ವ್ಯವಸಾಯ ಬಿಡಿ, ಮನೆಯಲ್ಲಿ ಪುಟ್ಟ ಕುಂಡದಲ್ಲಿ ಒಂದು ಗಿಡ ಬೆಳೆಸುವ ಆಸಕ್ತಿ ನಿಮ್ಮಲ್ಲಿದ್ದರೆ ಮೊದಲ ಹಂತದಲ್ಲೇ ನಿರಾಶೆಯಾಗಿಬಿಡುತ್ತೀರಿ. ಕಾರಣ, ದುಡ್ಡು ಕೊಟ್ಟು ಕೊಂಡು ತಂದ ಬೀಜಗಳು ಮೊಳಕೆಯೊಡೆಯುವ ಆಸಕ್ತಿ ತೋರಿಸದೆ ಮಣ್ಣಿನಲ್ಲೊಂದಾಗಿ ಗೊಬ್ಬರವಾಗಿಬಿಡುವುದು! ಬೀಜವೆಂಬುದು ದೊಡ್ಡ ಉದ್ಯಮವಾಗಿಬಿಟ್ಟಿದೆ. ಬಹಳಷ್ಟು ಬೀಜಗಳ ಮೇಲೆ 'ವಿಷ ಸಿಂಪಡಿಸಲಾಗಿದೆ' ಎಂದು ದೊಡ್ಡಕ್ಷರಗಳಲ್ಲಿ ಬರೆದಿರುತ್ತಾರೆ. ವಿಷದ ಬೀಜ ಬಿತ್ತಿ ವಿಷವಿಲ್ಲದೆ ಬೆಳೆದು ವಿಷಮುಕ್ತ ಆಹಾರ ತಿನ್ನಲು ಸಾಧ್ಯವಾಗುವುದಿಲ್ಲ. ಬೀಜ ಶೇಖರಿಸುವ, ಶೇಖರಿಸಿಕೊಂಡ ಬೀಜವನ್ನು ನೆರೆಹೊರೆಯವರಲ್ಲಿ ಹಂಚಿಕೊಳ್ಳುವ ಪ್ರವೃತ್ತಿ ಮಾಯವಾಗುವುದಕ್ಕೆ ಉದ್ದಿಮೆದಾರರು ಎಷ್ಟು ಕಾರಣರೋ ರೈತರೂ ಅಷ್ಟೇ ಕಾರಣ. ಬೀಜ ಶೇಖರಿಸುವ, ಒಣಗಿಸುವ, ಕೆಡದಂತೆ ನೈಸರ್ಗಿಕವಾಗಿ ಸಂಗ್ರಹಿಸಿಡುವ ಶ್ರಮಕ್ಕಿಂತ ಹಣ ಕೊಟ್ಟು ಬೀಜ ತರುವುದು ಸುಲಭದ ಕೆಲಸ. ಹೀಗೆ ಹಣ ಕೊಟ್ಟು ತರುವ ಬೀಜದ ಗುಣಮಟ್ಟದ ಅರಿವಿರುವುದಿಲ್ಲ, ಅದು ಬೆಳೆಯುವಾಗ ಅನುಭವಿಸುವ ತೊಂದರೆಗಳ ಅರಿವಿರುವುದಿಲ್ಲ.
|
ಮಂಡ್ಯದಲ್ಲಿ ನಡೆದ ಬೀಜ ಜಾತ್ರೆ |
ಹಳೆಯ ಪದ್ಧತಿಯ ಬೀಜ ಹಂಚುವಿಕೆಯನ್ನು, ವಿಷಮುಕ್ತವಾದ ಬೀಜಗಳನ್ನು ಸಂಗ್ರಹಿಸುವ, ಕಡಿಮೆ ಬೆಲೆಗೆ ಮಾರುವ ವೇದಿಕೆ ಸೃಷ್ಟಿಸುತ್ತಿರುವುದು 'ಸಹಜ ಸಮೃದ್ಧಿ' ಬಳಗ. ಹದಿನೈದು ವರುಷಗಳಿಂದ ವಿಧವಿಧದ ತಳಿಗಳನ್ನು ಉಳಿಸಿಕೊಳ್ಳುವುದಕ್ಕೆ ಪ್ರೋತ್ಸಾಹ ನೀಡುತ್ತಾ ವರುಷವಿಡೀ ದೇಶದ ಹತ್ತಲವು ಭಾಗಗಳಲ್ಲಿ ಬೀಜ ಮೇಳ ನಡೆಸುತ್ತಿದೆ. ಆಗಸ್ಟ್ 8 ಮತ್ತು 9ರಂದು ಮಂಡ್ಯದ ಗುರುಭವನದಲ್ಲಿ ಬೀಜ ಮೇಳ ಆಯೋಜಿಸಲಾಗಿತ್ತು. ಸಾವಯವ ಬೀಜಗಳು ಮತ್ತು ಸಾವಯವ ಪದ್ಧತಿಯಿಂದ ಬೆಳೆದ ಬೆಳೆಗಳನ್ನು ಮಾರಲು ಇಲ್ಲಿ ಅವಕಾಶ ಕಲ್ಪಿಸಲಾಗಿತ್ತು.
|
ಉತ್ಸಾಹದಿಂದ ಅನುಭವ ಹಂಚಿಕೊಳ್ಳುತ್ತಿದ್ದ ರೈತರು |
ಜೊತೆಗೆ ಸಾವಯವ ರೈತರು ತಮ್ಮ ತಮ್ಮ ಅನುಭವಗಳನ್ನು ಸಹೋದ್ಯೋಗಿಗಳೊಡನೆ ಹಂಚಿಕೊಳ್ಳುತ್ತಿದ್ದರು. ಪಿರಿಯಾಪಟ್ಟಣ, ಬೆಳಗಾವಿ, ಹುಬ್ಬಳ್ಳಿಯ ಕಡೆಯಿಂದೆಲ್ಲ ಬಂದಿದ್ದ ರೈತರು ಸಾವಯವ ಉತ್ಪನ್ನಗಳನ್ನು ಮಾರುತ್ತಿದ್ದರು. ಮಂಡ್ಯದ ಕಿರುಗಾವಲಿನ ಘನಿ ಬರೋಬ್ಬರಿ ಏಳೂನೂರ ಐವತ್ತಕ್ಕೂ ಅಧಿಕ ರೀತಿಯ ಭತ್ತದ ತಳಿಗಳೊಡನೆ ಮಿಂಚುತ್ತಿದ್ದರು. ಭಾರತದಷ್ಟೇ ಅಲ್ಲದೇ ವಿದೇಶೀ ತಳಿ ಭತ್ತಗಳೂ ಅವರ ಬತ್ತಳಿಕೆಯಲ್ಲಿವೆ. ವಿದೇಶಿ ತಳಿಗಳೆಂದರೆ ಹೈಬ್ರಿಡ್ ಅಲ್ಲ! ವಿದೇಶಿ ಸಾವಯವ ತಳಿಗಳು.
ಇನ್ನು ಆವರಣದಲ್ಲಿ ಎಲ್ಲಾ ರೀತಿಯ ಸೊಪ್ಪು, ತರಕಾರಿ ಬೀಜಗಳು ಲಭ್ಯವಿದ್ದವು, ಹೊರಗೆ ಸಿಗುವ ಹೈಬ್ರಿಡ್ಡಿಗಿಂತ ಕಡಿಮೆ ಬೆಲೆಗೆ. ಜನರು ಹೆಚ್ಚು ಮುತ್ತಿಕೊಂಡಿದ್ದು ಮಾತ್ರ ಹಪ್ಪಳ, ಸಂಡಿಗೆ ಮಾರಾಟ ಮಾಡುತ್ತಿದ್ದ ಅಂಗಡಿಯ ಮುಂದೆ! ಅಂಗಡಿಗಳಲ್ಲಿ ಕಾಣಸಿಗದ ಕಪ್ಪು ಬೆಲ್ಲಗಳು ಇಲ್ಲಿ ಲಕಲಕ ಹೊಳೆಯುತ್ತಿದ್ದವು. ಅಂಗಡಿಯ ಬಿಳಿ ಬೆಲ್ಲಗಳು ರಾಸಾಯನಿಕಗಳ ಮುದ್ದೆ ಎಂಬುದು ತಿಳಿದಿದ್ದರೂ ಅದಕ್ಕೇ ಮಾರು ಹೋಗುತ್ತೇವೆ ನಾವು.
|
750ಕ್ಕೂ ಅಧಿಕ ಭತ್ತದ ತಳಿಯೊಂದಿಗೆ ಘನಿ ಮತ್ತು ತಂಡ. |
ಸಾವಯವ ಪದ್ಧತಿಯ ಬಗೆಗೆ ವಿವಿಧ ರೈತರು ಬರೆದ ಪುಸ್ತಕಗಳೂ ಲಭ್ಯವಿದ್ದವು. ವಿಷದ ಉಪಯೋಗವನ್ನು ಕಡಿಮೆಗೊಳಿಸಿ ಸಾವಯವ ಪದ್ಧತಿಯ ಕೃಷಿ ಹೆಚ್ಚಾಗುವುದಕ್ಕೆ ರೈತರ ಶ್ರಮವೊಂದೇ ಸಾಲದು. ಕಂಪನಿಗಳ ವಕ್ತಾರನಂತೆ ವರ್ತಿಸುವ ಕೃಷಿ ಇಲಾಖೆ ತನ್ನ ನೀತಿ ನಿಯಮಗಳನ್ನು ಅಮೂಲಾಗ್ರವಾಗಿ ಬದಲಿಸಿಕೊಳ್ಳಬೇಕು. ಗ್ರಾಹಕರು ಸಾವಯವ ಪದ್ಧತಿಯಲ್ಲಿ ಬೆಳೆದ ಉತ್ಪನ್ನಗಳನ್ನು ಉಪಯೋಗಿಸುವುದನ್ನು ಹೆಚ್ಚು ಮಾಡಬೇಕು. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಸಹಜವಾಗಿ ಕೃಷಿಕರೂ ಕೂಡ ಸಾವಯವ ಪದ್ಧತಿಯತ್ತ ಆಸಕ್ತಿ ವಹಿಸುತ್ತಾರೆ. ಇವೆಲ್ಲದರ ಜೊತೆಗೆ ಸಾವಯವದ ಹೆಸರಿನಲ್ಲಿ ಹೆಚ್ಚುತ್ತಿರುವ ನಕಲಿಗಳನ್ನು ಕಂಡು ಹಿಡಿಯುವ ಕೆಲಸವೂ ದೊಡ್ಡ ಮಟ್ಟದಲ್ಲಿ ಆಗಬೇಕು.
No comments:
Post a Comment