ವಿಂಡೋಸ್ 7 ಮತ್ತು ವಿಂಡೋಸ್ 8ರ ಅಸಲಿ ಆವೃತ್ತಿಯ ಕಂಪ್ಯೂಟರ್, ಲ್ಯಾಪ್ ಟಾಪ್, ನೆಟ್ ಬುಕ್ ಉಪಯೋಗಿಸುವವರು ನೀವಾಗಿದ್ದರೆ ಕೆಲವು ದಿನಗಳಿಂದ ವಿಂಡೋಸ್ 10ನ್ನು ಪಡೆದುಕೊಳ್ಳಿ (get windows 10) ಎಂಬ ಪುಟ್ಟ ಸೂಚನೆಯನ್ನು ನಿಮ್ಮ ಪರದೆಯ ಬಲಭಾಗದ ಮೂಲೆಯಲ್ಲಿ ಗಮನಿಸಿರುತ್ತೀರಿ.
ವಿಂಡೋಸ್ ಹತ್ತು ಪಡೆಯಿರಿ |
ಜುಲೈ 29ರಂದು ಮೈಕ್ರೋಸಾಫ್ಟ್ ಪ್ರಪಂಚದಾದ್ಯಂತ ವಿಂಡೋಸ್ ಹತ್ತನ್ನು ಬಿಡುಗಡೆಗೊಳಿಸಿದೆ. ಪ್ರತೀ ಕಂಪ್ಯೂಟರಿಗೂ ವಿಂಡೋಸ್ ಹತ್ತಕ್ಕೆ ಅಪ್ ಗ್ರೇಡ್ ಆಗಿ ಎಂಬ ಸಂದೇಶ ಬರುತ್ತದೆ. ಸಂದೇಶ ಬಂದ ನಂತರ ಅಪ್ ಡೇಟ್ ಮಾಡಿಕೊಳ್ಳಬಹುದು. ಅದಕ್ಕೆ ಮುಂಚಿತವಾಗಿಯೇ ನೇರವಾಗಿ ಅಪ್ ಡೇಟ್ ಮಾಡಿಕೊಳ್ಳುವ ಸೌಕರ್ಯವನ್ನೂ ಮೈಕ್ರೋಸಾಫ್ಟ್ ನೀಡಿದೆ. ಚಾರ್ಜರ್, ಯುಪಿಎಸ್ಸನ್ನು ಸಿದ್ಧವಾಗಿಟ್ಟುಕೊಳ್ಳಿ, ವಿಂಡೋಸ್ ಹತ್ತನ್ನು ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ. ಮೂರು ಜಿ.ಬಿಗಿಂತ ಹೆಚ್ಚು ಡೌನ್ ಲೋಡ್ ಮಾಡಿಕೊಳ್ಳಬೇಕಾದ ಕಾರಣ ನಿಮ್ಮ ಅಂತರ್ಜಾಲ ಸಂಪರ್ಕದಲ್ಲಿ ಅಷ್ಟು ಡೇಟಾ ಬಾಕಿ ಇದೆಯಾ ಖಚಿತಪಡಿಸಿಕೊಳ್ಳಿ.
ಮೊದಲಿಗೆ ನಿಮ್ಮ ಕಂಪ್ಯೂಟರ್ರಿನ ಆಪರೇಟಿಂಗ್ ಸಿಸ್ಟಂನ ತಾಂತ್ರಿಕ ವಿವರವನ್ನು ಗಮನಿಸಿ: 32 ಬಿಟ್ ಅಥವಾ 64 ಬಿಟ್ ಆಪರೇಟಿಂಗ್ ಸಿಸ್ಟಂ ಇರುತ್ತದೆ (ಕೆಳಗಿನ ಚಿತ್ರ ಗಮನಿಸಿ). ವಿಂಡೋಸ್ 7 ರ ಬಳಕೆದಾರರಾಗಿದ್ದ ಪಕ್ಷದಲ್ಲಿ ಸರ್ವೀಸ್ ಪ್ಯಾಕ್ 1 ಎಂದು ಇದೆಯೇ ಗಮನಿಸಿ.
ನಂತರ ಮೈಕ್ರೋಸಾಫ್ಟಿನ ವೆಬ್ ಪುಟಕ್ಕೆ ಹೋಗಿ (ಇಲ್ಲಿ ಕ್ಲಿಕ್ಕಿಸಿ) ಮೀಡಿಯಾ ಕ್ರಿಯೇಷನ್ ಟೂಲನ್ನು ಡೌನ್ ಲೋಡ್ ಮಾಡಿಕೊಳ್ಳಿ. 32 ಬಿಟ್ ಅಥವಾ 64 ಬಿಟ್ ಎರಡರಲ್ಲಿ ನಿಮ್ಮ ಗಣಕಯಂತ್ರಕ್ಕೆ ಯಾವುದು ಸೂಕ್ತವೋ ಅದನ್ನು ಡೌನ್ ಲೋಡ್ ಮಾಡಿ. ಈ ಫೈಲಿನ ಗಾತ್ರ ಹದಿನೆಂಟು ಎಂ.ಬಿಯಷ್ಟಿದೆ. ಕೆಳಗಿನ ಚಿತ್ರ ಮೀಡಿಯಾ ಕ್ರಿಯೇಷನ್ ಟೂಲ್ ನ ಚಿತ್ರ. ಅದರ ಮೇಲೆ ಕ್ಲಿಕ್ಕಿಸಿ. ರನ್ ಒತ್ತಿ.
ಮೀಡಿಯಾ ಕ್ರಿಯೇಷನ್ ಟೂಲ್ ತೆರೆದುಕೊಂಡು ಈ ಕೆಳಗಿನ ಪರದೆ ಕಾಣಿಸುತ್ತದೆ:
ಅನ್ಯ ಕಂಪ್ಯೂಟರಿಗೂ ಈ ತಂತ್ರಾಂಶವನ್ನು ಉಪಯೋಗಿಸುವುದಾದಲ್ಲಿ 'create installation media for another pc' ಯನ್ನು ಆಯ್ಕೆ ಮಾಡಿಕೊಳ್ಳಿ. ಇಲ್ಲವಾದರೆ Upgrade your PC ಯನ್ನು ಆಯ್ಕೆ ಮಾಡಿ ನೆಕ್ಷ್ಟ್ ಒತ್ತಿ. ಮೂರು ಜಿಬಿಯ ವಿಂಡೋಸ್ ಹತ್ತು ತಂತ್ರಾಂಶ ಡೌನ್ ಲೋಡ್ ಆಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ, ನಿಮ್ಮ ಅಂತರ್ಜಾಲದ ವೇಗ ಇದನ್ನು ನಿರ್ಧರಿಸುತ್ತದೆ.
ಡೌನ್ ಲೋಡ್ ಆದ ನಂತರ ಇನ್ಸ್ಟಾಲ್ ಮಾಡಲು ಗಣಕಯಂತ್ರವನ್ನು ತಯಾರು ಮಾಡುತ್ತದೆ.
ಕೊನೆಗೆ ವಿಂಡೋಸ್ ಹತ್ತು ಇನ್ಸ್ಟಾಲ್ ಆಗುವ ಮೊದಲು ಕೆಲವು ಆಯ್ಕೆಗಳನ್ನು ನೀಡುತ್ತದೆ. ನಿಮ್ಮ ಕಂಪ್ಯೂಟರಿನ ಫೈಲುಗಳನ್ನು ಉಳಿಸಿಕೊಳ್ಳಬೇಕಾ ಬೇಡವಾ ಎಂದು ಕೇಳುತ್ತದೆ. ಉಳಿಸಿಕೊಳ್ಳುವುದು ಉತ್ತಮ.
ಇನ್ಸ್ಟಾಲ್ ಗುಂಡಿಯನ್ನು ಒತ್ತಿದ ನಂತರ ಹಲವು ಬಾರಿ ಆಫ್ ಆಗಿ ಆನ್ ಆಗಿ ನಿಧಾನಕ್ಕೆ ಹೆಚ್ಚು ಕಡಿಮೆ ಎರಡರಿಂದ ಮೂರು ಘಂಟೆಗಳಷ್ಟು ಸಮಯ ತೆಗೆದುಕೊಂಡು ವಿಂಡೋಸ್ ಹತ್ತು ಇನ್ಸ್ಟಾಲ್ ಆಗುತ್ತದೆ! ವಿಂಡೋಸ್ ಹತ್ತರ ಮುಖಪುಟ ಆಕರ್ಷಕವಾಗಿದೆ.
ಸ್ಟಾರ್ಟ್ ಮೆನುವಿನಲ್ಲಿ (ವಿಂಡೋಸ್ ಲೋಗೋ ಇರುವ ಎಡಬದಿಯ ಕೆಳಭಾಗದಲ್ಲಿರುವ ಐಕಾನನ್ನು ಕ್ಲಿಕ್ಕಿಸಿದಾಗ ಬರುವ ಪುಟ) ಬಹಳಷ್ಟು ಬದಲಾವಣೆಗಳಾಗಿವೆ. ವಿಂಡೋಸ್ ಫೋನ್ ಉಪಯೋಗಿಸುತ್ತಿರುವವರಿಗೆ ಅದು ಚಿರಪರಿಚಿತವಾದದ್ದು. ಬೇರೆಯವರಿಗೆ ಹೊಂದಿಕೊಳ್ಳಲು ಕೊಂಚ ಸಮಯ ಬೇಕಾಗಬಹುದು. ವಿಂಡೋಸ್ ಏಳರ ಆವೃತ್ತಿಗೆ ಹೋಲಿಸಿದರೆ ಒಟ್ಟಾರೆ ಕಂಪ್ಯೂಟರಿನ ವೇಗ ಹೆಚ್ಚಾಗಿದೆ.
ಎಲ್ಲಕ್ಕಿಂತ ಹೆಚ್ಚು ಮೆಚ್ಚುಗೆಯಾಗಿದ್ದು ವಿಂಡೋಸಿನ ಹೊಸ ಬ್ರೌಸರ್. ಮೈಕ್ರೋಸಾಫ್ಟ್ ಪ್ರಾರಂಭವಾದಗಲಿಂದಲೂ ಇಂಟರ್ನೆಟ್ ಎಕ್ಸ್ ಪ್ಲೋರರ್ ಚಾಲ್ತಿಯಲ್ಲಿದೆ. ಅದರ ವೇಗ ಹೇಳಿಕೊಳ್ಳುವಷ್ಟೇನಿರಲಿಲ್ಲ. ಫೈರ್ ಫಾಕ್ಸ್, ಗೂಗಲ್ ಕ್ರೋಮ್ ಮತ್ತು ಒಪೆರಾ ಇಂಟರ್ನೆಟ್ ಎಕ್ಸ್ ಪ್ಲೋರರ್ ಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದವು. ಈ ಹೊಸ ಆವೃತ್ತಿಯ ವಿಂಡೋಸಿನಲ್ಲಿ ಎಡ್ಜ್ ಹೆಸರಿನ ಹೊಚ್ಚ ಹೊಸ ಬ್ರೌಸರ್ ನೀಡಲಾಗಿದೆ. ಬ್ರೌಸರ್ ತಕ್ಕಮಟ್ಟಿಗೆ ಆಕರ್ಷಕವಾಗಿದೆ. ವೇಗದಲ್ಲಿ ಉಳಿದ ಬ್ರೌಸರ್ ಗಳಿಗೆ ಸೆಡ್ಡು ಹೊಡೆಯುತ್ತದೆ.
ಎಡ್ಜ್ ಬ್ರೌಸರ್ |
ಮೈಕ್ರೋಸಾಫ್ಟ್ ಎಡ್ಜ್ ಬ್ರೌಸರ್ರಿನ ಮುಖಪುಟದಲ್ಲೇ ಅನೇಕ ಸುದ್ದಿಗಳನ್ನು ನೋಡಿಬಿಡಬಹುದು. |
ಒಟ್ಟಾರೆಯಾಗಿ ಹೊಸ ವಿಂಡೋಸ್ ಕಾರ್ಯಕ್ಷಮತೆಯಲ್ಲಿ, ಅಂದದಲ್ಲಿ ಮೊದಲ ನೋಟಕ್ಕೆ ಮೆಚ್ಚುಗೆಯಾಗುತ್ತೆ. ಹುಳುಕಗಳೇನಿವೆ ಎಂಬುದನ್ನು ಒಂದಷ್ಟು ದಿನದ ಉಪಯೋಗದ ನಂತರ ಪಟ್ಟಿ ಮಾಡಬಹುದು. ಇದು ಹೊಸ ತಂತ್ರಾಂಶವಾದ್ದರಿಂದ ಒಂದಷ್ಟು ಗೊಂದಲಗಳಿಗೂ ಕಾರಣವಾಗುತ್ತದೆ. ನಾನು ಎರಡು ಲ್ಯಾಪ್ ಟಾಪನ್ನು ನೇರವಾಗಿ ಅಪ್ ಡೇಟ್ ಮಾಡಿಕೊಂಡೆ. ಒಂದರಲ್ಲಿ ವಿಂಡೋಸ್ ಹತ್ತು ಸರಾಗವಾಗಿ ಕಾರ್ಯನಿರ್ವಹಿಸುತ್ತಿದೆ. ಮತ್ತೊಂದರಲ್ಲಿ ಸಂಪೂರ್ಣ ಇನ್ಸ್ಟಾಲ್ ಆದ ನಂತರ ಕಂಪ್ಯೂಟರನ್ನು ಆನ್ ಮಾಡಿದರೆ ವಿಂಡೋಸ್ ಹತ್ತರ ಲೋಗೋ ತೋರಿಸಿ ಕಪ್ಪು ಪರದೆ ಬಂದುಬಿಡುತ್ತಿತ್ತು. ಕಂಪ್ಯೂಟರಿನ ಕಾರ್ಯನಿರ್ವಹಣೆಯೇ ನಿಂತು ಹೋಯಿತು. ಒಂದಷ್ಟು ಪ್ರಯತ್ನದ ನಂತರ ಮತ್ತೆ ಹಳೆಯ ವಿಂಡೋಸ್ 7ಗೆ ಬದಲಿಸಿಕೊಂಡೆ. ಮೂರು ಜಿ.ಬಿ ನಷ್ಟವಾಯಿತು, ಜೊತೆಗೊಂದಷ್ಟು ಸಮಯ! ಬರುವ ದಿನಗಳಲ್ಲಿ ಆ ತೊಂದರೆಗಳೆಲ್ಲ ಪರಿಹಾರವಾಗಬಹುದು. ಅಲ್ಲಿಯವರೆಗೂ ಕಾದರಾಯಿತು ಏನು ಆತುರ ಎಂದುಕೊಂಡರೂ ಅಡ್ಡಿಯಿಲ್ಲ, ಇಲ್ಲ ಹೊಸ ತಂತ್ರಾಂಶವನ್ನು ಈಗಲೇ ಪರೀಕ್ಷಿಸಿ ನೋಡಬೇಕು ಎಂದುಕೊಂಡರೂ ಅಡ್ಡಿಯಿಲ್ಲ!
No comments:
Post a Comment