Dr Ashok K R
ಕಳೆದ ತಿಂಗಳು ಮಂಡ್ಯ ಜಿಲ್ಲೆಯ ಹುಲಿವಾನದಲ್ಲಿ ಜಾತಿ ಗಲಭೆ ನಡೆಯುತ್ತದೆ. ಪತ್ರಿಕೆಗಳಲ್ಲಿ ಸಣ್ಣ ಕಾಲಮ್ಮುಗಳಲ್ಲಿ ಅಂತರಜಾತಿ ವಿವಾಹದಿಂದ ಸವರ್ಣೀಯರು ಮತ್ತು ದಲಿತರ ನಡುವೆ ಘರ್ಷಣೆ ಎಂದು ವರದಿಯಾಗುತ್ತದೆ. ಪತ್ರಿಕಾ ವರದಿಗಳು ಅಂತರಜಾತಿ ವಿವಾಹವಾಗದೇ ಇದ್ದಿದ್ದರೆ ಗಲಭೆ ನಡೆಯುತ್ತಿರಲಿಲ್ಲ ಎನ್ನುವ ದನಿಯಲ್ಲಿರುತ್ತವೆ. ಮಂಡ್ಯದ ಸನ್ಮಾನ್ಯ ಶಾಸಕರಾದ ಮಂತ್ರಿಗಳೂ ಆದ ಅಂಬರೀಶ್ ರವರು ಹತ್ತು ದಿನದ ವಿರಾಮದ ನಂತರ ಹುಲಿವಾನಕ್ಕೆ ಹೋಗಿ ಬರುತ್ತಾರೆ. ದೊಡ್ಡ ಮಟ್ಟದ ಗಲಭೆಯೊಂದು ಸುದ್ದಿಯೇ ಆಗದೆ ಸದ್ದೂ ಮಾಡದೆ ದೌರ್ಜನ್ಯಕ್ಕೊಳಗಾದ ದಲಿತರು ಸೂರು ಒಡೆದುಹೋದ ಮನೆಯೊಳಗೆ ಕುಳಿತು ದುಃಖಿಸುವಂತೆ ಮಾಡಿದೆ. ಕೇಸುಗಳನ್ನು ಮೈಮೇಲೆ ಹಾಕಿಸಿಕೊಂಡರೂ ಶ್ರೇಷ್ಟತೆಯ ವ್ಯಸನದಲ್ಲಿ ಮುಳುಗಿಹೋಗಿರುವ ಒಕ್ಕಲಿಗರು ಮತ್ತು ಅವರ ಮರೆಯಲ್ಲಿನ ಲಿಂಗಾಯತರು ತಾವು ಮಾಡಿದ ‘ಘನಕಾರ್ಯಕ್ಕೆ’ ಮೀಸೆ ತಿರುವುತ್ತಿದ್ದಾರೆ.
ಹುಲಿವಾನದಲ್ಲಿ ನಡೆದದ್ದಾದರೂ ಏನು?
ಹುಲಿವಾನದಲ್ಲೇ ವಾಸವಿರುವ ದಲಿತ ಹುಡುಗ ಮತ್ತು ಲಿಂಗಾಯತ ಹುಡುಗಿ ಪರಸ್ಪರ ಪ್ರೀತಿಸುತ್ತಿದ್ದರು. ಧೈರ್ಯ ಮಾಡಿ ಲಿಂಗಾಯತ ಹುಡುಗಿಯೇ ತನ್ನ ಮನೆಯಲ್ಲಿ ಪ್ರೀತಿಯ ವಿಷಯವನ್ನು ತಿಳಿಸಿದ್ದಾಳೆ. ಶ್ರೇಷ್ಟತೆಯ ವ್ಯಸನದಲ್ಲಿ ಬ್ರಾಹ್ಮಣರನ್ನು ಬಿಟ್ಟರೆ ಲಿಂಗಾಯತರೇ ತಾನೆ? ಪ್ರೀತಿಗೇ ಮನೆಗಳಲ್ಲಿ ವಿರೋಧವಿರುತ್ತೆ, ಇನ್ನು ದಲಿತ ಹುಡುಗನನ್ನು ಪ್ರೀತಿಸುವುದೆಂದರೆ ಲಿಂಗ ಮೆಚ್ಚುವುದೇ? ಮನೆಯಲ್ಲಿ ರಂಪ ರಾಮಾಯಣವಾಗಿದೆ. ಹುಲಿವಾನದ ಲಿಂಗಾಯತರಿಗೆ ನೇರವಾಗಿ ದಲಿತರನ್ನು ಎದುರು ಹಾಕಿಕೊಳ್ಳುವುದು ಕಷ್ಟ. ಕಾರಣ ಹುಲಿವಾನದಲ್ಲಿ ದಲಿತರ ಸಂಖೈಗೆ ಹೋಲಿಸಿದರೆ ಲಿಂಗಾಯತರೇ ಅಲ್ಪಸಂಖ್ಯಾತರು. ಇನ್ನು ಊರಿನಲ್ಲಿ ಬಹುಸಂಖ್ಯಾತರೆಂದರೆ ಒಕ್ಕಲಿಗರು. ಲಿಂಗಾಯತರಿಂದ ಕೀಳೆಂದು ಅನ್ನಿಸಿಕೊಂಡರೂ ದಲಿತರಿಗಿಂತ ಮೇಲೆಂಬ ವ್ಯಸನವನ್ನು ನರನರದಲ್ಲೂ ತುಂಬಿಕೊಂಡಿರುವ ಒಕ್ಕಲಿಗರಿಗೆ ತಮ್ಮ ‘ಪೌರುಷ’ ತೋರಿಸಲು ಇದಕ್ಕಿಂತ ಒಳ್ಳೆಯ ಸಂದರ್ಭ ದಕ್ಕುವುದೆ? ಹಿಂದೂ ಧರ್ಮದ ಚಾತುರ್ವರ್ಣ ಪದ್ಧತಿಯನ್ನು ಉಳಿಸಿ ಬೆಳೆಸುವ ಸುಸಂದರ್ಭವನ್ನು ಬಿಡುವುದುಂಟೆ. ಲಿಂಗಾಯತ ಹುಡುಗಿಯನ್ನು ರಾಜಿ ಪಂಚಾಯಿತಿಗೆ ಕರೆಯಲಾಯಿತು. ಊರ ಪ್ರಮುಖರ ಮುಂದೆಯೂ ನಾನು ಪ್ರೀತಿಸಿದ ಹುಡುಗನನ್ನೇ ಮದುವೆಯಾಗೋದು ಎನ್ನುವ ಹುಡುಗಿಯ ಧೈರ್ಯ ಶ್ರೇಷ್ಟರಿಗೆ ಸಿಟ್ಟು ಬರಿಸದೇ ಇದ್ದೀತೆ. ಸರಿ ದಲಿತರಿಗೆ ‘ಬುದ್ಧಿ’ ಕಲಿಸಬೇಕೆಂದು ಈ ಬುದ್ಧಿಗೇಡಿಗಳು ನಿರ್ಧರಿಸಿದ್ದಾಯಿತು.
ಕತ್ತಲಾಗುತ್ತಿದ್ದಂತೆ ದಲಿತ ಕೇರಿಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಯಿತು. ಒಕ್ಕಲಿಗ ಮತ್ತು ಲಿಂಗಾಯತ ಹುಡುಗರು ಒಂದಷ್ಟು ಜನ ದಲಿತ ಕೇರಿಗೆ ಮುಖ ಮುಚ್ಚಿಕೊಂಡು ಹೋಗಿ ‘ನಮ್ ಮನೆ ಹುಡುಗೀರ ಮೇಲೆ ಕಣ್ಣು ಹಾಕಿದ್ರೆ ಅದು ಕಿತ್ಬಿಡ್ತೀವಿ ಇದು ಕಿತ್ಬಿಡ್ತೀವಿ’ ಎಂದು ಕೂಗಾಡಿದರು. ದಲಿತರು ಪೋಲೀಸರಿಗೆ ಫೋನಿನ ಮುಖಾಂತರ ದೂರು ನೀಡಿದರು. ಪೋಲೀಸರ ಆಗಮನವಾಯಿತು. ಘಟನೆಯ ಗಂಭೀರತೆಯನ್ನು ಅರಿತು ಒಂದು ವ್ಯಾನ್ ಪೋಲೀಸ್ ತುಕಡಿಯನ್ನು ದಲಿತರ ಕೇರಿಯ ಬಳಿಯೇ ನಿಲ್ಲಿಸಲಾಯಿತು. ದಲಿತ ಹುಡುಗ – ಲಿಂಗಾಯತ ಹುಡುಗಿಯನ್ನು ಪೋಲೀಸ್ ಠಾಣೆಗೆ ಕರೆಸಿ ಮಾತನಾಡಲಾಯಿತು. ಇಬ್ಬರೂ ಜೊತೆಗೆ ಬಾಳುವ ನಿರ್ಧಾರ ಮಾಡಿಯಾಗಿತ್ತು. ಪ್ರೌಢ ವಯಸ್ಸಿನವರಿಬ್ಬರು ಪ್ರೀತಿಸಿ ಮದುವೆಯಾಗಿ ಜೊತೆಯಲ್ಲಿರುತ್ತೇವೆಂದರೆ ಪೋಲೀಸರು ಏನು ಮಾಡಲು ಸಾಧ್ಯ. ‘ಸರಿ ಹೋಗ್ರಪ್ಪ. ಮದುವೆಯಾಗಿ ಚೆನ್ನಾಗಿರಿ’ ಎಂದು ಹರಸಿ ಕಳಿಸಿದ್ದಾರೆ. ಇಬ್ಬರೂ ಊರಿಗೆ ಬರದೆ ಪರಾರಿಯಾಗಿದ್ದಾರೆ. ಹುಲಿವಾನದ ಶ್ರೇಷ್ಟರಿಗೆ ಈ ವಿಷಯ ತಿಳಿದು ಮತ್ತಷ್ಟು ಕ್ರುದ್ಧರಾಗಿದ್ದಾರೆ.
ಗದ್ದೆಗೆ ಹೋಗುವ ದಲಿತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಸ್ಸು ಹತ್ತುತ್ತಿದ್ದ ದಲಿತ ಹುಡುಗಿಗೆ ‘ಏನೇ ಕರೀ…..’ ಎಂದು ತಮ್ಮ ಸಂಸ್ಕೃತಿಯನ್ನು ಹೊರಗೆಡವಿದ್ದಾರೆ. ದಲಿತರನ್ನು ಬಸ್ಸಿಗೆ ಹತ್ತಿಸಿಕೊಂಡ ಕಾರಣಕ್ಕೆ ಡ್ರೈವರನಿಗೆ ಎರಡೇಟು ಬಿಗಿದಿದ್ದಾರೆ. ಇವೆಲ್ಲ ಘಟನೆಗಳ ಜೊತೆಗೆ ಒಳಗೊಳಗೆ ಮಸಲತ್ತು ಮಾಡಲು ಪ್ರಾರಂಭಿಸಿದ್ದಾರೆ ಶ್ರೇಷ್ಟ ಒಕ್ಕಲಿಗರು ಮತ್ತು ಲಿಂಗಾಯತರು. ಮಧ್ಯಾಹ್ನ ಮೂರಕ್ಕೆ ಊರಿನ ಎಲ್ಲಾ ಅಂಗಡಿಗಳು ಬಾಗಿಲು ಹಾಕಲಾರಂಭಿಸಿದವು. ಬಂದ್ ವಾತಾವರಣ ಸೃಷ್ಟಿಯಾಯಿತು. ದಲಿತ ಕೇರಿಯ ಮುಂದಿದ್ದ ಪೋಲೀಸ್ ತುಕಡಿಗೂ ಅಸಹನೆಯ ವಾತಾವರಣ ಗಮನಕ್ಕೆ ಬಂದಿದೆ. ಮತ್ತಷ್ಟು ಪೋಲೀಸರನ್ನು ಆಗಲೇ ಕರೆಸಿದ್ದರೆ ಅನಾಹುತಗಳು ತಪ್ಪುತ್ತಿತ್ತೇನೋ. ಪೋಲೀಸರಿದ್ದಾಗ ಯಾರೇನು ಗಲಭೆ ಮಾಡಲು ಸಾಧ್ಯ ಎಂದು ಅತಿ ವಿಶ್ವಾಸಕ್ಕೆ ಒಳಗಾಗಿಬಿಟ್ಟರಾ?
ಕತ್ತಲಾಗುತ್ತಿದ್ದಂತೆ ಮತ್ತೆ ದಲಿತ ಕೇರಿಯ ವಿದ್ಯುತ್ ತಂತಿಯನ್ನು ಕಡಿಯಲಾಗಿದೆ. ನೂರಿನ್ನೂರು ಜನರ ಗುಂಪು ದಲಿತ ಕೇರಿಗೆ ಮತ್ತೊಂದು ಬದಿಯಿಂದ ನುಗ್ಗಿದೆ. ಇರುವ ಎಪ್ಪತ್ತು ಚಿಲ್ಲರೆ ಮನೆಗಳ ಮೇಲೆ ತಮ್ಮ ‘ಪೌರುಷ’ ತೋರಿಸಿದ್ದಾರೆ. ದಿಂಡುಗಲ್ಲುಗಳಿಂದ ಮನೆಯ ಮಾಡನ್ನು ಒಡೆಯಲಾಗಿದೆ. ಬಾಗಿಲುಗಳನ್ನು ಒಡೆದು ಹಾಕಿ ಹೆಂಗಸು ಮಕ್ಕಳು ಬಾಣಂತಿಯೆನ್ನದೆ ಹಲ್ಲೆ ನಡೆಸಿದ್ದಾರೆ. ವಾಹನಗಳನ್ನು ಪುಡಿ ಪುಡಿ ಮಾಡಿದ್ದಾರೆ. ಹುಲ್ಲಿನ ಮೆದೆಗಳಿಗೆ ಬೆಂಕಿ ಹಚ್ಚಿದ್ದಾರೆ. ‘ಹೊಲೆ ಸೂಳೆಮಕ್ಳಾ. ನಮ್ ಹೆಣ್ ಮಕ್ಳ ಮೇಲೆ ಕಣ್ಣು ಹಾಕಿದ್ರೆ ಒಬ್ರನ್ನೂ ಜೀವಂತ ಉಳಿಸಲ್ಲ’ ಎಂದು ಅರಚಿದ್ದಾರೆ. ಗಲಭೆ ಪ್ರಾರಂಭವಾಗುತ್ತಿದ್ದಂತೆ ಪೋಲೀಸರು ಗಲಭೆಕೋರರಿಗೆ ಎದುರಾಗಿದ್ದಾರೆ. ಕಡಿಮೆ ಸಂಖೈಯಲ್ಲಿದ್ದ ಪೋಲೀಸರು ಮತಿಗೆಟ್ಟ ಗಲಭೆಕೋರರಿಗೆ ಭಯ ಹುಟ್ಟಿಸಿಲ್ಲ. ಪೋಲೀಸರ ಮೇಲೂ ಹಲ್ಲೆ ನಡೆಸಿದ್ದಾರೆ. ಇಷ್ಟರಲ್ಲಿ ಪೋಲೀಸ್ ಠಾಣೆಗೆ ಮತ್ತೆ ಸುದ್ದಿ ತಲುಪಿದೆ. ಪೋಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೇ ಖುದ್ದು ದೊಡ್ಡ ತುಕಡಿಯೊಂದಿಗೆ ಹುಲಿವಾನದ ಕಡೆಗೆ ಹೊರಟಿದ್ದಾರೆ. ಯಾರೋ ಇನ್ಸ್ ಪೆಕ್ಟರ್ ಬಂದಿರಬೇಕು ಎಂದುಕೊಂಡ ಮತಾಂಧರು ಊರು ಪ್ರವೇಶಿಸಿದ ಪೋಲೀಸ್ ವಾಹನವನ್ನು ತಡೆಗಟ್ಟಿ ‘ಇಲ್ಲಿ ಒಕ್ಕಲಿಗರದೇ ನಡೆಯೋದು. ಮುಚ್ಕೊಂಡು ಹಿಂದಕ್ಕೋಗಿ’ ಎಂದಿದ್ದಾರೆ. ಯಾರ್ಯಾರು ಗಲಾಟೆ ಮಾಡಿದ್ದಾರೋ ಎಲ್ರನ್ನೂ ಹುಡುಕಿ ಹುಡುಕಿ ಎಳೆತನ್ನಿ ಎಂದಿದ್ದಾರೆ ಆ ಹಿರಿಯ ಅಧಿಕಾರಿ.
ಒಕ್ಕಲಿಗರ ಲಿಂಗಾಯತರ ಕೇರಿಗಳಿಗೆ ನುಗ್ಗಿದ ಪೋಲೀಸರು ಮತಾಂಧರನ್ನೆಲ್ಲಾ ಒಂದು ಸುತ್ತು ಎಳೆದೆಳೆದು ತಂದು ಬಾರಿಸಿದ್ದಾರೆ. ಗಲಭೆಯಲ್ಲಿ ಭಾಗವಹಿಸದ ಅಮಾಯಕರಿಗೂ ಅಲ್ಲೊಂದು ಇಲ್ಲೊಂದು ಏಟು ಬಿದ್ದಿದೆ. ಈ ಅಮಾಯಕರಿಗೆ ಅವತ್ತು ನಡೆಯುವ ದಲಿತ ದೌರ್ಜನ್ಯದ ಅರಿವಿತ್ತಾ? ದಲಿತ ಸಂಘಟನೆಯವರು ಹುಲಿವಾನಕ್ಕೆ ಬಂದು ನೆರವು ನೀಡಿದ್ದಾರೆ. ಪ್ರಕರಣದ ಗಂಭೀರತೆಯನ್ನರಿತು ಜಿಲ್ಲಾಧಿಕಾರಿ ಮಧ್ಯರಾತ್ರಿ ಹುಲಿವಾನಕ್ಕೆ ಆಗಮಿಸಿದ್ದಾರೆ. ‘ಅಲ್ಲವರಿಬ್ಬರು ಮದುವೆಯಾಗಿ ಹನಿಮೂನ್ ಮಾಡ್ತಿದ್ರೆ ಇಲ್ಲೀ ಗಾಂಡುಗಳು ಹೊಡೆದಾಡ್ಕೊಂಡು ಕುಂತವ್ರೆ’ ಎಂದು ಒಂದೇ ಸಾಲಿನಲ್ಲಿ ಜಿಲ್ಲಾಧಿಕಾರಿಗಳಿಗೆ ಅವತ್ತಿನ ಪರಿಸ್ಥಿತಿಯನ್ನು ವಿವರಿಸಲಾಯಿತು!
ಪ್ರೀತಿಯ ಕಾರಣಕ್ಕೆ ಗಲಭೆಗಳು ನಡೆಯುವುದು ನಮ್ಮಲ್ಲಿ ತುಂಬಾ ಅಪರೂಪದ ಸಂಗತಿಯೇನಲ್ಲ. ಆದರೆ ಈ ಘಟನೆಗೆ ಪ್ರತಿಕ್ರಿಯಿಸುವುದರಲ್ಲಿ ಒಂದು ಸಮಾಜ ಹೇಗೆ ವಿಫಲವಾಗಿದೆ ಎನ್ನುವುದು ಸಮ ಸಮಾಜದ ಭವಿಷ್ಯತ್ತಿನ ಆಶಾಭಾವನೆಯನ್ನು ಉಳಿಯಗೊಡುವುದಿಲ್ಲ. ಮತ್ತು ಈ ರೀತಿಯ ಪ್ರತಿಕ್ರಿಯೆಗೆ ಮುಖ್ಯ ಕಾರಣ ಹುಲಿವಾನದಲ್ಲಿ ಮತ್ತು ಮಂಡ್ಯದಲ್ಲಿ ಬಹುಸಂಖ್ಯಾತರಾಗಿರುವ ಒಕ್ಕಲಿಗರನ್ನು ಎದುರು ಹಾಕಿಕೊಳ್ಳುವುದು ಯಾಕೆ ಎನ್ನುವ ಪ್ರಶ್ನೆ. ಮಂಡ್ಯದ ಶಾಸಕ ಅಂಬರೀಷ್ ರವರಾಗಲೀ ಸಂಸದ ಪುಟ್ಟರಾಜುರವರಾಗಲೀ ಘಟನೆ ನಡೆದ ಮರುದಿನವೇ ಹುಲಿವಾನಕ್ಕೆ ಹೋಗಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಯತ್ನ ಮಾಡುವುದಿಲ್ಲ. ಪರಿಸ್ಥಿತಿಯನ್ನು ತಿಳಿಗೊಳಿಸುವುದೆಂದರೆ ಒಕ್ಕಲಿಗರ ಮತ್ತವರ ಬೆಂಬಲ ಪಡೆದ ಲಿಂಗಾಯತರ ದಬ್ಬಾಳಿಕೆಯನ್ನು ವಿರೋಧಿಸುವುದು. ಬರೀ ಲಿಂಗಾಯತರ ದೌರ್ಜನ್ಯವಾಗಿದ್ದರೆ ಎಲ್ಲರೂ ದೌಡಾಯಿಸಿಬಿಡುತ್ತಿದ್ದರು, ಕಾರಣ ಇಲ್ಲಿರುವುದೇ ಮೂವತ್ತು ನಲವತ್ತು ಲಿಂಗಾಯತ ಕುಟುಂಬಗಳು. ಬಹುಸಂಖ್ಯಾತರಾಗಿರುವ ಒಕ್ಕಲಿಗರ ದಬ್ಬಾಳಿಕೆಯನ್ನು ವಿರೋಧಿಸಿ ಮತ ಬ್ಯಾಂಕಿಗ್ಯಾಕೆ ತೊಂದರೆ ಮಾಡಿಕೊಳ್ಳಬೇಕು ಎಂದು ಸುಮ್ಮನೆ ಇದ್ದರು. ಅಂದಹಾಗೆ ಹುಲಿವಾನವೇನು ಮಂಡ್ಯದ ಮೂಲೆಯಲ್ಲೆಲ್ಲೋ ಇರುವ ಊರೂ ಅಲ್ಲ. ಮಂಡ್ಯ ಬಸ್ ಸ್ಟಾಪಿನಲ್ಲಿ ನಿಂತು ‘ಯಾಕ್ರಲಾ ಬಡ್ಡೆತ್ತವಾ’ ಎಂದು ಅಂಬರೀಷ್ ಕೂಗುವಷ್ಟರಲ್ಲಿ ಹುಲಿವಾನ ಬಂದುಬಿಡುತ್ತದೆ. ಜನ ಪ್ರತಿನಿಧಿಗಳದು ಈ ಕತೆಯಾದರೆ ನಮ್ಮ ಮುಖ್ಯವಾಹಿನಿಯ ಮಾಧ್ಯಮಗಳ್ಯಾವುವೂ ಇಂತಹುದೊಂದು ಹೀನಕೃತ್ಯವನ್ನು ಹೆಚ್ಚೇನು ಸುದ್ದಿ ಮಾಡಲಿಲ್ಲ. ಸವರ್ಣೀಯರು ಮತ್ತು ದಲಿತರ ನಡುವಿನ ಜಗಳ ಎಂದು ಬಹುತೇಕ ಪತ್ರಿಕೆಗಳು ಬರೆದಿದ್ದವು. ಡೆಕ್ಕನ್ ಹೆರಾಲ್ಡಿನಲ್ಲಿ ಲಿಂಗಾಯತರು ಮತ್ತು ದಲಿತರ ನಡುವಿನ ಗಲಭೆ ಎಂದು ಬರೆದಿದ್ದರೇ ಹೊರತು ದೌರ್ಜನ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಒಕ್ಕಲಿಗ ಹೆಸರನ್ನು ಮರೆತುಬಿಟ್ಟಿದ್ದರು. ಈ ಎಲ್ಲಾ ಪತ್ರಿಕೆಗಳು ದಲಿತರ ಮೇಲಿನ ಹಲ್ಲೆಯನ್ನು ಪ್ರಮುಖವಾಗಿಸುವುದರ ಬದಲಾಗಿ ಪ್ರೇಮ ಪ್ರಕರಣದಿಂದ ಈ ಕೃತ್ಯ ನಡೆಯಿತು ಎಂದು ಎಲ್ಲಾ ಅಪವಾದವನ್ನು ದಲಿತರ ತಲೆಗೇ ಕಟ್ಟುವಂತೆ ಬರೆದಿರುವುದು ಎಷ್ಟರ ಮಟ್ಟಿಗೆ ಸರಿ? ದೂರದ ಸಿರಿಯಾ ದೇಶದ ಮಗು ಸತ್ತ ಫೋಟೋವನ್ನು ಮುಖಪುಟದಲ್ಲಿ ಪ್ರಕಟಿಸುವ ನಮ್ಮ ಮಾಧ್ಯಮಗಳು ನಮ್ಮದೇ ಹಳ್ಳಿಯ ದಲಿತ ಮಹಿಳೆಯೊಬ್ಬಳು ಒಕ್ಕಲಿಗರು ಮತ್ತು ಲಿಂಗಾಯತರು ಒಡೆದು ಹಾಕಿದ ಮನೆಯ ಬಾಗಿಲಿನ ಮುಂದೆ ಚಿಂತಾಕ್ರಾಂತರಾಗಿ ಕುಳಿತಿರುವುದನ್ನು ಮುಖಪುಟದಲ್ಲಿರಲಿ ಒಳಪುಟಗಳಲ್ಲೂ ಪ್ರಕಟಿಸುವುದಿಲ್ಲವಲ್ಲ. ಅರಚುವ ದೃಶ್ಯ ಮಾಧ್ಯಮಗಳೂ ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲವಲ್ಲ. ಪರದೇಶದ ಮಗುವಿಗಿಂತ ನಮ್ಮ ದೇಶದ ದಲಿತರು ಕೀಳಾಗಿ ಹೋದರೇ?
No comments:
Post a Comment