ಪಾಂಚಜನ್ಯದ ಸಂಪಾದಕೀಯ |
‘ಭಾರತದ ತಾಕತ್ತು ಹಿಂದಿ’ ಎಂದು ದೊಡ್ಡ ಹೆಡ್ಡಿಂಗಿನಲ್ಲಿ ಆರ್.ಎಸ್.ಎಸ್ಸಿನ ಮುಖವಾಣಿ ಪಂಚಜನ್ಯದಲ್ಲೊಂದು ಸಂಪಾದಕೀಯ ಬರುತ್ತದೆ, ಸೆಪ್ಟೆಂಬರ್ ನಾಲ್ಕರಂದು. ಸಂಪಾದಕೀಯದ ಮೇಲೆ ‘ಹಿಂದಿಯನ್ನು ವಿರೋಧಿಸುವ ಯಾವುದೇ ಆಂದೋಲನ ದೇಶದ ಪ್ರಗತಿಗೆ ಮಾರಕ’ ಎಂದು ಸುಭಾಷ್ ಚಂದ್ರಬೋಸ್ ಹೇಳಿದರೆನ್ನಲಾದ ಹೇಳಿಕೆಯಿದೆ. ಹಿತೇಶ್ ಶಂಕರ್ ಬರೆದಿರುವ ಸಂಪಾದಕೀಯದಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿ ಆಗಸ್ಟ್ ಹದಿನೈದರಂದು ಟ್ವಿಟರಿನಲ್ಲಿ ನಡೆದ #stophindiimposition ಅನ್ನು ಟೀಕಿಸಿದ್ದಾರೆ. ಹಿಂದಿಯನ್ನು ವಿರೋಧಿಸುವುದು (ಸತ್ಯವಾಗಿ ನಾವೆಲ್ಲರೂ ವಿರೋಧಿಸುತ್ತಿರುವುದು ಹಿಂದಿ ಹೇರಿಕೆಯನ್ನು ಎಂಬುದನ್ನು ನಯವಾಗಿ ಮರೆಸುತ್ತಾರೆ) ಮೂರ್ಖತನದ ಕೆಲಸವಂತೆ, ಹಿಂದಿಯನ್ನು ವಿರೋದಿಸುವವರ ರಾಜತಾಂತ್ರಿಕ ಶಡ್ಯಂತ್ರದ ಭಾಗವಂತೆ! ಗಂಗ, ಯಮುನಾ, ಕಾವೇರಿ, ನರ್ಮದಾ ನದಿಗಳ ಹೆಸರನ್ನು ಹೇಳುತ್ತಾ ಭಾವನಾತ್ಮಕವಾಗಿ ಹಿಂದಿಯನ್ನು ವಿರೋಧಿಸುವುದು ತಪ್ಪು ಎನ್ನುತ್ತಾರೆ. ಹಿಂದಿಯನ್ನು ಸಮರ್ಥಿಸಲು ಗಾಂಧಿ, ಭಗತ್ ಸಿಂಗರೆಲ್ಲರನ್ನೂ ಎಳೆದು ತರುತ್ತಾರೆ.
ಹಿಂದಿಯನ್ನು ಮತ್ತಷ್ಟು ಬೆಳೆಸಬೇಕಂತೆ! ನಮ್ಮ ಭಾಷೆಯನ್ನು ಕೊಂದೇ? |
ಇದೇ ಪಾಂಚಜನ್ಯದಲ್ಲಿ ‘ದಕ್ಷಿಣ ಭಾರತದಲ್ಲಿ ಹೆಚ್ಚುತ್ತಿರುವ ಹಿಂದಿಯ ಪ್ರಭಾವ’ ಎಂಬ ಮತ್ತೊಂದು ಲೇಖನ ಪ್ರಕಟವಾಗಿದೆ. 1918ರಲ್ಲಿ ಮದ್ರಾಸಿನಲ್ಲಿ ಮಹಾತ್ಮ ಗಾಂಧಿ ಹಿಂದಿ ಪ್ರಚಾರ ಸಭಾವನ್ನು ಉದ್ಘಾಟಿಸಿದರು. ಅಲ್ಲಿಂದ ಇಲ್ಲಿಯವರೆಗೆ ದಕ್ಷಿಣದ ರಾಜ್ಯಗಳಲ್ಲಿ ಹಿಂದಿ ಸಾಕಷ್ಟು ಬೆಳೆದಿದೆ. ಹಿಂದಿ ಬೆಳೆದಿದೆ, ಇನ್ನಷ್ಟು ಪ್ರಯತ್ನ ಪಡಬೇಕೆಂದು ಬರೆದಿದ್ದಾರೆ! ಈಗಲೇ ನಮ್ಮ ರಾಜ್ಯದ ಬ್ಯಾಂಕು ಪೋಸ್ಟ್ ಆಫೀಸುಗಳಲ್ಲಿರುವ ಚಲನ್ನುಗಳು ಹಿಂದಿ ಮತ್ತು ಇಂಗ್ಲೀಷಿನಲ್ಲಷ್ಟೇ ಇವೆ.
Also Read ಹಿಂದಿ ಹೇರಿಕೆಯ ವಿವಿಧ ಹಂತಗಳು
ಇನ್ನಷ್ಟು ಪ್ರಯತ್ನವೆಂದರೆ ಹಿಂದಿಯಷ್ಟೇ ಇರುವುದಾ? ದಕ್ಷಿಣದ ನಾಲ್ಕು ರಾಜ್ಯಗಳ ಪ್ರಮುಖ ನಗರಗಳಲ್ಲೆಲ್ಲಾ ಹಿಂದಿ ಪ್ರಚಾರಕರು ಇರಬೇಕರಂತೆ! ಇತಿಹಾಸ, ಪ್ರವಾಸ, ಪುರಾತತ್ವ, ಅನುವಾದದ ಬಗ್ಗೆ ಹಿಂದಿಯಲ್ಲಿ ಶಿಕ್ಷಣ ಕೊಟ್ಟು ಅಂತವರನ್ನು ರೈಲ್ವೆ ನಿಲ್ದಾಣ, ಹೋಟೆಲ್, ಪ್ರವಾಸಿ ಕೇಂದ್ರ, ಸಂಗ್ರಹಾಲಯ, ಐತಿಹಾಸಿಕ ಸ್ಥಳಗಳಲ್ಲಿ ಹಿಂದಿಯ ಸಮನ್ವಯಕಾರರನ್ನಾಗಿ ಮಾಡಬೇಕಂತೆ!
ಹಿಂದಿ ಗೊತ್ತಿರುವವರು ಈ ರಾಜ್ಯಗಳಲ್ಲಿ ಇಲ್ಲದ ಕಾರಣ ಒರಿಸ್ಸಾ, ಗುಜರಾಜ್, ಪಂಜಾಬಿನ ಜನರು ಭಾಷೆಯ ಸಮಸ್ಯೆಯಿಂದ ದಕ್ಷಿಣ ಭಾರತದ ದರ್ಶನೀಯ ಸ್ಥಳಗಳನ್ನು ನೋಡಲಾಗುತ್ತಿಲ್ಲವಂತೆ! ವ್ಯಾಪಾರ ವಹಿವಾಟು ಹೆಚ್ಚಲು ಈ ಹಿಂದಿ ಸಮನ್ವಯಕಾರರು ಕಾರಣಕರ್ತರಾಗುತ್ತಾರಂತೆ. ಹೀಗೆ ಲೇಖನದ ತುಂಬೆಲ್ಲ ಸುಳ್ಳುಗಳೇ ತುಂಬಿಕೊಂಡಿದೆ. ಪ್ರವಾಸಕ್ಕೆ ಹೋಗಲು ಅಲ್ಲಿನವರಿಗೆ ನಮ್ಮ ಭಾಷೆ ಗೊತ್ತಿರಬೇಕು ಎಂಬುದೇ ಸತ್ಯವಾದರೆ ದಕ್ಷಿಣದವರ್ಯಾರು ಉತ್ತರ ಭಾರತಕ್ಕೆ ಪ್ರವಾಸ ಹೋಗುವಂತಿಲ್ಲ. ಕನ್ನಡಿಗರು ತಮಿಳುನಾಡಿಗೆ, ತೆಲುಗರು ಕರ್ನಾಟಕಕ್ಕೆ ಪ್ರವಾಸ ಬರುವಂತಿಲ್ಲ! ಹಿಂದಿಯನ್ನು ಎಲ್ಲರ ಭಾಷೆಯಾಗಿಸಿ ಬಲಪಡಿಸಬೇಕಂತೆ. ನಮಗೇನ್ ಕರ್ಮವೇ! ದಕ್ಷಿಣ ಭಾರತವನ್ನು ಹಿಂದಿಯಿಂದ ‘ಕಂಗೊಳಿಸಬೇಕೆಂದು’ ಬರೆದಿರುವುದು ಆಲ್ ಇಂಡಿಯಾ ರೇಡಿಯೋದ ಪತ್ರಕರ್ತ ಸಂಜಯ್ ಬ್ಯಾನರ್ಜಿ! ಸರಕಾರೀ ಕೆಲಸದಲ್ಲಿರುವ ಹಿಂದಿ ಪತ್ರಕರ್ತನೊಬ್ಬನ ಮನಸ್ಥಿತಿಯಿದು.
ದಕ್ಷಿಣ ಭಾರತದಲ್ಲಿ ಹಿಂದಿ ಸಮನ್ವಯಕರು ಇರಬೇಕಂತೆ |
ಈ ಆರ್.ಎಸ್.ಎಸ್ಸಿಗರಿಗೆ ಹಿಂದಿ ಭಾಷೆಯ ಮೇಲೆ ವ್ಯಾಮೋಹವಿರಲಿ. ಬೇರೆ ಭಾಷೆಗಳನ್ನು ಸಾಯಿಸಿ ಹಿಂದಿಯನ್ನು ಬಲಿಷ್ಟಗೊಳಿಸಿ ಅದನ್ನು ದೇಶಪ್ರೇಮದೊಂದಿಗೆ ಬೆರೆಸುವ ಚಟವ್ಯಾಕೆ? ಪಾಂಚಜನ್ಯದ ಲೇಖನಗಳು ಪ್ರಕಟವಾಗಿರುವುದು ಸೆಪ್ಟೆಂಬರ್ ನಾಲ್ಕರ ಸಂಚಿಕೆಯಲ್ಲಿ. ಸೆಪ್ಟೆಂಬರ್ ಹತ್ತರಿಂದ ಮಧ್ಯಪ್ರದೇಶದ ಭೋಪಾಲದಲ್ಲಿ ವಿಶ್ವ ಹಿಂದಿ ಸಮ್ಮೇಳನ ಪ್ರಾರಂಭವಾಗುತ್ತದೆ. ಸಮ್ಮೇಳನದ ಮೊದಲ ದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾಷಣ. ಅದೇನು ಮೋದಿಯವರ ಭಾಷಣ ಕೇಳಿ ಪಾಂಚಜನ್ಯದ ಲೇಖನಗಳನ್ನು ಬರೆಯಲಾಯಿತೋ ಅಥವಾ ಪಾಂಚಜನ್ಯ ಓದಿ ಮೋದಿಯವರು ಭಾಷಣ ಮಾಡಿದರೋ ತಿಳಿಯುವುದಿಲ್ಲ.
ಮೋದಿಯವರು ಬೆಳೆದು ಬಂದಿದ್ದು ಆರ್.ಎಸ್.ಎಸ್ಸಿನ ಸಂಸ್ಕೃತಿಯಲ್ಲೇ ಎಂಬ ಅಂಶ ಹಿಂದಿ ಮಾತೃಭಾಷೆಯಲ್ಲದ ಗುಜರಾತಿನಿಂದ ಬಂದೂ ‘ಹಿಂದಿಗಷ್ಟೇ ಭಾರತವನ್ನು ಗಟ್ಟಿಗೊಳಿಸುವ ಶಕ್ತಿಯಿರುವುದು’ ಎನ್ನುವ ಅವರ ಅಭಿಪ್ರಾಯದ ಮೂಲಕವೇ ಗುರುತಿಸಿಬಿಡಬಹುದು. ಪ್ರಪಂಚದಲ್ಲಿರುವ 6000 ಭಾಷೆಗಳಲ್ಲಿ 90% ವಿನಾಶದ ಅಂಚಿನಲ್ಲವೆ ಎಂದವರು ಹೇಳುತ್ತಾರೆ, ಭಾಷೆ ಜ್ಞಾನವನ್ನು ತಿಳಿಸುತ್ತದೆ, ಅನುಭವವನ್ನು ತಿಳಿಸಿಕೊಡುತ್ತದೆ ಎಂದೆಲ್ಲ ಹೇಳುತ್ತಾರೆ; ಕೊನೆಗೆ ಹಿಂದಿಯ ಪಾದಾರವಿಂದಗಳಿಗೆ ಶರಣಾಗಿ ಬಿಡುತ್ತಾರೆ! ಹಿಂದಿ ಬರದಿದ್ದರೆ ನನ್ನ ಕಥೆ ಏನ್ ಆಗುತ್ತಿತ್ತು? ಎಂದು ಹೇಳುತ್ತಾ ಹಿಂದಿ ಬರದವರು ದೇಶದ ಪ್ರಧಾನಿಯಾಗಲು ಲಾಯಕ್ಕಿಲ್ಲ ಎಂಬ ಸಂದೇಶ ಕೊಡುತ್ತಾರೆ. ಹಿಂದಿ ಬರದಿದ್ದರೆ ಮೋದಿಯವರು ಜನರನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲವಂತೆ, ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲವಂತೆ! ವಿವಿಧ ಮಾತೃಭಾಷೆಗಳನ್ನು ಜೋಡಿಸಲು ಹಿಂದಿ ಉಪಯುಕ್ತವೆಂಬುದು ನಮ್ಮ ಪ್ರಧಾನ ಮಂತ್ರಿಗಳ ಅಭಿಪ್ರಾಯ! ಎಲ್ಲದಕ್ಕಿಂತ ಅಪಾಯಕಾರಿ ಅಭಿಪ್ರಾಯವೆಂದರೆ ಎಲ್ಲಾ ಭಾಷಿಕರು ತಮ್ಮ ತಮ್ಮ ಭಾಷೆಯನ್ನು ನಾಗರಿ ಲಿಪಿಯಲ್ಲಿ (ದೇವನಾಗರಿ) ಬರೆಯುವ ಅಭ್ಯಾಸ ಮಾಡಬೇಕಂತೆ! ಹಿಂದಿ ಹೇರಿಕೆಯ ಜೊತೆಜೊತೆಗೆ ಮುಂದಿನ ದಿನಗಳಲ್ಲಿ ಶಾಲೆಗಳಲ್ಲಿ ಕನ್ನಡವನ್ನು ನಾಗರಿ ಲಿಪಿಯಲ್ಲಿ ಬರೆಸುವಂತಹ ಅಸಹ್ಯದ ಕೆಲಸವೂ ನಡೆದರೆ ಅಚ್ಚರಿಪಡಬೇಡಿ. ಗುಜರಾತಿಗೆ ವ್ಯಾಪಾರಕ್ಕೆಂದು ಬಂದ ಉತ್ತರಪ್ರದೇಶದವರಿಗೆ ಚಹಾ ಮಾರುತ್ತಾ ಹಿಂದಿ ಕಲಿತೆ ಎಂದವರು ಹೆಮ್ಮೆಯಿಂದ ಹೇಳುತ್ತಾರೆ. ಒಂದು ಭಾಷೆ ಕಲಿಯುವುದೇನೋ ಹೆಮ್ಮೆಯ ಸಂಗತಿಯೇ. ಗುಜರಾತಿಗೆ ವ್ಯಾಪಾರಕ್ಕೆಂದು ಬಂದವರು ಗುಜರಾತಿ ಕಲಿಯಬೇಕೆ ಹೊರತು ಗುಜರಾತಿಗಳೇ ಹಿಂದಿ ಕಲಿಯಬೇಕೆ? ಎಂಬ ಪ್ರಶ್ನೆ ಹಾಗೆಯೇ ಉಳಿದುಹೋಗುತ್ತದೆ. ಗುಜರಾತಿಗಳು ನೆರೆಹೊರೆಯವರೊಂದಿಗೆ, ಆಟೋದವರೊಂದಿಗೆ ಜಗಳವಾಡಬೇಕಾದರೆ ಹಿಂದಿಯಲ್ಲಿ ಜಗಳವಾಡುತ್ತಾರಂತೆ. ಹಿಂದಿ ಮಾತನಾಡಿದರೆ ಧಮ್ ಇದೆ ಎಂದುಕೊಳ್ಳುತ್ತಾರಂತೆ! “ಭಾರತದ ತಾಕತ್ತು ಹಿಂದಿ” ಎಂಬ ಸಂಪಾದಕೀಯ ಬರೆದ ಪಾಂಚಜನ್ಯಕ್ಕೂ “ಹಿಂದಿ ಮಾತನಾಡಿದರೆ ಧಮ್ ಇದೆ ಎಂದುಕೊಳ್ಳುತ್ತಾರೆ” ಎನ್ನುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಾಲಿಗೂ ಎಷ್ಟೊಂದು ಸಾಮ್ಯತೆಯಿದೆಯಲ್ಲವೇ? ಹಿಂದಿ ತಾಕತ್ತಿನ ಧಮ್ಮಿನ ಭಾರತವನ್ನು ಮುನ್ನಡೆಸುವ ಭಾಷೆಯಾದರೆ ಭಾರತದ ಉಳಿದ ಭಾಷೆಗಳೇನು ಜೀತಕ್ಕಿವೆಯೇ?
ನರೇಂದ್ರ ಮೋದಿಯವರ ಭಾಷಣ ಪಾಂಚಜನ್ಯದ ಮತ್ತೊಂದು ರೂಪವಾಗಿತ್ತು |
ನೂರಾರು ಭಾಷೆಗಳಿರುವ ಒಂದು ದೇಶದ ಪ್ರಧಾನಮಂತ್ರಿ ಮತ್ತು ಆ ಪ್ರಧಾನಮಂತ್ರಿಯವರನ್ನು ಸಾಂಸ್ಕೃತಿಕವಾಗಿ ಬೆಳೆಸಿದ ಒಂದು ಸಂಸ್ಥೆ ಹಿಂದಿ ಹೇರಿಕೆಯನ್ನು ವಿವಿಧ ಭಾವನೆಗಳ ನೆಪದಲ್ಲಿ, ವ್ಯಾಪಾರ ವಹಿವಾಟಿನ ನೆಪದಲ್ಲಿ ಇತರೆ ಭಾಷಿಕರ ಮೇಲೆ ಹೇರಲು ಉತ್ತೇಜನ ನೀಡುತ್ತಾರೆ. ಇದಕ್ಕಿಂತ ದೊಡ್ಡ ದುರಂತವಿದೆಯೇ? ಇವರೇನು ಈ ಹೇರಿಕೆ ಮಾಡುವವರಲ್ಲಿ ಮೊದಲಿಗರಲ್ಲ, ಕೊನೆಯವರೂ ಅಲ್ಲ. ಕಾಂಗ್ರೆಸ್ (ಇದನ್ನೂ ಓದಿ: ಲಜ್ಜೆಗೆಟ್ಟ ಕಾಂಗ್ರೆಸ್ಸಿನಿಂದ ಪಂಚಭಾಷಾ ಪ್ರಣಾಳಿಕೆ), ಬಿಜೆಪಿ (ಇದನ್ನೂ ಓದಿ: ಲಜ್ಜೆಗೆಡುವುದರಲ್ಲಿ ಎಲ್ಲರೂ ಮುಂದು) ಎಂಬ ‘ರಾಷ್ಟ್ರೀಯ’ ಪಟ್ಟ ಕಟ್ಟಿಕೊಂಡ ಪಕ್ಷಗಳೆರಡರ ಮುಖಂಡರುಗಳು ಈ ಹಿಂದಿ ಹೇರಿಕೆಯ ಸಮರ್ಥಕರೇ ಆಗಿದ್ದಾರೆ. ಹಿಂದಿ ದೇಶವನ್ನು ಒಗ್ಗೂಡಿಸುವುದಿರಲಿ, ಇದೇ ರೀತಿಯ ಹೇರಿಕೆಯನ್ನು ಒಂದು ಭಾಷೆ ಶ್ರೇಷ್ಟವೆಂಬ ಸಂಗತಿಯನ್ನು ಇವರು ಪ್ರಚುರಪಡಿಸುತ್ತಲೇ ಸಾಗಿದರೆ ದೇಶವನ್ನೊಡೆಯಲು ಪರದೇಶದವರ ಅವಶ್ಯಕತೆಯೇ ಇಲ್ಲ. ಈ ಹಿಂದಿ ಭಾಷಾಂಧರೇ ಸಾಕು ದೇಶ ಮತ್ತೊಮ್ಮೆ ವಿಭಜನೆಗೊಳ್ಳಲು.
No comments:
Post a Comment