Jun 27, 2015

ಜುಲೈ ಮೂರರಿಂದ 'ಅಭಿ'ಯ ಆರಂಭ!

ಹೊಸಬರ ತಂಡ ಕಟ್ಟಿ ಸತತ ಎರಡು ವರುಷ ಚಿತ್ರದ ನಟ ನಟಿಯರಿಗೆ ತರಬೇತಿ ನೀಡಿ ನೈಜತೆಗೆ ಒತ್ತು ನೀಡಿ ಚಿತ್ರೀಕರಿಸಿರುವ ಆರಂಭ ಚಿತ್ರ ಜುಲೈ ಮೂರರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಸೆನ್ಸಾರಿನ ಬಾಹು ಬಂಧನದಿಂದ ಹೊರಬರಲು ಕೊಂಚ ತಡವಾಯಿತು ಎಂಬುದು ಚಿತ್ರತಂಡದ ಮಾತು! 
'ಹಾರ್ಟ್ ಟಚಿಂಗ್' ಟೀಸರ್, ಕಣಗಾಲಿನಲ್ಲಿ ಪುಟ್ಟಣ್ಣರ ನೆನಪಿಗೊಂದು ಪ್ರದರ್ಶನ, 'ಇದುವರೆಗೆ ಇದ್ದಿಲ್ಲ' ಎಂಬ ನವೀನ ಮಾದರಿಯ ಹಾಡಿನ ಮೂಲಕ ಸದ್ದು - ಸುದ್ದಿ ಮಾಡಿದ್ದ 'ಆರಂಭ' ನಿನ್ನೆ 'ಹೆಣ್ಣಿಂದ ಹಾಳಾದ ಕುಮಾರ'ನ ಟ್ರೇಲರ್ ಬಿಡುಗಡೆ ಮಾಡಿದೆ. ಜಾತಿ, ಮಹಿಳಾ ದೌರ್ಜನ್ಯದ ಎಳೆಗಳು ಟ್ರೇಲರ್ರಿನಲ್ಲಿ ಕಾಣಿಸುತ್ತಿದೆ. 

ಗೆಳೆಯ ಎಸ್.ಅಭಿ ಹನಕೆರೆ ನಿರ್ದೇಶನದ ಚಿತ್ರವನ್ನು ನಿರ್ಮಿಸಿರುವುದು ಗಣೇಶ್ ವಿ ನಾಗೇನಹಳ್ಳಿ. ಗುರಕಿರಣ್ ಸಂಗೀತವಿರುವ ಚಿತ್ರದ ಪ್ರಮುಖ ಪಾತ್ರದಲ್ಲಿ ಮಿಥುನ್ ಪ್ರಕಾಶ್, ಅಭಿರಾಮಿ, ರಸಗವಳ ನಾರಾಯಣ, ಅಭಿರಾಜು, ಬಳ್ಳಾರಿ ರಾಘವೇಂದ್ರ, ನಂದೀಶ್, ರಾಜೇಗೌಡ, ಚಂದ್ರು, ಹಾಸಿನಿ, ಪ್ರಥ್ವಿ ಮತ್ತಿತರಿದ್ದಾರೆ.

Jun 24, 2015

ಫ್ಲಿಪ್ ಕಾರ್ಟಿನಿಂದ ನಾಯಿ ಖರೀದಿ!

ನಾಯಿ ಖರೀದಿ!
ಫ್ಲಿಪ್ ಕಾರ್ಟ್ ಬೆಂಗಳೂರನ್ನು ಮುಖ್ಯಕಛೇರಿ ಮಾಡಿಕೊಂಡಿರುವ ಬಹುದೊಡ್ಡ ಇ-ಕಾಮರ್ಸ್ ಕಂಪನಿ. ಫ್ಲಿಪ್ ಕಾರ್ಟ್ ಮೊದಮೊದಲು ಪುಸ್ತಕಗಳನ್ನಷ್ಟೇ ಮಾರುವ ಸಂಸ್ಥೆಯಾಗಿತ್ತು. ಫ್ಲಿಪ್ ಕಾರ್ಟಿನ ಅಂತರ್ಜಾಲ ಪುಟವನ್ನು ತೆರೆದರೆ ಪುಸ್ತಕಗಳ ರಾಶಿಯೇ ಕಾಣಿಸುತ್ತಿತ್ತು. ನಿಧನಿಧಾನವಾಗಿ ಮೊಬೈಲು, ಕ್ಯಾಮೆರಾ ಎಂದು ವ್ಯಾಪಾರ ವಿಸ್ತಾರಗೊಳ್ಳುತ್ತಾ ಈಗ ಫ್ಲಿಪ್ ಕಾರ್ಟಿನಲ್ಲಿ ಸಿಗದ ವಸ್ತುವೇ ಇಲ್ಲ ಎಂದು ಹೇಳಬಹುದು. ಅಮೆಜಾನ್, ಸ್ನ್ಯಾಪ್ ಡೀಲ್, ಶಾಪ್ ಕ್ಲೂಸ್, ಇಬೇನಂತಹ ಹತ್ತಲವು ಇ-ಕಾಮರ್ಸ್ ಕಂಪನಿಗಳು ಈಗ ಕಾರ್ಯನಿರ್ವಹಿಸುತ್ತಿದೆಯಾದರೂ ಫ್ಲಿಪ್ ಕಾರ್ಟ್ ಮುಂಚೂಣಿಯಲ್ಲಿರುವುದು ಸುಳ್ಳಲ್ಲ.
ತಿಂಗಳಿಗೆರಡು ಮೂರು ದಿವಸ 'ವಿಶೇಷ ದಿನ'ಗಳನ್ನಾಗಿ ಮಾಡಿ ವಿಪರೀತವೆನ್ನುವಷ್ಟು ರಿಯಾಯತಿಯನ್ನು ಘೋಷಿಸುವುದು ಈಗ ಸಾಮಾನ್ಯವಾಗಿದೆ. ಅನೇಕ ಬಾರಿ ಹೆಚ್ಚಿನ ಬೆಲೆ ನಮೂದಿಸಿ ರಿಯಾಯತಿ ಘೋಷಿಸುವುದೂ ಇದೆ. ಈ ತಿಂಗಳ ಇಪ್ಪತ್ತೆರಡರಿಂದ ಇಪ್ಪತ್ತನಾಲ್ಕರವರೆಗೆ ಫ್ಲಿಪ್ ಕಾರ್ಟ್ ಈ ರೀತಿಯೊಂದು ರಿಯಾಯತಿ ಹಬ್ಬ ಘೋಷಿಸಿದೆ. ಅದಕ್ಕೆ ಸಂಬಂಧಪಟ್ಟ ಜಾಹೀರಾತಿನಲ್ಲಿ "ನಹೀ ಕರೀದಾ" ಎಂಬ ಹಿಂದಿ ವಾಕ್ಯವನ್ನು ಉಪಯೋಗಿಸಲಾಗಿದೆ. ಸರಿ, ಹಿಂದಿ ಭಾಷಿಕರಿರುವ ರಾಜ್ಯಗಳಲ್ಲಿ ಹಿಂದಿ ವಾಕ್ಯವನ್ನು ಉಪಯೋಗಿಸಿಕೊಳ್ಳಲಿ ಆದರೆ ಕರ್ನಾಟಕದ ರಾಜಧಾನಿಯಲ್ಲೇ ಮುಖ್ಯ ಕಛೇರಿ ಮಾಡಿಕೊಂಡಿರುವ ಸಂಸ್ಥೆಯೊಂದು ಬೆಂಗಳೂರಿನಲ್ಲಿ ಹಾಕುವ ಜಾಹೀರಾತಿನಲ್ಲಾದರೂ ಕನ್ನಡವನ್ನು ಉಪಯೋಗಿಸಬೇಕಿತ್ತಲ್ಲವೇ? ಅದು ಬಿಟ್ಟು Nahee karidaa? ಎಂದು ಹಿಂದಿಯನ್ನು ಆಂಗ್ಲದಲ್ಲಿ ಹಾಕಿ ಅಪಸವ್ಯ ಸೃಷ್ಟಿಸಿದೆ. ಕನ್ನಡದಲ್ಲದು 'ನಾಯಿ ಖರೀದ' ಎಂದು ವಿಚಿತ್ರವಾಗಿ ಧ್ವನಿಸುತ್ತದಲ್ಲವೇ?
ಅಂಗಡಿಯಲ್ಲಿ ಕನ್ನಡ ನುಡಿಯ ಗೆಳೆಯರು ಫೇಸ್ ಬುಕ್ ಪುಟದ ಮೂಲಕ ಈ ನಾಯಿ ಖರೀದಿಯ ವ್ಯವಹಾರವನ್ನು ಪ್ರಚುರಪಡಿಸಲಾಯಿತು. ಫ್ಲಿಪ್ ಕಾರ್ಟಿನ ಫೇಸ್ ಬುಕ್ ಪುಟ, ಟ್ವಿಟರ್ ಪುಟಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಕೇಳಿಕೊಂಡರು ಅಂಗಡಿಯ ಗೆಳೆಯರು. 
ಇದಕ್ಕೆ ಪೂರಕವೆಂಬಂತೆ ನಿಶಾಂತ್ ಶೆಟ್ಟಿ ಎಂಬುವರು ಯೂಟ್ಯೂಬಿನಲ್ಲಿ ಕನ್ನಡ ಉಪಯೋಗಿಸದ ಕಾರಣಕ್ಕಾಗಿ ಖರೀದಿಸಿದ ವಸ್ತುವನ್ನು ವಾಪಸ್ಸು ಮಾಡುತ್ತಿರುವುದಾಗಿ ಫ್ಲಿಪ್ ಕಾರ್ಟಿಗೆ ಹೇಳುವ ವೀಡಿಯೋವೊಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಅದರ ಸತ್ಯಾಸತ್ಯತೆಗಳನ್ನು ಪಕ್ಕಕ್ಕಿಟ್ಟರೂ ಉದ್ದೇಶದ ಬಗ್ಗೆ ಎರಡು ಮಾತಿಲ್ಲ. ಈ ಚರ್ಚೆಗಳ ನಡುವೆ ನಾರಾಯಣ್ ಎಂಬುವರು ಫ್ಲಿಪ್ ಕಾರ್ಟಿನಿಂದ ಲ್ಯಾಪ್ ಟಾಪನ್ನು ಖರೀದಿಸಿದ್ದಾರೆ; ಕನ್ನಡ ಉಪಯೋಗಿಸುತ್ತಿಲ್ಲವೆಂಬ ಕಾರಣ ನೀಡಿ ವಾಪಸ್ಸು ಮಾಡುವುದಕ್ಕೆ! ಒಟ್ಟಿನಲ್ಲಿ ಇರುವ ನಾಡಿನ ಭಾಷೆಗೆ ಗೌರವ ನೀಡದ ಸಂಸ್ಥೆಯೊಂದಕ್ಕೆ ಕನ್ನಡ ಗ್ರಾಹಕರು ಸರಿಯಾಗಿಯೇ ಚುರುಕು ಮುಟ್ಟಿಸುತ್ತಿದ್ದಾರೆ.
ಫ್ಲಿಪ್ ಕಾರ್ಟಿನ ವಿರುದ್ಧ ನಿಮ್ಮ ದೂರನ್ನು ದಾಖಲಿಸಲು
https://twitter.com/Flipkart 
ಚಿತ್ರಗಳು: ಫೇಸ್ ಬುಕ್.

Jun 23, 2015

ಒಂದು ಪುನರ್ವಸತಿಯ ಕಥೆ....

ನಾಗರಾಜ್ ಹೆತ್ತೂರ್
ಬಹುಶಃ ಇಂತಹ ಕೆಲಸಗಳಿಗಿಂತ ಖುಷಿ ಕೊಡುವ ಕೆಲಸಗಳು ಬೇರೊಂದಿಲ್ಲ. 
ಮದ್ಯಾಹ್ನ ಮನೆಯಿಂದ ಹೊರಟವನು ನಮ್ಮ ಹಾಸನದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪುರುಶೋತ್ತಮ್ ಅವರಿಗೆ ಕರೆ ಮಾಡಿದೆ. ಹೊಸ ಬಸ್ ನಿಲ್ದಾಣದ ಹತ್ತಿರ ಬನ್ನಿ ಎಂದರು. ಅವರು ಅಲ್ಲಿಗೆ ಹೋಗುವಷ್ಟರಲ್ಲಿ ನಾನು ಸೇರಿಕೊಂಡೆ . ಕಳೆದ 8 ತಿಂಗಳಿಂದ ಅಲ್ಲೊಬ್ಬ ರಸ್ತೆ ಬದಿ ಬಿದ್ದುಕೊಂಡಿದ್ದ. ಅದು ಯಾವ ಮಟ್ಟಕ್ಕೆ ಎಂದರೆ ಆತ ಬದುಕಿರುವುದೇ ಹೆಚ್ಚು. ಅವನನ್ನು ಗಮನಿಸಿದ್ದವರು ಹುಚ್ಚನಿರಬಹುದೆಂದು ಕೊಂಡಿದ್ದರು. ಕೆಲವರು ಒಂದಷ್ಟು ಅನ್ನ ರೂಪಾಯಿ ದುಡ್ಡು ಕೊಟ್ಟು ಹೋಗುತ್ತಿದ್ದರು. ಇದನ್ನು ಗಮನಿಸಿದ್ದ ರವಿ ಕುಮಾರ್ ಎಂಬುವರು ಮೊನ್ನೆ ಹೋಗಿ ಮಾತನಾಡಿಸಿದಾಗ ಆತ ಹುಚ್ಚನಲ್ಲ ಎಂದು ಗೊತ್ತಾಗಿದೆ. ತಕ್ಷಣವೇ ಪತ್ರಕರ್ತ ಗೆಳೆಯ ಗಿರೀಶ್ ಗೆ ತಿಳಿಸಿದ್ದಾರೆ. ಗಿರೀಶ್ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪುರುಶೋತ್ತಮ್ ಅವರಿಗೆ ಪೋನ್ ಮಾಡಿ ವಿಚಾರ ತಿಳಿಸಿದ್ದಾರೆ. ತಕ್ಷಣವೇ ಕಾರ್ಯಪೃವೃತ್ತರಾದ ಪುರುಶೋತ್ತಮ್ ಇವರತ್ತು ಅವನಿಗೆ ಪುನರ್ ವಸತಿ ಕಲ್ಪಿಸುವ ಕೆಲಸಕ್ಕೆ ಮುಂದಾದರು. 
ಆತನ ಹೆಸರು ಸುರೇಶ್ , ಹಾಸನದವನು. ಒಂದು ಕಾಲಕ್ಕೆ ಸಾಕಷ್ಟು ಆಸ್ತಿ ಹೊಂದಿದ್ದವನು. ಮಕ್ಕಳಿಂದ ಅಲಕ್ಷ್ಯಕ್ಕೆ ಒಳಗಾದವನು ಮಕ್ಕಳೇ ಬೀದಿ ಪಾಲು ಮಾಡಿದರೆಂದು ಹೇಳುತ್ತಾನೆ. ಚೆನ್ನಾಗಿಯೇ ಮಾತನಾಡುವ ಆತನನ್ನು ಅಲ್ಲಿಂದ ಎಬ್ಬಿಸುವಷ್ಟರಲ್ಲಿ ಸಾಹಸವೇ ನಡೆಯಿತು. 
ಹಾಸನದ ಸ್ಕೌಡ್ಸ್ ಮತ್ತು ಗೌಡ್ಸ್ ನ ಗೆಳೆಯರು ಮತ್ತು ಸ್ಥಳೀಯರ ಸಹಕಾರದಿಂದ ಆತನನ್ನು ಎಬ್ಬಿಸಿ ಸೋಪು ಹಾಕಿ ತೊಳೆದು ಬಿಸಿ ನೀರು ಸ್ನಾನ ಮಾಡಿಸಿ ಹೊಸ ಬಟ್ಟೆ ಹಾಕಿದಾಗ ನಿಜಕ್ಕೂ ನಾವೇ ನಂಬದಷ್ಟು ಬದಲಾಗಿ ಹೋದ. ಮಳೆಯ ನಡುವೆಯೂ ಆ ಕ್ಷಣಕ್ಕೆ ಆತನನ್ನು ಮನುಷ್ಯನನ್ನಾಗಿ ಮಾಡಲು ಯಶಸ್ವಿಯಾದೆವು. 
ಆತನಿಗೆ ಬ್ರೆಡ್ಡು ಟೀ ಕೊಟ್ಟಾಗಲಂತೂ ಆತನ ಕಣ್ಣು ನೋಡಬೇಕಿತ್ತು. ನಂತರ ಸಮಾಜ ಕಲ್ಯಾಣ ಇಲಾಖೆಯ ಸಹಕಾರದಿಂದ ಆತನನ್ನು ತುಮಕೂರಿನ ಪುನರ್ ವಸತಿ ಕೆಂದ್ರಕ್ಕೆ ಕಳಿಸಲಾಯಿತು. ಹಾಸನ ಜಿಲ್ಲೆಯಲ್ಲಿ ತಮ್ಮ ಕೆಲಸದ ಮೂಲಕ ಹೆಸರು ಮಾಡಿರುವ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮತ್ತು ಸಹೋದ್ಯೋಗಿಗಳು, ಸಿಬ್ಬಂದಿವರ್ಗ ಈ ಅಮೂಲ್ಯ ಕೆಲಸ ಮಾಡುವ ಮೂಲಕ ಜನತೆಯ ಪ್ರಶಂಸೆಗೆ ಒಳಗಾದರು.... ಇಂತಹ ಕಾರ್ಯಗಳು ಎಲ್ಲೆಡೆ ನಡೆಯಲಿ...... 

ಪುರುಶೋತ್ತಮ್, ಗಿರೀಶ್ ಮತ್ತು ರವಿ ಕುಮಾರ್ ಅವರ ಕಾರ್ಯಕ್ಕೆ ಒಂದು ಹ್ಯಾಟ್ಸ್ ಆಫ್ ಹೇಳೋಣ
(ಇಂತಹವರು ನಿಮ್ಮ ಕಣ್ಣೆದುರೂ ಇರಬಹುದು ಅಲಕ್ಷ್ಯ ವಹಿಸದಿರಿ)
(ನಾಗರಾಜ್ ಹೆತ್ತೂರರ ಫೇಸ್ ಬುಕ್ ಪುಟದಿಂದ)

ಕಣ್ವ ಜಲಾಶಯವನ್ನು ತುಂಬಿಸುವ ಸಂಭ್ರಮ!

ರಾಮನಗರ ಜಿಲ್ಲೆಯ ಕೆಂಗಲ್ ಬಳಿಯ ಕಣ್ವ ಜಲಾಶಯ ಸಂಪೂರ್ಣ ಬರಿದಾಗಿತ್ತು. ದೊಡ್ಡ ಗಾತ್ರದ ಪೈಪುಗಳಿಂದ ಕಣ್ವಕ್ಕೆ ನೀರನ್ನು ಹರಿಸಲಾಗುತ್ತಿದೆ. ಅದರ ವೀಡಿಯೋ ನಿಮ್ಮ ಹಿಂಗ್ಯಾಕೆಯಲ್ಲಿ. ಮೋಡ ಕವಿದ ವಾತಾವರಣದ ಕಾರಣ ವೀಡಿಯೋ ಗುಣಮಟ್ಟ ಕಡಿಮೆಯಾಗಿದೆ, ಕ್ಷಮೆಯಿರಲಿ.
ಇದನ್ನೂ ಓದಿ: ಯೋಗೇಶ್ವರನೆಂಬ ಭಗೀರಥನೂ ಚನ್ನಪಟ್ಟಣದ ಕೆರೆಗಳು!

Jun 19, 2015

ಸರ್ಕಾರಕ್ಕೆ ರೈತನೊಬ್ಬನ ಡೆತ್ ನೋಟ್.

ಸರ್ಕಾರಕ್ಕೆ,
ಶ್ರೀರಂಗಪಟ್ಟಣ ತಾಲ್ಲೂಕ್ ಚೆನ್ನೇನಹಳ್ಳಿ ಗ್ರಾಮದ ಸಿ.ರಾಜೇಂದ್ರನಾದ ನಾನು ವ್ಯವಸಾಯಗಾರನಾಗಿ ಅನೇಕ ಬೆಳೆಗಳನ್ನು ಮಾಡಿದ್ದೇನೆ. ಈಗ ಹಾಲಿ ಕಬ್ಬು, ಬಾಳೆ ಮತ್ತು ತರಕಾರಿ ಬೆಳೆಗಳನ್ನು ಮಾಡಿರುತ್ತೇನೆ. ಯಾವ ಬೆಳೆಗೂ ಬೆಲೆ ಇಲ್ಲದೆ ವಿಪರೀತ ನಷ್ಟ ಹೊಂದಿರುತ್ತೇನೆ. ಆದ್ದರಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ.
ಸಿ.ರಾಜೇಂದ್ರ
ಚೆನ್ನೇನಹಳ್ಳಿ
18/06/2015

Jun 18, 2015

ಅನ್ನವೆಂಬ "ಭಾಗ್ಯ"ವೂ ಮನುಜನೆಂಬ "ಆಲಸಿ"ಯೂ

annabhagya
Dr Ashok K R
ಸಿದ್ಧರಾಮಯ್ಯ ಸರಕಾರದ ಅನ್ನಭಾಗ್ಯ ಯೋಜನೆ ಮತ್ತೆ ಚರ್ಚೆಯ ವಿಷಯವಾಗಿದೆ. ಕಾರಣ ಎಸ್.ಎಲ್.ಭೈರಪ್ಪ, ಕುಂ.ವೀರಭದ್ರಪ್ಪ ಮತ್ತು ದೇಜಗೌ ಅದನ್ನು ವಿರೋಧಿಸುವ ಮಾತುಗಳನ್ನಾಡಿದ್ದಾರೆ. ಭೈರಪ್ಪನವರು ಅನ್ನಭಾಗ್ಯ ಸೋಮಾರಿಗಳನ್ನು ಹುಟ್ಟುಹಾಕುತ್ತಿದೆ, ಇದು ದೇಶ ನಾಶದ ಕೆಲಸ ಎಂದು ಗುಡುಗಿರುವ ಬಗ್ಗೆ ವರದಿಗಳು ಬಂದಿವೆ. ಇಲ್ಲಿ ಮೇಲೆ ಹೆಸರಿಸಿರುವ ಲೇಖಕರು ನಿಮಿತ್ತ ಮಾತ್ರ. ಅನ್ನಭಾಗ್ಯವೆಂಬುದು ಸೋಮಾರಿಗಳನ್ನು ತಯಾರಿಸುವ ಯೋಜನೆ ಎಂಬ ಭಾವನೆ ಅನೇಕರಲ್ಲಿದೆ. ಜನರ ದಿನವಹೀ ಮಾತುಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಸಿದ್ಧು ಸರಕಾರದ ಈ ಯೋಜನೆ ಟೀಕೆಗೆ ಗ್ರಾಸವಾಗಿದೆ. ಮತ್ತೀ ಟೀಕೆಯನ್ನು ಮಾಡುತ್ತಿರುವವರ ಆರ್ಥಿಕ ಸ್ಥಿತಿಗತಿಗಳನ್ನು ಗಮನಿಸಿದರೆ ಹೆಚ್ಚಿನಂಶ ಅವರು ಮಧ್ಯಮವರ್ಗದವರೇ ಆಗಿರುತ್ತಾರೆ. ಕೆಳ ಮಧ್ಯಮವರ್ಗದಿಂದ ಉಚ್ಛ ಮಧ್ಯಮವರ್ಗದೆಡೆಗೆ ಸಾಗುತ್ತಿರುವವರು, ಮಧ್ಯಮವರ್ಗದಿಂದ ಶ್ರೀಮಂತ ವರ್ಗಕ್ಕೆ ಸಾಗುತ್ತಿರುವವರ ಸಂಖೈ ಈ ಟೀಕಾಕಾರರಲ್ಲಿ ಹೆಚ್ಚಿದೆ.. ಈ ಅನ್ನಭಾಗ್ಯ ಯೋಜನೆ ನಿಜಕ್ಕೂ ಇಷ್ಟೊಂದು ಟೀಕೆಗೆ ಅರ್ಹವೇ?

ಮೊದಲಿಗೆ ಈ ಯೋಜನೆಗೆ ಇಟ್ಟ ಹೆಸರು ಟೀಕೆಗೆ ಅರ್ಹ. ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಆಹಾರವಿಲ್ಲದೆ ಕಂಗೆಟ್ಟು ಪ್ರಾಣಿ / ಮನುಷ್ಯ ಹಸಿವಿನಿಂದ ಸಾಯುವುದು ಪ್ರಕೃತಿ ರೂಪಿಸಿದ ಜನಸಂಖ್ಯಾ ನಿಯಂತ್ರಣ ನಿಯಮ. ಮಾನವ ಪ್ರಕೃತಿಯಿಂದ ದೂರ ಸರಿದು, ಪ್ರಕೃತಿಯೊಡ್ಡಿದ ಸವಾಲುಗಳನ್ನು ಎದುರಿಸಲಾರಂಭಿಸಿದ. ಬಹಳಷ್ಟು ಬಾರಿ ಸೋತ, ಕೆಲವೊಮ್ಮೆ ಗೆದ್ದ. ಇದಕ್ಕಿಂತಲೂ ಹೆಚ್ಚಾಗಿ Survival of the fittest ಎಂಬ ಪ್ರಕೃತಿಯ ನಿಯಮವನ್ನು ಮೀರುವುದಕ್ಕಾಗಿ ಮಾನವೀಯತೆಯ ಮೊರೆಹೊಕ್ಕ. ಈ ಮಾನವೀಯತೆಯ ಕಾರಣದಿಂದಲೇ ಅಲ್ಲವೇ ಅನ್ಯ ಮನುಷ್ಯನೊಬ್ಬ ಹಸಿವಿನಿಂದ ಸತ್ತರೆ, ಆಹಾರ ಸಿಗದೆ ಸತ್ತರೆ ‘ಕರುಳು ಚುರುಕ್’ ಎನ್ನುವುದು? ಮನುಷ್ಯ ನಿರ್ಮಿತ ಗಡಿಗಳು ದೇಶವನ್ನು ರಚಿಸಿ, ದೇಶದೊಳಗೊಂದಷ್ಟು ರಾಜ್ಯಗಳನ್ನು ಸೃಷ್ಟಿಸಿ ಮನುಷ್ಯನ ಸ್ವೇಚ್ಛೆಗಳಿಗೆ ಕಡಿವಾಣ ವಿಧಿಸಲು ಸಮಾಜ – ಸರಕಾರಗಳೆಲ್ಲ ರಚಿತವಾದ ನಂತರ ಸರಕಾರದ ಭಾಗವಾಗಿರುವ ಮನುಷ್ಯರಿಗೂ ಒಂದಷ್ಟು ಮಾನವೀಯತೆ ಇರಬೇಕೆಂದು ನಿರೀಕ್ಷಿಸಬಹುದು. ನೆರೆಯವನೊಬ್ಬ ಹಸಿವಿನಿಂದ ಸತ್ತಂತಾದರೆ ಅದರ ಹೊಣೆ ಸರಕಾರದ್ದಾಗುತ್ತದೆ. ಪ್ರಜೆಗಳ ಅಪೌಷ್ಟಿಕತೆಯನ್ನು, ಹಸಿವನ್ನು ಹೋಗಲಾಡಿಸುವುದು ಸರಕಾರದ ಆದ್ಯ ಕರ್ತವ್ಯವಾಗುತ್ತದೆ. ಇಷ್ಟೆಲ್ಲ ಯೋಚಿಸಿ ಯೋಜನೆಗಳನ್ನು ಸರಕಾರಗಳು ರೂಪಿಸುವುದು ಅಪರೂಪ, ರಾಜಕಾರಣಿಗಳ ಮುಖ್ಯ ದೃಷ್ಟಿ ಮುಂದಿನ ಚುನಾವಣೆಯಲ್ಲಿ ಒಂದಷ್ಟು ಹೆಚ್ಚಿನ ಮತಗಳು ಬೀಳಲು ಈ ಯೋಜನೆಯಿಂದ ಸಹಾಯವಾಗುತ್ತದಾ ಎನ್ನುವುದೇ ಆಗಿದೆ. ಓಟಿಗಾಗಿ ರಾಜಕೀಯ ಮಾಡುವುದು ತಪ್ಪೆಂದು ತೋರುತ್ತದಾದರೂ ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಯ ಗುರಿಯೇ ಚುನಾವಣೆಯಲ್ಲಿ ಗೆಲ್ಲುವುದಾಗಿರುವಾಗ ಅವರು ಮಾಡುವ ಪ್ರತೀ ಕೆಲಸವೂ ಮತಬ್ಯಾಂಕಿಗಾಗಿ ಅಲ್ಲವೇ? ಕೆಟ್ಟದು ಮಾಡಿಯೂ ಓಟುಗಳನ್ನು ಹೆಚ್ಚಿಸಿಕೊಳ್ಳಬಹುದು, ಒಳ್ಳೆಯದನ್ನು ಮಾಡಿಯೂ ಹೆಚ್ಚಿಸಿಕೊಳ್ಳಬಹುದು, ಆಯ್ಕೆ ಅವರವರಿಗೆ ಬಿಟ್ಟಿದ್ದು. ಅಪೌಷ್ಟಿಕತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬಿ.ಪಿ.ಎಲ್ ಕಾರ್ಡುದಾರರಿಗೆ ಉಚಿತ / ಅತಿ ಕಡಿಮೆ ದರಕ್ಕೆ ಅಕ್ಕಿ, ಬೇಳೆ, ಜೋಳ, ರಾಗಿ ನೀಡುವುದು ಒಪ್ಪತಕ್ಕ ವಿಚಾರವಾದರೂ ಅದಕ್ಕೆ ‘ಭಾಗ್ಯ’ ಎಂದು ಹೆಸರಿಸುವ ಅನಿವಾರ್ಯತೆ ಏನಿದೆ? ಅಪೌಷ್ಟಿಕತೆ ಹೋಗಲಾಡಿಸುವುದು ಸರಕಾರದ ಕರ್ತವ್ಯ ಮತ್ತು ಪೌಷ್ಟಿಕ ಆಹಾರವನ್ನು ಬಯಸುವುದು ಪ್ರತಿಯೊಬ್ಬ ನಾಗರೀಕನ ಹಕ್ಕು. ‘ಭಾಗ್ಯ’ ಎಂದು ಹೆಸರಿಡುವಲ್ಲಿ ವರ್ಗ ತಾರತಮ್ಯದ ದರುಶನವಾಗುತ್ತದೆ. ಸಬ್ಸಿಡಿ ಇರುವ ಗ್ಯಾಸ್ ಸಿಲಿಂಡರಿಗೆ ಅನಿಲ ಭಾಗ್ಯ ಎಂಬ ಹೆಸರಿದೆಯೇ? ಮಧ್ಯಮವರ್ಗದವರು ಪಡೆದುಕೊಳ್ಳುವ ಸೌಲತ್ತುಗಳಿಗೆ ಇಲ್ಲದ ‘ಭಾಗ್ಯ’ವೆಂಬ ನಾಮಧೇಯ ಬಡವರ ಯೋಜನೆಗಳಿಗೆ ಮಾತ್ರ ಇರುವುದ್ಯಾಕೆ? ನಮ್ಮ ಕೃಪೆಯಿಂದ ನೀವು ಬದುಕಿದ್ದೀರಿ ಎಂಬ ದಾರ್ಷ್ಟ್ಯವಿಲ್ಲದೆ ಹೋದರೆ ಈ ರೀತಿಯ ಹೆಸರಿಡಲು ಸಾಧ್ಯವೇ?

ಹೆಸರಿನಲ್ಲೇನಿದೆ ಬಿಡಿ ಎನ್ನುತ್ತೀರೇನೋ! ಸರಕಾರದ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುವವರು ಆ ವಿರೋಧಕ್ಕೆ ಸಮರ್ಥನೆಯಾಗಿ ಈ ಅಂಶಗಳನ್ನು ಪಟ್ಟಿ ಮಾಡುತ್ತಾರೆ.

1. ಉಚಿತವಾಗಿ ಅಕ್ಕಿ ನೀಡುವುದರಿಂದ ಜನರ (ಅರ್ಥಾತ್ ಬಡಜನರ) ಹೊಟ್ಟೆ ತುಂಬಿ ಅವರು ಕೆಲಸ ಕಾರ್ಯ ಮಾಡದೇ ಸೋಮಾರಿಗಳಾಗಿಬಿಡುತ್ತಾರೆ. 

2. ಉಚಿತ ಅಕ್ಕಿ ಪಡೆದುಕೊಂಡ ಜನರು ಅದನ್ನು ಕಾಳಸಂತೆಯಲ್ಲಿ ಕೆಜಿಗೆ ಹತ್ತು ರುಪಾಯಿಯಂತೆಯೋ ಹದಿನೈದು ರುಪಾಯಿಯಂತೆಯೋ ಮಾರಾಟ ಮಾಡಿಬಿಡುತ್ತಾರೆ. ತೆರಿಗೆ ಕಟ್ಟುವ ನಮ್ಮ ಹಣದಿಂದ ಸರಕಾರ ನೀಡುವ ಅಕ್ಕಿಯನ್ನು ಮಾರಿ ‘ಶೋಕಿ’ ಮಾಡುತ್ತಾರೆ. 

3. ಬಿಪಿಎಲ್ ಕಾರ್ಡುದಾರರೆಲ್ಲರೂ ಬಡವರಲ್ಲ, ನಕಲಿ ಕಾರ್ಡುದಾರರಿಗೂ ಉಚಿತವಾಗಿ ಅಕ್ಕಿ ತಲುಪಿ ಸರಕಾರದ ಅಂದರೆ ನಮ್ಮ (ಮಧ್ಯಮ ಮತ್ತು ಶ್ರೀಮಂತ ವರ್ಗದ) ಹಣ ಪೋಲಾಗುತ್ತಿದೆ.

4. ಸರಕಾರದ ಈ ಯೋಜನೆಗಳಿಂದ ಹಳ್ಳಿಗಳಲ್ಲಿ ಕೂಲಿ ಕೆಲಸಕ್ಕೆ ಜನರೇ ಸಿಗುತ್ತಿಲ್ಲ.

5. ಸರಕಾರ ಜನರಿಗೆ ಕೆಲಸ ಕೊಡುವ ಕಾರ್ಯನೀತಿ ರೂಪಿಸಬೇಕೆ ಹೊರತು ಜನರನ್ನು ಸೋಮಾರಿಗಳನ್ನಾಗಿ ಮಾಡಬಾರದು.

ಈ ಮಧ್ಯಮವರ್ಗದವರ ಮನಸ್ಥಿತಿ ಮತ್ತವರನ್ನು ಪ್ರೇರೇಪಿಸುವವರ ಮಾತುಗಳು ಕರ್ಣಾನಂದಕರವಾಗಿರುತ್ತವೆ. ಮೇಲ್ನೋಟಕ್ಕೆ ಹೌದಲ್ಲವೇ? ಇದೇ ಸತ್ಯವಲ್ಲವೇ ಎಂಬ ಭಾವನೆ ಮೂಡಿಸುವಂತಿರುತ್ತವೆ. ಮೇಲಿನ ಐದಂಶಗಳನ್ನು ಗಮನಿಸಿದರೆ ಸತ್ಯವೆಂದೇ ತೋರುತ್ತದೆಯಲ್ಲವೇ? ಕಾಳಸಂತೆಯಲ್ಲಿ ಅನ್ನಭಾಗ್ಯದ ಅಕ್ಕಿ ಮಾರಾಟವಾಗುತ್ತಿರುವುದು, ನಕಲಿ ಬಿಪಿಎಲ್ ಕಾರ್ಡುದಾರರ ಸಂಖೈ ಅಧಿಕವಾಗಿರುವುದು, ಹಳ್ಳಿಗಳಲ್ಲಿ ಕೂಲಿ ಕೆಲಸಕ್ಕೆ ಜನರು ಸಿಗದಿರುವುದು, ಸರಕಾರ ಜನರ ಕೈಗಳಿಗೆ ಕೆಲಸ ಕೊಡುವ ನೀತಿ ರೂಪಿಸಬೇಕೆನ್ನುವುದು ಸತ್ಯವೇ ಅಲ್ಲವೇ? ಆದರದು ಸಂಪೂರ್ಣ ಸತ್ಯವೇ ಎನ್ನುವುದನ್ನು ಪರಿಶೀಲಿಸುವವರ ಸಂಖೈ ತುಂಬಾನೇ ಕಡಿಮೆ.

ಅಪೌಷ್ಟಿಕತೆಯ ಪಟ್ಟಿಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಮತ್ತೇನೂ ಬೇಡ, ಆಸ್ಪತ್ರೆಗಳಲ್ಲಿ ಗರ್ಭಿಣಿ ಹೆಂಗಸರ ಮತ್ತು ಚಿಕ್ಕಮಕ್ಕಳ ರಕ್ತದ ಅಂಶ ಎಷ್ಟಿದೆ ಎಂದು ಗಮನಿಸಿದರೆ ಸಾಕು ಭಾರತದ ಅಪೌಷ್ಟಿಕತೆಯ ದರುಶನವಾಗುತ್ತದೆ. ಅಪೌಷ್ಟಿಕತೆಯಿಂದ ಜನರ ದುಡಿಯುವ ಶಕ್ತಿಯೂ ಕುಂದುತ್ತದೆ, ದುಡಿಮೆ ಕಡಿಮೆಯಾದಾಗ ಆದಾಯದಲ್ಲಿ ಕಡಿತವಾಗುತ್ತದೆ, ಆದಾಯ ಕಡಿಮೆಯಾದಾಗ ಸಹಜವಾಗಿ ಆಹಾರಧಾನ್ಯ ಖರೀದಿಸುವಿಕೆ ಕಡಿಮೆಯಾಗಿ ಅಪೌಷ್ಟಿಕತೆ ಹೆಚ್ಚುತ್ತದೆ. ವಿಷವರ್ತುಲವಿದು. ಮರಣ ಹೊಂದಿದ ನಿರ್ಗತಿಕರ ಶವವನ್ನು ಪೋಸ್ಟ್ ಮಾರ್ಟಮ್ಮಿಗೋ, ಕಾಲೇಜಿನ ಅನಾಟಮಿ ವಿಭಾಗಕ್ಕೋ ತಂದಾಗ ದೇಹದ ಹೊಟ್ಟೆಯ ಭಾಗವನ್ನು ಗಮನಿಸಿಯೇ ಅವರ ಹಸಿವನ್ನು ಅಂದಾಜಿಸಬಹುದು. ಹೊಟ್ಟೆ ಬೆನ್ನಿಗೆ ಅಂಟಿಕೊಂಡಿರುವುದನ್ನಲ್ಲಿ ಗಮನಿಸಬಹುದು. ತಾಂತ್ರಿಕ ಕಾರಣಗಳಿಂದ ಹಸಿವಿನಿಂದ ಮರಣ ಎಂದು ಬರೆಯಲಾಗುವುದಿಲ್ಲ ಅಷ್ಟೇ. ಇಂಥ ಅಪೌಷ್ಟಿಕತೆಯನ್ನು ನೀಗಿಸಲು ಒಂದಷ್ಟು ಅಕ್ಕಿಯಿಂದ ಸಾಧ್ಯವೇ? ಖಂಡಿತ ಸಾಧ್ಯವಿಲ್ಲ. ಪೌಷ್ಟಿಕತೆಯನ್ನು ಕಾಪಾಡಲು ಅಕ್ಕಿಯ ಜೊತೆಜೊತೆಗೆ ಇನ್ನೂ ಅನೇಕ ದವಸಧಾನ್ಯಗಳು ಬೇಕು. ಒಂದಷ್ಟು ಅಕ್ಕಿ/ರಾಗಿ/ಗೋಧಿಯನ್ನು ಉಚಿತವಾಗಿ ನೀಡಿದಾಗ ಅಕ್ಕಿಗೆಂದು ವೆಚ್ಚ ಮಾಡುತ್ತಿದ್ದ ದುಡ್ಡಿನಲ್ಲಿ ಮತ್ತೇನಾದರೂ ಕೊಳ್ಳಬಹುದಲ್ಲವೇ? ಅಲ್ಲಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉಚಿತ ಅಕ್ಕಿಯಿಂದ ಅಪೌಷ್ಟಿಕತೆ ದೂರಾಗುತ್ತದೆ. ಅಪೌಷ್ಟಿಕತೆ ದೂರಾದಾಗ ಮಾಡುವ ಕೆಲಸಕ್ಕೂ ವೇಗ ಮತ್ತು ಶಕ್ತಿ ದೊರೆಯುತ್ತದೆ. ಅಲ್ಲಿಗೆ ಅಕ್ಕಿಯನ್ನು ಉಚಿತವಾಗೋ ಅತಿ ಕಡಿಮೆ ಬೆಲೆಗೋ ನೀಡುವುದು ಕೊನೇ ಪಕ್ಷ ಜನರ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯಲ್ಲ.

ಉಚಿತ ಅಕ್ಕಿಯಿಂದ ಜನರ ಹೊಟ್ಟೆ ತುಂಬಿ ಅವರು ಸೋಮಾರಿಗಳಾಗಿಬಿಡುತ್ತಾರೆ ಎಂಬ ಆರೋಪ ನಗು ಬರಿಸುತ್ತದೆ. ಯಾವಾಗ ಮನುಷ್ಯ ಗುಡ್ಡಗಾಡು ಅಲೆಯುವುದನ್ನು ಬಿಟ್ಟು ಒಂದು ಕಡೆ ನೆಲೆನಿಂತನೋ ಅವತ್ತಿನಿಂದಲೇ ಮನುಷ್ಯ ಆಲಸಿ. ಮನುಷ್ಯನನ್ನು ಸೋಮಾರಿಗಳನ್ನಾಗಿ ಮಾಡುತ್ತದೆಂದು ನಮ್ಮ ಕಾರು, ಬೈಕು, ಸೈಕಲ್ಲು, ವಾಷಿಂಗ್ ಮಿಷಿನ್ನುಗಳನ್ನು ಮನೆಯಿಂದ ಎಸೆದು ಬಿಡುತ್ತೀವಾ? ಇಲ್ಲವಲ್ಲ. ಹೊಟ್ಟೆ ತುಂಬಿದ ಮನುಷ್ಯ ಸೋಮಾರಿಯಾಗುತ್ತಾನೆ ಎಂದರೆ ಉತ್ತಮ ಸಂಬಳ ಪಡೆಯುವ ಮಧ್ಯಮವರ್ಗದವರು ವರುಷಕ್ಕೆ ಒಂದೋ ಎರಡೋ ತಿಂಗಳು ಕೆಲಸ ಮಾಡಿ ಉಳಿದ ತಿಂಗಳುಗಳೆಲ್ಲ ಸೋಮಾರಿಗಳಾಗಿ ಬಿದ್ದಿರಬೇಕಿತ್ತಲ್ಲ? ಯಾಕೆ ನಾಲ್ಕಂಕಿಯಿಂದ ಐದಂಕಿಗೆ, ಐದಂಕಿಯಿಂದ ಆರಂಕಿಯ ಸಂಬಳಕ್ಕೆ ಜಿಗಿಯಲು ಹಾತೊರೆಯುತ್ತಲೇ ಇರುತ್ತಾರೆ? ಮನುಷ್ಯನ ಹಸಿವು ಹೊಟ್ಟೆಗೆ ಮಾತ್ರ ಸಂಬಂಧಿಸಿದ್ದಲ್ಲ. ಹೊಟ್ಟೆ ತುಂಬಿದ ಮನುಷ್ಯನಿಗೆ ಮತ್ತ್ಯಾವುದರಲ್ಲೋ ಆಸಕ್ತಿ ಕೆರಳಿ ಹಸಿವುಂಟಾಗುತ್ತದೆ. ಆ ಹಸಿವು ತೀರಿಸಿಕೊಳ್ಳಲು ಕೆಲಸ ಮಾಡುತ್ತಲೇ ಇರುತ್ತಾನೆ. ಜನರ ಸೋಮಾರಿತನಕ್ಕೆ ಉದಾಹರಣೆಯಾಗಿ ಕೃಷಿ ಕೆಲಸಕ್ಕೆ ಕಾರ್ಮಿಕರು ಸಿಗುತ್ತಿಲ್ಲ ಎಂಬ ಅಂಶವನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗುತ್ತಿದೆ. ಸ್ವಾಮಿ, ಈ ಅನ್ನಭಾಗ್ಯವೆಂಬ ಹಕ್ಕಿನ ಯೋಜನೆ ಜಾರಿಯಾಗುವುದಕ್ಕೆ ಮುಂಚಿನಿಂದಲೇ ಕೃಷಿ ಕೆಲಸಕ್ಕೆ ಕಾರ್ಮಿಕರ ಅಭಾವವಿದೆ. ಅದಕ್ಕೆ ಕೃಷಿಯೆಂಬುದು ಆಕರ್ಷಕ, ಲಾಭ ತರುವ ವೃತ್ತಿಯಾಗಿ ಉಳಿದಿಲ್ಲ ಎಂಬುದು ಎಷ್ಟು ಸತ್ಯವೋ ಬಿಸಿಲು ಮಳೆ ಚಳಿ ಗಾಳಿಯಲ್ಲಿ ದುಡಿಯುವುದಕ್ಕಿಂತ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲೋ ಮತ್ತೊಂದು ಕಾರ್ಖಾನೆಯಲ್ಲೋ ಸೂರಿನಡಿಯಲ್ಲಿ ದುಡಿಯುವುದು ಉತ್ತಮವೆಂಬ ಭಾವನೆಯೂ ಕಾರಣ. ಓದಿ ಕೆಲಸ ಗಿಟ್ಟಿಸಿಕೊಂಡು ತಣ್ಣಗೆ ಫ್ಯಾನಿನಡಿಯಲ್ಲೋ ಎಸಿಯ ಕೆಳಗೋ ದುಡಿಯುವುದು ನಮ್ಮಲ್ಲನೇಕರ ಆಯ್ಕೆಯೂ ಆಗಿತ್ತಲ್ಲವೇ? ಕೂಲಿ ನಾಲಿ ಮಾಡಿಕೊಂಡವರಿಗೂ ಅದೇ ಭಾವನೆ ಬಂದರದು ತಪ್ಪೇ? ಯೋಗ, ಜಿಮ್ಮು, ಸೈಕ್ಲಿಂಗೂ, ವಾಕಿಂಗೂ, ರನ್ನಿಂಗೂ ಅಂಥ ಮಾಡ್ಕೊಂಡು ಬೊಜ್ಜು ಇಳಿಸಲು ಬಡಿದಾಡುತ್ತಿರುವ ನಮಗೆ ಸೋಮಾರಿತನದ ಬಗ್ಗೆ ಮಾತನಾಡಲು ಯಾವ ನೈತಿಕತೆಯಿದೆ?

ಉಚಿತ ಅಕ್ಕಿ ಪಡೆದುಕೊಳ್ಳುತ್ತಿರುವವರು ಅದನ್ನು ಮಾರಿಕೊಳ್ಳುತ್ತಿರುವುದು ಮತ್ತು ನಕಲಿ ಬಿ.ಪಿ.ಎಲ್ ಕಾರ್ಡುದಾರರ ಸಂಖೈ ಹೆಚ್ಚಿರುವುದು ಖಂಡಿತವಾಗಿಯೂ ಸತ್ಯ. ಸರಕಾರದ ಯಾವುದೇ ಜನಪರ ಯೋಜನೆ ಕಡೇಪಕ್ಷ ಐವತ್ತರಷ್ಟು ನಿಜವಾದ ಫಲಾನುಭವಿಗಳಿಗೆ ದಕ್ಕಿದರೆ ಯಶಸ್ಸು ಕಂಡಂತೆ. ಅಕ್ಕಿ ಮಾರಿಕೊಳ್ಳುತ್ತಿರುವವರ ಸಂಖೈ ಇರುವಂತೆ ಅದನ್ನು ಉಪಯೋಗಿಸುವವರ ಸಂಖೈಯೂ ಇದೆಯಲ್ಲವೇ? ಈ ರೀತಿ ಮಾರಾಟಗೊಂಡ ಅಕ್ಕಿ ಕೊನೆಗೆ ಸೇರುವುದು ಕೂಡ ಅದೇ ಮಧ್ಯಮವರ್ಗದವರ ಮನೆಗೆ! ಅಕ್ಕಿ ಮಾರುವವರನ್ನು ಮತ್ತದನ್ನು ಕೊಳ್ಳುವವರಿಗೆ ದಂಡ ವಿಧಿಸುವ ಹಾಗಾದರೆ? ಇನ್ನು ಬಿ.ಪಿ.ಎಲ್ ಕಾರ್ಡುದಾರರ ಪಟ್ಟಿಯಲ್ಲಿ ಮಧ್ಯಮವರ್ಗದವರು, ಸಣ್ಣ ರೈತರು, ದೊಡ್ಡ ರೈತರು ಎಲ್ಲರ ಹೆಸರೂ ಸೇರಿಕೊಂಡಿದೆ. ನಕಲಿಗಳನ್ನು ತೆಗೆದುಹಾಕುವ ಪ್ರಕ್ರಿಯೆ ನಿರಂತರವಾಗಿರಬೇಕು. ಆಗ ಯೋಜನೆ ಮತ್ತಷ್ಟು ಫಲಕಾರಿಯಾಗಿ ಅರ್ಹ ಫಲಾನುಭಾವಿಗಳಿಗೆ ಉಪಯೋಗವಾಗುತ್ತದೆ.

ಜನರ ಪೌಷ್ಟಿಕತೆಯನ್ನು ದೂರ ಮಾಡುವಲ್ಲಿ ಇಂಥಹ ಕೆಲಸಗಳನ್ನು ರೂಪಿಸುವ ಸರಕಾರಗಳು ಜೊತೆಜೊತೆಗೇ ದುಡಿವ ಕೈಗಳಿಗೆ ಕೆಲಸವನ್ನೆಚ್ಚಿಸುವ ಹಾದಿಯನ್ನೂ ಹುಡುಕಬೇಕು. ಇಂತಹ ಯೋಜನೆಗಳು ಎಷ್ಟು ದಿನ – ತಿಂಗಳು – ವರುಷಗಳವರೆಗೆ ಮುಂದುವರೆಯಬೇಕು ಎಂಬ ಪ್ರಶ್ನೆಗೆ ಉತ್ತರ ದೊರಕುವುದು ಕಷ್ಟ. ಜನಸಂಖ್ಯೆ ಹೆಚ್ಚಿದೆ ನಮ್ಮಲ್ಲಿ, ಇರುವ ಜಾಗ ಕಡಿಮೆ; ಇಷ್ಟೊಂದು ದೊಡ್ಡ ಜನಸಂಖೈಯ ದೇಶದಲ್ಲಿ ಯಾರೊಬ್ಬರಲ್ಲೂ ಅಪೌಷ್ಟಿಕತೆ ಇರದ ದಿನ ಬರುವುದು ಅನೇಕನೇಕ ದಶಕಗಳ ನಂತರವೇ. ಅಲ್ಲಿಯವರೆಗೂ ಇಂತಹ ಯೋಜನೆಗಳಿರಲೇಬೇಕು – ಜನರ ಆರೋಗ್ಯಕ್ಕೆ, ಗರ್ಭಿಣಿಯ ಆರೋಗ್ಯಕ್ಕೆ, ಹುಟ್ಟುವ ಕೂಸುಗಳ ಆರೋಗ್ಯಕ್ಕೆ. ಸಮಾಜ ನಮಗೊಂದು ಬದುಕು ರೂಪಿಸಿಕೊಟ್ಟ ಕಾರಣಕ್ಕಾಗಿಯೇ ಅಲ್ಲವೇ ನಾವು ತೆರಿಗೆ ಕಟ್ಟುತ್ತಿರುವುದು? ಆ ತೆರಿಗೆ ಹಣದಲ್ಲಿ ದೊಡ್ಡ ಪಾಲು ಪರೋಕ್ಷವಾಗಿ ನಮ್ಮ ಅನುಕೂಲಕ್ಕೇ ಖರ್ಚಾಗುತ್ತದೆ. ಆ ತೆರಿಗೆ ಹಣದ ಒಂದು ಚಿಕ್ಕ ಪಾಲಿನಿಂದ ಮತ್ತೊಂದಷ್ಟು ಮಗದೊಂದಷ್ಟು ಜನರ ಏಳ್ಗೆಯಾಗಿ ಅವರೂ ತೆರಿಗೆ ಕಟ್ಟುವಂತಾಗಲೀ ಎಂದು ಆಶಿಸಬೇಕು. 

‘ಭಾಗ್ಯ’ವೆಂಬ ಹಣೆಪಟ್ಟಿಯಿಲ್ಲದೆ ಅನೇಕ ಸೌಲತ್ತುಗಳನ್ನನುಭವಿಸಿ ಸುಖಿಸುತ್ತಾ ಉದ್ದಿಮೆದಾರರಿಗೆ ನೀಡುವ ಭಾರೀ ಭಾರೀ ರಿಯಾಯಿತಿಗಳನ್ನು ಚಪ್ಪಾಳೆ ತಟ್ಟಿ ಸ್ವಾಗತಿಸುತ್ತಾ ಅಕ್ಕಿ ನೀಡುವ ಕ್ರಿಯೆಯನ್ನು ವಿರೋಧಿಸುವುದನ್ನು ಮಾನವತಾ ವಿರೋಧಿ ನಿಲುವೆಂದೇ ಪರಿಗಣಿಸಬೇಕಾಗುತ್ತದೆ.

Jun 11, 2015

ಜಾಗತೀಕರಣದ ಮುಖವಾಡಗಳನ್ನು ಕಳಚುವ “ಕಾಕ ಮೊಟ್ಟೈ”

Dr Ashok K R
ಇದು ಮಕ್ಕಳು ಮುಖ್ಯ ಭೂಮಿಕೆಯಲ್ಲಿರುವ ದೊಡ್ಡವರ ಚಿತ್ರ. ಜೈಲು ಸೇರಿರುವ ಅಪ್ಪ, ಅಪ್ಪನನ್ನು ಜೈಲಿನಿಂದ ಹೊರತರುವುದಕ್ಕಾಗಿಯೇ ದುಡ್ಡು ಕೂಡಿಡುವ ಅಮ್ಮ. ಹಣದ ಕೊರತೆಯಿಂದ ಇರುವ ಇಬ್ಬರು ಮಕ್ಕಳನ್ನು ಶಾಲೆಯಿಂದ ಬಿಡಿಸಿ ರೈಲ್ವೆ ಹಳಿಯ ಮೇಲೆ ಬಿದ್ದ ಕಲ್ಲಿದ್ದಿಲನ್ನು ಸಂಗ್ರಹಿಸುವ ಕೆಲಸಕ್ಕೆ ಹಚ್ಚುತ್ತಾಳೆ. ದೊಡ್ಡದೊಂದು ಮೇಲ್ಸೇತುವೆ ಪಕ್ಕವಿರುವ ಕೊಳಗೇರಿಯಲ್ಲಿ ವಾಸ. ಮನೆಯಲ್ಲೊಬ್ಬಳು ವಯಸ್ಸಾದ ಅಜ್ಜಿ, ತಿನ್ನೋದು, ಮಲಗೋದು ಬಿಟ್ಟರೆ ನನ್ನಿಂದ ಮತ್ತೇನು ಆಗುತ್ತಿಲ್ಲವಲ್ಲ ಎಂದು ಕೊರಗುವ ಅಜ್ಜಿ. ಆ ಎರಡು ಮಕ್ಕಳೇ ಚಿತ್ರದ ಜೀವಾಳ. ಕಾಗೆಗೊಂದಷ್ಟು ಅನ್ನ ಹಾಕಿ, ಅವುಗಳು ಅನ್ನ ತಿನ್ನಲು ಬಂದಾಗ ಅವುಗಳ ಗೂಡಿಗೆ ಕನ್ನ ಹಾಕಿ ಮೊಟ್ಟೆ ಕದಿಯುತ್ತಾರೆ; ಹಸಿ ಹಸಿ ಕುಡಿಯುತ್ತಾರೆ. ಅವರ ನಿಜ ಹೆಸರೇ ಮರೆತುಹೋಗಿ ಸಣ್ಣವ ಚಿಕ್ಕ ಕಾಕಮೊಟ್ಟೈಯಾದರೆ (ಕಾಗೆಮೊಟ್ಟೆ) ದೊಡ್ಡವ ದೊಡ್ಡ ಕಾಕಮೊಟ್ಟೈಯಾಗುತ್ತಾನೆ! ‘ಕೋಳಿ ಮೊಟ್ಟೆ ಖರೀದಿಸುವ ಶಕ್ತಿಯಿಲ್ಲ, ಕಾಗೆ ಮೊಟ್ಟೆಯಾದರೇನು? ಅದೂ ಪಕ್ಷೀನೆ ಅಲ್ಲವೇ’ ಎನ್ನುವ ಅಜ್ಜಿ ಕೆಲವೊಂದು ಆಹಾರ ಶ್ರೇಷ್ಠ ಕೆಲವೊಂದು ನಿಕೃಷ್ಠ ಎಂದು ತೀರ್ಮಾನಿಸಿಬಿಡುವ ಜನರಿಗೆ ಉತ್ತರವಾಗುತ್ತಾಳೆ.

ಕಾಗೆ ಗೂಡಿರುವ ಮರವನ್ನು ವಾಣಿಜ್ಯ ಸಂಕೀರ್ಣ ಕಟ್ಟುವ ಉದ್ದೇಶದಿಂದ ಕೆಡವುದರೊಂದಿಗೆ ಚಿತ್ರ ಮಗ್ಗಲು ಬದಲಿಸುತ್ತದೆ. ಇದೇ ಸಮಯಕ್ಕೆ ನ್ಯಾಯ ಬೆಲೆ ಅಂಗಡಿಯಿಂದ ಎಲ್ಲರಿಗೂ ಉಚಿತ ಟಿ.ವಿ ಹಂಚಲಾಗುತ್ತದೆ. ಅಮ್ಮ ಟಿ.ವಿ ತರುತ್ತಾಳೆ, ಮತ್ತೊಂದು ಟಿ.ವಿ ಅಜ್ಜಿಯ ಕೋಟಾದಲ್ಲಿ ಬಂದು ಬಿದ್ದಿರುತ್ತದೆ! ‘ಅಕ್ಕಿ ಸಿಗಲಿಲ್ಲವೇನಮ್ಮ’ ಎಂಬ ಪ್ರಶ್ನೆಗೆ ‘ಸ್ಟಾಕ್ ಇಲ್ಲವಂತೆ’ ಎಂಬ ಉತ್ತರ ಸಿಗುತ್ತದೆ! ನಮ್ಮ ಪ್ರಾಮುಖ್ಯತೆಗಳೇ ಬದಲಾಗಿಬಿಡುತ್ತಿರುವುದನ್ನು ಒಂದು ನಿಮಿಷದ ಚಿಕ್ಕ ದೃಶ್ಯದ ಮುಖಾಂತರ ನಿರ್ದೇಶಕ ಮಣಿಕಂಠನ್ ತಿಳಿಸಿಕೊಡುತ್ತಾರೆ. ಚಿತ್ರದುದ್ದಕ್ಕೂ ಇಂತಹ ದೃಶ್ಯಗಳು ಹೇರಳವಾಗಿವೆ. ನಿರ್ದೇಶಕನ ಸೂಕ್ಷ್ಮತೆ ತೋರ್ಪಡಿಸುವ ದೃಶ್ಯಗಳಿವು. ಮತ್ತೊಂದು ದೃಶ್ಯದಲ್ಲಿ ಕುಡಿಯುವ ನೀರಿನ ಸಲುವಾಗಿ ಬಿಂದಿಗೆ ಎತ್ತಿಕೊಂಡು ಹೊರಹೋಗುತ್ತಾಳೆ. ಬಿಂದಿಗೆಯಲ್ಲಿ ಚೂರೇ ಚೂರು ನೀರಿರುತ್ತದೆ. ನೀರು ಅಧಿಕವಿರುವ ನಮ್ಮ ಮನೆಗಳಲ್ಲಾದರೆ ಬಿಂದಿಗೆಯಲ್ಲುಳಿದ ಚೂರು ನೀರನ್ನು ಚೆಲ್ಲಿ ಬಿಡುತ್ತೇವೆ. ನೀರು ಕೂಡ ಲಕ್ಷುರಿಯಾದ ಕೊಳಗೇರಿಯಲ್ಲಿ ಆ ಚುಟುಕು ನೀರನ್ನು ಕೈ ತೊಳೆಯಲುಪಯೋಗಿಸುವ ಬಕೇಟಿಗೆ ಹಾಕುತ್ತಾಳೆ. ಚಿತ್ರಕಥೆ ಮಾಡಲು ಶ್ರಮ ಪಡದಿದ್ದರೆ ಇಂತಹ ಸೂಕ್ಷ್ಮಗಳನ್ನು ತೋರಿಸಲಾದೀತೆ?

ಕಾಗೆ ಗೂಡಿದ್ದ ಮರದ ಜಾಗದಲ್ಲಿ ಪಿಜ್ಜಾ ಅಂಗಡಿಯೊಂದು ಪ್ರಾರಂಭವಾಗುತ್ತದೆ. ಖ್ಯಾತ ಚಿತ್ರನಟ ಸಿಂಬು ಅದನ್ನು ಉದ್ಘಾಟಿಸುತ್ತಾನೆ. ಬಾಯಿ ಚಪ್ಪರಿಸಿ ತಿನ್ನುತ್ತಾನೆ. ಕೊಳಗೇರಿಯ ಮಕ್ಕಳಿದನ್ನು ಗಮನಿಸುತ್ತಾರೆ, ಖುಷಿ ಪಡುತ್ತಾರೆ ಮತ್ತು ಹೊರಟುಹೋಗುತ್ತಾರೆ. ಆದರೆ ನಮ್ಮ ನಾಯಕರಿಗೆ ಅದನ್ನು ತಿನ್ನಲೇಬೇಕೆಂಬ ಮನಸ್ಸಾಗುತ್ತದೆ. ಮುನ್ನೂರು ರುಪಾಯಿ ಬೆಲೆಯ ಪಿಜ್ಜಾ ಖರೀದಿಸಬೇಕೆಂಬುದೇ ಅವರಿಬ್ಬರ ಗುರಿಯಾಗಿಬಿಡುತ್ತದೆ. ಚಿತ್ರದಲ್ಲಿ ಪಿಜ್ಜಾ ನೋಡಿಕೊಂಡು ದೋಸೆ ಪಿಜ್ಜಾ ತಯಾರಿಸುತ್ತಾಳೆ ಅಜ್ಜಿ, ಮಕ್ಕಳಿಗೆ ರುಚಿಸುವುದಿಲ್ಲ. ಹೆಚ್ಚೆಚ್ಚು ಕಲ್ಲಿದ್ದಲ್ಲು ಸಿಗುವ ಜಾಗವನ್ನು ಗ್ಯಾಂಗ್ ಮನ್ ‘ಫ್ರೂಟ್ ಜ್ಯೂಸ್’ ತೋರಿಸುತ್ತಾನೆ. ಅಂತೂ ಇಂತೂ ಮುನ್ನೂರು ರುಪಾಯಿ ಕಲೆ ಹಾಕಿ ಅಂಗಡಿಗೆ ಹೋದರೆ ಕೊಳಗೇರಿಯ ಮಕ್ಕಳನ್ನು ಸೆಕ್ಯುರಿಟಿ ಒಳಗೇ ಸೇರಿಸುವುದಿಲ್ಲ. ಒಳ್ಳೆ ಬಟ್ಟೆ ಹಾಕಿಕೊಂಡರೆ ಬಿಡುತ್ತಾರೆ ಎಂಬ ಫ್ರೂಟ್ ಜ್ಯೂಸ್ ಮಾತು ಕೇಳಿ ಬಟ್ಟೆ ಖರೀದಿಸಲು ದುಡಿಯತೊಡಗುತ್ತಾರೆ. ಜಾಣ್ಮೆಯಿಂದ ಹೊಸ ಬಟ್ಟೆ ಖರೀದಿಸಿ ಅಂಗಡಿಯ ಬಳಿ ಹೋದರೆ ಮತ್ತೆ ಸೆಕ್ಯುರಿಟಿ ತಡೆಯುತ್ತಾನೆ. ಅಂಗಡಿಯ ಮ್ಯಾನೇಜರ್ ಬಂದು ದೊಡ್ಡ ಕಾಗೆಮೊಟ್ಟೆಗೆ ರಪ್ಪಂತ ಕೆನ್ನೆಗೆ ಹೊಡೆಯುತ್ತಾನೆ. ಕೊಳಗೇರಿಯ ಇತರೆ ಹುಡುಗರು ಅದನ್ನು ವೀಡಿಯೋ ಮಾಡಿಕೊಂಡುಬಿಡುತ್ತಾರೆ. ಇದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತದೆ. ಸುದ್ದಿ ಪ್ರತಿಭಟನೆಯ ಸದ್ದಾಗುವ ಮೊದಲು ಪಿಜ್ಜಾ ಅಂಗಡಿಯವರೇ ಹುಡುಗರಿಬ್ಬರನ್ನೂ ಸತ್ಕರಿಸಿ ಪಿಜ್ಜಾ ತಿನ್ನಿಸುತ್ತಾರೆ!

ಇಡೀ ಚಿತ್ರದಲ್ಲಿ ಜಾಗತೀಕರಣದ ವಿವಿಧ ಮುಖವಾಡಗಳ ದರುಶನವಾಗುತ್ತದೆ. ಪ್ರಕೃತಿಯನ್ನು ಬದಿಗೆ ಸರಿಸಿ ಪ್ರತಿಯೊಂದನ್ನು ವ್ಯಾವಹಾರಿಕ ಮಾಡಿಬಿಡುವುದು ಮೊದಲ ಹೆಜ್ಜೆ. ನಮಗೆ ಬೇಡವಾದ ವಸ್ತುವನ್ನು ಜಗಮಗಿಸುವ ಬೆಳಕಿನಲ್ಲಿಟ್ಟು, ಖ್ಯಾತಿ ಪಡೆದ ವ್ಯಕ್ತಿಗಳಿಂದ ಅದಕ್ಕೆ ಪ್ರಚಾರ ಗಿಟ್ಟಿಸಿ (ಇತ್ತೀಚಿನ ಮ್ಯಾಗಿ ಮತ್ತದರ ರೂಪದರ್ಶಿಗಳ ವಿಚಾರ ನಿಮಗೆ ನೆನಪಿರಬೇಕು) ನಮ್ಮನ್ನು ಪ್ರಚೋದನೆಗೆ ಒಳಪಡಿಸುವುದು ಎರಡನೆಯ ಹೆಜ್ಜೆ. ಆ ಪ್ರಚೋದನೆ ಯಾವ ಮಟ್ಟಕ್ಕಿರುತ್ತದೆ ಎಂದರೆ ನಮ್ಮಿಡೀ ಜೀವನದ ಗುರಿಯೇ ಆ ಬೇಡದ ವಸ್ತುವನ್ನು ಪಡೆಯುವುದಾಗಿ ಬಿಡುತ್ತದೆ, ಹೆಚ್ಚೆಚ್ಚು ಹಣ ದುಡಿಯುವುದಕ್ಕೂ ಅದೇ ಕಾರಣವಾಗುತ್ತದೆ. ಕೊಳಗೇರಿಯ ಇತರ ಮಕ್ಕಳು ಆಟವಾಡುತ್ತಾ ತರಲೆ ಮಾಡುತ್ತಾ ಕಾಲ ಕಳೆದರೆ ಪಿಜ್ಜಾದ ಆಸೆಗೆ ಬಿದ್ದವರು ಹಣದ ಹಿಂದೆ ಬೀಳುತ್ತಾರೆ. ತಮ್ಮ ಬಾಲ್ಯತನವನ್ನೇ ಕಳೆದುಕೊಳ್ಳುತ್ತಾರೆ. ಸಂಬಂಧಗಳ ಮೌಲ್ಯಗಳನ್ನು ಕಳೆದುಕೊಳ್ಳುತ್ತಾರೆ. ಜೈಲಿನಲ್ಲಿರುವ ಅಪ್ಪ ಬರದೇ ಇದ್ದರೆ ಅಷ್ಟೇ ಹೋಯ್ತು, ನಮಗೆ ಪಿಜ್ಜಾ ಮುಖ್ಯ ಎಂಬ ಮಾತನ್ನಾಡುತ್ತಾರೆ! ಕಾರು, ಬಂಗಲೆ, ಸೈಟು, ಆಸ್ತಿಯೇ ಗುರಿಯಾಗಿಸಿಕೊಂಡ ದೊಡ್ಡವರು ಮಾಡುತ್ತಿರುವುದು ಇದನ್ನೇ ಅಲ್ಲವೇ? ನೀವು ಒಳಗೆ ಹೇಗಾದರೂ ಇರಿ Outlook ಮುಖ್ಯ ಎನ್ನುವುದು ಮೂರನೆಯ ಹೆಜ್ಜೆ. Outlook ಬದಲಿಸಿಕೊಂಡು ಹೋದಾಗ ಜಾಗತೀಕರಣ ಶ್ರೀಮಂತರ ಪರವೋ ಬಡವರ ಪರವೋ ಎಂಬುದು ವೇದ್ಯವಾಗುತ್ತದೆ. ಮತ್ತಿಲ್ಲಿ ಬಡವರನ್ನು ತಡೆಯುವುದು ಶ್ರೀಮಂತರಲ್ಲ, ಬದಲಾಗಿ ಶ್ರೀಮಂತರೇ ಸಂಬಳ ಕೊಟ್ಟು ಕೆಲಸಕ್ಕಿಟ್ಟುಕೊಂಡಿರುವ ಬಡವರೇ ಬಡವರನ್ನು ತಡೆಯುತ್ತಾರೆ, ವಿರೋಧಿಸುತ್ತಾರೆ. ಈ ಚಿತ್ರದಲ್ಲಿ ಸೆಕ್ಯುರಿಟಿಯವನು ಮಕ್ಕಳನ್ನು ತಡೆದಂತೆ, ಮಧ್ಯಮ ವರ್ಗದ ಮ್ಯಾನೇಜರ್ ಕಪಾಳಕ್ಕೆ ಬಿಗಿದಂತೆ. ಸಿರಿವಂತ ಒಳ್ಳೆಯವನಾಗಿಯೇ ಉಳಿದುಬಿಡುತ್ತಾನೆ! ಜನರು ತಮ್ಮ ವಿರುದ್ಧ ಪ್ರತಿಭಟಿಸುತ್ತಾರೆ ಎಂದರಿವಾದ ತಕ್ಷಣ ನಯವಂತಿಕೆಯ ಮುಖವಾಡವನ್ನು ದಿಢೀರನೆ ಧರಿಸಿ ಮತ್ತೆ ಒಳ್ಳೆಯವರಾಗಿಬಿಡುವುದು ಜಾಗತೀಕರಣದ ವಕ್ತಾರರ ಜಾಣ್ಮೆ! ಇಡೀ ಚಿತ್ರ ಜಾಗತೀಕರಣದ ಪರವಾಗಿ, ಪಿಜ್ಜಾದ ಪರವಾಗಿ, ಕೊಳ್ಳುಬಾಕ ಸಂಸ್ಕೃತಿಯ ಪರವಾಗಿ ಉಳಿದುಬಿಡುವ ಅಪಾಯವನ್ನು ಕೊನೆಯದೊಂದು ದೃಶ್ಯ ದೂರಮಾಡಿದೆ! ಅದನ್ನು ಚಿತ್ರದಲ್ಲಿಯೇ ನೋಡಿ!

Jun 6, 2015

‘ಮ್ಯಾಗಿ’ ಮೂಡಿಸಿದ ಎಚ್ಚರ ‘ಗಣೇಶ’ನಿಂದ ಮರೆಯಾಗಿಬಿಡುವುದೇ?

ಮೂರು ದಿನಗಳಿಂದ ಮಾಧ್ಯಮಗಳಲ್ಲೆಲ್ಲಾ ಮ್ಯಾಗಿಯದ್ದೇ ಸುದ್ದಿ. ಎರಡಲ್ಲದಿದ್ದರೂ ಐದು ನಿಮಿಷಕ್ಕೆ ಪಟಾಫಟ್ ಎಂದು ತಯಾರಾಗಿ ಅಡುಗೆ ಮಾಡಿಕೊಳ್ಳಬಯಸುವ ಹಾಸ್ಟೆಲ್ ವಾಸಿಗಳಿಗೆ, ಮಕ್ಕಳಿಗೆ, ದೊಡ್ಡೋರಿಗೆಲ್ಲ ಸಾಥ್ ಕೊಟ್ಟ, ರುಚಿ ಕೊಟ್ಟ ಮ್ಯಾಗಿಯಲ್ಲಿ ವಿಷಕಾರಿ ಅಂಶಗಳು ಇರುವುದು ಬೆಳಕಿಗೆ ಬರುತ್ತಿದ್ದಂತೆ ಎಲ್ಲರೂ ಅಂಡು ಸುಟ್ಟ ಬೆಕ್ಕಿನ ಥರ ವಿಲವಿಲ ಒದ್ದಾಡುತ್ತಿದ್ದಾರೆ. ನೂಡಲ್ಸ್ ಎಂದರೆ ಮ್ಯಾಗಿ ಎಂಬಷ್ಟರ ಮಟ್ಟಿಗೆ ಬೆಳೆದ, ಬಹುತೇಕರ ಮೆಚ್ಚುಗೆಗೆ ಪಾತ್ರವಾದ ಮ್ಯಾಗಿ ಹೀಗೆ ನಮಗೆ ವಿಷವುಣ್ಣಿಸಿದೆ ಎಂಬ ಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಮ್ಯಾಗಿಯಲ್ಲಿ ವಿಷವಿದೆ ಎಂಬ ಅಂಶ ನಮ್ಮನ್ನು ಇಷ್ಟೊಂದು ವಿಹ್ವಲಗೊಳಿಸಬೇಕೆ? 

ಮ್ಯಾಗಿಯಲ್ಲಿ ಪತ್ತೆಯಾದದ್ದೇನು?
ಮ್ಯಾಗಿಯಲ್ಲಿ ದೇಹಕ್ಕೆ ಹಾನಿಯುಂಟುಮಾಡಬಲ್ಲಂಥಹ ಎರಡು ಪ್ರಮುಖ ಅಂಶಗಳು ಪತ್ತೆಯಾಗಿವೆ. ಒಂದು ಸೀಸ(lead), ಮತ್ತೊಂದು ಮೊನೋಸೋಡಿಯಮ್ ಗ್ಲುಟಾಮೇಟ್. ಸೀಸ ವಿಷಕಾರಿಯೆಂಬುದು ಸಾಬೀತಾಗಿರುವಂತದ್ದು. ದೇಹದೊಳಗೆ ಸೀಸ ಸಣ್ಣ ಪ್ರಮಾಣದಲ್ಲಿ ಸೇರುತ್ತಿದ್ದರೂ ಸಾಕು, ದೀರ್ಘಾವಧಿಯಲ್ಲಿ ತನ್ನ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಕಾರಣ ಸೀಸ ಒಮ್ಮೆ ದೇಹದೊಳಗೆ ಸೇರಿಬಿಟ್ಟರೆ ನೈಸರ್ಗಿಕವಾಗಿ ಹೊರಹಾಕುವ ಕೌಶಲ್ಯ ನಮ್ಮ ದೇಹಕ್ಕಿಲ್ಲ. ದೇಹದ ಬೆಳವಣಿಗೆಗೆ ಕ್ಯಾಲ್ಶಿಯಂ ಅತ್ಯಗತ್ಯ ಎನ್ನುವುದು ಎಲ್ಲರಿಗೂ ತಿಳಿದ ಸತ್ಯ. ದೇಹಕ್ಕೆ ಸೀಸ ಸೇರಿದಾಗ, ನಮ್ಮಲ್ಲಿರುವ ಜೀವಕೋಶಗಳು ಕ್ಯಾಲ್ಶಿಯಂ ಬದಲಿಗೆ ಸೀಸವನ್ನು ಉಪಯೋಗಿಸಿಕೊಳ್ಳಲಾರಂಭಿಸುತ್ತದೆ. ಇದು ಅಸಹಜ ಪ್ರಕ್ರಿಯೆ, ಉಪಯೋಗಿಸಿಕೊಂಡ ಸೀಸದಿಂದ ನನಗೇ ತೊಂದರೆ ಎಂದು ಜೀವಕೋಶಕ್ಕೆ ಅರಿವಾಗುವ ವೇಳೆಗೆ ಅಪಾಯ ಸಂಭವಿಸಿಬಿಟ್ಟಿರುತ್ತದೆ. ಬೆಳೆಯುತ್ತಿರುವ ಜೀವಕೋಶಗಳ ಮೇಲೆ ಪರಿಣಾಮ ಹೆಚ್ಚಾಗಿರುವ ಕಾರಣ ಆರು ವರುಷದ ಒಳಗಿನ ಮಕ್ಕಳು ಸೀಸದ ದುಷ್ಪರಿಣಾಮಗಳಿಂದ ಪೀಡಿತರಾಗುತ್ತಾರೆ. ಮಾಂಸಖಂಡ, ಮೂಳೆ, ಮಿದುಳು, ಮೂತ್ರಪಿಂಡ, ಜಠರ – ಹೀಗೆ ಬೆಳೆಯುತ್ತಿರುವ ಎಲ್ಲಾ ಅಂಗಾಂಗಗಳೂ ಸೀಸದಿಂದ ಹಾನಿಗೊಳಗಾಗುತ್ತವೆ. ಇನ್ನು ಜೀವಕೋಶಗಳ ಬೆಳವಣಿಗೆ ಬಹುತೇಕ ನಿಂತುಹೋಗಿರುವ ದೊಡ್ಡವರಲ್ಲೂ ಸೀಸದಿಂದ ದುಷ್ಪರಿಣಾಮಗಳಿವೆ. ಮುಖ್ಯವಾಗಿ ಸಂತಾನಹೀನತೆ, ಮರೆಗುಳಿತನ, ಅಧಿಕ ರಕ್ತದೊತ್ತಡ, ಮಾಂಸಖಂಡ ಮತ್ತು ಕೀಲುಗಳ ನೋವು. 

ಇನ್ನು ಮ್ಯಾಗಿಯವರು ಲೇಬಲ್ಲಿನ ಮೇಲೆ No MSG ಎಂದು ಬರೆದುಕೊಂಡಿದ್ದರು. ಆದರೆ ನೂಡಲ್ಸಿನಲ್ಲಿ MSG ಅಂದರೆ ಮೊನೋಸೋಡಿಯಮ್ ಗ್ಲುಟಾಮೇಟ್ ಪತ್ತೆಯಾಗಿತ್ತು. ಇದೊಂದೇ ಕಾರಣ ಸಾಕು ಮ್ಯಾಗಿಯನ್ನು ಸಂಪೂರ್ಣವಾಗಿ ನಿಷೇಧಿಸಿಬಿಡಲು. ಅಂದಹಾಗೆ ಈ ಮೊನೋಸೋಡಿಯಮ್ ಗ್ಲುಟಾಮೇಟ್ ಹಾನಿಕಾರಕವಾ ಅಲ್ಲವಾ ಎಂಬುದರ ಬಗ್ಗೆಯೇ ಗೊಂದಲವಿದೆ. ಆಹಾರಕ್ಕೆ ಇದನ್ನು ಹಾಕುವುದಕ್ಕೆ ಪ್ರಮುಖ ಕಾರಣ, ರುಚಿ ಗ್ರಹಿಸುವ ನಾಲಗೆಯಲ್ಲಿರುವ ಜೀವಕೋಶಗಳನ್ನು ಉದ್ರೇಕಿಸುವ ಶಕ್ತಿ ಈ ಎಂ.ಎಸ್.ಜಿಗೆ ಇದೆ. ರುಚಿ ಉದ್ರೇಕಗೊಳ್ಳುವ ಕಾರಣ ಆ ಆಹಾರವನ್ನು ಪದೇ ಪದೇ ತಿನ್ನುವಂತಾಗುತ್ತದೆ. ಕಂಪನಿಗಳ ವ್ಯಾಪಾರ ವೃದ್ಧಿಯಾಗುತ್ತದೆ! ಇಂಥದ್ದೇ ದುಷ್ಪರಿಣಾಮಗಳನ್ನು ಎಂ.ಎಸ್.ಜಿ ಉಂಟುಮಾಡುತ್ತದೆ ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲದ ಕಾರಣ ಎಂ.ಎಸ್.ಜಿಯ ಬಳಕೆ ಇನ್ನೂ ಚಾಲ್ತಿಯಲ್ಲಿದೆ. ತಲೆನೋವು, ಎದೆಬಡಿತದ ಹೆಚ್ಚಳ, ಪಾರ್ಕಿನ್ಸನ್ ಖಾಯಿಲೆ, ಮರೆವಿನ ಆಲ್ಜೀಮರ್ಸ್ ಖಾಯಿಲೆಗಳಿಗೆಲ್ಲ ಈ ಎಂ.ಎಸ್.ಜಿ ಕಾರಣವಾಗುತ್ತದೆ ಎಂದನೇಕ ಅಧ್ಯಯನಗಳು ಹೇಳುತ್ತವಾದರೂ ಇದರಿಂದಲೇ ಆ ಖಾಯಿಲೆ ಬಂತು ಎಂದು ಹೇಳುವಷ್ಟು ನಿಖರ ದಾಖಲೆಗಳಿಲ್ಲ. 

ಭಾರತದಲ್ಲಿ ಸೀಸ ಮತ್ತು ಮೊನೋಸೋಡಿಯಮ್ ಗ್ಲುಟಾಮೇಟ್ ಮ್ಯಾಗಿಯಲ್ಲಷ್ಟೇ ಇದೆ ಎಂದುಕೊಳ್ಳುವುದು ಮೂರ್ಖತನ. ಸೀಸದ ಅಂಶ ಆಹಾರದಿಂದ ಹಿಡಿದು ಗೊಂಬೆಗಳವರೆಗೆ, ಮನೆಗೆ ಬಳಿಯುವ ಬಣ್ಣದವರೆಗೆ ಇದೆ. ಸಿದ್ಧ ಆಹಾರದಲ್ಲಷ್ಟೇ ಸೀಸವಿರಬಹುದು, ತರಕಾರಿ ತಿನ್ಕೊಂಡು ಖುಷಿಯಾಗಿರ್ತೀನಿ ಎಂದು ಬೆನ್ನುತಟ್ಟಿಕೊಳ್ಳಬೇಡಿ. ಮನೆ ಹತ್ತಿರದ ತರಕಾರಿ ಅಂಗಡಿಯಿಂದಲೇ (ಅದರಲ್ಲೂ ನಗರಗಳಲ್ಲಿ) ಒಂದಷ್ಟು ಹಸಿ ಬಟಾಣಿ ತಂದು ನೀರಿನಲ್ಲಿ ನೆನೆಸಿಡಿ. ನಿಧಾನಕ್ಕೆ ನೀರು ಹಸಿರು ಬಣ್ಣಕ್ಕೆ ತಿರುಗುತ್ತದೆ. ಮತ್ತಾ ಬಣ್ಣದಲ್ಲಿ ಸೀಸದ ಅಂಶವಿರುತ್ತದೆ! ಹಸಿ ಬಟಾಣಿ ಒಂದು ಉದಾಹರಣೆಯಷ್ಟೇ, ಮಾರುಕಟ್ಟೆಯಲ್ಲಿ ಫಳಫಳ ಹೊಳೆಯುವ ಎಲ್ಲವೂ ವಿಷಕಾರಿಯಾಗಿರುತ್ತದೆ. ಸೀಸವಲ್ಲದಿದ್ದರೆ ಮತ್ತೊಂದು ವಿಷದಿಂದ. ಹೊಳೆಯುವ ವಸ್ತುಗಳೆಡೆಗೇ ಆಕರ್ಷಿತರಾಗೋ ಗ್ರಾಹಕರ ತಪ್ಪಾ? ಗ್ರಾಹಕರ ದೌರ್ಬಲ್ಯವನ್ನು ತನ್ನ ಲಾಭವನ್ನಾಗಿ ಪರಿವರ್ತಿಸಿಕೊಂಡ ವ್ಯಾಪಾರಿಯ ತಪ್ಪಾ? ಇನ್ನು ಮೊನೋಸೋಡಿಯಮ್ ಗ್ಲುಟಾಮೇಟ್ ಬಗ್ಗೆ ಚರ್ಚೆಯೇ ಬೇಡ; ಮನೆಯ ಹೊರಗೆ ಬಾಯಿ ಚಪ್ಪರಿಸಿಕೊಂಡು ತಿನ್ನುವ ಬಹುತೇಕ ಎಲ್ಲಾ ತಿಂಡಿಗಳಲ್ಲೂ ಅದು ಇದ್ದೇ ಇರುತ್ತದೆ!
ಭಾರತಕ್ಕೆ ಕೆ.ಎಫ್.ಸಿ, ಮೆಕ್ ಡೊನಾಲ್ಡ್ ನಂತಹ ಬಹುರಾಷ್ಟ್ರೀಯ ಕಂಪನಿಗಳ ಆಗಮನ ಶುರುವಾದಾಗ ಅದನ್ನು ವಿರೋಧಿಸಿದ ರೈತ ಸಂಘದವರು, ಎಡಪಂಥೀಯ ವಿಚಾರಧಾರೆಯವರೆಲ್ಲ ಅಪಹಾಸ್ಯಕ್ಕೀಡಾಗಿದ್ದರು. ‘ಅಭಿವೃದ್ಧಿ’ ಬೇಡ್ವಲ್ರೀ ಇವರಿಗೆ ಎಂದು ಗೇಲಿ ಮಾಡಿದ್ದರು. ಜಾಗತೀಕರಣದ ಪರಿಣಾಮವನ್ನು ತಡೆಯಲು ಯಾರಿಗೂ ಸಾಧ್ಯವಾಗದ ಕಾರಣ ಕೆ.ಎಫ್.ಸಿಯ ಜೊತೆಜೊತೆಗೆ ಹತ್ತಲವು ದಿಡೀರ್ ಆಹಾರ ತಯಾರಕರು ದಾಳಿ ಮಾಡಿದರು. ಅವುಗಳ ಜೊತೆಗೆ ಓಡೋಡಿ ಬಂದದ್ದು ಮ್ಯಾಗಿಯಂಥ ಬಾಯಿ ಚಪ್ಪರಿಸಿಯೇ ತಿನ್ನಬೇಕಾದಂತಹ ಸಿದ್ಧಾಹಾರ ಕಂಪನಿಗಳು. ಸಿದ್ಧ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬರಿವು ಇದ್ದರೂ ನಾವೆಲ್ಲ ಅದನ್ನು ತಿನ್ನುತ್ತಲೇ ಇದ್ದೆವು. ಈಗ ಇದ್ದಕ್ಕಿದ್ದಂತೆ ಜ್ಞಾನೋದಯವಾದಂತೆ ಮ್ಯಾಗಿಯನ್ನು ಮಾಡುವುದನ್ನೇ ಬಿಟ್ಟುಬಿಡುತ್ತೇವೆ ಎಂದು ಬಡಬಡಿಸುತ್ತಿದ್ದೇವೆ. ಕೋಕೋ ಕೋಲಾ, ಪೆಪ್ಸಿಯಂತಹ ಪಾನೀಯಗಳು ವಿಷಕ್ಕೆ ಸಮ ಎಂದು ಅಧ್ಯಯನಗಳು ಸಾರಿ ಹೇಳಿದ ಮೇಲೆ ಅದನ್ನು ಕುಡಿಯುವುದನ್ನು ಬಿಟ್ಟುಬಿಟ್ಟರಾ? ಕೆಟ್ಟ ವಸ್ತುಗಳು ಬಹುಬೇಗ ಪ್ರಿಯವಾಗಿಬಿಡುವುದು ಸುಳ್ಳಲ್ಲ. ವೃತ್ತಿಯೊಂದು ಉದ್ಯಮವಾಗಿ ಲಾಭ ನಷ್ಟವೇ ಪ್ರಮುಖವಾಗಿಬಿಟ್ಟಾಗ ಲಾಬಿ ಪ್ರಾರಂಭವಾಗುತ್ತದೆ, ಲಾಭಕ್ಕಾಗಿ ತಟ್ಟೆಗೂ ವಿಷವಿಕ್ಕುವ ಪ್ರಕ್ರಿಯೆ ವೇಗ ಪಡೆದುಕೊಳ್ಳುತ್ತದೆ. ಭೂಮಿಯಲ್ಲಿ ಬೀಜವಾಕುವ ಸಮಯದಿಂದಲೇ ವಿಷದ ತಯಾರಿ ನಡೆಯುತ್ತಿದೆ ಎಂಬುದು ವಿಪರ್ಯಾಸ. ಮ್ಯಾಗಿಯನ್ನು ವಿರೋಧಿಸುವ ಸಮೂಹ ಸನ್ನಿ ಈಗ ಕಾಣುತ್ತಿದೆ. ಇದು ಎಷ್ಟು ದಿನಗಳವರೆಗೆ ಇರಬಹುದು? ಒಂದು ತಿಂಗಳು, ಎರಡು ತಿಂಗಳು? ಕೊನೇಪಕ್ಷ ಗಣೇಶನ ಹಬ್ಬದವರೆಗೆ? ಗಣೇಶನ ಹಬ್ಬ ಬಂತೆಂದರೆ ವಿಷವನ್ನೆಲ್ಲ ಮರೆತು ಸೀಸ ತುಂಬಿದ ಬಣ್ಣದಿಂದ ಅಲಂಕೃತನಾದ ಗಣಪತಿಯನ್ನು ಕಣ್ಣಲ್ಲಿ ತುಂಬಿಕೊಂಡು ಕೊನೆಗದನ್ನು ಕೆರೆಗೆ, ನಾಲೆಗೆ ಬಿಟ್ಟು ಕೃತಾರ್ಥವಾಗುವ ಕೆಲಸವನ್ನು ಮ್ಯಾಗಿ ಮೂಡಿಸಿದ ಎಚ್ಚರಿಕೆ ತಡೆಯಬಲ್ಲದೇ? ನಿಮಗಿರುವ ಅನುಮಾನೇ ನನಗೂ ಇದೆ.
ವಿಷಯ ಸಹಾಯ: WHO, Kingcounty, Mercola, Eatingwell

Jun 5, 2015

ಐ.ಎ.ಎಸ್ ಮಾಫಿಯ .... ಭಾಗ 3

ಎಂ.ಎನ್.ವಿಜಯಕುಮಾರ್
ಕನ್ನಡಕ್ಕೆ: ಡಾ.ಅಶೋಕ್.ಕೆ.ಆರ್
ಭ್ರಷ್ಟ ಐ.ಎ.ಎಸ್ ಮಾಫಿಯ ನನ್ನನ್ನು ಗುರಿಯಾಗಿಸಿ, ನನ್ನ ಸಾವನ್ನು ಬಯಸುತ್ತಿದುದ್ಯಾಕೆ? 
ಒಬ್ಬ ಭ್ರಷ್ಟ ಐ.ಎ.ಎಸ್ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂಬ ಬೇಡಿಕೆಯಿಟ್ಟಾಗ ಅದರ ಗುರಿ ಇಡೀ ಐ.ಎ.ಎಸ್ ಮಾಫಿಯ ಆಗಿರುತ್ತದೆ. ತನ್ನ ಗುಂಪಿನ ಸದಸ್ಯನೊಬ್ಬ ಚಟುವಟಿಕೆಗಳ ಬಗ್ಗೆ ಬಾಯಿ ಬಿಡುವುದು ಮಾಫಿಯಾಗೆ ಒಪ್ಪಿತವಲ್ಲ. ಮಾಫಿಯಾದ ಸದಸ್ಯನೊಬ್ಬನ ಭ್ರಷ್ಟಾಚಾರವನ್ನು ಯಾರಾದರೂ ಬಯಲಿಗೆಳೆದರೆ ಅಂಥವರ ಜೀವನವನ್ನು ಮಾಫಿಯ ಕಷ್ಟಕರವಾಗಿಸುತ್ತದೆ, ಅಷ್ಟೇ ಅಲ್ಲ ಯಾವ ಮಟ್ಟದ ತೊಂದರೆಯನ್ನು ನೀಡಲೂ ತಯಾರಾಗಿಬಿಡುತ್ತದೆ; ಒಮ್ಮೊಮ್ಮೆ ಜೀವವನ್ನೇ ತೆಗೆದುಬಿಡುತ್ತದೆ. 
ನನ್ನ ಮೇಲೆ ನಡೆದ ಹಲ್ಲೆಗಳ ವಿರುದ್ಧ ಕೊಟ್ಟ ದೂರುಗಳನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಯಿತು. ಕೆಲವೊಂದು ವಿವರಗಳು ಈ ಕೆಳಗಿನ ಕೊಂಡಿಗಳಲ್ಲಿದೆ: 

http://depenq.com/PRESSRELEASE/MAFIAS.pdf 
http://depenq.com/PRESSRELEASE/MONNAPPA/SENGUPTA122JAN07.pdf 
http://depenq.com/PRESSRELEASE/MONNAPPA/SENGUPTA15may07.pdf 
http://depenq.com/PRESSRELEASE/SENGUPTA19JUn07.pdf 
http://depenq.com/PRESSRELEASE/MONNAPPA/SENGUPTA28SEP07.pdf 
http://depenq.com/PRESSRELEASE/MONNAPPA/SENGUPTA19DECEMBER07.pdf 
http://depenq.com/PRESSRELEASE/MONNAPPA/SENGUPTA4FEB08.pdf 
http://depenq.com/PRESSRELEASE/MONNAPPA/SENGUPTA5FEB11.pdf 
http://depenq.com/PRESSRELEASE/MNVtoPRESIDENT6MAR12.pdf 

ಸರಕಾರದ ಭ್ರಷ್ಟತೆ ವಿರುದ್ಧ ನಡೆಸಿದ ಹೋರಾಟದ ಅನುಭವಗಳನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸಲು 2009ರಲ್ಲಿ ಸರಕಾರದಿಂದ ಅನುಮತಿ ದೊರೆಯಿತು. 

2007ರಲ್ಲಿ ಪಿ.ಬಿ.ಮಹಿಷಿಯವರ ವಿರುದ್ಧ ಲೋಕಾಯುಕ್ತರಲ್ಲಿ ದೂರು ನೀಡಿದ್ದೆ. ತಿರುಗೇಟು ನೀಡುವವರಂತೆ ನನಗೆ ನೋಟೀಸಿನ ಮೇಲೆ ನೋಟೀಸು ನೀಡಲಾಯಿತು, ಬೆಳಗಾವಿಗೆ ಹೋಗುವಂತೆ ಒತ್ತಾಯಿಸಲಾಯಿತು. ನನ್ನ ಯಾವ ವಿವರಣೆಯನ್ನೂ ಅವರು ಒಪ್ಪಲಿಲ್ಲ. ಡಿಸೆಂಬರ್ 2007ರ ಐದನೇ ತಾರೀಖಿನಂದು, ರಾಷ್ಟ್ರಪತಿ ಆಡಳಿತದಲ್ಲಿದ್ದ ಕರ್ನಾಟಕದ ರಾಜ್ಯಪಾಲರಿಗೆ ಸಲಹೆಗಾರರಾಗಿದ್ದ ಎಸ್. ಕೃಷ್ಣ ಕುಮಾರ್ ಈ ರೀತಿ ಬರೆದರು: 

"ಕ್ರಮ ತೆಗೆದುಕೊಳ್ಳುವುದು (ವಿಜಯಕುಮಾರರ ವಿರುದ್ಧ) ಸರಿಯಾದ ಮಾರ್ಗವೆಂದು ನನಗನ್ನಿಸುವುದಿಲ್ಲ. ವಿವರಗಳು ಜಾಳುಜಾಳಾಗಿದ್ದು ಇಂಥದ್ದೇ ಒಂದು ತೀರ್ಪಿಗೆ ಬಂದು ಕ್ರಮ ತೆಗೆದುಕೊಳ್ಳುವುದು ಕಷ್ಟ. ಅಧಿಕಾರಿಯನ್ನು ವರ್ಗ ಮಾಡುವುದೇ ಉತ್ತಮ ಕ್ರಮ ಮತ್ತವರಿಗೆ ಇನ್ನೂ ಸೂಕ್ತವಾದ ಕೆಲಸ ನೀಡಬೇಕು. "

ಮಾಫಿಯಾದ ಅರ್ಥಕ್ಕನುಗುಣವಾಗಿ, ಭ್ರಷ್ಟ ಅಧಿಕಾರಿಗಳು ಕಾನೂನಿನ ಹಿರಿಯ ಅಧಿಕಾರಿಯ ನಿರ್ಧಾರವನ್ನು ಮೂಲೆಗುಂಪು ಮಾಡಿದರು. ಪಿ.ಬಿ.ಮಹಿಷಿಯವರು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಅವರೇ ನ್ಯಾಯಾಧೀಶನ ಸ್ಥಾನದಲ್ಲಿದ್ದ ಕೇಸಿನಲ್ಲಿ ಅವರೇ ಸಾಕ್ಷಿದಾರರಾಗಿಬಿಟ್ಟರು! ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಲು ನಿರ್ಧರಿಸಿರುವವರು ಮಾತ್ರ ನನ್ನ ಮೇಲೆ ಕೇಸು ಹಾಕಲು ಸಾಧ್ಯ ಎಂದು ಖಡಾಖಂಡಿತವಾಗಿ ತಿಳಿಸಿದೆ. ಈ ಮಧ್ಯೆ ನನ್ನ ಪತ್ನಿಯಿಂದ ಪಿ.ಬಿ.ಮಹಿಷಿಯವರ ಭ್ರಷ್ಟ ಚಟುವಟಿಕೆಗಳು ಸಾರ್ವಜನಿಕವಾಗಿದ್ದವು. ಮಹಿಷಿಯವರನ್ನು ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ತೆಗೆಯಲಾಯಿತು. ಮಹಿಷಿಯವರ ವಿಚಾರಣೆಯನ್ನಾಧರಿಸಿ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಕಾರ್ಯಸಾಧುವಲ್ಲ ಎಂದು ನಂತರ ಮುಖ್ಯ ಕಾರ್ಯದರ್ಶಿಯಾದ ಸುಧಾಕರ್ ರಾವ್ ರವರಿಗೆ ತಿಳಿದಿತ್ತು. ಡಿ.ಪಿ.ಎ.ಆರ್ ನಲ್ಲಿದ್ದ ಪಿ.ಬಿ.ಮಹಿಷಿಯವರಿಗೆ ವಿಧೇಯರಾಗಿದ್ದ ಅಧಿಕಾರಿಗಳು ನನ್ನ ವಿರುದ್ಧ ವಿಚಾರಣೆ ನಡೆಸಬಲ್ಲ ಅಧಿಕಾರಿಯ ಹುಡುಕಾಟದಲ್ಲಿದ್ದರು; ಒಬ್ಬರೂ ಸಿಗಲಿಲ್ಲ. ಅಹಮದಾಬಾದಿನ ಐ.ಐ.ಎಮ್ ನಲ್ಲಿ ‘ಆಡಳಿತದಲ್ಲಿ ಸೀಟಿಯೂದುಗರ ಪಾತ್ರದ’ ಬಗ್ಗೆ ದೇಶದ ವಿವಿದೆಡೆಯಿಂದ ಬಂದಿದ್ದ ನೂರಕ್ಕೂ ಹೆಚ್ಚು ಐ.ಎ.ಎಸ್ ಅಧಿಕಾರಿಗಳಿಗೆ ವಿವರ ನೀಡಿದೆ. ಆಗ ಅನೇಕರು ಭ್ರಷ್ಟಾಚಾರದ ವಿರುದ್ಧದ ನನ್ನ ಹೋರಾಟವನ್ನು ಪುಸ್ತಕರೂಪದಲ್ಲಿ ತರುವಂತೆ ಒತ್ತಾಯಿಸಿದರು. ಸರಕಾರಕ್ಕೆ ಅನುಮತಿಗಾಗಿ ಕೇಳಿಕೊಂಡಾಗ, ಸುಧಾಕರ್ ರಾವ್ ಪುಸ್ತಕ ಬರೆಯಲು ಅನುಮತಿ ನೀಡಿದರು. 

http://depenq.com/PRESSRELEASE/bookpermission17mar09.pdf 

ಭ್ರಷ್ಟ ಐ.ಎ.ಎಸ್ ಮಾಫಿಯಾದ ಭಾಗವಾದವರಿಗಿರುವ ಲಾಭಗಳು. 

1. ಸಾರ್ವಜನಿಕ ಆಸ್ತಿ ಮತ್ತು ಹಣವನ್ನು ಲೂಟಿ ಮಾಡುವವರಿಗೆ ಎಲ್ಲಾ ಹಂತದಲ್ಲೂ ರಕ್ಷಣೆ. 

2. ಇತರೆ ರಾಜ್ಯಗಳಲ್ಲಿ ಪ್ರಾಮಾಣಿಕತೆಯ ಮುಖವಾಡ ಧರಿಸಿರುವ ಅಧಿಕಾರಿಗಳು ನಿಮ್ಮ ಪರವಾಗಿ ಲಂಚವನ್ನು ಸ್ವೀಕರಿಸುತ್ತಾರೆ. ನೀವೂ ಕೂಡ ಪ್ರಾಮಾಣಿಕತೆಯ ಸೋಗು ಧರಿಸಿ ಅವರ ಪರವಾಗಿ ಲಂಚ ಸ್ವೀಕರಿಸಬಹುದು. 

3. ಇತರೆ ರಾಜ್ಯದ ಅಧಿಕಾರಿಗಳು ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಲು ನಿಮಗೆ ಸಹಕರಿಸುತ್ತಾರೆ. 

4. ಐ.ಎ.ಎಸ್ ಅಧಿಕಾರಿಯೊಬ್ಬರ ಭ್ರಷ್ಟತೆ ಹೊರಬಿದ್ದಾಗ, ಐ.ಎ.ಎಸ್ ಅಧಿಕಾರಿಗಳ ಸಂಘವು ಸಾಧ್ಯವಾದ ಎಲ್ಲಾ ರೀತಿಯಲ್ಲೂ ಭ್ರಷ್ಟರಿಗೆ ಸಹಕಾರ ನೀಡುತ್ತದೆ. ಭ್ರಷ್ಟರ ಪರವಾಗಿ ಪತ್ರಿಕಾ ಹೇಳಿಕೆಗಳನ್ನು ನೀಡುತ್ತದೆ. ಅದೇ ಒಬ್ಬ ಪ್ರಾಮಾಣಿಕ ಅಧಿಕಾರಿ ಸತ್ಯವನ್ನು ಜನರ ಮುಂದಿಡಲು ತಾನೇ ಮಾಧ್ಯಮದ ಮುಂದೆ ಬರಬೇಕು. 

5. ಪ್ರಾಮಾಣಿಕ ಅಧಿಕಾರಿಯೊಬ್ಬರ ಮೇಲೆ ದೈಹಿಕ ಹಲ್ಲೆ ನಡೆದಾಗ ಅಥವಾ ಹತ್ಯೆಯೇ ನಡೆದಾಗಲೂ ಕೂಡ ಐ.ಎ.ಎಸ್ ಅಧಿಕಾರಿಗಳ ಸಂಘ ಅಂಥ ಘಟನೆಗಳನ್ನು ಖಂಡಿಸುವ ನಿರ್ಣಯ ತೆಗೆದುಕೊಳ್ಳುವುದಿಲ್ಲ. 

ನಮ್ಮನ್ನು ಪ್ರಶ್ನಿಸದೆ ನಮ್ಮ ಜೊತೆ ಹೆಜ್ಜೆ ಹಾಕಲು ಒಪ್ಪಿದರೆ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತೇವೆ! 

ಭಾರತದ ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ಮತ್ತನೇಕ ಪ್ರಮುಖರ ಹೆಸರುಗಳನ್ನು ಉಪಯೋಗಿಸಿ ಹಣವನ್ನು ದರೋಡೆ ಮಾಡಲಾಗುತ್ತಿದೆ. ಅದಕ್ಕೆ ಸಂಬಂಧಪಟ್ಟ ಒಂದು ಪತ್ರಿಕಾ ಹೇಳಿಕೆಯಿದು 

http://depenq.com/PRESSRELEASE/MENTOR.pdf 

ಮಾಫಿಯ ದುರುಪಯೋಗಪಡಿಸಿಕೊಂಡ ಕೆಲವು ಹೆಸರುಗಳನ್ನು ಕೆಳಗೆ ನೀಡುತ್ತಿದ್ದೇನೆ 

ಕನಕಸೇನ್ ದೇಕ, ಸುನಿಲ್ ಭಾರತಿ ಮಿಟ್ಟಲ್, ಡಾ.ಎಂ.ವೀರಪ್ಪ ಮೊಯ್ಲಿ, ಭ್ರಜೇಶ್ ಮಿಶ್ರಾ, ಡಾ.ಸಿ.ರಂಗರಾಜನ್, ಮೇಧಾ ಪಾಟ್ಕರ್, ಪಿ.ಟಿ.ಉಷಾ, ಡಾ.ಪವನ್.ಕೆ.ಚಾಮ್ಲಿಂಗ್, ಪು ಲಾಲ್ ಥಾನ್ಹವಾಲ, ಕಿರೇಣ್ ರಿಜಿಜು, ಸುಂದರ್ ಲಾಲ್ ಬಹುಗುಣ, ಯಶೆ ದೋರ್ಜೆ ಥಾಂಗ್ ಚಿ, ಒಮರ್ ಅಬ್ದುಲ್ಲ, ಡಾ.ಕಿರಣ್ ಬೇಡಿ, ಜಸ್ಟೀಸ್ ಜೆ.ಎಸ್.ವರ್ಮ, ನಿತೀಶ್ ಕುಮಾರ್, ಎಂ.ಎನ್. ವಿಜಯಕುಮಾರ್, ಅಸಾಉದ್ದಿನ್ ಒವೈಸಿ, ರಾಹುಲ್ ಗಾಂಧಿ, ಮಣಿಪುರದ ಮಹಿಳೆಯರು, ಡಾ.ಪಿ.ಕೆ.ಅಯ್ಯಂಗಾರ್, ಡಾ.ಜಿ.ಮಾಧವನ್ ನಾಯರ್, ಪ್ರೊ. ಆಂಡ್ರೆ ಬೆಟೈಲಿ, ಜಿ.ಜೆ.ಜೆ.ಸಿಂಗ್, ಎನ್.ಆರ್.ನಾರಾಯಣ ಮೂರ್ತಿ.

Jun 3, 2015

ವಾಡಿ ಜಂಕ್ಷನ್ .... ಭಾಗ 12

wadi junction
Dr Ashok K R
ಜಯಂತಿಯ ಬಗೆಗಿನ ನೆನಪುಗಳಲ್ಲಿ ಮುಳುಗಿಹೋದವನು ಇದ್ದಕ್ಕಿದ್ದಂತೆ “ಅರೆರೆ” ಎಂದು ಉದ್ಗರಿಸಿ ಹಾಸಿಗೆಯ ಮೇಲೆ ಎದ್ದು ಕುಳಿತ. ನಿನ್ನೆ ಮತ್ತು ಇವತ್ತಿನ ನಡವಳಿಕೆಯ ಬಗ್ಗೆ ರಾಘವನಿಗೇ ನಗು ಬಂತು. ‘ಅಲ್ಲಾ ಎಲ್ರೂ ಗುಟ್ಟು ಮಾಡ್ತಾ ಇದ್ದಿರಾ ಮಕ್ಳಾ ಅಂತ ನಿನ್ನೆಯಲ್ಲಾ ಬೊಬ್ಬಿರಿದೆನಲ್ಲಾ. ನಾನು ಮಾಡಿರೋದಾದ್ರೂ ಅದೇ ತಾನೇ! ಜಯಂತಿ ಇಷ್ಟವಾಗ್ತಾಳೆ ಅಂತ ಹೇಳಿದ್ದಿದೆ; ಅವತ್ತು ಕಾಲೇಜ್ ಡೇ ದಿನ ಸೀರೆ ಉಟ್ಟು ಬಂದಿದ್ದವಳನ್ನು ನೋಡಿ ಒಂದಷ್ಟು ಹೆಚ್ಚೇ ತಲೆಕೆಡಿಸಿಕೊಂಡು ಇವರಿಗೂ ತಲೆ ತಿಂದಿದ್ದಿದೆ. ಆದರೆ ಅವಳ ಬಗ್ಗೆ ತಲೆಕೆಡಿಸಿಕೊಂಡಿದ್ದಕ್ಕೆ ಕಾರಣ – ಅವಳು ನನ್ನೊಡನೆ ಮಾತನಾಡಿದ್ದಕ್ಕೆ …. ಅಲ್ಲಲ್ಲ ನನ್ನನ್ನು ಗದರಿದ್ದಕ್ಕೆ – ಅನ್ನೋದನ್ನು ನಾನು ಕೂಡ ಮೂವರಲ್ಯಾರಿಗೂ ಹೇಳಿಲ್ಲ ಅಲ್ವ!!’ ಇಷ್ಟು ಯೋಚನೆ ಬರುತ್ತಿದ್ದಂತೆ ಬೆಳಿಗ್ಗೆಯಿಂದ ಮಗುಚಿ ಬಿದ್ದಿದ್ದ ಮನಸ್ಸು ನಿರಾಳವಾಯಿತು. ನಾನೂ ಇವರಿಂದ ವಿಷಯ ಮುಚ್ಚಿಟ್ಟಿದೀನಿ, ಎಲ್ಲವನ್ನೂ ಬಡಬಡಿಸಿಬಿಟ್ಟಿಲ್ಲ ಎಂಬುದಕ್ಕೆ ಸಮಾಧಾನವಾಯಿತು. ಇದರೊಟ್ಟಿಗೆ ಜಯಂತಿಯ ನೆನಪುಗಳೂ ಒತ್ತರಿಸಿ ಬಂದು ಉಲ್ಲಾಸ ಮೂಡಿತು. ಸಮಯ ನೋಡಿದ. ನಾಲ್ಕಕ್ಕೆ ಹತ್ತು ನಿಮಿಷವಿತ್ತು. ಬೆಳಿಗ್ಯೆಯಿಂದ ಏನೂ ಮಾಡಿರಲಿಲ್ಲ, ಏನನ್ನೂ ತಿಂದಿರಲಿಲ್ಲ. ಲಗುಬಗನೇ ಹಲ್ಲುಜ್ಜಿ ಸ್ನಾನ ಮಾಡಿ, ಟೀ ಶರ್ಟು ಪ್ಯಾಂಟು ಧರಿಸಿ ಹೊರಬಿದ್ದಾಗ ಗಡಿಯಾರ ನಾಲ್ಕು ತೋರಿಸುತ್ತಿತ್ತು. ಅಫ್ರೋಜ್ ಭಾಯ್ ಅಂಗಡಿಯ ಬಳಿಗೆ ತೆರಳಿದ. ಗೆಳೆಯರನ್ನು ಭೆಟ್ಟಿಯಾಗಲು. ಅವರಾಗಲೇ ಅಲ್ಲಿ ಸೇರಿದ್ದರು. ಮುಗುಳ್ನಗುತ್ತಾ ಅವರ ಬಳಿಗೆ ಹೋಗಿ ಕಟ್ಟೆಯ ಮೇಲೆ ಕುಳಿತುಕೊಳ್ಳುತ್ತಾ “ನಿನ್ನೆ ನಾ ನಡೆದುಕೊಂಡ ರೀತಿಗೆ ಸಾರಿ ಕಣ್ರಪ್ಪಾ. ನಾನು ಬೆಳಿಗ್ಗೆಯಿಂದ ರೂಮಲ್ಲಿ ಯೋಚಿಸುತ್ತಾ ಮಲಗಿದ್ದೆ. ಯೋಚನೆಗಳು ಎತ್ತೆತ್ತಲೋ ಹರಿದವು. ಕೊನೆಗೆ ಹೊಳೆದದ್ದೆಂದರೆ ನಾನು ಕೂಡ ಒಂದಷ್ಟು ಮುಖ್ಯವಾದ ವಿಷಯಗಳನ್ನೇ ನಿಮ್ಮ ಬಳಿ ಹೇಳಿಲ್ಲ. ನೀವುಗಳು ಹೇಳಿದ್ದೇ ಸತ್ಯ. ತೀರ ನೂರಕ್ಕೆ ನೂರರಷ್ಟು ಎಲ್ಲಾ ವಿಷಯಗಳನ್ನು ಯಾರೊಡನೆಯೂ ಹೇಳಿಕೊಳ್ಳಲಾಗುವುದಿಲ್ಲ. ನಿಮ್ಮ ಮಾತಿಗೆ ನನ್ನದೂ ಸಂಪೂರ್ಣ ಸಹಮತವಿದೆ” ಎಂದ್ಹೇಳಿ ಮೂವರನ್ನೂ ನೋಡಿದ. ‘ಕ್ಷಮೆ ಕೇಳೋ ಅವಶ್ಯಕತೆಯೇನಿರಲಿಲ್ಲ’ ಎಂಬಂತೆ ಅವರೂ ನಕ್ಕರು.
“ಕೊನೆಗೂ ಜ್ಞಾನೋದಯ ಆಯ್ತು ಸಾಹೇಬರಿಗೆ” ಅಭಯನ ಮಾತಿಗೆ ತಲೆಯಾಡಿಸಿದ ರಾಘವ. “ಮತ್ತೆ ಜ್ಞಾನೋದಯವಾಗಿದ್ದಕ್ಕೆ ಇವತ್ತು ನಮ್ಮ ಬಿಲ್ಲನ್ನೂ ನೀನೇ ಕೊಟ್ಟುಬಿಡು” ಎಂದು ಅಭಯ ಅಂದಾಗ “ಹೋಗ್ರೋ ಬಡ್ಡೆತ್ತವ” ಎಂದು ರೇಗಿದ. ಎಲ್ಲರೂ ಮನಸಾರೆ ಜೋರಾಗಿ ನಕ್ಕರು. ತುಷಿನ್ ರಾಘವನ ಹೆಗಲ ಮೇಲೆ ಕೈಹಾಕಿದ.

* * *

“ಅವಳನ್ನ ಅವಳು ಏನಂದುಕೊಂಡುಬಿಟ್ಟಿದ್ದಾಳೆ. ಇಂಥವರನ್ನು ಎಷ್ಟು ಜನನ್ನ ನೋಡಿಲ್ಲ ನಾನು. ಅವಳ ಯೋಗ್ಯತೆಗೆ ಇಲ್ಲದಿರೋ ಕಡೆಯೆಲ್ಲಾ ಧಿಮಾಕು ಅವಳಿಗೆ. ಬಿಡಲ್ಲ ತಮ್ಮ. ಅವಳಿಗೆ ತೊಂದರೆ ಕೊಟ್ಟೇ ತೀರ್ತೀನಿ. ಗೊತ್ತಾಗಲಿ ಅವಳಿಗೆ ನಾನು ಯಾರು ಅಂತ. ನನ್ನ ನಿಜವಾದ ಮುಖ ಗೊತ್ತಿಲ್ಲ ಅವಳಿಗೆ. ಈ ಅನೂಜ್ ಅಂದ್ರೆ ಯಾರೂಂತ ತೋರಿಸ್ತೀನಿ ಅವಳಿಗೆ” ಚಿಗುರಲು ಕಷ್ಟಪಡುತ್ತಿದ್ದ ಮೀಸೆಯ ಮೇಲೆ ಕೈಯಾಡಿಸುತ್ತಾ ಕಣ್ಣನ್ನು ಕಿಟಕಿಯಿಂದಾಚೆಗೆ ಕಾಣುತ್ತಿದ್ದ ತೆಂಗಿನ ಮರದ ಮೇಲೆ ನೆಟ್ಟು ಹೇಳಿದ ಅನೂಜ್. ಅಭಯ ಇವನ ಮಾತಿಗೆ ಏನೂ ಪ್ರತಿಕ್ರಿಯಿಸದೆ ರೆಕಾರ್ಡ್ ಬರೆಯುವುದರಲ್ಲಿ ಮಗ್ನನಾಗಿದ್ದ. ಆಗಷ್ಟೇ ಮೂರು ಚಪಾತಿ, ಹಾಫ್ ರೈಸು, ಡಬಲ್ ಆಮ್ಲೆಟ್ ತಿಂದು ಬಂದಿದ್ದ ರಾಘವನಿಗೆ ಕಣ್ಣೆಳೆಯುತ್ತಿತ್ತು. ಒಂದರ್ಧ ಘಂಟೆ ಮಲಗೆ ಎರಡಕ್ಕಿರುವ ಪ್ರಾಕ್ಟಿಕಲ್ಸಿಗೆ ಹೋದರಾಯಿತು ಎಂದುಕೊಳ್ಳುತ್ತಿದ್ದ. ಅನೂಜನ ವಟಗುಟ್ಟುವಿಕೆಯ ನಡುವೆ ನಿದ್ದೆ ಹತ್ತುವುದು ಕಷ್ಟವಲ್ಲ ಅಸಾಧ್ಯವೇ ಆಗಿತ್ತು. ರಾಘವನಿಗೆ ಅನೂಜನ ಪರಿಚಯ ಅಷ್ಟಾಗಿ ಇರಲಿಲ್ಲ. ಅನೂಜ್ ಮತ್ತು ಅಭಯ್ ಪ್ರಾಕ್ಟಿಕಲ್ಸ್ ನಲ್ಲಿ ಒಟ್ಟಿಗೇ ಇರುತ್ತಿದ್ದರಾದ್ದರಿಂದ ಒಂದಷ್ಟು ಪರಿಚಯ ಬೆಳೆದಿತ್ತು. ಅನೂಜನ ಮೇಲೆ ಬರುತ್ತಿದ್ದ ಸಿಟ್ಟನ್ನು ಅಭಯನ ಕಡೆಗೆ ತಿರುಗಿಸಿದ. 

“ಅಲ್ಲಲೋ ಅಭಿ. ಇವನನ್ನು ಯಾಕೆ ಕರ್ಕೊಂಡು ಬರ್ತೀಯಾ ರೂಮಿಗೆ”. ಅಭಯ ‘ಹಿಂದೆ ಬಂದ್ರೆ ನಾನೇನೋ ಮಾಡ್ಲಿ’ ಎಂಬಂತೆ ನೋಡಿದ. ನಿಧಾನಕ್ಕೆ ತೆಂಗಿನಮರದಿಂದ ದೃಷ್ಟಿ ತೆಗೆದು ಕತ್ತು ತಿರುಗಿಸುತ್ತಾ ಟೇಬಲ್ಲಿನ ಮೇಲಿಟ್ಟಿದ್ದ ಮೂಳೆ, ಅದರ ಪಕ್ಕಕ್ಕಿದ್ದ ಎರಡು ಪುಸ್ತಕ, ಪುಸ್ತಕದ ಮೇಲಿದ್ದ ಸಿಗರೇಟ್ ಪ್ಯಾಕು, ಎಲ್ಲವನ್ನೂ ಸಾವಕಾಶವಾಗಿ ನೋಡುತ್ತಾ ರಾಘವನ ಮುಖದ ಮೇಲೆ ದೃಷ್ಟಿಯನ್ನು ಸ್ಥಿರಪಡಿಸಿದ. ಒಂದು ಕ್ಷಣ ಹಾಗೇ ದಿಟ್ಟಿಸಿ “ಲೋ ರಾಘವ ನಾನು ಬರೋದು ಇಷ್ಟವಿಲ್ಲ ಅಂದ್ರೆ ನೇರಾನೇರ ಹೇಳಿಬಿಡು” ಎಂದ ಗಂಭೀರವಾಗಿ. “ಹಂಗಲ್ಲ ಕಣೋ ಅನೂಜ್….ಅದು”. 

“ಹಂಗೂ ಇಲ್ಲ, ಹಿಂಗೂ ಇಲ್ಲ. ಬರೋದು ಇಷ್ಟವಿಲ್ಲ ಅಂತ ಗೊತ್ತು ನನಗೆ. ಆದರೆ ನೀನ್ಯಾರ್ಗುರೂ ನನಗೆ ಬರ್ಬೇಡ ಅನ್ನಕ್ಕೆ. ನೀವಿಬ್ರೂ ನನಗೆ ಕ್ಲಾಸ್ ಮೇಟ್ಸ್. ಇದು ನನ್ನ ಕ್ಲಾಸ್ ಮೇಟ್ಸ್ ರೂಮು. ಬರಬೇಡ ಅನ್ನಕ್ಕೆ ನಿನಗೆ….ನಿನಗಷ್ಟೇ ಅಲ್ಲ ನಿಮ್ಮಿಬ್ಬರಿಗೂ ಏನು ಹಕ್ಕಿದೆ?”

ಈ ಪ್ರಶ್ನೆಗೆ ರಾಘವ, ಅಭಯ ಇಬ್ಬರ ಬಳಿಯೂ ಉತ್ತರವಿರಲಿಲ್ಲ. ಸುಮ್ಮನೆ ಕುಳಿತಿದ್ದರು. ಅನೂಜನೇ ಮಾತು ಮುಂದುವರೆಸುತ್ತಾ “ಅಲ್ಲ ಅಷ್ಟಕ್ಕೂ ನನ್ನಿಂದ ಏನು ತೊಂದರೆ ಆಗಿದೆ ನಿಮಗೆ? ನಿಜ ಹೇಳ್ಬೇಕು ಅಂದ್ರೆ ನಿಮ್ಮಿಬ್ರಿಂದಾನೇ ನನಗೆ ತೊಂದರೆ. ಇಬ್ಬರೂ ಆ ಸಿಗರೇಟ್ ಹೋಗೇನಾ ಮಿಕ್ಸ್ ಪೆಟ್ರೋಲ್ ಹಾಕ್ಸಿ ಓಡೋ ಆಟೋದ ಥರ ಬಿಡ್ತೀರ. ನನಗೆ ಕೆಮ್ಮು ಕಿತ್ಕೊಂಡು ಬಂದ್ರೂ ಒಂದು ವಾರದಿಂದ ಯಾವತ್ತಾದ್ರೂ ದೂರು ಹೇಳಿದ್ದೀನಾ? ಮುಚ್ಕೊಂಡು ಹೊಗೆ ಕುಡೀತಿಲ್ವಾ? ನನ್ನಿಂದ ಏನು ತೊಂದರೆ ಆಯ್ತು ಹೇಳು” 

‘ಇದು ನಮ್ಮ ರೂಮೋ ಅವನದೋ’ ಎಂದು ಅನುಮಾನವಾಯಿತು ರಾಘವನಿಗೆ. ಸುತ್ತಮುತ್ತ ನೋಡಿದ. ಕಿಟಕಿಯ ಕಂಬಿಯಿಂದ ಎದುರು ಗೋಡೆಯ ಮೊಳೆಗೆ ಕಟ್ಟಿದ್ದ ನೈಲಾನ್ ಹಗ್ಗದ ಮೇಲೆ ಮುದುರಿದಂತೆ ಬಿದ್ದಿದ್ದ ಸ್ಯಾಂಟ್ರೋ ಜಾದೂ ಕಂಪನಿಯ ಕೆಂಪನೆಯ ಒಳಚಡ್ಡಿ, ಪಕ್ಕಕ್ಕೆ ಹಳದಿ ಬಣ್ಣಕ್ಕೆ ತಿರುಗಿದ್ದ ರೂಪಾ ಬನಿಯನ್ನು ‘ಇದು ನಿನ್ನದೇ ರೂಮು ಕಂದಾ’ ಎಂದು ರಾಘವನಿಗಷ್ಟೇ ಕೇಳುವಂತೆ ಚೀರಿ ಹೇಳಿತು.

“ಏನು ಸುಮ್ನೆ ಕುಳಿತ್ಬಿಟ್ಟೆ. ನನ್ನಿಂದಾದ ತೊಂದರೆ ಏನು ಅಂತಾನಾದ್ರೂ ಹೇಳು ನೋಡಾಣ” ರಾಘವನ ಮುಖದಿಂದಾಚೆಗೆ ಅನೂಜನ ದೃಷ್ಟಿ ಕದಲಲಿಲ್ಲ.

“ನೋಡನೂಜ್. ನಿನ್ನಿಂದಾಗೋ ದೊಡ್ಡ ತೊಂದರೆ ಅಂದ್ರೆ ನಿನ್ನ ಮಾತು. ಏನೂಂತ ಮಾತನಾಡ್ತೀಯೋ ಮಾರಾಯ. ನಿನ್ನೆಯಷ್ಟೇ ಅವಳನ್ನ…..ಅವಳ ಹೆಸರೇನಂದೆ”

“ಅವಳ ಹೆಸರು ಹೇಳೋದಿಕ್ಕೂ ಬೇಸರವಾಗುತ್ತೆ ನನಗೆ. ಅಮೃತ ಅಂತ”

“ಹ್ಞಾ ಅಮೃತ. ನಿನ್ನೆಯಷ್ಟೇ ಅವಳನ್ನ ಸಿಕ್ಕಾಪಟ್ಟೆ ಹೊಗಳುತ್ತಿದ್ದೆ. ಅವಳು ತುಂಬಾ ಒಳ್ಳೆಯವಳು. ನೋಡೋದಿಕ್ಕಂತೂ ಥೇಟ್ ದೇವತೆ; ನಕ್ಕಾಗ ಕೆನ್ನೆಯಲ್ಲಿ ಮೂಡೋ ಪುಟ್ಟ ಪುಟ್ಟ ಗುಳಿ ನೋಡಿಬಿಟ್ಟರಂತೂ ಮುಗಿದೇ ಹೋಯಿತು. ಆ ಗುಳೀಲೇ ಮುಳುಗಿ ಸತ್ತುಬಿಡೋಣಾಂತ ಅನ್ನಿಸುತ್ತೆ. ಒಂಚೂರು ಅಹಂಕಾರವಿಲ್ಲ ಹುಡುಗಿಗೆ. ಇದರೊಟ್ಟಿಗೆ ಇನ್ನೂ ಏನೇನೋ ಹೇಳ್ದೆ. ನಾನೂ ಕೇಳ್ದೆ. ಇವತ್ತಾಗಲೇ ಪೂರ್ತಾ ಉಲ್ಟಾ ಮಾತನಾಡ್ತಿದ್ದೀಯ. ಇದನ್ನೂ ಕೇಳೋ ಕರ್ಮ ಏನಿದೆ ನಮಗೆ. ನಿನ್ನ ಹುಚ್ಚುಚ್ಚು ಮಾತುಗಳಿಂದ ನಮಗೆಷ್ಟು ಬೇಸರವಾಗುತ್ತೆ ಅನ್ನೋದನ್ನಾದ್ರೂ ಯೋಚಿಸಬಾರದಾ ನೀನು” ಇಷ್ಟು ಹೇಳಿ ಅಭಯನ ಕಡೆಗೆ ನೋಡಿದ. ಅವನು ರೆಕಾರ್ಡಿನಿಂದ ತಲೆ ಮೇಲೆತ್ತಿರಲಿಲ್ಲ. ಅನೂಜನೂ ಮಾತನಾಡದೆ ಸುಮ್ಮನಿದ್ದ. ಕೈಗಡಿಯಾರದ ಕಡೆ ಕಣ್ಣಾಡಿಸಿದ. ಎರಡಕ್ಕೆ ಐದು ನಿಮಿಷವಿತ್ತು. “ಕಾಲೇಜಿಗೆ ಟೈಮಾಯ್ತು ನಡೀರಿ” ಅಂದ. ಹೊರಟರು. ದಾರಿಯಲ್ಲಿ ಯಾರೂ ಮಾತನಾಡಲಿಲ್ಲ. ಅಭಯ ಒಳಗೊಳಗೇ ನಗುತ್ತಿದ್ದ. ತಮ್ಮ ತಮ್ಮ ಪ್ರಾಕ್ಟಿಕಲ್ಸಿಗೆ ಹೆಜ್ಜೆ ಹಾಕುವ ಮೊದಲು ಅನೂಜ್ ರಾಘವನ ಕಡೆ ನೋಡಿ “ನೋಡು ರಾಘವ ಮಾತನಾಡೋದು ನನ್ನ ಹಕ್ಕು. ಅದರಿಂದ ನಿಮಗೆ ಬೇಸರವಾಗುತ್ತೆ ಅಂದ್ರೆ ಅದು ನಿಮ್ಮಗಳ ಸಮಸ್ಯೇನೆ ಹೊರತು ನನ್ನದಲ್ಲ. ನಿಮ್ಮ ಸಮಸ್ಯೆ ನೀವೇ ಬಗೆಹರಿಸಿಕೊಳ್ಳಬೇಕು” ಗಂಭೀರವಾಗಿ ಹೇಳಿದ. ಅವನ ಗಾಂಭೀರ್ಯವನ್ನು ನೋಡಿ ರಾಘವನಿಗೆ ನಗು ತಡೆಯಲಾಗಲಿಲ್ಲ. “ಥೂ ಹಲ್ಕಾ ನನ್ಮಗನೇ. ಉದ್ಧಾರವಾಗಲ್ಲ ನೀನು. ಬರ್ತೀನಿ ಟೈಮಾಯ್ತು. ನಾಳೆ ಜಗಳವಾಡೋಣ” ಎಂದ್ಹೇಳಿ ನಗುತ್ತಾ ಲ್ಯಾಬಿನ ಕಡೆಗೆ ಹೊರಟ.

Jun 2, 2015

ಯೋಗೇಶ್ವರನೆಂಬ ಭಗೀರಥನೂ ಚನ್ನಪಟ್ಟಣದ ಕೆರೆಗಳು!

malur lake, channapatna
ಮಳೂರು ಕೆರೆಗೆ ನೀರು ಹರಿಸುತ್ತಿರುವ ದೃಶ್ಯ
ಸಿ.ಪಿ. ಯೋಗೇಶ್ವರ್ ಮೊದಲು ಖ್ಯಾತಿಗೆ ಬಂದಿದ್ದು ಸಿನಿಮಾ ತಾರೆಯಾಗಿ. ಉತ್ತರ ಧ್ರುವದಿಂ ದಕ್ಷಿಣ ದ್ರುವಕೂ, ಸೈನಿಕ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಅದ್ಭುತ ನಟರೇನಲ್ಲ! ನಂತರ ರಾಜಕಾರಣಿಯಾಗಿ ಶಾಸಕರಾಗಿ ಚನ್ನಪಟ್ಟಣದಿಂದ ಆಯ್ಕೆಯಾಗುತ್ತಲೇ ಇದ್ದಾರೆ. ಬಹುತೇಕ ಕರ್ನಾಟಕದ ಎಲ್ಲಾ ಪಕ್ಷಗಳಿಂದಲೂ ಸ್ಪರ್ಧಿಸಿಬಿಟ್ಟಿದ್ದಾರೆ! ಕರ್ನಾಟಕದಲ್ಲಿ ಅಸ್ತಿತ್ವದಲ್ಲೇ ಇಲ್ಲದಿದ್ದ ಸಮಾಜವಾದಿ ಪಕ್ಷದ ಸೈಕಲ್ಲನ್ನೂ ಒಮ್ಮೆ ಏರಿ ಇಳಿದಿದ್ದಾರೆ! ಮತ್ತು ಯಾವ ಪಕ್ಷದಲ್ಲಿ ನಿಂತರೂ ಗೆಲುವು ಸಾಧಿಸಿದ್ದಾರೆ, ಸಮಾಜವಾದಿ ಪಕ್ಷದಿಂದ ನಿಂತಾಗಲೂ ಗೆಲುವು ಅವರದ್ದೇ! ಭ್ರಷ್ಟಾತೀತ ವ್ಯಕ್ತಿಯಾ ಎಂದು ನೋಡಿದರೆ ಅದೂ ಇಲ್ಲ. ಸಿನಿಮಾಗಳಿಗಿಂತ ಹೆಚ್ಚು 'ಖ್ಯಾತಿ'ಯನ್ನು ಯೋಗೇಶ್ವರ್ ಪಡೆದದ್ದು ಮೆಗಾ ಸಿಟಿಯೆಂಬ ರಿಯಲ್ ಎಸ್ಟೇಟ್ ವಂಚನೆಯ ಮುಖಾಂತರ. ಕನ್ನಡದ ಟ್ಯಾಬ್ಲಾಯ್ಡ್ ಪತ್ರಿಕೆಗಳ ಮೂಲಕ ಮೆಗಾಸಿಟಿಯ ದಗಾಕೋರ ಎಂದೇ ಯೋಗೇಶ್ವರ್ ಖ್ಯಾತ! ವರುಷವಿಡೀ ಪತ್ರಿಕೆ, ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳದೆಯೇ, ಇಷ್ಟೆಲ್ಲ ಭ್ರಷ್ಟಾಚಾರದ ಆರೋಪ ಹೊತ್ತ ಯೋಗೇಶ್ವರ್, ಪಕ್ಷದಿಂದ ಪಕ್ಷಕ್ಕೆ ಚಂಗನೆ ಹಾರುತ್ತಿದ್ದರೂ ಗೆಲುವು ಕಾಣುವುದು ಹಿಂದಿನ ಕಾರಣವೇನು? 'ನಮ್ ಜನ ಸರೀ ಇಲ್ಲ ಕಣ್ರೀ. ಇಂಥೋರ್ನೆಲ್ಲ ಗೆಲ್ಲುಸ್ತಾರೆ ನೋಡಿ' ಎಂದು ತೀರ್ಪು ಕೊಡುವ ಮೊದಲು ಚನ್ನಪಟ್ಟಣವನ್ನು ಬೇಸಿಗೆಯಲ್ಲೊಮ್ಮೆ ಸುತ್ತಬೇಕು. ಯೋಗೇಶ್ವರ್ ಗೆಲುವಿನ ರಹಸ್ಯ ತಿಳಿಯುತ್ತದೆ.
cp yogeshwar
ಸಿ.ಪಿ.ಯೋಗೇಶ್ವರ್
ಉತ್ತಮ ರಸ್ತೆ, ಅತ್ಯುತ್ತಮ ಯೋಜನೆ, ಅದೂ ಇದೂ ಎಲ್ಲವೂ ಸರಿಯೇ, ಆದರೆ ಇವೆಲ್ಲಕ್ಕಿಂತ ಮುಖ್ಯವಾದದ್ದು ಮೂಲಭೂತವಾದ ಅಂಶಗೊಳಲ್ಲೊಂದಾದ ನೀರು. ಕೈಗಾರಿಕೆಗಳ ಹೆಚ್ಚಳದ ಮಧ್ಯೆಯೂ ಕೃಷಿ ಮುಖ್ಯವಾಗಿರುವ ದೇಶವಾದ್ದರಿಂದ ನೀರಿನ ಮಹತ್ವ ಮತ್ತಷ್ಟು ಹೆಚ್ಚು. ಕಡು ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾದಾಗ ಕೆರೆಗಳೆಲ್ಲ ಬತ್ತಿ ಹೋದಾಗ ಅದನ್ನು ತುಂಬಿಸುವ ವ್ಯಕ್ತಿಯನ್ನು ಭಗೀರಥನೆಂದು ತಿಳಿಯುವುದು ತಪ್ಪಲ್ಲ. ಯೋಗೇಶ್ವರ್ ಗೆಲುವಿನ ರಹಸ್ಯವೇ ಇದು. ಬೇಸಿಗೆಯ ಪ್ರಾರಂಭವಾಗುತ್ತಿದ್ದಂತೆ ಹತ್ತಿರದ ನದಿಗಳಿಂದ ಕೆರೆಗಳಿಗೆ ನೂರಿಪ್ಪತ್ತು ಹೆಚ್.ಪಿಯ ಮೋಟಾರಿನ ಸಹಾಯದೊಂದಿಗೆ ನೀರು ತುಂಬಿಸಲಾಗುತ್ತದೆ. ಊರಿನವರಿಗೆ ಕುಡಿಯುವ ನೀರು ದೊರೆಯುತ್ತದೆ, ಬೇಸಿಗೆ ಕೃಷಿಗೂ ಸಹಾಯವಾಗುತ್ತದೆ ಮತ್ತು ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗುತ್ತದೆ. 
kanva reservoir
ಕಣ್ವಾ ಜಲಾಶಯಕ್ಕೆ ನೀರು ಹರಿದಾಗ
ಕೆರೆಗಳನ್ನೇ ತುಂಬಿಸುತ್ತಿದ್ದವರು ಈ ಸಲ ಮತ್ತಷ್ಟು ಆಸಕ್ತಿ ತೋರಿ ಬಳಲಿ ಬರಡಾಗಿ ಬೆಂಡಾಗಿ ಹೋಗಿದ್ದ ಕಣ್ವ ಜಲಾಶಯವನ್ನೂ ತುಂಬಿಸಲು ಶ್ರಮಿಸಿದ್ದಾರೆ! ಕಾವೇರಿ ನದಿಯಿಂದ ಏತ ನೀರಾವರಿ ಯೋಜನೆಯ ಮೂಲಕ ಕಣ್ವಾ ಜಲಾಶಯವನ್ನು ತುಂಬಿಸಿದ್ದಾರೆ. ನೈಸರ್ಗಿಕವಾಗಿ ಬರಡಾಗುವ ನೀರಿನ ಮೂಲವನ್ನು ಕೃತಕವಾಗಿ ತುಂಬಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಮನುಷ್ಯ ಮಾಡುವ ಬಹುತೇಕ ಯಾವ ಕೆಲಸವೂ ಪರಿಸರಕ್ಕೆ ಪ್ರಕೃತಿಗೆ ಪೂರಕವಾಗಿರುವುದಿಲ್ಲ. ಕೃತಕವಾಗಿ ನೀರು ತುಂಬಿಸುವ ಪ್ರಕ್ರಿಯೆ ಕೂಡ ಪ್ರಕೃತಿಗೆ ತನ್ನದೇ ರೀತಿಯಲ್ಲಿ ಹಾನಿಯುಂಟುಮಾಡುತ್ತದೆ. ಇತರೆ ಹಾನಿಕಾರಕ ಕೆಲಸಗಳಿಗೆ ಹೋಲಿಸಿದರೆ ಇದು ಇದ್ದುದರಲ್ಲಿ ವಾಸಿ! ನೀರು ತುಂಬಿಸುವುದಕ್ಕೆ ತೋರುವ ಆಸಕ್ತಿಯನ್ನು ವರುಷದ ಇನ್ನಿತರೆ ತಿಂಗಳುಗಳಲ್ಲಿ ಅನ್ಯ ಕೆಲಸಗಳಿಗೂ ಯೋಗೇಶ್ವರ್ ತೋರಿಸಲಿ ಎನ್ನುವುದು ಜನರ ಆಶಯ.
kanva reservoir
ನೀರ್ದುಂಬಿದ ಕಣ್ವ

Jun 1, 2015

ಶಾಲೆಯ ಮೇಲೊಂದು ಹೊಲವ ಮಾಡಿ......

terrace garden
ವಿಯೆಟ್ನಾಮಿನ ಹೊ ಚಿ ಮಿನ್ ನಗರದ ಬಳಿ ನಿರ್ಮಿಸಲಾಗಿರುವ ಹೊಸ ಶಾಲೆ ತನ್ನ ವಿನ್ಯಾಸದಿಂದ ಗಮನ ಸೆಳೆಯುತ್ತಿದೆ. ಅದ್ಭುತ ವಿನ್ಯಾಸದ ಕಟ್ಟಡಗಳೀಗ ಅಪರೂಪವಲ್ಲವಾದರೂ ಈ ಶಾಲೆ ಗಮನ ಸೆಳೆಯಲು ಕಾರಣ ಮೂರು ಸಾವಿರದ ಎಂಟುನೂರು ಚದರ ಅಡಿಯ ಸೂರನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಲಾಗಿದೆ! ಕೃಷಿ ಭೂಮಿಯನ್ನು ನಿರಂತರವಾಗಿ ಕೃಷಿಯೇತರ ಚಟುವಟಿಕೆಗಳಿಗೆ ಉಪಯೋಗಿಸುವುದು 'ಆಧುನಿಕ' ಜಗತ್ತೆಂದು ಕರೆದುಕೊಳ್ಳಲು ಹವಣಿಸುವ ಎಲ್ಲಾ ದೇಶಗಳಲ್ಲಿ ಕಂಡುಬರುವ ಸಾಮಾನ್ಯ ಪರಿಸ್ಥಿತಿ. ಕೃಷಿ ಮತ್ತು ಹಳ್ಳಿ ಸಮಾನಾರ್ಥಕವಾಗಿಯೇ ಉಪಯೋಗಿಸುತ್ತಿದ್ದ ಪದಗಳು. ನಗರೀಕರಣದ ಪ್ರಭಾವದಿಂದ ಹಳ್ಳಿಗಳ ವಿಸ್ತೀರ್ಣ ಮತ್ತು ತತ್ ಪರಿಣಾಮವಾಗಿ ಕೃಷಿ ಭೂಮಿಯ ವಿಸ್ತೀರ್ಣದಲ್ಲಿ ಗಾಬರಿ ಹುಟ್ಟಿಸುವಷ್ಟು ಕಡಿತವಾಗುತ್ತಿದೆ. ಇದಕ್ಕೊಂದು ಪರ್ಯಾಯವೆಂಬಂತೆ ಇತ್ತೀಚಿನ ದಿನಗಳಲ್ಲಿ ಖ್ಯಾತವಾಗುತ್ತಿರುವುದು ನಗರ ಕೃಷಿ. 
vietnam roof garden
ವಿಯೆಟ್ನಾಂ ಕೂಡ ಈ ರೀತಿಯ ಕೃಷಿ ಭೂಮಿಯ ಅವಸಾನಕ್ಕೆ ಹೊರತಾಗಿಲ್ಲ. ಕೈಗಾರಿಕೀಕರಣ ಮತ್ತು ನಗರೀಕರಣ ಪ್ರಕ್ರಿಯೆ ವೇಗ ಪಡೆಯಲಾರಂಭಿಸಿದಂತೆ ಭೂಮಿಯೊಡನೆಯ ಸಂಬಂಧವನ್ನು ಕಳೆದುಕೊಳ್ಳುವವರು ಮಕ್ಕಳು. ಭಾರತದಲ್ಲೀಗ ಮೂವತ್ತರ ಆಸುಪಾಸಿನಲ್ಲಿರುವ 'ಓದಿ' 'ಕೆಲಸ' ಹುಡುಕಿಕೊಂಡ ನಮಗೇ ಹೆಚ್ಚು ಕಡಿಮೆ ಭೂಮಿಯೊಡನೆ ಸಂಪರ್ಕ ಕಡಿದು ಹೋಗಿದೆ. ಇನ್ನು ಈಗಿನ ಮಕ್ಕಳಿಗೆ ಗಿಡದಲ್ಲಿ ಬೆಳೆಯುವುದ್ಯಾವುದು, ಮರದಲ್ಲಿ ಬೆಳೆಯುವುದ್ಯಾವುದು ಎಂಬುದರ ಅರಿವೂ ಸಿಗುತ್ತಿಲ್ಲ, ಪುಸ್ತಕಗಳಲ್ಲಿ ಗಟ್ ಹಾಕಿದ್ದು ಹೆಚ್ಚು ದಿನ ಉಳಿಯುವುದಿಲ್ಲ. ವಿಯೆಟ್ನಾಮಿನಲ್ಲೂ ಅದೇ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆಗಳಿವೆ. ಓದುವ ಸಲುವಾಗಿ ನಗರದ ಮಕ್ಕಳು ಕೃಷಿಯಿಂದ ವಂಚಿತರಾಗಬಾರದೆಂಬ ಕಾರಣದಿಂದ ಇಂತಹುದೊಂದು ಅದ್ಭುತ ಶಾಲೆ ಕಟ್ಟಲಾಗಿದೆ. ಹತ್ತಿರದ ಶೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವರ ಮಕ್ಕಳು ಈ ಶಾಲೆಯ ವಿದ್ಯಾರ್ಥಿಗಳು. ನಿಯಮಿತ ಪಾಠದ ಜೊತೆ ಜೊತೆಗೆ ಕೃಷಿಯ ಪಾಠವೂ ಇರುತ್ತದೆ ಮತ್ತಾ ಪಾಠ ತರಗತಿಯೊಳಗೆ ಸೀಮಿತವಾಗದೆ ತರಗತಿಯ ಮೇಲೆ ತಾರಸಿಯಲ್ಲಿ ಮುಂದುವರೆಯುತ್ತದೆ. 
urban farming

school garden

ನೀರಿನ ಮರುಪೂರಣ, ಸೌರ ವಿದ್ಯುತ್ ಶಕ್ತಿಯ ಬಳಕೆಗಳೆಲ್ಲವೂ ಪರಿಸರದ ಮೇಲಾಗುವ ಹಾನಿಯನ್ನು ಕಡಿಮೆಗೊಳಿಸುವ ಅಂಶಗಳು. ಅವುಗಳು ಅನೇಕ ಕಡೆ ಸಾಮಾನ್ಯವಾದರೂ ಶಾಲೆಯ ತಾರಸಿಯಲ್ಲಿ ಕೃಷಿ ಕೆಲಸಕ್ಕೆ ಪ್ರೋತ್ಸಾಹ ಕೊಡುವುದು ವಿಶೇಷವೇ ಸರಿ. ಅದರ ಉದ್ದೇಶ ಪ್ರಕೃತಿ ಮತ್ತು ಮಕ್ಕಳ ಸಂಬಂಧವನ್ನು ಗಟ್ಟಿಗೊಳಿಸುವುದಕ್ಕಾಗಿ ಎಂಬ ಅಂಶ ಮತ್ತಷ್ಟು ಸಂತಸ ತರುವಂತಹುದು. ನಮ್ಮಲ್ಲೂ ಇಂಥ ಶಾಲೆಗಳನ್ನು ನಿರ್ಮಿಸುವುದು ಒಳ್ಳೆಯದಲ್ಲವೇ?!
garden children
ಸುದ್ದಿಮೂಲ: John Vibes, trueactivist.com 
ಈ ಮಾಹಿತಿಯ ಅರಿವಾಗಿದ್ದು ಜಿ.ಎನ್.ನಾಗರಾಜ್ ರವರಿಂದ. ಅವರಿಗೆ ಧನ್ಯವಾದಗಳು