Ashok K R
ಇಂಡಿಯಾದಲ್ಲಿ ಯಾರು ಕೆಟ್ಟೋದ್ರೂ ಕೊನೆಗೆ ನ್ಯಾಯಾಲಯವಾದರೂ ನ್ಯಾಯದ ಪರವಾಗೇ ಕೆಲ್ಸ ಮಾಡುತ್ತವೆಂಬ ನಂಬಿಕೆಯೊಂದು ಜನಸಾಮಾನ್ಯರಲ್ಲಿದೆ. ಆ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವಂತಹ ಎರಡು ತೀರ್ಪುಗಳು ಇತ್ತೀಚಿನ ದಿನಗಳಲ್ಲಿ ಬಂತು. ಗಟ್ಟಿಗೊಂಡ ನಂಬಿಕೆಯನ್ನು ಸಂಪೂರ್ಣವಾಗಿ ಶಿಥಿಲಗೊಳಿಸಿ ಉರುಳಿಸಿಯೇ ಬಿಡುವಂತಹ ತೀರ್ಪನ್ನು ಮೇಲ್ಮಟ್ಟದ ನ್ಯಾಯಾಲಯಗಳು ನೀಡಿತು. ‘ನ್ಯಾಯಕ್ಕೆ ಜಯವಾಗಲಿ’ ಎಂದು ಹರ್ಷ ವ್ಯಕ್ತಪಡಿಸಿದವರೆಲ್ಲಾ ಕೆಲವೇ ದಿನಗಳಲ್ಲಿ ‘ನ್ಯಾಯ ಎಲ್ಲಿದೆ’ ಎಂದು ಕೇಳಲಾರಂಭಿಸಿಬಿಟ್ಟರು! ದೂಷಣೆ ಕೇವಲ ನ್ಯಾಯಾಲಯ ಮತ್ತು ನ್ಯಾಯದೀಶರೆಡೆಗೆ ಇರಬೇಕಾ ಅಥವಾ ಇಡೀ ಸಮಾಜ ಇಂತಹ ತೀರ್ಪುಗಳಿಗೆ ಕಾರಣವಾ? ಎರಡೂ ಪ್ರಕರಣಗಳಲ್ಲಿರುವ ಸಾಮಾನ್ಯ ಅಂಶವೆಂದರೆ ಕೆಳ ಹಂತದ ನ್ಯಾಯಾಲಯಗಳಲ್ಲಿ ಅಪರಾಧಿ ಎಂಬ ಆರೋಪ ಹೊತ್ತವರು ಖ್ಯಾತಿವಂತರು. ಒಬ್ಬರು ಸಿನಿಮಾ ಕ್ಷೇತ್ರದಲ್ಲಿ ಹೆಸರುವಾಸಿಯಾದರೆ ಮತ್ತೊಬ್ಬರು ಸಿನಿಮಾ ಕ್ಷೇತ್ರದಿಂದ ರಾಜಕೀಯಕ್ಕೆ ತೆರಳಿ ದೊಡ್ಡ ಹೆಸರು ಮಾಡಿದವರು. ಸಲ್ಮಾನ್ ಖಾನ್ ಮತ್ತು ಜಯಲಲಿತಾ ಈ ಬಾರಿಯ ಅಂಕಣದ ಅತಿಥಿಗಳು.
ಅಕ್ರಮ ಆಸ್ತಿಯ ಪ್ರಕರಣದಲ್ಲಿ ಎ1 ಆಗಿದ್ದ ಜಯಲಲಿತಾರ ಮೇಲಿದ್ದ ಆರೋಪ ಸಾಬೀತಾಗಿದೆಯೆಂದು ಘೋಷಿಸಿದ್ದ ಬೆಂಗಳೂರಿನ ವಿಶೇಷ ನ್ಯಾಯಾಲಯ ಜಯಲಲಿತಾರಿಗೆ ನಾಲ್ಕು ವರುಷದ ಜೈಲು ಶಿಕ್ಷೆ ಮತ್ತು ನೂರು ಕೋಟಿ ದಂಡ ವಿಧಿಸಿದ್ದರು. ಪ್ರಕರಣದ ಇನ್ನಿತರ ಆರೋಪಿಗಳಾದ ಅವರ ಸಾಕು ಮಗ ಸುಧಾಕರನ್, ಗೆಳತಿ ಶಶಿಕಲಾ ನಟರಾಜನ್ ಮತ್ತು ಶಶಿಕಲಾರ ಸಂಬಂಧಿಯಾದ ಇಳವರಸಿಗೆ ನಾಲ್ಕು ವರುಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಮತ್ತು ಆ ಮೂವರಿಗೂ ತಲಾ ಹತ್ತು ಕೋಟಿ ದಂಡ ವಿಧಿಸಲಾಗಿತ್ತು. ನ್ಯಾಯಾಲಯದಿಂದ ನೇರವಾಗವರನ್ನು ಜೈಲಿಗೆ ಬೀಳ್ಕೊಡಲಾಗಿತ್ತು. ಜಯಲಲಿತಾರವರ ಮುಖ್ಯಮಂತ್ರಿ ಸ್ಥಾನ ಮತ್ತು ಶಾಸಕತ್ವವೆರಡೂ ತತ್ ಕ್ಷಣದಿಂದಲೇ ರದ್ದಾಗಿತ್ತು. ಪನೀರ್ ಸೆಲ್ವಂ ಮುಖ್ಯಮಂತ್ರಿ ಸ್ಥಾನ ‘ಅಲಂಕರಿಸಿದ್ದರು’. ಎಲ್ಲಾ ಆರೋಪಿಗಳಿಗೂ ಇರುವ ಹಾಗೆ ಜಯಲಲಿತಾರವರಿಗೂ ಮೇಲ್ ಹಂತದ ನ್ಯಾಯಾಲಯಗಳಿಗೆ ಅಪೀಲು ಹೋಗುವ, ತಾವು ನಿರಪರಾಧಿ ಎಂದು ತೋರ್ಪಡಿಸಿಕೊಳ್ಳುವ ಅವಕಾಶವಿತ್ತು. ಜಾಮೀನು ಸಿಗಬಾರದ ಪ್ರಕರಣವೇನಲ್ಲವಾದ ಕಾರಣ ಸ್ವಲ್ಪ ದಿನದ ಜೈಲು ವಾಸದ ನಂತರ ಜಾಮೀನು ಪಡೆದು ಹೊರಬಂದಿದ್ದೂ ಆಯಿತು. ಈಗ ಕರ್ನಾಟಕದ ಹೈಕೋರ್ಟಿನ ನ್ಯಾಯಮೂರ್ತಿ ಕುಮಾರಸ್ವಾಮಿ ಜಯಲಲಿತಾ ಮತ್ತು ಇತರೆ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದೆ. ‘ಅಮ್ಮ’ ಬಿಡುಗಡೆಗೊಂಡಿದ್ದಕ್ಕೆ ಎಐಎಡಿಎಂಕೆಯ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದರೆ ಪ್ರಭಾವಿಗಳಾದರೆ ಏನು ಮಾಡಿಯೂ ತಪ್ಪಿಸಿಕೊಳ್ಳಬಹುದು ಎಂಬ ಸಿನಿಕತನ ಜನರಲ್ಲಿ ಮನೆಮಾಡಿದೆ. ಇವೆಲ್ಲದರ ಮಧ್ಯೆ ನಮ್ಮ ಪ್ರಧಾನ ಮಂತ್ರಿಯೇ ಖುದ್ದಾಗಿ ಜಯಲಲಿತಾರಿಗೆ ಫೋನ್ ಮಾಡಿ ತೀರ್ಪಿಗೆ ಸಂತಸ ವ್ಯಕ್ತಪಡಿಸುತ್ತಾರೆಂದ ಮೇಲೆ ತಮಿಳುನಾಡಿನ ಜನರ ಭಾವನೆಗಳಲ್ಲಿ ತಪ್ಪೇನಿದೆ? ಇಷ್ಟಕ್ಕೂ ಜಯಲಲಿತಾ ನಿರಪರಾಧಿ ಎಂಬ ತೀರ್ಪು ಪ್ರಕಟವಾಗಿದ್ದೇಗೆ?
ಜಯಲಲಿತಾ ಮತ್ತವರ ಸಹಆರೋಪಿಗಳನ್ನು ಖುಲಾಸೆಗೊಳಿಸಲು ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಹೈಕೋರ್ಟ್ ಮಾಡಿದೆ ಎಂಬ ಸಂಗತಿ ನ್ಯಾಯಾಲಯದ ಮೇಲೆ ಮತ್ತು ನ್ಯಾಯಮೂರ್ತಿಯ ಮೇಲೆ ಅನುಮಾನ ಮೂಡಿಸುತ್ತದೆ. ಒಟ್ಟು ಆದಾಯದ ಹತ್ತು ಪರ್ಸೆಂಟಿನ ಒಳಗಿನ ಅಕ್ರಮ ಆಸ್ತಿ ಪ್ರಕರಣದಲ್ಲಿ ಆರೋಪಿಯನ್ನು ಅಪರಾಧಿಯನ್ನಾಗಿ ಮಾಡಬೇಕಿಲ್ಲ ಎಂದು ಕೃಷ್ಣಾನಂದ್ ಅಗ್ನಿಹೋತ್ರಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಕೊಟ್ಟಿದ್ದ ತೀರ್ಪನ್ನೇ ನೆಪವಾಗಿಟ್ಟುಕೊಂಡು ಜಯಲಲಿತಾರ ಅಕ್ರಮ ಆಸ್ತಿ ಅವರ ಒಟ್ಟು ಆದಾಯದ ಹತ್ತು ಪರ್ಸೆಂಗಿಂತಲೂ ಕಡಿಮೆ ಇತ್ತು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ವಿಶೇಷ ನ್ಯಾಯಾಲಯದ ಪ್ರಕಾರ ಜಯಲಲಿತಾರ ಅಕ್ರಮ ಆಸ್ತಿಯಿದ್ದದ್ದು ಅರವತ್ತಾರು ಕೋಟಿ ರುಪಾಯಿಗಳು. ಹೈಕೋರ್ಟಿನ ತೀರ್ಪಿನ ಪ್ರಕಾರ ಜಯಲಲಿತಾರವರ ಅಕ್ರಮ ಆಸ್ತಿ ಮೂರು ಕೋಟಿಗಿಂತಲೂ ಕಡಿಮೆ! ಉಳಿದ ಅರವತ್ತಮೂರು ಕೋಟಿ ಎಲ್ಲಿ ಹೋಯಿತು ಎಂದು ಗಮನಿಸಿದಾಗ ಅಚ್ಚರಿಯ ವಿಷಯಗಳು ತಿಳಿಯುತ್ತವೆ. ಸಾವಿರದ ಆರುನೂರು ಚದರಅಡಿಯಲ್ಲಿ ಕಟ್ಟಡ ಕಟ್ಟುವುದಕ್ಕೆ ಬೇಕಾದ ಹಣವನ್ನು ಕೆಳಹಂತದ ನ್ಯಾಯಾಲಯದಲ್ಲಿ ಹೇಳಿದ್ದಕ್ಕಿಂತ ಕಡಿಮೆಗೊಳಿಸಿದೆ ಹೈಕೋರ್ಟ್. ಇದೊಂದು ಬಾಬ್ತಿನಲ್ಲೇ ಇಪ್ಪತ್ತೆರಡು ಕೋಟಿಯಷ್ಟು ಆಸ್ತಿ ಕಡಿತಗೊಂಡಿದೆ. ಇನ್ನು ಸಾಕು ಮಗ ಸುಧಾಕರ್ ಮದುವೆಗೆ ಆರುವರೆ ಕೋಟಿ ಖರ್ಚಾಗಿತ್ತೆಂದು ಸಾಬೀತಾಗಿತ್ತು. ಹೈಕೋರ್ಟ್ ಜಯಲಲಿತಾರವರ ವಾದವನ್ನು ಮನ್ನಿಸುತ್ತಾ ಜಯಲಲಿತಾ ಖರ್ಚು ಮಾಡಿದ್ದು ಇಪ್ಪತ್ತೆಂಟು ಲಕ್ಷ ಮಾತ್ರ, ಭಾರತದಲ್ಲಿ ಹಿಂದೂ ರಿವಾಜಿನ ಪ್ರಕಾರ ಮದುವೆಯನ್ನು ಹುಡುಗಿಯ ಮನೆಯವರು ಮಾಡಿಕೊಡುತ್ತಾರೆ ಎಂಬುದನ್ನು ಉಲ್ಲೇಖಿಸುತ್ತಾ ಉಳಿದ ಆರೂ ಕಾಲು ಕೋಟಿಯಷ್ಟು ಹಣವನ್ನು ಹುಡುಗಿಯ ಮನೆಯವರು ಮತ್ತು ಎಐಎಡಿಎಂಕೆ ಕಾರ್ಯಕರ್ತರು ಖರ್ಚು ಮಾಡಿದ್ದಾರೆ ಎಂದು ಆರು ಕಾಲು ಕೋಟಿಯಷ್ಟು ಹಣವನ್ನು ಜಯಲಲಿತಾರ ಆಸ್ತಿಯಿಂದ ಕಡಿತಗೊಳಿಸಿದ್ದಾರೆ! ವಿವಿಧ ಬ್ಯಾಂಕುಗಳಿಂದ ಪಡೆದುಕೊಂಡಿದ್ದ ಇಪ್ಪತ್ತನಾಲ್ಕು ಕೋಟಿಯಷ್ಟು ಸಾಲದಲ್ಲಿ ಹದಿನೆಂಟು ಕೋಟಿಯಷ್ಟನ್ನು ಆದಾಯಕ್ಕೆ ಸೇರಿಸಿದ್ದಾರೆ. ಇನ್ನು ದ್ರಾಕ್ಷಿ ತೋಟದಿಂದ ಜಯಲಲಿತಾ ನಲವತ್ತಾರು ಲಕ್ಷ ಕೋಟಿ ರುಪಾಯಿಯಷ್ಟನ್ನು ಸಂಪಾದಿಸಿದ್ದಾರೆ (ನಮ್ಮ ರೈತರು ಆ ತೋಟಗಳಿಗೆ ಹೋಗಿ ಆದಾಯ ಹೆಚ್ಚಿಸುವುದನ್ನು ಕಲಿಯಬಹುದು!). ಉಡುಗೊರೆಯ ರೂಪದಲ್ಲಿ ಒಂದೂವರೆ ಕೋಟಿಯಷ್ಟು ಆದಾಯ ಪಡೆದಿದ್ದಾರೆ. ಪ್ರಕಾಶಕರೆಲ್ಲ ಒದ್ದಾಡುವ ಸಂದರ್ಭಗಳನ್ನು ಕಾಣುವುದೇ ಅಧಿಕ. ಅಂತಹದರಲ್ಲಿ ಜಯಲಲಿತಾರ ಜಯಾ ಪಬ್ಲಿಕೇಷನ್ಸ್ ಬರೋಬ್ಬರಿ ನಾಲ್ಕು ಕೋಟಿ ಆದಾಯ ಗಳಿಸಿದೆ! ಜಯಲಲಿತಾರ ಮನೆಯಲ್ಲಿ ಸಾವಿರಗಟ್ಟಲೆ ಸೀರೆ, ಚಪ್ಪಲಿ, ಕೆಜಿಗಟ್ಟಲೆ ಇದ್ದ ಚಿನ್ನವನ್ನೆಲ್ಲ ಅಕ್ರಮ ಆಸ್ತಿ ಪಟ್ಟಿಗೆ ಸೇರಿಸಲಾಗಿತ್ತು. ಆದರೆ ಹೈಕೋರ್ಟಿನಲ್ಲಿ ಅಷ್ಟೂ ಸಾಮಾನುಗಳು ಜಯಲಲಿತಾ ಚಿತ್ರರಂಗದಲ್ಲಿದ್ದಾಗ ಚಿತ್ರೀಕರಣದ ಸಲುವಾಗಿ ಪಡೆದುಕೊಂಡಿದ್ದು ಎಂಬ ವಾದವನ್ನು ಒಪ್ಪಿ ಅದನ್ನು ಅಕ್ರಮ ಆಸ್ತಿ ಪಟ್ಟಿಯಿಂದಲೇ ಹೊರಗಿಡಲಾಗಿದೆ. ಹೈಕೋರ್ಟಿನ ಲೆಕ್ಕಾಚಾರದ ಪ್ರಕಾರ ಜಯಲಲಿತಾರ ಆದಾಯ ವಿಪರೀತವಾಗಿ ಹೆಚ್ಚಾಗಿ, ಅಕ್ರಮ ಆಸ್ತಿ ಮೂರು ಕೋಟಿಗಿಂತ ಕಡಿಮೆಯಾಗಿಬಿಟ್ಟಿದೆ. ಒಟ್ಟು ಆದಾಯ ಮೂವತ್ತೈದು ಕೋಟಿಯ ಹತ್ತಿರವಿದ್ದರೆ, ಒಟ್ಟು ಆಸ್ತಿ ಮೂವತ್ತೇಳು ಕೋಟಿಯಷ್ಟಿದೆ. ಅಲ್ಲಿಗೆ ಅಕ್ರಮ ಆಸ್ತಿಯ ಪ್ರಮಾಣ ಹತ್ತು ಪ್ರತಿಶತಃಕ್ಕಿಂತ ಕಡಿಮೆಯಾಗಿ ಜಯಲಲಿತಾ ಆರೋಪ ಮುಕ್ತರಾಗಿ ಜೈಲಿನಿಂದ ಹೊರಬಂದು ಇನ್ನೇನು ಕೆಲವೇ ದಿನಗಳಲ್ಲಿ ಮತ್ತೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿಯಾದ ನಂತರ ಆರು ತಿಂಗಳು ಕಳೆಯುವುದರೊಳಗೆ ಶಾಸಕತ್ವ ಪಡೆದುಕೊಳ್ಳುವುದು ಜಯಲಲಿತಾರಿಗೆ ಕಷ್ಟಕರವಾದ ಸಂಗತಿಯೇನಲ್ಲ.
ಇನ್ನು ಹೆಚ್ಚು ಪ್ರಚಾರ ಪಡೆದ ಮತ್ತೊಂದು ಪ್ರಕರಣವೆಂದರೆ ಸಲ್ಮಾನ್ ಖಾನಿನ ಗುದ್ದೋಡು ಪ್ರಸಂಗ. ಬರೋಬ್ಬರಿ ಹದಿಮೂರು ವರುಷಗಳ ಹಿಂದೆ ಪಾನಮತ್ತನಾಗಿ ವಾಹನ ಚಲಾಯಿಸಿ ರಸ್ತೆ ಪಕ್ಕದ ಫುಟ್ ಪಾತಿನಲ್ಲಿ ಮಲಗಿದ್ದವರ ಮೇಲೆ ಕಾರು ಚಲಾಯಿಸಿ ನೂರುಲ್ಲ ಶರೀಫ್ ಎಂಬಾತನ ಸಾವಿಗೆ, ಉಳಿದವರ ಅಂಗಾಂಗ ಊನಕ್ಕೆ ಕಾರಣವಾಗಿದ್ದ ಸಲ್ಮಾನ್ ಖಾನ್. ವಿಚಾರಣೆ ಹದಿಮೂರು ವರುಷಗಳವರೆಗೆ ಎಳೆದಾಡಲಾಯಿತು. ಈ ಎಳೆದಾಡುವಿಕೆಯಲ್ಲಿ ಸರಕಾರವೂ ಶಾಮೀಲಾಗಿತ್ತೆಂಬ ಅನುಮಾನ ಮೂಡುವುದು ಪ್ರಮುಖ ಸಾಕ್ಷಿಗಾದ ಗತಿ. ಸಲ್ಮಾನ್ ಖಾನಿನ ಅಂಗರಕ್ಷಕನಾಗಿದ್ದ ರವೀಂದ್ರ ಪಾಟೀಲ್ ಎಂಬ ಪೋಲೀಸ್ ಪೇದೆ ಈ ಪ್ರಕರಣದ ಪ್ರಮುಖ ಸಾಕ್ಷಿ. ಸಲ್ಮಾನ್ ಖಾನ್ ಕುಡಿದು ಗಾಡಿ ಓಡಿಸುತ್ತಿದ್ದನೆಂಬ ಹೇಳಿಕೆಯನ್ನು ಬದಲಿಸಲು ರವೀಂದ್ರ ಪಾಟೀಲನಿಗೆ ಬಹಳಷ್ಟು ಒತ್ತಡವಿರುತ್ತದೆ. ಸತ್ಯಕ್ಕೆ ಮೋಸ ಮಾಡದಿರುವ ರವೀಂದ್ರ ಪಾಟೀಲನ ನಿರ್ಧಾರ ನಿಧಾನಕ್ಕೆ ಆತನ ಜೀವನ ಮತ್ತು ಜೀವಕ್ಕೆ ಮುಳ್ಳಾಗುತ್ತದೆ. ವಿಪರೀತ ಒತ್ತಡ, ಪಾಟೀ ಸವಾಲಿಗೆಲ್ಲ ಬೆದರಿದ ರವೀಂದ್ರ ಇದ್ದಕ್ಕಿದ್ದಂತೆ ಒಂದು ದಿನ ನಾಪತ್ತೆಯಾಗಿಬಿಡುತ್ತಾನೆ. ನ್ಯಾಯಲಯಕ್ಕೆ ಸಾಕ್ಷಿ ಹೇಳಲು ಬರುವುದೇ ಇಲ್ಲ. ಕೊನೆಗೆ ನ್ಯಾಯಾಲಯ ಆತನ ವಿರುದ್ಧ ಅರೆಸ್ಟ್ ವಾರೆಂಟ್ ಘೋಷಿಸುತ್ತದೆ. ವಿಪರ್ಯಾಸ ನೋಡಿ, ಯಾವ ವ್ಯಕ್ತಿ ಸಲ್ಮಾನ್ ಖಾನನ ವಿರುದ್ಧ ಎಫ್.ಐ.ಆರ್ ದಾಖಲಿಸಿ ಸಲ್ಮಾನನನ್ನು ಜೈಲಿಗೆ ಕಳುಹಿಸುವಲ್ಲಿ ಪ್ರಮುಖ ಸಾಕ್ಷಿಯಾಗಬೇಕಿತ್ತೋ ಅದೇ ವ್ಯಕ್ತಿ ತನ್ನ ಕೆಲಸವನ್ನೂ ಕಳೆದುಕೊಂಡು ಆರ್ಥರ್ ಜೈಲಿನ ಅತಿಥಿಯಾಗುತ್ತಾನೆ. ಮತ್ತು ಆರೋಪಿ ಸ್ಥಾನದಲ್ಲಿದ್ದ ಸಲ್ಮಾನ್ ಖಾನ್ ಬಾಲಿವುಡ್ ಚಿತ್ರಗಳಲ್ಲಿ ಮಿಂಚುತ್ತಾ, ನಟೀಮಣಿಯರ ಜೊತೆಗೆ ಪ್ರೀತಿ – ಕೋಪ – ತಾಪ ಪ್ರದರ್ಶಿಸುತ್ತಾ ಸ್ವಚ್ಛಂದವಾಗಿ ತಿರುಗುತ್ತಿರುತ್ತಾನೆ! ರವೀಂದ್ರ ಪಾಟೀಲ್ ತಲೆಮರೆಸಿಕೊಂಡು ಓಡಾಡುವುದಕ್ಕೆ ಕಾರಣಕರ್ತನಾದ ವ್ಯಕ್ತಿ ತಲೆಎತ್ತಿಕೊಂಡು ಓಡಾಡುತ್ತಿರುತ್ತಾನೆ. ಜೈಲಿನಿಂದ ಹೊರಬಂದ ಸಾಕ್ಷಿ ರವೀಂದ್ರ ಪಾಟೀಲ್ ಮತ್ತೆ ತಪ್ಪಿಸಿಕೊಂಡು ಕೊನೆಗೆ ಕಾಣಿಸಿಕೊಂಡಿದ್ದು ರಸ್ತೆ ಬದಿಯ ಭಿಕ್ಷುಕನಾಗಿ, ಕ್ಷಯ ರೋಗ ಪೀಡಿತನಾಗಿ. 2007ರ ಅಕ್ಟೋಬರಿನಲ್ಲಿ ರವೀಂದ್ರ ಪಾಟೀಲ್ ಕೊನೆಯುಸಿರೆಳೆಯುತ್ತಾನೆ. ಆರೋಪಿ ಸಲ್ಮಾನ್ ಖಾನ್ ‘ಸೇವೆ’ ಮಾಡುತ್ತಾ ‘ಮಾನವೀಯ’ ನಟ ಎಂದು ತೋರ್ಪಡಿಸಿಕೊಳ್ಳುತ್ತಾನೆ, ಜನರ ಅನುಕಂಪ ಗಟ್ಟಿಸಿಕೊಳ್ಳುತ್ತಾ ಸಾಗುತ್ತಾನೆ. ಇಷ್ಟೆಲ್ಲ ವರುಷಗಳ ವಿಚಾರಣೆಯ ನಂತರ ಇದ್ದಕ್ಕಿದ್ದಂತೆ ವಾಹನ ಚಲಾಯಿಸುತ್ತಿದ್ದುದು ಸಲ್ಮಾನ್ ಖಾನ್ ಅಲ್ಲ, ಆತನ ಚಾಲಕ ಅಶೋಕ್ ಸಿಂಗ್ ಎಂಬ ಕಥೆ ಹುಟ್ಟಿಕೊಳ್ಳುತ್ತದೆ. ಕೆಳಹಂತದ ನ್ಯಾಯಾಲಯ ಈ ಸಂಗತಿಯನ್ನು ಪರಿಗಣಿಸದೆ ಸಲ್ಮಾನ್ ಖಾನ್ ದೋಷಿ ಎಂದು ತೀರ್ಪು ನೀಡಿ ಐದು ವರುಷಗಳ ಶಿಕ್ಷೆ ವಿಧಿಸುತ್ತದೆ. ಅದೇ ಸಂಜೆ ಥಟ್ ಅಂತ ಸಲ್ಮಾನ್ ಖಾನಿಗೆ ಎರಡು ದಿನಗಳ ಜಾಮೀನು ದೊರಕಿಬಿಡುತ್ತದೆ! ಸಾಕ್ಷಿಗಳೆಲ್ಲ ಪಕ್ಕಾ ಆಗಿರುವ ಪ್ರಕರಣದಲ್ಲಿ ವಿಚಾರಣೆ ಮುಗಿದು ಶಿಕ್ಷೆಯಾಗಲು ಹದಿಮೂರು ವರುಷಗಳು ಹಿಡಿದರೆ, ಶಿಕ್ಷೆಯಾದ ನಂತರ ಜಾಮೀನು ಸಿಗಲು ಒಂದು ದಿನವೂ ಬೇಡ! ಎರಡು ದಿನದ ನಂತರ ಉನ್ನತ ನ್ಯಾಯಾಲಯ ಶಿಕ್ಷೆಯನ್ನೇ ರದ್ದು ಪಡಿಸಿ ಜಾಮೀನು ನೀಡಿಬಿಡುತ್ತದೆ. ಅಲ್ಲಿಗೆ ನೂರುಲ್ಲ ಶರೀಫನ ಸಾವಿಗೆ ನ್ಯಾಯವಿನ್ನೂ ಮರೀಚಿಕೆ. ಸಲ್ಮಾನ್ ಖಾನನಿಗೆ ಶಿಕ್ಷೆಯಾಗುತ್ತಿದ್ದಂತೆ ನಮ್ಮ ಮಾಧ್ಯಮದ ಮಂದಿ, ಸೆಲೆಬ್ರಿಟಿ ಎನ್ನಿಸಿಕೊಂಡವರು ಮತ್ತು ಸಾಮಾನ್ಯ ಜನತೆ ವರ್ತಿಸಿದ ರೀತಿ ಅಪರಾಧಿಯ ‘ಖ್ಯಾತಿ’ ಮತ್ತು ‘ಹಣ’ದ ಪ್ರಭಾವವನ್ನು ತೋರಿಸುತ್ತದೆಯಷ್ಟೇ. ಭಾರತ ದೇಶದ ಆರ್ಥಿಕ – ಸಾಮಾಜಿಕ ಪರಿಸ್ಥಿತಿಯನ್ನೇ ಅರಿಯದ ‘ಖ್ಯಾತ’ನಾಮರು ‘ಫುಟ್ ಪಾತ್ ಇರೋದು ಮಲಗೋದಿಕ್ಕಲ್ಲ’ ಎಂಬ ಅಸಂಬದ್ಧದ ಹೇಳಿಕೆಗಳನ್ನು ನೀಡಿದರು. ಫುಟ್ ಪಾತ್ ಇರೋದು ಕುಡಿದು ಗಾಡಿ ಓಡಿಸುವುದಕ್ಕೂ ಅಲ್ಲ ಎಂಬ ಸಂಗತಿ ಅವರ ಅರಿವಿಗೆ ಹೇಗೆ ಬರಲಿಲ್ಲವೋ? ಇನ್ನೂ ಬಹುತೇಕ ಮಾಧ್ಯಮಗಳಿಗೆ ಸಲ್ಮಾನ್ ಖಾನನ್ನು ನಂಬಿಕೊಂಡು ಬಾಲಿವುಡ್ಡಿನಲ್ಲಿ ಎಷ್ಟು ದುಡ್ಡು ಸುರಿದಿದ್ದಾರೆ ಎಂಬುದರ ಬಗ್ಗೆಯೇ ಚಿಂತೆ. ಇನ್ನೂರು ಕೋಟಿಯಂತೆ ಮುನ್ನೂರು ಕೋಟಿಯಂತೆ ಎಂದು ಒದರಿಕೊಂಡವರಿಗೆ ಸತ್ತ ನೂರುಲ್ಲ ಶರೀಫನ ಜೀವಕ್ಕೆ ರುಪಾಯಿಗಳಿಂದ ಅಳೆಯಲಾಗದ ಒಂದು ಬೆಲೆಯಿತ್ತು ಎಂಬ ಗ್ನಾನವೇ ಇರಲಿಲ್ಲ. ಅಪಘಾತವೆಂಬುದು ಆಕಸ್ಮಿಕವಾಗಿ ಸಂಭವಿಸುವ ಘಟನೆ, ಚಾಲಕನ ನಿಯಂತ್ರಣ ತಪ್ಪುವುದು ವಾಹನ ಚಲಾಯಿಸುವವರೆಲ್ಲ ಅನುಭವಕ್ಕೂ ಬಂದಿರುತ್ತದೆ. ಆದರೆ ಕುಡಿದು ವಾಹನ ಚಲಾಯಿಸಿದಾಗ ಆದ ಅವಘಡವನ್ನು ಆಕಸ್ಮಿಕ ಅಪಘಾತವೆನ್ನಬೇಕೋ ಅಥವಾ ನಿರ್ಲಕ್ಷ್ಯದಿಂದ ಮಾಡಿದ ಹತ್ಯೆಯೆನ್ನಬೇಕೋ?
ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುವವರೂ ನಮ್ಮ ನಿಮ್ಮಂತೆ ಮನುಷ್ಯರೇ ತಾನೇ? ವಕೀಲರು, ನ್ಯಾಯಾಧೀಶರು ತಮ್ಮ ವಾದವನ್ನು, ತೀರ್ಪನ್ನು ‘ಜನರ’ ಅಭಿಪ್ರಾಯದ ಕಾರಣದಿಂದ ಸ್ವಲ್ಪವಾದರೂ ಬದಲಿಸಿಕೊಳ್ಳದಷ್ಟು ನಿಷ್ಠುರವಾದಿಗಳಾಗಿರುವ ಸಂಭವ ಕಡಿಮೆ. ನ್ಯಾಯಾಧೀಶರು ನಮ್ಮ ನಿಮ್ಮಂತೆ ಮನುಷ್ಯರೇ ಆಗಿರುವ ಕಾರಣದಿಂದ ಇತರೆ ಹುದ್ದೆಯ ಜನರಲ್ಲಿರುವಷ್ಟೇ ಭ್ರಷ್ಟಾಚಾರ ನ್ಯಾಯಾಂಗದಲ್ಲೂ ಇದೆ. ಚಿಕ್ಕ ಪುಟ್ಟ ಕೋರ್ಟುಗಳಲ್ಲಿ ಸಣ್ಣ ಮಟ್ಟದ ಭ್ರಷ್ಟಾಚಾರ, ಕೋರ್ಟು ದೊಡ್ಡದಾಗುತ್ತ ಹೋದಂತೆ ಭ್ರಷ್ಟಾಚಾರದ ಪ್ರಮಾಣವೂ ದೊಡ್ಡದಾಗುತ್ತದೆ. ಸರಕಾರಿ ವಕೀಲರ ‘ಸಹಕಾರ’ದಿಂದ ಹಳ್ಳ ಹಿಡಿದ ಪ್ರಕರಣಗಳು, ನ್ಯಾಯಾಧೀಶರಿಗೆ ಆಪ್ತರಾದ ವಕೀಲರಿಂದ ಬದಲಾದ ತೀರ್ಪುಗಳು ಸಾಮಾನ್ಯ. ಭ್ರಷ್ಟಾಚಾರಕ್ಕೆ ಒಗ್ಗಿಕೊಂಡ ನ್ಯಾಯಾಲಯ ಪ್ರಭಾವಕ್ಕೂ ಬಗ್ಗದೇ ಇದ್ದೀತೆ? ಖ್ಯಾತ ನಾಮರ ಪ್ರಕರಣಗಳಲ್ಲಿ ಎರಡು ಬೇರೆ ಬೇರೆ ನ್ಯಾಯಾಲಯದ ತೀರ್ಪುಗಳು ತದ್ವಿರುದ್ದ ದಿಕ್ಕಿನಲ್ಲಿ ಸಾಗುವಂತಹ ನಿದರ್ಶನಗಳು ನ್ಯಾಯಾಂಗದ ಮೇಲಿನ ನಂಬುಗೆಯನ್ನು ಕಡಿಮೆ ಮಾಡುತ್ತವೆ. ಮೇಲಿನ ನ್ಯಾಯಾಲಯ ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ಸಂಪೂರ್ಣವಾಗಿ ತಿರಸ್ಕರಿಸಿಬಿಟ್ಟಾಗ ಕೆಳ ಹಂತದ ನ್ಯಾಯಾಧೀಶರನ್ಯಾಕೆ ತಪ್ಪಿತಸ್ಥರನ್ನಾಗಿ ಪರಿಗಣಿಸಬಾರದು? ಈ ಲೇಖನದಲ್ಲಿ ಪ್ರಸ್ತಾಪಿಸಿರುವ ಎರಡು ಪ್ರಕರಣಗಳ ಉದಾಹರಣೆಯನ್ನೇ ತೆಗೆದುಕೊಂಡರೆ ಅಕಸ್ಮಾತ್ ಸಲ್ಮಾನ್ ಖಾನ್ ಮತ್ತು ಜಯಲಲಿತಾರಿಗೆ ಮೇಲಿನ ನ್ಯಾಯಾಲಯಕ್ಕೆ ಅಪೀಲು ಹೋಗಲು ಆರ್ಥಿಕ ಸೌಲಭ್ಯವಿರದಿದ್ದಲ್ಲಿ ಅವರು ಶಿಕ್ಷೆ ಅನುಭವಿಸುತ್ತಾ ಜೈಲಿನಲ್ಲೇ ಕೂರಬೇಕಿತ್ತಲ್ಲವೇ? ಮೇಲಿನ ನ್ಯಾಯಾಲಯದ ತೀರ್ಪನ್ನೇ ಸತ್ಯವೆಂದು ನಂಬಿದರೆ ಕೆಳ ಹಂತದ ನ್ಯಾಯಾಧೀಶರ ಅಜ್ಞಾನದಿಂದ ವ್ಯಕ್ತಿಯೋರ್ವ ಜೈಲಿನಲ್ಲಿ ಕೊಳೆಯಬೇಕಾಗುತ್ತಿತ್ತಲ್ಲವೇ? ಒಟ್ಟಿನಲ್ಲಿ ನ್ಯಾಯಾಧೀಶರು ತಮ್ಮ ‘ತಪ್ಪು’ ತೀರ್ಪಿಗಾಗಿ ದಂಡ ತೆರುವಂತಹ ಮಾರ್ಪಾಡಾಗಬೇಕು. ಇನ್ನು ನಮ್ಮ ಕರ್ನಾಟಕದ್ದೇ ಒಂದು ಪ್ರಕರಣವಿದೆ. ರಾಘವೇಂದ್ರ ಸ್ವಾಮಿಗಳ ಮೇಲೆ ಪ್ರೇಮಲತಾ ದಿವಾಕರ್ ಎಂಬಾಕೆ ಹೊರಿಸಿದ ಅತ್ಯಾಚಾರ ಪ್ರಕರಣದ ವಿಚಾರಣೆಯಿಂದ ಅನೇಕ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದುಬಿಟ್ಟರು. ನ್ಯಾಯಾಧೀಶರ ಮೇಲೆ ಫಿರ್ಯಾದುದಾರರು ಅಪನಂಬುಗೆ ವ್ಯಕ್ತಪಡಿಸಿದರೆ ಅಥವಾ ಪ್ರಕರಣದ ವಿಚಾರಣೆ ಮಾಡುವ ವಕೀಲರಿಗೆ ಮತ್ತು ನ್ಯಾಯಾಧೀಶರಿಗೆ ನೆಂಟಸ್ತನವಿದ್ದರೆ ಹಿಂದೆ ಸರಿಯಬಹುದು. ತಮ್ಮ ಕರ್ತವ್ಯದಿಂದ ವಿಮುಖವಾಗುವ ಅವಕಾಶ ಅಧಿಕೃತವಾಗಿ ಯಾವ ಸರಕಾರಿ ನೌಕರನಿಗೂ ಇಲ್ಲ. ಆ ಅವಕಾಶ ನ್ಯಾಯಾಧೀಶರಿಗಿದೆ. ಯಾವೊಂದು ಕಾರಣವನ್ನೂ ಹೇಳದೆ ನ್ಯಾಯಸ್ಥಾನದಿಂದ ನಿರ್ಗಮಿಸಿಬಿಡಬಹುದು. ಈ ರೀತಿಯ ಕರ್ತವ್ಯ ವಿಮುಖತೆಗೆ ಅವಕಾಶವಿರಬೇಕೆ? ತಮ್ಮ ವಿವಾದಾಸ್ಪದ ಹೇಳಿಕೆಗಳಿಂದಲೇ ಪ್ರಚಲಿತದಲ್ಲಿರುವ ಮಾರ್ಕಂಡೇಯ ಕಟ್ಜು ಇತ್ತೀಚೆಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಭಾರತದ ಮುಖ್ಯ ನ್ಯಾಯಧೀಶರಾದ ಹೆಚ್.ಎಲ್.ದತ್ತು ಮತ್ತವರ ಪತ್ನಿಯ ಅಕ್ರಮ ಆಸ್ತಿಯ ಬಗ್ಗೆ ಬರೆದಿದ್ದಾರೆ. ಇದಕ್ಕೆ ಸಂಬಂಧಪಟ್ಟಂತಹ ದಾಖಲೆಗಳನ್ನು ಪ್ರಮುಖ ಮಾಧ್ಯಮಗಳಿಗೆ 2014ರಲ್ಲೇ ದತ್ತು ಮುಖ್ಯ ನ್ಯಾಯಮೂರ್ತಿ ಆಗುವುದಕ್ಕೆ ಮೊದಲೇ ಕೊಟ್ಟಿದ್ದರೂ ಯಾವ ಪ್ರಮುಖ ಮಾಧ್ಯಮವೂ ಆ ಸುದ್ದಿಗೆ ಒತ್ತು ನೀಡಲಿಲ್ಲ. ಸುಪ್ರೀಂ ಕೋರ್ಟಿನ ಚೀಫ್ ಜಸ್ಟೀಸ್ ಮೇಲೆಯೇ ಭ್ರಷ್ಟಾಚಾರದ ಆರೋಪವಿರುವಾಗ ಇನ್ನಿತರೆ ನ್ಯಾಯಾಧೀಶರ ಕಥೆಯೇನು. ನ್ಯಾಯಾಧೀಶರು ತಮ್ಮ ಆಸ್ತಿಯ ಬಗ್ಗೆ ಸ್ವಯಂ ಘೋಷಣೆ ಮಾಡಿಕೊಂಡು, ತೆರಿಗೆ ಅಧಿಕಾರಿಗಳು, ಲೋಕಾಯುಕ್ತದವರು ನಿಯಮಿತವಾಗಿ ಭ್ರಷ್ಟ ನ್ಯಾಯಾಧೀಶರ, ಭ್ರಷ್ಟ ಸರಕಾರಿ ವಕೀಲರ ಮೇಲೆ ದಾಳಿ ನಡೆಸಿದರೆ ನ್ಯಾಯಾಂಗದ ಭ್ರಷ್ಟಾಚಾರ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಬಹುದು ಎಂದು ಆಶಿಸಬಹುದು. ನ್ಯಾಯಾಧೀಶರ ವಿರುದ್ಧ ಬರೆಯುವ ಲೇಖನಗಳು ನ್ಯಾಯಾಂಗ ನಿಂದನೆಯಾಗುವುದಿಲ್ಲ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಅದನ್ನು ಮೊದಲು ಅರಿತುಕೊಳ್ಳಬೇಕಾದ ನ್ಯಾಯಾಧೀಶರು ತಮ್ಮ ಭ್ರಷ್ಟತೆಯನ್ನು ಮರೆಮಾಚಿಕೊಳ್ಳಲು ನ್ಯಾಯಾಂಗ ನಿಂದನೆಯ ಮೊರೆ ಹೋಗುವುದು ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಇಲ್ಲವಾಗಿಸುತ್ತದೆ ಎಂಬ ಪ್ರಜ್ಞೆ ನ್ಯಾಯಾಸ್ಥಾನದಲ್ಲಿರುವವರಿಗೆಲ್ಲ ಇರಬೇಕು.
No comments:
Post a Comment