Dr Ashok K R
ಕಳೆದ ಏಪ್ರಿಲ್ಲಿನಲ್ಲಿ ಬಿಳಿಗಿರಿರಂಗನಬೆಟ್ಟಕ್ಕೆ ಹೋಗಿದ್ದೆ. ವಾಪಸ್ಸಾಗುವಾಗ ರಸ್ತೆ ಬದಿಯಲ್ಲಿ ಸ್ಥಳೀಯರೊಬ್ಬರು ಚಕೋತ್ತಾ ಹಣ್ಣು ಮಾರುತ್ತ ಕುಳಿತಿದ್ದರು. ಎರಡು ಚಕೋತ್ತಾ ಹಣ್ಣು ಖರೀದಿಸಿ ಕೆ.ಗುಡಿಯಲ್ಲಿನ ಸಫಾರಿಯ ಬಗ್ಗೆ ವಿಚಾರಿಸುತ್ತಿದ್ದೆ. ಯಾವ್ಯಾವ ಟೈಮಲ್ಲಿ ಸಫಾರಿ ಇರುತ್ತೆ ಎಂದು ಕೇಳುತ್ತಿದ್ದೆ. ಹುಲಿ ಏನಾದ್ರೂ ಸಿಗುತ್ತಾ ಸಫಾರಿಯಲ್ಲಿ ಎಂದು ಕೇಳಿದಾಗ ‘ಈಗ ಬೇಸಿಗೆ ಅಲ್ವಾ ಸರ್. ನೀರು ಕಡಿಮೆ ಇರುತ್ತೆ. ನೀರಿರೋ ಜಾಗದಲ್ಲಿ ಉಪ್ಪು ಸವರಿರುತ್ತಾರೆ. ಉಪ್ಪು ಹುಡಿಕ್ಕೊಂಡು ಬಂದೇ ಬರ್ತಾವೆ’ ಎಂದವನು ಹೇಳಿದ. ಇದು ನಮ್ಮ ಎಕೋ ಟೂರಿಸಮ್ ಹೆಸರಿನ ಪರಿಸರವಾದದ ಪರಿ. ಹೆಚ್ಚಿನ ದುಡ್ಡು ಕೊಟ್ಟವರಿಗಷ್ಟೇ ಸಫಾರಿ ಸೌಲಭ್ಯ. ಸಫಾರಿಗೆ ಬಂದವರು ನಿರಾಶರಾಗಬಾರದು ಎಂಬ ಕಾರಣಕ್ಕೆ ಕೃತಕವಾಗಿ ಪ್ರಾಣಿಗಳನ್ನು ನೀರಿರುವ ಜಾಗಕ್ಕೆ ಕರೆಸುವ ವಿಧಾನ ಪರಿಸರಕ್ಕೆ ಪೂರಕವಾಗಿರಲು ಹೇಗೆ ಸಾಧ್ಯ? ಸರ್ಕಸ್ಸಿನಲ್ಲೂ ಪ್ರಾಣಿಗಳನ್ನು ಮನುಷ್ಯನ ಮನೋರಂಜನೆಗಾಗಿ ಉಪಯೋಗಿಸುತ್ತಾರೆ, ಇಲ್ಲೂ ಅದೇ ನಡೆಯುತ್ತೆ; ಅಲ್ಲದು ಹಿಂಸೆ ಎನ್ನಿಸಿಕೊಂಡರೆ ಇಲ್ಲಿ ಪರಿಸರ ಪ್ರವಾಸೋದ್ಯಮದ ಭಾಗವಾಗಿ ನಡೆಯುತ್ತದೆ. ಸಫಾರಿ ಹೋಗುವ ನಿರ್ಧಾರವನ್ನೇ ತ್ಯಜಿಸಿಬಿಟ್ಟೆ. ಈ ಹುಲಿ ಸಂರಕ್ಷಣೆಯ ಹೆಸರಿನಲ್ಲಿ ನಡೆಯುವ ಪರಿಸರವಾದ ಎಲ್ಲೋ ಒಂದು ಕಡೆ ತಪ್ಪಾಗಿದೆಯಾ ಎನ್ನುವ ಅನುಮಾನ ಅವತ್ತು ಬಂತಾದರೂ ಅದರ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಯೋಚನೆಯೇನು ಬರಲಿಲ್ಲ. ಅವತ್ತು ನನ್ನಲ್ಲಿ ಮೊಳಕೆಯೊಡೆದ ಯೋಚನೆಗಳು ಬೆಳೆದು ಆ ಅಭಿಪ್ರಾಯಗಳಿಗೊಂದು ರೂಪ ದಕ್ಕಲಾರಂಭಿಸಿರುವುದು ಡಾ.ಟಿ.ಎಸ್.ವಿವೇಕಾನಂದರ ಬರಹಗಳ ಸಂಗ್ರಹಗಳಾದ ‘ಭೂಮಿಗೀತೆ’ ಮತ್ತು ‘ಜೀವಪಲ್ಲಟಗಳ ಆತ್ಮಕಥ’ ಕೃತಿಗಳನ್ನು ಓದಿದಾಗ.
2004 – 2005ರಲ್ಲಿ ಪತ್ರಿಕೆಗಳಿಗೆ ಬರೆದ ಲೇಖನಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ. ಅವತ್ತಿನಷ್ಟೇ ಇವತ್ತಿಗೂ ಪ್ರಸ್ತುತವಾಗಿಸುವ ಅಂಶಗಳಿವೆ. ಎರಡೂ ಪುಸ್ತಕಗಳು ಪರಿಸರದ ಬಗ್ಗೆ ಮಾತನಾಡುತ್ತವೆ. ಮಾತನಾಡುತ್ತವೆ ಅನ್ನುವುದಕ್ಕಿಂತ ಅರಿವು ಮೂಡಿಸುತ್ತವೆ ಎನ್ನುವುದು ಸರಿ. ಪರಿಸರವೆಂದರೆ ಗಿಡ ಮರ ಪಕ್ಷಿ ಪ್ರಾಣಿ ಕಾಡು ನದಿ. ಅವುಗಳು ಕೆಡದಂತೆ, ಅಳಿದುಹೋಗದಂತೆ ಮಾಡುವುದೇ ಪರಿಸರವಾದ. ಒಂದು ಗಿಡ ನೆಟ್ಟು, ಹುಲಿ - ಆನೆ ಸಂರಕ್ಷಣೆಗೆ ಕರೆ ನೀಡಿ, ಕೆರೆ – ನದಿ ನೀರನ್ನು ಶುದ್ಧ ಮಾಡಲು ಕೋಟ್ಯಾಂತರ ಖರ್ಚು ಮಾಡುವುದು ನಾವು ದಿನನಿತ್ಯ ನೋಡುವ ಪರಿಸರವಾದ. ಇದ್ಯಾವುದೂ ಪರಿಸರವಾದವೇ ಅಲ್ಲ ಎಂದು ಸಾರಾಸಗಾಟಾಗಿ ವಿವೇಕಾನಂದರು ಸಿಟ್ಟಿನಿಂದ, ವ್ಯಂಗ್ಯದಿಂದ ಹೇಳಿದಾಗ ‘ಈ ಮನುಷ್ಯನಿಗೇನೂ ತಲೆ ಕೆಟ್ಟಿದೆಯಾ? ಇದು ಪರಿಸರವಾದವಲ್ಲದೇ ಹೋದರೆ ಇನ್ಯಾವುದು ಪರಿಸರವಾದ?’ ಎಂಬ ಪ್ರಶ್ನೆ ಮೂಡದೇ ಇರುವುದಿಲ್ಲ. ಇವೆಲ್ಲವೂ ಯಾಕೆ ಪರಿಸರವಾದವಲ್ಲ ಎಂದವರು ವಿವರಿಸುತ್ತ ಸಾಗಿದಾಗ ಹೌದಲ್ವಾ? ನಮಗ್ಯಾಕೆ ಈ ಯೋಚನೆಯೇ ಬಂದಿರಲಿಲ್ಲ ಎಂದನ್ನಿಸಲಾರಂಭಿಸುತ್ತದೆ. ನಮ್ಮ ಎಲ್ಲಾ ಪರಿಸರವಾದದ ಹೋರಾಟಗಳಲ್ಲೇ ಮನುಷ್ಯನೇ ಕಾಣೆಯಾಗಿದ್ದಾನೆ ಎಂಬ ಸಂಗತಿ ಅರಿವಿಗೆ ಬರಲಾರಂಭಿಸುತ್ತದೆ. ಮನುಷ್ಯ ಕೂಡ ಪ್ರಕೃತಿಯ ಒಂದು ಭಾಗವೇ ಹೌದಲ್ಲವೇ? ಮನುಷ್ಯನನ್ನು ಮರೆತು ಯಾವ ಪರಿಸರದ ಬಗ್ಗೆ ನಾವೆಲ್ಲರೂ ಮಾತನಾಡುತ್ತಿದ್ದೇವೆ? ಹುಲಿ ಸಂರಕ್ಷಣೆಯ ಹೆಸರಿನಲ್ಲಿ ಆದಿವಾಸಿಗಳನ್ನು ‘ಅವರು ಪರಿಸರಕ್ಕೆ ಹಾನಿಕಾರಕ’ ಎಂಬ ನೆಪವೊಡ್ಡಿ ಕಾಡಿನಿಂದ ಹೊರಗಟ್ಟುವ ನಗರ ಕೇಂದ್ರಿತ ಸಮಾಜ ಹೆಚ್ಚು ಹಣ ನೀಡಿದವರಿಗೆ ಕಾಡಿಗೆ ಹೋಗಿ ‘ಮಜಾ’ ಮಾಡುವ ಅವಕಾಶ ನೀಡುವುದು ಯಾವ ರೀತಿಯಿಂದ ಪರಿಸರಕ್ಕೆ ಪೂರಕ?
ಈ ರೀತಿಯ ಪ್ರಶ್ನೆಗಳನ್ನು, ಪರಿಸರವಾದದ ಗೊಂದಲಗಳನ್ನು ಪದಪುಂಜಗಳಿಂದ ಅಲಂಕರಿಸಿ ಓದುಗನನ್ನು ಭಾವನಾತ್ಮಕವಾಗಿ ಸೆಳೆಯುವ ಪ್ರಯತ್ನವಿಲ್ಲದಿರುವುದೇ ಈ ಪುಸ್ತಕಗಳ ಹಿರಿಮೆ. ಇಲ್ಲಿ ಕರಾರುವಾಕ್ ಅಂಕಿ ಸಂಖೈಗಳಿವೆ. “ಭಾರತದಲ್ಲಿ ಸಮಾಜ ವಾದ ಅಥವಾ ‘ಸಮತಾ ವಾದಗಳು’ ಬೇಕಾದರೆ ‘ವಾದ’ಗಳಾಗಿ ನಿಲ್ಲಬಹುದೇ ವಿನಯ ‘ಪರಿಸರ’ ಎಂದೂ ‘ವಾದ’ವಾಗಲು ಸಾಧ್ಯವಿಲ್ಲ. ಯಾವುದು ಆಚರಣೆ ಬರದಿದ್ದರೂ ಚಿಂತೆ ಇಲ್ಲವೋ ಅದು ‘ವಾದ’ ಆಗುತ್ತದೆ. ಇಂತಲ್ಲಿ ಪರಿಸರ ‘ವಾದ’ ಆಗಲು ಹೇಗೆ ಸಾಧ್ಯ? ಅದು ಆಚರಣೆಯಾಗಬೇಕಿತ್ತು” ಎಂದು ನೇರವಾಗಿ ಹೇಳುತ್ತಾರೆ (ಪರಿಸರವಾದ ಎಂಬ ಸಾಂಸ್ಕೃತಿಕ ರಾಜಕೀಯ). ಸಾಮಾನ್ಯವಾಗಿ ಪರಿಸರದ ವಿಷಯದ ಬಗ್ಗೆ ಚರ್ಚೆ ಮಾತು ಬರಹಗಳು ಸಾಗಿದಾಗ ಅಲ್ಲಿ ಜಾತಿ ಪ್ರವೇಶ ಪಡೆಯುವುದು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ವರ್ಗ ಬೇಧದ ಚರ್ಚೆಗಳೂ ಇರುವುದಿಲ್ಲ. ಇವೆರಡೂ ಪುಸ್ತಕಗಳು ಈ ಆಧುನಿಕ ಪರಿಸರವಾದ ಹೇಗೆ ಮೇಲ್ವರ್ಗದವರು - ಮೇಲ್ಜಾತಿಯವರು ಆದಿವಾಸಿಗಳ ಬದುಕುವ ನೆಲೆಯನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ವಿವರಿಸುತ್ತದೆ. ಅಡುಗೆ ಮಾಡಲು ಸೌದೆ ಪುಳ್ಳೆ ಆರಿಸಿಕೊಳ್ಳುವ ಆದಿವಾಸಿ ಮಹಿಳೆ ಹೇಗೆ ತಾನೇ ಪರಿಸರಕ್ಕೆ ಅಪಾಯಕಾರಿ? ಈ ಆದಿವಾಸಿಗಳನ್ಯಾಕೆ ಕಾಡಿನಿಂದ ತೆರವು ಮಾಡಿಸಬೇಕು? ಈ ಆದಿವಾಸಿಗಳ ಮನೆಗಳಲ್ಲಿ ಬೆಲೆಬಾಳುವ ಮರಗಳ ಕುರ್ಚಿ ಮೇಜುಗಳಿವೆಯಾ? ಅವರ ಮನೆಯಲ್ಲಿ ಹುಲಿಯ ಚರ್ಮ, ಜಿಂಕೆಯ ಕೊಂಬುಗಳಿವೆಯಾ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಆದಿವಾಸಿಗಳು ಮರಮಟ್ಟು ಕಡಿಯುತ್ತಿದ್ದರೂ ಅವರಿಗಾಗಿ ಕಡಿಯುವುದಿಲ್ಲ, ನಗರವಾಸಿ ಮೇಲ್ಜಾತಿ – ಮೇಲ್ವರ್ಗದ ಜನರ ಶೋಕಿಗಾಗಿ ಪುಡಿಗಾಸಿಗಾಗಿ ಕಡಿದಿರುತ್ತಾರೆ ಎಂಬಂತಹ ವಿಷಯಗಳ ಸತ್ಯಾಸತ್ಯತೆಯನ್ನು ಅರಿಯಲು ಸುಮ್ಮನೆ ನಮ್ಮ ಮನೆಯ ಬಾಗಿಲು – ಕಿಟಕಿ – ಕುರ್ಚಿ – ಮೇಜುಗಳ ಮೇಲೆ ಕಣ್ಣಾಡಿಸಿದರೆ ಸಾಕು.
“ದೀಪದ ಕೆಳಗಿನ ಕತ್ತಲಿನಂತೆ ಸಂಪನ್ಮೂಲ ಪ್ರದೇಶದ ಜನ ಅಲ್ಲಿನ ಸಂಪನ್ಮೂಲಗಳಿಂದ ಹೊರತಳ್ಳಲ್ಪಡುತ್ತಾರೆ. ಯಾವುದೋ ಹೆಸರಿನಲ್ಲಿ, ಮತ್ಯಾರಿಗೋ ಇಲ್ಲಿನ ಸಂಪನ್ಮೂಲ ಬಿಸಾಕು ಬೆಲೆಗೆ ಮಾರಾಟವಾಗುತ್ತದೆ. ಸ್ಥಳೀಯರು ಪರಕೀಯರಾಗಿ, ಪರಕೀಯರು ಸ್ಥಳೀಯರನ್ನು ಆಳುವಂತಾಗುತ್ತದೆ” (ಸಗಣಿ ಮಾರಿದರೆ ಪರಿಸರ ವಿರೋಧಿ, ಸಾಫ್ಟ್ ವೇರ್ ಮಾರಿದರೆ) ಜೀವಪಲ್ಲಟಗಳ ಆತ್ಮಕಥನದಲ್ಲಿ ಪರಿಸರದ ಜೊತೆಜೊತೆಗೆ ಕರೆಂಟಿನ ಖಾಸಗೀಕರಣ, ಸಗಣಿ ಮಾರಾಟದ ಹಿಂದಿನ ಜಾತಿ ರಾಜಕೀಯ, ಕಚರನೇ ಸಿಕ್ಸರ್ ಹೊಡೆದಿದ್ದರೆ ‘ಲಗಾನ್’ಗೆ ಏನಾಗುತ್ತಿತ್ತು? ಎನ್ನುವಂತಹ ಸಾಂಸ್ಕೃತಿಕ ಪ್ರಶ್ನೆ, ಇಂಗ್ಲೀಷ್ ಕಲಿಕೆಯ ಬಗ್ಗೆ ಸುಳ್ಳನ್ನಾಡುವ ‘ಕನ್ನಡ’ ಕಂದಮ್ಮಗಳ ಬಗ್ಗೆಯೆಲ್ಲ ವಸ್ತುನಿಷ್ಟವಾಗಿ ಬರೆಯಲಾಗಿದೆ. “1983 – 1992ರವರೆಗೆ ಜಾರಿಯಲ್ಲಿದ್ದ ಸಾಮಾಜಿಕ ಅರಣ್ಯ ಯೋಜನೆಯಡಿಯಲ್ಲಿ ಇವರು ಬೆಳೆಸಿದ ನೆಡುತೋಪು 417 ಚ.ಕಿಮೀ, ಇದಕ್ಕೆ ವಿಶ್ವಬ್ಯಾಂಕ್ ಮತ್ತು ಓಡಿಎ ಇಂದ ಪಡೆದ ಸಾಲ ರೂ 93 ಕೋಟಿ. ಸಾರ್ವಜನಿಕರಿಗೆ ಹಂಚಿದ ಸಸಿಗಳ ಮೊತ್ತ 50.75 ಕೋಟಿ. ಇದರಲ್ಲಿ 75 ಲಕ್ಷ ಸಸಿಗಳನ್ನು ಬಿಟ್ಟು ಬಿಟ್ಟರೂ…., ಹೆಕ್ಟೇರಿಗೆ 100 ಸಸಿಗಳಂತೆ ಈ ರಾಜ್ಯದ ನೆಲಕ್ಕೆ ನಾಟಿ ಮಾಡಿದ್ದರೂ ಕನಿಷ್ಟ 50 ಲಕ್ಷ ಚ.ಕಿಮೀ ಹೊಸ ಕಾಡು ಸೃಷ್ಟಿಯಾಗಿರಬೇಕಿತ್ತು. ಈ ಯೋಜನೆ ಆರಂಭವಾದ ಅವಧಿಯಿಂದ ಇಂದಿನವರೆಗೆ 20 ವರ್ಷಗಳು ಮುಗಿದಿರುವುದರಿಂದ ಬಹುದೊಡ್ಡ ಮರಗಳ ಕಾಡು ಕಣ್ಣಿಗೆ ಕಾಣಬೇಕಿತ್ತು” (ಅಲ್ಲಿ ಹುಲಿಗಳು ಕಾಣೆಯಾದರೆ ಇಲ್ಲಿ ಕಾಡುಗಳೇ ಕಾಣೆ) ಎನ್ನುವಂತಹ ವಿವರಗಳು ಹೇಗೆ ನಮ್ಮ ಪರಿಸರಪರ ಯೋಜನೆಗಳು ದುಡ್ಡು ಮಾಡುವ ದಂಧೆಗಳಾಗಿವೆ ಎನ್ನುವುದನ್ನು ತಿಳಿಸಿಕೊಡುತ್ತದೆ. ನೀರು ಕೂಡ ವ್ಯವಹಾರವಾಗಿಬಿಡುತ್ತಿರುವ ಅಪಾಯದ ಬಗ್ಗೆ 2004ರಲ್ಲಿ ಬರೆದಿದ್ದಾರೆ ವಿವೇಕಾನಂದ. ಇಂದು ಆ ವಾಸ್ತವವನ್ನು ನಾವು ನೋಡುತ್ತಿದ್ದೇವೆ, ಅನುಭವಿಸುತ್ತಿದ್ದೇವೆ. ಹಣವಿಲ್ಲದ ಕಾರಣಕ್ಕೆ ನೀರೂ ದಕ್ಕದ ಪರಿಸ್ಥಿತಿ ಕೊನೆಗೆ ಕಾಡುವುದು ಮೇಲ್ಜಾತಿ – ಮೇಲ್ವರ್ಗದವರಿಗಲ್ಲ ಎಂಬ ವಾಸ್ತವ ಪರಿಸರವಾದಕ್ಕೂ ಮತ್ತು ನಮ್ಮ ಜಾತಿ ವ್ಯವಸ್ಥೆಗೂ ಇರುವ ಸಂಬಂಧವನ್ನು ಅನಾವರಣಗೊಳಿಸುತ್ತದೆ.
ನೀರು ಕಾಡು ಪರಿಸರದ ಬಗೆಗಿನ ಮಾತುಗಳೆಲ್ಲವೂ ಸರಿಯೇ, ಆದರಾ ಯೋಚನೆ – ಯೋಜನೆಗಳು ಮನುಷ್ಯನನ್ನು ಹೊರತುಪಡಿಸಿದ್ದಾದರೆ ಅದು ಶೋಷಿತ ವರ್ಗಕ್ಕೂ ಅಪಾಯಕಾರಿ, ಪರಿಸರಕ್ಕೂ ಅಪಾಯಕಾರಿ. ಈ ಎರಡೂ ಪುಸ್ತಕಗಳನ್ನು ಓದಿ ಮುಗಿಸುವ ಸಂದರ್ಭದಲ್ಲಿ ಎರಡು ವರದಿಗಳನ್ನು ಪತ್ರಿಕೆಗಳಲ್ಲಿ ಓದಿದೆ. ಒಂದು ಮಂಗಳ ಗ್ರಹದಲ್ಲಿ ನೀರಿರುವ ಅಂಶ ಪತ್ತೆಯಾಗಿದೆಯೆಂಬ ವರದಿ. ಇರುವ ಭೂಮಿಯ ನೀರನ್ನೇ ನೆಟ್ಟಗೆ ಉಪಯೋಗಿಸಲಾಗದೆ, ಖಾಸಗಿಯವರ ಕೈಗೆ ಒಪ್ಪಿಸಿ ಕುಲಗೆಡಿಸಿರುವ ನಮ್ಮ ಮುಂದಿನ ಯೋಜನೆ ಮಂಗಳದ ಅಂಗಳದಲ್ಲಿರುವ ನೀರನ್ನು ಖಾಸಗೀಕರಣಗೊಳಿಸುವುದೇ? ಇನ್ನೊಂದು ವರದಿ ದೇಶದ ರಾಷ್ಟ್ರೀಯ ಹೆದ್ದಾರಿಗಳ ಮಧ್ಯದಲ್ಲಿ, ಇಕ್ಕೆಲದಲ್ಲಿ ಕೋಟ್ಯಾಂತರ ಮರ ನೆಡುವ ‘ಪರಿಸರವಾದಿ’ ಯೋಜನೆ. ಊರಗಲದ ರಸ್ತೆಗಳನ್ನು ಕಟ್ಟಿದ್ದೇ ನಗರವಾಸಿಗಳ ಅನುಕೂಲಕ್ಕಾಗಿ, ಆ ನಗರವಾಸಿಗಳು ಓಡಾಡಲು ತಂಪಾಗಿರಲೆಂದು ಮರಗಳನ್ನು ಬೆಳೆಸಲು ಯೋಚಿಸುವ ಸರಕಾರ, ಎಂತಹ ಅದ್ಭುತ ಯೋಜನೆ ಎಂದು ಹೊಗಳುವ ನಾವು….. ಕೊನೆಗೆ ಆ ಕೋಟ್ಯಾಂತರ ಮರಗಳಲ್ಲಿ ಉಳಿಯುವ ಮರಗಳೆಷ್ಟು? ಕೋಟ್ಯಾಂತರ ರುಪಾಯಿಯ ವ್ಯವಹಾರದಿಂದ ಲಾಭವ್ಯಾರಿಗೆ? ಈ ಎರಡೂ ಪುಸ್ತಕಗಳನ್ನು ಓದದಿದ್ದರೆ ಪರಿಸರಕ್ಕೇ ಲಾಭವಲ್ಲವೇ ಎಂದು ಸರಳವಾಗಿ ಉತ್ತರಿಸಿಬಿಡುತ್ತಿದ್ದೆ. ಈಗ ಸಾಧ್ಯವಾಗುವುದಿಲ್ಲ; ಪುಸ್ತಕ ನೀಡಿದ ಹೊಸ ಹೊಸ ಹೊಳಹುಗಳು ಪರಿಸರ ಪ್ರಜ್ಞೆ ಎಂಬುದನ್ನು ಮತ್ತೆ ಅ ಆ ಇ ಈ ಯಿಂದ ಕಲಿಯುವಂತೆ ಪ್ರೇರೇಪಿಸಿದೆ. ಗಿಡ ನೆಡುವ ಪರಿಸರ ಪ್ರೇಮಿ ನೀವಾಗಿದ್ದಲ್ಲಿ ತಪ್ಪದೇ ಈ ಎರಡೂ ಪುಸ್ತಕಗಳನ್ನು ಓದಿ.
ಪ್ರಕಾಶಕರು:
ತೇಜಸ್ವಿ ಪ್ರಕಾಶನ, ಬೆಂಗಳೂರು.
ಭೂಮಿಗೀತೆ – ಬೆಲೆ: 250/-
ಜೀವಪಲ್ಲಟಗಳ ಆತ್ಮಕಥನ – ಬೆಲೆ: 150
ಪ್ರತಿಗಳಿಗಾಗಿ ಸಂಪರ್ಕಿಸಿ:
ಬಾಲು – 9986833515
ಶೇಖರ್ ಬಾಬು - 9845353868