ಹೂವಿನಹಿಪ್ಪರಗಿಯ ಕಾಂಗ್ರೆಸ್ ಶಾಸಕ ಎ.ಎಸ್.ನಡಹಳ್ಳಿ ತಮ್ಮದೇ ಕಾಂಗ್ರೆಸ್ ಸರಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಉತ್ತರ ಕರ್ನಾಟಕಕ್ಕೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಪದೇ ಪದೇ ಮಾಡುತ್ತಿರುವ ಅನ್ಯಾಯದ ವಿರುದ್ಧ ಮಾತನಾಡಿರುವ ನಡಹಳ್ಳಿಯವರು ಪೂರ್ಣ ಕರ್ನಾಟಕವನ್ನು ಅಭಿವೃದ್ಧಪಡಿಸುವುದು ನಿಮಗೆ ಸಾಧ್ಯವಾಗದೇ ಇದ್ದರೆ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿಯಾದರೂ ಮಾಡಿಬಿಡಿ ಎಂದಿದ್ದಾರೆ. ಅದನ್ನೇನು ಅವರು ಸಿಟ್ಟಿನಿಂದ, ಬೇಸರದಿಂದ ಹೇಳಿದರೋ ಅಥವಾ ಪ್ರತ್ಯೇಕ ರಾಜ್ಯವಾದರೆ ತಪ್ಪೇನು ಎಂಬರ್ಥದಲ್ಲಿ ಹೇಳಿದರೋ ಗೊತ್ತಿಲ್ಲ. ಎಂಟು ವರುಷಗಳ ಹಿಂದೆ ‘ಬೃಹತ್ತಾಗಿಸಿದ್ದ’ ಬೆಂಗಳೂರು ಮಹಾನಗರ ಪಾಲಿಕೆಯನ್ನು ಬಲವಂತದಿಂದ ಮತ್ತೆ ಚಿಕ್ಕದು ಮಾಡಲು ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಹೊರಟಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರ ಪ್ರತ್ಯೇಕ ರಾಜ್ಯ ಬೇಡಿಕೆಯೂ ಸರಿಯೇ ಅಲ್ಲವೇ?!
ಒಂದು ವರದಿಯ ಪ್ರಕಾರ 1949ರಲ್ಲಿ ಬೆಂಗಳೂರು ನಗರ ಪಾಲಿಕೆ ಅರವತ್ತೊಂಭತ್ತು ಚದರ ಕಿ.ಮಿಗಳಷ್ಟು ಮಾತ್ರವಿತ್ತು. ರಾಜಧಾನಿಯೆಂಬ ಕಾರಣ, ಆರ್ಥಿಕತೆ ಇಲ್ಲೇ ಕೇಂದ್ರೀಕೃತವಾದಂತೆ ಉದ್ಯೋಗಗಳನ್ನರಸಿ ವಿವಿಧ ಜಿಲ್ಲೆಗಳಿಂದಷ್ಟೇ ಅಲ್ಲದೆ ದೇಶದ ವಿವಿದೆಡೆಯಿಂದಲೂ ಬೆಂಗಳೂರಿಗೆ ವಲಸೆ ಬರುವವರ ಸಂಖೈ ಹೆಚ್ಚುತ್ತಲೇ ಸಾಗಿತು. 2007ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿದ್ದಿದ್ದು ನೂರು ವಾರ್ಡುಗಳು. ‘ಅಭಿವೃದ್ಧಿ’ಗೆ ಪೂರಕವಾಗಲಿ ಎಂಬ ಕಾರಣದಿಂದ ಈ ನೂರು ವಾರ್ಡುಗಳ ಜೊತೆಗೆ ಬೊಮ್ಮನಹಳ್ಳಿ, ಬ್ಯಾಟರಾಯನಪುರ, ದಾಸರಹಳ್ಳಿ, ಎಲೆಕ್ಟ್ರಾನಿಕ್ಸ್ ಸಿಟಿ, ಕೃಷ್ಣರಾಜಪುರ, ಮಹದೇವಪುರ, ರಾಜರಾಜೇಶ್ವರಿ ನಗರ, ಯಲಹಂಕ ಮತ್ತು ಕೆಂಗೇರಿ ನಗರ/ಪಟ್ಟಣ ಪಂಚಾಯತ್ ಗಳನ್ನು ಬೆಂಗಳೂರು ಪಾಲಿಕೆಯ ವ್ಯಾಪ್ತಿಗೆ ತರಲಾಯಿತು. ಇದರ ಜೊತೆಜೊತೆಗೆ ನಗರಕ್ಕೆ ಹೊಂದಿಕೊಂಡ ನೂರಹನ್ನೊಂದು ಹಳ್ಳಿಗಳನ್ನೂ ಸೇರಿಸಿಕೊಂಡು ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ’ ಅಸ್ತಿತ್ವಕ್ಕೆ ಬಂತು. ಅರವತ್ತೊಂಭತ್ತು ಚದರ ಕಿ.ಮಿ ಇದ್ದ ಬೆಂಗಳೂರು ಈಗ 716 ಚದರ ಕಿ.ಮಿಗಳವರೆಗೆ ಬೆಳೆದು ನಿಂತಿತು! ಮಾಗಡಿ ಕೆಂಪೇಗೌಡರು ಕಟ್ಟಿದ ಬೆಂಗಳೂರು ಮಾಗಡಿಯವರೆಗೂ ಚಾಚಿಕೊಳ್ಳುತ್ತಿದೆ ಎಂದರೆ ತಪ್ಪಲ್ಲ.
ಈಗ ಬೃಹತ್ ಬೆಂಗಳೂರಿಗೆ ಹೊಂದಿಕೊಂಡಂತಿರುವ ಹಳ್ಳಿಗಳು ತಾವ್ಯಾವಾಗ ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುತ್ತೇವೆ ಎಂದು ಕಾಯುತ್ತಿವೆ! ‘ಮಹಾನಗರ ಪಾಲಿಕೆ’ ಎಂಬ ಬೋರ್ಡು ಬಿದ್ದಾಗ ನಡೆಯುವ ರಸ್ತೆ, ಕುಡಿಯುವ ನೀರಿನ ಅಭಿವೃದ್ಧಿ ಕೆಲಸಗಳು ನಗರ/ಪಟ್ಟಣ/ಗ್ರಾಮ ಪಂಚಾಯ್ತಿ ಎಂಬ ಬೋರ್ಡು ಬಿದ್ದಾಗ ನಡೆಯುವುದಿಲ್ಲ ಎಂಬುದು ಇದಕ್ಕೆ ಒಂದು ಕಾರಣವಾದರೆ ‘ಬಿ.ಬಿ.ಎಂ.ಪಿ’ ವ್ಯಾಪ್ತಿಕೆ ಒಳಪಟ್ಟ ಕ್ಷಣದಿಂದಲೇ ಭೂಮಿಯ ಬೆಲೆ ಆಕಾಶಕ್ಕೇರುವುದು ಮತ್ತೊಂದು ಕಾರಣ. ‘ಮಹಾನಗರ ಪಾಲಿಕೆ’ಯ ವ್ಯಾಪ್ತಿಯಲ್ಲಿ ನಡೆಯುವ ‘ಅಭಿವೃದ್ಧಿ’ ಕೆಲಸಗಳನ್ನು ಇತರ ಬೋರ್ಡುಗಳಡಿಯಲ್ಲೂ ಮಾಡಿದ್ದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅವಶ್ಯಕತೆಯೇ ಇರಲಿಲ್ಲವಲ್ಲವೇ? ಇಷ್ಟಗಲವಿದ್ದ ಊರನ್ನು ಊರಗಲ ಮಾಡಿ ಒಂದು ಸರಕಾರ ತಪ್ಪು ಮಾಡಿದರೆ ‘ಇಲ್ಲಾರೀ ಇದ್ಯಾಕೋ ಸರಿ ಕಾಣ್ತಿಲ್ಲ’ ಎಂದು ಬಿ.ಬಿ.ಎಂ.ಪಿಯನ್ನೇ ಮೂರು ಭಾಗ ಮಾಡಲೊರಟು ಈಗಿನ ಸರಕಾರ ಮತ್ತೊಂದು ತಪ್ಪು ಮಾಡುತ್ತಿದೆ. ಆಗಿನ ಮತ್ತು ಈಗಿನ ಸರಕಾರ ಮತ್ತು ಮುಖ್ಯಮಂತ್ರಿಗಳು ಬೇರೆ ಬೇರೆಯಾದರೂ ಒಟ್ಟಿನಲ್ಲಿ ಇವರೆಲ್ಲರ ಆಡಳಿತ ನೀತಿ ತುಘಲಕ್ಕನ ತಿಕ್ಕಲುತನವನ್ನು ತೋರುತ್ತಿದೆಯಲ್ಲವೇ?
ಎಲ್ಲವೂ ಅಂತರ್ಜಾಲಮಯವಾಗಿರುವಾಗ ಬಿ.ಬಿ.ಎಂ.ಪಿಯನ್ನು ಒಂದಾಗಿಯೇ ಇಟ್ಟು ಅಧಿಕಾರವನ್ನು ವಿಕೇಂದ್ರೀಕರಣಗೊಳಿಸುವುದು ಕಷ್ಟದ ಮಾತೇನಲ್ಲ. ವಿಭಜನೆಗೆ ಸರಕಾರ ಅಭಿವೃದ್ಧಿಗೆ ಪೂರಕವಾದ ನಿರ್ಧಾರವಿದು ಎಂಬ ಸಮರ್ಥನೆ ಕೊಟ್ಟುಕೊಳ್ಳಲು ಪ್ರಯತ್ನಿಸುತ್ತಿದೆಯಾದರೂ ಈ ವಿಭಜನೆಯನ್ನು ಜಾರಿಗೆ ತರಲು ಸುಗ್ರೀವಾಜ್ಞೆಯ ಮೊರೆ ಹೊಕ್ಕಿರುವುದು ಇದು ರಾಜಕೀಯ ಕಾರಣದ ವಿಭಜನೆ ಎಂಬ ಅನುಮಾನಕ್ಕೆ ಪುಷ್ಟಿ ನೀಡುತ್ತದೆ. ವಿಭಜನೆಯ ನೆಪದಲ್ಲಿ ಬಿ.ಬಿ.ಎಂ.ಪಿ ಚುನಾವಣೆಯನ್ನು ಮತ್ತಷ್ಟು ಮುಂದೂಡಲು ಸಾಧ್ಯವೇ ಎಂಬ ಯೋಚನೆ ಕೂಡ ಸರಕಾರಕ್ಕಿರುವಂತಿದೆ. ಮೂರು ಭಾಗಗಳನ್ನಾಗಿ ವಿಂಗಡಿಸಿದ ನಂತರ ಮೂವರು ಮೇಯರ್ರುಗಳು, ಮತ್ತಷ್ಟು ಹುದ್ದೆಗಳು, ಮತ್ತಷ್ಟು ಹೊರೆ, ಆ ಮೂರು ಭಾಗಗಳಿಗೆ ಮತ್ತಷ್ಟು ಹಳ್ಳಿಗಳ ಸೇರ್ಪಡೆ, ನಂತರ ಮತ್ತೆ ಆ ಮೂರು ಭಾಗಗಳನ್ನು ಆರು ಭಾಗಗಳನ್ನಾಗಿ………. ಇವೆಲ್ಲ ಕೊನೆಗಾಣುವುದಾದರೂ ಯಾವಾಗ? ಬೆಂಗಳೂರಿನಲ್ಲೇ ಠಿಕಾಣಿ ಹಾಕಬಯಸುವ ಉದ್ದಿಮೆಗಳನ್ನು ಮತ್ತೊಂದು ನಗರದತ್ತ ಹೋಗುವಂತೆ ಮಾಡುವವರೆಗೂ ಈ ಯಾವ ಸಮಸ್ಯೆಗೂ ಪರಿಹಾರ ದೊರಕುವುದಿಲ್ಲ.
ಸತ್ಯಕ್ಕೆ ಹತ್ತಿರವಾದ ಮತ್ತೊಂದು ಭಯವೆಂದರೆ ಈಗಾಗಲೇ ಸೊರಗಿರುವ ಬೆಂಗಳೂರಿನ ಕನ್ನಡ ಮತ್ತಷ್ಟು ನಿಶ್ಯಕ್ತವಾಗಿಬಿಡಬಹುದು. ಪರಭಾಷಿಕರನ್ನು ಬಿಡಿ ಕನ್ನಡಿಗ ಉದ್ಯಮಿಗಳನೇಕರು ಬೆಂಗಳೂರನ್ನು ಕೇಂದ್ರಾಡಳಿತ ಮಾಡಬೇಕೆಂದು ಆಗೀಗ ಮಾತನಾಡಿದ್ದಿದೆ. ಕರ್ನಾಟಕಕ್ಕೇ ಸೇರಿದ ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಅಲ್ಲಿನ ಸ್ಥಳೀಯ ಆಡಳಿತದಲ್ಲಿ ಬಹುಮತ ಸಿಕ್ಕಿದಾಗಲೆಲ್ಲ ಕನ್ನಡ, ಕರ್ನಾಟಕದ ವಿರುದ್ಧ ನಿರ್ಣಯ ಜಾರಿಗೊಳಿಸುತ್ತಾರೆ. ಜನರ ಭಾವನೆಗಳನ್ನು ಕೆರಳಿಸಿ ಮುಂದಿನ ಸಲದ ಮತ ಬ್ಯಾಂಕನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯ ಶಾಸಕರು, ಸಂಸದರು ಪಕ್ಷಾತೀತವಾಗಿ ಸುಮ್ಮಗಿದ್ದುಬಿಡುತ್ತಾರೆ! ಕಾರಣ ಮರಾಠಿ ಭಾಷಿಕರ ಮತಗಳು ತಮ್ಮ ಕೈತಪ್ಪಿ ಹೋದರೆ ಎಂಬ ಭಯ!. ಅನ್ಯಭಾಷಿಕರ ಸಂಖೈ ಹೆಚ್ಚುತ್ತಿರುವ ಬೆಂಗಳೂರನ್ನು ಈಗ ವಿಭಜಿಸಿದರೆ ಬೆಳಗಾವಿಯಲ್ಲಿ ನಡೆದದ್ದು ಬೆಂಗಳೂರಿನಲ್ಲಿ ನಡೆಯದೇ ಇದ್ದೀತೆ? ತಮಿಳು, ತೆಲುಗು, ಹಿಂದಿ ಭಾಷಿಕರ ಮತಗಳನ್ನು ಕಳೆದುಕೊಳ್ಳಲಿಚ್ಛಿಸದ ಬೆಂಗಳೂರಿನ ಶಾಸಕ – ಸಂಸದರು ಮೌನವಾಗಿದ್ದುಬಿಟ್ಟರೆ ಕನ್ನಡದ ಗತಿಯೇನಾಗಬೇಕು? ಇವ್ಯಾವುದನ್ನೂ ಯೋಚಿಸದೆ ತತ್ ಕ್ಷಣದ ರಾಜಕೀಯ ಲಾಭಕ್ಕಾಗಿ ಬೆಂಗಳೂರನ್ನು ವಿಭಜಿಸುವ ನಿರ್ಧಾರವನ್ನು ಅತ್ಯಾತುರದಿಂದ ತೆಗೆದುಕೊಳ್ಳುತ್ತಿರುವ ಸಿದ್ಧರಾಮಯ್ಯ ಬೆಂಗಳೂರಿನ ಭವಿಷ್ಯದ ಭಾಷಾ ಕಲಹಕ್ಕೆ ಮುನ್ನುಡಿ ಬರೆಯುತ್ತಿದ್ದಾರಾ?
No comments:
Post a Comment