ಅಶೋಕ್ ವಾಜಪೇಯಿ.
ಮೂಲ ಲೇಖನ: ದಿ ಹಿಂದೂ.
ಕನ್ನಡಕ್ಕೆ: ಡಾ.ಅಶೋಕ್.ಕೆ.ಆರ್.
ಹಿಂದಿ, ಉರ್ದು ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಯುವ ನಾಲ್ಕು ತಲೆಮಾರಿಗೆ ಸೇರಿದ ನಾವು ನಾಲ್ವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪ್ರತಿಭಟನೆಯ ಸಂಕೇತವಾಗಿ ಹಿಂದಿರುಗಿಸಿದೆವು. ನಾವು ಒಂಟಿಯಾಗುಳಿದಿಲ್ಲ; ಇತರೆ ಭಾಷೆಗಳ ಅನೇಕರು, ಉಳಿದ ಕಲಾ ಪ್ರಕಾರದವರು ನಮ್ಮಷ್ಟೇ ಕ್ರುದ್ಧರಾಗಿದ್ದಾರೆ, ಕೋಪಗೊಂಡಿದ್ದಾರೆ ಮತ್ತು ಭೀತರಾಗಿದ್ದಾರೆ. ನಮ್ಮದೇ ಆದ ರಾಜಕೀಯ ದೃಷ್ಟಿಕೋನಗಳಿರುವುದು ಹೌದಾದರೂ ನಾವ್ಯಾರೂ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಆದರೆ ಭಾರತದ ರಾಜಕೀಯ ಸಾಗುತ್ತಿರುವ ಹಾದಿಯ ಬಗ್ಗೆ ನಮಗೆ ಚಿಂತೆಯಾಗುತ್ತಿದೆ. ವೈಚಾರಿಕ ಚಿಂತನೆ ಮತ್ತು ಮೌಲ್ಯಗಳು, ಪ್ರತಿಭಟನೆಗಳು, ಪರಸ್ಪರ ನಂಬುಗೆಗಳೆಲ್ಲದರ ಮೇಲೆ ದಿನದ ಲೆಕ್ಕದಲ್ಲಿ ಹಲ್ಲೆಯಾಗುತ್ತಿದೆ. ಎಲ್ಲಾ ರೀತಿಯ ಹಿಂಸಾಕೃತ್ಯಗಳು ಹೆಚ್ಚುತ್ತಿವೆ. ಅದಕ್ಕೆ ಧರ್ಮ ಮತ್ತು ಕೋಮುವಾದ, ಕೊಳ್ಳುಬಾಕತನ ಮತ್ತು ಜಾಗತೀಕರಣ, ಜಾತಿ ಮತ್ತು ಸಂಸ್ಕೃತಿ, ಸಾಮಾಜಿಕ ಮತ್ತು ವೈಯಕ್ತಿಕ – ಹೀಗೆ ಎಲ್ಲವೂ ಹಿಂಸೆಯ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ನಿಷೇಧ, ಅನುಮಾನ, ಭಾವನೆಗಳನ್ನು ಘಾಸಿಗೊಳಿಸುವ ಕೆಲಸವನ್ನು ಶಕ್ತಿ ಕೇಂದ್ರಗಳು ಕಾನೂನಿನ ಬಗ್ಗೆ ಕೊಂಚವೂ ಭಯವಿಲ್ಲದೆ ಮಾಡುತ್ತಿವೆ. ಪ್ರಜಾಪ್ರಭುತ್ವ ನೀಡುವ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ್ಯ, ನಂಬುಗೆ, ವೈಯಕ್ತಿಕತೆಯನ್ನು ಕೀಳಾಗಿ ಕಂಡು ಅದರಲ್ಲಿ ವಿನಾಕಾರಣ ತಲೆತೂರಿಸುವವರ ಸಂಖೈ ಹೆಚ್ಚುತ್ತಿದೆ.
ಹೊಸ ರೀತಿಯ ರಾಜಕೀಯ ಬೂಟಾಟಿಕೆ ಕೇಂದ್ರದಲ್ಲಿ ನೆಲೆ ಕಾಣುತ್ತಿದೆ. ಸ್ವಾತಂತ್ರ್ಯ, ಜಾತ್ಯತೀತತೆ, ಸಹನೆಯ ಬಗ್ಗೆ ಸಂವಿಧಾನಾತ್ಮಕವಾಗಿ ಸರಿಯಾದ ಹೇಳಿಕೆಗಳನ್ನು ನೀಡುತ್ತ ಸಂವಿಧಾನ ಮತ್ತು ಕಾನೂನನ್ನು ಮುರಿದು ವರ್ತಿಸುವವರ ಬಗ್ಗೆ ಸಂಪೂರ್ಣ ಮೌನದಿಂದಿರುವ ಪ್ರವೃತ್ತಿ ಕಾಣುತ್ತಿದೆ. ಸ್ವತಂತ್ರವಾಗಿ ಜೀವಿಸುವುದಕ್ಕೆ ನಾಗರೀಕರನಿಗಿಂದು ಹಕ್ಕಿಲ್ಲ. ಅವರು ಅನುಮತಿ ಕೊಟ್ಟರೆ ನೀವು ಜೀವಿಸಬಹುದು, ಅವರು ಒಪ್ಪಿದರೆ ನೀವು ಸ್ವತಂತ್ರವಾಗಿರಬಹುದು.
ಇವೆಲ್ಲವನ್ನೂ ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ಮಾಡಲಾಗುತ್ತಿದೆ. ಭಾರತೀಯ ಪರಂಪರೆಗೆ ಇದಕ್ಕಿಂತ ದೊಡ್ಡ ಹಾನಿ ಅಥವಾ ಅನುಮಾನ ಮತ್ತೊಂದಿರಲಾರದು. ಪ್ರಪಂಚದ ಅತಿ ಪುರಾತನ ಪರಂಪರೆಯಲ್ಲೊಂದಾಗಿರುವ ಇದು ನಾಗರೀಕ ಭಾರತಕ್ಕೆ ಸೇರಿದೆ. ಬಹುಶಃ ಪ್ರಪಂಚದ ಅತಿ ದೊಡ್ಡ ಪರಂಪರೆ ಇದು. ಭಾಷೆ, ಧರ್ಮ, ವೇಷಭೂಷಣ, ಆಚಾರ ವಿಚಾರ, ಆಹಾರ, ಕಲೆ ಇನ್ನೂ ಇತ್ಯಾದಿ ಇತ್ಯಾದಿಗಳೆಲ್ಲದರಲ್ಲೂ ಇಲ್ಲಿ ಬಹುತ್ವವಿದೆ. ಭಾರತದಲ್ಯಾವುದೂ ಏಕತ್ವವಾಗಿ ಉಳಿದಿಲ್ಲ. ಎಲ್ಲವೂ ಬಹುತ್ವವಾಗಿ ಪರಿವರ್ತನೆಯಾಗಿಬಿಡುತ್ತದೆ ಅಥವಾ ಬಹುತ್ವದ ಭಾಗವಾಗುತ್ತದೆ. ದೇವರಾಗಲಿ, ಭಾಷೆಯಾಗಲಿ, ತತ್ವಜ್ಞಾನವಾಗಲೀ, ಭಕ್ತಿ ಪೂಜೆಯಾಗಲೀ, ನಂಬಿಕೆ – ಮೌಲ್ಯಗಳಾಗಲೀ ಇಲ್ಲಿ ಏಕತ್ವವನ್ನು ಉಳಿಸಿಕೊಂಡಿಲ್ಲ, ಕಾಲ ಸರಿದಂತೆ ಬಹುತ್ವವನ್ನು ಆಲಂಗಿಸಿಕೊಂಡಿವೆ. ಈ ಬಹುತ್ವವನ್ನು ವಿರೋಧಿಸುವ, ಅದನ್ನು ಏಕವಾಗಿ ಪರಿವರ್ತಿಸಿದರೆ ಸಮಾಜವನ್ನು ನಿಯಂತ್ರಿಸುವುದು ಸುಲಭ ಎಂದು ನಂಬುವ ಶಕ್ತಿಗಳು ಯಾವಾಗಲೂ ನಮ್ಮ ನಡುವೆ ಇದ್ದೇ ಇವೆ. ಚರ್ಚೆ, ಅಸಮ್ಮತಿ, ವಾದ ವಿವಾದ, ಪರಿಶೀಲನೆ, ಹೊಸ ಅನ್ವೇಷಣೆಯಲ್ಲವೂ ನಮ್ಮ ಪರಂಪರೆಯ ಭಾಗ. ಭಾರತೀಯರು ಚರ್ಚೆಗೆ, ಅಸಮ್ಮತಿಗೆ, ಅಸಹನೆಗೆ ಯಾವತ್ತೂ ಭಯಪಟ್ಟವರಲ್ಲ.
ನೈತಿಕತೆಯನ್ನು ಮೀರಿದಾಗ ದೇವರನ್ನೂ ಪ್ರಶ್ನಿಸಿ ಶಿಕ್ಷಿಸಲಾಗಿದೆ. ಸ್ವಾತಂತ್ರೋತ್ತರ ಭಾರತದಲ್ಲೂ ಭಾರತೀಯ ಸಾಹಿತ್ಯ ಹೆಚ್ಚಾಗಿ ಪ್ರಭುತ್ವದ ವಿರುದ್ಧವೇ ನಿಂತಿದೆ. ಎಮರ್ಜೆನ್ಸಿ, ಸಿಖ್ ದಂಗೆ, ಬಾಬರಿ ಮಸೀದಿಯ ಧ್ವಂಸ, ಪಂಜಾಬ್ ಭಯೋತ್ಪಾದನೆ, ನಂದಿಗ್ರಾಮ ಹಿಂಸಾಚಾರ, ಆದಿವಾಸಿ ಪ್ರದೇಶಗಳಲ್ಲಿ ನಕ್ಸಲ್ ಮತ್ತು ಸರಕಾರೀ ಹಿಂಸಾಚಾರ, ಗುಜರಾತ್ ಹಿಂಸಾಚಾರಗಳೆಲ್ಲವೂ ಬರಹಗಾರರನ್ನು, ಕಲಾವಿದರನ್ನು ಪ್ರಭುತ್ವದ ವಿರುದ್ಧ ಪ್ರತಿಭಟನೆಗೆ ಇಳಿಯುವಂತೆ ಮಾಡಿದೆ; ಸಾಮಾಜಿಕ ಚೌಕಟ್ಟಿಗೆ, ಕೋಮುಸಾಮರಸ್ಯಕ್ಕೆ, ಕ್ರಿಯಾಶೀಲ ಬದುಕಿಗೆ ಆಗಿರುವ ಹಾನಿಯನ್ನು ಖಂಡಿಸುವಂತೆ ಮಾಡಿದೆ. ಪ್ರತಿಭಟನೆಗಿಳಿದು ಖಂಡಿಸದಿರುವುದು ಕರ್ತವ್ಯವನ್ನು ಮರೆತಂತೆ. ಒಳ್ಳೆಯದಕ್ಕೋ ಕೆಟ್ಟದಕ್ಕೋ ಈ ಕ್ರಿಯಾಶೀಲ ಸಮುದಾಯವನ್ನು ಸಮಾಜದ ಆತ್ಮಸಾಕ್ಷಿಯನ್ನು ಕಾಪಿಡುವರೆಂದು ನಂಬಿದ್ದೇವೆ. ನಮ್ಮಲ್ಲಿ ಕೆಲವರು ಶಕ್ತಿಕೇಂದ್ರ ಎದುರಿಗೆ ಸತ್ಯವನ್ನೇ ನುಡಿಯುವ ಉನ್ನತ ಪರಂಪರೆಗೆ ಅಂಟಿಕೊಂಡಿದ್ದೇವೆ. ಮತ್ತು ಆ ಕಾರಣಕ್ಕಾಗಿಯೇ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪ್ರತಿಭಟನೆಯ ಸಂಕೇತವಾಗಿ ಹಿಂದಿರುಗಿಸುತ್ತಿದ್ದೇವೆ. ಸ್ವಾತಂತ್ರ್ಯಹರಣ ಹೆಚ್ಚುತ್ತಿದೆ ಎಂದು ಸಾರ್ವಜನಿಕರ ಗಮನಕ್ಕೆ ತರುವ ಸಲುವಾಗಿ ಈ ಪ್ರತಿಭಟನೆ; ಬರಹಗಾರರಾದ, ಕಲಾವಿದರಾದ, ಪ್ರಗತಿಪರರಾದ ನಾವು ಇದರ ಬಗ್ಗೆ ಚಿಂತಿತರಾಗಿದ್ದೇವೆ.
No comments:
Post a Comment