ಕು.ಸ.ಮಧುಸೂದನ್
ಅಪ್ಪ ಪ್ರೈವೇಟ್ ಕಂಪನೀಲಿ ಕೆಲಸ ಮಾಡ್ತಿದ್ದರು. ಅವರ ಸಂಬಳ ಸಾಕಾಗ್ತಾ ಇರಲಿಲ್ಲ. ಮನೆಯಲ್ಲಿದ್ದೋರು ನಾವು ಆರುಜನ. ನಾನು ನನ್ನ ತಂಗಿಯರಿಬ್ಬರು ಮತ್ತು ತಮ್ಮ. ವಾಸವಿದ್ದ ಮನೆಯೂ ಸ್ವಂತದ್ದೇನೂ ಅಲ್ಲ. ಹಾಗಾಗಿ ಅಮ್ಮ ಅಕ್ಕಪಕ್ಕದ ಹೆಂಗಸರನ್ನು ಒಟ್ಟಾಕಿಕೊಂಡು ಚೀಟಿ ವ್ಯವಹಾರ ಮಾಡ್ತಾ ಇದ್ದಳು. ನಮ್ಮ ಮನೆ ಮಟ್ಟಿಗೆ ಅಪ್ಪ ನೆಪ ಮಾತ್ರಕ್ಕೆ ಮನೆ ಯಜಮಾನನಾಗಿದ್ದ. ತಿಂಗಳ ಸಂಬಳ ತಂದು ಅಮ್ಮನ ಕೈಲಿ ಕೊಟ್ಟರೆ ಅವನ ಕೆಲಸ ಮುಗಿದು ಹೋಗ್ತಿತ್ತು. ಇನ್ನುಳಿದ ವ್ಯವಹಾರವನ್ನೆಲ್ಲ ಅಮ್ಮನೇ ನೋಡಿಕೊಳ್ತಾ ಇದ್ದಳು. ಚೀಟಿ ನಡೆಸೋದು, ಮುಂತಾದ ವ್ಯವಹಾರಗಳಿಂದ ಬರ್ತಿದ್ದ ದುಡ್ಡಲ್ಲಿ ಮಕ್ಕಳನ್ನು ಮಾತ್ರ ಅದ್ದೂರಿಯಾಗಿ ಸಾಕ್ತಾ ಇದ್ದಳು. ನಾವೆಲ್ಲರೂ ಒಳ್ಳೆಯ ಖಾಸಗಿ ಶಾಲೆಯಲ್ಲೇ ಓದ್ತಾ ಇದ್ದೆವು. ನಾನೇ ದೊಡ್ಡ ಮಗಳಾಗಿದ್ದು, ನನ್ನ ಮೊದಲ ತಂಗಿ ನನಗಿಂತ ಆರು ವರ್ಷಕ್ಕೆ ಸಣ್ಣವಳು; ಅವಳ ಹಿಂದಿನವರಿಗೆಲ್ಲ ಒಂದೊಂದು ವರ್ಷದ ಅಂತರ!
ನಿಜ ಹೇಳಬೇಕು ಅಂದರೆ ನಾನು ನೋಡೋದಿಕ್ಕೆ ಸುಂದರವಾಗಿದ್ದೆ. ಮೈಕೈ ತುಂಬಿಕೊಂಡು ಲಕ್ಷಣವಾಗಿದ್ದ ನನ್ನನ್ನು ಕಂಡರೆ ಅಮ್ಮನಿಗೆ ತುಂಬಾ ಪ್ರೀತಿ. ಮುಂದೆ ಸಂಸಾರದ ಜವಾಬ್ದಾರಿಯನ್ನು ನಾನೇ ಹೊರ್ತೀನಿ ಅನ್ನೋ ನಂಬಿಕೆಯಲ್ಲೇ ನನ್ನ ಸಾಕ್ತಾ ಇದ್ದಳು. ಆದರೆ ಅವಳ ನಿರೀಕ್ಷೆಗಳನ್ನು ಸುಳ್ಳು ಮಾಡೋ ರೀತಿಯಲ್ಲಿ ಯಾಕೊ ವಿದ್ಯೆ ನನ್ನ ತಲೆಗೆ ಹತ್ತಲೇ ಇಲ್ಲ. ನಾನೆಷ್ಟು ಕಷ್ಟಪಟ್ಟು ಓದಿದರೂ ಬರೀ ಪಾಸು ಮಾಡೋಕೆ ಮಾತ್ರ ಆಗ್ತಿತ್ತು. ಹೀಗಿರುವಾಗ ನಾನು ಪಿ.ಯು.ಸಿ.ಗೆ ಬಂದಾಗ ನಮ್ಮ ಕಾಲೇಜಿನ ಯಾವುದೋ ಸಮಾರಂಭದಲ್ಲಿ ಒಂದು ಫ್ಯಾಷನ್ ಶೋ ಇತ್ತು. ಅದರಲ್ಲಿ ನಾನೂ ಬಾಗವಹಿಸಿದ್ದೆ. ಅಮ್ಮನೇ ನನಗೆಲ್ಲ ಅಲಂಕಾರ ಮಾಡಿ ವೇದಿಕೆ ಹತ್ತಿಸಿದ್ದಳು. ಆ ಸಮಾರಂಭಕ್ಕೆ ಒಂದೆರಡು ಜಾಹಿರಾತು ಕಂಪನಿಯವರ ಪ್ರತಿನಿಧಿಗಳೂ ಬಂದಿದ್ದರು. ಅದೇನು ಪವಾಡಾನೋ ಅದರಲ್ಲಿ ನನಗೆ ಮೊದಲ ಬಹುಮಾನ ಬಂತು. ಕಾರ್ಯಕ್ರಮ ಮುಗಿದ ಮೇಲೆ ನಾನು ಜಾಹಿರಾತು ಸಂಸ್ಥೆಯೊಂದರ ಏಜೆಂಟ್ ಅಂತ ಹೇಳಿಕೊಂಡು ಬಂದ ನಡುವಯಸ್ಕನೊಬ್ಬ ನನ್ನನ್ನು, ಅಮ್ಮನನ್ನು ಪರಿಚಯ ಮಾಡಿಕೊಂಡು ನನ್ನ ಸೌಂದರ್ಯದ ಬಗ್ಗೆ ತುಂಬಾ ಹೊಗಳಿದ. ಆತನ ಕಾರಲ್ಲೇ ಮನೆಗೆ ಡ್ರಾಪ್ ಮಾಡಿದ. ಮನೆ ತಲುಪುವಷ್ಟರಲ್ಲಿ ಅವನನ್ನು ಅಮ್ಮ ತುಂಬ ನಂಬಿ ಬಿಟ್ಟಿದ್ದಳು. ಅಷ್ಟು ಚೆನ್ನಾಗಿ ನನ್ನ ಬಗ್ಗೆ ಮುಂದೆ ನಾನು ಗ್ಯಾರಂಟಿಯಾಗಿ ಒಳ್ಳೆಯ ಮಾಡೆಲ್ ಆಗುವ ಬಗ್ಗೆ ಮಾತಾಡಿದ್ದ. ಮನೆಗೆ ಬಿಟ್ಟವನು ಹೋಗುವ ಮುಂಚೆ ನಿಮ್ಮ ಮಗಳ ಭವಿಷ್ಯದ ಬಗ್ಗೆ ಚರ್ಚೆ ಮಾಡೋಕೆ ನಾನು ಒಂದು ದಿನ ನಿಮ್ಮ ಮನೆಗೆ ಬರ್ತೀನಿ ಅಂದವನು ಗೇಟಿನಿಂದ ಹಾಗೆಯೇ ಹೋಗಿಬಿಟ್ಟಿದ್ದ. ಅವತ್ತು ರಾತ್ರಿಯೆಲ್ಲ ನನಗೆ ನಾನು ಮಾಡೆಲ್ ಆದ ಹಾಗೆ ಕೈತುಂಬಾ ಸಂಪಾದಿಸಿದ ಹಾಗೆ ಕಣ್ಣು ತುಂಬಾ ಕನಸುಗಳೋ ಕನಸುಗಳು!
ಬಹುಶ: ಅಮ್ಮನೂ ಅಂತಹುದೇ ಕನಸುಗಳನ್ನ ಕಂಡಿರಬೇಕು.ಹಾಗಾಗಿ ಮಾರನೇ ದಿನ ಬರೀ ನನ್ನ ಬಹುಮಾನದ ಮತ್ತು ಹೊಗಳಿ ಮನೆಗೆ ಬಿಟ್ಟು ಹೋದವನದೇ ಮಾತು.
ಅದೇನು ಅದೃಷ್ಟವೋ ದುರಾದೃಷ್ಟವೋ ಅದಾದ ಮೂರನೇ ದಿನಕ್ಕೆ ಅವನ ಕಾರು ನಮ್ಮ ಮನೆ ಬಂದು ನಿಂತಿತು.ನಾನು ರೂಮಿಂದ ಹೊರಗೇ ಬರಲಿಲ್ಲ. ಆದರವನ ಮಾತು ಕೇಳಿಸಿಕೊಳ್ತಾ ಇದ್ದೆ. ನನ್ನ ಸೌಂದರ್ಯದ ಬಗ್ಗೆ ಮಾತಾಡುತ್ತ ಒಂದೆರಡು ತಿಂಗಳ ತರಭೇತಿ ಸಿಕ್ಕುಬಿಟ್ಟರೆ ಅವಳು ರಾಜ್ಯದಲ್ಲೇ ದೊಡ್ಡ ಮಾಡೆಲ್ ಆಗಿಬಿಡ್ತಾಳೆ. ನೋಡಿ ನೀವು ಅವಳನ್ನು ಅದಕ್ಕೆ ಸೇರಿಸಿ ಅಂದ. ಅದಕ್ಕೆ ಅಮ್ಮ, ಅಯ್ಯೋ ಅವಳ ಕಾಲೇಜಿಗೆ ಕಳಿಸೋದೇ ಕಷ್ಟವಾಗಿದೆ. ನಾವೇನು ಅಂತಾ ಶ್ರೀಮಂತರಲ್ಲ. ತರಬೇತಿಗೆಲ್ಲ ಸೇರಿಸಿ ಖರ್ಚು ಮಾಡೋದು ಕಷ್ಟ ಅಂದಳು. ಅದಕ್ಕವನು ನೀವ್ಯಾಕೆ ದುಡ್ಡಿನ ಬಗ್ಗೆ ಯೋಚನೆ ಮಾಡ್ತೀರಾ? ಅದು ನಮ್ಮದೇ ಇನ್‍ಸ್ಟಿಟ್ಯೂಟ್ ಅಂದೆನಲ್ಲ. ನಿಮ್ಮ ಹುಡುಗಿಯ ಪ್ರತಿಭೆಗೆ ನಾನು ಅವಳಿಗೆ ಉಚಿತವಾಗಿ ತರಬೇತಿ ಕೊಡಿಸ್ತೇನೆ. ಅಷ್ಟೂ ಮಾಡಲಾರೆನಾ? ಅಂತ ಅಮ್ಮನಿಗೆ ಆಸೆ ಹುಟ್ಟಿಸಿದ. ಅಷ್ಟಾದರೂ ಅಮ್ಮ ಅವಳ ಕಾಲೇಜಿಗೆ ತೊಂದರೆಯಾಗುತ್ತಲ್ಲ ಅಂತ ರಾಗ ಎಳೆದಳು. ಅದಕ್ಕವನು ಇಲ್ಲ ಇಲ್ಲ ಅವಳ ಓದಿಗೇನು ತೊಂದರೆಯಾಗುವುದಿಲ್ಲ. ಅವಳು ಕಾಲೇಜು ಮುಗಿಸಿ ನಾಲ್ಕು ಗಂಟೆಗೆ ಬಂದರೆ ಸಾಕು. ರಾತ್ರಿ ಒಂಭತ್ತಕ್ಕೆಲ್ಲ ಮನೆ ಸೇರಬಹುದೆಂದ. ಮದ್ಯಮವರ್ಗದವರ ಆಸೆಯಿದೆಯಲ್ಲ, ಅದು ಎಂತವರನ್ನು ಪಾತಾಳಕ್ಕೆ ತಳ್ಳಿಬಿಡುತ್ತೆ ನೋಡಿ. ದುಡ್ಡಿಲ್ಲದೆ, ಕಾಲೇಜಿಗು ತೊಂದರೆಯಾಗದೆ ಉಚಿತವಾಗಿ ತರಬೇತಿ ಸಿಗುತ್ತೆ ಅಂದರೆ ಯಾರು ಬೇಡವೆನ್ನುತ್ತಾರೆ. ಮಗಳು ಇದರಲ್ಲಿ ಯಶಸ್ವಿಯಾದರೆ ಕುಟುಂಬದ ಭವಿಷ್ಯ ಉಜ್ವಲವಾಗಿ ಬಿಡುತ್ತದೆಯೆಂಬ ಆಸೆಯಿಂದ ಅಮ್ಮ ನನ್ನನ್ನೂ ಕೇಳದೆ ಆಯಿತು ನಾಳೆಯಿಂದ ಕಳಿಸುತ್ತೇನೆಂದು ಬಿಟ್ಟಳು. ಹೊರಡುವ ಮುಂಚೆ ಅವನ ಇನ್ ಸ್ಟಿಟ್ಯೂಟ್ ಅಡ್ರೆಸ್ ಕೊಟ್ಟು ನಾಳೆ ಕಳಿಸಿ ಅಂತ ಹೇಳಿ ಹೋದ.
ಸರಿ ಮಾರನೇ ದಿನ ಕಾಲೇಜು ಮುಗಿಸಿ ಮನೆಗೆ ಬರದೆ ಅಲ್ಲಿಂದಲೇ ಹೋಗುವುದೆಂದು ತೀರ್ಮಾನಿಸಿ ಅವನು ಕೊಟ್ಟ ಅಡ್ರೆಸ್ಸಿಗೆ ಹೋದೆ. ಅದೊಂದು ರೆಸಿಡೆನ್ಷಿಯಲ್ ಏರಿಯಾದಲ್ಲಿ ದೊಡ್ಡ ಬಂಗಲೆ. ಹೊರಗೆ ಮಾಡೆಲಿಂಗ್ ಮತ್ತು ನಟನಾ ತರಬೇತಿ ಕೇಂದ್ರ ಅನ್ನುವ ಮಾಸಿದ ಬೋರ್ಡ್ ಇತ್ತು. ಒಳಗೂ ಸಹ ಕಾಲೇಜಿನ ವಾತಾವರಣವೇನು ಕಂಡು ಬರಲಿಲ್ಲ. ದೊಡ್ಡ ಹಾಲಿನಲ್ಲಿ ಒಂದಷ್ಟು ಹುಡುಗ ಹುಡುಗಿಯರು ಇದ್ದರು ಅವರಲ್ಲಿ ಕೆಲವರು ಡ್ಯಾನ್ಸ್ ಪ್ರಾಕ್ಟೀಸ್ ಮಾಡ್ತಾ ಇದ್ದರೆ, ಉಳಿದವರು ನಾಟಕದ ರೀತಿಯ ಸಂಭಾಷಣೆಗಳನ್ನು ಹೇಳಿಕೊಂಡು ಕೂತಿದ್ದರು. ನನಗೆ ಬರುವಂತೆ ಹೇಳದವನು ಮಧ್ಯದಲ್ಲಿ ಒಂದು ಆರಾಮ ಕುರ್ಚಿಯ ಮೇಲೆ ಕಾಲು ಮೇಲೆ ಕಾಲು ಹಾಕಿ ಕೊಂಡು ಸಿಗರೇಟು ಸೇದುತ್ತಾ ಕೂತಿದ್ದ.
ನನ್ನನ್ನು ನೋಡಿದವನೇ ಬಾ ಒಳಗೆ ಆಫೀಸು ರೂಮಿಗೆ ಹೋಗಿನ ಮಾತಾಡೋಣ ಅಂತ ಒಂದು ರೂಮಿನ ಒಳಗೆ ಕರೆದುಕೊಂಡು ಹೋದ. ಅಲ್ಲಿ ಒಂದು ಫಾರಂ ಕೊಟ್ಟು ನನ್ನ ಸಹಿ ಹಾಕಲು ಹೇಳಿದ. ಯಾಕೆ ಅಂತ ಕೇಳಿದ್ದಕ್ಕೆ ಇದು ಅಡ್ಮಿಶನ್ ಅರ್ಜಿ ಅಂದ ಸರಿಯೆಂದು ಸೈನ್ ಹಾಕಿದೆ. ಎದುರಿಗೆ ಕೂರಿಸಿಕೊಂಡವನು, ನೋಡು ಇದು ಮಾಡೆಲಿಂಗ್ ಕ್ಷೇತ್ರ. ಇಲ್ಲಿ ಮಡಿವಂತಿಕೆ ಉಪಯೋಗಕ್ಕೆ ಬರಲ್ಲ. ಫ್ರೀಯಾಗಿರಬೇಕು ಬೇರೆ ಯಾರ ಹತ್ತಿರವೂ ಜಾಸ್ತಿ ಮಾತಾಡಬಾರದು. ಯಾಕೆಂದರೆ ಇಲ್ಲಿರುವ ಯಾರೂ ನಿನ್ನಷ್ಟು ಚೆನ್ನಾಗಿಲ್ಲ. ಹಾಗಾಗಿ ಅವರಿಗೆ ಅಸೂಯೆ ಇರುತ್ತೆ. ನೀನು ನನ್ನ ಸ್ಪೆಶಲ್ ಸ್ಟೂಡೆಂಟ್ ಅಂತೆಲ್ಲ ಹೇಳಿ ಹೊರಗೆ ಕರೆದು ಕೊಂಡು ಬಂದು ಒಬ್ಬ ನಡುವಯಸ್ಸಿನ ಹೆಂಗಸಿಗೆ ಇವಳಿಗೆ ತರಬೇತಿ ಶುರು ಮಾಡು ಅಂದು ಹೊರಗೆ ಹೋದ. ಅವಳು ಒಂದು ಕುರ್ಚಿಯಲ್ಲಿ ಕೂತು ನನ್ನನ್ನು ಕೂರಿಸಿಕೊಂಡು ಮಾಡೆಲ್ಲುಗಳು ಹೇಗಿರಬೇಕು ಹೇಗೆ ಡ್ರೆಸ್ ಮಾಡಬೇಕು ಹೇಗೆ ಮಾತಾಡಬೇಕು ಅನ್ನುವುದನ್ನೆಲ್ಲ ಹೇಳುತ್ತಾ ಹೋದಳು. ಮೊದಲ ದಿನವಾದ್ದರಿಂದ ಯಾವ ಪ್ರಶ್ನೆಯನ್ನೂ ಕೇಳದೆ ಅವಳ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಹೋದೆ. ಸತತವಾಗಿ ಎರಡು ಗಂಟೆ ಕೊರೆದವಳು ನಿಲ್ಲಿಸಿಈಗ ನೀನು ಇಲ್ಲಿರುವ ಯಾವ ವಿಭಾಗದಲ್ಲಾದರು ಹೋಗಿ ಏನು ಬೇಕಾದರು ಕಲಿಯಬಹುದು ಅಂದಳು. ಒಂದೂ ಗೊತ್ತಾಗದೆ ಸುಮ್ಮನೆ ಸುತ್ತಲೂ ನೋಡುತ್ತ ಕೂತೆ. ಸಂಜೆ ಸುಮಾರು ಆರು ಗಂಟೆಯ ಹೊತ್ತಿಗೆ ಅವನು ಬಂದು ಬಾ, ಇವತ್ತು ಮೊದಲದಿನ ಇಷ್ಟು ಸಾಕು ನಿನ್ನನ್ನು ಮನೆಗೆ ಬಿಡುತ್ತೇನೆ ಎಂದಾಗ ನಾನು ಬೇಡ ಬಸ್ಸಲ್ಲಿ ಹೋಗುತ್ತೇನೆ ಎಂದೆ. ಆದರವನು ಇಲ್ಲ ನಿನ್ನ ಯೋಗಕ್ಷೇಮ ನನ್ನ ಜವಾಬ್ದಾರಿ, ನಿಮ್ಮ ಅಮ್ಮನಿಗೆ ಮಾತು ಕೊಟ್ಟಿದ್ದೀನಿ ಅಂತ ಒತ್ತಾಯ ಮಾಡಿ ಕಾರು ಹತ್ತಿಸಿಕೊಂಡ. ಮನೆಗೆ ಹೋಗ್ತಿದಿವಿ ಅಂದುಕೊಂಡರೆ ಕಾರು ಯಾವುದೋ ಸ್ಟಾರ್ ಹೋಟೆಲ್ಲಿಗೆ ಹೋಗಿ ನಿಲ್ತು. ಇಲ್ಲಿಗ್ಯಾಕೆ ಅಂದದ್ದಕ್ಕೆ ಕಾಫಿ ಕುಡಿದು ಹೋಗೋಣ ಅಂದ. ಅಂತಹ ಹೋಟೆಲಿನ ಒಳಗೆ ನಾನೆಂದು ಹೋಗಿರಲಿಲ್ಲ. ಒಳಗೆ ಹೋಗಿ ಫ್ಯಾಮಿಲಿ ರೂಮಿನಲ್ಲಿ ಕೂತೆವು. ಅವನು ನಾನು ಎಂದೂ ಹೆಸರೇ ಕೇಳಿರದ ಎಂತಹದೊ ತಿಂಡಿಯನ್ನು ಆರ್ಡರ ಮಾಡಿದ. ನಾನೆಷ್ಟೇ ಬೇಡವೆಂದರೂ ಅವನು ಕೇಳಲಿಲ್ಲ ಅವನು ಮಾತು ಮಾತಿಗು ನನ್ನನ್ನು ಹೊಗಳುತ್ತಲೇ ಇದ್ದ. ಕೊನೆಗೆ ರಾತ್ರಿ ಎಂಟುಗಂಟೆಗೆ ಮನೆಗೆ ಬಿಟ್ಟ. ಹೀಗೇನೇ ಸುಮಾರು ಒಂದೂವರೆ ತಿಂಗಳು ಕಳೆಯಿತು. ಅಲ್ಲಿ ಕಲಿಯುವುದು ಏನೂ ಇರಲಿಲ್ಲ ಹೋಗಿ ಕೂತು ಅವರು ಹೇಳಿದ್ದನ್ನು ಕೇಳುವುದು ಸಂಜೆ ಅವನ ಕಾರಲ್ಲಿ ವಾಪಾಸು ಬರುವುದು ಇದೇ ಆಗಿತ್ತು. ಅಮ್ಮನಿಗೆ ಹೇಳಿದರೆ ಅವರು ನಮ್ಮ ಒಳ್ಳೆಯದಕ್ಕಾಗಿ ಇಷ್ಟು ಮಾಡುವಾಗ ಹೋದರೆ ತಪ್ಪೇನಿಲ್ಲ ಹೋಗು ಅಂದುಬಿಟ್ಟಳು. ನನಗೂ ಅದರಲ್ಲಿ ತಪ್ಪೇನುಕಾಣಲಿಲ್ಲ. ಕಾರಲ್ಲಿನ ಓಡಾಟ..ದೊಡ್ಡ ಹೋಟೆಲಿನ ತಿಂಡಿ ತೀರ್ಥ, ಸದಾ ನನ್ನನ್ನೇ ಹೊಗಳುವ ಒಬ್ಬ ಗಂಡಸು ಯಾಕೋ ಅದು ಇಷ್ಟವಾಗತೊಡಗಿತ್ತು. ಅದನ್ನೇ ನೋಡಿ ಹರಯ ಅನ್ನೋದು. ಇದು ತಪ್ಪು ಅಂತ ಹೇಳಬೇಕಾದ ಅಮ್ಮ ತಾನೇ ಇದಕ್ಕೆ ಸಪೋರ್ಟ್ ಮಾಡತೊಡಗಿದ್ದಳು. ಆಮೇಲೆ ಗೊತ್ತಾಗಿದ್ದೆಂದರೆ ನಾನು ಕಾಲೇಜಿಗೆ ಹೋದ ಸಮಯದಲ್ಲಿ ಅವನು ನಮ್ಮ ಮನೆಗೆ ಬಂದು ಅಮ್ಮನನ್ನು ಬೇಟಿಯಾಗ್ತಿದ್ದ ಅತ ಅಮ್ಮನಿಗೆ ಮೋಡಿ ಮಾಡಿಬಿಟ್ಟಿದ್ದ. ಅಲ್ಲದೆ ಚೀಟಿವ್ಯವಹಾರದ ನೆಪದಲ್ಲಿ ಅವಳು ಅವನಿಂದ ಸಾವಿರಾರು ರೂಪಾಯಿಗಳನ್ನು ಪಡೆದುಬಿಟ್ಟಿದ್ದಳು. ಅವನ ಈ ತಂತ್ರವೆಲ್ಲ ನನ್ನನ್ನು ತನ್ನ ವ್ಯೂಹದೊಳಗೆ ಸೆಳೆಯುವ ತಂತ್ರವೆಂದು ಅಮ್ಮನಿಗೆ ಗೊತ್ತಿತ್ತಾ ಇಲ್ಲವಾ ನನಗಿವತ್ತಿಗೂ ಗೊತ್ತಾಗಿಲ್ಲ.
ಒಟ್ಟಿನಲ್ಲಿ ಅದು ಯಾರು ಮಾಡಿದ ಸಂಚು ಅಂತ ಹೇಳಲಿ? ಒಂದೂವರೆ ತಿಂಗಳಾದ ಮೇಲೊಂದು ದಿನ ಅವನು ನಾಳೆ ಸಂಜೆ ಮಾಡೆಲಿಂಗ್ ಜಗತ್ತಿನ ದೊಡ್ಡವರದೊಂದು ಪಾರ್ಟಿಯಿದೆ, ಅದಕ್ಕೆ ಇಬ್ಬರೂ ಹೋಗೋಣ. ನಾಳೆ ನೀನು ಕ್ಲಾಸಿಗೆ ಬರೋದು ಬೇಡ. ಮಾಡ್ರನ್ ಆಗಿ ಡ್ರೆಸ್ ಮಾಡಿಕೊಂಡು ಮನೇಲಿರು ಸಂಜೆ ಐದು ಗಂಟೆಗೆ ನಾನು ಬಂದು ಕರೆದುಕೊಂಡು ಹೋಗ್ತೀನಿ ಅಂದ. ಪಾರ್ಟಿಗಳ ಬಗ್ಗೆ ಕೇಳಿದ್ದ, ಆದರೆ ನೋಡಿರದ ನಾನು ಒಪ್ಪಿಕೊಂಡೆ. ಹೇಳಿದಂತೆ ನಾನು ಮಾರನೇ ಸಂಜೆ ಮಿನಿಸ್ಕರ್ಟ ಹಾಕಿ ರೆಡಿಯಾಗಿದ್ದೆ. ಸಂಜೆ ಬಂದವನು ಯಾವುದೋ ಒಂದು ಊರಾಚೆಯ ಫಾರ್ಮ ಹೌಸಿಗೆ ಕರೆದುಕೊಂಡು ಹೋದ. ಅಲ್ಲಿದ್ದವರೆಲ್ಲ ತುಂಬಾ ಶ್ರೀಮಂರಂತೆ ಕಾಣುತ್ತಿದ್ದರು. ಗಂಡು ಹೆಣ್ಣಗಳು ತಮಗಿಷ್ಟ ಬಂದ ಹಾಗೆ ನಡೆದುಕೊಳ್ಳುತ್ತಿದ್ದರು. ಒಂದಷ್ಟು ಜನರನ್ನು ನನಗೆ ಇವಳು ನನ್ನ ಸ್ವೀಟ್ ಫ್ರೆಂಡ್ ಅಂತ ಪರಿಚಯಿಸಿಕೊಟ್ಟ. ಕತ್ತಲಾಗುತ್ತಿದ್ದಂತೆ ಎಲ್ಲರೂ ಡ್ರಿಂಕ್ಸ್ ತೆಗೆದುಕೊಳ್ಳತೊಡಗಿದರು. ಅವನೂ ತೆಗೆದುಕೊಳ್ಳತೊಡಗಿದ . ಆಮೇಲೆ ನನ್ನನ್ನು ಒಂದು ಮೂಲೆಗೆ ಕರೆದುಕೊಂಡು ಹೋಗಿ ಒಂದು ಗ್ಲಾಸನ್ನು ಕೈಗಿಟ್ಟು ಇದು ವೈನ್ ಹುಡುಗಿಯರು ಇದನ್ನೇ ಕುಡಿಯೋದು ಅಂತ ಹೇಳಿ ಬಲವಂತವಾಗಿ ಕುಡಿಸಿದ. ಮೊದಮೊದಲು ಒಗರುಒಗರಾಗಿದ್ದ ಡ್ರಿಂಕ್ಸ್ ಒಳಗೆ ಹೋದಮೇಲೆ ಯಾಕೊ ಇನ್ನೂ ಬೇಕೆನಿಸಿಬಿಟ್ಟಿತು. ಒಂದು ತೆರನಾದ ಅಮಲು ಏರ ತೊಡಗಿತು. ಅದರ ಅಮಲಲ್ಲಿ ಅವನು ನನಗೆ ಇನ್ನಷ್ಟು ಕುಡಿಸಿಬಿಟ್ಟ. ಕೊನೆಗೆ ನಾನೆಲ್ಲಿದ್ದೇನೆ, ಏನು ಮಾಡುತ್ತಿದ್ದೆನೆಂಬ ಪರಿವೆಯೆ ಇಲ್ಲವಾಯಿತು. ಅದ್ಯಾವಾಗ ಪಾರ್ಟಿ ಮುಗಿಯಿತೋ ಗೊತ್ತಾಗಲಿಲ್ಲ. ಎಚ್ಚರವಾದಾಗ ಬೆಳಿಗ್ಗೆಯಾಗಿದ್ದು, ನಾವು ಫಾರ್ಮಹೌಸಿನ ಒಂದು ರೂಮಿನ ಮಂಚದ ಮೇಲೆ ಮಲಗಿದ್ದೆವು. ಕಣ್ಣು ಬಿಟ್ಟು ನೋಡಿಕೊಂಡರೆ ನನ್ನ ಮೈಮೇಲೆ ಒಂದೂ ಬಟ್ಟೆ ಇರಲಲ್ಲ. ಪಕ್ಕದಲಿ ಮಲಗಿದ್ದ ಅವನಿಗೂ ಬಟ್ಟೆಯಿರಲಿಲ್ಲ. ನನಗೆ ನಡೆದದ್ದೆಲ್ಲ ಅರ್ಥವಾಗಿ ಅಳ ತೊಡಗಿದೆ. ಅಳುವಿನ ಶಬ್ದ ಕೇಳಿ ಎಚ್ಚರವಾದ ಅವನು ರಿಲ್ಯಾಕ್ಸ್ ಮಾಡಿಕೊ ಇದೆಲ್ಲ ಈಗ ಸಹಜ ಮುಂದೆ ನೀನು ದೊಡ್ಡ ಮಾಡೆಲ್ ಆಗಬೇಕಾದವಳು ಇಂತಹದಕ್ಕೆಲ್ಲ ಹೊಂದಿಕೊಂಡು ಹೋಗಬೇಕು.ನಿಮ್ಮಮ್ಮನಿಗೆ ಎಲ್ಲ ಹೇಳಿದ್ದೇನೆ. ಸ್ನಾನ ಮುಗಿಸಿ ತಿಂಡಿತಿಂದು ಹೋಗೋಣ ಎಂದೆಲ್ಲ ಹೇಳಿ ನೀನು ಸ್ನಾನ ಮಾಡಿ ಫ್ರೆಶ್ ಆಗು ಅಂತ ರೂಮಿಂದ ಹೊರಗೆ ಹೋದ. ವಿಧಿಯಿಲ್ಲದೆ ರೂಮಲ್ಲೆ ಇದ್ದ ಅಟ್ಯಾಚ್ ಬಾತ್ ರೂಮಲ್ಲಿ ಸ್ನಾನ ಮಾಡಿ ರೆಡಿಯಾದೆ. ಇಬ್ಬರಿಗೂ ಅವನೇ ರೂಮಿಗೆ ತಿಂಡಿ ತಂದ. ಅಷ್ಟರಲ್ಲಿ ನನಗೆ ಸ್ವಲ್ಪ ದೈರ್ಯ ಬಂದಂತಾಗಿತ್ತು. ಸಾವರಿಸಿಕೊಂಡು ಎಲ್ಲರೂ ಇಲ್ಲೇ ಇದಾರ ಅಂದೆ. ಅವನು ನಗುತ್ತ ಇಲ್ಲ ಇಲ್ಲಿರೋದು ನಾನು ನೀನು ಮತ್ತು ಕೆಲಸದವನು ಮಾತ್ರ ಅಂದು ನೋಡು ರಾತ್ರಿ ನಿನ್ನ ನೋಡಿದ ಒಂದು ಕಂಪನಿಯ ಮ್ಯಾನೇಜರ್ ಹತ್ತು ಸಾವಿರ ಕೊಟ್ಟು ಅವರ ಜಾಹಿರಾತಿಗೆ ನಿನ್ನನ್ನು ಬುಕ್ ಮಾಡಿದ್ದಾರೆ, ಇನ್ನೊಬ್ಬರು ನಾಳೆ ನಿಮ್ಮ ಮನೆಗೆ ಬಂದು ಅಡ್ವಾನ್ಸ್ ಕೊಡೋದಾಗಿ ಹೇಳಿದ್ದಾರೆ ಅಂದು ಹತ್ತು ಸಾವಿರ ರೂಪಾಯಿಯ ಕಟ್ಟೊಂದನ್ನು ನನ್ನ ಕೈಗಿತ್ತ. ನನಗೋ ಆಶ್ವರ್ಯವಾಗಿ ಬಿಟ್ಟಿತು. ಅಷ್ಟು ದುಡ್ಡು ಕೊಟ್ಟಿದ್ದಾರೆಂದರೆ ನನಗಿನ್ನು ಜಾಹಿರಾತು ಲೋಕದಲ್ಲಿ ತುಂಬಾ ಕೆಲಸ ಸಿಗುತ್ತದೆ ಅಂದುಕೊಂಡು ರಾತ್ರಿಯದನ್ನೆಲ್ಲ ಮರೆತು ಬಿಟ್ಟೆ. ದುಡ್ಡಿನ ಮೋಹ ನನ್ನ ಶೀಲದ ಮೇಲಿನ ಕಾಳಜಿಯನ್ನೂ ತೊರೆಸಿಬಿಟ್ಟಿತು. ಇನ್ನೇನು ಹೊರಡುವ ಅನ್ನುವಷ್ಟರಲ್ಲಿ ಅವನು ಊಟ ಮಾಡಿ ಮದ್ಯಾಹ್ನ ಹೋಗೋಣ ಇರು ಅಂದು ನನ್ನನ್ನು ಮಂಚದಲ್ಲಿ ಕೂರಿ ತಾನೂ ಪಕ್ಕ ಬಂದು ಕೂತ. ಮತ್ತೊಮ್ಮೆ ನನ್ನ ಎಚ್ಚರದಲ್ಲಿ ಅನುಭವಿಸಿದ. ಎಲ್ಲ ಮುಗಿದ ಮೇಲೆ ಯಾಕೆ ರಾತ್ರಿ ಸಾಕಾಗಲಿಲ್ಲವೇ ಅಂದೆ. ರಾತ್ರಿ ನಿನ್ನ ಜೊತೆ ನಾನೆಲ್ಲಿ ಮಲಗಿದ್ದೆ. ಈಗ ನಿನ್ನನ್ನು ಬುಕ್ ಮಾಡಿರೋ ಅವರಿಬ್ಬರು ಮಲಗಿದ್ದರು ಅಂದ. ಒಂದು ಕ್ಷಣ ನಾನು ಶಾಕ್ ಆಗಿ ಬಿಟ್ಟೆ ಮಾತಾಗಲಿ ಅಳುವಾಗಲಿ ಬರಲಿಲ್ಲ. ನಾನು ಅದರಿಂದ ಸುದಾರಿಸಿಕೊಳ್ಳುವಷ್ಟರಲ್ಲಿ ನನ್ನ ಕೈ ಹಿಡಿದು ನೋಡು ಇದೆಲ್ಲ ಮೊದಮೊದಲು ಸಹಜ ಒಂದು ಸಾರಿ ನಿನಗೆ ಹೆಸರು ಬಂದುಬಿಟ್ಟರೆ ಆಮೇಲಿವರೆಲ್ಲ ನಿನ್ನ ಕಾಲ ಬಳಿ ಬಿದ್ದಿರುತ್ತಾರೆ. ಹೊಂದಿಕೊಂಡು ಹೋಗುಅಂದ. ಏನೋ ನೀವೊಬ್ಬರಾದರೆ ಪರವಾಗಿಲ್ಲ, ಆದರೆ ಪರಿಚಯವಿಲ್ಲದವರ ಜೊತೆಯಲ್ಲೆಲ್ಲ ಹೀಗೆ ಮಾಡೋದು ತಪ್ಪಲ್ವ ಅಂದೆ. ಅದಕ್ಕವನು ಇದು ಮೊದಲ ಸಲ ಹಾಗನ್ನಿಸುತ್ತೆ. ಮಾಡೆಲಿಂಗಿನಲ್ಲಿ ಹೆಸರು ಮಾಡಿದ ಮೇಲೆ ಸಿನಿಮಾ ಲೋಕಕ್ಕೂ ನೀನು ಹೋಗಬೇಡವಾ ಎಂದೆಲ್ಲ ಸಮಾದಾನ ಪಡಿಸಿದ. ಬಹುಶ: ನನ್ನೊಳಗೂ ಜನಪ್ರಿಯತೆಯ ಹಣದ ಮೋಹ ಇತ್ತು ಅನಿಸುತ್ತೆ. ಹು ಅಂತ ಸುಮ್ಮನಾಗಿಬಿಟ್ಟೆ. ಮದ್ಯಾಹ್ನ ವಾಪಾಸು ಹೋಗುತ್ತ ಕಾರಲ್ಲಿ ನಿನ್ನ ಅಮ್ಮನಿಗೆ ಮೊದಲೆ ನಾಳೆ ಬರುತ್ತೇವೆ ಕೆಲವು ಮೀಟಿಂಗುಗಳಿವೆ ಅಂತ ಹೇಳಿದ್ದೆ. ಆದರೆ ರಾತ್ರಿಯ ವಿಚಾರ ಏನೂ ಹೇಳಿರಲಿಲ್ಲ. ನೀನೂ ಹೇಳಬೇಡ ಎಂದ. ನಾನು ಸರಿ ಎಂದು ಸುಮ್ಮನಾಗಿಬಿಟ್ಟೆ. ಅಮ್ಮನಿಗೆ ಆ ಹತ್ತು ಸಾವಿರ ರೂಪಾಯಿ ನೋಡಿ ಖುಶಿಯೋ ಖುಶಿ. ಮತ್ತೆ ಮಾರನೇ ದಿನದಿಂದ ಮಾಮೂಲಿಯಾದ ದಿನಚರಿ ಶುರುವಾಯಿತು. ವಾರಕ್ಕೆ ಒಂದೆರಡು ದಿನವಾದರು ಜಾಹಿರಾತು ಕಂಪನಿಯ ಮಾಲೀಕರ ಜೊತೆ ಮೀಟಿಂಗ್ ಇದೆ ಅನ್ನುತ್ತ ಅಮ್ಮನಿಗೆ ಹೇಳಿ ನನ್ನನ್ನು ದೊಡ್ಡ ದೊಡ್ಡ ಸ್ಟಾರ್ ಹೋಟೆಲುಗಳಿಗೆ ಕರೆದೊಯ್ಯತೊಡಗಿದ. ನಾನು ಅವನು ಹೇಳಿದವರ ಜೊತೆ ರಾತ್ರಿ ಕಳೆದು ಬೆಳಿಗ್ಗೆ ಅವನು ಅಡ್ವಾನ್ಸ್ ಎಂದು ಕೊಡುತ್ತಿದ್ದ ದುಡ್ಡು ತಂದು ಅಮ್ಮನಿಗೆ ಕೊಡುತ್ತಿದ್ದೆ. ಒಂದೆರಡು ತಿಂಗಳಲ್ಲಿ ನನಗೆ ಇದು ಜಾಹಿರಾತಿನ ಕೆಲಸವೂ ಅಲ್ಲ, ಅಡ್ವಾನ್ಸು ಅಲ್ಲ ಎಂಬುದು ಗೊತ್ತಾಗಿ ಹೋಯಿತು. ಅವನು ನನ್ನನ್ನು ನಗರದ ಹೈಟೆಕ್ ಕಾಲ್ ಗರ್ಲ ಮಾಡಿಬಿಟ್ಟಿದ್ದ. ಅಷ್ಟು ಹೊತ್ತಿಗಾಗಲೆ ನನ್ನ ಬಳಿ ಬಂದ ಕೆಲವರ ವಿಳಾಸ ಮತ್ತು ಪೋನ್ ನಂಬರುಗಳನ್ನು ನಾನು ಪಡೆದಿದ್ದೆ. ಆರೋಗ್ಯ ಸರಿಯಿಲ್ಲವೆಂದು ಹೇಳಿ ಒಂದು ವಾರ ಮನೆಯಿಂದ ಹೊರಗೇ ಹೊಗದೆ ಒಬ್ಬಳೇ ರೂಮಲ್ಲಿ ಕೂತು ಒಂದು ಗಟ್ಟಿಯಾದ ನಿರ್ದಾರಕ್ಕೆ ಬಂದಿದ್ದೆ. ಸದ್ಯ ಅಮ್ಮನಿಗೆ ಏನನ್ನೂ ಹೇಳಬಾರದೆಂದು ತೀರ್ಮಾನಿಸಿಬಿಟ್ಟೆ.
ವಾರದ ನಂತರ ಹುಡುಕಿಬಂದವನಿಗೆ ನಯವಾಗಿಯೇ ಇನ್ನು ಮುಂದೆ ನಾನು ಬರುವುದಿಲ್ಲ, ಕರೆಯಬೇಡಿ ಅಂದು ಬಿಟ್ಟೆ. ಅವನು ಪರಿಪರಿಯಾಗಿ ಕೇಳಿಕೊಂಡ, ನಾನು ಒಪ್ಪಲಿಲ್ಲ. ಅಮ್ಮನ ಹತ್ತಿರ ಹೇಳಿಸಿದರು ನಾನು ಒಪ್ಪದೇ ಹೋದಾಗ ರೌಡಿಗಳಿಂದ ಹೊಡೆಸುತ್ತೇನೆಂದೆಲ್ಲ ಬೆದರಿಕೆ ಹಾಕಿ ಹೋದ. ಅವತ್ತು ಸಂಜೆ ಅಮ್ಮನನ್ನು ಕೂರಿಸಿಕೊಂಡು ನಾನು ಇನ್ನು ಮೇಲೆ ಯಾವನ ತರಬೇತಿ ರೆಕಮೆಂಡೇಶನ್ನನ್ನು ಕಾಯುವುದಿಲ್ಲ. ಈಗ ದಾರಿಗೊತ್ತಾಗಿದೆ. ಇಷ್ಟು ದಿನ ಹೇಗೆ ಆದಾಯ ಬರುತ್ತಿತ್ತೋ ಹಾಗೆಯೇ ಇನ್ನು ಮುಂದೆಯೂ ಬರುತ್ತದೆ. ನನ್ನನ್ನು ಫ್ರೀಯಾಗಿಬಿಡು. ಅಂದೆ. ಅವಳಿಗೆ ಎಲ್ಲವು ಗೊತ್ತಿತ್ತೇ? ಇವತ್ತಿಗು ನನಗೆ ತಿಳಿದಿಲ್ಲ. ಏನೋ ನಿನಗಿಷ್ಟಬಂದ ಹಾಗೆ ಮಾಡು ಅಂದು ಸುಮ್ಮನಾದಳು. ಯಥಾ ಪ್ರಕಾರ ನಾನು ಕಾಲೇಜಿಗೆ ಹೋಗತೊಡಗಿದೆ. ಮುಂಚಿನಂತೆ ಓದಿನಲ್ಲಿ ಆಸಕ್ತಿ ಉಳಿದಿರಲಿಲ್ಲ. ನನಗೆ ಈಗಾಗಲೆ ಗೊತ್ತಿದ್ದ ಹಳೆಯ ಸಂಪರ್ಕಗಳನ್ನು ಬಳಸಿಕೊಂಡು ಸಾಕಷ್ಟು ಜನರ ಪರಿಚಯ ಮಾಡಿಕೊಂಡೆ. ಶನಿವಾರ ಮತ್ತು ಬಾನುವಾರದಂದು ಹೊರಗೆ ಹೋಗುತ್ತಿದ್ದೆ. ಬೆಂಗಳೂರಿನಾಚೆಯ ಯಾವುದಾದರು ಊರುಗಳಲ್ಲಿ ಕರೆದುಕೊಂಡು ಹೋಗುವ ಹೈ ಫ್ರೋಫೈಲ್ ಗಿರಾಕಿಗಳಿಗೆ ಮಾತ್ರ ನಾನು ಸಿಗುತ್ತಿದ್ದೆ. ನನ್ನ ಮನೆಯ ವಿಳಾಸವಾಗಲಿ ಕಾಲೇಜಿನ ಹೆಸರಾಗಲಿ ಯಾರಿಗೂ ಹೇಳುತ್ತಿರಲಿಲ್ಲ.
ಹೀಗೆ ಆ ಕೆಲಸ ಮುಂದುವರಸಿದೆ. ಅದೇಗೊ ಪಾಸಾಗುತ್ತ ಡಿಗ್ರಿಯನ್ನೂ ಮುಗಿಸಿದೆ. ಆಮೇಲಾಮೇಲೆ ಬಹಳಷ್ಟು ರಾಜಕಾರಣಿಗಳ ಪರಿಚಯವಾಯಿತು. ಅವರೊಂದಿಗೆ ದೆಹಲಿ,ಮುಂಬೈಗಳಿಗೆಲ್ಲ ಹೋಗಿ ಬಂದೆ.
ಒಂದು ದಿನವೂ ಅಮ್ಮ ನೀನು ಏನು ಮಾಡುತ್ತೀಯಾ, ಎಲ್ಲಿಗೆ ಹೋಗುತ್ತೀಯಾ ಅಂತ ಕೇಳಲಿಲ್ಲ. ಅಪ್ಪ ಅಂತು ಬಿಡಿ ಮುಂಚಿನಿಂದಲು ಏನನ್ನು ಕೇಳುತ್ತಿರಲಿಲ್ಲ.ತಮ್ಮ ತಂಗಿಯರು ಅವರ ಪಾಡಿಗವರು ಬೆಳೆಯುತ್ತ ಓದುತ್ತ ಇದ್ದರು. ನಂಬುತ್ತೀರೋ ಬಿಡುತ್ತೀರೋ ನನಗೆ ಮುವತ್ತು ವರ್ಷ ತುಂಬುವವರೆಗು ಹೈಟೆಕ್ ಕಾಲ್ ಗರ್ಲ ಕೆಲಸ ಮಾಡಿದೆ. ಇಬ್ಬರು ತಂಗಿಯರ ಮದುವೆಯಾಯಿತು. ತಮ್ಮ ಬಿ.ಇ. ಮುಗಿಸಿ ಅಮೇರಿಕಾ ಹೊರಟು ಹೋದ. ಅಪ್ಪ ಹಾರ್ಟ ಅಟ್ಯಾಕ್ ಆಗಿ ಸತ್ತು ಹೋದ. ಅಮ್ಮ ಒಬ್ಬಳಿದ್ದಾಳೆ ಮನೆಯಲ್ಲಿ ಒಂಟಿಯಾಗಿ. ನಾನೀಗ ಅವಳ ಜೊತೆಯಲ್ಲಿಲ್ಲ. ಆರು ವರ್ಷಗಳ ಹಿಂದೆ ಪರಿಚಯವಾದ ಉದ್ಯಮಿಯೊಬ್ಬ ನೀನು ಇದನ್ನೆಲ್ಲ ಬಿಟ್ಟು ನನಗೆ ನಿಷ್ಠಳಾಗಿ ಇರುತ್ತೀನಿ ಅಂದರೆ ನಾನು ನಿನ್ನ ಸಾಕುತ್ತೇನೆ ಅಂದ. ಹಾಗಿದ್ದರೆ ಮದುವೆಯಾಗಿ ಎರಡನೆ ಹೆಂಡತಿಯನ್ನಾಗಿ ಮಾಡಿಕೊ ಅಂದೆ. ಆದರವನು ಸಮಾಜದ ಎದುರು ಮದುವೆಯಾಗುವುದು ಆಗೋದು ಕಷ್ಟ, ಆದರೆ ನಿನ್ನ ಹೆಂಡತಿಗಿಂತ ಹೆಚ್ಚಾಗಿ ನೋಡಿಕೊಳ್ತೀನಿ ಅಂದ. ಕೊನೆಗವನ ಮಾತಿಗೆ ಒಪ್ಪಿ ಕಸುಬಿಗೆ ಗುಡ್‍ಬೈ ಹೇಳಿಬಿಟ್ಟೆ. ಒಂದೊಳ್ಳೆಯ ರೆಸಿಡೆನ್ಷಿಯಲ್ ಏರಿಯಾದಲ್ಲಿ ನನ್ನ ಹೆಸರಲ್ಲೇ ಮನೆ ತೆಗೆದುಕೊಟ್ಟಿದ್ದಾನೆ. ಸಣ್ಣದೊಂದು ತೋಟ ಮಾಡಿ ಫಾರ್ಮ ಹೌಸ್ ಕಟ್ಟಿಸಿದ್ದಾನೆ. ನನ್ನ ಹೆಸರಲ್ಲಿಯೂ ಸಾಕಷ್ಟು ಆಸ್ತಿ ಮಾಡಿಟ್ಟಿದ್ದಾನೆ. ದಿನಕ್ಕೊಮ್ಮೆಯಾದರು ಬರುತ್ತಾನೆ. ವಾರಕ್ಕೆರಡು ದಿನ ನನ್ನ ಜೊತೆಯಲ್ಲಿಯೇ ಇರುತ್ತಾನೆ. ಈಗ ಅವರ ಕುಟುಂಬದವರೆಲ್ಲರಿಗೂ ನಮ್ಮ ವಿಷಯ ಗೊತ್ತಾಗಿದೆ. ಯಾರೂ ಗಲಾಟೆ ಮಾಡಿಲ್ಲ. ಒಂದೊಂದು ಸಾರಿ ಬರುವಾಗ ಅವನ ಹತ್ತು ವರ್ಷದ ಮಗನನ್ನು ಕರೆದುಕೊಂಡು ಬರುತ್ತಾನೆ. ಅದು ಆಂಟಿ ಅಂತ ಮಾತಾಡಿಸುತ್ತೆ. ಸಮಾಜದ ದೃಷ್ಟಿಯಲ್ಲಿ ಮಾತ್ರ ನಾನು ಅವನ ಇಟ್ಟುಕೊಂಡವಳು ಅನ್ನುವುದೇ ಖಾಯಂ ಬಿರುದು. ನನಗೇನೂ ಬೇಸರವಿಲ್ಲ. ಒಂದೇ ಕೊರಗೆಂದರೆ ನನಗೊಂದು ಮಗುವಿಲ್ಲವೆಂಬುದು ಈ ವಿಷಯದಲ್ಲಿ ಅವನ ಜೊತೆ ಜಗಳವಾಡಿದ್ದೇನೆ. ಆದರವನು ಬೇಡ ಅನ್ನುತ್ತಾನೆ. ಯಾಕೆ ಅಂತ ಹೇಳಲ್ಲ. ಯಾಕೊ ನನಗಾಗಿ ಇಷ್ಟೆಲ್ಲ ಮಾಡಿದ ಅವನ ಮಾತು ಮೀರಲು ನನಗಿಷ್ಟವಿಲ್ಲ. ಹಾಗಾಗಿ ಮುಂದಿನ ವಾರದಲ್ಲಿ ಒಂದು ಅನಾಥ ಮಗುವನ್ನು ತಂದು ಸಾಕಬೇಕು ಅಂತ ಅಂದುಕೊಂಡು, ಈ ವಿಚಾರವಾಗಿ ನನ್ನ ಲಾಯರ್ ಬಳಿ ಮಾತಾಡಿದ್ದೇನೆ. ಅನಾಥ ಮಗು ಸಾಕೋದಿಕ್ಕೆ ಅವನೂ ಒಪ್ಪಿದಾನೆ.
ಮನೆಗೆ ಬಂದಿರಿ, ಎಲ್ಲ ಹೇಳಿದೆ. ದಯವಿಟ್ಟು ನನ್ನ ಹೆಸರನ್ನಾಗಲಿ ಅವರ ಹೆಸರನ್ನಾಗಲಿ ಎಲ್ಲೂ ಪ್ರಸ್ತಾಪಿಸ ಬೇಡಿ. ನೀವು ಸಾಹಿತಿಗಳು, ಪತ್ರಕರ್ತರು, ಅನಾಥಾಶ್ರಮದಲ್ಲಿ ಮಗು ದತ್ತು ತೆಗೆದುಕೊಳ್ಳಲು ಬಹಳಷ್ಟು ಕಾನೂನಿನ ಅಡಚಣೆಗಳಿರುತ್ತವೆ ಅನ್ನೋದು ಗೊತ್ತಲ್ಲ. ಅದಕ್ಕೆ ಯಾವುದಾದರು ಸರಕಾರಿ ಆಸ್ಪತ್ರೆಯಲ್ಲಿ ಹುಟ್ಟಿದ ಮಗುವನ್ನು ಬೇಡ ಅಂದು ಬಿಟ್ಟು ಹೋಗುತ್ತಾರಂತಲ್ಲ, ಅಂತಹ ಮಗುವೊಂದನ್ನು ಕೊಡಿಸೋಕೆ ಸಹಾಯ ಮಾಡ್ತೀರಾ,ಸರ್. ನಿಮಗೆ ಆಸ್ಪತ್ರೆಗಳಲ್ಲಿ ಯಾರಾದರು ಪರಿಚಯಸ್ಥರು ಇದ್ದರೆ ದಯವಿಟ್ಟು ಇದೊಂದು ಸಹಾಯ ಮಾಡಿ.
ಅವಳು ಹೇಳುತ್ತಿರುವುದು ಕಾನೂನಿನ ಪ್ರಕಾರ ತಪ್ಪಾದರು ಸಹಾಯ ಮಾಡುವುದರಲ್ಲಿ ಒಂದು ಮಗುವಿನ ಭವಿಷ್ಯ ಇದೆಯೆನಿಸಿ, ಅವಳ ಒಪ್ಪಿಗೆ ಪಡೆದು ಅವಳ ಮನೆಯ ಪೋನಿಂದ ನನಗೆ ಪರಿಚಯವಿದ್ದ ಒಂದಿಬ್ಬರು ಸರಕಾರಿ ಆಸ್ಪತ್ರೆಯ ವೈದ್ಯರಿಗೆ ಮಗು ಬೇಕಿರುವ ವಿಚಾರ ತಿಳಿಸಿ, ಸಿಕ್ಕ ತಕ್ಷಣ ನನಗೆ ತಿಳಿಸಬೇಕೆಂದು ಕೋರಿಕೊಂಡೆ.
ಮೇಡಂ, ಹೇಳಿದ್ದೇನೆ. ಅಂತಹದೊಂದು ಮಗು ದೊರೆತ ತಕ್ಷಣ ನಾನು ನಿಮಗೆ ಪೋನ್ ಮಾಡಿ ತಿಳಿಸುತ್ತೇನೆ. ನಿಮ್ಮ ಕೆಲಸ ಆದಂತೆ ಅಂದೆ. ನನ್ನ ಮಾತು ಕೇಳಿದಾಕ್ಷಣ ಅವಳ ಮುಖದಲ್ಲಿ ಸಂತೋಷ ತುಂಬಿ ತುಳುಕ ತೊಡಗಿತ್ತು. ಅದುವರೆಗು ಕೇವಲ ಒಬ್ಬ ಹೆಣ್ಣಾಗಿ ಕಾಣುತ್ತಿದ್ದ ಅವಳ ಮುಖದಲ್ಲಿ ತಾಯಿಯೊಬ್ಬಳು ಕಾಣತೊಡಗಿದಳು.
ಅಲ್ಲಿಂದ ಹೊರಡುವಾಗ ಅವಳಿಗೆ ಎಂತಹ ಮಗುಬೇಕು ಗಂಡೊ ಹೆಣ್ಣೊ ಎಂದೆ. ಅದಕ್ಕವಳು ಯಾವುದಾರು ಸರಿ ಎಂದು ಮಗು ಸಿಕ್ಕಿಯೇ ಬಿಟ್ಟಿತೇನೋ ಎಂಬಂತೆ ನಕ್ಕ ನಗುವಿದೆಯಲ್ಲ ಅದು ದೇವತೆಯೊಬ್ಬಳ ನಗುವಾಗಿತ್ತು.
(ಅಸಹಾಯಕ ಆತ್ಮಗಳು ಸರಣಿಯ ಕೊನೆಯ ಲೇಖನವಿದು. ಲೇಖಕರು ಮತ್ತೆ ಈ ಸರಣಿಯನ್ನು ಪ್ರಾರಂಭಿಸಲೂಬಹುದು! - ಸಂ)