Dr Ashok K R
“ಸರಿ ನೀನ್ಹೇಳಿದ್ದು. ಇಷ್ಟು ಬೇಗ ಇಷ್ಟೊಂದು ಕ್ಲೋಸಾಗಿಬಿಟ್ಟಿದ್ದಾರಲ್ಲ ಈ ನಾಲ್ವರು ಅಂಥ ತರಗತಿಯವರು ಒಂದಷ್ಟು ಅಸೂಯೆಯಿಂದ ನಮ್ಮ ಬಗ್ಗೆ ಮಾತನಾಡಿದರೂ ನಮ್ಮ ನಮ್ಮಲ್ಲೇ ನಾವೆಷ್ಟು ಪರಿಚಿತರಾಗಿದ್ದೇವೆ? ನಮ್ಮ ಹೆಸರು, ಊರು. ತುಷಿನ್ ಹೇಳಿದ ಹಾಗೆ ನಮ್ಮ ಸಿ.ಇ.ಟಿ ರ್ಯಾಂಕು; ಇಷ್ಟು ಬಿಟ್ಟರೆ ನಮ್ಮಗಳ ಬಗ್ಗೆ ಏನೇನು ಗೊತ್ತಿಲ್ಲ ಅಲ್ವಾ? ಹೊಸದಾಗಿ ಪರಿಚಿತರಾಗಿರೋದ್ರಿಂದ ಎಲ್ಲರೂ ಒಳ್ಳೆಯವರಂತೆಯೇ ತೋರಿಸಿಕೊಳ್ತಿದ್ದೇವೇನೋ?” ತುಷಿನ್ ಮಾತಿಗೆ ಪೂರಕವಾಗಿಯೇ ಮಾತನಾಡಿದ ರಾಘವ. ಸಿಗರೇಟು ಉರಿದು ಬೀಳುವವರೆಗೂ ಯಾರೂ ಮಾತನಾಡಲಿಲ್ಲ. ಇನ್ನೇನು ರೂಮು ತಲುಪಿದರೆನ್ನುವಷ್ಟರಲ್ಲಿ ಕ್ರಾಂತಿ “ಒಂದು ಕೆಲಸ ಮಾಡೋಣ. ಇವತ್ತು ರಾತ್ರಿ ಎಲ್ಲಾದರೂ ಹೊರಗೆ ಊಟಕ್ಕೆ ಹೋಗೋಣ. ಡಾಬಾಗೆ ಒಮ್ಮೆಯೂ ಹೋಗಿಲ್ಲ. ಡಾಬಾಗೇ ಹೋಗೋಣ. ಊರೊರಗೆ ಗದ್ದೆ ಮಧ್ಯೆ ಚೆನ್ನಾಗಿರುತ್ತೆ. ಇಷ್ಟು ದಿನ ಮಾತನಾಡಿದ ವಿಷಯಗಳನ್ನು ಬೇರೆ ಮಾತನಾಡೋಣ. ನಾವು ಮೊದಲು ಇಷ್ಟಪಟ್ಟ ಹುಡುಗಿ ಇರಬಹುದು, ಮಾಡಿದ್ಯಾವುದಾದರೂ ದೊಡ್ಡ ತಪ್ಪಿರಬಹುದು. ಅಥವಾ ಒಳ್ಳೇ ಕೆಲಸವಿರಬಹುದು – ಒಟ್ಟಿನಲ್ಲಿ ಇಷ್ಟು ದಿನ ಮಿದುಳಿನಿಂದಷ್ಟೇ ಬರುತ್ತಿದ್ದ ಮಾತುಗಳು ಮನಸ್ಸಿನಿಂದಲೂ ಬರಲಿ. ಏನಂತೀರಾ?” ಉತ್ಸಾಹದಿಂದ ಕೇಳಿದ. ಉಳಿದವರಿಗೂ ಅದು ಸರಿಯೆನ್ನಿಸಿ ನಗುತ್ತಾ ತಲೆಯಾಡಿಸಿದರು. ನಾಲ್ವರೂ ಸಮಾಧಾನದ ನಿಟ್ಟುಸಿರು ಬಿಟ್ಟು ರೂಮು ಸೇರಿದರು.
ಅವತ್ತು ರಾತ್ರಿಯೇ ತುಷಿನ್ ತಾನು ಪತ್ರಕರ್ತನಾಗಬೇಕಿತ್ತು ಎಂದಿದ್ದು, ರಾಘವ ವಸತಿ ಶಾಲೆಗಳೆಂಬ ಜೈಲಿನ ಬಗ್ಗೆ ಮಾತನಾಡಿದ್ದು, ಅಭಯ ತಾನು ಭೂಮಿಗೆ ಬಂದಿದ್ದೇ ತನ್ನ ತಾಯಿ ಆಪರೇಷನ್ ಮಾಡಿಸಿಕೊಳ್ಳಲು ತಡಮಾಡಿದ್ದರಿಂದ ಎಂದು ಬೇಸರಪಟ್ಟುಕೊಂಡದ್ದು, ಕ್ರಾಂತಿ ತನ್ನ ಹೆಸರು ತನ್ನಲ್ಲಿ ಮೂಡಿಸಿರುವ ಕೀಳರಿಮೆಯನ್ನು ತೋಡಿಕೊಂಡಿದ್ದು……
‘ನಾವೆಲ್ಲಾ ಮನಸ್ಸು ತೆರೆದು ಮಾತನಾಡಬೇಕು’ ಅಂತ ಹೇಳಿದ ಅದೇ ಕ್ರಾಂತಿ ಈಗ ‘ಎಲ್ಲಾ ವಿಷಯಾನೂ ಎಲ್ಲರ ಹತ್ರ ಹೇಳೋದಿಕ್ಕಾಗೋಲ್ಲ’ ಅಂದುಬಿಟ್ನಲ್ಲಾ. ಆತ ಬದಲಾಗಿದ್ದೇ ತಿಳಿಯಲಿಲ್ಲವಾ ನಮಗೆ? ನಮಗೂ ಅಲ್ಲ… ನನಗೆ …. ಆ ತುಷಿನ್, ಅಭಿ ಕೂಡ ಗುಟ್ಟುಗಳನ್ನಿಟ್ಟುಕೊಂಡಿದ್ದಾರಂತೆ…. ಬಡ್ಡೆತ್ತವು. ಹಳೆಯದನ್ನೆಲ್ಲಾ ನೆನಪಿಸಿಕೊಂಡಷ್ಟು ಸಿಟ್ಟು ಮತ್ತಷ್ಟು ಏರಿಕೆಯಾಯಿತು. ಸಿಟ್ಟಿನ ಭರಕ್ಕೆ ಸಿಗರೇಟುಗಳೂ ಉರಿದು ಬೂದಿಯಾದವು. ಸತತವಾಗಿ ಐದು ಸಿಗರೇಟು ಸೇದಿದ್ದಕ್ಕೋ ಬೆಳಿಗಿನಿಂದ ಖಾಲಿ ಹೊಟ್ಟೆಯಲ್ಲಿದ್ದಿದ್ದಕ್ಕೋ ತಲೆ ಬವಳಿಸಿದಂತಾಯಿತು. ಹಚ್ಚಲು ತೆಗೆದುಕೊಂಡಿದ್ದ ಆರನೇ ಸಿಗರೇಟನ್ನು ಮತ್ತೆ ಪ್ಯಾಕಿನೊಳಗೆ ಸೇರಿಸಿ ಹಾಸಿಗೆಯ ಮೇಲೆ ಅಡ್ಡಾದ. ತಲೆಸುತ್ತು ಒಂದಷ್ಟು ಕಡಿಮೆಯಾಯಿತು. ಜೊತೆಗೆ ಕೋಪವೂ. ನಿಧಾನಕ್ಕೆ ಮನ ಸ್ಥಿಮಿತಕ್ಕೆ ಬರಲು ಪ್ರಾರಂಭಿಸಿತು. ‘ಇಷ್ಟಕ್ಕೂ ನಾನು ಯಾರ ಮೇಲಾದರೂ ಕೋಪ ಮಾಡಿಕೊಳ್ಳಬೇಕೆಂದರೆ ನನ್ನ ಬಗ್ಗೆಯೇ ಮಾಡಿಕೊಳ್ಳಬೇಕು. ಪರಿಚಯವಾದ ಕೆಲವೇ ದಿನಗಳಲ್ಲಿ ಅವರ ಬಳಿ ಯಾವುದೇ ಮುಚ್ಚುಮರೆಯಿಲ್ಲದೆ ಎಲ್ಲಾ ಹೇಳಿಕೊಂಡಿದ್ದು ನನ್ನದೇ ತಪ್ಪು. ಯಾವಾಗಲೂ ನನ್ನ ಮಾತುಗಳು ಓತಪ್ರೋತವಾಗಿ ಎಲ್ಲೆಲ್ಲಿಗೋ ಹರಿದು ಹೋಗುತ್ತದೆ. ಆ ಭರದಲ್ಲಿ ಆ ಕ್ಷಣಕ್ಕೆ ಏನು ಹೇಳ್ತೀನಿ ಅನ್ನೋದೇ ತಿಳಿಯೋದಿಲ್ಲ. ವಟವಟಗುಟ್ಟೋದೇ ನನ್ನ ಸ್ವಭಾವ ಆಗೋಯ್ತಲ್ಲ. ಛೇ’ ಮುಂದೇನೂ ಯೋಚನೆಗಳು ತಟ್ಟನೆ ಹೊರಬರಲಿಲ್ಲ. ಎರಡರ ವೇಗದಲ್ಲಿ ತಿರುಗುತ್ತಿದ್ದ ಫ್ಯಾನನ್ನೇ ದಿಟ್ಟಿಸಿದ. ಫ್ಯಾನಿನ ಬಿಳಿ ರೆಕ್ಕೆಯನ್ನೇ ನೋಡುತ್ತಿದ್ದವನಿಗೆ ಆ ಬಿಳಿ ಬಣ್ಣದ ರೆಕ್ಕೆ ಯಾವುದೋ ಒಂದು ನಿಗೂಢ ಸಂಕೇತವೆಂದೆನಿಸಿ ಬಿಳಿ ಬಣ್ಣದ ರೆಕ್ಕೆ ನಿಧಾನವಾಗಿ ಬಿಳಿಯ ದುಪ್ಪಟ್ಟವಾಗಿ ಪರಿವರ್ತನೆಗೊಂಡು ದುಪ್ಪಟ್ಟಾದ ಹಿಂದೆ ಆಕಾಶ ನೀಲಿ ಬಣ್ಣದ ಚೂಡಿ ಪ್ರತ್ಯಕ್ಷವಾಗಿ, ಚೂಡಿಯ ಮೇಲೆ ಬಂಗಾರ ಬಣ್ಣದ ದಾರದಲ್ಲಿ ಸೂಕ್ಷ್ಮವಾಗಿ ಮಾಡಿದ ಕುಸುರಿ ಕೆಲಸ, ಚಿಕ್ಕ ಚಿಕ್ಕ ಹೂವುಗಳ ಚಿತ್ತಾರ, ಹೂವುಗಳ ನಡುಮಧ್ಯದಲ್ಲಿ ಪುಟ್ಟ ಪುಟ್ಟ ವಜ್ರದಾಕಾರದ ಕನ್ನಡಿಗಳೂ ಗೋಚರಿಸಿದ ಮೇಲೆ ಆ ದಿರಿಸು ಧರಿಸಿದ ಹುಡುಗಿಯ ಗುರುತು ಸಿಗದಿದ್ದೀತೇ? ‘ಜಯಂತಿ……ಅಬ್ಬಾ’ ಜೋರಾಗೊಮ್ಮೆ ಉಸಿರೆಳೆದುಕೊಂಡ ರಾಘವ. ರೂಮಿನೊಳಗೆ ತುಂಬಿಕೊಂಡಿದ್ದ ಐದೂ ಸಿಗರೇಟಿನ ಹೊಗೆ ಒಮ್ಮೆಲೆ ಶ್ವಾಸಕೋಶವನ್ನು ಆವರಿಸಿ ಮೆಲ್ಲಗೆ ಕೆಮ್ಮಿದ. ಅವಳೂ ಬೇರೆಯವರಂತಯೇ. ನಮ್ಮ ಗುಂಪನ್ನು ನೋಡುತ್ತಿದ್ದಂತೆ ತಲೆಕೆಳಗೆ ಹಾಕಿ ಧರಿಸಿದ ಚಪ್ಪಲಿಯ ಉಂಗುಷ್ಠವನ್ನೇ ದಿಟ್ಟಿಸಿ ನೋಡುವವಳಂತೆ ನಟಿಸುತ್ತಾ ನಮ್ಮನ್ನು ದಾಟಿ ನಡೆಯುವವಳು. ಆದರವತ್ತು! ಮಧ್ಯಾಹ್ನ ಪ್ರಾಕ್ಟಿಕಲ್ಸಿಗೆ ಹೋಗಲು ಮನಸ್ಸಾಗದೆ ಅಫ್ರೋಜ್ ಭಾಯ್ ಅಂಗಡಿಯ ಕಡೆ ಹೆಜ್ಜೆ ಹಾಕಿದ್ದ. ಅಫ್ರೋಜ್ ಭಾಯ್ ಶುಕ್ರವಾರದ ನಮಾಜಿಗೆ ಮಸೀದಿಗೆ ಹೋಗಿದ್ದವರು ಇನ್ನೂ ಬಂದಿರಲಿಲ್ಲ. ಕಾಲೇಜಿನ ಇನ್ನೊಂದು ಬದಿಯಲ್ಲಿದ್ದ ಅಂಗಡಿಗೆ ಹೋದ. ಅದು ಹುಡುಗಿಯರ ಹಾಸ್ಟೆಲ್ಲಿಗೆ ಸಮೀಪವಿತ್ತು. ಅಫ್ರೋಜ್ ಭಾಯ್ ಅಂಗಡಿಯೆಂದರೆ ಒಂದು ಪುಟ್ಟ ತಗಡಿನ ಶೆಡ್ಡು. ಮೇಲೊಂದು asbestos ಶೀಟು. ಅಂಗಡಿಯ ಎದುರಿಗೆ ಎರಡು ಕುರ್ಚಿ, ಒಂದು ಪುಟಾಣಿ ಮೇಜು, ಪಕ್ಕದಲ್ಲಿದ್ದ ಫಾರ್ಮಸಿ ಕಾಲೇಜಿನ ಕಾಂಪೋಂಡಿಗೆ ಅಂಟಿಕೊಂಡಂತೆ ಒಂದು ಬೆಂಚು. ಅಲ್ಲಿ ಸಿಗುತ್ತಿದ್ದದಾದರೂ ಸಿಗರೇಟು, ಬೀಡಿ, ಸೋಂಪು, ಗುಟ್ಕಾ, ಚಾ – ಕಾಫಿ, ಸಂಜೆಯ ಹೊತ್ತಿನಲ್ಲಿ ದಿಲ್ ಪಸಂದ್, ಪಪ್ಸ್ ಅಥವಾ ಆಲೂ ಬನ್ ಇಷ್ಟೇ. ಸಿಗರೇಟು ಸೇದಿದವರ ಬಾಯಿ ವಾಸನೆ ಕಡಿಮೆ ಮಾಡಲು ಒಂದಷ್ಟು ಮಿಂಟ್ ಚಾಕಲೇಟುಗಳು. ಮುಂಚೆ ಅಂಗಡಿಗೆ ಹೊಂದಿಕೊಂಡಿದ್ದಂತೆ ಒಂದು ಎಸ್ಟಿಡಿ ಬೂತ್ ಇಟ್ಟಿದ್ದರಂತೆ. ಮೊಬೈಲಿನ ಹಾವಳಿಯಿಂದಾಗಿ ಎಸ್ಟಿಡಿ ಬೂತಿನ ಪಳೆಯುಳಿಕೆಯ ಜಾಗದಲ್ಲಿ ಒಂದು ಹಳೆಯಮರದ ಸ್ಟೂಲಿನ ಮೇಲೆ ಒಂದು ರುಪಾಯಿ ಕಾಯಿನ್ ಬಾಕ್ಸಿನ ಫೋನಿತ್ತು. ಸಿಗರೇಟು ಸೇದಲು ಬರುವ ಹುಡುಗರು, ಚಾ – ಕಾಫಿಗಾಗಿ ಬರುವವರು – ಇವರಷ್ಟೇ ಅಲ್ಲಿಗೆ ಕಾಯಂ ಅತಿಥಿಗಳು. ಹುಡುಗಿಯರು ಅತ್ತ ಸುಳಿಯುತ್ತಿದ್ದುದೇ ಅಪರೂಪ. ಸಿಗರೇಟು – ಟೀ, ತಿನ್ನಲು ಬಗೆಬಗೆಯ ತಿನಿಸುಗಳು ಸಿಗುತ್ತಿದ್ದ ಅಂಗಡಿಗಳು ಸುತ್ತಮುತ್ತ ಬಹಳಷ್ಟಿದ್ದವಾದರೂ ಸಿಗರೇಟಿನಂತೆ ಅಫ್ರೋಜ್ ಭಾಯ್ ನ ಅಂಗಡಿಯೂ ಹುಡುಗರಿಗೆ ಒಂದು ಚಟವಾಗಿತ್ತು. ಏಲಕ್ಕಿ ಹಾಕಿ ಭಾಯ್ ತಯಾರಿಸುತ್ತಿದ್ದ ವಿಶೇಷ ಚಾಗಿಂತ ಭಾಯ್ ನ ನಡವಳಿಕೆಯೇ ಎಲ್ಲರನ್ನೂ ಹೆಚ್ಚು ಆಕರ್ಷಿಸುತ್ತಿತ್ತೆಂಬುದರಲ್ಲಿ ಅನುಮಾನವಿಲ್ಲ. ಐದಡಿ ಉದ್ದ, ಉದ್ದಕ್ಕಿಂತ ಅಗಲವೇ ಹೆಚ್ಚೆಂಬಂತಿದ್ದ ದೇಹ, ಹೇಮಾಮಾಲಿನಿಯ ಕೆನ್ನೆಯನ್ನೂ ನಾಚಿಸುವಂತಿದ್ದ ನುಣುಪಾದ ಗದ್ದ. ತಲೆಯ ಮೇಲೊಂದು ಮುಸಲ್ಮಾನರ ಟೋಪಿ, ಶುಕ್ರವಾರವನ್ನೊಂದರತು ಪಡಿಸಿದರೆ ಉಳಿದ ದಿನಗಳಲ್ಲಿ ಮಾಮುಲಿ ಪ್ಯಾಂಟು ಶರ್ಟು. ಎಲ್ಲರೊಂದಿಗೂ ನಗುನಗುತ್ತಾ ಮಾತು. ಜೊತೆಗೆ ನಮ್ಮ ಕಾಲೇಜಿನ ಹುಡುಗರಿಗೆ ಬೋನಸ್ಸೆಂಬಂತೆ ಅಫ್ರೋಜ್ ಭಾಯ್ ಸಾಲಕ್ಕೂ ಸಿಗರೇಟು ಕೊಡುತ್ತಿದ್ದರು, ಕೆಲವರ ಸಾಲ ಸಾವಿರ ಮುಟ್ಟುತ್ತಿದ್ದದ್ದೂ ಉಂಟು. ‘ಅಲ್ಲಾ ಅಫ್ರೋಜ್ ಭಾಯ್. ತಿಂಗಳಿಗೆ ನಿಮಗೆ ಲಾಭ ಅಂತ ಬರೋದೆ ಕಡಿಮೆ. ಅಂಥದ್ರಲ್ಲಿ ಇಷ್ಟೊಂದು ಸಾಲಾನೂ ಕೊಟ್ಟರೆ ಜೀವನ ಹೆಂಗೆ? ಎಂದ್ಯಾರಾದರೂ ಕೇಳಿದರೆ ಎರಡೂ ಕೈಯನ್ನು ಆಕಾಶದೆಡೆಗೆ ತೋರಿಸಿ “ಎಲ್ಲಾ ಅವನಿಚ್ಛೆ” ಎಂದು ಮುಗುಳ್ನಗುತ್ತಿದ್ದರು. ಇಂತಿದ್ದ ಅಫ್ರೋಜ್ ಭಾಯ್ ಸಿಡಿಮಿಡಿಗೊಳ್ಳುತ್ತಿದ್ದುದು ಮುಖ್ಯರಸ್ತೆಯಲ್ಲಿದ್ದ ಮದ್ರಾಸಾದ ಹುಡುಗರು ಅಪರೂಪಕ್ಯಾವಾಗಾದರೂ ಅಂಗಡಿಗೆ ಬಂದಾಗ. ‘ಮಕ್ಕಳನ್ನೆಲ್ಲಾ ಮದ್ರಾಸಾಗೆ ಸೇರಿಸಿ. ಕುರಾನ್ ಪಠಣ ಸರಿಯಾಗಿ ಮಾಡಿಸ್ತೀವಿ. ಮೌಲ್ವಿ ಮಾಡ್ತೀವಿ ಅಂತಾರೆ. ಇರೋರೆಲ್ಲಾ ಮೌಲ್ವಿಗಳೇ ಆಗಿಬಿಟ್ಟರೆ ಅವರು ಹೇಳೋದನ್ನ ಕೇಳೋದಿಕ್ಕಾದರೂ ಜನ ಬೇಡವಾ? ನಾವೆಲ್ಲ ಮದ್ರಾಸಾಗೆ ಕಾಲೇ ಇಡದೆ ಅರ್ಥವಾಗುವಷ್ಟರ ಮಟ್ಟಿಗೆ ಕುರಾನ್ ಓದಿಕೊಂಡಿಲ್ವಾ?’ ಎಂದೇನೇನೋ ಗೊಣಗಿಕೊಳ್ಳುತ್ತಿದ್ದರು. ಇರಲಿ, ಆ ದಿನ ರಾಘವನ ಅದೃಷ್ಟಕ್ಕೋ, ದುರಾದೃಷ್ಟಕ್ಕೋ ಅಫ್ರೋಜ್ ಭಾಯ್ ಅಂಗಡಿಯನ್ನಿನ್ನೂ ತೆರೆದಿರಲಿಲ್ಲ. ಹುಡುಗಿಯರ ಹಾಸ್ಟೆಲ್ಲಿನ ಪಕ್ಕದಲ್ಲಿದ್ದ ಅಂಗಡಿ ಆಧುನಿಕವಾಗಿತ್ತು. ‘ಎಂಟಾಣೆ ನಾಳೆ ಕೊಡ್ತೀನಿ’ ದಿನಾ ಆ ಅಂಗಡಿಗೆ ಹೋಗುವವರೂ ಈ ಮಾತು ಹೇಳಿದರೆ ಕೆಕ್ಕರಿಸಿ ನೋಡುತ್ತಿದ್ದ ಅಂಗಡಿಯವನ ಕಣ್ಣ ನೋಟದಿಂದ ಹೇಳಬೇಕೆಂದರೆ ಅಂಗಡಿ ಸಂಪೂರ್ಣ ಆಧುನಿಕವಾಗಿತ್ತು. ಅಂಗಡಿಯ ಒಂದು ಬದಿಯಲ್ಲಿ ಒಂದರ ಹಿಂದೆ ಒಂದರಂತೆ ಮೂರು ಮೇಜು, ಪ್ರತಿ ಮೇಜಿಗೂ ನಾಲ್ಕು ಕುರ್ಚಿ. ಗೋಡೆಯ ಮೇಲೆ ‘ನೋ ಸ್ಮೋಕಿಂಗ್’ ಬೋರ್ಡು. ಇನ್ನೊಂದು ಬದಿಯಲ್ಲಿ ಐವತ್ತು ಪೈಸೆಯ ಕ್ಲೋರೋಮಿಂಟಿನಿಂದ ಹಿಡಿದು ನೋಟುಪುಸ್ತಕದಷ್ಟು ಅಗಲವಿದ್ದ ಕ್ಯಾಡ್ ಬರಿ ಸೆಲಬ್ರೇಷನ್ ವರೆಗೆ ಎಲ್ಲಾ ನಮೂನೆಯ ಚಾಕಲೇಟುಗಳು. ಇದರೊಟ್ಟಿಗೆ ಗಾಜಿನ ಪೆಟ್ಟಿಗೆಗಳಲ್ಲಿ ಒಂದು ರುಪಾಯಿಯ ಕಡ್ಲೆಮಿಠಾಯಿಯಿಂದ ನೂರ ಇಪ್ಪತ್ತು ರುಪಾಯಿಯ ಚಿಕನ್ ಶೌರ್ಮಾವರೆಗೆ ಎಲ್ಲವೂ ಇತ್ತು. ಜೊತೆಗೆ ಸಿಗರೇಟು, ಟೀ, ಕಾಫಿ, ಬಾದಾಮಿ ಹಾಲು – ಹಾಟೂ, ಕೋಲ್ಡೂ – ಜ್ಯೂಸು…. ಇನ್ನೂ ಏನೇನೋ. ಸಿಗರೇಟು ಸೇದುವವರಿಗೆಂದು ಅಂಗಡಿಯ ಹೊರಗೆ ಎಂಟತ್ತು ಪ್ಲಾಸ್ಟಿಕ್ ಕುರ್ಚಿಗಳು. ರಾಘವ ಎಷ್ಟೋ ದಿನಗಳ ಬಳಿಕ ಆ ಅಂಗಡಿಯ ಕಡೆಗೆ ಬಂದಿದ್ದ. ಕಾಲೇಜಿನ ಸಮಯವಾದ್ದರಿಂದ ಹೆಚ್ಚು ಜನರಿರಲಿಲ್ಲ. ಅಂಗಡಿಯ ಒಳಗೆ ಸಿಗರೇಟು ಕೊಳ್ಳಲು ಹೋದಾಗ ಅಲ್ಲೇ ಕುಳಿತಿದ್ದ ಜಯಂತಿ ಕಣ್ಣಿಗೆ ಬಿದ್ದಳು. ಚಾ ಜೊತೆಗೆ ಬನ್ನು ತಿನ್ನುತ್ತಿದ್ದಳು. ಪಕ್ಕದಲ್ಲೇ ಒಂದು ಪ್ಲೇಟಿನಲ್ಲಿ ನಾಲ್ಕೈದು ಪಾರ್ಲೆ ಜಿ ಬಿಸ್ಕೆಟ್ಟಿದ್ದವು. ಅದರ ಕವರ್ರು ಅಲ್ಲೇ ಇದ್ದ ಲೋಟದ ಪಕ್ಕದಲ್ಲಿ ಮುದುರಿ ಕುಳಿತಿತ್ತು. ಒಂದು ಚಿಕ್ಕ ತುಂಡು ಬನ್ನನ್ನು ಕಚ್ಚಿ ತಲೆ ಮೇಲೆತ್ತಿದಳು, ಇನ್ನೇನು ಅವಳ ಕಣ್ಣು ರಾಘವನ ಕಣ್ಣನ್ನು ಸಂಧಿಸಬೇಕು ರಾಘವ ಅಂಗಡಿಯವನ ಕಡೆಗೆ ತಿರುಗಿಬಿಟ್ಟ. ಸಿಗರೇಟು ತೆಗೆದುಕೊಂಡು ಹೊರಗೆ ಗೋಡೆಯ ಮೇಲೆ ಸಿಕ್ಕಿಸಿದ್ದ ಎಲೆಕ್ಟ್ರಿಕಲ್ ಲೈಟರ್ ನಿಂದ ಹೊತ್ತಿಸಿಕೊಂಡು ಜಯಂತಿಗೆ ಬೆನ್ನುಮಾಡಿಕೊಂಡು ಕುಳಿತ. ‘ಏನಿವಳು ಕಾಲೇಜಿಗೆ ಹೋಗಿಲ್ಲ. ಬನ್ನೂ ಬಿಸ್ಕೆಟ್ಟೂ ತಿಂತಿರೋದನ್ನ ನೋಡಿದ್ರೆ ಹುಷಾರಿಲ್ವೇನೋ ಪಾಪ’ ಎಂದುಕೊಂಡ. ಪಕ್ಕದ ಕುರ್ಚಿಯಲ್ಲಿದ್ದ ಟೈಮ್ಸ್ ಆಫ್ ಇಂಡಿಯಾ ಪೇಪರನ್ನು ಕೈಗೆತ್ತಿಕೊಂಡು ಅದರಲ್ಲಿ ಮಗ್ನನಾದ. ಅರ್ಧ ಸಿಗರೇಟು ಮುಗಿದಿತ್ತು. ಪತ್ರಿಕೆಯ ಅಕ್ಷರಗಳ ಮೇಲೆ ನೆರಳು ಬಿದ್ದಂತಾಯಿತು. ಬಾಯಲ್ಲಿದ್ದ ಸಿಗರೇಟನ್ನು ಎಡಗೈಯಿಂದ ಹೊರತೆಗೆದು ತುಟಿಯ ನಡುವಿನಿಂದ ನಿಧಾನಕ್ಕೆ ಹೊಗೆ ಹೊರಹಾಕುತ್ತಾ ತಲೆಯನ್ನೆತ್ತಿದ. ಜಯಂತಿ ನಿಂತಿದ್ದಳು!! ಅವಳ ತಲೆಯ ಬಲಭಾಗದ ಮೇಲೆ ಸೂರ್ಯನ ಮೇಲುಭಾಗವಷ್ಟೇ ಇಣುಕುತ್ತಿತ್ತು. ಇವನೊಳಗೆ ಯಾವುದಾದರೂ ಯೋಚನೆ ಮೂಡುವಷ್ಟರಲ್ಲಿ ಜಯಂತಿಯ ದನಿ ಸಿಡಿಲಿನಂತೆ ಅಪ್ಪಳಿಸಿತು. “ಈ ವಯಸ್ನಲ್ಲಿ ಸಿಗರೇಟು ಸೇದೋದೆ ಮಹಾಪಾಪ. ಅಂಥದ್ರಲ್ಲಿ ರಾಜಾರೋಷವಾಗಿ ಕ್ಲಾಸ್ ಮೇಟ್ ಒಬ್ಬಳು ಎದುರಿಗೆ ಕುಳಿತಿದ್ದರೂ ಸೇದ್ತೀಯಲ್ಲ. ನಾಚಿಕೆ ಆಗಲ್ಲ ನಿಂಗೆ” ಇಷ್ಟು ಹೇಳಿದವಳೇ ದಡದಡನೆ ಹಾಸ್ಟೆಲ್ಲಿನ ಕಡೆಗೆ ಹೆಜ್ಜೆ ಹಾಕಿದಳು. ನಾಲ್ಕೈದು ಮಾರು ಹೋಗುವಷ್ಟರಲ್ಲಿ ಒಂದೊಂದು ಹೆಜ್ಜೆಯ ನಡುವಿನ ಅಂತರ ಕಡಿಮೆಯಾಗುತ್ತಾ ಹೋಯಿತು. ರಾಘವನ ಮನದಲ್ಲುಳಿದಿದ್ದು ಅವಳ ಸಿಡಿಲಿನಂತಹ ಮಾತು, ಆಕಾಶ ನೀಲಿ ಬಣ್ಣದ ಚೂಡಿ, ಜ್ವರದಿಂದ ಕೆಂಪಾದಂತಿದ್ದ ಅವಳ ಕಣ್ಣುಗಳು. ‘ಇದೇನ್ ನಿಜವಾಗ್ಲೂ ಅವಳು ನನ್ನ ಬಳಿ ಮಾತನಾಡಿದ್ದೋ ಅಥವಾ ಕನಸಾ?’ ಎಂದು ತಲೆಕೆರೆದುಕೊಳ್ಳುತ್ತಾ ಪತ್ರಿಕೆಯನ್ನು ಕುರ್ಚಿಯ ಮೇಲಿಟ್ಟು ಅಂಗಡಿಯವನಿಗೆ ದುಡ್ಡು ಕೊಟ್ಟು ಅವಳ ಹಿಂದೆಯೇ ಓಡಿದ. ಅವಳೇನು ಹೆಚ್ಚು ದೂರ ಸಾಗಿರಲಿಲ್ಲ.
ಉಳಿದ ಭಾಗಗಳನ್ನು ಆರಂಭದಿಂದ ಓದುವೆ.
ReplyDeleteಧನ್ಯವಾದ ಸರ್. ನಿಮ್ಮ ಅನಿಸಿಕೆಗಳು ಬರಹಗಳನ್ನು ಉತ್ತಮಗೊಳಿಸಿಕೊಳ್ಳಲು ಸಹಕಾರಿ :-)
Delete