Ashok K R
ಸಂತೋಷಾನಂದ ಸ್ವಾಮಿಗಳ ಆಶ್ರಮಕ್ಕೆ ಕ್ರಾಂತಿ ಕಾಲಿಟ್ಟ ಮೊದಲ ದಿನ ಆಶ್ರಮದ ವಾತಾವರಣದಿಂದ ಉಲ್ಲಸಿತನಾದ. ಹೊಸ ಆಶ್ರಮವಿದು, ಹಣದ ಅಭಾವವಿರಬೇಕು. ಹೆಚ್ಚೆಚ್ಚು ಹಣ ಸೇರಿದಂತೆಲ್ಲಾ ಉಳಿದ ಆಶ್ರಮದ ವೈಭೋಗ, ಐಷಾರಾಮಿತನ ಇಲ್ಲಿಗೂ ಬಂದುಬಿಡಬಹುದೆಂಬ ಅನುಮಾನವೂ ಇತ್ತು. ಧ್ಯಾನದ ಸಮಯ ಮುಗಿದ ನಂತರ ಪ್ರತೀ ದಿನ ಸಂಜೆ ಭಕ್ತರಿಗೂ ಸ್ವಾಮಿಗೂ ಚರ್ಚೆ ನಡೆಯುತ್ತಿತ್ತು. ಬಹಳಷ್ಟು ಚರ್ಚೆಗಳು ಆಧ್ಯಾತ್ಮದ ಬಗ್ಗೆ, ದೇವರ ಬಗ್ಗೆ, ಧ್ಯಾನ – ಜಪ – ತಪ – ಮಂತ್ರಗಳ ಬಗ್ಗೆ. ಲೌಕಿಕದ ಚರ್ಚೆಗೂ ಸ್ವಾಮಿಗಳು ತೆರೆದುಕೊಂಡಿದ್ದರು. ತಮ್ಮ ಪೂರ್ವಾಶ್ರಮದ ನೆನಪುಗಳನ್ನು ಅಗತ್ಯ ಬಿದ್ದಾಗ ಹೇಳುತ್ತಿದ್ದರು. ಕ್ರಾಂತಿ ಭೇಟಿ ಕೊಟ್ಟ ಎರಡನೆಯ ದಿನ ರಾಜಕೀಯದ ಚರ್ಚೆ ನಡೆದಿತ್ತು. ಅನ್ಯ ಧರ್ಮ ದ್ವೇಷ, ಏಕಪಕ್ಷವಾದ ಸ್ವಾಮಿಗಳ ಮಾತಿನಲ್ಲಿರಲಿಲ್ಲ. ಯಾವುದೇ ವಿಷಯವಾದರೂ ಅದರಲ್ಲಿನ ಒಳಿತು – ಕೆಡುಕುಗಳೆರಡರ ಮುಖವನ್ನು ಬಣ್ಣಿಸುತ್ತಿದ್ದರು. ನೂರು ಪ್ರತಿಶತಃ ಒಳ್ಳೆಯತನ ಹೇಗೆ ಸಾಧ್ಯವಿಲ್ಲವೋ ನೂರು ಪ್ರತಿಶತಃ ಕೆಡುಕೂ ಸಾಧ್ಯವಿಲ್ಲ ಎಂದವರ ನಿಲುವಾಗಿತ್ತು. ಎರಡು ಭೇಟಿಯಲ್ಲೇ ಆಶ್ರಮದ ಪರಿಸರ, ಸ್ವಾಮಿಗಳ ಮಾತುಗಳೊಂದಿಗಿನ ಒಡನಾಟ ಕ್ರಾಂತಿಗೆ ಪ್ರಿಯವಾಗಿತ್ತು. ಆದರೆ ಇಂದವರು ಜ್ಞಾನಿಯನ್ನು ಮಕ್ಕಳ ಮನಸ್ಥಿತಿಗೆ ಹೋಲಿಸಿದ್ದು ಒಪ್ಪಿಗೆಯಾಗಲಿಲ್ಲ. ಪ್ರಶ್ನೆ ಕೇಳೇಬಿಡೋಣ ಎಂದುಕೊಂಡವನಿಗೆ ಪ್ರಶ್ನೋತ್ತರ ಅವಧಿ ಮುಗಿದಿದ್ದು ಬೇಸರ ಮೂಡಿಸಿತು. ತನ್ನೊಳಗೆ ಮೂಡಿದ ಪ್ರಶ್ನೆಯನ್ನೇ ಮನನ ಮಾಡುತ್ತ ಆ ಪ್ರಶ್ನೆ ಸರಿಯಿದೆಯಾ ಎಂದು ಯೋಚಿಸುತ್ತಾ ಕುಳಿತವನನ್ನು ಸ್ವಾಮಿಗಳ ದೀಕ್ಷೆ ಪಡೆಯದ ಶಿಷ್ಯನೊಬ್ಬ ಬಂದು ಎಚ್ಚರಿಸಿದ. ಬಾಗಿಲು ಹಾಕುವ ಸಮಯವಾಯಿತು, ಹೊರಡಬೇಕು ಎಂದು ಸೂಚಿಸಿದ.
“ಸ್ವಾಮಿಗಳಲ್ಲಿ ನನ್ನ ಸಂಶಯ ಪರಿಹರಿಸಿಕೊಳ್ಳಬೇಕು”
“ಇವತ್ತಿನ ಭೇಟಿಯ ಸಮಯ ಮುಗಿಯಿತಲ್ಲ. ನಾಳೆ ಕೇಳಿದರಾಗದೆ”
“ಇಲ್ಲ. ಇವತ್ತವರು ಜ್ಞಾನಿಯ ಬಗ್ಗೆ ಹೇಳಿದ ಮಾತಿನಿಂದಲೇ ನನ್ನಲ್ಲಿ ಪ್ರಶ್ನೆಗಳುಟ್ಟಿವೆ. ನಾಳೆಯಷ್ಟೊತ್ತಿಗೆ ಆ ಪ್ರಶ್ನೆಯೇ ಅರ್ಥವಿಲ್ಲದ್ದು ಎನ್ನಿಸಿಬಿಡಬಹುದು. ಹಾಗಾಗಿ ಇವತ್ತೇ ಕೇಳಬೇಕು”
“ಮ್. … ಸರಿ. ಒಂದು ಕೆಲಸ ಮಾಡಿ. ದೇವಾಲಯದ ಹಿಂದಿರುವ ಕೈದೋಟದ ಬಳಿ ಬನ್ನಿ. ಸ್ವಾಮಿಗಳನ್ನೊಮ್ಮೆ ಕೇಳಿ ನೋಡುತ್ತೇನೆ. ಅವರು ಅನುಮತಿ ಕೊಟ್ಟರೆ ಅಲ್ಲೇ ಭೇಟಿಯಾಗಿ ಪ್ರಶ್ನೆ ಕೇಳಬಹುದು”
ಇಬ್ಬರೂ ಕೈದೋಟದ ಬಳಿ ಬಂದರು. ಆಗಲೇ ಕತ್ತಲಾಗಿತ್ತು. ತೋಟದ ಮಧ್ಯೆ ಮಧ್ಯೆ ಸೋಲಾರ್ ದೀಪಗಳು ಉರಿಯುತ್ತಿದ್ದವು. ಸ್ವಾಮಿಗಳು ಗಿಡಗಳೊಡನೆ ಸಂವಾದಿಸುತ್ತಾ ನಿಧಾನಕ್ಕೆ ಹೆಜ್ಜೆ ಹಾಕುತ್ತಿದ್ದರು. ‘ನೀವಿಲ್ಲೇ ಇರಿ’ ಎಂದು ಹೇಳಿದ ಶಿಷ್ಯ ಸ್ವಾಮಿಗಳ ಬಳಿಗೆ ಹೋಗಿ ವಿಷಯ ತಿಳಿಸಿದ. ಸ್ವಾಮಿಗಳು ಕ್ರಾಂತಿಯೆಡೆಗೆ ನೋಡಿ ಬರುವಂತೆ ಕೈಸನ್ನೆ ಮಾಡಿದರು. ಶಿಷ್ಯ ದೇವಸ್ಥಾನದ ಕಡೆಗೆ ತೆರಳಿದ.
ಗಿಡಗಳ ಮೈದಡವುತ್ತಾ “ಹೇಳಿ” ಎಂದರು ಸ್ವಾಮಿಗಳು.
“ಇಂದು ನೀವು ಜ್ಞಾನಿಗಳ ಬಗ್ಗೆ ಹೇಳಿದ್ದು ನನಗೆ ಸಮಾಧಾನ ತರಲಿಲ್ಲ”
“ಯಾಕೆ? ಉತ್ತರ ಅಪೂರ್ಣವೆನ್ನಿಸಿತೆ”
“ಪೂರ್ಣವೋ ಅಪೂರ್ಣವೋ ತಿಳಿಯಲಿಲ್ಲ. ಆದರೆ ಭೂತವನ್ನು ಮರೆತು ವರ್ತಮಾನದಲ್ಲೇ ಇರಬೇಕು ಎಂದಿದ್ದು ಸರಿ ಕಾಣಲಿಲ್ಲ. ನಿಮ್ಮ ಮಾತಿನ ಪ್ರಕಾರವೇ ಹೋದರೆ ನೀವಿವತ್ತು ಹೇಳಿದ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರೆ ಅದನ್ನು ಇಂದೇ ಅಳವಡಿಸಿಕೊಳ್ಳಬೇಕು. ಏಕೆಂದರೆ ನಾಳೆಯೆಂಬ ವರ್ತಮಾನದಲ್ಲಿ ಇಂದೆಂಬ ಭೂತದ ಯಾವುದೇ ನೆನಪೂ ಇರುವುದಿಲ್ಲವಲ್ಲ; ಇರಬಾರದೆಂದು ನೀವು ಹೇಳುತ್ತೀರ”
ಪ್ರಶ್ನೆ ಕೇಳಿದವನ ಜಾಣ್ಮೆಗೆ ಮೆಚ್ಚಿ ಗಿಡಗಳ ಬಳಿ ಮೊಣಕಾಲಿನಲ್ಲಿ ಕುಳಿತಿದ್ದ ಸ್ವಾಮಿಗಳು ಮೇಲೆದ್ದು ಕ್ರಾಂತಿ ಸಂಭವನನ್ನು ನೋಡಿದರು.
“ಏನ್ ಓದ್ತಾ ಇದ್ದೀರಾ ನೀವು”
“ಫಸ್ಟ್ ಇಯರ್ ಎಂಬಿಬಿಎಸ್”
“ಸಂತೋಷ. ನಿಮ್ಮ ಪ್ರಶ್ನೆ ಸಮಂಜಸವಾಗಿದೆ. ಈ ರೀತಿ ಪ್ರಶ್ನೆ ಮಾಡುವವರ ಸಂಖೈ ಇತ್ತೀಚಿನ ದಿನಗಳಲ್ಲಿ ತುಂಬಾ ಕಡಿಮೆ” ತಾವು ಧರಿಸಿದ ಖಾವಿಯನ್ನೊಮ್ಮೆ ದಿಟ್ಟಿಸಿ “ಈ ಯುನಿಫಾರ್ಮನ್ನು ಧರಿಸಿದವರು ಏನು ಮಾತನಾಡಿದರೂ, ಒದರಿದರೂ ಅದು ಸರಿಯಾಗೇ ಇರುತ್ತದೆ ಎಂಬ ಮೌಡ್ಯ ನಮ್ಮ ಜನರಲ್ಲಿ. ಕಾಲ ಸವೆದಂತೆ ಆ ಮೌಡ್ಯವೂ ಹೆಚ್ಚುತ್ತಿರುವುದು ವಿಷಾದನೀಯ. ಜ್ಞಾನಿಯಾದವನಿಗೆ ಮಕ್ಕಳ ಮನಸ್ಥಿತಿ ಇರಬೇಕೆಂದು ಹೇಳಿದ್ದು ಭೂತದಲ್ಲಿ ನಡೆದ ಕಷ್ಟಗಳಿಗೆ – ದುರ್ಘಟನೆಗಳಿಗೆ ಮಾತ್ರ ಅನ್ವಯ ಮಾಡಿಕೊಳ್ಳಬೇಕು. ಭೂತದಲ್ಲಿನ ಒಳ್ಳೆಯ ವಿಚಾರಗಳಿಗಲ್ಲ! ಒಳ್ಳೆಯ ವಿಚಾರಗಳನ್ನು ನೆನಪಿಟ್ಟುಕೊಂಡು ಕೆಟ್ಟ ಸಂಗತಿಗಳನ್ನು ಮರೆತಾಗ ಕೊನೆಗೆ ನಮ್ಮಲ್ಲಿ ಒಳ್ಳೆ ಸಂಗತಿ, ವಿಚಾರಗಳು ಮಾತ್ರ ಉಳಿಯುತ್ತವೆ. ಜನರಿಗೆ ಸುಲಭವಾಗಿ ಅರ್ಥವಾಗಲೆಂದು ಮಕ್ಕಳ ಉದಾಹರಣೆಯನ್ನು ಹೇಳಿದ್ದು”
“ಸರಿ. ಚರ್ಚೆಯ ಸಂದರ್ಭದಲ್ಲೂ ನೀವು ಪೂರ್ತಿಯಾಗಿ ಹೇಳಬೇಕಿತ್ತಲ್ಲವೇ?”
“ನಿಜ. ಉದಾಹರಣೆಯ ಜೊತೆಗೆ ಹೇಳಿದರೂ ಪೂರ್ಣವಾಗಿ ಬಿಡಿಸಿ ತಿಳಿಸಬೇಕಿತ್ತು. ಕೆಲವರು ಅರ್ಧ ಕೇಳಿಸಿಕೊಂಡು ಪೂರ್ತಿ ಅರ್ಥ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಪೂರ್ತಿ ಕೇಳಿಸಿಕೊಂಡು ಏನನ್ನೂ ಅರ್ಥೈಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಸರ್ವಸಂಗ ಪರಿತ್ಯಾಗಿಗಳೆನ್ನಿಸಿಕೊಂಡ ನಮಗೂ ಬೌದ್ಧಿಕ ಅಹಂಕಾರ ಕೆರಳಿದಂತಾಗಿ ‘ಈ ದಡ್ಡರಿಗೆ ಎಷ್ಟು ಹೇಳಿದರೂ ಅಷ್ಟೇ’ ಎಂಬ ಭಾವನೆಯಿಂದ ಅರ್ಧಕ್ಕೇ ಉಪನ್ಯಾಸವನ್ನು ಮೊಟಕುಗೊಳಿಸಿಬಿಡುತ್ತೇವೆ” ಇಬ್ಬರೂ ಜೋರಾಗಿಯೇ ನಕ್ಕರು.
“ಸರಿ ಸ್ವಾಮೀಜಿ. ನಾನಿನ್ನು ಬರುತ್ತೇನೆ”
“ಸಂತೋಷ. ಬರ್ತಾ ಇರಿ ಆಗಾಗ. ಅಂದಹಾಗೆ ನಿಮ್ಮ ಹೆಸರು”
“ಕ್ರಾಂತಿ ಸಂಭವ್ ಅಂಥ. ಹೋಗಿ ಬರ್ತೀನಿ ಸ್ವಾಮೀಜಿ” ಎಂದ್ಹೇಳಿ ಹೊರಟ.
ದೇವಾಲಯದ ಹಿಂದೆ ನಿಂತಿದ್ದ ಶಿಷ್ಯನೊಬ್ಬ ಕ್ರಾಂತಿಯನ್ನು ನಿಲ್ಲಿಸಿ “ಸ್ವಾಮಿಗಳಿಂದ ಬೀಳ್ಕೊಡುವಾಗ ಅವರ ಪಾದಕ್ಕೆ ನಮಸ್ಕರಿಸಬೇಕೆಂಬುದೂ ತಿಳಿಯದೆ?” ಕೋಪದಿಂದ ಹೇಳಿದ.
“ಹೌದೇ ಗೊತ್ತಿರಲಿಲ್ಲ” ಗುರುವೊಬ್ಬ ಸಿಕ್ಕ ಸಂತಸದಲ್ಲಿ ಶಿಷ್ಯನ ಕೋಪದ ಅರಿವಾಗಲಿಲ್ಲ ಕ್ರಾಂತಿ ಸಂಭವನಿಗೆ.
No comments:
Post a Comment