ರಾಘವೇಶ್ವರ ಭಾರತಿ ಸ್ವಾಮಿಗಳ ಮೇಲೆ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಆ ಪ್ರಕರಣ ದಾಖಲಿಸಿದ ಮಹಿಳೆಯ ವೈದ್ಯಕೀಯ ಪರೀಕ್ಷೆ ಇತ್ಯಾದಿ ಇತ್ಯಾದಿಗಳೆಲ್ಲವೂ ನಡೆಯುತ್ತಿದೆ. ಸ್ವಾಮಿಗಳ ಹೆಸರು ಕೆಡಿಸಲು ಮತ್ತೊಂದು ಪ್ರಯತ್ನವಿದು ಎಂಬ ಅಭಿಪ್ರಾಯಕ್ಕೇನೂ ಕೊರತೆಯಿಲ್ಲ. ಆ ಮಹಿಳೆಯ ಜೊತೆ ದೂರು ಕೊಡಲು ಹೋಗಿದ್ದ ಜನವಾದಿ ಸಂಘಟನೆಯ ವಿಮಲಾ “ರಾಘವೇಶ್ವರ ಸ್ವಾಮಿಗಳ ಮೇಲೆ ಮೊದಲು ಕೇಸು ಹಾಕಿದ್ದು ಪ್ರೇಮಲತಾ. ಅವರಿಗೆ ನ್ಯಾಯ ಸಿಕ್ಕಿದೆಯಾ? ಸಾಕ್ಷಿ ಸಂಗ್ರಹ ಅದೂ ಇದೂ ಅಂತ ದೇಶ ಪೂರ್ತಿ ತಿರುಗಿಸುತ್ತಿದ್ದಾರೆ. ಅವರ ಮನೆಯವರಿಗೆ ಕೊಡಬಾರದ ಕಷ್ಟಗಳನ್ನೆಲ್ಲ ಕೊಡುತ್ತಿದ್ದಾರೆ. ಇವೆಲ್ಲವನ್ನೂ ಕೇಳಿ ನೋಡಿದ ಮೇಲೆಯೂ ಒಂದು ಹೆಣ್ಣುಮಗಳು ಸುಖಾಸುಮ್ಮನೆ ಸ್ವಾಮಿಗಳ ಮೇಲೆ ಕಂಪ್ಲೇಂಟ್ ಕೊಟ್ಟು ತೊಂದರೆಗ್ಯಾಕೆ ಒಳಗಾಗುತ್ತಾಳೆ?” ಎಂದು ಪ್ರಶ್ನಿಸುತ್ತಾರೆ. ಅತ್ಯಾಚಾರದ ದೂರು ನೀಡಿದಾಕ್ಷಣ ಪೋಲೀಸರೇನು ಇತರೆ ಅತ್ಯಾಚಾರ ಪ್ರಕರಣಗಳಲ್ಲಿ ಮಾಡುವಂತೆ ಓಡಿಹೋಗಿ ಸ್ವಾಮೀಜಿಯನ್ನು ಬಂಧಿಸಿಲ್ಲ. ಕಾರಣ ಇಲ್ಲಿ ಎಲ್ಲರೂ ಸಮಾನರು ಕೆಲವರು ಹೆಚ್ಚು ಸಮಾನರು!
ಇವೆಲ್ಲದರ ಮಧ್ಯೆ ವಾಟ್ಸಪ್ಪಿನಲ್ಲಿ ರಾಘವೇಶ್ವರ ಸ್ವಾಮೀಜಿಗಳದ್ದು ಎನ್ನಲಾದ ಧ್ವನಿಮುದ್ರಿಕೆಯೊಂದು ಹರಿದಾಡುತ್ತಿದೆ. ತಮ್ಮ ಶಿಷ್ಯ ರಾಮಚಂದ್ರ ಎಂಬುವವರೊಡನೆ ಅವರಾಡಿರುವ ಮಾತುಗಳು ಸ್ವಾಮೀಜಿಯೆಂದರೆ ದೈವಾಂಶ ಸಂಭೂತವೆಂದುಕೊಂಡವರಿಗೆ ಕಪಾಳ ಮೋಕ್ಷ ಮಾಡಿದಂತಿದೆ. ಅವರಿಗೂ ಭಯವಿದೆ, ತಮ್ಮ ಸ್ಥಾನ ಗಟ್ಟಿಯಾಗಿಲ್ಲವೆಂಬ ಗಾಬರಿಯಿದೆ, ಕೋಪ – ತಾಪವಿದೆ, ತಮ್ಮ ಪ್ರಭಾವ ಬಳಸಿ ಏನನ್ನಾದರೂ ಅರಗಿಸಿಕೊಳ್ಳುವೆನೆಂಬ ಅಹಂಭಾವವೂ ಇದೆ. ಆ ಧ್ವನಿಮುದ್ರಿಕೆಯ ಮಾತುಗಳಿವು:
“ವಿರೋಧ ಮಾಡುವವರ ಬಗ್ಗೆ ನಮಗೆ ಭಿನ್ನಾಭಿಪ್ರಾಯ ಇಲ್ಲ…. ಈ ದಾರಿ ನಾವೇ ನಿಮಗೆ ಹೇಳಿಕೊಟ್ಟಿದ್ದೀವಿ. ವಿರೋಧ ಮಾಡುವವರ ಬಗ್ಗೆ ನಮಗೆ ಭಿನ್ನಾಭಿಪ್ರಾಯ ಇಲ್ಲ. ಇರಲಿ.
ಅದು ಅವರ ಜಾತಿ ಸ್ವಭಾವ ಅದು ಜನ್ಮ ಸ್ವಭಾವ ಅದು.
ನಮ್ಮ ಸಮಸ್ಯೆ ಇರೋದು ನಮ್ಮ ಜೊತೆಗೆ ಇರೋರ ಬಗ್ಗೆ. ಬಸ್ ಸ್ಟ್ಯಾಂಡಿನಲ್ಲಿ ಬಾಯಿಗೆ ಬಂದಂತೆ ಮಾತಾಡ್ತಿರೋವಾಗ ನಿಮ್ಮ ಪೌರುಷ ಎಲ್ಲಿತ್ತು. ಶಿಷ್ಯರುಗಳ ಪೌರುಷ ಎಲ್ಲಿತ್ತು ಅಂತ. ನಮ್ಮ. . . . ನಮ್ಮ ಧ್ವನಿ ಅರ್ಥ ಮಾಡ್ಕೋ ರಾಮಚಂದ್ರ.
ಸಮಾಜವನ್ನ ಉದ್ಧಾರ ಮಾಡೋ ಕೆಲ್ಸ ನಮ್ದು. ಆದರೆ ಗುರುಪೀಠ ಕಾದುಕೊಳ್ಳೋ ಕೆಲ್ಸ ನಿಮ್ದು. ಧರ್ಮೋ ರಕ್ಷತಿ ರಕ್ಷಿತಃ.
ಲಂಕೇಶ್ ಪತ್ರಿಕೆ ಜೊತೆಗೆ ನಾವ್ ಹೋರಾಟ ಮಾಡೋಕೆ ಸಾಧ್ಯ ಇಲ್ಲಾ. ಬೀದಿ ಬಸವರಿಗೆ ನಾವ್ ಉತ್ತರ ಕೊಡ್ಲಿಕ್ಕೆ ಸಾಧ್ಯ ಇಲ್ಲ. ನೀನ್ ಉತ್ರ ಕೊಡ್ಬೇಕು ಅದಕ್ಕೆ.
ಎಲ್ಲಿದ್ರೀ ನೀವು? ನಿಮ್ಮ ಗುರುವನ್ನು ವಾಚಾಮಾಗೋಚರವಾಗಿ ನಿಂದೆ ಮಾಡುವಾಗ ಸಾಮೂಹಿಕ ನಾಶ ಮಾಡೋ ರೀತಿಯಲ್ಲಿ ಸಮಾಜದಲ್ಲಿ ಒಂದು …. ಈ ರೀತಿ ಅಡೆತಡೆ……ಎಲ್ಲಿದ್ರಿ ನೀವು?
ನಾವ್ ಕೇಳ್ತಿರೋ ಪ್ರಶ್ನೆ ಅದು. ನಮಗೆ….ನಮ್ ಸಾಮರ್ಥ್ಯ ಕಡಿಮೆ ಆಗಲಿಲ್ಲ. ನಿನಗ್ ಹೇಳ್ತೇನ್ ಕೇಳು.
ಜೀವನಪರ್ಯಂತ ಇಂಥಾ ಸಂಗ್ರಾಮಗಳನ್ನ ಎದುರಿಸ್ತೇವೆ ನಾವು. ಇಡೀ ಜಗತ್ತು ಮುಗಿದು …. ಮುರಿದುಬಿದ್ರೂ ಕೂಡ ಎದುರಿಸ್ತೇವೆ ನಾವು. ಆ ಛಾತಿ ಇದೆ ನಮಗೆ ಇವತ್ತೂ ಕೂಡ. ಯಾರಿಗಾಗಿ ಅನ್ನೋ ಪ್ರಶ್ನೆ ನಮಗೆ. ಯಾರಿಗಾಗಿ? ಯಾರ ಜೊತೆ ಮಾಡಬೇಕು ಸಂಗ್ರಾಮವನ್ನು? ನಾವಾಗ್ಲೇ ಹೇಳಿದ್ವು. ಹೊರಗಿನವರ್ಯಾರ ಜೊತೇನೂ ಸಂಗ್ರಾಮ ಮಾಡೋ ಸಂದರ್ಭ ಅಲ್ಲ ಇದು. ಒಳಗಿನವರ ಜೊತೆ ಮಾಡಬೇಕಾದ ಸಂಗ್ರಾಮ ಉದ್ಭವವಾಗಿಬಿಟ್ಟಿದೆ.
ನಿನಗೆ ಬೇಕು ಅಂತ ನಮಗ್ ಗೊತ್ತಾಗೋದ್ ಹ್ಯಾಗೆ? ಗುರು ಪೀಠ ಬೇಕು ಅಂತ ಗೊತ್ತಾಗೋದ್ ಹ್ಯಾಗೆ?
ಹಾಗಾಗಿ ಒಂದು ವಿಷಯ ಪುನಃ ಸ್ಪಷ್ಟಪಡಿಸುತ್ತೇನೆ. ಯಾರೋ ವಿರೋಧ ಮಾಡಿದ್ರು ನಿಂದನೆ ಮಾಡಿದ್ರು ಅಂತ ನಾವ್ ಹೆದರಿ ಹೊರಡ್ತಾ ಇರೋದ್ ಅಲ್ಲ. ಸಾಮರ್ಥ್ಯ ಕಡಿಮೆ ಆಗಿಲ್ಲ ಅಥವಾ ಅನುಭವ ಕಡಿಮೆ ಆಗಿಲ್ಲ. ಅವತ್ತು ನಮಗೇನ್ ಅನುಭವ ಇತ್ತೋ ಅದಕ್ಕಿಂತ ಹೆಚ್ಚೆಚ್ಚು ಅನುಭವ ಇದೆ, ಇವತ್ತಿದೆ.
ಇಂಥದನ್ ನಿಭಾಯಿಸಕ್ಕೆ ಬೇಕಾದಂತಹ ಎಲ್ಲವೂ ನಮ್ಮತ್ರ ಇದೆ. ಮಾಡಬೇಕಾ? ಯಾರಿಗಾಗಿ ಮಾಡಬೇಕು? ಯಾರಿಗಾಗ್ ಮಾಡಬೇಕೋ ಅವರೆಲ್ಲಾ ಕೂತ್ಕೊಂಡಿದ್ದಾರೆ ಅವರ ಜೊತೆಗೆ ….. ಅಲ್ಲ ಸುಮ್ನಿದ್ದಾರೆ”
‘ಎರಡನೇದ್ ಸತ್ಯ’
“ಉಳಿಸಿಕೊಳ್ಳುವ ಪ್ರಯತ್ನ ನೀವ್ ಮಾಡದಿದ್ರೆ ಉಳಿಯೋದಿಲ್ಲ. ನೀವ್ ಉಳಿಸ್ಕೊಂಡ್ರೆ ಉಳೀತದೆ ಇದು. ಒಂದು ನಿಮಗೆ ನಾವ್ ಪುನಃ ಪುನಃ ಸ್ಪಷ್ಟಪಡಿಸ್ತೀನಿ. ಇವತ್ತಿನವರೆಗೂ ಸಾರಥ್ಯವನ್ನು ನಾವೇ ಮಾಡಿದ್ದೇವೆ. ಸಂಗ್ರಾಮವನ್ನೂ ನಾವೇ ಮಾಡಿದ್ದೇವೆ. ಇನ್ನು ಎರಡೂ ಆಗ್ಲಿಕ್ಕಿಲ್ಲ. ನಿಮ್ ಕೆಲ್ಸ ನೀವ್ ಮಾಡಿ. ಪುನಃ ಹೇಳ್ತೇವೆ. ಸಮಾಜಕ್ಕೆ ಬೇಕಾದ್ ಎಲ್ಲಾನೂ ನಾವ್ ಮಾಡ್ತೇವೆ. ಆದ್ರೆ ಈ ವಿರೋಧದ ಅಲೆಗಳು ಏಳ್ತಾವಲ್ಲ ನೀವದನ್ನ ಎದುರಿಸಿ. ಅದು ನಿಮ್ ಕೆಲ್ಸ ಅದು. ನಿಮಗ್ ಬಂದ್ರೆ ನಾವ್ ನೋಡ್ಕೊಳ್ತೇವೆ. ಈ ಸಮಾಜದ ಕೊನೆಯ ಮಗುವಿಗೆ ಒಂದ್ ಆಪತ್ತು ಬಂದ್ರೆ ನಾವ್ ನಿಂತು ಮೊದಲು, ಆ ಮಗುವಿಗಿಂತ ಮೊದ್ಲು, ಏಟು ನಮಗ್ ಬೀಳ್ಬೇಕು. ಮುಂದೆ ನಿಂತು ಮಾತಾಡ್ತೇವೆ. ಆದ್ರೆ ಪೀಠ ಕಾಪಾಡೋ ಕೆಲ್ಸ ಯಾರದ್ದು? ಪೀಠದ ಮರ್ಯಾದೆ ಕಾಪಾಡೋ ಕೆಲ್ಸ ಯಾರದ್ದು? ಬರ್ತಾ ಬರ್ತಾ ನಮಗ್ ಅಭ್ಯಾಸ ಆಗೋಯ್ತಲ್ಲ ಅಂತ.
ಅದೇನ್ ವಿಷಯ ಲಂಕೇಶಲ್ಲಿ ಬಂದ್ರೇನು, ಹಾಯ್ ಬೆಂಗಳೂರಲ್ಲಿ ಬಂದ್ರೇನು ಇವನ್ ಮಾತಾಡಿದ್ರೇನು ಅವನ್ ಮಾತಾಡಿದ್ರೇನು ಅನ್ನೋ ತರಹ ಆದ್ರೆ…..ನೋಡು ರಾಮಚಂದ್ರ ಕೆಲ್ಸ ಮಾಡೋಕ್ ಒಂದ್ ವಾತಾವರಣ ಬೇಕು. ಆ ವಾತಾವರಣ ಇಲ್ದೆ ಕೆಲ್ಸ ಮಾಡ್ಲಿಕ್ಕೆ ಸಾಧ್ಯ ಇಲ್ಲ.
ನಾವೆಲ್ಲೂ ಕೆಲ್ಸ ಮಾಡೋದಿಲ್ಲಾ ಅಂತ ಹೇಳ್ತಾ ಇಲ್ಲ. ಎಲ್ಲೂ ಕೆಲ್ಸ ಮಾಡೋದಿಲ್ಲಾ ಅಂತ ಹೇಳ್ತಾ ಇಲ್ಲ. ನಾವೆಲ್ಲಿರ್ತೇವೆ ಅಲ್ಲಿ ಕೆಲ್ಸ ಆಗತ್ತೆ ತಮ್ಮಷ್ಟಕ್ಕೆ.
ಇಂಥದೇ ಸಾಮ್ರಾಜ್ಯಾನ ರಾಜಸ್ಥಾನದಲ್ಲಿ ಕಟ್ಬೋದು. ನೆನಪಿರಲಿ. ಸವಾಲಾಗಿ ಹೇಳ್ತಿದ್ದೇವೆ ನಾವು. ಇವತ್ತೇನ್ ಸಾಮ್ರಾಜ್ಯ ಇದೆ ನಮ್ದು ಇಂಥದೇ ಸಾಮ್ರಾಜ್ಯವನ್ನ ರಾಜಸ್ಥಾನಕ್ಕೆ ಹೋಗಿ ಕಟ್ತೇವೆ ನಾವು ಬೇಕಿದ್ರೆ. ಬಿಹಾರಕ್ಕೆ ಹೋಗಿ ಕಟ್ತೇವೆ ಬೇಕಿದ್ರೆ. ಬಂಗಾಳಕ್ಕೆ ಹೋಗಿ ಕಟ್ತೇವೆ ಬೇಕಿದ್ರೆ. ನಿಮಗ್ ಗೊತ್ತಿರ್ಲಿ, ಬೆಂಗ್ಳೂರಲ್ಲಿ ಎಷ್ಟು ದೊಡ್ಡ ಒಂದು ವಲಯ ಇದೆ ನಮ್ದು ಅದಕ್ಕಿಂತ ದೊಡ್ಡ ವಲಯ ಕಲ್ಕತ್ತಾದಲ್ಲಿದೆ ಇವತ್ತು. ಶ್ರೀಮಂತರಲ್ಲಿ ಶ್ರೀಮಂತರಿಂದ ಬಡವರಲ್ಲಿ ಬಡವರವರೆಗೆ ಬೆಂಗ್ಳೂರಿಗಿಂತ ಪೀಠಕ್ಕೆ ಶರಣಾಗಿರುವಂತಹ ವಲಯ ಕಲ್ಕತ್ತಾದಲ್ಲಿದೆ ಇವತ್ತು. ಸಾಮರ್ಥ್ಯ ಕಡಿಮೆಯಾಗಿ ಅಧ್ಯೆರ್ಯದಿಂದ ಆಡ್ತಿರೋ ಮಾತಲ್ಲ ಇದು. ನಿಮಗೆ ಬೇಕಾ ಅಂತಾ?”
‘ಶ್ರೀಗಳೋರು ಕ್ಷಮಿಸಬೇಕು. ನನಗರ್ಥ ಆಯ್ತು ಧಣಿ. ನನಗರ್ಥ ಆಯ್ತು ಧಣಿ’
No comments:
Post a Comment