ಡಾ.ಅಶೋಕ್. ಕೆ. ಆರ್.
(ಪ್ರಜಾವಾಣಿಗೆ ಪ್ರತಿಕ್ರಿಯೆಯಾಗಿ ಬರೆದ ಪ್ರಕಟಿತ ಪತ್ರ)
ಮಾಂಸ ನಿಷೇಧದ ಬಗ್ಗೆ ಪರ ವಿರೋಧದ ಚರ್ಚೆಯಲ್ಲಿ (ಪ್ರಜಾವಾಣಿ, ಶನಿವಾರ 19/09/2015) ಡಾ. ವಿಜಯಲಕ್ಷ್ಮಿಯವರು ಬರೆದಿರುವ ಅಭಿಪ್ರಾಯಗಳಿಗೆ ಪ್ರತಿಯಾಗಿ ಈ ಪತ್ರ. ವೈದ್ಯರು ತಮ್ಮ ಲೇಖನದ ಪ್ರಾರಂಭದಿಂದಲೇ ಮಾಂಸಾಹಾರಿಗಳನ್ನು ಕೀಳಾಗಿ ಕಾಣುವಂತೆ ವಿವಿಧ ಧರ್ಮಗ್ರಂಥಗಳ ನೆರವು ಪಡೆದುಕೊಂಡಿದ್ದಾರೆ. ಅಥರ್ವ ವೇದ, ಮನುಸ್ಮೃತಿಯಲ್ಲಿ ಮಾಂಸಾಹಾರಿಗಳನ್ನು ನಾಶ ಮಾಡಬೇಕೆಂಬ ಅಭಿಪ್ರಾಯವನ್ನು, ಮಾಂಸಹಾರಿಗಳೆಂದರೆ ಕೊಲೆಗಡುಕರು, ಅಪಾಯಕಾರಿ ಮನಸ್ಥಿತಿಯವರು ಎನ್ನುವುದನ್ನು ಉಲ್ಲೇಖಿಸುತ್ತಾರೆ. ಮುಸ್ಲಿಮರು ಹಲಾಲ್ ಮಾಂಸವನ್ನು ತಿನ್ನುವುದು ಕೂಡ ಅವರ ಕಣ್ಣಿಗೆ ಮಾಂಸಹಾರಿ ವಿರೋಧಿ ಮನಸ್ಥಿತಿಯಂತೆಯೇ ಕಾಣುತ್ತದೆ. ಮುಂದುವರೆಯುತ್ತಾ ಹೇಗೆ ಪಾಕಿಸ್ತಾನದ ಮುಸ್ಲಿಮ್ ಮಹಿಳೆಯರು ವಿದೇಶದಲ್ಲಿ ಸಸ್ಯಾಹಾರವನನ್ನು ಸೇವಿಸಿ ‘ಧರ್ಮರಕ್ಷಣೆ’ ಮಾಡುತ್ತಿದ್ದರು, ಭಾರತದ ಹಿಂದೂಗಳು ಅಲ್ಲಿ ಸಿಕ್ಕ ಸಿಕ್ಕ ಮಾಂಸವನ್ನು ತಿಂದು ‘ಧರ್ಮ’ ಮರೆತರು ಎಂದು ತಿಳಿಸುವುದರ ಮೂಲಕ ಏನನ್ನು ಸಾಧಿಸಲು ಹೊರಟಿದ್ದಾರೆ ಎಂಬುದೇ ತಿಳಿಯುವುದಿಲ್ಲ. ಆ ವಿದೇಶದಲ್ಲಿ ಅದೇ ಮಾಂಸವನ್ನು ತಿಂದುಕೊಂಡು ಬದುಕುವ ಜನರಿದ್ದಾರೆ, ಅವರದೂ ಒಂದು ಸಂಸ್ಕೃತಿಯಿದೆ ಎನ್ನುವುದನ್ನು ಕಡೆಗಣಿಸಿ ಅದನ್ನು ಹೀಯಾಳಿಸುವುದು ಎಷ್ಟರ ಮಟ್ಟಿಗೆ ಸರಿ? ತಮ್ಮ ವೈಯಕ್ತಿಕ ಮಾಂಸ ವಿರೋಧವನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಕ್ರಿಶ್ಚಿಯನ್ ಧರ್ಮಗ್ರಂಥಗಳನ್ನೂ ಉಪಯೋಗಿಸಿಕೊಳ್ಳುತ್ತಾರೆ. ಕೊನೆಗೆ ಅವರ ಲೇಖನ ಸಮರ್ಥಿಸುವುದು ಮಾಂಸಹಾರಿಗಳು ವಿಕೃತರು, ಕೊಲೆಗಡುಕರು, ಸಮಾಜಕ್ಕೆ ಅಪಾಯಕಾರಿಗಳು, ಸಸ್ಯಾಹಾರಿಗಳು ‘ಸಾತ್ವಿಕರು’ ಎಂಬ ಮನುವಾದವನ್ನೇ.
ವೈದ್ಯರಾಗಿರುವುದರಿಂದ ತಮ್ಮ ವಾದಕ್ಕೆ ವೈದ್ಯಕೀಯ ಸಮರ್ಥನೆಯನ್ನು ಕೊಡುವ ಅನಿವಾರ್ಯತೆಗೆ ಬಿದ್ದು ಹೇಗೆ ಮಾಂಸಾಹಾರ ಸೇವಿಸುವುದರಿಂದ ದೇಹದ ಎಲ್ಲಾ ಅಂಗಾಂಗಗಳೂ ನಾಶವಾಗುತ್ತವೆ ಎಂದು ಭಯ ಹುಟ್ಟಿಸುವ ರೀತಿಯಲ್ಲಿ ಬರೆದಿರುವುದರಲ್ಲೆಲ್ಲಾ ಅರ್ಧ ಸತ್ಯವಿದೆ. ಮಾಂಸಾಹಾರಿಗಳು ವರುಷದ ಮುನ್ನೂರೈವತ್ತು ದಿನವೂ ದಿನದ ಮೂರೊತ್ತು ಒಂಚೂರೂ ತರಕಾರಿ – ಸೊಪ್ಪನ್ನು ತಿನ್ನದೆ ಮಾಂಸವನ್ನೇ ಸೇವಿಸುತ್ತಾರೆನ್ನುವುದಾದರೆ ಅವರು ಬರೆದ ಹಾಗೆ ಮನುಷ್ಯನ ದೇಹ ಅನೇಕ ರೋಗ ರುಜಿನಗಳಿಗೆ ‘ಮಾಂಸ’ದ ಕಾರಣದಿಂದಲೇ ತುತ್ತಾಗುತ್ತದೆ. ಆದರೆ ಆ ರೀತಿ ತಿನ್ನುವವರಿದ್ದಾರೆಯೇ? ವಾರದ ಕೆಲವೊಂದು ದಿನವಷ್ಟೇ ಮಾಂಸ ತಿನ್ನುವವರಿಗೆ ಅವರು ಹೇಳಿದಂತೆ ಹೃದ್ರೋಗ, ಮೂತ್ರಪಿಂಡದ ರೋಗ, ಯಕೃತ್ತಿನ ರೋಗವ್ಯಾವುದೂ ಮಾಂಸ ತಿನ್ನುವ ಕಾರಣಕ್ಕೆ ಬರಲಾರದು. ಮತ್ತು ಆ ರೋಗಗಳಿಗೆಲ್ಲ ಇನ್ನೂ ಅನೇಕಾನೇಕ ಕಾರಣಗಳಿರುವುದು ವೈದ್ಯರಾಗಿ ಅವರಿಗೂ ಗೊತ್ತಿರುತ್ತದೆ. ಉದ್ದೇಶಪೂರ್ವಕವಾಗಿ ಹೇಳಿಲ್ಲವಷ್ಟೇ. ಇನ್ನು ಮಾಂಸ ನಮ್ಮ ದೇಹದಲ್ಲಿ ಜೀರ್ಣವಾಗುವುದಿಲ್ಲ, ಅದು ಕೊಳೆತು ವಿಷವನ್ನು ಹೊರಹಾಕುತ್ತದೆ ಎಂದಿದ್ದಾರೆ; ಬೇಯಿಸಿದ ಮಾಂಸ ಜೀರ್ಣವೇ ಆಗದಿದ್ದಲ್ಲಿ ಮಾಂಸ ಸೇವನೆಯಿಂದ ದೇಹಕ್ಕೆ ವಿವಿಧ ಪ್ರೋಟೀನು, ವಿಟಮಿನ್ನುಗಳು ಸಿಗಬಾರದಿತ್ತಲ್ಲವೇ? ಮನುಷ್ಯ ಸಸ್ಯಾಹಾರಿಯಾಗಿ ‘ಸಾತ್ವಿಕ’ರಾಗಬೇಕೆಂದು ಬಯಸುವ ಅವರು ಸಸ್ಯಾಹಾರಿಗಳು ಹಸಿ ಸೊಪ್ಪು – ಹುಲ್ಲನ್ನು ತಿಂದರೆ ಅದೂ ಕೂಡ ಜೀರ್ಣವಾಗುವುದಿಲ್ಲ ಎನ್ನುವುದನ್ನು ಬೇಕಂತಲೇ ಮರೆಯುತ್ತಾರೆ. ಸುಟ್ಟ ಮಾಂಸ ಒಳ್ಳೆಯದಲ್ಲ ಎನ್ನುವ ಅವರು ಸುಟ್ಟ ಯಾವ ಪದಾರ್ಥವೂ (ರೊಟ್ಟಿ, ಜೋಳ) ಹೊಟ್ಟೆಗೆ ಒಳ್ಳೆಯದಲ್ಲ ಎನ್ನುವುದನ್ನು ಬರೆಯುವುದಿಲ್ಲ. ಮೇಲಾಗಿ ಯಾರೂ ದಿನಾ ಸುಟ್ಟ ಪದಾರ್ಥವನ್ನು (ಮಾಂಸವೋ ಸಸ್ಯಾಹಾರವೋ ವ್ಯತ್ಯಾಸವಿಲ್ಲ) ತಿನ್ನುವುದಿಲ್ಲ ಎನ್ನುವುದು ಅವರ ಗಮನಕ್ಕೆ ಬಂದಿಲ್ಲವೇ? ಕೇವಲ ಸಸ್ಯಾಹಾರ ತಿನ್ನುವುದರಿಂದಲೂ ಅನೇಕಾನೇಕ ಪ್ರೋಟೀನು, ವಿಟಮಿನ್ನುಗಳ ಕೊರತೆಯಾಗಿಬಿಡುತ್ತದೆ ಎನ್ನುವುದು ಅವರಿಗೆ ತಿಳಿದಿಲ್ಲವೇ?. ಪ್ರಾಣಿಜನ್ಯ ಹಾಲನ್ನು ಸೇವಿಸುವುದು ಕೂಡ ಈ ಕೊರತೆಯನ್ನು ನೀಗಿಸುವುದಕ್ಕಾಗಿ ತಾನೇ?
ವೈದ್ಯರೊಬ್ಬರು ಆಹಾರ ಪದ್ಧತಿಯ ಬಗ್ಗೆ ಬರೆವ ಲೇಖನದಲ್ಲಿ ಸಸ್ಯಾಹಾರ ಶ್ರೇಷ್ಟವೆಂಬ ಭ್ರಮೆಯನ್ನು ಬಿತ್ತುವ ಕೆಲಸವಾಗಬಾರದು. ಸಮತೋಲನ ಆಹಾರವೆಂದರೆ ಏನು ಎನ್ನುವುದರ ಕುರಿತು ಬೆಳಕು ಚೆಲ್ಲಬೇಕಿತ್ತು. ಸಸ್ಯಾಹಾರ, ಮಾಂಸಾಹಾರವೆಲ್ಲವೂ ಹೇಗೆ ಕಲುಷಿತವಾಗುತ್ತಿವೆ ಎನ್ನುವುದರ ಕುರಿತು ಅವರ ಕಾಳಜಿಯಿರಬೇಕಿತ್ತು. ಕೋಳಿಗಳು ಶೀಘ್ರವಾಗಿ ಬೆಳೆಯಲು ಹಾರ್ಮೋನುಗಳ ಬಳಕೆ, ತರಕಾರಿ ಸೊಪ್ಪುಗಳು ದಿಡೀರ್ ಅಂತ ಬೆಳೆಯಲು ಬಳಕೆಯಾಗುತ್ತಿರುವ ಕೆಮಿಕಲ್ಲುಗಳು, ವಿದೇಶಿ ತಳಿಯ ಹಸುಗಳಿಗೆ ನೀಡುವ ಹಾರ್ಮೋನುಗಳು ಹಾಲನ್ನು ಸೇರುತ್ತಿರುವ ಬಗ್ಗೆ – ಈ ಹಾರ್ಮೋನು, ಕೆಮಿಕಲ್ಲುಗಳು ಮನುಷ್ಯ ದೇಹವನ್ನು ಸೇರಿ ಹೇಗೆ ವಿವಿಧ ಖಾಯಿಲೆಗಳಿಗೆ ಕಾರಣವಾಗುತ್ತಿವೆ ಎನ್ನುವುದರ ಕುರಿತು ಬರೆದಿರುತ್ತಾರೆ ಎಂದುಕೊಂಡು ಲೇಖನವನ್ನು ಓದಿದರೆ ನಿರಾಸೆಯಾಗುತ್ತದೆ. ಪ್ರಪಂಚದ ಬಹುಸಂಖ್ಯಾತರ ಆಹಾರ ಪದ್ಧತಿಯನ್ನು ಕೀಳಾಗಿ ಕಾಣುವ ಮನಸ್ಥಿತಿ ಇಡೀ ಲೇಖನದ ತುಂಬ ತುಂಬಿಕೊಂಡಿದೆ. ವಿವಿಧ ಧರ್ಮಗ್ರಂಥಗಳನ್ನು ಉಲ್ಲೇಖಿಸಿ ತಮ್ಮ ‘ತಪ್ಪು’ ವಾದವನ್ನು ಸಮರ್ಥಿಸಿಕೊಳ್ಳುವುದು ಬಲಪಂಥೀಯತೆಯ ರೋಗ. ಅಂತದೇ ರೋಗಿಷ್ಟ ಮನಸ್ಥಿತಿಯಿಂದ ವೈಜ್ಞಾನಿಕವಾಗಿ ಅರ್ಧ ಸತ್ಯಗಳಂತಿರುವ ವಾಕ್ಯಗಳಿಂದ ತುಂಬಿಹೋಗಿರುವ ಅವರ ಲೇಖನ ಪ್ರಜಾವಾಣಿಯಂತಹ
ಪತ್ರಿಕೆಯಲ್ಲಿ ಪ್ರಕಟವಾಗಿರುವುದು ನಿಜಕ್ಕೂ ಅಚ್ಚರಿ ಮೂಡಿಸಿತು.
No comments:
Post a Comment