Dr Ashok K R
“ಏಯ್, ಸರಿಯಾಗಿ ನೋಡ್ಕೊಂಡು ನಡಿ”
“ನೀನ್ ಸರಿಯಾಗಿ ನೋಡ್ಕೊಂಡು ನಡಿ”
“ಯಾರಿಗ್ಹೇಳ್ತಿ?”
“ನೀನ್ಯಾರಿಗ್ಹೇಳ್ತಿ?”
“ನಿಮ್ಮಗಳ ಬುದ್ಧೀನೇ ಇಷ್ಟು”
“ನಿಮ್ಮಗಳ ಬುದ್ಧೀನೇ ಇಷ್ಟು”
“ಸಂಸ್ಕಾರವಿಲ್ಲದ ಜನ”
“ಸಂಸ್ಕಾರವಿಲ್ಲದ ಜನ”
ಏರುತ್ತಲೇ ಸಾಗುತ್ತಿದ್ದ ದನಿಗಳಿಂದ ವಿಚಲಿತನಾಗಿ ಡಾಕ್ಟ್ರು ತಮ್ಮ ಕೋಣೆಯಿಂದ ಹೊರಬಂದು “ಯಾರ್ರೀ ಅದು ಆಸ್ಪತ್ರೆ ಅನ್ನೋ ಸೆನ್ಸೂ ಇಲ್ದೆ ಕಿರುಚ್ತಿರೋದು?” ಎಂದ್ಹೇಳಿ ನೋಡಿದವರಿಗೆ ಕಂಡಿದ್ದು ಜೀವನದಲ್ಲೇ ಮರೆಯಲಾಗದ ದುರನುಭವಗಳನ್ನು ನೀಡಿದ್ದ ಸುಲೇಮಾನ್ ಮತ್ತು ಭಾಸ್ಕರ.
“ಅವನ್ದೇ ತಪ್ಪು”
“ಅವನ್ದೇ ತಪ್ಪು”
“ತಪ್ಪು ನಿಮ್ದೋ ಅವರ್ದೋ ನನಗ್ಯಾಕೆ. ರೋಗಿಗಳ ಮುಂದೆ ಕಿತ್ತಾಡೋಕೆ ಬಂದಿದ್ದೀರಾ? ಹೊರಗೋಗ್ರಿ”
ಸುಲೇಮಾನ್ ಮತ್ತು ಭಾಸ್ಕರ ಬಸಿರಾಗಿದ್ದ ತಮ್ಮ ಹೆಂಡಿರನ್ನು ಚೆಕಪ್ಪಿಗೆ ಕರೆದುಕೊಂಡು ಬಂದಿದ್ದರು. ಅವರನ್ನು ಪರೀಕ್ಷಿಸಿ ಕಳುಹಿಸಿದ ಡಾಕ್ಟ್ರಿಗೆ ಹಳೆಯ ಘಟನೆಗಳು ನೆನಪಾಯಿತು.
ಎಂಬಿಬಿಎಸ್ ಮಾಡುವಾಗ ಪ್ರೀತಿಸಿದ್ದ ರೇಷ್ಮಾಳನ್ನು ಮನೆಯವರ ವಿರೋಧದ ನಡುವೆ ಮದುವೆಯಾಗಿ ಈ ಪುಟ್ಟ ಊರಿಗೆ ಬಂದು ನೆಲೆಸಿದ್ದ. ಎರಡು ವರ್ಷದೊಳಗೆ ಪುಟ್ಟ ನರ್ಸಿಂಗ್ ಹೋಮನ್ನು ಕಟ್ಟುವಷ್ಟರ ಮಟ್ಟಿಗೆ ಪ್ರಾಕ್ಟೀಸ್ ಕ್ಲಿಕ್ ಆಗಿತ್ತು. ರೇಷ್ಮಾ ಪಿ.ಜಿ ಮಾಡಲು ಹೋದಳು. ಇಲ್ಲಿನ ಸಮಾಜವೂ ರೋಗಗ್ರಸ್ಥವಾಗಿದೆ ಎಂದರಿವಾಗಲು ಡಾಕ್ಟ್ರಿಗೆ ಹೆಚ್ಚಿನ ಸಮಯ ಬೇಕಾಗಲಿಲ್ಲ. ಜನರಿಗಾಗುವ ಖಾಯಿಲೆಗಳು ಏರಿಳಿಯುತ್ತಿತ್ತು, ಸಮಾಜಕ್ಕಂಟುತ್ತಿದ್ದ ಖಾಯಿಲೆ ಏರುಗತಿಯಲ್ಲಷ್ಟೇ ಸಾಗುತ್ತಿತ್ತು. ರಂಜಾನ್ ಮಾಸದಲ್ಲಿ, ಬಕ್ರೀದಿನ ಆಸುಪಾಸು, ಗಣೇಶೋತ್ಸವದ ಸುತ್ತಮುತ್ತ ‘ಎರಡು ಗುಂಪುಗಳ’ ನಡುವೆ ‘ಮಾರಾಮಾರಿ’ ನಡೆಯುವುದು ಸಾಮಾನ್ಯವಾಯಿತು. ತಲೆಗೆ ಬ್ಯಾಂಡೇಜು ಸುತ್ತಿಸಿಕೊಳ್ಳಲು, ಹೊಲಿಗೆ ಹಾಕಿಸಿಕೊಳ್ಳಲು ‘ಎರಡು ಗುಂಪಿನವರೂ’ ಅಕ್ಕಪಕ್ಕದಲ್ಲೇ ಕುಳಿತು ಕಾಯುತ್ತಿದ್ದರು. “ಎಂ.ಎಲ್.ಸಿ ಮಾಡ್ಬೇಕಾಗುತ್ತೆ, ಪೋಲೀಸರಿಗೆ ತಿಳಿಸಬೇಕಾಗುತ್ತೆ” ಎಂದು ಮೊದಮೊದಲು ಹೇಳುತ್ತಿದ್ದ ಡಾಕ್ಟ್ರು ಒಂದೆರಡು ಸಂದರ್ಭದಲ್ಲಿ ರೋಗಿಯಾಗಿ ಬಂದವರು ತಲೆಯ ಗಾಯವನ್ನು ಎಡಗೈಯಲ್ಲಿ ಒತ್ತಿ ಹಿಡಿದು ಬಲಗೈಯಿಂದ ಸೊಂಟದತ್ತಿರ ಸಿಕ್ಕಿಸಿಕೊಂಡ ಚಾಕುವನ್ನೊರಗೆಳೆದ ನಂತರ ಬಂದವರ ಗಾಯಗಳಿಗೆ ಬಾಯ್ಮುಚ್ಚಿಕೊಂಡು ಹೊಲಿಗೆ ಹಾಕಿ ಔಷಧಿ ನೀಡುವುದಕ್ಕೆ ಸೀಮಿತಗೊಳಿಸಿಕೊಂಡರು.
ದೇಹದೊಳಗಿನ ರೋಗಾಣು ಪ್ರತಿರೋಗಾಣುವಿನ ಕಾರ್ಯಾಲಾಪಗಳು ಅರಿಯದವರಿಗೆ ಅಸಂಬದ್ಧದಂತೆ ತೋರಿದಾಗ್ಯೂ ಪ್ರತಿಯೊಂದೂ ಕೂಡ ಯೋಜನಾಬದ್ಧವಾಗಿಯೇ ನಡೆಯುತ್ತಿರುತ್ತದೆ. ಎರಡು ವರ್ಷಗಳವರೆಗೆ ಹಬ್ಬಗಳ ಸಂದರ್ಭದಲ್ಲಿ ‘ಎರಡು ಗುಂಪುಗಳ’ ನಡುವೆ ನಡೆಯುತ್ತಿದ್ದ ಮಾರಾಮಾರಿ ಕ್ರಮೇಣವಾಗಿ ಸ್ಥಳೀಯ ಸಂಸ್ಥೆಯ ಚುನಾವಣೆಯ ಮೊದಲು ಅಥವಾ ನಂತರ ‘ಸ್ಪೋಟಗೊಳ್ಳುವ’ ಕೋಮುಗಲಭೆಗಳಾದವು. ಒಂದು ಕೋಮಿನ ನಾಯಕ ವೆಂಕಟಗಿರಿಯಪ್ಪ. ಮತ್ತೊಂದು ಕೋಮಿಗೆ ರಿಜ್ವಾನ್ ಅಬ್ಬಾಸನ ನೇತೃತ್ವ. ‘ಧರ್ಮಿಷ್ಠರಾಗಿದ್ದ’ ಇಬ್ಬರಿಗೂ ಮೂಲವೃತ್ತಿ ವ್ಯಾಪಾರ. ಕಣ್ಣಿಗೆ ಕಾಣುವ ಪ್ರತಿಯೊಂದು ವಸ್ತು, ವ್ಯಕ್ತಿಯನ್ನೂ ತೂಗುತ್ತಿದ್ದರು. ಅತ್ಯಮೋಘ ಭಾಷಣಗಳಿಂದ ಭಾವನೆಗಳನ್ನು ಕೆರಳಿಸುವಲ್ಲಿ ಸಿದ್ಧಹಸ್ತರು. ಇವರ ಬಟ್ಟೆ ಅವರಿಗೆ ಅವರ ಬಟ್ಟೆ ಇವರಿಗೆ ಹಾಕಿಸಿ ಭಾಷಣ ಮಾಡಿಸಿದರೂ ಗಲಭೆಗಳನ್ನೆಬ್ಬಿಸುವಲ್ಲಿ ಸಫಲವಾಗುವಷ್ಟು ನಾಜೂಕಾಗಿರುತ್ತಿತ್ತು ಇವರ ಮಾತು. ಒಬ್ಬರ ಬಲಗೈ ಮತ್ತೊಬ್ಬರ ಎಡಗೈ ರೀತಿ ಕಾರ್ಯನಿರ್ವಹಿಸುತ್ತಿದ್ದರು ಭಾಸ್ಕರ ಮತ್ತು ಸುಲೇಮಾನ್. ಆರ್ಥಿಕತೆಯಲ್ಲಿ, ಅಂಡಲೆಯುವುದರಲ್ಲಿ, ಮನೆಯವರಿಂದ ತೆಗಳಿಸಿಕೊಳ್ಳುವುದರಲ್ಲಿ ಈರ್ವರಿಗೂ ಸಾಮ್ಯತೆಯಿತ್ತು. ವೆಂಕಟಗಿರಿಯಪ್ಪ ಮತ್ತು ರಿಜ್ವಾನ್ ಅಬ್ಬಾಸರ ಅತ್ಯಮೋಘ ಭಾಷಣ ಕೇಳಿ ಧರ್ಮರಕ್ಷಕರಾಗುವ ಧೃಡನಿಶ್ಚಯ ಮಾಡಿ ಗಣೇಶೋತ್ಸವಕ್ಕೆ ಐದು ದಿನಗಳಿರುವಾಗ ದೀಕ್ಷೆ ತೆಗೆದುಕೊಂಡರು.
ಒಂದೆಡೆ ಸೇರಿದ್ದ ವೆಂಕಟಗಿರಿಯಪ್ಪನ ಸಹಚರರು ‘ಇನ್ಯಾವ ಹಾದಿಯಲ್ಲಿ ಸಾಗದಿದ್ದರೂ ಮಸೀದಿಯ ಮುಂದೆ ಅರ್ಧ ಘಂಟೆ ನಿಲ್ಲಲೇಬೇಕು, ಅಸಂಬದ್ಧ ಮಾತನಾಡಬೇಕು. ಅವರಲ್ಲೊಬ್ಬ ರೊಚ್ಚಿಗೆದ್ದು ಕಲ್ಲೆಸೆಯಬೇಕು. ಎಸೆಯದಿದ್ದರೂ ಚಿಂತಿಲ್ಲ ಯಾರೋ ನಮ್ಮ ದೇವರ ಮೇಲೆ ಕಲ್ಲೆಸೆದರು ಎಂದರಚುತ್ತಾ ಹೊಡೆದಾಟ ಪ್ರಾರಂಭಿಸಬೇಕು’ ಎಂಬ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿತ್ತು.
ಮತ್ತೊಂದೆಡೆ ಸೇರಿದ್ದ ಅಬ್ಬಾಸನ ಸಹಚರರು ‘ಅವರು ಮಸೀದಿಯ ಮುಂದೆ ಅರ್ಧ ಘಂಟೆ ನಿಲ್ಲುತ್ತಾರೆ, ನಿಲ್ಲಲೇಬೇಕು, ಅಸಂಬದ್ಧ ಮಾತನಾಡಬೇಕು. ಅವರಲ್ಲೊಬ್ಬ ರೊಚ್ಚಿಗೆದ್ದು ಕಲ್ಲೆಸೆಯಬೇಕು. ಎಸೆಯದಿದ್ದರೂ ಚಿಂತಿಲ್ಲ ಯಾರೋ ನಮ್ಮ ದೇವರ ಮೇಲೆ ಕಲ್ಲೆಸೆದರು ಎಂದರಚುತ್ತಾ ಹೊಡೆದಾಟ ಪ್ರಾರಂಭಿಸಬೇಕು’ ಎಂಬ ತೀರ್ಮಾನ ತೆಗೆದುಕೊಳ್ಳಲಾಗಿತ್ತು.
ಎಲ್ಲವೂ ಅಂದುಕೊಂಡತೆಯೇ ನಡೆಯಿತು. ಭಾಸ್ಕರ ಮತ್ತು ಸುಲೇಮಾನ್ ಧರ್ಮರಕ್ಷಕರಾಗಿ ವೀರೋಚಿತವಾಗಿ ಹೋರಾಡಿದ್ದು ಅವರನ್ನು ವೆಂಕಟಗಿರಿಯಪ್ಪ ಮತ್ತು ರಿಜ್ವಾನ್ ಅಬ್ಬಾಸರ ಬಲಗೈ ಮತ್ತು ಎಡಗೈಯನ್ನಾಗಿ ಮಾಡಿತ್ತು.
ತಲೆ, ಕೈಕಾಲುಗಳಿಗಾಗುತ್ತಿದ್ದ ಗಾಯಗಳು ಪ್ರಾಣಹರಣದ ಮಟ್ಟ ಮುಟ್ಟಿದ್ದು ವಿಧಾನಸಭಾ ಚುನಾವಣೆ ಘೋಷಣೆಯಾದಾಗಿನಿಂದ. ತಮ್ಮ ತಮ್ಮ ‘ಮತ’ಬ್ಯಾಂಕನ್ನು ಗಟ್ಟಿಪಡಿಸಿಕೊಂಡಿದ್ದ ವೆಂಕಟಗಿರಿಯಪ್ಪ ಮತ್ತು ರಿಜ್ವಾನ್ ಅಬ್ಬಾಸ್ ಚುನಾವಣಾ ಅಭ್ಯರ್ಥಿಗಳಾಗಿದ್ದರು. ಗೆಲುವಿನ ನಿರೀಕ್ಷೆಯಲ್ಲಿದ್ದರು. ಚುನಾವಣೆಯ ನಿಮಿತ್ತ ರಜವಿದ್ದುದರಿಂದ ರೇಷ್ಮಾ ಹಿಂದಿನ ದಿನವೇ ಕಾಲೇಜಿನಿಂದ ಮನೆಗೆ ಹಿಂದಿರುಗುತ್ತಿದ್ದಳು. ಎರಡು ತಿಂಗಳ ಗರ್ಭಿಣಿಯಾಕೆ. ಬಸ್ ನಿಲ್ದಾಣದ ಹತ್ತಿರವೇ ಇದ್ದ ಮನೆಗೆ ತಲುಪುವಷ್ಟರಲ್ಲಿ ಆಕೆಯ ಹತ್ಯೆಯಾಗಿತ್ತು. ಪೋಸ್ಟ್ ಮಾರ್ಟಮ್ಮಿಗೆ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದರು. ಪೋಸ್ಟ್ ಮಾರ್ಟಮ್ಮಿಗೆ ಅಂದು ಸಾಲು ಮಾಡಿ ಟೋಕನ್ ನೀಡಲಾಗಿತ್ತು. ಅಲ್ಲೇ ಇದ್ದ ಪರಿಚಯದ ಪೋಲೀಸ್ ಸಬ್ ಇನ್ಸ್ ಪೆಕ್ಟರರೊಡನೆ ಘಟನೆಯ ಬಗ್ಗೆ ಚರ್ಚಿಸಲು ಡಾಕ್ಟ್ರು ಹೋದರು. ಸುಲೇಮಾನ್ ಮತ್ತು ಭಾಸ್ಕರ ಧರ್ಮದಾಧಾರದಲ್ಲಿ ಸತ್ತವರ ಸಂಖೈಯನ್ನು ಎಣಿಕೆ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ತಮ್ಮ ಊರಿನ ಖ್ಯಾತ ಡಾಕ್ಟ್ರ ಅನ್ಯಧರ್ಮೀಯ ವಿವಾಹದ ಬಗ್ಗೆ ಕೇಳಿ ತಿಳಿದಿರದೆ ಇರಲಿಲ್ಲ.
“ಬಿಡ್ರೀ ಡಾಕ್ಟ್ರೇ. ಆ ಧರ್ಮದವಳು ತಾನೇ. ಸತ್ತರೆ ಸತ್ಲು. ನಮ್ಮ ಪೈಕೀನೇ ಯಾರನ್ನಾದ್ರೂ ನೋಡಿ ಮಾಡ್ಕಳ್ಳೋರಂತೆ”
“ಅವರ ಪೈಕಿ ಮದುವೆಯಾಗಿದ್ಲು. ಸತ್ತರೆ ಸತ್ಲು. ನಮ್ಮ ಜನರಲ್ಲಿ ಕಟ್ಕೊಳ್ಳೋಕೆ ಯಾರೂ ಇರಲಿಲ್ವಾ ಅವಳಿಗೆ”
ಹೇಸಿಗೆಯೆನ್ನಿಸಿತ್ತು ಡಾಕ್ಟ್ರಿಗೆ. ಊರನ್ನೇ ತೊರೆಯಬೇಕೆಂದುಕೊಂಡವರು ಸ್ನೇಹಿತರ ಒತ್ತಾಯ ಮತ್ತು ಸಮಾಧಾನದ ಬಳಿಕ ಅಲ್ಲೇ ನೆಲೆಸಿದರು ರೇಷ್ಮಾಳ ನೆನಪಿನೊಂದಿಗೆ. ಚುನಾವಣೆ ಮುಗಿಯಿತು. ರಿಜ್ವಾನ್ ಅಬ್ಬಾಸ್ ಆಯ್ಕೆಯಾದ. ಧರ್ಮರಕ್ಷಣೆಗಾಗಿ ಅಪಾರ ಶ್ರಮ ಪಟ್ಟ ವೆಂಕಟಗಿರಿಯಪ್ಪನನ್ನು ಅವರ ಪಕ್ಷ ವಿಧಾನಪರಿಷತ್ತಿಗೆ ನೇಮಿಸಿತು. ಕೋಮುಗಲಭೆಗಳು ನಿಂತೇ ಹೋದವೆನ್ನುವಷ್ಟು ಕಡಿಮೆಯಾದವು. ಹಬ್ಬಗಳು ಉತ್ಸವಗಳಾಗುವುದಕ್ಕೆ ಹರಿದು ಬರುತ್ತಿದ್ದ ಹಣಕ್ಕೆ ಕಾಣದ ಕೈಗಳು ತಡೆಯೊಡ್ಡಿದ್ದರಿಂದ ಹಬ್ಬಗಳು ಮತ್ತು ದೇವರು ಬೀದಿಯಿಂದ ಮರಳಿ ಮನೆಯೊಳಗೆ ಬೆಚ್ಚಗಾದವು. ಸುಲೇಮಾನ್ ಮತ್ತು ಭಾಸ್ಕರ ಊರಿನೆರಡು ಮೂಲೆಗಳಲ್ಲಿ ದೊಡ್ಡ ದೊಡ್ಡ ಅಂಗಡಿ ಮಳಿಗೆ ತೆರೆದರು. ಜೊತೆಗೆ ರಿಜ್ವಾನ್ ಅಬ್ಬಾಸ್ ಮತ್ತು ವೆಂಕಟಗಿರಿಯಪ್ಪನ ವ್ಯಾಪಾರದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಸುಲೇಮಾನ್ ಮತ್ತು ಭಾಸ್ಕರನಿಗೆ ಹೆಚ್ಚು ಕಡಿಮೆ ಒಂದೇ ತಿಂಗಳಲ್ಲಿ ಮದುವೆಯಾಗಿತ್ತು. ಈರ್ವರ ಪತ್ನಿಯರೂ ಗರ್ಭ ಧರಿಸಿದ್ದರು. ಕೈಗುಣದಿಂದ ಫೇಮಸ್ಸಾಗಿದ್ದ ಡಾಕ್ಟ್ರ ಬಳಿಯೇ ತೋರಿಸಲು ಬಂದಿದ್ದರು.
ಈರ್ವರ ಹೆಂಡಿರಿಗೂ ಒಂದೇ ಸಮಯದಲ್ಲಿ ಹೆರಿಗೆ ನೋವು ಪ್ರಾರಂಭವಾಗಿತ್ತು. ಡಾಕ್ಟ್ರ ನರ್ಸಿಂಗ್ ಹೋಮಿಗೆ ಕರೆದುಕೊಂಡು ಬಂದು ಸೇರಿಸಿದ್ದರು. ಇಬ್ಬರನ್ನೂ ಹೆರಿಗೆ ಕೊಠಡಿಗೆ ಸಾಗಿಸಿ ಪರೀಕ್ಷಿಸಿ ಒಂದಷ್ಟು ಔಷಧಿಗಳನ್ನು ನೀಡಿ ಹೆರಿಗೆಯಾಗಲು ಇನ್ನೂ ಸಮಯವಿದೆಯೆನ್ನಿಸಿ ಒಳಗೇ ಇದ್ದ ಕೊಠಡಿಯೊಳಗೆ ಕುಳಿತ ಡಾಕ್ಟರಿಗೆ ತಲೆಸಿಡಿಯಲಾರಂಭಿಸಿತು. ‘ನನ್ನ ಗರ್ಭಿಣಿ ರೇಷ್ಮಾಳನ್ನು ಕೊಂದ ಜನರಿವರು. ಇವರ ಪತ್ನಿಯನ್ನು ಮಗುವನ್ನು ಉಳಿಸಲು ನಾನೇ ಕಾವಲಾಗಬೇಕು. ಅದೂ ಇದೂ ಔಷಧಿ ನೀಡಿ ಮಗುವನ್ನೋ ತಾಯಿಯನ್ನೋ ಅಥವಾ ಇಬ್ಬರನ್ನೂ ಸಾಯುವಂತೆ ಮಾಡಿಬಿಡಲಾ? ಛೇ! ಛೇ! ವೈದ್ಯನಾಗಿ ಈ ರೀತಿ ಯೋಚಿಸಬಾರದು. ರಂಗಣ್ಣ ಇಬ್ಬರ ಸ್ಕ್ಯಾಂನಿಗನ್ನೂ ಮಾಡುತ್ತಿದ್ದಾಗ ನೋಡಿದ್ದೆನಲ್ಲ, ಇಬ್ಬರ ಗರ್ಭದೊಳಗೂ ಗಂಡು ಮಗು. ಅಪ್ಪನ ರೀತಿ ಅವರೂ ಧರ್ಮದ ನಂಜೇರಿಸಿಕೊಂಡು ಕಾದಾಟಕ್ಕಿಳಿದರೆ? ಅದರ ಬದಲು ಇಂದೇ ಮುಗಿಸಿಬಿಟ್ಟರೆ. ಛೀ ಛೀ ಇದೇನ್ ಯೋಚಿಸ್ತಿದ್ದೀನಿ ನಾನು. ಅಪ್ಪ ಮಾಡಿದ ತಪ್ಪಿಗೆ ಪಾಪ ಹಸುಗೂಸುಗಳ್ಯಾಕೆ ಶಿಕ್ಷೆ ಅನುಭವಿಸಬೇಕು’ ಒಂದು ಗ್ಲಾಸು ನೀರು ಕುಡಿದ. ಹೆರಿಗೆ ರೂಮಿನಲ್ಲಿ ಇಬ್ಬರ ಕೂಗು ರಾಗಬದ್ಧವಾಗಿ ದನಿಸಲಾರಂಭಿಸಿತ್ತು. ‘ಆದ್ರೂ ಏನಾದ್ರೂ ಮಾಡ್ಬೇಕು. ಇಬ್ಬರಿಗೂ ಬುದ್ಧಿ ಕಲಿಸಲೇಬೇಕು. ಹುಟ್ಟಿನಿಂದ ಬರುವ ಧರ್ಮದ ಲೇಬಲ್ಲಿನ ಮೇಲೆ ಇಷ್ಟೊಂದೆಲ್ಲಾ ಹಿಂಸಾ ಪ್ರವೃತ್ತಿ ಬೆಳೆಸಿಕೊಳ್ಳುವ ಇವರಿಗೆ ಬುದ್ಧಿ ಕಲಿಸಲೇಬೇಕು. ಏನ್ ಮಾಡ್ಲಿ ಏನ್ ಮಾಡ್ಲಿ? ಮಕ್ಕಳನ್ನು ಅದಲು ಬದಲು ಮಾಡಿಬಿಟ್ಟರೆ?’ ತನ್ನ ಯೋಜನೆಗೆ ಬೆಚ್ಚಿಬಿದ್ದ ಡಾಕ್ಟ್ರ ಮುಖದಲ್ಲಿ ನಿಧಾನಕ್ಕೆ ಮಂದಹಾಸ ಮೂಡಿತು. ‘ಹೌದು ಅದೇ ಸರಿ. ಮುಸ್ಲಿಂ ಹಿಂದೂ ಮಗುವನ್ನೂ ಹಿಂದೂ ಮುಸ್ಲಿಂ ಮಗುವನ್ನೂ ಸಾಕಿ ಸಲಹಿ ಪ್ರೀತಿಸಬೇಕು’ ತನ್ನ ಆಲೋಚನೆಗೆ ಶಹಬ್ಬಾಸ್ ಹೇಳಿಕೊಂಡ. ಮರುಕ್ಷಣವೇ ನೈತಿಕತೆಯ ಪ್ರಶ್ನೆ ಎದುರಾಯಿತು. ಬದಲಿಸಲೋ ಬೇಡವೋ ಬದಲಿಸಲೋ ಬೇಡವೋ ಎಂದು ತುಯ್ದಾಡುತ್ತಲೇ ಕುಳಿತವನಿಗೆ ಹೆರಿಗೆ ರೂಮಿನಿಂದ ಬರುತ್ತಿದ್ದ ರಾಗದ ಸ್ವರ ಹೆಚ್ಚುತ್ತಿದ್ದಂತೆ ಕರ್ತವ್ಯಪ್ರಜ್ಞೆ ಜಾಗೃತವಾಗಿ ಹೊರಬಂದ. ಬದಲಿಸಲೋ ಬೇಡವೋ ಬದಲಿಸಲೋ ಬೇಡವೋ ........... ಹೆರಿಗೆಯಾಯಿತು.ಐದು ನಿಮಿಷದ ನಂತರ ತಾಯಂದಿರಿಗೆ ಮಕ್ಕಳನ್ನು ತೋರಿಸಿದಳು ನರ್ಸಮ್ಮ.
* * *
ತಮ್ಮ ಗುರುಗಳೆಡೆಗಿರುವ ಭಕ್ತಿಭಾವದಿಂದ ಅಬ್ಬಾಸ್ ಮತ್ತು ವೆಂಕಟ್ ಎಂದು ಮಕ್ಕಳಿಗೆ ಹೆಸರಿಟ್ಟರು. ಧರ್ಮಕ್ಕನುಸಾರವಾಗಿ ಶಾಸ್ತ್ರಗಳು ಕಾಲಕಾಲಕ್ಕೆ ನಡೆದವು. ಇಬ್ಬರಿಗೂ ಅಮ್ಮನಿಗಿಂತ ಅಪ್ಪನೇ ಅಚ್ಚುಮೆಚ್ಚು. ಸ್ಕೂಲಿಗೆ ಹೋಗುವ ವಯಸ್ಸಾದಾಗ ಆಗ ಖ್ಯಾತವಾಗಿದ್ದ ಶಾಲೆಗೇ ಸೇರಿದರು. ಅಪ್ಪಂದಿರಲ್ಲಿದ್ದ ದ್ವೇಷ ಆ ಸದ್ಯಕ್ಕೆ ಮಕ್ಕಳಲ್ಲಿರಲಿಲ್ಲ. ಗೆಳೆಯರಾಗಿದ್ದರು. ಜೊತೆಗೂಡಿ ಆಡುತ್ತಿದ್ದರು ತಿನ್ನುತ್ತಿದ್ದರು. ಮನೆಯವರು ಬರುವ ವೇಳೆಗೆ ದೂರವಿರುತ್ತಿದ್ದರು. ಹತ್ತು ವರುಷಗಳುರುಳಿತು. ಇನ್ನೊಂದು ಮಗುವಾಗಿದ್ದರೂ ಸುಲೇಮಾನ್ ಮತ್ತು ಭಾಸ್ಕರನಿಗೆ ಮೊದಲನೆಯವನ ಮೇಲೆ ಮಮತೆ ಹೆಚ್ಚು.
ಅಂದು ಬೆಳಿಗ್ಗೆ ಇಬ್ಬರಿಗೂ ಫೋನ್ ಕರೆ ಬಂದಿತ್ತು.
“ಹಲೋ”
“ಹಲೋ”
“ಇವತ್ತು ಸಂಜೆ ನಾಲ್ಕಕ್ಕೆ ಗುಡ್ಡದ ಹಿಂದಿನ ಕೆರೆ ಏರಿ ಮೇಲೆ ನೀವು ಬರಬೇಕು”
“ಯಾಕೆ?”
“ನಿಮಗೆ ಇಲ್ಲಿಯವರೆಗೆ ಗೊತ್ತಿಲ್ಲದ ಒಂದು ರಹಸ್ಯ ತಿಳಿಸಬೇಕಿದೆ”
“ನೀವ್ಯಾರು ಮಾತಾಡ್ತಿರೋದು?”
“ಅದೆಲ್ಲವೂ ಸಂಜೆ ಗೊತ್ತಾಗುತ್ತೆ ಬನ್ನಿ. ಅಂದ್ಹಾಗೆ ಒಬ್ಬರೇ ಬಂದರೆ ಒಳ್ಳೇದು” ಫೋನ್ ಕಟ್ಟಾಗಿತ್ತು.
ತಮ್ಮ ಕಡೆಯವರನ್ನು ಗುಡ್ಡದ ಬಳಿ ಕಾವಲು ಕಾಯುವಂತೆ ಹೇಳಿ ಸಂಜೆ ನಾಲ್ಕರ ಸಮಯಕ್ಕೆ ಇಬ್ಬರೂ ಕೆರೆಯ ಬಳಿಗೆ ಬಂದರು. ಶತ್ರುವನ್ನು ನೋಡಿ ಅಲರ್ಟ್ ಆದರು.
“ನೀನ್ಯಾಕೆ ನನಗೆ ಫೋನ್ ಮಾಡಿ ಕರೆಸಿದೆ”
“ನೀನ್ಯಾಕೆ ನನಗೆ ಫೋನ್ ಮಾಡಿ ಕರೆಸಿದೆ”
“ನನಗೇನ್ ತಿಕ್ಲಾ”
“ನನಗೇನ್ ತಿಕ್ಲಾ”
“ಏನ್ ಮಸ್ಲತ್ತು ನಡಿಸಿದ್ದೀಯಾ?”
“ಏನ್ ಮಸ್ಲತ್ತು ನಡಿಸಿದ್ದೀಯಾ?”
ಭಾಸ್ಕರನ ಫೋನ್ ರಿಂಗಣಿಸಿತು.
“ಹಲೋ”
“ಹಲೋ ಭಾಸ್ಕರ್. ಸ್ವಲ್ಪ ನಿಮ್ಮ ಫೋನಿನ ಲೌಡ್ ಸ್ಪೀಕರ್ ಆನ್ ಮಾಡಿ”
“ಹಲೋ ಸುಲೇಮಾನ್. ನನ್ನ ದನಿ ಕೇಳ್ತಿದೆಯಲ್ಲ”
“ಕೇಳ್ತಿದೆ”
“ನಮಸ್ತೆ ನಾನೇ ಕರೆಸಿದ್ದು ನಿಮ್ಮನ್ನು. ನಾನ್ಯಾರು ಅಂತ ಗೊತ್ತಾಯ್ತ?”
“ಇಲ್ಲ”
“ನಾನು ಡಾಕ್ಟ್ರು”
“ಯಾವ ಡಾಕ್ಟ್ರು?”
“ನಿಮ್ಮ ಹೆಂಡತಿಯರ ಹೆರಿಗೆ ಮಾಡಿಸಿದ್ದೆ. ಅದಕ್ಕೂ ಮುಂಚೆ ನನ್ನ ಹೆಂಡತಿಯನ್ನು ‘ಧರ್ಮರಕ್ಷಕರು’ ಸಾಯಿಸಿದ್ದರು”
“ಗೊತ್ತಾಯ್ತು ಗೊತ್ತಾಯ್ತು. ಇಲ್ಲಿಗ್ಯಾಕೆ ಕರೆಸಿದ್ದು”
“ನಿಮ್ಮಿಬ್ಬರಿಗೂ ಒಂದು ಸತ್ಯ ತಿಳಿಸಬೇಕಿತ್ತು”
“ಏನು ಸತ್ಯ?”
“ನಿಮ್ಮ ಪತ್ನಿಯರು ಮೊದಲ ಹೆರಿಗೆಗೆ ನನ್ನ ಆಸ್ಪತ್ರೆಗೇ ಬಂದಿದ್ದರು. ಆಗ ನೀವೋ ಅಥವಾ ನಿಮ್ಮ ತಂಡದವರೋ ನನ್ನ ಪತ್ನಿ, ಆಗಷ್ಟೇ ಎರಡು ತಿಂಗಳ ಗರ್ಭಿಣಿಯಾಗಿದ್ದ ಪತ್ನಿಯನ್ನು ಸಾಯಿಸಿದ್ದೆಲ್ಲಾ ನೆನಪಿಗೆ ಬಂತು. ನನಗೆ ತೊಂದರೆ ಕೊಟ್ಟವರ ಹೆಂಡತಿ ಮತ್ತು ಗರ್ಭದಲ್ಲಿರುವ ಮಗುವನ್ನು ಸಾಯಿಸಿಬಿಡಲಾ? ಎಂಬ ಕೆಟ್ಟ ಯೋಚನೆಯೂ ಬಂತು. ನಾನು ನೀವಲ್ಲ ನೋಡಿ! ಅದಕ್ಕೆ ಸಾಯಿಸಲಾಗಲಿಲ್ಲ. ಆದರೆ..”
“ಆದ್ರೆ?”
“ಧರ್ಮದ ಅಮಲೇರಿಸಿಕೊಂಡಿರುವ ನಿಮ್ಮನ್ನು ಸುಮ್ಮನೇ ಬಿಡಲೂ ಮನಸ್ಸಾಗಲಿಲ್ಲ. ಅದಿಕ್ಕೆ..”
“ಅದಿಕ್ಕೆ?”
“ನಿಮಗೆ ನೆನಪಿದ್ಯೋ ಇಲ್ವೋ ನಿಮ್ಮಿಬ್ಬರ ಮೊದಲ ಮಗು ಒಂದೇ ದಿನ ಹೆಚ್ಚುಕಡಿಮೆ ಒಂದೇ ಸಮಯಕ್ಕೆ ಹುಟ್ಟಿದ್ದು”
“ಇರಬಹುದು”
“ಆ ದಿನ ನಾನು ಮಕ್ಕಳನ್ನು ಅದಲು ಬದಲು ಮಾಡಿಬಿಟ್ಟೆ”
“ಡಾಕ್ಟ್ರೇ......”
“ಹ್ಹ ಹ್ಹ ಹ್ಹ. . . ಕಿರುಚಿ ಉಪಯೋಗವಿಲ್ಲ ಕಣ್ರೀ! ಹೇಗಿದೆ ಈ ಡಾಕ್ಟ್ರ ಕೈಚಳಕ. ಹಿಂದೂ ಮನೆಯಲ್ಲಿ ಮುಸ್ಲಿಂ ಹಿಂದೂವಾಗಿ ಬೆಳೆದ. ಮುಸ್ಲಿಂ ಮನೆಯಲ್ಲಿ ಹಿಂದೂ ಮುಸ್ಲಿಮನಾಗಿ ಬೆಳೆದ. ಹ್ಹ ಹ್ಹ ಹ್ಹ”
“ಸುಳ್ಳಾಡಬೇಡಿ ಡಾಕ್ಟ್ರೇ”
“ಸುಳ್ಳಾ! ನಾನ್ಯಾಕೆ ಸುಳ್ಳಾಡಲಿ? ಅನುಮಾನವಿದ್ರೆ ಡಿ.ಎನ್.ಎ ಪರೀಕ್ಷೆ ಮಾಡಿಸಿಕೊಳ್ಳಿ” ಫೋನ್ ಕಟ್ ಮಾಡಿಬಿಟ್ಟ. ಅದೇ ನಂಬರಿಗೆ ತಿರುಗಿ ಕರೆ ಮಾಡಿದರು. ಸ್ವಿಚ್ ಆಫ್ ಆಗಿತ್ತು. ಕ್ರೋದದಿಂದ. ಕುದ್ದುಹೋಗಿ ಇಬ್ಬರೂ ನರ್ಸಿಂಗ್ ಹೋಮಿನೆಡೆಗೆ ಧಾವಿಸಿದರು. ಬೋರ್ಡಿಳಿಸುತ್ತಿದ್ದರು. ಡಾಕ್ಟರು ಊರು ತೊರೆದು ಹೋಗಿದ್ದರು. ಎಲ್ಲೆಗೆಂಬುದು ಯಾರಿಗೂ ತಿಳಿದಿರಲಿಲ್ಲ.
‘ನನ್ನ ಮನೆಯಲ್ಲಿ ಅವನ ಮಗ. ಆ ಧರ್ಮದವನ ಮಗ ನನ್ನ ಮನೆಯಲ್ಲಿ. ಏನ್ ಮಾಡೋದು, ಏನ್ ಮಾಡೋದೀಗ? ಆ ದರಿದ್ರ ಡಾಕ್ಟ್ರು ಮಾಡಿರೋ ಹಲ್ಕಟ್ ಕೆಲಸದಿಂದ ನನ್ನ ಧರ್ಮದ ಮಾನ ಮರ್ಯಾದೆಯಲ್ಲಾ ಹಾಳಾಗಿ ಹೋಯ್ತು. ಅವನ ಮಗನನ್ನು ಸಾಯಿಸುವುದಷ್ಟೇ ಇದಕ್ಕೆ ಪರಿಹಾರ. ಹೌದು ಅದೊಂದೇ ಪರಿಹಾರ. ಆ ಧರ್ಮದವನನ್ಯಾಕೆ ನಾನು ಸಾಕಬೇಕು’ ಮನೆ ಸಿಕ್ಕಿತು. ಕೋಪದಿಂದ ಬಾಗಿಲನ್ನು ದೂಡಿ ಒಳನಡೆದರು.
“ಅಪ್ಪಾ ಅಪ್ಪ ನೀನಿಲ್ಲಾಂತ ಅಮ್ಮ ನನಗೆ ಹೊಡೆದುಬಿಟ್ಟಳು”
“ಪಪ್ಪಾ ಪಪ್ಪ ನೀನಿಲ್ಲಾಂತ ಅಮ್ಮ ನನಗೆ ಹೊಡೆದುಬಿಟ್ಟಳು”
ಓಡಿಬಂದು ಅಪ್ಪನನ್ನು ತಬ್ಬಿಕೊಂಡರು.
ಬಿಗಿದಿದ್ದ ಮುಷ್ಟಿ ದಶಕಗಳಿಂದ ಮುಷ್ಟಿಯಂತೆ ಬಿಗಿಯಾಗಿದ್ದ ಮನಸ್ಸು ತೆರೆದುಕೊಳ್ಳಲಾರಂಭಿಸಿತು.
No comments:
Post a Comment