Dr Ashok K R
ದೃಶ್ಯ 1:
ಪುಟ್ಟ ಹುಡುಗನನ್ನು ಸಂದರ್ಶನಕಾರರು ಮಾತನಾಡಿಸುತ್ತಿರುತ್ತಾರೆ. ಬಾಗಿಲ ಹೊರಗೆ ಗೋಡೆಗೊರಗಿಕೊಂಡು ನಿಂತಿರುತ್ತಾನೆ ಹುಡುಗ. ನಿಮ್ಮ ಊರು ಬಿಟ್ಟು ಇಲ್ಲಿಗ್ಯಾಕೆ ಬಂದೆ ಎನ್ನುತ್ತಾನೆ ಸಂದರ್ಶಕ. ‘ನಮ್ಮ ಮನೆ ಅಂಗಡಿಗೆಲ್ಲ ಬೆಂಕಿ ಹಚ್ಚಿಬಿಟ್ಟಿದ್ದರು. ಅದಕ್ಕೆ ಇಲ್ಲಿಗೆ ಬಂದೆ’.
‘ಶಾಲೆಗೆ ಹೋಗುತ್ತಿದ್ದಾ ಅಲ್ಲಿ’
‘ಹ್ಞೂ’
‘ಈಗ ಹೋಗ್ತಿಲ್ವಾ ಶಾಲೆಗೆ’
‘ಇಲ್ಲ’
‘ಯಾಕೆ’
ಹುಡುಗ ಒಂದರೆಕ್ಷಣ ಯೋಚಿಸುತ್ತಾನೆ ‘ಹೋಗ್ತೀನಿ ಇನ್ಮೇಲೆ’ ಎಂದ್ಹೇಳಿ ಒಳಗೋಡುತ್ತಾನೆ. ಒಂದೇ ಕೋಣೆಯ ಮನೆಯಲ್ಲಿ ಅಡುಗೆ ಮಾಡುತ್ತಿರುತ್ತಾಳೆ ಅಮ್ಮ. ‘ಅಮ್ಮ ಅಮ್ಮ ನಾನು ಶಾಲೆಗೆ ಹೋಗ್ತೀನಲ್ವಾ’ ಎಂದು ಕೇಳುತ್ತಾನೆ. ಅಮ್ಮನ ಬಳಿ ಸರಿಯಾದ ಉತ್ತರವಿರುವುದಿಲ್ಲ.
ದೃಶ್ಯ 2:
ರೈತರ ಸಂಘಟನೆಯ ಮುಖಂಡನೊಡನೆ ಮಾತುಕತೆ. ‘ಕಬ್ಬಿಗೆ ಬೆಲೆ ಸಿಕ್ಕಿಲ್ಲವಲ್ಲ ಯಾಕೆ?’
‘ಪ್ರತಿ ವರ್ಷ ಸರಿಯಾದ ಬೆಲೆ ಸಿಗುತ್ತಿರಲಿಲ್ಲ. ಹೋರಾಟ ಮಾಡುತ್ತಿದ್ದೋ. ಕಾರ್ಖಾನೆಯವರು ನಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳುತ್ತಿದ್ದರು’
‘ಈಗ’
‘ಈಗೆಲ್ಲಿ ಗಲಭೆ ನಡೆದ ನಂತರ ರೈತರೆಲ್ಲ ಮುಸ್ಲಿಂ ಜಾಟ್, ಹಿಂದೂ ಜಾಟ್ ಆಗಿಬಿಟ್ಟಿದ್ದಾರೆ. ರೈತ ಹೋರಾಟ ಹಳ್ಳಹಿಡಿದಿದೆ. ಮೊದಲು ಮುಸ್ಲಿಮರು ಅಲ್ಲಾಹೋ ಅಕ್ಬರ್ ಅಂದ್ರೆ ಹಿಂದೂ ಹರಹರ ಮಹಾದೇವ್ ಅಂತ ಪ್ರತಿಕ್ರಿಯಿಸುತ್ತಿದ್ದ. ಈಗ ಹರಹರ ಮಹಾದೇವ್ ಅಷ್ಟೇ ಉಳಿದಿದೆ. ಅದೂ ಇಲ್ಲ ಹರಹರ ಮೋದಿ ಅಷ್ಟೇ ಉಳಿದಿದೆ.
ಗಲಭೆಗೆ ಬಲಿಯಾದ ಬಾಲ್ಯ |
ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಡೆದ ಕೋಮುಗಲಭೆಯ ಬಗ್ಗೆ ನಕುಲ್ ಸಿಂಗ್ ಸಾಹ್ನಿ ತೆಗೆದಿರುವ ‘ಮುಜಾಫರ್ ನಗರ್ ಬಾಕೀ ಹೈ’ ಸಾಕ್ಷ್ಯಚಿತ್ರದ ಎರಡು ದೃಶ್ಯಗಳಿವು. ಇಡೀ ಕೋಮುಗಲಭೆಯಿಂದ ಅನ್ಯಾಯಕ್ಕೊಳಗಾದವರಾರೆಂದು ಈ ಎರಡೇ ದೃಶ್ಯದಲ್ಲಿ ತೋರಿಸಿಬಿಡುತ್ತಾರೆ. ಬಾಲ್ಯ ಕಳೆದುಕೊಂಡ ಮಕ್ಕಳು, ಹಕ್ಕಿನ ಹೋರಾಟ ಕಳೆದುಕೊಂಡ ರೈತರು ಇಡೀ ಕೋಮುಗಲಭೆಯೆಂಬ ಪೂರ್ವನಿಯೋಜಿತ ಹಿಂಸಾ ನಾಟಕದಿಂದ ನೊಂದವರು. ಕೋಮುಗಲಭೆಯ ಸಂದರ್ಭವನ್ನನುಸರಿಸಿ ತೆಗೆಯುವ ಸಾಕ್ಷ್ಯಚಿತ್ರಗಳು ಒಂದು ಧರ್ಮದ ಪರವಾಗಿ ಮತ್ತೊಂದು ಧರ್ಮದ ವಿರುದ್ಧವಾಗಿ ವಾದ ಮಂಡಿಸಿಬಿಡುವ ಸಾಧ್ಯತೆಗಳೇ ಹೆಚ್ಚು. ತಮಗೆ ಬೇಕಾದವರ ಮಾತುಗಳನ್ನಷ್ಟೇ ಚಿತ್ರೀಕರಿಸಿಕೊಂಡು ತಮ್ಮಲ್ಲಿರುವ ಸ್ಥಾಪಿತ ಸತ್ಯಕ್ಕೆ ಮತ್ತಷ್ಟು ಪುರಾವೆಗಳನ್ನು ಸೃಷ್ಟಿಸಿಕೊಳ್ಳುವುದು ಸುಲಭದ ಕೆಲಸ. ಮನಸ್ಸಿನಲ್ಲಿ ಸ್ಥಾಪಿತವಾದ ಸತ್ಯಗಳನ್ನೆಲ್ಲ ತೊಡೆದುಹಾಕಿ ಹೊಡೆದವರ ಹೊಡೆಸಿಕೊಂಡವರನ್ನೆಲ್ಲಾ ಚಿತ್ರಿಸಿ ಕಣ್ಣಿಗೆ ಕಾಣಿಸುವ ಸತ್ಯದ ಹಿಂದಿರುವ ಸತ್ಯಗಳನ್ನು ಹುಡುಕಿ ತೆಗೆಯುವ ಕೆಲಸವನ್ನು ಈ ಸಾಕ್ಷ್ಯಚಿತ್ರ ಮಾಡಿದೆ.
ಧರ್ಮ ರಕ್ಷಿಸುವ ಕೆಲಸ... |
ಮುಜಾಫರ್ ನಗರ ಗಲಭೆಯಲ್ಲಿ ಹಿಂದೂಗಳು ಹೊಡೆಯುವವರಾಗಿದ್ದರು, ಮುಸ್ಲಿಮರು ಹೊಡೆಸಿಕೊಂಡವರಾಗಿದ್ದರು. ಬಹುತೇಕ ಎಲ್ಲಾ ನಿರಾಶ್ರಿತರ ಶಿಬಿರಗಳು ಮುಸ್ಲಿಮರದೇ ಆಗಿತ್ತು. ಒಂದೇ ಒಂದು ನಿರಾಶ್ರಿತ ಶಿಬಿರ ಹಿಂದೂಗಳಿಗಿತ್ತು. ಅಲ್ಲಿಗೆ ಮುಸ್ಲಿಮರು ತಮ್ಮ ಕೈಲಾದ ಮಟ್ಟಿಗೆ ಹಿಂಸೆಯಲ್ಲಿ ಪಾಲ್ಗೊಂಡಿದ್ದು ನಿಚ್ಚಳವಾಗಿತ್ತು. ಆ ಹಿಂದೂ ನಿರಾಶ್ರಿತ ಶಿಬಿರದಲ್ಲಿದ್ದವರೆಲ್ಲ ಕೂಲಿ ನಾಲಿ ಮಾಡುತ್ತಿದ್ದ ದಲಿತರು. ಇನ್ನು ಮುಸ್ಲಿಂ ನಿರಾಶ್ರಿತ ಶಿಬಿರಗಳಲ್ಲೂ ಹೆಚ್ಚಿನ ಸಂಖೈಯಲ್ಲಿದ್ದಿದ್ದು ಕೂಲಿ ಕಾರ್ಮಿಕರೇ. ಐವತ್ತು ಚಿಲ್ಲರೆ ಬಾಗಿಲಿದ್ದ ಮನೆಯ ಒಡೆಯರು, ಸಣ್ಣ ಪುಟ್ಟ ಅಂಗಡಿ ನಡೆಸುತ್ತಿದ್ದವರು ಕೂಡ ಬೀದಿಗೆ ಬಿದ್ದಿದ್ದರು. ಒಂದು ಕೋಮುಗಲಭೆಗೆ ಎರಡೂ ಕೋಮಿನ ಜನರ ತಪ್ಪುಗಳಿರುವುದೇ ಅಧಿಕ. ಮುಜಾಫರ್ ನಗರದಲ್ಲೂ ಹಾಗೆಯೇ ಆಗಿತ್ತೆ?
ಎಳೆಎಳೆಯಾಗಿ ಕೋಮುರಾಜಕಾರಣದ ಬಿಡಿಸುತ್ತಾ ಸಾಗುತ್ತದೆ ಸಾಕ್ಷ್ಯಚಿತ್ರ. ಮುಜಾಫರ್ ನಗರದ ಗಲಭೆಗೆ ಆರು ತಿಂಗಳ ಹಿಂದೆಯವರೆಗೂ ಆ ಪ್ರದೇಶದಲ್ಲಿನ ಪ್ರಮುಖ ಪತ್ರಿಕೆಗಳು ರಾಜಕೀಯದ, ಸಮಾಜದ ಸಂಕಟಗಳ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸುತ್ತಿರುತ್ತವೆ. ಆರು ತಿಂಗಳಿನಿಂದ ಬಹುತೇಕ ಪತ್ರಿಕೆಗಳಲ್ಲಿ ‘ಒಂದು ಕೋಮಿನ ಹುಡುಗ ಮತ್ತೊಂದು ಕೋಮಿನ ಹುಡುಗಿಯನ್ನು ಚುಡಾಯಿಸಿದ’ ಎನ್ನುವುದೇ ವಿವಿಧ ರೀತಿಯಲ್ಲಿ ಮರುಪ್ರಕಟವಾಗುತ್ತಿರುತ್ತದೆ. ಅಷ್ಟೊಂದು ಪ್ರಕರಣಗಳು ನಡೆದವಾ ಎಂದು ಗಮನಿಸಿದರೆ ಇಲ್ಲವೆಂಬ ಉತ್ತರ ಸಿಗುತ್ತದೆ. ಇದರ ಜೊತೆಜೊತೆಗೆ ಲವ್ ಜಿಹಾದ್ ಎಂಬ ಭೂತವನ್ನು ತೋರಿಸಿ ಬೆದರಿಸಲಾಗುತ್ತದೆ. ಹಿಂದೂ ಸಂಘಟನೆಯೊಂದರ ಮುಖಂಡನನ್ನು ಇದರ ಬಗ್ಗೆ ಸಂದರ್ಶಿಸಿದಾಗ ಆತ ಲವ್ ಜಿಹಾದ್ ಇದೆ ಎನ್ನುತ್ತಾನೆ. ‘ಸರಿ. ಲವ್ ಜಿಹಾದ್ ಇಂದ ತೊಂದರೆಗೊಳಗಾದ ಒಂದು ಹುಡುಗಿಯ ಕುಟುಂಬವನ್ನು ಪರಿಚಯಿಸಿ’ ಎಂದು ಸಂದರ್ಶನಕಾರ ಕೇಳಿಕೊಂಡಾಗ ತನ್ನ ಶಿಷ್ಯರಿಗೆ ಹಲವು ಫೋನ್ ಮಾಡುತ್ತಾನೆ. ಆ ಹುಡುಗಿ ಈಗ ಇಲ್ಲ, ಅವರ ಕುಟುಂಬ ಊರು ಬಿಟ್ಟಿದೆ, ಅವರು ಮಾತನಾಡಲು ತಯಾರಿಲ್ಲ ಎಂಬಂತಹ ಉತ್ತರಗಳೇ ದೊರಕುತ್ತವೆ. ಒಟ್ಟಿನಲ್ಲಿ ಒಂದು ಗಲಭೆಗೆ ಬೇಕಾದ ಎಲ್ಲಾ ಪೂರ್ವ ತಯಾರಿ ಮುಜಾಫರ್ ನಗರದ ವಿವಿಧ ಭಾಗಗಳಲ್ಲಿ ನಿರಂತರವಾಗಿ ನಡೆಯುತ್ತಿರುತ್ತದೆ. ರಾಜಕೀಯ ಭಾಷಣಗಳಲ್ಲಿ ಎಲ್ಲರೂ ಪರಧರ್ಮ ನಿಂದನೆಯನ್ನೇ ಪ್ರಮುಖವಾಗಿಸಿಕೊಂಡುಬಿಡುತ್ತಾರೆ. ಕೊನೆಗೆ ಮುಸ್ಲಿಂ ಹುಡುಗನೊಬ್ಬ ಹಿಂದೂ ಹುಡುಗಿಯನ್ನು ಚುಡಾಯಿಸಿದ್ದನ್ನು ನೆಪವಾಗಿಸಿಕೊಂಡು ಮುಸ್ಲಿಂ ಹುಡುಗನನ್ನು ಸಾಯುವವರೆಗೆ ಹೊಡೆಯುತ್ತಾರೆ. ಇತ್ತ ಮುಸ್ಲಿಮರು ಆ ಹಿಂದೂ ಹುಡುಗರಲ್ಲಿಬ್ಬರನ್ನು ಹೊಡೆದು ಸಾಯಿಸುತ್ತಾರೆ. ಕೋಮುಗಲಭೆ ಹೊತ್ತಿಕೊಳ್ಳಲು ಇದಕ್ಕಿಂತ ಹೆಚ್ಚು ಕಾರಣ ಬೇಕೆ? ಅದೂ ಗಲಭೆಯ ಆಟವಾಡಲು ಭೂಮಿಕೆ ಸಿದ್ಧವಾಗಿರುವಾಗ? ಕೋಮುಗಲಭೆಯ ಜ್ವಾಲೆಗಳು ಎಲ್ಲೆಡೆ ಹರಡಲು ವಾಟ್ಸಪ್ಪು ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಹುಡುಗರಿಬ್ಬರನ್ನು ಸಾಯಿಸಿದ ವೀಡಿಯೋ ಕೂಡ ಪ್ರಮುಖ ಕಾರಣ. ಬಿಜೆಪಿಯ ನಾಯಕರೂ ಈ ವೀಡಿಯೋವನ್ನು ಹಂಚುತ್ತಾರೆ. ಅಸಲಿಗೆ ಆ ವೀಡಿಯೋ ಪಾಕಿಸ್ತಾನದಲ್ಯಾವಗಲೋ ಚಿತ್ರಿತವಾಗಿದ್ದು ಎಂಬ ಸಂಗತಿ ತಿಳಿಯುವುದರೊಳಗೆ ಹಿಂಸೆ ವ್ಯಾಪಕವಾಗಿ ಸಾವಿರಾರು ಜನರು ನಿರಾಶ್ರಿತರಾಗುತ್ತಾರೆ. ಒಂದು ಊರಿನ ಬೀದಿಯಲ್ಲಿನ ಎರಡು ಅಂಗಡಿಯ ಮೇಲೆ ಹಿಂದೂ ಹೆಸರಿದೆ. ಮಧ್ಯದ ಅಂಗಡಿಯ ಮೇಲೆ ಮುಸ್ಲಿಂ ಹೆಸರಿದೆ. ಹಿಂದೂ ಅಂಗಡಿಗಳು ಸುರಕ್ಷಿತವಾಗಿದ್ದರೆ ಮುಸ್ಲಿಂ ಅಂಗಡಿ ಸುಟ್ಟು ಕರಕಾಲಗಿರುವ ದೃಶ್ಯ ಇಡೀ ಮುಜಾಫರ್ ನಗರ ಗಲಭೆಯಲ್ಲಿ ಹಾನಿಗೀಡಾದವರು ಯಾರು ಎನ್ನುವುದನ್ನು ತಿಳಿಸಿಬಿಡುತ್ತದೆ.
ಒಂದು ಬದಲಾವಣೆಗೆ ಪ್ರಯತ್ನಿಸುವವರು..... |
ಸಂತ್ರಸ್ತರ ಗೋಳು, ರಾಜಕಾರಣಿಗಳ ಕಪಟ ಮಾತುಗಳು, ಮತಾಂಧ ಸಂಘಟನೆಯ ಕಾರ್ಯಕರ್ತರ ಅಟ್ಟಹಾಸದ ನಡುವೆ ಅಲ್ಲಲ್ಲಿ ಇದ್ದಕ್ಕಿದ್ದಂತೆ ರೈತ, ಕಬ್ಬು, ಆಲೆಮನೆ, ಸಕ್ಕರೆ ಕಾರ್ಖಾನೆಗಳನ್ನು ತೋರಿಸುತ್ತಾರೆ. ಕೋಮುಗಲಭೆಯಲ್ಲಿ ರೈತನ ಚಿತ್ರಣವ್ಯಾಕೆ ಎನ್ನುವುದಕ್ಕೆ ಉತ್ತರ ಸಾಕ್ಷ್ಯಚಿತ್ರ ಸಾಗಿದಂತೆ ತಿಳಿಯುತ್ತದೆ. ರೈತನಾಗಿದ್ದ ರೈತನಲ್ಲಿ ಮುಸ್ಲಿಂ ರೈತ ಹಿಂದೂ ರೈತ ಎಂಬ ಭಿನ್ನಾಭಿಪ್ರಾಯ ಮೂಡುತ್ತದೆ. ಜೊತೆಜೊತೆಯಾಗಿದ್ದವರೇ ಹೊಡೆದಾಡಿಕೊಳ್ಳುತ್ತಾರೆ. ಧರ್ಮಭೇದವಿಲ್ಲದೇ ಒಂದಾಗಿದ್ದ ರೈತ ಸಂಘಟನೆಗಳು ಧರ್ಮಾಧಾರಿತವಾಗಿ ವಿಭಜಿತವಾಗಿ ಬಿಟ್ಟ ಮೇಲೆ ಎಲ್ಲಿಯ ರೈತ ಹೋರಾಟ? ‘ಗಲಭೆಯಿಂದ ಹೆಚ್ಚು ಲಾಭ ಪಡೆದುಕೊಂಡಿದ್ದು ಸಕ್ಕರೆ ಕಾರ್ಖಾನೆಗಳು. ಅವರು ಕೊಟ್ಟಷ್ಟೇ ದುಡ್ಡಿಗೆ ನಾವೀಗ ಕಬ್ಬು ಹೊಡೆಯಬೇಕು. ಯಾಕೆಂದರೆ ನಮ್ಮಲ್ಲೀಗ ಹೋರಾಟವಿಲ್ಲ. ಮುಸ್ಲಿಂ ರೈತ ಬಂದರೆ ಹಿಂದೂ ಬರೋದಿಲ್ಲ, ಹಿಂದೂ ಬಂದರೆ ಮುಸ್ಲಿಂ ಬರೋದಿಲ್ಲ’ ಎಂದೊಬ್ಬ ಬೆಳೆಗಾರ ಹೇಳುವ ದೃಶ್ಯ ಒಂದು ಗಲಭೆಯ ದುರ್ಬಾಹುಗಳು ಎಲ್ಲಿಯವರೆಗೆ ಚಾಚಲು ಸಾಧ್ಯ ಎಂದು ತಿಳಿಸುತ್ತದೆ. ಅಯೋಧ್ಯಾ ಗಲಭೆಯ ಸಂದರ್ಭದಲ್ಲೂ ಶಾಂತವಾಗಿದ್ದ ಹಳ್ಳಿಗಳಲ್ಲಿ ಈ ಬಾರಿ ಗಲಭೆ ನಡೆಯಿತು. ಇದೆಲ್ಲದರ ಲಾಭ ಪಡೆದಿದ್ಯಾರು?
ಇವೆಲ್ಲದರ ಆಯೋಜಕ ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳು ಎಂದು ನಿಸ್ಸಂಶಯವಾಗಿ ಹೇಳಬಹುದು. ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶಕ್ಕೆ ಪ್ರಾಮುಖ್ಯತೆ ಜಾಸ್ತಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಹತ್ತು ಸ್ಥಾನಗಳನ್ನಷ್ಟೇ ಗಳಿಸಿದ್ದ ಬಿಜೆಪಿ ಈ ಎಲ್ಲ ಗಲಭೆಯ ನಂತರ ನಡೆದ ಚುನಾವಣೆಯಲ್ಲಿ ಬರೋಬ್ಬರಿ ಎಪ್ಪತ್ತು ಸ್ಥಾನಗಳಲ್ಲಿ ಗೆದ್ದು ಬೀಗಿತು. ಅದು ನಡೆಸಿದ ಕೋಮುಗಲಭೆಯ ರಾಜಕೀಯ ಧರ್ಮಾಧಾರಿತವಾಗಿ ಹಿಂದೂಗಳೆಲ್ಲರೂ ಬಿಜೆಪಿಗೆ ಮತ ಹಾಕುವಂತೆ ಮಾಡಿತು. ಮುಸ್ಲಿಮರ ಪರ ಎಂಬ ಸೋಗಿನ ಸಮಾಜವಾದಿ ಪಕ್ಷ ನಿರಾಶ್ರಿತ ಶಿಬಿರಗಳಲ್ಲಿರುವ ಜನರ ಸಂಕಷ್ಟಗಳನ್ನು ಪರಿಹರಿಸುವ ಕೆಲಸ ಮಾಡುವುದನ್ನು ಬಿಟ್ಟು ನಿರಾಶ್ರಿತ ಶಿಬಿರಗಳನ್ನೇ ರಾತ್ರೋರಾತ್ರಿ ಬೀಳಿಸಿ ನಿರಾಶ್ರಿತರನ್ನು ಮತ್ತೊಮ್ಮೆ ಬೀದಿಗೆ ತಳ್ಳಿದರು. ‘ದೀದಿ ಒಮ್ಮೆ ಗಲಭೆಯಲ್ಲಿ ತೊಂದರೆಗೊಳಗಾದವರನ್ನು ಭೇಟಿಯಾಗಿಬಿಟ್ಟಿದ್ದರೆ ಎಲ್ಲೆಡೆಯೂ ಅವರೇ ಗೆಲ್ಲುತ್ತಿದ್ದರು. ಅವರ ಸುತ್ತಲಿರುವ ಮೂವರು ಬ್ರಾಹ್ಮಣರು ನಮ್ಮನ್ನವರು ಭೇಟಿಯಾಗಲು ಬಿಡಲಿಲ್ಲ’ ಎಂದು ಮಾಯವತಿಯ ಬಿ.ಎಸ್.ಪಿಯ ಸೋಲನ್ನು ಅಲ್ಲಿಯವರು ವಿಶ್ಲೇಷಿಸುತ್ತಾರೆ. ಒಂದು ಅಪಾಯಕಾರಿ ಗಲಭೆಯನ್ನು ಪ್ರಾಯೋಜಿಸಿ ದೊಡ್ಡ ಮಟ್ಟದಲ್ಲಿ ಗೆದ್ದು ಬೀಗುತ್ತದೆ ಬಿಜೆಪಿ. ಈ ಎಲ್ಲಾ ರಾಜಕಾರಣಿಗಳ ನಡುವೆ ಭಗತ್ ಸಿಂಗನ ಒಂದು ಫೋಟೋ ಹಿಡಿದುಕೊಂಡು ಐದು ಹುಡುಗರು ಹಳ್ಳಿ ಹಳ್ಳಿ ತಿರುಗುತ್ತಾರೆ. ವಸ್ತುಸ್ಥಿತಿಯನ್ನು ವಿವರಿಸುತ್ತಾರೆ. ಗಲಭೆಯ ದೆಸೆಯಿಂದ, ಕೋಮು ರಾಜಕಾರಣದ ದೆಸೆಯಿಂದ ಹೇಗೆ ಊರಿನ ನಿಜವಾದ ಸಮಸ್ಯೆಗಳು ಚರ್ಚೆಗೇ ಬರದೆ ಹೋಗುತ್ತಿದೆ ಎಂದು ವಿವರಿಸಿ ಹೇಳುತ್ತಾರೆ. ಹೌದೆಂದು ತಲೆಯಾಡಿಸುವ ಜನ ಧರ್ಮಾಧಾರಿತವಾಗಿ ಮತ ಚಲಾಯಿಸುತ್ತಾರೆ....... ಉಳುವುದಕ್ಕೆ ಭೂಮಿಗೆ ಕಾಲಿಟ್ಟ ರೈತನಿಗೆ ಧರ್ಮವಿಲ್ಲ; ಕೋಮುಗಲಭೆಯ ದೆಸೆಯಿಂದ ಈಗಾತ ಒಬ್ಬಂಟಿ......
ಒಂದು ಸಶಕ್ತ ಸಾಕ್ಷ್ಯಚಿತ್ರವಿದು. ಪ್ರಮುಖ ಅಂಶಗಳ ಬಗ್ಗೆಯಷ್ಟೇ ಇಲ್ಲಿ ಬರೆದಿದ್ದೇನೆ. ಇಡೀ ಸಾಕ್ಷ್ಯಚಿತ್ರದಲ್ಲಿ ಸತ್ಯದ ಮಾತನಾಡುವವರು ಮಹಿಳೆಯರು. ಗಂಡಸರ ದ್ವಂದ್ವಗಳನ್ನವರು ಈಚೆಗೆಳೆಯುತ್ತಾರೆ! ಭಯೋತ್ಪಾದನೆ, ಉಗ್ರತೆಗಳೆಲ್ಲವೂ ಮುಸ್ಲಿಮರದೇ ಕೃತ್ಯ, ಹಿಂದೂಗಳು ಎಂದಿಗೂ ಭಯೋತ್ಪಾದಕರಾಗಲು, ಉಗ್ರಗಾಮಿಗಳಾಗಲು ಸಾಧ್ಯವೇ ಇಲ್ಲ ಎಂದಿನ್ನೂ ನಂಬುವವರು ಈ ಸಾಕ್ಷ್ಯಚಿತ್ರವನ್ನು ನೋಡಲೇಬೇಕು. ಕೈಯಲ್ಲಿ ಬಂದೂಕು ಹಿಡಿದವ ಮಾತ್ರ ಭಯೋತ್ಪಾದಕನಲ್ಲ, ಮನಸ್ಸಿನ ತುಂಬ ನಂಜು ತುಂಬಿಕೊಂಡು ಅನ್ಯಧರ್ಮದವನ ಮನೆ ಸುಡಲೆಂದೇ ಜೇಬಿನಲ್ಲೊಂದು ಬೆಂಕಿಪಟ್ಟಣ ಇಟ್ಟುಕೊಂಡವನೂ ಭಯೋತ್ಪಾದಕನೇ ಎಂಬ ಸತ್ಯದ ಅರಿವಾಗುತ್ತದೆ.
ಟ್ರೇಲರ್ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ
No comments:
Post a Comment