Aug 21, 2015

ಜೀವ ಅರೆಯುತ್ತಿರುವ ಕಬ್ಬು....


Ashok K R
ರೈತರ ಆತ್ಮಹತ್ಯೆಯ ವಿಷಯದಲ್ಲಿ ಮೊದಲಿನಿಂದಲೂ ಮೊದಲ ಐದು ಅಥವಾ ಹತ್ತು ಸ್ಥಾನದೊಳಗೇ ಇರುವ ಕರ್ನಾಟಕದಲ್ಲಿ ಕಳೆದ ಎರಡು ತಿಂಗಳಿನಿಂದ ಆತ್ಮಹತ್ಯೆಯ ಸಂಖೈಯಲ್ಲಿ ಅಪಾರ ಏರಿಕೆಯಾಗಿದೆ. ನಗರಗಳ ಸೌಖ್ಯದೊಳಗೆ ಕುಳಿತು ರೈತರ ಆತ್ಮಹತ್ಯೆಯ ಬಗ್ಗೆ ಅನುಕಂಪದಿಂದ ಬರೆಯುವುದು ಎಷ್ಟರ ಮಟ್ಟಿಗೆ ಸಮಂಜಸ ಎಂಬ ಗೊಂದಲದೊಂದಿಗೇ ಈ ಲೇಖನ ಬರೆಯುತ್ತಿದ್ದೇನೆ. ರೈತರ ಆತ್ಮಹತ್ಯೆಯೆಂಬುದು ಸಂಖೈಯ ದೃಷ್ಟಿಗೆ ಮಾತ್ರ ಸೀಮಿತವಾಗುತ್ತಿದೆಯಾ? ರೈತರದು ನಿಜಕ್ಕೂ ಆತ್ಮಹತ್ಯೆಯಾ ಎಂಬ ಪ್ರಶ್ನೆ ಕೇಳಿಕೊಂಡರೆ ಇಲ್ಲ, ಅದು ಸರಕಾರೀ ಕೊಲೆ, ಇನ್ನೂ ನಿಷ್ಟವಾಗಿ ಹೇಳಬೇಕೆಂದರೆ ಸಾಮಾಜಿಕ ಕೊಲೆ. ಈ ಕೊಲೆಯೆಂಬ ಆತ್ಮಹತ್ಯೆಗೆ ಯಾರು ಯಾರು ಕಾರಣರು ಎಂದು ಗಮನಿಸುತ್ತಾ ಹೋದರೆ ರೈತನನ್ನೂ ಸೇರಿಸಿಕೊಂಡು ಪ್ರಧಾನಿಯವರೆಗೆ ಎಲ್ಲರನ್ನೂ ಹೊಣೆಯಾಗಿಸಬಹುದು. ತತ್ ಕ್ಷಣಕ್ಕೆ ಕರ್ನಾಟಕದ ಪರಿಸ್ಥಿತಿಯನ್ನು ಸಿದ್ಧರಾಮಯ್ಯ ಸರಕಾರದ ವೈಫಲ್ಯವೆಂದು ಪರಿಗಣಿಸಬಹುದಾದರೂ ಒಟ್ಟಾರೆಯಾಗಿ ನೋಡಿದಾಗ ನಾವೆಲ್ಲರೂ ಅಪರಾಧಿ ಸ್ಥಾನದಲ್ಲಿ ನಿಂತು ಬಿಡುತ್ತೇವೆ.

ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಅತಿ ಹೆಚ್ಚಾಗಿ ನಡೆದಿರುವುದು ಮಂಡ್ಯದಲ್ಲಿ; ಕಬ್ಬು ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿರುವುದೇ ಹೆಚ್ಚು. ರಾಜ್ಯದ ಉಳಿದ ಜಿಲ್ಲೆಗಳಲ್ಲೂ ಬಹಳಷ್ಟು ಕಡೆ ರೈತರ ಆತ್ಮಹತ್ಯೆ ಕಬ್ಬು ಬೆಳೆಯ ಸುತ್ತಲೇ ಇದೆ. ಅಲ್ಲಿಗೆ ಸದ್ಯದ ಸಂದರ್ಭದಲ್ಲಿ ರೈತರ ಆತ್ಮಹತ್ಯೆಗೆ ನೇರವಾಗಿ ಕಬ್ಬು ಬೆಳೆಯೇ ಕಾರಣ ಎಂದು ನಿಸ್ಸಂಶಯವಾಗಿ ಹೇಳಬಹುದು. ಪ್ರತ್ಯಕ್ಷ ಕಾರಣವನ್ನು ಪರಿಹರಿಸುವುದರತ್ತ ಗಮನ ಹರಿಸುತ್ತಲೇ ಪರೋಕ್ಷ ಕಾರಣಗಳತ್ತಲೂ ಗಮನಹರಿಸಬೇಕು. ಸಕ್ಕರೆ ನಾಡೆಂದು ಹೆಸರಾದ ಮಂಡ್ಯ ಜಿಲ್ಲೆಯ ಹೆಚ್ಚು ಭಾಗ ಮಳೆಯಾಧಾರಿತ ಪ್ರದೇಶವಾಗಷ್ಟೇ ಉಳಿದಿತ್ತು. ಮಂಡ್ಯ ಎಂದರೆ ಮುದ್ದೆ – ಹುರುಳಿಕಟ್ಟು ಸಾರು.... ರಾಗಿ ಬೆಳೆಯೇ ಪ್ರಮುಖವಾಗಿದ್ದ ಮಂಡ್ಯದ ಇಂದಿನ ಅವಸ್ಥೆಗೆ ಕನ್ನಂಬಾಡಿ ಕಟ್ಟೆಯೂ ಒಂದು ಕಾರಣವೆಂದರೆ ತಪ್ಪಲ್ಲ. ಕನ್ನಂಬಾಡಿ ಕಟ್ಟೆಯ ಮೂಲಕ ಪ್ರಮುಖವಾಗಿ ಶ್ರೀರಂಗಪಟ್ಟಣ, ಪಾಂಡವಪುರ, ಮಂಡ್ಯ, ಮದ್ದೂರು ತಾಲ್ಲೂಕಿನ ಹಳ್ಳಿಗಳು ನೀರಾವರಿ ಸೌಕರ್ಯಕ್ಕೊಳಪಟ್ಟು ಹಸಿರಿನಿಂದ ನಳನಳಿಸಿದ್ದು ಹೌದು, ಅಲ್ಲಿನ ಜನರ ಆರ್ಥಿಕ ಜೀವನಮಟ್ಟದಲ್ಲಿ ಏರಿಕೆಯಾಗಿದ್ದೂ ಸತ್ಯ. ಅಣೆಕಟ್ಟೆಗಳು ಆಧುನಿಕ ಭಾರತದ ದೇವಸ್ಥಾನಗಳು ಎಂದು ನೆಹರೂ ಹೇಳಿದ ಮಾತನ್ನು ಭಾರತ ಅಕ್ಷರಶಃ ಪಾಲಿಸಿತು. ಅಣೆಕಟ್ಟಿನಿಂದಲೇ ಸಮೃದ್ಧಿ ಎಂಬ ಭಾವನೆ ಎಲ್ಲೆಡೆಯೂ ಮೂಡಿತು. ಅದು ಸತ್ಯದಂತೆಯೇ ತೋರಿತು. ಆದರೆ ಈಗಲೂ ಆ ಪರಿಸ್ಥಿತಿಯಿದೆಯೇ ಎಂದು ನೋಡಿದರೆ ಜನರ ಮನಸ್ಸಿನಲ್ಲಾಗಿರುವ ಬದಲಾವಣೆಗಳು ಗೋಚರವಾಗುತ್ತವೆ. “ಅಣೆಕಟ್ಟೆ ಬರದಿದ್ದರೆ, ಇಷ್ಟು ನೀರಾವರಿ ಇರದಿದ್ದರೆ ಕೆ.ಆರ್.ಪೇಟೆ, ನಾಗಮಂಗಲದ ಮಳೆಯಾಧಾರಿತ ಕೃಷಿಯನ್ನು ನೆಚ್ಚಿಕೊಂಡ ಜನರ ರೀತಿ ಗುಳೆ ಹೋಗಿ ಮತ್ತೊಂದು ಮಗದೊಂದೋ ಕೆಲಸವನ್ನು ಮಾಡಿ ಜೀವನ ಕಟ್ಟುಕೊಳ್ಳುತ್ತಿದ್ದೆವೇನೋ. ಇಷ್ಟೊಂದು ನೀರಾವರಿ ಇರೋ ಜಮೀನಿಗೆ ಅಂಟಿಕೊಂಡು ನಿಂತ ಕಾರಣಕ್ಕೇ ನಾವು ಈ ಕೆಟ್ಟ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದೀವಿ. ಭೂಮಿಯ ಸತ್ವವನ್ನೂ ಈ ನೀರಾವರಿ ಹಾಳು ಮಾಡಿದೆ” ಎಂದಿದ್ದು ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯ ರೈತ ಹರೀಶ್.

ಕಬ್ಬಿನತ್ತ ರೈತರು ವಾಲಿದ್ಯಾಕೆ?:

ನನ್ನ ಸ್ವಂತ ಊರು ಬೆಸಗರಹಳ್ಳಿ ಬಳಿಯ ಕೋಣಸಾಲೆ. ಇಲ್ಲಿಗೂ ಕಾವೇರಿ ನೀರು ಬರುತ್ತದಾದರೂ ನಾಲೆಯ ಕೊನೆಯಲ್ಲಿರುವ ಊರಾದ್ದರಿಂದ ಮದ್ದೂರು ತಾಲ್ಲೂಕಿನವರೆಲ್ಲ ಉಪಯೋಗಿಸಿದ ನಂತರ ಉಳಿದ ನೀರಷ್ಟೇ ಇಲ್ಲಿಗೆ ಬರುತ್ತದೆ. ನನ್ನ ತಂದೆಯವರ ಕಾಲದಲ್ಲಿ ಆಗ ಗದ್ದೆಗಳಲ್ಲಿ ರಾಗಿ ಭತ್ತದಿಂದ ಹಿಡಿದು, ತೊಗರಿ, ಹೆಸರು ಇತರೆ ಕಾಳುಗಳು, ಮನೆಯಳತೆಗೆ ಬೇಕಾದ ಸೊಪ್ಪು – ತರಕಾರಿಗಳನ್ನು ಬೆಳೆದುಕೊಳ್ಳುತ್ತಿದ್ದರಂತೆ. ಈಗ ಬಹುತೇಕ ಕಡೆ ಕಬ್ಬು, ಕೆಲವೆಡೆ ಭತ್ತ, ಹೊಲಗಳಲ್ಲಿ ತೆಂಗಷ್ಟೇ ಕಾಣುವ ಪರಿಸ್ಥಿತಿ. ಮಳೆ ಕಡಿಮೆಯಿದ್ದು, ನೀರಾವರಿ ಇಲ್ಲದ ಪ್ರದೇಶದಲ್ಲಷ್ಟೇ ರಾಗಿ ಸೀಮಿತವಾಗಿಬಡುತ್ತಿದೆ. ಭತ್ತವನ್ನು ಮುಂಚೆ ಹೆಚ್ಚು ಬೆಳೆಯುತ್ತಿದ್ದರಾದರೂ ಈಗ ಕಬ್ಬು ಬೆಳೆಯುವವರೇ ಜಾಸ್ತಿ. ಇದಕ್ಕೆ ಕಾರಣಗಳನ್ನು ಅರಸಿದರೆ ಕಬ್ಬು ಬೆಳೆ ಬೇಡುವ ಶ್ರಮ ಉಳಿದವುಕ್ಕಿಂತಲೂ ಕಡಿಮೆ. ನಗರೀಕರಣ, ಕೆಲಸಕ್ಕಾಗಿ ಓದುವಿಕೆ ಹೆಚ್ಚಾಗುತ್ತಿದ್ದಂತೆ ಶುರುವಾದ ವಲಸೆ ಪ್ರಕ್ರಿಯೆ ರೈತರ ಸಂಖೈಯನ್ನೂ ಕಡಿಮೆಗೊಳಿಸಿತು, ಕೃಷಿ ಕಾರ್ಮಿಕರ ಸಂಖೈಯನ್ನೂ ಕಡಿಮೆ ಮಾಡಿತು. ‘ನಗರೀಕರಣವೇ ನಮ್ಮ ಗುರಿ’ ಎಂದು ಹೇಳುತ್ತಿದ್ದ ಪಿ.ಚಿದಂಬರಂ, ಸ್ಮಾರ್ಟ್ ಸಿಟಿಗಳ ಬಗ್ಗೆಯೇ ಮಾತನಾಡುವ ನರೇಂದ್ರ ಮೋದಿಯಂತವರು ದೇಶ ನಡೆಯುವ ದಿಕ್ಕನ್ನು ನಿರ್ಧರಿಸುವವರಾಗಿರುವಾಗ ವಲಸೆಯನ್ನು ತಪ್ಪೆಂದು ಹೇಳಲಾದೀತೇ? ಹೆಚ್ಚು ಕೆಲಸ ಬೇಡುವ ಫಸಲನಿಂದ ವಿಮುಖನಾಗಿ ಕಬ್ಬಿನಂತಹ ಇದ್ದುದರಲ್ಲಿ ಕಡಿಮೆ ಶ್ರಮ ಬೇಡುವ ಫಸಲಿನೆಡೆಗೆ ರೈತರು ಆಕರ್ಷಿತರಾಗಿದ್ದು ಸರಿಯಾದ ನಿರ್ಧಾರವೂ ಆಗಿತ್ತು, ಕೃಷಿಯನ್ನೇ ಮುಂದುವರಿಸಲು ನಿರ್ಧರಿಸಿದವರಿಗದು ಅನಿವಾರ್ಯವೂ ಆಗಿತ್ತು. ಹೆಚ್ಚುತ್ತಿದ್ದ ಸಕ್ಕರೆ ಕಾರ್ಖಾನೆಗಳು ಹೆಚ್ಚೆಚ್ಚು ಕಬ್ಬು ಬೆಳೆಯುವಂತೆ ಪ್ರೇರೇಪಿಸುತ್ತಿದ್ದವು. ಶ್ರಮಕ್ಕೆ ತಕ್ಕ ಪ್ರತಿಫಲವನ್ನೂ ಕಬ್ಬು ರೈತರಿಗೆ ನೀಡಿತು. ಒಬ್ಬನಿಗೆ ದುಡ್ಡು ಬಂತೆಂದು ಮತ್ತೊಬ್ಬ ಮತ್ತೊಬ್ಬನಿಗೆ ಕಬ್ಬಿನಿಂದ ಹಣ ಬಂತೆಂದು ಇನ್ನೊಬ್ಬ ಕಬ್ಬು ಬೆಳೆಯಲು ಪ್ರಾರಂಭಿಸಿ ಕೊನೆಗೆ ಬೆಳೆದ ರಾಶಿ ರಾಶಿ ಫಸಲನ್ನು ಯಾರೂ ಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ವಿಫಲವಾಗಿದ್ದು ರೈತನಾ? ಕಾರ್ಖಾನೆಗಳಾ? ಅಥವಾ ಮುನ್ಸೂಚನೆಯನ್ನು ಅಂದಾಜು ಮಾಡಿ ರೈತರಿಗೆ ಎಚ್ಚರಿಕೆಯನ್ನು ನೀಡದ ಕೃಷಿ ಇಲಾಖೆಯಾ? 

ಸಾಂದರ್ಭಿಕ ಚಿತ್ರ
ಕಬ್ಬು ಕಾರ್ಖಾನೆಗಳತ್ತ ಕಣ್ಣು ಹಾಯಿಸಿದರೆ ಟನ್ನುಗಟ್ಟಲೇ ಸಕ್ಕರೆ ದಾಸ್ತಾನಾಗಿದೆ. ಪತ್ರಿಕೆಗಳಲ್ಲಿ ಬಂದ ವರದಿಯ ಪ್ರಕಾರ ಕೆಜಿಗೆ ಹತ್ತೊಂಬತ್ತು ರುಪಾಯಿಗಳಿಗೆ ಮಾರುತ್ತೇವೆಂದರೂ ಕೊಳ್ಳಲು ಯಾರು ಮುಂದೆ ಬರಲಿಲ್ಲವಂತೆ. ವ್ಯಾಪಾರಿಗಳು ಕೇಳಿದ್ದು ಹದಿನೇಳು ರುಪಾಯಿಗೆ. ಪ್ರತಿ ಟನ್ನು ಕಬ್ಬಿಗೆ ಎರಡು ಸಾವಿರದಷ್ಟು ಹಣ ನೀಡಿ, ಸಕ್ಕರೆ ತಯಾರಿಸಲು ಮತ್ತೊಂದಷ್ಟನ್ನು ಖರ್ಚು ಮಾಡಿ ಒಂದು ಕೆಜಿ ಸಕ್ಕರೆಯನ್ನು ಹದಿನೇಳು ರುಪಾಯಿಗೆ ಮಾರಿದರೆ ಸಕ್ಕರೆ ಕಾರ್ಖಾನೆಗಳು ನಷ್ಟ ಅನುಭವಿಸುವುದು ಖಚಿತವೆಂದೆನ್ನಿಸುತ್ತದೆ. ಈ ನಷ್ಟದ ಮಧ್ಯೆಯೂ ಬಾಗಲಕೋಟೆ, ಬೆಳಗಾವಿಯಲ್ಲಿ ಹೊಸ ಹೊಸ ಸಕ್ಕರೆ ಕಾರ್ಖಾನೆ ತಲೆಯೆತ್ತುತ್ತಿರುವುದ್ಯಾಕೆ? ಸಕ್ಕರೆ ಮಾಡಿದ ನಂತರ ಉಳಿಯುವ ಮೊಲ್ಯಾಸಸ್, ಅದರಿಂದ ಉತ್ಪತ್ತಿಯಾಗುವ ಸ್ಪಿರಿಟ್ ಸಕ್ಕರೆ ಕಾರ್ಖಾನೆಗಳ ಪ್ರಮುಖ ಆದಾಯ. ಜೊತೆಗೆ ಕೋ-ಜೆನ್ ಮಾಡಿ ವಿದ್ಯುತ್ ಉತ್ಪಾದಿಸಿದರೆ ಮತ್ತಷ್ಟು ಲಾಭ. ಈ ಎಲ್ಲಾ ಲಾಭಗಳ ಲೆಕ್ಕಾಚಾರದಿಂದ ಹೊಸ ಕಾರ್ಖಾನೆಗಳು ತಲೆ ಎತ್ತುತ್ತವೆ. ಕಬ್ಬು ಬೆಳೆಯನ್ನು ವಿಸ್ತರಿಸಲು ಪ್ರೋತ್ಸಾಹಿಸುತ್ತವೆ, ಕೊನಗೆ ಕಟಾವಾದ ಕಬ್ಬಿಗೆ ಬೆಲೆ ಇಲ್ಲವೆಂದು ಹೇಳುತ್ತಾ ಸಕ್ಕರೆಯ ದಾಸ್ತಾನನ್ನು ತೋರಿಸುತ್ತವೆ. ಅಲ್ಲಲ್ಲಿ ಸರಕಾರ ದಾಸ್ತಾನಾದ ಕಬ್ಬನ್ನು ವಶಪಡಿಸಿಕೊಳ್ಳುವ ಕೆಲಸ ಮಾಡಿತಾದರೂ ಸ್ಪಿರಿಟ್ಟಿನಿಂದ ಬಂದ ಆದಾಯವೆಷ್ಟು ಎಂದು ಪರಿಶೀಲಿಸುವಲ್ಲಿ ಎಡವಿದೆ. ಖಾಸಗಿ ಕಾರ್ಖಾನೆಗಳಿಂದ ಹಣವನ್ನು ರೈತರಿಗೆ ಕೊಡಿಸುವಲ್ಲಿ ಸರಕಾರ ಯಾಕೆ ವಿಫಲವಾಗುತ್ತದೆ ಎಂದರೆ ಅನೇಕ ಸಕ್ಕರೆ ಕಾರ್ಖಾನೆಗಳು ಇರುವುದೇ ರಾಜಕಾರಣಿಗಳ ಮಾಲೀಕತ್ವದಲ್ಲಿ. ಈ ರಾಜಕಾರಣಿಗಳು ಆಡಳಿತ, ವಿರೋಧ ಪಕ್ಷಗಳೆಲ್ಲದರಲ್ಲೂ ಇದ್ದಾರೆ. ಅವರಿಗೆ ಅವರೇ ನಷ್ಟ ಮಾಡಿಕೊಳ್ಳುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದರದು ನಂಬುವ ಮಾತಲ್ಲ.

ವಾಣಿಜ್ಯ ಬೆಳೆಗಳಿಂದ ಅಪಾರ ಪ್ರಮಾಣದ ಲಾಭವೂ ಸಿಗುತ್ತದೆ, ಅಷ್ಟೇ ಪ್ರಮಾಣದ ನಷ್ಟವೂ ಆಗುತ್ತದೆ. ಅಡಿಕೆ, ಕಾಫಿ ತೋಟಗಳು, ಕಬ್ಬಿನ ಗದ್ದೆಗಳು ಒಂದಷ್ಟು ವರ್ಷ ನಂಬಲಾರದಷ್ಟು ಲಾಭ ತಂದರೆ ಮತ್ತೊಂದಷ್ಟು ವರ್ಷ ನಂಬಿಕೆ ಬರದಷ್ಟು ನಷ್ಟವನ್ನೂ ಹೊತ್ತು ತರುತ್ತದೆ. ನಷ್ಟವೆಂಬ ಕಾರಣಕ್ಕೆ ಹೊಸ ರೀತಿಯ ಪದ್ಧತಿಗೆ, ಹೊಸ ಬೆಳೆಗೆ, ಬಹುವಿಧ ಬೆಳೆಗೆ ಹೊರಳಿಕೊಳ್ಳುವವರ ಸಂಖೈ ತುಂಬಾನೇ ಕಡಿಮೆ. ಮಂಡ್ಯದಲ್ಲಿ ಕಬ್ಬಿನಿಂದ ಇಷ್ಟೆಲ್ಲಾ ನಷ್ಟವಾಗಿದೆ. ಬೆಳೆದ ಕಬ್ಬನ್ನು ಕಟಾವು ಮಾಡಿಸದೆ ಹಾಗೆಯೇ ಬಿಟ್ಟ ರೈತ, ಸಿಟ್ಟಿನಿಂದ ಇಡೀ ಗದ್ದೆಗೆ ಬೆಂಕಿ ಕೊಟ್ಟ ರೈತರಲ್ಲನೇಕರು ಮುಂದಿನ ಬೆಳೆಯಾಗಿಯೂ ಕಬ್ಬನ್ನೇ ಬಿತ್ತನೆ ಮಾಡಿಸುತ್ತಾರೆ. ಬಹುಶಃ ಮುಂದಿನ ವರುಷ ಮಂಡ್ಯದಲ್ಲಿ ಸಂಚರಿಸಿದರೆ ಕಬ್ಬಿನಿಂದಾದ ನಷ್ಟವನ್ನು ಕಬ್ಬಿನಿಂದಲೇ ಪಡೆಯಬೇಕೆನ್ನುವ ಪರಿಸ್ಥಿತಿಯನ್ನು ಕಾಣಬಹುದೇ ಹೊರತು ಹೊಸತಾಗಿ ಬೇರೇನನ್ನಾದರೂ ಬೆಳೆಯುವ ಕಷ್ಟ ತೆಗೆದುಕೊಳ್ಳುವವರನ್ನು ಕಾಣುವುದು ಕಷ್ಟ. ಕಬ್ಬಿನಿಂದಾದ ನಷ್ಟಕ್ಕೆ ಕಾರ್ಖಾನೆಗಳಷ್ಟೇ ಕಾರಣ ಕೃಷಿ ಕಾರ್ಮಿಕರ ಅಭಾವ. ಕೃಷಿ ಕಾರ್ಮಿಕರ ಕೊರತೆಗೆ ಅನ್ನಭಾಗ್ಯದಂತಹ ಯೋಜನೆಗಳು ಕಾರಣವೆಂದು ಮೇಲ್ನೋಟಕ್ಕೆ ಅನ್ನಿಸಬಹುದಾದರೂ ಈ ಯೋಜನೆಗಳು ಬರುವುದಕ್ಕೆ ಮುಂಚಿತವಾಗಿಯೇ ಕೃಷಿ ಕಾರ್ಮಿಕರ ಸಮಸ್ಯೆಯಿತ್ತು, ಮೈಸೂರು ಭಾಗದಲ್ಲಿ ಈ ಸಮಸ್ಯೆ ಹುಟ್ಟಲು ಬೆಂಗಳೂರು ಮೈಸೂರು ರೈಲೂ ಕಾರಣ! ಮುಂಚೆ ವಲಸೆ ಹಳ್ಳಿಗಳಿಂದ ನಗರಕ್ಕೆ ಸೀಮಿತವಾಗಿತ್ತು, ಈಗದು ನಗರದಿಂದ ದೊಡ್ಡ ನಗರಕ್ಕೂ ವ್ಯಾಪಿಸಿದೆ. ಮಂಡ್ಯ, ಮೈಸೂರು ಜಿಲ್ಲೆಗಳ ಅನೇಕರು (ನನ್ನನ್ನೂ ಸೇರಿಸಿ) ಇವತ್ತು ಬೆಂಗಳೂರು ಸೇರಿದ್ದಾರೆ. ಈ ವಲಸೆ ಪ್ರಕ್ರಿಯೆಯಿಂದ ರೈತರೂ ಹೊರತಾಗಿಲ್ಲ, ಕೃಷಿ ಕಾರ್ಮಿಕರೂ ಹೊರತಾಗಿಲ್ಲ. ಊರಿನಲ್ಲಿ ಬಿಸಿಲಿನಲ್ಲಿ ದುಡಿದು ಮಾಡುವ ಸಂಪಾದನೆಯಷ್ಟನ್ನೇ ನಗರದಲ್ಲಿ ತಂಪಿನಲ್ಲಿ ಮಾಡಬಹುದೆಂಬ ಕಲ್ಪನೆ ಎಂಥವರನ್ನಾದರೂ ಸೆಳೆಯುತ್ತದೆ. ಅತಿ ಕಡಿಮೆ ದರದಲ್ಲಿ ರೈಲು ಪಾಸು ಸಿಗುವಾಗ ಬೆಳಿಗ್ಗೆ ಕೆಲಸಕ್ಕೆ ಬಂದು ಸಂಜೆ ಮತ್ತೆ ಮನೆಗೆ ಮರಳುವ ಅವಕಾಶ ಮಂಡ್ಯ, ಮೈಸೂರಿನ ಜನತೆಗೆ ಇರುವುದು ಇಲ್ಲಿನ ಕೃಷಿ ಕಾರ್ಮಿಕರ ಸಮಸ್ಯೆಗೊಂದು ಕಾರಣ. ಫ್ಯಾನಿನ ಕೆಳಗೆ ಕುಳಿತು ನಾಲ್ಕು ಗೋಡೆಯ ಮಧ್ಯೆಯಿಂದ ಕೂಲಿ ಮಾಡ್ತಿರೋರೆಲ್ಲಾ ಹಳ್ಳಿಗೋಗ್ರಿ, ಅಲ್ಲಿ ಕೆಲಸಕ್ಕೆ ಜನರಿಲ್ಲ ಎನ್ನುವುದು ಕ್ರೌರ್ಯವಷ್ಟೇ. ಹಾಗಾದರೆ ಕಬ್ಬು ಕಟಾವು ಮಾಡಲು ಕೃಷಿ ಕಾರ್ಮಿಕರು ಎಲ್ಲಿಂದ ಬರುತ್ತಿದ್ದರು?

ಸಾಂದರ್ಭಿಕ ಚಿತ್ರ
ಬಿರುಬೇಸಿಗೆಯ ಬಳ್ಳಾರಿಯಿಂದ ಕಟಾವಿನ ಸಮಯಕ್ಕೆ ಸರಿಯಾಗಿ ಕಾರ್ಮಿಕರು ಬರುತ್ತಿದ್ದರು. ನೀರಾವರಿ ಭಾಗದ ರೈತರನ್ನು ಈ ಕೃಷಿ ಕಾರ್ಮಿಕರ ಮುಂದೆ ಸೋಮಾರಿಗಳೆಂದೇ ಹೇಳಬಹುದು. ಆ ಕಾರ್ಮಿಕರ ಶ್ರಮ ದೊಡ್ಡದು. ಒಂದು ಟನ್ ಕಬ್ಬು ಕಟಾವು ಮಾಡಲು ಇನ್ನೂರೈವತ್ತು ರುಪಾಯಿ ನಿಗದಿಯಾಗಿತ್ತು, ಕ್ರಮೇಣ ಅದು ಎಂಟುನೂರರಿಂದ ಸಾವಿರ ರುಪಾಯಿಗೆ ಬಂದು ನಿಂತಿದೆ. ಕೃಷಿ ಕಾರ್ಮಿಕರು ಮತ್ತವರಿಗಿಂತ ಹೆಚ್ಚಾಗಿ ಅವರನ್ನು ಕರೆದುಕೊಂಡು ಬರುವ ಮೇಸ್ತ್ರಿಗಳು ವರುಷದಿಂದ ವರುಷಕ್ಕೆ ಸಿರಿವಂತರಾಗಿದ್ದಾರೆ. ಲಾರಿಗಳನ್ನೂ ಕೊಂಡುಕೊಂಡು ಬಳ್ಳಾರಿಯಿಂದಲೇ ತರುವ ಮೇಸ್ತ್ರಿಗಳೂ ಈಗ ಕಾಣಸಿಗುತ್ತಾರೆ. ದೈಹಿಕ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಅವರು ಪಡೆಯುತ್ತಿದ್ದಾರೆ. ಹಸಿರು ಕ್ರಾಂತಿಯ ದೆಸೆಯಿಂದ ರಸಗೊಬ್ಬರ ಬಳಸದೆ ಬೆಳೆ ಬೆಳೆಯಲಾಗದ ಸಂದರ್ಭದಲ್ಲಿ ಕಬ್ಬು ಬೆಳೆಯುವುದಕ್ಕೂ ಹೆಚ್ಚು ಖರ್ಚು ಮಾಡಿ ಕೃಷಿ ಕಾರ್ಮಿಕರಿಗೂ ಹೆಚ್ಚು ಹಣ ನೀಡಿ ಕೊನೆಗೆ ಕಾರ್ಖಾನೆಗಳಿಂದ, ದಲ್ಲಾಳಿ ನಿಯಂತ್ರಿತ ಮಾರುಕಟ್ಟೆಯಿಂದ ನಷ್ಟವನ್ನನುಭವಿಸಬೇಕಾದ ರೈತ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆಯ ಮೊರೆಹೋಗದೆ ಬದುಕುವುದೇ ಕಷ್ಟದ ಕೆಲಸವಾಗಿಬಿಟ್ಟಿದೆ.

ಈ ಲೇಖನ ಮೂಡಲು ಹಲವು ವಿಷಯಗಳನ್ನು ವಿಸ್ತಾರವಾಗಿ ತಿಳಿಸಿದ್ದು ಕಳೆದ ಇಪ್ಪತ್ತು ವರುಷಗಳಿಂದ ಇದ್ದುದರಲ್ಲಿ ಹೊಸತೇನನ್ನೋ ಮಾಡುತ್ತಾ ಕೃಷಿ ಮಾಡುತ್ತಿರುವ ಹರಳಹಳ್ಳಿಯ ಹರೀಶ್. ಅವರು ತಿಳಿಸಿದ ಒಂದಷ್ಟು ಅಂಶಗಳನ್ನು ಅವರ ಮಾತುಗಳಲ್ಲೇ ಓದಿಕೊಳ್ಳಿ: “ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ರೈತರೇ ಕಾರಣ ಅನ್ನಿಸುತ್ತೆ. ಇವೊತ್ತು ಯಾವ ರೈತನೂ ರೈತನಾಗಿ ಬದುಕುತ್ತಿಲ್ಲ. ಬದುಕಲು ಇಷ್ಟಪಡುತ್ತಿಲ್ಲ. ಅವರವರ ಗದ್ದೆಗೆ ಹೋಗೋಕೆ ರೈತರೇ ಎಷ್ಟೋ ಕಡೆ ಸಿದ್ಧರಿಲ್ಲ. ಕೂಲಿಗೆ ಬರೋರಿಗೆ ಮನೆಯಿಂದ ಬುತ್ತಿ ಕಟ್ಟಿಸ್ಕೊಂಡು ಹೋಗೋದಕ್ಕೂ ಎಷ್ಟೋ ಜನ ರೆಡಿ ಇಲ್ಲ. ಹೋಟ್ಲಿಂದ ಇಪ್ಪತ್ತು ರುಪಾಯಿಗೆ ಊಟ ಕಟ್ಟುಸ್ಕೊಂಡು ಹೋಗಿ ಕೊಡ್ತಾರೆ. ಹೋಟ್ಲೂಟ ತಿಂದ ಕೆಲಸದೋನು ಹನ್ನೆರಡು ಘಂಟೆಗೆ ಜಾಗ ಖಾಲಿ ಮಾಡ್ತಾನೆ. ಕಬ್ಬು, ಭತ್ತಕ್ಕೆ ಹೊಂದಿಕೊಂಡುಬಿಟ್ಟೋರು ಹೊಸದೇನನ್ನಾದರೂ ಮಾಡೋಣ ಅಂತ ಯೋಚಿಸೋದೆ ಕಮ್ಮಿ. ದೇವ್ರು ನೋಡ್ಕೋತಾನೆ ಅಂತ ಮತ್ತೆ ಕಬ್ಬು ಹಾಕೋರೇ ಜಾಸ್ತಿ. ನಮ್ ಕೃಷಿ ಇಲಾಖೇನೂ ಬಿಟಿ, ಹೈಬ್ರಿಡ್ ಹೈಬ್ರಿಡ್ ಅಂತ ಅದನ್ನೇ ಬೆಳೆಯೋಕೆ ಪ್ರೋತ್ಸಾಹ ಕೊಡ್ತಾರೆ. ಚೂರು ಪಾರು ಭತ್ತ ಬೆಳೀತಿದ್ದೋರು, ರಾಗಿ ಬೆಳೀತಿದ್ದೋರು ಅನ್ನಭಾಗ್ಯ ಬಂದ ಮೇಲೆ ನಿಲ್ಲಿಸಿಬಿಟ್ರು. ರಾಗಿ ಬೆಳೆಯೋ ಹೊಲದಲ್ಲೆಲ್ಲಾ ಸಾಲ ಮಾಡಿ ಬೋರ್ ತೆಗ್ಸಿ ಕಬ್ಬು ಬೆಳೀತಾವ್ರೆ. ಎಲ್ಲಿಂದ ರೇಟ್ ಸಿಗುತ್ತೆ? ಈಗ ಗ್ಯಾಸಿಗೆ ಮಾಡ್ತಿರೋ ಹಾಗೆ ನಾಳೆದಿನ ಸೊಸೈಟೀಲಿ ಅಕ್ಕಿ ಕೊಡಲ್ಲ ಬ್ಯಾಂಕಿಗೆ ದುಡ್ ಹಾಕ್ತೀವಿ, ಅಕ್ಕಿ ತಗೊಳ್ಳಿ ಅಂದ್ರೆ ಇನ್ನೂ ಕಷ್ಟ. ಗೊಬ್ಬರಕ್ಕೆ ಕೊಡೋ ಸಬ್ಸಿಡಿ ನಿಧಾನಕ್ಕೆ ನಿಂತೋಗ್ತಿದೆ. ಮುನ್ನೂರು ರುಪಾಯಿ ಇದ್ದ ಗೊಬ್ರ ಈಗ ಒಂದೂಕಾಲು ಸಾವಿರ. ಅದರ ಸಬ್ಸೀಡೀನೂ ಬ್ಯಾಂಕಿಗೇ ಹಾಕ್ತಾರಂತೆ. ಕೊಂಡ್ಕೊಳ್ಳೋಕೆ ಮತ್ತೆ ಸಾಲ ಮಾಡ್ಬೇಕು, ಬ್ಯಾಂಕಿಗೆ ಯಾವಾಗ ಹಾಕ್ತಾರೆ ಗೊತ್ತಿಲ್ಲ. ಶೋಕಿಗಾಗಿ ಸಾಲ ಮಾಡೋದು ಹೆಚ್ಚಾಗ್ತಾ ಇದೆ. ಅವರಿವರದ್ದು ಬೇಡ ನನ್ದೇ ಉದಾಹರಣೆ ಹೇಳಿದ್ರೆ ಹಳೇ ಮನೆ ಚೆನ್ನಾಗೇ ಇತ್ತು. ರಿಪೇರಿ ಮಾಡ್ಸಿ ಗ್ರಾನೈಟು, ಮಾರ್ಬೆಲ್ಲು ಹಾಕ್ಸೋದು ಬೇಕಿರಲಿಲ್ಲ. ಕಬ್ಬು ದುಡ್ಡು ಬರುತ್ತಲ್ಲ ಅಂತ ಎರಡು ವರ್ಷದ ಹಿಂದೆ ಅಡ ಇಟ್ಟು ಸಾಲ ಮಾಡಿ ಮನೆಕೆಲಸ ಮಾಡಿಸ್ದೆ. ಕಬ್ಬಿನ ರೇಟು ಬಿತ್ತು, ಸಾಲ ಇನ್ನೂ ಇದೆ. ಯಾವ ಹಳ್ಳಿಯ ಯಾವ ಮನೆಗೆ ಹೋದ್ರೂ ಐದು ಟಚ್ ಸ್ಕ್ರೀನ್ ಮೊಬೈಲು. ತಿಂಗ್ಳು ತಿಂಗ್ಳು ಅದಕ್ಕೆ ಸಾವಿರದವರೆಗೆ ಖರ್ಚು. ಹತ್ತದಿನೈದು ವರುಷದ ಹಿಂದಕ್ಕೆ ಹೋಲಿಸಿದರೆ ತಿಥಿ, ಬೀಗರೂಟ, ಮದುವೆ ಆಡಂಬರ ಈಗಲೇ ಜಾಸ್ತಿ. ಕಬ್ಬು ಬೆಳೆದೋರಿಗೆಲ್ಲಾ ನಷ್ಟವಾಗಿ ಇಷ್ಟೊಂದು ಜನ ಸತ್ತರಲ್ಲ ನಮ್ಮಲ್ಲೇನು ತಿಥಿ, ಬೀಗರೂಟ ನಿಂತೋಗಿದೆಯಾ? ಜೋರಾಗೇ ನಡೀತಿದೆ. ನಮ್ ಮೋದಿ ಪ್ರಧಾನಿ ಥರ ಇರ್ದೆ ಒಂದು ಮಲ್ಟಿನ್ಯಾಷನಲ್ ಕಂಪನಿ ಸಿ.ಇ.ಒ ಥರ ಮಾತಾಡ್ತಾರೆ. ಯಾವ ದೇಶಕ್ಕೆ ಹೋದ್ರೂ ನಮ್ಮಲ್ಲಿ ಬಂದು ದುಡ್ಡು ಹಾಕಿ ದುಡ್ಡು ಹಾಕಿ ಅಂತಾರೆ. ಚೈನಾದಿಂದ ರೇಷ್ಮೆ ಬಂದು ನಮ್ ರೇಷ್ಮೆ ಮಾರ್ಕೆಟ್ಟೇ ಬಿದ್ದೋಯ್ತು. ಇನ್ನು ಬೇರೆ ಕಡೆ ದುಡ್ಡೆಲ್ಲಾ ಬಂದ್ರೆ ಇಲ್ಲೇನುಳಿಯುತ್ತೆ? ಇದೇ ವ್ಯವಸ್ಥೆ ಮುಂದುವರೆದ್ರೆ ಇದೇ ಮೋದಿ ಗವರ್ನ್ ಮೆಂಟ್ ತರಬೇಕು ಅಂತಿದ್ದ ಭೂಮಸೂದೇನಾ ಯಾವ್ಯಾವ ರೈತರು ವಿರೋಧಿಸಿದ್ರೋ ಅವರೇ ನಾಳೆ ದಿನ ನನ್ ಜಮೀನ್ ತಗೊಳ್ಳಿ ನನ್ ಜಮೀನ್ ತಗೊಳ್ಳಿ ಅಂತ ಮೋದಿ ಹಿಂದೆ ಬಿಳ್ತಾರೆ. ಆ ದಿನ ಬರ್ಲಿ ಅಂತಾನೇ ಹಿಂಗೆಲ್ಲಾ ಮಾಡ್ತಾರೋ ಏನೋ? ಇದೆಲ್ಲದರ ಜೊತೆಗೆ ರೈತ ಸತ್ತಾಗ ಪಾರ್ಟಿಗಳೆಲ್ಲ ಬಂದು 25 ಸಾವಿರ, ಐವತ್ತು ಸಾವಿರ ಅಂತ ದುಡ್ಡು ಕೊಡೋದು ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದೆ. ಒಬ್ಬ ರೈತ ಸತ್ರೆ ಮತ್ತೊಬ್ಬ ರೈತ ಬರೋದು ಸರಿ. ಈ ಪಾರ್ಟಿಗಳೆಲ್ಲ ಯಾಕೆ ಬಂದು ದುಡ್ಡು ಕೊಡಬೇಕು. ನಾನು ಸತ್ತರೆ ಮನೆಯವರಿಗಾದರೂ ನೆಮ್ಮದಿ ಸಿಗುತ್ತೆ ಅನ್ನೋ ಭಾವನೇಲಿ ಸೂಸೈಡ್ ಮಾಡ್ಕೊಳ‍್ಳೋರು ಇರ್ತಾರೆ. ಆ ಟಿವಿಯವ್ರು ಜೋರು ದನೀಲಿ ಇವತ್ತು ಇಷ್ಟು ರೈತ್ರು ಸತ್ರು ಅನ್ನೋದೂ ನಿಲ್ಬೇಕು. ಒಟ್ನಲ್ಲಿ ಇಡೀ ವ್ಯವಸ್ಥೆಯಲ್ಲೇ ತಪ್ಪಿದೆ. ಯಾರನ್ನ ದೂಷಿಸೋದೋ ಗೊತ್ತಿಲ್ಲ”

ನನ್ನನೇಕ ಪ್ರಶ್ನೆಗಳಿಗೆ ಉತ್ತರ ನೀಡುತ್ತಲೇ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟಿಹಾಕಿಸಿದ ಮಾತುಗಳಿವು. ಹೆಚ್ಚೇನು ಬರೆಯಲು ಉಳಿದಿಲ್ಲ.

2 comments:

  1. Sugar industry has posed serious livelihood problems not just in Karnataka but also in uttar Pradesh. Reasons are

    1. The failure of cooperative movement in sugar sector. It has gradually lost the democratic nature and in turn cultivated dictatorial tendencies. AMUL model of Anand should be emulated. Cooperative movements has failed even in Karnataka is a sad thing.
    2. Ownership patterns of sugar factories has been permanently skewed in favour of powerful politicians. This has resulted in opacity and goondagiri. There are vested interests on the corridors of power as far as sugar sector sector is concerned. They bear direct consequence from this sector and hence resist any attempts of reforms.
    3. Integration with global market hasn't benefited either farmers or factories. There has been surplus sugar production in countries like Brazil and Cuba which has resulted in the fall of prices. This means less profit for factories . Two things can be done. A) Increasing import duty to protect from external shock B) Ensuring that ethanol blending is increased from the current 3 p.c to at least 10 p.c . This will make the factorys' bottom line healthy. But will it lead to better payments for farmers ? Can't say . This move has environmental significance as well.
    4. Factories have been demanding that government should buy the surplus sugar to improve their financial position. This should be resisted as it is only a short term measure and will lead to further distrust as this benefit will never be transferred to farmers. Instead long term reforms like improving the governance of sugar factories on the one hand and setting up farmer producer organisation on the other should be stressed. Such FPO s gives the farmers a voice.
    5. One can't deny the sociological aspect to these suicides. Much of the suicides are happening on the fringes of a urban centre. There may be a life style pressure on these farmers . Such pressure to become super rich in very less time exists also among urban youth and hence there is high suicide rates in this section as well. This can only be collectively addressed by media , teachers and more importantly families.
    6. Improving psychiatric facilities in public hospitals is sine qua non in this modern society. Psychiatric care has been cold shouldered by both governments and the public. It has not received help from the films as well which has stigmatized psychiatric care and that only mad people receive such treatments and electric shocks. Quickly identifying suicidal tendencies and giving proper medication goes a long way in addressing this social malady.

    There always is a hooplah that surrounds a farmers suicide. But every suicide ,whether it be a model's or a sslc student's , should create the same stir in our mind as each life is as precious as the other.

    ReplyDelete
  2. I also want to add what Prof Ashok Gulati said in a recent interview in rajya sabha tv(its on YouTube)

    He mentions about the dismal picture of agricultural insurance in india. Only 10 per cent or so of the net sown area are insured where as in China it is almost 90 per cent. The reason for such pathetic coverage is as Prof Gulati says, due to the high premium rate.

    Instead of ad hoc compensation and debt waiver schemes, which puts serious burdens on our RRB 's and PSB's , govts should seriously look towards reducing premium amounts and also making this model viable for insurance companies.

    This type of institutionalised 'compensation' mechanisms reduces shock factor among farmers.

    Prof Gulati also suggests taking ISRO's help in surveying crop losses using GIS(geographic information system) so that compensation is delivered instantly without any delay. We do have satellites which can help us in this regard.

    Once the concept of agricultural insurance becomes a hit among our farmers, there is no turning back.

    Please watch his videos on YouTube for an in-depth analysis about our ailing agricultural sector.

    ReplyDelete