ಇದು ನನ್ನ “ನಮ್ಮ ನಡುವಿನ ತೇಜಸ್ವಿ” ಪುಸ್ತಕದ ಒಂದು ಅಧ್ಯಾಯ (2010 ಹಂಪಿ ವಿ.ವಿ. ಪ್ರಕಟನೆ). ರೈತರ ಸರಣಿ ಆತ್ಮಹತ್ಯೆಗಳ ಈ ಸಮಯದಲ್ಲಿ ತೇಜಸ್ವಿಯವರು ಮತ್ತೆ ನೆನಪಾದರು. - ಪ್ರಸಾದ್ ರಕ್ಷಿದಿ
97ನೇ ಇಸವಿಯ ಸುಮಾರಿಗೆ ಒಂದುದಿನ ಚಿಕ್ಕಮಗಳೂರಿಗೆ ಹೋದವನು ಹಿಂದಿರುಗುವಾಗ ಮೂಡಿಗೆರೆಯಲ್ಲಿ ಇಳಿದೆ. ಸಕಲೇಶಪುರದತ್ತ ಹೋಗುವ ಬಸ್ಸಿಗಾಗಿ, ಬಸ್ಟ್ಯಾಂಡಿನಲ್ಲಿ ಕಾಯುತ್ತ ಕುಳಿತಿದ್ದೆ, ನಾರಾಯಣಗೌಡ ನನ್ನಮುಂದೆ ತನ್ನ ಬೈಕನ್ನು ತಂದು ನಿಲ್ಲಿಸಿದ.
ಈತ ಹೈಸ್ಕೂಲಿನಲ್ಲಿ ನನ್ನ ಸಹಪಾಠಿ. ನಂತರ ಕೆಲವು ವರ್ಷ ದೂರಾಗಿದ್ದೆವಾದರೂ ರೈತಸಂಘ ಮತ್ತೆ ನಮ್ಮನ್ನು ಹತ್ತಿರ ತಂದಿತ್ತು. ಗೆಳೆತನ ಮತ್ತೊಮ್ಮೆ ಮುಂದುವರಿಯಿತು. ನಾರಾಯಣಗೌಡ ಮೂಡಿಗೆರೆಯ ಪಕ್ಕದ ಬಣಕಲ್ ಎಂಬ ಊರಿನವನು. ಅಲ್ಲೇ ಅವನಿಗೆ ಒಂದಷ್ಟು ಗದ್ದೆ -ತೋಟವೂ ಇದೆ. ಸಾಕಷ್ಟು ಅನುಕೂಲವಿದ್ದವನು. ಎಪ್ಪತ್ತರ ದಶಕದ ಆದಿಬಾಗದಲ್ಲೇ ಒಂದು ಸೆಕೆಂಡ್ ಹ್ಯಾಂಡ್ ಜಾವಾ ಬೈಕನ್ನು ಖರೀದಿಸಿದ್ದ. ಅದನ್ನು ಕಾಡು, ಗುಡ್ಡ, ಗದ್ದೆ ಎಲ್ಲೆಂದರಲ್ಲಿ ಓಡಿಸುತ್ತಿದ್ದ. ಗದ್ದೆಗೆ ಗೊಬ್ಬರ ಸಾಗಿಸುವುದರಿಂದ ಹಿಡಿದು ದನಗಳಿಗೆ ಹುಲ್ಲು ತರಲೂ ಅದನ್ನೇ ಬಳಸುತ್ತಿದ್ದ. ಚಿಕ್ಕಮಗಳೂರು-ಶಿವಮೊಗ್ಗದವರೆಗೂ ಅದರಲ್ಲೇ ಸಂಚರಿಸುತ್ತಿದ್ದ. ಆಗಲೇ ಇವನಿಗೆ ‘ಬೈಕ್ ನಾರಾಯಣಗೌಡ’ ಎಂದ ಅಭಿದಾನ ಪ್ರಾಪ್ತವಾಗಿತ್ತು. ಬೈಕನ್ನು ಎಲ್ಲೆಂದರಲ್ಲಿ ನಿಲ್ಲಿಸಿ ರಿಪೇರಿ ಮಾಡುವ ಕಲೆ ನಾರಾಯಣ ಗೌಡನಿಗೆ ಕರಗತವಾಗಿತ್ತು. ಅದು ಹೇಗೋ ತೇಜಸ್ವಿಯವರೊಂದಿಗೆ ಈತನಿಗೆ ಸಂಪರ್ಕವಿತ್ತು. ಕೆಲವುಬಾರಿ ಅವರಲ್ಲಿಗೆ ಈತ ಹೋಗಿಬರುತ್ತಿದ್ದ. ಇದನ್ನೇ ನೆಪವಾಗಿಟ್ಟುಕೊಂಡು ಸಂದರ್ಭ ಸಿಕ್ಕಿದಾಗಲೆಲ್ಲ, ತೇಜಸ್ವಿಯವರಿಗೆ ಸ್ಕೂಟರ್ ರಿಪೇರಿಯನ್ನು ತಾನೇ ಹೇಳಿಕೊಟ್ಟುದ್ದಾಗಿ ರೀಲು ಬಿಡುತ್ತಿದ್ದ!.
ನಾರಾಯಣ ಗೌಡ ನನ್ನನ್ನುದ್ದೇಶಿಸಿ “ಎತ್ಲಾಗೋ ಮಾರಾಯ” ಎಂದ.
“ಚಿಕ್ಮಗ್ಳೂರಿಗೋಗಿದ್ದೆ, ಈಗ ಊರಿಗೆ” ಎಂದೆ.
“ಬಾ ಇಲ್ಲೇ ತೇಜಸ್ವಿ ಮನೆತಂಕ ಹೋಗ್ಬರೋಣ ಬಾ” ಎಂದು ಕರೆದ.
ನನಗೆ ಅವನೊಂದಿಗೆ ಹೋಗುವ ಮನಸ್ಸಾದರೂ. ಆಗಲೇ ಸಂಜೆ ನಾಲ್ಕಾಗುತ್ತ ಬಂದಿತ್ತು. ಬಸ್ಸು ತಪ್ಪಿದರೆ ಎಂಬ ಚಿಂತೆಯಾಯಿತು. ನಾನು ಬರುವುದಿಲ್ಲ ನೀನೆ ಹೋಗಿ ಬಾ ಎಂದೆ.
“ನನಿಗೆ ಒಬ್ನೇ ಹೋಗಕ್ಕೆ ಬೇಜಾರು, ಅಲ್ಲದೇ ಒಬ್ನೇ ಹೋದ್ರೆ ಮಾರಾಯ ಅವ್ರು ತುಂಬ ಹೊತ್ತು ಮಾತಾಡ್ತ ಕೂತ್ಕಂಡ್ಬಿಡ್ತಾರೆ, ಆಮೇಲ್ ಪಜೀತಿ, ಇಬ್ರಾದ್ರೆ ಏನಾರಹೇಳಿ ಬೇಗ ಹೊರಡ್ಬೋದು ಬಾ” ಎಂದ. ಅವನು ಹೇಳಿದ ದಾಟಿ ತೇಜಸ್ವಿಯವರಿಗೆ ಇವನಂತಹ ಆತ್ಮೀಯ ಸ್ನೇಹಿತ ಇನ್ನೊಬ್ಬರಿಲ್ಲ ಎನ್ನುವಂತಿತ್ತು.
ಈತನ ಮಾತಿನ ಬಗ್ಗೆ ನನಗೇನೋ ಅನುಮಾನವಾಯಿತು. ಆದ್ದರಿಂದ ತಪ್ಪಿಸಿಕೊಳ್ಳಲು ನೆಪಹುಡುಕುತ್ತಾ “ನಾನೀಗ ಅಲ್ಲಿಗೆ ಬಂದು ಐದು ಗಂಟೆ ಬಸ್ ತಪ್ಪಿದ್ರೆ ನಾನಿಲ್ಲೇ ಬಾಕಿ” ಎಂದೆ.
“ಬಾ ಅಮೇಲೆ ನಮ್ಮೂರಿಗೋಗಾಣ, ನಾಳೆ ನಾನು ಆಕಡೆ(ಸಕಲೇಶಪುರ) ಬರೋದಿತ್ತು ಜೊತೆಲೇ ಹೋಗಣ” ಎಂದು ಗಂಟುಬಿದ್ದ. ನನಗೆ ಇವತ್ತು ಊರಿಗೆ ಹೋಗಲೇ ಬೇಕೆಂದೂ ನಾಳೆ ಬೆಳಗ್ಗೆ ಮುಖ್ಯವಾದ ಕೆಲಸವಿರುವುದರಿಂದ ನಿಮ್ಮೂರಿಗೆ ಬಂದು ಉಳಿಯಲು ಸಾಧ್ಯವಿಲ್ಲವೆಂದು ಹೇಳಿದೆ.
“ಸರಿ ಹಂಗಾದ್ರೆ ಇವತ್ತೆ ನಾನು ಸಕಲೇಶಪುರಕ್ಕೆ ಬರ್ತೀನಿ, ನಿನ್ನ ಊರೀಗೇ ಬಿಡ್ತೀನಲ್ಲ ಬಾ, ಹೆಂಗೂ ನಿಂಗೆ ಬಸ್ ಚಾರ್ಜ್ ಉಳಿಯುತ್ತಲ್ಲ ಅದು ದಾರೀಲಿ ಹಾನುಬಾಳಲ್ಲಿ ಸಾಯಂಕಾಲದ ಖರ್ಚಿಗಾಯ್ತು” ಎಂದು ಎಳೆದು ಬೈಕ್ ಹತ್ತಿಸಿದ. “ನಾಲ್ಕು ರುಪಾಯಿ ಉಳಿಸಿಕೊಟ್ಟು ನಲವತ್ತು ರುಪಾಯಿ ಖರ್ಚುಮಾಡ್ಸೋ ಐಡಿಯಾ ಹಾಕ್ಬೇಡ, ನಿನಗಾಗಿ ಬರ್ತೀನೀ ಆದರೆ ಸಾಯಂಕಾಲದ ಖರ್ಚೆಲ್ಲ ನಿಂದೇ” ಎನ್ನುತ್ತಾ ಅವನೊಂದಿಗೆ ಹೊರಟೆ.
ನಾನೂ ತೇಜಸ್ವಿಯವರನ್ನು ಭೇಟಿ ಮಾಡದೆ ತುಂಬ ಸಮಯವಾಗಿತ್ತು. ಈಗ ನಾರಾಯಣಗೌಡ ಜೊತೆಯಲ್ಲಿ ಇರುವುದರಿಂದ ಅವರಲ್ಲಿಗೆ ಹೋಗಲು ಒಂದು ಕಾರಣ ಸಿಕ್ಕಿತ್ತು.
ಹ್ಯಾಂಡ್ ಪೋಸ್ಟಿಗೆ ಬರುತ್ತಿದ್ದಂತೆ ಹೋಟೆಲೊಂದರ ಮುಂದೆ ಬೈಕ್‍ನಿಲ್ಲಿಸಿದ ನಾರಾಯಣಗೌಡ “ಬಾ ಕಾಫಿ ಕುಡ್ದು ಹೋಗಣ” ಎಂದ.
ಹೋಟೆಲಿನಲ್ಲಿ ಕಾಫಿಗೆ ಮೊದಲು ತಿಂಡಿಗೂ ಹೇಳಿದ. ನನ್ನ ಅನುಮಾನ ಬೆಳೆಯುತ್ತಲೇ ಇತ್ತು.
“ನಾರಾಯಣ ನೀನು ಯಾವಾಗ ಬೇಕಾದ್ರೂ ಅವರಲ್ಲಿಗೆ ಒಬ್ನೇ ಹೋಗ್ತಿದ್ದೆ, ಈಗ ನಾನು ಬರಲ್ಲ ಅಂದ್ರು ಎಳ್ಕೊಂಡು ಹೋಗ್ತಾ ಇರೋದು ನೋಡಿದ್ರೆ ನಂಗ್ಯಾಕೋ ಡೌಟು.. ನೀನೇನೋ ಮುಚ್ಚಿಡ್ತಾ ಇದ್ದೀಯ,” ಎಂದೆ.
“ಅದೊಂದು ಕತೆ ಮಾರಾಯ, ಈಗ ಒಂದು ತಿಂಗ್ಳಲ್ಲಿ ನಂಗೆ ಅವ್ರತ್ರ ಅರ್ಜೆಂಟಾಗಿ ಒಂದು ಕೆಲ್ಸ ಆಗ್ಬೇಕಿತ್ತು, ಬೆಳಗ್ಗೆ..ಬೆಳಗ್ಗೇನೆ ಅವ್ರ ಮನೆಹತ್ರ ಹೋದೆ. ಮನೇಲಿ ಯಾರೂ ಕಾಣುಸ್ಲಿಲ್ಲ, ಅಲ್ಲೇ ಮನೆ ಪಕ್ಕದಲ್ಲೇ ಕೆಲಸದೋನಿದ್ದ, ಅವನ್ನ ಕೇಳುದ್ರೆ ‘ಅವುರಾಗಳೇ ಕ್ಯಾಮರಾ ತಗಂದು ತ್ವಾಟಕ್ಕೋದ್ರು’ ಅಂದ, ಅವ್ರು ಹೋದ ದಿಕ್ಕಿಗೇ ಹುಡುಕ್ತಾ ಹೋಗಿ ತೋಟದಲ್ಲೆಲ್ಲಾ ನೋಡ್ದೆ, ಅಲ್ಲೆಲ್ಲೂ ಕಾಣುಸ್ಲಿಲ್ಲ, ಹಂಗೇ ಅವ್ರುಮನೆ ಕೆರೆ ದಾಟಿ ಕಾಡು ಹತ್ತಿ ಗದ್ದೆ ಕಡೀಗ್ ಬಂದು ನೋಡಿದ್ರೂ ಅಸಾಮಿನೇ ಪತ್ತೆ ಇಲ್ಲ. ಇನ್ನೆಂಗೂ ವಾಪಸ್ ಹೋಗದಲ್ಲ, ನನಗ್ ಅವುರ್ನ ಅರ್ಜೆಂಟಾಗಿ ಕಾಣ್ಲೇ ಬೇಕಿತ್ತು, ಇಲ್ಲೇ ಎಲ್ಲಾರ ಇರ್ಬೌದು ಅಂದ್ಕಂಡ್... ಅಣ್ಣಾ... ಅಣ್ಣಾ..... ಅಂತ ಜೋರಾಗಿ ಕೂಗ್ದೆ. ಅವೆಂತವೋ ಹಕ್ಕಿಗಳು ಮರದಿಂದ ಬರ್ರ್..... ಅಂತ ಹಾರಿಹೋದ್ವು.. ಜೊತಿಗೇ ದಡಕ್ಕಂತೆ ಎಂತದೋ ಪ್ರಾಣಿ ನೆಲದಿಂದ ಎದ್ದಂಗಾಯ್ತು. ನಾನು ಇದೆಂತದೋ ಕಾಡು ಹಂದಿನೋ.. ಕಾಟಿನೋ ಅಂತ ಗಾಭರಿಲಿ ಯಾವ್ದಾರು ಮರ ಹತ್ತಾಣ ಅಂತ ನೋಡ್ತಿದ್ರೆ, ಅದು ಇವ್ರೇ ಮಾರಾಯ... ನೆಲದಲ್ಲಿ ಸೊಪ್ಪು ಕಣಾರ (ಟೊಂಗೆ) ಎಲ್ಲ ಗುಡ್ಡಿಗೆ ಹಾಕ್ಕೊಂಡು ಅದರೊಳಗೆ ಮಲಗಿ ಫೋಟೋ ತೆಗಿಯಕ್ಕೆ ಮಾಡ್ಕಂಡಿದ್ರು, ನಂಗೆ ಗಾಬರೀಲೂ ನಗು ಬಂತು. ಅವರು ಎದ್ದೋರೆ ‘ಯಾವೋನೊ ಅವನು, ನಾನು ಅಷ್ಟೊಂತ್ತಿಂದ ಕಾಯ್ತಾ ಇದ್ರೆ ಎಲ್ಲಾ ಹಾಳು ಮಾಡ್ದೋನು, ಇಲ್ಲಿಗ್ಯಾಕಯ್ಯ ಬಂದೆ’ ಅಂಕ ಕಣಾರ ತಗಂದು ಹೊಡಿಯೋಕೇ ಬೆರಸ್ಕಂಡ್ ಬಂದ್ರು, ನಾನು ಸಿಕ್ಕಿದ್ರೆ ಹೊಡದೇ ಬಿಡೋರೋ ಏನೋ, ನಾನು ಹೆಂಗೆ ಪದರಾಡುಹಾಕ್ದೇ (ಓಟಕಿತ್ತೆ) ಅಂದ್ರೇ ಮತ್ತೆ ಇವತ್ತೇ ನೋಡು ನೀನಿರೋಹೊತ್ಗೆ ಧೈರ್ಯವಾಗಿ ಅಲ್ಲಿಗೆ ಹೊರಟಿರೋದು” ಅಂದ.
ನಾನು ಇದೇ ಕತೆಯನ್ನು ಬೇರೊಂದು ರೂಪದಲ್ಲಿ ಇನ್ನೊಬ್ಬನ ಬಾಯಲ್ಲಿ ಕೇಳಿದ್ದೆ. ಆದ್ದರಿಂದ ಇವರಿಬ್ಬರಲ್ಲಿ ಯಾರು ಯಾರ ಕಥೆಯನ್ನು ಕದ್ದಿದ್ದಾರೆ ಎಂದು ತಿಳಿಯಲಿಲ್ಲ. ಆದರೂ ಇವನೂ ಇಷ್ಟೆಲ್ಲ ಕಥೆಕಟ್ಟಿ ನನ್ನನ್ನು ಅಲ್ಲಿಗೆ ಕರೆದೊಯ್ಯತ್ತಿರಬೇಕಾದರೆ ಏನೋ ಭೀಕರವಾದದ್ದನ್ನು ಎದುರಿಸಬೇಕಾದೀತೆಂದು ಆತಂಕವಾಯಿತು. “ನೀನು ಏನೇ ಹೇಳಿದ್ರೂ ನಾರಾಯಣ ನಂಗ್ಯಾಕೋ ನಿನ್ನ ಕಥೆ ಬಗ್ಗೆ ನಂಬಿಕೇನೇ ಬರ್ತಾಇಲ್ಲಾ ನಿನ್ನ ಮಾತು ಕೇಳ್ತಾ ನನ್ನ ಅನುಮಾನ ಇನ್ನೂ ಜಾಸ್ತಿ ಆಯ್ತು” ಎಂದೆ.
“ಅನುಮಾನಂ ಪೆದ್ದರೋಗಂ.. ಸುಮ್ನೆ ಬಾರಯ್ಯ” ಎಂದು ಹೋಟೆಲ್ ಬಿಲ್ಲನ್ನು ಅವನೇ ಪಾವತಿಸಿ, ನನ್ನನ್ನು ಕಾಫಿಯ ಋಣದಲ್ಲಿ ಸಿಲುಕಿಸಿ ಮತ್ತೆ ಬೈಕನ್ನೇರಿದ, ಅನಿವಾರ್ಯವಾಗಿ ಅವನೊಡನೆ ಹೊರಟೆ. ಬೈಕು ‘ನಿರುತ್ತರ’ ದತ್ತ ಸಾಗಿತು.
ನಾವು ಹೋದಾಗ ತೇಜಸ್ವಿ ಮನೆಯಲ್ಲೇ ಇದ್ದರು. ಮನೆಯವರೆಲ್ಲ ಮೈಸೂರಿಗೆ ಹೋಗಿದ್ದಾರೆಂದು, ಸಧ್ಯಕ್ಕೆ ತಾನೊಬ್ಬನೇ ಇದ್ದೇನೆಂದು ತಿಳಿಸಿದರು. “ಊಟಕ್ಕೆ ಏನು ಮಾಡ್ತೀರಿ?” ಎಂದದಕ್ಕೆ. ಅನ್ನವನ್ನು ಮಾಡಿಕೊಳ್ಳುತ್ತೇನೆಂದೂ, ಒಂದು ವಾರಕ್ಕಾಗುವಷ್ಟು ಸಾರನ್ನು ರಾಜೇಶ್ವರಿ ಮಾಡಿಟ್ಟು ಹೋಗಿದ್ದಾರೆಂದೂ ಹೇಳಿ ಅದಕ್ಕೆ ದಿನಾ ಒಂದಿಷ್ಟು ಉಪ್ಪು- ನೀರು, ಏನು ಬೇಕೋ ಅದನ್ನು ಹಾಕಿ ಕುದಿಸುತ್ತಾ ಇದ್ದರೆ ರಾಜೇಶ್ವರಿಯವರು ಬರುವವರೆಗೂ ಎನೂ ತೊಂದರೆ ಇಲ್ಲವೆಂದು.. ಮುಂದೆ ಅವರೇ ಬರೆದ “ಪಾಕಕ್ರಾಂತಿ”ಯ ಕೆಲವು ವಿವರಗಳನ್ನು ನೀಡಿದರು.
ಮಾತು ಮುಂದುವರೆದಂತೆ ‘ಹೇಗಿದೆ ನಿಮ್ಮ ರಂಗ ಚಟುವಟಿಕೆ’ ಎಂದು ನನ್ನಲ್ಲಿ ವಿಚಾರಿಸಿಕೊಂಡರು. ಹಾಗೇ ಮಾತು ‘ ಮೈಸೂರಿನ ರಂಗಾಯಣ’ದತ್ತ ತಿರುಗಿತು. ಆಗಿನ್ನೂ ಬಿ.ವಿ.ಕಾರಂತರೇ ರಂಗಾಯಣದ ನಿರ್ದೇಶಕರಾಗಿದ್ದರು. “ಅಲ್ಲಾ ಕಣ್ರಿ ಅವತ್ತು ನಿಮ್ಮಲ್ಲಿ ರಂಗ ಶಿಬಿರ ಮಾಡೋಕೆ ಬಂದಿದ್ದರಲ್ಲ ಹುಡುಗರು (ಮಂಡ್ಯ ರಮೇಶ್ ಮತ್ತು ಕೃಷ್ಣಕುಮಾರ್ ನಾರ್ಣಕಜೆ) ಅವ್ರಿನ್ನೂ ಅಲ್ಲೇ ಇದ್ದಾರೇನ್ರಿ?” ಎಂದರು.
“ಅಲ್ಲೇ ಇದ್ದಾರೆ ಸಾರ್” ಎಂದೆ.
“ಆ ಕಾರಂತ ಎಲ್ಲ ಸರಿ ಆದ್ರೆ ಆಡಳಿತನೇ ಸರಿಯಾಗಿ ಗೊತ್ತಿಲ್ಲ ಕಣ್ರಿ.. ಪಾಪ ಈ ಹುಡುಗರ ಭವಿಷ್ಯ ಏನು, ನಾಟಕನೇ ನಂಬ್ಕೊಂಡು ಮುಂದೆ ಏನ್ಮಾಡ್ತಾರೆ. ಎಲ್ಲ ಅವ್ಯವಸ್ಥೆ ಆಗಿದಿಯಂತಲ್ರಿ, ಇದನ್ನೆಲ್ಲ ಸರಿಯಾಗಿ ಯೋಚ್ನೆ ಮಾಡ್ದೇ ಮಾಡ್ಬಾರ್ದು, ಎಲ್ಲಾ ಬೇಜವಾಬ್ದಾರಿ ಅನ್ಸುತ್ತೆ, ನಂಗೆ ಆ ಹುಡುಗರನ್ನ ಯೋಚೆ ಮಾಡಿದ್ರೆ ಬೇಜಾರಾಗುತ್ತೆ ಕಣ್ರಿ” ಎಂದರು. ರಂಗಾಯಣದಲ್ಲಿ ಮುಂದೆ ಬರಬಹುದಾದ ಸಮಸ್ಯೆಗಳನ್ನು ಅವರು ಅಂದೇ ಊಹಿಸಿದ್ದರು. ನಮ್ಮ ಮಾತು ಹೀಗೇ ಮುಂದುವರಿಯಿತು. ಕೊನೆಗೆ ತೇಜಸ್ವಿಯರಿಗೆ ಮಾತು ಸಾಕೆನಿಸಿ
“ಮತ್ತೇನು ಈಕಡೆ ಬಂದ್ರಿ” ಎಂದು ಮುಕ್ತಾಯದ ಸೂಚನೆ ನೀಡಿದರು.
ನಾವು ಇಷ್ಟೆಲ್ಲ ಮಾತನಾಡಿದರೂ ನಾರಾಯಣ ಗೌಡ ಮಾತ್ರ ಮೈಯೆಲ್ಲ ಮುಳ್ಳಾಗಿಸಿಕೊಂಡು ಹಲಸಿನಕಾಯಿಯಂತೆ ಕೂತಿದ್ದ.
ಆಗ ನಾನು ನಿರ್ವಾಹವಿಲ್ಲದೆ ನಾನು ಇವತ್ತು ಇಲ್ಲಿಗೆ ಬರುವ ಉದ್ದೇಶವಿರಲಿಲ್ಲವೆಂದೂ, ಈ ನಾರಾಯಣಗೌಡ ನನ್ನನ್ನು ಕರೆದುಕೊಂಡು ಬಂದನೆಂದೂ ಹೇಳಿದೆ.
ಆಗ ನಾರಾಯಣಗೌಡ ಅನಿವಾರ್ಯವೆಂಬಂತೆ ಬಾಯಿ ತೆರೆದ “ಅಣ್ಣಾ ನಿಮ್ಮಂತೋರೆಲ್ಲ ಕಷ್ಟಪಟ್ಟು ನಮ್ಮ ಈ ಹಾಳುಬಿದ್ದ ಮೂಡಿಗೆರೆಗೆ ಒಂದು ಕೃಷಿ ಬ್ಯಾಂಕು ತಂದ್ರಿ, ಅದ್ರಿಂದ ಇದು ಒಂದು ಊರು ಅಂತ ಆಯ್ತು. ಇಂದ್ರಾಗಾಂಧಿ ಬ್ಯಾಂಕನ್ನೆಲ್ಲ ರಾಷ್ಟ್ರೀಕರಣ ಮಾಡಿದ್ರಂದ ನಮ್ಮಂತೋರೆಲ್ಲ ಬ್ಯಾಂಕೊಳಗೆ ಕಾಲಿಡೋಹಂಗಾಯ್ತು, ಇಲ್ಲಾಂದ್ರೆ ಮೂಡಿಗೆರೇಲಿ ಬರೀ ಹತ್ತು ಹನ್ನೆರಡು ಜನರಿಗೆ ಮಾತ್ರ ಬ್ಯಾಂಕೊಳಗೆ ನುಗ್ಗೋಕೆ ಅವಕಾಶ ಇತ್ತು. ಆದ್ರೆ ಈಗ ನೀವೆಲ್ಲ ಇತ್ತೀಚೆಗೆ ಆ ಕಡೆಗೆ ಬರೋದು ಕಡಿಮೆ ಮಾಡಿದ್ರಿ. ಇವ್ರುನೆಲ್ಲಾ ವಿಚಾರಿಸ್ಕೊಳಣಾ ಅಂದ್ರೆ ರೈತಸಂಘನೂ ಇಲ್ಲ ಅದ್ಕೇ ಈ ಬ್ಯಾಂಕಿನೋರೆಲ್ಲ ಹಿಂಗ್ ಹೆಚ್ಚಿಕೊಂಡಿದ್ದಾರೆ. ನಾನೇನೋ ನ್ಯಾಯ ಮಾತಾಡಕ್ಕೋದ್ರೆ ಬ್ಯಾಂಕ್ ಮೇನೇಜರ್ ನಿನ್ ಮ್ಯಾಲೆ ಪೋಲಿಸ್ ಕಂಪ್ಲೇಂಟ್ ಕೊಡ್ತೀನಿ ಅಂದ. ಅಲ್ಲೇ ಇದ್ದ ಚಂದ್ರೇಗೌಡ್ರು ಮತ್ ಆ ಮಕಾನಳ್ಳಿ ಕಡೆಯೋರೆಲ್ಲಾ ಬ್ಯಾಂಕಿನ ಪರನೇ ಮಾತಾಡಿದ್ರು, ನೀವಿಲ್ದೇ ಹೋಗಿದ್ರೆ ಈ ಮೂಡಿಗೆರೆಗೆ ಕೃಷಿ ಬ್ಯಾಂಕೆಲ್ಲಿ ಬರ್ತಿತ್ತಣ್ಣ ಎಂದು ಒಂದಕ್ಕೊಂದು ಸಂಬಂಧವಿಲ್ಲದಂತೆ ತೋರುವ ಹಲವು ವಿಷಯಗಳನ್ನೆಲ್ಲಾ ಜೋಡಿಸಿ ಹೇಳುತ್ತಾ, ತೇಜಸ್ವಿಯವರನ್ನು ಯದ್ವಾತದ್ವಾ ಹೊಗಳತೊಡಗಿದ.
“ಅದೇನು ಹೇಳ್ಬೇಕೋ ಹೇಳು ಸುಮ್ನೆ ಸುತ್ತಿ ಬಳಸಿ ಮಾತಾಡ್ಬೇಡ” ಎಂದರು ತೇಜಸ್ವಿ. ಧ್ವನಿಯಲ್ಲಿ ಸಣ್ಣ ಅಸಹನೆಯಿತ್ತು.
“ಅದೇ ಅಣ್ಣ ಬ್ಯಾಂಕಲ್ಲಿ ಸ್ವಲ್ಪ ಲೋನ್ ಬಾಕಿ ಆಗಿತ್ತು. ಹಂಗಂತ ಇಡೀ ಬ್ಯಾಂಕಿಗೆ ನಾನೊಬ್ನೇ ಸುಸ್ತಿದಾರ ಅನ್ನೋತರ ಎಲ್ರ ಎದ್ರಿಗೆ, ಮ್ಯಾನೇಜರು, ಕೋರ್ಟು ಕಛೇರಿ, ಜಪ್ತಿ, ಅಂದ್ರೆ, ಹೆಂಗ್ಹೇಳಿ?. ನಂಗೂ ಸಿಟ್ಬಂತು. ನಾನೂ ಒಂದ್‍ಸೊಲ್ಪ ರಾಂಗಾದೆ. ಅಷ್ಟಕ್ಕೇ ಪೋಲಿಸಿಗೆ ಫೋನ್ ಮಾಡ್ತೀನಿ ಅಂದ್ರು. ನಾನೂ ‘ಹಂಗಾದ್ರೆ ನನ್ ಮನೆ ಜಪ್ತಿ ಮಾಡೇ ತಗಳಿ ನಿಮ್ ಹಣವ’ ಅಂದೆ. ಅಲ್ಲಾ ಅಲ್ಲಿದ್ದೋರೆಲ್ಲಾ ನನ್ನಂಗೆ ಸುಸ್ತಿದಾರ್ರೇ, ಅವ್ರೆಲ್ಲಾ ನಂದೇ ತಪ್ಪು ಅನ್ನೋತರ ಮಾತಾಡದ, ಅದ್ಕೇ ನೀವೊಂಸೊಲ್ಪ ಬುದ್ದಿ ಹೇಳಿ ಆ ಮ್ಯಾನೇಜರಿಗೆ ಅವುಂದ್ಯಾಕೋ ಅತಿಯಾಯ್ತು” ಎಂದ. ಮ್ಯಾನೇಜರ್ ಬಗ್ಗೆ ಹೇಳುವಾಗ ನಾರಾಯಣಗೌಡನ ಮಾತು ಅವನ ಸಿಟ್ಟಿಗೆ ಅನುಗುಣವಾಗಿ ಏಕವಚನ ಬಹುವಚನಗಳ ಮಧ್ಯೆ ಹೊಯ್ದಾಡುತ್ತಿತ್ತು.
“ಅಲ್ಲ ಕಣಯ್ಯ ನಂಗೀಗ ಅರ್ಥ ಆಯ್ತು ಆ ಮೇನೇಜರ್ ನಂಗೂ ಫೋನ್ ಮಾಡಿದ್ರು, ನೀನು ಅವ್ರ ಬಟ್ಟೆ ಬಿಚ್ಚಿ ಮೆರವಣಿಗೆ ಮಾಡ್ತೀನಿ ಅಂದ್ಯಂತೆ, ‘ತೇಜಸ್ವಿ ನಂ ನೆಂಟ್ರು ಗೊತ್ತಾ’ ಅಂತ ಹೆದರ್ಸೋತರ ಹೇಳಿದಿಯಂತೆ. ನಾನೇ ಹೇಳ್ದೆ ನನ್ನ ಹೆಸರು ಹೇಳ್ಕೊಂಡು ಏನಾದರೂ ಬೇಡದ್ದು ಮಾಡಿದ್ರೆ ಪೋಲಿಸಿಗೆ ಕೊಡಿ ಅಂತ, ನಿಂಗೇನಾದ್ರು ತಲೆಗಿಲೆಕೆಟ್ಟಿದಿಯೇನಯ್ಯ, ಬ್ಯಾಂಕಿನೋರು ಸಾಲ ಕೊಡಬೇಕಾದ್ರೆ ನಿನ್ನತ್ರ ಎಲ್ಲಾದಕ್ಕೂ ಸೈನ್ ತಗೊಂಡೇ ಅಲ್ವಾ ಕೊಟ್ಟಿರೋದು ಸುಮ್ನೆ ಗಲಾಟೆಮಾಡಿ ಒಂದೆರಡು ಕೇಸು ಮೈಮೇಲೆ ಎಳ್ಕೊಳ್ತೀಯಾ ಅಷ್ಟೆ, ಏನಾದ್ರೂ ಮಾಡಿ ಸಾಲ ತಿರ್ಸೋಕ್ಕಾಗುತ್ತೋ ನೋಡು” ಎಂದು ಹೇಳಿ, ಸ್ವಲ್ಪ ಯೋಚಿಸಿ, “ಈ ದೇಶದಲ್ಲಿ ರೈತ ಒಂದುಸಾರಿ ಸಾಲಮಾಡಿದ್ರೆ ಅದು ತೀರಿದ್ದೇ ಕಾಣೆ, ಅದ್ಯಾಕಯ್ಯ ಅಷ್ಟೊಂದು ಸಾಲ ಮಾಡಿದ್ದೀಯಂತೆ” ಎಂದರು.
“ಅಣ್ಣಾ ಅದೊಂದು ಕತೆ. ಈಗ ಮೂರನೇ ವರ್ಷದಲ್ಲಿ ಒಂದೂವರೆ ಲಕ್ಷ ಲೋನ್ ಮಾಡಿ ಹೊಳೆಪಕ್ಕದ ನಾಕೆಕರೆಗೆ ಪಚ್ಚಬಾಳೆ ಹಾಕಿದ್ದೆ, ಎಂತಾ ಚನ್ನಾಗಿ ಬಂದಿತ್ತೂ ಅಂತೀರಿ, ಹಂಗೇ ಮೈನ್ ರೋಡಿಗೆ ಕಾಣದಲ್ಲ, ಎಲ್ಲಾರೂ ಕೇಳೋರೆ ‘ಅದುಯಾರ್ದು ಮಾರಾಯ್ರೆ ಪಚ್ಚಬಾಳೆ, ಒಂದೊಂದು ಗೊನೆ ಏನಿಲ್ಲ ಅಂದ್ರೂ ಇಪ್ಪತೈದ್ ಕೇಜಿ ಮೇಲೆ ಬೀಳುತ್ತೆ’ ಅನ್ನೋರು. ಹಂಗ್ ಬಂದಿತ್ತು ಬಾಳೆ. ನೋಡೀ ನೋಡೀ ಜನಗಳ್ದೇ ಕಣ್ಣಾಯ್ತೋ ಏನೋ, ಆ ವರ್ಷ ಡಿಸೆಂಬರಲ್ಲಿ ಬಿತ್ತಲ್ಲ ಚಳಿ, ಒಂದೇವಾರದ ಚಳೀಗೆ ಬಾಳೆ ಎಲ್ಲಾ ಕೆಂಪಾಗಿ ಬತ್ತಿದಂಗಾಯ್ತು, ಆ ಮೇಲೆ ಏನೆಲ್ಲಾ ಮಾಡ್ದೆ, ಕೊನೀಗ್ ನೋಡಿದ್ರೆ ಗೊನೆಗಳೆಲ್ಲ ಪೀಚಾಗಿ ಏಳ್ ಕೇಜಿ ಎಂಟು ಕೇಜಿ ಮೇಲ್ ಬರ್ಲೇ ಇಲ್ಲ. ಪೂರಾ ಲಾಸಾಯ್ತು. ಇನ್ನು ಬ್ಯಾಂಕಿನ ಕಂತೆಲ್ಲಿ ಕಟ್ಟಲಿ” ಎಂದ.
ಚಳಿ ತೀರಾ ಹೆಚ್ಚಾದರೆ ನಮ್ಮಲ್ಲಿರುವ ಅನೇಕ ಜಾತಿಯ ಸಸ್ಯಗಳ ಬೇರುಗಳು ಕೆಲಸವನ್ನೇ ನಿಲ್ಲಿಸಿಬಿಡುವುದರಿಂದ ಈರೀತಿ ಆಗುತ್ತದೆಂದೂ, ಇದು ಯಾರ ಕಣ್ಣಿನ ಪ್ರಭಾವವೂ ಅಲ್ಲವೆಂದೂ ತೇಜಸ್ವಿ ವಿವರಿಸಿದರು.
ಆ ವರ್ಷ ನಾನೂ ಕೂಡಾ ಸ್ವಲ್ಪ ಪಚ್ಚಬಾಳೆ ಬೆಳೆದಿದ್ದೆನೆಂದೂ, ಆ ಸಂದರ್ಭದಲ್ಲಿ ಬಾಳೆಗೆ ಚೆನ್ನಾಗಿ ನೀರು ಹಾಯಿಸಿದರೆ ಚಳಿಯ ಪ್ರಭಾವ ಕಮ್ಮಿಯಾಗುತ್ತದೆಂದೂ ನನಗೆ ಹಿರಿಯರೊಬ್ಬರು ಹೇಳಿದ್ದರು. ಅದರಂತೆ ನಾನೂ ಬಾಳೆಗೆ ಏಳೆಂಟು ದಿನಗಳ ಕಾಲ ಸ್ಪ್ರಿಂಕ್ಲರ್ ಮೂಲಕ ನೀರಾವರಿ ಮಾಡಿಸಿದ್ದೆ. ಇದರಿಂದ ಬಾಳೆಗೆ ಆದಹಾನಿ ಬಹಳಷ್ಟು ಕಡಿಮೆಯಾಗಿತ್ತು. ಈ ವಿಚಾರವನ್ನು ನಾನು ಅವರಿಗೆ ತಿಳಿಸಿದೆ.
ಹೌದು ಅದೂ ಒಂದು ಪರಿಣಾಮಕಾರಿ ವಿಧಾನವೇ ಎಂದರು.
“ಅಣ್ಣ ಅಲ್ಲಿಗೇ ನಿಂತಿಲ್ಲ ನನ್ ಕತೆ, ಹೆಂಗೂ ಇನ್ನು ಈ ಬಾಳೆಕಾಯಿ ಮಾರಿ ಬ್ಯಾಂಕ್ ಸಾಲ ತೀರ್ಸÀದು ಕನಸು ಅಂದ್ಕಂಡು ಇನ್ನೂ ಒಂದು ಲಕ್ಷ ಸಾಲ ತಗಂಡು, ಸಕಲೇಶಪುರದಲ್ಲಿ ಕೃಷ್ಣ ಅಂತಿದ್ದಾನೆ ನನ್ ಫ್ರೆಂಡು, ಚಕ್ಕೆ ವ್ಯಾಪಾರ ಮಾಡ್ತಾನೆ. ಅವುನು ಜೊತೆ ಪಾರ್ಟನರ್ ಆಗಿ ಸುಂಡೆಕೆರೆ ಹತ್ರ ಒಂದು ಸಾಬರ ಎಸ್ಟೇಟಿನ ಚಕ್ಕೆ ಕಂಟ್ರಾಕ್ಟ್ ಮಾಡುದ್ವು, ಎಲ್ಲಾ ಸರಿಯಾಗಿದ್ರೆ ನಾಕ್-ನಾಕ್ ಲಕ್ಷ ಲಾಭ ಉಳ್ದಿರೋದು. ಚಕ್ಕೆ ಎಲ್ಲಾ ಕೆತ್ತಿ ಇನ್ನೇನು ಪರ್ಮಿಟ್ ಸಿಕ್ಕೋ ಹೊತ್ತಿಗೆ ಅದೇನೋ ಕಾಂಪ್ಲಿಕೇಷನ್ ಆಗಿ ಚಕ್ಕೆ ಎಲ್ಲಾ ಪಾರೆಸ್ಟ್‍ನೋರು ಸೀಜ್ ಮಾಡಿದ್ರು. ಅದೆಲ್ಲಾ ಸರಿಮಾಡಿ ನಾವು ಬಚಾವಾಗಿ ಚಕ್ಕೆ ಮಾರೋಹೊತ್ತಿಗೆ ಅಲ್ಲಿಗಲ್ಲಿಗೆ ಸರಿಯಾಗಿ, ಕೈ ಕಾಲಿಯಾಯ್ತಣ್ಣ. ಅಲ್ಲಾ ಆ ಬ್ಯಾಂಕ್ ಮ್ಯಾನೇಜರು ಎಲ್ರ ಎದುರಿಗೆ ನನ್ ಮರ್ಯಾದಿ ಕಳುದ್ರೆ ಸಿಟ್ ಬರಲ್ವಣ್ಣ, ಅದ್ಕೇ ನಿಮ್ ಹೆಸರು ಹೇಳ್ದೆ, ಅವಾಗ ಸ್ವಲ್ಪ ಸುಮ್ನಾದ” ಎಂದು ಕರುಣಾಜನಕವಾಗಿ ತನ್ನ ಕತೆಯನ್ನು ಹೇಳಿದ.
“ಸರಿ ಮಾರಾಯ ಮತ್ತೀಗ ಸಾಲಕ್ಕೆಂತ ಮಾಡ್ತೀಯಾ” ಎಂದು ತೇಜಸ್ವಿ.
“ಇನ್ನೆಂತದು ಮಾಡ್ಳಿ, ನನ್ನ ಹೊಳೆ ಸಾಲು ಗದ್ದೆ ಮೇಲೆ ತುಂಬಾ ಜನಕ್ಕೆಕಣ್ಣಿರಾದು, ಅದರಲ್ಲೇ ಎರಡು ಎಕರೆ ಮಾರ್ಬೇಕು ಅಂತಿದ್ದೀನಿ. ಅಲ್ಲಿವರ್ಗೂ ಸ್ವಲ್ಪ ಸುಮ್ನಿರೋಕೇ ಆ ಮ್ಯಾನೇಜರಿಗೆ ಹೇಳಿ” ಎಂದ.
“ಸರಿ ಆದ್ರೆ ಪದೇ ಪದೇ ನನ್ನ ಹೆಸರು ಹೇಳಕೊಂಡು ತಿರುಗ್ಬೇಡಾ, ನೀವೆಲ್ಲ ಒಂದು ಶಿಸ್ತು ಕಲೀಬೇಕು ಕಣ್ರಯ್ಯ ಇಲ್ಲಾಂದರೆ ಯಾರೂ ನಮ್ಮ ಸಹಾಯಕ್ಕೆ ಬರೋದೇ ಇಲ್ಲ, ಸರ್ಕಾರವಂತೋ ಬರೋದೇ ಇಲ್ಲ, ತಿಳ್ಕಳಿ” ಎಂದರು.
ನಂತರ ಅವರೇ ಒಂದಷ್ಟು ಕಾಫಿ ಮಾಡಿ ತಂದು ಕೊಟ್ಟರು. ಕಾಫಿ ಕುಡಿದು ನಾವು ಹೊರಡುವಾಗ ನಾರಾಯಣ ಗೌಡನಿಗೆ. “ಹೆಂಗಾದ್ರು ಒಂದ್ಸಾರಿ ಬಚಾವಾಗೋ ದಾರಿ ಹುಡ್ಕು” ಎಂದರು.
ಆಗಲೇ ಗಂಟೆ ಆರಾಗುತ್ತ ಬಂದಿತ್ತು. ನಾರಾಯಣ ಗೌಡ ನನಗೆ ಕೊಟ್ಟ ಮಾತಿನಂತೆ ನನ್ನನ್ನು ಬೈಕಿನಲ್ಲಿ ಹೇರಿಕೊಂಡು ಸಕಲೇಶಪುರದ ಹಾದಿ ಹಿಡಿದ. ಹಾನುಬಾಳಿಗೆ ಬರುತ್ತಿದ್ದಂತೆ ಇಲ್ಲೇ ‘ಸಾಯಂಕಾಲದ ಕಾರ್ಯಕ್ರಮ’ ಮುಗಿಸೋಣವೆಂದೂ, ನಿನ್ನನ್ನು ಊರಿಗೆಬಿಟ್ಟು ತಾನು ಸಕಲೇಶಪುರಕ್ಕೆ ಬದಲಾಗಿ ಹೆಗ್ಗದ್ದೆಗೆ ನೆಂಟರಮನೆಗೆ ಹೋಗುವುದಾಗಿಯೂ ತಿಳಿಸಿದ. ಸಾಯಂಕಾಲದ ಕಾರ್ಯಕ್ರಮಕ್ಕೆ ಕುಳಿತಿದ್ದಾಗ ನಾರಾಯಣ ಗೌಡನಿಂದ ತಿಳಿದ ಸತ್ಯವೆಂದರೆ ಚಕ್ಕೆ ವ್ಯಾಪಾರದಲ್ಲಿ ಆದನಷ್ಟವನ್ನು ತುಂಬಿಕೊಳ್ಳಲು ಅವನು ಇಸ್ಪೀಟಾಡಲು ಪ್ರಾರಂಭಿಸಿ ಈಗ ಅದೇ ಚಟವಾಗಿ ಬಿಟ್ಟಿತ್ತು. ಎಲ್ಲೆಲ್ಲಿ ‘ರಮ್ಮಿ ನಾಕೌಟ್’ ಜಾತ್ರೆಗಳಾಗಲೀ ಅಲ್ಲೆಲ್ಲ ಹೋಗಿ ಇಸ್ಪೀಟಾಡುತ್ತಿದ್ದ. ಮತ್ತಷ್ಟು ಹಣವನ್ನು ಕಳೆದುಕೊಂಡಿದ್ದ. ಇದರಿಂದ ಅವನ ಆರ್ಥಿಕ ಪರಿಸ್ಥಿತಿ ತುಂಬ ಹದಗೆಟ್ಟು ಹೋಗಿತ್ತು. ಅವನು ಹತಾಶನಾದಂತಿದ್ದ. ಏನೇನೋ ಸುಳ್ಳುಗಳನ್ನು ಹೇಳುತ್ತಾ ಎಲ್ಲರನ್ನೂ ನಂಬಿಸಲು ಪ್ರಯತ್ನಿಸುತ್ತಿದ್ದ.
ಇದನ್ನು ಊಹಿಸಿಯೇ ತೇಜಸ್ವಿಯವರು “ಶಿಸ್ತು ಕಲೀಬೇಕು ಕಣ್ರಯ್ಯ” ಎಂದಿರಬೇಕು.
ತುಂಬಾ ಚೆನ್ನಾಗಿ ಬರೆದಿದ್ದಿರ
ReplyDelete