Ashok K R
ಉಪೇಂದ್ರ ನಿರ್ದೇಶನದ ಸಿನಿಮಾಗಳೆಂದರೆ ಒಂದಷ್ಟು ವಿಚಿತ್ರ ವೇಷಭೂಷಣಗಳು, ಮೊದಲಿನಿಂದ ಖಳರಂತೆ ಚಿತ್ರಿತವಾಗುವ ನಾಯಕಿ, ಹಸಿ ಬಿಸಿ ದೃಶ್ಯಗಳು, ಚಿತ್ರವಿಚಿತ್ರವಾಗಿ ಆಡುವ ನಾಯಕ, ಈ ಎಲ್ಲದರ ಮಧ್ಯೆ ಅಲ್ಲೊಂಚೂರು ಇಲ್ಲೊಂಚೂರು ಎಂಬಂತೆ ಫಿಲಾಸಫಿ! ಗಲ್ಲಾಪೆಟ್ಟಿಗೆಯಲ್ಲಿ ಕೆಲವೊಂದು ಗೆದ್ದಿವೆ, ಕೆಲವೊಂದು ಸಾಧಾರಣ ಯಶಸ್ಸು ಕಂಡಿವೆ, ಕೆಲವೊಂದು ಸೋತಿವೆ; ಆದರೆ ನಿರ್ದೇಶಕನಾಗಿ ಉಪೇಂದ್ರ ಪ್ರತಿ ಸಿನಿಮಾದಲ್ಲೂ ಗೆದ್ದಿದ್ದಾರೆ. ಕಥೆ ಮಾಮೂಲಿದ್ದರೂ ಚಿತ್ರಕಥೆಯಲ್ಲಿ ಪ್ರೇಕ್ಷಕನನ್ನು ತುದಿಗಾಲಲ್ಲಿ ನಿಲ್ಲಿಸುವ ಕಲೆ ಉಪೇಂದ್ರನಿಗಿದೆ. ಆ ಕಲೆ ಇನ್ನೂ ಜೀವಂತವಾಗಿದೆಯಾ ಎಂಬ ಕುತೂಹಲದೊಂದಿಗೆ Uppi2 ಚಿತ್ರ ನೋಡಲು ಪ್ರವೇಶಿಸಿದರೆ ಚೂರೇ ಚೂರು ನಿರಾಸೆಯಾಗುತ್ತದೆ, ಉಪೇಂದ್ರನೆಂಬ ನಿರ್ದೇಶಕನನ್ನು ಮೊದಲಿನಿಂದಲೂ ಮೆಚ್ಚಿದವರು ಮತ್ತಷ್ಟು ಮೆಚ್ಚುತ್ತಾರೆ, ಮೊದಲಿನಿಂದಲೂ ಮೆಚ್ಚದವರು ಅದನ್ನೇ ಮುಂದುವರೆಸುತ್ತಾರೆ!
ಹದಿನೈದು ವರುಷಗಳ ಹಿಂದೆ ತೆರೆಕಂಡಿದ್ದ ‘ಉಪೇಂದ್ರ’ ಚಿತ್ರದ ಮುಂದುವರಿದ ಭಾಗವಿದು. ನಾಯಕನನ್ನೂ ಸೇರಿ ಅಲ್ಲಿನವೇ ಅನೇಕ ಪಾತ್ರಗಳು ಇಲ್ಲಿ ಕಾಣಿಸಿಕೊಳ್ಳುತ್ತವೆ. ‘ಉಪೇಂದ್ರ’ ಅಷ್ಟೇ ಅಲ್ಲದೆ ‘ಶ್’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದ ಬ್ಯಾಂಕ್ ಜನಾರ್ಧನ್ ಮತ್ತು ಬಿರಾದಾರ್ ಇಲ್ಲೂ ಪೋಲೀಸರಾಗಿ ಕಾಣಿಸಿಕೊಂಡಿದ್ದಾರೆ. ‘ಉಪೇಂದ್ರ’ ಚಿತ್ರದಲ್ಲಿ ‘ನಾನು’ ಎಂಬ ಪಾತ್ರದ ಸುತ್ತ ಕಥೆ ಹೆಣೆಯಲಾಗಿತ್ತು, ಆ ‘ನಾನು’ಗೆ ರತಿ, ಸ್ವಾತಿ, ಕೀರ್ತಿ ಎಂಬ ಮೂವರು ನಾಯಕಿಯರ ಮೇಲೆ ಕಣ್ಣು, ಅವನಿಗೆ ಮೂವರೂ ಬೇಕು. ರತಿ, ಸ್ವಾತಿ, ಕೀರ್ತಿ ಪ್ರತಿ ಗಂಡಸು ಆಸೆ ಪಡುವ ಮೂರು ಗುಣಗಳೆಂಬಂತೆ ಚಿತ್ರಿಸಲಾಗಿತ್ತು. ಕೊನೆಗೆ ಮೂವರನ್ನೂ ತೊರೆದ ‘ನಾನು’ ಎಲ್ಲವನ್ನೂ ಬಿಟ್ಟು ಹೊರಟುಬಿಡುತ್ತಾನೆ. ಅಲ್ಲಿಂದ ಹೊರಟ ‘ನಾನು’ ಇಲ್ಲಿ ‘ನೀನಾಗಿ’ ಬದಲಾಗಿದ್ದಾನೆ! ಉಪೇಂದ್ರ ‘ನಾನು ಯಾರು?’ ಎಂದು ಪ್ರಶ್ನಿಸಿದರೆ ಉಪ್ಪಿ2 ‘ನೀನು ಯಾರು?’ ಎಂದು ಪ್ರಶ್ನಿಸುತ್ತದೆ.
ಫಿಲಾಸಫಿ ಹೇಳೋದಕ್ಕೆ ಉಪೇಂದ್ರ ಆಯ್ದುಕೊಳ್ಳುವುದು ಗದ್ದಲದ ಹಾದಿ. ‘ಉಪೇಂದ್ರ’ ಚಿತ್ರದಲ್ಲಿ ಹೆಚ್ಚಾಗಿದ್ದ ಗದ್ದಲ, ದ್ವಂದಾರ್ಥ ‘ಉಪ್ಪಿ2’ ಚಿತ್ರದಲ್ಲಿ ಕಡಿಮೆಯಾಗಿದೆ. ಉಪೇಂದ್ರನಿಗೂ ಹದಿನೈದು ವರ್ಷ ವಯಸ್ಸಾಯಿತಲ್ಲವೇ?! ಉಪ್ಪಿ2 ಚಿತ್ರ ಮೂರು ಕಾಲಗಳ ಬಗೆಗಿನ ಜಿಜ್ಞಾಸೆಯ ಚಿತ್ರ. ಭೂತ – ವರ್ತಮಾನ – ಭವಿಷ್ಯ ಕಾಲದಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕು ಎಂಬುದರ ಬಗೆಗಿನ ಚಿತ್ರ. ಯೋಚನೆ ಮಾಡುವುದೇ ತಪ್ಪು ಎಂದು ಹೇಳುತ್ತಲೇ ನೋಡುಗರನ್ನು ಯೋಚನೆಗೆ ಹಚ್ಚುವ ಚಿತ್ರ! ಫಿಲಾಸಫಿಗಳನ್ನೆಲ್ಲಾ ವಾಚ್ಯವಾಗಿ ಹೇಳುವ ಪ್ರಯತ್ನ ಕೆಲವೆಡೆ ಯಶಸ್ವಿಯಾಗಿದೆ, ಕೆಲವೆಡೆ ಹಾಸ್ಯಾಸ್ಪದವಾಗಿದೆ. ‘ನಾನು’ ಹುಡುಗಿಯ ಹಿಂದೆ ಓಡಿದರೆ ‘ನೀನು’ವನ್ನು ಹುಡುಗಿಯೇ ಅಟ್ಟಿಸಿಕೊಂಡು ಬರುತ್ತಾಳೆ. ಯಾವುದರ ಬಗ್ಗೆಯೂ ಯೋಚನೆಯೇ ಮಾಡದ ‘ನೀನು’ ಮುಗ್ದನಾ ದಡ್ಡನಾ ಎಂಬ ಪ್ರಶ್ನೆಗೆ ‘ಯೋಚ್ನೆ ಮಾಡಲ್ಲ ಅಂದೆ ತಲೆ ಇಲ್ಲ ಅನ್ನಲಿಲ್ಲ’ ಎಂಬ ಉತ್ತರ ಚಿತ್ರದಲ್ಲಿಯೇ ಇದೆ. ಯೋಚನೆ ಮಾಡದ ಕಾರಣಕ್ಕೆ ನಾಯಕನಿಗೆ ನೆಮ್ಮದಿ, ಸಂಪತ್ತು, ‘ಖುಷಿ’ ಸಿಗುತ್ತದೆ. ಯಾವುದಕ್ಕೂ ಯೋಚನೆ ಮಾಡದೆ, ಭಯ ಪಡದೆ, ಮಾಡಿದ ಕೆಲಸಕ್ಕೆ ಹಣ ಪಡೆಯದೆ ಇದ್ದುಬಿಡುವ ‘ನೀನು’ ನಿಜವಾಗಿಯೂ ಬದಲಾದ ‘ನಾನು’ನಾ ಅಥವಾ ನಾಟಕವಾ ಎಂಬ ಗೊಂದಲಗಳೊಂದಿಗೆ ಮೊದಲರ್ಧ ಮುಗಿಯುತ್ತದೆ.
ಎರಡನೇ ಭಾಗದಲ್ಲಿ ‘ಉಪೇಂದ್ರ’ ಚಿತ್ರದ ‘ನಾನು’, ಉಪ್ಪಿ2 ಚಿತ್ರದ ‘ನೀನು’ ಮತ್ತು ಇವೆರಡೂ ಚಿತ್ರದಲ್ಲಿಲ್ಲದ ‘ಅವನು’ ಕಾಣಿಸಿಕೊಳ್ಳುತ್ತಾರೆ. ‘ನಾನು’ ನೀನಾಗಿ ನಾಟಕವಾಡುತ್ತಿದ್ದಾನೆ ಎಂಬ ಸಂಗತಿಯಿಂದ ಖುಷಿ ವಿಚಲಿತಳಾಗುತ್ತಾಳೆ. ಈ ನಾನು, ನೀನು, ಅವನು ನಿಜವಾಗಿ ಒಬ್ಬನೇನಾ ಅಥವಾ ಮೂರು ಮೂರು ಮಂದಿಯಾ ಎಂಬ ಗೊಂದಲ ಚಿತ್ರ ಮುಗಿದ ಮೇಲೂ (ಅಸಲಿಗೆ ಚಿತ್ರ ಮುಗಿಯುವುದೇ ಇಲ್ಲ!) ಉಳಿದುಬಿಡುತ್ತದೆ. ‘ನಾನು’ ಎಂಬ ಭೂತಕಾಲ, ‘ನೀನು’ ಎಂಬ ವರ್ತಮಾನ, ‘ಅವನು’ ಎಂಬ ಕಲ್ಪನಾತ್ಮಕ ಭವಿಷ್ಯದ ತಂತ್ರ ಉಪಯೋಗಿಸಿದ್ದಾರೆ ಉಪೇಂದ್ರ. ಭೂತಕಾಲದ ‘ನಾನು’ ನೆನಪಿನಲ್ಲಿರುವ ಯಾವ ಪಾತ್ರಧಾರಿಗಳೂ ಚಿತ್ರದಲ್ಲಿ ಸಂತಸದಿಂದಿರುವುದಿಲ್ಲ. ‘ಅವನು’ ಎಂಬ ಕಲ್ಪನೆಯನ್ನು ನಂಬಿಕೊಂಡವರು ಗೊಂದಲದಲ್ಲಿರುತ್ತಾರೆ. ವರ್ತಮಾನದ ‘ನೀನು’ ಜೊತೆ ಇರುವ ನಾಯಕಿ ಮಾತ್ರ ‘ಖುಷಿ’ಯಾಗಿರುತ್ತಾಳೆ!
ಭೂತವನ್ನು ಮರೆಯಿರಿ ಎಂದ್ಹೇಳುವ ಉಪ್ಪಿ2 ಚಿತ್ರದಲ್ಲಿ ಉಪೇಂದ್ರ ನಿರ್ದೇಶನದ ಶ್, ಓಂ ಚಿತ್ರಗಳ ನೆನಪುಗಳು ಬರುವುದು ಬೇಕಿರಲಿಲ್ಲ! ಉಪೇಂದ್ರನ ವೇಷಭೂಷಣ ಕೂಡ ಅವರ ಅಭಿನಯದ ರೀಮೇಕ್ ಚಿತ್ರ ‘ಬುದ್ಧಿವಂತ’ನನ್ನು ನೆನಪಿಸುತ್ತದೆ. ಉಪೇಂದ್ರ ಎಂಬ ನಿರ್ದೇಶಕನ ಬತ್ತಳಿಕೆ ನಿಧಾನಕ್ಕೆ ಖಾಲಿಯಾಗುತ್ತಿರುವ ಸೂಚನೆಯಾ? ಚಿತ್ರದ ಶುರುವಿನಲ್ಲಿ ಹೊಸ ಹೊಸ ಕೋನಗಳಿಂದ ಗಮನ ಸೆಳೆಯುವ ಛಾಯಾಗ್ರಹಣ ನಂತರದಲ್ಲಿ ಮಾಮೂಲಿಯಾಗಿದೆ. ಹಾಡುಗಳನ್ನು ಕೇಳಬಹುದೇ ಹೊರತು ಮತ್ತೆ ಮತ್ತೆ ಗುನುಗುವಂತಿಲ್ಲ. ‘ಎಲ್ಲರ ಕಾಲೆಳೀತದೆ ಕಾಲ’ ಹಾಡು ಚಿತ್ರಕ್ಕೆ ಬೇಕಾಗಿಯೇ ಇರಲಿಲ್ಲ. ತನ್ನ ಶಕ್ತಿಯ ಬಗ್ಗೆ ಸ್ವತಃ ಅರಿವಿಲ್ಲದೇ ಹೊಸಬರನ್ನು ಹಳಬರನ್ನು ಆಡಿಕೊಳ್ಳುವ ಹಾಡು ಉಪ್ಪಿ2 ಚಿತ್ರಕ್ಕೆ ಬೇಕಿರಲಿಲ್ಲ. ಆ ಇಡೀ ಹಾಡನ್ನೇ ತೆಗೆದುಹಾಕಿದರೂ ಚಿತ್ರಕ್ಕೇನು ಅಡ್ಡಪರಿಣಾಮವಾಗುತ್ತಿರಲಿಲ್ಲ. ಹಿಮಾಲಯದ ಚಳಿಯಲ್ಲಿ ತುಂಡುಡುಗೆ ಧರಿಸುವ ಅಸಂಬದ್ಧಗಳೂ ಚಿತ್ರದಲ್ಲಿವೆ! ನಟನೆಯ ವಿಚಾರಕ್ಕೆ ಬಂದರೆ ಉಪೇಂದ್ರ, ಅಕೀವಾ ಕ್ರಿಷ್ಟೀನಾ, ಪಾರುಲ್, ಟೆನ್ನಿಸ್ ಕೃಷ್ಣ, ಶೋಭರಾಜ್, ನಾಸಿರ್ ಮತ್ತಿತರರು ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ಚೆನ್ನಾಗಿ ಮಾಡಿದ್ದಾರೆ. ಚಿತ್ರಕಥೆಯ ಗೊಂದಲಗಳು ಉಳಿದೆಲ್ಲಾ ವಿಷಯವನ್ನು ಮಬ್ಬು ಮಾಡಿಸಿಬಿಡುತ್ತದೆ ಎನ್ನುವುದು ಸತ್ಯ. ‘ಫಿಲ್ಮ್ ಚೆನ್ನಾಗಿದೆ ಏನು ಅರ್ಥಾನೇ ಆಗ್ಲಿಲ್ಲ’ ‘ಏನೋ ಹುಳಾ ಇದೆ ಅರ್ಥ ಆಗ್ತಿಲ್ಲ’ ಎನ್ನುವ ಮಾತುಗಳು ಚಿತ್ರ ನೋಡಿದವರದು! ಇಂಥದ್ದೇ ಒಂದು ಕಥೆಯಿದೆ, ತತ್ವವಿದೆ, ಸಿದ್ಧಾಂತವಿದೆ ಎಂದು ಹೇಳಲಾಗದ ಸಿನಿಮಾವಿದು. ಸಿನಿಮಾದಲ್ಲೇ ಹೇಳಿದಂತೆ ‘ಯೋಚ್ನೆ ಮಾಡ್ಬೇಡ’!
ಈ ಮೇಲಿನ ವಿಮರ್ಶೆಯನ್ನು ಓದಿದ ನಂತರ ನಿಮ್ಮಲ್ಲಿ ಗೊಂದಲ ಮೂಡಿದರೆ ಅದಕ್ಕೆ ‘ನೀನು’ ಕಾರಣವೇ ಹೊರತು ನಾನಲ್ಲ!
Uppi2, kannada film directed by Upendra revolves around Past, Present and Future ideas of a person.
NIMMA VIMARSHE KOODA NAMAGE BEKIRALILLA, YAKANDRE NEEVU VIMARSHE MADO REETHIYE SARIYAGILLA, NIMAGE MOVIE SARIYAGI ARTHA AAGILLA..
ReplyDeleteಬಹುಶಃ ಒಬ್ಬಬ್ಬರಿಗೆ ಒಂದೊಂದು ರೀತಿ ಅರ್ಥವಾಗುತ್ತೋ ಏನೋ! ನಿಮಗೆ ಅರ್ಥವಾಗಿದ್ದು ಏನೆಂದು ತಿಳಿಸಿದರೆ ನಮಗೂ ಉಪಯೋಗವಾಗುತ್ತೆ :-)
Deleteಸಿನಿಮಾಗೆ ಸ್ಟಾರ್ಟಿಂಗಿಲ್ಲ, ಎಂಡಿಂಗಿಲ್ಲ..! ಆರಂಭದಲ್ಲೇ ಎಂಡ್ ಟೈಟಲ್, ಎಂಡಿಂಗಲ್ಲಿ ಟೈಟಲ್ ಕಾರ್ಡ್..! ಅದರ ನಡುವೆ ಫ್ಯೂಚರ್ರಿಲ್ಲ, ಪಾಸ್ಟ್ ಇಲ್ಲ.. ಓನ್ಲಿ ಪ್ರೆಸೆಂಟ್..! ಇದೊಂದು ಟಿಪಿಕಲ್ ಉಪ್ಪಿ ಸಿನಿಮಾ..! ಉಪ್ಪಿಯಿಂದ ಏನು ಬೇಕೋ ಅದೆಲ್ಲಾ ಇಲ್ಲಿದೆ, ಹಂಗಂತ ಈಸಲ ಹಂಗಿರಲ್ಲ ಅನ್ಕೊಂಡು ಹೋಗಿದ್ರೆ ಹಂಗೇ ಇದೆ ಅಂತ ಅನ್ಕೊಂಡು ಬಂದ್ರು ಆಶ್ಚರ್ಯ ಇಲ್ಲ..! ಚೆನ್ನಾಗಿಲ್ಲ ಅಂತ ಹೇಳಿದ್ರೆ ಉಪ್ಪಿ ಫ್ಯಾನ್ಸ್ ಒಪ್ಪಲ್ಲ, ಚೆನ್ನಾಗಿದೆ ಅಂದ್ರೆ `ಬೇರೆಯವರ’ ಫ್ಯಾನ್ಸ್ ಒಪ್ಪಲ್ಲ..! ಸಿನಿಮಾ ಇಷ್ಟಪಡೋಕೆ ಕಾರಣ ಇಲ್ಲ, ಇಷ್ಟಪಡದೇ ಇರೋಕೆ ಸಾಧ್ಯವೇ ಇಲ್ಲ..! ಹಂಗೆ ಹಿಂಗೆ ಹೆಂಗೇ ನೋಡಿದ್ರೂ ಉಪ್ಪಿ2, ವೆರಿ ವೆರಿ ಡಿಫರೆಂಟು…!
ReplyDeleteನಾನು ಮತ್ತು ನೀನು ಇಡೀ ಸಿನಿಮಾದಲ್ಲಿ ಆವರಿಸಿದ್ದಾರೆ, ಆದ್ರೆ ಅ ನಾನು ಮತ್ತು ನೀನು ಇಬ್ರೂ ಒಂದೇನಾ ಅಂತ ನಾನೂ ಹೇಳಕ್ಕಾಗಲ್ಲ, ನೀನೂ ಹೇಳಕ್ಕಾಗಲ್ಲ..! ಯೋಚನೆ ಮಾಡಬೇಡಿ, ಯೋಚನೆ ಮಾಡಬೇಡಿ ಅನ್ನೋ ನೀನು, ನಾನು ಅಂದ್ರೆ ಇದೇ ನೀನು ಇರಬಹುದಾ ಅಂತ ಯೋಚನೆ ಮಾಡಿಸೋದು ಗ್ಯಾರಂಟಿ..! ಆದ್ರೆ ಕೊನೆ ತನಕ ಸಿನಿಮಾ ನೋಡಿದ್ರು ನೀನು ಮತ್ತು ನಾನು ಬಗ್ಗೆ ಕಂಪ್ಲೀಟ್ ಪಿಕ್ಚರ್ ಸಿಗಲ್ಲ..! ಕೆಲವರ ಕಣ್ಣಿಗೆ ನೀನು ಮತ್ತು ನಾನು ಒಬ್ಬನೇ, ಮತ್ತೆ ಕೆಲವರಿಗೆ ನೀನೂನೇ ಬೇರೆ, ನಾನೂನೇ ಬೇರೆ..! ಟೋಟಲಿ ನಾನು ನಾನು ಅನ್ನೋನ್ ನಾನಲ್ಲ, ನೀನೂ ನೀನೂ ಅನ್ನೋನ್ ನೀನಲ್ಲ..!
ಹಾಡುಗಳು ಬರೀ ಕೇಳೋದಕ್ಕಿಂತ ನೋಡುದ್ರೆ ಸೂಪರ್ರಾಗಿ ಕಾಣುತ್ತೆ..! ಹಾಡು ಅರ್ಥ ಆಗುತ್ತೆ..! ಎಲ್ಲರ ಕಾಲೆಳೆಯೋ ಟೈಮಲ್ಲಿ ಬೀಳೋ ಸೀಟಿಗೆ ಹಾಡೇ ಕೇಳಲ್ಲ, ಅದ್ರಲ್ಲಿ ಉಪ್ಪಿ ಹಾಕಿರೋ ಓಂ ಶಿವಣ್ಣನ ಗೆಟಪ್ ಸೂಪರ್ ಕಣ್ಲಾ..! ಅದ್ದದ್ದೆ ಬದ್ದದ್ದೆ ಅನ್ನೋ ಡೈಲಾಗ್ ಸಿನಿಮಾದಲ್ಲಿಲ್ಲ, ಡೈಲಾಗೇ ಡೈ ಹೊಡೆದು ಲಾಗ ಹಾಕೋ ಡೈಲಾಗಿಗೇನು ಕಮ್ಮಿ ಇಲ್ಲ..! ಏನೇ ಹೇಳಿ, ಏನೂ ಇಲ್ಲದಿದ್ದರೂ ಏನೋ ಇದೆ ಅಂತ ಹೇಳದೇ ಇರೋಕಾಗಲ್ಲ..!
ಹೀರೋಯಿನ್ ಸೌಂದರ್ಯ ಮಾದಕ, ಪಾರೂಲ್ ಬಂದುಹೋಗೋದು ಶುಗರ್ ಜಾಸ್ತಿ ಇರೋ ಪಾನಕ, ಹೀರೋಯಿನ್ ಡೈಲಾಗಿಗೆ ಲಿಪ್ ಸಿಂಕ್ ಆಗದೇ ಇರೋದು ಯಾತಕ..? ತೆಲುಗೂಗು ಸೆಟ್ ಆಗ್ಲಿ ಅಂತ ಮಾಡಿರೋದು 100% ಪಕ್ಕಾ..! ಅದು ಬಿಟ್ರೆ ಉಪ್ಪಿ2 ಹೊಳೀತದೆ ಲಕಲಕ..
ಸಿನಿಮಾಗೆ ಸ್ಟೋರಿ ಇಲ್ಲ ಅಂತ ಹೇಳೋದೂ ಕಷ್ಟ, ಸ್ಟೋರಿ ಇದೆ ಅನ್ನೋದಾದ್ರೆ ಅದನ್ನ ಹೇಳಿ ಅಂದ್ರೂ ಕಷ್ಟ..! ಹಿಂದೇನಾಗಿತ್ತು ಅಂತ ನೆನಪಿಟ್ಟುಕಳ್ಳದೇ, ಮುಂದೇನಾಗುತ್ತೆ ಅಂತ ಯೋಚನೆ ಮಾಡದೇ, ಸಿನಿಮಾನ ಉಪ್ಪಿ ಸಿನಿಮಾ ಅಂತ ನೋಡುದ್ರೆ ಸಿನಿಮಾ ಸೂಪರ್..! ಒಳಗೆ ಹೋದಾಗ ಹೇಗೆ ಹೋಗಿರ್ತಿರೋ ಹಾಗೇ ಹೊರಗೆ ಬಂದ್ರೆ ಓಕೆ, ಏನಾದ್ರೂ ಹುಳ ಬಿಟ್ಕೊಂಡ್ರೆ ಅದು ಲೈಫ್ ಲಾಂಗ್ ತಲೆಯಿಂದ ಹೊರಗೆ ಹೋಗಲ್ಲ..! ಎಲ್ಲಿಂದ ಶುರುವಾಗುತ್ತೋ ಅಲ್ಲಿಗೇ ಕೊನೆಯಾಗೋ ಉಪ್ಪಿ2 ಮುಗಿದ ಮೇಲೂ, ಇನ್ನೂ ಏನೋ ಇರಬಹುದು ಅಂತ ಜನ ಕಾಯ್ತಾ ಇದ್ರು..! ಅದೇ ಉಪ್ಪಿ2….! ಅರ್ಥ ಮಾಡ್ಕೊಳೋಕೆ ಸಿನಿಮಾಗೆ ಹೋಗಬೇಡಿ, ಸಿನಿಮಾಗೆ ಹೋಗಿ ಅರ್ಥ ಮಾಡ್ಕೊಳೋ ಪ್ರಯತ್ನ ಮಾಡಬೇಡಿ. ಅದು ಅರ್ಥ ಆಗಲ್ಲ, ಅರ್ಥ ಆದ್ರೆ ಅದು ಉಪ್ಪಿ ಸಿನಿಮಾ ಅಲ್ಲ..! ಎಲ್ಲರಿಗೂ ಇಷ್ಟ ಆಗೋ ಗ್ಯಾರಂಟಿ ಇಲ್ಲ, ಆದ್ರೆ ಚೆನ್ನಾಗಿಲ್ಲ ಅಂತ ಹೇಳೋದೂ ಸುಲಭ ಇಲ್ಲ..! ಏನೂ ಇಲ್ಲದಿದ್ದರೂ ಎಲ್ಲವೂ ಇರುವ, ಎಲ್ಲವೂ ಇದ್ದರೂ ಏನೂ ಇಲ್ಲದಿರುವ, ಇದ್ದರೂ ಇಲ್ಲ ಎನಿಸುವ, ಇಲ್ಲದಿದ್ದರೂ ಏನೋ ಇದೆ ಅನಿಸುವ ಸಿನಿಮಾದ ಹೆಸರು ಉಪ್ಪಿ2..! ಯೋಚ್ನೆ ಮಾಡ್ಬೇಡಿ.. ಒಂದು ಸಲ ನೋಡಿಬಿಡಿ..! ಅಂಡ್ ನೋಡಿ-ಬಿಡಿ…!
ಬರೋಬ್ಬರಿ ಹೇಳಿದ್ರಿ.... ಹೇಳಿದ್ದು ನೀನಾದರೆ ಹೇಳ್ಸಿದ್ದು "ನೀನಾ" "ನಾನಾ"? !!!
Delete“ನಾನು” ಅಲ್ಲಾ “ನೀನು” ಅಲ್ಲಾ
Deleteಹೇಳ್ಸಿದ್ದು “ಅವನು” 🙏😝