ವಿಜಯ್ ಗ್ರೋವರ್, ತೆಹೆಲ್ಕಾ.
ಮೂವತ್ತನಾಲ್ಕು ವರುಷದ ಸುನಿಲ್ ಶಿರಸಂಗಿ ಒರ್ವ ಪತ್ರಕರ್ತ. ಕಳೆದ ಕೆಲವು ತಿಂಗಳುಗಳಿಂದ ಕಾರ್ಮಿಕ ನ್ಯಾಯಾಲಯ ಮತ್ತು ಕಾರ್ಮಿಕ ಅಧಿಕಾರಿಯ ಕಛೇರಿಗೆ ಅಲೆಯುತ್ತಲೇ ಸುಸ್ತಾಗಿ ಹೋಗಿದ್ದಾನೆ. ಐದು ವರುಷಗಳ ಹಿಂದೆ ಮುದ್ರಣ ಮಾಧ್ಯಮದಿಂದ ದೃಶ್ಯ ಮಾಧ್ಯಮಕ್ಕೆ ಸುನಿಲ್ ಹೊರಳಿಕೊಂಡಾಗ ಈ ರೀತಿಯ ದಿನಮಾನಗಳನ್ನು ನೋಡಬೇಕಾಗಬಹುದೆಂದು ಊಹಿಸಿರಲಿಲ್ಲ. ಸುನಿಲ್ ತನ್ನೊಬ್ಬನ ಹಕ್ಕಿಗಾಗಿ ನ್ಯಾಯಾಲಯಕ್ಕೆ ಅಲೆಯುತ್ತಿಲ್ಲ, ಜನಶ್ರೀ ವಾಹಿನಿಯಲ್ಲಿ ತನ್ನೊಡನೆ ಕೆಲಸ ಹಂಚಿಕೊಳ್ಳುತ್ತಿದ್ದ ಅರವತ್ತು ಸಹೋದ್ಯೋಗಿಗಳಿಗಾಗಿ ಹೋರಾಡುತ್ತಿದ್ದಾನೆ.
ಸರಿಯಾಗಿ ಸಂಬಳ ಸಿಗುತ್ತಿಲ್ಲವೆಂದು ವಾಹಿನಿಯ ಮಾಲೀಕರ ಬಳಿ ಕೇಳಿದ್ದೇ ಸುನಿಲ್ ಮತ್ತವರ ಸಹೋದ್ಯೋಗಿಗಳ ಕೆಲಸಕ್ಕೆ ಎರವಾಯಿತು. ಸುನಿಲ್ ನೆನಪಿಸಿಕೊಳ್ಳುವಂತೆ ಡಿಸೆಂಬರ್ 2014ರ ಒಂದು ದುರ್ದಿನ ಅರವತ್ತೈದು ಜನರನ್ನು ಕಛೇರಿಯ ಒಳಗಡೆ ಕಾಲಿಡಲು ಬಿಡಲಿಲ್ಲ. “ಕೆಲಸ ನಿರ್ವಹಿಸಿದ್ದಕ್ಕೆ ಸಂಬಳ ಕೊಡಿ ಎಂಬುದಷ್ಟೇ ನಮ್ಮ ಬೇಡಿಕೆಯಾಗಿತ್ತು. ಗುಂಪಾಗಿ ಹೋಗಿ ಸಂಬಳ ಕೇಳಿದ್ದು ಮಾಲೀಕರ ತಂಡಕ್ಕೆ ಮೆಚ್ಚುಗೆಯಾಗಲಿಲ್ಲವಂತೆ” ಎನ್ನುತ್ತಾರೆ ಸುನಿಲ್.
ಏಳು ತಿಂಗಳ ನಂತರ ಕಾರ್ಮಿಕ ನ್ಯಾಯಾಲಯದಲ್ಲಿ ನೌಕರರ ಪರ ತೀರ್ಪು ಬರುವ ಸಂಭವ ಹೆಚ್ಚಿದೆ. ಬಾಕಿ ಇರುವ ಸಂಬಳವನ್ನು ನೀಡುವಂತೆ ನ್ಯಾಯಾಲಯ ಆದೇಶಿಸುವುದೆಂಬ ಆಶಯದಲ್ಲಿರುವ ಅರವತ್ತು ಜನ ಪತ್ರಕರ್ತರ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದೆ.
“ನ್ಯಾಯಕ್ಕಾಗಿ ಸವೆಸಿದ ಹಾದಿ ಕಠಿಣವಾಗಿತ್ತು. ಜೀವನ ಕಷ್ಟಕರವಾಗಿತ್ತು. ಏಳು ತಿಂಗಳು ಸಂಬಳವಿಲ್ಲದೆ ಮನೆ ಕಟ್ಟಲು ತೆಗೆದುಕೊಂಡ ಸಾಲ ತೀರಿಸಲು ಸಾಧ್ಯವಾಗಿಲ್ಲ; ಕಷ್ಟಗಳು ಹೆಂಡತಿಯ ಒಡವೆಗಳನ್ನು ಒತ್ತೆ ಇಡುವಂತೆ ಮಾಡಿಬಿಟ್ಟವು” ಹೆಸರು ಹೇಳಲಿಚ್ಛಿಸದ ದೃಶ್ಯ ವಾಹಿನಿಯ ಪತ್ರಕರ್ತರೊಬ್ಬರ ದುಗುಡವಿದು.
ಈ ರೀತಿಯ ದುರ್ವಿಧಿ ಜನಶ್ರೀ ವಾಹಿನಿಯಲ್ಲಿ ಕೆಲಸ ಮಾಡಿದ ಅರವತ್ತೂ ಚಿಲ್ಲರೆ ಪತ್ರಕರ್ತರದ್ದು ಮಾತ್ರವಲ್ಲ. ಕರ್ನಾಟಕದಾದ್ಯಂತ ನೂರೈವತ್ತಕ್ಕೂ ಹೆಚ್ಚು ದೃಶ್ಯ ವಾಹಿನಿ ಪತ್ರಕರ್ತರು ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಅನೇಕ ಕನ್ನಡ ವಾಹಿನಿಗಳ ಆರ್ಥಿಕ ಸ್ಥಿತಿ ದಯನೀಯವಾಗುತ್ತಿರುವುದು ಸಿಲಿಕಾನ್ ವ್ಯಾಲಿಯೆಂದೇ ಹೆಸರಾದ ಬೆಂಗಳೂರಿನ ಅನೇಕ ಪತ್ರಕರ್ತರ ಜೀವನವನ್ನು ದುರ್ಬರವಾಗಿಸಿದೆ; ಸಿಲಿಕಾನ್ ಸಿಟಿ ಏಷ್ಯಾದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಅಂಶ ಈ ಪತ್ರಕರ್ತರಿಗೆ ಅಪಹಾಸ್ಯದಂತೆ ಕಂಡರೆ ಅಚ್ಚರಿಯಿಲ್ಲ!
2007ರಲ್ಲಿ ಕನ್ನಡ ದೃಶ್ಯ ವಾಹಿನಿಗಳಲ್ಲಿದ್ದ ಉತ್ಸಾಹದ ಬೆಳವಣಿಗೆಗೆ ತದ್ವಿರುದ್ಧವಾದ ಪರಿಸ್ಥಿತಿಯನ್ನು ಇಂದು ಕಾಣುತ್ತಿದ್ದೇವೆ.
2007ರಲ್ಲಿ ಜೆಡಿಎಸ್ಸಿನ ಹೆಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿಯ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಕರ್ನಾಟಕ ‘ಸುದ್ದಿಗ್ರಸ್ಥ’ ರಾಜ್ಯವಾಗಿ ಹೆಸರು ಮಾಡಿತು. ಇಪ್ಪತ್ತಿಪ್ಪತ್ತು ತಿಂಗಳ ಅಧಿಕಾರ ಹಂಚಿಕೆ, ತಂದೆಯ ಮಾತು ಕೇಳಿ ವಚನಭ್ರಷ್ಟರಾದ ಕುಮಾರಸ್ವಾಮಿ, ದಿನಕ್ಕತ್ತು ಸುದ್ದಿ ಕೊಡುತ್ತಿದ್ದ ಯಡಿಯೂರಪ್ಪನವರ ಆಡಳಿತಾವಧಿ, ಬಿಜೆಪಿಯ ಆಂತರಿಕ ಕಚ್ಚಾಟದಿಂದ ಮುಖ್ಯಮಂತ್ರಿಗಳು ಬದಲಾಗಿದ್ದು, ಬಳ್ಳಾರಿಯ ರೆಡ್ಡಿ ಸಹೋದರರ ಅನ್ಯಾಯದ ಗಣಿಗಾರಿಕೆ, ಆಗ ಲೋಕಾಯುಕ್ತದ ನ್ಯಾಯಮೂರ್ತಿಯಾಗಿದ್ದ ಸಂತೋಷ್ ಹೆಗ್ಡೆ ಗಣಿ ಮಾಫಿಯಾದ ವಿರುದ್ಧ ಅಂಜದೆ ಕಾರ್ಯನಿರ್ವಹಿಸಿದ್ದೆಲ್ಲವೂ ಕರ್ನಾಟಕದ ಪತ್ರಕರ್ತರಿಗೆ ಮತ್ತು ವೀಕ್ಷಕರಿಗೆ ಬಿಡುವನ್ನೇ ನೀಡಿರಲಿಲ್ಲ.
ಕನ್ನಡದ ಮಾಧ್ಯಮದ ದೃಷ್ಟಿಯಿಂದ 2007ರಿಂದ 2013ರವರೆಗೆ ಸುವರ್ಣ ಸಮಯ ನಡೆಯುತ್ತಿತ್ತು. ಬರೋಬ್ಬರಿ ಆರು ಹೊಸ ಕನ್ನಡ ಸುದ್ದಿವಾಹಿನಿಗಳು ಶುರುವಾಯಿತು. ಉದ್ದಿಮೆದಾರರು, ರಾಜಕಾರಣಿಗಳು ಕೋಟಿ ಕೋಟಿ ರುಪಾಯಿಯನ್ನು ದೃಶ್ಯ ಮಾಧ್ಯಮವೆಂಬ ಉದ್ದಿಮೆಗೆ ಸುರಿದರು. 2007ರಲ್ಲಿ ಆಂಧ್ರ ಮೂಲದ ಟಿವಿ 9 ಕನ್ನಡದಲ್ಲಿ ವಾಹಿನಿ ಪ್ರಾರಂಭಿಸಿದ ನಂತರ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸುವರ್ಣ ವಾಹಿನಿಯನ್ನು ಹುಟ್ಟು ಹಾಕಿದರು. ರೆಡ್ಡಿ ಸಹೋದರರು ಜನಶ್ರೀ ವಾಹಿನಿಯನ್ನು ಪ್ರಾರಂಭಿಸಿದರೆ ಜಾರಕಿಹೊಳಿ ಕುಟುಂಬ ಸಮಯ ವಾಹಿನಿಯನ್ನು ಶುರುಮಾಡಿದರು.
ಕಡಿಮೆ ಸಮಯದಲ್ಲಿ ಹೆಚ್ಚೆಚ್ಚು ವಾಹಿನಿಗಳು ಪ್ರಾರಂಭಗೊಂಡಿದ್ದೇ ತಡ, ದೃಶ್ಯ ಮಾಧ್ಯಮದಲ್ಲಿ ಅನುಭವ ಇದ್ದವರು, ಇಲ್ಲದವರಿಗೆಲ್ಲ ಅಲ್ಲಿಯವರೆಗೆ ಪತ್ರಿಕೋದ್ಯಮ ಕಂಡು ಕೇಳರಿಯದ ರೀತಿಯಲ್ಲಿ ಅವಕಾಶಗಳು ಸಿಗಲಾರಂಭಿಸಿತು. ಬೇಕಾಬಿಟ್ಟಿ ನೇಮಕಗಳಿಂದ, ತರಬೇತಿಯ ಕೊರತೆಯಿಂದ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವಾರ್ತೆ, ಕಾರ್ಯಕ್ರಮಗಳ ಗುಣಮಟ್ಟ ಹೇಳಿಕೊಳ್ಳುವಂತಿರಲಿಲ್ಲ. ರಾಜಕೀಯ ನಾಟಕಗಳು ಪರಾಕಾಷ್ಟೆಯಲ್ಲಿದ್ದ ಸುದ್ದಿ ಹಸಿವಿನ ರಾಜ್ಯ ಇದಾವುದನ್ನೂ ಲೆಕ್ಕಕ್ಕಿಟ್ಟುಕೊಳ್ಳಲಿಲ್ಲ. ಮಾಧ್ಯಮಕ್ಕೆ ಹಣ ಹರಿಯುತ್ತಲೇ ಇತ್ತು, 2013ರ ವಿಧಾನಸಭಾ ಚುನಾವಣೆಯವರೆಗೆ. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ರಾಜಕೀಯದ ನಾಟಕಗಳು ಪರದೆಯ ಹಿಂದೆ ಸರಿದವು. ರಾಜಕಾರಣಿಗಳ ನಾಟಕಾಭಿನಯ ಕಡಿಮೆಯಾಗುತ್ತಿದ್ದಂತೆ ಸುದ್ದಿ ವಾಹಿನಿಗಳೆಡೆಗೆ ಜನರಿಗಿದ್ದ ಆಸಕ್ತಿಯೂ ಕಡಿಮೆಯಾಯಿತು. ಕುಸಿಯುತ್ತಿದ್ದ ಆದಾಯ, ಟಿ.ಆರ್.ಪಿ ಅನೇಕ ವಾಹಿನಿಗಳ ಅಸ್ತಿತ್ವಕ್ಕೇ ಸಂಚಕಾರ ತಂದಿತು.
ಸಮಯ ವಾಹಿನಿ ಮಾಲೀಕತ್ವದಲ್ಲಿ ಎರಡಕ್ಕೂ ಹೆಚ್ಚು ಬಾರಿ ಬದಲಾವಣೆಗಳಾಗಿದ್ದರೆ, ಜನಶ್ರೀ ತನ್ನನ್ನು ಉಳಿಸಿಕೊಳ್ಳಬಲ್ಲ ಹಣವಂತರಿಗಾಗಿ ಕಾಯುತ್ತಿದೆ. ಸುವರ್ಣ ಮತ್ತು ಪಬ್ಲಿಕ್ ಟಿವಿ ಏದುಸಿರುಬಿಡುತ್ತಾ ವೆಚ್ಚಗಳನ್ನು ಕಡಿಮೆ ಮಾಡುವುದರತ್ತ ಗಮನಹರಿಸುತ್ತಿವೆ. ಇವುಗಳ ನಡುವೆ ಕನ್ನಡದ ಅತ್ಯಂತ ಹಳೆಯ ಸುದ್ದಿ ವಾಹಿನಿಯಾದ ಉದಯ ನ್ಯೂಸ್ ಕನಿಷ್ಟ ಬಂಡವಾಳ ಮತ್ತು ಕಡಿಮೆ ಉದ್ಯೋಗಿಗಳ ಕಾರಣದಿಂದಾಗಿ ಇನ್ನೂ ಉಳಿದುಕೊಂಡಿದೆ.
ಕಳೆದ ಕೆಲವು ತಿಂಗಳುಗಳಿಂದ ಮತ್ತೆ ಎರಡು ಹೊಸ ಕನ್ನಡ ಸುದ್ದಿ ವಾಹಿನಿಗಳು ಪ್ರಾರಂಭವಾಗಿವೆಯಾದರೂ ವೀಕ್ಷಕರ ಮೇಲಿನ್ನೂ ಪರಿಣಾಮ ಬೀರಲಾಗಿಲ್ಲ. ಈ ಎರಡೂ ವಾಹಿನಿಗಳಿಗೆ ರಿಯಲ್ ಎಸ್ಟೇಟಿನ ಹಣ ಹರಿದು ಬರುತ್ತಿದೆಯಾದರೂ ಅವುಗಳ ಗೆಲುವು ಸುಲಭವಲ್ಲ. “ತಮ್ಮ ರಾಜಕೀಯ ಮತ್ತು ಸಾಮಾಜಿಕ ಅಂತಸ್ತು ಹೆಚ್ಚಿಸುವಲ್ಲಿ ವಾಹಿನಿಗಳು ಸಹಾಯ ಮಾಡುತ್ತವೆ ಎನ್ನುವ ನಂಬುಗೆಯಿಂದ ಅನೇಕ ಬಂಡವಾಳಗಾರರು ಸುದ್ದಿವಾಹಿನಿಯಲ್ಲಿ ಹಣ ತೊಡಗಿಸುತ್ತಾರೆ. ಕೆಲವು ಸಮಯದ ನಂತರ ಸುದ್ದಿ ವಾಹಿನಿಯೆಂಬುದು 24 x 7 ದುಡ್ಡು ಸೆಳೆಯುವ ಸುಳಿಯೆಂದು ಅರಿವಾಗುತ್ತದೆ; ಬರುವ ಆದಾಯ ತುಂಬಾನೇ ಕಡಿಮೆ ಎಂದು ಅರಿತುಕೊಳ್ಳುತ್ತಾರೆ” ಎನ್ನುತ್ತಾರೆ ಮ್ಯಾನೇಜ್ ಮೆಂಟ್ ಕನ್ಸಲ್ಟೆಂಟ್ ನಜರ್ ಅಲಿ.
ಬಂಡವಾಳ ಹಾಕುವವರು ದೂರ ಸರಿಯುತ್ತ, ದೃಶ್ಯ ವಾಹಿನಿಗಳ ಬೆಳವಣಿಗೆಯೂ ಕುಂಠಿತಗೊಂಡಿರುವ ಸಂಗತಿ ಇನ್ನೂರೈವತ್ತು ಪತ್ರಕರ್ತರಿಗೆ ಎಷ್ಟು ತಲೆಬೇನೆ ತರುತ್ತಿದೆಯೋ 29 ಪತ್ರಿಕೋದ್ಯಮ ಕಾಲೇಜುಗಳಿಂದ ಪ್ರತೀ ವರುಷ ಹೊರಬರುವ ಏಳುನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೂ ಭವಿಷ್ಯದ ಭೀತಿ ಹುಟ್ಟಿಸುತ್ತಿದೆ. ಕನ್ನಡ ಸುದ್ದಿ ವಾಹಿನಿಗಳಿಗೆ ಮತ್ತೆ ಒಳ್ಳೆಯ ದಿನಗಳು ಬರುವವರೆಗೆ ಈ ಪ್ರತಿಭಾವಂತ ವಿದ್ಯಾರ್ಥಿಗಳು ಈಗಿನ ಸಂದರ್ಭದಲ್ಲಿ ಸಿಗುವ ಕೆಲವೇ ಕೆಲವು ಅವಕಾಶಗಳಿಗೆ ಬಡಿದಾಡಲೇಬೇಕಾಗಿದೆ.
ಕನ್ನಡಕ್ಕೆ: ಡಾ.ಅಶೋಕ್.ಕೆ.ಆರ್.
No comments:
Post a Comment