ಅಕ್ರಮ ಶಸ್ತ್ರಾಸ್ತ್ರವನ್ನು 'ಮನೆಯವರ ರಕ್ಷಣೆಯ' ನೆಪದಲ್ಲಿ ಶೇಖರಿಸಿಟ್ಟಿದ್ದ ಸಂಜಯ್ ದತ್ ಎಂಬ ನಟನಿಗೆ ಐದು ವರುಷಗಳ ಜೈಲು ಶಿಕ್ಷೆಯಾಗಿತ್ತು. ಜೈಲಿನಲ್ಲಿರುವುದಕ್ಕಿಂತ ಸಂಜಯ್ ದತ್ ಹೊರಗಿರುವುದೇ ಜಾಸ್ತಿ ಎಂಬಂತಾಗಿದೆ. ಕಳೆದ ವರುಷ 118 ದಿನಗಳನ್ನು ಜೈಲಿನಿಂದ ಹೊರಗಡೆ ಕಳೆದ ಸಂಜಯ್ ದತ್ ಮತ್ತೆ ಜೈಲು ಸೇರಿದ್ದು ಡಿಸೆಂಬರ್ 2014ರಂದು. ಈಗ ಮತ್ತೆ ಸಂಜಯ್ ದತ್ ಗೆ ಜೈಲಿನಿಂದ ಹೊರಬರುವ ಭಾಗ್ಯ! ಪೆರೋಲ್ ಹೆಸರಿನಲ್ಲಿ ಸಂಜಯ್ ದತ್ ಒಂದು ತಿಂಗಳು ಶಿಕ್ಷಾ ಅವಧಿಯನ್ನು ಯಾವುದೇ ರೀತಿಯಿಂದ ಹೆಚ್ಚಿಸಿಕೊಳ್ಳದೆ ಹೊರಬಂದು ತಿರುಗಾಡಿ ಸಂಭ್ರಮಿಸಲು ಅವಕಾಶ ನೀಡಲಾಗಿದೆ. Ofcourse ಪೆರೋಲ್ ಪಡೆದುಕೊಳ್ಳಲು ಸಂಭ್ರಮದ ಕಾರಣವನ್ನಂತೂ ನೀಡುವಂತಿಲ್ಲವಲ್ಲ! ಸಂಜಯ್ ದತ್ ನೀಡಿರುವ ಕಾರಣ ಆತನ ಮಗಳಿಗೆ ನಡೆಯುವ ಆಪರೇಷನ್.
ವಿಕಿಪೀಡಿಯಾದ ಪುಟದ ಪ್ರಕಾರ ಭಾರತದಲ್ಲಿ ಒಂದು ತಿಂಗಳ ಪೆರೋಲ್ ಪಡೆಯುವ ಅವಕಾಶವಿದೆ. ಮನೆಯವರು ಸತ್ತಾಗ, ಅತೀವ ಖಾಯಿಲೆಯಿಂದ ನರಳುತ್ತಿರುವಾಗ, ಮಗು ಜನಿಸಿದಲ್ಲಿ ಈ ರೀತಿಯ ಪೆರೋಲ್ ಪಡೆಯಬಹುದಾಗಿದೆ. ದೇಶದ ಭದ್ರತೆಗೆ ಧಕ್ಕೆ ತಂದವರಿಗೆ, ವಿದೇಶಿಗರಿಗೆ, ಮಕ್ಕಳ ಮೇಲೆ ಅತ್ಯಾಚಾರ ಎಸಗಿದವರಿಗೆ, ಒಂದಾದ ಮೇಲೊಂದರಂತೆ ಕೊಲೆ ಮಾಡಿದವರಿಗೆ ಪೆರೋಲ್ ನೀಡಲಾಗುವುದಿಲ್ಲ. ಸಂಜಯ್ ದತ್ ಅಕ್ರಮವಾಗಿ ಶಸ್ತ್ರಸ್ತ್ರ ಇಟ್ಟುಕೊಂಡಿದ್ದು ಮುಂಬೈ ಸ್ಪೋಟದ ಸಮಯದಲ್ಲಿ, ಆತನ ಮೇಲೆ ಟಾಡಾ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಕೊನೆಗಾತನಿಗೆ ಶಿಕ್ಷೆಯಾಗಿದ್ದು ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿದ್ದಕ್ಕಾಗಿ. ಸಂಜಯ್ ದತ್ ಗೆ ಪೆರೋಲ್ ಸಿಗುವುದು ಕಾನೂನುಬದ್ಧವೇ ಹೌದು. ಆದರೆ ಸಂಜಯ್ ದತ್ ನೀಡಿರುವ ಕಾರಣ ಮಗಳ ಮೂಗಿನ ಸರ್ಜರಿ. ಅದ್ಯಾವ ಮೂಗಿನ ಸರ್ಜರಿಗೆ ಒಂದು ತಿಂಗಳ ಸಮಯ ಹಿಡಿಯುತ್ತದೆ? ಸಂಜಯ್ ದತ್ ಎಂಬ ನಟನಿಗೆ ಸಿಗುವ ಈ ಸೌಲಭ್ಯ ನಿಜಕ್ಕೂ ಅವಶ್ಯಕತೆ ಇರುವ ಎಷ್ಟು ಜನ ಖೈದಿಗಳಿಗೆ ಸಿಗುತ್ತದೆ?
ನ್ಯಾಯದೇವತೆಗೆ ಕಪ್ಪು ಪಟ್ಟಿ ಕಟ್ಟಿರುವುದು ಎಲ್ಲರನ್ನೂ ಸಮಾನವಾಗಿ ಕಾಣಲೆಂದು. ಪೆರೋಲ್ ನೀಡುವ ಜನರ ಕಣ್ಣಿಗೇನೂ ಪಟ್ಟಿ ಕಟ್ಟಿರುವುದಿಲ್ಲವಲ್ಲ..... ಲಲಿತ್ ಮೋದಿಯಂತಯ ಆಪಾದಿತನಿಗೆ ಹೆಂಡತಿಯ ಖಾಯಿಲೆಯ ನೆಪದಲ್ಲಿ ವಿದೇಶಗಳಲ್ಲಿ ಅಡ್ಡಾಡುವುದಕ್ಕೆ 'ಮಾನವೀಯತೆ' ದೃಷ್ಟಿಯಿಂದ ದೇಶದ ವಿದೇಶಾಂಗ ಸಚಿವರೇ ಸಹಕರಿಸುವಾಗ ದೇಶದೊಳಗಡೆ ಸಂಜಯ್ ದತ್ ಗೆ ಪೆರೋಲ್ ಕೊಡುವ 'ಮಾನವೀಯ' ಕೆಲಸಗಳು ಅಚ್ಚರಿ ತರುವುದಿಲ್ಲ ಬಿಡಿ.
No comments:
Post a Comment