ಮಾನ್ಯ ಸಚಿವರಾದ ಅಂಬರೀಷರವರಿಗೆ,
ಬಹಳ ದಿನಗಳ ನಂತರ ನಿಮ್ಮ ಮಾತುಗಳನ್ನು ಪತ್ರಿಕೆಗಳ ಮುಖಪುಟದಲ್ಲಿ ಕಂಡು ಸಂತಸವಾಯಿತು. ತೀರ ಇತ್ತೀಚೆಗೆ ಮಂಡ್ಯ ಜಿಲ್ಲೆಯ ರೈತ ಸಮುದಾಯದಲ್ಲಿ ತಲ್ಲಣ ಮೂಡಿದೆ. ಸಕ್ಕರೆ ನಾಡೆಂದೇ ಹೆಸರಾದ ಮಂಡ್ಯದಲ್ಲಿ ಕಬ್ಬಿಗೆ ಸಿಗುವ ದರದಲ್ಲಿ ವಿಪರೀತ ಇಳಿಕೆಯಾಗಿರುವ ಕಾರಣ, ಕಾರ್ಖಾನೆಗಳು ಹಣವನ್ನು ಸರಿಯಾಗಿ ಪಾವತಿಸದ ಕಾರಣ ಸಾಲದ ಸುಳಿಗೆ ಸಿಕ್ಕ ರೈತರು ಒಬ್ಬರ ಬೆನ್ನ ಹಿಂದೆ ಒಬ್ಬರಂತೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸರಣಿ ಸರಕಾರೀ ಹತ್ಯೆಗಳು ರಾಜ್ಯದೆಲ್ಲೆಡೆ ಹಬ್ಬುತ್ತಿದೆ. ಮಂಡ್ಯದ ಶ್ರೀರಂಗಪಟ್ಟಣದ ಚೆನ್ನೇನಹಳ್ಳಿಯ ರೈತ ರಾಜೇಂದ್ರ ನೇರವಾಗಿ ಸರ್ಕಾರಕ್ಕೆ ಡೆತ್ ನೋಟ್ ಬರೆದಿಟ್ಟು ಸತ್ತು ಹೋದರು. ಬೆಳಗಾವಿ ಅಧಿವೇಶನದಲ್ಲೂ ಇದರ ಬಗೆಗೆ ಚರ್ಚೆ ನಡೆದವು. ಪರಿಹಾರ ಪೂರ್ಣವಾಗಿ ಕಂಡಿಲ್ಲ. ಮಂಡ್ಯದ ಉಸ್ತುವಾರಿ ಸಚಿವರಾಗಿರುವ ತಾವು ರಾಜ್ಯದೆಲ್ಲಾ ರೈತರ ಪರವಾಗಿಯಲ್ಲದಿದ್ದರೂ ಮಂಡ್ಯದ ರೈತರ ಪರವಾಗಿ ಮಾತನಾಡಿದ್ದೀರ ಎಂದುಕೊಂಡೆ. ಉಹ್ಞೂ ಅದರ ಬಗ್ಗೆ ಪತ್ರಿಕೆಯಲ್ಲಿ ಏನೂ ಇರಲಿಲ್ಲ. ವಸತಿ ಸಚಿವರಾದ ತಾವು ತಮ್ಮ ಖಾತೆಗೆ ಸಂಬಂಧಪಟ್ಟಂತಹ ಲೋಪದೋಷಗಳ ಬಗ್ಗೆ ಮಾತನಾಡಿದ್ದೀರ ಎಂದುಕೊಂಡೆ. ಮತ್ತೆ ನನ್ನ ಊಹೆ ತಪ್ಪಾಯಿತು. ನೀವದೆಲ್ಲಾ ಮಾತನಾಡುತ್ತೀರ ಎಂದು ಊಹಿಸುವುದೇ ತಪ್ಪೆಂದು ಅರಿವಾಗಿದೆ.
ಆದರೆ ನೀವು ಮಾತನಾಡಿ ಪತ್ರಿಕೆಗಳಿಗೆ ಬಿಡುಗಡೆ ಮಾಡಿರುವುದು ಮಂಡ್ಯ ಜಿಲ್ಲೆಯ ಸ್ಥಳೀಯ ರಾಜಕಾರಣದಲ್ಲಿ ನಡೆದ ಅನೇಕ ನಿಗಮ ಮಂಡಳಿಗಳ ನೇಮಕ ನಡೆಸುವಾಗ ನಿಮ್ಮ ಮಾತನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಕೇಳಲಿಲ್ಲವೆಂದು. ರಾಜಕಾರಣವೆಂದರೆ ಪ್ರಬಲವಾಗಿರುವವರು ಎಲ್ಲೆಡೆಯೂ ತಮ್ಮ ಮಾತೇ ನಡೆಯಬೇಕೆಂದು ಬಯಸುವುದು ಸಾಮಾನ್ಯವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಅದಕ್ಕೇನೂ ಹೊರತಲ್ಲ. ಪಕ್ಕದ ಜಿಲ್ಲೆಯ ರಾಜಕಾರಣಿಯ ಪ್ರಭಾವ ಕಡಿಮೆಯಿರಬೇಕೆಂದು ಅವರು ಬಯಸುವುದು, ಅವರ ಪ್ರಭಾವಕ್ಕಿಂತ ನಿಮ್ಮ ಪ್ರಭಾವ ಜಿಲ್ಲೆಯಲ್ಲಿ ಹೆಚ್ಚಿರಬೇಕೆಂದು ನೀವು ಬಯಸುವುದೆಲ್ಲವೂ ಸರಿ. ಅದರ ಬಗ್ಗೆ ನಿಮ್ಮ ಅಸಹನೆ ವ್ಯಕ್ತಪಡಿಸಿದ್ದು ಪ್ರಜಾಪ್ರಭುತ್ವದ ಆರೋಗ್ಯದ ಲಕ್ಷಣ. ಇಂದು ಟಿವಿಯಲ್ಲಿ ಮತ್ತೆ ಅದರ ಬಗ್ಗೆಯೇ ಮಾತನಾಡಿದ್ದೀರಿ. ಅಪೆಕ್ಸ್ ಬ್ಯಾಂಕಿಗೆ ಅಮರಾವತಿ ಹೋಟೆಲಿನ ಮಾಲೀಕರನ್ನೋ ಅವರ ತಮ್ಮನನ್ನೋ ನೇಮಿಸಲಿಲ್ಲ ಎಂದು ಅಸಹನೆ ವ್ಯಕ್ತ ಪಡಿಸಿದ್ದೀರಿ. ತಮ್ಮ ಎಂದಿನ ವ್ಯಂಗ್ಯ, ಉಡಾಫೆಯ ದಾಟಿಯಲ್ಲಿ ಪತ್ರಕರ್ತರನ್ನು ಕಿಚಾಯಿಸಿದ್ದೀರಿ. ಪತ್ರಿಕಾಗೋಷ್ಟಿ ಮುಗಿದ ಮೇಲೆ ಅವರನ್ನು ಬಾಯಿಗೆ ಬಂದಂತೆ ಬಯ್ದಿರುತ್ತೀರಿ ಎಂಬುದೂ ಗೊತ್ತು. ನಿಮ್ಮ ಶಿಷ್ಯಂದಿರನ್ನು, ಪಟಾಲಂ ಅನ್ನು ಬೆಳೆಸಲು ಇರುವ ರೋಷಾಸಕ್ತಿಯಲ್ಲಿ ಕೊಂಚವಾದರೂ ನಿಮ್ಮ ರಾಜಕೀಯ ಕಾರ್ಯಕಲಾಪಗಳ ಕಡೆಗೆ ಇದ್ದಿದ್ದರೆ ಚೆನ್ನಾಗಿತ್ತು.
ಚಿಕ್ಕಂದಿನಿಂದ ನಿಮ್ಮ ಸಿನಿಮಾಗಳನ್ನು ನೋಡಿಯೇ ಬೆಳೆದವನು ನಾನು. ನಾಗರಹಾವು, ಅಂತ, ಪೂರ್ಣಚಂದ್ರ, ಒಲವಿನ ಉಡುಗೊರೆ, ಚಕ್ರವ್ಯೂಹ, ಮಸಣದ ಹೂವು, ರಂಗನಾಯಕಿ, ಶುಭಮಂಗಳ, ಪಡುವಾರಳ್ಳಿ ಪಾಂಡವರು…. ಒಂದಾ ಎರಡಾ ನಿಮ್ಮ ಅದ್ಭುತ ಅಭಿನಯದ ಯಶಸ್ವಿ ಚಿತ್ರಗಳ ಸಂಖೈ. ಮಂಡ್ಯದ ಗಂಡು ಸಿನಿಮಾ ಮಾಡಿ ಒಂದಷ್ಟು ಮಂಡ್ಯಕ್ಕೇ ಸೀಮಿತರಾದಿರೇನೋ. ಕಲ್ಬುರ್ಗಿಗೆ ಓದಲೋದಾಗ ‘ಊರು ಮಂಡ್ಯ’ ಎಂದಾಕ್ಷಣ ‘ಓ ನಮ್ ಅಂಬರೀಷ್ ಊರು’ ಎನ್ನುತ್ತಿದ್ದರು. ಅಷ್ಟರಮಟ್ಟಿಗೆ ನೀವು ಖ್ಯಾತರಾಗಿದ್ದಿರಿ. ಕರ್ನಾಟದಕದನೇಕ ಕಡೆ ‘ನಮ್ಮ’ವರಾಗಿದ್ರಿ. ನಿಮ್ಮ ಉಡಾಫೆ, ಸ್ನೇಹ, ಪ್ರೀತಿ, ಕಾಲೆಳೆಯುವಿಕೆ, ಬಯ್ಗುಳ, ಕುಡಿತ, ಇಸ್ಪೀಟು, ರೇಸುಗಳೆಲ್ಲವೂ ನಿಮ್ಮ ವ್ಯಕ್ತಿತ್ವವನ್ನು ಮೆಚ್ಚುವ, ಅಸೂಯೆ ವ್ಯಕ್ತಪಡಿಸುವ ಕಾರ್ಯಗಳೇ ಆಗಿದ್ದವು. ನೀವು ರಾಜಕಾರಣಕ್ಕೆ ಬರುವವರೆಗೆ…
ಕರ್ಣನೆಂದೇ ಫೇಮಸ್ಸು ನೀವು. ರಾಜಕಾರಣಿಯಾದಿರಿ. ಮಂಡ್ಯದಲ್ಲಿ ನಿಮ್ಮ ಖ್ಯಾತಿ ಜಾಸ್ತಿಯಿದ್ದ ಕಾರಣ ಅಲ್ಲಿಂದಲೇ ಚುನಾವಣೆಗೆ ನಿಂತಿರಿ. ಲೋಕಸಭೆಗೂ ಹೋದಿರಿ, ವಿಧಾನಸಭೆಗೂ ಹೋದಿರಿ ಅಲ್ಲಿ ಇಲ್ಲಿ ಎಲ್ಲಾ ಕಡೆ ಸಚಿವರೂ ಆಗಿದ್ದಿರಿ. ನಿಮಗಿದ್ದ ಖ್ಯಾತಿಗೆ ನೀವು ಕರ್ನಾಟಕದ ಮುಖ್ಯಮಂತ್ರಿಯಾದರೂ ಅಚ್ಚರಿಯಾಗುತ್ತಿರಲಿಲ್ಲ. ಆದರೆ ನೀವು ಮಾಡಿದ್ದಾದರೂ ಏನು? ರಾಜಕಾರಣಕ್ಕೆ ಬರುವುದಕ್ಕೆ ಮುಂಚೆ ನಿಮ್ಮ ಜೀವನಶೈಲಿ ಏನಿತ್ತೋ ಅದನ್ನೇ ನಂತರವೂ ಮುಂದುವರೆಸಿದಿರಿ. ನಿಮ್ಮ ಕುಡಿತ, ಇಸ್ಪೀಟು, ರೇಸು ಮತ್ತದಕ್ಕೆ ಜೊತೆ ಕೊಡುವ ಜನರಿಂದ ನಿಮ್ಮ ರಾಜಕೀಯ ವರ್ಚಸ್ಸನ್ನು ಆರಂಭದಿಂದಲೇ ಇಷ್ಟಿಷ್ಟೇ ಕೊಂದು ಹಾಕಿದಿರಿ. ನೀವು ಮಂಡ್ಯಕ್ಕೆ ಹೆಚ್ಚೇನು ಕೆಲಸ ಮಾಡದಿದ್ದರೂ ಕೇಳೋರಿರಲಿಲ್ಲ, ಮಂಡ್ಯಕ್ಕೆ ಬಂದು ಜನರೊಡನೆ ಬೆರೆತು ಅವರ ಕಷ್ಟ ಸುಖ ವಿಚಾರಿಸಿದರೂ ಸಾಕಿತ್ತು. ಬೇರೆಯವರ ಮುಂದೆ ‘ನನ್ನ ಮಾತು ನಡೆಯುತ್ತಿಲ್ಲ’ ಎಂದು ಅವಲತ್ತುಕೊಳ್ಳುವ ಹಾಗಿರಲಿಲ್ಲ. ಆರಂಭಿಕ ದಿನಗಳಲ್ಲಿ ಪಕ್ಷ ಬದಲಿಸಿದರೂ ಗೆದ್ದು ಬಿಟ್ಟಿರಿ. ಮಂಡ್ಯದವರು ನಮ್ಮನ್ನು ಎಲ್ಲಿ ಸೋಲಿಸುತ್ತಾರೆ ಎಂಬ ಅಹಂ ಬೆಳೆದುಬಿಟ್ಟಿತ್ತು ನಿಮ್ಮಲ್ಲಿ. ಬಹುಶಃ ಅರಕೆರೆ ಗ್ರಾಮದಲ್ಲೇ ಅಲ್ಲವೇ ಊರಿನವರು ‘ಏನಯ್ಯಾ ಕೆಲಸ ಮಾಡ್ಕೊಟ್ಟಿದ್ದೀಯ’ ಅಂತ ಅಟ್ಟಿಸಿಕೊಂಡು ಬಂದು ನೀವು ಕಾರ್ಯಕರ್ತರೊಬ್ಬರ ಬೈಕತ್ತಿ ಬಚಾವಾಗಿದ್ದು. ನಂತರ ಸೋಲು ಕಂಡಿರಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬಿಟ್ಟಿರಿ. ನಿಮ್ಮ ಕೆಲಸದಿಂದಲ್ಲ, ಕಾರ್ಯದಿಂದಲ್ಲ; ನಿಮಗೆ ಹೆಚ್ಚೆಚ್ಚು ಓಟು ಬಿದ್ದಿದ್ದು ‘ಮುಂದಿನ ಎಲೆಕ್ಷನ್ನಿಗೆ ನಿಲ್ಲೋಕೆ ನಾನಿರ್ತೀನೋ ಹೋಗೇಬಿಡ್ತೀನೋ’ ಎಂದು ನೀವು ಕಣ್ಣೀರಾಕಿದ್ದು ನಿಮ್ಮನ್ನು ಗೆಲ್ಲಿಸಿತು. ನಮ್ ಅಣ್ಣಂಗೆ ಹುಷಾರೇ ಇಲ್ಲಪ್ಪೋ. ಈ ಸಲ ಗೆಲ್ಲಿಸಿಬಿಡೋಣ ಅಂತ ನಿಮಗೆ ಓಟು ಹಾಕಿದವರೇ ಜಾಸ್ತಿ. ಗೆದ್ದಿರಿ, ವಸತಿ ಸಚಿವರೂ ಆದಿರಿ.
ಈ ಬಾರಿಯಾದರೂ ಕೆಲಸ ಮಾಡುತ್ತೀರೆಂದು ಕೆಲವರಾದರೂ ಜನರು ನಂಬಿದ್ದರು. ಆಗ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ರಮ್ಯಾ ನಿಂತಿದ್ದರು. ನಿಮ್ಮ ಬೆಂಬಲವೂ ಇತ್ತು. ಗೆದ್ದು ಎಂ.ಪಿಯಾದರು. ಗೆದ್ದ ಮೇಲೆ ಜನರ ನಿರೀಕ್ಷೆಯನ್ನು ಹುಸಿಗೊಳಿಸಿ ರಮ್ಯಾ ಊರೂರು ಸುತ್ತಲಾರಂಭಿಸಿದರು. ಅದರ ಬಗ್ಗೆಯೂ ನಿಮಗೆ ಅಸಹನೆ ಉಂಟಾಯಿತು. ಗೆದ್ದ ಮೇಲೆ ನಿಮ್ಮ ಮಾತನ್ನು ಕೇಳುತ್ತಿರಲಿಲ್ಲವೋ ಏನೋ. ಸಚಿವರಾದ ನೀವು ಮಂಡ್ಯದ ಹೊರವಲಯದಲ್ಲಿರುವ ಅಮರಾವತಿ ಹೋಟೆಲಿನಲ್ಲಿ ಕುಳಿತು ಕುಡಿದು ರಮ್ಯಾ ಬಗ್ಗೆ ಆಡಬಾರದ ಮಾತುಗಳನ್ನು ಆಡುತ್ತೀರೆಂಬ ವದಂತಿಗಳು ಅಮರಾವತಿಯ ಕೆಲಸಗಾರರಿಂದ ಊರೆಲ್ಲಾ ಹಬ್ಬಿ ನಿಮ್ಮ ಹೆಸರನ್ನು ಮತ್ತಷ್ಟು ಕೆಡಿಸಿತು. ಆ ವದಂತಿಗಳಲ್ಲಿ ನಿಜವೆಷ್ಟೋ ಸುಳ್ಳೆಷ್ಟೋ ನೀವೇ ಹೇಳಬೇಕು. ಮುಂದಿನ ಲೋಕಸಭಾ ಚುನಾವಣೆ ನಡೆಯಬೇಕಾದ ಸಮಯದಲ್ಲಿ ನೀವು ಹುಷಾರು ತಪ್ಪಿ ಫಾರಿನ್ನಿಗೆಲ್ಲಾ ಹೋಗಿ ಚಿಕಿತ್ಸೆ ಪಡೆದುಕೊಂಡ್ರಿ. ಕಾರಣ ಮತ್ತದೇ ಕುಡಿತ, ಜೊತೆಗೆ ವಯಸ್ಸು. ನಿಮ್ಮ ಚಟಗಳಿಂದ ಆರೋಗ್ಯ ಹದಗೆಟ್ಟು ಅದಕ್ಕೆ ಜನರ ಕೋಟಿ ಹಣ ಖರ್ಚಾಯಿತು. ಬಹುಶಃ ನೀವು ರಾಜಕಾರಣಕ್ಕೆ ಬರದೇ ಹೋಗಿದ್ದರೆ ಕಲಾವಿದನ ಆರೋಗ್ಯ ಸರಕಾರ ನೋಡಿಕೊಳ್ಳಬೇಕು ಎನ್ನುತ್ತಿದ್ದೆವು. ರಾಜಕಾರಣಿಯಾಗಿದ್ದಕ್ಕೆ ಟೀಕೆ ಎದುರಿಸಿದಿರಿ. ಆರೋಗ್ಯ ಸರಿಪಡಿಸಿಕೊಂಡು ಚುನಾವಣಾ ಪ್ರಚಾರಕ್ಕೆ ಬಂದಿರಿ. ಇಷ್ಟೊತ್ತಿಗಾಗಲೇ ನಿಮಗೆ ರಮ್ಯಾ ಸೋಲಬೇಕೆಂದೆನ್ನಿಸಿತ್ತು. ಬಹಿರಂಗವಾಗಿಯೇ ವಿರೋಧ ಮಾಡಿದಿರಿ. ನಿಮ್ಮ ಮತ್ತು ನಿಮ್ಮ ಬೆಂಬಲಿಗರ ಅಪಪ್ರಚಾರದ ನಡುವೆಯೂ ರಮ್ಯಾ ಸೋತಿದ್ದು ಕಡಿಮೆ ಅಂತರದಿಂದ. ನಿಜವಾದ ಸೋಲು ನಿಮ್ಮದಾಗಿತ್ತು. ಆ ರೀತಿ ಮಾಡಿದ ನೀವು ಈಗ ಜಿಲ್ಲಾ ರಾಜಕೀಯದಲ್ಲಿ ನಿಮ್ಮ ಮಾತು ನಡೆಯುತ್ತಿಲ್ಲವೆಂದು ಪತ್ರ ಬರೆದರೆ ಅದಕ್ಕಿರುವ ಬೆಲೆಯಾದರೂ ಏನು ಸ್ವಾಮಿ?
ಅಂತೂ ಏನೋ ಒಂದು ಮಾತನಾಡಿದಿರಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವುದಷ್ಟೇ ನಮಗಿರುವ ಭಾಗ್ಯ. ಇದಕ್ಕೆ ಮುಂಚೆ ನೀವ್ಯಾವಾಗ ಮಾತನಾಡಿದ್ದು ಎಂದು ನೆನಪಿನ ಪುಟ ತಿರುವಿದವನಿಗೆ ಕಂಡಿದ್ದು ಬೆಂಗಳೂರಿನ ರೇಸ್ ಕೋರ್ಸನ್ನು ಬೇರೆಡೆಗೆ ಸ್ಥಳಾಂತರಿಸಬಾರದೆಂದು ನೀವು ಗುಡುಗಿದ್ದು! ರೇಸು, ನಿಮ್ಮ ಶಿಷ್ಯ ಪಟಾಲಂ, ಕುಡಿತ, ಇಸ್ಪೀಟುಗಳೆಲ್ಲವನ್ನು ಬಿಟ್ಟೂ ಸಮಾಜವಿದೆ ಎಂಬುದನ್ನು ಮರೆಯಬೇಡಿ. ಅಂಬರೀಷ್ ಭ್ರಷ್ಟಾಚಾರ ಮಾಡೋದಿಲ್ಲ ಎನ್ನುವುದು ಎಷ್ಟು ಜನಜನಿತವೋ ಅಂಬರೀಷ್ ಹಿಂದೆ ಓಡಾಡೋರು ಸರೀ ದುಡ್ ಮಾಡ್ಕೋತಾರೆ ಅನ್ನೋದು ಅಷ್ಟೇ ಜನಜನಿತ.
ಇತ್ತೀಚೆಗೆ ಮತ್ತೆ ತಪಾಸಣೆಗೆ ಆಸ್ಪತ್ರೆಗೆ ಹೋಗಿದ್ದನ್ನು ಕೇಳಿದೆ. ಆರೋಗ್ಯದ ಕಡೆ ಗಮನ ಕೊಡಿ. ಸಾಧ್ಯವಾದರೆ ಕ್ಷೇತ್ರಕ್ಕೆ, ನಿಮ್ಮ ಇಲಾಖೆಗೆ ಒಳ್ಳೆಯದನ್ನು ಮಾಡಿ, ಆಗಲಿಲ್ಲವಾ ಕೆಟ್ಟವರ ದಂಡನ್ನಂತೂ ಮಂಡ್ಯದಲ್ಲಿ ಬೆಳೆಸಬೇಡಿ.
ಇಂತಿ,
ನಟ ಅಂಬರೀಷನ ಅಭಿಮಾನಿ.
ಡಾ. ಅಶೋಕ್. ಕೆ. ಆರ್
A very incisive letter. It has a tinge of humor, guilt of a voter and pain of a victim. I request you to mail this to rebel star's address.
ReplyDeletewill definitely try to mail it to him.
Delete