ್ತಿದೆ. ಇದುವೇ ವೈಚಾರಿಕ ಹಾಗೂ ಸಾಂಸ್ಕೃತಿಕ ತುರ್ತುಪರಿಸ್ಥಿತಿ. ಅದನ್ನೂ ಮೀರಿ ಬರೆದರೆ ಗುಂಡೇಟಿನ/ಸಾವಿನ ಭೀತಿಯಲ್ಲಿಯೇ ಬರೆಯಬೇಕಾದ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗುತ್ತಿದೆ. ಇಂಥ ಪರಿಸ್ಥಿತಿ ಪಾಕಿಸ್ಥಾನ, ಬಾಂಗ್ಲಾದೇಶಗಳಲ್ಲಿ ಮೊದಲಿನಿಂದಲೇ ಇತ್ತು. ಇದೀಗ ಅದೇ ಪರಿಸ್ಥಿತಿ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿಯೂ ನಿರ್ಮಾಣವಾಗುತ್ತಿದೆ. ಲೇಖಕರ ಪ್ರತಿಭಟನೆ ಇದರ ವಿರುದ್ಧ ಇದೆ. ಇದು ನಡೆಯಬೇಕಾದದ್ದೇ. ಇದು ಸಂಪೂರ್ಣ ನ್ಯಾಯೋಚಿತ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಗಳನ್ನು ಎಚ್ಚರಿಸಲು ಅನಿವಾರ್ಯ. ಪ್ರಶಸ್ತಿ ವಾಪಸ್ ಮಾಡುವುದು ಸಮಂಜಸವಲ್ಲ ಎಂಬುದು ಸೂಕ್ತವಲ್ಲ. ಶಿವರಾಮ ಕಾರಂತರು ತುರ್ತು ಪರಿಸ್ಥಿತಿ ವಿರೋಧಿಸಿ ತಮ್ಮ ಪ್ರಶಸ್ತಿ ವಾಪಸ್ ಮಾಡಿದ್ದರು ಎಂಬುದನ್ನು ನಾವು ಜ್ಞಾಪಿಸಿಕೊಳ್ಳಬೇಕಾಗಿದೆ.

    ದೇಶದಲ್ಲಿ ಜನ ತಮ್ಮ ಏನನ್ನು ತಿನ್ನಬೇಕು ಎಂದು ಧಾರ್ಮಿಕ ಮೂಲಭೂತವಾದಿ ಸಂಘಟನೆಗಳನ್ನು ಕೇಳಿ ತಿನ್ನಬೇಕಾದ ಪರಿಸ್ಥಿತಿ ಬಂದರೆ ಅದು ಪ್ರಜಾಪ್ರಭುತ್ವ ದೇಶವಲ್ಲ, ಅದು ಫ್ಯಾಸಿಸ್ಟ್ ದೇಶವಾಗುತ್ತದೆ, ಫ್ಯಾಸಿಸ್ಟ್ ವ್ಯವಸ್ಥೆ ಆಗುತ್ತದೆ. ಇಂಥ ವ್ಯವಸ್ಥೆ ನಿರ್ಮಾಣದ ವಿರುದ್ಧ ಜನರೇ ಎಚ್ಚತ್ತುಕೊಳ್ಳಬೇಕು. ಹೇಡಿಗಳು ಕಳ್ಳತನದಿಂದ ಲೇಖಕರ ಹತ್ಯೆ ಮಾಡುವ ಪರಿಸ್ಥಿತಿ ರೂಪಿಸುತ್ತಿರುವ ಸಂಘಟನೆಗಳನ್ನು ಸರ್ಕಾರ ಮಟ್ಟ ಹಾಕಬೇಕಾಗಿರುವುದು ಉಳಿವಿಗೆ ಅನಿವಾರ್ಯ. ಬಲಪಂಥೀಯ ಉಗ್ರವಾದ ಸ್ವಾತಂತ್ರ್ಯಾನಂತರ ಇದೇ ಮೊದಲಬಾರಿಗೆ ತನ್ನ ಹೆಡೆ ಎತ್ತಿ ಭುಸುಗುದುತ್ತಿದೆ. ಇದನ್ನು ಹತ್ತಿಕ್ಕುವುದು ಇಂದಿನ ಎಲ್ಲ ಸರ್ಕಾರಗಳ ಪ್ರಥಮ ಆದ್ಯತೆ ಆಗಬೇಕಾಗಿದೆ. ಇದನ್ನು ಮಾಡದೇ ಹೋದರೆ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲಾರದು.

    ReplyDelete
    Replies
    1. ಜನರು ಎಚ್ಚೆತ್ತಿಕೊಳ್ಳುತ್ತಿರುವುದು ತಡವಾಗುತ್ತಿದೆ. ತಡವಾದಷ್ಟೂ ಫ್ಯಾಸಿಸ್ಟ್ ಮನೋಭಾವನೆ ಮತ್ತಷ್ಟು ಮಗದಷ್ಟು ಹೆಚ್ಚುತ್ತದೆ. ಬಹುಶಃ ಭಾರತದ ಇವತ್ತಿನ ಪರಿಸ್ಥಿತಿಯಿಂದ ಯಾರಿಗಾದರೂ ಸಂತೋಷವಾಗಿದ್ದರೆ ಅದು ಪಾಕಿಸ್ತಾನಕ್ಕೇ ಇರಬೇಕು. ಕೊನೆಗೂ ನಮ್ ದೊಡ್ಡಣ್ಣ ನಮ್ ಥರಾನೇ ಆಗ್ತಾವ್ರಲ್ಲ ಅಂತ....

      Delete
  2. I wont accept the argument that Religious Intolerance as a phenomena is entirely as a result of Modi and his government. It has existed since a very long time. It is this intolerance and hatred(Hatred a harsh word. But lets call spade a spade) against each other's views that British so neatly exploited. There is also views among historians that British, through their divisive rule created this rift between Hindus and Muslims ,also between Caste Hindus and Harijans. I partly disagree to this. I am of the opinion that British just widened the already existed rift. Some examples.

    1.During the Bengal partition agitation in 1905, which was a precursor to Gandhi's type of struggle, slowly and gradually communal distrust entered. Both sides erred. Leaders like Tilak and Aurabindo made it look like it was a Hindu movement by sloganeering 'Vande Mataram' which hurt muslims (Whethere muslims should get hurt in the first place by vande mataram is a different question). Public celebration of Ganesh utsav did not help the matter.

    2. As a direct consequence, Muslim league was formed in 1906. And in 1909 Minto Morley act was passed. Lord Minto is called the 'Father of communal India' (Or something of that sort)

    3. Dalit and harijan issue could have been permanently solved if Gandhiji had been a little bit more flexible. With Gandhi-Babasaheb pact in Pune , we lost that one critical opportunity to give a permanent justice to the historical blunders of caste discrimination.

    4. It is as a result of this intolerance that India and Pakistan were partitioned and we had to witness such a mammoth tragedy.

    5. It was as a result of such intolerance we lost our father of nation.

    6. Post independent congress has to take complete responsibility for this deteriorating cultural tradition. Its relentless minority appeasement techniques and vote bank politics were the reason institutions like RSS got any prominence in our society.

    Hence I don't blame Modi for the raging intolerance. instead I blame intolerance for Modi.

    If there was no intolerance then there would be no Godhra. And no Godhra would mean no Modi. Its high time that we look inward than blaming a single person.


    ReplyDelete
  3. I know you are not blaming everything on Modi. But some of these scholars are trying to give this impression.

    Kailash Satyarthi has asked all these Scholars who have returned their awards to join him in his movement against Child Trafficking. Lets see how many will respond

    ReplyDelete