Dr Ashok K R
ಇಂತಿದ್ದ ಅಭಯನನ್ನು ರಾಘವನ ರೂಮಿಗೆ ಹಾಕಿದ್ದರು. ಸಂಜೆ ರಾಘವನಿಂದ ಆಹ್ವಾನಿತಗೊಂಡು ಅವನ ರೂಮಿಗೆ ಹೋಗಿದ್ದರು ತುಷಿನ್ ಮತ್ತು ಕ್ರಾಂತಿ. ಒಂದಷ್ಟು ಲಘು ಹರಟೆಯಲ್ಲಿ ತೊಡಗಿದ್ದಾಗ ಅಭಯ್ ಎರಡು ಬ್ಯಾಗಿನೊಡನೆ ಒಳಬಂದ. “ಹಾಯ್. ನಾನು ಅಭಯ್ ಅಂತ. ಈ ರೂಮ್ ಅಲಾಟ್ ಮಾಡಿದ್ದಾರೆ ನನಗೆ. ಇಲ್ಲಿ ರಾಘವ ಅಂದ್ರೆ?” ಮೂವರೆಡೆಗೂ ಪ್ರಶ್ನಾರ್ಥಕವಾಗಿ ನೋಡಿದ. ರಾಘವ ಮಂಚದ ಮೇಲಿನಿಂದೆದ್ದು ಕೈಕುಲುಕಿದ. “ನಾನೇ ರಾಘವ. ಹುಣಸೂರಿನಿಂದ”.
“ಹುಣಸೂರಾ? ಎಲ್ಲಿ ಬರುತ್ತೆ ಅದು?”
ಅಭಯನಿಂದ ಈ ಪ್ರಶ್ನೆಯನ್ನೇ ನಿರೀಕ್ಷಿಸುತ್ತಿದ್ದ ರಾಘವ ಉಳಿದಿಬ್ಬರೆಡೆಗೊಮ್ಮೆ ನೋಡಿ ವ್ಯಂಗ್ಯದಿಂದ “ಕೇಳಿದ್ರೇನಪ್ಪಾ. ಮೈಸೂರು ಕಡೆಯವರಿಗೆ ಮಾತ್ರ ಇವರ ತಾವರೆಕೆರೆ ಗೊತ್ತಿರಬೇಕು. ಆದರೆ ಆ ಕಡೆಯವರಿಗೆ ಹುಣಸೂರು ಗೊತ್ತಿಲ್ಲದಿದ್ದರೂ ನಡೆಯುತ್ತೆ” ಎಂದ.
‘ಓಹೋ. ನಾನು ಬೆಳಿಗ್ಗೆ ತರಗತಿಯಲ್ಲಿ ಹೇಳಿದ್ದಕ್ಕೆ ಈ ಪ್ರತೀಕಾರ’ ಎಂದು ಯೋಚಿಸುತ್ತಾ ಮೊದಲ ದಿನವೇ ರೂಮ್ ಮೇಟ್ ಜೊತೆ ವಾದ ಮಾಡೋ ಪರಿಸ್ಥಿತಿ ಬಂತಲ್ಲಪ್ಪಾ ಎಂದುಕೊಂಡು ಮುಖದ ಮೇಲೆ ಬಲವಂತದಿಂದ ಮುಗುಳ್ನಗೆಯನ್ನು ತಂದುಕೊಳ್ಳುತ್ತಾ “ತಪ್ಪು ತಿಳ್ಕೊಂಡಿದ್ದೀರಾ ಫ್ರೆಂಡ್ಸ್ ನೀವು. ಇವತ್ತು ಬೆಳಿಗ್ಗೆ ಹೋಟೆಲ್ಲಿಗೆ ರೂಮು ಮಾಡಲು ಹೋದಾಗ ಕನ್ನಡದಲ್ಲೇ ಮಾತನಾಡಿ ರಾಯಚೂರ್ ಅಂದಿದ್ದಕ್ಕೆ ಆ ಹೋಟೆಲ್ ನವ ‘ಪರವಾಗಿಲ್ಲ ಸರ್. ಆಂಧ್ರದಲ್ಲಿದ್ದರೂ ಚೆನ್ನಾಗಿ ಕನ್ನಡ ಮಾತಾಡ್ತೀರಾ’ ಅಂದ. ಕೋಪ ಬರುತ್ತೋ ಇಲ್ವೋ ಹೇಳಿ ಮತ್ತೆ. ಯಾರಾದರೂ ಮೈಸೂರು ತಮಿಳುನಾಡಿನಲ್ಲಿದೆಯಾ ಎಂದರೆ ನಿಮಗೂ ಸಿಟ್ಟು ಬರೋದಿಲ್ವೇ?” ಮೂವರತ್ತ ಪ್ರಶ್ನೆ ಎಸೆದು ಉತ್ತರ ನಿರೀಕ್ಷಿಸುತ್ತಿರುವವನಂತೆ ಸುಮ್ಮನೆ ನಿಂತ. ಅವನು ಹೇಳಿದ್ದರಲ್ಲಿ ಸತ್ಯವಿದೆ ಎಂಬಂತೆ ತಲೆಯಾಡಿಸಿದರು. ರಾಘವನೇ ಮಾತನಾಡಿ “ಹೋಗಲಿ ಬಿಡೋ ಮಾರಾಯ. ನಾನೂ ಸುಮ್ನೆ ತಮಾಷೆ ಮಾಡ್ದೆ ಅಷ್ಟೇ. ಅಂದಹಾಗೆ ಇವರಿಬ್ಬರ ಪರಿಚಯವಾಯ್ತಾ?”
“ಇಲ್ಲಪ್ಪ. ನೂರಕ್ಕಿಂತ ಹೆಚ್ಚು ಜನರ ಹೆಸರು ಒಂದೇ ಸಲ ನೆನಪುಳಿಯೋದು ಹೇಗೆ?”
“ಇವನು ತುಷಿನ್” ತುಷಿನ್ ಕುಳಿತಲ್ಲಿಂದಲೇ ಹಾಯ್ ಮಾಡಿದ. “ಇವನು ಕ್ರಾಂತಿ ಸಂಭವ್” ಕ್ರಾಂತಿ ಹಾಯ್ ಎನ್ನುವಷ್ಟರಲ್ಲಿ ಅಭಯ್ “ಇವನ ಹೆಸರು ನೆನಪಿದೆ. ಕೊಂಚ ಅಪರೂಪದ ಹೆಸರಲ್ವಾ ಕ್ರಾಂತಿ ಸಂಭವ್” ಎಂದು ಹೇಳಿದ್ದನ್ನು ಕೇಳಿ ಕ್ರಾಂತಿ ‘ಒಟ್ಟಿನಲ್ಲಿ ಈ ಅಪರೂಪದ ವಿಚಿತ್ರ ಹೆಸರಿನ ಭೂತ ನಾನು ಸಾಯೋವರ್ಗೂ ಕಾಡುತ್ತೆ’ ಎಂದುಕೊಂಡ.
ನಾಲ್ಕು ಅಪರೂಪದ ಜನರ ಅಪೂರ್ವ ಮೈತ್ರಿಯ ಪ್ರಾರಂಭವಿದಾಗಿತ್ತು.
* * *
“ರೂಮಿನಲ್ಲಿ ಸಿಗರೇಟು ಸೇದಿದ್ರೆ ನಿನಗೇನಾದ್ರೂ ತೊಂದರೆಯಾಗುತ್ತಾ?” ಮುಖದ ಮೇಲಿನ ಮುಸುಕನ್ನು ಅಭಯ್ ಕೆಳಗೆ ಸರಿಸುತ್ತಿದ್ದಂತೆ ಕೇಳಿದ್ದ ರಾಘವ, ಪರಿಚಯವಾದ ಮಾರನೆಯ ದಿನ. ಅಭಯ್ ರಾಘವನನ್ನೇ ದಿಟ್ಟಿಸಿದ. “ಅಲ್ಲ, ನಿನಗೆ ತೊಂದರೆಯಾದ್ರೆ ಮುಲಾಜಿಲ್ಲದೆ ಹೇಳಿಬಿಡು. ಹೊರಗೆ ಹೋಗಿ ಸೇದ್ತೀನಿ. ಇವನ್ಯಾರಪ್ಪ ಸೇರಿದ ಎರಡು ದಿನಕ್ಕೇ ಕಾರಿಡಾರಿನಲ್ಲಿ ನಿಂತು ಸಿಗರೇಟ್ ಸುಡ್ತಿದ್ದಾನೆ ಅಂತ ಜನ ಮಾತಾಡ್ ಬಾರದಲ್ಲ. ಅದಿಕ್ಕೆ ಒಂದೆರಡು ತಿಂಗಳು ರೂಮಲ್ಲಷ್ಟೇ ಸಿಗರೇಟ್ ಸೇದೋಣ ಅಂತಿದ್ದೆ, ನಿನ್ನದೇನೂ ಅಭ್ಯಂತರವಿಲ್ಲದಿದ್ದರೆ”.
ಅಭಯ್ ಮಾತನಾಡದೆ ಸುಮ್ಮನಿದ್ದ.
“ಸರಿ ಬಿಡಪ್ಪ. ನಾನು ಹೊರಗೇ ಹೋಗ್ತೀನಿ” ಎಂದು ಮೇಲೆದ್ದ ರಾಘವ.
ಆತ ಬಾಗಿಲ ಬಳಿ ಹೋಗುತ್ತಿದ್ದಂತೆ “ತೊಂದರೆ ಅಂತ ಅಲ್ಲ. ಆದ್ರೂ ರೂಮಲ್ಲೇ ಸೇದ್ಬೇಕು ಅಂದ್ರೆ ಇವತ್ತಿನ ಮಟ್ಟಿಗೆ ನನಗೂ ಅರ್ಧ ಸಿಗರೇಟು ಕೊಡ್ಬೇಕು” ಅಭಯನ ದನಿ ಕೇಳಿ ಅಚ್ಚರಿ, ಸಂತಸದಿಂದ ತಿರುಗಿದ ರಾಘವ. “ಹಲ್ಕಾ ನನ್ಮಗನೇ. ನಾನೇನೋ ನಿನ್ನ ಮುಖಭಾವ ನೋಡಿ ಸಿಗರೇಟಿನ ವಾಸನೇನೆ ಆಗಲ್ವೇನೋ ಇವನಿಗೆ ಅಂತಿದ್ದೆ. ಅರ್ಧ ಯಾಕ್ ಗುರೂ ಪೂರ್ತಿ ಸೇದು. ಆದ್ರೆ ದಿನಾ ನನ್ಹತ್ರಾನೇ ಕೇಳ್ಬೇಡಪ್ಪಾ, ಅಷ್ಟೊಂದು ಶ್ರೀಮಂತನಲ್ಲ ನಾನು” ಕೊನೆಯ ವಾಕ್ಯಕ್ಕೆ ಒಂದಷ್ಟು ಹೆಚ್ಚೇ ಒತ್ತು ಕೊಟ್ಟುಬಿಟ್ಟೆನೇನೋ ಎಂದುಕೊಳ್ಳುತ್ತಾ ಜೇಬಿನಿಂದ ಕಿಂಗ್ ಸಿಗರೇಟು ಪ್ಯಾಕ್ ಹೊರತೆಗೆದು ಒಂದು ಸಿಗರೇಟನ್ನು ಅಭಯನಿಗೆ ಕೊಟ್ಟು ಮತ್ತೊಂದನ್ನು ತುಟಿಯ ಮಧ್ಯದಲ್ಲಿರಿಸಿಕೊಂಡು ಪ್ಯಾಂಟಿನ ಎಡಗಡೆಯ ಜೇಬಿನಿಂದ ಬೆಂಕಿಪೊಟ್ಟಣ ಹೊರತೆಗೆದ, ಕಡ್ಡಿಯಿರಲಿಲ್ಲ. ಅಭಯ ನಗುತ್ತಾ ಹಾಸಿಗೆಯಿಂದೆದ್ದು ಮಂಚದ ಬಲಬದಿಯ ಗೋಡೆಯಲ್ಲಿನ ಮೊಳೆಗೆ ನೇತುಹಾಕಿದ್ದ ಅಂಗಿಯ ಜೇಬಿನಿಂದ ಲೈಟರನ್ನು ಹೊರತೆಗೆದು ತನ್ನ ಸಿಗರೇಟನ್ನು ಹಚ್ಚಿಕೊಂಡು ಜ್ವಾಲೆಯನ್ನು ರಾಘವನ ಮುಂದೆ ಹಿಡಿದ. ರಾಘವನೂ ಹಚ್ಚಿಕೊಂಡ. ಮೊದಲ ಜುರಿಕೆಯ ಹೊಗೆಯನ್ನು ಹೊರಬಿಡುತ್ತಾ “ಹಿರಿಯರು ದೀಪದಿಂದ ದೀಪ ಹಚ್ಚಬೇಕು ಅಂದ್ರು. ನಾವದನ್ನು ತಪ್ಪಾಗಿ ಆಚರಿಸ್ತಾ ಇದ್ದೀವಲ್ವಾ” ಎಂದ ಅಭಯ್. ಇದೇನು ತಮಾಷೆ ಮಾಡ್ತಿದ್ದಾನೋ ಅಥವಾ ಯೋಚಿಸಬೇಕಾದ ವಿಷಯ ಹೇಳ್ತಿದ್ದಾನೋ ಸರಿಯಾಗಿ ತಿಳಿಯಲಾಗದೆ ಬೆಪ್ಪು ಬೆಪ್ಪಾಗಿ ನಕ್ಕ ರಾಘವ.
ಪರಿಚಯದವರು ಎಂದೆನ್ನಿಸಿಕೊಳ್ಳೋರು ಬಹಳ ಮಂದಿ ಇರಬಹುದಾದರೂ ಗೆಳೆಯರ ಸಂಖೈ ಯಾವಾಗಲೂ ಮಿತಿಯಲ್ಲೇ ಇರುತ್ತೆ. ‘ಊರೋರೆಲ್ಲಾ ನನ್ನ ಫ್ರೆಂಡ್ಸು’ ಅಂತ ಮಾತನಾಡೋರಿಗೆ ಗೆಳೆತನದ ಅರ್ಥ, ವ್ಯಾಪ್ತಿ, ವಿಸ್ತಾರ, ಆಳ ಇವಾವುದೂ ತಿಳಿಯದಿರುವ ಸಾಧ್ಯತೆಯೇ ಹೆಚ್ಚು. ಯಾವಾಗಲಾದರೊಮ್ಮೆ ಎದುರಿಗೆ ಸಿಕ್ಕಾಗ ‘ಹಾಯ್ ಹೇಗಿದ್ದೀರಾ?’ ಅಂತ ಕೇಳಿದವರನ್ನೂ ಗೆಳೆಯನೆನ್ನಲಾದೀತೇ? ಈ ಗೆಳೆಯರಲ್ಲೂ ಬಹಳಷ್ಟು ವಿಧ. ಬೆಳಿಗ್ಗೆ ತಿಂಡಿಗೆ ಹೋಗೋದರಿಂದ ಹಿಡಿದು ರಾತ್ರಿಯ ಊಟದವರೆಗೂ ಕೆಲವರು ಜೊತೆಜೊತೆಯಾಗೇ ಇರುತ್ತಾರೆ. ತರಗತಿಯಲ್ಲೂ ಅಕ್ಕಪಕ್ಕದ ಜಾಗ, ಸಿನಿಮಾ, ಶಾಪಿಂಗೂ, ಟ್ರಿಪ್ಪೂ ಎಲ್ಲದಕ್ಕೂ ಜೊತೆಯಲ್ಲಿ. ಯಾವಾಗಲೂ ನಗುನಗುತಾ ಮಾತು. ಆದರೆ ಆ ಮಾತುಗಳೆಲ್ಲಾ ಮನಸ್ಸಿನ ಪರದೆಯ ಹೊರಗಿನಿಂದಷ್ಟೇ ಬಂದಿರುತ್ತವೆಯೇ ಹೊರತು ಒಳಪದರದಲ್ಲಿನ ಮಾತುಗಳು ಅಲ್ಲೇ ಉಳಿದುಹೋಗಿರುತ್ತೆ. ಕೊನೆಗೆ ಒಬ್ಬರಿಗೊಬ್ಬರು ಪರಿಚಯವಾಗದೇನೇ ಜೀವನದ ಒಂದು ಹಂತದಲ್ಲಿ ಅವರ ಹಾದಿಗಳು ಕವಲೊಡೆದು ಬೇರೆಯಾಗಿಬಿಟ್ಟಿರುತ್ತೆ. ಮುಂದ್ಯಾವತ್ತಾದರೂ ಆ ಹಳೆಯ ಗೆಳೆಯನ ಬಗ್ಗೆ ನೆನಪಿಸಿಕೊಳ್ಳೋಣವೆಂದರೆ ಸಿನಿಮಾಕ್ಕೆ ಹೋದದ್ದರ ಹೊರತಾಗಿ ಮತ್ತೇನೂ ನೆನಪಾಗಲೊಲ್ಲದು. ನಮ್ಮಲ್ಲಿನ ಬಹಳಷ್ಟು ಗೆಳೆತನ ಹೀಗೆಯೇ ಇರುತ್ತದೆಯಲ್ಲವೇ? ಇನ್ನು ಗೆಳೆತನಕ್ಕೆ ನಿಜವಾದ ಅರ್ಥ, ಶ್ರೀಮಂತಿಕೆಯನ್ನು ತಂದುಕೊಟ್ಟವರು ಊರಿಗೆಲ್ಲಾ ಕಾಣುವಂತೆ ದಿನವೆಲ್ಲಾ ಜೊತೆಯಾಗಿರದಿದ್ದರೂ, ದಿನದಲ್ಲಿ ಕೆಲವೇ ನಿಮಿಷಗಳಷ್ಟು ಒಟ್ಟಿಗೆ ಕಳೆದರೂ – ಆ ನಿಮಿಷಗಳಲ್ಲಿ ಮನದಾಳದ ಮಾತುಗಳನ್ನಾಡುತ್ತಾ ಹೆಚ್ಚೆಚ್ಚು ಪರಿಚಿತರಾಗಿ ಹತ್ತಿರವಾಗುತ್ತಾರೆ. ಇನ್ನೂ ಹೆಚ್ಚು ಪರಿಚಿತರಾದಂತೆ ಮೌನದಲ್ಲೂ ಮನದ ಮಾತುಗಳನ್ನು ಅರ್ಥೈಸಿಕೊಳ್ಳಬಲ್ಲವರಾಗುತ್ತಾರೆ.
‘ನಾವು ನಾಲ್ಕೂ ಮಂದಿ ಹತ್ತಿರವಾಗೋದಿಕ್ಕೆ ನಮ್ಮೆಲ್ಲರಲ್ಲೂ ಇರೋ ಸಮಾನ frequencyನೇ ಕಾರಣ’ ಎಂದು ಆಗಾಗ ಹೇಳುತ್ತಿದ್ದ ಕ್ರಾಂತಿ. ಮೊದಮೊದಲು ಈ ನಾಲ್ವರು ಬೇರೆಲ್ಲರಂತೆ ಯಾವಾಗಲೂ ಜೊತೆಯಲ್ಲೇ ಇದ್ದು ಹರಟೆ ಕೊಚ್ಚುತ್ತಿದ್ದರು. ಹದಿನೈದು ದಿನಕ್ಕೇ ವಿಷಯಗಳೆಲ್ಲಾ ಖಾಲಿಯಾದವು. ನಂತರ ಮತ್ತದೇ ಪುನರಾವರ್ತನೆ. ಅಂದು ಶನಿವಾರ. ಮಧ್ಯಾಹ್ನ ಒಂದಕ್ಕೇ ತರಗತಿ ಮುಗಿದಿತ್ತು. ಕಾಲೇಜಿನೆದುರಿಗಿನ ಅಫ್ರೋಜ್ ಭಾಯ್ ಅಂಗಡಿಯಲ್ಲಿ ನಾಲ್ವರೂ ಕುಳಿತಿದ್ದರು. ತುಷಿನ್ ಕೂಡ ಸಿಗರೇಟು ಸಂಘದ ಸದಸ್ಯನಾಗಿದ್ದ. ಕ್ರಾಂತಿ ಇನ್ನೊಂದಷ್ಟು ದಿನದ ನಂತರ ಸೇರುವವನಿದ್ದ. ಕಾಲೇಜಿನ ಪಾಠ, ಹಳೆಯ ಕಾಲೇಜು, ಅಲ್ಲಿದ್ದ ಗೆಳೆಯರು – ಊಹ್ಞೂ ತುಷಿನ್ ಗ್ಯಾಕೋ ಅಂದು ತಡೆಯಲಾಗಲಿಲ್ಲ. “ಯಾಕೋ ನಾವು ನಾಲ್ಕು ಜನ ಮಾತಾಡಿದ್ದೇ ಮಾತಾಡ್ತಿದ್ದೀವಿ ಅನ್ನಿಸ್ತಿಲ್ವಾ?” ತನಗೂ ಎಂಬಂತೆ ಕೇಳಿದ. “ಅಂದ್ರೆ. ನಾವ್ನಾಲ್ಕು ಮಂದಿ ಗೆಳೆಯರಾಗೋಕೆ ಆಗಲ್ಲಾ ಅಂತಾನಾ?” ಅಭಯ ಕೇಳಿದ. ಉಳಿದಿಬ್ಬರೂ ಆತನ ಪ್ರಶ್ನೆಯ ಬಗ್ಗೆ ಯೋಚಿಸುತ್ತಾ ಉತ್ತರವನ್ನರಸುತ್ತಿದ್ದರು. “ನಾನು ಹೇಳಿದ್ದು ಆ ರೀತಿಯಲ್ಲ. ಕಾಲೇಜು ಶುರುವಾಗಿ ಎರಡು ತಿಂಗಳಾಗುತ್ತಾ ಬಂತು. ನಾನು ಮಂಡ್ಯದ ಬಗ್ಗೆ ಹೇಳೋದು, ರಾಘವ ಹುಣಸೂರನ್ನ ಹೊಗಳೋದು, ನೀನು ತಾವರೆಕೆರೆ ಬಗ್ಗೆ ಕೊಚ್ಕೊಂಡಿದ್ದು; ಅದೇ ಪಿ.ಯು.ಸಿ ಮಾರ್ಕ್ಸು, ಸಿ.ಇ.ಟಿ ರ್ಯಾಂಕು; ಮೊದಲ ಸುತ್ತಿನಲ್ಲಿ ಕೆಂಪೇಗೌಡ ಮೆಡಿಕಲ್ ಕಾಲೇಜಿನಲ್ಲಿ ತೆಗೆದುಕೊಂಡಿದ್ದೆ ಅಂತ ಕ್ರಾಂತಿ; ಇನ್ನೊಂದೈದು ಮಾರ್ಕ್ಸ್ ಬಂದಿದ್ರೆ ಮೈಸೂರು ಮೆಡಿಕಲ್ ಕಾಲೇಜಲ್ಲಿ ಸೀಟು ಸಿಕ್ತಿತ್ತು ಅಂತ ರಾಘವ; ಸೊನಾಲಿ ಇವತ್ತು ಮಸ್ತ್ ಕಾಣ್ತಿದ್ಲಲ್ವಾ ಅಂತ ನಾನು; ನೀನು ಕೊನೇ ಮಗ, ನಾನು ಒಬ್ನೇ ಮಗ….. ಇಷ್ಟು ಬಿಟ್ಟು ಮತ್ತೇನಾದರು ಮಾತನಾಡಿದ್ದೀವಾ ಎರಡು ತಿಂಗಳಿನಿಂದ. ಅಪರೂಪಕ್ಕೆ ಒಂದಷ್ಟು ಸಿನಿಮಾಗಳ ಬಗ್ಗೆ ಮಾತಾಡಿದ್ದು ಬಿಟ್ಟರೆ”. ತುಷಿನ್ ನ ಮಾತನ್ನು ಆಸಕ್ತಿಯಿಂದ ಕೇಳುತ್ತಿರುವಂತೆ ಅವನ ಕೈಯಲ್ಲಿದ್ದ ಸಿಗರೇಟು ಸುಡದೆ ಉಳಿದಿತ್ತು. ಮತ್ತೊಮ್ಮೆ ಹಚ್ಚಿಕೊಂಡ. ಅವನು ಹೇಳಿದ್ದು ಅಭಯನಿಗೂ ಸರಿಯೆನ್ನಿಸಿತು. ಆದರೆ ಉತ್ತರ ಅಥವಾ ಸಲಹೆ ಏನು ಕೊಡಬೇಕೆಂದು ಹೊಳೆಯಲಿಲ್ಲ. ಸಿಗರೇಟು ಸೇದುತ್ತಾ ಯೋಚಿಸುತ್ತಿರುವವನಂತೆ ನಟಿಸಿದ.
No comments:
Post a Comment