Dr Ashok K R
ಇದು ಮಕ್ಕಳು ಮುಖ್ಯ ಭೂಮಿಕೆಯಲ್ಲಿರುವ ದೊಡ್ಡವರ ಚಿತ್ರ. ಜೈಲು ಸೇರಿರುವ ಅಪ್ಪ, ಅಪ್ಪನನ್ನು ಜೈಲಿನಿಂದ ಹೊರತರುವುದಕ್ಕಾಗಿಯೇ ದುಡ್ಡು ಕೂಡಿಡುವ ಅಮ್ಮ. ಹಣದ ಕೊರತೆಯಿಂದ ಇರುವ ಇಬ್ಬರು ಮಕ್ಕಳನ್ನು ಶಾಲೆಯಿಂದ ಬಿಡಿಸಿ ರೈಲ್ವೆ ಹಳಿಯ ಮೇಲೆ ಬಿದ್ದ ಕಲ್ಲಿದ್ದಿಲನ್ನು ಸಂಗ್ರಹಿಸುವ ಕೆಲಸಕ್ಕೆ ಹಚ್ಚುತ್ತಾಳೆ. ದೊಡ್ಡದೊಂದು ಮೇಲ್ಸೇತುವೆ ಪಕ್ಕವಿರುವ ಕೊಳಗೇರಿಯಲ್ಲಿ ವಾಸ. ಮನೆಯಲ್ಲೊಬ್ಬಳು ವಯಸ್ಸಾದ ಅಜ್ಜಿ, ತಿನ್ನೋದು, ಮಲಗೋದು ಬಿಟ್ಟರೆ ನನ್ನಿಂದ ಮತ್ತೇನು ಆಗುತ್ತಿಲ್ಲವಲ್ಲ ಎಂದು ಕೊರಗುವ ಅಜ್ಜಿ. ಆ ಎರಡು ಮಕ್ಕಳೇ ಚಿತ್ರದ ಜೀವಾಳ. ಕಾಗೆಗೊಂದಷ್ಟು ಅನ್ನ ಹಾಕಿ, ಅವುಗಳು ಅನ್ನ ತಿನ್ನಲು ಬಂದಾಗ ಅವುಗಳ ಗೂಡಿಗೆ ಕನ್ನ ಹಾಕಿ ಮೊಟ್ಟೆ ಕದಿಯುತ್ತಾರೆ; ಹಸಿ ಹಸಿ ಕುಡಿಯುತ್ತಾರೆ. ಅವರ ನಿಜ ಹೆಸರೇ ಮರೆತುಹೋಗಿ ಸಣ್ಣವ ಚಿಕ್ಕ ಕಾಕಮೊಟ್ಟೈಯಾದರೆ (ಕಾಗೆಮೊಟ್ಟೆ) ದೊಡ್ಡವ ದೊಡ್ಡ ಕಾಕಮೊಟ್ಟೈಯಾಗುತ್ತಾನೆ! ‘ಕೋಳಿ ಮೊಟ್ಟೆ ಖರೀದಿಸುವ ಶಕ್ತಿಯಿಲ್ಲ, ಕಾಗೆ ಮೊಟ್ಟೆಯಾದರೇನು? ಅದೂ ಪಕ್ಷೀನೆ ಅಲ್ಲವೇ’ ಎನ್ನುವ ಅಜ್ಜಿ ಕೆಲವೊಂದು ಆಹಾರ ಶ್ರೇಷ್ಠ ಕೆಲವೊಂದು ನಿಕೃಷ್ಠ ಎಂದು ತೀರ್ಮಾನಿಸಿಬಿಡುವ ಜನರಿಗೆ ಉತ್ತರವಾಗುತ್ತಾಳೆ.
ಕಾಗೆ ಗೂಡಿರುವ ಮರವನ್ನು ವಾಣಿಜ್ಯ ಸಂಕೀರ್ಣ ಕಟ್ಟುವ ಉದ್ದೇಶದಿಂದ ಕೆಡವುದರೊಂದಿಗೆ ಚಿತ್ರ ಮಗ್ಗಲು ಬದಲಿಸುತ್ತದೆ. ಇದೇ ಸಮಯಕ್ಕೆ ನ್ಯಾಯ ಬೆಲೆ ಅಂಗಡಿಯಿಂದ ಎಲ್ಲರಿಗೂ ಉಚಿತ ಟಿ.ವಿ ಹಂಚಲಾಗುತ್ತದೆ. ಅಮ್ಮ ಟಿ.ವಿ ತರುತ್ತಾಳೆ, ಮತ್ತೊಂದು ಟಿ.ವಿ ಅಜ್ಜಿಯ ಕೋಟಾದಲ್ಲಿ ಬಂದು ಬಿದ್ದಿರುತ್ತದೆ! ‘ಅಕ್ಕಿ ಸಿಗಲಿಲ್ಲವೇನಮ್ಮ’ ಎಂಬ ಪ್ರಶ್ನೆಗೆ ‘ಸ್ಟಾಕ್ ಇಲ್ಲವಂತೆ’ ಎಂಬ ಉತ್ತರ ಸಿಗುತ್ತದೆ! ನಮ್ಮ ಪ್ರಾಮುಖ್ಯತೆಗಳೇ ಬದಲಾಗಿಬಿಡುತ್ತಿರುವುದನ್ನು ಒಂದು ನಿಮಿಷದ ಚಿಕ್ಕ ದೃಶ್ಯದ ಮುಖಾಂತರ ನಿರ್ದೇಶಕ ಮಣಿಕಂಠನ್ ತಿಳಿಸಿಕೊಡುತ್ತಾರೆ. ಚಿತ್ರದುದ್ದಕ್ಕೂ ಇಂತಹ ದೃಶ್ಯಗಳು ಹೇರಳವಾಗಿವೆ. ನಿರ್ದೇಶಕನ ಸೂಕ್ಷ್ಮತೆ ತೋರ್ಪಡಿಸುವ ದೃಶ್ಯಗಳಿವು. ಮತ್ತೊಂದು ದೃಶ್ಯದಲ್ಲಿ ಕುಡಿಯುವ ನೀರಿನ ಸಲುವಾಗಿ ಬಿಂದಿಗೆ ಎತ್ತಿಕೊಂಡು ಹೊರಹೋಗುತ್ತಾಳೆ. ಬಿಂದಿಗೆಯಲ್ಲಿ ಚೂರೇ ಚೂರು ನೀರಿರುತ್ತದೆ. ನೀರು ಅಧಿಕವಿರುವ ನಮ್ಮ ಮನೆಗಳಲ್ಲಾದರೆ ಬಿಂದಿಗೆಯಲ್ಲುಳಿದ ಚೂರು ನೀರನ್ನು ಚೆಲ್ಲಿ ಬಿಡುತ್ತೇವೆ. ನೀರು ಕೂಡ ಲಕ್ಷುರಿಯಾದ ಕೊಳಗೇರಿಯಲ್ಲಿ ಆ ಚುಟುಕು ನೀರನ್ನು ಕೈ ತೊಳೆಯಲುಪಯೋಗಿಸುವ ಬಕೇಟಿಗೆ ಹಾಕುತ್ತಾಳೆ. ಚಿತ್ರಕಥೆ ಮಾಡಲು ಶ್ರಮ ಪಡದಿದ್ದರೆ ಇಂತಹ ಸೂಕ್ಷ್ಮಗಳನ್ನು ತೋರಿಸಲಾದೀತೆ?
ಕಾಗೆ ಗೂಡಿದ್ದ ಮರದ ಜಾಗದಲ್ಲಿ ಪಿಜ್ಜಾ ಅಂಗಡಿಯೊಂದು ಪ್ರಾರಂಭವಾಗುತ್ತದೆ. ಖ್ಯಾತ ಚಿತ್ರನಟ ಸಿಂಬು ಅದನ್ನು ಉದ್ಘಾಟಿಸುತ್ತಾನೆ. ಬಾಯಿ ಚಪ್ಪರಿಸಿ ತಿನ್ನುತ್ತಾನೆ. ಕೊಳಗೇರಿಯ ಮಕ್ಕಳಿದನ್ನು ಗಮನಿಸುತ್ತಾರೆ, ಖುಷಿ ಪಡುತ್ತಾರೆ ಮತ್ತು ಹೊರಟುಹೋಗುತ್ತಾರೆ. ಆದರೆ ನಮ್ಮ ನಾಯಕರಿಗೆ ಅದನ್ನು ತಿನ್ನಲೇಬೇಕೆಂಬ ಮನಸ್ಸಾಗುತ್ತದೆ. ಮುನ್ನೂರು ರುಪಾಯಿ ಬೆಲೆಯ ಪಿಜ್ಜಾ ಖರೀದಿಸಬೇಕೆಂಬುದೇ ಅವರಿಬ್ಬರ ಗುರಿಯಾಗಿಬಿಡುತ್ತದೆ. ಚಿತ್ರದಲ್ಲಿ ಪಿಜ್ಜಾ ನೋಡಿಕೊಂಡು ದೋಸೆ ಪಿಜ್ಜಾ ತಯಾರಿಸುತ್ತಾಳೆ ಅಜ್ಜಿ, ಮಕ್ಕಳಿಗೆ ರುಚಿಸುವುದಿಲ್ಲ. ಹೆಚ್ಚೆಚ್ಚು ಕಲ್ಲಿದ್ದಲ್ಲು ಸಿಗುವ ಜಾಗವನ್ನು ಗ್ಯಾಂಗ್ ಮನ್ ‘ಫ್ರೂಟ್ ಜ್ಯೂಸ್’ ತೋರಿಸುತ್ತಾನೆ. ಅಂತೂ ಇಂತೂ ಮುನ್ನೂರು ರುಪಾಯಿ ಕಲೆ ಹಾಕಿ ಅಂಗಡಿಗೆ ಹೋದರೆ ಕೊಳಗೇರಿಯ ಮಕ್ಕಳನ್ನು ಸೆಕ್ಯುರಿಟಿ ಒಳಗೇ ಸೇರಿಸುವುದಿಲ್ಲ. ಒಳ್ಳೆ ಬಟ್ಟೆ ಹಾಕಿಕೊಂಡರೆ ಬಿಡುತ್ತಾರೆ ಎಂಬ ಫ್ರೂಟ್ ಜ್ಯೂಸ್ ಮಾತು ಕೇಳಿ ಬಟ್ಟೆ ಖರೀದಿಸಲು ದುಡಿಯತೊಡಗುತ್ತಾರೆ. ಜಾಣ್ಮೆಯಿಂದ ಹೊಸ ಬಟ್ಟೆ ಖರೀದಿಸಿ ಅಂಗಡಿಯ ಬಳಿ ಹೋದರೆ ಮತ್ತೆ ಸೆಕ್ಯುರಿಟಿ ತಡೆಯುತ್ತಾನೆ. ಅಂಗಡಿಯ ಮ್ಯಾನೇಜರ್ ಬಂದು ದೊಡ್ಡ ಕಾಗೆಮೊಟ್ಟೆಗೆ ರಪ್ಪಂತ ಕೆನ್ನೆಗೆ ಹೊಡೆಯುತ್ತಾನೆ. ಕೊಳಗೇರಿಯ ಇತರೆ ಹುಡುಗರು ಅದನ್ನು ವೀಡಿಯೋ ಮಾಡಿಕೊಂಡುಬಿಡುತ್ತಾರೆ. ಇದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತದೆ. ಸುದ್ದಿ ಪ್ರತಿಭಟನೆಯ ಸದ್ದಾಗುವ ಮೊದಲು ಪಿಜ್ಜಾ ಅಂಗಡಿಯವರೇ ಹುಡುಗರಿಬ್ಬರನ್ನೂ ಸತ್ಕರಿಸಿ ಪಿಜ್ಜಾ ತಿನ್ನಿಸುತ್ತಾರೆ!
ಇಡೀ ಚಿತ್ರದಲ್ಲಿ ಜಾಗತೀಕರಣದ ವಿವಿಧ ಮುಖವಾಡಗಳ ದರುಶನವಾಗುತ್ತದೆ. ಪ್ರಕೃತಿಯನ್ನು ಬದಿಗೆ ಸರಿಸಿ ಪ್ರತಿಯೊಂದನ್ನು ವ್ಯಾವಹಾರಿಕ ಮಾಡಿಬಿಡುವುದು ಮೊದಲ ಹೆಜ್ಜೆ. ನಮಗೆ ಬೇಡವಾದ ವಸ್ತುವನ್ನು ಜಗಮಗಿಸುವ ಬೆಳಕಿನಲ್ಲಿಟ್ಟು, ಖ್ಯಾತಿ ಪಡೆದ ವ್ಯಕ್ತಿಗಳಿಂದ ಅದಕ್ಕೆ ಪ್ರಚಾರ ಗಿಟ್ಟಿಸಿ (ಇತ್ತೀಚಿನ ಮ್ಯಾಗಿ ಮತ್ತದರ ರೂಪದರ್ಶಿಗಳ ವಿಚಾರ ನಿಮಗೆ ನೆನಪಿರಬೇಕು) ನಮ್ಮನ್ನು ಪ್ರಚೋದನೆಗೆ ಒಳಪಡಿಸುವುದು ಎರಡನೆಯ ಹೆಜ್ಜೆ. ಆ ಪ್ರಚೋದನೆ ಯಾವ ಮಟ್ಟಕ್ಕಿರುತ್ತದೆ ಎಂದರೆ ನಮ್ಮಿಡೀ ಜೀವನದ ಗುರಿಯೇ ಆ ಬೇಡದ ವಸ್ತುವನ್ನು ಪಡೆಯುವುದಾಗಿ ಬಿಡುತ್ತದೆ, ಹೆಚ್ಚೆಚ್ಚು ಹಣ ದುಡಿಯುವುದಕ್ಕೂ ಅದೇ ಕಾರಣವಾಗುತ್ತದೆ. ಕೊಳಗೇರಿಯ ಇತರ ಮಕ್ಕಳು ಆಟವಾಡುತ್ತಾ ತರಲೆ ಮಾಡುತ್ತಾ ಕಾಲ ಕಳೆದರೆ ಪಿಜ್ಜಾದ ಆಸೆಗೆ ಬಿದ್ದವರು ಹಣದ ಹಿಂದೆ ಬೀಳುತ್ತಾರೆ. ತಮ್ಮ ಬಾಲ್ಯತನವನ್ನೇ ಕಳೆದುಕೊಳ್ಳುತ್ತಾರೆ. ಸಂಬಂಧಗಳ ಮೌಲ್ಯಗಳನ್ನು ಕಳೆದುಕೊಳ್ಳುತ್ತಾರೆ. ಜೈಲಿನಲ್ಲಿರುವ ಅಪ್ಪ ಬರದೇ ಇದ್ದರೆ ಅಷ್ಟೇ ಹೋಯ್ತು, ನಮಗೆ ಪಿಜ್ಜಾ ಮುಖ್ಯ ಎಂಬ ಮಾತನ್ನಾಡುತ್ತಾರೆ! ಕಾರು, ಬಂಗಲೆ, ಸೈಟು, ಆಸ್ತಿಯೇ ಗುರಿಯಾಗಿಸಿಕೊಂಡ ದೊಡ್ಡವರು ಮಾಡುತ್ತಿರುವುದು ಇದನ್ನೇ ಅಲ್ಲವೇ? ನೀವು ಒಳಗೆ ಹೇಗಾದರೂ ಇರಿ Outlook ಮುಖ್ಯ ಎನ್ನುವುದು ಮೂರನೆಯ ಹೆಜ್ಜೆ. Outlook ಬದಲಿಸಿಕೊಂಡು ಹೋದಾಗ ಜಾಗತೀಕರಣ ಶ್ರೀಮಂತರ ಪರವೋ ಬಡವರ ಪರವೋ ಎಂಬುದು ವೇದ್ಯವಾಗುತ್ತದೆ. ಮತ್ತಿಲ್ಲಿ ಬಡವರನ್ನು ತಡೆಯುವುದು ಶ್ರೀಮಂತರಲ್ಲ, ಬದಲಾಗಿ ಶ್ರೀಮಂತರೇ ಸಂಬಳ ಕೊಟ್ಟು ಕೆಲಸಕ್ಕಿಟ್ಟುಕೊಂಡಿರುವ ಬಡವರೇ ಬಡವರನ್ನು ತಡೆಯುತ್ತಾರೆ, ವಿರೋಧಿಸುತ್ತಾರೆ. ಈ ಚಿತ್ರದಲ್ಲಿ ಸೆಕ್ಯುರಿಟಿಯವನು ಮಕ್ಕಳನ್ನು ತಡೆದಂತೆ, ಮಧ್ಯಮ ವರ್ಗದ ಮ್ಯಾನೇಜರ್ ಕಪಾಳಕ್ಕೆ ಬಿಗಿದಂತೆ. ಸಿರಿವಂತ ಒಳ್ಳೆಯವನಾಗಿಯೇ ಉಳಿದುಬಿಡುತ್ತಾನೆ! ಜನರು ತಮ್ಮ ವಿರುದ್ಧ ಪ್ರತಿಭಟಿಸುತ್ತಾರೆ ಎಂದರಿವಾದ ತಕ್ಷಣ ನಯವಂತಿಕೆಯ ಮುಖವಾಡವನ್ನು ದಿಢೀರನೆ ಧರಿಸಿ ಮತ್ತೆ ಒಳ್ಳೆಯವರಾಗಿಬಿಡುವುದು ಜಾಗತೀಕರಣದ ವಕ್ತಾರರ ಜಾಣ್ಮೆ! ಇಡೀ ಚಿತ್ರ ಜಾಗತೀಕರಣದ ಪರವಾಗಿ, ಪಿಜ್ಜಾದ ಪರವಾಗಿ, ಕೊಳ್ಳುಬಾಕ ಸಂಸ್ಕೃತಿಯ ಪರವಾಗಿ ಉಳಿದುಬಿಡುವ ಅಪಾಯವನ್ನು ಕೊನೆಯದೊಂದು ದೃಶ್ಯ ದೂರಮಾಡಿದೆ! ಅದನ್ನು ಚಿತ್ರದಲ್ಲಿಯೇ ನೋಡಿ!
No comments:
Post a Comment