Dr Ashok K R
ಸಿದ್ಧರಾಮಯ್ಯ ಸರಕಾರದ ಅನ್ನಭಾಗ್ಯ ಯೋಜನೆ ಮತ್ತೆ ಚರ್ಚೆಯ ವಿಷಯವಾಗಿದೆ. ಕಾರಣ ಎಸ್.ಎಲ್.ಭೈರಪ್ಪ, ಕುಂ.ವೀರಭದ್ರಪ್ಪ ಮತ್ತು ದೇಜಗೌ ಅದನ್ನು ವಿರೋಧಿಸುವ ಮಾತುಗಳನ್ನಾಡಿದ್ದಾರೆ. ಭೈರಪ್ಪನವರು ಅನ್ನಭಾಗ್ಯ ಸೋಮಾರಿಗಳನ್ನು ಹುಟ್ಟುಹಾಕುತ್ತಿದೆ, ಇದು ದೇಶ ನಾಶದ ಕೆಲಸ ಎಂದು ಗುಡುಗಿರುವ ಬಗ್ಗೆ ವರದಿಗಳು ಬಂದಿವೆ. ಇಲ್ಲಿ ಮೇಲೆ ಹೆಸರಿಸಿರುವ ಲೇಖಕರು ನಿಮಿತ್ತ ಮಾತ್ರ. ಅನ್ನಭಾಗ್ಯವೆಂಬುದು ಸೋಮಾರಿಗಳನ್ನು ತಯಾರಿಸುವ ಯೋಜನೆ ಎಂಬ ಭಾವನೆ ಅನೇಕರಲ್ಲಿದೆ. ಜನರ ದಿನವಹೀ ಮಾತುಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಸಿದ್ಧು ಸರಕಾರದ ಈ ಯೋಜನೆ ಟೀಕೆಗೆ ಗ್ರಾಸವಾಗಿದೆ. ಮತ್ತೀ ಟೀಕೆಯನ್ನು ಮಾಡುತ್ತಿರುವವರ ಆರ್ಥಿಕ ಸ್ಥಿತಿಗತಿಗಳನ್ನು ಗಮನಿಸಿದರೆ ಹೆಚ್ಚಿನಂಶ ಅವರು ಮಧ್ಯಮವರ್ಗದವರೇ ಆಗಿರುತ್ತಾರೆ. ಕೆಳ ಮಧ್ಯಮವರ್ಗದಿಂದ ಉಚ್ಛ ಮಧ್ಯಮವರ್ಗದೆಡೆಗೆ ಸಾಗುತ್ತಿರುವವರು, ಮಧ್ಯಮವರ್ಗದಿಂದ ಶ್ರೀಮಂತ ವರ್ಗಕ್ಕೆ ಸಾಗುತ್ತಿರುವವರ ಸಂಖೈ ಈ ಟೀಕಾಕಾರರಲ್ಲಿ ಹೆಚ್ಚಿದೆ.. ಈ ಅನ್ನಭಾಗ್ಯ ಯೋಜನೆ ನಿಜಕ್ಕೂ ಇಷ್ಟೊಂದು ಟೀಕೆಗೆ ಅರ್ಹವೇ?
ಮೊದಲಿಗೆ ಈ ಯೋಜನೆಗೆ ಇಟ್ಟ ಹೆಸರು ಟೀಕೆಗೆ ಅರ್ಹ. ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಆಹಾರವಿಲ್ಲದೆ ಕಂಗೆಟ್ಟು ಪ್ರಾಣಿ / ಮನುಷ್ಯ ಹಸಿವಿನಿಂದ ಸಾಯುವುದು ಪ್ರಕೃತಿ ರೂಪಿಸಿದ ಜನಸಂಖ್ಯಾ ನಿಯಂತ್ರಣ ನಿಯಮ. ಮಾನವ ಪ್ರಕೃತಿಯಿಂದ ದೂರ ಸರಿದು, ಪ್ರಕೃತಿಯೊಡ್ಡಿದ ಸವಾಲುಗಳನ್ನು ಎದುರಿಸಲಾರಂಭಿಸಿದ. ಬಹಳಷ್ಟು ಬಾರಿ ಸೋತ, ಕೆಲವೊಮ್ಮೆ ಗೆದ್ದ. ಇದಕ್ಕಿಂತಲೂ ಹೆಚ್ಚಾಗಿ Survival of the fittest ಎಂಬ ಪ್ರಕೃತಿಯ ನಿಯಮವನ್ನು ಮೀರುವುದಕ್ಕಾಗಿ ಮಾನವೀಯತೆಯ ಮೊರೆಹೊಕ್ಕ. ಈ ಮಾನವೀಯತೆಯ ಕಾರಣದಿಂದಲೇ ಅಲ್ಲವೇ ಅನ್ಯ ಮನುಷ್ಯನೊಬ್ಬ ಹಸಿವಿನಿಂದ ಸತ್ತರೆ, ಆಹಾರ ಸಿಗದೆ ಸತ್ತರೆ ‘ಕರುಳು ಚುರುಕ್’ ಎನ್ನುವುದು? ಮನುಷ್ಯ ನಿರ್ಮಿತ ಗಡಿಗಳು ದೇಶವನ್ನು ರಚಿಸಿ, ದೇಶದೊಳಗೊಂದಷ್ಟು ರಾಜ್ಯಗಳನ್ನು ಸೃಷ್ಟಿಸಿ ಮನುಷ್ಯನ ಸ್ವೇಚ್ಛೆಗಳಿಗೆ ಕಡಿವಾಣ ವಿಧಿಸಲು ಸಮಾಜ – ಸರಕಾರಗಳೆಲ್ಲ ರಚಿತವಾದ ನಂತರ ಸರಕಾರದ ಭಾಗವಾಗಿರುವ ಮನುಷ್ಯರಿಗೂ ಒಂದಷ್ಟು ಮಾನವೀಯತೆ ಇರಬೇಕೆಂದು ನಿರೀಕ್ಷಿಸಬಹುದು. ನೆರೆಯವನೊಬ್ಬ ಹಸಿವಿನಿಂದ ಸತ್ತಂತಾದರೆ ಅದರ ಹೊಣೆ ಸರಕಾರದ್ದಾಗುತ್ತದೆ. ಪ್ರಜೆಗಳ ಅಪೌಷ್ಟಿಕತೆಯನ್ನು, ಹಸಿವನ್ನು ಹೋಗಲಾಡಿಸುವುದು ಸರಕಾರದ ಆದ್ಯ ಕರ್ತವ್ಯವಾಗುತ್ತದೆ. ಇಷ್ಟೆಲ್ಲ ಯೋಚಿಸಿ ಯೋಜನೆಗಳನ್ನು ಸರಕಾರಗಳು ರೂಪಿಸುವುದು ಅಪರೂಪ, ರಾಜಕಾರಣಿಗಳ ಮುಖ್ಯ ದೃಷ್ಟಿ ಮುಂದಿನ ಚುನಾವಣೆಯಲ್ಲಿ ಒಂದಷ್ಟು ಹೆಚ್ಚಿನ ಮತಗಳು ಬೀಳಲು ಈ ಯೋಜನೆಯಿಂದ ಸಹಾಯವಾಗುತ್ತದಾ ಎನ್ನುವುದೇ ಆಗಿದೆ. ಓಟಿಗಾಗಿ ರಾಜಕೀಯ ಮಾಡುವುದು ತಪ್ಪೆಂದು ತೋರುತ್ತದಾದರೂ ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಯ ಗುರಿಯೇ ಚುನಾವಣೆಯಲ್ಲಿ ಗೆಲ್ಲುವುದಾಗಿರುವಾಗ ಅವರು ಮಾಡುವ ಪ್ರತೀ ಕೆಲಸವೂ ಮತಬ್ಯಾಂಕಿಗಾಗಿ ಅಲ್ಲವೇ? ಕೆಟ್ಟದು ಮಾಡಿಯೂ ಓಟುಗಳನ್ನು ಹೆಚ್ಚಿಸಿಕೊಳ್ಳಬಹುದು, ಒಳ್ಳೆಯದನ್ನು ಮಾಡಿಯೂ ಹೆಚ್ಚಿಸಿಕೊಳ್ಳಬಹುದು, ಆಯ್ಕೆ ಅವರವರಿಗೆ ಬಿಟ್ಟಿದ್ದು. ಅಪೌಷ್ಟಿಕತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬಿ.ಪಿ.ಎಲ್ ಕಾರ್ಡುದಾರರಿಗೆ ಉಚಿತ / ಅತಿ ಕಡಿಮೆ ದರಕ್ಕೆ ಅಕ್ಕಿ, ಬೇಳೆ, ಜೋಳ, ರಾಗಿ ನೀಡುವುದು ಒಪ್ಪತಕ್ಕ ವಿಚಾರವಾದರೂ ಅದಕ್ಕೆ ‘ಭಾಗ್ಯ’ ಎಂದು ಹೆಸರಿಸುವ ಅನಿವಾರ್ಯತೆ ಏನಿದೆ? ಅಪೌಷ್ಟಿಕತೆ ಹೋಗಲಾಡಿಸುವುದು ಸರಕಾರದ ಕರ್ತವ್ಯ ಮತ್ತು ಪೌಷ್ಟಿಕ ಆಹಾರವನ್ನು ಬಯಸುವುದು ಪ್ರತಿಯೊಬ್ಬ ನಾಗರೀಕನ ಹಕ್ಕು. ‘ಭಾಗ್ಯ’ ಎಂದು ಹೆಸರಿಡುವಲ್ಲಿ ವರ್ಗ ತಾರತಮ್ಯದ ದರುಶನವಾಗುತ್ತದೆ. ಸಬ್ಸಿಡಿ ಇರುವ ಗ್ಯಾಸ್ ಸಿಲಿಂಡರಿಗೆ ಅನಿಲ ಭಾಗ್ಯ ಎಂಬ ಹೆಸರಿದೆಯೇ? ಮಧ್ಯಮವರ್ಗದವರು ಪಡೆದುಕೊಳ್ಳುವ ಸೌಲತ್ತುಗಳಿಗೆ ಇಲ್ಲದ ‘ಭಾಗ್ಯ’ವೆಂಬ ನಾಮಧೇಯ ಬಡವರ ಯೋಜನೆಗಳಿಗೆ ಮಾತ್ರ ಇರುವುದ್ಯಾಕೆ? ನಮ್ಮ ಕೃಪೆಯಿಂದ ನೀವು ಬದುಕಿದ್ದೀರಿ ಎಂಬ ದಾರ್ಷ್ಟ್ಯವಿಲ್ಲದೆ ಹೋದರೆ ಈ ರೀತಿಯ ಹೆಸರಿಡಲು ಸಾಧ್ಯವೇ?
ಹೆಸರಿನಲ್ಲೇನಿದೆ ಬಿಡಿ ಎನ್ನುತ್ತೀರೇನೋ! ಸರಕಾರದ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುವವರು ಆ ವಿರೋಧಕ್ಕೆ ಸಮರ್ಥನೆಯಾಗಿ ಈ ಅಂಶಗಳನ್ನು ಪಟ್ಟಿ ಮಾಡುತ್ತಾರೆ.
1. ಉಚಿತವಾಗಿ ಅಕ್ಕಿ ನೀಡುವುದರಿಂದ ಜನರ (ಅರ್ಥಾತ್ ಬಡಜನರ) ಹೊಟ್ಟೆ ತುಂಬಿ ಅವರು ಕೆಲಸ ಕಾರ್ಯ ಮಾಡದೇ ಸೋಮಾರಿಗಳಾಗಿಬಿಡುತ್ತಾರೆ.
2. ಉಚಿತ ಅಕ್ಕಿ ಪಡೆದುಕೊಂಡ ಜನರು ಅದನ್ನು ಕಾಳಸಂತೆಯಲ್ಲಿ ಕೆಜಿಗೆ ಹತ್ತು ರುಪಾಯಿಯಂತೆಯೋ ಹದಿನೈದು ರುಪಾಯಿಯಂತೆಯೋ ಮಾರಾಟ ಮಾಡಿಬಿಡುತ್ತಾರೆ. ತೆರಿಗೆ ಕಟ್ಟುವ ನಮ್ಮ ಹಣದಿಂದ ಸರಕಾರ ನೀಡುವ ಅಕ್ಕಿಯನ್ನು ಮಾರಿ ‘ಶೋಕಿ’ ಮಾಡುತ್ತಾರೆ.
3. ಬಿಪಿಎಲ್ ಕಾರ್ಡುದಾರರೆಲ್ಲರೂ ಬಡವರಲ್ಲ, ನಕಲಿ ಕಾರ್ಡುದಾರರಿಗೂ ಉಚಿತವಾಗಿ ಅಕ್ಕಿ ತಲುಪಿ ಸರಕಾರದ ಅಂದರೆ ನಮ್ಮ (ಮಧ್ಯಮ ಮತ್ತು ಶ್ರೀಮಂತ ವರ್ಗದ) ಹಣ ಪೋಲಾಗುತ್ತಿದೆ.
4. ಸರಕಾರದ ಈ ಯೋಜನೆಗಳಿಂದ ಹಳ್ಳಿಗಳಲ್ಲಿ ಕೂಲಿ ಕೆಲಸಕ್ಕೆ ಜನರೇ ಸಿಗುತ್ತಿಲ್ಲ.
5. ಸರಕಾರ ಜನರಿಗೆ ಕೆಲಸ ಕೊಡುವ ಕಾರ್ಯನೀತಿ ರೂಪಿಸಬೇಕೆ ಹೊರತು ಜನರನ್ನು ಸೋಮಾರಿಗಳನ್ನಾಗಿ ಮಾಡಬಾರದು.
ಈ ಮಧ್ಯಮವರ್ಗದವರ ಮನಸ್ಥಿತಿ ಮತ್ತವರನ್ನು ಪ್ರೇರೇಪಿಸುವವರ ಮಾತುಗಳು ಕರ್ಣಾನಂದಕರವಾಗಿರುತ್ತವೆ. ಮೇಲ್ನೋಟಕ್ಕೆ ಹೌದಲ್ಲವೇ? ಇದೇ ಸತ್ಯವಲ್ಲವೇ ಎಂಬ ಭಾವನೆ ಮೂಡಿಸುವಂತಿರುತ್ತವೆ. ಮೇಲಿನ ಐದಂಶಗಳನ್ನು ಗಮನಿಸಿದರೆ ಸತ್ಯವೆಂದೇ ತೋರುತ್ತದೆಯಲ್ಲವೇ? ಕಾಳಸಂತೆಯಲ್ಲಿ ಅನ್ನಭಾಗ್ಯದ ಅಕ್ಕಿ ಮಾರಾಟವಾಗುತ್ತಿರುವುದು, ನಕಲಿ ಬಿಪಿಎಲ್ ಕಾರ್ಡುದಾರರ ಸಂಖೈ ಅಧಿಕವಾಗಿರುವುದು, ಹಳ್ಳಿಗಳಲ್ಲಿ ಕೂಲಿ ಕೆಲಸಕ್ಕೆ ಜನರು ಸಿಗದಿರುವುದು, ಸರಕಾರ ಜನರ ಕೈಗಳಿಗೆ ಕೆಲಸ ಕೊಡುವ ನೀತಿ ರೂಪಿಸಬೇಕೆನ್ನುವುದು ಸತ್ಯವೇ ಅಲ್ಲವೇ? ಆದರದು ಸಂಪೂರ್ಣ ಸತ್ಯವೇ ಎನ್ನುವುದನ್ನು ಪರಿಶೀಲಿಸುವವರ ಸಂಖೈ ತುಂಬಾನೇ ಕಡಿಮೆ.
ಅಪೌಷ್ಟಿಕತೆಯ ಪಟ್ಟಿಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಮತ್ತೇನೂ ಬೇಡ, ಆಸ್ಪತ್ರೆಗಳಲ್ಲಿ ಗರ್ಭಿಣಿ ಹೆಂಗಸರ ಮತ್ತು ಚಿಕ್ಕಮಕ್ಕಳ ರಕ್ತದ ಅಂಶ ಎಷ್ಟಿದೆ ಎಂದು ಗಮನಿಸಿದರೆ ಸಾಕು ಭಾರತದ ಅಪೌಷ್ಟಿಕತೆಯ ದರುಶನವಾಗುತ್ತದೆ. ಅಪೌಷ್ಟಿಕತೆಯಿಂದ ಜನರ ದುಡಿಯುವ ಶಕ್ತಿಯೂ ಕುಂದುತ್ತದೆ, ದುಡಿಮೆ ಕಡಿಮೆಯಾದಾಗ ಆದಾಯದಲ್ಲಿ ಕಡಿತವಾಗುತ್ತದೆ, ಆದಾಯ ಕಡಿಮೆಯಾದಾಗ ಸಹಜವಾಗಿ ಆಹಾರಧಾನ್ಯ ಖರೀದಿಸುವಿಕೆ ಕಡಿಮೆಯಾಗಿ ಅಪೌಷ್ಟಿಕತೆ ಹೆಚ್ಚುತ್ತದೆ. ವಿಷವರ್ತುಲವಿದು. ಮರಣ ಹೊಂದಿದ ನಿರ್ಗತಿಕರ ಶವವನ್ನು ಪೋಸ್ಟ್ ಮಾರ್ಟಮ್ಮಿಗೋ, ಕಾಲೇಜಿನ ಅನಾಟಮಿ ವಿಭಾಗಕ್ಕೋ ತಂದಾಗ ದೇಹದ ಹೊಟ್ಟೆಯ ಭಾಗವನ್ನು ಗಮನಿಸಿಯೇ ಅವರ ಹಸಿವನ್ನು ಅಂದಾಜಿಸಬಹುದು. ಹೊಟ್ಟೆ ಬೆನ್ನಿಗೆ ಅಂಟಿಕೊಂಡಿರುವುದನ್ನಲ್ಲಿ ಗಮನಿಸಬಹುದು. ತಾಂತ್ರಿಕ ಕಾರಣಗಳಿಂದ ಹಸಿವಿನಿಂದ ಮರಣ ಎಂದು ಬರೆಯಲಾಗುವುದಿಲ್ಲ ಅಷ್ಟೇ. ಇಂಥ ಅಪೌಷ್ಟಿಕತೆಯನ್ನು ನೀಗಿಸಲು ಒಂದಷ್ಟು ಅಕ್ಕಿಯಿಂದ ಸಾಧ್ಯವೇ? ಖಂಡಿತ ಸಾಧ್ಯವಿಲ್ಲ. ಪೌಷ್ಟಿಕತೆಯನ್ನು ಕಾಪಾಡಲು ಅಕ್ಕಿಯ ಜೊತೆಜೊತೆಗೆ ಇನ್ನೂ ಅನೇಕ ದವಸಧಾನ್ಯಗಳು ಬೇಕು. ಒಂದಷ್ಟು ಅಕ್ಕಿ/ರಾಗಿ/ಗೋಧಿಯನ್ನು ಉಚಿತವಾಗಿ ನೀಡಿದಾಗ ಅಕ್ಕಿಗೆಂದು ವೆಚ್ಚ ಮಾಡುತ್ತಿದ್ದ ದುಡ್ಡಿನಲ್ಲಿ ಮತ್ತೇನಾದರೂ ಕೊಳ್ಳಬಹುದಲ್ಲವೇ? ಅಲ್ಲಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉಚಿತ ಅಕ್ಕಿಯಿಂದ ಅಪೌಷ್ಟಿಕತೆ ದೂರಾಗುತ್ತದೆ. ಅಪೌಷ್ಟಿಕತೆ ದೂರಾದಾಗ ಮಾಡುವ ಕೆಲಸಕ್ಕೂ ವೇಗ ಮತ್ತು ಶಕ್ತಿ ದೊರೆಯುತ್ತದೆ. ಅಲ್ಲಿಗೆ ಅಕ್ಕಿಯನ್ನು ಉಚಿತವಾಗೋ ಅತಿ ಕಡಿಮೆ ಬೆಲೆಗೋ ನೀಡುವುದು ಕೊನೇ ಪಕ್ಷ ಜನರ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯಲ್ಲ.
ಉಚಿತ ಅಕ್ಕಿಯಿಂದ ಜನರ ಹೊಟ್ಟೆ ತುಂಬಿ ಅವರು ಸೋಮಾರಿಗಳಾಗಿಬಿಡುತ್ತಾರೆ ಎಂಬ ಆರೋಪ ನಗು ಬರಿಸುತ್ತದೆ. ಯಾವಾಗ ಮನುಷ್ಯ ಗುಡ್ಡಗಾಡು ಅಲೆಯುವುದನ್ನು ಬಿಟ್ಟು ಒಂದು ಕಡೆ ನೆಲೆನಿಂತನೋ ಅವತ್ತಿನಿಂದಲೇ ಮನುಷ್ಯ ಆಲಸಿ. ಮನುಷ್ಯನನ್ನು ಸೋಮಾರಿಗಳನ್ನಾಗಿ ಮಾಡುತ್ತದೆಂದು ನಮ್ಮ ಕಾರು, ಬೈಕು, ಸೈಕಲ್ಲು, ವಾಷಿಂಗ್ ಮಿಷಿನ್ನುಗಳನ್ನು ಮನೆಯಿಂದ ಎಸೆದು ಬಿಡುತ್ತೀವಾ? ಇಲ್ಲವಲ್ಲ. ಹೊಟ್ಟೆ ತುಂಬಿದ ಮನುಷ್ಯ ಸೋಮಾರಿಯಾಗುತ್ತಾನೆ ಎಂದರೆ ಉತ್ತಮ ಸಂಬಳ ಪಡೆಯುವ ಮಧ್ಯಮವರ್ಗದವರು ವರುಷಕ್ಕೆ ಒಂದೋ ಎರಡೋ ತಿಂಗಳು ಕೆಲಸ ಮಾಡಿ ಉಳಿದ ತಿಂಗಳುಗಳೆಲ್ಲ ಸೋಮಾರಿಗಳಾಗಿ ಬಿದ್ದಿರಬೇಕಿತ್ತಲ್ಲ? ಯಾಕೆ ನಾಲ್ಕಂಕಿಯಿಂದ ಐದಂಕಿಗೆ, ಐದಂಕಿಯಿಂದ ಆರಂಕಿಯ ಸಂಬಳಕ್ಕೆ ಜಿಗಿಯಲು ಹಾತೊರೆಯುತ್ತಲೇ ಇರುತ್ತಾರೆ? ಮನುಷ್ಯನ ಹಸಿವು ಹೊಟ್ಟೆಗೆ ಮಾತ್ರ ಸಂಬಂಧಿಸಿದ್ದಲ್ಲ. ಹೊಟ್ಟೆ ತುಂಬಿದ ಮನುಷ್ಯನಿಗೆ ಮತ್ತ್ಯಾವುದರಲ್ಲೋ ಆಸಕ್ತಿ ಕೆರಳಿ ಹಸಿವುಂಟಾಗುತ್ತದೆ. ಆ ಹಸಿವು ತೀರಿಸಿಕೊಳ್ಳಲು ಕೆಲಸ ಮಾಡುತ್ತಲೇ ಇರುತ್ತಾನೆ. ಜನರ ಸೋಮಾರಿತನಕ್ಕೆ ಉದಾಹರಣೆಯಾಗಿ ಕೃಷಿ ಕೆಲಸಕ್ಕೆ ಕಾರ್ಮಿಕರು ಸಿಗುತ್ತಿಲ್ಲ ಎಂಬ ಅಂಶವನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗುತ್ತಿದೆ. ಸ್ವಾಮಿ, ಈ ಅನ್ನಭಾಗ್ಯವೆಂಬ ಹಕ್ಕಿನ ಯೋಜನೆ ಜಾರಿಯಾಗುವುದಕ್ಕೆ ಮುಂಚಿನಿಂದಲೇ ಕೃಷಿ ಕೆಲಸಕ್ಕೆ ಕಾರ್ಮಿಕರ ಅಭಾವವಿದೆ. ಅದಕ್ಕೆ ಕೃಷಿಯೆಂಬುದು ಆಕರ್ಷಕ, ಲಾಭ ತರುವ ವೃತ್ತಿಯಾಗಿ ಉಳಿದಿಲ್ಲ ಎಂಬುದು ಎಷ್ಟು ಸತ್ಯವೋ ಬಿಸಿಲು ಮಳೆ ಚಳಿ ಗಾಳಿಯಲ್ಲಿ ದುಡಿಯುವುದಕ್ಕಿಂತ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲೋ ಮತ್ತೊಂದು ಕಾರ್ಖಾನೆಯಲ್ಲೋ ಸೂರಿನಡಿಯಲ್ಲಿ ದುಡಿಯುವುದು ಉತ್ತಮವೆಂಬ ಭಾವನೆಯೂ ಕಾರಣ. ಓದಿ ಕೆಲಸ ಗಿಟ್ಟಿಸಿಕೊಂಡು ತಣ್ಣಗೆ ಫ್ಯಾನಿನಡಿಯಲ್ಲೋ ಎಸಿಯ ಕೆಳಗೋ ದುಡಿಯುವುದು ನಮ್ಮಲ್ಲನೇಕರ ಆಯ್ಕೆಯೂ ಆಗಿತ್ತಲ್ಲವೇ? ಕೂಲಿ ನಾಲಿ ಮಾಡಿಕೊಂಡವರಿಗೂ ಅದೇ ಭಾವನೆ ಬಂದರದು ತಪ್ಪೇ? ಯೋಗ, ಜಿಮ್ಮು, ಸೈಕ್ಲಿಂಗೂ, ವಾಕಿಂಗೂ, ರನ್ನಿಂಗೂ ಅಂಥ ಮಾಡ್ಕೊಂಡು ಬೊಜ್ಜು ಇಳಿಸಲು ಬಡಿದಾಡುತ್ತಿರುವ ನಮಗೆ ಸೋಮಾರಿತನದ ಬಗ್ಗೆ ಮಾತನಾಡಲು ಯಾವ ನೈತಿಕತೆಯಿದೆ?
ಉಚಿತ ಅಕ್ಕಿ ಪಡೆದುಕೊಳ್ಳುತ್ತಿರುವವರು ಅದನ್ನು ಮಾರಿಕೊಳ್ಳುತ್ತಿರುವುದು ಮತ್ತು ನಕಲಿ ಬಿ.ಪಿ.ಎಲ್ ಕಾರ್ಡುದಾರರ ಸಂಖೈ ಹೆಚ್ಚಿರುವುದು ಖಂಡಿತವಾಗಿಯೂ ಸತ್ಯ. ಸರಕಾರದ ಯಾವುದೇ ಜನಪರ ಯೋಜನೆ ಕಡೇಪಕ್ಷ ಐವತ್ತರಷ್ಟು ನಿಜವಾದ ಫಲಾನುಭವಿಗಳಿಗೆ ದಕ್ಕಿದರೆ ಯಶಸ್ಸು ಕಂಡಂತೆ. ಅಕ್ಕಿ ಮಾರಿಕೊಳ್ಳುತ್ತಿರುವವರ ಸಂಖೈ ಇರುವಂತೆ ಅದನ್ನು ಉಪಯೋಗಿಸುವವರ ಸಂಖೈಯೂ ಇದೆಯಲ್ಲವೇ? ಈ ರೀತಿ ಮಾರಾಟಗೊಂಡ ಅಕ್ಕಿ ಕೊನೆಗೆ ಸೇರುವುದು ಕೂಡ ಅದೇ ಮಧ್ಯಮವರ್ಗದವರ ಮನೆಗೆ! ಅಕ್ಕಿ ಮಾರುವವರನ್ನು ಮತ್ತದನ್ನು ಕೊಳ್ಳುವವರಿಗೆ ದಂಡ ವಿಧಿಸುವ ಹಾಗಾದರೆ? ಇನ್ನು ಬಿ.ಪಿ.ಎಲ್ ಕಾರ್ಡುದಾರರ ಪಟ್ಟಿಯಲ್ಲಿ ಮಧ್ಯಮವರ್ಗದವರು, ಸಣ್ಣ ರೈತರು, ದೊಡ್ಡ ರೈತರು ಎಲ್ಲರ ಹೆಸರೂ ಸೇರಿಕೊಂಡಿದೆ. ನಕಲಿಗಳನ್ನು ತೆಗೆದುಹಾಕುವ ಪ್ರಕ್ರಿಯೆ ನಿರಂತರವಾಗಿರಬೇಕು. ಆಗ ಯೋಜನೆ ಮತ್ತಷ್ಟು ಫಲಕಾರಿಯಾಗಿ ಅರ್ಹ ಫಲಾನುಭಾವಿಗಳಿಗೆ ಉಪಯೋಗವಾಗುತ್ತದೆ.
ಜನರ ಪೌಷ್ಟಿಕತೆಯನ್ನು ದೂರ ಮಾಡುವಲ್ಲಿ ಇಂಥಹ ಕೆಲಸಗಳನ್ನು ರೂಪಿಸುವ ಸರಕಾರಗಳು ಜೊತೆಜೊತೆಗೇ ದುಡಿವ ಕೈಗಳಿಗೆ ಕೆಲಸವನ್ನೆಚ್ಚಿಸುವ ಹಾದಿಯನ್ನೂ ಹುಡುಕಬೇಕು. ಇಂತಹ ಯೋಜನೆಗಳು ಎಷ್ಟು ದಿನ – ತಿಂಗಳು – ವರುಷಗಳವರೆಗೆ ಮುಂದುವರೆಯಬೇಕು ಎಂಬ ಪ್ರಶ್ನೆಗೆ ಉತ್ತರ ದೊರಕುವುದು ಕಷ್ಟ. ಜನಸಂಖ್ಯೆ ಹೆಚ್ಚಿದೆ ನಮ್ಮಲ್ಲಿ, ಇರುವ ಜಾಗ ಕಡಿಮೆ; ಇಷ್ಟೊಂದು ದೊಡ್ಡ ಜನಸಂಖೈಯ ದೇಶದಲ್ಲಿ ಯಾರೊಬ್ಬರಲ್ಲೂ ಅಪೌಷ್ಟಿಕತೆ ಇರದ ದಿನ ಬರುವುದು ಅನೇಕನೇಕ ದಶಕಗಳ ನಂತರವೇ. ಅಲ್ಲಿಯವರೆಗೂ ಇಂತಹ ಯೋಜನೆಗಳಿರಲೇಬೇಕು – ಜನರ ಆರೋಗ್ಯಕ್ಕೆ, ಗರ್ಭಿಣಿಯ ಆರೋಗ್ಯಕ್ಕೆ, ಹುಟ್ಟುವ ಕೂಸುಗಳ ಆರೋಗ್ಯಕ್ಕೆ. ಸಮಾಜ ನಮಗೊಂದು ಬದುಕು ರೂಪಿಸಿಕೊಟ್ಟ ಕಾರಣಕ್ಕಾಗಿಯೇ ಅಲ್ಲವೇ ನಾವು ತೆರಿಗೆ ಕಟ್ಟುತ್ತಿರುವುದು? ಆ ತೆರಿಗೆ ಹಣದಲ್ಲಿ ದೊಡ್ಡ ಪಾಲು ಪರೋಕ್ಷವಾಗಿ ನಮ್ಮ ಅನುಕೂಲಕ್ಕೇ ಖರ್ಚಾಗುತ್ತದೆ. ಆ ತೆರಿಗೆ ಹಣದ ಒಂದು ಚಿಕ್ಕ ಪಾಲಿನಿಂದ ಮತ್ತೊಂದಷ್ಟು ಮಗದೊಂದಷ್ಟು ಜನರ ಏಳ್ಗೆಯಾಗಿ ಅವರೂ ತೆರಿಗೆ ಕಟ್ಟುವಂತಾಗಲೀ ಎಂದು ಆಶಿಸಬೇಕು.
‘ಭಾಗ್ಯ’ವೆಂಬ ಹಣೆಪಟ್ಟಿಯಿಲ್ಲದೆ ಅನೇಕ ಸೌಲತ್ತುಗಳನ್ನನುಭವಿಸಿ ಸುಖಿಸುತ್ತಾ ಉದ್ದಿಮೆದಾರರಿಗೆ ನೀಡುವ ಭಾರೀ ಭಾರೀ ರಿಯಾಯಿತಿಗಳನ್ನು ಚಪ್ಪಾಳೆ ತಟ್ಟಿ ಸ್ವಾಗತಿಸುತ್ತಾ ಅಕ್ಕಿ ನೀಡುವ ಕ್ರಿಯೆಯನ್ನು ವಿರೋಧಿಸುವುದನ್ನು ಮಾನವತಾ ವಿರೋಧಿ ನಿಲುವೆಂದೇ ಪರಿಗಣಿಸಬೇಕಾಗುತ್ತದೆ.
No comments:
Post a Comment