|
ಗುಳಕಮಲೆ |
Dr Ashok K R
ನಗರಗಳು ‘ಅಭಿವೃದ್ಧಿ’ಯಾಗುತ್ತ ಜನವಸತಿ ಹೆಚ್ಚುತ್ತಿದ್ದಂತೆ ಕ್ರಿಮಿ ಕೀಟ ಪ್ರಾಣಿ ಪಕ್ಷಿಗಳೆಲ್ಲವೂ ವಿಧಿಯಿಲ್ಲದೆ ಊರ ಹೊರಗೆ ಸಾಗುತ್ತವೆ. ಊರು ಊರ ಹೊರಗೂ ಹಬ್ಬಲಾರಂಭಿಸಿದಾಗ ನಶಿಸಿಹೋಗಲೇಬೇಕಾದ ಅನಿವಾರ್ಯಕ್ಕೆ ಸಿಲುಕುತ್ತವೆ. ಕೆರೆಗಳ ನಗರಿ ಬೆಂಗಳೂರು ಕೂಡ ಇದಕ್ಕೆ ಹೊರತಲ್ಲ. ಬಹಳಷ್ಟು ಕೆರೆಗಳನ್ನೀಗಾಗಲೇ ಮುಚ್ಚಿ ಹಾಕಲಾಗಿದೆ, ಅಧಿಕೃತವಾಗಿ ಮತ್ತು ಅನಧಿಕೃತವಾಗಿ! ಇರುವ ಕೆಲವು ಕೆರೆಗಳನ್ನು ಸಂರಕ್ಷಿಸುವುದಕ್ಕೆ ಈಗೀಗ ಪ್ರಾಮುಖ್ಯತೆ ಸಿಗುತ್ತಿದೆಯಾದರೂ ಆ ಸಂರಕ್ಷಣೆ ಕೆರೆಯ ಮೂಲ ಉದ್ದೇಶಕ್ಕೆ ಧಕ್ಕೆ ಕೊಡುವ ರೀತಿಯಲ್ಲಿ ಸಾಗುತ್ತಿದೆ. ಕೆರೆಗಳೆಂದರೆ ನಗರವಾಸಿಗಳು ವಾಕಿಂಗ್ ಮಾಡಲಿರುವ ಜಾಗವೆಂಬಂತೆ ಕೆರೆಯಂಚಿನಲ್ಲಿ ಬೇಲಿ ಸುತ್ತಿ ಪ್ರಾಣಿ ಪಕ್ಷಿಗಳ ಓಡಾಟಕ್ಕೆ ಅಡ್ಡಿಯುಂಟು ಮಾಡಿದ್ದೇವೆ. ಜನರ ನಿರಂತರ ಓಡಾಟ ಮತ್ತು ಸುತ್ತಲಿನ ರಸ್ತೆಯ ಗೌಜು ಗದ್ದಲಗಳ ನಡುವೆ ಊರೊಳಗಿನ ಬಹುತೇಕ ಕೆರೆಗಳಲ್ಲೀಗ ಒಂದಿಷ್ಟು ಗಲೀಜು ನೀರು, ಅಲ್ಲೊಂದಿಲ್ಲೊಂದು ಪಕ್ಷಿಗಳಿವೆ ಅಷ್ಟೇ. ಕಮರ್ಷಿಯಲ್ ಅಲ್ಲದ, ಬೇಲಿಗಳಿಲ್ಲದ ಕೆರೆಯನ್ನು ನೋಡಲು ನಗರದಿಂದಾಚೆಗೇ ಹೋಗಬೇಕು. ಅಂತಹುದೊಂದು ಕೆರೆ ಬೆಂಗಳೂರು ಹೊರವಲಯದಿಂದ ಅರ್ಧ ಘಂಟೆ ಹಾದಿಯ ಗುಳಕಮಲೆ ಕೆರೆ.
ಬೆಂಗಳೂರಿನಿಂದ ಕನಕಪುರ ರಸ್ತೆಯಲ್ಲಿ ಸಾಗಿದರೆ ಕಗ್ಗಲಿಪುರ ಸಿಗುತ್ತದೆ. ಕಗ್ಗಲಿಪುರದೊಳಗೆ ಎಡಗಡೆಗೆ ಬನ್ನೇರುಘಟ್ಟಕ್ಕೆ ಸಾಗುವ ರಸ್ತೆ ಹಿಡಿದು ಎರಡು ಮೂರು ಕಿಮಿ ಕ್ರಮಿಸಿದರೆ ಗುಳಕಮಲೆ ಊರು ಸಿಗುತ್ತದೆ. ಊರು ದಾಟಿದ ನಂತರ ರಸ್ತೆ ಕವಲಾಗಿ ಒಡೆದು ಬಲಗಡೆಯದು ಬನ್ನೇರುಘಟ್ಟಕ್ಕೆ ಹೋಗುತ್ತದೆ. ಎಡಗಡೆಯ ತೊಟ್ಟಿಕಲ್ಲಿಗೆ ಸಾಗುವ ರಸ್ತೆಯಲ್ಲಿ ಒಂದು ಕಿಮಿ ಸವೆಸಿದರೆ ಗುಳಕಮಲೆ ಕೆರೆಯ ಏರಿಯ ದರ್ಶನವಾಗುತ್ತದೆ. ಬೇಸಿಗೆಯಲ್ಲಿ ಕೆರೆಯಲ್ಲಿ ಹೆಚ್ಚು ನೀರಿರುವುದಿಲ್ಲವಾದರೂ ಇರುವ ಸ್ವಲ್ಪ ನೀರಿನಲ್ಲಿ ತರತರದ ಪಕ್ಷಿಸಂಕುಲಗಳನ್ನು ವೀಕ್ಷಿಸಬಹುದು. ಸೂರ್ಯೋದಯವನ್ನು ವೀಕ್ಷಿಸಲೂ ತಕ್ಕ ಸ್ಥಳ ಈ ಗುಳಕಮಲೆ. ನಾನು ಹೋದ ದಿವಸ ಮೋಡವಿದ್ದ ಕಾರಣ ಸೂರ್ಯೋದಯ ಕಾಣಿಸಲಿಲ್ಲ.
|
ಬಿಳಿ ಮಿಂಚುಳ್ಳಿ |
ಕೆರೆಗಳಲ್ಲಿ ಸಾಧಾರಣವಾಗಿ ಕಾಣಸಿಗುವ ಬೆಳ್ಳಕ್ಕಿ(ಎಗ್ರೆಟ್), ಬಿಳಿ ಮತ್ತು ಹಳದಿ ಕುಂಡೆಕುಸ್ಕ (ವ್ಯಾಗ್ ಟೈಲ್), ತೇನೆ ಹಕ್ಕಿ (ರೆಡ್ ವ್ಯಾಟಲ್ಟ್ ಲ್ಯಾಪ್ ವಿಂಗ್), ನೆಲಗುಬ್ಬಿ (ಕ್ರೆಸ್ಟೆಡ್ ಲಾರ್ಕ್) , ಇಂಡಿಯನ್ ಪಾಂಡ್ ಹೆರಾನ್, ಪಿಕಳಾರ (ಬುಲ್ ಬುಲ್), ಕರಿ ಹೂಗುಬ್ಬಿ (ಪರ್ಪಲ್ ಸನ್ ಬರ್ಡ್), ಕೆಮ್ಮಂಡೆ ಗಣಿಗಾರ್ಲ ಹಕ್ಕಿ (ಗ್ರೀನ್ ಬೀ ಈಟರ್) ಪಕ್ಷಿಗಳನ್ನು ಇಲ್ಲೂ ಕಾಣಬಹುದು. ನಗರದ ಸುತ್ತಮುತ್ತ ಒಂದಷ್ಟು ಅಪರೂಪವಾಗಿರುವ ಬಿಳಿ ಮಿಂಚುಳ್ಳಿ (ಪೈಡ್ ಕಿಂಗ್ ಫಿಷರ್) ಪಕ್ಷಿಗಳಿಲ್ಲಿ ಯಥೇಚ್ಛವಾಗಿವೆ. ಬಣ್ಣಬಣ್ಣದ ರೆಕ್ಕೆಯ ಕಾಮನ್ ಕಿಂಗ್ ಫಿಷರ್ ವಿದ್ಯುತ್ ತಂತಿಯ ಮೇಲೆ ಎತ್ತರದ ಮರದ ಮೇಲೆ ಕುಳಿತು ಬೇಟೆಗೆ ಹೊಂಚುಹಾಕಿದರೆ ಕಪ್ಪು ಬಿಳುಪು ಬಣ್ಣದ ಬಿಳಿ ಮಿಂಚುಳ್ಳಿ ಕೆರೆಯ ಮೇಲೆ ಒಂದೇ ಜಾಗದಲ್ಲಿ ಪಟ ಪಟ ರೆಕ್ಕೆ ಬಡಿಯುತ್ತ ಕೆಳಗಿನ ನೀರಿನಲ್ಲಿ ಈಜಾಡುವ ಪುಟ್ಟ ಪುಟ್ಟ ಮೀನುಗಳನ್ನು ಗಮನಿಸುತ್ತ, ಒಂದ್ಯಾವುದೋ ಮೀನನ್ನು ಗುರಿಯಾಗಿಸಿಕೊಂಡು ಬಾಣದಂತೆ ನೀರಿನೊಳಗೆ ಮುಳುಗಿ ಮೀನಿನೊಡನೆ ಮೇಲೇಳುವ, ಕೆಲವೊಮ್ಮೆ ಬರಿ ಬಾಯಿಯಲ್ಲಿ ಹೊರಬರುತ್ತದೆ. ಬಿಳಿ ಮಿಂಚುಳ್ಳಿಯ ಬೇಟೆಯ ಚಾತುರ್ಯವನ್ನು ಕಂಡೇ ಅನುಭವಿಸಬೇಕು.
|
ಮೀನು ಗುಟುರ |
ಕಾವೇರಿ ನದಿ ತೀರದ ರಂಗನತಿಟ್ಟಿನಲ್ಲಿ ಯಥೇಚ್ಛವಾಗಿ ಕಂಡು ಬರುವ ವಲಸೆ ಹಕ್ಕಿ ಮೀನುಗುಟುರ (ರಿವರ್ ಟರ್ನ್). ರಿವರ್ ಟರ್ನ್ ಪಕ್ಷಿಯನ್ನು ಎರಡು ವರುಷದ ಫೋಟೋಗ್ರಫಿ ಅಭ್ಯಾಸದಲ್ಲಿ ಕಂಡಿರಲಿಲ್ಲ. ಗುಬ್ಬಿ ತಾಲ್ಲೂಕಿನ ಕೆರೆಯೊಂದರ ಬಳಿ ಓರಿಯೆಂಟಲ್ ಟರ್ನ್ ನೋಡಿದ್ದೆ. ಈ ಬಾರಿ ರಿವರ್ ಟರ್ನ್ ವೀಕ್ಷಿಸಲು ರಂಗನತಿಟ್ಟಿಗೆ ಹೋಗಬೇಕೆಂದುಕೊಂಡಿದ್ದೆ. ಗುಳಕಮಲೆಯಲ್ಲಿಯೇ ರಿವರ್ ಟರ್ನಿನ ದರುಶನವಾಯಿತು! ಎರಡೇ ಎರಡು ರಿವರ್ ಟರ್ನುಗಳಿದ್ದವು. ಇಡೀ ಕೆರೆಯನ್ನು ಸತತವಾಗಿ ಸುತ್ತುತ್ತ ಸರ್ವೆ ಮಾಡುತ್ತಲೇ ಇರುತ್ತವೆ ಈ ಪಕ್ಷಿಗಳು. ಕೊನೆಗೊಂದೆಡೆ ಸ್ಥಗಿತವಾಗಿ ಸುಯ್ಯನೆ ನೀರಿಗೆ ಬಿದ್ದು ಬೇಟೆಯೊಡನೆ ಹೊರಬರುತ್ತವೆ.
|
ಬಾಯ್ಕಳಕ |
ಗುಳಕಮಲೆ ಕೆರೆಗೆ ಈ ಬಾರಿ ದೊಡ್ಡ ಗುಂಪಿನಲ್ಲಿ ಬಂದಿದ್ದ ಗೆಳೆಯರು ಬಾಯ್ಕಳಕ (ಏಷಿಯನ್ ಓಪನ್ ಬಿಲ್ ಸ್ಟಾರ್ಕ್). ಬೂದು ಬಣ್ಣದ, ತೆರೆದ ಕೊಕ್ಕಿನ ಈ ಪಕ್ಷಿಗಳು ದಾಸ ಕೊಕ್ಕರೆ (ಪೈಯಿಂಟೆಡ್ ಸ್ಟಾರ್ಕ್)ಯಷ್ಟು ಆಕರ್ಷಕವಲ್ಲ. ಕ್ಯಾಮೆರಾ ಭಾಷೆಯಲ್ಲಿ ಹೇಳಬೇಕೆಂದರೆ ಫೋಟೋಜೆನಿಕ್ ಅಲ್ಲ! ಮೇಲಾಗಿ ಮನುಷ್ಯರ ಇರುವನ್ನು ಅಷ್ಟಾಗಿ ಸಹಿಸುವುದಿಲ್ಲವೆನ್ನಿಸುತ್ತೆ. ದೂರದಿಂದ ಬರುತ್ತಿರುವ ಮನುಷ್ಯನ ಹೆಜ್ಜೆ ಸದ್ದನ್ನು ಗುರುತಿಸಿ ಜಾಗ ಬದಲಿಸಿಬಿಡುತ್ತವೆ. ಒಂದೈದು ದಾಸ ಕೊಕ್ಕರೆಗಳು ಕೆರೆಯಂಚಿನ ಮರದ ಮೇಲೆ ಕುಳಿತಿದ್ದವು. ಗೂಡು ಕಟ್ಟಲು, ಆಹಾರ ಹುಡುಕಲು ಈ ಜಾಗ ಸೂಕ್ತವಾ ಎಂದು ಸರ್ವೆ ಮಾಡುತ್ತಿದ್ದವು. ಬಾಯ್ಕಳಕಕ್ಕೆ ಹೋಲಿಸಿದರೆ ಈ ಕೊಕ್ಕರೆ ಮನುಷ್ಯನ ಇರುವಿಕೆಗೆ ಭಯ ಬೀಳುವುದಿಲ್ಲ.
|
ತೊಟ್ಟಿಕಲ್ಲು |
ಸೂರ್ಯ ತೀಕ್ಷ್ಣವಾಗುವವರೆಗೆ ಪಕ್ಷಿಗಳನ್ನು ವೀಕ್ಷಿಸಿ ನಂತರ ಹತ್ತಿರದಲ್ಲೇ, ಹತ್ತು ನಿಮಿಷದ ಹಾದಿಯಲ್ಲಿ ಇರುವ ತೊಟ್ಟಿಕಲ್ಲಿಗೆ ಹೋಗಬಹುದು. ಸಾಗುವ ದಾರಿ ಚಿಕ್ಕಪುಟ್ಟ ಹಳ್ಳಿಗಳೊಳಗೆ ಮತ್ತು ಒಂದಷ್ಟು ಕಗ್ಗಲಿಪುರ ಕಾಡಿನೊಳಗೆ ಸಾಗುತ್ತದೆ. ತೊಟ್ಟಿಕಲ್ಲಿನಲ್ಲೊಂದು ಮುನೇಶ್ವರ ದೇವಸ್ಥಾನವಿದೆ. ದೇವಸ್ಥಾನ ದಾಟಿ ನಡೆದರೆ ಮಳೆಗಾಲದಲ್ಲಿ ಜಲಪಾತ ಮೂಡಬಹುದಾದ ಜಾಗ ಸಿಗುತ್ತದೆ. ಮಳೆಗಾಲದಲ್ಲೂ ಜಲಪಾತದ ದರ್ಶನ ಸಿಗದಷ್ಟು ಮಳೆಯಾಗುತ್ತಿದೆಂತೆ ಆ ಪ್ರದೇಶದಲ್ಲಿ. ಎಂದಿನಂತೆ ಮನುಷ್ಯರ ಪ್ಲಾಸ್ಟಿಕ್ ಪ್ರೇಮಕ್ಕೆ ಎರಡೂ ಜಾಗಗಳು ಬಲಿಯಾಗಿವೆ.
|
ಮುನೇಶ್ವರ ದೇವಸ್ಥಾನ |
ಬೆಳಿಗ್ಗೆ ಹೊರಟರೆ ಮಧ್ಯಾಹ್ನದೊಳಗೆ ಎರಡೂ ಸ್ಥಳಗಳನ್ನು ನೋಡಿ ಬರಬಹುದು. ಪಕ್ಷಿ ಪ್ರೇಮಿಗಳು ಗುಳಕಮಲೆಯಲ್ಲಿ ಹೆಚ್ಚು ಸಮಯ ಕಳೆಯಬಹುದು, ಇಲ್ಲವಾದರೆ ತೊಟ್ಟಿಕಲ್ಲಿನ ಸುತ್ತಲಿನ ಕಾಡಿನಲ್ಲಿ ವಿಶ್ರಾಂತಿ ಪಡೆದು ವಾಪಸ್ಸಾಗಬಹುದು. ಗುಳಕಮಲೆ ಊರಿನಲ್ಲಿ ಮತ್ತು ಊರ ಹೊರವಲಯದಲ್ಲಿರುವ ಆಸ್ಪತ್ರೆಗಳ ಬಳಿ ತಿನ್ನಲು ಕುಡಿಯಲು ಅಂಗಡಿಗಳಿವೆ. ಕೆರೆ ಮತ್ತು ತೊಟ್ಟಿಕಲ್ಲಿನ ಬಳಿ ಅಂಗಡಿಗಳಿಲ್ಲ. ತಿನ್ನಲೊಂದಷ್ಟನ್ನು ಮನೆಯಿಂದಲೇ ಕೊಂಡೊಯ್ಯುವುದು ಒಳಿತು.
|
ಪಿಕಳಾರ |
|
|
ಬೆಳ್ಳಕ್ಕಿ |
|
|
ಗಣಿಗಾರ್ಲ |
|
|
ತೇನೆ ಹಕ್ಕಿ |
|
|
ದಾಸ ಕೊಕ್ಕರೆ |
|
|
ಹೂಗುಬ್ಬಿ |
|
|
ಬಿಳಿ ಕುಂಡೆಕುಸ್ಕ |
|
|
ಹಳದಿ ಕುಂಡೆಕುಸ್ಕ |
|
ಪೂರಕ ಮಾಹಿತಿ: ಹಕ್ಕಿಪುಕ್ಕ, ಪೂರ್ಣಚಂದ್ರ ತೇಜಸ್ವಿ
Really enjoyed reading this travelogue... adengala etokand kelsa madtiyappa...
ReplyDelete