ಕು. ಸ. ಮಧುಸೂದನ್
ಸಮುದ್ರದ ಮೊರೆತ ಕೇಳುವಷ್ಟು ಹತ್ತಿರವಿದ್ದ, ಬಡವರೇ ಹೆಚ್ಚಾಗಿದ್ದ ಊರು ನನ್ನದು. ಹತ್ತಿರದ ಹೆಂಚಿನ ಫ್ಯಾಕ್ಟರಿಗೆ ಹೋಗುವ ಅಪ್ಪ, ಮನೆಯಲ್ಲಿ ಬೀಡಿ ಕಟ್ಟುವ ಅಮ್ಮ, ವಯಸ್ಸಿನಲ್ಲಿ ನನಗಿಂತಲೂ ಹತ್ತು ವರ್ಷಗಳಷ್ಟು ಚಿಕ್ಕವರಾದ ತಮ್ಮ ತಂಗಿಯರು ಮತ್ತು ನಾನು, ಇಷ್ಟೇ ಜನರಿದ್ದ ಚೊಕ್ಕ ಸಂಸಾರ ನಮ್ಮದು.
ಏಳನೇ ತರಗತಿಯವರೆಗೆ ಮಾತ್ರವಿದ್ದ ನಮ್ಮ ಊರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ ನಾನು ಹೈಸ್ಕೂಲಿಗಾಗಿ ಮೂರು ಕಿ.ಮೀ. ದೂರದ ಪೇಟೆಗೆ ಹೋಗಬೇಕಾಗಿ ಬಂತು. ಬಹುಶಃ ನನ್ನ ಬದುಕು ಮತ್ತೊಂದು ತಿರುವಿಗೆ ಎದುರಾದದ್ದೇ ಅಲ್ಲಿಂದ. ಏಳನೇ ತರಗತಿಗಾಗಲೇ ನೋಡುವವರ ಕಣ್ಣುಕುಕ್ಕುವಷ್ಟು ಬೆಳೆದಿದ್ದ ನಾನು, ಸುಂದರಿಯಾಗಿದ್ದೆ. ಮೊದಲಿನಿಂದಲೂ ಹಾಡು ಮತ್ತು ನೃತ್ಯದಲ್ಲಿ ಹೆಚ್ಚು ಆಸಕ್ತಿಯಿದ್ದ ನಾನು ಶಾಲೆಯ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದೆ. ನನ್ನ ಸೌಂದರ್ಯ, ಪ್ರತಿಭೆ ಹಾಗೂ ನನ್ನ ಟೀಚರ್ಸ್ ನೀಡಿದ ಬೆಂಬಲದಿಂದ ಫೇಮಸ್ ಆಗಿಬಿಟ್ಟಿದ್ದೆ. ಹತ್ತನೇ ತರಗತಿಗೆ ಬರುವಷ್ಟರಲ್ಲಿ ನಾನೊಬ್ಬಳು ಸಿನೆಮಾ ತಾರೆಯಾಗಬೇಕೆಂಬ ಕನಸು ಶುರುವಾಗಿತ್ತು. ಅದ್ಯಾಕೆ ಆ ಆಸೆ ಚಿಗುರೊಡೆಯಿತೋ ಗೊತ್ತಿಲ್ಲ. ಈ ಕನಸಿನ ಗುಂಗಲ್ಲೇ 10ನೇ ತರಗತಿಯನ್ನು ಸೆಕೆಂಡ್ ಕ್ಲಾಸಿನಲ್ಲಿ ಪಾಸು ಮಾಡಿ, ಮನೆಯಲ್ಲಿ ಕಷ್ಟವಿದ್ದರೂ, ಅದೇ ಪೇಟೆಯ ಜೂನಿಯರ್ ಕಾಲೇಜಿಗೆ ಸೇರಿದೆ.
ಮೊದಲನೇ ವರ್ಷದ ಪಿ.ಯು.ಸಿ. ಓದುವಾಗ ಡಿಸೆಂಬರಿನಲ್ಲಿ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಾವುದೋ ಸಿನೆಮಾ ಹಾಡಿಗೆ ನನ್ನದೊಂದು ಡ್ಯಾನ್ಸ್ ಇತ್ತು. ಆ ಕಾರ್ಯಕ್ರಮದ ಫೋಟೋ ತೆಗೆಯಲು ಹತ್ತಿರದ ಸ್ಟುಡಿಯೋದ ಹುಡುಗನೊಬ್ಬ ಬಂದಿದ್ದ. ಡ್ಯಾನ್ಸ್ ಮುಗಿದ ನಂತರ ಅವನನ್ನು ಭೇಟಿ ಮಾಡಿ, ಫೋಟೋಗಳನ್ನು ಯಾವಾಗ ಕೊಡ್ತೀರಿ ಎಂದೆ. ಆಗ ರೀಲು ಹಾಕಿ ತೆಗೆದ ಫೋಟೋಗಳನ್ನು ತೊಳೆದು ಪ್ರಿಂಟ್ ಹಾಕಬೇಕಾದ್ದರಿಂದ, ಎರಡು ದಿನ ಬಿಟ್ಟು ಸ್ಟುಡಿಯೋ ಬಳಿ ಬನ್ನಿ ಕೊಡುತ್ತೇನೆ ಎಂದ. ಐದು ರೂಪಾಯಿ ಕೊಟ್ಟು ಒಂದು ಕಾಪಿ ತೆಗೆದುಕೊಳ್ಳುವುದಷ್ಟೇ ನನ್ನ ಉದ್ದೇಶವಾಗಿತ್ತು.
ನನ್ನ ಜೀವನದಲ್ಲಿ ನಾನು ಮೊದಲು ಮಾಡಿದ ತಪ್ಪು ಫೋಟೋಗ್ರಾಫರನ ಮಾತು ಕೇಳಿ ಅವನ ಸ್ಟುಡಿಯೋ ಬಳಿ ಹೋಗಿದ್ದು. ನಗುನಗುತ್ತಾ ಬರಮಾಡಿಕೊಂಡ ಅವನು ನನ್ನ ಮುಂದೆ ನನ್ನದೊಂದು ಫೋಟೋ ಹಿಡಿದ. ಸೈಡಿನಿಂದ ತೆಗೆದ್ದರಿಂದ ಮುಖ ಸರಿಯಾಗಿ ಕಾಣದ ಕಾರಣ ನನಗೆ ಬೇಜಾರಾಯಿತು. ಸರಿಯಾಗಿ ಮುಖ ಕಾಣ್ತಿಲ್ಲ ಎಂದಾಗ ನಿಮ್ಮ ಡ್ಯಾನ್ಸ್ ಅಷ್ಟು ಫಾಸ್ಟ್ರಿ, ಫೋಟೋ ತೆಗೆಯೋದೆ ಕಷ್ಟವಾಯ್ತು ಎಂದ. ನನಗೆ ಈ ಫೋಟೋ ಬೇಡ ಎಂದು ಹೊರಡಲನುವಾದೆ. ಅಷ್ಟರಲ್ಲವನು ತಡೀರಿ ಅನ್ನುತ್ತಾ ಒಂದು ಸಣ್ಣ ಕವರನ್ನು ಕೈಗೆ ಕೊಟ್ಟ. ಏನು ಎನ್ನುತ್ತಲೇ ಅದನ್ನು ತೆರೆದರೆ ನನ್ನದೇ ವಿವಿಧ ಭಂಗಿಯ, ಒಂದಕ್ಕಿಂತ ಒಂದು ಸುಂದರವಾದ ಫೋಟೋಗಳು. ಶಾಲೆಯವರು ಹೇಳಿದ್ದಕ್ಕಿಂತ ಜಾಸ್ತಿ ಫೋಟೋ ತೆಗೆದೆ, ನೀವು ತುಂಬಾ ಸುಂದರವಾಗಿದೀರಿ ಡ್ಯಾನ್ಸೂ ತುಂಬಾ ಚನ್ನಾಗಿ ಮಾಡ್ತೀರಿ. ಬೇಸರವಾಗಿದ್ರೆ ಸ್ಸಾರಿ ಎಂದ. ಇಷ್ಟು ಚಂದದ ಫೋಟೋ ತೆಗೆದವನ ಮೇಲೆ ಬೇಸರವೇಕೆ ಎಂದು ಪರವಾಗಿಲ್ಲ ಎಂದೆ. ಫೋಟೋ ಕೊಳ್ಳಲು ದುಡ್ಡಿಲ್ಲ ಎಂದಾಗ ನನ್ನ ಗಿಫ್ಟ್ ಅಂತ ತೆಗೊಳಿ ಪ್ಲೀಸ್ ಎಂದ. ಸಂತೋಷದಿಂದ ಫೋಟೋ ತೆಗೆದುಕೊಂಡು ಮನೆಗೆ ಬಂದವಳು ಮನೆಯವರಿಗೆ ಗೊತ್ತಿಲ್ಲದಂತೆ, ಆಗಾಗ ನೋಡಿ ಖುಷಿ ಪಡುತ್ತಿದ್ದೆ.
ಆ ನಂತರ ಒಂದು ದಿನ ಕಾಲೇಜಿನ ದಾರಿಯಲ್ಲಿ ಸಿಕ್ಕವನು “ಏನ್ರಿ, ಸ್ಟುಡಿಯೋ ಕಡೆ ಬರಲೇ ಇಲ್ಲ” ಎಂದಾಗ ಬಾಯಿ ತಪ್ಪಿ ನಾಳೆ ಮಧ್ಯಾಹ್ನ ಬರುತ್ತೇನೆ ಎಂದೆ. ಹಾಗಾದರೆ ಮಧ್ಯಾಹ್ನ ನಿಮಗಾಗಿ ಕಾಯ್ತಾ ಇರ್ತೀನಿ ಎಂದು ಹೊರಟುಬಿಟ್ಟ. ಮರುದಿನ ಮಧ್ಯಾಹ್ನ ಸ್ಟುಡಿಯೋ ಬಳಿ ಹೋದಾಗ ಅದು ಇದು ಮಾತನಾಡುತ್ತಾ, ನೀವ್ಯಾಕೆ ಸಿನೆಮಾದಲ್ಲಿ ಆಕ್ಟ್ ಮಾಡಬಾರದು? ಎಂದು ನನ್ನ ಮನಸ್ಸಿನಲ್ಲಿ ಇದ್ದದ್ದನ್ನೇ ಕೇಳಿದಾಗ ಅವನ ಮೇಲೆ ಅಭಿಮಾನವೆನಿಸಿತು. ಮಾಡಬಹುದು ಅವಕಾಶ ಸಿಗಬೇಕಲ್ಲ, ನಾನೂ ಆಕ್ಟರ್ ಆಗಬಹುದಾ? ಎಂದು ಅನುಮಾನಿಸಿದಾಗ, ಎಂತೆಂತವರೋ ಮಾಡುವಾಗ ನೀವು ಮಾಡಬಾರದ, ನೀವು ವಿವಿಧ ಡ್ರೆಸ್ ಹಾಕಿರೋ ಫೋಟೋಗಳನ್ನು ತೆಗೆದು ನಿರ್ಮಾಪಕರಿಗೆ ನೀಡಿದರೆ ಅವರಿಗಿಷ್ಟವಾದರೆ ನಿಮಗೆ ಅವಕಾಶ ಸಿಗುತ್ತೆ, ಎಂದ. ಹಾಗೆ ಫೋಟೋ ತೆಗೆಸಲು ನನ್ನ ಬಳಿ ಬೇರೆ ಬೇರೆ ಬಟ್ಟೆಯಾಗಲೀ, ದುಡ್ಡಾಗಲೀ ಇಲ್ಲ, ಎಂದೆ. ಒಂದು ನಿಮಿಷ ಸುಮ್ಮನಾದವನು, ಬಟ್ಟೆನಾ ನಾನೇ ಅರೆಂಜ್ ಮಾಡಿ, ಫೋಟೋನ ಫ್ರೀಯಾಗಿ ತೆಗೆದುಕೊಡ್ತೇನೆ, ನಟಿಯಾದ ಮೇಲೆ ಹಣ ವಾಪಸ್ಸು ಕೊಡುವಿರಂತೆ ಎಂದ.
ಹದಿನಾರು ತುಂಬಿ ಹದಿನೇಳಕ್ಕೆ ಕಾಲಿಟ್ಟು ಸುಂದರಿಯೆಂದು ಬೀಗುತ್ತಿದ್ದ ಹುಡುಗಿಯೊಬ್ಬಳ ಮನಸ್ಸನ್ನು ಊಹೆ ಮಾಡಿಕೊಳ್ಳಿ, ಆ ಕ್ಷಣದಲ್ಲಿ ನಾನು ಹೇಗೆ ಪ್ರತಿಕ್ರಿಯಿಸಿರಬಹುದು. ಯಾವುದರ ಬಗ್ಗೆಯೂ ಯೋಚಿಸುವ ಸಹನೆಯಿಲ್ಲದ ನಾನು ಆ ಕೂಡಲೇ ಸರಿಯೆಂದು ಬಿಟ್ಟೆ. ಸರಿ ರಜಾ ದಿನ ಗಿರಾಕಿಗಳ ಕಾಟ ಇರುವುದಿಲ್ಲವಾದ್ದರಿಂದ ಒಂದು ಭಾನುವಾರ ಫೋಟೋ ತೆಗೆಯುವುದೆಂದು ನಿಶ್ಚಯವಾಯ್ತು.
ನಂತರ ಒಂದು ಭಾನುವಾರ ಕಾಲೇಜಿನಲ್ಲಿ ಕಾರ್ಯಕ್ರಮ ಇದೆ ಅಂತ ಮನೆಯವರಿಗೆ ಸುಳ್ಳು ಹೇಳಿ ಸ್ಟುಡಿಯೋಗೆ ಬಂದೆ. ನನ್ನ ಮುಂದೆ ಸುರಿದ ರಾಶಿ ಬಟ್ಟೆಯಲ್ಲಿ ಯಾವುದನ್ನು ಮೊದಲು ಹಾಕೋದು ಎಂದು ತಬ್ಬಿಬ್ಬಾದಾಗ, ನಾನು ಒಂದೊಂದೇ ಕೊಡುತ್ತೇನೆ ಹಾಕಿಕೊಂಡು ಬನ್ನಿ ಎಂದ. ಡ್ರೆಸ್ ಬದಲಾಯಿಸಲು ಬೇರೆ ರೂಮಿಲ್ಲದ್ದರಿಂದ, ವಿಧಿಯಿಲ್ಲದೆ ಅಲ್ಲೇ ಇದ್ದ ಮರದ ಹಲಗೆಯ ಹಿಂದೆ ಬದಲಾಯಿಸಿಕೊಂಡು ಬಂದೆ. ನಂತರ ಫೋಟೋ ತೆಗೆಯುತ್ತಾ ಹೋದ. ಬಹುತೇಕ ಎಲ್ಲಾ ಬಟ್ಟೆಗಳನ್ನು ಹಾಕಿಕೊಂಡು ಫೋಟೋ ತೆಗೆಸಿಕೊಂಡೆ. ಎರಡು ದಿನಗಳಲ್ಲಿ ನನ್ನ ಫೋಟೋಗಳನ್ನು ನೋಡುವ ಸಂತೋಷದೊಂದಿಗೆ ಸಂಜೆಯಾಗುವಷ್ಟರಲ್ಲಿ ಮನೆಗೆ ವಾಪಸ್ಸು ಬಂದೆ.
ಎರಡು ದಿನಗಳ ನಂತರ ಹೋಗಿ ಫೋಟೋಗಳನ್ನು ನೋಡಿದಾಗ ನನಗೆ ಆಕಾಶವೇ ಕೈಗೆ ಸಿಕ್ಕಂತಾಗಿತ್ತು. ಅಷ್ಟು ಸುಂದರವಾಗಿದ್ದೆ. ಇವನ್ನೆಲ್ಲಾ ಇವತ್ತೇ ನಿರ್ಮಾಪಕರಿಗೆ ಕಳುಹಿಸುತ್ತೇನೆ ಎಂದು ಹೇಳಿದವನಿಗೆ ಸರಿಯೆಂದು ಹೇಳಿ ಬಂದೆ. ಆಮೇಲೆ ದಿನವೂ ಕಾಲೇಜಿನ ಬಳಿ ಸಿಗುತ್ತಿದ್ದ ಅವನು ಸಿನೆಮಾ ಬಗ್ಗೆ ಚಕಾರವೆತ್ತದೆ, ಕೇವಲ ಯೋಗಕ್ಷೇಮ ವಿಚಾರಿಸುತ್ತಿದ್ದ. ಎರಡು ತಿಂಗಳ ಬಳಿಕ ತಡೆಯಲಾರದೆ ನಾನೇ ಸಿನೆಮಾ ಕಥೆ ಏನಾಯಿತು ಎಂದಾಗ, ನಿರ್ಮಾಪಕರಿಗೆ ಬೇರೆ ತರದ ಫೋಟೋಗಳು ಬೇಕಂತೆ, ತೆಗೆಯಬೇಕು ಭಾನುವಾರ ಸ್ಟುಡಿಯೋ ಹತ್ತಿರ ಬನ್ನಿ ಎಂದ.
ಸರಿ ಮುಂದಿನ ಭಾನುವಾರ ಸ್ಟುಡಿಯೋಗೆ ಹೋದೆ. ಒಳಗೆ ಕುಳಿತವಳಿಗೆ, ಪತ್ರಿಕೆಯಲ್ಲಿನ ಕೆಲವೊಂದು ಫೋಟೋ ತೋರಿಸಿ, ಇಂತಹ ಫೋಟೋಗಳನ್ನು ಕಳಿಸಬೇಕಂತೆ, ನಿಮಗೆ ಸಂಕೋಚವಾದರೆ ಬೇಡ ಎಂದ, ನಾನು ಹಿಂದೆಮುಂದೆ ಯೋಚಿಸದೆ ಒಪ್ಪಿದೆ. ಮೊದಲೇ ಗೊತ್ತಿತ್ತೇನೋ ಅನ್ನುವ ಹಾಗೆ ಕೆಲವು ಬಟ್ಟೆಗಳನ್ನು ಕೊಟ್ಟ.. ಅವು ಎಷ್ಟು ಚಿಕ್ಕವೆಂದರೆ ಹಾಕಿಕೊಂಡು ಅವನ ಮುಂದೆ ನಿಲ್ಲಲು ಮುಜುಗರವಾಯ್ತು.. ಆದರೆ ಸಿನೆಮಾ ಕನಸು ನಿಲ್ಲುವಂತೆ ಮಾಡಿತು. ಅವನು ನನ್ನ ಎದೆ ತೊಡೆಗಳು ಎದ್ದು ಕಾಣುವಂತೆ ಫೋಟೋ ತೆಗೆಯುತ್ತಾ ಹೋದ. ನಾನು ಸಹಕರಿಸುತ್ತಾ ಹೋದೆ. ಸಂಜೆಯಷ್ಟರಲ್ಲಿ, ಕೂದಲು, ಬಟ್ಟೆ ಸರಿ ಮಾಡುವ ನೆಪದಲ್ಲಿ, ನನ್ನಿಡೀ ಮೈಯನ್ನು ಮುಟ್ಟಿದ್ದ.
ಸಿನೆಮಾದೊಂದಿಗೆ ಅವನನ್ನೂ ಬಿಟ್ಟಿರಲಾರದಷ್ಟು ತುಂಬಾ ಹಚ್ಚಿಕೊಂಡಿದ್ದೆ ಅನ್ನಿಸುತ್ತೆ. ಆಮೇಲಾಮೇಲೆ ಸಿನೆಮಾ ಬಗ್ಗೆ ಕೇಳುವ ನೆಪದಲ್ಲಿ ಸ್ಟುಡಿಯೋಗೆ ಹೆಚ್ಚು ಹೋಗಲು ಶುರು ಮಾಡಿದೆ. ಹೀಗೆ ಮೂರು ತಿಂಗಳು ಕಳೆದ ನಂತರ ಒಂದು ದಿನ ಯಾರೋ ನಿರ್ಮಾಪಕರು ಬೆಂಗಳೂರಿಗೆ ಬರುವಂತೆ ಹೇಳಿದ್ದಾರೆ, ಯಾವಾಗ ಹೋಗೋಣ ಎಂದು ಕೇಳಿದ. ಮನೆಯವರು ಒಪ್ಪುವುದಿಲ್ಲವೆಂದು ಗೊತ್ತಿದ್ದರೂ, ಸಿನೆಮಾದ ಹುಚ್ಚು ಅವರಿಗೆ ತಿಳಿಸದೆ ಹೋಗುವ ಧೈರ್ಯ ತಂದಿತ್ತು. ನೀನು ಯಾವಾಗೆಂದರೆ ಆವಾಗ ಎಂದು ಒಪ್ಪಿಗೆ ಕೊಟ್ಟೆ.
ಅದಾದ ನಂತರ, ಒಂದು ದಿನ ಕಾಲೇಜಿಗೆಂದು ಬಂದವಳು, ಅವನ ಜೊತೆ ಬೆಂಗಳೂರಿನ ಬಸ್ಸು ಹತ್ತಿದೆ. ಬೆಂಗಳೂರಿನ ಅವನ ಗೆಳೆಯನೊಬ್ಬನ ಮನೆಯಲ್ಲಿ ಉಳಿದುಕೊಂಡೆವು. ದಿನ ಹೊರಗೆ ಹೋಗುತ್ತಿದ್ದವನು, ನಿರ್ಮಾಪಕರು ಸಿಕ್ಕಿಲ್ಲ, ನಾಳೆನಾಡಿದ್ದು ಅಂತ ವಾರ ಕಳೆದುಬಿಟ್ಟ. ಈ ನಡುವೆ ಅವನ ದೇಹದ ಹಸಿವಿಗೆ ಬಲಿಯಾಗಿ ಬಿಟ್ಟಿದ್ದೆ. ಒಂದು ರಾತ್ರಿ ತಡವಾಗಿ ಬಂದವನು ಇಲ್ಲಿ ಯಾಕೋ ಸರಿಯಾಗ್ತಿಲ್ಲ, ಬಾಂಬೆಗೆ ಹೋಗೋಣ, ಅಲ್ಲಿ ಅವಕಾಶ ಸಿಗುತ್ತೆ ಎಂದು ಬಾಂಬೆಗೆ ಕರೆದುಕೊಂಡು ಬಂದ.
ಬಾಂಬೆಗೆ ಬಂದವನೇ ಒಂದು ಡಾನ್ಸ್ ಬಾರಿಗೆ ಕರೆದೊಯ್ದು, ಅಲ್ಲಿನ ಮ್ಯಾನೇಜರಿಗೆ ಪರಿಚಯಿಸಿದ. ಮ್ಯಾನೇಜರ್ ಹೇಗೂ ನಿನಗೆ ಡ್ಯಾನ್ಸ್ ಬರುತ್ತಲ್ಲ. ನಮ್ಮ ಹೋಟೆಲಿನಲ್ಲಿ ಡ್ಯಾನ್ಸ್ ಮಾಡು, ಇಲ್ಲಿ ಬರುವ ನಟರು ನಿರ್ಮಾಪಕರ ಕಣ್ಣಿಗೆ ಬಿದ್ದರೆ ಅದೃಷ್ಟ ಖುಲಾಯಿಸುತ್ತೆ. ಎಂದು ಹೇಳಿದಾಗ ನಾನು ಒಪ್ಕೊಂಡೆ.
ಅಲ್ಲಿಂದ ಶುರುವಾಯ್ತು ನನ್ನ ಜೀವನದ ಮತ್ತೊಂದು ಮಜಲು. ಡ್ಯಾನ್ಸ್ ಬಾರಿನವರು ನನ್ನಂಥ ಹೆಣ್ಣುಮಕ್ಕಳಿಗಾಗಿಯೇ ಒಂದು ಮನೆ ಮಾಡಿದ್ದರು. ಅಲ್ಲಿ ಹನ್ನೆರಡು ಹುಡುಗಿಯರಿದ್ದೆವು. ಅವರದೇ ಗಾಡಿಯಲ್ಲಿ ಸಂಜೆ ಏಳು ಗಂಟೆಗೆ ಬಾರಿಗೆ ಬಂದು ಸರದಿಯಂತೆ ಡ್ಯಾನ್ಸ್ ಮಾಡಿ, ರಾತ್ರಿ ಹನ್ನೊಂದಕ್ಕೆ ವಾಪಾಸ್ಸಾಗಬೇಕಿತ್ತು. ದಿನಕ್ಕಿಷ್ಟು ಸಂಬಳವೆಂದು ನಿಗಧಿಯಾಗಿತ್ತು. ಖುಶಿಪಟ್ಟು ಗಿರಾಕಿಗಳು ನಮ್ಮ ಮೇಲೆ ಎಸೆಯುತ್ತಿದ್ದ, ಹಣದಲ್ಲಿ ಮುಕ್ಕಾಲು ಪಾಲು ಮೇನೇಜರಿನ ಬೊಕ್ಕಸ ಸೇರುತ್ತಿತ್ತು. ನನ್ನನ್ನು ಇಲ್ಲಿ ಬಂದು ಸೇರಿಸಿದವನು ಮತ್ತೆ ಬರದೇ ಹೋದಾಗಲೇ ತಿಳಿದಿದ್ದು, ಅವನು ನನ್ನನ್ನು ಇಪ್ಪತ್ತು ಸಾವಿರಕ್ಕೆ ಮಾರಿದ್ದಾನೆ ಎಂದು. ಮೊದಮೊದಲು ಕುಡಿದು ಕುಪ್ಪಳಿಸುತ್ತಿದ್ದ, ಜನರ ಮುಂದೆ ಡ್ಯಾನ್ಸ್ ಮಾಡಲು ಮುಜುಗರಪಡುತ್ತಿದ್ದವಳು, ಇಂದಲ್ಲ ನಾಳೆ ಸಿನೆಮಾ ಅವಕಾಶ ಸಿಗುತ್ತೆ ಅನ್ನೋ ನಂಬಿಕೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದೆ. ಹೀಗೆ ಕಾಲ ಉರುಳುತ್ತಿತ್ತು. ನಾನಲ್ಲಿ ಸೇರಿಕೊಂಡ ನಾಲ್ಕು ತಿಂಗಳ ನಂತರ, ಮ್ಯಾನೇಜರ್, ನನ್ನ ಕರೆದು, ಯಾರೋ ಒಬ್ಬರು ಶ್ರೀಮಂತರು ನಿನ್ನ ಡ್ಯಾನ್ಸ್ ಒಬ್ಬರೇ ನೋಡಬೇಕಂತೆ ಹೋಗಿ ಬಾ ಕೈ ತುಂಬಾ ದುಡ್ಡುಕೊಡುತ್ತಾರೆ ಎಂದ. ಒಬ್ಬರೇ ನೋಡುವ ಉದ್ದೇಶದ ಅರಿವಿದ್ದರೂ ಅಸಹಾಯಕತೆ ಆ ಶ್ರೀಮಂತನೊಡನೆ ಹೋಗುವಂತೆ ಮಾಡಿತ್ತು. ಆ ವ್ಯಕ್ತಿ ಯಾವುದೋ ಫಾರಂ ಹೌಸಿಗೆ ಕರೆದುಕೊಂಡು ಹೋಗಿ ಸಂಜೆಯವರೆಗೂ ಕುಡಿಯುತ್ತಾ ನನ್ನನ್ನು ಅನುಭವಿಸಿದವನು, ವಾಪಾಸ್ಸು ಬಿಡುವಾಗ ಕೈತುಂಬಾ ದುಡ್ಡು ಕೊಟ್ಟು ಹೋದ. ಸದ್ಯ ಆ ಹಣದಲ್ಲಿ ಮ್ಯಾನೇಜರನಿಗೆ ಪಾಲಿರಲಿಲ್ಲ. ಆಮೇಲೆ ಪ್ರತಿವಾರಕ್ಕೆ ಎರಡೋ ಮೂರೋ ಬಾರಿ, ಹೀಗೆ ಹೋಗಿ ಬರುವುದು ಒಂದು ರೀತಿ ಪಿಕ್ನಿಕ್ ಆಗಿಬಿಟ್ಟಿತ್ತು.
ಹೀಗೆ ಒಂದು ವರ್ಷ ಕಳೆದು ಹೋಯಿತು. ನನ್ನನ್ನು ನಟಿಯಾಗಿ ಮಾಡಲು ಯಾವ ನಿರ್ಮಾಪಕ-ನಟನೂ ಬರಲಿಲ್ಲ. ಎಟುಕದ ಕನಸಿಗೆ ಏರಲು ನೀಡುವ ಸುಳ್ಳಿನ ಏಣಿ ಅದು ಎಂದು ಗೊತ್ತಾಯಿತು.
ದುರಂತ ನೋಡಿ ಒಂದು ದಿನ ಮ್ಯಾನೇಜರ್ ಬಂದು ನೀವೆಲ್ಲಾ ಬಂದು ಒಂದು ವರ್ಷವಾಯ್ತು. ಈಗ ಗಿರಾಕಿಗಳು ಹೊಸಮುಖಗಳನ್ನು ಕೇಳ್ತಾ ಇದಾರೆ. ಆದ್ದರಿಂದ ನಿಮ್ಮನ್ನೆಲ್ಲಾ, ನಮ್ಮ ಬೇರೆ ಬಾರಿಗೆ ಶಿಫ್ಟ್ ಮಾಡುತ್ತೇವೆ ಎಂದು ಮತ್ತೊಂದು ಮೂಲೆಯ ಬಾರಿಗೆ ಕಳುಹಿಸಿಬಿಟ್ಟರು, ಅದು ಕೆಳದರ್ಜೆಯ ಬಾರಾಗಿದ್ದು, ಅಸಲಿಗೆ ವೇಶ್ಯಾವಾಟಿಕೆಯ ಅಡ್ಡವಾಗಿತ್ತು. ನಾವು ಹುಡುಗಿಯರ ಬದುಕಿನ ಎಲ್ಲಾ ದಾರಿಗಳು ಮುಚ್ಚಿದ್ದರಿಂದ, ಅನಿವಾರ್ಯವಾಗಿ ಅಲ್ಲಿ ಕೆಲಸ ಮಾಡಬೇಕಾಯ್ತು. ಐದು ವರ್ಷಗಳ ಕಾಲ ಆ ನರಕದಲ್ಲಿ ನಾನು, ಪೋಲೀಸ್ ಠಾಣೆ, ಜೈಲು, ಕೋರ್ಟು ಕಛೇರಿ, ನಿರಾಸೆ ರೋಷ, ಸಂಕಟ, ನೋವು, ರೊಚ್ಚು, ಕಾಯಿಲೆ-ಕಸಾಲೆ ಎಲ್ಲವನ್ನೂ ಅನುಭವಿಸಿಬಿಟ್ಟೆ.. ಇದು ಸಾಲದೆ ಟಿ.ಬಿ. ಅಂಟಿಕೊಂಡದ್ದರಿಂದ, ಈಗ ಈ ಬಾರಿಗೆ ಬಂದು ಬಾರ್ ಹುಡುಗಿಯರ ಕೇರ್ ಟೇಕರ್ ಆಗಿ, ಅವರ ಯೋಗಕ್ಷೇಮ ನೋಡಿಕೊಳ್ಳುತ್ತಾ ಕಾಲತಳ್ಳುತ್ತಿದ್ದೇನೆ. ಊಟ ತಿಂಗಳಿಗಿಷ್ಟು ಸಂಬಳ ನೀಡುತ್ತಾರೆ.
ತಮಾಷೆಯೆಂದರೆ ಒಂದು ದಿನವೂ ನನ್ನವರ, ಮನೆಯ, ಊರಿನ ನೆನಪಾಗಲೇ ಇಲ್ಲ. ನೋಡಬೇಕೂ ಎಂದೂ ಅನಿಸಲಿಲ್ಲ. ಯಾವತ್ತೂ ನಾನು ನನ್ನ ಬಗ್ಗೆಯೇ ಹೆಚ್ಚು ಕಾಳಜಿ ವಹಿಸುತ್ತಿದ್ದುದೇ ಕಾರಣವಿರಬೇಕು. ನಮ್ಮೂರಿನ ಕಡೆಯವರನ್ನೂ ಭೇಟಿಯಾಗಿಲ್ಲ. ಮುಂದೆ ಆಗುವುದು ಬೇಡ. ಮನೆಯವರ ಪಾಲಿಗೆ ನಾನು ಸತ್ತು ವರ್ಷಗಳೇ ಕಳೆದಿವೆ.. ಹಾಗೆ ಸತ್ತೇ ಇರುತ್ತೇನೆ.
ನೋವಾಗುತ್ತೆ. ಅರಿಯದ ಬಣ್ಣದ ಬದುಕಿನ ಕನಸಿಗೆ ಬಲಿಯಾದ ತಪ್ಪಿಗೆ. ನನ್ನನ್ನು ಈ ನರಕಕ್ಕೆ ತಳ್ಳಿದವನಿಗೆ ಅಷ್ಟು ಆಸೆಯಿದ್ದಿದ್ದರೆ, ಅಲ್ಲೇ ನನ್ನನ್ನು ಅನುಭವಿಸಬಹುದಿತ್ತು. ಸಾಯುವತನಕ ಅವನ ಜೊತೆ ಮಲಗುತ್ತಿದ್ದೆನೇನೋ? ಆದರೆ ಅವನು ಒಂದಷ್ಟು ದಿನದ ತೆವಲಿಗೆ, ಖಾಲಿ 20 ಸಾವಿರದ ಆಸೆಗೆ ನನ್ನ ಬದುಕನ್ನು ಮೂರಾಬಟ್ಟೆಯಾಗಿಸಿಬಿಟ್ಟ. ತಪ್ಪು ನನ್ನದೂ ಇದೆ. ನನ್ನ ದೌರ್ಬಲ್ಯವನ್ನು ಚನ್ನಾಗಿ ಬಳಸಿಕೊಂಡ. ಆದರೂ ಸರ್ ಗಂಡಸರ್ಯಾಕೆ ಹೆಣ್ಣುಗಳ ಮೇಲೆ ಇಂತಹ ದೌರ್ಜನ್ಯ ಮಾಡುತ್ತಾರೋ ಗೊತ್ತಿಲ್ಲ. ಇವತ್ತು ನಾನು ಏನೂ ಅಲ್ಲ. ಯಾರಿಗೂ ಸಹಾಯವನ್ನೂ ಮಾಡಲಾರೆ. ಅದರೆ ದಾರಿತಪ್ಪಿ ಬಂದ ಹೆಣ್ಣುಮಕ್ಕಳಿಗೆ ಸಮಾಧಾನ ಮಾಡಬಲ್ಲೆ. ಅವರ ಆರೋಗ್ಯದ ಬಗ್ಗೆ ಎಚ್ಚರವಹಿಸುವ ತಿಳುವಳುಕೆ ನೀಡಬಲ್ಲೆ. ಒಬ್ಬ ಸೂಳೆಯಿಂದ ಇನ್ನೇನು ಬಯಸಬಹುದು ಸಮಾಜ.?
ನೀವು ನಮ್ಮ ರಾಜ್ಯದವರು, ತೊಂದರೆಯಿಲ್ಲವೆಂದರೆ ಇವತ್ತು ರಾತ್ರಿ ಇಲ್ಲೇ ಉಳಿದು ಹೋಗಿ. ನಮ್ಮಲ್ಲಿ ಒಳ್ಳೆಯ ಹುಡುಗಿಯರಿದ್ದಾರೆ. ಮಾತು ಮುಗಿಸಿದವಳ ಕಣ್ಣಲ್ಲಿ ನೀರು ತುಂಬಿದ್ದವು. ನನ್ನ ಮನೆಯವರ ಬಗ್ಗೆ ಚಿಂತೆಯಿಲ್ಲ, ಅವರ ಬಗ್ಗೆ ಯೋಚಿಸುವುದೂ ಇಲ್ಲವೆಂದು ಅವಳು ಹೇಳಿದ್ದು ಸುಳ್ಳು ಎಂದು ನನಗೆ ಗೊತ್ತಾಯಿತು. ನನ್ನ ವಿಸಿಟಿಂಗ್ ಕಾರ್ಡ್ ಅವಳ ಕೈಗಿತ್ತು ನಮ್ಮ ಕಡೆ ಬಂದಾಗ ನಮ್ಮ ಮನೆಗೆ ಬನ್ನಿ ಎಂದು ನಮಸ್ಕಾರ ಹೇಳಿ ಹೊರಬಂದವನಿಗೆ, ಇಳಿಸಂಜೆಯಲಿ ಸುಂದರವಾಗಿ ಕಾಣಬೇಕಿದ್ದ ಪ್ರಪಂಚ ಒಂದು ಕಸಾಯಿಖಾನೆಯಂತೆ ಕಂಡಿತು.
No comments:
Post a Comment