May 9, 2015

ಅಸಹಾಯಕ ಆತ್ಮಗಳು - ಚಿಕ್ಕಮ್ಮನ ಚಕ್ರವ್ಯೂಹ

ಕು.ಸ.ಮಧುಸೂದನ್
ಅಪ್ಪನಿಗೆ ಹಳ್ಳಿಯಲ್ಲಿ ಒಂದೆರಡು ಎಕರೆ ಜಮೀನಿತ್ತು. ಆದರದರಲ್ಲಿ ಬರುವ ಆದಾಯಕ್ಕಿಂತ ಅವನು ಮಾಡುತ್ತಿದ್ದ ಲೇವಾದೇವಿಯಿಂದಲೇ ಜೀವನ ಸಾಗುತ್ತಿತ್ತು. ಉಣ್ಣೋಕೆ ತಿನ್ನೋಕೆ ಏನೂ ಕೊರತೆಯಿರದೇ ಬೆಳೆಯುತ್ತಿರುವಾಗಲೇ ಅಮ್ಮ ಮನೆ ಹಿಂದಿದ್ದ ಕಲ್ಲಿನ ಬಾವಿಗೆ ಬಿದ್ದು ಸತ್ತು ಹೋದಳು. ತಾತ ತೆಗೆಸಿದ ಬಾವಿಗೆ ಸುತ್ತ ಕಲ್ಲು ಕಟ್ಟಿದ್ದರೂ ಅದುಯಾವಾಗ ಬೇಕಾದರೂ ಕುಸಿಯುವ ಸ್ಥಿತಿಯಲ್ಲಿತ್ತು. ಆ ಬಾವಿ ಮುಚ್ಚಿಸಿ ಅಂತಾ ಅಮ್ಮ ಎಷ್ಟು ಬಡಕೊಂಡರು ಅಪ್ಪ ಅವಳ ಮಾತು ಕೇಳಿರಲಿಲ್ಲ. ಕೊನೆಗೆ ಅವಳೇ ಅದಕ್ಕೆ ಬಲಿಯಾಗಿ ಹೋದಳು. ಅವಳು ಸತ್ತಾಗ ನಾನು ನಾಲ್ಕನೇ ಕ್ಲಾಸಲ್ಲಿ ಓದ್ತಾ ಇದ್ದೆ.

ಅಮ್ಮ ಸತ್ತ ಒಂದಷ್ಟು ದಿನದವರೆಗೂ ಇಡೀ ಊರಲ್ಲಿ ಅಪ್ಪನೇ ಅಮ್ಮನ್ನು ಹೊಡೆದು ಬಾವಿಗೆ ಹಾಕಿದಾನೆ ಅಂತ ಗುಸುಗುಸು ಹಬ್ಬಿತ್ತು. ಆ ಮಾತುಗಳು ನನ್ನ ಕಿವಿಗೆ ಬಿದ್ದರೂ ಅದೆಲ್ಲ ಅರ್ಥ ಆಗೋ ವಯಸ್ಸು ನನಗಾಗಿರಲಿಲ್ಲ. ತಿನ್ನೋಕೆ ಗತಿಯಿಲ್ಲದ ಸ್ಥಿತಿಯಲ್ಲಿದ್ದ ಅಮ್ಮನ ತವರು ಮನೆಯವರು ಅದರ ಬಗ್ಗೆ ಏನನ್ನು ಕೇಳಲಿಲ್ಲ. ಆದರೆ ಊರಲ್ಲಿ ಹಬ್ಬಿದ ಆ ಗಾಳಿಮಾತುಗಳು ಸತ್ಯವಿರಬಹುದೆಂಬ ಅನುಮಾನ ನನಗೆ ಬಂದಿದ್ದು ಅಮ್ಮ ಸತ್ತ ಮೂರೇ ತಿಂಗಳಿಗೆ ಅಪ್ಪ ಪಕ್ಕದ ಹಳ್ಳಿಯ ಗಂಡ ಸತ್ತ ಹೆಂಗಸೊಬ್ಬಳನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಬಂದಾಗ!


ಹಳ್ಳಿಯ ಜನವಂತೂ ಈಗ ಅಪ್ಪನೇ ಅಮ್ಮನನ್ನು ಸಾಯಿಸಿದ್ದಾನೆಂದು ನಂಬಿಬಿಟ್ಟರು. ಆದರೆ ಯಾರಿಗೂ ಹೊರಗೆ ಮಾತಾಡೋ ಧೈರ್ಯವಿರಲಿಲ್ಲ. ಯಾಕೆಂದರೆ ಹಳ್ಳಿಯೊಳಗಿನ ಬಹಳಷ್ಟು ಜನ ಅಪ್ಪನ ಹತ್ತಿರ ಲೇವಾದೇವಿ ಇಟ್ಟುಕೊಂಡೋರೆ ಆಗಿದ್ದರು. ಹಾಗೆ ಅಪ್ಪ ಮದುವೆಯಾಗಿ ಮನೆಗೆ ಕರೆದುಕೊಂಡ ಬಂದ ಹೆಂಗಸಿನ ಬಗ್ಗೆಯೂ ಯಾರಿಗೂ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಅವಳ ಗಂಡ ಇವಳ ಕಿರುಕುಳ ತಾಳಲಾರದೆ ನೇಣು ಹಾಕಿಕೊಂಡು ಸತ್ತುಹೋದ ಅಂತ ಜನ ಮಾತಾಡ್ತಾ ಇದ್ದರು. ನಾನು ಸಣ್ಣ ಹುಡುಗಿಯಾಗಿದ್ದರಿಂದ ಇದೆಲ್ಲ ನನಗೆ ಅರ್ಥವಾಗಲ್ಲ ಅನ್ನೋ ಧೈರ್ಯದಿಂದ ನನ್ನ ಎದುರಿಗೇ ಮಾತಾಡಿಕೊಳ್ತಿದ್ದರು. ಅದರಲ್ಲೂ ಅಪ್ಪನ ಅಣ್ಣತಮ್ಮಂದಿರಿಗೆ ಮುಂಚಿನಿಂದಲೂ ಅಪ್ಪನ ಕಂಡರೆ ಯಾಕೋ ದ್ವೇಷ. ಇಂತಹ ಸುದ್ದಿಗಳನ್ನೆಲ್ಲ ಅವರೇ ಹೆಚ್ಚು ಹಬ್ಬಿಸ್ತಾ ಇದ್ದರು. ಒಟ್ಟಲ್ಲಿ ಯಾವುದು ಸುಳ್ಳು ಯಾವುದು ಸತ್ಯ ಅಂತ ತಿಳಿದುಕೊಳ್ಳೋ ಆಸಕ್ತಿಯಾಗಲಿ, ಅಂತ ಬುದ್ದಿವಂತಿಕೆಯಾಗಲಿ ನನಗಿರಲಿಲ್ಲ.

ನಾನು ಏಳನೇ ಕ್ಲಾಸು ಮುಗಿಸಿ ಎಂಟನೇ ಕ್ಲಾಸಿಗೆ ಬಂದ ಒಂದೇ ತಿಂಗಳಿಗೆ ಮೈನೆರೆದೆ. ಇದನ್ನೇ ನೆವವಾಗಿಟ್ಟುಕೊಂಡ ಚಿಕ್ಕಮ್ಮ ಮೈನೆರೆದ ಹುಡುಗಿ ಪಕ್ಕದೂರಿಗೆ ಹೋಗಿ ಓದೋದೇನು ಬೇಕಾಗಿಲ್ಲ ಅಂತ ಅಪ್ಪನ ಕಿವಿ ಚುಚ್ಚಿ ಸ್ಕೂಲ್ ಬಿಡಿಸಿ ಬಿಟ್ಟಳು. ಅಪ್ಪ ಹೆಂಡತಿ ಹೇಳ್ತಿರೋದು ಮನೆಯ ಗೌರವ ಮತ್ತು ಮಗಳ ಭವಿಷ್ಯದ ಹಿತದೃಷ್ಠಿಯಿಂದ ನಂಬಿದ್ದ. ಅಲ್ಲೀತನಕ ನೆಮ್ಮದಿಯಾಗಿ ಆಟ ಆಡಿಕೊಂಡಿದ್ದ ನನಗೆ ಅಲ್ಲಿಂದ ನರಕ ಶುರುವಾಯ್ತು ನೋಡಿ. ಅಪ್ಪ ಮನೆ ಬಿಟ್ಟು ಹೊರಗೆ ಹೋದ ತಕ್ಷಣ ಅವಳ ಕಾಟ ಶುರುವಾಗೋದು. ಆ ಕೆಲಸ ಮಾಡು ಈ ಕೆಲಸ ಮಾಡು ಅಂತಾ ಒಂದು ನಿಮಿಷ ಕೂರೋಕೆ ಬಿಡದ ಹಾಗೆ ಕಂಬ ಸುತ್ತಿಸೋಳು. ಹೀಗೇ ಮೂರು ವರ್ಷ ಕಳೆಯುವಷ್ಟರಲ್ಲಿ ಹೊಲಕ್ಕೆ ಹೋದ ಅಪ್ಪ ಅಲ್ಲೇ ಸತ್ತು ಹೋಗಿದ್ದ. ಅವನಿಗಾಗದ ಯಾರೋ ಅವನನ್ನು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಸಾಯಿಸಿದ್ದರು. ಹಳ್ಳಿಗೆ ಬಂದ ಪೋಲಿಸರು ಅವರಿವರನ್ನು ವಿಚಾರಣೆ ಮಾಡಿ ಅಪ್ಪನ ದಾಯಾದಿಗಳ ಪೈಕಿ ಮೂರು ಜನರನ್ನು ಅರೆಸ್ಟ್ ಮಾಡಿಕೊಂಡು ಹೋದರು. ನೆಂಟರಿಷ್ಟರೆಲ್ಲ ಬಂದು ತಿಥಿಗಿಥಿ ಎಲ್ಲ ಪೂರೈಸಿಕೊಂಡು ಹೋದ ಮೇಲೆ ಚಿಕ್ಕಮ್ಮನ ಗೊಣಗಾಟ ಶುರುವಾಯಿತು. ನಿಮ್ಮಪ್ಪ ಯಾರ್ಯಾರಿಗೆ ದುಡ್ಡು ಕೊಟ್ಟು ಸತ್ತು ಹೋದನೋ ಏನೋ ಈಗ ನಾನೆಲ್ಲಿ ವಸೂಲಿ ಮಾಡಿ ಜೀವನ ಕಳೀಲಿ. ನಿನ್ನ ಮದುವೆ ಹೆಂಗೆ ಮಾಡಲಿ ಅಂತ ನಿಮಿಷ ನಿಮಿಷಕ್ಕೂ ರಾಗ ಎಳೆಯೋಳು. ಈ ಕಾಟವಲ್ಲದೆ ಅಪ್ಪ ಇರೋತನಕ ತೋರಿಕೆಗಾದ್ರು ಮಗಳು ಅಂತ ನಾಟಕ ಮಾಡಿ ಅವರಿವರ ಮನೆಗೆ ಹೋಗೋಕೆ ಬಿಡ್ತಿದ್ದವಳು, ಈಗ ಪಕ್ಕದ ಮನೆಯವರ ಜೊತೆ ಮಾತಾಡೋಕು ಬಿಡದಷ್ಟು ಕಠೋರವಾಗಿಬಿಟ್ಟಳು.

ಕೊನೆಗೊಂದು ದಿನ ಅವಳ ತಮ್ಮ ಅನಿಸಿಕೊಂಡೋನು ಸಹ ನಮ್ಮ ಮನೆಗೇ ಬಂದು ಇರೋಕೆ ಶುರು ಮಾಡಿಬಿಟ್ಟ. ಮುಂಚೇನು ಅಪ್ಪ ಇದ್ದಾಗ ವರ್ಷಕ್ಕೊಂದೆರಡು ಬಾರಿ ಹಬ್ಬಹುಣ್ಣಿಮೆಗೆ ಬಂದು ಹೋಗ್ತಿದ್ದೋನು ಈಗ ಇನ್ನು ಮೇಲೆ ಇಲ್ಲೇ ಇರ್ತೀನಿ ಅಕ್ಕ ನಿನಗೆ ತಾನೆ ಯಾರಿದ್ದಾರೆ ಹೇಳು ಅಂತಾ ಝಾಂಡಾ ಹೂಡಿಬಿಟ್ಟ. ಅಷ್ಟಕ್ಕು ನಾನು ಕೇಳಿದ ಸುದ್ದಿ ಪ್ರಕಾರ ಅವನೇನು ಅವಳ ಸ್ವಂತ ತಮ್ಮ ಆಗಿರಲಿಲ್ಲ ಜೊತೆಗೆ ಯಾವುದೋ ದೂರದ ಸಂಬಂಧದವನಾಗಿದ್ದ. ಅಂತೂ ಮನೆಗೆ ಮೂರನೆಯವನೊಬ್ಬ ಬಂದು ಸೇರಿಕೊಂಡಿದ್ದು ನನಗೇನೂ ಇಷ್ಟವಾಗಲಿಲ್ಲ. ಅದೂ ಅಲ್ಲದೆ ಮುಂಚೇನು ಮನೆಗೆ ಬಂದಾಗ ನನ್ನ ತಿನ್ನೋ ಹಾಗೆ ನೋಡೋನು. ಅವನ ನೋಟ ನಡತೆ ಯಾವುದು ನನಗಿಷ್ಟವಾಗಿರಲಿಲ್ಲ. ಅವನಿಗಾಗಲೆ ಮುವತ್ತು ವರ್ಷ ಮೀರಿತ್ತು. ಬೆಂಗಳೂರಲ್ಲಿ ಅದೇನು ಕೆಲಸ ಮಾಡ್ತಿದ್ದನೊ ದೇವರಿಗೆ ಗೊತ್ತು, ಯಾವಾಗಲು ಒಳ್ಳೆ ಬಟ್ಟೆ ಹಾಕ್ಕೊಂಡು ಶೋಕಿ ಮಾಡ್ತಾ ಇದ್ದ. 

ಅವನು ಬಂದ ಮೇಲೆ ಚಿಕ್ಕಮ್ಮ ನನಗೇನಾದ್ರು ಕೆಲಸ ಹೇಳಿದ್ರೆ ಪಾಪ ಆಮೇಲೆ ಮಾಡ್ತಾಳೆ ಬಿಡು ಅವಳಿಗೂ ಸುಸ್ತಾಗಿರಬೇಕು ಅಂತೆಲ್ಲ ಹೇಳಿ ನನ್ನ ಪರವಹಿಸಿಕೊಂಡು ಮಾತಾಡೋನು. ಒಂದು ದಿನ ಚಿಕ್ಕಮ್ಮ ಬಂದು ನನ್ನ ಹತ್ತಿರ ಕರೆದು ನೋಡು ನಿನಗೂ ಹದಿನೇಳು ತುಂಬುತ್ತಾ ಬಂತು, ಈಗ ನಿನ್ನ ಮದುವೆಮಾಡಬೇಕು, ವರದಕ್ಷಿಣೆ ತುಂಬಾ ಕೇಳಿದರೆ ನಾನೆಲ್ಲಿಂದ ತರಲಿ? ಅಂತ ನಯವಾಗಿ ಮಾತು ಶುರು ಮಾಡಿದೋಳು, ಸುಮ್ಮನೆ ನನ್ನ ತಮ್ಮನನ್ನು ಮದುವೆಯಾಗು, ಅವನೇನು ದೂರದವನ ಖರ್ಚಿಲ್ಲದೆ ಮದುವೆಯಾಗುತ್ತೆ. ನಿನ್ನ ಚೆನ್ನಾಗಿ ನೋಡಿಕೊಳ್ತಾನೆ. ಮದುವೆ ಆದಮೇಲೆ ನೀವಿಬ್ಬರೂ ಬೆಂಗಳೂರಿಗೆ ಹೋಗಿ ಬಿಡಿ. ನನ್ನದು ಹೇಗಿದ್ದರೂ ನಡೆಯುತ್ತೆ. ನಿಮ್ಮಪ್ಪ ಇದ್ದಿದ್ದರೆ ನಾನೀ ಮಾತನ್ನ ಹೇಳೋ ಕಾಲ ಬರ್ತಿರಲಿಲ್ಲ. ಹೊಟ್ಟೇಲಿ ಹುಟ್ಟದಿದ್ರೂ ನೀನು ನನ್ನ ಮಗಳೇ ಅಲ್ವಾ ಅಂತೆಲ್ಲ ಹೇಳಿದಳು. ಆ ಕ್ಷಣಕ್ಕೆ ಏನು ಹೇಳಬೇಕೊ ನನಗೆ ಗೊತ್ತಾಗಲಿಲ್ಲ. ಸುಮ್ಮನೆ ಅಳ್ತಾ ಕೂತೆ. ನನಗೆ ಮದುವೆ ಅನ್ನೋದೆ ಒಂದು ಅನಿರೀಕ್ಷಿತವಾದ ವಿಷಯವಾಗಿತ್ತು ಅದರಲ್ಲೂ ಅವನನ್ನು ಆಗೋದು ಅಂದ್ರೆ ನಾನ್ಯಾವತ್ತು ಅದನ್ನೆಲ್ಲ ಊಹೆ ಮಾಡಿಕೊಂಡೋಳಲ್ಲ.

ಆದರೆ ಚಿಕ್ಕಮ್ಮ ಸಾಮಾನ್ಯದವಳಲ್ಲ. ದಿನಾ ಇದೇ ಮಾತಾಡಿ ಮಾತಾಡಿ ನನಗೆ ಸಂಕಟ ಆಗೋಹಾಗೆ ಮಾಡಿದಳು. ಕೊನೆಗೊಂದು ದಿನ ಇದಕ್ಕೆ ಒಪ್ಪಲಿಲ್ಲ ಅಂದ್ರೆ ನಾನು ನನ್ನ ತಮ್ಮನ ಜೊತೆ ಬೆಂಗಳೂರಿಗೆ ಹೋಗಿ ಬಿಡ್ತೀನಿ ನೀನು ನಿಮ್ಮಪ್ಪನ ಹೊಲ ಲೇವಾದೇವಿ ನೋಡ್ಕೊಂಡು ಇಲ್ಲೇ ಇರು ಅಂತ ಹೆದರಿಸಿಬಿಟ್ಟಳು. ನಿಜಕ್ಕೂ ಅದನ್ನ ನಾನು ಕನಸಲ್ಲೂ ನೆನೆಸಿರಲಿಲ್ಲ. ದಾಯಾದಿಗಳು ಜೈಲಿಗೆ ಹೋದಮೇಲೆ ಆ ಕುಟುಂಬದವರು ನಮಗೆ ಹೊಲದಲ್ಲಿ ಬೆಳೆ ಬೆಳೆಯೋಕೆ ಸಾಕಷ್ಟು ತೊಂದರೆ ಕೊಡ್ತಾ ಇದ್ದರು. ಅಂತದ್ದರಲ್ಲಿ ನಾನೊಬ್ಬಳೇ ಆಗಿಬಿಟ್ಟರೆ ನನ್ನ ಸಾಯಿಸೋದು ಗ್ಯಾರಂಟಿ ಅನ್ನಿಸ್ತು.

ಆಮೇಲೊಂದು ದಿನ ಮನಸು ಗಟ್ಟಿ ಮಾಡಿಕೊಂಡು ಹೂ ಅಂದು ಬಿಟ್ಟೆ. ಹಾಗೆ ಒಪ್ಪಿಕೊಂಡ ತಕ್ಷಣ ಚಿಕ್ಕಮ್ಮನ ವರಸೆಯೇ ಬದಲಾಗಿ ಹೋಯಿತು. ಏನು ಹೊಟ್ಟೇಲಿ ಹುಟ್ಟಿದ ಮಗಳಿಗೂ ಅಂತ ಸೇವೆನಾ ಯಾರೂ ಮಾಡಲ್ಲ. ಹಾಗೆ ನನ್ನ ಒಂದೂ ಕೆಲಸ ಮಾಡೋಕೆ ಬಿಡದೆ ತಾನೇ ಎಲ್ಲ ಕೆಲಸ ಮಾಡಿ ಕೂತಕಡೆಗೆ ಊಟ ತಂದು ಕೊಡೋಳು. ನನಗೆ ಇದೆಲ್ಲ ಒಂದು ತರ ಅನ್ನಿಸಿ ಚಿಕ್ಕಮ್ಮ ನೀವು ಹೀಗೆಲ್ಲ ಮಾಡಬೇಡಿ ಅಂದುಬಿಟ್ಟೆ. ಇಷ್ಟವಿತ್ತೊ ಇರಲಿಲ್ಲವೊ ಮದುವೆಗೆ ಒಪ್ಪಿದ್ದೆ, ನಂದೂ ಹರಯದ ವಯಸ್ಸಲ್ವಾ ಮದುವೆ ಮನೆ ಮಕ್ಕಳು ಬಗ್ಗೆ ಏನೇನೋ ಕನಸು ಕಾಣೋಕೆ ಶುರು ಮಾಡಿದೆ.

ಹಾಗಿರೋವಾಗ ಒಂದು ರಾತ್ರಿ ಚಿಕ್ಕಮ್ಮ ನನಗೆ ಮಲಗೋಕೆ ಅವಳ ತಮ್ಮನ ರೂಮಿಗೆ ಹೋಗೋಕೆ ಹೇಳಿದಳು. ನನಗೆ ಆಶ್ಚರ್ಯವಾಗಿ ಏನು ಚಿಕ್ಕಮ್ಮ ಮದುವೆಗೆ ಮುಂಚೇನೆ ಒಟ್ಟಿಗೆ ಮಲಗ್ತಾರಾ ಅಂದೆ. ಅದಕ್ಕವಳು ಇನ್ನೇನು ಮೂರು ತಿಂಗಳಲ್ಲಿ ಮದುವೆ ಆಗುತ್ತಲ್ಲ. ಅವನೇನು ಹೊಸಬನಾ, ಸುಮ್ಮನೇ ಹೋಗು ನಾನು ನಿಮ್ಮಮ್ಮ ಹೇಳ್ತಿದಿನಿ ಅಂದು ಬಿಟ್ಟಳು. ಸತ್ಯ ಹೇಳ್ತೀನಿ ಅವಳು ನಾನು ನಿಮ್ಮಮ್ಮ ಅಂದ ಒಂದು ಮಾತಿಗೆ ನಾನು ಮರು ಮಾತಾಡದೆ ಒಳಗೆ ಹೋಗಿ ಬಿಟ್ಟೆ. ರೂಮಿನಲ್ಲಿದ್ದ ಅವನು ನನ್ನಿಷ್ಟ ಕಷ್ಟ ಏನನ್ನೂ ಕೇಳದೆ ಇಡೀರಾತ್ರಿ ನನ್ನ ಹಿಚುಕಿ ಹಾಕಿಬಿಟ್ಟ. ಬೆಳಿಗ್ಗೆ ಎಷ್ಟೊತ್ತಾದರು ಏಳದೆ ಮಲಗಿ ಬಿಟ್ಟಿದ್ದೆ. ಇದೇನೋ ಒಂದು ದಿನದ ಕಥೆ ಅಂದುಕೊಂಡಿದ್ದರೆ ಊಹೂ ಸತತವಾಗಿ ಆರು ತಿಂಗಳು ಮದುವೆಯಾಗದೆ ಅವನ ಜೊತೆ ಸಂಸಾರ ಮಾಡಿಬಿಟ್ಟೆ. ಹೊರಗಿನ ಒಬ್ಬರಿಗೂ ಗೊತ್ತಾಗದೆ ಇದೆಲ್ಲ ನಡೆಯುತ್ತ ಇತ್ತು. ನಾನೂ ಸಹ ಮನೆಯಿಂದಾಚೆ ಇಣುಕುವುದನ್ನೇ ಬಿಟ್ಟಿದ್ದೆ. ಮದುವೆ ಮಾತೆತ್ತಿದಾಗೆಲ್ಲ ಚಿಕ್ಕಮ್ಮ ಇನ್ನೆರಡು ತಿಂಗಳು ಒಳ್ಳೆಯ ಮುಹೂರ್ತವಿಲ್ಲ ತಡಿ ಅನ್ನುತ್ತಲೇ ಬಂದಳು. ಇದು ತಪ್ಪು ಅಂತ ಗೊತ್ತಿದ್ದರು ನಾನು ಏನೂ ಮಾಡದ ಸ್ಥಿತಿಯಲ್ಲಿದ್ದೆ.

ಆದರೆ ನಾನು ಸುಮ್ಮನಿದ್ದರೂ ದೇವರು ಸುಮ್ಮನಿರ್ತಾನಾ? ನನ್ನ ಹೊಟ್ಟೇಲಿ ಅವನ ಪಿಂಡ ಬೆಳೆಯೋಕೆ ಶುರುವಾಯಿತು. ಈ ವಿಷಯ ಗೊತ್ತಾದ ಕೂಡಲೆ ಅದುವರೆಗೂ ಹೊರಗೆ ವಿಷಯ ಗೊತ್ತಾಗದಂತೆ ನೋಡಿಕೊಂಡಿದ್ದ ಚಿಕ್ಕಮ್ಮ ಮನೆಯಂಗಳದಲ್ಲಿ ಬಾಯಿ ಬಡಿದುಕೊಂಡು ಅಯ್ಯೋ ನಮ್ಮನೆ ಮಾರ್ಯಾದೆ ತಗದಳಲ್ಲಪ್ಪ, ಮದುವೆಗೆ ಮುಂಚೇನೆ ಕದ್ದು ಬಸಿರಾಗಿದಾಳೆ ಅನ್ನುತ್ತ ಊರು ಕೇರಿ ಒಂದು ಮಾಡಿಬಿಟ್ಲು. ಚಿಕ್ಕಮ್ಮನ ವರ್ತನೆ ನನಗೆ ಅರ್ಥವಾಗದೆ ಮನೆಯೊಳಗೆ ಅಳುತ್ತಾ ಕೂತೆ. ಊರವರೆಲ್ಲ ಬಂದು ಚಿಕ್ಕಮ್ಮನಿಗೆ ಅಯ್ಯೋ ಪಾಪ ಅಂತ ಸಮಾಧಾನ ಹೇಳಿ ಹೋದರೆ ಹೊರತು ನನಗೆ ಯಾರು ಏನೂ ಕೇಳಲಿಲ್ಲ.

ಹೀಗೆ ಎರಡುದಿನದ ಅವಳ ಅಳುವಿನ ನಾಟಕ ಮುಗಿದ ಮೇಲೆ ಒಂದು ದಿನಾ ಸುಮ್ಮನೆ ಅವನ ಜೊತೆ ಬೆಂಗಳೂರಿಗೆ ಹೋಗು ಅಂತ ಹೇಳಿ ರಾತ್ರಿ ಯಾರಿಗೂ ಗೊತ್ತಾಗದ ಹಾಗೆ ನಮ್ಮಿಬ್ಬರನ್ನೂ ಬೆಂಗಳೂರಿಗೆ ಕಳಿಸಿಬಿಟ್ಟಳು. ಬೆಂಗಳೂರಿಗೆ ಬೆಳಗಿನ ಜಾವ ಬಂದ ನನ್ನನ್ನು ಒಂದು ಲಾಡ್ಜಿನ ರೂಮಲ್ಲಿ ಇರಿಸಿ, ಇಲ್ಲೇ ಇರು ಸಾಯಂಕಾಲ ಬರ್ತೀನಿ ಅಂತ ಹೊರಟು ಹೋದ. ನನಗಾಮೇಲೆ ಗೊತ್ತಾಗಿದ್ದೆಂದರೆ ಅವನು ವಾಪಾಸು ಹಳ್ಳಿಗೆ ಹೋಗಿ ನಾನೆಲ್ಲೊ ಓಡಿ ಹೋಗಿದ್ದೀನಿ ಅನ್ನೋ ತರಾ ಹುಡುಕಾಡಿದ ನಾಟಕವಾಡಿ ರಾತ್ರಿ ಹತ್ತು ಗಂಟೆಗೆಲ್ಲ ಬೆಂಗಳೂರಿಗೆ ಬಂದು ಬಿಟ್ಟಿದ್ದ. ಸುಮಾರು ಒಂದು ವಾರ ಹೀಗೇ ನಾಟಕವಾಡಿದ ಅವನು ಕೊನೆಗೊಂದು ದಿನ ಸಣ್ಣ ಮನೆ ಮಾಡಿ ನನ್ನ ಕರೆದುಕೊಂಡು ಹೋದ. ನಾನು ನಮ್ಮ ಮದುವೆಯ ಮಾತೆತ್ತಿದರೆ, ಸ್ವಲ್ಪ ದಿನ ತಡಿ ಅಂತ ಹೇಳುತ್ತ ಬಂದ. ಹಾಗೆ ದಿನ ತಳ್ಳುತ್ತಲೇ ಒಂದು ದಿನ ನನ್ನನ್ನು ಸೂಳೆಗಾರಿಕೆಯ ನರಕಕ್ಕೆ ತಳ್ಳಿಬಿಟ್ಟ. ಮನೆಯನ್ನೆ ಕಸುಬಿನ ಅಡ್ಡೆ ಮಾಡಿಕೊಂಡವನಿಗೆ ಗಿರಾಕಿಗಳನ್ನು ಕರೆತರೋದೇ ಕೆಲಸವಾಗಿ ಬಿಡ್ತು. ಅವನ ಮಾತು ನಡವಳಿಕೆಗಳಿಂದ ನನಗೆ ಗೊತ್ತಾಗಿದ್ದೆಂದರೆ ಅವನು ಬೆಂಗಳೂರಿನಲ್ಲಿ ಮುಂಚೆ ಮಾಡುತ್ತಿದ್ದುದು ಇದೇ ತಲೆಹಿಡುಕನ ಕೆಲಸ. ಒಂದು ದಿನ ನಾನು ಅವನ ಜೊತೆ ಜೋರುದನಿಯಲ್ಲಿ ಜಗಳವಾಡಿ ಇದೆಲ್ಲ ನಿಮ್ಮಕ್ಕನಿಗೆ ಗೊತ್ತಾದರೆ ಏನು ಮಾಡ್ತೀಯಾ ಅಂದೆ. ಕುಡಿದ ಅಮಲಿನಲ್ಲಿದ್ದ ಅವನು ಏಯ್ ನಾಯಿ ಅವಳೇನು ನನ್ನ ಅಕ್ಕ ಏನೇ ದೂರದ ಸಂಬಂಧಿ, ನಿಮ್ಮಪ್ಪನ ಜೊತೆ ಅವಳು ಮದುವೆ ಆಗೋಕೆ ಮುಂಚೇನೆ ಅವಳ ಜೊತೆ ಮಲಗಿದೀನಿ. ಇದೆಲ್ಲ ಅವಳಿಗೆ ಗೊತ್ತೆ ಮಾಡ್ತಿರೋದು ಅಂದುಬಿಟ್ಟ. ಅಲ್ಲಿಗೆ ನನಗೆ ಚಿಕ್ಕಮ್ಮ ಅನ್ನಿಕೊಂಡೋಳ ಯೋಗ್ಯತೆ ಏನು ಅಂತ ಗೊತ್ತಾಗಿ ಹೋಯಿತು. ಆದರೀಗ ಅದನ್ನು ತಿಳಿದುಕೊಂಡು ನಾನೇನು ಮಾಡುವಂತಿರಲಿಲ್ಲ. 

ಹೀಗೆ ಒಂದು ವರ್ಷ ಕಳೆದ ಮೇಲೆ ಅವನು ಇದ್ದಕ್ಕಿದ್ದಹಾಗೆ ನನ್ನ ಬಿಟ್ಟು ಎಲ್ಲಿಗೋ ಓಡಿಹೋಗಿಬಿಟ್ಟ. ಅಷ್ಟರಲ್ಲಿ ನನಗೆ ನನ್ನ ಜೀವನ ಇಷ್ಟೇ ಅನ್ನೋದು ಅರ್ಥವಾಗಿ ಹೋಗಿತ್ತು. ಜೊತೆಗೆ ಬೆಂಗಳೂರಿನ ದಂಧೆ ಮಾಡುವ ಲಾಡ್ಜುಗಳು ಪರಿಚಯವಾಗಿದ್ದವು. ಒಬ್ಬಳೇ ಒಂಟಿಯಾಗಿ ಮನೇಲಿದ್ದು ವ್ಯವಹಾರ ಮಾಡೋದು ಕಷ್ಟದ ಕೆಲಸವಾಗಿತ್ತು. ಆ ಮನೆ ಖಾಲಿ ಮಾಡಿ ಒಂದು ಲಾಡ್ಜಿನ ಮಾಮೂಲಿ ಸದಸ್ಯಳಾಗಿಬಿಟ್ಟೆ. ಹಗಲೂ ರಾತ್ರಿ ಅಲ್ಲಿ ದಂಧೆ ನಡೆಯೋದು. ದುಡಿದ ದುಡ್ಡನ್ನ ಯಾರಿಗೆ ಕೊಡಬೇಕಾಗಿತ್ತು ಹೇಳಿ. ಇಡೀ ಪ್ರಪಂಚದಲ್ಲಿ ನಾನೊಬ್ಬಳೆ, ನನಗೇ ಅಂತ ಯಾರೂ ಇಲ್ಲ ಅನ್ನೊ ಸತ್ಯ ಅರಗಿಸಿಕೊಳ್ಳೋಕೆ ಮೊದಮೊದಲು ಕಷ್ಟವಾಯಿತು. ಅದನ್ನ ಮರೆಯೋಕೆ ಕುಡಿತ ಕಲಿತೆ, ಜೊತೆಗೆ ಬೇರೆಬೇರೆ ಗಿರಾಕಿಗಳು ಕಲಿಸಿಕೊಟ್ಟ ಡ್ರಗ್ಸ್ ಗಳಿಗೂ ದಾಸಿಯಾದೆ. 

ಮನುಷ್ಯರೇನು ಅಮೃತ ಕುಡಿದು ಬಂದಿರ್ತೀವಾ? ಎಲ್ಲರಿಗೂ ಬರೋ ಹಾಗೆ ನನಗೂ ಚಿತ್ರವಿಚಿತ್ರವಾದ ಕಾಯಿಲೆಗಳು ಬಂದವು. ಹೇಗೋ ಸಂಬಾಳಿಸಿಕೊಂಡು ಬದುಕಿದೆ. ಈಗ ನನಗೆ ನಲವತ್ತಾರು ವರ್ಷ. ಲೆಕ್ಕ ಹಾಕಿನೋಡಿ ನಾನೆಷ್ಟು ವರ್ಷ ಈ ಪಾಪದ ಕೆಲಸ ಮಾಡಿರಬೇಕು ಅಂತ! ಅಷ್ಟು ವರ್ಷ ದುಡಿದ ದುಡ್ಡಲ್ಲಿ ಒಂದು ರೂಪಾಯಿನೂ ಉಳಿಸಲಿಲ್ಲ ಬಿಡಿ.ಕೊನೆಗಿನ್ನು ನನ್ನ ಕೈಲಿ ಈ ಕೆಲಸ ಮಾಡೋಕಾಗಲ್ಲ ಅಂದಾಗ ಈ ಆಶ್ರಮಕ್ಕೆ ಸೇರಿಕೊಂಡು ಕಾಲಕಳೀತಾ ಇದೀನಿ. ತಮಾಷೆ ಅಂದರೆ ನನ್ನ ಈ ಆಶ್ರಮಕ್ಕೆ ಸೇರಿಸಿದೋನು ಈ ಆಶ್ರಮದ ಸ್ವಾಮಿಯ ಪರಮ ಭಕ್ತ ಮತ್ತು ಒಂದು ಕಾಲದ ನನ್ನ ಖಾಯಂ ಗಿರಾಕಿ. ಪಾಪ ಅವನಿಗೆ ಮನೇಲೇನು ಸಮಸ್ಯೆನೋ ನನ್ನ ಹತ್ತಿರ ಬರ್ತಾ ಇದ್ದ. ಈಗ ಅವನಿಲ್ಲಿಗೆ ವಾರಕ್ಕೆರಡು ಸಾರಿ ಸಂಸಾರದೊಂದಿಗೆ ಬರ್ತಾನೆ. ನಾನವನ್ನು ಮಾತಾಡಿಸಿ ತೊಂದರೆ ಕೊಡೋಕೆ ಹೋಗಲ್ಲ. ನಮ್ಮಂತವರು ಬಚ್ಚಲಿನಹುಳುಗಳ ತರಾ! ನೋಡಿದರೆ ಅಸಹ್ಯ ಅನಿಸುತ್ತೆ. ಆದರೆ ನೀವು ಇಷ್ಟು ಹೊತ್ತು ತಾಳ್ಮೆಯಿಂದ ಕೂತು ನನ್ನ ಕಥೆ ಕೇಳಿದಿರಿ. ಅದಕ್ಕೆ ನಾನು ನಿಮಗೆನಮಸ್ಕಾರ ಹೇಳಬೇಕು.

ಆಯಿತು ಸಾರ್, ಸಾಯಂಕಾಲದ ಪ್ರಾರ್ಥನೆಯ ಟೈಮ್ ಆಯಿತು. ಇಲ್ಲೇ ವಾಸ ಮಾಡೋರು ತಡವಾಗಿ ಹೋದರೆ ಸ್ವಾಮಿಗಳಿಗೆ ಕೋಪ ಬರುತ್ತೆ. ನಾನಿನ್ನು ಬರ್ತೀನಿ.

ಮಾತು ಮುಗಿಸಿ ಎದ್ದು ಹೋದವಳ ಕಣ್ಣಲ್ಲಿ ದು:ಖವಿದ್ದರೂ ಅವಳ ಹೃದಯ ಹಗುರವಾಗಿರಬಹುದೆ ಎಂದುಕೊಂಡೆ ಆಶ್ರಮದ ಗೇಟಿನಾಚೆಗೆ ಬಂದೆ. 

No comments:

Post a Comment