ಕು.ಸ.ಮಧುಸೂದನ್
ಮದುವೆ ಮಾಡಿಕೊಂಡು ಕರ್ನಾಟಕಕ್ಕೆ ಕಾಲಿಟ್ಟಾಗ ನನಗಿನ್ನು ಹದಿನಾರು ನಡೆಯುತ್ತಿತ್ತು. ಸಾಲು ಸಾಲು ಮಕ್ಕಳನ್ನು ಹುಟ್ಟಿಸಿದ್ದ ಅಪ್ಪ ದುಡಿದದ್ದನ್ನೆಲ್ಲ ಹೆಂಡದಂಗಡಿಗೇ ಸುರೀತಿದ್ದ. ಏಳು ಜನ ಹೆಣ್ಣುಮಕ್ಕಳ ಪೈಕಿ ನಾನು ಆರನೆಯವಳು. ಅದೇನು ಕರ್ಮವೊ ನನ್ನ ಮೊದಲನೆಯ ಅಕ್ಕ ಬೇರೆ ಜಾತಿಯವನೊಡನೆ ಓಡಿಹೋಗಿ ನಮ್ಮನ್ನು ನರಕಕ್ಕೆ ತಳ್ಳಿಬಿಟ್ಟಿದ್ದಳು. ಮನೆಯಲ್ಲಿ ಅಷ್ಟು ಬಡತನವಿದ್ದರೂ ಅಪ್ಪ ಅಮ್ಮನಿಗೆ ಜಾತಿಯ ಭೂತ ಮೆಟ್ಟಿಕೊಂಡಿತ್ತು. ದೊಡ್ಡ ಹುಡುಗಿ ಓಡಿಹೋದಮೇಲೆ ಉಳಿದ ಹುಡುಗಿಯರನ್ನು ಯಾರು ಮದುವೆಯಾಗ್ತಾರೆ ಅನ್ನೊದನ್ನು ತಲೆಲಿ ತುಂಬಿಕೊಂಡ ಅಪ್ಪ ಅಮ್ಮ ಹುಡುಗಿಯರು ಮೈನೆರೀತ ಇದ್ದ ಹಾಗೆ ಮದ್ವೆ ಮಾಡಿ ಕೊಡೋಕೆ ಶುರು ಮಾಡಿದರು. ಐದನೆಯವಳು ಮದುವೆಯಾದಾಗ ನನಗೆ ಹನ್ನೆರಡು ವರ್ಷವಾಗಿತ್ತು. ಅದೇನು ಪುಣ್ಯವೋ ಗೊತ್ತಿಲ್ಲ ನಾನು ಮೈನೆರೆದಿದ್ದೇ ಹದಿನೈದು ತುಂಬಿದ ಮೇಲೆ. ಹಾಗಾಗಿ ಉಳಿದವರೆಲ್ಲ ಹದಿಮೂರು ಹದಿನಾಲ್ಕಕ್ಕೆ ಮದುವೆಯಾದರೆ ನನಗೆ ಮಾತ್ರ ಹದಿನಾರನೆ ವಯಸ್ಸಿಗೆ ಮದುವೆ ಆಯ್ತು. ನಮ್ಮೂರಿನವರು ತುಂಬಾ ಜನ ಕರ್ನಾಟಕದಲ್ಲಿ ಇದ್ದರು. ಆಗೀಗ ಅವರುಗಳು ಬಂದು ಹೋಗ್ತಾ ಇದ್ದರು. ಅಂತವರಲ್ಲಿ ಸರವಣ ಅಂತ ಒಬ್ಬ ಅಪ್ಪನಿಗೆ ಆತ್ಮೀಯನಾಗಿದ್ದ. ಊರಿಗೆ ಬಂದಾಗಲೆಲ್ಲ. ಅಪ್ಪನಿಗೆ ಕುಡಿಸೋದು ತಿನ್ನಿಸೋದು ಮಾಡೋನು. ಆ ವರ್ಷ ಅವನು ಮುರುಗ ಅಂತ ಒಬ್ಬನನ್ನು ಕರೆದುಕೊಂಡು ಬಂದು ಇವನಿಗೆ ನಿನ್ನ ಮಗಳನ್ನು ಕೊಡು. ಹುಡುಗ ಗಾರೆ ಕೆಲಸದಲ್ಲಿ ಚೆನ್ನಾಗಿ ದುಡಿತಾ ಇದಾನೆ ಅಂತ ಹೇಳಿ ಅವನಿಗೆ ನನ್ನ ತೋರಿಸಿದ. ಆ ಹುಡುಗ ನನಗಿರೋದು ಅಮ್ಮ ಒಬ್ಬಳೆ ಅವಳಿಗೆ ಸರಿಯಾಗಿ ಕಣ್ಣು ಕಾಣಿಸಲ್ಲ,ಹಾಗಾಗಿ ನಾನು ಮತ್ತೆಮತ್ತೆ ಇಲ್ಲಿಗೆ ಬರೋಕಾಗಲ್ಲ. ನೀವು ಹು ಅಂದ್ರೆ ಈಗಲೆ ಮದ್ವೆ ಮಾಡಿಕೊಂಡು ಹುಡುಗೀನಾ ಕರೆದುಕೊಂಡು ಹೋಗ್ತೀನಿ ಅಂತ ಹೇಳಿದ್ದಕ್ಕೆ ಅಪ್ಪ ತಲೆಯಾಡಿಸಿಬಿಟ್ಟ. ಊರಲ್ಲೇ ಇದ್ದ ಮಾರಿಯಮ್ಮನ ದೇವಸ್ಥಾನದಲ್ಲಿ ಅರಿಶಿನ ದಾರ ಕಟ್ಟಿಸಿಬಿಟ್ಟ. ಸರಿ ಅಂತ ಅವಸರಕ್ಕೆ ಶಾಸ್ತ್ರ ಮುಗಿಸಿದವರು ಒಂದೇ ವಾರಕ್ಕೆ ನನ್ನ ಅವನ ಜೊತೆ ಕಳಿಸಿಬಿಟ್ಟರು. ನನ್ನ ಹಣೇಬರಹ ನೋಡಿ ಬೇರೆ ರಾಜ್ಯಕ್ಕೆ, ಭಾಷೆ ಬರದ ಊರಿಗೆ ಮಗಳನ್ನು ಕೊಡ್ತಾ ಇದೀವಿ ಅಂತ ಯೋಚನೆ ಮಾಡಿ ಯಾರಾದರು ಒಬ್ಬರು ನನ್ನ ಜೊತೆ ಬಿಡೋಕಾದರು ಬರಬಹುದಿತ್ತು. ಊಹು ಯಾರೂ ಬರಲೇ ಇಲ್ಲ. ಗಂಡನ ಜೊತೆ ನಾನೊಬ್ಬಳೇ ಕರ್ನಾಟಕಕ್ಕೆ ಬಂದೆ. ಯಾವತ್ತೂ ನಾನು ಅಷ್ಟು ದೂರ ಪ್ರಯಾಣ ಮಾಡಿದೋಳಲ್ಲ. ಅದೂ ಅಲ್ಲದೆ ಕನ್ನಡ ಅನ್ನೋಭಾಷೇನಾ ನಾನು ಕೇಳಿರಲೇ ಇಲ್ಲ.
ಸರಿ, ಇಲ್ಲಿ ಬಂದಮೇಲೆ ನೋಡಿದರೆ ಊರಲ್ಲಿನ ನಮ್ಮ ಮನೇನೇ ವಾಸಿ ಅನ್ನಿಸ್ತು. ಯಾಕಂದರೆ ಒಂದು ಸಣ್ಣ ಗುಡಿಸಿಲಿನಂತಿದ್ದ ಜಾಗದಲ್ಲಿ ನಾನು ನನ್ನ ಗಂಡ ಅತ್ತೆ ಜೀವನ ಮಾಡಬೇಕಾಗಿತ್ತು. ಮನೆಲಿದ್ದೋವು ಒಂದೆರಡು ಅಲ್ಯುಮಿನಿಯಂ ಪಾತ್ರೆಗಳಷ್ಟೆ. ಸರಿ ಹೇಗೋ ಹೊಂದಿಕೊಂಡು ಅವುಗಳಲ್ಲೆ ಸಂಸಾರ ಮಾಡತೊಡಗಿದೆ. ಬಂದ ಒಂದು ವಾರದಲ್ಲೇ ಅಕ್ಕಪಕ್ಕದ ಒಂದಷ್ಟು ಹೆಂಗಸರು ಪರಿಚಯವಾದರು. ಕನ್ನಡ ಮಾತಾಡೋದನ್ನು ಕಲಿಯತೊಡಗಿದೆ. ನಮ್ಮ ಬೀದಿಯಲ್ಲಿದ್ದೋರೆಲ್ಲ ನಮ್ಮಂತಹ ಗುಡಿಸಲಿನವರೇ ಆಗಿದ್ದರು ಆ ಹಳ್ಳಿಯಲ್ಲಿ ನಮ್ಮ ಬಿಡಾರವನ್ನು ತಮಿಳು ಕ್ಯಾಂಪ್ ಅಂತ ಕರೀತಾ ಇದ್ದರು. ಹೀಗೇ ಆರೇಳು ತಿಂಗಳು ಸಂಸಾರ ಮಾಡಿದೆ. ಅಷ್ಟು ತಿಂಗಳಲ್ಲಿ ನನಗೆ ಗೊತ್ತಾಗಿದ್ದೆಂದರೆ ನನ್ನ ಗಂಡ ನಾನು ಅಂದುಕೊಂಡಷ್ಟೇನು ಒಳ್ಳೆಯವನಾಗಿರಲಿಲ್ಲ. ದುಡಿದ ದುಡ್ಡನ್ನೆಲ್ಲ ಕುಡಿತಕ್ಕೆ ಹಾಕೋನು. ಮನೆಗೆ ಸರಿಯಾಗಿ ಸಾಮಾನು ತಂದು ಹಾಕ್ತಾ ಇರಲಿಲ್ಲ. ಜೊತೆಗೆ ಪಕ್ಕದ ಹಳ್ಳಿಯಲ್ಲಿ ಯಾವಳನ್ನೊ ಇಟ್ಟುಕೊಂಡಿದ್ದ. ಅಂತಾದ್ರಲ್ಲಿಯೇ ನಾನು ಬಸುರಿಯಾದೆ. ನನಗೆ ಏಳು ತಿಂಗಳು ತುಂಬಿದ ಮೇಲೆ ತಮಿಳುನಾಡಿಂದ ಅಪ್ಪ ಅಮ್ಮ ಬಂದು ಕರೆದುಕೊಂಡು ಹೋದರು ಹೆರಿಗೆ ಆದ ಮೂರೇ ತಿಂಗಳಿಗೆ ಗಂಡ ವಾಪಾಸು ಕರೆದುಕೊಂಡುಬಂದುಬಿಟ್ಟ. ನಾನೆಷ್ಟೇ ಪ್ರಯತ್ನ ಪಟ್ಟರು ಅವನು ಬದಲಾಗಲೇ ಇಲ್ಲ.ನಾನು ಕೂಲಿ ಗೀಲಿ ಮಾಡೋಣ ಅಂದ್ರೆ ನನಗೇನು ಬರ್ತಾ ಇರಲಿಲ್ಲ. ಕಪ್ಪಗಿದ್ದರು ನೋಡೋಕೆ ಲಕ್ಷಣವಾಗಿದ್ದ ನನ್ನ ಹೊರಗೆ ಕಳಿಸೋಕು ಅವನು ಒಪ್ತಾ ಇರಲಿಲ್ಲ. ಹೀಗೇ ಸಂಸಾರ ನಡೀತಾ ಇರಬೇಕಾದರೆ ಒಂದು ದಿನ ಅವನು ಕೆಲಸಕ್ಕೆ ಹೋಗಬೇಕಾದರೆ ಲಾರಿಯೊಂದು ಗುದ್ದಿ ಸತ್ತು ಹೋಗಿಬಿಟ್ಟ. ಊರಿಗೆ ಟೆಲಿಗ್ರಾಂ ಕೊಟ್ಟರೂ ಅದು ತಲುಪಿ ಅಪ್ಪ ಅಮ್ಮ ಬರೋದ್ರೊಳಗೆ ಅವನು ಮಣ್ಣಾಗಿದ್ದ. ಬಂದವರು ವಾಪಸು ನನ್ನ ಕರೆದುಕೊಂಡುಹೋಗ್ತಾರೆ ಅಂತ ಇದ್ದೆ. ಆದರೆ ಅದ್ಯಾಕೊ ಅವರು ಅಲ್ಲಿ ನಮಗೆ ನಮ್ಮದೇ ಕಷ್ಟಗಳಿವೆ. ಅದೂ ಅಲ್ಲದೆ ನಿಮ್ಮ ಅತ್ತೇನಾ ಒಬ್ಬಳೇ ಬಿಟ್ಟು ಹೋದರೆ ಜನ ಏನಂತಾರೆ. ಅವಳನ್ನು ನೋಡಿಕೊಂಡು ಇಲ್ಲೇ ಇರು ಅಂತ ಹೇಳಿ ತಿಥಿ ಮಗಿಸಿ ಹೊರಟು ಹೋದರು. ಬೆಳಿಗ್ಗೆ ಎದ್ದರೆ ತಿನ್ನೋಕೆನು ಅಂತ ಹುಡುಕೊ ಪರಿಸ್ಥಿತೀಲಿ ನಾವಿದ್ದ್ವಿ. ಇಂತಹ ಸ್ಥಿತಿಯಲ್ಲಿ ಬಿಟ್ಟುಹೋದ ಅಪ್ಪ ಅಮ್ಮ ಸತ್ತು ಹೋದರು ಅಂತ ಅವತ್ತೆ ಅಂದುಕೊಂಡು ಬಿಟ್ಟೆ. ಮನೆಲಿದ್ದ ಅಷ್ಟಿಷ್ಟು ಸಾಮಾನಲ್ಲಿ ಅಡುಗೆ ಮಾಡ್ತಾ ಒಂದು ವಾರ ನೂಕಿದೆ.ಮನೆಯಲ್ಲಿ ಐದು ಸಾವಿರ ರೂಪಾಯಿಗಳ ಒಂದು ಇನ್ಷೂರೆನ್ಸ್ ಬಾಂಡ್ ಇತ್ತು. ಓದಿದವರಿಗೆ ಅದನ್ನು ತೋರಿಸಿದಾಗ ನನ್ನ ಗಂಡ ಅದನ್ನು ಮದುವೆಗೆ ಮುಂಚೇನೆ ಮಾಡಿಸಿ ಅವರ ಅಮ್ಮನನ್ನು ನಾಮಿನಿ ಮಾಡಿದ್ದ ಅಂತ ಗೊತ್ತಾಯಿತು.. ಸರಿ ಇನ್ನು ಅದನ್ನು ತಗೋಳೇಕೆ ಅಲೆದಾಟ ಶುರುವಾಯಿತು. ಅಕ್ಸಿಡೆಂಟ್ ಕೇಸ್ ಆಗಿದ್ರು ಗುದ್ದಿದ ಲಾರಿ ಯಾವುದು ಅಂತ ಗೊತ್ತಾಗಲೇ ಇಲ್ಲ. ಹಾಗಾಗಿ ಅದರಿಂದಾನು ಏನು ದುಡ್ಡು ಬರಲಿಲ್ಲ. ಸರಿ ಇನ್ಷುರೆನ್ಸ್ ದುಡ್ಡನ್ನ ಹೇಗೆ ತೆಗೆಯೋದು ಅದು ಗೊತ್ತಾಗದೇ ಇದ್ದಾಗ ಪಕ್ಕದ ಹಳ್ಳಿಯಲ್ಲಿ ನಮ್ಮ ತಮಿಳಿನವನೇ ಒಬ್ಬ ಸಣ್ಣ ರಾಜಕಾರಣಿ ಸುಬ್ರಮಣಿ ಅಂತ ಇದ್ದ. ಸರಿ ಅವನ ಹತ್ತಿರ ಹೋದೆ. ಅವನು ಅದನ್ನು ತೆಗೆಯೋಕೆ ನಿನ್ನ ಗಂಡ ಸತ್ತಿದ್ದರ ಸರ್ಟಿಫಿಕೇಟ್ ತಗೋಬೇಕು ಅಂದ. ಅದನ್ನು ಎಲ್ಲಿ ತಗಿಯೋದು ಅನ್ನೋದು ನನಗೆ ಗೊತ್ತಿರಲಿಲ್ಲ. ಅದಕ್ಕವನು ನಿನ್ನ ಗಂಡ ಸತ್ತಿದ್ದು ತಾಲ್ಲೂಕು ಕೇಂದ್ರದ ಹತ್ತಿರದಲ್ಲಿ. ಅಲ್ಲಿನ ಕಚೇರಿಗೆ ಹೋಗಿ ತಗೋಬೇಕು. ಅದಕೆಲ್ಲ ದುಡ್ಡು ಕೊಡಬೇಕಾಗುತ್ತೆ ಏನು ಮಾಡ್ತೀಯಾ ಅಂದ. ನನಗೇನಾದರು ಗೊತ್ತಿದ್ದರೆ ತಾನೇ ಉತ್ತರ ಕೊಡೋದು. ಸುಮ್ಮನಿದ್ದೆ. ಕೊನೆಗವನೇ ನೋಡು ಏನು ಮಾಡ್ತೀಯಾಂತ ದುಡ್ಡಿಲ್ಲದೆ ಯಾವ ಕೆಲಸಾನು ಆಗಲ್ಲ. ನೀನು ದುಡ್ಡಿಗೆ ಹೂ ಅಂದರೆ ಹೋಗಬಹುದು ಅಂದ. ಅದಕ್ಕೆ ನಾನು ಅಣ್ಣಾ ಇನ್ಷುರೆನ್ಸ್ ದುಡ್ಡು ಕೈಗೆ ಬಂದಕೂಡಲೇ ಅದರಲ್ಲೆ ನೀವು ತಗೊಳ್ಳಿವರಂತೆ ಈಗ ಏನಾದರು ಮಾಡಿ ಅಂದೆ. ಅದಕ್ಕವನು ಅರ್ದ ಮನಸಿಂದ ಒಪ್ಪಿದಂತೆ ನಾಟಕ ಮಾಡಿ, ಆಯ್ತು ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ಊರಿನ ಗೇಟಿನ ಹತ್ತಿರ ಬಾ. ಅಲ್ಲಿಗೆ ನಾನು ಬರ್ತೀನಿ,ನನ್ನ ಗಾಡೀಲೇ ಹೋಗೋಣ ಅಂದ. ವಿದಿಯಿಲ್ಲದೆ ಆಯ್ತು ಅಂತ ವಾಪಾಸು ಬಂದೆ. ಮಾರನೆ ದಿನ ಗೇಟಿಗೆ ಹೋಗಿ ಅವನ ಸ್ಕೂಟರಿನಲ್ಲಿ ತಾಲ್ಲೂಕಿಗೆ ಹೋದ್ವಿ. ಅಲ್ಲಿ ಆಫೀಸಿನ ಹೊರಗೆ ನನ್ನ ಕೂರಿಸಿ ಒಳಗೆ ಹೋದವನು ಮದ್ಯಾಹ್ನ ಬಂದ. ಬಂದವನು ಅವರಿಗಿನ್ನೂ ಪೋಲಿಸ್ ರಿಪೋರ್ಟ ಬಂದಿಲ್ವಂತೆ. ಅದು ಬಂದ ಕೂಡಲೇ ಕೊಡ್ತಾರಂತೆ. ಅದು ಪೋಲೀಸ್ ಕೇಸ್ ಆಗಿರೋದ್ರಿಂದ ಸ್ವಲ್ಪ ಕಷ್ಟವಾಗುತ್ತೆ. ಈಗ ನಾವು ಸ್ಟೇಷನ್ನಿಗೆ ಹೋಗಿ ಬರಬೇಕು ಅಂದು ನನ್ನ ಕರೆದುಕೊಂಡು ಸ್ಟೇಷನ್ನಿಗೆ ಹೋದ. ಅಲ್ಲಿಯೂ ನನ್ನ ಹೊರಗೆ ನಿಲ್ಲಿಸಿ ಹೆಣ್ಣುಮಕ್ಕಳು ಸ್ಟೇಷನ್ನಿಗೆಲ್ಲ ಬರಬಾರದು. ನಾನೇ ಒಳಗೆ ಹೋಗಿ ಬರ್ತೀನಿ ಅಂದು ಒಳಗೆ ಹೋದವನು ಒಂದು ಗಂಟೆಬಿಟ್ಟು ಹೊರಗೆ ಬಂದ. ಊಹೂ ಇವತ್ತು ಇನ್ಸಫೆಕ್ಟರ್ ಇಲ್ಲ ನಾಳೆ ಬೆಳಿಗ್ಗೆ ನೋಡೋಣ ಅಂದ್ರು. ನಾವು ವಾಪಾಸ್ ಊರಿಗೆ ಹೋಗಿ ನಾಳೆ ಬೆಳಿಗ್ಗೆ ಬರೋಣ ಅಂದ. ಏನು ಗೊತ್ತಾಗದೆ ಅವನ ಮಾತಿಗೆ ತಲೆದೂಗಿದೆ. ಬೆಳಿಗ್ಗೆ ಕುಡಿದ ಅಂಬಲಿ ಖಾಲಿಯಾಗಿತ್ತು. ಅದು ಅರ್ಥವಾದವನಂತೆ ಬಾ ಮೊದಲು ಏನಾದರು ತಿನ್ನೊಣವಂತೆ ಅಂತ ಒಂದು ಹೋಟೆಲ್ಲಿಗೆ ಕರೆದುಕೊಂಡುಹೋಗಿ ಊಟಕ್ಕೆ ಹೇಳಿದ. ತಟ್ಟೆಯ ಮುಂದೆ ಕೂತರೂ ಊಟ ಸರಿಯಾಗಿ ಸೇರಲಿಲ್ಲ. ಮನೆಯಲ್ಲಿ ಏನೂ ಮಾಡಿರಲಿಲ್ಲ. ಪಾಪ ಹಸಿದುಕೊಂಡು ಕೂತಿರೋ ಅತ್ತೆಯ ನೆನಪಾಯ್ತು. ಮಗನಿಗೆ ಪಕ್ಕದಮನೆಯವರೇನಾದರು ಕೊಟ್ಟಿದ್ದರೆ ಪುಣ್ಯ ಅಂದುಕೊಂಡು ಅಳು ಬಂತು. ಅವನೆಷ್ಟೇ ಬಲವಂತ ಮಾಡಿದರು ತಿನ್ನೋಕಾಗಲಿಲ್ಲ ಅರ್ದ ಊಟಬಿಟ್ಟು ಕೈ ತೊಳೆದು ಎದ್ದು ಬಿಟ್ಟೆ. ನೋಡು ಎಷ್ಟು ದಿನಾಂತ ಹೀಗೆ ಊಟ ಬಿಡ್ತೀಯಾ? ನಿನ್ನ ಗಂಡನ ದುಡ್ಡು ಎಷ್ಟು ದಿನಕ್ಕಾಗುತ್ತೆ. ನೀನು ಹೇಗಾದರು ಮಾಡಿಬದುಕೊದು ಕಲೀಬೇಕು ಅಂತ ಉಪದೇಶ ಮಾಡಿದ. ಅವನು ಹೇಳಿದ್ದರಲ್ಲಿ ತಪ್ಪೇನೂ ಕಾಣಲಿಲ್ಲ. ಸರಿ ಸಂಜೆ ಹೊತ್ತಿಗೆ ಮನೆಗೆ ಬಂದಿವಿ.
ಹೀಗೇ ಮೂರು ದಿನ ಅಲೆದರೂ ಬೇಕಾದ ಡೆತ್ ಸರ್ಟಿಫಿಕೆಟ್ ಸಿಗಲೇ ಇಲ್ಲ. ಮನೆಯಲ್ಲಿ ನೋಡಿದರೆ ಕಡುಕಷ್ಟ. ಅಕ್ಕಪಕ್ಕದ ಮನೆಗಳಲ್ಲಿ ದುಡ್ಡು ಬಂದಾಕ್ಷಣ ಕೊಡ್ತೀನಿ ಅಂತ ಹೇಳಿ ಒಂದಿಷ್ಟು ಅಕ್ಕಿ ರಾಗಿ ಸಾಲ ತೆಗೆದುಕೊಂಡು ಹೇಗೋ ನಿಬಾಯಿಸ್ತಾ ಇದ್ದೆ. ನಾಲ್ಕನೇ ದಿನ ಸಂಜೆ ಸುಬ್ರಮಣಿ ತಾನೆ ಮನೆ ಹತ್ತಿರ ಬಂದು ನಾಳೆ ಸಂಜೆ ಐದುಗಂಟೆಗೆ ಹೋಗೋಣ. ಹೇಗಾದ್ರು ಮಾಡಿ ಸರ್ಟಿಫಿಕೇಟ್ ಕೊಡಿಸ್ತೀನಿ ಅಂದ. ಮಾರನೆ ಸಂಜೆ ನಾವು ಆಫೀಸಿಗೆ ಹೋದಾಗ ಅದಾಗಲೆ ಐದು ಗಂಟೆಯಾಗಿ ಹೋಗಿತ್ತು. ಮನೆಗೆ ಹೊರಡುತಿದ್ದ ಗುಮಾಸ್ತ ಎಲ್ಲ ರೆಡಿಯಾಗಿದೆ ಸಾಹೇಬರ ಸೈನ್ ಒಂದೇ ಬಾಕಿಯಿರೋದು. ಬೆಳಿಗ್ಗೆ ಹತ್ತುಗಂಟೆಗೆಲ್ಲ ಬಂದುಬಿಡಿ ಅಂದ. ಸರಿ ಇನ್ನೆನು ಮಾಡೋದು ಅಂತ ಅಲ್ಲಿಂದ ಹೊರಟ್ವಿ. ಹೋಟೆಲ್ಲಿನಲ್ಲಿ ಕಾಫಿ ಕುಡಿಯುತ್ತ ಸುಬ್ರಮಣಿ ನನ್ನ ಸ್ಕೂಟರ್ ಸ್ವಲ್ಪ ಸರಿ ಮಾಡಿಸಬೇಕು, ಬಿಟ್ಟರೆ ಹೋಗೋಕೆ ನಿನಗೆ ಬಸ್ಸಿಲ್ಲ. ಆದರಿಂದ ಹೇಗಿದ್ರೂ ಬೆಳಿಗ್ಗೆ ಮತ್ತೆ ಬರಬೇಕು. ಇವತ್ತು ಇಲ್ಲೇ ಉಳಿದುಕೊಂಡು ಬೆಳಿಗ್ಗೆ ಸರ್ಟಿಪೀಕೇಟ್ ತಗೊಂಡೇ ಹೋಗಿಬಿಡೋಣ ಅಂದ. ನಾನು ಅಣ್ಣಾ ಅತ್ತೆಗೆ ಹೇಳಿಲ್ಲ, ಜೊತೆಗೆ ಮಗೂನು ನಾನಿಲ್ಲದಿದ್ದರೆ ಅಳ್ತಾನೆ ಅಂದೆ ಅದಕ್ಕವನು ನೋಡು ಈಗ ಹೇಗಾದರು ಮಾಡಿ ವಾಪಾಸು ಹೋದರೂ ನಾಳೆ ಬೆಳಿಗ್ಗೆ ಗಾಡಿ ರಿಪೇರಿಯಾಗದೆ ಬರೋಕ್ಕಾಗಲ್ಲ ನೀನೊಬ್ಬಳೆ ಬಂದು ತಗೊಳ್ಳೊ ಹಾಗಿದ್ದರೆ ಹೇಳು ಅಂದ. ನಾನೊಬ್ಬಳೇ ಬಂದು ತಗೊಳ್ಳೋದು ಕಷ್ಟದ ಕೆಲಸ ಅನಿಸಿ ಆಯ್ತು ಅಂದು ಬಿಟ್ಟೆ. ಸರಿ ನಾವು ಕಾಫಿ ಕುಡಿಯುತ್ತಿದ್ದ ಹೋಟೆಲ್ಲಿನಲ್ಲೇ ಒಂದು ರೂಮು ಮಾಡಿ, ನನ್ನ ಅಲ್ಲಿ ಬಿಟ್ಟು ಗಾಡಿ ರಿಪೇರಿಗೆ ಬಿಟ್ಟು ಬರ್ತೀನಿ ಅಂತ ಹೋಗಿ ರಾತ್ರಿ ಎಂಟು ಗಂಟೆಗೆ ಊಟ ತಗೊಂಡು ಬಂದ. ಇದ್ದ ಒಂದು ಸಣ್ಣ ಮಂಚ ಅವನಿಗೆ ಬಿಟ್ಟು ನಾನು ರೂಮಿನ ಇನ್ನೊಂದು ಮೂಲೆಯಲ್ಲಿ ಬೆಡ್ ಶೀಟು ಹಾಸಿಕೊಂಡು ಮಲಗಿದೆ. ಲೈಟು ಆರಿಸಿ ಅವನೂ ಮಲಗಿದ ಸುಮಾರು ಒಂದು ಗಂಟೆಯ ನಂತರ ಅವನು ತೀರಾ ಹತ್ತಿರ ಬಂದು ನನ್ನ ಕರೆದಂತಾಗಿ ಕಣ್ಣು ಬಿಟ್ಟರೆ ಅವನು ನನ್ನ ಪಕ್ಕದಲ್ಲೇ ಬಂದು ಮಲಗಿದ್ದ. ನಾನು ಮೇಲೇಳಲು ಹೋದರು ಬಿಡದೆ ಗಟ್ಟಿಯಾಗಿ ಹಿಡಿದುಕೊಂಡು ನೋಡು ನಿನಗೆ ಯಾರೂ ದಿಕ್ಕಿಲ್ಲ. ಪರ್ಮನೆಂಟಾಗ ನಾನು ನೋಡಿಕೊಳ್ಳ್ತೀನಿ. ಸುಮ್ಮನಿರು ಅಂತೆಲ್ಲ ಹೇಳಿದ ನಾನು ಬಹಳಷ್ಟು ಪ್ರಯತ್ನ ಮಾಡಿದರು ಅವನ ಹಿಡಿತದಿಂದ ಹೊರಗೆ ಬರಲಾಗಲೇ ಇಲ್ಲ. ಗಂಡ ಸತ್ತ ಒಂದೆ ತಿಂಗಳೊಳಗೆ ಬೇರೆ ಗಂಡಸಿನ ಜೊತೆ ಮಲಗಿ ಬಿಟ್ಟಿದ್ದೆ. ಬೆಳಿಗ್ಗೆ ಎದ್ದಾಗ ಮನಸ್ಸಿಗೆ ಕಷ್ಟವಾದರು ರಾತ್ರಿಯೆಲ್ಲ ಅವನು ನನ್ನ ಕುಟುಂಬದ ಜವಾಬ್ದಾರಿಯನ್ನು ತಗೊಂಡು ನಿನ್ನ ಮಗನನ್ನು ನನ್ನ ಮಗನ ತರಾ ಸಾಕ್ತೀನಿ ಅಂತೆಲ್ಲ ಹೇಳಿದ್ದನ್ನು ಕೇಳಿ ಮನಸ್ಸಿಗೆ ಸಮಾಧಾನ ಮಾಡಿಕೊಂಡೆ.
ಆಮೆಲಿನ್ನೇನು ಸರ್ಟಿಫಿಕೇಟು ತಗೊಂಡು ಮನೆಗೆ ಬಂದ್ವಿ. ಆಮೇಲೆ ಒಂದೇ ವಾರದಲ್ಲಿ ದುಡ್ಡೂ ಬಂತು ಆ ದುಡ್ಡಲ್ಲಿ ಮನೆಗೆ ಬೇಕಾದ ಸಾಮಾನು ತಗೊಂಡು ಗಂಡನ ಒಂದೆರಡು ಸಾಲ ತೀರಿಸಿದೆ. ಈ ಮದ್ಯೆ ಒಂದೆರಡು ಬಾರಿ ಸುಬ್ರಮಣಿಯೊಂದಿಗೆ ತಾಲ್ಲೂಕಿಗೆ ಹೋಗಿ ಬರಬೇಕಾಯಿತು. ಆರು ತಿಂಗಳಾಗುವಷ್ಟರಲ್ಲಿ ಮನೆಯ ಸಾಮಾನೆಲ್ಲ ಖಾಲಿಯಾಗಿ ಊಟಕ್ಕಿಲ್ಲದಂತಾಯಿತು. ಒಂದು ರಾತ್ರಿ ಅವನ ಜೊತೆಯಿದ್ದಾಗ ಈ ವಿಷಯ ಹೇಳಿ ಏನು ಮಾಡೋದು ಮುಂದೆ? ಅಂದೆ.ಅದಕ್ಕವನು ಒಂದಿಷ್ಟು ದುಡ್ಡು ಕೊಟ್ಟು ಸದ್ಯಕ್ಕಿದನ್ನು ಇಟ್ಟುಕೊ ಆಮೆಲೆ ಏನಾದರು ಮಾಡೋಣ ಅಂದ.
ಆಮೇಲೊಂದಷ್ಟು ದಿನಗಳಾದ ಮೇಲೆ ಮನೆಗೆ ಬಂದ ಸುಬ್ರಮಣಿ ನಾಳೆ ಬೆಳಿಗ್ಗೆ ರೆಡಿಯಾಗಿ ಗೇಟಿಗೆ ಬಾ ಸಿಟಿಗೆ ಹೋಗಿ ಬರೋಣ ಸ್ವಲ್ಪ ಕೆಲಸವಿದೆ ಅಂದ. ಮಾರನೆ ದಿನ ಅವನ ಜೊತೆ ಸಿಟಿಗೆ ಹೋದೆ. ನನ್ನನ್ನು ಒಂದು ದೊಡ್ಡ ಹೋಟೇಲಿನ ರೂಮಿಗೆ ಕರೆದುಕೊಂಡು ಹೋಗಿ ಬಿಟ್ಟು ಈಗ ಬರ್ತೀನಿ ಅಂತ ಹೊರಗೆ ಹೋಗಿಬಿಟ್ಟ.ಒಂದಷ್ಟು ಹೊತ್ತಾದ ಮೇಲೆ ಇನ್ಯಾರದೊ ಜೊತೆಗೆ ಬಂದು ಸಾಯಂಕಾಲದ ತನಕ ಇವರ ಹತ್ತಿರ ಇರು ಆಮೇಲೆ ನಾನು ಬರ್ತೀನಿ ಅಂತ ಹೊರಟು ಹೋದ. ಆಗವನ ತಂತ್ರ ಗೊತ್ತಾಗಲಿಲ್ಲ.ಬಂದವನು ನಾನು ಅಷ್ಟು ದುಡ್ಡು ಕೊಟ್ಟೀದಿನಿ, ಸುಬ್ರಮಣಿ ಬೇರಲ್ಲ ನಾನು ಬೇರಲ್ಲ ಅಂತ ನನ್ನ ವಿರೋದದ ನಡುವೆಯೂ ನನ್ನ ಉಪಯೋಗಿಸಿಕೊಂಡುಬಿಟ್ಟ. ಸಾಯಂಕಾಲದ ಹೊತ್ತಿಗೆ ರೂಮಿಗೆ ಸುಬ್ರಮಣಿ ಬಂದಾಗ ಅವನು ಮಾಡಿದ್ದಕ್ಕೆ ಜಗಳವಾಡಿದೆ,ಅತ್ತೆ, ಕಾಲಿಡಿದು ಹೀಗ್ಯಾಕೆ ಮಾಡಿದೆ ಅಂತ ಗೋಳಿಟ್ಟೆ.ಅದಕ್ಕವನು ನಿನಗೊಂದು ದಾರಿ ತೋರಿಸಿದೀನಿ. ನೋಡು ಎರಡೆ ಗಂಟೆಗೆ ಎಷ್ಟು ದುಡ್ಡು ಕೊಟ್ಟಿದಾನೆ ಅಂತೇಳಿ ದುಡ್ಡನ್ನು ನನ್ನ ಹತ್ತಿರ ಎಸೆದು ಹೊರಗೆ ಹೋಗಿಬಿಟ್ಟ. ಪಾಪಿ ಸೂಳೇಮಗ ನಾನು ಸಾಕ್ತೀನಿ ಅಂತೇಳಿ ನನ್ನ ಜೊತೆ ಮಲಗಿ ಈಗ ತಲೆಹಿಡುಕನ ತರಾ ಇನ್ನೊಬ್ಬರ ಜೊತೆ ಮಲಗಿಸಿಬಿಟ್ಟ ಅನ್ನೋ ಕೋಪದಲ್ಲಿ ನಾನು ಸಾಯಬೇಕು ಅಂತ ತೀರ್ಮಾನ ಮಾಡಿ ಇನ್ನೇನು ಅದೇ ರೂಮಿನ ಫ್ಯಾನಿಗೆ ಸೀರೆ ಕಟ್ಟಿ ನೇಣು ಹಾಕಿಕೊಳ್ಬೆಕು ಅನ್ನುವಷ್ಟರಲ್ಲಿ ರೂಂಬಾಯ್ ಬಂದು ಬಾಗಿಲು ತಟ್ಟಿಬಿಟ್ಟ. ಒಳಗೆ ಬಂದವನು ಫ್ಯಾನಿಗೆ ನೇತು ಬಿದ್ದಿದ್ದ ಸೀರೆ ನೋಡಿ ಗಾಬರಿಯಿಂದ ಮ್ಯಾನೇಜರ್‍ನನ್ನು ಕರೆದುಕೊಂಡು ಬಂದ. ಒಳಗೆ ಬಂದ ಮ್ಯಾನೇಜರ್ ತಾಳ್ಮೆಯಿಂದ ನನ್ನ ಕತೆ ಕೇಳಿಸಿಕೊಂಡು ನಾವಿಂತದ್ದಕ್ಕೆಲ್ಲ ರೂಂ ಕೊಡಲ್ಲ ಏನೋ ಪರಿಚಯದವರು ಅಂತ ರೂಂ ಕೊಟ್ಟು ತಪ್ಪು ಮಾಡಿಬಿಟ್ಟೆ ಅಂದು ನನಗೆ ಹೋಗುವಂತೆ ಹೇಳಿದ. ಹೊರಗೆ ಬಂದರೆ ಸುಬ್ರಮಣಿ ಕಾಯ್ತಾ ಇದ್ದ. ವಿದಿಯಿಲ್ಲದೆ ಅವನ ಜೊತೆ ಹಳ್ಳಿಗೆ ಬಂದೆ. ಅವನು ಕೊಟ್ಟ ದುಡ್ಡಲ್ಲಿ ಒಂದು ತಿಂಗಳಿಗಾಗುವಷ್ಟು ಸಾಮಾನು ತಂದುಹಾಕಿಕೊಂಡೆ. ಒಂದಷ್ಟು ದಿನಗಳ ನಂತರ ಮುಂದೇನು ಅನ್ನೊ ಪ್ರಶ್ನೆ ಎದುರಾಯ್ತು. ಮತ್ತೆ ಸಾಮಾನು ಖಾಲಿಯಾಗುತ್ತೆ ಉಪವಾಸ ಇರಬೇಕಾಗುತ್ತೆ ಏನು ಮಾಡೋದು ಅಂತ ಯೋಚಿಸ್ತಾ ಇರಬೇಕಾದರೆ ಒಂದು ಮದ್ಯಾಹ್ನ ಸುಬ್ರಮಣಿ ಮನೆಗೆ ಬಂದ. ನೋಡು ನಾನೇನು ಬೇಕೂ ಅಂತ ಆ ತರ ಮಾಡಿಲ್ಲ. ನನ್ನ ಆದಾಯನು ಕಡಿಮೆಯಾಗಿದೆ. ಊರತುಂಬಾ ಕಂಟ್ರಾಕ್ಟರುಗಳಾಗಿ ಕೆಲಸ ಮುಂಚಿನ ಹಾಗೆ ಸಿಕ್ತಿಲ್ಲ. ಜೊತೆಗೆ ಹೋದಸರಿ ಪಂಚಾಯಿತಿ ಎಲೆಕ್ಷನ್ನಿಗೆ ಖರ್ಚು ಮಾಡಿದ ಸಾಲ ಹಾಗೇ ಇದೆ. ಗೆದ್ದಿದರೆ ಏನಾದರು ಮಾಡಬಹುದಿತ್ತು. ಸೋತಮೇಲೆ ದುಡ್ಡೆಲ್ಲಿಂದ ಬರುತ್ತೆ ಹೇಳು ಅಂತೆಲ್ಲ ರಮಿಸಿದ. ಅವನ ಮಾತು ಕೇಳಿ ನನಗೂ ಬೇಜಾರಾಯಿತು. ಸರಿ ಈಗ ಮುಂದಕ್ಕೆ ನಾನೇನು ಮಾಡಲಿ ಅಂದೆ. ಅದಕ್ಕವನು ನೀನೇನು ಯೋಚಿಸಬೇಡ ಸಿಟೀಲಿ ಒಂದಷ್ಟು ಜನ ಫ್ರೆಂಡ್ಸ್ ಇದಾರೆ ಅವರಿಗೆ ಪರಿಚಯಿಸಿ ಕೊಡ್ತೀನಿ.ನೀನು ಸ್ವಲ್ಪ ಮನಸ್ಸು ಗಟ್ಟಿಮಾಡಿಕೊ ಎಲ್ಲ ಸರಿ ಹೋಗುತ್ತೆ ಅಂತ ಹೇಳಿ ನಾಳೆ ಗೇಟಿಗೆ ಬಾ ಅಂತ ಹೊರಟು ಹೋದ.
ಬೆಳಿಗ್ಗೆ ಹೋಗೋದೋ ಬೇಡವೊ ಅಂತ ರಾತ್ರಿಯೆಲ್ಲ ಯೋಚನೆ ಮಾಡಿದೆ. ಆದರೆ ಹೋಗದೇ ಇದ್ದರೆ ವಿಧಿಯಿಲ್ಲ ಅನಿಸ್ತು. ಬೆಳಿಗ್ಗೆ ಧೈರ್ಯ ಮಾಡಿ ಅವನ ಜೊತೆ ಸಿಟಿಗೆ ಹೋದೆ. ಅಲ್ಲೊಂದು ಮನೆಗೆ ಕರೆದುಕೊಂಡು ಹೋಗಿ ಒಬ್ಬ ಮದ್ಯವಯಸ್ಸಿನ ನರಪೇತಲ ಮನುಷ್ಯನನ್ನು ಪರಿಚಯ ಮಾಡಿಸಿದ. ಆ ನರಪೇತಲ ಒಬ್ಬ ತಲೆಹಿಡುಕನಾಗಿದ್ದ. ಪರಿಚಯ ಮಾಡಿಸಿದ ಸುಬ್ರಮಣಿ ನಾಳೆಯಿಂದ ಇವಳು ಬರ್ತಾಳೆ. ನಮ್ಮ ಖಾಸಾ ಹುಡುಗಿ. ಬೆಳಿಗ್ಗೆ ಹತ್ತು ಗಂಟೆಗೆ ಬಂದರೆ ಸಾಯಂಕಾಲ ಐದು ಗಂಟೆಯೊಳಗೆ ಮನೆಗೆ ವಾಪಸಾಗಬೇಕು ಆ ಥರಾ ವ್ಯವಸ್ಥೆ ಮಾಡಿಕೊಡಬೇಕು ಅಂತ ಹೇಳಿದ. ನಾನೇನೋ ದೊಡ್ಡ ಅಫೀಸಿಗೆ ಹೋಗ್ತಾ ಇದೀನೇನೋ ಅನ್ನೋ ತರಾ ಟೈಮೆಲ್ಲಾ ಫಿಕ್ಸ್ ಮಾಡಿದ. ಹು ಅಂದ ಪಿಂಪ್ ನಾಳೆ ಬಸ್ಸು ಇಳಿದು ಸೀದಾ ಮನೆಗೆ ಬಂದು ಬಿಡು ದಾರಿ ಗೊತ್ತಾಗುತ್ತಲ್ಲ ಅಂದ.
ವಾಪಾಸು ಹೋಗೋವಾಗ ಸುಬ್ರಮಣಿ ನಾನು ಅವಾಗವಾಗ ಬರ್ತಾ ಇರ್ತೀನಿ, ಏನೂ ಭಯ ಪಡಬೇಡ ಅಂತೇಳಿ ಸಮಾಧಾನ ಮಾಡಿದ.
ಮಾರನೆ ದಿನದಿಂದ ಬೆಳಿಗ್ಗೆ ಎಂಟುಗಂಟೆಗೆ ಗೇಟಿಗೆ ನಡೆದುಕೊಂಡು ಹೋಗಿ ಅಲ್ಲಿಂದ ಬಸ್ಸು ಹಿಡಿದು ಹತ್ತುಗಂಟೆಗೆಲ್ಲ ಅವನ ಮನೆ ತಲುಪ್ತಾ ಇದ್ದೆ. ಅಲ್ಲಿಂದ ಅವನು ಯಾವುದಾದರು ಹೋಟೆಲಿಗೊ ಇಲ್ಲ ಯಾರದಾದರು ಮನೆಗೊ ಕರೆದುಕೊಂಡು ಹೋಗಿ ಬಿಡ್ತಾ ಇದ್ದ. ದುಡ್ಡಿನ ವ್ಯವಹಾರವನ್ನೆಲ್ಲ ಅವನೇ ಮಾಡ್ತಾ ಇದ್ದ. ಮೊದಮೊದಲು ನಾನೂ ಸಹ ಗಿರಾಕಿಗಳು ಇವನಿಗೆ ಎಷ್ಟು ಕೊಡ್ತಾರೆ ಇವನು ಅದರಲ್ಲಿ ನನಗೆಷ್ಟು ಕೊಡ್ತಾನೆ ಅನ್ನೊದರ ಬಗ್ಗೆ ತಲೆ ಕೆಡಸಿಕೊಂಡಿರಲಿಲ್ಲ. ಆದರೆ ಅಮೇಲೆ ಗಿರಾಕಿಗಳು ಅಷ್ಟು ಕೊಟ್ಟೆ ಇಷ್ಟು ಕೊಟ್ಟೆ ಅಂದಾಗಲೇ ಅವನು ಜಾಸ್ತಿ ತಗೊಂಡು ಕಡಿಮೆ ಕೊಡ್ತಿದ್ದ ಅಂತ ಗೊತ್ತಾಗಿದ್ದು. ಹಳ್ಳೀಲಿ ಎಲ್ಲರಿಗು ಸಿಟಿಯಲ್ಲಿ ಯಾರೊ ಶ್ರೀಮಂತರ ಮನೆಗೆಲಸ ಮಾಡಿಕೊಂಡಿದೀನಿ ಅಂತ ಸುಳ್ಳು ಹೇಳಿದ್ದೆ. ಹೀಗೇ ಎರಡು ವರ್ಷ ಕಳೆಯಿತು. ಈ ಮದ್ಯೆ ಅತ್ತೆ ಸತ್ತು ಹೋದಳು. ಆಗಲು ಅಪ್ಪ ಅಮ್ಮನಿಗೆ ನಾನು ವಿಷಯ ತಿಳಿಸಲಿಲ್ಲ. ಸಾವಿನ ವಿಷಯ ಗೊತ್ತಾಗಿ ಎಷ್ಟೋ ದಿನಗಳಾದ ಮೇಲೆ ಬಂದೋರಿಗೆ ನಾನು ನೆಮ್ಮದಿಯಾಗಿ ಜೀವನ ಮಾಡೋದು ನೋಡಿ ಆಶ್ಚರ್ಯವಾದರೂ ಸಂತೋಷವೇನು ಪಡಲಿಲ್ಲ. ಒಂದು ವಾರವಿದ್ದು ಹೊರಟುಹೋದರು ಈಗ ನನಗೆ ಮಗನ ಚಿಂತೆ ಶುರುವಾಗಿತ್ತು. ಏಳು ವರ್ಷ ತುಂಬುತ್ತಾ ಬಂದಿದ್ದ ಅವನು ಹಳ್ಳಿ ಸ್ಕೂಲಲ್ಲೇ ಎರಡನೇ ಕ್ಲಾಸು ಓದ್ತಾ ಇದ್ದ.
ಆಗ ಮತ್ತೆ ಸುಬ್ರಮಣಿನೆ ಅವನನ್ನು ಹಾಸ್ಟೆಲ್ಲಿಗೆ ಸೇರಿಸೋ ಐಡಿಯಾ ಕೊಟ್ಟ. ಪಕ್ಕದ ತಾಲ್ಲೂಕಲ್ಲಿ ಒಂದು ಕ್ರಿಶ್ಚಿಯನ್ ಹಾಸ್ಟೆಲ್ಲಿದೆ, ಅಲ್ಲಿಗೆ ಸೇರಿಸೋಣ ಅಂದಾಗ ನಾನು ವಿಧಿಯಿಲ್ಲದೆ ಒಪ್ಪಿದೆ. ಅಲ್ಲಿದ್ದ ಫಾದರ್ ಇದನ್ನು ನಾವು ಅನಾಥ ಮಕ್ಕಳಿಗಾಗಿ ನಡೆಸ್ತಾ ಇದೀವಿ. ನೀವು ಬದುಕಿರೋವಾಗ ಅವನನ್ನು ಅನಾಥ ಅಂತ ಇಟ್ಟುಕೊಳ್ಳೋಕೆ ಆಗಲ್ಲ ಅಂದರು. ಬೇಕಿದ್ದರೆ ನಾನು ಇನ್ನೊಂದು ಹಾಸ್ಟೆಲ್ ನಡೆಸೊ ಫಾದರ್ ಒಬ್ಬರ ವಿಳಾಸ ಕೊಡ್ತೀನಿ. ಅಲ್ಲಿ ತೀರಾ ಕಡಿಮೆ ದುಡ್ಡು ತಗೊಂಡು ಮದ್ಯಮವರ್ಗದವರ ಮಕ್ಕಳನ್ನು ಓದಿಸ್ತಾರೆ ಅಂದರು. ನಾನು ಅದೇ ಊರಿನ ಆ ಹಾಸ್ಟೆಲ್ಲಿಗೆ ಮಗನನ್ನು ಸೇರಿಸಿ ಬಂದೆ. ಆಮೇಲೆ ಹಳ್ಳಿಯಲ್ಲಿರೋದು ಯಾಕೆ ಅನಿಸ್ತು. ನಾನು ಸಿಟೀಲೇ ಸಣ್ಣದೊಂದು ಬಾಡಿಗೆ ಮನೆ ಮಾಡಿದೆ. ಅಷ್ಟರಲ್ಲಿ ಈವ್ಯವಹಾರ ಅರ್ಥವಾಗಿ ಹೋಗಿತ್ತು. ಗಿರಾಕಿಗಳೊಡನೆ ನೇರವಾಗಿ ವ್ಯವಹಾರ ಕುದುರಿಸೋ ಕಲೆ ಸಿದ್ದಿಸಿತ್ತು. ನಡುಮದ್ಯೆ ಯಾವನೂ ಬೇಡ ಅಂತೇಳಿ ನಾನೇ ಕಸುಬು ಮಾಡತೊಡಗಿದೆ. ಊರಿಂದ ಸ್ವಲ್ಪ ದೂರವಿದ್ದ ಮನೆಯಾದ್ದರಿಂದ ಕೆಲವೇ ಕೆಲವು ಗಿರಾಕಿಗಳಿಗೆ ಅಡ್ರೆಸ್ ಕೊಟ್ಟು ಮನೆಗೆ ಕರೆಸಿಕೊಳ್ಳ್ತಾ ಇದ್ದೆ. ಆದರೆ ಪೋಲಿಸರಿಗೆ ಜನರಿಗೆ ಬೇಗ ವಿಷಯ ಗೊತ್ತಾಗಿ ಬಿಡೋದು. ಆರಾರು ತಿಂಗಳಿಗೆ ಸಿಟಿಯ ಒಂದು ಏರಿಯಾದಿಂದ ಇನ್ನೊಂದು ಏರಿಯಾಗೆ ಮನೆ ಬದಲಾಯಿಸಬೇಕಾಗ್ತಿತ್ತು. ಅಂತೂ ನಾನು ಸಿಟಿಯ ಎಲ್ಲ ದಿಕ್ಕುಗಳನ್ನೂ ನೋಡಿಬಿಟ್ಟಿದ್ದೆ. ಇಷ್ಟೆಲ್ಲ ಮಾಡಿದರು ಪೋಲಿಸರ ಕಾಟ ಇದ್ದೇ ಇರ್ತಿತ್ತು. ಅವರು ಕರೆದಾಗೆಲ್ಲ ಹೋಗಿ ಕಾಸುಕೊಟ್ಟು ಅವರ ಜೊತೆ ಮಲಗಿ ಬರಬೇಕಾಗಿತ್ತು. ಈ ಮದ್ಯೆ ಕಾಯಿಲೆ ಕಸಾಲೆ ಬಂದರೆ ನಾನೇ ಆರೈಕೆ ಮಾಡಿಕೊಳ್ಳಬೇಕಾಗ್ತಿತ್ತು. ಆಗಾಗ ಬಂದುಹೋಗ್ತಾ ಇದ್ದ ಸುಬ್ರಮಣಿ ಬೇರೆ ಸತ್ತು ಹೋಗಿದ್ದ. ರಜಾ ದಿನಗಳಲ್ಲಿ ಮಗ ಮನೆಗೆ ಬಂದರೆ ಎಲ್ಲವನ್ನೂ ನಿಲ್ಲಿಸಿಬಿಡ್ತಾ ಇದ್ದೆ. ಹೀಗೆ ವರ್ಷಗಳು ಕಳೀತಾ ಹೋವು. ಮಗ ಪಿಯುಸಿಗೆ ಬಂದಿದ್ದ. ಅಲ್ಲಿಯತನಕ ಚೆನ್ನಾಗಿ ಓದಿಕೊಂಡು ಒಂದೇ ಹಾಸ್ಟೆಲ್ಲಿನಲ್ಲಿ ಓದ್ತಾ ಫಾದರ್ ಹತ್ತಿರ ಒಳ್ಳೆ ಹೆಸರು ಸಂಪಾದಿಸಿದ್ದ. ಈ ನಡುವೆ ಒಂದು ಅಚಾತುರ್ಯ ನಡೆದು ಹೋಯಿತು. ಮಗ ಓದ್ತಾ ಇದ್ದ ಸಿಟೀಲಿ ಏನೋ ಗಲಾಟೆ ಅಂತ ಅವನ ಕಾಲೇಜಿಗೆ ಹದಿನೈದು ದಿನ ರಜಾ ಕೊಟ್ಟಿದ್ದರಂತೆ. ನನಗದು ಗೊತ್ತಾಗಲಿಲ್ಲ. ಅವಾಗಲೇ ರಿಪೇರಿಗೆ ಅಂತ ಹದಿನೈದು ದಿನ ಹಾಸ್ಟೆಲ್ ಬಂದು ಮಾಡಿ ಎಲ್ಲರಿಗೂ ಊರುಗಳಿಗೆ ಹೋಗುವಂತೆ ಫಾದರ್ ಹೇಳಿದ್ದರು. ಅದರಂತೆ ನನ್ನ ಮಗ ದಿಡೀರನೇ ಊರಿಂದ ಬಂದು ಬಿಟ್ಟು ಕಸುಬು ನಡೆಸುವ ನನ್ನನ್ನು ನೋಡಿಬಿಟ್ಟ. ಬಹುಶ: ಅಂತಾ ಪರಿಸ್ಥಿತಿಯನ್ನು ಎದುರಿಸೋ ಕೆಟ್ಟ ಗಳಿಗೆ ಯಾವ ತಾಯಿಯ ಜೀವನದಲ್ಲೂ ಬಂದಿರಲಿಲ್ಲ ಅನಿಸುತ್ತೆ. ಮನೆಗೆ ಬಂದ ಮಗ ಊಟವನ್ನೂ ಮಾಡದೆ ಮೂಕನಾಗಿ ಕೂತುಬಿಟ್ಟಿದ್ದ. ಒಂದು ಮಾತೂ ಆಡಲಿಲ್ಲ. ಕೊನೆಗೆ ನಾನೇ ಧೈರ್ಯ ತಗೊಂಡು ಅವರ ಅಪ್ಪ ಹೋದಮೇಲೆ ಅವನನ್ನು ಅವನ ಅಜ್ಜಿಯನ್ನೂ ಸಾಕೋಕೆ ಪಟ್ಟ ಪಡಿಪಾಟಲನ್ನೆಲ್ಲ ಹೇಳಿಕೊಂಡು ಅತ್ತೆ. ಅವನಿದ್ದ ಆ ಹದಿನೈದು ದಿನದಲ್ಲಿ ಅವನು ಮಾತೇ ಆಡಲಿಲ್ಲ. ಮಾಡಿಟ್ಟ ಅಡುಗೆಯನ್ನು ತಾನೇ ಹಾಕಿಕೊಂಡು ತಿಂದು ಹೊರಗೆಲ್ಲಾದರು ಹೋಗಿ ಬರೋನು. ಸದ್ಯ ಮಗ ಮನೇಲಿದ್ದು ಊಟ ಮಾಡ್ತನಲ್ಲ ಅನ್ನೋ ಸಮಾಧಾನದಿಂದ ಬದುಕ್ತಾ ಇದ್ದೆ. ರಜಾ ಮುಗಿದಮೇಲೆ ಹೋಗುವಾಗಲು ಅವನು ಮಾತಾಡಲಿಲ್ಲ. ಒಂದೇ ಮಾತು ನೀನಿನ್ನು ಹಾಸ್ಟೆಲ್ಲಿಗೆ ಬರೋ ಅವಶ್ಯಕತೆಯಿಲ್ಲ ಅಂತೇಳಿ ಹೊರಟು ಹೋದ. ಅದೇಕಡೆ ಅವನನ್ನು ನೋಡಿದ್ದು. ಒಂದಷ್ಟು ದಿನ ಕಳೆದ ಮೇಲೆ ಅವನೇ ಸಮಾಧಾನ ಮಾಡಿಕೊಳ್ತಾನೆ ಅಂತ ಒಂದೆರಡು ತಿಂಗಳು ನಾನೂ ಹಾಸ್ಟೆಲ್ಲಿಗೆ ಹೋಗಲೇ ಇಲ್ಲ. ಆಮೇಲೊಂದು ದಿನ ಫಾದರ್ ಬರೋದಿಕ್ಕೆ ಹೇಳಿಕಳಿಸಿದಾಗ ಹೋದೆ. ನನಗೆ ನನ್ನ ತಾಯಿಯನ್ನು ಕಂಡರೆ ಇಷ್ಟವಿಲ್ಲ. ನಾನು ದೂರ ಎಲ್ಲಾದರು ಹೋಗಿ ಬದುಕಿ ಕೊಳ್ತೀನಿ, ನನ್ನ ಹುಡುಕಬೇಡಿ ಅಂತೇಳಿ ಕಾಗದ ಬರೆದಿಟ್ಟು ಎಲ್ಲೊ ಹೊರಟು ಹೋಗಿದ್ದ. ನನಗೆ ಆಕಾಶ ತಲೆಮೇಲೆ ಬಿದ್ದಂತಾಯಿತು. ಪೋಲೀಸಿಗೆ ಕಂಪ್ಲಂಟ್ ಕೊಟ್ಟರು ಪ್ರಯೋಜನವಾಗಲಿಲ್ಲ.
ಆಮೇಲಿನ್ನೇನು ಕೂಡಿಟ್ಟಿದ್ದ ಒಂದಷ್ಟು ದುಡ್ಡನ್ನು ತಗೊಂಡು ಅವನ ಪೋಟೋ ಹಿಡಿದುಕೊಂಡು ಊರೂರು ಅಲೆದೆ. ಸುಮಾರು ಮೂರುವರ್ಷ ನಾಯಿ ತರಾ ಅಲೆದಿದ್ದೀನಿ. ಅವನ ಎಲ್ಲಿದಾನೊ ಗೊತ್ತಾಗಲಿಲ್ಲ. ಇದ್ದ ದುಡ್ಡೆಲ್ಲ ಖರ್ಚಾದ ಮೇಲೆ ಬದುಕೋಕೆ ಏನು ಮಾಡೋದು ಅಂತಿರುವಾಗಲೆ ನಾನು ಹುಷಾರು ತಪ್ಪಿ ಯಾವುದೊ ಗೊತ್ತಿರದ ಊರಿನ ಸರಕಾರಿ ಆಸ್ಪತ್ರೆಯಲ್ಲಿ ಮಲಗಿಬಿಟ್ಟೆ. ನನಗೀ ಕಾಯಿಲೆ ಇರೋದು ಗೊತ್ತಾಗಿದ್ದು ಅಲ್ಲೇ. ಆಮೆಲೇನು ಮಾಡಲು ತೋಚದೆ ಮತ್ತೆ ನನ್ನ ಮಗ ಓದ್ತಾ ಇದ್ದ ಹಾಸ್ಟೆಲ್ಲಿಗೆ ವಾಪಾಸು ಬಂದು ಫಾದರ್ ಹತ್ತಿರ ಯಾವತ್ತಾದರು ಒಂದು ದಿನ ಅವನಿಲ್ಲಿಗೆ ಬರಬಹುದಲ್ವ, ಫಾದರ್. ಅವನಿಗೆ ಕಾಯ್ತಾ ನಾನಿಲ್ಲಿ ಇರ್ತೀನಿ. ಇಲ್ಲಿ ಏನಾದರು ಕೆಲಸ ಮಾಡಿಕೊಂಡಿರ್ತೀನಿ ಅಂತ ಬೇಡಿಕೊಂಡೆ. ನನ್ನ ಬಗ್ಗೆ ಎಲ್ಲಾ ಗೊತ್ತಿದ್ದ ಅವರು ಸರಿ ಮಗಳೆ ಇಲ್ಲಿಗೆ ಬರುವವರ ಸೇವೆ ಮಾಡು.ಅದರಿಂದಲಾದರು ಏಸು ನಿನ್ನ ಪಾಪಗಳನ್ನು ಕ್ಷಮಿಸಬಹುದು ಅಂದು ಒಪ್ಪಿಗೆ ಕೊಟ್ಟರು. ಅಲ್ಲಿಯೂ ಒಂದು ವರ್ಷ ಕೆಲಸ ಮಾಡಿಕೊಂಡಿದ್ದೆ. ಆದರೆ ಕಾಯಿಲೆ ಜಾಸ್ತಿಯಾದಂತೆ ಚರ್ಚಿನವರೇ ನಡೆಸುವ ಈ ಆಶ್ರಮಕ್ಕೆ ಕಳಿಸಿದರು. ಇಲ್ಲೀಗ ಹೀಗೆ ನಿಮ್ಮೆದರು ಬಿದ್ದುಕೊಂಡಿದ್ದೀನಿ.ಸಾವು ಯಾವ ಕ್ಷಣದಲ್ಲಾದರು ಬರಬಹುದು ಅಂತನೋಡ್ತಾ ಇದೀನಿ.ಎಲ್ಲೋ ಹುಟ್ಟಿ ಹೀಗೆ ಬಂದು ಎಲ್ಲೋ ಅನಾಥಳ ಥರಾ ಸಾಯೋಕೆ ನಾನು ಹಿಂದಿನ ಜನ್ಮದಲ್ಲಿ ಮಾಡಿದ ಯಾವುದೋ ಪಾಪವೇ ಕಾರಣವಿರಬೇಕು.
ಅಷ್ಟು ಹೊತ್ತು ಒಂದೇ ಸಮನೆ ಮಾತಾಡಿದ್ದಕ್ಕೆ ಅವಳಿಗೆ ಕೆಮ್ಮು ಶುರುವಾಯಿತು. ನಮ್ಮ ಮಾತುಗಳನ್ನೇ ಕೇಳುತ್ತಾ ಕುಳಿತಿದ್ದ ಸಿಸ್ಟರ್ ಅವಳಿಗೆ ನೀರು ಕುಡಿಸಿ ಸಾಕು ಅನ್ನುವಂತೆ ನನಗೆ ಸನ್ನೆ ಮಾಡಿದರು.
ಅವಳಿಗೊಂದು ನಮಸ್ಕಾರ ಹೇಳಿ ಹೊರಡಲು ತಯಾರಾದಾಗ ಹಾಸಿಗೆಯ ಕೆಳಗಿಟ್ಟುಕೊಂಡಿದ್ದ ಮಾಸಲು ಬಣ್ಣದ ಪೋಟೋ ಒಂದನ್ನು ತೋರಿಸಿ.ಇವನೇ ನನ್ನ ಮಗ. ಎಲ್ಲಾದರು ನೋಡಿದರೆ ನನಗೆ ತಿಳಿಸಿ ಸರ್ ಅಂದಳು. ಹತ್ತೊ ಹನ್ನೆರಡರ ವಯಸ್ಸಲ್ಲಿ ತೆಗೆಸಿದ ಪೋಟೋದಲ್ಲಿರುವವನನ್ನು ಈಗ ಗುರುತಿಸಲು ಸಾದ್ಯವಿಲ್ಲವೆಂದು ಹೇಳಿ ಅವಳಿಗ್ಯಾಕೆ ನೋವುಂಟು ಮಾಡಬೇಕೆಂದುಕೊಂಡು, ಆಯಿತು, ಖಂಡಿತಾ ಅಂತೇಳಿ ಹೊರಗೆ ಬಂದಾಗ ಸಿಸ್ಟರ್ ನಿರ್ಮಲಾ ನನ್ನ ಹಿಂದೆಯೇ ಬಂದರು.
ಗೇಟಿನ ಹತ್ತಿರ ಬಂದಾಗ ಸಿಸ್ಟರ್ ಮಧು ನೀನು ನನ್ನ ಹಳೆಯ ಮಿತ್ರ ಅಂತ ಹೇಳ್ತಾ ಇದೀನಿ, ಹೀಗೊಂದು ಆರು ತಿಂಗಳ ಹಿಂದೆ ಇವಳ ಮಗ ಇಲ್ಲಿಗೆ ಬಂದಿದ್ದ. ದೂರದಿಂದ ಕಿಟಕಿಯಿಂದಲೇ ತಾಯಿಯನ್ನು ನೋಡಿ ಹೊರಟು ಹೋದ. ಅವನೀಗ ಮಿಲ್ಟ್ರಿಯಲ್ಲಿದ್ದಾನಂತೆ. ಅವಳೆಷ್ಟೇ ಕೆಟ್ಟವಳಾದರು ತಾಯಿಯೇ ಅಲ್ಲವೆ ಒಂದು ಸಾರಿ ಮುಖ ತೋರಿಸು ಸಾಕು ಅವಳು ನೆಮ್ಮದಿಯಾಗಿ ಕರ್ತನನ್ನು ಸೇರುತ್ತಾಳೆಂದು ಎಷ್ಟು ಹೇಳಿದರು ಅವನು ಕೇಳದೇ ಹೋದ. ಹೋಗುವಾಗ ಮಾತ್ರ ನನ್ನ ಹತ್ತಿರ ಬಂದು ಹತ್ತು ಸಾವಿರ ರೂಪಯಿಗಳ ಎರಡು ಕಟ್ಟು ಕೊಟ್ಟು ನಿಮ್ಮ ಆಶ್ರಮಕ್ಕೆ ಇದು ನನ್ನ ಕಾಣಿಕೆಯೆಂದು ಹೇಳಿ ಹೊರಟುಹೋದ ಅಂದರು. ನಾನಾಗ ಸಿಸ್ಟರ್ ಈಗ ನಿಮ್ಮ ಹತ್ತಿರ ಅವನು ಕೊಟ್ಟ ವಿಳಾಸವೇನಾದರು ಇದೆಯಾ ಎಂದಾಗ ಒಂದುನಿಮಿಷ ಎಂದು ಚರ್ಚಿನ ಒಳಗೆ ಹೋದವರು ಒಂದು ಚೀಟಿ ತಂದು ಕೊಟ್ಟರು. ನಾನು ಥ್ಯಾಂಕ್ಸ್ ಹೇಳಿ ಹೊರಗೆ ಬಂದೆ.
ಊರಿಗೆ ಬಂದವನು ನನ್ನ ಪರಿಚಯದ ಬಹಳಷ್ಟು ಸೈನ್ಯದ ಮಿತ್ರರುಗಳಿಗೆ ಕರೆಮಡಿ ಆ ವಿಳಾಸ ಕೊಟ್ಟು ಆ ಹುಡುಗನ್ನು ಪತ್ತೆ ಹಚ್ಚಲು ಕೋರಿದೆ. ಒಂದೆರಡು ತಿಂಗಳಾದ ಮೇಲೆ ದೆಹಲಿಯಲ್ಲಿದ್ದ ನನ್ನ ಮಿತ್ರನೊಬ್ಬನಿಂದ ಕರೆಬಂತು,ನೀನು ಹೇಳಿದ ಹುಡುಗ ಸೈನ್ಯದಲ್ಲಿದ್ದುದು ನಿಜ. ಆದರೆ ಈಗೊಂದು ಮೂರುತಿಂಗಳ ಹಿಂದೆ ಗಡಿಯಲ್ಲಿ ನಡೆದ ಘರ್ಷಣೆಯೊಂದರಲ್ಲಿ ಹತನಾಗಿದ್ದಾನೆ ಅಂದವನ ಮಾತು ಕೇಳಿ ಎದೆ ಬಾರವಾಯಿತು. ಅವನು ಬದುಕಿದ್ದರೆ ತಾಯಿಯನ್ನು ನೋಡುವಂತೆ ಮಾಡಬಹುದಿತ್ತಾ ಗೊತ್ತಿಲ್ಲ,ಆದರೆ ಪ್ರಯತ್ನವನ್ನಂತು ಮಾಡಬಹುದಿತ್ತೆನಿಸಿ ಮನಸ್ಸಿಗೆ ವಿಷಾದವೆನಿಸಿತು!