ಸನ್ಮಾನ್ಯ ಅಧ್ಯಕ್ಷರಿಗೆ ನಮಸ್ಕಾರಗಳು,
ಮೊದಲಿಗೆ ನಿಮ್ಮ ಕ್ಷಮೆ ಕೋರುತ್ತೇನೆ: ಹೀಗೊಂದು ಬಹಿರಂಗ ಪತ್ರ ಬರೆದು ಬಿಡುವಿರದ ತಮ್ಮ ಸಮಯವನ್ನು ಹಾಳು ಮಾಡುತ್ತಿರುವುದಕ್ಕೆ.
ವಿಷಯ ನಿಮಗೆ ಗೊತ್ತಿಲ್ಲದ್ದೇನೂ ಅಲ್ಲ! ನಮ್ಮ ಅರ್ಧ ನಾಡು ಮಳೆಯಿರದೆ ಬರದಿಂದ ತತ್ತರಿಸುತ್ತಿದೆ. ಈಗಾಗಲೇ ತಮಗಾದ ಬೆಳೆನಷ್ಟ ಮತ್ತು ತೀರಿಸಲಾಗದ ಸಾಲಭಾದೆಯಿಂದ ಬಹಳಷ್ಟು ರೈತರು ಆತ್ಮಹತ್ಯೆಯ ಹಾದಿ ಹಿಡಿದು ನಡೆದು ಹೋಗಿದ್ದಾರೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಬಹುದೆಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಇದುವರೆಗು ಎಷ್ಟು ಜನ ಆತ್ಮಹತ್ಯೆ ಮಾಡಿಕೊಂಡರು ಎಂಬ ಅಂಕಿ ಅಂಶಗಳ ಒಣಪಾಠವನ್ನು ನಾನಿಲ್ಲಿ ಒಪ್ಪಿಸಹೋಗುವುದಿಲ್ಲ ಮತ್ತು ಅದು ನನ್ನ ಉದ್ದೇಶವೂ ಅಲ್ಲ.
ಇರಲಿ ವಿಷಯಕ್ಕೆ ಬರುತ್ತೇನೆ: ಈಗಾಗಲೇ ಕೆಲವು ಜನಪರ ಸಂಘಟನೆಗಳು ಅಕ್ಟೋಬರಿನಲ್ಲಿ ರಾಯಚೂರಿನಲ್ಲಿ ನಡೆಯಲಿರುವ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನವನ್ನು ಮುಂದೂಡಬೇಕೆಂಬ ಬೇಡಿಕೆ ಇಟ್ಟಿರುವುದು ತಮಗೆ ತಿಳಿದ ವಿಚಾರವಾಗಿದೆ. ನಾನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ವರ್ಷದ ಸಮ್ಮೇಳನವನ್ನೇ ರದ್ದು ಮಾಡಬೇಕೆಂದು ಕೋರುತ್ತೇನೆ. ಕ್ಷಮಿಸಿ, ಹೀಗೆ ಹೇಳದೆ ವಿಧಿಯಿಲ್ಲ. ಯಾಕೆಂದರೆ ಬರಗಾಲದ ಇಂತಹ ಸನ್ನಿವೇಶದಲ್ಲಿ, ಜೊತೆಗೆ ಸಾಲು ಸಾಲಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸಮಯದಲ್ಲಿ ನಾವುಗಳು ಸಾಹಿತ್ಯ ಸಮ್ಮೇಳನದ ಹೆಸರಲ್ಲಿ ಸರಕಾರದ ಹಣವನ್ನು ಖರ್ಚು ಮಾಡಿ ಹಬ್ಬದ ಸಡಗರವನ್ನು ಆಚರಿಸುವುದು ಸೂಕ್ತವಲ್ಲವೆಂದು ನನ್ನ ಅನಿಸಿಕೆಯಾಗಿದೆ. ಇದರಲ್ಲಿ ಹಣದ ವಿಷಯ ಮಾತ್ರ ಅಡಕವಾಗಿಲ್ಲ. ಬದಲಿಗೆ ಸೂಕ್ಷ್ಮ ಮನಸ್ಸಿನವರೆನಿಸಿಕೊಂಡ ಸಾಹಿತಿಗಳ ಮತ್ತು ಸಾಹಿತ್ಯಾಸಕ್ತರ ನೈತಿಕ ಹೊಣೆಗಾರಿಕೆಯಾಗಿದೆ. ಸಾಹಿತಿಯಾದವನು ಕೊನೆಗೂ ಹೊಣೆಗಾರನಾಗುವುದು ತಾನು ಬದುಕುವ, ಬರೆಯುವ ಸಮಾಜಕ್ಕೆ ತಾನೆ? ಈ ವಿಚಾರವನ್ನು ನಾನು ಬಹಳಷ್ಟು ಜನರ ಜೊತೆ ಚರ್ಚಿಸಿದಾಗ ಕೇಳಿಬಂದ ಅಭಿಪ್ರಾಯಗಳು ಆಘಾತಕಾರಿಯಾಗಿದ್ದವು. ಅವುಗಳಲ್ಲಿ ಕೆಲವನ್ನು ನಾನಿಲ್ಲಿ ಹೇಳಬಯಸುತ್ತೇನೆ: ಮೊದಲ ಅನಿಸಿಕೆ ಒಂದು ಊರಲ್ಲಿ ಯಾರಾದರು ಸತ್ತರೆ ಆ ಊರಿನವರೇನು ಉಪವಾಸ ಇರುವುದಿಲ್ಲ. ಹೌದು ನಾನು ಒಪ್ಪುತ್ತೇನೆ, ಊರವರಿರಲಿ ಆ ಮನೆಯವರೆ ಯಾರೂ ಉಪವಾಸ ಇರುವುದಿಲ್ಲ. ಮಣ್ಣು ಮುಗಿದ ಮೇಲೆ ಅವರೂ ಉಣ್ಣುತ್ತಾರೆ, ಯಥಾ ಪ್ರಕಾರ ಜೀವನ ಸಾಗುತ್ತದೆ. ಆದರೆ ಸತ್ತವರ ಸೂತಕದ ಮನೆಯಲ್ಯಾರು ಹಬ್ಬದ ಅಡುಗೆ ಮಾಡಿ ಚಪ್ಪರ ಹಾಕಿ ಉಂಡು ನಲಿಯುವುದಿಲ್ಲ. ಇನ್ನೊಂದು ಅನಿಸಿಕೆ: ಸಮ್ಮೇಳನ ರದ್ದು ಮಾಡಿದರೆ ರಾಯಚೂರು ಭಾಗದ ಜನರ ಬಾವನೆಗಳಿಗೆ ಧಕ್ಕೆ ಯಾಗುತ್ತದೆ. ಇದನ್ನು ಖಂಡಿತಾ ಒಪ್ಪಲು ಸಾದ್ಯವಿಲ್ಲ .ಸಮ್ಮೇಳನದಿಂದ ಲಾಭ ಮಾಡಿಕೊಳ್ಳುವ ಕೆಲವರಿಗೆ ಬೇಸರವಾಗಬಹುದೇನೊ ಆದರೆ ತಮ್ಮ ರೈತ ಬಂದುಗಳನ್ನು ಕಳೆದುಕೊಂಡು ಬರದಿಂದ ತತ್ತರಿಸುತ್ತಿರುವ ಆ ಭಾಗದ ಜನರು ಇದನ್ನವರು ಮನಪೂರ್ವಕವಾಗಿಯೇ ಸ್ವಾಗತಿಸುತ್ತಾರೆ. ನನಗೆ ಅರಿವಿರುವಂತೆ ನಮ್ಮ ಜನ ಸಾವಿನ ಮನೆಯಲ್ಲಿ ಸಂಭ್ರಮ ಆಚರಿಸುವವರಲ್ಲ. ಇನ್ನು ಕೆಲವರ ಪ್ರಶ್ನೆ ರಾಜಕಾರಣಿಗಳು ಯಾವುದನ್ನು ನಿಲ್ಲಿಸಿದ್ದಾರೆಂಬುದು? ಇದು ಎಲ್ಲದಕ್ಕೂ ರಾಜಕಾರಣವನ್ನು ಹೊಣೆ ಮಾಡುವ ಪ್ರಶ್ನೆ. ಒಂದು ಸಾಹಿತ್ಯ ಸಮ್ಮೇಳನ ನಡೆಸುವುದು ಬಿಡುವುದು ಪರಿಷತ್ತು ಮತ್ತು ಸಾಹಿತ್ಯಾಸಕ್ತರ ಕೆಲಸವೇ ಹೊರತು ರಾಜಕಾರಣಿಗಳದ್ದಲ್ಲ. ಹಾಗಾಗಿ ನಾವು ಎಲ್ಲದಕ್ಕೂ ರಾಜಕಾರಣಿಗಳನ್ನು ದೂರುವುದು ತರವಲ್ಲ. ಸಾಹಿತ್ಯ ಸಮ್ಮೇಳನವೆನ್ನುವುದು ಕನ್ನಡಿಗರ ಕೆಲಸ. ಅದನ್ನು ಮಾಡುವುದು ಬೇಡವೆನ್ನುವುದು ಅವರದೇ ನಿರ್ಧಾರ. ಇನ್ನು ಕನ್ನಡಿಗರ ಅಭಿಮಾನಕ್ಕೆ ಬರಬಂದಿಲ್ಲ. ದುಡ್ಡು ಕೊಡುವವರು ಇದ್ದಾರೆ . ಸಮ್ಮೇಳನ ನಡೆಯಲಿ. ಎನ್ನುವವರೂ ಇದ್ದಾರೆ. ಹೌದು ಕನ್ನಡಿಗರ ಅಭಿಮಾನವಿರಬೇಕಾಗಿದ್ದು: ಮೊದಲು ಅನ್ನ ಕೊಡುವ ಮಣ್ಣಿನ ಮಕ್ಕಳ ಬಗ್ಗೆ. ಅದರ ತರುವಾಯವೇ ಸಾಹಿತ್ಯ ಕಲೆಗಳೆಲ್ಲ. ಹೀಗೆ ವಾದ ಮಾಡುತ್ತಾ ಹೋದರೆ ಮಾಡುತ್ತಲೇ ಹೋಗಬಹುದು. ಆದರೆ ನನ್ನ ವಿಚಾರ ಅದಲ್ಲ. ಒಂದು ಸಾಹಿತ್ಯ ಸಮ್ಮೇಳನವನ್ನು ರದ್ದು ಮಾಡುವುದರಿಂದ ಕನ್ನಡ ಸಾಹಿತ್ಯವೇನೂ ಸತ್ತು ಹೋಗುವುದಿಲ್ಲ. ಹಾಗೆಯೇ ರದ್ದು ಮಾಡುವುದರಿಂದ ಸತ್ತವರೂ ಎದ್ದು ಬರುವುದಿಲ್ಲ. ಹಾಗಾಗಿ ಸಮ್ಮೇಳನವನ್ನು ರದ್ದು ಮಾಡಬೇಕೆನ್ನುವ ನನ್ನ ಉದ್ದೇಶ: ಸಂಕಷ್ಟದಲ್ಲಿರುವ ರೈತ ಕುಟುಂಬಗಳಿಗೆ ನಾವು ನಿಮ್ಮೊಂದಿಗಿದ್ದೇವೆ, ನಿಮ್ಮ ದು:ಖದಲ್ಲಿ ನಾವುಗಳು ಪಾಲುದಾರರು ಎಂಬ ಭಾವನೆ ಮೂಡಿಸಿ, ಆತ್ಮಹತ್ಯೆಯಂತಹ ವಿಚಾರಗಳಿಂದ ಅವರುಗಳನ್ನು ಹೊರತರುವ ಮಾನವೀಯ ಕಾಳಜಿಮಾತ್ರವಾಗಿದೆ. ಇಂತಹದೊಂದು ಕನಿಷ್ಠ ಸೌಜನ್ಯವನ್ನೂ ನಾವು ತೋರಿಸದೇ ಹೋದಲ್ಲಿ ನಾವು ರಚಿಸುವ ಸಾಹಿತ್ಯಕ್ಕೆ ಅರ್ಥವಿರುವುದಿಲ್ಲ.
ಅದರ ಬದಲಿಗೆ ಅದೇ ಅಕ್ಟೋಬರ್ ತಿಂಗಳಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿ ಜಿಲ್ಲೆಯಲ್ಲೂ, ಏಕಕಾಲಕ್ಕೆ ರೈತರ ಸಮಸ್ಯೆಗಳು ಮತ್ತು ಪರಿಹಾರಗಳ ಹುಡುಕಾಟ ಎಂಬ ವಿಚಾರವನ್ನಿಟ್ಟುಕೊಂಡು ಹೆಚ್ಚು ಖರ್ಚಿಲ್ಲದೆ ವಿಚಾರಸಂಕಿರಣಗಳನ್ನು ನಡೆಸಬಹುದಾಗಿದೆ. ಇಂತಹ ಸಂಕಿರಣಗಳಲ್ಲಿ ಆಯಾ ಜಿಲ್ಲೆಯ ಸಾಹಿತಿಗಳು ಕೃಷಿ ತಜ್ಞರು, ಪ್ರಗತಿಪರರು ಬಾಗವಹಿಸುವಂತೆ ನೋಡಿಕೊಳ್ಳಬಹುದಾಗಿದೆ. ತದನಂತರ ಸಂಕಿರಣದಲ್ಲಿ ಹೊರಹೊಮ್ಮಿದ ಮುಖ್ಯ ಅಂಶಗಳನ್ನು ಕ್ರೋಢೀಕರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಬಹುದು. ಇದು ನನ್ನ ವಿನಮ್ರ ಸಲಹೆ ಮಾತ್ರ.
ಇದರೊಂದಿಗೆ ಸರಕಾರ ಕೊಡುವ ಒಂದೆರಡು ಕೋಟಿ ಅನುದಾನವನ್ನು ರೈತರಿಗೆ ನಿಜಕ್ಕೂ ಅನುಕೂಲವಾಗುವ ಯಾವುದಾದರು ಯೋಜನೆಗೆ ಬಳಸಲು,ಪರಿಷತ್ತು ಸರಕಾರಕ್ಕೆ ಒತ್ತಾಯಿಸಬೇಕು.
ಆದ್ದರಿಂದ ಸಾಹಿತ್ಯಪರಿಷತ್ತಿನ ಅದ್ಯಕ್ಷರಿಗೆ ನಾನು ಮನವಿ ಮಾಡಿಕೊಳ್ಳುವುದೇನೆಂದರೆ ದಯಮಾಡಿ ಸಾಹಿತ್ಯ ಸಮ್ಮೇಳವನ್ನು ಈವರ್ಷ ರದ್ದು ಮಾಡಿ. ನಿಮ್ಮ ಅವಧಿ ಮುಗಿದ ನಂತರ- ಬರವಿದ್ದರೂ ಸಮ್ಮೇಳನ ನಡೆಸಿದವರು ಅನಿಸಿಕೊಳ್ಳುವುದಕ್ಕಿಂತ ಬರದ ಕಾರಣದಿಂದ ಸಮ್ಮೇಳನವನ್ನು ರದ್ದು ಮಾಡಿ ರೈತಪರ ಕಾಳಜಿಯನ್ನು ಮೆರೆದವರೆಂದು ಗುರುತಿಸಿಕೊಳ್ಳುವುದು ಹೆಮ್ಮೆಯ ವಿಷಯವೆಂದು ನನಗನ್ನಿಸುತ್ತದೆ. ಇತಿಹಾಸದ ಪುಟಗಳನ್ನು ಸೇರುವುದು ಮುಖ್ಯವಲ್ಲ, ಯಾಕೆ ಸೇರಲಾಯಿತು ಅನ್ನುವುದೇ ಮುಖ್ಯವಲ್ಲವೇ ಸರ್. ದಯಮಾಡಿ ಯೋಚಿಸಿ , ನಿಮ್ಮ ಪದಾಧಿಕಾರಿಗಳನ್ನು ನನಗಿಂತ ಹಿರಿಯರಾದ ಸಾಹಿತಿಗಳನ್ನು, ಬುದ್ದಿಜೀವಿಗಳನ್ನು ಸಂಪರ್ಕಿಸಿ ಒಂದು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಕೋರುತ್ತೇನೆ.
ಕು.ಸ.ಮಧುಸೂದನ್ ನಾಯರ್
No comments:
Post a Comment