ರಾಜ್ಯ ಸರಕಾರ ಕರ್ನಾಟಕದಲ್ಲಿರುವ 1.32 ಕೋಟಿ ಕುಟುಂಬಗಳಿಗೆ ಕಡಿಮೆ ದರದಲ್ಲಿ ಎಲ್.ಇ.ಡಿ ಬಲ್ಬುಗಳನ್ನು ಹಂಚಲು ಉದ್ದೇಶಿಸಿದೆ. ಇಂತಹ ಹೊಸ ಯೋಜನೆಗಳಿಗೆ 'ಪರಿಸರ'ಕ್ಕೆ ಪೂರಕ ಎಂಬ ಹೆಸರಿಟ್ಟುಬಿಟ್ಟರೆ ಸಾರ್ವಜನಿಕವಾಗಿ ಒಪ್ಪಿತವಾಗಿಬಿಡುತ್ತದೆಯೆನ್ನುವುದು 'ಆಳುವವರಿಗೆ' ತಿಳಿದುಬಿಟ್ಟಿದೆ. ಇಡೀ ಕರ್ನಾಟಕದ ತುಂಬೆಲ್ಲ ಎಲ್.ಇ.ಡಿ ಬಲ್ಬುಗಳು ಜಗಮಗಿಸಲು ಪ್ರಾರಂಭಿಸಿದರೆ ಒಟ್ಟು ಸಾವಿರ ಮೆಗಾವ್ಯಾಟ್ ವಿದ್ಯುತ್ ಉಳಿತಾಯವಾಗಿಬಿಡುತ್ತದೆ, ನೋಡಿ ನೋಡಿ ಎಷ್ಟೆಲ್ಲ ಪರಿಸರ ಉಳಿಸಿಬಿಡಬಹುದು ಎಂದು ಪತ್ರಿಕಾ ಹೇಳಿಕೆ ಕೊಡುತ್ತಿದ್ದಾರೆ. ನಿಜಕ್ಕೂ ಇದು ಪರಿಸರ ಪೂರಕ ಕೆಲಸವಾ ಅಥವಾ ಎಲ್.ಇ.ಡಿ ತಯಾರಕ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಯೋಜನೆಯಾ?
ಸದ್ಯಕ್ಕೆ ಎಲ್.ಇ.ಡಿ ಬಲ್ಬಿನ ಬೆಲೆ ಮುನ್ನೂರು ನಾನೂರು ರುಪಾಯಿಗಳಷ್ಟಿದೆ. ಕಂಪನಿಯ ಹೆಸರಿಲ್ಲದ ಬ್ರ್ಯಾಂಡುಗಳು ನೂರು ನೂರೈವತ್ತು ರುಪಾಯಿಗೆ ಸಿಗುತ್ತವಾದರೂ ಅವುಗಳ ಬಾಳಿಕೆಯ ಬಗ್ಗೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ಸರಕಾರ ಹೇಳುತ್ತಿರುವಂತೆ ಎಲ್.ಇ.ಡಿ ಬಲ್ಬುಗಳು ಹಳೆಯ ಇನ್ ಕ್ಯಾಂಡಿಸೆಂಟ್ ಮತ್ತು ಸಿ.ಎಫ್.ಎಲ್ ಬಲ್ಬುಗಳಿಗಿಂತ ಕಡಿಮೆ ವಿದ್ಯುತ್ ಉಪಯೋಗಿಸುತ್ತದೆ ಎನ್ನುವುದು ಸತ್ಯ. ಈ ಎಲ್.ಇ.ಡಿ ಬಲ್ಬುಗಳು ಉಳಿದ ಬಲ್ಬುಗಳಿಗಿಂತ ಹೆಚ್ಚು ಬಾಳಿಕೆ ಬರುತ್ತದೆಯೆನ್ನುವುದು ಕೂಡ ಸತ್ಯ. ಒಂಭತ್ತು ವ್ಯಾಟಿನ ಎಲ್.ಇ.ಡಿ ಬಲ್ಬ್ ಇಪ್ಪತ್ತು ವ್ಯಾಟಿನ ಸಿ.ಎಫ್.ಎಲ್ ಬಲ್ಬಿಗೆ ಸಮ, ಅರವತ್ತು ವ್ಯಾಟಿನ ಇನ್ ಕ್ಯಾಂಡಿಸೆಂಟ್ ಬಲ್ಬಿಗೆ ಸಮ. ಇಷ್ಟೆಲ್ಲ ಪರಿಸರ ಸ್ನೇಹಿಯಾಗಿರುವ ಎಲ್.ಇ.ಡಿ ಬಲ್ಬನ್ನು ಎಲ್ಲರ ಮನೆಗೂ ಕೊಟ್ಟುಬಿಟ್ಟರೆ ಏನು ತಪ್ಪು ಎನ್ನುವ ಪ್ರಶ್ನೆ ಮೂಡದೇ ಇರದು.
ಸದ್ಯದ ಯೋಜನೆಯ ಪ್ರಕಾರ ಸರಕಾರ 6 ಕೋಟಿ ಬಲ್ಬುಗಳನ್ನು ರಿಯಾಯತಿ ದರದಲ್ಲಿ ಕೊಡಲು ಉದ್ದೇಶಿಸಿದೆ. ಕಂಪನಿಗಳ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಒಂದು ಬಲ್ಬಿಗೆ ನೂರು ರುಪಾಯಿ ನಿಗದಿಗೊಳಿಸುತ್ತದಂತೆ. ಅಲ್ಲಿಗೆ ಇದು ಒಟ್ಟು ಆರು ನೂರು ಕೋಟಿ ರುಪಾಯಿಗಳ ವ್ಯವಹಾರ. ಬೀದಿ ದೀಪಗಳನ್ನೆಲ್ಲ ಬದಲಿಸುತ್ತಾರಂತೆ. ಬೀದಿ ದೀಪಗಳಿಗೆ ಹೆಚ್ಚಿನ ಸಾಮರ್ಥ್ಯದ ಬಲ್ಬುಗಳು ಬೇಕಿರುವುದರಿಂದ ಅವುಗಳ ವೆಚ್ಚ ಮತ್ತಷ್ಟು ಹೆಚ್ಚಿದ್ದೀತು. ಒಂದು ಮನೆಗೆ ರಿಯಾಯತಿ ದರದಲ್ಲಿ ಗರಿಷ್ಟ ಹತ್ತು ಬಲ್ಬುಗಳನ್ನು ನೀಡುತ್ತಾರಂತೆ. ಆ ಲೆಕ್ಕದಲ್ಲಿ 1.32 ಕೋಟಿ ಮನೆಗಳು x 100 ಎಂದರೆ ಸಾವಿರದ ಮುನ್ನೂರ ಇಪ್ಪತ್ತು ಕೋಟಿ ಖರ್ಚಾಗುತ್ತದೆ. ಇಷ್ಟೆಲ್ಲ ಖರ್ಚು ಮಾಡಿದ ನಂತರ ಉಳಿಯುವುದು ಸಾವಿರ ಮೆಗಾವ್ಯಾಟ್ ವಿದ್ಯುತ್.
ಆರು ಕೋಟಿ ಎಲ್.ಇ.ಡಿ ಬಲ್ಬುಗಳನ್ನು ಮನೆಗಳಿಗೆ ಕೊಟ್ಟ ನಂತರ ಹಳೆಯ ಆರು ಕೋಟಿ ಬಲ್ಬುಗಳು ಕಸ ಸೇರುತ್ತದೆ. ಅವುಗಳನ್ನು ಹೇಗೆ ನಿರ್ವಹಿಸಲಾಗುತ್ತದೆ? ದಿಡೀರ್ ಅಂತ ಎಸೆಯಲ್ಪಟ್ಟ ಆರು ಕೋಟಿ ಬಲ್ಬುಗಳು ಪರಿಸರಕ್ಕೆ ಯಾವ ರೀತಿಯಿಂದ ಪೂರಕ? ಈ ಆರು ಕೋಟಿ ಬಲ್ಬುಗಳನ್ನು ಮರುಉಪಯೋಗಿಸುವಂತೆ ಮಾಡುವ, ಈ ಬಲ್ಬು ಕಸವನ್ನು ನಿರ್ವಹಿಸುವ ಯಾವ ಯೋಚನೆಯನ್ನೂ ಮಾಡದೆ ಆರು ಕೋಟಿ ಎಲ್.ಇ.ಡಿ ಬಲ್ಬುಗಳನ್ನು ರಿಯಾಯತಿ ದರದಲ್ಲಿ ನೀಡುವ ಹಿಂದಿನ ಮರ್ಮವೇನು? ಹೋಗಲಿ ಈ ಬಲ್ಬೆಂಬ ತಂತ್ರಜ್ಞಾನ ಎಲ್.ಇ.ಡಿ ಬಲ್ಬುಗಳೊಂದಿಗೆ ನಿಂತುಹೋಗುತ್ತದಾ? ನಿಮಗೆ ನೆನಪಿರಬೇಕು ನಾಲ್ಕೈದು ವರುಷಗಳ ಹಿಂದೆ ಸಿ.ಎಫ್.ಎಲ್ ಬಲ್ಬುಗಳ 'ಹವೆ' ಜೋರಾಗಿತ್ತು. ಸಿ.ಎಫ್.ಎಲ್ ಬಲ್ಬುಗಳು ಕಡಿಮೆ ವಿದ್ಯುತ್ ಉಪಯೋಗಿಸುತ್ತದೆ, ಎಲ್ಲೆಲ್ಲೂ ಸಿ.ಎಫ್.ಎಲ್ ಬಲ್ಬುಗಳೇ ರಾರಾಜಿಸಬೇಕು ಎಂದು ಹೇಳಲಾಗುತ್ತಿತ್ತು. ಎಲ್ಲೆಡೆ ಸಿ.ಎಫ್.ಎಲ್ ಬಲ್ಬುಗಳು ರಾರಾಜಿಸುವುದಕ್ಕೆ ಮುಂಚೆಯೇ ಮತ್ತಷ್ಟು ಕಡಿಮೆ ವಿದ್ಯುತ್ ಉಪಯೋಗಿಸುವ ಎಲ್.ಇ.ಡಿ ಬಲ್ಬುಗಳು ಕಾಲಿಟ್ಟಿವೆ. ಇನ್ನೈದು ವರುಷಕ್ಕೆ ಇನ್ನಷ್ಟು ಉನ್ನತ ತಂತ್ಜಜ್ಞಾನದ ಬಲ್ಬುಗಳು ಬರುವುದಿಲ್ಲವೆಂದು ಏನು ಗ್ಯಾರಂಟಿ? ಮತ್ತಷ್ಟು ವಿದ್ಯುತ್ ಉಳಿಸುವ ಬಲ್ಬುಗಳು ಬಂದರೆ ಈ ಆರು ಕೋಟಿ ಎಲ್.ಇ.ಡಿ ಬಲ್ಬುಗಳನ್ನು ಏನು ಮಾಡಬೇಕು? ಮತ್ತಷ್ಟು ಕಸ ಸೇರಿಸಿ ಪರಿಸರಕ್ಕೆ ಪೂರಕ ಎಂಬ ಹಣೆಪಟ್ಟಿ ಕಟ್ಟಬೇಕಾ?
ಹೊಸದಾಗಿ ಮನೆ ಕಟ್ಟುವವರು ಎಲ್.ಇ.ಡಿ ಬಲ್ಬುಗಳನ್ನೇ ಹೆಚ್ಚು ಉಪಯೋಗಿಸುತ್ತಿದ್ದಾರೆ; ಮನೆಯಲ್ಲಿರುವ ಹಳೆಯ ಬಲ್ಬುಗಳು ಹಾಳಾದಾಗ ಅದರ ಜಾಗಕ್ಕೆ ಎಲ್.ಇ.ಡಿ ಬಲ್ಬುಗಳ ಬರಲಿ. ಹೆಚ್ಚು ವಿದ್ಯುತ್ ಬೇಡುವ ಹಳೆಯ ಬಲ್ಬುಗಳ ಉತ್ಪಾದನೆಯೇ ನಿಂತುಬಿಟ್ಟರೆ ಮತ್ತಷ್ಟು ಒಳ್ಳೆಯದು. ಹಳೆಯ ಬಲ್ಬು ಹಾಳಾಗುವಷ್ಟರಲ್ಲಿ ಹೊಸ ತಂತ್ರಜ್ಞಾನದ ಬಲ್ಬು ಬಂದರೆ ಜನರು ಅದನ್ನು ಉಪಯೋಗಿಸುವಂತಾಗಲಿ. ಅದು ಬಿಟ್ಟು ಆರು ಕೋಟಿ ಬಲ್ಬುಗಳನ್ನು ಹಂಚುವುದು ಪರಿಸರಕ್ಕೆ ಪೂರಕ ಎನ್ನುವುದೆಲ್ಲ ಒಪ್ಪುವಂತಹ ಮಾತಲ್ಲ. ಪರಿಸರಕ್ಕೆ ಇದರಿಂದ ಹಾನಿಯೇ ಹೆಚ್ಚು.
No comments:
Post a Comment