Ashok K R
ನೀವೇನೇ ಹೇಳಿ ಈ ಬಲಪಂಥೀಯರ ಚಾಣಾಕ್ಷತನ ಎಡಪಂಥೀಯರಿಗೆ, ನಡುಪಂಥೀಯರಿಗೆ, ಅಪಂಥೀಯರಿಗೆ ಇಲ್ಲವೇ ಇಲ್ಲ! ಇದು ಮತ್ತೆ ಅರಿವಾಗಿದ್ದು ಎಸ್.ಎಸ್.ಭೈರಪ್ಪನವರು ಕಳೆದ ವಾರ ಪತ್ರಿಕೆಗಳಿಗೆ ಬರೆದ ದೀರ್ಘ ಪತ್ರ ಓದಿದ ಮೇಲೆ. ಅನ್ನಭಾಗ್ಯ ವಿರೋಧಿಸಿ ಅವರು ಹಿಂದೊಮ್ಮೆ ನೀಡಿದ್ದ ಹೇಳಿಕೆ ಅನೇಕ ಚರ್ಚೆಗಳಿಗೆ ನಾಂದಿ ಹಾಡಿತ್ತು. ಆ ವಿರೋಧಿ ಹೇಳಿಕೆಗಳಿಗೆ ಉತ್ತರವಾಗಿ ಭೈರಪ್ಪನವರು ಈ ಪತ್ರವನ್ನು ಬರೆದಿದ್ದಾರೆ. ಆ ಪತ್ರ ಯಥಾವತ್ತಾಗಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಮತ್ತೊಂದು ಸುತ್ತಿನ ಚರ್ಚೆಯನ್ನಾರಂಭಿಸಿದೆ. It is one of the most beautifully ‘crafted’ letter that I have read in recent times! ಸತ್ಯ, ಅರೆ ಸತ್ಯ, ಸುಳ್ಳುಗಳೆಲ್ಲವನ್ನೂ ಮಿಳಿತವಾಗಿಸಿ ಬರೆದಿರುವ ‘ಸತ್ಯವೆಂದೇ’ ತೋರುವ ಪತ್ರವದು.
ಪತ್ರದ ಪ್ರಾರಂಭದಲ್ಲಿಯೇ ಇಡೀ ಪ್ರಕರಣವನ್ನು ಪತ್ರಕರ್ತರ ತಲೆಗೆ ಕಟ್ಟಿಬಿಡುತ್ತಾರೆ! ನನ್ನ ಆಸಕ್ತಿಯೇನಿದ್ದರೂ ಸಾಹಿತ್ಯ, ರಾಜಕೀಯವಲ್ಲ; ಪತ್ರಕರ್ತರೇ ಬಲವಂತ ಮಾಡಿದ್ದರಿಂದ ಸಿದ್ಧರಾಮಯ್ಯ ಸರಕಾರದ ಕಾರ್ಯವೈಖರಿಯ ಬಗ್ಗೆ ಮಾತನಾಡಿದೆ. ಇಲ್ಲವಾದರೆ ರಾಜಕೀಯದಿಂದ ದೂರ ಎನ್ನುತ್ತಾರೆ. ಇದೇ ಭೈರಪ್ಪನವರೇ ಅಲ್ಲವೇ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮೋದಿಯವರ ಪರ ಮಾತನಾಡಿದ್ದು? ಅದೂ ಕೂಡ ರಾಜಕೀಯದ ಒಂದು ಭಾಗವಲ್ಲವೇ? ಸಾಹಿತಿಯೊಬ್ಬರು ರಾಜಕೀಯದ ಬಗೆಗಿನ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಸಮಾಜದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೇ. ಅದನ್ನು ಕದ್ದು ಮುಚ್ಚಿ ಮಾಡುವ ಅಗತ್ಯವೇನಿಲ್ಲ. ಸಿದ್ಧರಾಮಯ್ಯ ಸರಕಾರ ಕಳೆದೆರಡು ವರುಷದಿಂದ ಉದ್ಯೋಗ ಸೃಷ್ಟಿಸುವ ಕೆಲಸವನ್ನೇ ಮಾಡಿಲ್ಲ ಎಂದೇಳುತ್ತಾ ಹ್ಯುಂಡಾಯ್ ಕಂಪನಿ (ಅಸಲಿಗದು ಹೋಂಡಾ ಕಂಪನಿಯಾಗಬೇಕಿತ್ತು. ಎರಡು ಪತ್ರಿಕೆಗಳಲ್ಲಿ ಹ್ಯುಂಡಾಯ್ ಎಂದು ಪ್ರಕಟವಾಗಿದೆ, ಒಂದರಲ್ಲಿ ಹೋಂಡಾ ಎಂದು ಬರೆದಿದೆ. ತಪ್ಪು ಭೈರಪ್ಪನವರದೋ ಪತ್ರಿಕೆಯವರದೋ ತಿಳಿದಿಲ್ಲ) ಕರ್ನಾಟಕದಿಂದ ಆಂಧ್ರಕ್ಕೆ ವಲಸೆ ಹೋಗಿದ್ದನ್ನು ನೆನಪಿಸುತ್ತಾರೆ. ಅದಕ್ಕೆ ಸಿದ್ಧರಾಮಯ್ಯ ಸರಕಾರವನ್ನು ಹೊಣೆಯಾಗಿಸುತ್ತಾರೆ. ಕರ್ನಾಟಕ ಕೊಡುವುದಾಗಿ ಹೇಳಿದ ಸೌಕರ್ಯಕ್ಕಿಂತ ಹೆಚ್ಚಿನ ಸೌಕರ್ಯ ಸೀಮಾಂಧ್ರ ಘೋಷಿಸಿತ್ತು, ಕಾರಣ ಹೊಸದಾಗಿ ರಚನೆಯಾದ ರಾಜ್ಯಕ್ಕೆ ಉದ್ದಿಮೆಗಳ ಅಗತ್ಯವಿದೆಯೆಂದು ಅಲ್ಲಿನ ಚಂದ್ರಬಾಬು ನಾಯ್ಡು ನಂಬಿದ್ದಾರೆ. ಆ ಕಾರಣದಿಂದ ಆ ಕಂಪನಿ ವಲಸೆ ಹೋಗಿದೆಯೇ ಹೊರತು ಕರ್ನಾಟಕ ಯಾವ ಸೌಲಭ್ಯವನ್ನೂ ಕೊಡಲಿಲ್ಲ ಎಂಬುದಕ್ಕಾಗಿಯಲ್ಲ. ಏನೇ ಕಾರಣ ನೀಡಿದರೂ ಇದು ಸಿದ್ಧರಾಮಯ್ಯ ಸರಕಾರದ ವೈಫಲ್ಯವೇ ಹೌದು. ಒಂದು ದೊಡ್ಡ ಉದ್ದಿಮೆಯಿಂದ ಏನೆಲ್ಲ ಅನುಕೂಲಗಳಾಗುತ್ತವೆ ಎಂಬ ಸಾಮಾನ್ಯ ವಿಷಯವನ್ನು ತಿಳಿಸುತ್ತಾರೆ ಭೈರಪ್ಪ. ಸಕಾರಾತ್ಮಕ ಅಂಶಗಳ ಕಡೆಗಷ್ಟೇ ಗಮನ ಸೆಳೆಯುತ್ತಾರೆ.
ಭೈರಪ್ಪನವರು ಬಿಜೆಪಿಯ ಬೆಂಬಲಿಗರು. ಆದರೆ ಪತ್ರದಲ್ಲಿ ಬಿಜೆಪಿಯ ಬಗ್ಗೆ, ಅದರ ನಾಯಕರ ಬಗ್ಗೆ ಏನನ್ನೂ ಬರೆಯದೆ ರಾಜಕೀಯ ವಿರೋಧದ ಲೇಖನವಲ್ಲ ಇದು ಎಂಬ ಭಾವನೆ ಮೂಡಿಸುತ್ತಾರೆ. ಸಿದ್ಧರಾಮಯ್ಯನವರನ್ನು ಟೀಕಿಸಲು ಅವರು ಕಾಂಗ್ರೆಸ್ಸಿನವರೇ ಆದ ಎಸ್.ಎಂ.ಕೃಷ್ಣರನ್ನು ಹೊಗಳಲಾರಂಭಿಸುತ್ತಾರೆ. ರಾಜಧಾನಿಯನ್ನು ಸಿಲಿಕಾನ್ ವ್ಯಾಲಿಯಾಗಿ ಮಾಡಿದ್ದರ ಬಗ್ಗೆ, ಎಲೆಕ್ಟ್ರಾನಿಕ್ ಸಿಟಿ ಮಾಡಿದ್ದರ ಬಗ್ಗೆ ಹೊಗಳುತ್ತಾರೆ. ಬೆಂಗಳೂರು ದೇಶದ ಐಟಿ ರಾಜಧಾನಿಯಾಗಿದ್ದ ಕಾರಣಕ್ಕಾಗಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಯಿತು. ಅದರಲ್ಲಿ ಎರಡು ಮಾತಿಲ್ಲ. ಎಲ್ಲ ಐಟಿ ಕಂಪನಿಗಳೂ ಬೆಂಗಳೂರಲ್ಲೇ ಠಿಕಾಣಿ ಹೂಡಿದ್ದಕ್ಕಾಗಿ ಬೆಂಗಳೂರಿನ ಪರಿಸರದ ಮೇಲೆ ಸಂಸ್ಕೃತಿ ಮೇಲಾಗಿರುವ ಹಾನಿಯ ಬಗ್ಗೆ ಮಾತ್ರ ಬರೆಯುವುದಿಲ್ಲ! ಪ್ರವಾಸಿ ತಾಣವಾಗಬೇಕಿದ್ದ ಬೆಂಗಳೂರೆಂಬ ಸುಂದರ ನಗರವನ್ನು ನಾವೆಲ್ಲರೂ ಗುಳೇ ಬಂದು ಹಾಳು ಮಾಡಿರುವುದು, ಹಸಿರ ನಗರಿಯನ್ನು ಕೆಂಪಾಗಿರಿಸಿರುವುದಕ್ಕೂ ಈ ಐಟಿಯೇ ಕಾರಣ ಎಂಬುದನ್ನು ಮರೆಯುತ್ತಾರೆ. ಎಸ್.ಎಂ.ಕೃಷ್ಣರವರು ಜಾತಿ ರಾಜಕೀಯ ಮಾಡಲೇ ಇಲ್ಲ, ಅವರೊಬ್ಬ ಮೇಧಾವಿ ರಾಜಕಾರಣಿ ಎಂದು ಭೈರಪ್ಪನಂತಹ ಹಿರಿಯರು ಬರೆಯುತ್ತಾರೆ ಎಂದರೆ ಅದಕ್ಕೇನನ್ನೋಣ? ಯಾವ ಎಸ್.ಎಂ.ಕೃಷ್ಣರವರನ್ನು ಇವರು ಭಯಂಕರವಾಗಿ ಹೊಗಳುತ್ತಿದ್ದಾರೋ ಅದೇ ಎಸ್.ಎಂ.ಕೃಷ್ಣ ಅಧಿಕಾರವಧಿ ಮುಗಿದ ಮೇಲೆ ಮದ್ದೂರಿನಲ್ಲಿ ಚುನಾವಣೆಗೆ ನಿಲ್ಲಲು ಭಯಪಟ್ಟು ಬೆಂಗಳೂರಿನಲ್ಲಿ ನಿಂತಿದ್ದಕ್ಕೆ ಕಾರಣವೇನು? ಅಭಿವೃದ್ಧಿ ಎಂದರೆ ಎಲ್ಲರನ್ನೂ ಒಳಗೊಳ್ಳಬೇಕು, ಒಂದು ಪ್ರದೇಶಕ್ಕೆ ಸೀಮಿತವಾಗಬಾರದು ಎಂಬ ಅಂಶವನ್ನು ಕಾಂಗ್ರೆಸ್ಸನ್ನು ಸೋಲಿಸುವ ಮೂಲಕ ಜನರು ತಿಳಿಸಿಕೊಟ್ಟರು. ಪಕ್ಕದ ಆಂಧ್ರದಲ್ಲೂ ಹೈದರಾಬಾದ್ ಅಭಿವೃದ್ಧಿಗಷ್ಟೇ ಒತ್ತು ಕೊಟ್ಟ ಚಂದ್ರಬಾಬು ನಾಯ್ಡುರವರನ್ನೂ ಜನರು ಸೋಲಿಸಿದರು. ಎಸ್.ಎಂ.ಕೃಷ್ಣರವರನ್ನು ಹೊಗಳುವ ಮೂಲಕ ನಾನು ಕಾಂಗ್ರೆಸ್ ವಿರೋಧಿಯಲ್ಲ ಎಂಬ ಪ್ರಭೆಯನ್ನು ಬೆಳೆಸಿದ ಭೈರಪ್ಪನವರು ನಂತರ ತಮ್ಮ ಬಲಪಂಥೀಯತೆಯ ಹಾದಿಗೆ ಹೊರಳುತ್ತಾರೆ.
ಬಲಪಂಥೀಯರ ಗುಣಲಕ್ಷಣವೆಂದರೆ ಮೊದಲು ಒಂದು ದೊಡ್ಡ ಭೂತವನ್ನು ಸೃಷ್ಟಿಸುತ್ತಾರೆ. ಭಾರತದಲ್ಲಿ ಹಿಂದೂ ಬಲಪಂಥೀಯರು ಸೃಷ್ಟಿಸಿರುವ ದೊಡ್ಡ ಭೂತವೆಂದರೆ ಮುಸ್ಲಿಂ ವಿರೋಧ. ಅದೇ ಹಾದಿಯಲ್ಲಿ ಸಾಗುವ ಭೈರಪ್ಪನವರ ಪತ್ರ ಮೊದಲಿಗೆ ಮುಸ್ಲಿಮರಿಗೆ ಸೀಮಿತವಾಗಿದ್ದ ಶಾದಿ ಭಾಗ್ಯದ ಬಗ್ಗೆ ಬರೆಯುತ್ತಾರೆ. ಬಲಪಂಥೀಯರೋ ಅಲ್ಲವೋ ಅನೇಕ ಹಿಂದೂಗಳ ಮನಸ್ಸಿನಲ್ಲಿ ಮುಸ್ಲಿಂ ದ್ವೇಷವೆಂಬುದು ರವಷ್ಟಾದರೂ ಇದ್ದೇ ಇದೆ. ಅಂಥವರನ್ನು ಸೆಳೆಯಲು ಶಾದಿಭಾಗ್ಯದ ವಿರೋಧಿ ಹೇಳಿಕೆ ಸಾಕು. ನಂತರದ ವಾಕ್ಯದಲ್ಲಿ ಅಹಿಂದ ವರ್ಗದ ವಿರುದ್ಧ ಬರೆಯುತ್ತಾರೆ. ಯೋಜನೆಯ ಹಂತದಲ್ಲಿದ್ದ , ವಿರೋಧದಿಂದಾಗಿ ನಿಂತುಹೋದ ಅಹಿಂದ ಮಕ್ಕಳ ಪ್ರವಾಸದ ಬಗ್ಗೆ ಬರೆದು ಇನ್ನಿತರೆ ಹಿಂದೂ ಓದುಗರನ್ನು ಸೆಳೆದುಬಿಡುತ್ತಾರೆ! ಒಮ್ಮೆ ಸೆಳೆದುಕೊಂಡರೆಂದರೆ ನಂತರ ಹೇಳಿದ್ದೆಲ್ಲವೂ ಸತ್ಯವೆಂದೇ ತೋರುತ್ತದೆ! ಈ ಎರಡು ಉದಾಹರಣೆಗಳನ್ನು ಅವರು ನೀಡಿರುವುದು ಆ ಯೋಜನೆಗಳು ತಪ್ಪೆಂಬ ಭಾವನೆಗಿಂತ ಹೆಚ್ಚಾಗಿ ಸಿದ್ಧರಾಮಯ್ಯನವರು ಮುಸ್ಲಿಮರನ್ನು ಓಲೈಸುವ ರಾಜಕಾರಣ ಮಾಡುತ್ತಾರೆ, ಅವರು ಅಹಿಂದ ವರ್ಗಕ್ಕಷ್ಟೇ ಸೀಮಿತ ಎಂಬುದನ್ನು ನಿರೂಪಿಸುವುದಕ್ಕಾಗಿ. ‘ಅವರು ಜಾರಿಗೊಳಿಸಿದ ಅನ್ನಭಾಗ್ಯ ಯೋಜನೆಯನ್ನು ಈ ಹಿನ್ನೆಲೆಯಲ್ಲಿ ನೋಡಬೇಕು’ ಎಂಬ ಭೈರಪ್ಪನವರ ಮಾತು ಅವರ ಉದಾಹರಣೆಗಳ ಸತ್ಯದರ್ಶನ ಮಾಡಿಸುತ್ತದೆ. ಎಸ್.ಎಂ.ಕೃಷ್ಣರವರು ಜಾತಿ ರಾಜಕಾರಣ ಮಾಡಲಿಲ್ಲ ಎನ್ನುವ ಭೈರಪ್ಪನವರಿಗೆ ಈ ಅನ್ನಭಾಗ್ಯ ಯೋಜನೆ ಜಾತಿ ಧರ್ಮಗಳ ಎಲ್ಲೆ ಮೀರಿದ್ದು ಎಂಬುದು ತಿಳಿದಿದೆ. ಅಹಿಂದ ನಾಯಕನೊಬ್ಬ ಎಲ್ಲರಿಗೂ ಉಪಯೋಗವಾಗುವಂತಹ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಓದುಗರಿಗೆ ಅನ್ನಿಸಿಬಿಟ್ಟರೆ ಎಂಬ ಆತಂಕದಿಂದ, ಬುದ್ಧಿವಂತಿಕೆಯಿಂದ ‘ಶಾದಿಭಾಗ್ಯ’ ‘ಅಹಿಂದ ಪ್ರವಾಸ’ದ ಉದಾಹರಣೆಯನ್ನು ನೀಡುತ್ತಾರೆ. ನಂತರ ಅನ್ನಭಾಗ್ಯ ಯೋಜನೆಗಿಂತ ಉದ್ಯೋಗ, ಶಿಕ್ಷಣ ನೀಡುವ ಯೋಜನೆಗಳು ಬರಬೇಕು, ಜನರನ್ನು ಸೋಮಾರಿಗಳನ್ನಾಗಿಸುವ ಕೆಲಸಗಳು ನಡೆಯಬಾರದು ಎಂದು ಹಿಂದೆ ನೀಡಿದ್ದ ಹೇಳಿಕೆಗಳ ಬಗ್ಗೆ ಬರೆಯುತ್ತಾರೆ.
ಆ ಹೇಳಿಕೆಗೆ ಉತ್ತರವೆಂಬಂತೆ ಬರೆದಿದ್ದ ‘ಅನ್ನವೆಂಬ ಭಾಗ್ಯವೂ ಮನುಜನೆಂಬ ಆಲಸಿಯೂ’ ಲೇಖನದಲ್ಲಿ ಅನ್ನಭಾಗ್ಯ ಯೋಜನೆ ಯಾಕೆ ಅವಶ್ಯಕ ಎಂಬುದನ್ನು ವಿವರಿಸಿದ್ದೆ. ಅನ್ನಭಾಗ್ಯ ಯೋಜನೆಯ ಜೊತೆಜೊತೆಗೇ ಕೆಲಸ ಸೃಷ್ಟಿಸುವ ಯೋಜನೆಗಳೂ ಅವಶ್ಯಕವೇ ಹೊರತು ಅನ್ನಭಾಗ್ಯ ಯೋಜನೆ ತಪ್ಪಲ್ಲ.
ಪತ್ರದ ಮುಂದಿನ ಭಾಗದಲ್ಲಿ ಅನ್ನಭಾಗ್ಯದ ದುಷ್ಪರಿಣಾಮದ ಬಗ್ಗೆ ಉದಾಹರಣೆ ಕೊಡುತ್ತಾ ತಮ್ಮ ಮನೆ ಹತ್ತಿರದ ಹೇರ್ ಕಟಿಂಗ್ ಸೆಲೂನಿನ ಬಗ್ಗೆ ಬರೆಯುತ್ತಾರೆ. ಇಲ್ಲಿ ಅನ್ನಭಾಗ್ಯದ ದುಷ್ಪರಿಣಾಮದ ಬಗ್ಗೆ ತಮ್ಮ ಅಭಿಪ್ರಾಯವನ್ನು ಗಟ್ಟಿಗೊಳಿಸುವುದಕ್ಕಿಂತ ಸೋಷಿಯಲಿಸಂ ಅನ್ನು ಹೀಗಳೆಯುವ ಉತ್ಸಾಹವೇ ಹೆಚ್ಚು ಕಾಣುತ್ತದೆ! ಬಡವನಾಗಿದ್ದ ಸೋಷಿಯಲಿಷ್ಟ್ ಚಿಂತನೆಯ ಮಾಲೀಕ, ಸಾಲ ಸೋಲ ಮಾಡಿ ಕನ್ನಡಿಗಳನ್ನೆಲ್ಲ ಹಾಕಿ ಝಗಮಗಿಸುವ ದೊಡ್ಡ ಅಂಗಡಿ ಮಾಡಿ ಹುಡುಗರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ. ಅವರೇ ಬರೆಯುವ ಹಾಗೆ ಪ್ರತೀ ಹುಡುಗನೂ ಅರ್ಧದಷ್ಟು ದುಡ್ಡನ್ನು ಮಾಲೀಕನಿಗೆ ನೀಡುತ್ತಿದ್ದರು. ಅದನ್ನು ಕೊಟ್ಟ ನಂತರವೂ ಇನ್ನೂರೈವತ್ತು ಮುನ್ನೂರು ರುಪಾಯಿ ದುಡಿಯುತ್ತಿದ್ದರು. ಮಾಲೀಕರು ಕೆಲಸ ಮಾಡುತ್ತಿದ್ದರು. ಅನ್ನಭಾಗ್ಯ ಯೋಜನೆ ಬಂದ ನಂತರ ಹುಡುಗರು ವಾರಕ್ಕೆ ಎರಡು ಮೂರು ದಿನವಷ್ಟೇ ಬರುತ್ತಾರಂತೆ! ತಿನ್ನಲು ದುಡಿಯಬೇಕಾದ ಅಗತ್ಯವಿಲ್ಲ ಎನ್ನುತ್ತಾರಂತೆ. ಸೋಷಿಯಲಿಷ್ಟ್ ಮಾಲೀಕರು ಅನ್ನಭಾಗ್ಯ ಯೋಜನೆಯನ್ನು ಬಯ್ಯುತ್ತಿದ್ದಾರಂತೆ! ಮನುಷ್ಯ ದುಡಿಯುವುದು ತಿನ್ನುವುದಕ್ಕೆ ಮಾತ್ರವಾ ಎಂಬ ಪ್ರಶ್ನೆ ಮೂಡುತ್ತದೆ. ಇತ್ತೀಚೆಗೆ ಭೈರಪ್ಪನವರನ್ನು ರಾಷ್ಟ್ರೀಯ ಪ್ರೊಫೆಸರ್ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಭೈರಪ್ಪನವರಿಗೆ ಈ ಸ್ಥಾನ ಸಿಕ್ಕಿರುವುದು ಲಾಬಿಯ ಸಂಕೇತ ಎಂದು ಮಾತನಾಡಬೇಡಿ; ದೇಶಭಕ್ತರಿಗೆ ಕೋಪ ಬಂದೀತು. ಆ ಸ್ಥಾನದಲ್ಲಿ ದಿನನಿತ್ಯದ ಕೆಲಸವೇನಿರುವುದಿಲ್ಲ, ಸಂಬಳ ಎಪ್ಪತ್ತು ಸಾವಿರದಷ್ಟಿರುತ್ತದೆ. ತುಂಬಾ ಕೆಲಸ ಮಾಡದೆ ಅಷ್ಟು ದುಡ್ಡು ಭೈರಪ್ಪನವರಿಗೆ ಸಿಗುತ್ತಿರುವಾಗ ಅವರು ಭಯಂಕರ ಸೋಮಾರಿಗಳಾಗಿ ಹಾಸಿಗೆ ಬಿಟ್ಟೇಳದೆ ಇರಬೇಕಿತ್ತಲ್ಲವೇ? ಅವರ್ಯಾಕೆ ಇನ್ನೂ ಇಂಥ ಪತ್ರ ಬರೆಯುತ್ತಾ, ಅನೇಕ ಸಮಾರಂಭಗಳಲ್ಲಿ ಭಾಗವಹಿಸುತ್ತಾ, ಚರ್ಚಿಸುತ್ತಾ ಚಟುವಟಿಕೆಯಿಂದಿದ್ದಾರೆ? ಮನುಷ್ಯನ ದುಡಿಮೆ ತಿನ್ನುವುದಕ್ಕೆ ಮಾತ್ರ ಸೀಮಿತವಲ್ಲ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೆ. ತಿಂಗಳಿಗೆ ಐದು ಕೆಜಿ ಅಕ್ಕಿ ಉಚಿತವಾಗಿ ಸಿಗುವ ಕಾರಣಕ್ಕೆ ಜನರು ಸೋಮಾರಿಗಳಾಗಿಬಿಡುವ ಹಾಗಿದ್ದರೆ ಅನಿಲ ಭಾಗ್ಯ, ಪೆಟ್ರೋಲ್ ಭಾಗ್ಯ, ಡೀಸೆಲ್ ಭಾಗ್ಯ, ಟ್ಯಾಕ್ಸ್ ಭಾಗ್ಯ ಪಡೆಯುವ ಮಧ್ಯಮವರ್ಗಗಳೆಲ್ಲ ಸೋಮಾರಿಗಳಾಗಿ ಎಷ್ಟೋ ವರುಷಗಳಾಗಿರಬೇಕಿತ್ತು. ತಿನ್ನುವುದರ ಹೊರತಾಗಿ ಮನುಷ್ಯನಿಗೆ ಬೇರೆ ಖರ್ಚೇ ಇರುವುದಿಲ್ಲ ಎಂಬ ಭಾವನೆ ಪುಸ್ತಕಗಳಿಗೆ, ಸುತ್ತಾಟಕ್ಕೆ ಸಾವಿರಾರು ರುಪಾಯಿಗಳನ್ನು ಖರ್ಚು ಮಾಡುವ ಸಾಹಿತಿಯೊಬ್ಬರಿಗೆ ಮೂಡಿರುವುದು ಅಚ್ಚರಿ ಮೂಡಿಸುತ್ತದೆ.
ಮೈಸೂರಿನ ಹೇರ್ ಕಟಿಂಗ್ ಸಲೂನಿನಿಂದ ಇದ್ದಕ್ಕಿದ್ದಂತೆ ಅಮೆರಿಕಾದ ಗ್ರೇಟ್ ಡಿಪ್ರೆಷನ್ ಕಡೆಗೆ ನಡೆದುಬಿಡುತ್ತಾರೆ ಭೈರಪ್ಪನವರು. ಭಾರತಕ್ಕೂ, ಅಮೆರಿಕಾಕ್ಕೂ ಸ್ಥಳದಲ್ಲಿ, ಜನರ ಸಂಖೈಯಲ್ಲಿ, ಪೌಷ್ಟಿಕತೆಯಲ್ಲಿ ಇರುವ ಅಪಾರ ವ್ಯತ್ಯಾಸವನ್ನು ಗುರುತಿಸುವ ಗೋಜಿಗೆ ಹೋಗದೆ ರೂಸ್ ವೆಲ್ಟ್ ಮಾಡಿದ್ದೇ ಸರಿ ಎಂದುಬಿಡುತ್ತಾರೆ. ವಿಪರ್ಯಾಸ ನೋಡಿ ಭಾರತೀಯ ಸಂಸ್ಕೃತಿ, ಭಾರತೀಯ ಪರಂಪರೆ ಎಂದು ಇರುವುದಕ್ಕಿಂತಲೂ ಹೆಚ್ಚು ವೈಭವೀಕರಿಸುತ್ತಾ ಉಳಿದೆಲ್ಲವನ್ನೂ ಹೀಗಳೆಯುವ ಸಂಸ್ಕೃತಿಗೆ ಸೇರಿರುವ ಭೈರಪ್ಪನವರು ಕೊನೆಗೆ ಅಮೆರಿಕಾದ ಉದಾಹರಣೆ ನೀಡುತ್ತಾರೆ! ಅಮೆರಿಕಾದ ಸಂಸ್ಕೃತಿಯನ್ನು ಹೀಗಳೆಯುವವರೂ ಇವರೇ ಎನ್ನುವುದನ್ನು ತಮ್ಮ ಪದಪುಂಜದಿಂದ ಮರೆಸಿಬಿಡುತ್ತಾರೆ. ಐಟಿಯನ್ನು ಹೊಗಳುತ್ತಾರೆ, ಬೆಂಗಳೂರು ಸಿಲಿಕಾನ್ ವ್ಯಾಲಿ ಆಗಿರುವುದರ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ, ಕೊನೆಗೆ ತಮ್ಮ ಕಾದಂಬರಿಗಳಲ್ಲಿ ಪದೇ ಪದೇ ಓದಿದ ಜನರಿಂದಾಗುವ ಸಂಸ್ಕೃತಿ ನಾಶದ ಬಗ್ಗೆ ಭಾವನಾತ್ಮಕವಾಗಿ ಬರೆದು ಹೆಸರು ಮಾಡುತ್ತಾರೆ! ಪಶ್ಚಿಮದ್ದೆಲ್ಲವೂ ಬೇಕು, ಆದರೆ ಸಂಸ್ಕೃತಿ ಮಾತ್ರ ಭಾರತೀಯದ್ದೇ ಆಗಿರಬೇಕು ಎಂದರದು ಸಾಧ್ಯವೇ?
ಭೈರಪ್ಪನವರ ಪತ್ರದಲ್ಲಿ ಅನೇಕ ಒಪ್ಪಿತ ಅಂಶಗಳಿವೆ. ಉದ್ಯೋಗ ಸೃಷ್ಟಿ, ಕೊಳ್ಳುವ ಸಾಮರ್ಥ್ಯದ ಹೆಚ್ಚಳವೆಲ್ಲವೂ ಅಗತ್ಯವಾಗಿ ಎಲ್ಲಾ ಸರಕಾರಗಳು ದೂರದೃಷ್ಟಿಯಿಟ್ಟು ಮಾಡಲೇಬೇಕಾಗಿರುವ ಕೆಲಸ. ಬೇಸರದ ಸಂಗತಿಯೆಂದರೆ ಈಗಿರುವ ಎಲ್ಲಾ ಪಕ್ಷಗಳು ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಷ್ಟೇ ಕೆಲಸ ಮಾಡುತ್ತವೆ. ಭೈರಪ್ಪನವರು ಜಾಣ್ಮೆ ಚಾಣಾಕ್ಷತನವನ್ನು ಬದಿಗಿಟ್ಟು ಟೀಕಿಸುವ ಮನಸ್ಸು ಮಾಡಿದ್ದರೆ ಸಿದ್ಧರಾಮಯ್ಯನವರ ಸರಕಾರದ ಕಾರ್ಯವೈಖರಿಯನ್ನು ಟೀಕಿಸುವುದಕ್ಕೆ ಬೇಕಾದಷ್ಟು ವಿಷಯಗಳಿತ್ತು. ಕಳೆದೆರಡು ತಿಂಗಳಿನಿಂದ ನಲವತ್ತರಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದಷ್ಟೇ ಸಾಲದೆ ಈಗಿರುವ ಸರಕಾರದ ನಿಷ್ಕ್ರಿಯತೆಯನ್ನು ತೋರಿಸಲು. ಮುಸ್ಲಿಂ ದ್ವೇಷ, ಅಹಿಂದದೆಡೆಗೆ ಅಸಹನೆಗಳನ್ನೆಲ್ಲಾ ಸೇರಿಸಿಬಿಟ್ಟರೆ ಲೇಖನವನ್ನು ಮತ್ತು ಲೇಖಕರನ್ನು ಇಷ್ಟ ಪಡುವ ಜನರ ಸಂಖೈಯನ್ನು ಹೆಚ್ಚಿಸಿಕೊಳ್ಳಬಹುದೇ ಹೊರತು ಲೇಖನದಿಂದೇನೂ ಪರಿಣಾಮವಾಗುವುದಿಲ್ಲ.
ತಮ್ಮ ಬಗ್ಗೆ, ಬಾಲ್ಯದಲ್ಲಿ ಅವರು ಮಾಡಿದ ವಾರಾನ್ನದ ಬಗ್ಗೆ ವೈಯಕ್ತಿಕ ಟೀಕೆ ಮಾಡಿದ್ದು ಭೈರಪ್ಪನವರಿಗೆ ಬೇಸರ ಮೂಡಿಸಿದೆ. ಅದರ ಬಗ್ಗೆ ನನ್ನದೂ ಸಹಮತವಿದೆ. ಟೀಕೆಗಳು ವೈಯಕ್ತಿಕವಾಗಿಬಿಟ್ಟಾಗ ವಿಷಯ ಮರೆತುಹೋಗುತ್ತದೆ. ತಮಾಷೆ ಎಂದರೆ ವೈಯಕ್ತಿಕ ಟೀಕೆ ತಪ್ಪು ಎನ್ನುವ ಭೈರಪ್ಪನವರು ಅದೇ ಓಘದಲ್ಲಿ ತಮ್ಮನ್ನು ಟೀಕಿಸಿದವರನ್ನೆಲ್ಲಾ ‘ಆಳುವ ಧಣಿಗಳ ಬಂಟರು’ ಎಂದುಬಿಡುತ್ತಾರೆ. ಇದೂ ವೈಯಕ್ತಿಕ ಟೀಕೆಯೇ ಅಲ್ಲವೇ!
ಎಲ್ಲದಕ್ಕಿಂತ ಅಚ್ಚರಿ ಮೂಡಿಸಿದ್ದು ‘ನಾನು ಚಿಕ್ಕಮಗಳೂರಿನಲ್ಲಿ ಆಡಿದ್ದು ಗಂಭೀರವಾದ ವಿಷಯ. ಇದನ್ನು ದೇಶದ ಆರ್ಥಿಕ ತಜ್ಞರು ವಿಶ್ಲೇಷಿಸಬೇಕಾಗಿತ್ತು’ ಎಂಬ ಅವರ ಸಾಲು! ಇಂತಹ ಗಂಭೀರವಾದ ವಿಷಯದ ಬಗ್ಗೆ ಮಾತನಾಡಿರುವ ಭೈರಪ್ಪನವರು ಆರ್ಥಿಕ ತಜ್ಞರೇ?
ಭೈರಪ್ಪನವರ ಪತ್ರ ಮೂಲ: ವಿಜಯಕರ್ನಾಟಕ
No comments:
Post a Comment