ಇದೇ ಆಗಸ್ಟ್ 30ರಂದು ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷತ್ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂಜೆ 5:30ಕ್ಕೆ ಟಿ.ಎಸ್.ವಿವೇಕಾನಂದರು ಬರೆದಿರುವ "ಭೂಮಿಗೀತೆ" ಮತ್ತು "ಜೀವತಲ್ಲಣಗಳ ಆತ್ಮಕಥನ" ಪುಸ್ತಕಗಳು ಬಿಡುಗಡೆಯಾಗುತ್ತಿದೆ.
ಪುಸ್ತಕದ ಆಯ್ದ ಭಾಗ ಹಿಂಗ್ಯಾಕೆಯ ಓದುಗರಿಗಾಗಿ.
ಕೇರಳದ ಕಾಡುಭಾಗದ ಹಳ್ಳಿಗಳ ಪೈಕಿ ಇದೊಂದು ಸಣ್ಣ ಹಳ್ಳಿ, ಹೆಸರು ಪ್ಲಾಚಿಮಡ. ಕೇರಳ-ತಮಿಳುನಾಡು ರಾಜ್ಯಗಳ ಗಡಿಯಲ್ಲಿರುವ ಪಾಲಕ್ಕಾಡ್ ಜಿಲ್ಲೆಯ ಚಿತ್ತೂರು ತಾಲ್ಲೂಕಿನಲ್ಲಿದೆ. ಎಲ್ಲರಿಗೂ ತಿಳಿದಂತೆ ಚಿತ್ತೂರು ಭತ್ತ/ಅಕ್ಕಿಗೆಪ್ರಸಿದ್ದಿ ಪಡೆದ ಪ್ರದೇಶ. ಈ ಪಾಲಕ್ಕಾಡಿನ ಸುತ್ತಮತ್ತ ಪಟ್ಟಂಚೇರಿ ಮತ್ತು ಮತ್ತಲಮಡ ಗ್ರಾಮ ಪಂಚಾಯ್ತಿಗಳಿವೆ. ಈ ಒಟ್ಟೂ ಪ್ರದೇಶ ಪಶ್ಚಿಮಘಟ್ಟ ಶ್ರೇಣಿಯು ಒಂದೆಡೆ ಸ್ವಲ್ಪ ತೆರವಾಗಿರುವ ಜಾಗದಲ್ಲಿದೆ. ಇಲ್ಲಿ ಸಾಮಾನ್ಯವಾಗಿ ಮಳೆ ಕಡಿಮೆ. ಕೇರಳದ ವಾರ್ಷಿಕ ಸರಾಸರಿ ಮಳೆಯಲ್ಲಿ ಅರ್ಧದಷ್ಟು ಮಳೆ ಬಂದರೆ ಹೆಚ್ಚು. ಹಾಗಾಗಿ ಇಲ್ಲಿನ ಎಲ್ಲ ಜೀವರಾಶಿ ಅಂತರ್ಜಲವನ್ನು ಆಧರಿಸಿದೆ. ಇಲ್ಲಿನ ಅಂತರ್ಜಲ ಸಮೃದ್ದವಾಗಿದ್ದು, ಇಲ್ಲಿನ ಜೀವಜಾಲದ ಪೋಷಣೆಗೆ ಅಗತ್ಯವಾದಷ್ಟಿದೆ. ಅಲ್ಲದೆ ಅಂತರ್ಜಲ ಪ್ರತಿವರ್ಷ ತಂತಾನೆ ಮಟ್ಟವನ್ನು ಕಾಪಾಡಿಕೊಳ್ಳುತ್ತದೆ. ಕಾರಣ ಈ ಪ್ರದೇಶದಿಂದ ದೂರದಲ್ಲಿ ಎರಡು ಜಲಾಶಯಗಳಿವೆ. ಹೀಗಾಗಿ ಇಲ್ಲಿನ ಮುಖ್ಯ ಕಸುಬು ಬೇಸಾಯ ಮತ್ತು ಬೇಸಾಯ ಆಧಾರಿತ ಕೂಲಿ.
ಹೀಗೆ ನೂರಾರು ವರ್ಷಗಳಿಂದ ಬದುಕುತ್ತಾ ಬಂದ ಈ ಪಂಚಾಯತಿಗಳ ಪ್ರದೇಶಕ್ಕೆ ಒಮ್ಮೆ ಕೆಲವು ಜನ ಬಂದು ಸುಮಾರು ೩೬ ಎಕರೆ ಕೃಷಿ ಜಮೀನನ್ನು ಕೊಳ್ಳುತ್ತಾರೆ. ಇದಾದ ಕೆಲವೇ ದಿನಗಳಲ್ಲಿ ಅಲ್ಲಿಗೆ ಹಿಂದೂಸ್ತಾನ್ ಕೊಕೋ ಕೋಲಾ ಬೇವರೇಜಸ್ ಲಿ. ಎಂಬ ಕಂಪನಿ ಬರುವುದಾಗಿ ಜನಕ್ಕೆ ತಿಳಿಯುತ್ತದೆ. ಜನ ಪ್ರತಿರೋಧಿಸುತ್ತಾರೆ. ಇದಾದ ಕೆಲವು ದಿನಗಳಲ್ಲಿ ಕಂಪನಿಯ ಮಂದಿ ಬರುತ್ತಾರೆ, ಬಂದವರು “ನೀವು ಏಕೆ ಮನೆ ಬಾಗಿಲಿಗೆ ಬಂದ ಅದೃಷ್ಟವನ್ನು ಕಾಲಲ್ಲಿ ದೂಡುತ್ತಿದ್ದೀರಿ?! ನಾವು ಇಲ್ಲಿಗೆ ಬರುತ್ತಿದ್ದಂತೆ ನಿಮ್ಮೆಲ್ಲರ ಮನೆಯವರಿಗೆ ಕೆಲಸ ಕೊಡುತ್ತೇವೆ. ಕೈತುಂಬಾ ಸಂಬಳ ಕೊಡುತ್ತೇವೆ, ಇಲ್ಲಿನ ಎಲ್ಲಾ ಹಳ್ಳಿಗಳನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲ್ಮಟ್ಟಕ್ಕೆ ಎತ್ತುತ್ತೇವೆ, ನಾವು ಸದಾ ನಿಮ್ಮ ಹಳ್ಳಿಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತೇವೆ..." ಎಂದೆಲ್ಲಾ ಕನಸುಗಳ ಹೂ ಮಾಲೆ ಹಾಕುತ್ತಾರೆ. ಜನ ಅವರ ಮಾತುಗಳನ್ನು ನಂಬುತ್ತಾರೆ. ಇದಾದ ಕೆಲವೇ ದಿನಗಳಲ್ಲಿ ಕಾರ್ಖಾನೆ ಕೆಲಸ ಆರಂಭಿಸುತ್ತದೆ. ಸುತ್ತಮುತ್ತ ಒಟ್ಟು ಎರಡು ಲಕ್ಷಕ್ಕೂ ಮಿಗಿಲಾದ ಜನಸಂಖ್ಯೆಯಲ್ಲಿ ಸುಮಾರು ೨೦೦ ಜನಕ್ಕೆ ದಿನಗೂಲಿ ಕೆಲಸ ಸಿಗುತ್ತದೆ. ೧೭೦ ಮಂದಿ ಹೊರಗಿನವರಿಗೆ ಶಾಶ್ವತ ಉದ್ಯೋಗ ದೊರೆಯುತ್ತದೆ.
ಪುಸ್ತಕ ಬಿಡುಗಡೆ ಸಮಾರಂಭದ ವಿವರಗಳು |
ಇಲ್ಲಿಂದ ಪ್ರತಿದಿನ ೮೫ ಲಾರಿಗಳು ಕುತ್ತಿಗೆಮಟ್ಟ ಲೋಡನ್ನು ತುಂಬಿಕೊಂಡು ಕೇರಳದ ನಗರಗಳತ್ತ ಸಾಗುತ್ತವೆ. ಪ್ರತಿಯೊಂದು ಲಾರಿಯಲ್ಲಿ ೫೫೦-೬೦೦ ಕೇಸುಗಳಿರುತ್ತವೆ. ಇಂಥಾ ಪ್ರತಿಯೊಂದು ಕೇಸಿನಲ್ಲಿ ೨೪ ಬಾಟಲಿಗಳು ತುಂಬಿರುತ್ತವೆ. ಈ ಲೆಕ್ಕದಲ್ಲಿ ದಿನಕ್ಕೆ ಇಂಥಾ ೧೨ ಲಕ್ಷ ಬಾಟಲಿ ಕೊಕೋ ಕೋಲಾ ನೀರು ಪ್ಲಾಚಿಮಡಾದಿಂದ ಹೊರಹೋಗಲಾರಂಭಿಸುತ್ತದೆ.
ಅತ್ತ ಅವರ ಲಾರಿಗಳ ಓಡಾಟ ಜಾಸ್ತಿಯಾದಂತೆ ಇತ್ತ ಸುತ್ತಮುತ್ತಲ ಮೂರೂ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಬರುವ ಹತ್ತಾರು ಹಳ್ಳಿಗಳ ಬಾವಿಗಳು ನಿಧಾನಕ್ಕೆ ತಳ ಕಾಣಲಾರಂಭಿಸುತ್ತವೆ. ಅಲ್ಲಲ್ಲಿ ಕೆಲವು ಬಾವಿಗಳಲ್ಲಿ ತಳದಲ್ಲಿ ಅಲ್ಪಸ್ವಲ್ಪ ನೀರಿದ್ದರೂ ಆ ನೀರು ಮೊದಲಿನಂತೆ ಕಾಣುವುದಿಲ್ಲ. ಕುಡಿಯಲು ಸಾಧ್ಯವಾಗುತ್ತಿಲ್ಲ. ಬಟ್ಟೆ ತೊಳೆಯಲು ಸಾಧ್ಯವಾಗುತ್ತಿಲ್ಲ. ಇದಾದ ಕೆಲವೇ ದಿನಗಳಲ್ಲಿ ಆ ವರ್ಷದ ಮೊದಲ ಬೆಳೆ ಬರುತ್ತದೆ. ಯಾರಿಗೂ ಸರಿಯಾದ ಇಳುವರಿಯಿಲ್ಲ. ಈ ನಡುವೆ ಕಾರ್ಖಾನೆಯು ಉಚಿತವಾಗಿ ಕೊಟ್ಟಿದ್ದ ಮಂದ ದ್ರವರೂಪದ ತ್ಯಾಜ್ಯವನ್ನು ಉತ್ತಮ ಗೊಬ್ಬರವೆಂದು ಹೇಳಿ ರೈತರ ಹೊಲಗಳಿಗೆ ಸಾಗಿಸಿದ್ದ ಕಂಪನಿಯ ಉದ್ದೇಶದ ಬಗ್ಗೆ ಜನಕ್ಕೆ ಗುಮಾನಿ ಆರಂಭವಾಗುತ್ತದೆ. ನೀರು ನಿಧಾನವಾಗಿ ಪಾತಾಳ ಸೇರುತ್ತಿರುತ್ತದೆ. ಬೇಸಾಯ ಅಸಾಧ್ಯವಾಗುತ್ತದೆ. ಅಲ್ಲಿನ ಬಾವಿ, ಕೆರೆ, ಹೊಂಡಗಳಲ್ಲಿ ನೀರಲ್ಲಿ ಸ್ನಾನ ಮಾಡಿದ ಜನ-ಜಾನುವಾರುಗಳ ಮೈಯಲ್ಲಿ ನಿಧಾನವಾಗಿ ಬೊಕ್ಕೆಗಳು ಕಾಣಿಸಿಕೊಳ್ಳುತ್ತವೆ. ಸಾವಿರಾರು ಜನ ಜೀವನೋಪಾಯಕ್ಕಾಗಿ ವಲಸೆ ಹೋಗಲು ಆರಂಭಿಸುತ್ತಾರೆ.
ಜನಕ್ಕೆ ತಮ್ಮ ಸಮಸ್ಯೆಗಳ ಮೂಲವನ್ನು ಹುಡುಕುವುದು ಅನಿವಾರ್ಯವಾಗುತ್ತದೆ. ನಿಜಸ್ಥಿತಿ ಅವರ ಗಮನಕ್ಕೆ ಬಂದಾಗ ಜನ ಬೆಚ್ಚಿಬೀಳುತ್ತಾರೆ. ಆ ಕಂಪನಿಯ ಆವರಣದಲ್ಲಿ ಯಮ ಸಾಮರ್ಥ್ಯದ ಆರು ಬೋರ್‌ವೆಲ್‌ಗಳಿರುತ್ತವೆ. ಇವುಗಳಿಂದ ಕಾರ್ಖಾನೆ ಪ್ರತಿನಿತ್ಯ ೧೫ ಲಕ್ಷ ಲೀ. ನೀರನ್ನು ನೆಲದಿಂದ ಹೀರಿ, ಅದಕ್ಕೆ ಪರಿಮಳ ಹಾಕಿ ರವಾನಿಸುತ್ತಿರುತ್ತದೆ. ಜನರ ಗಮನಕ್ಕೆ ಇದು ಬರುವ ಹೊತ್ತಿಗೆ ಕಂಪನಿಯ ಬೋರುಗಳೂ ಮುಷ್ಕರ ಹೂಡಿರುತ್ತವೆ. ಆಗ ಅವುಗಳಿಂದ ನಿತ್ಯ ಕೇವಲ ೮ ಲಕ್ಷ ಲೀ. ನೀರು ಮಾತ್ರ ಹೊರಬರುತ್ತಿರುತ್ತದೆ. ಈ ಕೊರತೆಯನ್ನು ಹೊಂದಿಸಿಕೊಳ್ಳಲು ಕಂಪನಿ ದೂರದೂರದ ರೈತರ ಹೊಲಗಳಿಂದ ನೀರನ್ನು ಖರೀದಿ ಮಾಡುತ್ತಿರುತ್ತದೆ. ಈ ನಡುವೆ ರೈತರು ಅವರ ಉಚಿತ ಗೊಬ್ಬರವನ್ನು ನಿರಾಕರಿಸಲಾರಂಭಿಸಿದ ಮೇಲೆ ಬೇಕಾಬಿಟ್ಟಿ ಸಿಕ್ಕಿದ ಕಡೆ ಎಸೆದ ಅಪಾಯಕಾರಿ ತ್ಯಾಜ್ಯದಿಂದ ಹೊರಬಿದ್ದ ಗಬ್ಬುನಾತ ಇಡೀ ಪ್ರದೇಶಕ್ಕೊಂದು ಹೊಸ ಹೆಸರನ್ನಿಡುವಂತೆ ಮಾಡುತ್ತದೆ.
ಜನ ಪ್ರತಿರೋಧಿಸುತ್ತಾರೆ, ಕಂಪನಿ ಕೇರೇ ಮಾಡುವುದಿಲ್ಲ. ಅವರ ಬಾವಿಗಳು ಪೂರ್ತಿ ಬತ್ತಿಹೋಗುತ್ತವೆ. ಸುತ್ತಮುತ್ತಲ ಜಮೀನುಗಳು ಸವುಳು ನೆಲಗಳಾಗಿ, ಕೃಷಿಗೆ ಅಯೋಗ್ಯವಾಗುತ್ತವೆ. ಸುತ್ತಮುತ್ತಲ ಹಳ್ಳಿಗಳ ಮಕ್ಕಳು ಮುದುಕರಾದಿಯಾಗಿ ಎಲ್ಲರಿಗೂ ಅನೇಕ ಖಾಯಿಲೆಗಳು ಸಾಮಾನ್ಯವೆಂಬಂತೆ ಕಾಡತೊಡಗುತ್ತವೆ. ಒಂದೆಡೆ ನಿಂತುಹೋಗಿರುವ ಕೃಷಿ, ಮತ್ತೊಂದೆಡೆ ಬೀದಿ ಪಾಲಾದ ಕೃಷಿ ಕಾರ್ಮಿಕರು, ಈ ನಡುವೆ ಕಂಡು ಕೇಳರಿಯದ ರೋಗಗಳು, ಔಷಧ ವೆಚ್ಚ , ಜೊತೆಗೆ ಗಬ್ಬು ವಾಸನೆ. ರೋಸಿಹೋದ ಜನ ಸರ್ಕಾರದ ಮೊರೆ ಹೋಗುತ್ತಾರೆ. ಸರ್ಕಾರ ಕಂಪನಿಯ ಪರವಾಗಿ ನಿಲ್ಲುತ್ತದೆ. ಜನ ಕಾರ್ಖಾನೆಯ ಮುಂದೆ ಪ್ರದರ್ಶನ ಪ್ರತಿಭಟನೆಗಿಳಿಯುತ್ತಾರೆ, ಪಿಕೆಟಿಂಗ್ ಮಾಡುತ್ತಾರೆ. ಪೋಲೀಸರು ನಿರ್ದಾಕ್ಷಿಣ್ಯವಾಗಿ ಲಾಠಿಬೀಸಿ ಜನರನ್ನು ಮಗ್ಗ ಮಲಗಿಸುತ್ತಾರೆ. ಪ್ರತಿಯೊಬ್ಬರ ಮೇಲೆ ಅಸಂಖ್ಯಾತ ಐಪಿಸಿ ಕೋಡುಗಳ ಮೂಲಕ ಸಾಧ್ಯವಾದ ಎಲ್ಲಾ ಮೊಕದ್ದಮೆಗಳನ್ನು ಹೂಡುತ್ತಾರೆ. ಕಾರ್ಖಾನೆಯ ಕಾವಲಿಗೆ ಪೋಲೀಸ್ ತುಕಡಿ ಬರುತ್ತದೆ. ಅನಿವಾರ್ಯವಾಗಿ ಸ್ಥಳೀಯರು ಬೀದಿಗಳಿಯುತ್ತಾರೆ.
ಈ ಹೋರಾಟ ಆರಂಭವಾಗಿದ್ದು ೨೨ ನೇ ಏಪ್ರಿಲ್ ೨೦೦೨ ರಂದು, ಉದ್ಘಾಟಿಸಿದ್ದು ಆದಿವಾಸಿ ಗೋತ್ರ ಮಹಾಸಭಾದ ನಾಯಕಿ ಸಿ.ಕೆ.ಜಾನು. ಈ ದುರಂತದ ಹೆಚ್ಚು ಬಲಿಪಶುಗಳು ಆದಿವಾಸಿಗಳು ಮತ್ತು ದಲಿತರು. ಈ ಹೋರಾಟಕ್ಕೆ ನಾಡಿದ್ದು ೧೫ ತಾರೀಖಿಗೆ ಒಂದು ಸಾವಿರ ದಿನಗಳು ತುಂಬಲಿವೆ.
ಈ ನಡುವೆ ಆ ಪ್ರದೇಶದ ಮಿಲಿಯಾನು ಲೀಟರ್ ನೀರು ಭೂಮಿಯಿಂದ ಹೊರಬಂದು ನಗರವಾಸಿ ಶೋಕಿಲಾಲರ ಹೊಟ್ಟೆಸೇರಿ, ಮೂತ್ರವಾಗಿ ಕೇರಳದ ಉದ್ದಗಲಕ್ಕೂ ಹರಿದಾಡುತ್ತಿದೆ. ಅಲ್ಲಿನ ಸಾವಿರಾರು ಆದಿವಾಸಿಗಳು, ದಲಿತರು ಹಸಿವು ಅಪಮಾನಗಳಿಂದ ಕಂಗೆಟ್ಟಿದ್ದಾರೆ. ಸರ್ಕಾರ ಕಂಪನಿಯ ರಕ್ಷಣೆಗೆ ಟೊಂಕಕಟ್ಟಿ ನಿಂತಿದೆ. ಇವುಗಳ ನಡುವೆ ಸ್ಥಳೀಯ ಗ್ರಾಮ ಪಂಚಾಯ್ತಿಗಳು ಕಾರ್ಖಾನೆಯ ಪರವಾನಗಿಯನ್ನು ರದ್ದುಪಡಿಸಿವೆ. ಇದನ್ನು ಪ್ರಶ್ನಿಸಿ ಕಂಪನಿ ಕೇರಳ ಹೈಕೋರ್ಟಿನ ಮೆಟ್ಟಿಲು ಹತ್ತಿದೆ. ಕೋರ್ಟು ಪಂಚಾಯತಿಯ ಆದೇಶಕ್ಕೆ ತಡೆಯಾಜ್ಞೆ ನೀಡಿ, ಇದಕ್ಕೆ ಸಂಬಂಧಿಸಿದ ಅಧಿಕಾರದ ಮುಂದೆ ಮನವಿ ಸಲ್ಲಿಸುವಂತೆ ಸೂಚಿಸಿದೆ. ಇದನ್ನು ಆಧರಿಸಿ ಕಂಪನಿ ರಾಜ್ಯದ ಸ್ಥಳೀಯ ಸ್ವಯಂ ಆಡಳಿತ ಇಲಾಖೆಯ ಮುಂದೆ ಮನವಿ ಸಲ್ಲಿಸಿದೆ. ಆ ಆಡಳಿತವು ತನ್ನ ಮಧ್ಯಂತರ ಆದೇಶದಲ್ಲಿ ಎಲ್ಲಾ ಸರ್ಕಾರಿ ಇಲಾಖೆಗಳೂ ಮಾಡುವಂತೆ ಈ ತೀರ್ಮಾನಕ್ಕೆ ಬರುವುದಕ್ಕೆ ಮುಂಚೆ ‘ತಜ್ಞರ ಸಮಿತಿಯನ್ನು’ ನೇಮಿಸಿ ಅದರಿಂದ ವರದಿ ಪಡೆಯಿರಿ ಎಂದು ಹೇಳಿದೆ. ಈ ಮಧ್ಯಂತರ ಆದೇಶವನ್ನು ಪ್ರಶ್ನಿಸುತ್ತಾ ಪಂಚಾಯ್ತಿಯು ಈ ರೀತಿ ತಜ್ಞರ ಸಮಿತಿಯನ್ನು ನೇಮಿಸುವುದಕ್ಕೆ ಮುಂಚೆ ಕಾರ್ಖಾನೆಯು ನಾವು ಈ ಕೆಳಗೆ ಮಂಡಿಸಿರುವ ೧೬ ಪ್ರಶ್ನೆಗಳಿಗೆ ಪಂಚಾಯ್ತಿಗೆ ಬಂದ ಉತ್ತರಿಸಲಿ ಎಂದು ಹೇಳಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಪಂಚಾಯ್ತಿಗೆ ಹೋದ ಕಂಪನಿಯ ಅಧಿಕಾರಿ ಬರಿಗೈಯಲ್ಲಿ ಹೋಗಿದ್ದಾನೆ. ಪ್ರಶ್ನೆಗಳಿಗೆ ಉತ್ತರಿಸಲು ಅವನಿಂದ ಸಾಧ್ಯವಾಗಿಲ್ಲ.
ಇದಾಗುವಷ್ಟರಲ್ಲಿ ಪೆರುಮಟ್ಟಿ ಗ್ರಾಮ ಪಂಚಾಯ್ತಿಯು ತನ್ನ ಪರವಾನಗಿ ರದ್ದು ಆದೇಶಕ್ಕೆ ಸರ್ಕಾರವು ನೀಡಿದ್ದ ತಡೆಯಾಜ್ಞೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿ ಹೈಕೋರ್ಟಿನಲ್ಲಿ ವಿಚಾರಣೆಗೆ ಬಂದು, ಹೈಕೋರ್ಟು ಒಂದು ತಿಂಗಳೊಳಗೆ ಕಾರ್ಖಾನೆಯು ಬೋರಿನ ನೀರಿಗೆ ಬದಲಾಗಿ ಬೇರೊಂದು ಮಾರ್ಗವನ್ನು ಕಲ್ಪಿಸಿಕೊಳ್ಳುವಂತೆ ಸೂಚಿಸಿದೆ. ಹಾಗೊಂದು ಪಕ್ಷ ಕಾರ್ಖಾನೆ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡರೆ ಕಾರ್ಖಾನೆಯ ವ್ಯವಹಾರದಲ್ಲಿ ಪಂಚಾಯ್ತಿಯು ಮಧ್ಯಪ್ರವೇಶಿಸಬಾರದೆಂದೂ, ಅಲ್ಲಿಯವರೆಗೆ ಕಾರ್ಖಾನೆಯು ತನ್ನ ೩೬ ಎಕರೆ ಪ್ರದೇಶಕ್ಕೆ ಅನುಗುಣವಾಗಿ ಕೃಷಿಗೆ ಹಾಗೂ ದಿನಬಳಕೆಗೆ ಒಬ್ಬ ರೈತ ಎಷ್ಟು ನೀರನ್ನು ಬಳಸುತ್ತಾನೋ ಅಷ್ಟು ನೀರನ್ನು ಅಂತರ್ಜಲದಿಂದ ಎತ್ತಿ ಬಳಸಬಹುದೆಂದೂ, ಒಂದು ತಿಂಗಳ ನಂತರ ಅವರ ಕೊಳವೆ ಬಾವಿಗಳ ಬಳಕೆಯನ್ನು ನಿಲ್ಲಿಸಿರುವುದನ್ನು ಖಚಿತಪಡಿಸಬೇಕೆಂದೂ ಹೇಳಿದೆ. ಮುಂದುವರಿದು ಈ ರೀತಿ ಸರ್ಕಾರವು ಒಂದು ಕಂಪನಿಗೆ ಇಷ್ಟೊಂದು ಅಗಾಧ ಪ್ರಮಾಣದ ಅಂತರ್ಜಲವನ್ನು ಬಳಸಲು ಅನುಮತಿ ನೀಡಲು ಬರುವುದಿಲ್ಲ. ಹಾಗೊಂದು ಪಕ್ಷ ಇದೇ ಆಧಾರದ ಮೇಲೆ ಎಲ್ಲಾ ರೈತರೂ ಇದೇ ಪ್ರಮಾಣದಲ್ಲಿ ಅಂತರ್ಜಲವನ್ನು ಬಳಸಲು ಕೋರಿದರೆ ಅದಕ್ಕೆ ಸರ್ಕಾರ ಅನುಮತಿ ನೀಡಬೇಕಾಗುತ್ತದೆ, ಆಗ ಅಂತರ್ಜಲದ ಕಥೆ ಏನಾಗುತ್ತದೆ? ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದೆ.
ಏಕ ಪೀಠದ ಈ ಮೇಲಿನ ತೀರ್ಪನ್ನು ಪ್ರಶ್ನಿಸಿ ಡಿವಿಷನಲ್ ಬೆಂಚಿನ ಮುಂದೆ ಕಂಪನಿ ಮೇಲ್ಮನವಿಯನ್ನು ಸಲ್ಲಿಸಿದೆ. ಇದರಲ್ಲಿ ಕಂಪನಿ ‘ಒಂದು ಪಂಚಾಯ್ತಿಗೆ ಇಂಥಾ ಒಂದು ಕಂಪನಿಯ ಪರವಾನಗಿಯನ್ನು ರದ್ದುಪಡಿಸುವ ಅಥವಾ ಪ್ರಶ್ನಿಸುವ ಅಧಿಕಾರವಿಲ್ಲ’ ಎಂದು ಹೇಳಿದೆ. ವಿಚಾರಣೆ ಇನ್ನೂ ಬಾಕಿ ಇದೆ. ಈ ನಡುವೆ ನಡೆದಿರುವ ಎಲ್ಲಾ ಸಂಶೋದನೆಗಳೂ ಕಂಪನಿಯ ವಿರುದ್ದವಾಗಿವೆ. ಮನುಷ್ಯನ ಕೇಂದ್ರ ನರವ್ಯೂಹ, ಮೂತ್ರಕೋಶ ಹಾಗೂ ಮಿದುಳಿನ ಕ್ರಿಯೆಗಳ ಮೇಲೆ ಅಗಾಧ ಪರಿಣಾವನ್ನುಂಟುಮಾಡಿ, ಜೀವ ತಗೆಯಬಲ್ಲ ಕ್ಯಾಡ್ಮಿಯಂ ಮತ್ತು ಸೀಸದ ಧಾತುಗಳು ಅಲ್ಲಿನ ತ್ಯಾಜ್ಯದಲ್ಲಿ ನಿಗಧಿತ ಮಿತಿಗಿಂತ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿರುವುದನ್ನು ಸಂಶೋಧನೆಗಳು ಸ್ಥಿರಪಡಿಸಿವೆ.
ಈ ಹಿನ್ನೆಲೆಯಲ್ಲಿ ಭವಿಷ್ಯದ ವಿಚಾರಣೆ ಕೇವಲ ನೀರನ್ನು ಮಾತ್ರ ಕುರಿತು ಯೋಚಿಸುತ್ತದೋ ಇಲ್ಲಾ ಸಮಗ್ರವಾಗಿ ಹಳ್ಳಿಯ ವಿನಾಶವನ್ನು ಗಮನಿಸುತ್ತದೋ ಕಾದು ನೋಡಬೇಕಾಗಿದೆ. ಇದಕ್ಕಾಗಿ ಈ ಹೋರಾಟದ ಮುಂಚೂಣಿಯಲ್ಲಿರುವ ‘ಕೊಕೋ ಕೋಲಾ ವಿರುದ್ಧ ಸಮರ ಸಮಿತಿ’ ಹಾಗೂ ಇದನ್ನು ಬೆಂಬಲಿಸುತ್ತಿರುವ ಹಲವು ಜನಪರ ಸಂಘಟನೆಗಳು ಹಾಗೂ ವ್ಯಕ್ತಿಗಳು ಕುತೂಹಲದಿಂದ ಕಾದಿದ್ದಾರೆ. ಇದೊಂದು ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯಾಗಿರುವುದರಿಂದ ಅಂಥಾ ಮಾಧ್ಯಮಗಳೂ ಈ ನಿರೀಕ್ಷೆಯಲ್ಲಿವೆ.
ಈ ನಡುವೆ ಪಾಕಿಸ್ತಾನ ಸಿಂಧ್ ಪ್ರಾಂತ್ಯ ಹೈಕೋರ್ಟ್ ಇಂಥದ್ದೇ ಒಂದು ತಾಪತ್ರಯದಲ್ಲಿ ಸಿಕ್ಕಿಕೊಂಡು ಹೊರಬಂದ ಘಟನೆಯೊಂದು ವರದಿಯಾಗಿದೆ. ಕರಾಚಿಯ ಹೊರವಲಯದಲ್ಲಿ ಸಿಂಧ್ ಸರ್ಕಾರ ಒಂದೆಡೆ “ಶಿಕ್ಷಣ ನಗರ"ವನ್ನು ಸೃಷ್ಠಿಸಲು ಜಮೀನನ್ನು ಮಂಜೂರು ಮಾಡಿತ್ತು.ಇಲ್ಲಿ ಜಮೀನು ಪಡೆದ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಪಾಕಿಸ್ತಾನದ ಪ್ರಖ್ಯಾತ ‘ಸಿಂಧ್ ಇನ್ಸ್‌ಟಿಟ್ಯೂಟ್ ಆಫ್ ಯೂರಾಜಲಿ’, ಹಾಗೂ ‘ಜುಲ್ಫಿಕರ್ ಆಲಿ ಬುಟ್ಟೋ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ’ ಸಂಸ್ಥೆಗಳು ಸೇರಿದ್ದವು. ಈ ನಡುವೆ ಸಿಂಧ್ ಸರ್ಕಾರ ಅದೇ ಪ್ರದೇಶದಲ್ಲಿ ಇದೇ ಕೊಕೋ ಕೋಲಾ ಕಂಪನಿಯ ಸೋದರನಾದ ನೆಸ್ಲೆ ಕಂಪನಿಗೆ ಬಾಟಲಿ ನೀರನ್ನು ಉತ್ಪಾದಿಸುವ ಕಾರ್ಖಾನೆಗೆ ಸುಮಾರು ೮.೫ ಹೆಕ್ಟೇರ್ ನೆಲವನ್ನು ಕೊಟ್ಟಿತ್ತು.
ಈ ಕಾರ್ಖಾನೆಯು ಇಲ್ಲಿಂದ ಪ್ರತಿದಿನ ೩೦ ಕೋಟಿ ಲೀಟರ್ ನೀರನ್ನು ಭೂಮಿಯಿಂದ ತಗೆದು, ಅದನ್ನು ಸಂಸ್ಕರಿಸಿ, ಬಾಟಲಿಮಾಡಿ, ಸಧ್ಯಕ್ಕೆ ಅಮೆರಿಕಾದ ಸೇನೆಗಳು ಕಾರ್ಯಾಚರಣೆಯಲ್ಲಿರುವ ಅಪ್ಘಾನಿಸ್ಥಾನ ಮತ್ತು ಕೆಲವು ಅರಬ್ ದೇಶಗಳಿಗೆ ಸರಬರಾಜು ಮಾಡುವ ಯೋಜನೆ ಹೊಂದಿತ್ತು. ಇದಕ್ಕಾಗಿ ಹತ್ತು ಮಿಲಿಯಾನು ಡಾಲರ್‌ಗಳಷ್ಟು ಬಂಡವಾಳ ಹೂಡಲು ತೀರ್ಮಾನಿಸಿತ್ತು. ಆದರೆ ಈ ಕಾರ್ಖಾನೆ ಆರಂಭವಾಗುವುದಕ್ಕೆ ಮುಂಚೆಯೇ ಅಲ್ಲಿ ಜಾಗ ಪಡೆದಿದ್ದ ಶಿಕ್ಷಣ ಸಂಸ್ಥೆಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದವು. ಈ ಪ್ರದೇಶವು ಅಂತರ್ಜಲದ ದೃಷ್ಟಿಯಿಂದ ತೀರಾ ನಾಜೂಕಿನದಾಗಿದ್ದು. ಪ್ರತಿದಿನ ಇಷ್ಟೋಂದು ಅಗಾಧ ಪ್ರಮಾಣದ ನೀರನ್ನು ಹೊರತಗೆಯುವುದರಿಂದ ನಾಳೆ ಅಲ್ಲಿ ವಾಸಿಸುವ ಯಾರಿಗೂ ನೀರೇ ಇಲ್ಲದಂತಾಗುತ್ತದೆ. ಆದರೆ ಅಲ್ಲಿನ ಅಂತರ್ಜಲ ಮುಗಿದ ತಕ್ಷಣ ಈ ಕಾರ್ಖಾನೆ ಬೇರೊಂದು ನೀರು ಸಿಗುವ ಜಾಗಕ್ಕೆ ತನ್ನ ಟೆಂಟನ್ನು ಬದಲಾಯಿಸುತ್ತದೆ. ಆದರೆ ನಾವು ಹಾಗೆ ಮಾಡಲು ಬರುವುದಿಲ್ಲ. ಆದ್ದರಿಂದ ಈ ಕಾರ್ಖಾನೆಯು ಇಲ್ಲಿ ಸ್ಥಾಪನೆಯಾಗದಂತೆ ತಡೆಯಬೇಕು ಎಂದು ಕೋರಲಾಗಿತ್ತು.
ವಾದವಿವಾದಗಳು ನಡೆದವು ಶಿಕ್ಷಣ ಸಂಸ್ಥೆಗಳ ಪರವಾಗಿ ವಾದಿಸುತ್ತಿದ್ದ ವಕೀಲರು ಕಂಪನಿಯು ಹೂಡಿದ ಅನೇಕ ಕುತಂತ್ರಗಳನ್ನು ಬಯಲಿಗೆಳೆದರು ಅದರಲ್ಲಿ ಮುಖ್ಯವಾದದದ್ದು... “ಕಂಪನಿಯು ಸಲ್ಲಿಸಿರುವ ತನ್ನ ‘ಪರಿಸರ ಪರಿಣಾಮ ಅಧ್ಯಯನ’ವು ಅದರ ನಿಜವಾದ ಹೆಸರಿನಲ್ಲಿಲ್ಲ. ಆಧ್ಯಯನ ವರದಿ ಒಂದು ಪಕ್ಷ ಸತ್ಯವಾದದ್ದೇ ಆದರೆ ಅದು ಏಕೆ ಸುಳ್ಳು ಹೆಸರಿನಲ್ಲಿ ವರದಿಯನ್ನು ಮಂಡಿಸಿದೆ" ಎಂದರು. ಇದಕ್ಕೆ ಕಂಪನಿಯ ಬಳಿ ಉತ್ತರವಿರಲಿಲ್ಲ. ಈ ಕಂಪನಿಗಳು ಸ್ಥಳೀಯ ಆಡಳಿತಗಳ ಕಣ್ಣಿಗೆ ಮಣ್ಣೆರಚಲು ಇಂಥಾ ಆಟಗಳನ್ನು ವ್ಯವಸ್ಥಿತವಾಗಿ ಆಡುತ್ತವೆ ಎಂಬುದನ್ನು ಸಾಬೀತು ಪಡಿಸಿದರು.
ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ ಪ್ಲಾಚಿಮಡದ ಕೊಕೋ ಕೋಲಾ ಕಂಪನಿ ಜಮೀನುಗಳನ್ನು ಬೇರೆಯವರ ಹೆಸರಿನಲ್ಲಿ ಖರೀದಿಸಿತ್ತು. ತನ್ನ ಅಗತ್ಯಕ್ಕೆ ಮೀರಿದ ಅಥವಾ ತನಗೆ ಮಂಜೂರಾದ ಭೂಮಿಗಿಂತ ಹೆಚ್ಚು ಭೂಮಿಯನ್ನು ಖರೀದಿಸುವುದು ಇವುಗಳ ಇನ್ನೊಂದು ಕುತಂತ್ರವಾಗಿರುತ್ತದೆ.
ಈ ನಡುವೆ ಕಂಪನಿ ಸಾವಿರಾರು ನೆಪಗಳನ್ನು ಹೇಳಿತು. ಆದರೆ ಶಿಕ್ಷಣ ಸಂಸ್ಥೆಗಳ ವಕೀಲರು ವೈeನಿಕವಾಗಿ ಮಂಡಿಸಿದ ವಾದದ ಮುಂದೆ ಕಂಪನಿಗೆ ಉತ್ತರವಿರಲಿಲ್ಲ. ಕೊನೆಗೆ ಶಿಕ್ಷಣ ಸಂಸ್ಥೆಗಳ ವಕೀಲರು “ಈ ವರೆಗೂ ನಾನು ಹೇಳಿದ್ದು ವೈಜ್ಞಾನಿಕ ವಿವರಗಳನ್ನು ಆದರೆ ಈ ಕಂಪನಿಯು ಇಸ್ಲಾಮಿನ ಮೂಲಭೂತ ಸಿದ್ದಾಂತಗಳನ್ನೇ ಉಲ್ಲಂಘಿಸುತ್ತಿದೆ. ಇಸ್ಲಾಂ ಧರ್ಮದ ನೀತಿಯ ಪ್ರಕಾರ ಪರಿಸರ ಹಾಗೂ ಅದರ ಸಂರಕ್ಷಣೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮನುಷ್ಯ ಹೊಣೆ. ಹಾಗೂ ನೀರು ಸಾರ್ವಜನಿಕ ಸಂಪನ್ಮೂಲ ಇದನ್ನು ಹಂಚಿಕೊಂಡು ಬದುಕಬೇಕು. ಈ ನೀರಿನ ಮೇಲೆ ಹೀಗೆ ಯಾರೊಬ್ಬರೂ ಅಧಿಕಾರ ಹೊಂದಬಾರದು, ಹೀಗೆ ಹೊಂದಲು ಪ್ರಭುತ್ವಗಳು ಅನುಮತಿಯನ್ನೂ ನೀಡಬಾರದು, ಇದು ಇಸ್ಲಾಂ ತತ್ವಕ್ಕೆ ವಿರುದ್ಧ" ಎಂದು ಹೇಳಿದರು.
ಇದಕ್ಕೆ ಪ್ರತಿಯಾಗಿ ನೆಸ್ಲೆ ವಕೀಲರು “ ಆ ಪ್ರದೇಶದಲ್ಲಿ ಸಿಗುವ ನೀರು ಮನುಷ್ಯನ ಬಳಕೆಗೆ ಯೋಗ್ಯವಾಗಿಲ್ಲ. ಆದರೂ ನಾವು ಅದನ್ನು ಸಂಸ್ಕರಿಸಿ ನೀಡುವ ಶ್ರಮವಹಿಸುತ್ತೇವೆ" ಎಂದರು. ಆದರೆ ನ್ಯಾಯಾಧೀಶರು “ಈ ಕಂಪನಿ ಅಲ್ಲಿ ಯಾವುದೇ ಕಾರಣದಿಂದ ನೀರನ್ನು ತಗೆಯುವ ಪ್ರಯತ್ನಕ್ಕೆ ನೆರವಾಗುವಂತಹ ಯಾವ ಘಟಕಗಳನ್ನೂ ಸ್ಥಾಪಿಸಕೂಡದು. ಮತ್ತು ಆ ಜಾಗವನ್ನು ಸರ್ಕಾರ ವಹಿಸಿಕೊಂಡು ಶಿಕ್ಷಣ ಕಾರಣಗಳಿಗೆ ನೀಡಬೇಕು" ಎಂದು ಎಂದಿತು. ನೆಸ್ಲೆ ಬಾಲಮುದುರಿಕೊಂಡಿತು.
ಇದು ನೆರೆ ರಾಜ್ಯದ, ನೆರೆ ದೇಶದ ಕತೆಯಾಯಿತು. ಇನ್ನು ನಮ್ಮ ರಾಜ್ಯದ ಕತೆ? ನಮ್ಮಲ್ಲೂ ಇಂತಾ ಹಲವು ಕಂಪನಿಗಳು ಕಾರ್ಯಪ್ರವೃತ್ತವಾಗಿವೆ. ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಬಿಡದಿ ಬಳಿಯ ಕೊಕೋ ಕೋಲಾ ಕಾರ್ಖಾನೆ ಈಗಾಗಲೇ ಪ್ಲಾಚಿಮಡದ ದಾಖಲೆಗಳನ್ನೆಲ್ಲಾ ಮುರಿದು ಹಾಕಿದೆ. ಬೆಂಗಳೂರು-ತುಮಕೂರು ರಸ್ತೆಯಲ್ಲಿರುವ ಪೆಪ್ಸಿ ಕಂಪನಿ ಯಾವ ಪ್ರತಿಭಟನೆಯೂ ಇಲ್ಲದೆ ತಣ್ಣಗೆ ಸಾಗುತ್ತಿದೆ. ಅಲ್ಲಿನ ಸಮಸ್ಯೆಗಳ ಬಗ್ಗೆ ಸ್ಥಳೀಯರನ್ನು ಕೇಳುವ ಮಂದಿಯೇ ಇಲ್ಲದಂತಾಗಿದ್ದಾರೆ. ಅಂತಾ ಪ್ರಯತ್ನಕ್ಕೆ ಪ್ಲಾಚಿಮಡ ಮತ್ತು ಕರಾಚಿ ಸ್ಫೂರ್ತಿಯಾದರೆ ಅವರ ಹೋರಾಟಗಳು ಸಾರ್ಥಕವಾದಂತೆ.
೧೫ನೇ ಜುಲೈ-೨೦೦೫
No comments:
Post a Comment