ಉನ್ನತ ಶಿಕ್ಷಣವೀಗ ಖರ್ಚಿನ ಬಾಬತ್ತು. ಸರಕಾರೀ ಸಂಸ್ಥೆಗಳಲ್ಲಿರುವ ಶುಲ್ಕವನ್ನು ಭರಿಸುವುದೇ ಅನೇಕರಿಗೆ ಕಷ್ಟವಾಗಿರುವಾಗ ಖಾಸಗಿ ಸಂಸ್ಥೆಗಳಲ್ಲಿನ ಶುಲ್ಕವನ್ನು ಭರಿಸಿ ಓದುವುದು ದೂರದ ಮಾತೇ ಸರಿ. ಬ್ಯಾಂಕುಗಳೇನೋ 12ರಿಂದ 14% ಬಡ್ಡಿಗೆ ಸಾಲ ನೀಡುತ್ತವೆ. ಆದರೆ ಈ ಸಾಲ ಪಡೆಯಲು ವಿದ್ಯಾರ್ಥಿಯ ಪೋಷಕರ ಬಳಿ ಖಾತರಿಯಾಗಿಡಲು ಆಸ್ತಿ ಪಾಸ್ತಿ ಇರಬೇಕು. ಇಲ್ಲವಾದಲ್ಲಿ ಬ್ಯಾಂಕುಗಳು ಸಾಲ ನೀಡುವುದಿಲ್ಲ. ಎಷ್ಟು ಜನರ ಬಳಿ ಈ ರೀತಿ ಆಸ್ತಿ ಇರಲು ಸಾಧ್ಯ. ಆಸ್ತಿ ವಂಚಿತರು ಕೊನೆಗೆ ಉನ್ನತ ಶಿಕ್ಷಣದಿಂದಲೂ ವಂಚಿತರಾಗುವ ಸಾಧ್ಯತೆ ಅಧಿಕ.
ಇಂತವರಿಗೆ ಸಹಾಯವಾಗಲೆಂಬ ಉದ್ದೇಶದಿಂದ ದೆಹಲಿ ಸರಕಾರ ಹೊಸತೊಂದು ಯೋಜನೆಯನ್ನು ಜಾರಿಗೆ ತಂದಿದೆ. ಪೋಷಕರ ಬಳಿ ಖಾತರಿಯಾಗಿಡಲು ಆಸ್ತಿ ಪಾಸ್ತಿ ಇರದಿದ್ದರೂ ಪರವಾಗಿಲ್ಲ, ವಿದ್ಯಾರ್ಥಿಯ ಸಾಲಕ್ಕೆ ಸರಕಾರವೇ ಗ್ಯಾರಂಟಿ ಕೊಡುತ್ತದೆ! ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆಯನ್ನು ಈಡೇರಿಸಿರುವ ದೆಹಲಿಯ ಆಪ್ ಸರಕಾರ ಹತ್ತು ಲಕ್ಷದವರೆಗಿನ ಸಾಲಕ್ಕೆ ಬ್ಯಾಂಕಿಗೆ ಖಾತರಿಯಾಗುತ್ತಾರೆ. ಆರ್ಥಿಕವಾಗಿ ಹಿಂದುಳಿದು ದುಡ್ಡಿನ ಕೊರತೆಯ ಕಾರಣದಿಂದ ಉನ್ನತ ಶಿಕ್ಷಣಕ್ಕೆ ಸೇರಲಾಗದವರಿಗೆಲ್ಲರಿಗೂ ಈ ಯೋಜನೆಯಿಂದ ಪ್ರಯೋಜನವಾಗಲಿದೆ.
ಈ ಯೋಜನೆ ಸರಕಾರೀ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಓದುತ್ತಿರುವ/ಓದಲು ಬಯಸುವ ವಿದ್ಯಾರ್ಥಿಗಳೆಲ್ಲರಿಗೂ ಲಭ್ಯವಿದೆ. ಸರಕಾರವೇ ಹೇಳುವಂತೆ ಈ ಯೋಜನೆಯ ಯಶಸ್ಸು ಓದು ಮುಗಿಸಿ ಕೆಲಸಕ್ಕೆ ಸೇರುವ ವಿದ್ಯಾರ್ಥಿಗಳ ಮೇಲಿದೆ. ಕೆಲಸ ಸಿಕ್ಕ ಮೇಲೆ ಸಮಯಕ್ಕೆ ಸರಿಯಾಗಿ ಸಾಲ ತೀರಿಸಿದರಷ್ಟೇ ಈ ಯೋಜನೆ ಮುಂದಿನ ವಿದ್ಯಾರ್ಥಿಗಳಿಗೂ ಯಶಸ್ವಿಯಾಗಿ ಮುಂದುವರೆಯುತ್ತದೆ. ಇಲ್ಲವಾದರೆ ಆರ್ಥಿಕ ಹೊರೆಯ ನೆಪವೊಡ್ಡಿ ಮುಂದಿನ ಸರಕಾರಗಳು ಹಂತಹಂತವಾಗಿ ಯೋಜನೆಯನ್ನೇ ಸ್ಥಗಿತಗೊಳಿಸಿಬಿಡಬಹುದು. ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸರಕಾರವೇ ಉತ್ತಮವಾಗಿ ನಡೆಸುವುದು ಅತ್ಯುತ್ತಮ ವ್ಯವಸ್ಥೆ, ಖಾಸಗೀಕರಣವನ್ನು ಸದ್ಯಕ್ಕೆ ತಡೆಯುವ ಉಪಾಯ ಇಲ್ಲದ ಕಾರಣ ಖಾಸಗೀಕರಣದಿಂದ ಹೆಚ್ಚಳವಾದ ಶುಲ್ಕ ಬಡವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ತೊಂದರೆಯುಂಟುಮಾಡಬಾರದೆಂಬ ಉದ್ದೇಶದ ಈ ಯೋಜನೆ ದೆಹಲಿಯಲ್ಲಿ ಯಶಸ್ವಿಯಾಗಲಿ, ದೇಶದೆಲ್ಲೆಡೆ ಇಂತಹ ಯೋಜನೆಗಳು ಜಾರಿಯಾಗಲಿ.
No comments:
Post a Comment