Dr Ashok K R
ಜ್ಞಾನಿ ಎಂದರ್ಯಾರು? ಭಕ್ತರೊಬ್ಬರು ಪ್ರಶ್ನಿಸಿದರು. ಸ್ವಾಮಿಗಳು ಆವರಣದಲ್ಲಿ ಬೆಳೆಸಿದ್ದ ಗಿಡಗಳ ಮಧ್ಯೆ ಆಟವಾಡುತ್ತಿದ್ದ ಇಬ್ಬರು ಮಕ್ಕಳೆಡೆಗೆ ದೃಷ್ಟಿ ಹರಿಸಿದರು. ಸಂಪಿಗೆ ಮರದಿಂದ ಉದುರಿ ಬಿದ್ದಿದ್ದ ಹೂವುಗಳನ್ನು ಸಂಗ್ರಹಿಸಿ ನಂದಿ ವಿಗ್ರಹದ ಮುಂದೆ ಹಾಕುತ್ತಿದ್ದರು. ಬಿದ್ದಿದ್ದ ಹೂವುಗಳು ಖಾಲಿಯಾಯಿತು. ಹೂವಿಂದ ಹೂವಿಗೆ ಹಾರಿ ಆಹಾರ ಸಂಗ್ರಹಿಸುತ್ತಿದ್ದ ಚಿಟ್ಟೆಗಳ ಬೆನ್ನುಬಿದ್ದರು. ಅವರ ಆಟಗಳನ್ನು ನೋಡಿ ಮೆಲುನಗುತ್ತಾ ಪ್ರಶ್ನೆ ಕೇಳಿದ ಭಕ್ತರೆಡೆಗೆ ನೋಡಿದರು.
“ಜ್ಞಾನಿ ಎಂದರೆ ಮಕ್ಕಳ ಮನಸ್ಥಿತಿಯುಳ್ಳವನು”
“ಅಂದರೆ”
“ಒಂದು ಆಟ – ಘಟನೆಯಿಂದ ಮತ್ತೊಂದು ಆಟಕ್ಕೆ ಮುಂದುವರೆದಾಗ ಮಕ್ಕಳ ಮನದಲ್ಲಿ ಹಳೆಯ ಆಟದ ಭಾರವಿರುವುದಿಲ್ಲ. ಹಳೆಯ ಘಟನೆಯ ಭಾರವಿರುವುದಿಲ್ಲ. ಭೂತದಲ್ಲಿ ನಡೆದ ಘಟನೆಯ ಅಂತ್ಯದೊಂದಿಗೇ ಅದನ್ನವರು ಮರೆತುಬಿಡುವ ಕಾರಣ ವರ್ತಮಾನದಲ್ಲವರು ಸಂತಸದಿಂದಿರುತ್ತಾರೆ. ಬೇಸರ ಮೂಡಿಸಿದ, ಅಳು ತರಿಸಿದ ಘಟನೆಯನ್ನೂ ಮಕ್ಕಳು ಬಹು ಸುಲಭವಾಗಿ ಮರೆತುಬಿಡುತ್ತಾರೆ. ದೊಡ್ಡವರಾಗುತ್ತಿದ್ದ ಹಾಗೆ ಭೂತದ ಸಂಗತಿಗಳಿಗೆ ಮಹತ್ವಕೊಟ್ಟು, ಅವುಗಳ ಬಗೆಗೇ ಚಿಂತಿಸಿ ಮಂಥಿಸಿ ವರ್ತಮಾನದಲ್ಲಿನ ಸಂತೋಷವನ್ನು ಅನುಭವಿಸುವುದಕ್ಕೆ ಮರೆತುಬಿಡುತ್ತಾರೆ. ಸೇಡು, ದ್ವೇಷಗಳೆಲ್ಲ ಮನಸ್ಸಲ್ಲಿ ಉಳಿದು ಬೆಳೆಯುವುದಕ್ಕೆ ಭೂತದ ಮೇಲಿನ ಅತಿಯಾದ ಅವಲಂಬನೆಯೇ ಕಾರಣ. ದೊಡ್ಡವರಾದ ಮೇಲೂ ಯಾರು ಭೂತದ ಭಾರವಿಲ್ಲದೆ ವರ್ತಮಾನದಲ್ಲಿ ಖುಷಿಯಾಗಿರುವ ಮಕ್ಕಳ ಮನಸ್ಥಿತಿಯನ್ನುಳಿಸಿಕೊಳ್ಳುತ್ತಾರೋ ಅವರೇ ಜ್ಞಾನಿಗಳು” ಸ್ವಾಮಿಗಳ ಉತ್ತರ ಪ್ರಶ್ನೆ ಕೇಳಿದ ಭಕ್ತರಿಗೆ ತೃಪ್ತಿ ನೀಡಿತು. ಅವತ್ತಿನ ಪ್ರಶ್ನೋತ್ತರ ವೇಳೆ ಮುಗಿದ ಕಾರಣ ಸ್ವಾಮಿಗಳು ಅವರೇ ಆರೈಕೆ ಮಾಡುತ್ತಿದ್ದ ಕೈದೋಟದ ಕಡೆಗೆ ಹೊರಟರು. ಇದ್ದ ಹದಿನೈದು ಮಂದಿ ಭಕ್ತರಲ್ಲಿ ಎಲ್ಲರೂ ಹೊರಟರು, ಕ್ರಾಂತಿ ಸಂಭವನ ಹೊರತಾಗಿ. ಸಂತೋಷಾನಂದ ಸ್ವಾಮಿಗಳ ಆಶ್ರಮಕ್ಕೆ ಕ್ರಾಂತಿ ಬರುತ್ತಿದ್ದುದು ಇದು ಮೂರನೇ ಬಾರಿ. ಗೆಳೆಯರಿಗೆ ತಿಳಿಯದಂತೆ ಬೇಸರವಾದಾಗಲೆಲ್ಲ ಆತ ಮೈಸೂರಿನಲ್ಲಿರುವ ಆಶ್ರಮಗಳಿಗೆ ಭೇಟಿ ನೀಡುತ್ತಿದ್ದ. ಧ್ಯಾನದಲ್ಲಿ, ಸ್ವಾಮಿಗಳ ಭಾಷಣ, ಆಶೀರ್ವಚನಗಳಲ್ಲಿ ಭಾಗವಹಿಸುತ್ತಿದ್ದ. ತಿಂಗಳೊಪ್ಪತ್ತಿನಲ್ಲಿ ಧ್ಯಾನ – ಆಧ್ಯಾತ್ಮವೆಲ್ಲವೂ ವ್ಯಾಪಾರದ ಸರಕಾಗಿರುವುದನ್ನು ಅರಿತುಕೊಂಡ. ಶಾಂತಿ ದೊರಕಿಸಬೇಕಾದ ಆಶ್ರಮಗಳಲ್ಲಿ ವೈಭವಕ್ಕೇ ಹೆಚ್ಚು ಪ್ರಾಮುಖ್ಯತೆ. ಸರಳತೆ ಭೋದಿಸುವ ಆಶ್ರಮಗಳಲ್ಲಿ ನೆಲಹಾಸಿಗೆಗೆ ಮಾರ್ಬಲ್ಲು, ಗ್ರಾನೈಟು; ಬಾಗಿಲು, ಕಂಬಗಳಲ್ಲಿ ತೇಗ. ಮುಖ್ಯಮೂರುತಿಯ ಬಾಗಿಲಿಗೆ ಶ್ರೀಗಂಧದ ಉಪಯೋಗವೂ ಇದ್ದೀತು. ಶಾಂತಿ ಬೋಧಿಸುವ ಆಶ್ರಮಗಳಲ್ಲಿ ಸ್ವಾಮೀಜಿ ಎನ್ನಿಸಿಕೊಂಡವರಿಂದಲೇ ಕೇಳುಗರನ್ನು ಉದ್ವೇಗಕ್ಕೊಳಪಡಿಸಿ ಹಿಂಸೆಗೆ ಪ್ರಚೋದಿಸುವಂತಹ ಪರಧರ್ಮ ನಿಂದನೆ. ಭಾರತದ ಗತವೈಭವವನ್ನು ಅಗತ್ಯಕ್ಕಿಂತ ಹೆಚ್ಚಿಗೆ ಹೊಗಳುತ್ತಾ ಇಂದಿನ ಸರ್ವಸಂಕಷ್ಟಗಳಿಗೂ ಭಾರತದ ಮೇಲೆ ದಂಡೆತ್ತಿ ಬಂದ ಸಾಬರು ಮತ್ತು ಕ್ರೈಸ್ತರನ್ನೇ ಹೊಣೆಯಾಗಿಸುವ ಮಾತುಗಳನ್ನು ಹೆಣೆಯುವಲ್ಲಿ ಸಿದ್ಧ ಹಸ್ತರು. ಆಧ್ಯಾತ್ಮಕ್ಕೆ ಮನಶ್ಯಾಂತಿಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳಿದರೆ ‘ಅದರ ಬಗ್ಗೆ ನಾನೊಂದು ಪುಸ್ತಕ ಬರೆದಿದ್ದೇನೆ. ನಮ್ಮ ಆಫೀಸಿನಲ್ಲೇ ದೊರೆಯುತ್ತದೆ. ಕೊಂಡು ಓದಿ’ ಎಂದು ಬಿಡುತ್ತಿದ್ದರು! ಪುಸ್ತಕದ ಬೆಲೆ ವಿದ್ಯಾರ್ಥಿಗಳ ಕೈಗೆಟುಕದಂತಿತ್ತು. ಕೆಲವರ ಮಾತುಗಳಲ್ಲಿ ಸತ್ವವಿದೆ ಎನ್ನಿಸುತ್ತಿತ್ತಾದರೂ ಸಂಸ್ಕೃತವನ್ನು ಜಾಸ್ತಿ ಬಳಸಿ ಪೂರ್ಣವಾಗಿ ಅರ್ಥವಾಗದಂತೆ ಮಾಡಿಬಿಡುತ್ತಿದ್ದರು. ಮನದ ಗೊಂದಲಗಳನ್ನು ನಿವಾರಿಸಿಕೊಂಡು ನೆಮ್ಮದಿಯನ್ನರಸಿ ಆಶ್ರಮದ ಕಡೆಗೆ ಮುಖಮಾಡಿದ ಕ್ರಾಂತಿಗೆ ಇರುವ ಗೊಂದಲಗಳ ಜೊತೆಜೊತೆಗೆ ಆಶ್ರಮ – ಸನ್ಯಾಸಿ – ಸ್ವಾಮೀಜಿ – ಆಧ್ಯಾತ್ಮದ ಬಗೆಗಿನ ಗೊಂದಲಗಳು ಸೇರಿಕೊಂಡವು. ಒಂದು ಘಂಟೆ ಆಶ್ರಮದಲ್ಲಿ ಕಳೆಯಬೇಕೆಂದು ಬಂದು ಐದತ್ತು ನಿಮಿಷಕ್ಕೇ ಎದ್ದು ಹೋಗಿಬಿಡುತ್ತಿದ್ದ. ಆಗಷ್ಟೇ ಕಲಿತಿದ್ದ ಸಿಗರೇಟನ್ನು ಹತ್ತಿರದ ಅಂಗಡಿಯಲ್ಲಿ ಸೇದಿ ಕಾಲುಗಳು ಕರೆದುಕೊಂಡು ಹೋದ ಕಡೆಗೆ ತಿರುಗುತ್ತಿದ್ದ. ಹಾಗೆ ಅಲೆಯುವಾಗೊಮ್ಮೆ ಸಂತೋಷಾನಂದ ಸ್ವಾಮಿಗಳ ಆಶ್ರಮ ಕಣ್ಣಿಗೆ ಬಿತ್ತು. ಒಂಟಿಕೊಪ್ಪಲಿನಿಂದ ಕೆ.ಆರ್.ಎಸ್ ಕಡೆಗೆ ಹೋಗುವ ರಸ್ತೆಯಲ್ಲಿ ಒಂದು ಕಿಮಿ ಸಾಗಿ ಎಡಕ್ಕೆ ತಿರುಗಿ ಇಳಿಜಾರು ರಸ್ತೆಯಲ್ಲಿ ಮತ್ತೆ ಅರ್ಧ ಕಿಮಿ ನಡೆದು ಬಲಕ್ಕಿರುವ ಮಣ್ಣಿನ ರಸ್ತೆಯಲ್ಲಿ ಸಾಗಿದರೆ ಕೊನೆಯಲ್ಲಿದೆ ಸಂತೋಷಾನಂದ ಸ್ವಾಮಿಗಳ ಆಶ್ರಮ. ಒಂದೂವರೆ ಎಕರೆ ಪ್ರದೇಶದಲ್ಲಿ ಆಶ್ರಮ ವಿಸ್ತರಿಸಿಕೊಂಡಿದೆ. ಗೇಟು ದಾಟಿ ಹತ್ತು ಹೆಜ್ಜೆ ಹಾಕಿದರೆ ಬಲಗಡೆಗೆ ಧ್ಯಾನ ಮಂದಿರವಿದೆ. ಬೆಳಿಗ್ಗೆ ಐದರಿಂದ ಆರು ಮತ್ತು ಸಂಜೆ ಆರರಿಂದ ಏಳರವರೆಗೆ ಸ್ವತಃ ಸ್ವಾಮೀಜಿಗಳು ಧ್ಯಾನದಲ್ಲಿ ಭಾಗವಹಿಸುತ್ತಾರೆ ದೀಕ್ಷೆ ಪಡೆದುಕೊಂಡ ಮತ್ತು ಪಡೆದುಕೊಳ್ಳದ ತಮ್ಮೈದು ಶಿಷ್ಯರೊಂದಿಗೆ. ಬೆಳಕಿನ ಕಿರಣಗಳು ನಿರ್ಗಮಿಸುವ ಮುನ್ನ ಧ್ಯಾನವೂ ಮುಗಿಯಬೇಕೆಂಬ ಉದ್ದೇಶದಿಂದ ಸಂಜೆಯ ಧ್ಯಾನದ ಸಮಯ ಐದರಿಂದ ಆರರವರೆಗಿತ್ತು. ನಗರದೊಳಗೆ ಕೆಲಸಕ್ಕೋಗುವ ಕೆಲವು ಭಕ್ತಾದಿಗಳಿಗೆ ಆ ಸಮಯ ಹೊಂದುತ್ತಿರಲಿಲ್ಲವಾದ ಕಾರಣ ಸಮಯ ಬದಲಿಸಿದ್ದರು. ಧ್ಯಾನ ಮಂದಿರದ ಹಿಂದೆಯೇ ಸ್ವಾಮಿಗಳ ಕೋಣೆಯಿತ್ತು. ಧ್ಯಾನಮಂದಿರದ ಎದುರಿಗಿರುವ ಆವರಣದಲ್ಲಿ ಭಕ್ತರೊಬ್ಬರು ಕೊಟ್ಟ ನಂದಿ ವಿಗ್ರಹವಿತ್ತು. ವಿಗ್ರಹಗಳನ್ನು ಕೊಡುಗೆಯಾಗಿ ಸ್ವಾಮಿಗಳು ಸ್ವೀಕರಿಸುತ್ತಿರಲಿಲ್ಲ; ಒಂದೂವರೆ ಎಕರೆಯನ್ನು ಆಶ್ರಮದ ಸಲುವಾಗಿ ಒಂದು ರುಪಾಯಿಗೆ ಬರೆದುಕೊಟ್ಟ ಭಕ್ತರು ಆ ವಿಗ್ರಹವನ್ನು ನೀಡಿದ್ದರಿಂದಾಗಿ ನಿರಾಕರಿಸಲು ಸಾಧ್ಯವಾಗಲಿಲ್ಲ. ಕಚ್ಚಾ ರಸ್ತೆಯಲ್ಲಿ ಮತ್ತಷ್ಟು ಒಳ ಸರಿದರೆ ದೇವಸ್ಥಾನವಿತ್ತು. ದೇವರಿಲ್ಲದ ದೇವಸ್ಥಾನವದು. ದೇವಾಲಯದ ಒಳಗೆ ಆಳೆತ್ತರದ ಏಕಶಿಲೆಯಿತ್ತು. ಯಾವುದೇ ಕೆತ್ತನೆಗಳಿರಲಿಲ್ಲ. ಆ ಶಿಲೆಗೆ ಅರಿಶಿಣ – ಕುಂಕುಮ ಹಚ್ಚುತ್ತಿರಲಿಲ್ಲ, ಹೂವು ಮುಡಿಸುತ್ತಿರಲಿಲ್ಲ. ಬೆಳಿಗ್ಗೆ ಮತ್ತು ಸಂಜೆ ಧ್ಯಾನದ ನಂತರ ಸ್ವಾಮಿಗಳ ಶಿಷ್ಯರೊಬ್ಬರು ಏಕಶಿಲೆಗೆ ಪೂಜೆ ಸಲ್ಲಿಸುತ್ತಿದ್ದರು, ಮಂಗಳಾರತಿ ಬೆಳಗುವುದರ ಮೂಲಕ ಮತ್ತು ನಾಲ್ಕು ಸುಗಂಧದ ಕಡ್ಡಿಯನ್ನು ಶಿಲೆಯ ಬುಡದಲ್ಲಿಡುವುದರ ಮೂಲಕ. ಸಂತೋಷಾನಂದ ಸ್ವಾಮಿಗಳು ವಿಗ್ರಹಾರಾಧಕರಲ್ಲ. ಪೂಜೆಯ ಅಂಶವಿರದಿದ್ದರೆ, ಪ್ರಸಾದದ ಆಕರ್ಷಣೆಯಿರದಿದ್ದರೆ ಭಕ್ತಾದಿಗಳನ್ನು ಸೆಳೆಯುವುದು ಕಷ್ಟ ಎಂಬ ಟ್ರಸ್ಟಿಗಳೆಂಬ ಹಿತೈಷಿಗಳ ಮಾತಿಗೆ ಕಟ್ಟುಬಿದ್ದು ದೇವಾಲಯವನ್ನು ಕಟ್ಟಿಸಿದರು. ಯಾವ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕೆಂದು ಟ್ರಸ್ಟಿಗಳ ಮಧ್ಯೆಯೇ ಜೋರು ಗಲಾಟೆಯಾಯಿತು. ವಿಗ್ರಹಾರಾಧನೆಯನ್ನು ಇಷ್ಟಪಡದ ಸ್ವಾಮಿಗಳಿಗೆ ಇದರಿಂದ ಅನುಕೂಲವೇ ಆಯಿತು. ಒಂದು ದೊಡ್ಡ ಏಕಶಿಲೆಯನ್ನು ಪ್ರತಿಷ್ಠಾಪಿಸೋಣ, ಯಾವ ಮೂರ್ತಿಯನ್ನು ಕೆತ್ತಬೇಕೆಂದು ನಂತರ ನಿರ್ಧರಿಸಿದರಾಯಿತು ಎಂದು ಹೇಳಿದರು. ಮೊದಲು ದೇವಾಲಯ ಪ್ರಾರಂಭವಾಗಲಿ ನಂತರ ಮಿಕ್ಕಿದ್ದು ಎಂದು ಟ್ರಸ್ಟಿಗಳೂ ಸಮಾಧಾನ ಪಟ್ಟುಕೊಂಡರು. ದೇವಾಲಯದ ಹಿಂದೆ ಇನ್ನುಳಿದ ಜಾಗದಲ್ಲಿ ಕೈತೋ ಮಾಡಿಕೊಂಡಿದ್ದರು. ಆಶ್ರಮದಲ್ಲಿರುವವರ ನಿತ್ಯಾಹಾರಕ್ಕೆ ಬೇಕಾದ ತರಕಾರಿಗಳನ್ನು ಅಲ್ಲೇ ಸ್ವಾಮಿಗಳ ಮುಂದಾಳತ್ವದಲ್ಲಿ ಬೆಳೆಯಲಾಗುತ್ತಿತ್ತು. ಸೀಮಿತ ಸ್ಥಳದಲ್ಲಿ ಬೆಳೆಯಲಾಗದ ವಸ್ತುಗಳನ್ನು ಮಾತ್ರ ಹೊರಗಿನಿಂದ ತರುತ್ತಿದ್ದರು. ಆಶ್ರಮ ಪ್ರಾರಂಭವಾಗಿ ಮೂರು ವರುಷಗಳಾಗಿತ್ತಷ್ಟೇ. ಭಕ್ತರ ಸಂಖ್ಯೆಯಲ್ಲಿ ತುಂಬಾ ಏರಿಕೆಯೇನೂ ಇರಲಿಲ್ಲ. ದೇವಾಲಯದಲ್ಲಿ ವಿಶೇಷ ಪೂಜಾ ದಿನಗಳು ಇರದಿದ್ದುದೂ ಜನರು ಬರದಿರಲು ಕಾರಣ. ಬರುವ ಭಕ್ತರು ಮತ್ತೆ ಬೇರೆ ಆಶ್ರಮದೆಡೆಗೆ ಹೋಗುತ್ತಿರಲಿಲ್ಲ ಎಂಬುದೂ ಸತ್ಯ.
No comments:
Post a Comment